Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಕಾಲವೆಂಬ ಮುಲಾಮು ಮತ್ತು ವಾಸಿಯಾಗದ ಗಾಯ

ಯಾಕೋ ದಿಗಿಲಾಗುತ್ತಿದೆ. ಒಬ್ಬರು ನಶಿಸಿ ಹೋಗುತ್ತಿರುವ ಮೌಲ್ಯದ ಬಗ್ಗೆ ಮಾತಾಡುತ್ತಾರೆ. ಅವರು ನ್ಯಾಯ, ನೀತಿ, ಧರ್ಮ ಎಂಬ ಮೂರು ಗಾಂಧಿತತ್ವಗಳಿಗೇ ಅಂಟಿಕೊಂಡು ಇಷ್ಟು ಕಾಲ ಕಳೆದವರು. ಈಗಿನ ಪೀಳಿಗೆಯ ಕಣ್ಣಲ್ಲಿ ಅವರು ಗಾಂಧಿಯಷ್ಟೇ ಬೋರು. ಎರಡನೆಯವರು ಖಡಕ್ ಪಾರ್ಟಿ. ಬದುಕಿನಲ್ಲಿ ಶಿಸ್ತು ಮತ್ತು ನಿಯಮದ ಮಹತ್ವದ ಬಗ್ಗೆ ಮಾತಾಡಬಲ್ಲವರು. ತಮ್ಮ ನಂಬಿಕೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಕಟುವಾಗಿ ಟೀಕಿಸುತ್ತಾರೆ. ಅವರನ್ನು ಕಿರಿಕ್ ಪಾರ್ಟಿ ಎಂದು ಕರೆಯುವವರಿದ್ದಾರೆ. ಮೂರನೆಯವರು ಎಲ್ಲದಕ್ಕೂ ಅಪ್ಪಣೆ ಕೊಡಿಸುವವರು. ಅವರ ಮಾತಿಗೆ ಯಾರೂ ಎದುರಾಡುವ ಹಾಗೇ ಇಲ್ಲ. ಅವರಿಗೆ ದೂರ್ವಾಸಮುನಿ ಪಟ್ಟ ಸಿಕ್ಕಿದೆ. ನಾಲ್ಕನೆಯವರಿಗೆ ಸಲಹೆ ಕೊಡುವ ಹುಚ್ಚು. ಅವಕಾಶ ಸಿಕ್ಕರೆ ಸಚಿನ್ ತೆಂಡುಲ್ಕರನಿಗೂ ಬ್ಯಾಟಿಂಗ್ ಬಗ್ಗೆ ಟಿಪ್ಸ್ ಕೊಟ್ಟಾರು. ಅವರ ಮಕ್ಕಳೇ ಅವರನ್ನು ಜೋಕರ್ ಥರ ನೋಡುತ್ತಾರೆ. ನಾಲ್ಕನೆಯವರು ಪ್ರತಿಯೊಂದು ಘಟನೆಗೂ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ನೀಡುತ್ತಾರೆ. ಅವರು ಟೀವಿ ನಿರೂಪಕರಾಗಬೇಕಾಗಿತ್ತು ಎಂದು ಓರಗೆಯವರು ತಮಾಷೆ ಮಾಡುತ್ತಾರೆ.

