Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ತೀರ ಅಂಥಾ ದೂರಾಭಾರಕ್ಕೆ ಈ ಕುಂಟುಗಾಲೆಳೆದುಕೊಂಡು ಹೋದೇನಾ ಅಂತ?

ಇಲ್ಲಲ್ಲ! ನಾನು ಈ ಹೊತ್ತಿಗೆ ಅಲ್ಲಿರಬೇಕಾಗಿತ್ತು. ಹೌದು, ಇಸ್ರೈಲ್‌ನಲ್ಲಿ. ಅಲ್ಲಿ ಯುದ್ಧ ನಡೆಯುತ್ತಿದೆ. ಅದು ಆರಂಭವಾಗುತ್ತಿರುವಂತೆಯೇ ನಾನು ಇಸ್ರೈಲ್‌ಗೆ ವೀಸಾ ಕೇಳಿ ಆ ದೇಶದ ರಾಯಭಾರಿ ಕಚೇರಿಗೆ ಅಪ್ಲಿಕೇಶನ್ ಹಾಕಿದೆ. ತಕ್ಷಣಕ್ಕೆ ವೀಸಾ ಕೊಡುತ್ತಾರೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಕೆಲವು ದೇಶಗಳೇ ಹಾಗೆ. ಅವು ತೆರೆದ ಬಾಗಿಲುಗಳನ್ನು ಹೊಂದಿಲ್ಲ. ನೀವು ಒಬ್ಬ ಭಾರತೀಯನಾಗಿ, ಅದೇ ಹೆಸರಿನ ಪಾಸ್‌ಪೋರ್ಟನ್ನೂ ಇಟ್ಟುಕೊಂಡು, ಅದೇನು ತಲೆಕೆಳಗಾಗಿ ನಿಂತು ತಪಸ್ಸು ಮಾಡಿದರೂ, ನಿಮಗೆ ಪಾಕಿಸ್ತಾನಕ್ಕೆ ಹೋಗಿ ಬರಲಾಗುವುದಿಲ್ಲ. ನಾನು ಪಾಕಿಸ್ತಾನಕ್ಕೆ ಅಷ್ಟೆಲ್ಲ ಸರಿ ಹೋಗಿ ಬಂದೆನಾ ಅಂತ ಇವತ್ತಿಗೂ ಅನ್ನಿಸುತ್ತದೆ. ಬಹುಶಃ ಇನ್ನು ಒಂದೋ,ಎರಡೋ ಸಲ ಹೋಗಿ ಬಂದರೆ, ಪಾಕಿಸ್ತಾನದವರು ನನಗೆ ‘ಪಾಕ್ ನಾಗರಿಕ’ನೆಂಬ ಸ್ಥಾನಮಾನ ಕೊಟ್ಟರೂ ಆಶ್ಚರ್ಯವಿಲ್ಲ. Thanks to S.M.Krishna. ಅವರು ವಿದೇಶಾಂಗ ಸಚಿವರಾಗಿದ್ದಾಗ ನನ್ನನ್ನು ಎರಡು ಸಲ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಅಂತೆಯೇ ಇಸ್ರೈಲ್‌ಗೂ ಒಮ್ಮೆ ಕರೆದುಕೊಂಡು ಹೋಗಿದ್ದರು. “ನನ್ನನ್ನು ಕರೆದುಕೊಂಡು ಹೋಗಿ" ಅಂತ ನಾನೇ ಅವರನ್ನು ವಿನಂತಿಸಿದ್ದೆ. ಯಾರ ನೆರವೂ ಇಲ್ಲದೆ, ಶಿಫಾರಸುಗಳೂ ಇಲ್ಲದೆ ನಾನು ಅನೇಕ ದೇಶಗಳನ್ನು ನೋಡಿ ಬಂದಿದ್ದೇನೆ, ಆ ಮಾತು ಬೇರೆ. ಅದರೆ ಪಾಕಿಸ್ತಾನ್‌ಗೆ ಹೋಗಿ ಬರುವುದು ಅಷ್ಟು ಸುಲಭವಲ್ಲ.

ಇಸ್ರೈಲ್‌ನ ಸಂಗತಿಯನ್ನೇ ತೆಗೆದುಕೊಳ್ಳಿ: ಅಲ್ಲಿಗೆ ನಾನು ಕೃಷ್ಣ ಅವರೊಂದಿಗೇ ಹೋದೆ. ಒಂದೂವರೆ ದಿನ ಅಲ್ಲಿದ್ದ ಎಸ್ಸೆಂ ಕೃಷ್ಣ ಅವರು ಭಾರತಕ್ಕೆ ಹಿಂತಿರುಗಿ ಬಿಟ್ಟರು. ನಾನು ಅಜಮಾಸು ಇಪ್ಪತ್ತೊಂದು ದಿನ ಇದ್ದೆ. ಇಸ್ರೈಲ್‌ನಲ್ಲಿ ನನಗೆ ಎಣಿಸಲಾಗದಷ್ಟು ಜನ ಕನ್ನಡಿಗರು ಸಿಕ್ಕರು. ಆಲ್ವಿ, ರೋನಿ, ಪೀಟರ್ ಮಿಥುನ್ ಮುಂತಾದ ಕನ್ನಡದ ಹುಡುಗರು ನನ್ನನ್ನು ತುಂಬ ಚೆನ್ನಾಗಿ ನೋಡಿಕೊಂಡರು. ಶುದ್ಧ ಇಸ್ರೈಲಿಗಳೇ ಆದ, ಆಲ್ವಿಯ ಗೆಳತಿ ಅದಿ ಅಮೋರ್ ಮತ್ತು ನನ್ನ ಪಾಲಿಗೆ ಇವತ್ತಿಗೂ ಹೀರೋ ಆದ, ಇಸ್ರೈಲಿ ಸೈನ್ಯಾಧಿಕಾರಿ ಷ್ಲೋಮಿ ಅಬಾದಿ ಸಿಕ್ಕರು. Facebookನಲ್ಲಿ ಷ್ಲೋಮಿ ಇವತ್ತಿಗೂ ಸಿಗುತ್ತಿರುತ್ತಾರೆ. ಮೊನ್ನೆ ಇಸ್ರೈಲ್ ಮತ್ತು ಪ್ಯಾಲಸ್ತೀನ್‌ಗಳ ಮಧ್ಯ ಯುದ್ಧ ಆರಂಭವಾದಾಗ ತಕ್ಷಣ ನಾನು ಷ್ಲೋಮಿಗೆ ಸಂದೇಶ ಕಳಿಸಿದೆ: “My hero,are you safe?" ಅಂತೆಯೇ ಆಲ್ವಿ ಮತ್ತು ರೋನಿಗೂ ಕಳಿಸಿದೆ. “ಹೇಗಿದೀರೋ ಹುಡುಗರಾ?" ಅಂತ. “ಇಲ್ಲಿ ಬಾಂಬುಗಳು ಬೀಳ್ತಾ ಉಂಟು" ಅಂತ ರೋನಿ ಉತ್ತರಿಸಿದ. ಆಲ್ವಿ ಫೋನಿಗೇ ಸಿಕ್ಕ. ಅವರ ಪ್ರತಿಕ್ರಿಯೆಗಳನ್ನೆಲ್ಲ ಕೇಳಿದ ಮೇಲೆ, ಓದಿದ ಮೇಲೆ ಶುರುವಾಯಿತಲ್ಲ ಚಡಪಡಿಕೆ?
