Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಪ್ರತಿ ಯಶಸ್ವಿನ ಹಿಂದೆ ಕೋರ್ ಗ್ರೂಪ್; ಅದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಇದು ನಿಜಕ್ಕೂ ಇಂಟರೆಸ್ಟಿಂಗ್!
ಅಂದ ಹಾಗೆ ಇದು ನಿಮಗೆಲ್ಲ ಗೊತ್ತೂ ಇರುತ್ತದೆ. ಅದೆಂದರೆ ನೀವು ಯಶಸ್ವಿ ರಾಜಕಾರಣಿಯಾಗಬೇಕು ಎಂದರೆ, ಯಶಸ್ವಿ ಉದ್ಯಮಿಯಾಗಬೇಕು ಎಂದರೆ, ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕು ಎಂದರೆ ನಿಮ್ಮ ಸುತ್ತ ಒಂದು ಕೋರ್ ಗ್ರೂಪ್ ಇರಬೇಕು. ಬೇಕಿದ್ದರೆ ಯುದ್ಧವನ್ನೇ ಮಾಡಿ, ಜಯಶಾಲಿ ಯೋಧನಾಗಿ ಹೊರಹೊಮ್ಮಬೇಕು ಎಂದರೂ ಒಂದು ಕೋರ್ ಗ್ರೂಪ್ ಇರಬೇಕು. ಇನ್‌ಫ್ಯಾಕ್ಟ್, ನಿಮಗೆ ಮೊದಲು ಆ ವಿಷಯದಲ್ಲಿ ಯಶಸ್ವಿಯಾಗುತ್ತೇನೆ ಎಂಬ ಧೈರ್ಯವಿರಬೇಕು. ಯಾಕೆಂದರೆ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ನಾವು ಟೈಗರ್ ಹಿಲ್‌ನ್ನು ಗೆದ್ದುಕೊಂಡಿದ್ದು ಅವಿಸ್ಮರಣೀಯ ಕ್ಷಣ. ಕರ್ನಾಟಕದ ಕರ್ನಲ್ ರವೀಂದ್ರನಾಥ್, ಸಂದೀಪ್ ಬಜಾಜ್ ಅವರಂತಹ ಯೋಧರು ಸೇರಿ ಪಾಪಿ, ಪಾಕಿಸ್ತಾನದ ನುಸುಳುಕೋರರನ್ನು ಈ ಜಾಗದಿಂದ ಬಡಿದೆಬ್ಬಿಸಿದರು. ಹೇಳಿದರೆ ಅದೊಂದು ದೊಡ್ಡ ಕತೆ.

ಅಂದ ಹಾಗೆ ಇಂಥಲ್ಲೂ ಯುದ್ಧ ಮಾಡುವವನ ನೆರವಿಗೆ ಅಂತ ಒಂದು ಕೋರ್ ಗ್ರೂಪ್ ಇರಲೇಬೇಕು. ಯುದ್ಧ ಸಾಮಗ್ರಿಗಳನ್ನು ಪೂರೈಸಲು, ಊಟ ಕೊಡಲು, ಹೀಗೆ ಎಲ್ಲದಕ್ಕೂ ನಿಮಗೆ ನೆರವಿರಬೇಕು. ನಿರ್ಣಾಯಕ ಯುದ್ಧಕ್ಕೆ ನೀವು ಅಣಿಯಾಗಲು ಇವರು ನೆರವಾಗುತ್ತಿರುತ್ತಾರೆ. ಆಮೇಲೆ ನೀವು ಖಾಡಾಖಾಡಿ ಯುದ್ಧ ಮಾಡಿ, ನಿಮ್ಮಲ್ಲಿರುವ ಚೈತನ್ಯ, ಶಕ್ತಿ, ಉತ್ಸಾಹ, ಧೈರ್ಯ ಎಲ್ಲವನ್ನೂ ಬಳಸಿ ಯುದ್ಧ ಮಾಡಿ ಗೆಲ್ಲಲು ಸಾಧ್ಯ. ಇದನ್ನೇಕೆ ಹೇಳುತ್ತೇನೆ ಎಂದರೆ ಈಗ ನರೇಂದ್ರ ಮೋದಿಯನ್ನೇ ನೋಡಿ. ದಿನ ಬೆಳಗಾದರೆ ಮೋದಿ ಹೆಸರಿನಲ್ಲೇ ತಟ್ಟೆ ಹಿಡಿದುಕೊಂಡು ಅವರು ಏನೇ ಹಾಕಿದರೂ ಅದನ್ನು ಕಣ್ಣಿಗೊತ್ತಿಕೊಂಡು ಪ್ರಸಾದ ಅಂತ ಸ್ವೀಕರಿಸಿ ಉಘೇ ಉಘೇ ಅನ್ನುವ ಜನರಿದ್ದಾರೆ. ಇಂತಹವರು ಎಲ್ಲರ ಆಸ್ಥಾನಗಳಲ್ಲೂ ಇರುತ್ತಾರೆ. ಪತ್ರಿಕೋದ್ಯಮದ ಪರಿಭಾಷೆಯಲ್ಲಿ ಇಂತಹವರನ್ನು ‘ನಿಲಯದ ಕಲಾವಿದರು’ ಎಂದು ಕರೆಯುತ್ತಾರೆ.

ಆದರೆ ಅದೇನೇ ಇರಲಿ, ಆದರೆ ಈ ದೇಶಕ್ಕೆ ಒಬ್ಬ ಸರ್ವಾಧಿಕಾರಿಯಂತೆ ದಕ್ಕಿರುವ ಮೋದಿಯ ಪಕ್ಕ ಒಂದು ಅಮೇಜಿಂಗ್ ಆದ ಕೋರ್ ಗ್ರೂಪ್ ಇದೆ. ಅವರು ಮಂತ್ರಿಗಳು ಅಂದುಕೊಂಡರೆ ತಪ್ಪು. ಲಾಲ್‌ಕೃಷ್ಣ ಅಡ್ವಾಣಿ, ಸುಷ್ಮಾ ಸ್ವರಾಜ್, ರಾಜ್‌ನಾಥ್ ಸಿಂಗ್ ಥರದವರು ಪ್ರಧಾನಿ ಹುದ್ದೆಯ ರೇಸಿನಲ್ಲಿದ್ದವರು. ಇಂತಹವರನ್ನು ಎಷ್ಟು ಸಾಧ್ಯವೋ ಅಷ್ಟು ದುರ್ಬಲರನ್ನಾಗಿ ಮಾಡುತ್ತಾರೆ ಮೋದಿ. ಆದರೆ ಅರುಣ್ ಜೇಟ್ಲಿ ಥರದವರನ್ನು ಪಕ್ಕಕ್ಕಿಟ್ಟುಕೊಳ್ಳುತ್ತಾರೆ. ಯಾಕೆಂದರೆ ಅವರು ಜನನಾಯಕರಲ್ಲ. ಅಗಾಧ ಬುದ್ಧಿವಂತರು ಎಂಬುದೇನೋ ನಿಜ. ಆದರೆ ಒಬ್ಬ ಸೇನಾನಿಯಾಗಿ ಯುದ್ಧ ಗೆಲ್ಲಿಸಿಕೊಡುವ ಶಕ್ತಿ ಅವರಲ್ಲಿಲ್ಲ. ಇಂತಹವರಿಂದ ಯಾವ ಅಪಾಯವೂ ಇಲ್ಲ ಎಂಬುದು ಮೋದಿಗೆ ಗೊತ್ತು. ಹೀಗಾಗಿ ತಮಗೆ ಯಾರು ತೊಂದರೆ ಕೊಡಲು ಸಾಧ್ಯವಿಲ್ಲವೋ ಅಂತಹವರನ್ನು ಪಕ್ಕದಲ್ಲಿಟ್ಟುಕೊಂಡಿದ್ದಾರೆ. ತಲೆ ನೋವು ತರುವವರು ಎಂದು ಗೊತ್ತಾದರೆ ಸಾಕು, ಅಂತಹವರನ್ನು ದೂರ ಇಟ್ಟುಬಿಡುತ್ತಾರೆ.
ಇವತ್ತು ಮೋದಿಯ ಅಕ್ಕ-ಪಕ್ಕ ಇರುವವರು ಯಾರು ಗೊತ್ತೇ? ಅವರ ಕೋರ್ ಗ್ರೂಪ್‌ನಲ್ಲಿರುವ ಅಧಿಕಾರಿಗಳ ಪಡೆ. ಮೋದಿಯ ಆಪ್ತ ಕಾರ್ಯದರ್ಶಿಯಾಗಿರುವ ರಾಜೀವ್ ತಪನೋ ಈ ಹಿಂದೆ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿದ್ದರು. ಮುಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೂ ಕೆಲಸ ಮಾಡಿದವರು. ಅವರ ಶಕ್ತಿಯನ್ನು ಗುರುತಿಸಿದ ಮೋದಿ ತಮ್ಮ ಕೋರ್ ಗ್ರೂಪ್‌ಗೆ ಹಾಕಿಕೊಂಡರು. ಇದೇ ರೀತಿ ಸಂಘ ಪರಿವಾರದ ಹಿನ್ನೆಲೆ ಇರುವ ಓ.ಪಿ.ಸಿಂಗ್, ದಿನೇಶ್ ಸಿಂಗ್, ಮೆಹತಾ ಅವರಂತಹವರನ್ನು ಈ ಕೋರ್ ಗ್ರೂಪಿಗೆ ಹಾಕಿದರು. ಆದರೆ ಸಂಘ ಪರಿವಾರದ ಹಿನ್ನೆಲೆ ಇಲ್ಲದ ಸಂಜಯ್ ಭಾವಸಾರ್ ಕೂಡ ಈ ಗುಂಪಿನಲ್ಲಿದ್ದಾರೆ. ಮೋದಿ ಮುಖ್ಯಮಂತ್ರಿಯಾದಾಗ ಈ ನಾಲ್ವರ ಪೈಕಿ ಒಬ್ಬರಾದರೂ ಗ್ರೀನ್ ಸಿಗ್ನಲ್ ಕೊಡದೆ ಇದ್ದರೆ ಮೋದಿ ಅವರನ್ನು ಭೇಟಿ ಮಾಡಲೂ ಸಾಧ್ಯವಿರಲಿಲ್ಲ. ಇದೇ ರೀತಿ ಹಿರೇನ್ ಜೋಷಿ. ಐಟಿ ಕ್ಷೇತ್ರದಲ್ಲಿ ಅಪಾರ ಬುದ್ಧಿವಂತರಾದ ಹಿರೇನ್ ಜೋಷಿ ಅವರನ್ನು ಪಕ್ಕದಲ್ಲಿಟ್ಟುಕೊಂಡು ಗುಜರಾತ್‌ನಲ್ಲಿ ಅಪಾರ ಕೆಲಸಗಳನ್ನು ಮೋದಿ ಮಾಡಿದರು.

