Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಜನತಾ ಪರಿವಾರ ಒಂದಾಗುವ ಮುನ್ನ ಒಂದಿಷ್ಟು...

ದೇಶದಲ್ಲಿ ಜನತಾ ಪರಿವಾರವನ್ನು ಒಂದುಗೂಡಿಸಲು ನನ್ನ ಅಭ್ಯಂತರವೇನೂ ಇಲ್ಲ ಎಂಬ ಮಾಜಿ ಪ್ರಧಾನಿ ದೇವೆಗೌಡರ ಮಾತು ಒಂದು ರೀತಿಯ ವಿಷಾದ ಮೂಡಿಸುವಂತಿದೆ. ಒಂದು ಕಾಲದಲ್ಲಿ ದೇಶ ರಕ್ಷಣೆಯ ಮಹತ್ವಾಕಾಂಕ್ಷೆಯೊಂದಿಗೆ, ವಂಶಪಾರಂಪರ್ಯ ರಾಜಕಾರಣವನ್ನು ತುಳಿದು ಹಾಕಬೇಕು ಎಂಬ ಗುರಿಯೊಂದಿಗೆ ಹುಟ್ಟಿದ ಶಕ್ತಿ ಇದು. ಆದರೆ ಇವತ್ತು ಸಿಬಿಐ ಬಲೆಯಿಂದ ಮುಕ್ತವಾಗಬೇಕು ಎಂಬುದನ್ನು ಹೊರತುಪಡಿಸಿದರೆ ಬೇರೆ ಯಾವ ಉದ್ದೇಶವೂ ಅದಕ್ಕಿಲ್ಲ. ಅಂದ ಹಾಗೆ ನೆಹರೂ ಅವರ ಸರ್ವಾಧಿಕಾರದ ವಿರುದ್ಧ ರಾಮ್ ಮನೋಹರ ಲೋಹಿಯಾ ಅವರಂತಹ ಸಂಸದೀಯ ಪಟು ಸಿಡಿದೆದ್ದರು. ಸಂವಿಧಾನ ರೂಪಿಸಿದ ಅಂಬೇಡ್ಕರ್ ಕೂಡ ನೆಹರೂ ವಿರುದ್ಧ ತಿರುಗಿ ಬಿದ್ದರು. ಕೆಲವರು ಅದನ್ನು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಘಟನೆ ಅನ್ನುತ್ತಾರೆ. ಆದರೆ ಆ ಪಕ್ಷವೇ ನೆಹರೂ ಹಿಡಿತದಲ್ಲಿತ್ತು. ಹೀಗಾಗಿ ಅಂಬೇಡ್ಕರ್ ಅವರಿಗೂ ಬಹುಕಾಲ ಅಲ್ಲಿರಲಾಗಲಿಲ್ಲ. ನಿಜ ಹೇಳಬೇಕೆಂದರೆ ಅಂಬೇಡ್ಕರ್ ಅವರನ್ನು ದೇಶದ ಮೊಟ್ಟ ಮೊದಲ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದೇ ನೆಹರೂ ಅವರಿಗೆ ಇಷ್ಟವಿರಲಿಲ್ಲ. ಆದರೆ ಯಾವಾಗ ಮಹಾತ್ಮಾ ಗಾಂಧೀಜಿ ಕೆಂಡಾಮಂಡಲವಾದರೋ ಅಂಬೇಡ್ಕರ್ ಇಲ್ಲದ ಸಚಿವ ಸಂಪುಟವನ್ನು ಊಹಿಸಲಾರೆ ಎಂದು ಗದರಿಕೊಂಡರೋ ಆಗ ನೆಹರೂ ಪರ್ಯಾಯ ದಾರಿ ಕಾಣದೆ ಅಂಬೇಡ್ಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಮುಂದೆ ಇದೇ ಅಂಬೇಡ್ಕರ್ ಮುಂಬೈನಿಂದ ಸ್ಪರ್ಧಿಸಿದಾಗ ಕಾಂಗ್ರೆಸ್‌ನವರು ಒಗ್ಗೂಡಿ ಅವರನ್ನು ಸೋಲಿಸಿದರು. ಹೀಗೆ ಸಂವಿಧಾನ ಶಿಲ್ಪಿಯೊಬ್ಬರನ್ನು ಕಾಂಗ್ರೆಸ್ ಪಕ್ಷ ಹೇಗೆ ನುಂಗಿತು, ಆನಂತರ ದಶಕಗಳ ಕಾಲ ದಲಿತರನ್ನು ತನ್ನ ಮತಬ್ಯಾಂಕ್‌ನ್ನಾಗಿ ಹೇಗೆ ಬಳಸಿಕೊಂಡಿತು ಎಂಬುದು ಈಗ ಇತಿಹಾಸ.

