Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಬರೆಯುವ ಕಷ್ಟ ಮತ್ತು ಓದುವ ಸುಖ

ನಮ್ಮ ಬೀದಿಯಲ್ಲಿದ್ದ ಅಂಚೆಪೆಟ್ಟಿಗೆ ಕಾಣೆಯಾಗಿ ಇವತ್ತಿಗೆ ಐದು ವರ್ಷವಾಯಿತು. ಎರಡು ದಿನಕ್ಕೊಮ್ಮೆಯಾದರೂ ಮನೆಯ ಗೇಟಿನ ಮುಂದೆ ನಿಂತು ಟ್ರಿಣ್ ಟ್ರಿಣ್ ಎಂದು ಸೈಕಲ್ ಬೆಲ್ ಮಾಡುತ್ತಿದ್ದ ಅಂಚೆಯ ಅಣ್ಣ ಈಗ ವಾರಕ್ಕೊಮ್ಮೆ ಬಂದರೆ ನಮ್ಮ ಪುಣ್ಯ. ನಮ್ಮ ಮಕ್ಕಳು ಪೋಸ್ಟ್ ಕಾರ್ಡ್, ಇನ್‌ಲ್ಯಾಂಡ್ ಲೆಟರ್ ಎಂಬ ಪದಗಳಿಗೆ ಅರ್ಥವನ್ನು ನಿಘಂಟಿನಲ್ಲಿ ಹುಡುಕುತ್ತಿದ್ದಾರೆ. ಪತ್ರಗಳನ್ನು ಚುಚ್ಚಿಡಲೆಂದೇ ಗೋಡೆಗೆ ನೇತು ಹಾಕಲಾದ ಸರಿಗೆಗೆ ಅಂಟಿರುವ ಧೂಳಿಗೆ ವಯಸ್ಸಾಗುತ್ತಿದೆ. ಪಾರ್ಕರ್ ಪೆನ್ನು ಶೋಕೇಸಿನಲ್ಲಿ ತಪಸ್ಸು ಮಾಡುತ್ತಿದೆ. ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ ಎಂದು ಕೇಳುತ್ತಿದ್ದ ಪ್ರೇಮಿ ದಿವಂಗತನಾಗಿದ್ದಾನೆ. ಕಳೆದು ಹೋದ ಗೆಳೆಯನ ಕೊನೆಯ ಪತ್ರ ಓದುತ್ತಾ ನಾಯಕನ ಕಣ್ಣಿಂದ ಬಿದ್ದ ಹನಿಗಳಿಗೆ ಅಕ್ಷರಗಳು ಕಲಸಿಹೋಗುವ ದೃಶ್ಯ ಯಾವ ಸಿನೆಮಾದಲ್ಲೂ ಇಲ್ಲ. ನಮ್ಮೂರ ಜಾತ್ರೆಯ ವೈಭವದ ಬಗ್ಗೆ ಇನ್‌ಲ್ಯಾಂಡ್ ಲೆಟರಿನ ಮೂರೂ ಬದಿಗಳಲ್ಲಿ ಬರೆಯುತ್ತಿದ್ದ ಗೆಳೆಯ ಈಗ ಎಲ್ಲಿದ್ದಾನೋ ಗೊತ್ತಿಲ್ಲ. ಅವನ ವಿಳಾಸವೂ ನನ್ನಲ್ಲಿಲ್ಲ, ಆದರೆ ಮೊಬೈಲ್ ನಂಬರ್ ಸೇವ್ ಆಗಿದೆ. ನಿನ್ನ ಅಕ್ಷರಗಳು ಮುತ್ತು ಪೋಣಿಸಿದಂತಿದೆ ಎಂದು ಬೆನ್ನು ಚಪ್ಪರಿಸುತ್ತಿದ್ದ ಮೇಷ್ಟ್ರು ತೀರಿಕೊಂಡು ವರ್ಷಗಳೇ ಆಗಿಹೋಗಿವೆ.

