Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಯಾವತ್ತು ಯಾರಿಗೂ ಹೆದರದವನು ಅವತ್ತು ಜೀವಕ್ಕೆ ಹೆದರಿಬಿಟ್ಟೆ!

ಏನಾಗಿತ್ತು?
ಗೊತ್ತಿಲ್ಲ. ಆದದ್ದು ದೇಹಕ್ಕಾ? ಮನಸ್ಸಿಗಾ? No idea. ಐದು ದಿನಗಳ ಹಿಂದೆ ಮನೆಯಿಂದ ಬಂದು ಮೆಟ್ಟಿಲೇರಿದವನು ಸತತ ಐದು ದಿನ ಆಫೀಸಿನಿಂದ ಹೊರಬೀಳಲಿಲ್ಲ. ಹೀಗೆ ನಾನು ಅವಿತುಕೊಂಡವನಂತೆ ಕೂಡುವುದು ನನಗೂ ಹೊಸತಲ್ಲ, ನನ್ನ ಆಫೀಸಿನವರಿಗೂ ಹೊಸತಲ್ಲ. ಆದರೆ ಪ್ರತೀ ಸಲ ಛೇಂಬರಿನ ಬಾಗಿಲು ಗಿಡಿದು ಕುಳಿತೆನೆಂದರೆ ಏನನ್ನಾದರೂ ಬರೆದು ಕೈಲಿ ಹಿಡಿದುಕೊಂಡೇ ಹೊರಬೀಳುತ್ತಿದ್ದೆ. ಐದು ದಿನ ಕೂತೆನೆಂದರೆ ನೂರು ಇನ್ನೂರು ಪುಟ ಬರೆದೆನೆಂದೇ ಅರ್ಥ. ಆದರೆ ಈ ಬಾರಿ ಹಾಗಾಗಲಿಲ್ಲ. ಬರೆಯುವ ಮಾತು ಅತ್ತಗಿರಲಿ, ನನ್ನ ಕೈಲಿ ಗಮನವಿಟ್ಟು ಹತ್ತು ಪುಟ ಓದಲಿಕ್ಕೂ ಆಗಲಿಲ್ಲ. ಹೊತ್ತಿಗೆ ಸರಿಯಾಗಿ ಮನೆಯವರು ಊಟ ಕಳಿಸುತ್ತಿದ್ದರು. ಕಾಫಿ, ಟೀ ಕಾಯಿಸಿಕೊಡಲು ನನಗೆ ಆಫೀಸಿನಲ್ಲಿ ಸಹಾಯಕರಿದ್ದಾರೆ. ತಿಂಡಿಯ ಹೆಸರಿನಲ್ಲಿ ಎರಡು ಸ್ಲೈಜ್ ಬ್ರೆಡ್ ತಿಂದರೂ ಆದೀತು. ಮನಸು ಸ್ಥಿಮಿತಕ್ಕೆ ಬಂದೀತು ಅಂತ ಒಂದಷ್ಟು ಸಂಗೀತ ಕೇಳಿದೆ. ನನ್ನ ಪ್ರೀತಿಯ ನಾಯಿಗಳೊಂದಿಗೆ ಟೆರೇಸಿನ ಮೇಲೆ ಆಟವಾಡಿದೆ. ಫೋನು ಆಫ್ ಮಾಡಿಟ್ಟು ಇಂಟರ್‌ನೆಟ್ ಮುಂದೆ ಸ್ಥಾಪಿತನಾದೆ. ಅದೇನು ಮಾಡಿದರೂ ಮನಸು ತಹಬಂದಿಗೆ ಬರಲೇ ಇಲ್ಲ. ನನಗೆ ದಿನಕ್ಕೆ ಇಂತಿಷ್ಟು ಪುಟ ಬರೆಯಬೇಕು ಎಂಬ ಅನಿವಾರ್ಯತೆ ಇದೆ. ಎರಡು ಪತ್ರಿಕೆಗಳನ್ನು ಸಂಭಾಳಿಸುವುದು ಸುಮ್ಮನೆ ಮಾತಲ್ಲ. ಸಹಾಯಕರು ಬರೆದದ್ದು ಅನೇಕ ಸಲ ನನಗೆ ಸರಿ ಬರುವುದಿಲ್ಲ. ಅದಿಷ್ಟನ್ನೂ ಕಸದ ಬುಟ್ಟಿಗೆ ಹಾಕಿ ನಾನೇ ಬರೆಯಲು ಕೂಡುತ್ತೇನೆ. ಕೆಲವೊಮ್ಮೆ ‘ಪತ್ರಿಕೆ’ ತಡವಾಗುವುದಕ್ಕೆ ನನ್ನ ಈ ಹಟಮಾರಿತನವೂ ಕಾರಣವಾಗುತ್ತದೆ. ಅಂಥದರಲ್ಲಿ ಐದು ದಿನ ಏನೂ ಕೆಲಸ ಮಾಡದೆ ಬಾಗಿಲಿಗೆ ಅಗುಳಿಯಿಟ್ಟುಕೊಂಡು ಕುಳಿತು ಬಿಟ್ಟರೆ ಹೇಗೆ?

