Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಸಿದ್ದು ಎದ್ದು ನಿಲ್ಲುವ ಕಾಲ!

ಕಾಂಗ್ರೆಸ್‌ನ ಸೋಲುಗಳ ಪರಂಪರೆ ಮುಂದುವರಿದಿದೆ. ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಅದು ಪರಾಭವ ಅನುಭವಿಸುವ ಸೂಚನೆ ಯಾವತ್ತೋ ಕಂಡಿತ್ತು. ಹರಿಯಾಣದಲ್ಲಿ ಭೂಪಿಂದರ್ ಹೂಡಾ ನೇತೃತ್ವದ ಸರ್ಕಾರ ಸೋನಿಯಾ ಅಳಿಯ ರಾಬರ್ಟ್ ವಾದ್ರಾಗೆ ಅನುಕೂಲ ಮಾಡಿಕೊಟ್ಟ ಆರೋಪದಿಂದ ಹಿಡಿದು ಹಲವು ದೂರುಗಳ ಕೂಪದಲ್ಲಿ ಸಿಲುಕಿತ್ತು. ಅದೇ ರೀತಿ ದೇಶದ ಅತ್ಯಂತ ದುರ್ಬಲ ರಾಜಕಾರಣಿ ಅನ್ನಿಸಿಕೊಂಡ ಪೃಥ್ವಿರಾಜ್ ಚೌಹಾಣ್ ನೇತೃತ್ವದ ಕಾಂಗ್ರೆಸ್ ತನ್ನ ಬುನಾದಿಯನ್ನು ದುರ್ಬಲಗೊಳಿಸಿಕೊಂಡು ಯಾವುದೋ ಕಾಲವಾಗಿತ್ತು. ಹಾಗಂತಲೇ ಶರದ್ ಪವಾರ್ ಅವರಂತಹ ರಾಜಕಾರಣಿ ಮುಂದಿನ ದಿನಗಳಲ್ಲಿ ಮೋದಿಯ ವಿರೋಧ ಕಟ್ಟಿಕೊಂಡು ರಾಜಕೀಯ ಮಾಡುವುದು ಕಷ್ಟ ಎಂಬ ಕಾರಣಕ್ಕಾಗಿ ತಮ್ಮ ಎನ್‌ಸಿಪಿಯನ್ನು ಚುನಾವಣೆಗೂ ಮುನ್ನ ಹೊರಗೆ ಕರೆದುಕೊಂಡು ಬಂದು ಬಿಟ್ಟರು.

ಹೀಗಾಗಿ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಗತಿ ಹರೋಹರ ಎಂಬ ಮಟ್ಟಕ್ಕೆ ತಲುಪಿತ್ತು. ಇವತ್ತು ಆ ಪಕ್ಷ ರಾಷ್ಟ್ರಮಟ್ಟದಲ್ಲಿ ಯಾವ ಲೆವೆಲ್ಲಿಗೆ ತಲುಪಿದೆ ಎಂದರೆ ಕರ್ನಾಟಕ ಹೊರತುಪಡಿಸಿದಂತೆ ಅದರ ಕೈಲಿ ಬೇರೆ ಯಾವ ಪ್ರಮುಖ ರಾಜ್ಯವೂ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಸೂಪರ್ ಸಿಎಂ ಆಗಿ ಪರಿವರ್ತಿತರಾಗಿದ್ದಾರೆ. ಅನುಮಾನವೇ ಬೇಡ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಲಿದೆ. ಸನ್ನಿವೇಶ ತನಗೆ ತಾನೇ ಎಷ್ಟು ಚೆನ್ನಾಗಿ ಬಿಜೆಪಿ ಪರ ರೂಪುಗೊಂಡಿದೆ ಎಂದರೆ ಮೊನ್ನೆ ಮೊನ್ನೆಯ ತನಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕಚ್ಚಾ ಬ್ಯಾರಲ್ ತೈಲದ ಬೆಲೆ ನೂರಾ ಹದಿನೈದು ಡಾಲರುಗಳಷ್ಟಿತ್ತು. ಒಂದು ಕಚ್ಚಾ ಬ್ಯಾರಲ್ ತೈಲ ಎಂದರೆ ಅಜಮಾಸು ನೂರಾ ನಲ್ವತೊಂಬತ್ತು ಲೀಟರು ತೈಲ. ಇವತ್ತು ಅದರ ಬೆಲೆ ಎಂಬತ್ಮೂರು ಡಾಲರುಗಿಳಿದಿದೆ. ಅಂದರೆ ಮೂವತ್ತೆರಡು ಡಾಲರುಗಳಷ್ಟು, ಭಾರತದ ಲೆಕ್ಕದಲ್ಲಿ ಸುಮಾರು ಒಂದು ಕಚ್ಚಾ ಬ್ಯಾರಲ್ ತೈಲದ ಬೆಲೆ ಸಾವಿರದ ಒಂಬೈನೂರು ರುಪಾಯಿಗಳಷ್ಟು ಕಡಿಮೆಯಾಗಿದೆ.

