Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ದೇವರು ಕೊಡುವ ಬೋನಸ್ಸಿಗೆ ಕಾಯುವುದು ಮತ್ತು ಸಾವನ್ನು ಮುಂದೂಡುವುದು

‘ವಯಸ್ಸು ಐವತ್ತಾಯಿತಾ? ಹಾಗಾದರೆ ನಿಮ್ಮ ಮುಂದಿನ ಜೀವನ ಆ ದೇವರು ಕೊಟ್ಟ ಬೋನಸ್ ಅಂದುಕೊಳ್ಳಿ!’
-ಹಾಗನ್ನುತ್ತಾ ನಮ್ಮೊಳಗೆ ಸಾವಿನ ಭಯ ಹುಟ್ಟಿಸುವ ಗೆಳೆಯರಿದ್ದಾರೆ. ಅದಕ್ಕೆ ತಕ್ಕಂತೆ ಐವತ್ತೆರಡಕ್ಕೆ ತೀರಿಕೊಳ್ಳುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗಿ, ಇನ್ನೇನು ನಾಳೆ ನಾಡಿದ್ದರಲ್ಲಿ ನಾನು ಕೂಡಾ ಗೋಡೆ ಮೇಲಿನ ಫೊಟೋ ಆಗುತ್ತೇನಾ ಎಂಬ ಭೀತಿ ಕೆಲವರನ್ನು ಕಾಡುವುದೂ ಉಂಟು. ಅಂಥವರು ದೇವರು ನೀಡುವ ಬೋನಸ್ ಸಲುವಾಗಿ ಇನ್ನಿಲ್ಲದಂತೆ ಸರ್ಕಸ್ ಮಾಡುತ್ತಾರೆ. ಯೋಗ, ಧ್ಯಾನ ಅಂದರೇನು ಎಂದು ಗೊತ್ತಿಲ್ಲದವರು ಕೂಡಾ ಬೆಳಗಾನ ಎದ್ದು ಸೂರ್ಯ ನಮಸ್ಕಾರ ಮಾಡುವುದಕ್ಕೆ ಶುರು ಹಚ್ಚಿಕೊಳ್ಳುತ್ತಾರೆ. ಪ್ರಾಣ ಹೋಗುವಷ್ಟು ಹಸಿವಾಗುತ್ತಿದ್ದರೂ ಎರಡೇ ಇಡ್ಲಿಗೆ ಇವತ್ತಿನ ಟಿಫಿನ್ ಮುಗೀತು ಎಂದು ಘೋಷಿಸುತ್ತಾರೆ, ಇವತ್ತು ನನ್ನ ಹುಟ್ಟುಹಬ್ಬ ಕಣಯ್ಯಾ ಎಂದು ಯಾರಾದರೂ ಒಂದು ಚಿಕ್ಕ ತುಂಡು ಮೈಸೂರು ಪಾಕ್ ಕೈಯಲ್ಲಿಟ್ಟರೂ ಅಯ್ಯಯ್ಯೋ ಸ್ವೀಟಾ ಎಂದು ಹಾವು ಕಂಡಂತೆ ಹೌಹಾರುತ್ತಾರೆ, ಬಲಪಾದದ ಕಿರುಬೆರಳು ಚುರುಕ್ ಅಂದರೆ ಸಾಕು ಡಾಕ್ಟರ್ ಹತ್ತಿರ ಓಡುತ್ತಾರೆ, ಯಾವ್ಯಾವ ಪದಾರ್ಥದಲ್ಲಿ ಎಷ್ಟೆಷ್ಟು ಕ್ಯಾಲರಿಗಳಿವೆ ಎಂದು ಇಂಟರ್‌ನೆಟ್ಟಲ್ಲಿ ತಾಸುಗಟ್ಟಲೆ ಸರ್ಚ್ ಮಾಡುತ್ತಾರೆ, ಮುಸ್ಸಂಜೆಯಾದರೆ ದೇವಸ್ಥಾನ, ಸತ್ಸಂಗ. ಡ್ರಿಂಕ್ಸ್ ಅವರ ಪಾಲಿಗೆ ಗತಕಾಲದ ಶೋಕೇಸಿನಲ್ಲಿ ಕುಳಿತ ಮಧುರ ನೆನಪು, ಈಗೇನಿದ್ದರೂ ಗರಿಕೆ ಹುಲ್ಲಿನ ಜ್ಯೂಸು ಅವರ ಪಾಲಿಗೆ ಅಮೃತ. ಇವೆಲ್ಲದಕ್ಕೆ ಕಳಸವಿಟ್ಟಂತೆ ವೈರಾಗ್ಯ.

