Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಿಮ್ಮೊಡನಿದ್ದೂ ನಿಮ್ಮಂಥಾಗದೇ ಬದುಕುವುದು ಅಂದರೆ..

ನನ್ಮಗ ಬಹಳ ಬುದ್ಧಿವಂತ, ಆದರೆ ಭಲೇ ಸೋಂಬೇರಿ ಕಣ್ರೀ..
ತಾಯಿ ಹೆಮ್ಮೆಯಿಂದ ಘೋಷಿಸುತ್ತಾಳೆ. ನಾನು ತಲೆದೂಗುತ್ತೇನೆ. ಆಕೆಗೂ ಪ್ರತಿಕ್ರಿಯೆ ಬೇಕಾಗಿರುವುದಿಲ್ಲ. ಆಕೆಯ ಉದ್ದೇಶ ನನಗರ್ಥವಾಗುತ್ತದೆ. ತನ್ನ ಮಗನನ್ನು ಹೊಗಳಬೇಕು, ಅದರ ಜೊತೆಗೆ ಆತ ಕಡಿಮೆ ಮಾರ್ಕ್ಸ್ ತೆಗೆದುಕೊಂಡಿದ್ದಕ್ಕೆ ಒಂದು ಕಾರಣವನ್ನೂ ನೀಡಬೇಕು. ಇದೊಂದು ರೀತಿಯಲ್ಲಿ ನಿರೀಕ್ಷಣಾ ಜಾಮೀನು ತೆಗೆದುಕೊಂಡಂತೆ. ಮೊದಲು ಪಾಸಿಟಿವ್ ಅಂಶವನ್ನು ಹೇಳಿಬಿಡಬೇಕು, ಆಮೇಲೆ ನೆಗೆಟಿವ್.

ಹೆತ್ತವರು ತಮ್ಮ ಮಕ್ಕಳ ವಿಚಾರದಲ್ಲಿ ಹೀಗೆ ಮಾತಾಡುವುದು ಅಸಹಜವೇನಲ್ಲ, ಅದು ಸಹ್ಯ ಕೂಡಾ. ಆದರೆ ಕೆಲವರು ಮಿಕ್ಕ ವಿಚಾರಗಳಲ್ಲೂ ಇದನ್ನೇ ಪ್ರಾಕ್ಟೀಸು ಮಾಡಿಕೊಂಡಿರುತ್ತಾರೆ. ತೃಪ್ತಿಯ ಬೆನ್ನಿಗೇ ಅತೃಪ್ತಿ. ಕೇಳುಗನಿಗೆ ಗೊಂದಲ ತಪ್ಪಿದ್ದಲ್ಲ. ನಿಮಗೆ ಬೇಕಾಗಿರುವುದು ಒಂದು ಯಸ್ ಅಥವಾ ನೋ. ಆದರೆ ಅವೆರಡನ್ನೂ ಹೇಳದೇ ಗೋಡೆ ಮೇಲೆ ದೀಪ ಇಡುವ ಮಂದಿಯ ಜೊತೆ ಸಂವಹನ ಕೊಂಚ ಕಷ್ಟ. ಯಾಕೆಂದರೆ ಅವರು ಯಾವುದಕ್ಕೂ ಕಮಿಟ್ ಆಗುವುದಿಲ್ಲ, ಯಾವುದನ್ನೂ ನೇರವಾಗಿ ಹೇಳುವುದಿಲ್ಲ. ಅದೇನೋ ಭಯ, ಅದೇನೋ ಸಂಕೋಚ. ಅವರ ಮಾತಲ್ಲಿ ಅವರಿಗೇ ನಂಬಿಕೆಯಿಲ್ಲ. ಆಗ ಹೀಗೆಲ್ಲಾ ಆಗುತ್ತದೆ.

“ಆ ದರ್ಶಿನಿ ಹೊಟೇಲಲ್ಲಿ ತಿಂಡಿ ಚೆನ್ನಾಗಿರುತ್ತದೆಯಾ?" ಹಾಗಂತ ಅವರನ್ನು ಕೇಳಿ ನೋಡಿ,
“ಚೆನ್ನಾಗಿರುತ್ತದೆ, ಆದರೆ ತುಂಬಾ ದುಬಾರಿ ಮಾರಾಯ್ರೇ" ಎಂಬ ಉತ್ತರ ಬರುತ್ತದೆ.