ಪತ್ರಗಳಿಲ್ಲದ, ಉತ್ತರಗಳೂ ಇಲ್ಲದ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಈ ಬಗ್ಗೆ ಯಾರಿಗೂ ದುಃಖವಿಲ್ಲ. ಯಾಕೆಂದರೆ ಎಲ್ಲರ ಕೈಯಲ್ಲೂ ಮೊಬೈಲುಗಳಿವೆ, ಕುಟ್ಟುವುದಕ್ಕೆ ಕಂಪ್ಯೂಟರ್ ಇದೆ, ಒಂದೇ ದಿನದಲ್ಲಿ ಸಾವಿರಾರು ಗೆಳೆಯರನ್ನು ಸಂಪಾದಿಸುವುದಕ್ಕೆ ಫೇಸ್ ಬುಕ್ ಇದೆ, ಫೊಟೋ ಶೇರ್ ಮಾಡುವುದಕ್ಕೆ ವಾಟ್ಸಾಪ್ ಬಂದಿದೆ. ಮುಖಾಮುಖಿಯಾಗುವುದಕ್ಕೆ ಸ್ಕೈಪ್ ಇದೆ. ಹೇಗಿದ್ದೀಯಾ ಮಾರಾಯಾ ಎಂದು ಕೇಳುವುದಕ್ಕೆ ಮಾತಿನ ಹಂಗು ಬೇಕಿಲ್ಲ, ಎಸ್ಸೆಮ್ಮೆಸ್ಸು ಮಾಡಿದರೆ ಆಯಿತು. ಮದುವೆಯ ಆಮಂತ್ರಣದಿಂದ ಹಿಡಿದು ಸಾವಿನ ಸುದ್ದಿಯೂ ಈಮೇಲ್‌ನಲ್ಲೇ ಬರುತ್ತಿದೆ. ಹಾಗಿದ್ದರೆ ನಾವು ಕಳಕೊಂಡಿದ್ದೇನು? ಬರೆಯುವ ಸುಖವಾ? ಕಾಯುವ ಸುಖವಾ? ಓದುವ ಸುಖವಾ? ಅಕ್ಷರಗಳೇ ಇಲ್ಲದ ಲೋಕದಲ್ಲಿ ಭಾವನೆಗಳು ಚಿಮ್ಮುವುದಾದರೂ ಹೇಗೆ ಎಂದು ಯಾವ ಕವಿಯೂ ಪ್ರಶ್ನಿಸುತ್ತಿಲ್ಲ ಯಾಕೆ? ಅಷ್ಟೇಕೆ, ಇತ್ತೀಚಿನ ದಿನಗಳಲ್ಲಿ ಸ್ನೇಹ, ಪ್ರೀತಿ, ಪ್ರೇಮದ ಬಗ್ಗೆ ಬಂದ ಒಂದು ಒಳ್ಳೆಯ ಸಿನೆಮಾ ಹಾಡು ಹೇಳಿ ನೋಡೋಣ. ಹಂಸಲೇಖಾ ಸ್ವಯಂನಿವೃತ್ತಿ ಘೋಷಿಸಿರುವ ಹಾಗಿದೆ ಅಥವಾ ಚಿತ್ರೋದ್ಯಮಕ್ಕೆ ಅವರ ಅಗತ್ಯವಿಲ್ಲ ಎಂದೆನಿಸಿದೆ. ಪ್ರೇಮಕವಿ ಕಲ್ಯಾಣ್ ಅವರನ್ನೂ ಚಿತ್ರರಂಗ ಮರೆತಿದೆ. ಶೋಕೇಸಿನಲ್ಲಿರುವುದೆಲ್ಲಾ ಬೇಂದ್ರೆ, ಅಡಿಗ, ಕುವೆಂಪು, ಲಕ್ಷ್ಮೀನಾರಾಯಣ ಭಟ್ ಮತ್ತು ಎಚ್‌ಎಸ್ವಿಯವರಂಥ ಹಳೆಯ ಕವಿಗಳು ಬರೆದ ಹಳೆಯ ಭಾವಗೀತೆಗಳ ಕೆಸೆಟ್ಟುಗಳು. ಹೊಸಬರು ಬರೆಯುತ್ತಿರುವ ಕವಿತೆಗಳು ಕವನಸಂಕಲನವಾಗಿ ಹೊರಬರುತ್ತಿದ್ದಂತೆಯೇ ದಿವಂಗತವಾಗುತ್ತಿವೆ. ಕಾಳಿಂಗರಾಯರು, ಅನಂತಸ್ವಾಮಿ ಮತ್ತು ಅಶ್ವತ್ಥ್ ನಂತರ ಸುಗಮಸಂಗೀತವನ್ನು ಪೋಷಿಸುವ ಮಹಾನುಭಾವರು ಯಾರೂ ಬರಲೇ ಇಲ್ಲ.

ಕೆಲವೊಮ್ಮೆ ಅನಿಸುತ್ತದೆ. ಬದುಕು ಇಷ್ಟೊಂದು ಆಯ್ಕೆಗಳನ್ನು ಮತ್ತು ಅವಕಾಶಗಳನ್ನು ನಮ್ಮ ಮುಂದೆ ಹರಡಬಾರದಾಗಿತ್ತು ಎಂದು. ಆಯ್ಕೆಯ ಸ್ವಾತಂತ್ರ್ಯ ಜಾಸ್ತಿಯಾಗುತ್ತಿದ್ದಂತೆಯೇ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಗೊಂದಲ ಜಾಸ್ತಿಯಾಗುತ್ತಾ ಹೋಗುತ್ತದೆ. ಮಗುವಿನ ಮುಂದೆ ಎರಡೇ ಎರಡು ಆಟಿಕೆಗಳನ್ನು ಇಟ್ಟರೆ ಅದರಲ್ಲಿ ಒಂದನ್ನು ಅದು ಎತ್ತಿಕೊಳ್ಳುತ್ತದೆ. ಹತ್ತಾರು ಆಟಿಕೆಗಳನ್ನು ಹರಡಿದರೆ ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿ ತಬ್ಬಿಬ್ಬಾಗಿ ಕೂರುತ್ತದೆ. ನಮಗೆ ಗೊತ್ತಿದೆ, ಒಂದು ಒಳ್ಳೆಯ ಪುಸ್ತಕ ನೀಡುವ ಸಂತೋಷವನ್ನು ಫೇಸ್ ಬುಕ್ ಆಗಲಿ ಅಥವಾ ಇನ್ಯಾವುದೇ ಶಾರ್ಟ್ ಕಟ್ ರೀಡಿಂಗ್ ಕೊಡುವುದಕ್ಕೆ ಸಾಧ್ಯವಿಲ್ಲ ಅನ್ನುವುದು. ಆದರೂ ಕಣ್ಣು ಮತ್ತೆ ಮತ್ತೆ ಆ ಕಡೆಗೇ ಹೊರಳುತ್ತದೆ. ಅಲ್ಪಕಾಲದಲ್ಲೇ ಸಿಗುವ ರೋಚಕತೆಯಲ್ಲೇ ತೃಪ್ತಿ ಹೊಂದುವ ಮನೋಸ್ಥಿತಿಯದು. ಉಡುಪಿ ಕೃಷ್ಣಭವನ ಹೊಟೇಲ್ಲಲ್ಲಿ ಮಸಾಲೆ ದೋಸೆಗೆ ಆರ್ಡರ್ ಮಾಡಿ, ಅರ್ಧ ತಾಸು ಕಾದು, ಅದು ಟೇಬಲ್ಲಿಗೆ ಬಂದ ಮೇಲೆ ಒಂದೊಂದೇ ಚೂರು ನಿಧಾನಕ್ಕೆ ಮೆಲ್ಲುತ್ತಾ ಆ ರುಚಿಯನ್ನು ಆಸ್ವಾದಿಸುವುದು ಒಂದು ವಿಧ. ದರ್ಶಿನಿ ಹೊಟೇಲ್ಲಿಗೆ ನುಗ್ಗಿ, ಸೆಲ್ಪ್ ಸರ್ವೀಸ್ ಕೌಂಟರಲ್ಲಿ ಇಡ್ಲಿ-ವಡೆ ತೆಗೆದುಕೊಂಡು ಅದನ್ನು ಗಬಗಬಾಂತ ತಿಂದು ಕೈತೊಳೆದುಕೊಂಡು ಹೊರಬರುವುದು ಇನ್ನೊಂದು ವಿಧ. ಹೊಟ್ಟೆ ತುಂಬುವುದೇ ಮುಖ್ಯವಾದಾಗ ರುಚಿಗೆ ಪ್ರಾಶಸ್ತ್ಯ ಸಿಗುವುದಿಲ್ಲ. ಕಾಯುವ ವ್ಯವಧಾನವಿಲ್ಲದೇ ಹೋದಾಗ ಇಂಥಾದ್ದೆಲ್ಲಾ ಆಗುತ್ತದೆ.