ಇವರು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ತಮ್ಮದೇ ವಯಸ್ಸಿನ ಇತರರನ್ನು ಹುಡುಕಿಕೊಂಡು ಹೋಗಿ ಹಿತವಚನ ಹೇಳುತ್ತಾರೆ. ತಮ್ಮ ದೇಹದ ಮೇಲೆ ತಾವು ನಡೆಸಿದ ಪ್ರಯೋಗಗಳನ್ನೆಲ್ಲಾ ಅವರಿಗೂ ರವಾನಿಸಿ ಹೀಗೆ ಮಾಡಿದರೆ ಜೀವಕ್ಕೆ ಒಳ್ಳೆಯದು ಎಂದು ಒತ್ತಾಯಿಸುತ್ತಾರೆ. ರಾಮದೇವನ ಯೋಗಾಭ್ಯಾಸದ ಒಂದು ಸೀಡಿಯನ್ನು ಉಡುಗೊರೆಯಾಗಿ ಕೊಟ್ಟರೂ ಆಶ್ಚರ್ಯವೇನಿಲ್ಲ. ಇವೆಲ್ಲವೂ ದೇವರು ನೀಡುವ ಬೋನಸ್ಸನ್ನು ಹೆಚ್ಚಿಸುವ ಸಲುವಾಗಿ ಮಾಡುವ ಕಸರತ್ತು. ಸಂಬಳವನ್ನೇ ನೀಡದ ದೇವರು ಬೋನಸ್ ಯಾಕೆ ಕೊಡುತ್ತಾನೆ ಎಂಬ ಪ್ರಶ್ನೆ ಯಾರನ್ನೂ ಕಾಡುವುದಿಲ್ಲ. ಜಾಸ್ತಿ ದಿನ ಬದುಕಬೇಕು ಎಂಬ ಹಠಕ್ಕೆ ಬಿದ್ದು ಸಾವನ್ನು ಮುಂದೂಡುತ್ತಾ ಹೋಗುವುದರಿಂದ ಏನು ಸಾಧಿಸಿದಂತಾಯಿತು? ಬದುಕು ಅನ್ನುವುದು ರಸ್ತೆಯಲ್ಲಿ ಕೆಟ್ಟು ನಿಂತ ಬಸ್ಸಿನಂತಾಗುತ್ತದೆ. ಯಾರಾದರೂ ದೂಡುವವರು ಸಿಗುತ್ತಾರೆಯೇ ಎಂದು ಕಾಯುತ್ತಾ ಬಸ್ಸು ಮುದಿಯಾಗುತ್ತದೆ, ಕೊನೆಗೆ ಅದರ ಅಂಗಾಂಗಳಿಗೆ ತುಕ್ಕು ಹಿಡಿಯುವುದಕ್ಕೆ ಶುರುವಾಗುತ್ತದೆ.

ಮನುಷ್ಯ ಸ್ವಭಾವವನ್ನು ಬಣ್ಣಿಸುತ್ತಾ ‘ಕಷ್ಟ ಬಂದರೆ ವೈರಾಗ್ಯ ಬರುತ್ತದೆ, ಒಳ್ಳೆಯ ಸೀರೆ ನೋಡಿದಾಗ ವೈರಾಗ್ಯ ಹಾರಿಹೋಗುತ್ತದೆ. ಬೇಗನೇ ಬರುವ ವೈರಾಗ್ಯವನ್ನು ನಂಬಬಾರದು, ವೈರಾಗ್ಯಕ್ಕಾಗಿ ಆತುರ ಪಡಬಾರದು, ಬಂದ ವೈರಾಗ್ಯ ದೃಢವಾಗಿ ಬಹುಕಾಲ ಇರುತ್ತದೆಯೇ ಎಂದು ಕಾದು ನೋಡಬೇಕು’ ಎಂದು ಡಿವಿಜಿಯವರು ಒಂದು ಕಡೆ ಬರೆಯುತ್ತಾರೆ. ವಯಸ್ಸಾಗುತ್ತಿದ್ದಂತೆಯೇ ಬದುಕಿನ ಶೈಲಿಯನ್ನು ಕೊಂಚ ಬದಲಾಯಿಸಿಕೊಳ್ಳಬೇಕು ಅನ್ನುವುದು ನಿಜ. ಅದು ತಾನಾಗಿ ಸಂಭವಿಸುತ್ತದೆ, ಯಾಕೆಂದರೆ ದೇಹ ಅದನ್ನು ಬೇಡುತ್ತದೆ. ಐವತ್ತಾರರ ಮನುಷ್ಯ ಜಿಂಕೆಮರಿಯಂತೆ ಓಡಲಾರ, ಮೆಸ್ಸಿ ಥರ ಚೆಂಡಿಗೆ ಒದೆಯಲಾರ. ಹಾಗಂತ ತನ್ನ ಕತೆ ಮುಗೀತು ಎಂದು ಸ್ವಯಂನಿವೃತ್ತಿ ಘೋಷಿಸುವುದು