ಇದೇ ರೀತಿ ಜಗದೀಶ್ ಥಕ್ಕರ್ ಇರಬಹುದು, ಎ.ಕೆ.ಶರ್ಮಾ ಇರಬಹುದು, ಪಿ.ಕೆ.ಮಿಶ್ರಾ ಇರಬಹುದು, ದೋವಲ್ ಇರಬಹುದು. ಇವರೆಲ್ಲ ಮೋದಿ ಕೋರ್ ಗ್ರೂಪ್‌ನ ಜನ. ಫೈನಲಿ, ಮೋದಿ ಜಗತ್ತಿನ ಗಮನ ಸೆಳೆಯಲು ಯಾವ್ಯಾವ ಡ್ರೆಸ್ಸಿನಲ್ಲಿ ಹೋಗಬೇಕು ಎಂಬುದನ್ನೂ ನಿರ್ಧರಿಸಲು ಈ ಗ್ರೂಪಿನಲ್ಲಿ ಜೋಷಿ, ಬದ್ರಿ ಅವರಂತಹವರಿದ್ದಾರೆ. ಹೀಗೆ ಮೋದಿಯ ಕೋರ್ ಗ್ರೂಪಿನಲ್ಲಿದ್ದವರು ಹೆಚ್ಚು ಮಾತನಾಡುವವರಲ್ಲ. ತಮಗೆ ವಹಿಸಿಕೊಟ್ಟ ಕೆಲಸವನ್ನು ಶ್ರದ್ಧೆಯಿಂದ, ತಮ್ಮ ನಾಯಕ ಹೇಗೆ ಬೆಳೆಯಲು ಸಾಧ್ಯ ಎಂಬುದನ್ನು ಯೋಚಿಸುತ್ತಾ, ಅದನ್ನು ಕಾರ್ಯಗತಗೊಳಿಸುವವರು. ಯಸ್, ಇಂತಹವರಿಂದಾಗಿ ಮೋದಿಯ ವರ್ಚಸ್ಸು ಬೆಳೆಯುತ್ತಿದೆ ಅಥವಾ ಬೆಳೆದಂತೆ ನಿಮಗೆ ಭಾಸವಾಗುತ್ತಿದೆ. ಆದರೆ ಇದರಿಂದ ಯಾರ‍್ಯಾರು ಲಾಭ ಮಾಡಿಕೊಳ್ಳುತ್ತಾರೆ ಎಂಬುದು ಬೇರೆ ವಿಷಯ. ಆದರೆ ಒಬ್ಬ ಪ್ರಧಾನಿಯಾಗಿ ಅವರು ಯಶಸ್ಸು ಸಾಧಿಸುವ ದಿಸೆಯಲ್ಲಿ ಮೊದಲ ಹೆಜ್ಜೆಯನ್ನು ಸರಿಯಾಗಿ ಇಟ್ಟಿದ್ದಾರೆ.

ಈ ಸ್ವಚ್ಛ ಭಾರತದಂತಹ ಕಾರ್ಯಕ್ರಮಗಳನ್ನು ನೋಡಿ. ನಾಲ್ಕು ದಿನ ಎಲ್ಲರೂ ಕಸಬರಿಗೆ ಹಿಡಿದುಕೊಂಡಂತೆ ಮಾಡಿದರು. ಆನಂತರ ಕಸಬರಿಗೆಯ ಮಾತೇ ಇಲ್ಲ. ಅಲ್ಲಾ, ಎಷ್ಟೋ ಜನರಿಗೆ ತಮ್ಮ ಮನೆಯಲ್ಲಿರುವ ಕಸವನ್ನು ಎತ್ತಿ ಹಾಕಲು ಸೋಂಬೇರಿತನ. ಕನಿಷ್ಠ ಪಕ್ಷ ಇವರು ತಮ್ಮ ಮನೆಯನ್ನಾದರೂ ಕ್ಲೀನ್ ಇಟ್ಟುಕೊಂಡರೆ ಬೇರೆ ಮಾತು. ಕೊನೆ ಕೊನೆಗೆ ಈ ಸ್ವಚ್ಛ ಭಾರತದ ಪರಿಕಲ್ಪನೆ ಯಾವ ಮಟ್ಟಕ್ಕೆ ಹೋಯಿತೆಂದರೆ ತಾವೇ ತಂದು ನಿರ್ದಿಷ್ಟ ಜಾಗದಲ್ಲಿ ಕಸ ಚೆಲ್ಲುವುದು, ಆನಂತರ ಕಸ ಗುಡಿಸುತ್ತಿರುವಂತೆ ಫೊಟೋಗೆ ಪೋಸ್ ಕೊಡುವುದು ನೋಡುತ್ತಿದ್ದಂತೆಯೇ ಒಂದು ಕಾರ್ಯಕ್ರಮಕ್ಕೆ ನಾವು ಸ್ಪಂದಿಸುವ ಬಗೆ ಏನು ಅನ್ನುವುದು ನಿಚ್ಚಳವಾಗಿ ಹೋಯಿತು. ಅರ್ಥಾತ್, ಮೊದಲು ಸ್ವಚ್ಛವಾಗಬೇಕಿರುವುದು ಜನರ ಮನಸ್ಸುಗಳು, ಸ್ವಚ್ಛ ಮನಸ್ಸಿನ ಆಂದೋಲನ. ಆನಂತರ ಸ್ವಚ್ಛ ಭಾರತ. ಮನಸ್ಸೇ ಸ್ವಚ್ಛವಾಗಿಲ್ಲವೆಂದರೆ ಭಾರತವನ್ನು ಸ್ವಚ್ಛ ಮಾಡುತ್ತೇವೆ ಎಂದರೆ ಅದು ನಗೆಪಾಟಲಿನ ವಿಷಯ.
