Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನನಗೆ ಗೆಳೆಯರೇ ಇಲ್ಲ ಅನ್ನುವ ಮನುಷ್ಯರನ್ನು ನೋಡಿದ್ದೀರಾ?


ವಾಕಿಂಗ್‌ಗೆ ಒಬ್ಬ ಗೆಳೆಯ, ಎಂಟಿಆರ್‌ನಲ್ಲಿ ತಿಂಡಿ ತಿನ್ನುವುದಕ್ಕೊಬ್ಬ ಗೆಳೆಯ, ಸಂಜೆಯ ಚಾಟ್ ಮತ್ತು ಟಾಟ್ಸ್‌ಗೆ ಒಬ್ಬ ಗೆಳೆಯ, ಮುಸ್ಸಂಜೆ ಹೊತ್ತಲ್ಲಿ ಟೀವಿಯೇ ಗೆಳೆಯ, ರಾತ್ರಿ ಬಾರಿಗೊಬ್ಬ ಗೆಳೆಯ, ಬೀರಿಗೊಬ್ಬ ಗೆಳೆಯ, ದುಃಖಕ್ಕೊಬ್ಬ, ಸಂತೋಷಕ್ಕೊಬ್ಬ..
ಹೀಗೆ ಹಲವಾರು ಗೆಳೆಯರನ್ನು ಮನಸ್ಸಿನ ಒಂದೊಂದು ಬೋಗಿಗಳಲ್ಲಿ ಪ್ರತ್ಯೇಕವಾಗಿ ಕೂಡಿ ಹಾಕಿಕೊಂಡು ನಾವು ಬದುಕುತ್ತಿದ್ದೇವೆ. ಎಲ್ಲದಕ್ಕೂ ಆಗಿಬರುವ ಗೆಳೆಯ ಯಾರು ಎಂಬ ಪ್ರಶ್ನೆ ಬಂದಾಗ ಉತ್ತರಿಸುವುದಕ್ಕೆ ತಡಕಾಡುತ್ತೇವೆ. ಊರು ಬಿಟ್ಟು ಮಹಾನಗರಿ ಸೇರಿ ಅಲ್ಲಿಯೇ ಬದುಕು ಕಟ್ಟಿಕೊಂಡ ಹೆಚ್ಚಿನವರನ್ನು ಕಾಡುವ ಸಮಸ್ಯೆಯಿದು. ಹಳ್ಳಿಯಲ್ಲಿದ್ದಾಗ ಗುಡ್ಡ, ಕಾಡು, ತೋಟ, ಗಿಡಮರಗಳೇ ನಮ್ಮ ಗೆಳೆಯರಾಗಿದ್ದರು. ಮಾತಿಲ್ಲ, ಮುನಿಸಿಲ್ಲ, ಬದುಕು ಸರಳರೇಖೆಯಂತೆ ಸಾಗುತ್ತಿತ್ತು. ಇವತ್ತಿದ್ದಂತೆ ನಾಳೆ, ನಾಳೆ ಇದ್ದಂತೆ ನಾಡಿದ್ದು. ‘ಪೂರ್ವ ನಿಶ್ಚಿತ ಕಾಲ, ಗೀತ ಹೊಸ ಕವಲು’ ಎಂಬ ಕವಿತೆಯಂತೆ. ಮನೆಯಲ್ಲಿ ಅಣ್ಣನೋ, ತಮ್ಮನೋ, ಅಕ್ಕನೋ, ತಂಗಿಯೋ ಇದ್ದರೆ ಒಂದಾಟ ಚದುರಂಗ ಆಡಬಹುದು. ಅಟ್ಟಕ್ಕೆ ಹತ್ತಿ ಹಳೆಯ ಚಂದಮಾಮ ಓದಬಹುದು, ಸಂಜೆ ಹೊತ್ತಿಗೆ ಶಾಲೆಯ ಮೈದಾನದಲ್ಲಿ ಕೆಲವೇ ಕೆಲವು ಗೆಳೆಯರ ಜೊತೆ ವಾಲಿಬಾಲ್ ಆಡಬಹುದು, ಅವರ ಜೊತೆ ದೂರದ ಪಟ್ಟಣಕ್ಕೆ ಹೋಗಿ ಅಪರೂಪಕ್ಕೊಂದು ರಾಜಕುಮಾರನ ಸಿನೆಮಾ ನೋಡಬಹುದು. ಅಂಥಾ ಜಾಗದಲ್ಲಿ ಗೆಳೆತನ ಅರವತ್ತು-ಎಪ್ಪತ್ತು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಅವನ ಕತ್ತಲ್ಲಿರುವ ನೆರಿಗೆಗಳೆಷ್ಟು ಅನ್ನುವುದು ಕೂಡ ಇವನಿಗೆ ಗೊತ್ತಿರುತ್ತದೆ.

