Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಯಾರು ನಮ್ಮೊಂದಿಗೆ ಎಷ್ಟು ದೂರದ ತನಕ ಬರುತ್ತಾರೋ? ಅವರೊಂದಿಗೆ ಅಷ್ಟೇ ಋಣ ಸಂದಾಯ!

ಇದಕ್ಕೆ ಏನು ಮಾಡಲಿ?
ಇದು ಆಕಸ್ಮಿಕವಾ? ಕಾಕತಾಳೀಯವಾ? ನನಗೇ ಹೀಗೆಲ್ಲ ಆಗುತ್ತಾ? ಅಸಲು ಇದಕ್ಕೊಂದು logic (ತರ್ಕ) ಇದೆಯಾ? ನನ್ನಲ್ಲಿ ಉತ್ತರವಿಲ್ಲ. ಇಂಥ ಅನುಭವ ನಿಮಗೂ ಆಗಿದ್ದಿರಬಹುದು. ಹಾಗೆ ಆದಾಗ “ಇದೇನು ಸೀಝನ್ನಾ?" ಅಂತ ನೀವೂ ಉದ್ಗರಿಸಿರುತ್ತೀರಿ. ನಿಮ್ಮ ಮನೆಯಲ್ಲಿ ನಿಮ್ಮದೇ ತಮ್ಮನಿಗೆ ಗಂಡು ಮಗು ಹುಟ್ಟಿರುತ್ತೆ. ಅದೇ ವೇಳೆಗೆ “ಅವರಿಗೆ ಗಂಡು ಮಗು ಆಯ್ತಂತೆ" ಎಂಬ ಸುದ್ದಿ ಕೇಳುತ್ತೀರಿ. ಒಂದೆರಡಲ್ಲ: ಒಂದಾದ ಮೇಲೊಂದು ಅದೇ ಸುದ್ದಿ. ಅವರಿಗೆ ಗಂಡು ಮಗು ಆಯ್ತಂತೆ! ಆಶ್ಚರ್ಯ, ಸಂತೋಷ, ಒಂದು ತೆರನಾದ ಯೋಚನೆ-ಎಲ್ಲವೂ ಆಗಿರುತ್ತದೆ. ನನ್ನ ಅನುಭವದಲ್ಲಂತೂ ಈ ತೆರನಾದ ಪರಿಸ್ಥಿತಿ ನೂರಾರು ಸಲ ಆಗಿದೆ.

ನೋಡಿ, ಮೊನ್ನೆಯಷ್ಟೆ ನಮ್ಮ ರವಿ ಕುಲಕರ್ಣಿಯ ಪತ್ನಿ ಕೀರ್ತಿಮಾಲಿನಿ ತೀರಿಕೊಂಡ ಬಗ್ಗೆ ಬರೆದೆ. ಅದಕ್ಕೆ ಕೆಲವೇ ದಿನಗಳ ಹಿಂದೆ ಆತ್ಮೀಯ ಗೆಳೆಯ ಮಾಧು (ಸೇತೂ ಮಾಧವ) ಜೋಡಿದಾರ್ ತೀರಿಕೊಂಡಿದ್ದರ ಬಗ್ಗೆ ಬರೆದೆ. ಅದರ ಬೆನ್ನಲ್ಲೇ ನನ್ನ ಹಳೆಯ ಮಿತ್ರ ಜಾನ್ ಆಚಾರಿ ಎಂಬಾತ ನಿಧನನಾದ ಎಂಬ ವಾರ್ತೆ. ಈಗ ನೋಡಿದರೆ ನನ್ನ ಅಣ್ಣ ತೀರಿಕೊಂಡಿದ್ದಾನೆ. ನನಗೆ ಅಣ್ಣ, ತಮ್ಮ, ಅಕ್ಕ, ತಂಗಿ-ಉಹುಂ, ಯಾರೂ ಇಲ್ಲ. ಅಮ್ಮ ತೀರಿಕೊಂಡ ಮೇಲೆ ನಾನು ಅಕ್ಷರಶಃ ಅನಾಥ. ಆದರೆ ಈ ಅಣ್ಣ ದೂರದವನಲ್ಲ. ನನ್ನ ತಾಯಿಯ ಖಾಸಾ ಅಕ್ಕನ ಮಗ. ಅಂದರೆ ಬೆಳಗೆರೆ ಜಾನಕಮ್ಮ ಅವರ ಮಗ-ನನ್ನ ತಾಯಿ ಬೆಳಗೆರೆ ಪಾರ್ವತಮ್ಮ. ಆಕೆ ಬೆಳಗೆರೆ ಜಾನಕಮ್ಮ. In fact, ನನ್ನ ತಾಯಿ ತುಂಬ ಚೆಲುವೆ. ಆದರೆ ಬೆಳಗೆರೆ ಜಾನಕಮ್ಮನವರ ಚೆಲುವಿಕೆಯ ಮುಂದೆ ನನ್ನ ಅಮ್ಮ, ಏನೇನೂ ಇಲ್ಲ. ಅಮ್ಮ ಕುಳ್ಳಗಿದ್ದಳು. ಕೊಂಚ ಎಣ್ಣೆಗೆಂಪು ಬಣ್ಣ. ಜಾನಕಮ್ಮನವರದು ಎತ್ತರನೆಯ ಆಳ್ತನ ಮತ್ತು ಸ್ಫಟಿಕ ಬಿಳುಪು. ಅಮ್ಮನಿಗಿಂತ ಆಕೆ ಚೆನ್ನಾಗಿ ಹಾಡುತ್ತಿದ್ದರಂತೆ. ಆಕೆ ತೀರಿಕೊಂಡಾಗ ನಾನಿನ್ನೂ ಹುಟ್ಟಿರಲಿಲ್ಲ. ಆದರೆ, ಆಕೆ ತೀರಿಕೊಂಡ ಆಸ್ಪತ್ರೆಯಲ್ಲೇ ಸುಮಾರು ಹತ್ತು ವರ್ಷಗಳ ನಂತರ ನಾನು