Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಕಾಯಕಕ್ಕೇ ರಜೆ ಕೊಟ್ಟು ಬಸವಣ್ಣನನ್ನು ಗೌರವಿಸುತ್ತೇವೆ ಅಂದರೆ ಹೇಗೆ?


ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದೇ ತಡ, ಹಲ ಮಂದಿ ನಾಯಕರು ತಾವು ಯಾವ ರೀತಿ ಕಷ್ಟದಲ್ಲಿದ್ದೆವು ಅಂತ ಹೇಳಿಕೊಳ್ಳುತ್ತಿದ್ದಾರೆ. ಬಿಹಾರದ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕೂಡ ಅತ್ಯುತ್ತಮ ಟೀ ಮಾರಾಟಗಾರರಂತೆ. ಅದೇ ರೀತಿ ತಮಿಳ್ನಾಡಿನ ಮುಖ್ಯಮಂತ್ರಿಯಾಗಿರುವ ಪನ್ನೀರ್ ಸೆಲ್ವಂ ಕೂಡ ಅಲ್ಲಿನ ಪೆರಿಯಕ್ಕುಲಂ ಎಂಬಲ್ಲಿ ಟೀ ಮಾರುವ ಸಣ್ಣ ಅಂಗಡಿ ಇಟ್ಟುಕೊಂಡಿದ್ದರು. ಆ ಅಂಗಡಿ ನೋಡಿದ ಜ್ಯೋತಿಷಿಯೊಬ್ಬ ಸೆಲ್ವಂ, ಈ ಟೀ ಅಂಗಡಿಯನ್ನು ಯಾವ ಕಾರಣಕ್ಕೂ ಬಿಡಬೇಡ. ಈ ಅಂಗಡಿಯ ವಾಸ್ತು ಬೊಂಬಾಟಾಗಿದೆ ಎಂದನಂತೆ. ಹೀಗಾಗಿ ಮುಖ್ಯಮಂತ್ರಿಯಾದರೂ ಪನ್ನೀರ್ ಸೆಲ್ವಂ ಈ ಟೀ ಅಂಗಡಿಯನ್ನು ಮಾರಿಲ್ಲ. ಆದರೆ ನನಗನ್ನಿಸುವುದು ಟೀ ಮಾರಿದ ಕೂಡಲೇ ನರೇಂದ್ರ ಮೋದಿ ಪ್ರಧಾನಿಯಾದರು ಅಂತಲೋ, ಟೀ ಮಾರಿದ್ದಕ್ಕಾಗಿ ಲಾಲೂ ಪ್ರಸಾದ್ ಯಾದವ್ ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಬೆಳೆದರು ಅಂತಲೋ, ಪನ್ನೀರ್ ಸೆಲ್ವಂ ಅವರು ಟೀ ಮಾರಿದ್ದಕ್ಕೇ ಸಿಎಂ ಆದರು ಎಂಬುದನ್ನು ನಾನು ಒಪ್ಪುವುದಿಲ್ಲ.

ನೀವು ಜೀವನದಲ್ಲಿ ಯಶಸ್ವಿಯಾದ ವ್ಯಕ್ತಿಗಳನ್ನು ನೋಡಿ. ಈ ಪೈಕಿ ನೈಂಟಿ ನೈನ್ ಪರ್ಸೆಂಟು ಜನ ಕಷ್ಟಪಟ್ಟು ದುಡಿದೇ ಮೇಲೆ ಬಂದಿರುತ್ತಾರೆ. ಅವರ ಕಷ್ಟದ ಸನ್ನಿವೇಶ ಅವರನ್ನು ಮುಂದೆ ತಳ್ಳುತ್ತಾ ಬಂದಿರುತ್ತದೆ. ಹತ್ತು ವರ್ಷ ಕಾಲ ದೇಶ ಆಳಿದ ಮನಮೋಹನ್ ಸಿಂಗ್ ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕಾರಣದಿಂದಾಗಿ ಕಷ್ಟ ಅನುಭವಿಸಿದವರು. ನಿಜಕ್ಕೂ ಅದು ನರಕ ಯಾತನೆ. ಅವರೀಗಲೂ ಆ ದಿನಗಳನ್ನು ನೆನೆಸಿಕೊಳ್ಳುತ್ತಾರೆ. ಕಮ್ಯೂನಿಸ್ಟ್ ಪಕ್ಷದ ಅಚ್ಯುತಾನಂದನ್ ನಾರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ, ಆನಂತರ ರಾಷ್ಟ್ರ ರಾಜಕೀಯಕ್ಕೇರಿದ ಸುಶೀಲ್ ಕುಮಾರ್ ಶಿಂಧೆ ಬದುಕಿನ ಅನಿವಾರ್ಯತೆಗಾಗಿ ನ್ಯಾಯಾಲಯದಲ್ಲಿ ಕೆಳಹಂತದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ಕಟ್ಟಿದ ಕಾನ್ಷಿರಾಂ ಅವರಿಗೆ ನಾನೇನು ಮಾಡುತ್ತಿದ್ದೇನೆ? ಏನಾಗುತ್ತೇನೆ? ಎಂಬ ವಿಷಯದಲ್ಲೇ ಸ್ಪಷ್ಟತೆಯಿರಲಿಲ್ಲ. ಇನ್ನು ಆ ಪಕ್ಷದ ಅಧಿನಾಯಕಿಯಾಗಿ ಬೆಳೆದ ಮಾಯಾವತಿ ಶಾಲೆಯೊಂದರಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು.