ಓದುವ ಸುಖ ಅನ್ನುವುದು ನಿಮ್ಮ ಬುದ್ಧಿ ಮತ್ತು ಭಾವ ಎರಡಕ್ಕೂ ಸಂಬಂಧಿಸಿದ್ದು. ಮಗು ಜ್ಞಾನಾರ್ಜನೆಗೆ ಓದುತ್ತದೆ, ನನ್ನಂಥವರು ಮನಸ್ಸಂತೋಷಕ್ಕಾಗಿ ಓದುತ್ತಾರೆ. ಅದರಿಂದ ನಮ್ಮ ಜ್ಞಾನದಿಗಂತವೂ ವಿಸ್ತಾರವಾದರೆ ಅದನ್ನು ಬೋನಸ್ ಎಂದು ಪರಿಗಣಿಸುತ್ತೇವೆ. ಕೆಲವೊಮ್ಮೆ ಎಂದೋ ಓದಿದ ಸಾಲುಗಳು, ಕೇಳಿದ ಹಾಡುಗಳು ನಮ್ಮ ಭಾವಕೋಶದಲ್ಲಿ ಭದ್ರವಾಗಿ ಉಳಿದುಕೊಂಡಿರುತ್ತದೆ. ಅದು ಇನ್ಯಾವುದೋ ಸಂದರ್ಭದಲ್ಲಿ ನೆನಪಾದಾಗ, ಅದನ್ನು ಸುತ್ತಲಿರುವವರ ಜೊತೆ ಹಂಚಿಕೊಂಡಾಗ ಅದರಿಂದ ಸಿಗುವ ಥ್ರಿಲ್ಲನ್ನು ಅನುಭವಿಸಿಯೇ ತೀರಬೇಕು. ನಾನು ಹಿಂದೆಂದೋ ಬರೆದು, ಆಮೇಲೆ ಮರೆತುಹೋದ ಸಾಲುಗಳನ್ನು ಓದುಗರು ನನಗೆ ನೆನಪಿಸಿದ ಸಂದರ್ಭಗಳೂ ಉಂಟು. ಆ ಸಂತೋಷವೇ ಬೇರೆ. ರಾಜಕುಮಾರ್ ಸುಮ್ಮಸುಮ್ಮನೇ ತಮ್ಮ ಸಿನೆಮಾ ನೋಡುವ ಪ್ರೇಕ್ಷಕರನ್ನು ಅಭಿಮಾನಿ ದೇವತೆಗಳು ಎಂದು ಕರೆಯಲಿಲ್ಲ. ಒಬ್ಬ ನಟನ ಅಭಿನಯ ಸಾಕ್ಷಾತ್ಕಾರ ಆಗುವುದು ಪ್ರೇಕ್ಷಕರ ಪ್ರತಿಕ್ರಿಯೆಯಲ್ಲಿ. ಈ ಮಾತು ಲೇಖಕನಿಗೂ ಅನಿಸುತ್ತದೆ. ಅವನು ಬರೆದಿದ್ದನ್ನು ಕನಿಷ್ಠ ಹತ್ತು ಜನರಾದರೂ ಓದಲಿಲ್ಲ ಅಂದರೆ ಅದು ವ್ಯರ್ಥ ಕಸರತ್ತು. ನಾನು ನನಗೋಸ್ಕರ ಬರೆಯುತ್ತೇನೆ ಅನ್ನುವುದು ಲೇಖಕನ ಒಣ ಅಹಂಕಾರವಾಗುತ್ತದೆ. ತಾನು ಬರೆದಿದ್ದನ್ನು ಯಾರೂ ಓದುವುದಿಲ್ಲವೇನೋ ಅನ್ನುವ ಅನುಮಾನವೇ ಅವನಿಂದ ಈ ಮಾತನ್ನಾಡಿಸುತ್ತದೆ. ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಭೀಮಸೇನ್ ಜೋಷಿಯವರು ಗ್ಯಾಲರಿಗೋಸ್ಕರ ಹಾಡುತ್ತಾರೆ ಎಂದು ಕೆಲವರು ಟೀಕಿಸುತ್ತಿದ್ದರು. ಅಂದರೆ ಜನಮೆಚ್ಚುವ ಕೆಲವು ಆಯ್ದ ರಾಗಗಳನ್ನಷ್ಟೇ ಅವರು ವೇದಿಕೆಯ ಮೇಲೆ ಹಾಡುತ್ತಿದ್ದರು. ಅದರಲ್ಲಿ ತಪ್ಪೇನಿದೆ? ಕೇಳುಗರನ್ನು ಮೆಚ್ಚಿಸಬೇಕಾದ್ದು ಗಾಯಕನ ಧರ್ಮ ಮತ್ತು ಕರ್ಮ. ನಿಮಗೆ ಗೊತ್ತಿರಬಹುದು, ‘ಶಂಕರಾಭರಣಂ’ ಚಿತ್ರದ ಎಲ್ಲಾ ಹಾಡುಗಳೂ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳನ್ನು ಆಧರಿಸಿವೆ. ಆ ಹಾಡುಗಳಿಗೆ ಜೀವತುಂಬಿದ ಎಸ್ಪಿ ಬಾಲಸುಬ್ರಮಣ್ಯಂ ಅವರು ಶಾಸ್ತ್ರೋಕ್ತವಾಗಿ ಸಂಗೀತ ಕಲಿತಿರಲಿಲ್ಲ. ಆದರೆ ಎಲ್ಲೂ ಶ್ರುತಿ ತಪ್ಪಲಿಲ್ಲ, ಎಸ್ಪಿ ಅವರಿಂದ ಸಂಗೀತಕ್ಕೆ ಅಪಚಾರವಾಯಿತು ಎಂಬ ಟೀಕೆ ಕೇಳಿಬರಲಿಲ್ಲ.

ಲೇಖಕನಿಗೂ ಅಂಥಾ ಆತ್ಮವಿಶ್ವಾಸ ಇದ್ದಾಗ ಆತ ಬರೆಯುವ ಸುಖವನ್ನು ಅನುಭವಿಸಬಲ್ಲ, ಆ ಸುಖವನ್ನು ತನ್ನ ಓದುಗರಿಗೂ ದಾಟಿಸಬಲ್ಲ. ಪೂರ್ಣಚಂದ್ರ ತೇಜಸ್ವಿ, ಎಸ್ಸೆಲ್ ಭೈರಪ್ಪ, ಅನಂತಮೂರ್ತಿ ಇವರೆಲ್ಲರನ್ನೂ ನಾವು ಅತ್ಯಂತ ಜನಪ್ರಿಯ ಕಾದಂಬರಿಕಾರರ ಪಟ್ಟಿಯಲ್ಲಿಟ್ಟಿದ್ದೇವೆ. ಈ ಮೂರು ಲೇಖಕರ ಬರವಣಿಗೆಯ ಶೈಲಿ ಮತ್ತು ಆಯ್ದುಕೊಳ್ಳುವ ವಸ್ತುವಿನಲ್ಲಿ ಅವರ ಮಧ್ಯೆ ಯಾವ ಹೋಲಿಕೆಯೂ ಇಲ್ಲ. ಆದರೆ ಅವರಿಗೆ ತಮ್ಮದೇ ಆದ ಓದುಗವರ್ಗವಿತ್ತು, ಇಂದಿಗೂ ಇದೆ. ಅದು ತಾನಾಗಿ ಬೈ ಛಾನ್ಸ್ ಒದಗಿಬಂದ ಭಾಗ್ಯವಲ್ಲ, ಅವರೇ ಸೃಷ್ಟಿಸಿಕೊಂಡದ್ದು. ಇಂಗ್ಲಿಷಲ್ಲಿ ಬರೆಯುತ್ತಿರುವ ಚೇತನ್ ಭಗತ್ ಇಂದಿನ ಯುವಪೀಳಿಗೆಯ ಕಣ್ಣಲ್ಲಿ ಕ್ರೇಜಿಸ್ಟಾರ್. ಆತ ಬರೆದ ಕಾದಂಬರಿಗಳೆಲ್ಲವೂ ಸಿನೆಮಾಗಳಾಗಿವೆ, ಆ ಕಾರಣಕ್ಕೇ ಆತ ಗಂಭೀರ ಬರಹಗಾರನಲ್ಲ ಎಂಬ ಟೀಕೆಗೆ ತುತ್ತಾಗಿದ್ದಾರೆ. ತುಂಬಾ ಸರಳವಾಗಿ, ಈಗಿನ ಹುಡುಗರು ಆಡುವ ಭಾಷೆಯಲ್ಲೇ ಹ್ಯೂಮರಸ್ ಆಗಿ ಬರೆಯುವ ಚೇತನ್ ಅವರ ಮೇಲೆ ತೆಳುವಾಗಿ ಬರೆಯುತ್ತಾರೆ ಎಂಬ ಆರೋಪವೂ ಇದೆ. ಆದರೆ ಕಂಪ್ಯೂಟರ್ ಮತ್ತು ಸಿನೆಮಾದ ಗೀಳಿನಲ್ಲಿ ಮುಳುಗಿಹೋಗಿದ್ದ ಈಗಿನ ಪೀಳಿಗೆಗೆ ಓದುವ ಹುಚ್ಚನ್ನು ಹಿಡಿಸಿದ್ದಕ್ಕಾದರೂ ನಾವು ಆತನನ್ನು ಅಭಿನಂದಿಸಬೇಕು.

ಮಿಕ್ಕೆಲ್ಲಾ ವೃತ್ತಿಗಳಂತೆ ಬರವಣಿಗೆಯೂ ಒಂದು ಕಸುಬುದಾರಿಕೆಯನ್ನು ಬೇಡುತ್ತದೆ. ಅದು ನಿಮಗೆ ದಕ್ಕಿದ್ದರೆ ಬರೆಯುತ್ತಾ ಹೋಗಬೇಕು. ಸುಮ್ಮನೆ ಕುಳಿತರೆ ಅದು ನಿಮಗೇ ನೀವು ಮಾಡುವ ದ್ರೋಹವಾಗುತ್ತದೆ. ಅಷ್ಟಕ್ಕೂ ನೀವು ಬರೆಯದೇ ಇದ್ದರೆ ಜಗತ್ತೇನೂ ನಿಂತುಹೋಗುವುದಿಲ್ಲ, ಎಲ್ಲೋ ಒಂದು ಕಡೆ ಹೊಸ ಲೇಖಕನೊಬ್ಬ ಹುಟ್ಟಿಕೊಳ್ಳುತ್ತಾನೆ. ನೀವು ಅಂಚೆಪೆಟ್ಟಿಗೆಯಂತೆ ಕಣ್ಮರೆಯಾದ ವಸ್ತುಗಳ ಪಟ್ಟಿಗೆ ಸೇರುತ್ತೀರಿ. ಶೋಕೇಸಿನಲ್ಲಿ ಕುಳಿತ ಪಾರ್ಕರ್ ಪೆನ್ನು ನಿಮ್ಮನ್ನು ನೋಡಿ ನಗುತ್ತದೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books