ಹುಟ್ಟಿದ್ದೆ! ಆಕೆಗೆ ಬಹುಶಃ ಒಂಬತ್ತು ತಿಂಗಳು ಪೂರ್ತಿಯಾಗುವ ಮುನ್ನವೇ ನೋವು ಕಾಣಿಸಿಕೊಂಡು ಆ ಹೆರಿಗೆಯಲ್ಲೇ ಆಕೆ ತೀರಿಕೊಂಡಿರಬೇಕು. ಒಂದು ಅಂದಾಜಿನ ಪ್ರಕಾರ ಆಕೆಗೆ ಆರು ಮಕ್ಕಳು. ಆ ಪೈಕಿ ಒಂದು ಅವಳಿ ಜವಳಿ ಹೆರಿಗೆ. ಆದರೆ ಉಳಕೊಂಡಿದ್ದು ಕೇವಲ ಎರಡು. ಒಂದು, ಆಂಧ್ರದ ಅನಂತಪುರದಲ್ಲಿ ತುಂಬ ದಿನ ಇದ್ದು ಅಲ್ಲೇ ತೀರಿಕೊಂಡ ನನ್ನ ಮೊದಲನೆಯ ಅಣ್ಣ ಕಮಲನಾಭ. ಆತನದು ಎಣ್ಣೆಗೆಂಪು ಬಣ್ಣ. ಆದರೆ ನಿಜಕ್ಕೂ ಸುಂದರವಾಗಿದ್ದ ಆತ. ಒಂದೇ ಒಂದು ಹೋಳು ಅಡಿಕೆಯನ್ನೂ ತಿನ್ನದ ಆತ ಶುದ್ಧ ಕುಡುಕರಿಗೇ ಬರುವ ಲಿವರ್ ಸಿರೋಸಿಸ್‌ನಿಂದ ಈಗ್ಗೆ ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆಯೇ ತೀರಿಕೊಂಡ. ಆತನ ತಮ್ಮನೇ ಮೊನ್ನೆ ಉಸಿರು ಚೆಲ್ಲಿದ ನನ್ನ ಇನ್ನೊಬ್ಬ ಅಣ್ಣ ಪ್ರಸನ್ನ ಕುಮಾರ್.

ಕಮಲನಾಭ ಮತ್ತು ಪ್ರಸನ್ನ ಕುಮಾರ್-ಇಬ್ಬರೂ ಎಂ.ಎ. ಪದವಿ ಪಡೆದಿದ್ದರು. ಮೊದಲನೆಯಾತನದು ಇಂಗ್ಲಿಷ್ ಎಂ.ಎ., ಪ್ರಸನ್ನ ಕುಮಾರ್‌ನದು ಹಿಸ್ಟರಿ ಎಂ.ಎ. ಇಬ್ಬರೂ ತುಂಬ ಸ್ಫುರದ್ರೂಪಿಗಳು. ಇಬ್ಬರೂ ಪ್ರಕಾಂಡ ಬುದ್ಧಿವಂತರು. ಇಬ್ಬರೂ ಪ್ರೊಫೆಸರುಗಳು. ಮೊದಲ ಅಣ್ಣನನ್ನು ಆತನ ಗೆಳೆಯರು ನಡೆದಾಡುವ ‘ರೆನ್ ಅಂಡ್ ಮಾರ್ಟಿನ್’ (ಅದು ಗ್ರಾಮರ್ ಪುಸ್ತಕ) ಅನ್ನುತ್ತಿದ್ದರು. ಆತನಿಗೆ ಇಂಗ್ಲಿಷಿನಲ್ಲಿ ಪತ್ರ ಬರೆಯಲು ನನಗೆ ಹೆದರಿಕೆಯಾಗುತ್ತಿತ್ತು. ತಪ್ಪು ಬರೆದಿದ್ದರೆ, ಅದರ ಮುಂದಿನ ಭಾನುವಾರ ಅದನ್ನು ತಿದ್ದಬೇಕೆಂದೇ ಆತ ಅನಂತಪುರದಿಂದ ಬಳ್ಳಾರಿಗೆ ಬಂದುಬಿಡುತ್ತಿದ್ದ. Of course ಆತ ಒದೆಯುತ್ತಿರಲಿಲ್ಲ. ಹಾಗೇ ತಿದ್ದುತ್ತಿದ್ದ. ಪ್ರತೀ ಸಲ ಬಂದಾಗಲೂ ಒಂದಷ್ಟು ಮಿಠಾಯಿ ತಂದಿರುತ್ತಿದ್ದ. ಆದರೆ ಈ ಪುಣ್ಯಾತ್ಮನಿದ್ದನಲ್ಲ? ಪ್ರಸನ್ನ ಕುಮಾರ! ಮಾತಿಗೆ ಮುಂಚೆ ಕೆತ್ತಾ-ಪತ್ತ ಒದೆ. ಇನ್ನೊಂದೇ ಒಂದು ಒದೆ ಕೊಟ್ಟರೆ ಸತ್ತುಗಿತ್ತು ಹೋಗಿಯಾನು ಅನ್ನಿಸಿದಾಗ ಮಾತ್ರ ಕೈ ಕೆಳಗಿಳಿಸುತ್ತಿದ್ದ. ಅಂಥ ಮುಂಗೋಪಿ. ಆತ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದಾಗ ಆತನ ಮನೆಯಲ್ಲಿ ನಾನು ಎರಡು ವರ್ಷ ಇದ್ದೆ. ಅಲ್ಲಿಯೇ ನಾನು ಸಿದ್ಧಗಂಗಾ ಹೈಸ್ಕೂಲಿನಲ್ಲಿ ಏಳು ಮತ್ತು ಎಂಟನೇ ಕ್ಲಾಸು ಓದಿದ್ದು.

ಅಮ್ಮನಿಗೆ ನಾನು ಏನು ಗತಿಯಾಗಿಬಿಡುತ್ತೇನೋ ಎಂಬ ಹೆದರಿಕೆ. ಮತ್ತಿನ್ನೇನು? ನಾನು ಮೂರನೆಯ ಕ್ಲಾಸಿನಲ್ಲಿದ್ದಾಗಲೇ ಬೀಡಿ-ಸಿಗರೇಟು ಸೇದಲಾರಂಭಿಸಿದ್ದೆ. ಅದಾದ ಒಂದೆರಡು ವರ್ಷಗಳಿಗೇ ನನಗೆ ಮೈತುಂಬ ಗೆಳತಿಯರು. ಅದು ಸಾಲದೆಂಬಂತೆ ಕಂಡ ಕಂಡವರೊಂದಿಗೆ ಹೊಡೆದಾಟ-ಬಡಿದಾಟ. ತೀರಾ ಸೈಕಲ್ ಚೈನು ಹಿಡಿದು ರಸ್ತೆ-ರಸ್ತೆಯಲ್ಲೇ ಬಡಿದಾಡುತ್ತಿದ್ದೆ. ಒಂದಿಬ್ಬರ ತಲೆ ಒಡೆದು ರಕ್ತ-ರಾಣಾರಂಪಾಟ ಮಾಡಿದ್ದೆ. ನನಗೆ ತಂದೆ ಇಲ್ಲ. ಮನೆಯಲ್ಲಿ ಹಿರಿಯ ಗಂಡಸೇ ಇಲ್ಲ. ಹೀಗಾಗಿ ನಾನು ಯಾರ ಭಯವೂ ಇಲ್ಲದೆ ಪೂರ್ತಿ ಪೋಲಿ ಬಿದ್ದು ಹೋಗುತ್ತೇನೆ ಅಂತ ಆಕೆಗೆ ಹೆದರಿಕೆ. ಆಗಲೇ ಹೇಳಿದೆನಲ್ಲ? ಕಮಲನಾಭ ಮತ್ತು ಪ್ರಸನ್ನ ಅಂತ? ಅವರಿಬ್ಬರನ್ನೂ ಸಾಕಿದ್ದು ನನ್ನ ಅಮ್ಮನೇ. ಅಕ್ಕ ತೀರಿಕೊಂಡಾಗ ಅವರಿಬ್ಬರೂ ಹೈಸ್ಕೂಲು ಓದುತ್ತಿದ್ದರು. ತಾಯಿ ಇಲ್ಲದ ಮಕ್ಕಳು. ಅವರಿಬ್ಬರನ್ನೂ ಅಮ್ಮ ತುಂಬ ಅಕ್ಕರೆಯಿಂದ, ಮಮಕಾರದಿಂದ ನೋಡಿಕೊಂಡಿದ್ದಳು. ಈಗ ಅವರಿಬ್ಬರೂ ದೊಡ್ಡವರಾಗಿದ್ದಾರೆ. ನೌಕರಿಗಳಲ್ಲಿದ್ದಾರೆ. ಆದರೆ ಕಮಲನಾಭನಿಗೆ ನನ್ನನ್ನು ಬೆದರಿಸಿ ಗೊತ್ತಿಲ್ಲ. ಅದಕ್ಕೇನಿದ್ದರೂ ಪ್ರಸನ್ನನೇ ಸರಿ ಎಂದು ತೀರ್ಮಾನಿಸಿದ ಅಮ್ಮ, ನನ್ನನ್ನು ತುಮಕೂರಿನಲ್ಲಿ ಅಣ್ಣನ ‘ನಿಗೆಹಬಾನಿ’ಗೆ ಒಪ್ಪಿಸಿದ್ದಳು. Full control.

ಅಷ್ಟು ಸಾಕಲ್ಲ? ನನ್ನ ಚಿಕ್ಕದೊಂದು ತಪ್ಪಿಗೂ ಈ ಅಣ್ಣ ಮೈ ಮುರಿಯುವಂತೆ ಬಡಿಯುತ್ತಿದ್ದ. ಇಲ್ಲಿ ಅಡುಗೆ ಮನೆಯ ಬಾಗಿಲಲ್ಲಿ ಒದ್ದರೆ ಅಲ್ಲಿ ಹಿತ್ತಲಲ್ಲಿದ್ದ ಬಟ್ಟೆ ಒಗೆಯುವ ಬಂಡೆಯ ಹತ್ತಿರಕ್ಕೆ ಹೋಗಿ ಬೀಳಬೇಕು-ಹಾಗೆ ಒದೆಯುತ್ತಿದ್ದ. ಮಕ್ಕಳನ್ನು ಸರಿದಾರಿಗೆ ತರಬೇಕೆಂದರೆ ಸಮಾ ಒದೆ ಕೊಡಬೇಕು ಎಂಬ old school of thoughtಗೆ ಸೇರಿದವನು ಪ್ರಸನ್ನಣ್ಣ. ನನ್ನ ಅತ್ತಿಗೆ ರತ್ನಮ್ಮ, ನಿಜಕ್ಕೂ ಒಳ್ಳೆಯವಳು. ಅಣ್ಣನೂ ಒಳ್ಳೆಯವನೇ. ಅತ್ತಿಗೆ ಬೆಳಗಿನ ಜಾವಕ್ಕೇ ಎದ್ದು ನನ್ನನ್ನೂ ಎಬ್ಬಿಸುತ್ತಿದ್ದಳು. ಆಕೆ ನನಗೆ ಮಾಡಿದ ಎರಡು ಬಹುದೊಡ್ಡ ಉಪಕಾರಗಳೆಂದರೆ, ನನಗೆ ಅಡುಗೆ ಮತ್ತು ಇಂಗ್ಲಿಷ್ ಕಲಿಸಿದ್ದು! ಇವತ್ತು ನಾನೇನಾದರೂ ಅಲ್ಪ-ಸ್ವಲ್ಪ ಇಂಗ್ಲಿಷ್ ಮಾತಾಡಬಲ್ಲೆ ಅಂದರೆ ಅದಕ್ಕೆ ಕಾರಣ ನನ್ನ ರತ್ನಮ್ಮತ್ತಿಗೆ. ಆಕೆ. ಬಿ.ಎ. ಓದಿದ್ದಳು. ರೂಪ-ಬಣ್ಣಗಳ ವಿಷಯಕ್ಕೆ ಬಂದರೆ ಅವರಿಬ್ಬರದೂ ಹೇಳಿ ಮಾಡಿಸಿದ ಜೋಡಿ. ಅತ್ತಿಗೆ ತುಂಬ ಚೆನ್ನಾಗಿದ್ದಳು. ಅಣ್ಣ, ಆ ಕಾಲದ ಹಿಂದಿ ಚಿತ್ರಗಳ ನಾಯಕನಟ ರಾಜೇಂದ್ರಕುಮಾರ್‌ನಂತಿದ್ದ. ಅನೇಕ ವರ್ಷ ಗುಲ್ಬರ್ಗಾದಲ್ಲಿ ನೌಕರಿ ಮಾಡಿದ್ದರಿಂದ ಅಣ್ಣನಿಗೆ ಒಳ್ಳೆಯ ಉರ್ದು ಬರುತ್ತಿತ್ತು. ಮನೆಯ ಭಾಷೆ ತೆಲುಗು. ಕನ್ನಡ ಕಲಿಯಲಿಕ್ಕೆ ನಮ್ಮ ಮನೆಯಲ್ಲಿ ಯಾರೂ ಶಾಲೆಗೆ ಹೋಗಬೇಕಿರಲಿಲ್ಲ. ಇದೆಲ್ಲ ನಮಗೆ ವಂಶವಾಹಿನಿಯಲ್ಲೇ ಹರಿದು ಬರುತ್ತದಾ? ಗೊತ್ತಿಲ್ಲ. ನನ್ನ ಚಿಕ್ಕ ಮಗ ಹಿಮವಂತ ಈಗಾಗಲೇ ಹಿಂದಿ ಕಲಿಯುತ್ತಿದ್ದಾನೆ!

ಅಣ್ಣ ಸರ್ಕಾರಿ ಸೇವೆಯಲ್ಲಿದ್ದ. ಆದರೆ ಜೀವನಪರ್ಯಂತ ಒಂದೇ ಒಂದು ನಯಾಪೈಸೆ ಲಂಚ-ರುಷುವತ್ತು ಅಂತ ಮುಟ್ಟಿದವನಲ್ಲ. ಅಂಥ ಪ್ರಾಮಾಣಿಕ. ಒಳ್ಳೆಯ ಉಪನ್ಯಾಸಕನೂ ಹೌದು. ನೌಕರಿಯ ಬಹುಭಾಗ ಆತ ಮೈಸೂರಿನ ಮಹಾರಾಣೀಸ್ ಕಾಲೇಜಿನಲ್ಲೇ ಕಳೆದ. ಒಂದೇ ಒಂದು ದಿನಕ್ಕೂ ಹೆಂಗಸರ ಕಡೆಗೆ ತಿರುಗಿ ನೋಡಿದವನಲ್ಲ. ಪ್ರತಿ ಕ್ಲಾಸಿಗೆ ಹೋದರೂ ತನ್ನದೇ ಶೈಲಿಯಲ್ಲಿ ಚೆಂದಗೆ ಪಾಠ ಮಾಡುತ್ತಿದ್ದ. preparation ಇಲ್ಲದೆ ಪ್ರಸನ್ನಣ್ಣ ಕ್ಲಾಸಿಗೆ ಹೋಗುತ್ತಿರಲಿಲ್ಲ. ಇದೆಲ್ಲ ನನಗೆ ಹೇಗೆ ಗೊತ್ತಾದವು ಅಂದರೆ, ಹಾಸನದಲ್ಲಿ ೧೯೮೦ರಲ್ಲಿ ಆತ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದಾಗ ನಾನು ಅದೇ ಕಾಲೇಜಿನಲ್ಲಿ ಹಿಸ್ಟರಿ ಲೆಕ್ಚರರ್ ಆಗಿದ್ದೆ. ಅದಕ್ಕೂ ಮುಂಚೆ ನಾನು ಚಿಕ್ಕಪುಟ್ಟ ನೌಕರಿಗಳನ್ನು ಮಾಡಿದ್ದೆನಾದರೂ, ಅವೆಲ್ಲ ಲೆಕ್ಕಕ್ಕೆ ಬರುವಂತವಲ್ಲ. ಲೆಕ್ಚರರ್ ಅಂತ ಅಧಿಕೃತವಾಗಿ ನೌಕರಿಗೆ ತೊಡಗಿಕೊಂಡಿದ್ದು ಅಂದರೆ, ೧೯೮೦ರಲ್ಲೇ. ಲೆಕ್ಚರಿಕೆಯಲ್ಲಿ ಒಂದು ಕಸುಬುದಾರಿಕೆ ಅಂತ ಇರುತ್ತದಲ್ಲ? ಅದನ್ನು ಒಂದರ್ಥದಲ್ಲಿ ಕಲಿಸಿಕೊಟ್ಟವನೇ ಪ್ರಸನ್ನಣ್ಣ. ಆಗಷ್ಟೇ ೧೯೭೯ರಲ್ಲಿ ಎಂ.ಎ ಮುಗಿಸಿ ೧೯೮೦ರಲ್ಲಿ ನಾನು ಲೆಕ್ಚರರ್ ಆಗಿದ್ದೆ. ಅಣ್ಣ ನನ್ನ methodologyಯನ್ನು ಗಮನಿಸುತ್ತಿದ್ದ. ನನ್ನ ಇಂಗ್ಲಿಷ್ ಗಮನಿಸುತ್ತಿದ್ದ. ಕೆಲಬಾರಿ ನಾನು ಪಾಠ ಮಾಡುತ್ತಿರುವಾಗ ಕಾಲೇಜಿನ ಕಾರಿಡಾರ್‌ನಲ್ಲಿ ನನಗೆ ಗೊತ್ತಾಗದೆ ಮರೆಯಲ್ಲಿ ನಿಂತು ಪಾಠ ಕೇಳಿಸಿಕೊಳ್ಳುತ್ತಿದ್ದ. ಇವೆಲ್ಲ ಈಗಿನ ಲೆಕ್ಚರರ್‌ಗಳು, ಪ್ರಿನ್ಸಿಪಾಲರು ಖಂಡಿತ ಮಾಡುವುದಿಲ್ಲ.