ಐದು ಸಲ ಸಿಕ್ಕಿಂ ಮುಖ್ಯಮಂತ್ರಿಯಾದ ಪವನ್ ಕುಮಾರ್ ಚಾಮ್ಲಿಂಗ್ ಸರ್ಕಾರಿ ಗುತ್ತಿಗೆದಾರರಾಗಿದ್ದರು. ಅವರೇಕೆ ನಮ್ಮ
ರಾಜ್ಯವನ್ನೇ ತೆಗೆದುಕೊಳ್ಳಿ. ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಜೀವನೋಪಾಯಕ್ಕಾಗಿ ವಕೀಲಿಕೆ ಮಾಡುತ್ತಿದ್ದರೂ ಕೆ.ಆರ್.ಸರ್ಕಲ್ ಬಳಿಯ ಕೃಷ್ಣರಾಜೇಂದ್ರ ಟೆಕ್ನಲಾಜಿಕಲ್ ಕಾಲೇಜು ಕಟ್ಟುವುದನ್ನು ನೋಡುತ್ತಲೇ ಪ್ರೇರಣೆ ಪಡೆದು ವಿಧಾನಸೌಧದಂತಹ ಭವ್ಯ ಕಟ್ಟಡ ಕಟ್ಟಿಸಿದರು. ಗುಂಡೂರಾಯರು ಬಸ್ ಟಿಕೆಟ್ ಹರಿಯುವ ಕಂಡಕ್ಟರ್ ಆಗಿದ್ದರು. ಹೀಗೆ ನೋಡುತ್ತಾ ಹೋಗಿ, ದೊಡ್ಡ ದೊಡ್ಡವರು ಅನ್ನಿಸಿಕೊಂಡವರ ಹಿಂದೆ ಒಂದು ಕಷ್ಟದ ಚರಿತ್ರೆ ಇರುತ್ತದೆ. ಅನಿಲ್ ಅಂಬಾನಿ, ಮುಖೇಶ್ ಅಂಬಾನಿ ಥರದವರು ಆ ರೀತಿ ಕಷ್ಟಪಡದೇ ದೇಶದ ಶ್ರೀಮಂತ ಉದ್ಯಮಿಗಳಾದರು ಎಂದು ನೀವು ಹೇಳಬಹುದು. ಆದರೆ ಅವರ ತಂದೆ ಧೀರೂಭಾಯಿ ಅಂಬಾನಿ ಕಷ್ಟಪಟ್ಟ ರೀತಿಯಿದೆಯಲ್ಲ? ಅದಂತೂ ದೊಡ್ಡ ಸಾಹಸವೇ.

ಈ ರೀತಿ ದೊಡ್ಡ ಸಾಹಸ ಮಾಡುವ ವ್ಯಕ್ತಿಯ ಮುಂದಿನ ತಲೆಮಾರಿನಲ್ಲೂ ಶ್ರೀಮಂತರು ಕಾಣಬಹುದು. ಆದರೆ ಅವರೆಲ್ಲ ರೋಲ್ ಮಾಡೆಲ್ಲುಗಳು ಅಂತ ಹೇಳಲು ಸಾಧ್ಯವಿಲ್ಲ. ಈಗ ವಿಜಯ್ ಮಲ್ಯ ಅವರನ್ನೇ ತೆಗೆದುಕೊಳ್ಳಿ. ವಿಠ್ಠಲ್ ಮಲ್ಯ ಕಟ್ಟಿದ ಭವ್ಯ ಸಾಮ್ರಾಜ್ಯದ ಒಡೆಯರಾಗಿ ಮೊನ್ನೆ ಮೊನ್ನೆಯ ತನಕ ಮೆರೆದರು. ಈಗ ದಿಬಿಲ್ಲಂತ ಕೆಳಗೆ ಬಿದ್ದಿದ್ದಾರೆ. ಇಂತಹವರನ್ನೆಲ್ಲ ರೋಲ್ ಮಾಡೆಲ್ಲುಗಳು ಅಂತ ಹೇಳಲು ಸಾಧ್ಯವಿಲ್ಲ. ಅವರ ಕಲಿಯುವಿಕೆಗೆ ಒಂದು ಬುನಾದಿ ಇರುತ್ತದೆ. ಕನಿಷ್ಠಪಕ್ಷ ಆ ಬುನಾದಿಯ ಮೇಲೆ ನನ್ನದೂ ಒಂದು ಸೌಧ ಕಟ್ಟಿಕೊಳ್ಳಬೇಕು ಎಂದು ಅವರು ಬಯಸಿದರೆ ಫೈನ್, ಕಟ್ಟಿಕೊಂಡರೆ, ಬೆಳೆದರೆ ಇನ್ನೂ ಫೈನ್. ಆದರೆ ಜೀವನೋಪಾಯಕ್ಕಾಗಿ ಟೀ ಮಾರಿ, ಪ್ಯೂನ್ ಆಗಿ ಕೆಲಸ ಮಾಡಿ, ಕಂಡಕ್ಟರ್ ಆಗಿ ದುಡಿದು ದೊಡ್ಡವರಾಗಿರುತ್ತಾರಲ್ಲ? ಅವರು ನಮ್ಮ ರೋಲ್ ಮಾಡೆಲ್ಲುಗಳು. ಯಾಕೆಂದರೆ ಅವರೆಲ್ಲ ಕಷ್ಟಪಟ್ಟು ಕೆಲಸ ಮಾಡಿರುತ್ತಾರೆ.ಕಷ್ಟ ಪಟ್ಟು ದುಡಿದವರೆಲ್ಲ ದೊಡ್ಡ ದೊಡ್ಡ ಜಾಗದಲ್ಲಿ ಬಂದು ಕೂತು ಬಿಡುವುದಿಲ್ಲ. ನಸೀಬೂ ಒಂದು ಮಟ್ಟದಲ್ಲಿ ಕೆಲಸ ಮಾಡಬೇಕು. ಆದರೆ ಅವಡುಗಚ್ಚಿ ನಾನು ದುಡಿಯಬೇಕು, ದುಡಿಯಲೇಬೇಕು ಎಂದು ಹಟ ಹಿಡಿದು ಕೂರುತ್ತಾರಲ್ಲ? ಅವರು ನಿಜವಾದ ಮಾಡೆಲ್ಲುಗಳು.

ವಿಪರ್ಯಾಸವೆಂದರೆ ರಾಜಕೀಯದಲ್ಲಿ, ಶ್ರೀಮಂತಿಕೆಯ ವಿಷಯದಲ್ಲಿ ಇಂತಹವರು ಮೇಲೆ ಬಂದರೆ ನಾವು ಬೇಗನೇ ಗುರುತಿಸಿಬಿಡುತ್ತೇವೆ. ಆದರೆ ಈ ಬದುಕನ್ನು ಇಷ್ಟೊಂದು ಅನುಕೂಲಕರವಾಗಿ ಪರಿವರ್ತಿಸಿದ ವಿಜ್ಞಾನಿಗಳು, ವೈದ್ಯರು, ರೈತರು ಇಂತಹವರನ್ನೆಲ್ಲ ನಾವು ರೋಲ್ ಮಾಡೆಲ್ಲುಗಳಂತೆ ನೋಡುವುದೇ ಇಲ್ಲ. ಬೇಕಿದ್ದರೆ ನೋಡಿ, ಶಾರೂಕ್ ಖಾನ್ ಥರದವರು ತುಂಬ ಜನರಿಗೆ ರೋಲ್ ಮಾಡೆಲ್ಲುಗಳಾಗಿ ಬಿಡುತ್ತಾರೆ. ಆದರೆ ನಾನು ಹೇಳುವುದು, ವ್ಯವಸ್ಥೆಯನ್ನು ಸುಲಲಿತಗೊಳಿಸುವವರು, ಎಲ್ಲರಿಗೂ ಅನುಕೂಲವಾಗುವಂತೆ ನೋಡಿಕೊಳ್ಳುವವರು ನಮಗೆ ರೋಲ್ ಮಾಡೆಲ್ಲುಗಳಾಗಬೇಕು ಎನ್ನುವುದು. ಬೆಳೆಯುವ ರೈತ ತಾನು ಬೆಳೆದಿದ್ದನ್ನು ಯಾರು ಉಣ್ಣುತ್ತಾರೆ ಎಂದು ನೋಡುವುದಿಲ್ಲ. ಆದರೆ ಆತ ಕಷ್ಟಪಟ್ಟು ಕೆಲಸ ಮಾಡಿ ಅಯ್ಯೋ ಅಂತ ಕೊರಗಬೇಕು ಹಾಗಾಗುತ್ತದೆ. ನಾನು ಹೇಳಲು ಹೊರಟಿದ್ದೆಂದರೆ ಒಂದು ವ್ಯವಸ್ಥೆಗಾಗಿ ದುಡಿಯುವ ಜನರಿದ್ದಾರಲ್ಲ? ಇವರು ನಮ್ಮ ರೋಲ್ ಮಾಡೆಲ್ಲುಗಳಾಗಬೇಕು.

ಮೋದಿ ಟೀ ಮಾರುತ್ತಿದ್ದರು ಎಂಬುದನ್ನು ಕೇಳಿ ನಾವು ಯಾಕೆ ಖುಷಿಯಾಗುತ್ತೇವೆ ಹೇಳಿ. ಒಬ್ಬ ಟೀ ಮಾರಾಟಗಾರ ಆ ಹಂತದಿಂದ ದಿಲ್ಲಿಯ ರೇಸ್‌ಕೋರ್ಸ್ ರಸ್ತೆಗೆ ಬಂದು ತಲುಪಿದರಲ್ಲ? ದೇಶದ ಜನರಲ್ಲಿ ಬದುಕುವ ಕನಸುಗಳನ್ನು ತುಂಬಿ ಬಂದರಲ್ಲ? ಅದಕ್ಕಾಗಿ ಖುಷಿ ಪಡುತ್ತೇವೆ. ಐದು ಸಲ ಸಿಕ್ಕಿಂ ಮುಖ್ಯಮಂತ್ರಿಯಾಗಿರುವ ಪವನ್ ಕುಮಾರ್ ಚಾಮ್ಲಿಂಗ್ ಬಳಿ, ರಸ್ತೆ ಮಾಡುವವರು, ಕಟ್ಟಡ ಕಟ್ಟುವವರು ಮೋಸದ ಮಾತುಗಳನ್ನಾಡಿ ಬಚಾವಾಗುವುದು ಕಷ್ಟ ಅಂದರು. ಯಾಕೆ ಹೇಳಿ. ಆ ಕೆಲಸವನ್ನು ಅವರೂ ಮಾಡಿದ್ದಾರಲ್ಲ? ಮೋಸ ಎಲ್ಲೆಲ್ಲಿ ನಡೆಯುತ್ತದೆ ಅಂತ ಅವರಿಗೇ ಗೊತ್ತಿದೆ. ದೇವೆಗೌಡರನ್ನೇ ತೆಗೆದುಕೊಳ್ಳಿ. ತೊಂಬತ್ನಾಲ್ಕರಲ್ಲಿ ಮೊಟ್ಟ ಮೊದಲು ಮುಖ್ಯಮಂತ್ರಿಯಾದರಲ್ಲ? ಆಗ ವಿಧಾನಸೌಧದಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಒಂದು ಮೀಟಿಂಗು ಕರೆದರು. ಆ ಮೀಟಿಂಗಿನಲ್ಲಿ ಯಾರ‍್ಯಾರು ಯಾವ್ಯಾವ ರಸ್ತೆಗಳಿಗೆ, ಕಟ್ಟಡಗಳಿಗೆ ಎಷ್ಟು ಮರಳಿಗೆ ಎಷ್ಟು ಪ್ರಮಾಣದ ಸಿಮೆಂಟು ಬೆರೆಸುತ್ತಿಲ್ಲ, ಯಾಕಾಗಿ ನಮ್ಮ ರಸ್ತೆಗಳು ಹಾಳಾಗುತ್ತಿವೆ, ಕಟ್ಟಡಗಳು ಯಾಕೆ ಪದೇಪದೆ ದುರಸ್ಥಿಯಾಗುತ್ತಿವೆ ಎಂದು ಕರಾರುವಾಕ್ಕಾಗಿ ಹೇಳಿದರು. ಯಾಕೆಂದರೆ ಅವರೂ ಸಿವಿಲ್ ಕಂಟ್ರಾಕ್ಟರು.

ಹೀಗೆ ದುಡಿದು ದೊಡ್ಡವರಾದವರೆಲ್ಲ ತಮ್ಮ ಅನುಭವದ ಮೂಲಕ ಹತ್ತಾರು ಕ್ಷೇತ್ರಗಳಿಗೆ ಪಸರಿಸಿಕೊಳ್ಳುವ ಶಕ್ತಿ ಪಡೆದುಬಿಡುತ್ತಾರೆ. ನಾನು ತುಂಬ ಸಲ ನನ್ನ ಹತ್ತಿರ ಬರುವವರಿಗೆ ಹೇಳುತ್ತಿರುತ್ತೇನೆ. ನಿಮ್ಮ ಮಗ ಇಂಜಿನೀರ್ ಓದಿದನೋ, ಎಸೆಸೆಲ್ಸಿ ಫೇಲಾದನೋ, ಚರಂಡಿ ಕ್ಲೀನು ಮಾಡುತ್ತಿದ್ದನೋ ಅದು ಬೇಡ. ಆತನಲ್ಲಿ ಕಲಿಯುವ, ದುಡಿಯುವ ಉತ್ಸಾಹ ಇದೆಯೇ? ಅನುಮಾನವೇ ಬೇಡ, ಆತ ಉದ್ಧಾರವಾಗುತ್ತಾನೆ. ಇಲ್ಲ, ನಾನು ಓದಿದ್ದು ಇಂಜಿನೀರಿಂಗು, ನನಗೆ ಇಂತಹುದೇ ಕೆಲಸ ಸಿಕ್ಕರೆ ಚೆಂದ ಅಂತ ಹಟಮಾರಿತನ ರೂಢಿಸಿಕೊಂಡನೋ ಆಗ ಕತೆಯೇ ಬೇರೆಯಾಗುತ್ತದೆ. ಆಳವಾಗಿ ನೀವೇ ಯೋಚಿಸಿ. ನೀವು ಓದಿದ್ದಕ್ಕೂ ಈಗ ಮಾಡುತ್ತಿರುವ ಕೆಲಸಕ್ಕೂ ಅರ್ಥಾತ್ ಸಂಬಂಧವಿದೆಯೇ? ಹೌದು, ಇದೆ ಎಂದು ಹೇಳುವವರ ಸಂಖ್ಯೆ ಬಹಳ ಕಡಿಮೆ. ನನ್ನ ಪ್ರಕಾರ ಶಿಕ್ಷಣ ಪಡೆಯುವಾಗ ನೀವು ಏನೇ ಓದಿ. ಅದು ನಿಮಗೆ ಕನ್‌ಕ್ಲೂಡ್ ಮಾಡುವ ಶಕ್ತಿ ತಂದುಕೊಡುತ್ತದೆ. ನಮ್ಮ ಜೆ.