ನಿಮ್ಮ ಬದುಕಿಗೆ ನೀವೇ ಮಾಡುವ ಅನ್ಯಾಯ. ಅದನ್ನು ಬದುಕಿಗೆ ನೀಡುವ ರಾಜೀನಾಮೆ ಎಂದೂ ಕರೆಯಬಹುದು. ಕೈಕಾಲು ಗಟ್ಟಿಯಿದ್ದಾಗಲೇ ಯಾಕೆ ಈಸಿ ಚೇರಲ್ಲಿ ಕುಳಿತುಕೊಳ್ಳುವ ಸೋಮಾರಿತನ? ಇಂಥವರಿಗೆ ನಾನು ಹೇಳುವುದು ಇಷ್ಟೆ. ಈ ಜಗತ್ತಲ್ಲಿ ಐವತ್ತು ದಾಟಿದವರು ನೀವೊಬ್ಬರೇ ಅಲ್ಲ ಮತ್ತು ಅವರೆಲ್ಲರೂ ನಿಮ್ಮ ಥರ ಬದುಕಿಗೆ ರಾಜೀನಾಮೆ ನೀಡಿ ದೇವರು ನೀಡುವ ಬೋನಸ್ಸಿನ ವಿಸ್ತರಣೆಗೆ ಕಾಯುವುದಿಲ್ಲ. ಉದಾಹರಣೆಗೆ ಖುಷ್ವಂತ್ ಸಿಂಗ್. ಆ ಪುಣ್ಯಾತ್ಮ ಬರೋಬ್ಬರಿ ತೊಂಭತ್ತೊಂಬತ್ತು ವರ್ಷ ಬದುಕಿದರು. ಅವರೇನೂ ಮೂರು ಹೊತ್ತೂ ಯೋಗಾಭ್ಯಾಸ ಮಾಡುತ್ತಿರಲಿಲ್ಲ, ಮನೆಯ ಕಿಟಿಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ ಹೊರಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡು ಕಾಲ ಕಳೆಯಲಿಲ್ಲ. ತಮಗಿಷ್ಟವಾದ ಜನರ ಜೊತೆ ಹರಟುತ್ತಿದ್ದರು, ಮುಸ್ಸಂಜೆ ಒಂದು ಪೆಗ್ ಗುಂಡು ಹಾಕುತ್ತಿದ್ದರು, ತುಂಬಾ ಓದುತ್ತಿದ್ದರು ಮತ್ತು ತುಂಬಾ ಬರೆಯುತ್ತಿದ್ದರು. ತುಂಬು ಬದುಕು ಎಂದರೆ ಅದು.

ಅಷ್ಟೇಕೆ, ಮೊನ್ನೆಯಷ್ಟೇ ತೀರಿಕೊಂಡ ಹಿರಿಯ ನಟಿ ಮತ್ತು ನೃತ್ಯಗಾರ್ತಿ ಜೊಹ್ರಾ ಸೆಹಗಲ್ ಅವರಿಗೆ ನೂರಾ ಎರಡು ವರ್ಷವಾಗಿತ್ತು. ತನ್ನ ತೊಂಭತ್ತೈದನೇ ವಯಸ್ಸಿನಲ್ಲಿ ‘ಸಾವರಿಯಾ’ ಎಂಬ ಚಿತ್ರದಲ್ಲಿ ಆಕೆ ನಟಿಸಿದ್ದರು. ಆಕೆ ಬದುಕಿದ ರೀತಿಯನ್ನು ಓದುತ್ತಾ ಹೋದರೆ ಅಸೂಯೆಯಾಗುತ್ತದೆ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಸಂಪ್ರದಾಯಸ್ಥ ಸುನ್ನಿ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಜೋಹ್ರಾಗೆ ಆರು ಜನ ಸೋದರ, ಸೋದರಿಯರು. ಆಕೆ ಓದಿದ್ದು ಲಾಹೋರ್‌ನಲ್ಲಿ. ಆದರೆ ನಾನು ಯಾವತ್ತಿದ್ದರೂ ಭಾರತೀಯಳು ಅನ್ನುತ್ತಿದ್ದ ಜೋಹ್ರಾ ತೀರಾ ಚಿಕ್ಕ ವಯಸ್ಸಲ್ಲೇ ತನ್ನ ಚಿಕ್ಕಪ್ಪನ ಜೊತೆ ಹತ್ತಾರು