Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಸಿದ್ದು ಪಕ್ಕ ಮತ್ತೊಬ್ಬ ನಾಯಕ ಎದ್ದು ನಿಲ್ಲಬಾರದಾ?

ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ನಾಲ್ಕು ವರ್ಷ ಕಳೆಯಿತು. ಅಷ್ಟು ದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುವ ಅವಕಾಶ ಸಿಗುವುದು ಕಡಿಮೆ. ಹಾಗಂತ ಒಳ್ಳೆಯ ಕೆಲಸ ಮಾಡುವ ಶಕ್ತಿ ಇರುವವರು ತಮ್ಮ ಸಾಮರ್ಥ್ಯಕ್ಕಿಂತ ಕಡಿಮೆ ಕೆಲಸ ಮಾಡುತ್ತಾ ಕೂರುವುದು ಸುಲಭದ ಬೆಳವಣಿಗೆಯೇನಲ್ಲ. ಪರಮೇಶ್ವರ್ ಜಾಗದಲ್ಲಿ ಬೇರೆ ಯಾರಾದರೂ ಕುಳಿತಿದ್ದರೆ ಇಷ್ಟೊತ್ತಿಗೆ ಬಂಡಾಯ ಅಂತ ಶುರುವಾಗಿ ಬಿಡುತ್ತಿತ್ತು. ತೀರಾ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡವಳಿಕೆಯಿಂದ ಆಕ್ರೋಶಗೊಂಡ ಶ್ರೀನಿವಾಸ ಪ್ರಸಾದ್ ಸ್ವಲ್ಪ ತಾಳ್ಮೆ ಕಳೆದುಕೊಂಡಿದ್ದರೂ ಇಷ್ಟೊತ್ತಿಗಾಗಲೇ ಸಿದ್ದು ವಿರುದ್ಧ ಆಕ್ರೋಶದ ಬೆಂಕಿ ಭುಗಿಲೇಳುತ್ತಿತ್ತು.

ಹಾಗೆ ನೋಡಿದರೆ ದಲಿತ ನಾಯಕರಲ್ಲಿ ಶ್ರೀನಿವಾಸ ಪ್ರಸಾದ್ ಬೆಂಕಿಯಂತಹವರು. ಇವತ್ತಿಗೂ ಮೈಸೂರು, ಚಾಮರಾಜನಗರ ಸೇರಿದಂತೆ ಹಲವು ಕಡೆ ಅವರ ಕಟ್ಟಾ ಅಭಿಮಾನಿಗಳಿದ್ದಾರೆ. ಸಿದ್ದರಾಮಯ್ಯನವರನ್ನು ಕಂಡರೆ ಒಂದು ಸಮುದಾಯ ಹೇಗೆ ಎಗಾ ದಿಗಾ ಪ್ರೀತಿಸುತ್ತದೋ, ಅದೇ ರೀತಿ ಶ್ರೀನಿವಾಸ ಪ್ರಸಾದ್ ಅವರನ್ನು ಕಂಡರೂ ಪ್ರೀತಿಸುವ, ನಂಬುವ ಜನರಿದ್ದಾರೆ. ಅವರು ಸಂಸದರಾಗಿ ಆರು ಮಂದಿ ಪ್ರಧಾನಿಗಳನ್ನು ಕಂಡವರು. ವಾಜಪೇಯಿ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಕೆಲಸದ ವಿಷಯ ಅಂತ ಬಂದರೆ ನಿಜಕ್ಕೂ ದೈತ್ಯ. ಈ ವರ್ಗಾವಣೆಯ ದಂಧೆಗಳ ತಲೆ ಬಿಸಿಯೆಲ್ಲ ನನಗೆ ಬೇಡ, ನೀವೇ ಇಟ್ಕೊಳಿ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದವರು ಸಿದ್ದರಾಮಯ್ಯನವರಿಗೆ ಹೇಳಿ ಬಹಳ ದಿನಗಳೇ ಆಗಿ ಹೋದವು. ಅರ್ಥಾತ್, ಎಲ್ಲಿ ಹಣ ಹರಿದಾಡುತ್ತದೆ ಎಂಬ ಆಪಾದನೆ ಕೇಳಿ ಬರುತ್ತದೋ ಅಲ್ಲಿ ಕಾಣಿಸಿಕೊಳ್ಳಲು ಶ್ರೀನಿವಾಸ ಪ್ರಸಾದ್ ಒಪ್ಪುವುದಿಲ್ಲ. ಹಿಂದೆಯೂ ಅಷ್ಟೇ, ಈಗಲೂ ಅಷ್ಟೇ. ನಾನು ಏನು ಹೇಳಲು ಹೊರಟಿದ್ದೆ ಎಂದರೆ ಇಂತಹ ಸರಳತೆಯ ಕಾರಣದಿಂದ ಶ್ರೀನಿವಾಸ ಪ್ರಸಾದ್ ಅವರನ್ನು ಆರಾಧಿಸುವವರಿದ್ದಾರೆ. ಒಂದು ವೇಳೆ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿ, ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಹಿಂದೆ ಮುಂದೆ ನೋಡದೆ ಅವರನ್ನು ಕನಿಷ್ಠ ಪಕ್ಷ ಡಿಸಿಎಂ ಆದರೂ ಮಾಡುವ ಅನಿವಾರ್ಯತೆ ಎದುರಾಗಿಬಿಡುತ್ತಿತ್ತು.

ಅಂದಹಾಗೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೈಸೂರು ಜಿಲ್ಲೆಯವರಾದುದರಿಂದ ಶ್ರೀನಿವಾಸ ಪ್ರಸಾದ್ ಅವರಿಗೆ ಅಂತಹ ಅವಕಾಶ ಸಿಗುವುದಿಲ್ಲ. ಆ ಮಾತು ಬೇರೆ. ಆದರೆ ನಾಲ್ಕು ವರ್ಷ ಕಷ್ಟಪಟ್ಟು ತಮ್ಮ ಮನೆಯಂತೆ ಕೆಪಿಸಿಸಿಯನ್ನು ಕಟ್ಟಿದ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡದೇ ಇರುವ ಸಿದ್ದರಾಮಯ್ಯನವರ ತರ್ಕ ಮಾತ್ರ ಅರ್ಥಹೀನವಾದುದು. ಯಾರೇನೇ ಹೇಳಲಿ, ಇವತ್ತು ಒಬ್ಬ ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್, ಮಂತ್ರಿಯಾಗಿ ಅಲ್ಪಸಂಖ್ಯಾತ ಸಮುದಾಯದ ನಾಯಕ ಸಿ.ಎಂ.ಇಬ್ರಾಹಿಂ ಥರದವರು ಸಿದ್ದರಾಮಯ್ಯನವರ ಅಕ್ಕಪಕ್ಕ ಇದ್ದಿದ್ದರೆ ಈ ಸಂಪುಟದ ತೂಕ ಹೆಚ್ಚಾಗಿರುತ್ತಿತ್ತು. ಆದರೆ ಸಿದ್ದರಾಮಯ್ಯನವರಿಗೆ ತಮಗೆ ಪರ್ಯಾಯ ಶಕ್ತಿ ಕೇಂದ್ರವೊಂದು ಬೆಳೆಯಬಾರದು ಎಂಬ ವಿಚಿತ್ರ ನಂಬಿಕೆ. ಹಿಂದೆ ತಾವೇ ಪಟೇಲರ ಸಚಿವ ಸಂಪುಟದಲ್ಲಿ, ಧರ್ಮಸಿಂಗ್ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಅದು ಅವರಿಗೇ ಗೊತ್ತು.
ಉಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎಷ್ಟೇ ಗತ್ತು ಗೈರತ್ತು ತೋರಿಸಿದರೂ ಮುಖ್ಯಮಂತ್ರಿ ಪಟೇಲರ ಮುಂದೆ ಯಾರ ಗೈರತ್ತೂ ನಡೆಯುತ್ತಿರಲಿಲ್ಲ. ತಮ್ಮ ಸುತ್ತಮುತ್ತ ಅನಗತ್ಯ ಬಾಡಿಗಳನ್ನು ಇಟ್ಟುಕೊಂಡಿದ್ದರೂ ತಮಗೆದುರಾಗುವ ಎಲ್ಲ ಸಮಸ್ಯೆಗಳಿಗೂ ನೇರವಾಗಿ ಎದೆ ಕೊಟ್ಟು ನಡೆಯುವ ಶಕ್ತಿ ಪಟೇಲರಿಗಿತ್ತು.