ಎಚ್.ಪಟೇಲರಲ್ಲಿ ಅಂತಹ ಶಕ್ತಿ ವಿಶೇಷವಾಗಿತ್ತು. ನೀರಾವರಿಗೆ ಸಂಬಂಧಿಸಿದಂತೆ ದೊಡ್ಡ ದೊಡ್ಡ ಮೀಟಿಂಗುಗಳಾಗುವವರೆಗೆ ಸುಮ್ಮನೆ ಕೇಳುತ್ತಿದ್ದರು, ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಘನಘೋರ ಪಂಡಿತರು ಆಡುವ ಮಾತುಗಳನ್ನು ಸುಮ್ಮನೆ ಕೇಳುತ್ತಿದ್ದರು. ಫೈನಲಿ, ಏನು ಮಾಡಿದರೆ ಚೆಂದ, ಏನು ಮಾಡಿದರೆ ಸಕ್ಸಸ್ ಆಗಬಹುದು ಎಂದು ಹೇಳಿ ಮುಗಿಸಿಬಿಡುತ್ತಿದ್ದರು. ಎದುರಿಗಿದ್ದವರಿಗೆ ಅಚ್ಚರಿ. ಅರೇಸ್ಕೀ, ಇದೇನ್ರೀ ಈ ಮನುಷ್ಯನ ಕೆಪ್ಯಾಸಿಟಿ. ದೊಡ್ಡ ದೊಡ್ಡ ತಜ್ಞರು ಆಯಾ ಕ್ಷೇತ್ರದ ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲು ಒದ್ದಾಡುವಾಗ ಇವರು ರಪ್ಪಂತ ಕನ್‌ಕ್ಲೂಡ್ ಮಾಡಿಬಿಡುತ್ತಾರೆ ಅಂತ.

ಆದರೆ ನೆನಪಿಡಿ, ಪಟೇಲರಿಗೆ ಅಗಾಧ ಜ್ಞಾನವಿತ್ತು, ಸಿಕ್ಕಾಪಟ್ಟೆ ಸುತ್ತುತ್ತಿದ್ದರು. ಸಿಕ್ಕಾಪಟ್ಟೆ ಓದುತ್ತಿದ್ದರು. ತುಂಬ ಬುದ್ಧಿವಂತರು ಅನ್ನಿಸಿಕೊಂಡವರ ಜೊತೆ ಚರ್ಚೆ ಮಾಡುತ್ತಿದ್ದರು. ಇದೂ ಒಂದು ಥರ ಅಪರೂಪದ ಸ್ಕಿಲ್ಲು. ಎಲ್ಲರಿಗೂ ಇಂತಹ ಸ್ಕಿಲ್ಲು ದಕ್ಕುವುದಿಲ್ಲ. ಹೀಗಾಗಿ ಅವರಿಗೆ ಸಹಜವಾಗಿಯೇ ಒಂದು ಉಡಾಫೆಯ ಗುಣ ಸಿದ್ಧಿಯಾಗಿತ್ತು. ಅರ್ಥಾತ್ ಏನೇ ಬಂದರೂ ಫೇಸ್ ಮಾಡಬಹುದು ಕಣ್ರೀ ಎಂಬಂತಹ ಭಂಡ ಧೈರ್ಯ. ಹೆಣ್ಣು-ಹೆಂಡದ ಬಗ್ಗೆ ಹೇಳಿಕೆ ಕೊಟ್ಟರಲ್ಲ? ಆಗ ಬಹುದೊಡ್ಡ ರಂಪವೇ ನಡೆದುಹೋಯಿತು. ಆದರೆ ತುಂಬಿದ ವಿಧಾನಸಭೆಯಲ್ಲಿ ಪಟೇಲರು ಕೂಲಾಗಿ ಒಂದು ಕತೆ ಹೇಳಿದರು. ಗುರು -ಶಿಷ್ಯರಿಬ್ಬರೂ ನದಿ ದಾಟಬೇಕಿತ್ತು. ನದಿ ದಾಟುವಾಗ ಒಬ್ಬ ಹೆಣ್ಣು ಮಗಳು ಬಂದು ನನ್ನನ್ನೂ ಆ ಕಡೆ ದಡ ಸೇರಿಸಿಬಿಡಿ ಎಂದಳು. ಆಗ ಶಿಷ್ಯ ಆಕೆಯನ್ನು ಹೊತ್ತುಕೊಂಡು ಹೊರಟ. ಸರಿ, ನದಿ ದಾಟಿದ್ದಾಯಿತು. ಆಕೆ ಹೋಗಿದ್ದೂ ಆಯಿತು. ತುಂಬ ಹೊತ್ತಿನ ನಂತರ ಗುರು ಕೇಳಿದ. ನೋಡು ನೀನು ಆ ಚೆಂದದ ಹೆಣ್ಣು ಮಗಳನ್ನು ಹೊತ್ತುಕೊಂಡು ಬಂದೆ. ಆಗ ನಿನಗೇನನ್ನಿಸಿತು? ಅದಕ್ಕೆ ಶಿಷ್ಯ ಅಚ್ಚರಿ ವ್ಯಕ್ತಪಡಿಸುತ್ತಾ ಹೇಳಿದ: ಅರೇ ಆಕೆಯನ್ನು ಹೊತ್ತುಕೊಂಡು ಬಂದಿದ್ದೂ ಆಯಿತು, ದಡ ಸೇರಿಸಿದ್ದೂ ಆಯಿತು, ಕಳಿಸಿದ್ದೂ ಆಯಿತು. ಆಕೆಯನ್ನು ನಾನು ಮರೆತೇ ಬಿಟ್ಟಿದ್ದೆ. ಆದರೆ ಆಕೆ ಇನ್ನೂ ನಿಮ್ಮ ನೆನಪಿನಲ್ಲಿದ್ದಾಳೆಯೇ ಅಂತ. ಪಟೇಲರು ಹೇಳಿದ ಈ ಕತೆ ಕೇಳಿದವರು ಸುಸ್ತು. ಹೀಗೆ ಹೇಳುತ್ತಾ ಹೋದರೆ ಪಟೇಲರ ಕುರಿತಂತೆ ಹಲ ಸಂಗತಿಗಳು ನೆನಪಿಗೆ ಬರುತ್ತವೆ. ಅದಿರಲಿ ಬಿಡಿ. ನಾನು ಹೇಳುವುದೆಂದರೆ ನಿಮ್ಮ ಕೆಪ್ಯಾಸಿಟಿಯನ್ನು ಬೆಳೆಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ.

ಚೀನಾ ಇವತ್ತು ಜಗತ್ತಿನ ಮಾರುಕಟ್ಟೆಗೆ ದೊಡ್ಡ ಮಟ್ಟದಲ್ಲಿ ಲಗ್ಗೆ ಇಟ್ಟಿದೆ. ಅದು ಉತ್ಪಾದಿಸುವ ವಸ್ತುಗಳು ಜಗತ್ತಿನ ಮೂಲೆ ಮೂಲೆಗಳಲ್ಲೂ ಲಭ್ಯ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾಗೆ ಯಾರೋ ಕೇಳಿದರು: ಸಾರ್, ಚೀನಾದ ವಸ್ತುಗಳು ಜಗತ್ತಿನ ಮೂಲೆ ಮೂಲೆಯನ್ನು ಮುಟ್ಟುತ್ತಿವೆ. ಆದರೆ ನೀವೇಕೆ ಆ ಥರ ಎಲ್ಲೆಡೆ ಅಮೆರಿಕದ ವಸ್ತುಗಳು ಕಾಣುವಂತೆ ಮಾಡಲಾಗುತ್ತಿಲ್ಲ? ಅದಕ್ಕೆ ಬರಾಕ್ ಒಬಾಮಾ ಹೇಳಿದ. ಅರೇ, ನಾವು ಅತ್ಯುತ್ತಮ ವಸ್ತುಗಳನ್ನು ತಯಾರಿಸುವಾಗ ದುಬಾರಿಯಾಗುತ್ತದೆ. ಆದರೆ ಚೀನಾದವರು ಕಡಿಮೆ ಖರ್ಚಿನಲ್ಲಿ ಕಳಪೆ ವಸ್ತುಗಳನ್ನು ಉತ್ಪಾದಿಸುತ್ತಾರೆ. ಹೀಗಾಗಿ ಜನರಿಗೆ ಒಂದು ದಿನ ಅರ್ಥವಾಗುತ್ತದೆ ಎಂಬುದು ನನ್ನ ನಂಬಿಕೆ. ಆಗವರು ಅಮೆರಿಕ ಉತ್ಪಾದಿಸುವ ವಸ್ತುಗಳನ್ನೇ ಕೊಳ್ಳುತ್ತಾರೆ ಎಂದ. ಅರೇ, ನಿಜವಲ್ಲವೇ ಅಂತ ನಿಮಗನ್ನಿಸಬಹುದು. ಆದರೆ ಸ್ವಲ್ಪ ತಾಳಿ. ಚೀನಾದವರು ಏನು ಮಾಡಿದ್ದಾರೆ ಎಂದರೆ ಕೊಳ್ಳುವ ವರ್ಗವನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ. ಕೊಳ್ಳುವ ವಿಷಯದಲ್ಲಿ ಜಾಸ್ತಿ ಶಕ್ತಿ ಇರುವವರು, ಸ್ವಲ್ಪ ಶಕ್ತಿ ಇರುವವರು, ಅತ್ಯಂತ ಕಡಿಮೆ ಶಕ್ತಿ ಇರುವವರು ಅಂತ. ಈ ಮೂರೂ ಬಗೆಯ ಜನರಿಗೂ ಅಗತ್ಯವಾದ ಉತ್ಪನ್ನಗಳನ್ನು ಅವರು ತಯಾರಿಸುತ್ತಾರೆ. ಹೀಗಾಗಿ ಅವರ ವಸ್ತುಗಳನ್ನು ಜನ ತಮ್ಮ ಕೆಪ್ಯಾಸಿಟಿಗೆ ತಕ್ಕಂತೆ ಖರೀದಿಸಿಯೇ ಖರೀದಿಸುತ್ತಾರೆ.