ಈ ಪಂಚತತ್ವಗಳ ವಕ್ತಾರರೊಂದಿಗೆ ಗುದ್ದಾಡುತ್ತಾ ನಾವು ಬದುಕುತ್ತಿದ್ದೇವೆ. ಸಂದರ್ಭ ಅಥವಾ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಒಂದು ತತ್ವ ಇನ್ನೊಂದಾಗಿ ಬದಲಾಗಬಹುದು. ಮೌಲ್ಯಗಳು ಅನ್ನುವುದು ಬೆಲೆ ಕಟ್ಟಲಾರದ ಅಗೋಚರ ಸಂಪತ್ತಿನಂತೆ, ಅದನ್ನು ಕಾಪಾಡಿಕೊಳ್ಳುವುದು ನಮ್ಮ ಧರ್ಮ. ಹೀಗೆಂದು ಅಂದುಕೊಂಡಿದ್ದವರು ಅವೆಲ್ಲವೂ ಈಗ ಬದಲಾವಣೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಅಸಹಾಯಕರಾಗಿ ನೋಡುತ್ತಿದ್ದಾರೆ. ಉದಾಹರಣೆಗೆ ಸಜ್ಜನಿಕೆ ಅನ್ನುವುದು ಒಂದು ಮೌಲ್ಯ. ಅದಕ್ಕೆ ನಮ್ಮ ತಕರಾರಿಲ್ಲ. ಹಾಗಂತ ಎಲ್ಲರಿಗೂ ಒಳ್ಳೆಯದು ಮಾಡುವುದಕ್ಕೆ ಹೋಗಿ ನಿರ್ಗತಿಕನಾದವನ ಬಗ್ಗೆ ಯಾರೂ ಮಾತಾಡುವುದಿಲ್ಲ. ಅದು ಅವನ ಕರ್ಮ ಅನ್ನುತ್ತಾರೆ. ಎಲ್ಲರ ಕೈಯಲ್ಲೂ ಒಳ್ಳೆಯವನು ಎಂದು ಅನಿಸಿಕೊಳ್ಳುವುದಕ್ಕೆ ಕಸರತ್ತು ಮಾಡುತ್ತಾ ಎಲ್ಲಾ ಕಡೆ ಸಲ್ಲುವ ಗೋಸುಂಬೆಗಳ ಬಗ್ಗೆಯೂ ಯಾರೂ ಮಾತಾಡುವುದಿಲ್ಲ. ಯಾಕೆಂದರೆ ಅಂಥವರು ನಮಗೂ ಆಗಾಗ ಬೇಕಾಗುತ್ತಾರೆ.

ಹೆಣ್ಮಕ್ಕಳು ಮೈ ತುಂಬಾ ಸೆರಗು ಹೊದ್ದುಕೊಂಡು, ಹಣೆಗೆ ಕಾಸಗಲದ ಕುಂಕುಮ ಇಟ್ಟುಕೊಂಡು ಮನೆಯಾಚೆ ಬರಬೇಕು ಅನ್ನುವುದು ಸಂಪ್ರದಾಯವೋ ಅಥವಾ ಗಂಡು ಸಂತತಿ ಹೇರಿದ ನಿಯಮವೋ ಅನ್ನುವುದರ ಬಗ್ಗೆ ನಮಗೆ ಗೊಂದಲವಿದೆ. ಆದರೆ ಸ್ತ್ರೀವಾದಿಗಳ ಪ್ರಕಾರ ಅದು ಹೆಣ್ಮಕ್ಕಳ ಸ್ವಾತಂತ್ರ್ಯಹರಣಕ್ಕೆಂದು ಗಂಡಸರು ಮಾಡಿದ ಪ್ಲಾನು. ಇರಲಿ, ಅದಕ್ಕೂ ನಮ್ಮ ಒಪ್ಪಿಗೆಯಿದೆ. ನಮ್ಮ ಮನೆಯ ಹೆಣ್ಮಕ್ಕಳು ಹಾಗೆ ಮಾಡದಿದ್ದರೆ ಸಾಕು! ನೀನು ಮಧ್ಯರಾತ್ರಿ ಒಬ್ಬಳೇ ಮನೆಯಾಚೆ ಹೋಗಬಾರದು ಎಂದು ಅಪ್ಪ ಅಥವಾ ಅಮ್ಮ ತಮ್ಮ ಮಗಳಿಗೆ ಹೇಳಿದರೆ ಅದು ಸಲಹೆಯೋ ಅಥವಾ ಅಪ್ಪಣೆಯೋ? ಹೆತ್ತವರಿಗೆ ಮಕ್ಕಳ ಮೇಲೆ ಅಧಿಕಾರವಿರುವುದರಿಂದ ಅವರು ಅಪ್ಪಣೆ ಮಾಡಬಹುದು. ಅವರು ತೀರಾ ಮೃದು ಸ್ವಭಾವದವರಾಗಿದ್ದರೆ ಮಗಳಿಗೆ ತಿಳಿ ಹೇಳಬಹುದು. ಮಗಳು ಅದನ್ನು ಕೇಳಿಸಿಕೊಳ್ಳುತ್ತಾಳೋ ಅನ್ನುವುದು ಪ್ರಶ್ನೆ. ನನ್ನಣ್ಣ ಮಾತ್ರ ಪಾರ್ಟಿಗೆ ಹೋಗಬಹುದು, ನಾನು ಹೋಗಬಾರದಾ ಎಂದು ಮಗಳು ಕ್ರಾಸ್ ಕೊಶ್ಚನ್ ಹಾಕಿದರೆ ಹೆತ್ತವರು ತಬ್ಬಿಬ್ಬಾಗಲೇಬೇಕು. ನೀನು ಹೆಣ್ಣು, ಹಾಗೆಲ್ಲಾ ಒಂಟಿಯಾಗಿ ಓಡಾಡಬಾರದು. ಹೊರಗೆ ಸಿಂಹ, ಹುಲಿ, ಚಿರತೆಗಳಂಥಾ ದುಷ್ಟ ಪ್ರಾಣಿಗಳಿವೆ. ಅವುಗಳು ನಿನ್ನನ್ನು ಹರಿದು ಮುಕ್ಕಬಹುದು ಎಂದು ಹೇಳಿದರೆ ಆಕೆ ನಂಬುವುದಿಲ್ಲ. ಮಗಳಿಗೆ ವಾಕ್ ಸ್ವಾತಂತ್ರ್ಯವಿದೆ, ಮಧ್ಯರಾತ್ರಿಯಲ್ಲಿ ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆಯುವ ವಾಕ್ ಸ್ವಾತಂತ್ರ್ಯವೂ ಇದೆ. ಅದಕ್ಕೂ ನಮ್ಮ ಒಪ್ಪಿಗೆಯಿದೆ!

ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದರೆ ಒಂದು ಘಟನೆಯನ್ನು ನಾವು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಲಾಯರ್ ಥರ ತರ್ಕಬದ್ಧವಾಗಿ ವಾದ ಮಂಡಿಸಬಹುದು. ಪ್ರತಿಯೊಂದಕ್ಕೂ ಪುರಾವೆಯನ್ನು ಕೇಳಬಹುದು. ವಾದ ಗೆಲ್ಲುತ್ತದೆ, ನಾವು ಸೋಲುತ್ತೇವೆ. ನನ್ನ ಗೆಳೆಯನೊಬ್ಬ ಮೊನ್ನೆ ಒಂದು ವಿಚಿತ್ರ ವಾದ ಮಂಡಿಸಿದ. “ಈ ಅತ್ಯಾಚಾರ ಅನ್ನುವುದು ನಮಗೆ ಹೊಸದೇನಲ್ಲ. ಅದು ಹಿಂದೆಯೂ ನಡೀತಾ ಇತ್ತು. ಹಳ್ಳಿಗಳಲ್ಲಿ ಹೊಲ-ಗದ್ದೆಗಳಲ್ಲಿ ಹೆಣ್ಮಕ್ಕಳ ಮೇಲೆ ಅತ್ಯಾಚಾರ ನಡೆಯುವುದು ಮಾಮೂಲು. ಆದರೆ ಆಗ ಅದು ಸುದ್ದಿಯಾಗುತ್ತಿರಲಿಲ್ಲ. ಯಾಕೆಂದರೆ ಆಗ ಇಷ್ಟೊಂದು ಪತ್ರಿಕೆಗಳಾಗಲಿ, ಛಾನೆಲ್ಲುಗಳಾಗಲಿ ಇರಲಿಲ್ಲ. ಈಗ ಅದನ್ನೇ ದೊಡ್ದದು ಮಾಡಲಾಗುತ್ತಿದೆ." ನಾನು ಹೇಳಿದೆ: “ಅಲ್ಲಾ ಕಣಯ್ಯಾ, ಅತ್ಯಾಚಾರ ಅವತ್ತಿನಿಂದಲೂ ನಡೆಯುತ್ತಿದೆ ಅನ್ನುವ ಮಾತ್ರಕ್ಕೆ ಅದಕ್ಕೆ ರಿಯಾಯಿತಿ ಕೊಡಬೇಕಾ? ಒಂದು ಅನ್ಯಾಯ ನಿರಂತರವಾಗಿ ನಡೆಯುತ್ತಲೇ ಇದ್ದರೆ ಅದು ತನ್ನ ಕೆಟ್ಟ ಗುಣವನ್ನು ಕಳಕೊಂಡು ವ್ಯವಸ್ಥೆಯ ಒಂದು ಭಾಗವಾಗಿ ಮಾರ್ಪಾಡಾಗುವುದಕ್ಕೆ ಸಾಧ್ಯವಾ? ಅತ್ಯಾಚಾರ ನಿನ್ನೆಯಾದರೂ ನಡೀಲಿ, ಇವತ್ತಾದರೂ ನಡೀಲಿ, ಅದು ಕ್ರೌರ್ಯಾನೇ. ಕಾಲಕಳೆದಂತೆ ಆ ಕ್ರೌರ್ಯದ ಭೀಕರತೆ ಕಡಿಮೆಯಾಗುತ್ತಾ ಹೋಗುವುದಿಲ್ಲ. ಕಾಲದ ಮುಲಾಮು ಹಚ್ಚಿದರೆ ವಾಸಿಯಾಗುವ ಗಾಯವಲ್ಲ ಅದು."

ಸುದ್ದಿಗಳ ಸುನಾಮಿಯಿಂದಾಗಿ ನಾವು ನಮ್ಮ ಸಂವೇದನೆಗಳನ್ನೇ ಕಳೆದುಕೊಳ್ಳುತ್ತಿದ್ದೇವೆ ಅನ್ನುವುದಕ್ಕೆ ಮೇಲಿನ ಪ್ರಸಂಗ ಸಾಕ್ಷಿಯಾಗಬಹುದು. ಯಾರಾದರೂ ಒಂದು ಕೆಟ್ಟ ಸುದ್ದಿ ಹೇಳಿದರೆ ಕೊರಗುವುದೋ, ಮರುಗುವುದೋ ಅಥವಾ ಸಹಾಯಕ್ಕಾಗಿ ಧಾವಿಸುವುದೋ, ಒಂದೂ ಗೊತ್ತಾಗದೆ ನಾವು ತಬ್ಬಿಬ್ಬಾಗುತ್ತೇವೆ. ಕೊಳವೆ ಬಾವಿಯೊಳಗೆ ಮಗು ಬೀಳುತ್ತದೆ, ಛಾನೆಲ್ಲುಗಳಿಗೆ ಅದು ಸುದ್ದಿ. ತಪ್ಪೇನಿಲ್ಲ, ಅದು ಸುದ್ದಿಯಾಗುವಂಥಾ ಘಟನೆಯೇ ಸರಿ. ಆದರೆ ಮಗು ಬಾವಿಗೆ ಬೀಳಲಿ ಅನ್ನುವ ಸುದ್ದಿಗಾಗಿ ಕಾಯುವುದು ಕ್ರೌರ್ಯವಾಗುತ್ತದೆ. ಆ ಸುದ್ದಿಯನ್ನು ಇನ್ನಿಲ್ಲದಂತೆ ವೈಭವೀಕರಿಸುವುದು ಕೂಡ ಕ್ರೌರ್ಯವೇ. ಆದರೆ ಇದೇ ಸುದ್ದಿಯನ್ನು ಹಿಂದೆ ಹಲವು ಬಾರಿ ಕೇಳಿದ್ದ ಮತ್ತು ಆ ದೃಶ್ಯಗಳನ್ನು ನೋಡಿದ್ದ ಜನರು ಇದೊಂದು ಮಾಮೂಲು ಘಟನೆ ಎಂಬ ತೀರ್ಮಾನಕ್ಕೆ ಬಂದರೆ ಅದನ್ನೇನೂಂತ ಕರೀತೀರಿ?