ಸ್ವಚ್ಛ ಭಾರತದ ಕತೆ ಏನೇ ಇರಲಿ, ಆದರೆ ಇಂತಹದೊಂದು ಸೂತ್ರವನ್ನು ಮೋದಿಗೆ ಹೇಳಿಕೊಟ್ಟ ಕೋರ್ ಗ್ರೂಪ್ ಆ ವಿಷಯದಲ್ಲಿ ಮೋದಿಯ ವರ್ಚಸ್ಸು ಹೆಚ್ಚಾಗುವಂತೆ ನೋಡಿಕೊಂಡಿತು. ಅರೇ, ಲಾಲ್‌ಬಹಾದ್ದೂರ್ ಶಾಸ್ತ್ರಿ ಕೂಡ ದೇಶದ ಕ್ಷಾಮದಿಂದ ಕಂಗಾಲಾಗಿ: ಒಂದು ಹೊತ್ತು ಎಲ್ಲರೂ ಉಪವಾಸ ಮಾಡಿ ಅಂತ ಕರೆಕೊಟ್ಟಿದ್ದರು. ಅದು ಯಶಸ್ವಿಯೂ ಆಯಿತು. ಆಗ ಜನರಿಗೆ ಇದರ ಮಹತ್ವ ಗೊತ್ತಿತ್ತು. ನಾಳೆ ಕಸದ ಹೊಡೆತ ಏನೆಂಬುದೂ ಜನರಿಗೆ ಗೊತ್ತಾಗುತ್ತದೆ. ಆಗ ಅದು ಯಶಸ್ವಿಯಾಗಬಹುದೋ ಏನೋ?

ಹಾಗೆ ನೋಡಲು ಹೋದರೆ ಮನಮೋಹನ್ ಸಿಂಗ್ ವಿಶ್ವ ಕಂಡ ಪ್ರಸಿದ್ಧ ಅರ್ಥಶಾಸ್ತ್ರಜ್ಞ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಅವರ ಪಕ್ಕವೇ ನಿಂತು, ದೇಶದ ಹೊಸ್ತಿಲೊಳಕ್ಕೆ ಜಾಗತೀಕರಣವನ್ನು ಬಿಟ್ಟುಕೊಂಡವರು ಮನಮೋಹನ್ ಸಿಂಗ್. ಆದರೆ ಪ್ರಧಾನಿಯಾಗಿದ್ದಾಗ ಹತ್ತು ವರ್ಷಗಳ ಕಾಲ ಅವರು ತಮ್ಮದು ಅಂತ ಒಂದು ಕೋರ್ ಗ್ರೂಪ್ ಸೃಷ್ಟಿ ಮಾಡಿಕೊಳ್ಳಲಿಲ್ಲ. ಯಾಕೆಂದರೆ ರಾಜಕೀಯವಾಗಿ ಅವರಿಗೆ ಬಲವಿರಲಿಲ್ಲ. ಹೀಗಾಗಿ ಪ್ರಧಾನಿ ಸುತ್ತ ಇರಬೇಕಾದ ಕೋರ್ ಗ್ರೂಪ್ ಹೇಗಿರಬೇಕು ಅಂತ ಸೋನಿಯಾಗಾಂಧಿ ನಿರ್ಧರಿಸಿದರು. ಈ ಕೋರ್l ಗ್ರೂಪಿನ ಕತೆ ಹೇಳಿದರೆ ಅದು ಶುದ್ಧವಾದ ದ್ರಾಬೆ ಕತೆ. ಲೂಟಿ ಹೊಡೆಯುವವರು, ಒತ್ತಡ ಹೇರುವವರು, ತಮ್ಮಿಚ್ಛೆಯಂತೆ ಸರ್ಕಾರವನ್ನು ಕುಣಿಸುವವರು, ಶುದ್ಧ ನಿರುಪಯೋಗಿಗಳು, ಜೀ ಹುಜೂರ್ ಎನ್ನುವ ಭಟ್ಟಂಗಿಗಳು ಎಲ್ಲರೂ ಈ ಕೋರ್ ಗ್ರೂಪಿನಲ್ಲಿದ್ದರು. ಕಷ್ಟವನ್ನೆಲ್ಲ ಪ್ರಧಾನಿಯ ತಲೆ ಮೇಲೆ ಹಾಕುತ್ತಿದ್ದರು. ಸೋನಿಯಾಗೆ ಜೈ ಅಂದುಕೊಂಡು ಲಾಭ ಮಾಡಿಕೊಳ್ಳುತ್ತಿದ್ದರು. ಇಂತಹ ಕೋರ್ ಗ್ರೂಪ್ ಇದ್ದರೆ ಯಾವ ಪ್ರಧಾನಿಯೂ ಯಶಸ್ವಿಯಾಗಲು ಸಾಧ್ಯವಿಲ್ಲ. ಪಿ.ವಿ.ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ತಮ್ಮ ಸುತ್ತ ಅತ್ಯುತ್ತಮವಾದ ಕೋರ್ ಗ್ರೂಪ್ ಸೃಷ್ಟಿಸಿಕೊಂಡಿದ್ದರು. ಈಗ ಹಲವರು ಮೋದಿ ಕೂಡ ಇಂದಿರಾ ಗಾಂಧಿಯಂತೆಯೇ ಟಫ್ ಅನ್ನುತ್ತಾರೆ. ಆದರೆ ನರಸಿಂಹರಾವ್ ಸರ್ಕಾರಕ್ಕೆ ಹೇಳಿಕೊಳ್ಳುವಂತಹ ಶಕ್ತಿ ಇರಲಿಲ್ಲ. ಆದರೆ ಐದು ವರ್ಷಗಳ ಕಾಲ ಅವರು ನಿರಾತಂಕವಾಗಿ ಆಡಳಿತ ನಡೆಸಿದರು. ಬಾಬ್ರಿ ಮಸೀದಿಯೇ ಉರುಳಿ ಬಿದ್ದರೂ ಪರಿಸ್ಥಿತಿಯನ್ನು ಎದುರಿಸಿದರು. ಸರ್ಕಾರಕ್ಕೆ ಅತ್ಯಲ್ಪ ಬಹುಮತವಿದ್ದಾಗಲೂ ಸರ್ಕಾರ ಉರುಳದಂತೆ ಚಾಣಾಕ್ಷ ದಾಳ ಉರುಳಿಸಿದರು. ಬಂಗಾರಪ್ಪನವರಂತವರನ್ನೂ ರಾಜೀನಾಮೆ ಕೊಡಿ, ಇಲ್ಲವಾದರೆ ಸಿಎಂ ಪೋಸ್ಟಿನಿಂದ ಕಿತ್ತು ಹಾಕುತ್ತೇನೆ ಅಂತ ಗದರಿಕೊಂಡರು.