ಅದೇನೇ ಇರಲಿ, ಆದರೆ ೧೯೬೯ರಲ್ಲಿ ಕಾಂಗ್ರೆಸ್ ವಿಭಜನೆಯಾಯಿತಲ್ಲ? ಆಗ ಕಾಂಗ್ರೆಸ್ ಪಕ್ಷ ಎಂದರೆ ಇಂದಿರಾ, ಇಂದಿರಾ ಎಂದರೆ ಕಾಂಗ್ರೆಸ್ ಪಕ್ಷ ಎಂಬ ಪರಿಸ್ಥಿತಿಯನ್ನು ನಿರ್ಮಿಸಲು ಇಂದಿರಾ ಹೊರಟರು. ಆದರೆ ಅದಕ್ಕೆ ಕೊಕ್ಕೆ ಹಾಕಿ, ಕಾಂಗ್ರೆಸ್ ವರ್ಕಿಂಗ್ ಕಮಿಟಿಯೇ ಸರ್ವೋತ್ತಮ, ಅದು ಹೇಳಿದಂತೆ ಸರ್ಕಾರ ನಡೆದುಕೊಳ್ಳಬೇಕು, ಸರ್ಕಾರದ ನೀತಿ ರೂಪುಗೊಳ್ಳಬೇಕು ಎಂದು ಇಂದಿರಾ ವಿರೋಧಿ ಸಿಂಡಿಕೇಟ್ ಹೇಳತೊಡಗಿತು. ಇದನ್ನು ಇಂದಿರಾ ಸಹಿಸಲಿಲ್ಲ. ಅವರಿಗೆ ಪಕ್ಷ ಹಾಗೂ ಸರ್ಕಾರ ತಮ್ಮ ಹಿಡಿತದಲ್ಲೇ ಇರಬೇಕಿತ್ತು. ಹೀಗಾಗಿ ಕಾಂಗ್ರೆಸ್ ಇನ್ನೊಮ್ಮೆ ಒಡೆದು ಹೋಯಿತು. ಮೊದಲ ಕಂತಿನಲ್ಲಿ ಹಲವು ನಾಯಕರು ಹೊರಹೋದರೆ, ಎರಡನೇ ಹಂತದಲ್ಲಿ ಪಕ್ಷವೇ ಇಬ್ಭಾಗವಾಯಿತು. ಆ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ, ನಿಜಲಿಂಗಪ್ಪ, ಮಧು ದಂಡವತೆ, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಅನೇಕ ನಾಯಕರು ತಮ್ಮ ತಮ್ಮ ಶಕ್ತಿಯನ್ನು ಬಳಸಿ ಹೋರಾಟಕ್ಕಿಳಿದರು. ಯಾವುದೇ ವ್ಯವಸ್ಥೆ ಚಲನಶೀಲತೆಯಿಲ್ಲದೇ ಹೋದರೆ ಬಂಡೆಯಂತಾಗುತ್ತದೆ. ಒಂದು ವ್ಯವಸ್ಥೆ ಹಾಗೆ ಬಂಡೆಯಂತಾಗುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಯಾಕೆಂದರೆ ಅದು ಚಲನಶೀಲತೆಯನ್ನೇ ಕಳೆದುಕೊಳ್ಳುತ್ತದೆ ಎಂಬ ರಾಮ್ ಮನೋಹರ ಲೋಹಿಯಾ ಅವರ ಮಾತು ಆ ಸಂದರ್ಭದಲ್ಲಿ ಹೇಗೆ ಬಳಕೆಯಾಯಿತೆಂದರೆ ಇಡೀ ದೇಶ ಅದಕ್ಕೆ ಸ್ಪಂದಿಸಿತು.