ಆದರೆ ಇವತ್ತು ಸಿದ್ದರಾಮಯ್ಯನವರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂಬ ಮನಸ್ಸಿದ್ದರೂ, ಅವರ ಅಕ್ಕಪಕ್ಕದಲ್ಲಿ ಒಳ್ಳೆಯ ಟೀಮು ಇಲ್ಲ. ಇದ್ದುದರಲ್ಲಿ ಕೆಲ ಮಂತ್ರಿಗಳು ಒಳ್ಳೆಯ ಕೆಲಸ ಮಾಡಿದರೂ, ಟೋಟಲಿ ಸಿದ್ದರಾಮಯ್ಯನವರದು ಹೇಳಿಕೊಳ್ಳುವಂತಹ ಸಂಪುಟವಲ್ಲ. ಆದರೆ ಪಟೇಲರ ಸಂಪುಟದಲ್ಲಿ ಘಟಾನುಘಟಿಗಳೇ ಇದ್ದರು. ಸಾಲದೆಂಬಂತೆ ನಮ್ಮ ದೇವೆಗೌಡರು ಈ ಸಿದ್ದರಾಮಯ್ಯನವರಂತಹವರನ್ನು ಮುಂದಿಟ್ಟುಕೊಂಡು ಪದೇಪದೆ ಪಟೇಲರಿಗೆ ಕಿರಿಕಿರಿ ಮಾಡುತ್ತಿದ್ದರು. ಆದರೆ ಇದಕ್ಕೆಲ್ಲ ಪಟೇಲ್ ಜಗ್ಗಿದವರೇ ಅಲ್ಲ. ಇಂತಹ ಒಂದು ಸಂದರ್ಭದಲ್ಲೇ ಹೆಗಡೆ ಅವರು, ಜನತಾದಳವನ್ನು ತೊರೆದು ಬನ್ನಿ ಎಂದು ಶಾಸಕರಿಗೆ ಕರೆ ನೀಡಿದ್ದರು. ಈ ಬಗ್ಗೆ ತುಂಬಿದ ವಿಧಾನಸಭೆಯಲ್ಲೇ ಪ್ರಸ್ತಾಪ ಮಾಡಿದ್ದ ವಾಟಾಳ್ ನಾಗರಾಜ್, ಈಗಾಗಲೇ ಹೆಗಡೆ ಅವರು ನಿಮ್ಮ ಪಕ್ಷದ ಶಾಸಕರನ್ನು ಜನತಾದಳ ತೊರೆದು ಬರುವಂತೆ ಹೇಳುತ್ತಿದ್ದಾರೆ. ಇದನ್ನು ನೋಡಿದರೆ ನಿಮ್ಮ ಸರ್ಕಾರ ಬಹುಕಾಲ ಉಳಿಯುವುದಿಲ್ಲ, ಏನು ಮಾಡುತ್ತೀರಿ? ಎಂದು ಕೇಳಿದ್ದರು. ಅವರ ಮಾತಿಗೆ ಪ್ರತಿಯಾಗಿ ಪಟೇಲ್ ಅಷ್ಟೇ ನಿರರ್ಗಳವಾಗಿ ಅಯ್ಯೋ, ದಿನ ಬೆಳಗಾದರೆ ನಮ್ಮ ಮನೆಯ ಒಂದು ಕಡೆಯಿಂದ ರೈಲು ಕೂಗುತ್ತಾ ಹೋಗುತ್ತದೆ. ಸಂಜೆ ಕೂಗುತ್ತಾ ವಾಪಸ್ಸು ಬರುತ್ತದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಕ್ಕಾಗತ್ತೇನ್ರೀ ವಾಟಾಳ್ ಅಂತ ಪ್ರಶ್ನಿಸಿದ್ದರು.