“ನನಗೆ ಏನಾಗಿದೆ ಡಾಕ್ಟ್ರೇ?" ಅಂತ ಕೇಳುವ ಹೊತ್ತಿಗೆ ನನ್ನ ಕಣ್ಣಾಲಿಗಳು ತುಂಬಿ ಬಂದು ಗಂಟಲು ಗದ್ಗದಿತವಾಗಿತ್ತು. ಅವರ ಬಳಿಗೆ ಹೋಗಬೇಕೆಂಬ ನಿರ್ಧಾರವನ್ನು ಕೂಡ ಮುಂದಕ್ಕೆ ಹಾಕುತ್ತ ಬಂದಿದ್ದೆ. ಎರಡು ದಿನದಿಂದ ಸ್ನಾನ ಮಾಡಿರಲಿಲ್ಲ. ಕತ್ತಿನ ಮೇಲೆ ಎದ್ದ ಕುರವೊಂದು ವಿಪರೀತ ಹಿಂಸೆ ಕೊಡುತ್ತಿತ್ತು. ನಡೆದಾಡಿದರೆ ಕಾಲು ಭಾರ ಭಾರ. ರಕ್ತದ ಪರೀಕ್ಷೆ ಮಾಡಿದ ಡಾಕ್ಟರು ಕೊಂಚ sugar ಜಾಸ್ತಿಯಾಗಿದೆ ಅಂದರು. ಅವರು ಹೇಳಿದ ಮಾತ್ರೆಯೊಂದನ್ನು ಅದೇಕೋ ಬಿಟ್ಟುಬಿಟ್ಟಿದ್ದೆ. ಮತ್ತೆ ಅದೇ ಮಾತ್ರೆ ಬರೆದುಕೊಟ್ಟರು. ಆಸ್ಪತ್ರೆಯಿಂದ ಹಿಂತಿರುಗಿದವನು ಅದೇಕೋ ಅಂಗಳದಲ್ಲೇ ಕುರ್ಚಿ ಹಾಕಿಸಿಕೊಂಡು ಕುಳಿತುಬಿಟ್ಟೆ. ಆಫೀಸಿನೊಳಕ್ಕೆ ಹೋದರೆ ಮತ್ತೆ ಡಿಪ್ರೆಸ್ ಆಗಿ ಬಿಡುತ್ತೇನೆ ಅನ್ನಿಸುತ್ತಿತ್ತು. ಎದುರು ಮನೆಯ ಹುಡುಗಿ ಪೂಜಾ ಓಡಿ ಬಂದಳು. ‘ಪ್ರಾರ್ಥನಾ’ ಆರಂಭವಾದಾಗ ಅವಳು ಪುಟ್ಟ ಮಗು. ಈಗ ದೊಡ್ಡ ಹೆಂಗಸಿನಂತೆ ಬೆಳೆದುಬಿಟ್ಟಿದ್ದಾಳೆ. ಅವಳ ತಮ್ಮನನ್ನು ಕರೆತಂದು ತೋರಿಸಿದಳು. ಮಕ್ಕಳು ನನ್ನನ್ನು ಅದೇಕೆ ಅಷ್ಟು ಇಷ್ಟಪಡುತ್ತಾರೋ ಗೊತ್ತಿಲ್ಲ. ಅವರ ಮಧ್ಯೆ ಇದ್ದರೆ ನಾನೂ fresh ಆಗಿ ಬಿಡುತ್ತೇನೆ. ಅವರೆದುರಿಗೆ ನಾನು ಸಿಗರೇಟು ಸೇದುವುದಿಲ್ಲ. ಈ ವಿಷಯದಲ್ಲಿ ನಾನು ಹೆದರುವುದು ಮಕ್ಕಳಿಗೆ ಮಾತ್ರ. ಅವರು ತುಂಬ ಬೇಗ ನಮ್ಮನ್ನು ಅನುಕರಿಸುತ್ತಾರೆ. ಕೆಟ್ಟದ್ದು ಬಹಳ ಬೇಗ ಅವರ ಕಣ್ಣಿಗೆ ಬೀಳುತ್ತದೆ. ಮಗುವಿನೊಂದಿಗೆ ತುಂಬ ಹೊತ್ತು ಆಟವಾಡುತ್ತಿದ್ದವನು, ಅದಕ್ಕೆ ನಿದ್ರೆ ಬಂತು ಅನ್ನಿಸಿದಾಗ ಕಾರು ಹತ್ತಿ ಮನೆಗೆ ಹೊರಟೆ. ಊಟದ ಶಾಸ್ತ್ರ ಮಾಡಿದ್ದೇ ಬಂತು. ಒಂದು ಗಡದ್ದು ನಿದ್ರೆ.

ಬೆಳಗ್ಗೆ ಏಳುವ ಹೊತ್ತಿಗೆ ಮನಸು ಚಿಗರೆಮರಿ. ಒಂದೇ ಒಂದು ಪುಟ್ಟ ಮಾತ್ರೆ ಅಷ್ಟು ಬೇಗ ಮೈ ಮನಸ್ಸುಗಳಲ್ಲಿ ಬದಲಾವಣೆ ತರಬಹುದು ಅಂದುಕೊಂಡಿರಲಿಲ್ಲ. ಎದ್ದವನು ಸುಮ್ಮನೆ ಹೋಗಿ ಷವರ್‌ನ ಕೆಳಗೆ ನಿಂತೆ. ಹಾಡು ಗುನುಗಿಕೊಂಡೆ. ಒಂದು ಮೊಟ್ಟೆ, ಎರಡು ತುಂಡು ಬ್ರೆಡ್ ತಿಂದು, ಟೀ ಕುಡಿದು ಬಂದು ಬರೆಯಲು ಕುಳಿತರೆ-ಲೇಖನಿಗೆ ಯಮ ಸ್ಪೀಡು. ಇಂತಹ ಡಿಪ್ರೆಷನ್‌ಗಳನ್ನು ಹಿಂದೆ ತುಂಬ ಸಲ ಅನುಭವಿಸಿದ್ದೇನೆ. ಮೊದಲೆಲ್ಲ ಮನಸ್ಸು ಖಿನ್ನತೆಗೆ ಬಿದ್ದ ಕೂಡಲೆ ವಿಪರೀತ ಕುಡಿದುಬಿಡುತ್ತಿದ್ದೆ. ಮೀತಿ ಮೀರಿದ ಕುಡಿತ ಮತ್ತಷ್ಟು ಡಿಪ್ರೆಷನ್ನಿಗೆ ನೂಕುತ್ತಿತ್ತು. “ಇದು ವಿಷವರ್ತುಲದಂಥದು ರವ್ಯಾ. ಮನಸ್ಸಿಗೆ ಬೇಸರವಾಯ್ತು ಅಂತ ಕುಡಿಯೋದು, ಕುಡಿ ಕುಡಿದು ಬೇಸರಕ್ಕೊಳಗಾಗೋದು"ಅಂತ ಅಶೋಕ ಶೆಟ್ಟರ್ ಗದರಿಸಿದ್ದ. ಆದರೆ ಬದುಕಿನಲ್ಲಿ ಶಿಸ್ತು ಎಂಬುದು ಹೇಗೆ ಆರೋಗ್ಯವನ್ನು ಕಾಯ್ದಿಡುತ್ತದೆಯೋ, ಕೆಲವು ರೋಗಗಳು ಕೂಡ ಶಿಸ್ತನ್ನು, ಆ ಮೂಲಕ ಆರೋಗ್ಯವನ್ನು ಕಂಪಲ್ಸರಿಯಾಗಿ ಕಾದಿಡುತ್ತವೆ. ಅದಕ್ಕೆ ಡಯಾಬಿಟೀಸ್‌ಗಿಂತ ಬೇರೆ ಉದಾಹರಣೆ ಬೇಕಿಲ್ಲ.

ಹುಬ್ಬಳ್ಳಿಯಲ್ಲಿದ್ದಾಗ ನಮ್ಮ ಮನೆಗೆಲಸಕ್ಕೆ ಒಂದು ಅಜ್ಜಿ ಬರುತ್ತಿತ್ತು. ಆಕೆಯ ಹೆಸರು ಪಾರ್ವತಮ್ಮ. ನನ್ನ ತಾಯಿಯ ಹೆಸರು ಎಂಬ ಕಾರಣಕ್ಕೋ ಏನೋ, ಅಜ್ಜಿಯನ್ನು ಅನುಕಂಪದಿಂದ ಕಾಣುತ್ತಿದ್ದೆ. ಅಜ್ಜಿಯ ದನಿ ವಿಪರೀತ ನಡುಗುತ್ತಿತ್ತು. ಕಣ್ಣು, ಒಂಥರಾ ಕಳ್ಳಗಣ್ಣು. ನೇರವಾಗಿ ಮುಖ ನೋಡಿ, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಿರಲಿಲ್ಲ. ಆಗಾಗ ನಮ್ಮ ಮನೆಯ ಹಿತ್ತಿಲಿಗೆ ಬಂದು ನಿಲ್ಲುತ್ತಿತ್ತು: ಊಟ, ತಿಂಡಿಯ ಹೊತ್ತಿಗೆ. ನಮಗೋ, ಅದು ಸಂಭ್ರಮಪಡುವಷ್ಟು ದೊಡ್ಡ ಮನೆ. ವಿಶಾಲವಾದ ಹಾಲ್ ಇತ್ತು. ಒಳ್ಳೆಯ ವರಾಂಡ. ಬೆಡ್ ರೂಮು, ಡೈನಿಂಗ್ ಹಾಲ್, ಅಡುಗೆ ಮನೆ. ನಮ್ಮ ಡೈನಿಂಗ್ ರೂಮಿಗೆ attach ಆಗಿಯೇ ಕಾಲವಾಡ ಅವರ ಮನೆಯಿತ್ತು. ಸುವರ್ಣ ಕಾಲವಾಡ ಅಂತ ಅವರ ಹೆಸರು. ಆಕೆಗೆ ಒಬ್ಬಳೇ ಮಗಳು ರಜನಿ. ನನ್ನ ಮೂರೂ ಮಕ್ಕಳು ಕಾಲವಾಡ ಆಂಟಿಯ ಜೋಪಾನದಲ್ಲೇ ಬೆಳೆದವು. ತಂದೆಯಿಲ್ಲದ ಹುಡುಗಿ ರಜನಿ, ನನ್ನ ಕೊರಳಿಗೆ ಬಿದ್ದಿದ್ದಳು. ಅವಳಿಗೆ ಪ್ರತಿಯೊಂದಕ್ಕೂ ನಾನು ಬೇಕು, ಲಲಿತೆ ಬೇಕು. ಇವತ್ತು ಅವಳು ಲಕ್ಷಗಟ್ಟಲೆ ದುಡಿಯುವ, ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿಸಿಕೊಂಡಿರುವ,ಮೇಲಿಂದ ಮೇಲೆ ವಿದೇಶಗಳಿಗೆ ಹೋಗಿ ಬರುವ ಸಾಫ್ಟ್‌ವೇರ್ ಇಂಜಿನೀರ್. ಅವತ್ತಿಗಿನ್ನೂ ಏಳನೇ ಕ್ಲಾಸು ಓದುತ್ತಿದ್ದ ಪುಟ್ಟ ಹುಡುಗಿ. ಅವಳು ಕಡೇಪಕ್ಷ ದಿನ ಒಪ್ಪತ್ತಿನ ಊಟವನ್ನಾದರೂ ನಮ್ಮ ಮನೆಯಲ್ಲಿ ಮಾಡುತ್ತಿದ್ದಳು. ನನ್ನ ಮಕ್ಕಳು ಮೂರೂ ಹೊತ್ತು ಅವಳ ಮನೆಯಲ್ಲಿ ಉಂಡು, ಕೆಲವು ಸಲ ಅಲ್ಲೇ ಮಲಗಿ ಬಿಡುತ್ತಿದ್ದವು. ಮನೆಯ ಹಿಂದೆಯೇ ಮೆಡಿಕಲ್ ಕಾಲೇಜ್ ಆಸ್ಪತ್ರೆಯಿತ್ತು. ಅಲ್ಲಿನ ವಿದ್ಯಾರ್ಥಿಗಳಿಗಾಗಿ ಕಾಲವಾಡ ಆಂಟಿ ಚಿಕ್ಕದೊಂದು ಮೆಸ್ ನಡೆಸುತ್ತಿದ್ದರು. ಹಾಗೆ ಎಷ್ಟು ಜನ ವಿದ್ಯಾರ್ಥಿಗಳ ಹೊಟ್ಟೆ, ನೆತ್ತಿ ನೋಡಿದರೋ ಆ ತಾಯಿ.

ಇನ್ನೊಬ್ಬರಿಗೆ ಒಳ್ಳೆಯದು ಮಾಡಬೇಕು ಅಂತ ಮನಸ್ಸಿರಬೇಕು, ಅಷ್ಟೆ. ಉಪಕಾರ ಮಾಡಲಿಕ್ಕೆ ಎಲ್ಲಿಗೋ ಹೋಗಬೇಕಾಗಿಲ್ಲ. ಕಾಲವಾಡ ಆಂಟಿ ಪಾರ್ವತಮ್ಮನಿಗೆ ಉಪಕಾರ ಮಾಡುತ್ತಿದ್ದರು. ಅವಳು ಅವರ ಮನೆಯಲ್ಲೂ ಕೆಲಸ ಮಾಡುತ್ತಿದ್ದಳು. ಒಮ್ಮೊಮ್ಮೆ ಎಲ್ಲಿಂದಲೋ ಹಸಿದುಕೊಂಡು ಬಂದು ಬಿಡುತ್ತಿದ್ದಳು. ಡಯಾಬಿಟೀಸ್ ಇದ್ದವರಿಗೆ ಹಸಿವಿಗಿಂತ ಬೇರೆ ಶತ್ರುವೇ ಬೇಕಾಗಿಲ್ಲ. ಒಂದು ನಿಮಿಷದೊಳಗಾಗಿ ಕಣ್ಣು ಕತ್ತಲೆ ಬಂದು, ತಲೆ ತಿರುಗಿ, ಮೈಯೊಳಗಿನ ಕಸುವೆಲ್ಲ ನೆಲಕ್ಕೆ ಜಾರಿ ಹೋದಂತಾಗಿ ಸತ್ತೇ ಹೋಗಿಬಿಡುತ್ತೇನೆ ಅನ್ನಿಸಿಬಿಡುತ್ತದೆ. ಅದರಲ್ಲೂ ಸೂಜಿಯ ಮೂಲಕ ಇನ್ಸುಲಿನ್ ಚುಚ್ಚಿಕೊಳ್ಳುವವರ ಅವಸ್ಥೆ ಯಾವ ಶತ್ರುವಿಗೂ ಬೇಡ. ಪಾರ್ವತಮ್ಮ ನಮ್ಮ ಮನೆಯ ಹಿಂದಿನ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ತೆಗೆದುಕೊಂಡು ಬರುತ್ತಿದ್ದಳು. ತಕ್ಷಣಕ್ಕೆ ತಿನ್ನಲು ಏನು ಸಿಗುತ್ತಿತ್ತೋ ಏನಿಲ್ಲವೋ? “ಅವ್ವಾರೇ, ಸೂಜಿ ತಗೊಂಡು ಬಂದೀನಿ. ತಿನ್ನಲಾಕ ಏನಾದ್ರೂ ಕೊಡ್ರಿ" ಎಂದು ಕುಸಿದು ಕೂಡುತ್ತಿದ್ದಳು. ಲಲಿತೆಯೋ, ಕಾಲವಾಡ ಆಂಟಿಯೋ ಅಡುಗೆ ಮನೆಯಲ್ಲಿ ಇದ್ದುದನ್ನು ತಂದು ಬಡಿಸುತ್ತಿದ್ದರು. ಮುದುಕಿಗೆ ಎಷ್ಟೋ ಸಮಾಧಾನ. ನನಗೆ ಆಗಷ್ಟೆ ಡಯಾಬಿಟೀಸ್ ಆರಂಭವಾಗಿತ್ತಾದ್ದರಿಂದ, ಅದರ ಹಸಿವಿನ ಸಂಕಟ ನನಗೆ ಅರ್ಥವಾಗುತ್ತಿತ್ತು. ‘ಏನಾದರೂ ತಕ್ಷಣ ಕೊಡಿ’ ಅನ್ನುತ್ತಿದ್ದೆ. ತಿಂಡಿ ಮಾಡಲು ನಾನೇನಾದರೂ ನಿಂತರೆ, ಆ ಅಜ್ಜಿಯನ್ನು ಹುಡುಕಿಕೊಂಡು ಹೋಗಿಯಾದರೂ ತಿನ್ನಲು ಕೊಟ್ಟು ಬರುತ್ತಿದ್ದೆ.
ಆದರೆ ಪಾರ್ವತಮ್ಮನ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲದ ಒಂದು ಸಂಗತಿ ಕಾಲವಾಡ ಆಂಟಿಗೆ ಗೊತ್ತಿತ್ತು. ಕ್ರಮೇಣ ಅದು ಲಲಿತಳಿಗೆ ಗೊತ್ತಾಯಿತು. ಏನೆಂದರೆ, ಅಜ್ಜಿಗೆ ಅವರಿವರ ಮನೆಯಲ್ಲಿ ಕದಿಯುವ ಚಟವಿತ್ತು. ಮೊದಲು ಎಲ್ಲೆಲ್ಲಿಂದಲೋ ಒಂದಷ್ಟು ಬಟ್ಟೆ ಕದ್ದು ತರುತ್ತಿದ್ದಳು. ಹಾಗೆ ತಂದವುಗಳನ್ನು ಕಾಲವಾಡ ಆಂಟಿ ಮನೆಯಲ್ಲಿಟ್ಟು, “ಚಳಿಗಾಲ ಬಂದಾಗ ತಗೋತೀನ್ರಿ" ಅಂತ ಹೇಳುತ್ತಿದ್ದಳು. ಹುಬ್ಬಳ್ಳಿಯಲ್ಲಿ ಚಳಿಗಾಲ ವಿಪರೀತ ಸಿವಿಯರ್ ಆಗಿರುತ್ತಿತ್ತು. ಯಾರೋ ಕೊಟ್ಟ ಬಟ್ಟೆ ಇದ್ದಿರಬೇಕು ಅಂದುಕೊಂಡು ಕಾಲವಾಡ ಆಂಟಿ ಅದನ್ನು ಮೂಟೆ ಕಟ್ಟಿ ಇಡುತ್ತಿದ್ದರು. ಆಮೇಲೆ ಬರಬರುತ್ತ ಪಾರ್ವತಮ್ಮ ಅಜ್ಜಿ ಚಿಕ್ಕ ಪುಟ್ಟ ಒಡವೆಗಳನ್ನು ತಂದಿಡಲು ಶುರು ಮಾಡಿದಳು. ಮಹಾನ್ ಆಸ್ತಿ ಅಂತಲ್ಲ: ಚೂರು ಪಾರು ಬಂಗಾರವಿರುತ್ತಿದ್ದ ಒಡವೆಗಳು. ಹೆಚ್ಚಾಗಿ, ಮಕ್ಕಳ ಜುಮುಕಿಯಂಥವು ಇರುತ್ತಿದ್ದವು. ಕಾಲವಾಡ ಆಂಟಿಗೆ ಅನುಮಾನ ಬಂದಿತ್ತಾದರೂ ಯಾರ ಮುಂದೆ ಅಂತ ಹೇಳಿಕೊಳ್ಳುವುದು? ನಾಲ್ಕು ಮಂದಿಗೆ ಗೊತ್ತಾದರೆ ಎಲ್ಲರೂ ಅಜ್ಜಿಯನ್ನು ಕೆಲಸದಿಂದ ತೆಗೆದು ಹಾಕಿಬಿಡುವ ಅಪಾಯವಿತ್ತು. ಮೊದಲೇ ಮುಪ್ಪು, ಮೇಲೆ ಡಯಾಬಿಟೀಸು. ಕೆಲವು ದಿನ ಹಾಗೂ ಸುಮ್ಮನಿದ್ದರು ಕಾಲವಾಡ ಆಂಟಿ. ಲಲಿತೆ ಬುದ್ಧಿವಂತಿಕೆ ಮಾಡಿ “ನಿನ್ನ ಕೈಲಿ ಕೆಲಸ ನಿಗೂದಿಲ್ಲ. ವಯಸ್ಸಾಯ್ತು" ಅಂತ ನೆಪ ಹೇಳಿ ಪಾರ್ವತಮ್ಮಜ್ಜಿಗೆ ಕಂಪಲ್ಸರಿ ರಿಟೈರ್‌ಮೆಂಟು ಕೊಟ್ಟುಬಿಟ್ಟಳು. ಹಾಗೆ ನೋಡಿದರೆ, ಕದಿಯಲು ನಮ್ಮ ಮನೆಯಲ್ಲಿ ಆ ಚೂರು ಪಾರು ಬಂಗಾರವೂ ಇರಲಿಲ್ಲ. ಕಾಲವಾಡ ಆಂಟಿಗೆ ಅಜ್ಜಿಯ ಮೇಲೆ ಕರುಣೆ. ಅವಳನ್ನು ಸುಮಾರು ದಿನ ಸಹಿಸಿಕೊಂಡರು. ಆದರೆ ಯಾವತ್ತಾದರೊಂದು ದಿನ ಅಜ್ಜಿ ಯಾರದೋ ಮನೆಯಲ್ಲಿ ಕದಿಯಲು ಹೋಗಿ ಸಿಕ್ಕು ಬಿದ್ದು, ಆ ತನಕ ಕದ್ದದ್ದನ್ನು ಕಾಲವಾಡ ಆಂಟಿಯ ಮನೆಯಲ್ಲಿಟ್ಟಿದ್ದೇನೆ ಅಂದುಬಿಟ್ಟರೆ ಎಲ್ಲಿಯ ಫಜೀತಿ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು.

ಈ ಮಧ್ಯೆ ಅಜ್ಜಿಯ ಡಯಾಬಿಟೀಸು ಉಲ್ಬಣವಾಗುತ್ತಲೇ ಹೋಯಿತು. ಎಲ್ಲೋ ಬಿದ್ದು ಗಾಯ ಮಾಡಿಕೊಂಡಿತು ಅಜ್ಜಿ. ಅದು ವಾಸಿಯಾಗದೆ ವ್ರಣವಾಯಿತು. ಕೆಲವೊಮ್ಮೆ ಆಸ್ಪತ್ರೆಗೆ ಹೋಗಿ ಇನ್ಸುಲಿನ್ ಚುಚ್ಚಿಸಿಕೊಂಡು ಬರುವಷ್ಟೂ ಅವಳಿಗೆ ತ್ರಾಣವಿರುತ್ತಿರಲಿಲ್ಲ. ಡಯಾಬಿಟೀಸ್‌ನ ಮತ್ತೆರಡು ಗುಣಗಳೆಂದರೆ, ಅಳು ಮತ್ತು ಸಿಡುಕು. ಅಜ್ಜಿಗೆ ಎರಡೂ ಇದ್ದವು. ಏನೋ ಮಾತಾಡಲು ಬರುತ್ತಿದ್ದವಳು ಮುಳು ಮುಳು ಅತ್ತು ಬಿಡುತ್ತಿದ್ದಳು. ಏನಾದರೂ ಹೇಳಲು ಮುಂದಾದರೆ “ಹೋಗ್ರಿಯಪ್ಪಾ... ಎಲ್ಲೀದು ಹಚ್ಚೀರಿ?" ಅಂತ ಸಿಡುಕಿ ಬಿಡುತ್ತಿದ್ದಳು. ನಾನು ಪ್ರತೀ ಶನಿವಾರ ಬೆಳಗ್ಗೆ ತಿಂಡಿ ಮಾಡುತ್ತೇನೆಂಬುದು ಅದಕ್ಕೆ ಗೊತ್ತಿತ್ತು. ಶನಿವಾರ ಲಲಿತಳಿಗೆ ಬೆಳಗಿನ ಸ್ಕೂಲು. ಬೇಗನೆ ಹೊರಟು ಬಿಡುತ್ತಿದ್ದಳು. ಹೀಗಾಗಿ ನಾನೇ ಮಕ್ಕಳಿಗೆ ತಿಂಡಿ ಮಾಡಿಕೊಟ್ಟು, ಶಾಲೆಗೆ ಕಳಿಸಿ, ಅಡುಗೆಯನ್ನೂ ಮಾಡಿಟ್ಟು ಆಫೀಸಿಗೆ ಹೋಗುತ್ತಿದ್ದೆ. ತಿಂಡಿ ಮಾಡಿ ಮಕ್ಕಳಿಗೆ ಬಡಿಸುವ ಹೊತ್ತಿಗೆ ಹಿತ್ತಿಲಲ್ಲಿ ಅಜ್ಜಿಯ ಗಡಗಡ ನಡುಗುವ ದನಿ. ಕೆಲವೊಮ್ಮೆ ಚಳಿಗೆ ಸಿಕ್ಕು ಮುದಿ ಗುಬ್ಬಿಯಂತಾಗಿ ಬಿಟ್ಟಿರುತ್ತಿದ್ದಳು. ಕೆಲವೊಮ್ಮೆ ಯಾರದೋ ಸ್ವೆಟರು. ಕಾಲಿಗೆ ಚಪ್ಪಲಿ ಹಾಕಿಕೊಳ್ಳಲೇಬೇಕು ಅಂತ ಹೇಳಿದ್ದರಿಂದ ಎರಡು ಬೇರೆ ಬೇರೆ ಬಣ್ಣದ ಚಪ್ಪಲಿಗಳನ್ನು ಹಾಕಿಕೊಂಡು ಓಡಾಡುತ್ತಿದ್ದಳು.

ಇಂಥ ಅಜ್ಜಿ ಕದಿಯುವಾಗ ಸಿಕ್ಕು ಬಿದ್ದರೆ ಕಾಲವಾಡ ಆಂಟಿಗೆ ಕಷ್ಟವಾಗುತ್ತದಲ್ಲವೆ ಅಂತ ಯೋಚಿಸುತ್ತಿರುವಾಗಲೇ ಅದಕ್ಕಿಂತ ದೊಡ್ಡ ಕಷ್ಟ ಬಂದು ಬಿಟ್ಟಿತು. ಅದೊಂದು ಕೆಟ್ಟ ಚಳಿಯ ರಾತ್ರಿ ಇದ್ದಕ್ಕಿದ್ದ ಹಾಗೆ ಅಜ್ಜಿ ಸತ್ತು ಹೋಯಿತು. ಆಗಲೇ ಉದ್ಭವವಾದದ್ದು ಅಸಲಿ ಸಮಸ್ಯೆ. ಅವಳು ತಂದಿಟ್ಟ ವಸ್ತುಗಳನ್ನೆಲ್ಲ ಏನು ಮಾಡಬೇಕು? ಸೀರೆ, ಚಾದರ, ಸ್ವೆಟರು ಮುಂತಾದವನ್ನು ಬಡವರ‍್ಯಾರಿಗೋ ದಾನ ಕೊಟ್ಟು ಕೈ ತೊಳೆದುಕೊಂಡರು ಕಾಲವಾಡ ಆಂಟಿ. ಆದರೆ ಚೂರುಪಾರು ಬಂಗಾರದ ಒಡವೆ? ಅವುಗಳನ್ನೇನು ಮಾಡಬೇಕು? ಇವು ನಿಮ್ಮ ಮನೆಯವಾ- ಅಂತ ಯಾರನ್ನು ಕೇಳುತ್ತ ಹೋಗುವುದು? ಅವುಗಳನ್ನು ಎಲ್ಲಿಂದ ಕದ್ದು ತರುತ್ತಿದ್ದಳೋ? ಅಥವಾ ಯಾರಾದರೂ ಕದ್ದು ತಂದು ಅವಳ ಕೈಗೆ ಕೊಡುತ್ತಿದ್ದರೋ? ಎಲ್ಲಿ ಅಂತ ವಿಚಾರಿಸೋದು? ಕಾಲವಾಡ ಆಂಟಿ ನಿಜಕ್ಕೂ ಫಜೀತಿಗೆ ಬಿದ್ದಿದ್ದರು. ಕಡೆಗೆ ಲಲಿತ ಮತ್ತು ಅವರು ಸೇರಿಕೊಂಡು ಅದಿಷ್ಟನ್ನೂ ಒಂದು ಚೀಟಿಯಲ್ಲಿ ಕಟ್ಟಿ ಹತ್ತಿರದ ಗುಡಿಯೊಂದರ ಹುಂಡಿಗೆ ಹಾಕಿಬಿಡಬೇಕು ಎಂದು ತೀರ್ಮಾನಿಸಿದ್ದಿರಬೇಕು. ಕೆಲವು ದಿನಗಳ ನಂತರ ಇಬ್ಬರ ಮುಖಗಳಲ್ಲೂ ಸಮಾಧಾನ ಕಾಣಿಸಿತ್ತು.