ಕರ್ನಾಟಕದಲ್ಲಿ ದೇವರಾಜ ಅರಸು ಅವರಂತಹ ಮಹಾನ್ ನಾಯಕರು ಮುಖ್ಯಮಂತ್ರಿಯಾಗಿದ್ದರಲ್ಲ? ಅವರು ಭೂ ಸುಧಾರಣಾ ಕಾಯ್ದೆಯಿಂದ ಹಿಡಿದು, ಮಲ ಹೊರುವ ಪದ್ಧತಿಯ ತನಕ ಹಲವು ಮಹತ್ವದ ಕಾನೂನುಗಳನ್ನು ಜಾರಿಗೆ ತಂದು, ಅಧಿಕಾರದಲ್ಲಿ ಅಹಿಂದ ವರ್ಗಗಳನ್ನು ಮೇಲೆತ್ತಿದರು. ಸಾಮಾಜಿಕವಾಗಿ, ಆರ್ಥಿಕವಾಗಿ ಆ ವರ್ಗಗಳಿಗೂ ನ್ಯಾಯ ಕೊಡಿಸಲು ಯತ್ನಿಸಿದ್ದರು. ಹೀಗಾಗಿ ದೇಶದಲ್ಲಿ ಇಂದಿರಾ ವಿರೋಧಿ ಅಲೆಯೆದ್ದರೂ ಕರ್ನಾಟಕದಲ್ಲಿ ಅದು ಕೆಲಸ ಮಾಡಲಿಲ್ಲ. ಆದರೆ ೧೯೭೭ರಲ್ಲಿ ದೇಶ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಕಂಡಿತು. ಆಗ ಜನತಾ ಪಕ್ಷದ ಕೇಂದ್ರ ಸರ್ಕಾರಕ್ಕೆ ಮೊರಾರ್ಜಿ ದೇಸಾಯಿ ಅವರೇ ಪ್ರಧಾನಿ. ಆದರೆ ಆ ಸರ್ಕಾರ ಬಹುಕಾಲ ಬಾಳಲಿಲ್ಲ. ಇದೇ ಗುಂಪಿನಲ್ಲಿದ್ದ ಚೌಧರಿ ಚರಣ್ ಸಿಂಗ್ ಅವರಂತಹವರನ್ನು ಸೆಳೆದ ಇಂದಿರಾ, ಮುಂದೆ ಜನತಾ ಸರ್ಕಾರವನ್ನೇ ಬೀಳಿಸಿದರು. ಚರಣ್ ಸಿಂಗ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವಂತೆ ಮಾಡಿ, ಅದು ಬಹುಮತ ಸಾಬೀತುಪಡಿಸಲಾಗದಂತೆ ಮಾಡಿ ಕಾಲೆಳೆದು ಬೀಳಿಸಿದರು.

ಆನಂತರ ಈ ಶಕ್ತಿ ತಲೆ ಎತ್ತಿದ್ದೇ ಎಂಬತ್ತೊಂಬತ್ತರಲ್ಲಿ. ರಾಜೀವ್ ಗಾಂಧಿ ಸಚಿವ ಸಂಪುಟದಲ್ಲಿದ್ದ ವಿ.ಪಿ.ಸಿಂಗ್ ಆಗ ರಕ್ಷಣಾ ಸಚಿವರಾಗಿದ್ದರಲ್ಲ? ಅವರು ರಾಜೀವ್ ಗಾಂಧಿ ವಿರುದ್ಧ ತಿರುಗಿ ಬಿದ್ದು ಹೊರಬಂದರು. ಅವರನ್ನು ಮುಂದಿಟ್ಟುಕೊಂಡ ಜನತಾ ಪರಿವಾರ ಬಿಜೆಪಿಯ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಆದರೆ ರಾಮರಥ ಯಾತ್ರೆಗೆ ಅಡ್ವಾಣಿ ಕೈ ಹಾಕಿದಾಗ ಬಿಹಾರದ ಲಲ್ಲೂ ಪ್ರಸಾದ್ ಯಾದವ್ ಮುಲಾಜೇ ನೋಡದೆ ಆ ಯಾತ್ರೆಯನ್ನು ನಿಲ್ಲಿಸಿದರು. ಅದನ್ನೇ ನೆಪ ಮಾಡಿಕೊಂಡು ಬಿಜೆಪಿ ತನ್ನ ಬೆಂಬಲವನ್ನು ಹಿಂಪಡೆಯಿತು. ಈ ಸಂದರ್ಭದಲ್ಲಿ ಜನತಾ ಪರಿವಾರಕ್ಕೆ ಆಸರೆಯಾಗಿದ್ದು ಕಾಂಗ್ರೆಸ್‌ನ ರಾಜೀವ್ ಗಾಂಧಿ. ಒಂದು ಕಾಲದಲ್ಲಿ ಯಂಗ್ ಟರ್ಕ್ ಎಂಬ ಖ್ಯಾತಿ ಹೊಂದಿದ್ದ ಚಂದ್ರಶೇಖರ್ ಆಗ ಪ್ರಧಾನಿ. ಆದರೆ ಆ ಸರ್ಕಾರವೂ ಬಹುಕಾಲ ಬಾಳಲಿಲ್ಲ. ಯಾಕೆಂದರೆ ಹೇಗಾದರೂ ಮಾಡಿ ಕಾಂಗ್ರೆಸ್ಸೇತರ ಶಕ್ತಿಗಳಿಗೆ ದೇಶ ಆಳುವ ಶಕ್ತಿಯಿಲ್ಲ ಎಂಬುದನ್ನು ರಾಜೀವ್ ಗಾಂಧಿ ತೋರಿಸಬೇಕಿತ್ತು. ಹಾಗಂತಲೇ ಚಂದ್ರಶೇಖರ್ ವಿರುದ್ಧ ವಿನಾಕಾರಣ ಅನುಮಾನದ ಹೊಗೆ ಏಳುವಂತೆ ಮಾಡಿದರು. ತಮ್ಮ ಹಿಂದೆ ಚಂದ್ರಶೇಖರ್ ಗೂಢಚಾರರನ್ನು ಬಿಟ್ಟಿದ್ದಾರೆ ಎಂದು ಆರೋಪಿಸತೊಡಗಿದರು. ತಮ್ಮ ಕಾಲ ಮೇಲೆ ತಾವೇ ನಿಲ್ಲಲು ಪರದಾಡುತ್ತಿರುವಾಗ ಹೋಗಿ ಹೋಗಿ ರಾಜೀವ್ ಗಾಂಧಿಯನ್ನು ಹಿಂಬಾಲಿಸಲು ಚಂದ್ರಶೇಖರ್ ಯಾಕೆ ಗೂಢಚಾರರನ್ನು ಬಿಡುತ್ತಾರೆ ಅನ್ನುವುದು ಬಹುತೇಕರಿಗೆ ಅರ್ಥವಾಗಲೂ ಇಲ್ಲ.