ಪ್ರಸನ್ನಣ್ಣ ತುಂಬ creative ಆಗಿದ್ದ ಅಂತ ನಾನು ಹೇಳುವುದಿಲ್ಲ. ಆತ ಇತಿಹಾಸದಲ್ಲಿ ಏನೋ ಆಗಾಧವಾದುದನ್ನು ಕಂಡುಹಿಡಿದ ಅಂತ ನನಗೆ ಯಾವತ್ತೂ ಅನ್ನಿಸಿಲ್ಲ. ಮನೆಯಲ್ಲಿ ಕುಳಿತು ಶ್ರದ್ಧೆಯಿಂದ ಪ್ರಿಪೇರ್ ಆಗಿ, ನೋಟ್ಸ್ ಮಾಡಿಕೊಂಡು ಕರಾರುವಾಕ್ಕಾಗಿ ಸಮಯಕ್ಕೆ ಸರಿಯಾಗಿ ಹೋಗಿ, ಉಳಿದ ಯಾವ ನಖರೆಗಳೂ ಇಲ್ಲದ ರೀತಿಯಲ್ಲಿ ಮಟ್ಟಸವಾಗಿ ಪಾಠ ಮಾಡಿ, ಅಷ್ಟೇ ಕರಾರುವಾಕ್ಕಾಗಿ ಕಾಲೇಜಿನಿಂದ ಹೊರಬಿದ್ದುಬಿಡುತ್ತಿದ್ದ. ಇನ್ನೊಬ್ಬರ ದುಡ್ಡು ಮುಟ್ಟುತ್ತಿರಲಿಲ್ಲ ಅಂತ ಹೇಳಿದೆನಲ್ಲ? ಅದರ ಇನ್ನೊಂದು ಮುಖವನ್ನೂ ನಿಮಗೆ ಪರಿಚಯ ಮಾಡಿಕೊಡಬೇಕು. ಅವರಿವರ ದುಡ್ಡು ಮುಟ್ಟುತ್ತಿರಲಿಲ್ಲ ಎಂಬುದು ಎಷ್ಟು ಸತ್ಯವೋ, ಇನ್ನೊಬ್ಬರಿಗೆ ಕೊಡುತ್ತಿರಲಿಲ್ಲ ಎಂಬುದೂ ಅಷ್ಟೇ ಸತ್ಯ. ಆತ ಪರಮ ಜಿಪುಣಾಗ್ರೇಸರ. ತನ್ನ ಓಡಾಟಕ್ಕೆ ಒಂದು ಮೊಪೆಡ್ ಥರದ್ದನ್ನು ಇಟ್ಟುಕೊಂಡಿದ್ದ. ಆಗ ನಾನು ಬಳ್ಳಾರಿಯಲ್ಲಿ ವಿಮೆನ್ಸ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದೆ. ನನಗೆ ಒಂದು ಮೊಪೆಡ್ ಕೊಳ್ಳುವ ಆಸೆ ಇತ್ತು. ಅದೇಕೋ ಗೊತ್ತಿಲ್ಲ; ಅಣ್ಣನ ಮೊಪೆಡ್ ನೋಡಿದ ತಕ್ಷಣ ನನಗೊಂದು ಕತ್ತೆಮರಿ ನೆನಪಾಗುತ್ತಿತ್ತು.

“ನಿನಗೆ ಜನ್ಮಜನ್ಮಾಂತರದ ಪುಣ್ಯ ಬರುತ್ತೆ ಕಣೋ; ನಿನ್ನ ಅಣ್ಣನ ಮೊಪೆಡ್ ಖರೀದಿ ಮಾಡಿ ಬಳ್ಳಾರಿಗೆ ತಗೊಂಡು ಹೋಗಿಬಿಡು. ಅದು ಒಬ್ಬರನ್ನು ಎಳೆಯುವಷ್ಟು ತಾಕತ್ತು ಹೊಂದಿದೆ. ನಿಮ್ಮ ಅಣ್ಣ ಎಷ್ಟು ಬೇಡವೆಂದರೂ ಅದರಲ್ಲಿ ಹಿಂದಿನ ಸೀಟಿನಲ್ಲಿ ಕುಳಿತುಕೋ ಅಂತಾರೆ. ನೀನು ಹೇಳಿದಂತೆ ಅದು ಶುದ್ಧ ಕತ್ತೆಮರಿಯೇ ಸರಿ. ಸ್ವಲ್ಪ ದಿನ್ನೆ ಬಂದರೆ ಸಾಕು; ಇಬ್ಬರನ್ನೂ ಎಳೆಯಲಾಗದೆ “ವರ್ರೋ" ಅಂತ ಕೂಗುತ್ತದೆ. ಒಂದೊಂದು ಸಲ ನನ್ನನ್ನೂ ಇಳಿಸಿ, ತಾನೂ ಇಳಿದು ನೂಕಿಕೊಂಡು ಆ ದಿನ್ನೆ ಹತ್ತುತ್ತಾರೆ. ನೋಡೋರಿಗೆ ಅದು ತಮಾಷೆಯ ಸಂಗತಿ. ನನಗೆ ಪ್ರಾಣವೇ ಹೋಗುವ ಸ್ಥಿತಿ. ದಯವಿಟ್ಟು ಅದನ್ನು ಖರೀದಿ ಮಾಡಿ ತಗೊಂಡು ಹೋಗಿ ಪುಣ್ಯ ಕಟ್ಟಿಕೋ" ಅನ್ನುತ್ತಿದ್ದಳು ರತ್ನಮ್ಮತ್ತಿಗೆ. ಇಷ್ಟು ಹೇಳಿದರೆ ಸಾಕು; ಅಣ್ಣ ಎಷ್ಟು ಜಿಪುಣ ಅನ್ನೋದು ನಿಮಗೆ ಗೊತ್ತಾಗಿರುತ್ತದೆ.