ಅದೇಕೋ ನನಗೆ ಡಯಾಬಿಟೀಸ್‌ನ ಪ್ರಸ್ತಾಪ ಬಂದಾಗಲೆಲ್ಲ ಆ ಅಜ್ಜಿ ನೆನಪಾಗುತ್ತಾಳೆ. ಆಕೆಗೆ ಆಗುತ್ತಿದ್ದ ಹುಣ್ಣುಗಳು, ಗಾಯಗಳು ನೆನಪಾಗುತ್ತವೆ. ಈಗ್ಗೆ ಸುಮಾರು ವರ್ಷದ ಹಿಂದೆ ಒಮ್ಮೆ ರಾಜಾಜಿನಗರದ ‘ಡಯಾಕಾನ್’ ಆಸ್ಪತೆಗೆ ಹೋಗಿದ್ದೆ. ಅದನ್ನು ನಡೆಸುವ ಡಾ.ಅರವಿಂದ್ ನನ್ನ ಸ್ನೇಹಿತರು. ನಾನು ಹೋದಾಗ ಅವರು ವೃದ್ಧೆಯೊಬ್ಬಾಕೆಯ ಕಾಲು ಪರೀಕ್ಷಿಸುತ್ತಿದ್ದರು. ಆಕೆಯ ಪಾದದ ಹೆಬ್ಬೆರಳು ಮತ್ತು ಎರಡನೆಯ ಬೆರಳಿನ ಮಧ್ಯೆ ಅಕ್ಷರಶಃ ಒಂದು ಪೆನ್‌ನ ಕ್ಯಾಪ್ ತುರುಕಬಲ್ಲಷ್ಟು ದೊಡ್ಡ ತೂತಾಗಿತ್ತು. ಡಾಕ್ಟರು ತಮ್ಮ ಬೆರಳು ಹಾಕಿ ಅದನ್ನು ಶುಭ್ರಗೊಳಿಸುತ್ತಿದ್ದರೆ ಆಕೆಗೆ ಅದು ಗೊತ್ತೇ ಆಗುತ್ತಿರಲಿಲ್ಲ. ಸ್ಪರ್ಶ ಜ್ಞಾನವೇ ಹೊರಟು ಹೋಗಿತ್ತು. ಸಮಯಕ್ಕೆ ಸರಿಯಾಗಿ ಊಟ, ಪಥ್ಯ, ಔಷಧಿ ಮತ್ತು ವ್ಯಾಯಾಮ ಮಾಡದಿದ್ದರೆ ಇಂಥವೆಲ್ಲ ಆಗುತ್ತವೆ ಎಂದು ವಿವರಿಸಿದ್ದರು ಡಾ.ಅರವಿಂದ್. ನಾನು ಯಾವತ್ತೂ ಯಾರಿಗೂ ಹೆದರಿದವನಲ್ಲ. ಆದರೆ ಅವತ್ತು ಜೀವಕ್ಕೆ ಹೆದರಿಬಿಟ್ಟೆ. ಆ ಹೆದರಿಕೆ ಇವತ್ತಿಗೂ ಮನಸ್ಸಿನಾಳದಲ್ಲಿ ಇದೆಯೇನೋ? ಪಥ್ಯ ತಪ್ಪಿಸುವುದಿಲ್ಲ. ಔಷಧಿ ಮರೆಯುವುದಿಲ್ಲ. ವಾರಕ್ಕೆ ಮೂರು ದಿನವಾದರೂ ಬಿಡುವು ಮಾಡಿಕೊಂಡು ನನ್ನ ಟ್ರೆಡ್‌ಮಿಲ್ ಯಂತ್ರದ ಮೇಲೆ ಕುದುರೆ ನಡಿಗೆ ನಡೆದು ಬೆವರಿಳಿಸುತ್ತೇನೆ. ಇಷ್ಟರ ಮಟ್ಟ್ಟಿಗಿನ ಶಿಸ್ತು ಎಷ್ಟೋ ವರ್ಷ ಕಾಯುತ್ತದೆ ಅಂತಾರೆ.
ಅಷ್ಟಾದರೆ ಸಾಕು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books