ಬೆಂಗಳೂರಲ್ಲಿ ಗೆಳೆಯರಿಗೆ ಅಂಥ ಬರವಿಲ್ಲ, ಗೆಳೆತನಕ್ಕೆ ಅಂಥಾ ಬಾಳಿಕೆಯೂ ಇಲ್ಲ. ಇಪ್ಪತ್ತು ರುಪಾಯಿಗೆ ಮೂರು ಕಟ್ಟು ಕೊತ್ತಂಬರಿ ಸೊಪ್ಪು ಸಿಗುವಂತೆ ಗೆಳೆಯರು ಗುಂಪುಗುಂಪಾಗಿ ಸಿಗುತ್ತಾರೆ. ಬೇಕಿದ್ದರೆ ಫೇಸ್ ಬುಕ್ಕಿಗೆ ಒಮ್ಮೆ ಹೋಗಿಬನ್ನಿ, ಅಲ್ಲಿ ಫ್ರೆಂಡ್ ರಿಕ್ವೆಸ್ಟ್ ಹಾಕಿ ಕಾಯುವವರು ದಿನಕ್ಕೆ ನೂರಾರು ಮಂದಿ ಸಿಗುತ್ತಾರೆ. ಬಾರಿನಲ್ಲಿ ಇಬ್ಬರೇ ಕುಳಿತು ಸಚಿನ್ ತೆಂಡುಲ್ಕರ್ ಬಗ್ಗೆ ಮಾತಾಡುವಾಗ ಮಧ್ಯೆ ಬಾಯಿ ಹಾಕುವ ಮೂರನೆಯವನು ಕ್ಷಣಾರ್ಧದಲ್ಲಿ ಗೆಳೆಯನಾಗುತ್ತಾನೆ. ಇವರು ತತ್ಕಾಲ್ ಸ್ಕೀಮಲ್ಲಿ ಗೆಳೆಯರಾಗುವ ಮಂದಿ. ಈ ಸಂಬಂಧ ಯಾವ ಕ್ಷಣದಲ್ಲಾದರೂ ಕಡಿದು ಹೋಗಬಹುದು ಅನ್ನುವುದು ನಮಗೂ ಗೊತ್ತಿದೆ. ಹಾಗಾಗಿ ನಾವು ಹುಷಾರಾಗಿದ್ದೇವೆ. ಹಾಗೆಲ್ಲಾ ಹಾದಿಬೀದಿಯಲ್ಲಿ ಹೋಗುವವರನ್ನು ಮನೆಗೆ ಕರೆಯುವುದಿಲ್ಲ. ಯಾಕೆಂದರೆ ಗೆಳೆತನದ ಹೆಸರಲ್ಲಿ ವಂಚಿಸಿದ ಘಟನೆಗಳು, ಬೆಸ್ಟ್ ಫ್ರೆಂಡ್ ಅಂತ ಅನಿಸಿಕೊಂಡವನು ಬೆನ್ನಿಗೆ ಚೂರಿ ಹಾಕಿದ ದ್ರೋಹದ ಸುದ್ದಿ, ಕುಡಿದ ಮತ್ತಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಕ್ರೌರ್ಯದ ಕತೆಗಳನ್ನು ಟೀವಿ ಮತ್ತು ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ.