ನೀವು ಐವತ್ತು ಸಾವಿರಕ್ಕೆ ಸಿಗುವ ಮೊಬೈಲ್ ಫೋನು ಎರಡು ಸಾವಿರಕ್ಕೆ ಸಿಕ್ಕಿತು ಎಂದುಕೊಳ್ಳಿ. ಅದರ ಆಯಸ್ಸು ಆರೇ ತಿಂಗಳಾದರೂ ಕೊಳ್ಳುವ ಶಕ್ತಿ ಅತ್ಯಂತ ಕಡಿಮೆಯಿರುವವನು ಅದನ್ನು ಕೊಳ್ಳುತ್ತಾನೆ. ಆತನ ಶಕ್ತಿ ಕೊಂಚ ಜಾಸ್ತಿಯಾಯಿತೋ? ಆಗಲೂ ಒಳ್ಳೆಯ ಮೆಟೀರಿಯಲ್ಲು ಖರೀದಿಸಲು ಚೀನಾದ ಕಂಪನಿಗಳ ಉತ್ಪನ್ನಗಳೇ ಸಿಗುತ್ತವೆ. ಅಲ್ಲಿ ಮುಂಚಿನಿಂದಲೂ ಒಂದು ಮಲ್ಟಿ ಸ್ಕಿಲ್ ಎಂಬುದನ್ನು ಡೆವಲಪ್ ಮಾಡಿಬಿಟ್ಟಿದ್ದಾರೆ. ಈ ಮಲ್ಟಿ ಸ್ಕಿಲ್ ಏನೆಂದರೆ ಒಬ್ಬನೇ ವ್ಯಕ್ತಿ ಹಲ ಕೆಲಸಗಳನ್ನು ಮಾಡಲು ಪರಿಣಿತನಾಗುವುದು. ಈಗ ಮನೆ ಕಟ್ಟುವುದು ಅಂದುಕೊಳ್ಳಿ. ಮರಗೆಲಸ ಮಾಡುವವನೇ ಎಲೆಕ್ಟ್ರಿಷಿಯನ್ ಕೆಲಸ ಕಲಿತಿರುತ್ತಾನೆ. ಅದರ ಜೊತೆ ಜೊತೆಗೇ ಗಾರೆ ಮೆತ್ತುವುದನ್ನೂ ಕಲಿತಿರುತ್ತಾನೆ. ನಮ್ಮಲ್ಲಾದರೆ ಎಲೆಕ್ಟ್ರಿಷಿಯನ್ ಬರುವ ಕಾಲಕ್ಕೆ ಬರಲಿಲ್ಲ ಎಂದರೆ ಗಾರೆ ಕೆಲಸದವನಿಗೆ ರಜಾ. ಹೀಗೆ ಹೇಳುತ್ತಾ ಹೋದರೆ ನಮ್ಮದು ಸಿಂಗಲ್ ಸ್ಕಿಲ್ ಕಲ್ಚರು. ಅವರದು ಮಲ್ಟಿ ಸ್ಕಿಲ್ ಕಲ್ಚರು. ಹೀಗಾಗಿ ಅವರು ಅಮೆರಿಕದಂತಹ ಅಮೆರಿಕಕ್ಕೇ ಸೆಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ಬಸವಣ್ಣ ಹೇಳಿದ ಕಾಯಕವೇ ಕೈಲಾಸ ಎಂಬ ಪದವನ್ನು ಅವರು ಅಕ್ಷರಶಃ ಪಾಲಿಸುತ್ತಿದ್ದಾರೆ. ಅದಕ್ಕೆ ಹೊಸ ಹೊಸ ಡೈಮೆನ್ಷನ್ನು ಕೊಡುತ್ತಿದ್ದಾರೆ.