ಇಂಥದ್ದೇ ಚಡಪಡಿಕೆ ಕಾರ್ಗಿಲ್‌ಗೆ ಹೋದಾಗ ಶುರುವಾಗಿತ್ತ್ತು. ನಿಮಗೆ ಅದೆಲ್ಲ ಗೊತ್ತು. ಅಂಥದ್ದೇ ಚಡಪಡಿಕೆ ನನಗೆ ಅಫಘನಿಸ್ತಾನ್ ಮತ್ತು ಅಮೆರಿಕದ ಮಧ್ಯೆ ಯುದ್ಧವಾದಾಗಲೂ ಉಂಟಾಗಿತ್ತು.

ಅವರಿವರ ಮಾತು ಬಿಡಿ. ಒಬ್ಬ ಪತ್ರಕರ್ತನಿಗೆ ಒಂದೇ ಜೀವಿತಾವಧಿಯಲ್ಲಿ ಎರಡು ಮೂರು ಯುದ್ಧಗಳನ್ನು report ಮಾಡುವ ಅವಕಾಶ ಇರುವುದು ತುಂಬ ತುಂಬ ಅಪರೂಪ. ಆದರೆ ನಾನು ಅದೃಷ್ಟವಂತ. ಪಕ್ಕಾ ಯುದ್ಧ ಭೂಮಿಗಳೊಳಕ್ಕೇ ಹೊಕ್ಕು, ಅಲ್ಲೇ ಕುಳಿತು ವರದಿ ಬರೆದು mail ಮಾಡಿದ್ದೇನೆ. ಅಂತೆಯೇ ಒರಿಸ್ಸಾದ ಚಂಡಮಾರುತ, ಗುಜರಾತ್‌ದ ಭೂಕಂಪ ಮುಂತಾದವುಗಳನ್ನೂ ಅಲ್ಲಿಗೇ ಹೋಗಿ ವರದಿ ಮಾಡಿದ್ದೇನೆ. ನೀವು ಗಮನಿಸಿರಬಹುದು. ಕೆಲವರು ಆಜೂಬಾಜಿನಲ್ಲಿರುವ ಸಿಂಗಪೂರ್ ಅಥವಾ ಬ್ಯಾಂಕಾಕ್‌ಗಳಿಗೆ ಹೋಗಿ ‘ನಾ ಕಂಡ ಸಿಂಗಪೂರ್’ ಎಂಬಂತಹ ಪ್ರವಾಸ ಕಥನಗಳನ್ನು ಬರೆಯುತ್ತಾರೆ. ಪುಸ್ತಕ ಪ್ರಿಂಟು ಮಾಡಿಸುತ್ತಾರೆ. ಅಮೆರಿಕದ ಸಂಗತಿ ಬಿಡಿ, ಅಲ್ಲಿಗೆ ಹೋಗಿ ಬಂದಿರುವವರು ಬರೆದಿರುವ ಪ್ರವಾಸ ಸಾಹಿತ್ಯಗಳನ್ನೆಲ್ಲ ಒಂದು ಸಲ ಗುಡ್ಡೆ ಹಾಕಿ, ಅದಕ್ಕೆ ಬೆಂಕಿ ಹಚ್ಚಿದರೆ ಅಕ್ಷರಶಃ ಒಂದು ಹಂಡೆಗೆ ಆಗುವಷ್ಟು ಬೆಂಕಿ ಉರಿಯುತ್ತದೆ. ನಾನು ಯೂರಪ್‌ನಲ್ಲಿ ದಿನಗಟ್ಟಲೆ ಅಲೆದೆ. ‘ಹಿಮಾಗ್ನಿ’ ಕಾದಂಬರಿಯ ಒಂದಷ್ಟು ಭಾಗ ನಾನು ಬರೆದದ್ದು ಜರ್ಮನಿಯಲ್ಲಿ. ನನ್ನ ಆತ್ಮೀಯರಾದ ದತ್ತ ಹೆಗಡೆಯವರಿಗೆ ಫಜೀತಿ ಹಿಡಿಸಿ ಯೂರಪ್‌ನ ನಾನಾ ದೇಶಗಳನ್ನು ಸುತ್ತಿ ಬಂದೆ. ಒಂದು ಸಲವಲ್ಲ; ಎರಡು ಸಲ ಜರ್ಮನಿಗೆ ಹೋಗಿ ಬಂದೆ. ಇದಕ್ಕೆಲ್ಲ ಕಾರಣವೂ ಇದೆ. ಮೂಲತಃ ನನ್ನದು ಅಲೆಮಾರಿ ಮನಸ್ಸು. ಎರಡನೆಯದು, ನೀವು ಈ ಹದಿನೆಂಟು ವರ್ಷಗಳಲ್ಲಿ ಸಾಕಷ್ಟು ಹಣ ಕೊಟ್ಟಿದ್ದೀರಿ. ಮೂರನೆಯದೆಂದರೆ, ನನ್ನಲ್ಲಿ ಇವತ್ತಿಗೂ ಜಗತ್ತಿನ ಆ ತುದಿಯಿಂದ ಹಿಡಿದು ಈ ತುದಿಯ ತನಕ ಗರತಿಪ್ಪಾಳೆ ಆಡಿ ಬರುವಂಥ ಉಮ್ಮೇದಿ ಇದೆ. ಒಂದು ಸಲ ನಿಮಗೆ ಪಾಸ್‌ಪೋರ್ಟು, ವೀಸಾ, ವಿಮಾನ ಮುಂತಾದವುಗಳ ಒಳಮರ್ಮ ಅರ್ಥವಾಗಿಬಿಟ್ಟರೆ ನಿಮ್ಮಂಥ ಅಲೆಮಾರಿ ಇನ್ನೊಬ್ಬರಿಲ್ಲ ಎಂಬಂತಾಗಿಬಿಡುತ್ತದೆ.