ಆದರೂ ನಮಗೆ ಗೆಳೆಯರು ಬೇಕು. ಇನ್ನೊಬ್ಬ ಗೆಳೆಯನನ್ನು ಬೈಯ್ಯುವುದಕ್ಕಾದರೂ ಮತ್ತೊಬ್ಬ ಗೆಳೆಯ ಬೇಕು. ನನ್ನ ಹೆಂಡ್ತಿ ಜೀವ ತಿಂತಾಳೆ ಮಾರಾಯಾ ಎಂದು ಹೇಳಿಕೊಂಡು ಅಳುವುದಕ್ಕಾದರೂ ಒಂದು ಹೆಗಲು ಬೇಕು. ಇಲ್ಲಿ ಪ್ರತಿಯೊಂದು ಗೆಳೆತನದ ಹಿಂದೆ ಒಂದು ನಿರೀಕ್ಷೆ ಮತ್ತು ಅಪೇಕ್ಷೆಯಿರುತ್ತದೆ. ಅದು ಹುಸಿಯಾದಾಗ ಆ ಗೆಳೆಯ ಬಗಲ್ ಮೆ ದುಶ್ಮನ್ ಥರ ಕಾಣಿಸುತ್ತಾನೆ. ಹಾಗೆ ನೋಡಿದರೆ ಗೆಳೆತನದ ಬಗ್ಗೆ ಇರುವಷ್ಟು ನಾಣ್ನುಡಿಗಳು ಬೇರಾವ ಸಂಬಂಧದ ಬಗ್ಗೆಯೂ ಸಿಗುವುದಿಲ್ಲ. ಶಾಲೆಯಲ್ಲಿ ‘ಎ ಫ್ರೆಂಡ್ ಇನ್ ನೀಡ್ ಈಸ್ ಎ ಫ್ರೆಂಡ್ ಇಂಡೀಡ್’ ಎಂಬ ಪ್ರಬಂಧ ಬರೆಯುತ್ತಲೇ ಬೆಳೆದವರು ನಾವು. ಅಲ್ಲಿ ಸಿಕ್ಕ ಸಿಂಬಳಬುರುಕ ನಮ್ಮ ಬೆಸ್ಟ್ ಚಡ್ಡಿ ದೋಸ್ತ್. ಅದೆಷ್ಟೋ ವರ್ಷಗಳ ನಂತರ ಆತ ತಾನು ಬೆಂಗಳೂರಿಗೆ ಬರುತ್ತಿದ್ದೇನೆ ಮಾರಾಯಾ ಎಂದು ಫೋನ್ ಮಾಡಿದರೆ ಅವತ್ತು ನಾನು ಊರಲ್ಲಿರೋಲ್ಲ ಕಣೋ ಎಂದು ನೀವು ಸುಳ್ಳು ಹೇಳುತ್ತೀರಿ. ಯಾಕೆಂದರೆ ಈಗಿನ ಕಾಲಮಾನಕ್ಕೆ, ಬದಲಾದ ನಿಮ್ಮ ಅಭಿರುಚಿಗೆ ಮತ್ತು ಸ್ಥಾನಮಾನಕ್ಕೆ ಆ ಚಡ್ಡಿದೋಸ್ತ್ ಹೊಂದಿಕೊಳ್ಳುವುದಿಲ್ಲ ಅನ್ನುವ ನಿರ್ಧಾರಕ್ಕೆ ನೀವು ಬಂದಿದ್ದಾಗಿದೆ. ನಿಮ್ಮಿಂದೇನೋ ಸಹಾಯ ಕೇಳುವುದಕ್ಕೆ ಆತ ಬರುತ್ತಿರಬಹುದು ಎಂಬ ಅನುಮಾನವೂ ಕಾಡುತ್ತದೆ. ಆತನನ್ನು ಮನೆಗೆ ಕರೆದುಕೊಂಡು ಹೋದರೆ ಹೆಂಡತಿ ಎಲ್ಲಿ ಜಗಳವಾಡುತ್ತಾಳೋ ಎಂಬ ಭಯವೂ ಸೇರಿಕೊಂಡಿದೆ. ಅವೆಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಗೆಳೆಯರ ಅಡ್ಡ ಹಳ್ಳಿಕಟ್ಟೆಯಿಂದ ಸೆಂಚುರಿ ಕ್ಲಬ್ಬಿಗೆ ವರ್ಗಾವಾಗಿದೆ. ಈಗ ಫ್ರೆಂಡ್‌ಶಿಪ್ ಕೂಡ ಒಂದು ಸ್ಟೇಟಸ್ಸನ್ನು ಬೇಡುತ್ತದೆ!