ಪಟೇಲರಿದ್ದುದು ಹಾಗೆ. ಆದರೆ ಸಿದ್ದರಾಮಯ್ಯ ಅಗತ್ಯಕ್ಕಿಂತ ಹೆಚ್ಚು ಸೀರಿಯಸ್ ಮನುಷ್ಯ. ನನ್ನ ಪ್ರಕಾರ ಎತ್ತರಕ್ಕೇರಿದ ಮನುಷ್ಯ ನಾನು ಖಾಯಂ ಆಗಿ ಇಲ್ಲೇ ಉಳಿಯುತ್ತೇನೆ ಎಂಬ ಭ್ರಮೆ ಇಟ್ಟುಕೊಳ್ಳಬಾರದು. ಈ ನಾಡು ಕಂಡ ಮುಖ್ಯಮಂತ್ರಿಗಳ ಪೈಕಿ ಮಹಾನ್ ಅನ್ನಿಸಿಕೊಂಡ ನಿಜಲಿಂಗಪ್ಪ ಎಐಸಿಸಿಗೇ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಅವರು ರಾಜ್ಯವಾಳಿದರು. ಅವರ ನಂತರ ಕರ್ನಾಟಕದಲ್ಲಿ ನಿಜವಾದ ಸಾಮಾಜಿಕ ಕ್ರಾಂತಿ ಮಾಡಿದ ದೇವರಾಜ ಅರಸರಂತಹವರು ಎಂಟು ವರ್ಷಗಳ ಕಾಲ ಖುರ್ಚಿಯ ಮೇಲೆ ಕೂತಿದ್ದರು. ಆಮೇಲೆ ಮೌಲ್ಯಾಧಾರಿತ ರಾಜಕಾರಣದ ಮಾತನಾಡುತ್ತಾ ಎಲ್ಲರನ್ನೂ ಮೋಡಿ ಮಾಡುತ್ತಿದ್ದ ರಾಮಕೃಷ್ಣ ಹೆಗಡೆ ಎರಡೆರಡು ಬಾರಿ ಮುಖ್ಯಮಂತ್ರಿಯಾದರು. ಎಸ್ಸೆಂ ಕೃಷ್ಣ ಅವರ ಐಟಿ ಬಿಟಿ ಗೆಟಪ್ಪು ನೋಡಿದರೆ ಇನ್ನು ಹತ್ತು ವರ್ಷಗಳ ಕಾಲ ಇವರನ್ನು ಅಲುಗಾಡಿಸುವುದು ಕಷ್ಟ ಎನ್ನಿಸಿತ್ತು. ವಿಧಾನಸೌಧದ ಕಾರಿಡಾರಿನಲ್ಲೇ ನಿಂತು ಯಾವುದೋ ಕಾಗದದ ಮೇಲೆ ಸರ್ಕಾರಿ ಅಧಿಕಾರಿಗಳು ಗಡಗಡ ನಡುಗುವಂತಹ ಆದೇಶ ನೀಡುತ್ತಿದ್ದ ಯಡಿಯೂರಪ್ಪ ಹತ್ತು ವರ್ಷ ಕಾಲ ಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಅಂತ ಅನ್ನಿಸಿತ್ತು.

ಇವರಿಗೆಲ್ಲ ಹೋಲಿಸಿದರೆ ಸಿದ್ದರಾಮಯ್ಯ ಅಷ್ಟು ದೊಡ್ಡ ಜನನಾಯಕ ಅಲ್ಲ. ಅಹಿಂದ ವರ್ಗಗಳ ಛಾಂಪಿಯನ್ ಅಂತ ಇವರ ಅಕ್ಕಪಕ್ಕ ಇರುವವರು ಹೇಳಿಕೊಂಡರೂ ಇವರು ಭಾಗವಹಿಸಿದ ಸಭೆಯಲ್ಲಿ ಸಿ.ಎಂ.ಇಬ್ರಾಹಿಂ ಎಂಬ ಮಾತಿನ ಮಲ್ಲ ಕಾಣದೇ ಹೋದರೆ ಜನ ಸೇರುವುದಿಲ್ಲ. ಇದು ಬೇರೆಯವರಿಗಿರಲಿ, ಸಿದ್ದರಾಮಯ್ಯನವರಿಗೇ ಗೊತ್ತು. ಹೀಗಾಗಿಯೇ ಅವರಿಗೆ ಹೆದರಿಕೆ. ಎಲ್ಲಿ ಹೆಸರು ಮಾಡಿದವರು ಬಂದು ನನ್ನ ಕ್ಯಾಬಿನೆಟ್ಟಿನಲ್ಲಿ ಕೂತು ಬಿಟ್ಟರೆ ನನ್ನ ಜಾಗ ಅಲುಗಾಡುತ್ತದೋ ಅಂತ. ನನ್ನ ಪ್ರಕಾರ, ನಿಜವಾದ ಶಕ್ತಿ ಇರುವ ನಾಯಕ ಅನಗತ್ಯವಾಗಿ ನನಗೆ ಕೌಂಟರ್ ಪಾರ್ಟ್ ಹುಟ್ಟುತ್ತದೆ ಅಂತ ಹೆದರಬಾರದು. ಹಾಗೆ ನೋಡಿದರೆ ಇವರ ಥರವೇ ಹೆಗಡೆ ಕೂಡ ಹೆದರಿಕೊಂಡಿದ್ದರು. ಯಾಕೆಂದರೆ ವಕ್ಕಲಿಗ ಸಮುದಾಯದ ನಾಯಕ ದೇವೆಗೌಡ ಬೆಳೆದುಬಿಟ್ಟರೆ ಅಂತ. ಖುದ್ದು ಕೃಷ್ಣ ಅವರೇ ಚಾಣಾಕ್ಷ ರಾಜಕಾರಣಿಯಾಗಿದ್ದರೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಸಿಎಂ ಮಾಡಿ ಅನ್ನುವ ಉದಾರತೆ ತೋರಲಿಲ್ಲ. ಯಾಕೆಂದರೆ ಓರ್ವ ದಲಿತ ನಾಯಕನನ್ನು ಉಪಮುಖ್ಯಮಂತ್ರಿ ಮಾಡಿಬಿಟ್ಟರೆ ಇಳಿಸುವುದು ಕಷ್ಟ. ಸಾಲದೆಂಬಂತೆ ಅವರು ಒಳ್ಳೆಯ ಕೆಲಸ ಮಾಡಿ ಹೆಸರು ಪಡೆದು ಬಿಟ್ಟರೆ ತಮಗೆ ಪರ್ಯಾಯವಾಗಿ ಬೆಳೆಯಬಹುದು ಅಂತ.

ಆದರೆ ಇಂತಹ ಹೆದರಿಕೆಗಳಿಂದ ಅವರು ಕೈಗೊಂಡ ಯಾವ ಮುನ್ನೆಚ್ಚರಿಕೆಗಳೂ ಫಲ ಕೊಡಲಿಲ್ಲ. ಯಾಕೆಂದರೆ ಕೆಳಗೆ ಬೀಳುವ ಸಮಯ ಬಂದಾಗ ಕೆಳಗೆ ಬೀಳಲೇಬೇಕು. ಹಾಗನ್ನುವುದು ಸಿದ್ದರಾಮಯ್ಯನವರಿಗೆ ಗೊತ್ತಿರಬೇಕು. ಎಷ್ಟೇ ಆದರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಜನರ ಒತ್ತಡಕ್ಕೆ ಮಣಿದು ಅವರು ಸ್ಪರ್ಧಿಸಿದರೆ ತಮ್ಮ ಆತ್ಮಸಾಕ್ಷಿಯ ಜೊತೆ ಅವರು ರಾಜಿ ಮಾಡಿಕೊಳ್ಳುತ್ತಾರೆ ಅಂತ ಅರ್ಥ. ಹಾಗಿಲ್ಲವಾದರೆ ತಮಗೆ ಪರ್ಯಾಯ ನಾಯಕನೊಬ್ಬ ಬೆಳೆಯಬಾರದು ಎಂಬ ಆತಂಕವೇಕೆ? ಅಂದ ಹಾಗೆ ಎರಡು ಹಾಗೂ ಮೂರನೇ ಹಂತದ ನಾಯಕರನ್ನು ತಂದು ಮುಂಚೂಣಿಯಲ್ಲಿ ನಿಲ್ಲಿಸಿಕೊಳ್ಳದೆ ಹೋದರೆ ಯಾವ ಸಂಘಟನೆಯೂ ಗಟ್ಟಿಯಾಗಿ ಬೇರು ಬಿಡಲು ಸಾಧ್ಯವಿಲ್ಲ. ನಮ್ಮಲ್ಲಿ ರೈತ ಚಳವಳಿಯಿಂದ ಹಿಡಿದು ಕನ್ನಡ ಪರ ಚಳವಳಿಗಳ ತನಕ ಆಗಿದ್ದು ಹೀಗೆಯೇ. ಅವು ನಿರಂತರವಾಗಿ ಬೆಳೆಯುತ್ತಲೇ ಇರಬೇಕಿದ್ದ ಫಸಲುಗಳು. ಆದರೆ ಹೋಗಿ ನೋಡಿ, ಚಳವಳಿ ಎಂಬುದು ನಮ್ಮ ಹಳ್ಳಿಗಳ ಕಡೆ ಜನ ಭೂಮಿಯನ್ನು ಹಂಚಿಕೊಂಡು ಒಂದು ಗುಂಟೆ, ಎರಡು ಗುಂಟೆಯಷ್ಟು ಭೂಮಿಯಲ್ಲಿ ವ್ಯವಸಾಯ ಮಾಡುವಂತೆ ಹಂಚಿ ಹೋಗಿದೆ. ಹಲವಾರು ನಾಯಕರು ಹುಟ್ಟಿಕೊಂಡಿದ್ದಾರೆ.