ಒಟ್ಟಿನಲ್ಲಿ ದೇಶದ ಜನರಿಗೆ ಈ ಪ್ರಯೋಗ ಇಷ್ಟವಾಗಲಿಲ್ಲ. ಹೀಗಾಗಿ ಚಂದ್ರಶೇಖರ್ ಸರ್ಕಾರ ಹೋಗಿ ಸಂಸತ್ ಚುನಾವಣೆ ಘೋಷಣೆಯಾಯಿತು. ಇನ್ನೇನು ಚುನಾವಣೆ ನಡೆಯಬೇಕು ಅಷ್ಟರಲ್ಲಿ ರಾಜೀವ್ ಗಾಂಧಿ ಎಲ್‌ಟಿಟಿಇ ಹಂತಕರ ದಾಳಿಗೆ ಬಲಿಯಾದರು. ಹೀಗಾಗಿ ಆ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ತಲೆ ಎತ್ತಿತು. ರಾಜೀವ್ ಗಾಂಧಿ ಪರವಾದ ಅನುಕಂಪ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿತು. ಸರ್ಕಾರಕ್ಕೆ ಹೇಳಿಕೊಳ್ಳುವ ಬಲ ಸಿಗದಿದ್ದರೂ ಆಗ ಪ್ರಧಾನಿಯಾದ ನರಸಿಂಹರಾವ್ ಐದು ವರ್ಷಗಳ ಕಾಲ ನಿರಾಯಾಸವಾಗಿ ಕೆಲಸ ಮಾಡಿದರು. ಆಗ ಬಹುಮತದ ಅನಿವಾರ್ಯತೆ ಬಂದಾಗಲೆಲ್ಲ ಇದೇ ಜನತಾ ಪರಿವಾರದ ಹಲವು ಮಂದಿ ಬೇಕಂತಲೇ ಸಂಸತ್ತಿಗೆ ಚಕ್ಕರ್ ಹೊಡೆದು ಸರ್ಕಾರ ಉಳಿಯುವಂತೆ ಮಾಡುತ್ತಿದ್ದರು. ಜೆಎಂಎಂ ಹಗರಣದಿಂದ ಹಿಡಿದು ಹಲವು ಹಗರಣಗಳು ನಡೆದಿದ್ದು ಆ ಕಾಲದಲ್ಲಿ. ಆ ಐದು ವರ್ಷಗಳ ಕಾಲದಲ್ಲಿ ನೆಹರೂ ಫ್ಯಾಮಿಲಿ ಮಂಕಾಗಿ ಕುಳಿತಿತ್ತು. ಅಷ್ಟೇ ಅಲ್ಲ, ಆನಂತರದ ಎರಡು ವರ್ಷ ಕೂಡ ಮಂಕಾಗಿ ಕುಳಿತಿತ್ತು. ಯಾಕೆಂದರೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸೋನಿಯಾ ಬಿಟ್ಟು ಯಾರೂ ಇರಲಿಲ್ಲ. ಸೋನಿಯಾಗೆ ಅತ್ತೆ, ಪತಿಯ ದಾರುಣ ಸಾವು ಕಂಡು ರಾಜಕೀಯವೇ ಬೇಡವಾಗಿತ್ತು.

ಹೀಗಾಗಿ ತೊಂಬತ್ತಾರರಲ್ಲಿ ಲೋಕಸಭಾ ಚುನಾವಣೆ ನಡೆದಾಗ ಮತ್ತೆ ಅತಂತ್ರ ಸರ್ಕಾರ ಬಂತು. ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತು. ವಾಜಪೇಯಿ ಕೂಡ ಸ್ವಲ್ಪ ದಿನಗಳ ಮಟ್ಟಿಗೆ ಪ್ರಧಾನಿಯಾದರು. ಆದರೆ ಬಹುಮತ ಸಾಬೀತು ಪಡಿಸಲಾಗದೆ ಕೆಳಗಿಳಿದರು. ಆಗ ಪ್ರಧಾನಿಯಾದವರೇ ಕರ್ನಾಟಕದ ದೇವೆಗೌಡ. ನ್ಯಾಯವಾಗಿ ನೋಡಿದರೆ ಆ ಸಂದರ್ಭದಲ್ಲಿ ಕಮ್ಯೂನಿಸ್ಟ್ ಪಕ್ಷದ ನಾಯಕ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಸಹಜವಾಗಿ ಎಲ್ಲರ ಆಯ್ಕೆಯಾಗಿದ್ದರು. ಆದರೆ ಪಕ್ಷಕ್ಕೆ ಸಂಪೂರ್ಣ ಬಹುಮತ ಬರದೇ ಪ್ರಧಾನಿಯಂತಹ ಹುದ್ದೆಗಳನ್ನು ಒಪ್ಪಬಾರದು ಎಂದು ಕಮ್ಯೂನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ನಿರ್ಧರಿಸಿದ್ದರಿಂದ ಜ್ಯೋತಿ ಬಸುಗೆ ಈ ಅವಕಾಶ ತಪ್ಪಿತು. ಆ ಸಂದರ್ಭದಲ್ಲಿ ಲಾಲೂ, ಮುಲಾಯಂ, ಚಂದ್ರಬಾಬು ನಾಯ್ಡು ಅವರಂತಹ ನಾಯಕರು ತಮ್ಮ ತಮ್ಮ ರಾಜ್ಯಗಳ ಮೇಲೆ ಗಮನ ಕೇಂದ್ರೀಕರಿಸಿದ್ದರಿಂದ ಪ್ರಧಾನಿ ಹುದ್ದೆ ತಮಗೆ ಬೇಡ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರು. ಅದರ ಪರಿಣಾಮವಾಗಿ ಪ್ರಧಾನಿ ಹುದ್ದೆಯ ಹೊಣೆಗಾರಿಕೆ ದೇವೆಗೌಡರ ಮೇಲೆ ಬಿತ್ತು. ಆದರೆ ಈ ಸರ್ಕಾರ ಬಹುಕಾಲ ಬಾಳಲಿಲ್ಲ. ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ, ನಮ್ಮ ಪಕ್ಷವನ್ನು ಒಡೆಯಲು ದೇವೆಗೌಡರು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ ಬಿಟ್ಟರು.

ಆನಂತರ ಪ್ರಧಾನಿಯಾದ ಐ.ಕೆ.ಗುಜ್ರಾಲ್ ಮೇಲೂ ನೆಪ ಎತ್ತುವ ಕೆಲಸವಾಯಿತು. ರಾಜೀವ್ ಗಾಂಧಿಯನ್ನು ಕೊಂದ ಆರೋಪ ಹೊತ್ತಿರುವ ಎಲ್‌ಟಿಟಿಇ ಸಂಘಟನೆಯ ಕುರಿತು ತಮಿಳ್ನಾಡಿನ ಡಿಎಂಕೆ ಪಕ್ಷಕ್ಕೆ ಸಹಾನುಭೂತಿ ಇದೆ. ಹೀಗಾಗಿ ಸಚಿವ ಸಂಪುಟದಲ್ಲಿರುವ ಡಿಎಂಕೆ ಸದಸ್ಯರನ್ನು ಕೈ ಬಿಡಬೇಕು ಎಂದು ತಕರಾರು ಎತ್ತುವ ಕೆಲಸವಾಯಿತು. ಅದರ ಈ ನೆಪವನ್ನು ಕೇಳಿದ್ದರೆ ಮತ್ತೊಂದು ನೆಪ ಶುರುವಾಗುತ್ತಿತ್ತು. ಆದರೆ ಐ.ಕೆ.ಗುಜ್ರಾಲ್ ಅದಕ್ಕೆ ತಯಾರಿರಲಿಲ್ಲ. ಪರಿಣಾಮವಾಗಿ ಜನತಾ ಪರಿವಾರ(ತೃತೀಯ ಶಕ್ತಿ)ದ ಸರ್ಕಾರ ಮಗುಚಿ ಬಿತ್ತು. ಆನಂತರ ಆರು ವರ್ಷಗಳ ಕಾಲ ನಡೆದಿದ್ದು ವಾಜಪೇಯಿ ನೇತೃತ್ವದ ಎನ್‌ಡಿಎ ಆಡಳಿತ. ಅದಾದ ನಂತರ ನಿರಂತರ ಹತ್ತು ವರ್ಷಗಳ ಕಾಲ ನಡೆದಿದ್ದು ಯುಪಿಎ ಆಡಳಿತ. ಈಗ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪುನಃ ತಲೆ ಎತ್ತಲು ಜನತಾ ಪರಿವಾರ ಯತ್ನಿಸುತ್ತಿದೆ. ಆದರೆ ಅದರ ಗೊತ್ತು ಗುರಿಗಳೇನೂ ಸ್ಪಷ್ಟವೇ ಇಲ್ಲ. ಆಳದಲ್ಲಿ ನೋಡಿ, ಉತ್ತರ ಪ್ರದೇಶದ ಮುಲಾಯಂಸಿಂಗ್ ಯಾದವ್ ಅವರಿಗೆ ಸಿಬಿಐ ಆತಂಕವಿದೆ. ಅಕ್ರಮ ಆಸ್ತಿ ಗಳಿಕೆಯ ಆರೋಪ ಅವರ ಹೆಗಲಿಗೇರಿರುವುದರಿಂದ ಅವರು ಮೋದಿಯ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಡುವ ಶಕ್ತಿ ಕಳೆದುಕೊಂಡಿದ್ದಾರೆ.

ದೇವೆಗೌಡರಿಗೆ ಖುದ್ದಾಗಿ ಪ್ರಧಾನಿಯಾಗಿರುವುದರಿಂದ ಸಿಬಿಐ ಶಕ್ತಿ ಏನು ಅಂತ ಗೊತ್ತು. ಹೀಗಾಗಿ ಅವರು ಮೇಲ್ನೋಟಕ್ಕೆ ಜನತಾ ಪರಿವಾರ ಒಂದಾಗಲಿ ಎನ್ನುತ್ತಿದ್ದಾರಾದರೂ, ಒಂದು ಸಮರ್ಥ ಪ್ರತಿಪಕ್ಷವಾಗಿ ಎನ್‌ಡಿಎ ವಿರುದ್ಧ ಕೆಲಸ ಮಾಡುವ ಮನಸ್ಸು ಅವರಿಗಿದ್ದಂತೆ ಕಾಣುತ್ತಿಲ್ಲ. ಯಾವುದೋ ಒಂದು ನೆಪ ತೆಗೆದು ತಮ್ಮ ಕುಟುಂಬದ ವಿರುದ್ಧ ಸಿಬಿಐ ಅನ್ನು ಛೂ ಬಿಟ್ಟರೆ ಅದನ್ನು ನಿಭಾಯಿಸುತ್ತಾ ಕೂರುವುದು ಹೇಗೆ ಎಂಬುದು ಅವರ ಆತಂಕ. ಹಾಗಂತಲೇ ಇತ್ತೀಚೆಗೆ ಹದಿನೈದು ನಿಮಿಷಗಳ ಕಾಲ ಮಾತನಾಡಬೇಕು. ನನಗೆ ಅವಕಾಶ ಕೊಡಿ ಎಂದು ಅವರು ಮೋದಿಯನ್ನು ಕೇಳಿಕೊಂಡಿದ್ದರು. ಆದರೆ ಮೋದಿ ಇವರಿಗೆ ನಲವತ್ತೈದು ನಿಮಿಷಗಳ ಕಾಲಾವಕಾಶ ಕೊಟ್ಟರು. ನೀವು ದೊಡ್ಡವರು, ನಿಮ್ಮ ಸಹಕಾರ, ಮಾರ್ಗದರ್ಶನ ನನಗೆ ಬೇಕು ಎಂದರು. ಮನೆ ಬಾಗಿಲ ತನಕ ಬಂದು ಕಾರು ಹತ್ತಿಸಿ ಬೀಳ್ಕೊಟ್ಟರು.

ಇದಾದ ನಂತರ ದೇವೆಗೌಡರು ಮೋದಿ ವಿನಮ್ರತೆಗೆ ಫಿದಾ ಆಗಿ ಹೋಗಿದ್ದಾರೆ. ಹೀಗಾಗಿಯೇ ಹಾಸನದಲ್ಲಿ ಕುಳಿತು ಸ್ವಚ್ಛ ಭಾರತ ಆಂದೋಲನಕ್ಕೆ ಅವರೂ ಕೈ ಜೋಡಿಸಿದರು. ಆ ಮೂಲಕ ಮೋದಿ ಕೆಲಸಕ್ಕೆ ತಮ್ಮ ಬೆಂಬಲವಿದೆ ಎಂದು ಸಾಬೀತು ಮಾಡಿದರು. ಈಗ ಅವರು ಜನತಾ ಪರಿವಾರ ಮತ್ತೆ ಒಂದಾಗಲಿ ಎನ್ನುತ್ತಿದ್ದಾರೆ. ಆದರೆ ಒಂದಾಗುವವರು ಯಾರು? ದೇಶ ಜಾಗತೀಕರಣವನ್ನು ಒಳಗೆ ಬಿಟ್ಟುಕೊಂಡಾಗಿದೆ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲೇ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಆಯಿತು. ಈಗ ನಮ್ಮ ಮಕ್ಕಳಿಗೆ ಕೆಲಸ ಬೇಕು. ನಾವು ಸುಖವಾಗಿರಬೇಕು ಎಂಬ ಭಾವನೆ ಮಧ್ಯಮ ವರ್ಗದ ಬಹುತೇಕ ಜನರಲ್ಲಿ ಮನೆ ಮಾಡಿದೆ. ಇಂತಹ ಸ್ಥಿತಿಯಲ್ಲಿ ಕೈಗಾರಿಕೆಗಳು ಬೆಳೆಯಬೇಕು. ಜಾಗತೀಕರಣವನ್ನು ದೇಶಕ್ಕೆ ಬಿಟ್ಟುಕೊಂಡ ಕಾಂಗ್ರೆಸ್ ಕೈಲೇ ಆ ಭೂತವನ್ನು ಹೆಗಲ ಮೇಲೆ ಹೊತ್ತು ನಡೆಯಲಾಗಲಿಲ್ಲ. ಹೀಗಿರುವಾಗ ಜನತಾ ಪರಿವಾರ ಏನು ಮಾಡಲು ಸಾಧ್ಯ? ಕಮ್ಯೂನಿಸ್ಟರು ದಾರಿ ಕಾಣದಾಗಿದೆ ರಾಘವೇಂದ್ರನೇ ಎಂಬಂತಹ ಸ್ಥಿತಿಯಲ್ಲಿದ್ದಾರೆ.

ಉತ್ತರ ಪ್ರದೇಶದ ಮಾಯಾವತಿಗೆ ಅಕ್ರಮ ಆಸ್ತಿ ಹಗರಣದ ತಲೆ ನೋವು ಉಳಿದುಕೊಂಡಿದೆ. ಹೀಗಾಗಿ ಅವರು ತೃತೀಯ ರಂಗದ ಆಸುಪಾಸೂ ಸುಳಿಯುವ ಸ್ಥಿತಿಯಲ್ಲಿಲ್ಲ. ಬಿಹಾರದಲ್ಲಿ ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್ ಒಂದಾಗಿದ್ದರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಆ ರಾಜ್ಯದಲ್ಲಿ ಜಯಭೇರಿ ಬಾರಿಸುವ ಸ್ಥಿತಿಯಿದೆ. ದೇವೆಗೌಡರಿಗೂ ಸಿಬಿಐ ಭೀತಿ, ಒರಿಸ್ಸಾದ ನವೀನ್ ಪಾಟ್ನಾಯಕ್ ಅವರಿಗೂ ಸಿಬಿಐ ಭೀತಿ. ಹೀಗೆ ಜನತಾ ಪರಿವಾರದಲ್ಲಿರುವ ನಾಯಕರ ಪೈಕಿ ಬಹುತೇಕ ಮಂದಿಗೆ ಸಿಬಿಐ ಈಗ ನುಂಗಲಾರದ ತುತ್ತು. ಹೀಗಾಗಿ ಅವರು ತಮ್ಮದೇ ಒಂದು ಫ್ರಂಟು ಮಾಡಿಕೊಂಡು ಮೋದಿ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ಲಕ್ಷಣಗಳೇ ಜಾಸ್ತಿ. ನೀವು ಹೇಳಿದಂತೆ ನಾವು ಕೂಗುತ್ತೇವೆ. ನಿಮಗೇನು ಬೇಕೋ ಮಾಡಿಕೊಳ್ಳಿ ಎಂಬುದೇ ಅದರ ಮುಖ್ಯ ಅಜೆಂಡಾ ಇದ್ದಂತಿದೆ. ಇಂತಹ ಜನತಾ ಪರಿವಾರ ಒಂದಾದರೂ ಅಷ್ಟೇ, ಇಲ್ಲದಿದ್ದರೂ ಅಷ್ಟೇ. ಅಲ್ಲವೇ? ದೇಶದ ಹಿತರಕ್ಷಣೆಗೆ ಹುಟ್ಟಿದ ಶಕ್ತಿ ಈಗ ತನ್ನನ್ನು ಉಳಿಸಿಕೊಳ್ಳಲು ಒಂದಾಗುತ್ತಿದೆ ಎಂದರೆ ನಂಬುವವರು ಯಾರು?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books