ಇವತ್ತು ವಿಮಾನಗಳಿವೆ. ಇಲ್ಲಿಂದ ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ ಇವತ್ತಿಗೆ ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದೆ ಯಾವ ಪರಿಸ್ಥಿತಿ ಇದ್ದಿರಬಹುದು. ಅದು ಅರ್ಥವಾಗಬೇಕಾದರೆ ನೀವು ನನ್ನ ಫೊಟೋಗ್ರಾಫರ್ ಗೆಳೆಯ ‘ಜೈ’ನನ್ನು ಮಾತನಾಡಿಸಬೇಕು. ಆತನ ಪೂರ್ತಿ ಹೆಸರು ಜಯದೇವ್. ನಾವೆಲ್ಲ ಕರೆಯುವುದು ‘Jai’ ಅಂತಲೇ. ಅಮೆರಿಕದಲ್ಲಿರುತ್ತಾನೆ. ಭಾರತದಿಂದ ಯಾವುದೇ ಕೇಂದ್ರಮಂತ್ರಿ ಯಾವುದೇ ದೇಶಕ್ಕೆ ಹೋದರೂ ಜೈ ಜೊತೆಯಲ್ಲಿ ಇದ್ದೇ ಇರುತ್ತಾನೆ. ಎರಡನೆಯ ಸಲ ನಾನು ಯೂರಪ್‌ಗೆ ಹೋದಾಗ ಜೈ ನನಗೆ ಸಿಕ್ಕ. ಅವನು ಒಂದೆಡೆ ನಮ್ಮನ್ನೆಲ್ಲ ಬಿಟ್ಟು ಅದ್ಯಾವುದೋ ಮನೆಯೊಳಕ್ಕೆ ನುಗ್ಗಿದ. ನನಗೆ ಕುತೂಹಲ. ಅವನು ಬೈದರೂ ಸರಿ ಅಂದುಕೊಂಡು ಹಿಂದೆಯೇ ಹೋದೆ. ಅದು actual ಆಗಿ ಮನೆಯಲ್ಲ. ಅದೊಂದು ಛತ್ರ. ಅದನ್ನು ಉರ್ದುವಿನಲ್ಲಿ ಯತೀಮ್ ಖಾನಾ ಅನ್ನಬಹುದು. ಒಂಥರಾ ಯಾತ್ರಿ ನಿವಾಸ. ಯಾರು ಬೇಕಾದರೂ ಹೋಗಿ ಒಂದೆರಡು ದಿನ ಇದ್ದು, rest ತಗೊಂಡು ಮುಂದಕ್ಕೆ ಹೋಗಬಹುದಾದ -ಱಯಾತ್ರಿ ನಿವಾಸ’. ಅಲ್ಲಿಗೆ ಹೋಗಿ ಒಂದು ಮುಪ್ಪಾನ ಮುದುಕಿಯೊಂದಿಗೆ ಈ ಪುಣ್ಯಾತ್ಮ ಜೈ ಹರಟೆ ಹೊಡೆಯತೊಡಗಿದ. ನಾನು ಮಧ್ಯೆ ತಲೆಹಾಕಿ; ಈ ಅಜ್ಜಿ ಯಾರು? ನಿನಗೆ ಹೇಗೆ ಪರಿಚಯ ಅಂತೆಲ್ಲ ಕೇಳಿದೆ. ಆಶ್ಚರ್ಯವೆಂದರೆ, ಜೈ ಆ ಮನೆಗೆ ಅನೇಕ ವರ್ಷಗಳ ಹಿಂದೆ ಹೋಗಿ ರೆಸ್ಟು ತೆಗೆದುಕೊಂಡಿದ್ದ.

“ಎಷ್ಟು ವರ್ಷಗಳ ಹಿಂದೆ?" ಅಂತ ಕೇಳಿದೆ.
“ಸುಮಾರು ನಲವತ್ತು ವರ್ಷಗಳ ಹಿಂದೆ" ಅಂದ.
“My god, ನಿನಗೀಗ ಎಷ್ಟು ವರ್ಷ?" ಅಂದೆ.
“ಎಪ್ಪತ್ತು!" ಅಂದ.
ನಿಜಕ್ಕೂ ಅಲೆಮಾರಿ ಮನಸ್ಸು ಇಲ್ಲದಿದ್ದರೆ ಹೀಗೆ ತಿರುಗಲು ಸಾಧ್ಯವೇ ಇಲ್ಲ. ಅವನಿಗೆ ಎಪ್ಪತ್ತು ವರ್ಷ ಅಂತ ಕೇಳಿ ಆಶ್ಚರ್ಯವಾಗಿದ್ದು ಮೊದಲನೆಯ ಸಂಗತಿ. ಎರಡನೆಯದನ್ನು ಕೇಳಿ; ಆಗೆಲ್ಲ ವಿಮಾನ-ಗಿಮಾನ ಇರಲಿಲ್ಲ. ಆ ದೇಶಕ್ಕೆ ಜೈ ಭಾರತದಿಂದ ಸೈಕಲ್‌ನ ಮೇಲೆ ಹೋಗಿದ್ದ! ಈಗಲೂ ತುಂಬ ಕುಡಿದಾಗ, ಏನೋ ನೆನಪು ಮಾಡಿಕೊಂಡು ಅಮೆರಿಕದಿಂದ ನನಗೆ ಫೋನ್ ಮಾಡುತ್ತಿರುತ್ತಾನೆ ಜೈ. ಆತನಿಗೆ ತೀರಾ ಅಷ್ಟು ವಯಸ್ಸಾಗಿದೆ ಅಂತ ಖಂಡಿತ ಗೊತ್ತಿರಲಿಲ್ಲ. ಕುಡಿಯೋದಕ್ಕೆ ಅಂತ ಕುಳಿತರೆ, ಪುಣ್ಯಾತ್ಮ ಒಂದು ಫುಲ್ ಬಾಟಲಿ ಕುಡಿಯುತ್ತಾನೆ.