ಮಳೆ ಬಾರದಿದ್ದರೂ ಸರ್ಕಾರವನ್ನು ದೂಷಿಸುವ ನಮ್ಮ ಜನರು ಅತ್ಯಾಚಾರದಂಥಾ ಗಂಭೀರ ಘಟನೆ ನಡೆದಾಗ ಪ್ರತಿಕ್ರಿಯೆ ವ್ಯಕ್ತಪಡಿಸಿದ ರೀತಿಯನ್ನು ನೀವು ನೋಡಿರಬಹುದು. ಸರ್ಕಾರ ನಿಷ್ಕ್ರಿಯವಾಗಿದೆ, ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿದೆ, ಅದರಿಂದಲೇ ಹೀಗೆಲ್ಲಾ ಆಗುತ್ತಿದೆ ಎಂದು ಬೊಬ್ಬೆ ಹೊಡೆದರು. ಒಂದು ಮನೆಯೊಳಗೆ, ಮುಚ್ಚಿದ ಬಾಗಿಲು ಕಿಟಕಿಗಳ ನಡುವೆ ನಡೆಯುವ ದೌರ್ಜನ್ಯವನ್ನು ಪೊಲೀಸ್ ಇಲಾಖೆ ಹೇಗೆ ತಡೆಯೋದಕ್ಕೆ ಸಾಧ್ಯ? ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯ ನಡೆದಾಗ ಪೊಲೀಸರು ಅದಕ್ಕೆ ಹೊಣೆಗಾರರಾಗುತ್ತಾರೆ. ಆದರೆ ಮನೆಯಲ್ಲಿ ಗೊತ್ತಿರುವ ವ್ಯಕ್ತಿಯಿಂದಲೇ ಇಂಥಾದ್ದು ಸಂಭವಿಸುತ್ತದೆ. ಅಂಥವನನ್ನು ಮನೆಗೆ ಬಿಟ್ಟುಕೊಂಡ ಪೋಷಕರು ಎಂಥವರು? ಗಿಡುಗನ ಕೈಗೆ ಗುಬ್ಬಚ್ಚಿಯನ್ನು ಕೊಟ್ಟು ಹೋದವರು ಎಂಥವರು? ಇಂಥಾ ಪ್ರಶ್ನೆಗಳು ಯಾಕೆ ಯಾರಿಗೂ ಹೊಳೆಯುವುದಿಲ್ಲ?

ಶ್ರೀಮಂತರ ಮಕ್ಕಳೇ ಓದುವ ಶಾಲೆಗಳಲ್ಲಿ ಅತ್ಯಾಚಾರದಂಥ ಪ್ರಕರಣ ನಡೆದಾಗ ಮಾಧ್ಯಮದಲ್ಲಿ ಅಗತ್ಯಕ್ಕಿಂತ ಜಾಸ್ತಿ ಪ್ರಚಾರ ಸಿಗುತ್ತದೆ. ವಿದ್ಯಾರ್ಥಿಗಳು ಬೀದಿಗಿಳಿಯುತ್ತಾರೆ. ತಮಾಷೆಯೆಂದರೆ ಅದರಲ್ಲೂ ಪಂಗಡಗಳಿವೆ. ಇವತ್ತು ಎಬಿವಿಪಿ, ನಾಳೆ ಎಸ್‌ಯುಸಿಐ, ನಾಡಿದ್ದು ಎಸ್ ಎಫ್‌ಐ, ಹೀಗೆ ಒಂದೊಂದು ಪಕ್ಷ ಅಥವಾ ಸಿದ್ಧಾಂತದ ಜೊತೆ ಗುರುತಿಸಿಕೊಂಡ ವಿದ್ಯಾರ್ಥಿ ಸಮೂಹ ಒಂದೇ ವಿಷಯದ ವಿರುದ್ಧ ಪ್ರತ್ಯೇಕವಾಗಿ ಧ್ವನಿ ಎತ್ತುತ್ತದೆ. ಟ್ರಾಫಿಕ್ ಜಾಮ್ ಆಗುತ್ತದೆ. ಬೆಳಗ್ಗೆ ಎಂಟಕ್ಕೆ ಮನೆಬಿಟ್ಟ ನೌಕರ ಕಚೇರಿ ಸೇರುವಾಗ ಮಧ್ಯಾಹ್ನ ಒಂದು ಗಂಟೆಯಾಗುತ್ತದೆ. ಅದರಲ್ಲೂ ಚಿಕ್ಕಬಳ್ಳಾಪುರದಿಂದ ಉತ್ತರಹಳ್ಳಿಗೆ ಬರುವ ನೌಕರ ಆಫೀಸು ತಲುಪುವ ಹೊತ್ತಿಗೆ ಬಾಗಿಲು ಮುಚ್ಚಿರುತ್ತದೆ. ಮಾಲೀಕ ಅವನ ಒಂದು ದಿನದ ಸಂಬಳಕ್ಕೆ ಕತ್ತರಿ ಹಾಕುತ್ತಾನೆ. ಸಿಲಿಕಾನ್ ಸಿಟಿಯಲ್ಲಿ ಇವತ್ತೂ ನಾನಾ ಸಂಘಟನೆಗಳಿಂದ ಮುಷ್ಕರ ಎಂದು ಛಾನೆಲ್ಲುಗಳು ಅರಚುತ್ತವೆ. ಬೆಂಗಳೂರನ್ನು ಬೆಂಗಳೂರು ಎಂದು ಕರೆಯುವುದಕ್ಕೆ ಇವರಿಗೇನು ಧಾಡಿ? ಫ್ರೀಡಂ ಪಾರ್ಕಿನಿಂದ ಶುರುವಾದ ಮೆರವಣಿಗೆ ಟೌನ್ ಹಾಲ್ ತಲುಪುವ ಹೊತ್ತಿಗೆ ದಾರಿಯುದ್ದಕ್ಕೂ ಸಾವಿರಾರು ಬಸ್ಸು, ಬೈಕು, ಕಾರುಗಳು ರಸ್ತೆಯಲ್ಲೇ ಕಲ್ಲಾಗಿರುತ್ತವೆ. ಒಂದು ಕಾಲದಲ್ಲಿ ಸ್ವಾತಂತ್ರ್ಯ ಹರಣಕ್ಕೆ ಸಂಕೇತವಾಗಿದ್ದ ಜೈಲಿದ್ದ ಜಾಗ ಈಗ ಸ್ವಾತಂತ್ರ್ಯ ಪ್ರದರ್ಶನಕ್ಕೆ ಮೀಸಲಾಗಿರುವ ಫ್ರೀಡಂ ಪಾರ್ಕ್ ಆಗಿರುವ ಇನ್ನೊಂದು ವಿಪರ್ಯಾಸವನ್ನು ಗಮನಿಸಿ.

ಎಲ್ಲದಕ್ಕೂ ಪೊಲೀಸರನ್ನು ಟಾರ್ಗೆಟ್ ಮಾಡುವವರು ಬ್ರಿಗೇಡ್ ರಸ್ತೆಯಲ್ಲಿ ಮಧ್ಯರಾತ್ರಿ ಹನ್ನೆರಡು ದಾಟಿದ ನಂತರ ಹೆಣ್ಮಕ್ಕಳು ಒಳಉಡುಪಿಗಿಂತ ಒಂದಿಂಚು ಉದ್ದವಿರುವ ಬಟ್ಟೆ ಹಾಕಿಕೊಂಡು ತೂರಾಡುವ ದೃಶ್ಯವನ್ನು ನೋಡಬೇಕು. ಅವರ ಆಚೀಚೆ ನಿಂತು ಗಾಂಜಾ ಸೇದುವ ಹುಡುಗರ ಕಣ್ಣಲ್ಲಿರುವ ಕಾಮವಾಂಛೆಯನ್ನೂ ನೋಡಬೇಕು. ಪೊಲೀಸರು ಏನು ಮಾಡುತ್ತಾರೆ ಹೇಳಿ? ವೀಕೆಂಡಲ್ಲಿ ಮಧ್ಯರಾತ್ರಿ ತನಕ ಮದ್ಯಪಾನ ಕಾನೂನು ಸಮ್ಮತ ಎಂದು ಸರ್ಕಾರವೇ ಹೇಳಿದ್ದಾಗಿದೆ. ಎಲ್ಲರೂ ಹಗಲುವೇಷಧಾರಿಗಳೇ. ನಾನಾ ಥರದ ಮುಖವಾಡ, ಮುಖವಾಡ ಕಳಚಿದರೆ ಅಲ್ಲೊಬ್ಬ ಜಾತಿನಿಂದಕ, ಧರ್ಮನಿಂದಕ, ಸೆಕ್ಯುಲರಿಸ್ಟ್, ರಾಜಕಾರಣಿ, ಸ್ವಾಮೀಜಿ, ಹೀಗೆ ನಿಮಗೆ ಹುಚ್ಚು ಹಿಡಿಸುವಷ್ಟು ಪಾತ್ರಧಾರಿಗಳು ಪ್ರತ್ಯಕ್ಷ. ಎಲ್ಲರಿಗೂ ಐಡೆಂಟಿಟಿ ಸಮಸ್ಯೆ, ಲೀಡರ್ ಆಗುವ ಹುಚ್ಚು, ಇನ್ನೊಬ್ಬರನ್ನು ಹಣಿದು ಮೆರೆಯುವ ಸೊಕ್ಕು. ಯಾರನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ. ಪ್ರಶ್ನೆ ಕೇಳುವುದು ಸಂವಿಧಾನ ನಿಮಗೆ ನೀಡಿದ ಹಕ್ಕು ಅಂತ ಅಂದುಕೊಂಡವರು ಆಸ್ಪತ್ರೆ ಸೇರಬೇಕಾಗುತ್ತದೆ ಅಥವಾ ಲಾಕಪ್ಪಲ್ಲಿರಬೇಕಾಗುತ್ತದೆ. ಮೂರ್ಖರ ಬಾಯಿ ಮುಚ್ಚಿಸಬಹುದು, ಆದರೆ ಭಂಡರ ಬಾಯಿ ಮುಚ್ಚಿಸುವುದಕ್ಕಾಗುವುದಿಲ್ಲ. ನಾವೀಗ ಧಿಕ್ಕಾರಗಳ ಜಗತ್ತಲ್ಲಿ ಬದುಕುತ್ತಿದ್ದೇವೆ. ಅಪ್ಪಿತಪ್ಪಿ ಎಲ್ಲಿಂದಲೋ ಒಂದು ಜೈ ಅನ್ನುವ ಧ್ವನಿ ಕೇಳಿಸಿದರೆ ಅದು ಯಾರದೋ ಪ್ರಾಯೋಜಕತ್ವದ ಕಾರ್ಯಕ್ರಮ ಇರಬೇಕು ಎಂದು ಅನುಮಾನಿಸುವಷ್ಟು ನಾವು ಸಿನಿಕರಾಗಿದ್ದೇವೆ.

ಈಗ ಹೇಳಿ, ಇಂಥಾ ದಿಗಿಲು ನಿಮ್ಮನ್ನೂ ಕಾಡುತ್ತಿದೆಯಾ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books