“ಆ ಸಿನೆಮಾ ಚೆನ್ನಾಗಿದೆಯಾ?"
“ಸಿನೆಮಾ ಏನೋ ಚೆನ್ನಾಗಿದೆ. ಆದರೆ ಹೀರೋನೇ ಎಡವಟ್ಟು"
“ಹೋಗ್ಲಿ, ನೀವು ಚೆನ್ನಾಗಿದ್ದೀರಾ?"
“ಓಕೆ, ಆದರೆ ಅಸಿಡಿಟಿ ಪ್ರಾಬ್ಲಂ"
ಹೀಗೇ ಎಲ್ಲಾದಕ್ಕೂ ಒಂದು but ಸೇರಿಸಿ ನಿಮ್ಮ ತಲೆಯನ್ನು ಚಿಟ್ಟು ಹಿಡಿಸುವುದೂ ಒಂದು ಕಲೆ. ಅದಿರಲಿ, ಎರಡು ವಿರುದ್ಧ ಧ್ರುವಗಳನ್ನು ಒಂದು ಕಡೆ ಸೇರಿಸುವ ಈ ಅಭ್ಯಾಸ ಯಾಕಾಗಿ ಬರುತ್ತದೆ. ಉದಾಹರಣೆಗೆ ಬುದ್ಧಿವಂತರು ಯಾಕೆ ಸೋಂಬೇರಿಗಳಾಗುತ್ತಾರೆ? ತಾನು ಜಾಣನಾಗಿರುವುದರಿಂದ ಬೇರೆಯವರ ಥರ ಪರಿಶ್ರಮ ಪಡಬೇಕಾಗಿಲ್ಲ ಅನ್ನುವ ಧೋರಣೆಯಿರಬಹುದಾ? ಹಾಗಿದ್ದರೆ ಕಷ್ಟಪಟ್ಟು ದುಡಿಯುವವರೆಲ್ಲರೂ ಶತದಡ್ಡರಾ?

ಉತ್ತರ ಹುಡುಕುವುದು ಕೊಂಚ ಕಷ್ಟದ ಕೆಲಸಾನೇ. ನಾವು ಮಾಡುವ ಕೆಲಸಕ್ಕೆ ಸಂಬಂಧಿಸಿದಂತೆ ಇಂಗ್ಲಿಷಲ್ಲಿ ಎರಡು ಪದಗಳಿವೆ; hard work and smart work. ಹಾರ್ಡ್‌ವರ್ಕ್ ಮಾಡುವವನು ಇಡೀ ದಿನ ಕತ್ತೆ ಥರ ದುಡಿಯುತ್ತಲೇ ಇರುತ್ತಾನೆ. ಆದರೆ ಸ್ಮಾರ್ಟ್ ವರ್ಕರ್ ಅದೇ ಕೆಲಸವನ್ನು ಕೆಲವೇ ಗಂಟೆಗಳಲ್ಲಿ ಮುಗಿಸುತ್ತಾನೆ. ಮೊದಲನೆಯವನು ತನ್ನ ದೈಹಿಕ ಕ್ಷಮತೆ ಮೇಲೆ ನಂಬಿಕೆಯಿಟ್ಟವನು, ಎರಡನೆಯವನು ತನ್ನ ಬುದ್ಧಿಮತ್ತೆಯನ್ನು ನೆಚ್ಚಿಕೊಂಡವನು. ಹಾಗಾಗಿ ಅವನು ತನ್ನ ಕೈಕಾಲಿಗಿಂತ ಮಿದುಳಿಗೆ ಹೆಚ್ಚು ಕೆಲಸ ಕೊಡುತ್ತಾನೆ. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಕೆಲವೊಮ್ಮೆ ಇಂಥಾ ಪ್ರಶಂಸೆಯೇ ಆತನನ್ನು ದುರಹಂಕಾರಿಯನ್ನಾಗಿಸುತ್ತದೆ. ಅವನು ಪ್ರತಿಭಾವಂತ, ಆದರೆ ದುರಹಂಕಾರಿ ಅನ್ನುವ ಇನ್ನೊಂದು ಕಾಮೆಂಟು ಹುಟ್ಟಿಕೊಳ್ಳುವುದೇ ಆವಾಗ. ಒಂದು ನಾಗರಿಕ ಸಮಾಜಕ್ಕೆ ದುರಹಂಕಾರಿಗಳು ಬೇಕಿಲ್ಲ. ಸ್ವಲ್ಪ ದಡ್ಡನಾದರೂ ಪರವಾಗಿಲ್ಲ, ಆತ ಸಜ್ಜನನಾಗಿರಬೇಕು ಎಂದು ಸಮಾಜ ಬಯಸುತ್ತದೆ. ಆದರೆ ಒಂದು ಸಂಸ್ಥೆ ದುರಹಂಕಾರಿಗಳನ್ನೂ ಸಹಿಸಿಕೊಳ್ಳುತ್ತದೆ, ಯಾಕೆಂದರೆ ಅದಕ್ಕೆ ಫಲಿತಾಂಶ ಮುಖ್ಯ. ಕೆಲಸಕ್ಕೆ ಬಾರದ ಒಳ್ಳೆಯವನನ್ನು ದೊಡ್ಡ ಸ್ಥಾನದಲ್ಲಿ ಕೂರಿಸಿದರೆ ಕಂಪನಿಗೆ ನಷ್ಟವಾಗುತ್ತದೆ. ಇದರರ್ಥ ಏನು? ಈ ಜಗತ್ತು ಜಾಣರಿಗಷ್ಟೇ ಮೀಸಲು ಅಂತಾನಾ?