ಈ ಥರದ ಗೆಳೆಯರು ನನಗೆ ಅನೇಕ ದೇಶಗಳ, ಅನೇಕ ಊರುಗಳಲ್ಲಿ ಇದ್ದಾರೆ.
ಪಾಕಿಸ್ತಾನದ ಇಸ್ಲಾಮಾಬಾದ್-ಲಾಹೋರ್‌ಗಳಲ್ಲಿ, ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ, ತಝಕಿಸ್ತಾನದ ದುಷಾನ್ಮೆಯಲ್ಲಿ, ದುಬೈನಲ್ಲಿ, ಜರ್ಮನಿಯಲ್ಲಿ-ಹೀಗೆ ಅನೇಕ ಕಡೆ. ಒಂದು ಫೋನು, ಒಂದು e-mail ಸಾಕು. ಅವರಿಗೆ ಪರಮಾನಂದ. ಆ ಕಾದಂಬರಿಗಳನ್ನು ನೀವೂ ಓದಿರುತ್ತೀರಿ: ಮಹಾಬ್ರಾಹ್ಮಣ ಮತ್ತು ಮಹಾಕ್ಷತ್ರಿಯ. ಅವು ದೇವುಡು ನರಸಿಂಹ ಶಾಸ್ತ್ರಿಗಳು ಬರೆದ ಕಾದಂಬರಿಗಳು. ಅಂಥ ದೇವುಡು ಅವರ ಮೊಮ್ಮಗ ದೇವುಡು ಚಂದ್ರಶೇಖರ್ ಆಸ್ಟ್ರೇಲಿಯಾದಲ್ಲಿದ್ದಾರೆ. ಗೆಳೆಯರೂ ಹೌದು, ನನ್ನ ಸಂಬಂಧಿಕರೂ ಹೌದು. ಕರೆಯುತ್ತಿರುತ್ತಾರೆ. ಇವತ್ತಿಗೆ ಸಾಕಷ್ಟು ದಿನಗಳಾದವು, ನಾನು ವಿದೇಶಕ್ಕೆ ಹೋಗಿ. ಬಹುಶಃ ಖಾಯಿಲೆ ಬಿದ್ದು, ಪೂರ್ತಿ ಚೇತರಿಸಿಕೊಂಡ ಮೇಲೆ ನಾನು ಎಲ್ಲಿಗೂ ಹೋಗಿಲ್ಲ. ಈಗ ಅಲ್ಲಿ ಹವಾಮಾನ ಕೂಡ ಚೆನ್ನಾಗಿದೆ. ಆಸ್ಟ್ರೇಲಿಯಾಕ್ಕೆ ಹೋಗಿ ಬಂದು ಬಿಡೋಣ ಅಂದುಕೊಂಡೆ. ಅಷ್ಟರಲ್ಲಿ ಈ ಪ್ರಳಯಾಂತಕ ಗೆಳೆಯ ಗಿರೀಶ್ ಹಂಪಾಳಿ ಆಸ್ಟ್ರೇಲಿಯಾಕ್ಕೆ ಹೋಗಿ ಪಂಚ ಲಿಂಗಗಳ ಸಮೇತ ಸ್ಥಾಪಿತನಾಗಿ ಬಿಟ್ಟನಲ್ಲ? ಅಲ್ಲಿ ಕುಳಿತು, ತಿರುಗಾಡಿ ನನ್ನ ಹೊಟ್ಟೆ ಉರಿಸುತ್ತಿದ್ದಾನೆ. ಆದರೆ ಜರ್ಮನಿಯಿಂದ ಸಣ್ಣ ಬಿಡುವಿಗೆ ಅಂತ ಬಂದಿರುವ ದತ್ತಾ ಹೆಗಡೆ, ನಾನು ಇಸ್ರೈಲ್‌ಗೆ ಹೊರಡುವ ಸಿದ್ಧತೆಯನ್ನು ಕೇಳಿದವರೇ,

“ಸರ್, ನಿಮ್ಮ ಆರೋಗ್ಯವೂ ಅಷ್ಟು ಚೆನ್ನಾಗಿಲ್ಲ. ಮೇಲಾಗಿ ಯುದ್ಧ. ಇಸ್ರೈಲ್‌ಗೆ ಯಾಕೆ ಈ ಪರಿಸ್ಥಿತಿಯಲ್ಲಿ ಹೋಗುತ್ತೀರಿ?" ಅಂದರು.
ನಿಜ, ನನ್ನ ಆರೋಗ್ಯ ತುಂಬ ಏನೂ ಸರಿಹೋಗಿಲ್ಲ. ತುಂಬ ದಿನ ಬಿಟ್ಟು ಯಾರಾದರೂ ನೋಡಿದರೆ ನನಗೆ ಆಗಬಾರದ್ದೇನೋ ಆಗಿದೆ ಅಂದುಕೊಂಡರೆ ಆಶ್ಚರ್ಯವಿಲ್ಲ. ಅದಕ್ಕೆ ಕಾರಣ, ನನ್ನ ತೂಕ. ಮೊದಲು ನಾನು ಪೂರ್ತಿ ಒಂದು ನೂರಾ ಎಂಟು ಕೇಜಿಯಷ್ಟಿದ್ದೆ. ಈಗ, ಆಪರೇಷನ್ ಆದ ಮೇಲೆ ಅರವತ್ತೈದು ಕೇಜಿಗೆ ಇಳಿದಿದ್ದೇನೆ. ನನಗೆ ಯಾವುದೇ ಖಾಯಿಲೆ-ಕಸಾಲೆ ಇಲ್ಲ. ಆದರೆ ಮೊದಲಿನ ‘ಡುಮ್ಮ ಬೆಳಗೆರೆ’ ಈಗ ಇಲ್ಲ. ಇನ್ನು ಅನಾರೋಗ್ಯ ಅಂತೀರಾ? ನನಗೆ ಯಾವ ಧಾಡಿಯೂ ಆಗಿಲ್ಲ. ನನ್ನ ಎಡಗಾಲಿನ ಒಂದು ಲೆಗಮೆಂಟ್ ತುಂಡಾಗಿ ಬಿಟ್ಟಿದೆ. ಅದು ಆಗಿ ಆರೆಂಟು ವರ್ಷಗಳೇ ಆಗಿವೆ. ಜೋಯಿಡಾದ ಕಾಡಿನಲ್ಲಿ ಆದ ಪುಟ್ಟ ಆಘಾತದ ಪರಿಣಾಮ ಅದು. ಅಪಘಾತ ಚಿಕ್ಕದಾದರೂ, ಅದರ ಪರಿಣಾಮವೇನೂ ಚಿಕ್ಕದಲ್ಲ. ಎಡ ಮೊಳಕಾಲಿನಲ್ಲಿರುವ ಸೂಕ್ಷ್ಮವಾದ ಲೆಗಮೆಂಟ್ ಹಗ್ಗವೇ ಹರಿದು ಹೋದಂತೆ ಹರಿದು ತುಂಡಾಗಿ ಬಿಟ್ಟಿದೆ. ಅದು ಮತ್ತೆ ಬೆಳೆಯುವುದಿಲ್ಲ. ಹಾಗಂತ ಆಪರೇಷನ್ ಮಾಡಿಸಿಕೊಂಡರೆ ಕಾಲು ಸರಿಹೋಗುತ್ತದಾ? not sure. ಅದು ಸರಿಹೋದರೆ fine. ಅಕಸ್ಮಾತ್ ಸರಿಹೋಗದಿದ್ದರೆ ಜೀವನ ಪರ್ಯಂತ wheel chairನಲ್ಲಿ ಕಳೆಯಬೇಕು. ಅಂಥ ಜಿoh ಯಾವನಿಗೆ ಬೇಕು? ಹಾಗಂದುಕೊಂಡು ಸುಮ್ಮನಾದೆ.