ದೇಶ ಸುತ್ತಿದರು. ಖ್ಯಾತ ನೃತ್ಯ ನಿರ್ದೇಶಕ ಉದಯಶಂಕರ್ ಬಳಿ ನೃತ್ಯಾಭ್ಯಾಸ ಮಾಡಿದರು. ತನಗಿಂತ ಎಂಟು ವರ್ಷ ಚಿಕ್ಕವರಾದ ಕಾಮೇಶ್ವರ್ ಎಂಬ ಕಲಾ ನಿರ್ದೇಶಕನನ್ನು ಮದುವೆಯಾದರು. ಆಕೆಗೆ ನಟಿಯಾಗಬೇಕೆಂಬ ಆಸೆಯಿತ್ತು, ಆದರೆ ನಿರ್ದೇಶಕರು ಚಡ್ಡಿ ಹಾಕಿಕೊಂಡು ನೀರಿಗೆ ಜಿಗಿಯುವ ಪಾತ್ರ ಮಾಡು ಅಂದಾಗ ಬೇಡ ಅಂದರು. ಮದುವೆಯಾಗಿ ಹತ್ತೇ ವರ್ಷದಲ್ಲಿ ಗಂಡ ಕಾಮೇಶ್ವರ್ ಆತ್ಮಹತ್ಯೆ ಮಾಡಿಕೊಂಡರು. ಆ ಹೊತ್ತಿಗೆ ಆಕೆಗೆ ಎರಡು ಮಕ್ಕಳಿದ್ದರು. ಅವರನ್ನು ಬೆನ್ನಿಗೆ ಕಟ್ಟಿಕೊಂಡು ಲಂಡನ್ನಿಗೆ ಹೋದ ಜೋಹ್ರಾ ಹತ್ತಾರು ಇಂಗ್ಲಿಷ್ ಚಿತ್ರಗಳಲ್ಲಿ ಮತ್ತು ಸೀರಿಯಲ್ಲುಗಳಲ್ಲಿ ನಟಿಸಿ ಜನಪ್ರಿಯರಾದರು. ಎಂಭತ್ತರ ಅಂಚಿನಲ್ಲಿ ಮತ್ತೆ ಭಾರತಕ್ಕೆ ಬಂದು ಕೆಲವು ಸಿನಿಮಾಗಳಲ್ಲಿ ನಟಿಸಿದರು. ‘ಚಲೋ ಇಶ್ಕ್ ಲಡಾಯೇ’ ಚಿತ್ರದಲ್ಲಿ ಆಕೆಯದ್ದು ಮುಖ್ಯಪಾತ್ರ. ಹೊಡೆದಾಡುವ ದೃಶ್ಯಗಳಲ್ಲಿ ಲೀಲಾಜಾಲವಾಗಿ ನಟಿಸಿದರು. ಆಗ ಆಕೆಗೆ ತೊಂಭತ್ತಾಗಿತ್ತು.

ಜೋಹ್ರಾ ಮಗಳು ಬರೆದಿರುವ ‘ಜೋಹ್ರಾ ಸೆಹಗಲ್-ಫ್ಯಾಟಿ’ ಎಂಬ ಪುಸ್ತಕದಲ್ಲಿ ಜೊಹ್ರಾ ಎಷ್ಟು ತುಂಟಿಯಾಗಿದ್ದರು ಮತ್ತು ಜೀವನೋತ್ಸಾಹದಿಂದ ನಳನಳಿಸುತ್ತಿದ್ದರು ಅನ್ನುವ ಬಗ್ಗೆ ಉದಾಹರಣೆಗಳಿವೆ. ತೊಂಭತ್ತರ ವಯಸ್ಸಲ್ಲೂ ಆಕೆ ಹದಿನಾರರ ಪೋರಿಯ ಥರ ಸಿಂಗಾರ ಮಾಡುತ್ತಿದ್ದರು, ವಾರಕ್ಕೊಮ್ಮೆ ತಮ್ಮ ತೂಕ ಜಾಸ್ತಿಯಾಗಿದೆಯಾ ಎಂದು ಚೆಕ್ ಮಾಡುತ್ತಿದ್ದರು, ಒಂದು ಕೇಜಿ ವ್ಯತ್ಯಾಸ ಕಂಡುಬಂದರೂ ಒಂದು ರೋಟಿ ಕಡಿಮೆ ತಿನ್ನುತ್ತಿದ್ದರು, ಪಕ್ಕಾ ಟ್ಯಾಕ್ಸಿ ಡ್ರೈವರ್ ಥರ ಒಂದೇ ಏಟಿಗೆ ಮೂರು ಪೆಗ್ಗು ಕುಡಿಯುತ್ತಿದ್ದರು. ಆದರೆ ಆಕೆ ಅಂಥಾ ಸ್ಪುರದ್ರೂಪಿಯಾಗಿರಲಿಲ್ಲ, ತನ್ನ ತಂಗಿಯ ಜೊತೆ ತನ್ನನ್ನು ಹೋಲಿಸಿಕೊಂಡು ತಾನು ಕುರೂಪಿ ಎಂದು ಕೊರಗುತ್ತಿದ್ದರು. ಆದರೆ ಆ ಕೊರಗು ತನ್ನನ್ನು ಹುಳದಂತೆ ಕೊರೆಯುವುದಕ್ಕೆ ಆಕೆ ಬಿಡಲಿಲ್ಲ.