ಅವನು ಜಾಣ, ಆದರೆ ಬೇರೆಯವರ ಮಾತು ಕೇಳುವುದಿಲ್ಲ ಅನ್ನುವುದು ಇನ್ನೊಂದು ನುಡಿಗಟ್ಟು. ಅಷ್ಟಕ್ಕೂ ಜಾಣನಿಗೆ ಬೇರೆಯವರ ಮಾತು ಕೇಳಬೇಕಾದ ದರ್ದು ಯಾಕಿರುತ್ತದೆ ಹೇಳಿ? ತಮ್ಮ ಬದುಕಿನ ಎಲ್ಲಾ ನಿರ್ಧಾರಗಳನ್ನು ತಾನೇ ಕೈಗೊಳ್ಳುವ ಸಾಮರ್ಥ್ಯ ಇರುವವನಿಗೆ ಬೇರೆಯವರ ಸಲಹೆಯ ಅಗತ್ಯ ಇರುವುದಿಲ್ಲ. ಅಪ್ಪಿತಪ್ಪಿ ಅವನು ಸಲಹೆ ಕೇಳಿದರೆ ದಡ್ಡನಾದ ಎಂದೇ ಅರ್ಥ.
ಸಜ್ಜನ ಆದರೆ ಪೆದ್ದ, ಕಡುಭ್ರಷ್ಟ ಆದರೆ ಕೆಲಸ ಮಾಡಿಸಿಕೊಡುತ್ತಾನೆ. ಇದು ಈ ವರ್ತಮಾನದ ಇನ್ನೊಂದು ಪ್ಯಾಕೇಜು. ಕೈ-ಬಾಯಿ ಸ್ವಚ್ಛವಾಗಿಟ್ಟುಕೊಂಡ ಅಧಿಕಾರಿಯನ್ನು ಜನರು ಇಷ್ಟಪಡುವುದಿಲ್ಲ. ಲಂಚ ತೆಗೆದುಕೊಂಡು ಕೆಲಸ ಮಾಡಿಸಿಕೊಡುವವರು ನಮಗೆ ಬೇಕು. ಎಂಬಲ್ಲಿಗೆ ಲಂಚ ಅನ್ನುವುದು ಒಂದು ಕಮಿಟ್‌ಮೆಂಟ್ ಆಗುತ್ತದೆ. ನಾನು ಲಂಚ ಕೊಡುವುದಿಲ್ಲ, ನ್ಯಾಯಯುತವಾಗಿಯೇ ನನ್ನ ಕೆಲಸ ಮಾಡಿಸಿಕೊಳ್ಳುತ್ತೇನೆ ಅನ್ನುವವನು ತನ್ನ ಜೀವಮಾನ ಪೂರ್ತಿ ಆ ಹೋರಾಟದಲ್ಲೇ ಕಾಲ ಕಳೆಯಬೇಕಾಗುತ್ತದೆ. ನಾನು ಲಂಚ ತೆಗೆದುಕೊಳ್ಳುವುದಿಲ್ಲ ಅನ್ನುವ ಪ್ರಾಮಾಣಿಕನನ್ನು ವ್ಯವಸ್ಥೆಯೇ ಹೊರಗಿಡುತ್ತದೆ. ಇಂಥಾ ನಾಲ್ಕೈದು ಪ್ರಸಂಗಗಳು ಇತ್ತೀಚೆಗೆ ನಮ್ಮ ಕಣ್ಣ ಮುಂದೆಯೇ ನಡೆದಿವೆ. ಪ್ರಾಮಾಣಿಕತೆ ಅನ್ನುವುದು ಈಗ ಒಂದು ಮೌಲ್ಯವಾಗಿ ಉಳಿದಿಲ್ಲ, ಅದು ಹುತಾತ್ಮರಾಗುವುದಕ್ಕೆ ನೀವು ಆಯ್ಕೆ ಮಾಡಿಕೊಂಡಿರುವ ಹಾದಿ ಎಂದೇ ಜನರು ಭಾವಿಸುತ್ತಾರೆ. ಸರ್ಕಾರಿ ಕೆಲಸದಲ್ಲಿರುವ ಹುಡುಗನಿಗೆ ತನ್ನ ಮಗಳನ್ನು ಕೊಟ್ಟರೆ ಆಕೆ ಸುಖವಾಗಿರುತ್ತಾಳೆ ಎಂದು