ಇಷ್ಟಕ್ಕೂ ಅದರಿಂದ ಆದ ಕಿರಿಕಿರಿ ಒಂದೇ. ಬಿಡುಬೀಸಾಗಿ ನಡೆಯಬಲ್ಲೆ. ಎದ್ದು, ಕುಳಿತು, ನಡೆದು ಎಲ್ಲ ಮಾಡಬಲ್ಲೆ. ಆದರೆ squat ಮಾಡಲು ಆಗುವುದಿಲ್ಲ. ಕುಕ್ಕರಗಾಲಿನಲ್ಲಿ ಕೂಡಲು ಆಗುವುದಿಲ್ಲ. ಬೆಳಿಗ್ಗೆ ಎದ್ದ ಕೂಡಲೆ toiletಗೆ ಹೋಗಬೇಕು. ಅದಕ್ಕಾಗಿ ನನಗೆ ‘ಫಾರಿನ್’ ಕಮೋಡ್ ಬೇಕು. ಈಗ ಕಮೋಡ್ ಎಂಬುದು ಅಂಥಾ ‘ಫಾರಿನ್’ ಸವಲತ್ತೇನಲ್ಲ. ಇಂಡಿಯದಲ್ಲೇ ಅಂಥವು ಕೆಲವರ ಮನೆಯಲ್ಲಿ ಮೂರೋ ನಾಲ್ಕೋ ಇರುತ್ತವೆ. ನಾನು ಟಾಯ್ಲೆಟ್ ಹೋಗಲಿಕ್ಕೆ ಆ ತರಹದ ‘ಪೀಠಾರೋಹಣ’ವೇ ಆಗಬೇಕು. ಅಕಸ್ಮಾತ್ ಯಾವುದೋ ಊರಿಗೆ ಹೋಗಿ ಅಲ್ಲಿ ಹೊಟೇಲಿನಲ್ಲಿ ಉಳಿದುಕೊಳ್ಳುವ ಸಂದರ್ಭ ಬಂದರೆ, ನಮ್ಮ ಸೀನ ಕಾರಿಳಿಯುತ್ತಿದ್ದಂತೆಯೇ ಹೊಟೇಲಿಗೆ ನುಗ್ಗಿ ಅಲ್ಲಿ ಕಮೋಡ್ ಇದೆಯಾ ಅಂತ ನೋಡಿಕೊಂಡು ಬಂದು ಆನಂತರ ನನಗೆ ಕಾರಿನಿಂದ ಇಳಿಯಲು ಪರ‍್ಮಿಷನ್ ಕೊಡುತ್ತಾನೆ. ಸಮಸ್ಯೆಯೆಂದರೆ ಅದೊಂದೇ. ಹೀಗಾಗಿ, ಇಸ್ರೈಲ್‌ಗೆ ಹೋಗುತ್ತೇನೆ ಅನ್ನುತ್ತಿದ್ದಂತೆಯೇ ಲಲಿತೆ,

“ಹಾಗಾದರೆ ಕಮೋಡು?" ಅಂದಳು.
“ಬಿಡೆ, ಅದು ಅಂಥ ದರಿದ್ರ ದೇಶವೇನಲ್ಲ. ಅಲ್ಲಿ ಇಪ್ಪತ್ತೊಂದು ದಿನ ಇರಲಿಲ್ಲವಾ? ಅಂದೆ.
ಇದಾಗಿ ಇಷ್ಟೆಲ್ಲ ಯಾಕೆ ಬರೆದೆನೆಂದರೆ, ಕೆಲವು ಗೀಳುಗಳೇ ಅಂಥವಿರುತ್ತವೆ. ಇಡೀ ಭಾರತದ ಮಟ್ಟಿಗೆ ಅಂತ ನಾನು ಹೇಳಲಾರೆ. ಆದರೆ ಕರ್ನಾಟಕದ ಮಟ್ಟಿಗೆ ನನಗೆ ಗೊತ್ತ್ತಿದ್ದಂತೆ ಯಾರೇ ಪತ್ರಕರ್ತರು ಇಸ್ರೈಲ್‌ಗೆ ವರದಿಮಾಡಲು ಹೋಗಿಲ್ಲ. ಕಾರ್ಗಿಲ್ ಮತ್ತು ಅಫಘನಿಸ್ತಾನಗಳಾದರೂ ಅಷ್ಟೆ: ಯುದ್ಧ ಭೂಮಿಯೊಳಕ್ಕೆ ಕಾಲಿಟ್ಟ ಮೊದಲ ಕನ್ನಡಿಗ ನಾನೇ. Of course, ನನ್ನೊಂದಿಗೆ ನಮ್ಮ ಆರ್.ಟಿ. ವಿಠಲಮೂರ್ತಿ ಕಾರ್ಗಿಲ್‌ಗೆ ಬಂದಿದ್ದ. ಅಫಘನಿಸ್ತಾನಕ್ಕೆ ನಾನೇ ಒಂಟಿ ಗೋವಿಯಂತೆ ಹೋಗಿದ್ದೆ.
