Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಸಜ್ಜನ ವಾಜಪೇಯಿಗೂ ಮೋಡಿಗಾರ ಮೋದಿಗೂ ಇರುವ ಸಾಮ್ಯತೆ ಗೊತ್ತಾ?

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಒಂದು ಘಟನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಷದ ಹಿರಿಯ ನಾಯಕರೊಬ್ಬರನ್ನು ಭೇಟಿ ಮಾಡಲು ಹೋದರು. ಅವರನ್ನು ಭೇಟಿ ಮಾಡಿ ಗೌರವಿಸಿ ಬರುವುದು ನರೇಂದ್ರ ಮೋದಿ ಉದ್ದೇಶ. ಹಾಗಂತಲೇ ಉಭಯ ಕುಶಲೋಪರಿ ನಡೆಸಿದ ನಂತರ ನರೇಂದ್ರ ಮೋದಿ ಅವರನ್ನು ನಮಸ್ಕರಿಸಲು ಮುಂದಾದರು. ಎಷ್ಟೇ ಆದರೂ ಹಿರಿಯ ನಾಯಕ. ಅಂತಹವರಿಗೆ ನಮಸ್ಕರಿಸದಿದ್ದರೆ ಹೇಗೆ? ಹಾಗಂತಲೇ ಮೋದಿ ನಮಸ್ಕರಿಸಲು ಮುಂದಾದರು. ಆದರೆ ಅದೇನು ಸಿಟ್ಟು ಬಂತೋ? ಆ ನಾಯಕರು ರಪ್ಪಂತ ಪಕ್ಕಕ್ಕೆ ತಿರುಗಿಬಿಟ್ಟರು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಮ್ಮನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಿಲ್ಲ. ಹೋಗಲಿ, ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿಯೂ ನೇಮಕ ಮಾಡಲಿಲ್ಲ ಎಂಬುದು ಅವರ ಸಿಟ್ಟು.

ಅದನ್ನು ನೋಡಿದ ಮೋದಿ ತಲೆ ಎತ್ತಿ ಹೇಳಿದರಂತೆ: ನಿಮ್ಮ ಸಿಟ್ಟು ನನಗೆ ಅರ್ಥವಾಗುತ್ತದೆ. ಆದರೆ ನಾನೂ ದೇಶ ನಡೆಸಬೇಕಲ್ಲ? ಹೀಗಾಗಿ ನಿಮ್ಮ ಭೇಟಿಯನ್ನೇ ಆಶೀರ್ವಾದ ಅಂತ ಭಾವಿಸುತ್ತೇನೆ. ಹೀಗೆ ಹೇಳಿದ ಮೋದಿ ನಗುನಗುತ್ತಾ ಹೊರ ನಡೆದರು. ಈ ಘಟನೆ ಮೋದಿಯಲ್ಲಿರುವ ಅಗ್ರೆಸಿವ್ ಗುಣ ಎಂತಹುದು ಎಂಬುದನ್ನು ತೋರಿಸುತ್ತದೆ. ಮೇಲ್ನೋಟಕ್ಕೆ ತುಂಬ ಜನ ಮೋದಿ ಬಂದರೇನೇ ಅಭಿವೃದ್ಧಿ ಆಗೋದು ಅಂತಲೋ, ಯುಪಿಎ ಸರ್ಕಾರ ಬಂದು ಹತ್ತು ವರ್ಷವಾಯಿತು, ಪದೇಪದೆ ಅವರೇ ಬಂದರೆ ಹೇಗೆ ಅಂತಲೋ ಯೋಚಿಸಿ ಮೋದಿಯನ್ನು ಬೆಂಬಲಿಸಿರಬಹುದು. ಆದರೆ ಯೋಚಿಸಿ ನೋಡಿ. ಮೋದಿಯಲ್ಲಿರುವ ಈ ಅಗ್ರೆಸಿವ್ ಗುಣವೇ ಅವರನ್ನು ಮೇಲೆ ಹಿಡಿದೆತ್ತಿದೆ. ಭಾರತದ ಮೇಲೆ ದಂಡೆತ್ತಿ ಬಂದ ಘೋರಿ ಮಹಮ್ಮದ್ ಇರಬಹುದು, ಘಜ್ನಿ ಮಹಮ್ಮದ್ ಇರಬಹುದು, ಚಂಘೇಜ್ ಖಾನ್ ಇರಬಹುದು, ಬಾಬರ್ ಇರಬಹುದು. ಇವರೆಲ್ಲ ಯಾರನ್ನು ತಮ್ಮ ಎದುರಾಳಿ ಅಂತ ಭಾವಿಸಿದರೋ, ಅಂತಹವರಿಗೆ ಎರಡನೇ ಅವಕಾಶವನ್ನೇ ಕೊಡುತ್ತಿರಲಿಲ್ಲ. ಶತ್ರುವಿಗೆ ಒಂದು ಸಲ ಅವಕಾಶ ಕೊಟ್ಟರೆ ಆತ ತನ್ನೆಲ್ಲ ಬಲವನ್ನು ಕ್ರೋಢೀಕರಿಸಿಕೊಂಡು ಬಂದು ತಲೆ ನೋವು ಸೃಷ್ಟಿಸುತ್ತಾನೆ. ಪರಿಣಾಮವಾಗಿ ನಮ್ಮ ಕುತ್ತಿಗೆಯೇ ಉರುಳಬಹುದು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಯುದ್ಧದ ಸಂದರ್ಭದಲ್ಲಿ ಅದನ್ನವರು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು.

ಇತಿಹಾಸದ ಪುಸ್ತಕಗಳನ್ನು ಒಮ್ಮೆ ಕೆದಕಿ ನೋಡಿ. ಯುದ್ಧದ ವಿಷಯದಲ್ಲಿ ಶತ್ರುಗಳೊಡನೆ ಧಾರಾಳತನ ತೋರಿಸಿ, ಅವರನ್ನು ಕ್ಷಮಿಸಿ, ಹಾಲು-ಹಣ್ಣು ಕೊಟ್ಟು ಮನೆಗೆ ಕಳಿಸಿದ ಬಹುತೇಕ ದೊರೆಗಳು ಆನಂತರ ಶತ್ರುಗಳಿಂದ ನೆಲ ಕಚ್ಚಿದ್ದಾರೆ. ವಾಜಪೇಯಿ ಈ ರಾಷ್ಟ್ರ ಕಂಡ ಅತ್ಯಂತ ದೊಡ್ಡ ನಾಯಕ. ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟ ಮಹಾನ್ ವ್ಯಕ್ತಿ. ಆದರೆ ಕರ್ನಾಟಕದಲ್ಲಿ ಎಸ್ಸೆಂ ಕೃಷ್ಣ ಸರ್ಕಾರ ನೆಮ್ಮದಿಯಿಂದ ಉಸಿರಾಡಲು ಅವಕಾಶ ಮಾಡಿಕೊಟ್ಟರು. ಹೀಗೆ ಉಳಿದುಕೊಂಡ ಕೃಷ್ಣ ಐಟಿ-ಬಿಟಿ ಎನ್ನುತ್ತಾ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗವನ್ನು ಓಲೈಸಿದರು. ಅದೇ ಕಾಲಕ್ಕೆ ದಿಲ್ಲಿಯ ಕಾಂಗ್ರೆಸ್ ನಾಯಕರು ಒಂದೊಂದೇ ರಾಜ್ಯಗಳನ್ನು ಮರಳಿ ಗಳಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಅದಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಪೂರೈಸಿದರು ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡಿತು. ತದ ನಂತರ ಕೇಂದ್ರ ವಿದೇಶಾಂಗ ಸಚಿವರನ್ನಾಗಿಯೂ ಮಾಡಿತು. ಹೀಗೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರು ಕೊಟ್ಟ ನೆರವಿನ ಕಾರಣಕ್ಕಾಗಿಯೇ ಕಾಂಗ್ರೆಸ್ ಹೈಕಮಾಂಡ್ ಚಿಗಿತುಕೊಂಡಿತು. ಡಜನ್‌ಗೂ ಹೆಚ್ಚು ರಾಜ್ಯಗಳಲ್ಲಿ ಮರಳಿ ಅಧಿಕಾರ ಹಿಡಿಯಿತು.