ಆದರೆ ಇದ್ದುದರಲ್ಲೇ ಹಾಗೆ ಮಾಡದೇ ಇರುವುದರಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಕಮ್ಯೂನಿಸ್ಟ್ ಪಕ್ಷಗಳಂತಹವು ಉಳಿದುಕೊಂಡಿವೆ. ದೇವೆಗೌಡರ ಜಾತ್ಯತೀತ ಜನತಾದಳಕ್ಕೂ ಬಂದಿರುವುದು ಇದೇ ಸಮಸ್ಯೆ. ಅದು ಜನತಾ ಪರಿವಾರದ ಟೊಂಗೆಯಂತೆ ಉಳಿಯುವ ಬದಲು ದೇವೆಗೌಡರ ಫ್ಯಾಮಿಲಿಯ ಜೋಕಾಲಿ ಎಂಬಂತಾಗಿ ಹೋಗಿದೆ. ಇಂತಹ ಉದಾಹರಣೆಗಳನ್ನೆಲ್ಲ ಅರ್ಥ ಮಾಡಿಕೊಂಡಿದ್ದರೆ ಸಿದ್ದರಾಮಯ್ಯ ಪಕ್ಷ ಹಾಗೂ ಸರ್ಕಾರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದರು. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿಯಾಗಿ ಯಾವ ವಿಶೇಷ ಗಿಫ್ಟೂ ಸಿಕ್ಕುವುದಿಲ್ಲ. ಆದರೆ ದಲಿತ ಸಮುದಾಯದ ಆಸೆ ಈಡೇರುತ್ತದೆ. ಯಾರು ಬಂದರೂ ರಾಗಿ ಬೀಸೋದು ತಪ್ಪುವುದಿಲ್ಲ ಎಂಬುದು ಹಳೆಯ ಮಾತು. ಹೀಗಾಗಿ ಪರಮೇಶ್ವರ್ ಉಪಮುಖ್ಯಮಂತ್ರಿಯಾದ ಕೂಡಲೇ ದಲಿತರೆಲ್ಲ ಉದ್ಧಾರವಾಗಿ ಬಿಡುತ್ತಾರೆ ಎಂದಲ್ಲ. ಆದರೆ ಸಾಮಾಜಿಕವಾಗಿ ಆ ಸಮುದಾಯಕ್ಕೆ ಮತ್ತಷ್ಟು ಶಕ್ತಿ ಬರುತ್ತದೆ. ಒಬ್ಬ ನಿಜವಾದ ನಾಯಕ ಮಾಡಬೇಕಿರುವುದು ಅದನ್ನೇ. ಒಂದು ಸಮುದಾಯದಲ್ಲಿ ಶಕ್ತಿ ತುಂಬುವ ಕೆಲಸ ಮಾಡುವುದರಿಂದ ಇದಕ್ಕೆ ಕಾರಣರಾದ ನಾಯಕರ ಹೆಸರು ಶಾಶ್ವತವಾಗಿ ಉಳಿಯುತ್ತದೆಯೇ ಹೊರತು ನೆಲಕ್ಕೆ ಬೀಳುವುದಿಲ್ಲ. ಮುಖ್ಯಮಂತ್ರಿ ಪದವಿ ಇವತ್ತು ಇರಬಹುದು, ನಾಳೆ ಹೋಗಬಹುದು.