ಇದೊಂದು ಗೀಳು. ಇಂಥ ಗೀಳುಗಳಿಲ್ಲದಿದ್ದರೆ ಪತ್ರಿಕೋದ್ಯಮಕ್ಕೆ ಬರಬಾರದು. ಅಕಸ್ಮಾತ್ ಬಂದರೆ, ತಹಸೀಲ್ದಾರ್ ಆಫೀಸಿನ ವೃದ್ಧ ಗುಮಾಸ್ತೆಗಳಂತೆ ನಾವೂ ಅದೊಂದು ದಿನ ರಿಟೈರ್ ಆಗಿಬಿಡುತ್ತೇವೆ. ಈಗ ನನಗೇನೂ ಕಡಿಮೆ ವಯಸ್ಸಾಗಿಲ್ಲ: ಐವತ್ತೇಳು. ಹೆಚ್ಚೆಂದರೆ ಈ ತಿಕ್ಕಲು ಚೇಷ್ಟೆಗಳನ್ನು ಇನ್ನೊಂದು ನಾಲ್ಕು ವರ್ಷ ಮಾಡಬಲ್ಲೆ. ಕೈಕಾಲು ಗಟ್ಟಿಯಾಗಿರುವಾಗಲೇ ಇಂಥವುಗಳನ್ನ ಮಾಡಿ, ಆಸೆ ಪೂರೈಸಿಕೊಂಡು ಬಿಡಬೇಕು.

ಹಾಗಂತ ಯೋಚಿಸುತ್ತಿರುವಾಗಲೇ ವಾರ್ತೆ ಬಂತು. ‘ಇಸ್ರೈಲ್‌ಗೆ ವೀಸಾ ಸಿಕ್ಕಿದೆ!’ ಅದೂ ಏನು, ಹತ್ತಿಪ್ಪತ್ತು ದಿನಗಳ ವೀಸಾ ಅಲ್ಲ. ಅನಾಮತ್ತು ಮೂರು ತಿಂಗಳುಗಳದೇ ವೀಸಾ ಸಿಕ್ಕಿದೆ. ತೊಂಬತ್ತುದಿನದಲ್ಲಿ ಯಾವಾಗಬೇಕಾದರೂ ಹೋಗಬಹುದು. ಬರಬಹುದು. ಈ ತರಹ ಮೇಲಿಂದ ಮೇಲೆ ಹೋಗುತ್ತಿದ್ದರೆ ಆ ದೇಶದವರು multiple entry ವೀಸಾ ಕೊಟ್ಟುಬಿಡುತ್ತಾರೆ. ನಮ್ಮ ದತ್ತಾ ಹೆಗಡೆಯ ಸೌಭಾಗ್ಯ ನೋಡಿ! ಅವರಿಗೆ ವೀಸಾ ಮಾತ್ರ ಅಲ್ಲ. ಪಕ್ಕ್ಕಾ ಜರ್ಮನ್ ಪಾಸ್‌ಪೋರ್ಟೇ ಸಿಕ್ಕಿದೆ! ಅವರು ಓಟು ಹಾಕುವಂತಿಲ್ಲ ಮತ್ತು ಜರ್ಮನಿಯಲ್ಲಿ ಚುನಾವಣೆಗೆ ನಿಲ್ಲುವಂತಿಲ್ಲ ಎಂಬುದನ್ನು ಬಿಟ್ಟರೆ, ಅವರೀಗ ಪಕ್ಕಾ ಜರ್ಮನ್. ಆ ಮಾತು ಹಾಗಿರಲಿ, ಯಾವುದೋ ಎರಡು ದೇಶಗಳಿಗೆ ಬಿಟ್ಟರೆ, ಪ್ರಪಂಚದಾದ್ಯಂತ ಅವರು ಯಾವುದೇ ದೇಶಕ್ಕೆ ವೀಸಾ ಕೂಡ ಇಲ್ಲದೆ ಹೋಗಿ ‘ನಾ ಬಂದೆ’ ಅನ್ನಬಹುದು. ಇದಕ್ಕಿಂತ ಸೌಭಾಗ್ಯ ಬೇಕೆ? ಒಂದು ತಮಾಷೆಯ ಸಂಗತಿಯೆಂದರೆ ದತ್ತಾ ಹೆಗಡೆ, ಭಾರತಕ್ಕೆ ಬರಬೇಕೆಂದರೆ ಇಂಡಿಯಾದಿಂದ ವೀಸಾ ಪಡೆಯಬೇಕು! ನನ್ನ ಶ್ರೀಲಂಕನ್ ಮಿತ್ರ ಶೋಭ ಸಕ್ತಿ ಇದ್ದಾನಲ್ಲ? ಆತ ಪ್ಯಾರಿಸ್‌ನಿಂದ ಇಂಡಿಯಕ್ಕೆ ಬರಬೇಕೆಂದರೆ ಆತನಿಗೆ ವೀಸಾ ಸಿಗುವುದಿಲ್ಲ. ಅಸಲಿಗೆ ಆತ ಯಾವ ದೇಶದ ಪ್ರಜೆಯೂ ಅಲ್ಲ. ಆತ political refugee. ಅದರರ್ಥ,

ಯಾವುದೇ ದೇಶಕ್ಕೂ ಸೇರದ ನಿರಾಶ್ರಿತ. ಆತನಿಗೆ ಫ್ರಾನ್ಸ್ ದೇಶ ಅಲ್ಲಿಂದ ಹೊರಡುವಾಗ ಒಂದು travel permit ಕೊಡುತ್ತದೆ. ಅದರಲ್ಲಿ ‘ಶೋಭ ಸಕ್ತಿ ತನ್ನ ಮೂಲ ನೆಲೆಯಾದ ಶ್ರೀಲಂಕಾಗೆ ಕಾಲಿಡಬಾರದು’ ಎಂದು ಬರೆಯಲಾಗಿರುತ್ತದೆ. ನನ್ನ ಪರಿಸ್ಥಿತಿ ಎಲ್ಲಿಗೆ ಬಂತು ನೋಡಿ ಅಂತ ಕಣ್ಣುತೋಯಿಸಿಕೊಂಡಿದ್ದ ಶೋಭಸಕ್ತಿ. ಇಲ್ಲೇ ಭಾರತದಲ್ಲಿ ಇದ್ದು, ಸ್ವಂತ ಬಚ್ಚಲು ಮನೆಯಲ್ಲಿ ಉಚ್ಚೆ ಹೊಯ್ದು, ಕಾಲು ಒರೆಸಿಕೊಳ್ಳುವವರದು ಬೇರೆಮಾತು. ಅವರಿಗೆ ಪಾಸ್‌ಪೋರ್ಟು, ವೀಸಾ ಯಾವುದೂ ಬೇಡ. ಆದರೆ ದೇಶದ ಹೊರಗೆ ಕಾಲಿಟ್ಟ ಮರುಕ್ಷಣ ಅವು ದೊಡ್ಡ ಸಂಗತಿಗಳಾಗಿಬಿಡುತ್ತವೆ. ಇದು ಇಷ್ಟಕ್ಕೇ ಸಾಲುವುದಿಲ್ಲ. ಹೊರದೇಶಕ್ಕೆ ಕಾಲಿಡುತ್ತಿದ್ದಂತೆಯೇ ನಿಮಗೆ stamping ಅಂತ ಇನ್ನೊಂದು ಫಜೀತಿ ಇದಿರಾಗುತ್ತದೆ.