ಆದರೆ ಮೋದಿ-ಅಮಿತ್ ಷಾ ಜೋಡಿ ಹಾಗಲ್ಲ. ಕಳೆದ ಹಲ ತಿಂಗಳಿನಿಂದ ಅವರನ್ನು ನೋಡುತ್ತಿದ್ದೇನೆ. ಒಂದು ಬಗೆಯ ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಅನ್ನುತ್ತೇವಲ್ಲ? ಆ ಗುಣ ಅವರಲ್ಲಿದೆ. ಎದುರಾಳಿಗೆ ಒಂದೇ ಒಂದು ಅವಕಾಶವನ್ನು ಬಿಟ್ಟು ಕೊಡಬಾರದು ಎಂಬ ಮನೋಭಾವವಿದೆ. ಹೀಗಾಗಿಯೇ ಎದುರಾಳಿಗಳನ್ನು ಮಣಿಸಲು ಇಬ್ಬರೂ ಪ್ಲಾನು ಹಾಕುತ್ತಲೇ ಇರುತ್ತಾರೆ. ಅದಕ್ಕಾಗಿಯೇ ಒಂದರ ಹಿಂದೊಂದು ರಾಜ್ಯಗಳು ಬಿಜೆಪಿಯ ಕೈ ಸೇರುತ್ತಿವೆ. ಇದೀಗ ಕರ್ನಾಟಕದಲ್ಲಿರುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವನ್ನೂ ನೆಲಕ್ಕೆ ಬೀಳಿಸಿ, ರಾಷ್ಟ್ರಪತಿ ಆಳ್ವಿಕೆ ಬರುವಂತೆ ಮಾಡಲು ಸಾಧ್ಯವಾ ಅಂತ ನೋಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಕೂಡ ಅದೇ ರೀತಿ ಅಗ್ರೆಸಿವ್ ಆಗಿ ತಿರುಗೇಟು ನೀಡಲು ಹೊರಟಿದ್ದಾರೆ. ಜೆಡಿಎಸ್‌ನಲ್ಲಿ ದಂಗೆಯ ಗುಣ ಬೆಳೆಯುತ್ತಿರುವುದು ಇದೇ ಕಾರಣಕ್ಕಾಗಿ. ಆದರೆ ಒಂದಂತೂ ನಿಜ. ಈ ಹೋರಾಟ-ಪ್ರತಿ ಹೋರಾಟದಲ್ಲಿ ಮೋದಿ-ಅಮಿತ್ ಷಾ ಸಕ್ಸಸ್ ಆಗದೇ ಹೋಗಬಹುದು. ಆದರೆ ಸಿದ್ದರಾಮಯ್ಯನವರು ಎಸೆಂ ಕೃಷ್ಣ ಅವರಷ್ಟು ನಿರಾಳವಾಗಿರಲು ಅವರು ಬಿಡುವುದಿಲ್ಲ.