ಹುಡುಗಿ ಹೆತ್ತವರು ಯಾಕೆ ಭಾವಿಸುತ್ತಾರೆ ಹೇಳಿ? ಸಂಬಳ ಕಡಿಮೆಯಾದರೂ ಆದಾಯ ಚೆನ್ನಾಗಿರುತ್ತದೆ ಎಂಬ ಏಕೈಕ ಕಾರಣಕ್ಕೆ. ಭ್ರಷ್ಟರ ಮನೆಗೆ ಲೋಕಾಯುಕ್ತರು ದಾಳಿ ಮಾಡಿ ಕೋಟ್ಯಂತರ ರುಪಾಯಿ ಬೆಲೆಬಾಳುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡರೂ ಆ ಭ್ರಷ್ಟರ ಮರ್ಯಾದೆಯೇನೂ ಊನವಾಗುವುದಿಲ್ಲ. ಕಳೆದುಕೊಂಡ ಮರ್ಯಾದೆಯನ್ನು ಮತ್ತೆ ದುಡ್ಡು ಕೊಟ್ಟು ಖರೀದಿಸುವ ಚಾಣಾಕ್ಷತೆ ಮತ್ತು ಭಂಡತನ ಅವರಿಗಿರುತ್ತದೆ.

ನಮಗೆ ಅರಿವಿಲ್ಲದಂತೆಯೇ ಇಂಥಾದ್ದೊಂದು ಹೊಂದಾಣಿಕೆಯ ಜಗತ್ತಲ್ಲಿ ನಾವು ಕೂಡಾ ಪಾಲುದಾರರಾಗಿದ್ದೇವೆ. ನಮ್ಮನ್ನು ಯಾರಾದರೂ ಸಂಭಾವಿತ ಅಂದರೆ ಗಾಬರಿಯಾಗುತ್ತದೆ. ಸಂಭಾವಿತ ಅಂದರೆ ನಿಷ್ಪ್ರಯೋಜಕ ಅಥವಾ ಹೇಡಿ ಅನ್ನುವುದಕ್ಕೆ ಪರ್ಯಾಯ ಪದವಿರಬಹುದೇ ಎಂದು ಆತಂಕಗೊಳ್ಳುತ್ತೇವೆ. ಇದು ಎಂಥಾ ಅತಿರೇಕಕ್ಕೆ ಹೋಗಿದೆ ಅಂದರೆ ‘ನಾನು ಸುಮ್ಮನಿದ್ದೇನೆ ಅಂದ ಮಾತ್ರಕ್ಕೆ ಅದು ನನ್ನ ದೌರ್ಬಲ್ಯ ಎಂದು ಯಾರೂ ಅಂದುಕೊಳ್ಳಬೇಕಾಗಿಲ್ಲ’ ಎಂದು ಘೋಷಿಸುವ ಹಂತಕ್ಕೆ ನಾವು ತಲುಪಿದ್ದೇವೆ. ಸಿಕ್ಕಾಪಟ್ಟೆ ಮಾತಾಡುವವರು ಜನರ ಕಣ್ಣಲ್ಲಿ ಆತ್ಮವಿಶ್ವಾಸದ ಪ್ರತಿರೂಪದಂತೆ ಕಾಣಿಸುತ್ತಾರೆ. ಮಾತೇ ಆಡದೆ ತನ್ನ ಪಾಡಿಗೆ ಕೆಲಸ ಮಾಡುವವನು ವೇಸ್ಟ್ ಬಾಡಿ, ಬೋರಿಂಗ್ ಫೆಲೋ. ಆದರೆ ವಿಪರೀತ ಮಾತಾಡುವವರು ತಮ್ಮ ಕೀಳರಿಮೆ ಅಥವಾ ಅಜ್ಞಾನವನ್ನು ಮುಚ್ಚಿಟ್ಟುಕೊಳ್ಳುವುದಕ್ಕೆ ಮಾತನ್ನು ಗುರಾಣಿಯ ಥರ ಬಳಸುತ್ತಾರೆ ಅನ್ನುವುದು ಬಹಳ ಜನರಿಗೆ ಗೊತ್ತಾಗುವುದಿಲ್ಲ.

ನಾನಿದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆ ಅನ್ನುವುದು ನಿಮಗೆ ಅರ್ಥವಾಗಿರಬಹುದು. ಅಡ್ಡದಾರಿಯ ಮೂಲಕ ಬದುಕಿನಲ್ಲಿ ಮೇಲೆ ಬಂದವರು ನಮ್ಮ ಕಣ್ಣಿಗೆ ಮಾದರಿಯಾಗಿ ಕಾಣಿಸುತ್ತಿರುವ ವಿಚಿತ್ರ ಕಾಲಘಟ್ಟದಲ್ಲಿ ನಾವಿದ್ದೇವೆ. ಅದರಲ್ಲೇ ನಮ್ಮ ಪರಮಸುಖ ಅಡಗಿದೆ. ಹಾಗಾಗಿ ನಾನೂ ಅವರಂತೆ ಇರುತ್ತೇನೆ, ಇರಬೇಕಾಗುತ್ತದೆ ಎಂದು ಅಂದುಕೊಂಡರೆ ಅದನ್ನು ಜಾರಿಗೆ ತರುವುದು ಕಷ್ಟವೇನಲ್ಲ. ಆದರೆ ಕೊನೆಗೊಂದು ದಿನ ಅವೆಲ್ಲದಕ್ಕೂ ನೀವು ದಂಡ ತೆರಬೇಕಾಗುತ್ತದೆ ಅನ್ನುವುದು ನೆನಪಿರಲಿ. ನಾನವನಲ್ಲ, ನಾನು ಅವನಾಗಬಾರದು, ನನ್ನದೇ ಹಾದಿಯನ್ನು ಹುಡುಕಿಕೊಳ್ಳಬೇಕು ಎಂದು ಹೊರಟರೆ ಅದರಿಂದ ಸಿಗುವ ನೆಮ್ಮದಿಗೆ ಬೆಲೆ ಕಟ್ಟಲಾಗುವುದಿಲ್ಲ. ಒಬ್ಬ ರಾಜ್‌ಕುಮಾರ್, ರಾಹುಲ್ ದ್ರಾವಿಡ್, ರೋಜರ್ ಫೆಡರರ್, ಸಿಎನ್‌ಆರ್.ರಾವ್ ಅಂಥವರು ರೂಪುಗೊಂಡಿದ್ದು ಹಾಗೆ.
ನಿಮ್ಮ ನಡೆನುಡಿ ನೇರವಾಗಿದ್ದಾಗ ನೀವು but ಪದವನ್ನು ಬಳಸುವುದಿಲ್ಲ. ನಿಮ್ಮ ಬಗ್ಗೆ ಮಾತಾಡುವವರೂ ಆ ಪದವನ್ನು ಬಳಸುವುದಿಲ್ಲ. ‘ಅವನು ಬುದ್ಧಿವಂತ, ಜೊತೆಗೇ ವಿನಯವಂತ ಕೂಡಾ’ ಅನ್ನುವ ಪದ ನಮ್ಮ ಕಿವಿಗೆಷ್ಟು ಹಿತವಾಗಿ ಕೇಳಿಸುತ್ತದೆ ಅನ್ನುವುದನ್ನು ಯೋಚನೆ ಮಾಡಿ ನೋಡಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 October, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books