ಯಾವುದೇ ದೇಶಕ್ಕೆ ಹೋಗಿ ನಿಮಗೆ ಎಷ್ಟೇ ಅರ್ಜೆಂಟ್ ಅನ್ನಿಸುವಂತಹ ಸಮಸ್ಯೆಯೇ ಇರಬಹುದು. ಆದರೆ ಆ ದೇಶದ ಏರ್‌ಪೋರ್ಟ್‌ನಲ್ಲಿ ನಿಮ್ಮ ಪಾಸ್‌ಪೋರ್ಟ್‌ಗೆ ಅಲ್ಲಿನ ಅಧಿಕಾರಿಯೊಬ್ಬ stamp ಮಾಡಲೇ ಬೇಕು. ಅದರ ಉದ್ದೇಶವೆಂದರೆ, “ಹೀಗೆ ಭಾರತದಿಂದ ರವಿ ಬೆಳಗೆರೆ ಎಂಬ ಮನುಷ್ಯ ಇಂಥ ತಾರೀಕಿನಂದು, ಇಂಥ ಹೊತ್ತಿಗೆ ನಮ್ಮ ದೇಶಕ್ಕೆ ಬಂದಿಳಿದಿದ್ದಾನೆ"
ಎಂದು ಖಚಿತಪಡಿಸುವ ರಾಜಮುದ್ರೆ ಅದು;stamping. ಬೇರೆ ಜನಕ್ಕೆ ವಿಮಾನವಿಳಿದ ಕೂಡಲೆ ಇಷ್ಟೆಲ್ಲ ಹೊತ್ತು ಕ್ಯೂ ನಿಲ್ಲಬೇಕಲ್ಲ ಅಂತ ಸಿಡಿಮಿಡಿಯಾಗಬಹುದು. ಆದರೆ ನನ್ನಂಥವನಿಗೆ ಅದು ಬೇರೆಯೇ ತರಹದ ಫಜೀತಿ. ಕೆಲವು ದೇಶಗಳಿರುತ್ತವೆ. ಆ ದೇಶಗಳ ಏರ್ ಪೋರ್ಟಿನಲ್ಲಿ ಒಮ್ಮೆ ಆ ದೇಶದ stamp ಬಿತ್ತೋ? ನೀವಿನ್ನು ಬೇರೆ ದೇಶಕ್ಕೆ ಕಾಲಿಡಲು ಸಾಧ್ಯವೇ ಇಲ್ಲ! ಮತ್ತೆ ಭಾರತಕ್ಕೆ ಬಂದು ನನ್ನ ಪಾಸ್‌ಪೋರ್ಟ್ ಕಳೆದು ಹೋಗಿದೆ ಅಂತೆಲ್ಲ ಕಥೆ ಹೇಳಿ, ಹೊಸ ಪಾಸ್‌ಪೋರ್ಟ್ ಕೊಡಿಸಿಕೊಂಡೇ ಪರದೇಶದ ಯಾತ್ರೆ ಆರಂಭಿಸಬೇಕಾಗುತ್ತದೆ. ಹೆಚ್ಚುಕಡಿಮೆ ಇಸ್ರೈಲ್ ಕೂಡ ಅಂಥದ್ದೇ ದೇಶ. ಅದಕ್ಕೆ ಪದೇಪದೆ ಹೋಗಿ ಬಂದರೆ ದೋಹ, ಕತಾರ್, ಸೌದಿ ಅರೇಬಿಯಾ, ಪಾಕಿಸ್ತಾನ್ ಮುಂತಾದ ಪಕ್ಕಾ ಕರ್ಮಠ ಮುಸ್ಲಿಂ ರಾಷ್ಟ್ರಗಳಿಗೆ ಹೋಗಿ ವಿಮಾನವಿಳಿಯುವುದು, ತುಂಬ ಅಲ್ಲದಿದ್ದರೂ ಕೊಂಚ ಕಷ್ಟವೇ.

ನನ್ನ ಪಾಸ್‌ಪೋರ್ಟ್ ಪುಸ್ತಕದ ಅನೇಕ ಪುಟಗಳಲ್ಲಿ ಈ ಮುಸ್ಲಿಂ ರಾಷ್ಟ್ರಗಳ ರಾಜಮುದ್ರೆ (stamp) ಗಳಿವೆ. ಅವರಿವರೇಕೆ, ವಿಪರೀತ ಖತರ್‌ನಾಕ್ ಎಂಬ ಹೆಸರು ಪಡೆದ ಅಫಘನಿಸ್ತಾನದ stamp ಇದೆ. ಪಾಕಿಸ್ತಾನದ್ದೂ ಇದೆ. ಹಾಗಾಗಿಯೇ ಇಸ್ರೈಲ್ ಅಧಿಕಾರಿಗಳು, ಇಡೀ ಪಾಸ್‌ಪೋರ್ಟ್ ತಿರುವಿ ಹಾಕಿ ಇಲ್ಲಿಗೇಕೆ ಹೋಗಿದ್ದೆ, ಅಲ್ಲಿಗೇಕೆ ಹೋಗಿದ್ದೆ ಎಂದು ಕಿರಿಕ್ ಮಾಡಿದ್ದರು. ಆದರೆ ಅದಕ್ಕೆ ನಾನು ಹೆದರಿರಲಿಲ್ಲ. ಇವೆಲ್ಲ ಬಿಟ್ಟು ನಾನು ಎಸ್ಸೆಂ ಕೃಷ್ಣ ಅವರ ಜೊತೆಗೆ ಆ ದೇಶದೊಳಕ್ಕೆ ಕಾಲಿಟ್ಟೆನಲ್ಲ? ಆ ಕ್ಷಣಕ್ಕೆ ನನ್ನ ಮೀಟರೇ off ಆಗಿ ಹೋಗಿತ್ತು. ಆ ದೇಶದ ಹೆಸರೇ, ಈಗ ಭಯಂಕರ ಯುದ್ಧಕ್ಕೆ ನಿಂತಿರುವ ಪ್ಯಾಲಸ್ತೀನ್!