ಹೀಗೆ ನೋಡುತ್ತಾ ಹೋದರೆ ನರಸಿಂಹರಾವ್ ತಮಗಿದ್ದ ಶಕ್ತಿಗಿಂತ ಹೆಚ್ಚಿನ ಅಧಿಕಾರವನ್ನು ಚಲಾಯಿಸಿದ್ದು ಕೋರ್ ಗ್ರೂಪ್ ಮುಖಾಂತರ. ಕರ್ನಾಟಕದಲ್ಲಿ ಎಸ್ಸೆಂ ಕೃಷ್ಣ ಮುಖ್ಯಮಂತ್ರಿಯಾದಾಗ ಅವರಿಗೊಂದು ಕೋರ್ ಗ್ರೂಪ್ ಇತ್ತು. ಇಂಟಲಿಜೆನ್ಸ್‌ನಿಂದ ಹಿಡಿದು ರಾಜಕೀಯ ಸಂಗತಿಗಳ ತನಕ ಎಲ್ಲವನ್ನೂ ಅರಿತುಕೊಂಡು ಕಾಲ ಕಾಲಕ್ಕೆ ಕೃಷ್ಣ ಅವರನ್ನು ಎಚ್ಚರಿಸುವುದು, ಅದನ್ನಾಧರಿಸಿ ಕೃಷ್ಣ ಎದುರಾಳಿಗಳ ವಿರುದ್ಧ ಕೃಷ್ಣ ಚಕ್ರ ಪ್ರಯೋಗ ಮಾಡುವುದು ಮಾಮೂಲಾಗಿತ್ತು. ಹೀಗಾಗಿ ಕೃಷ್ಣ ವಿರುದ್ಧದ ಬಂಡಾಯಕ್ಕೆ ದಿಲ್ಲಿಯಿಂದ ಆಸ್ಕರ್ ಫರ್ನಾಂಡಿಸ್, ಹರಿಪ್ರಸಾದ್ ಸೇರಿದಂತೆ ಹಲ ನಾಯಕರು ಇಲ್ಲಿದ್ದ ಎಚ್.ಕೆ.ಪಾಟೀಲರಿಗೆ ಕುಮ್ಮಕ್ಕು ನೀಡಿದರೂ ಪ್ರಯೋಜನವಾಗಲಿಲ್ಲ. ಯಾಕೆಂದರೆ ಕೃಷ್ಣ ಐಟಿ-ಬಿಟಿಯ ಹೆಸರಿನಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದರು. ದಿಲ್ಲಿಯಲ್ಲಿ ಮೊದಲೇ ದುರ್ಬಲ ಹೈಕಮಾಂಡ್ ಇದ್ದ ಕಾಲ ಅದು. ಕಾಲಕಾಲಕ್ಕೆ ಪಲಾವು, ಮೊಸರನ್ನ ಅಂತ ತಿನ್ನಿಸಿ ಅದಕ್ಕೇ ಶಕ್ತಿ ತುಂಬುವ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದರು. ಇದರ ಪರಿಣಾಮವಾಗಿ ಮುಂದೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಮಹಾರಾಷ್ಟ್ರದ ರಾಜ್ಯಪಾಲರಾದರು, ಕೇಂದ್ರ ವಿದೇಶಾಂಗ ಸಚಿವರಾದರು. ಇದಕ್ಕೆಲ್ಲ ಕಾರಣ ಅವರ ಕೋರ್ ಗ್ರೂಪ್. ಕ್ರಮೇಣ ಅದು ನಶಿಸಿತು. ಕೃಷ್ಣ ತೆರೆಮರೆಯ ಹಿಂದೆ ಸರಿಯುವಂತಾಯಿತು.