ಇನ್ ಫ್ಯಾಕ್ಟ್ ಎಸ್ಸೆಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನರಹಂತಕ ವೀರಪ್ಪನ್ ನಮ್ಮ ವರನಟ ಡಾ.ರಾಜ್‌ಕುಮಾರ್ ಅವರನ್ನು ಅಪಹರಿಸಿ ತಲೆ ನೋವು ತಂದ. ಕಾವೇರಿ ನದಿ ನೀರಿನ ವಿವಾದದಲ್ಲಿ ಸುಪ್ರೀಂಕೋರ್ಟ್ ನಮಗೆ ಛೀಮಾರಿ ಹಾಕಿತು. ಬರಗಾಲ ಎಂಬುದು ಬಿಟ್ಟೂ ಬಿಡದಂತೆ ಕಾಡಿ ಹಣ್ಣು ಮಾಡಿತು. ಈ ಎಲ್ಲ ಪರಿಸ್ಥಿತಿಗಳನ್ನು ಕೃಷ್ಣ ಎದುರಿಸಿದರು. ಹಾಗೆ ಎದುರಿಸಲು ಸಾಧ್ಯವಾಗಿದ್ದು ವಾಜಪೇಯಿ ಅವರ ರಾಜಕೀಯ ನೀತಿಯಿಂದ. ವಾಜಪೇಯಿ ಅಪ್ಪಿತಪ್ಪಿಯೂ ಇಂತಹ ಸಂದರ್ಭವನ್ನು ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸಲು ಬಳಸಿಕೊಳ್ಳಲಿಲ್ಲ. ಒಂದು ವೇಳೆ ಬಳಸಿಕೊಳ್ಳಲು ಅವರು ಮುಂದಾಗಿದ್ದರೆ ಎಸ್ಸೆಂ ಕೃಷ್ಣ ನೇತೃತ್ವದ ಸರ್ಕಾರ ಇಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ. ವಾಜಪೇಯಿ ಅಂತಹ ಅವಕಾಶವನ್ನು ಕೃಷ್ಣ ಸರ್ಕಾರಕ್ಕೆ ಕೊಟ್ಟಿದ್ದೇ ತಪ್ಪು ಎನ್ನುವುದು ಮೋದಿ-ಅಮಿತ್ ಷಾ ಲೆಕ್ಕಾಚಾರ. ಟೈಮು ನೋಡಿ ಬಡಿದು ಹಾಕಿ ಬಿಟ್ಟಿದ್ದರೆ, ಕನಿಷ್ಠ ಪಕ್ಷ ಕಾಂಗ್ರೆಸ್ ಹೈಕಮಾಂಡ್‌ಗೆ ಅವರು ಯಾವ ನೆರವೂ ನೀಡಲು ಸಾಧ್ಯವಾಗದಂತೆ ಮಾಡಿದ್ದರೆ ಆಟವೇ ಬೇರೆ ಇರುತ್ತಿತ್ತು. ಶಸ್ತ್ರಾಸ್ತ್ರಗಳನ್ನು ಒದಗಿಸಿದರೆ ತಾನೇ ಕಾಂಗ್ರೆಸ್ ಯುದ್ಧ ಮಾಡುವುದು?

ಅಂತಹ ಯುದ್ಧ ಮಾಡಲು ಶಸ್ತ್ರಾಸ್ತ್ರವನ್ನೇ ಪೂರೈಸಲು ಅವಕಾಶ ನೀಡದೇ ಹೋಗಿದ್ದರೆ ೨೦೦೪ರಲ್ಲೂ ನಿಶ್ಚಿತವಾಗಿ ಎನ್‌ಡಿಎ ಅಧಿಕಾರಕ್ಕೆ ಬರುತ್ತಿತ್ತು ಎಂದು ಈ ಜೋಡಿ ಭಾವಿಸುತ್ತಿದೆ. ಹೀಗಾಗಿ ಈ ಜೋಡಿ ಯಾವ ಮಟ್ಟಿಗೆ ಅಗ್ರೆಸಿವ್ ಆಗಿದೆ ಎಂದರೆ ನೆರೆಯ ಚೀನಾ, ಸ್ನೇಹ ನಟಿಸಿ ಬೆನ್ನಲ್ಲೇ ಇರಿಯುವ ಅಮೆರಿಕದಂತಹ ರಾಷ್ಟ್ರಗಳ ವಿಷಯದಲ್ಲೂ ಅದು ಬಹಳ ಎಚ್ಚರಿಕೆಯಿಂದಿದೆ. ಸ್ನೇಹದ ಮಾತನಾಡಲು ಚೀನಾದ ಕ್ಸಿಪಿಂಗ್ ಇಲ್ಲಿಗೆ ಬಂದರಲ್ಲ? ಆಗ ಭಾರತ-ಚೀನಾ ಗಡಿಯಲ್ಲಿ ಚೀನಾ ಸೈನಿಕರ ಉಪಟಳ ಶುರುವಾಯಿತು. ಸಹಜ ಸಂದರ್ಭಗಳಲ್ಲಿ ಭಾರತದ ಪ್ರಧಾನಿಯಾಗಿದ್ದವರು ಚೀನಾದ ಕ್ಸಿಪಿಂಗ್ ಜೊತೆ ಸ್ನೇಹ ಬೆಳೆಯುವ ಕಾಲದಲ್ಲಿ ಹೀಗೆ ಮಾಡಿದರೆ ಹೇಗೆ? ಅನ್ನಬೇಕು. ಡೋಂಟ್ ವರಿ, ಎಲ್ಲ ಸರಿ ಮಾಡುತ್ತೇನೆ ಅಂತ ಅವರು ಹೇಳಬೇಕು. ಇದು ಮುಂಚಿನಿಂದಲೂ ನಡೆದುಕೊಂಡು ಬಂದ ನೀತಿ. ಆದರೆ ಮೋದಿ ಅವರು ಕ್ಸಿಪಿಂಗ್ ಜೊತೆ ಈ ವಿಷಯವನ್ನೇ ಎತ್ತಲಿಲ್ಲ. ಬದಲಿಗೆ ಉಭಯ ರಾಷ್ಟ್ರಗಳ ಮಧ್ಯೆ ಇರುವ ವ್ಯಾವಹಾರಿಕ ಸಂಬಂಧಗಳ ಕುರಿತು ಮಾತನಾಡಿದರು, ವಾಪಸ್ ಕಳಿಸಿದರು. ಆ ಕಡೆ ಭಾರತದ ಗಡಿ ಭದ್ರತಾ ಪಡೆಯ ಯೋಧರು ಚೀನಾ ಸೈನಿಕರ ಮೇಲೆ ಮುಗಿಬಿದ್ದರು. ಇದನ್ನು ಚೀನಾ ನಿರೀಕ್ಷಿಸಿರಲಿಲ್ಲ.

ಮೊನ್ನೆಯೂ ಅಷ್ಟೇ. ಗಡಿ ಭಾಗದ ಎರಡು ಕಡೆ ನುಗ್ಗಲು ಚೀನಿ ಸೈನಿಕರು ಯತ್ನಿಸಿದರೆ ಗಡಿ ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪಡೆ ಮುಲಾಜೇ ನೋಡದೆ ಇಕ್ಕಲು ಶುರು ಮಾಡಿತು. ಯಥಾ ಪ್ರಕಾರ ಭಾರತದ ಸೈನಿಕರಿಂದ ಈ ರೀತಿಯ ಅಗ್ರೆಸಿವ್ ಗುಣವನ್ನು ಚೀನಾ ನಿರೀಕ್ಷೆ ಮಾಡಿರಲಿಲ್ಲ. ಏಷ್ಯಾ ಖಂಡದ ಹಿರಿಯಣ್ಣನಾದ ತನಗೆ ಭಾರತ ತಲೆ ಬಾಗುತ್ತದೆ ಎಂದು ಅದು ಭಾವಿಸಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಚೀನಾದ ಮಹಾನ್ ನಾಯಕ ಮಾವೋತ್ಸೆ ತುಂಗ್, ಬಂದೂಕಿನ ತುದಿಯಲ್ಲಿ ಶಾಂತಿ ಇರುತ್ತದೆ ಎಂದ. ಈಗ ಅದರಲ್ಲಿ ನಂಬಿಕೆ ಇರುವ ನಾಯಕನೇ ದೇಶದ ಪ್ರಧಾನಿಯ ಜಾಗದಲ್ಲಿ ಕುಳಿತಿದ್ದಾರೆ. ಅಂದ ಹಾಗೆ ಗಡಿಯಲ್ಲಿ ಪಾಕಿಸ್ತಾನದವರೂ ಬಡ ಬಡ ಎಂದು ಗುಂಡು ಹಾರಿಸಲು ಶುರು ಮಾಡಿದರಲ್ಲ? ಅದರ ಹಿಂದಿದ್ದುದು ಅಮೆರಿಕದ ಕುಮ್ಮಕ್ಕು. ಅರೇ, ನಮ್ಮನ್ನು ಬಿಟ್ಟು ಜಪಾನು, ಚೀನಾ, ವಿಯೆಟ್ನಾಂ ಅಂತ ಮಾತನಾಡಲು ಹೋಗುತ್ತೀರಾ? ಸ್ವಂತ ಕಾಲ ಮೇಲೆ ನಿಲ್ಲಲು ಬಯಸುತ್ತೀರಾ? ತಡೀರಿ ನಿಮಗೆ ಪಾಠ ಕಲಿಸುತ್ತೇವೆ ಎಂದುಕೊಂಡ ಅಮೆರಿಕದವರು ಪಾಕಿಸ್ತಾನದ ಗಡಿ ಭಾಗದಲ್ಲಿ ಕಿರಿ ಕಿರಿ ಶುರು ಮಾಡಿದರು. ಆಗ ಭಾರತದ ಗಡಿ ಭದ್ರತಾ ಪಡೆಯವರು ಇಕ್ಕಿದರು ನೋಡಿ. ಒಂದಲ್ಲ, ಎರಡಲ್ಲ ಪಾಕಿಸ್ತಾನದವರು ಎಷ್ಟು ರೌಂಡು ಗುಂಡು ಹಾರಿಸಿದರೋ? ಅದರ ಮೂರು ಪಟ್ಟು ಗುಂಡು ಹಾರಿಸಿ ಕಕ್ಕಾಬಿಕ್ಕಿಯಾಗುವಂತೆ ಮಾಡಿಬಿಟ್ಟರು.

ಸಾಮಾನ್ಯವಾಗಿ ಪಾಕಿಸ್ತಾನ ಗುಂಡಿನ ದಾಳಿ ಶುರು ಮಾಡುತ್ತದೆ ಎಂದರೆ ಉಗ್ರರನ್ನು ಭಾರತದೊಳಕ್ಕೆ ನುಸುಳಿಸಲು ಬಯಸುತ್ತದೆ. ಆದರೆ ಉಗ್ರರು ಒಳ ನುಸುಳುವುದಿರಲಿ, ಇನ್ನು ಸ್ವಲ್ಪ ದಿನ ತಂಟೆ ನಡೆದರೆ ಭಾರತದ ಸೈನಿಕರು ದೇಶದ ಒಳಗೇ ನುಗ್ಗಿ ಬಿಡುತ್ತಾರೆ ಎಂಬ ಹೆದರಿಕೆ ಪಾಕಿಸ್ತಾನಕ್ಕೆ ಶುರುವಾಯಿತು. ಆಗ ಬಾಲ ಮುದುರಿಕೊಂಡು ಅಲ್ಲಿನ ಸೈನಿಕರು ತೆಪ್ಪಗಾದರು. ಹಿಂದೆ ಕಾಶ್ಮೀರದ ವಿಷಯದಲ್ಲಿ ಮಹಾರಾಜಾ ಹರಿಸಿಂಗ್ ಜೊತೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಅಲ್ಲಿಗೆ ನುಗ್ಗಿದ ಪಾಕಿಸ್ತಾನಿ ಸೈನಿಕರು ಮಾಡಬಾರದ ಕೆಲಸ ಮಾಡಿದ್ದರು. ಅತ್ಯಾಚಾರ, ಅನಾಚಾರ, ಹಿಂಸೆ ಮಾಡಿದ್ದರು. ಆಗ ಸರ್ದಾರ್ ವಲ್ಲಭಭಾಯ್ ಪಟೇಲ್ ಥರದವರಿದ್ದರು. ಸೇನೆಯನ್ನು ಕಾಶ್ಮೀರಕ್ಕಷ್ಟೇ ಅಲ್ಲ, ಪಾಕಿಸ್ತಾನದ ಗಡಿಯೊಳಗೂ ನುಗ್ಗಿಸಿದರು. ಆಗ ಜವಾಹರಲಾಲ್ ಗುಲಾಬಿ ಹೂವು ತೋರಿಸಿ, ಶಾಂತಿ, ಶಾಂತಿ ಎನ್ನದೇ ಹೋಗಿದ್ದರೆ ಪಾಕಿಸ್ತಾನ ಅವತ್ತು ಬೀಳುವ ಹೊಡೆತಕ್ಕೆ ನೆಲಕಚ್ಚಿ ಹೋಗುತ್ತಿತ್ತು. ೧೯೭೧ರಲ್ಲೂ ಇಂದಿರಾ ಗಾಂಧಿ ಹೀಗೇ ಮಾಡಿದರು. ಬಾಂಗ್ಲಾ ಉದಯಕ್ಕಾಗಿ ನಡೆದ ಯುದ್ಧದ ಸಂದರ್ಭದಲ್ಲಿ ಎರಡು ಲಕ್ಷ ಪಾಕಿಸ್ತಾನಿ ಸೈನಿಕರನ್ನು ಸೆರೆ ಹಿಡಿಯಲಾಗಿತ್ತು. ಆದರೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಇಂದಿರಾ ಗಾಂಧಿ ಈ ಪಾಪಿ ಪಾಕಿ ಸೈನಿಕರನ್ನು ಬಿಡುಗಡೆ ಮಾಡಬೇಕಾಯಿತು.