ದಿಲ್ಲಿಯಲ್ಲಿರುವ ಕಾಂಗ್ರೆಸ್ ನಾಯಕರೂ ಈಗ ಅಭದ್ರ ಭಾವನೆಯಲ್ಲಿದ್ದಾರೆ. ಒಂದು ವೇಳೆ ಕೆಲವಾದರೂ ಪ್ರಮುಖ ರಾಜ್ಯಗಳನ್ನು ಗೆದ್ದುಕೊಂಡಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ದಿಲ್ಲಿಯಿಂದ ಖುದ್ದು ಸೋನಿಯಾ ಗಾಂಧಿ ಒಂದೇ ಸಲ ಖಡಕ್ಕಾಗಿ, ಪರಮೇಶ್ವರ್ ಉಪಮುಖ್ಯಮಂತ್ರಿ ಆಗಬೇಕು ಎಂದು ಹೇಳಿಬಿಡುತ್ತಿದ್ದರು. ಹಾಗಂತ ಅವರು ಹೇಳುವ ಸ್ಥಿತಿಯಲ್ಲಿಲ್ಲ ಎಂದು ಸಿದ್ದರಾಮಯ್ಯ ಸುಮ್ಮನೆ ಇರುವುದು ಒಳ್ಳೆಯ ಬೆಳವಣಿಗೆಯಲ್ಲ. ಖರ್ಗೆ ಸಿಎಂ ಆಗಬೇಕು ಎಂದರೆ ಪರಮೇಶ್ವರ್ ಸದ್ಯಕ್ಕೆ ಡಿಸಿಎಂ ಆಗಬಾರದು ಎಂಬುದೂ ಸರಿಯಾದ ವಾದವಲ್ಲ. ಸನ್ನಿವೇಶ ಕೂಡಿ ಬಂದರೆ ಖರ್ಗೆ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆ ನೋಡಿದರೆ ೧೯೯೯ರ ಸಂದರ್ಭದಲ್ಲಿ ಧರ್ಮಸಿಂಗ್ ಸಿಎಂ ಆಗಬೇಕಿತ್ತು. ಆದರೆ ಅದೃಷ್ಟ ಖುಲಾಯಿಸಿದ್ದು ಕೃಷ್ಣ ಅವರಿಗೆ. ಅವರು ವಕ್ಕಲಿಗರು ಎಂಬ ಕಾರಣಕ್ಕಾಗಿ, ಲಿಂಗಾಯತ ಸಮುದಾಯದ ಪ್ರಮುಖ ನಾಯಕರೆಲ್ಲ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಕೃಷ್ಣ ಅವರಿಗೆ ಪಟ್ಟ ಕಟ್ಟಿತು.

ಹೀಗಾಗಿ ಸನ್ನಿವೇಶ ಧುತ್ತಂತ ಎದುರಾದರೆ ಯಾರೂ ತಡೆಯಲು ಸಾಧ್ಯವಿಲ್ಲ. ಪರಮೇಶ್ವರ್ ವಿಷಯವೂ ಹಾಗೇ. ಆದರೆ ಸಂಕಟ ಬಂದಾಗ ಅವರಿಗೆ ಡಿಸಿಎಂ ಹುದ್ದೆ ಕೊಡುವುದಕ್ಕಿಂತ, ನನ್ನ ಸರ್ಕಾರ ಬಲವಾಗಬೇಕು, ದಲಿತರಿಗೆ ಮತ್ತಷ್ಟು ಶಕ್ತಿ ಸಿಗಬೇಕು, ಅದಕ್ಕಾಗಿ ನಾನು ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡುತ್ತಿದ್ದೇನೆ ಎಂದು ಹೇಳಿದ್ದರೆ ಸಿದ್ದರಾಮಯ್ಯನವರ ಹೆಸರು ಮತ್ತಷ್ಟು ಎತ್ತರಕ್ಕೇರುತ್ತಿತ್ತು. ಆದರೆ ಏನು ಮಾಡುವುದು? ಈ ಮುಂಚೆಲ್ಲ ಭಟ್ಟಂಗಿಗಳಿಂದ ದೂರವಿದ್ದ ಸಿದ್ದರಾಮಯ್ಯನವರಿಗೆ ಅಂತಹ ಭಟ್ಟಂಗಿಗಳೇ ಹತ್ತಿರವಾಗಿದ್ದಾರೆ. ಇರುವ ಅಧಿಕಾರವನ್ನು ನೀವೇ ಕೇಂದ್ರೀಕರಿಸಿಕೊಳ್ಳಿ ಸಾರ್, ಎಸ್ಸೆಂ ಕೃಷ್ಣ ಅವರ ಥರ ಹೈಕಮಾಂಡ್‌ಗೆ ಬೇಕಾದ್ದನ್ನು ಮಾಡಿ. ಹೀಗೆ ಮಾಡಬೇಕೆಂದರೆ ನಿಮಗೆ ಕೌಂಟರ್ ಇರಬಾರದು ಎಂದು ಒತ್ತಾಸೆ ತುಂಬುತ್ತಿರುವವರೂ ಇವರೇ. ಹೀಗೆ ಹೈಕಮಾಂಡಿಗೆ ಹೆಲ್ಪು ಮಾಡಿದ ಪರಿಣಾಮವಾಗಿಯೇ ಎಸ್ಸೆಂ ಕೃಷ್ಣ ಮಹಾರಾಷ್ಟ್ರದ ರಾಜ್ಯಪಾಲರಾದರು, ಕೇಂದ್ರ ವಿದೇಶಾಂಗ ಮಂತ್ರಿಯಾಗಿ ಮೆರೆದರು. ನೀವೂ ಅಷ್ಟೇ. ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿರದಿದ್ದರೂ ಕೃಷ್ಣ ಅವರಂತೆ ದಿಲ್ಲಿಯಲ್ಲಿ ಮೆರೆಯಿರಿ ಎಂದು ಕಿವಿ ಕಚ್ಚುತ್ತಿದ್ದಾರೆ.

ಆದರೆ ಕೃಷ್ಣ ಅಧಿಕಾರದಲ್ಲಿದ್ದಾಗ ದಿಲ್ಲಿಯಲ್ಲಿದ್ದುದು ಎನ್‌ಡಿಎ ಸರ್ಕಾರ. ಈಗಲೂ ಎನ್‌ಡಿಎ ಸರ್ಕಾರವೇ ಇರುವುದು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಸ್ವಯಂ ಬಲವಿದೆ. ಹೀಗಾಗಿ ಮಿತ್ರ ಪಕ್ಷಗಳು ಕಮಕ್‌ಕಿಮಕ್ ಅನ್ನದೇ ಸುಮ್ಮನಿವೆ. ಆದರೆ ವಾಜಪೇಯಿ ಮಿತ್ರ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ಆದರೆ ಅಂತಹ ಭಿಡೆಗಳ್ಯಾವುವೂ ಇಲ್ಲದ ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾದರು ಅಂತಿಟ್ಟುಕೊಳ್ಳಿ. ಅಲ್ಲಿಗೆ ಸಿದ್ದರಾಮಯ್ಯನವರ ಅಕ್ಕಪಕ್ಕ ಕುಳಿತು ಪುಂಗಿ ಊದುತ್ತಿರುವವರೂ ನಾಪತ್ತೆಯಾಗಿ ಬಿಡುತ್ತಾರೆ. ಸಿದ್ದರಾಮಯ್ಯ ಇದನ್ನೆಲ್ಲ ಅರ್ಥ ಮಾಡಿಕೊಳ್ಳಲಿ. ಪರ್ಯಾಯ ಶಕ್ತಿ ಕೇಂದ್ರ ಅಂತಲೋ, ಎಲ್ಲ ಅಧಿಕಾರ ತನ್ನಲ್ಲೇ ಕೇಂದ್ರೀಕರಣಗೊಳ್ಳಲಿ ಅಂತಲೋ ಭಾವಿಸುವುದನ್ನು ಬಿಟ್ಟು ಪರಮೇಶ್ವರ್ ಅವರಂತಹ ಒಬ್ಬ ದಲಿತ ನಾಯಕನನ್ನು ತಾವಾಗಿಯೇ ಮುಂದೆ ನಿಂತು ಡಿಸಿಎಂ ಮಾಡಲಿ. ಆಗ ಸರ್ಕಾರಕ್ಕೂ ಶಕ್ತಿ ಬರುತ್ತದೆ. ದಲಿತರಿಗೂ ಸ್ಫೂರ್ತಿ ಸಿಗುತ್ತದೆ. ಸಿದ್ದರಾಮಯ್ಯನವರ ಹೆಸರೂ ಬಾವುಟದಂತೆ ಮೇಲೇರುತ್ತದೆ. ಹಾಗಾಗಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books