ಕೆಲವೊಮ್ಮೆ ವಯಸ್ಸು ಕೂಡ ಕೆಲವು ಗೆಳೆಯರನ್ನು ತಾನಾಗಿ ಡಿಲೀಟ್ ಮಾಡುತ್ತದೆ. ಬೇಕಿದ್ದರೆ ಗಮನಿಸಿ ನೋಡಿ. ನಮಗೆ ವಯಸ್ಸಾಗುತ್ತಿದ್ದಂತೆಯೇ ಗೆಳೆಯರ ಸರ್ಕಲ್ ಕೂಡ ಚಿಕ್ಕದಾಗುತ್ತಾ ಹೋಗುತ್ತದೆ. ಹೊಸ ಗೆಳೆಯರನ್ನು ಸಂಪಾದಿಸುವ ಹುಮ್ಮಸ್ಸು ಇರುವುದಿಲ್ಲ. ಹಳೇ ಗೆಳೆಯರನ್ನು ಭೇಟಿಯಾಗುವ ಫ್ರೀಕ್ವೆನ್ಸಿ ಕಡಿಮೆಯಾಗುತ್ತಾ ಹೋಗುತ್ತಿದೆ. ಎಲ್ಲರಿಗೂ ಅವರವರದ್ದೇ ಏನೇನೋ ತಾಪತ್ರಯಗಳು. ಮಗ ಹಾದಿ ತಪ್ಪಿದ್ದಾನೆ, ಬೀಪಿ-ಡಯಾಬಿಟೀಸು ಕಾಡುತ್ತಿದೆ, ಮನೆ ಸಾಲ ತೀರಿಸಬೇಕು, ಆರೋಗ್ಯ ಪದೇಪದೇ ಕೈ ಕೊಡುತ್ತಿದೆ, ನೌಕರಿ ಇವತ್ತೋ ನಾಳೆಯೋ ಹೋಗುವ ಹಾಗಿದೆ, ಹೀಗೆ ನಾನಾ ಕಾರಣಗಳಿಗೆ ಇದ್ದಬದ್ದ ಗೆಳೆಯರೂ ಕೈಗೆ ಸಿಗುತ್ತಿಲ್ಲ. ಗೆಳೆತನಕ್ಕೋಸ್ಕರ ಪ್ರಾಣ ಕೊಡುತ್ತೇನೆ ಅಂದವರು ಈಗ ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಅನ್ನುವ ಸ್ಥಿತಿ ತಲುಪಿದ್ದಾರೆ. ಹಾಗಂತ ಅವರ ಮನಸ್ಸಲ್ಲಿ ನಿಮಗೆ ಜಾಗವಿಲ್ಲ ಎಂದೇನಲ್ಲ. ಅಪರೂಪಕ್ಕೊಂದು ಫೋನ್, ಎಸ್ಸೆಮ್ಮೆಸ್ಸು, ಸರ್ಪ್ರೈಜ್ ವಿಸಿಟ್, ಇಂಥಾದ್ದೆಲ್ಲ ನಡೆಯುತ್ತಿರುತ್ತದೆ. ಅದನ್ನೆಲ್ಲಾ ಅರ್ಥ ಮಾಡಿಕೊಳ್ಳುವ ಸಮತೋಲನ ಸ್ಥಿತಿ ನಿಮ್ಮ ಮನಸ್ಸಿಗಿರಬೇಕು. ನಿಮ್ಮ ಮಗನ ಉಪನಯನಕ್ಕೆ ಬರಲಿಲ್ಲ ಎಂಬ ಒಂದೇ ಕಾರಣಕ್ಕೆ ಒಬ್ಬನನ್ನು ಗೆಳೆಯರ ಲಿಸ್ಟ್‌ನಿಂದ ಕಿತ್ತು ಹಾಕಬೇಡಿ. ಹಿಂದೊಮ್ಮೆ ನೀವು ದಯನೀಯ ಸ್ಥಿತಿಯಲ್ಲಿದ್ದಾಗ ಆತ ಮಾಡಿದ ಸಹಾಯವನ್ನು ನೆನಪಿಸಿಕೊಳ್ಳಿ.

ಗೆಳೆತನಕ್ಕೆ ಎಕ್ಸ್‌ಪಾಯರಿ ಡೇಟ್ ಇರುವುದಿಲ್ಲ, ಇರಬಾರದು ಕೂಡ. ಯಾಕೆಂದರೆ ನಿಜವಾದ ಗೆಳೆತನ ಕುದುರುವುದಕ್ಕೆ ಸಾಕಷ್ಟು ಕಾಲಾವಕಾಶ ಹಿಡಿದಿರುತ್ತದೆ. ಅದು ಗೆಳೆತನಕ್ಕೆ ನೀವು ಹೂಡಿದ ಬಂಡವಾಳ ಅಂದುಕೊಳ್ಳಿ. ಆ ದಿನಗಳಲ್ಲಿ ಆತನ ಪ್ಲಸ್ ಮತ್ತೆ ಮೈನಸ್ಸು ಎರಡನ್ನೂ ನೀವು ಅರ್ಥ ಮಾಡಿಕೊಂಡಿರುತ್ತೀರಿ. ಆತ ಯಾವಾಗ ಕೈ ಕೊಡುತ್ತಾನೆ, ಯಾವಾಗ ಕೈ ಹಿಡಿಯುತ್ತಾನೆ ಅನ್ನುವುದೂ ನಿಮಗೆ ನಿಖರವಾಗಿ ಗೊತ್ತಿರುತ್ತದೆ. ಹಾಗಿದ್ದಮೇಲೆ ಈಗ ಅವನನ್ನು ದೂರುವುದರಲ್ಲಿ ಅರ್ಥವಿಲ್ಲ. ಅವನು ಕುಡುಕನಿರಬಹುದು, ಜೂಜುಕೋರನಿರಬಹುದು, ತನ್ನ ಮನೆಯವರ ಪಾಲಿಗೆ ವೇಸ್ಟ್ ಬಾಡಿಯೇ ಆಗಿರಬಹುದು, ಆದರೆ ಆತ ನಿಮ್ಮ ಗೆಳೆಯ. ಅವನ ಬಗ್ಗೆ ಇನ್ಯಾರ ಮುಂದೆಯೋ ನೀವು ಕೆಟ್ಟದಾಗಿ ಮಾತಾಡಿದರೆ ಅದು ಗೆಳೆತನಕ್ಕೆ ಮಾಡುವ ಅಪಚಾರವಾಗುತ್ತದೆ.