ಆದರೆ ನಾವೇನು ಮಾಡುತ್ತಿದ್ದೇವೆ? ಕಾಯಕವೇ ಕೈಲಾಸ ಎಂದ ಬಸವಣ್ಣನ ಹೆಸರಿನಲ್ಲಿ ಕಾಯಕಕ್ಕೇ ಸರ್ಕಾರಿ ರಜೆ ಕೊಟ್ಟು ಬಿಟ್ಟಿದ್ದೇವೆ. ಇದು ಬಸವಣ್ಣನಿಗೆ ಮಾಡುವ ಅವಮಾನವೇ? ಕೊಡುತ್ತಿರುವ ಗೌರವವೇ? ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಹದಿನೈದು ಪರ್ಸೆಂಟಿನಷ್ಟು ಇರುವ ಜನರಿಗೆ ಸಂತೋಷವಾಗುತ್ತದೆ ಎಂಬ ಕಾರಣಕ್ಕಾಗಿ ಕಾಯಕವೇ ಕೈಲಾಸ ಎನ್ನುತ್ತಿದ್ದ ಬಸವಣ್ಣನವರ ಹೆಸರಿನಲ್ಲಿ ಕಾಯಕಕ್ಕೇ ರಜೆ ಕೊಡುವ ಕೆಲಸ ಆಗುತ್ತಿದೆಯಲ್ಲ? ಸರ್ಕಾರದ ಈ ಕೆಲಸ ಕಾಯಕವೇ ಕೈ ಸಾಲ ಎಂಬಂತಿಲ್ಲವೇ? ಅದಕ್ಕೇ ನಾನು ಹೇಳಿದ್ದು: ನೀವು ಯಾರದೋ ಮುಖ ನೋಡಿ ಏನೋ ಮಾಡಬೇಕು ಅಂದುಕೊಳ್ಳುತ್ತಾ ಕನಸು ಕಾಣಬೇಡಿ. ಕೆಲಸ ಯಾವುದಾದರೂ ಇರಲಿ, ಶ್ರದ್ಧೆಯಿಂದ ಮಾಡಿ. ಅದರಲ್ಲಿ ನಿಮಗೆ ಎಷ್ಟು ಶ್ರದ್ಧೆಯಿರಬೇಕು ಅಂದರೆ ಕನಸಿನಲ್ಲೂ ನಿಮಗೆ ಅದೇ ಕಾಣುತ್ತಿರಬೇಕು.

ಮೊನ್ನೆ ಸಚಿನ್ ತೆಂಡೂಲ್ಕರ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಒಮ್ಮೆ ನಾನು ಸೆಂಚುರಿಯ ಕನಸು ಕಾಣುತ್ತಿದ್ದೆ. ಸಿಕ್ಸರ್ ಬಾರಿಸುವ ಮೂಲಕ ಸೆಂಚುರಿ ಪೂರ್ಣಗೊಳಿಸಿದೆ. ಆದರೆ ಅದು ಕನಸಾಗಿತ್ತು. ಆದರೆ ಆಶ್ಚರ್ಯವೆಂದರೆ, ಮರುದಿನ ಕನಸಿನಲ್ಲಿ ಕಂಡ ರೀತಿಯಲ್ಲೇ ಆಯಿತು. ಬೌಲಿಂಗ್ ಮಾಡುತ್ತಿದ್ದಾತ ಹಾಗೇ ಬೌಲಿಂಗ್ ಮಾಡಿದ. ನಾನು ಹಾಗೇ ಸಿಕ್ಸರ್ ಬಾರಿಸಿದೆ. ಸೆಂಚುರಿ ಪೂರೈಸಿದೆ. ಇದು ಹೇಗಾಯಿತು ಎಂಬುದು ನನಗಿನ್ನೂ ಅರ್ಥವಾಗುತ್ತಿಲ್ಲ. ನಿಮ್ಮ ಶ್ರದ್ಧೆ ಎಂಬುದು ಈ ರೀತಿ ಕೆಲಸ ಮಾಡಬೇಕು. ನಿಮಗೆ ಮಾಡುವ ಕೆಲಸದಲ್ಲಿ ಇನ್ನಿಲ್ಲದಷ್ಟು ಉತ್ಸಾಹ ಇರಬೇಕು. ಆಗ ಇಂತಹದೆಲ್ಲ ಸಾಧ್ಯ. ಯಾರೋ ಬಂದು ಇದನ್ನೆಲ್ಲ ನಿಮ್ಮ ಕೈ ಹಿಡಿದು ಮಾಡಿಸಲು ಸಾಧ್ಯವಿಲ್ಲ, ನೀವೇ ಮಾಡಬೇಕು. ಮಾಡಿ. ನೆಪ ಸಿಕ್ಕಾಗಲೆಲ್ಲ ರಜೆ ಜಡಿದು ಕೆಲಸ ಮರೆಯಬೇಡಿ. ಹಾಗೇನಾದರೂ ಮರೆತರೆ ನೀವು ಯಶಸ್ವಿ ವ್ಯಕ್ತಿಯಾಗಲು ಸಾಧ್ಯವಿಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books