ವಿಪರೀತ ಚಟುವಟಿಕೆ ಮತ್ತು ಜೀವನೋಲ್ಲಾಸದಿಂದ ಅದನ್ನು ಮೀರಿದರು. ‘ಸಪಾಟಾದ ಎದೆ, ದೊಡ್ಡ ಪೃಷ್ಠ ಮತ್ತು ಕಪ್ಪು ಬಣ್ಣದ ಈ ಆಕೃತಿಯನ್ನು ಜನ ಇಷ್ಟಪಡುವುದಕ್ಕೆ ಸಾಧ್ಯವೇ ಇರಲಿಲ್ಲ, ಆದರೂ ನಾನು ನನ್ನ ಹಠ ಬಿಡಲಿಲ್ಲ. ಏನಾದರೂ ಮಾಡಿ ಜನರ ಗಮನ ಸೆಳೆಯಬೇಕು ಎಂದು ನಿರ್ಧಾರ ಮಾಡಿದೆ’ ಎಂದು ಒಂದು ಕಡೆ ಆಕೆ ಹೇಳಿಕೊಂಡಿದ್ದಾರೆ. ‘ಚೀನಿ ಕಮ್’ ಹಿಂದಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅಮಿತಾಬ್ ‘ನಿನ್ನ ಹುಟ್ಟಹಬ್ಬಕ್ಕೇನು ಉಡುಗೊರೆ ಕೊಡಲಿ’ ಎಂದು ಜೊಹ್ರಾ ಅವರನ್ನು ಕೇಳಿದ್ದಕ್ಕೆ ಒಂದು ವೈನ್ ಬಾಟಲ್ ಸಾಕು ಎಂದವರಾಕೆ. ತನ್ನ ಒಂದನೇ ವಯಸ್ಸಿನಲ್ಲಿ ಗ್ಲಾಕೋಮಾ ಖಾಯಿಲೆಗೆ ತುತ್ತಾಗಿ ಒಂದು ಕಣ್ಣು ಕಳೆದುಕೊಂಡ ಜೊಹ್ರಾ ಎಂಬ ಗಟ್ಟಿಗಿತ್ತಿಯ ಕತೆ ಓದುತ್ತಿದ್ದರೆ ನಮಗಿನ್ನೂ ಇಪ್ಪತ್ತೈದು ತುಂಬಿಲ್ಲ ಎಂದು ಅನಿಸುವುದಕ್ಕೆ ಶುರುವಾಗುತ್ತದೆ. ದೇಹ ಮತ್ತು ಮನಸ್ಸಿಗೆ ಅಂಟಿದ ರೋಗಗಳನ್ನೆಲ್ಲಾ ಹಿತ್ತಲಲ್ಲಿ ಹೂತುಹಾಕಿ ಸುಮ್ಮನೇ ಕುಣಿದಾಡುವ ಹುಮ್ಮಸ್ಸು ಬರುತ್ತದೆ. ಅದಕ್ಕೆ ದೇವರಿಗೆ ಅಪ್ಲಿಕೇಷನ್ ಹಾಕಬೇಕಾಗಿಲ್ಲ, ಆತನ ಅನುಮತಿಗೂ ಕಾಯಬೇಕಾಗಿಲ್ಲ. ನಿಮ್ಮ ಬೋನಸ್ಸನ್ನು ನೀವೇ ಸಂಪಾದಿಸಬಹುದು. ದುಡಿಯುವ ಉಮೇದು ಇರಬೇಕು ಅಷ್ಟೆ!

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 04 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books