ಇವತ್ತು ಗೆಳೆಯನಾಗಿದ್ದವನು ನಾಳೆ ಶತ್ರುವಾಗುವುದಕ್ಕೆ ಸಾಧ್ಯವಾಗುವುದು ಭೂಗತ ಜಗತ್ತಲ್ಲಿ ಮಾತ್ರ. ಕೆಲವೊಮ್ಮೆ ಮಕ್ಕಳು ಆ ಕೆಲಸ ಮಾಡುತ್ತಾರೆ. ಅದು ಅವರ ವಯಸ್ಸಿಗೆ ಅನುಗುಣವಾದ ಅಪ್ರಬುದ್ಧತೆಯಿಂದ ಆಗುವ ಸಂಗತಿ. ಅವರಿಗೆ ಸ್ವಲ್ಪ ಟೈಮ್ ಕೊಡಿ. ಅಲ್ಲಿ ತನಕ ನೀವೇ ಮಗನ ಅಥವಾ ಮಗಳ ಗೆಳೆಯನಾಗಿರಿ. ತನ್ನಿಷ್ಟಕ್ಕೆ, ತನ್ನ ಸ್ವಭಾವಕ್ಕೆ ಹೊಂದಿಕೊಳ್ಳುವ ಸಂಗಾತಿ ದೊರಕಿದ ಮೇಲೆ ಅವರು ನಿಮ್ಮಿಂದ ದೂರವಾಗುತ್ತಿದ್ದಾರೆ ಎಂಬ ಭಾವ ಆವರಿಸಬಹುದು. ಅಷ್ಟಕ್ಕೆ ನನ್ನ ಮಗ ನನ್ನನ್ನು ಕಡೆಗಣಿಸುತ್ತಿದ್ದಾನೆ ಎಂದು ಅಂದುಕೊಳ್ಳಬೇಡಿ. ಬದಲಾದ ಸನ್ನಿವೇಶದಲ್ಲಿ ನಿಮ್ಮ ಪಾತ್ರವೂ ಬದಲಾಗಿದೆ ಅಂದುಕೊಳ್ಳಿ. ಗೆಳೆತನ ಅನ್ನುವುದು ಹಲವು ಸಂಬಂಧಗಳ ಹದವಾದ ಪಾಕ. ಒಬ್ಬ ಒಳ್ಳೇ ಗೆಳೆಯನೊಳಗೆ ಮಾರ್ಗದರ್ಶಕನಿರಬಹುದು, ಗುರುವೂ ಇರಬಹುದು, ಪ್ರೇಮಿಯೂ ಇರಬಹುದು. ಅದು ಅವರವರ ಭಾವಕ್ಕೆ ಬಿಟ್ಟಿದ್ದು. ಗೆಳೆಯರೇ ಇಲ್ಲದ ಮನುಷ್ಯರಂತೂ ಇರುವುದಕ್ಕೆ ಸಾಧ್ಯವಿಲ್ಲ. ಹಾಗಂತ ಯಾರಾದರೂ ಹೇಳಿದರೆ ತಕ್ಷಣ ಅವರನ್ನು ಒಬ್ಬ ಮನೋಶಾಸ್ತ್ರಜ್ಞರ ಬಳಿಗೆ ಕರೆದುಕೊಂಡು ಹೋಗಿ.
ಹ್ಯಾಪಿ ಫ್ರೆಂಡ್‌ಶಿಪ್ ಡೇ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books