ಅದಕ್ಕಿಂದ ಅತಿರೇಕ ಅಂದರೆ, ರತ್ನಮ್ಮತ್ತಿಗೆ ಅಡುಗೆ ಮಾಡುತ್ತಿದ್ದರೆ ಈ ಪುಣ್ಯಾತ್ಮ ಆಕೆಯ ಹಿಂದೆಯೇ ಅಡುಗೆ ಮನೆಗೆ ಹೋಗಿಬಿಡುತ್ತಿದ್ದ. ಅಲ್ಲೇ ನಿಂತು ಠಳಾಯಿಸಿ, “ನೀನು ವಗ್ಗರಣೆಗೆ ಇಷ್ಟೇಕೆ ಸಾಸಿವೆ ಹಾಕಿದೆ" ಎಂದು ರೊಳ್ಳೆ ತೆಗೆಯುತ್ತಿದ್ದ. ಆಗೆಲ್ಲ ಒಂದು ಸಿವುಡು ಕೊತ್ತಂಬರಿ ಸೊಪ್ಪಿಗೆ ಐದು ಪೈಸೆ ಬೆಲೆ. ಅತ್ತಿಗೆಗೆ ಅದನ್ನು ಕೊಳ್ಳುವ ಭಾಗ್ಯವೂ ಇರುತ್ತಿರಲಿಲ್ಲ. ಆಕೆಗೆ ಸಾವಿರಗಟ್ಟಲೆ ಕೊಡುವುದಿರಲಿ, ಕೊತ್ತಂಬರಿ ಸಿವುಡು ಕೊಳ್ಳಲಿಕ್ಕೆ ಬೇಕಾದ ಐದು-ಹತ್ತು ಪೈಸೆ ಕೂಡ ಕೊಡುತ್ತಿರಲಿಲ್ಲ ಅಣ್ಣ. ಅಣ್ಣನ ‘money management’ ಆ ಅತಿರೇಕಕ್ಕೆ ಹೋಗುತ್ತಿತ್ತು. ಯಾರಾದರೂ ನೆಂಟರಿಷ್ಟರು ಮನೆಗೆ ಬಂದರೆ “ನೋಡೀ, ಒಂದಷ್ಟು ದೂರದಲ್ಲಿ ಒಂದು ಹೊಟೇಲಿದೆ. ಹೋಗಿ ಊಟ ಮಾಡಿ ಬಂದುಬಿಡಿ. ನೀವು ಲೇಟಾಗಿ ಹೋದರೆ ಹೊಟೇಲು close ಆಗಿಬಿಡುತ್ತದೆ. ನಾವಂತೂ ಇವತ್ತು ಅಡುಗೆ ಮಾಡಿಲ್ಲ" ಅನ್ನುತ್ತಿದ್ದ. ಅದರಲ್ಲಿ ಸುಳ್ಳೇನೂ ಇರುತ್ತಿರಲಿಲ್ಲ. ಒಮ್ಮೆ ಅಡುಗೆ ಮಾಡಿದರೆ ಮುಗಿಯಿತು. ಅದನ್ನೇ ನಾಲ್ಕು-ಐದು ದಿನ ಫ್ರಿಜ್‌ನಲ್ಲಿಟ್ಟು ಬೇಕಾದಾಗ ಕೊಂಚ ಬಿಸಿ ಮಾಡಿ ಉಂಡು ‘ಜೈ’ ಅಂದುಬಿಡುತ್ತಿದ್ದ. ಅತ್ತಿಗೆಗೂ ಅದು ಅನಿವಾರ್ಯ ಡಯೆಟ್! ಇದು ಯಾವ ಮಟ್ಟಕೆ ಹೋಗುತ್ತಿತ್ತು ಅಂದರೆ, ನಾವ್ಯಾರಾದರೂ ಮೈಸೂರಿಗೆ ಹೋದರೆ ಅತ್ತಿಗೆಗೆ ಇಪ್ಪತ್ತೋ, ಮೂವತ್ತೋ ರುಪಾಯಿ ಕೊಟ್ಟು, ಅದನ್ನು ಅಣ್ಣನಿಗೆ ತೋರಿಸಬೇಡ ಎಂದು ಹೇಳಿ ಬರುತ್ತಿದ್ದೆವು.

ಅಂಥ ಪ್ರಸನ್ನಣ್ಣನಿಗೆ ಇಬ್ಬರು ಗಂಡುಮಕ್ಕಳು. ಅವರಿಬ್ಬರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದಷ್ಟು ಬುದ್ಧಿವಂತ ಮಕ್ಕಳು. ಮೊದಲನೆಯವನು ನನ್ನದೇ ಓರಗೆಯ ಮನೋಹರ. ಅವನು ಸುಮಾರು ಇಪ್ಪತ್ತೈದು ವರ್ಷದ ಹಿಂದೆಯೇ ಅಮೆರಿಕದಲ್ಲಿ ಉಳಿದುಕೊಂಡು ‘ನಾನಿನ್ನು ಭಾರತಕ್ಕೆ ಹಿಂತಿರುಗುವುದಿಲ್ಲ’ ಎಂದು ನಿರ್ಧರಿಸಿಯಾಗಿದೆ. ಚಿಕ್ಕವನು ಮಧು. ಕೆಲಕಾಲ ಅವನೂ ಅಮೆರಿಕದಲ್ಲಿದ್ದ. ಯಥಾಪ್ರಕಾರ ಸಾಫ್ಟ್‌ವೇರ್ ಕಂಪೆನಿಯಲ್ಲಿ ಇಂಜಿನೀರ್. ಆ ಕಂಪೆನಿಯಲ್ಲಿ ಬಹುದೊಡ್ಡ ಹುದ್ದೆಯಲ್ಲಿದ್ದಾನೆ. ಆದರೆ ಆಮೆರಿಕದಲ್ಲಿ ನೆಲೆಗೊಳ್ಳಲು ಒಲ್ಲ. “ನನ್ನ ಅಪ್ಪ ಅಮ್ಮನಿಗೆ ತುಂಬ ವಯಸ್ಸಾಗಿದೆ. ಕಡೆಗಾಲದಲ್ಲಿ ಅವರನ್ನು ನೋಡಿಕೊಳ್ಳಬೇಕು" ಅಂದು ಭಾರತಕ್ಕೆ ಹಿಂತಿರುಗಿಬಿಟ್ಟ. ನಿಜಕ್ಕೂ ಅವರನ್ನು ಚೆನ್ನಾಗಿಯೇ ನೋಡಿಕೊಂಡ. ಒಮ್ಮೆ ಬೆಂಗಳೂರಿಗೆ ಬಂದಾಗ, “ನೀನು ಮುಫತ್ತಾಗಿ ಕೊಟ್ಟರೆ ಮಾತ್ರ ನಾನು ನಿನ್ನ ಪತ್ರಿಕೆ ಓದುತ್ತೇನೆ ನೋಡಪ್ಪ" ಅಂದಿದ್ದ ಪ್ರಸನ್ನಣ್ಣ.