ಈಗ ಇನ್ನೂ ಟಫ್ ಆದ ಮೋದಿ-ಅಮಿತ್ ಷಾ ಜೋಡಿ ಬಂದು ಕುಳಿತಿದೆ. ಶತ್ರುಗಳ ವಿಷಯದಲ್ಲಿ ದಯೆ-ದಾಕ್ಷಿಣ್ಯ ಇಲ್ಲದ ಜೋಡಿ ಅದು. ಒಂದು ರೀತಿಯಿಂದ ನೋಡಿದರೆ ಭಾರತೀಯರಲ್ಲೇ ಇಂತಹ ಗುಣ ಬೆಳೆಯಬೇಕು. ಇಂತಹ ಗುಣ ಇಲ್ಲದ್ದರಿಂದ ದೇಶ ನೂರಾರು ವರ್ಷಗಳ ಕಾಲ ಪರಕೀಯರ ದೌರ್ಜನ್ಯವನ್ನು ಅನುಭವಿಸಬೇಕಾಯಿತು. ಹುಷಾರಾಗಿರಿ, ಸ್ವಲ್ಪ ಹೆಚ್ಚು ಕಡಿಮೆಯಾದರೆ ನಮ್ಮಲ್ಲಿರುವ ಆಟಂಬಾಂಬುಗಳನ್ನು ನಿಮ್ಮ ಮೇಲೆ ಹಾಕಿಬಿಡುತ್ತೇವೆ ಎಂದು ಹೆದರಿಸಲು ಪಾಕಿಸ್ತಾನ ಮುಂದಾಯಿತು. ಆದರೆ ಆಟಂಬಾಂಬುಗಳು ನಮ್ಮಲ್ಲೂ ಸ್ಟಾಕಿವೆಯಲ್ಲ? ನೋಡೇ ಬಿಡೋಣ ಎಂಬಂತೆ ಯಾವಾಗ ಮೋದಿ-ಅಮಿತ್ ಷಾ ವರ್ತಿಸಿದರೋ? ಆಗ ಪಾಕಿಸ್ತಾನ ತಣ್ಣಗಾಯಿತು. ಇಂತಹ ಅಗ್ರೆಸಿವ್ ಗುಣ ಇದ್ದುದರಿಂದಲೇ ಅಮೆರಿಕ ಜಗತ್ತಿನ ಹಿರಿಯಣ್ಣ. ಯುದ್ಧವನ್ನೂ ಅದು ತನ್ನ ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತದೆ. ನಾವೀಗ ಇಂತಹ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಬದುಕುಳಿಯಲು, ಬೆಳೆಯಲು ಬೆಲೆ ತೆರಲೇಬೇಕು ಅನ್ನುವ ಕಾಲಘಟ್ಟದಲ್ಲಿದ್ದೇವೆ. ಇಲ್ಲ, ಆಗಲ್ಲ ಎನ್ನಲು ಸಾಧ್ಯವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books