ಇಸ್ರೈಲ್‌ನಿಂದ ಅದೇನೂ ಗಾವುದ, ಗಾವುದ ದೂರಕ್ಕಿಲ್ಲ. ನಮ್ಮ ಪದ್ಮನಾಭನಗರದಿಂದ ಏರ್‌ಪೋರ್ಟಿಗೆ ಎಷ್ಟು ಮಹಾದೂರವಿದೆಯೋ, ಪ್ಯಾಲಸ್ತೀನ್ ಎಂಬ ದೇಶ ಇಸ್ರೈಲ್‌ನ ರಾಜಧಾನಿ ಟೆಲ್ ಅವೀವ್‌ನಿಂದ ಅಷ್ಟೇ ದೂರವಿದೆ. ಅಲ್ಲಿಗೆ ನಾವು ಕಾರುಗಳಲ್ಲೇ ಹೋದೆವು. ಮೊದಲ ಕಾರು ಎಸ್ಸೆಂ ಕೃಷ್ಣ ಅವರದು. ನಾವು ಪ್ಯಾಲಸ್ತೀನ್‌ಗೆ ಹೋಗುತ್ತಿದ್ದೇವೆ ಅಂತ ನಮಗೆ ಚೆನ್ನಾಗಿಯೇ ಗೊತ್ತಿತ್ತು. ಅಂಥ ಹೆದರಿಕೆಯೇನೂ ಆಗಿರಲಿಲ್ಲ. ಆದರೆ ಹೋಗಿ ತಲುಪಿದೆವು ನೋಡಿ? ಆ ದೇಶದವರು stamp ಮಾಡಿಬಿಟ್ಟರೆ ನಮ್ಮ ಗತಿಯೇನು ಎಂಬ ‘ಪೇತು’ ನಮ್ಮೆಲ್ಲರನ್ನೂ ಕಾಡತೊಡಗಿತು. ಏಕೆಂದರೆ, ಪ್ಯಾಲಸ್ತೀನದ stamp ಬಿದ್ದರೆ ಜಗತ್ತಿನ ಅನೇಕ ರಾಷ್ಟ್ರಗಳವರು ನಮ್ಮನ್ನು ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಅದರಲ್ಲೂ ಇಸ್ರೈಲ್‌ನವರು ಹತ್ತಿರಕ್ಕೂ ಸೇರಿಸುವುದಿಲ್ಲ. ಕೃಷ್ಣ ಪ್ಯಾಲಸ್ತೀನದಿಂದ ಭಾರತಕ್ಕೆ ಹೊರಟು ಹೋಗುತ್ತಾರೆ. ಆದರೆ ನನ್ನ ಗತಿ? ನಾನು ಇಸ್ರೈಲ್‌ಗೆ ವಾಪಸು ಹೋಗಿ ಅಲ್ಲಿ ವಾರಗಟ್ಟಲೆ ಇರಬೇಕು. ಈ ಟೆರರಿಸ್ಟ್ countryಯಾದ ಪ್ಯಾಲಸ್ತೀನಕ್ಕೆ ಹೋಗಿ ‘ನನ್ನ ಶೀಲವನ್ನೇಕೆ’ ಕಳೆದುಕೊಳ್ಳಲಿ ಎಂಬ ಆತಂಕ ನನ್ನದು. ಆದರೆ ಏನು ಒಳ ಒಪ್ಪಂದವೋ, ಏನು ಕೃಷ್ಣರಾಯಭಾರವೋ ಗೊತ್ತಿಲ್ಲ. ಪ್ಯಾಲಸ್ತೀನ್‌ನಲ್ಲಿ ನಮ್ಮ ಪಾಸ್‌ಪೋರ್ಟ್‌ಗೆ stamp ಮಾಡಲೇ ಇಲ್ಲ. ಜೀವನದಲ್ಲಿ ಮೊದಲ ಬಾರಿಗೆ ನನಗೆ ಇಂಥ ಅನುಭವವಾಗಿರಲಿಲ್ಲ.

ಈಗ ಏನಾಗುತ್ತದೋ ಗೊತ್ತಿಲ್ಲ. ಇಸ್ರೈಲ್‌ನ ವೀಸಾ ಅಂತೂ ಸಿಕ್ಕಿದೆ. ಅಲ್ಲಿನ ‘ಗಾಜಾ’ (Gaza strip)ದಲ್ಲಿ ಇಸ್ರೈಲ್ ಮತ್ತು ಉಗ್ರವಾದಿಗಳ ಸ್ವಂತ ತವರುಮನೆಯಾದ ಪ್ಯಾಲಸ್ತೀನ್‌ಗಳ ಮಧ್ಯೆ ಘನಘೋರ ಯುದ್ಧ ನಡೆಯುತ್ತಿದೆ. ಅಲ್ಲಿಗೆ ತಲುಪಿಕೊಂಡರೆ ರಾಶಿಗಟ್ಟಲೆ ಬರೆಯಲಿಕ್ಕೆ ವಿಷಯವಂತೂ ಸಿಗುತ್ತದೆ. ಅಲ್ಲದೆ ಬದುಕಿನಲ್ಲಿ ಅದೊಂದು ಮರೆಯಲಾಗದ ಅನುಭವ. ಆದರೆ, ನಿಜಕ್ಕೂ ಅಲ್ಲಿಗೆ ಹೋಗಲಾದೀತೇ? ಹೆಂಡತಿ ತಕರಾರು ತೆಗೆದಿದ್ದಾಳೆ. ಮೇಲಾಗಿ ನನ್ನದು ಕುಂಟುಗಾಲು. ‘ನಿಂಗೆ ವಯಸ್ಸಾಗಿದೆ’ ಅಂತ ಬೇರೆ ಬೇರೆ ಜನ ಹೆದರಿಸುತ್ತಾರೆ. ನೋಡಬೇಕು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books