ಆಶ್ಚರ್ಯವೇನಿಲ್ಲ; ಆತ ಒಂದೇ ಒಂದು ದಿನಕ್ಕೂ ಯಾವುದೇ ಪತ್ರಿಕೆ ತರಿಸುತ್ತಿರಲಿಲ್ಲ. “ಯಾಕೆ ತರಿಸಲೋ? ಅದರಲ್ಲಿ ಏನಿರುತ್ತೆ? ಯಾರು ಮುಖ್ಯಮಂತ್ರಿಯಾದರೆ ನನಗೇನು? ಅವನು ಬದಲು ಇನ್ಯಾರೋ ಮುಖ್ಯಮಂತ್ರಿಯಾದರೆ ನಂಗೇನು?" ಅನ್ನುತ್ತಿದ್ದ. ಜನ್ಮದಲ್ಲಿ ಆತ ದಿನಪತ್ರಿಕೆ ಅಥವಾ ಮ್ಯಾಗಝೀನು ಮನೆಗೆ ತರಿಸುತ್ತಿರಲಿಲ್ಲ. ತುಂಬ ಹಿಂದೆ ಆತ ‘ರೀಡರ್ಸ್ ಡೈಜೆಸ್ಟ್’ ಓದುತ್ತಿದ್ದುದು ನನಗೆ ನೆನಪಿದೆ. ಮುಂದೆ ಆತ ಅದನ್ನೂ ಬಿಟ್ಟ. ಆದರೆ ಪ್ರಸನ್ನಣ್ಣನ ಬಗ್ಗೆ ನನಗೆ ತುಂಬ ಇಷ್ಟವಾದ ಒಂದು ಸಂಗತಿಯೆಂದರೆ ಆತ ರಿಟೈರ್ ಆದಮೇಲೆ ಒಬ್ಬ guideನನ್ನು ಹುಡುಕಿಕೊಂಡು ಮಾನಸ ಗಂಗೋತ್ರಿಯಲ್ಲಿ ಶುದ್ಧ ಎಳೇ ಹುಡುಗನಂತೆ ‘ಪಿಎಚ್‌ಡಿ’ಗಾಗಿ ಓದತೊಡಗಿದ. ಮೈಸೂರಿನ ಅರಸರ ಕಾಲದ ‘ದೇವದಾನ’ ಭೂಮಿಯ ಬಗ್ಗೆ ಶ್ರದ್ಧೆಯಿಂದ ರಿಸರ್ಚ್ ಮಾಡಿ ಡಾಕ್ಟರೇಟ್ ಪದವಿ ಪಡೆದ. ಅದು ರಿಟೈರ್‌ಮೆಂಟ್ ಆದ ನಂತರ ಒಬ್ಬ ಮನುಷ್ಯ ಮಾಡಬಹುದಾದ ಸಾಹಸವೇನಲ್ಲ. ಡಾಕ್ಟರೇಟ್ ಡಿಗ್ರಿ ಪಡೆದು ಆತನಿಗೆ ಆಗಬೇಕಾದದ್ದು ಏನೂ ಇರಲಿಲ್ಲ. ಇಷ್ಟೇ ಸಂಭ್ರಮದಿಂದ ನಾನು ಹೇಳಿಕೊಳ್ಳಬಲ್ಲ ಸಂಗತಿ ಅಂದರೆ, ತನ್ನ ಎಪ್ಪತ್ತನೆಯ ವಯಸ್ಸಿನಲ್ಲಿ ನನ್ನ ಅತ್ತಿಗೆ M.Phil ಮಾಡಿ ಮುಗಿಸಿದ್ದು

ಅಂಥ ಪ್ರಸನ್ನಣ್ಣನಿಗೆ ಕೆಲ ವರ್ಷಗಳ ಹಿಂದೆ ಹೃದಯಾಘಾತವಾಯಿತು. ತೆರೆದ ಹೃದಯದ ಸರ್ಜರಿಯೂ ಆಯಿತು. ಅದಾದ ಅನೇಕ ವರ್ಷಗಳ ನಂತರ, ಆತನ ಮದುವೆಯ ಆನಿವರ್ಸರಿಯ ದಿನವೇ ಅಣ್ಣನಿಗೆ ಎರಡನೇ ಹೃದಯಾಘಾತ ಆಯಿತು. ಇದರೊಂದಿಗೆ, ಆತನಿಗೆ ಡಯಾಬಿಟೀಸ್ ಕಾಡತೊಡಗಿತು. ಆದರೂ ಆ ಶಿಸ್ತುಗಾರ ತನ್ನ ಖಾಯಿಲೆಗಳನ್ನು ನಿಯುಂತ್ರಣದಲ್ಲಿಟ್ಟುಕೊಂಡಿದ್ದ. ಆತನಿಗೆ ಎಂಬತ್ತು-ಎಂಬತ್ತೆರಡು ವರ್ಷಗಳೂ ಆದವು. ಆಗಲೇ ಆತನಿಗೆ ಅಲ್‌ಝಮೈರ್ಸ್ ಅಥವಾ ಪಾರ್ಕಿನ್‌ಸನ್ಸ್ ಖಾಯಿಲೆಯಾಯಿತು. ಇದು ಸಾಲದೆಂಬಂತೆ ಭಯಂಕರ ಮರೆವು ತಂದಿಡುವಂತಹ ಡಿಮೆನ್ಷಿಯಾ ಖಾಯಿಲೆ ಕಾಣಿಸಿಕೊಂಡಿತು. ಆ ಖಾಯಿಲೆಯ ಬಹುದೊಡ್ಡ ಸಂಗತಿಯೆಂದರೆ ಅವರಿಗೆ ಅವರೇ ಮರೆತುಹೋಗುತ್ತಾರೆ. ಮಾತು-ವರ್ತನೆ ಎಲ್ಲವೂ ಅಯೋಮಯ. ಹಾಗೆ ನರಳಿ ಅನುಭವಿಸುವುದಕ್ಕಿಂತ ‘ಹೋಗಿಬಿಡುವುದೇ ಮೇಲು’ ಎಂಬ ಭಾವನೆ ಮನೆಮಂದಿಗೆ ಬಂದುಬಿಡುತ್ತದೆ. ಅಣ್ಣ ಕೆಲವು ತಿಂಗಳು ಆ ಸ್ಥಿತಿಯಲ್ಲಿ ಇದ್ದ. ಆತನನ್ನು ರತ್ನಮ್ಮತ್ತಿಗೆ, ಎರಡನೆಯ ಮಗ ಮಧು ಚೆನ್ನಾಗಿಯೇ ನೋಡಿಕೊಂಡರು. ಅಮೆರಿಕದಿಂದ ಒಮ್ಮೆ ಮನೋಹರ ಕೂಡ ಬಂದಿದ್ದ. ತುಂಬ ವರ್ಷಗಳಿಂದ ಆ ಮನೆಗೆ ನಿಷ್ಠನಾಗಿರುವ ‘ತಿರುಪಾಲು’ ಎಂಬ ಹುಡುಗ ಕೂಡ ಅಣ್ಣನಿಗೆ ಶ್ರದ್ಧೆಯಿಂದ ಸೇವೆ ಮಾಡಿದ. ಮೊನ್ನೆ ಲಲಿತಾ ಫೋನ್ ಮಾಡಿ ‘ಪ್ರಸನ್ನಣ್ಣ ಹೋದರಂತೆ’ ಅಂದಳು. ನಂತರ ಮೈಸೂರಿಗೇ ಹೋಗಿ ಅತ್ತಿಗೆಯನ್ನು ಕಂಡು ಬಂದಳು.

ಅಣ್ಣನ ಸಾವು ನನ್ನನ್ನು ತೀರಾ ಒಂದು ಆಘಾತವಾಗಿ ಕಾಡಲಿಲ್ಲ. It was expected. ಕೀರ್ತಿಯ ಸಾವು, ಮಾಧೂ ಸಾವು ನಿಜಕ್ಕೂ ನನ್ನನ್ನು ಆಘಾತಕ್ಕೆ ಈಡು ಮಾಡಿದ್ದವು. ಒಂದು ಏನು ಅಂದರೆ ಪ್ರಸನ್ನಣ್ಣ ನನ್ನನ್ನು ಸಾಕಿದವನು. ಸಲುಹಿದವನು. ಅಂಥವನು ಹೋಗೇಬಿಟ್ಟ ಅಂದರೆ, ಮನಸ್ಸು ಮ್ಲಾನಗೊಳ್ಳುತ್ತದೆ. ಒಮ್ಮೊಮ್ಮೆ ವಿಪರೀತ ನೆನಪಾಗಿಬಿಡುತ್ತಾನೆ. ಹೇಗಾದರೂ ಬಿಡುವು ಮಾಡಿಕೊಂಡು ಮೈಸೂರಿಗೆ ಹೋಗಿ ಅತ್ತಿಗೆಯನ್ನು ಕಾಣಬೇಕು. ಆಕೆಗೂ ಬಹುಶಃ ಎಂಬತ್ತಾಗಿರಬೇಕು ಅಥವಾ ಕೊಂಚ ಕಡಿಮೆಯೇನೋ?

ಇವೆಲ್ಲ ಸಂಗತಿಗಳನ್ನೂ ನೆನಪಿನ ಕುಟ್ಟಣಿಗೆಗೆ ಹಾಕಿ ಕುಟ್ಟುತ್ತಾ ಕುಳಿತಾಗಲೇ ಲೇಟೆಸ್ಟ್ ಸಾವಿನ ಸುದ್ದಿ ಬಂತು. ನಮ್ಮ ಮೀಸೆ ರಂಗಣ್ಣ ತೀರಿಕೊಂಡುಬಿಟ್ಟ. ಆತ ಪತ್ರಕರ್ತ. ಏನು ಬರೆದ, ಏನು ಬಿಟ್ಟ ಎಂಬುದು ಕೇಳಲೇಬಾರದ ಪ್ರಶ್ನೆ. ಆತ ಒಬ್ಬ ವ್ಯಕ್ತಿಯಾಗಿ ನಮ್ಮೆಲ್ಲರೊಂದಿಗೆ ವ್ಯವಹರಿಸಿದ್ದನ್ನು ನೆನಪು ಮಾಡಿಕೊಂಡರೆ I feel sad. ಎದುರಿಗೆ ಕಾಣಿಸಿದರೆ ಸಾಕು; ಆತ್ಮೀಯವಾಗಿ ಅಪ್ಪಿಕೊಂಡು, “ದೇವರು ಚೆನ್ನಾಗಿ ನೋಡಿಕೊಳ್ಳಲಿ; God bless you" ಅನ್ನುತ್ತಿದ್ದ. ಏನೇ ಸಭೆ ಸಮಾರಂಭಗಳಾದರೂ ನನ್ನಲ್ಲಿಗೆ ರಂಗಣ್ಣ ಬರುತ್ತಿದ್ದ. ಅದೇ ಶುಚಿಯಾದ ನಗೆ, ಅದೇ ಹುರಿಮೀಸೆ. ಮೊನ್ನೆ ಎಲ್ಲಿಂದಲೋ ತನ್ನtwo wheeler ಮೇಲೆ ಬರುತ್ತಿದ್ದನಂತೆ. ಬಹುಶಃ ತುಂಬ massive ಆಗಿಯೇ ಹೃದಯಾಘಾತವಾಗಿರಬೇಕು. ರಸ್ತೆಯ ಮೇಲೆಯೇ ಬಿದ್ದು ತೀರಿಕೊಂಡುಬಿಟ್ಟ. ನನ್ನೊಬ್ಬನ ಮಾತು ಬಿಡಿ; ಇಡೀ ಪತ್ರಿಕಾ ಪ್ರಪಂಚ ಮೀಸೆ ರಂಗಣ್ಣನ ನಿಧನವಾರ್ತೆ ಕೇಳಿ ಪೆಚ್ಚಾಗಿದೆ. ಇಂಥ ಸಾವುಗಳೆಲ್ಲ ತರ್ಕಕ್ಕೆ ನಿಲುಕುವಂಥವಲ್ಲ. ಯಾರು ನಮ್ಮೊಂದಿಗೆ ಎಷ್ಟು ಹೆಜ್ಜೆ ಹಾಕುತ್ತಾರೋ ಬಲ್ಲವರ‍್ಯಾರು?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books