ಹೀಗೆ ನೀವು ನೋಡುತ್ತಾ ಹೋದರೆ ಯಶಸ್ವಿ ರಾಜಕಾರಣಿಗಳು, ಉದ್ಯಮಿಗಳು ಏನೇ ಆಗಿ, ಅದಕ್ಕೂ ಮುನ್ನ ಒಂದು ಕೋರ್ ಗ್ರೂಪ್ ಅನ್ನು ಸೃಷ್ಟಿ ಮಾಡಿಕೊಳ್ಳಿ. ಈ ಕೋರ್ ಗ್ರೂಪ್‌ನ ವಿಶೇಷವೆಂದರೆ ಸ್ವಾಮಿನಿಷ್ಠೆ. ಸಹಜವಾಗಿ ಜಾಣ ರಾಜಕಾರಣಿಗಳು, ಉದ್ಯಮಿಗಳು ಸೃಷ್ಟಿಸಿಕೊಳ್ಳುವ ಕೋರ್ ಗ್ರೂಪ್‌ನಲ್ಲಿ ಯಾರಿರುತ್ತಾರೋ ಅವರು ಮಹತ್ವಾಕಾಂಕ್ಷಿಗಳಾಗಿದ್ದರೂ ತಮ್ಮ ನಾಯಕನ ಹಿತಾಸಕ್ತಿ ಬಿಟ್ಟು ಕೊಡುವುದಿಲ್ಲ. ಯಾವಾಗ ನಾಯಕನಿಗೇ ಅಲರ್ಜಿ ಬಂದು ಹೊರಗೆ ಹೋಗಲು ಕಾತರಿಸುತ್ತಾನೋ ಆಗವರು ದಾರಿ ನೋಡಿಕೊಳ್ಳಬಹುದೇ ಹೊರತು, ಸುಖಾಸುಮ್ಮನೆ ಅದು ಮುರಿದು ಹೋಗುವ ಗ್ರೂಪ್ ಅಲ್ಲ. ನೀವು ಮುಖೇಶ್ ಅಂಬಾನಿಯನ್ನು ನೋಡಿ, ಗೌತಮ್ ಅದಾನಿಯನ್ನು ನೋಡಿ, ಇನ್ಫೋಸಿಸ್ ನಾರಾಯಣಮೂರ್ತಿ ಅವರಂತಹ ಉದ್ಯಮಿಗಳನ್ನು ನೋಡಿ, ನೆಹರೂ, ಇಂದಿರಾ ಗಾಂಧಿ, ಎಸ್ಸೆಂ ಕೃಷ್ಣ, ದೇವೆಗೌಡ, ರಾಮಕೃಷ್ಣ ಹೆಗಡೆ, ದೇವರಾಜ ಅರಸು ಸೇರಿದಂತೆ ಅನೇಕ ಮುಖ್ಯಮಂತ್ರಿಗಳನ್ನು ನೋಡಿ. ಇವರೆಲ್ಲರ ಯಶಸ್ಸಿನ ಹಿಂದೆ ಒಂದು ಕೋರ್ ಗ್ರೂಪ್ ಇರುತ್ತದೆ.

ಅದಕ್ಕೇ ಹೇಳಿದ್ದು: ನೀವು ಜೀವನದಲ್ಲಿ ಯಶಸ್ವಿಯಾಗಬೇಕು ಎಂದರೆ ಇಂತಹ ಕೋರ್ ಗ್ರೂಪ್ ಅನ್ನು ಮೊದಲು ಸೃಷ್ಟಿಸಿಕೊಳ್ಳಿ. ಇವರನ್ನೆಲ್ಲ ನೀವೇ ಸೃಷ್ಟಿಸಬೇಕಿಲ್ಲ. ಅಂತಹವರು ನಿಮ್ಮ ಸುತ್ತಲೇ ಇರುತ್ತಾರೆ. ನೀವು ಅವರನ್ನು ಗುರುತಿಸಿ ಜೊತೆಗಿಟ್ಟುಕೊಳ್ಳುವಷ್ಟು ಜಾಣರಿರಬೇಕು ಅಷ್ಟೇ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 December, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books