ದೇಶದ ಅಧಿಕಾರ ಚುಕ್ಕಾಣಿ ಹಿಡಿದ ಯಾವುದೇ ಪಕ್ಷಕ್ಕಾದರೂ ಇದು ಬಂಪರ್ ಕೊಡುಗೆ. ಹಾಗಂತ ಮುಂದೆ ಇದೇ ಪರಿಸ್ಥಿತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಜಗತ್ತಿನ ಹಲ ರಾಷ್ಟ್ರಗಳಲ್ಲಿ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಆವಿಷ್ಕಾರಗಳು ನಡೆಯುತ್ತಿವೆ. ನಮ್ಮ ಆದಾಯದ ಪೈಕಿ ಗಣನೀಯ ಪ್ರಮಾಣದ ಹಣ ತೈಲ ಖರೀದಿ ಮಾಡುವ ಸಲುವಾಗಿಯೇ ವೆಚ್ಚವಾಗುತ್ತದೆ. ಅಂಥದರಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ಸಾವಿರದ ಒಂಬೈನೂರು ರುಪಾಯಿಗಳಷ್ಟು ಕಡಿಮೆಯಾದರೆ ಮೋದಿ ಸರ್ಕಾರಕ್ಕೆ ಹೊಸ ಶಕ್ತಿ ಸಿಕ್ಕಂತೆಯೇ ಅರ್ಥ. ಭಾರತದಲ್ಲಿ ಪ್ರತಿ ವರ್ಷ ತೈಲದ ಮೇಲಿನ ಬೇಡಿಕೆ ಪ್ರಮಾಣ ಶೇಕಡಾ ಹತ್ತರಷ್ಟು ಹೆಚ್ಚುತ್ತಿದೆ. ಸಮೂಹ ಸಾರಿಗೆ ನಿರೀಕ್ಷಿತ ಪ್ರಮಾಣದ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಇಂತಹ ಬೇಡಿಕೆಯ ಪ್ರಮಾಣ ಹೆಚ್ಚುತ್ತಲೇ ಇದೆ. ಸಮೂಹ ಸಾರಿಗೆ ವ್ಯವಸ್ಥೆ ಯಶಸ್ವಿಯಾದರೆ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಿ ಸ್ಥಿರತೆ ಸಾಧ್ಯವಾಗುತ್ತದೆ.

ಅದೇನೇ ಇರಲಿ, ಮರಳಿ ವಿಷಯಕ್ಕೆ ಬರೋಣ. ಇವತ್ತು ದೇಶದ ಉದ್ದಗಲ ಕಾಂಗ್ರೆಸ್ ಎಂಬ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿದೆ, ನಿರ್ವಿಣ್ಣವಾಗಿದೆ. ಕಳೆದ ಲೋಕಸಭಾ ಚುನಾವಣೆಯ ತನಕ ಜಗತ್ತಿನ ಸೂಪರ್ ಮಹಿಳೆಯರಲ್ಲಿ ಒಬ್ಬರಂತೆ ಕಂಗೊಳಿಸುತ್ತಿದ್ದ ಸೋನಿಯಾ ಗಾಂಧಿ ಮೂಲೆ ಸೇರಿದ್ದಾರೆ. ಅವರ ಪುತ್ರ ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗಿ ತಲೆ ಮರೆಸಿಕೊಂಡಿರುತ್ತಾರೋ ಅಲ್ಲಿಂದ ಬಲವಂತವಾಗಿ ಕರೆದುಕೊಂಡು ಬರಬೇಕು. ಇನ್‌ಫ್ಯಾಕ್ಟ್ ಆ ಹುಡುಗನಿಗೆ ರಾಜಕೀಯದ ಬಗ್ಗೆ ಫ್ಯಾಷನ್ ಇಲ್ಲ. ಹೊಸದೇನನ್ನೋ ಮಾಡಬೇಕು ಎಂಬ ಉಮ್ಮೇದಿಯಿಲ್ಲ. ಆದರೆ ಅವರ ತಂದೆ ರಾಜೀವ್ ಗಾಂಧಿ ಪೈಲಟ್ ಆಗಿದ್ದವರು. ತಾಯಿಯ ಹತ್ಯೆಯಾದ ಕೂಡಲೇ ಈ ದೇಶದ ಪ್ರಧಾನಿಯಾದವರು. ಅವರಿಗೆ ನೂರಾರು ಕನಸುಗಳಿದ್ದವು. ದೂರವಾಣಿಯಿಂದ ಹಿಡಿದು, ಕಮ್ಯುನಿಕೇಷನ್ ತನಕ ಎಲ್ಲ ರೀತಿಯಲ್ಲೂ ಹೊಸತೇನಾದರೂ ಬೆಳವಣಿಗೆ ಆಗಬೇಕು ಎಂದವರು ಬಯಸಿದರು. ಸಂವಿಧಾನದ ಎಪ್ಪತ್ಮೂರು ಹಾಗೂ ಎಪ್ಪತ್ನಾಲ್ಕನೇ ವಿಧಿಗೆ ತಿದ್ದುಪಡಿ ತಂದು ಪಂಚಾಯತ್ ವ್ಯವಸ್ಥೆಯನ್ನು ಬಲಗೊಳಿಸಿದರು.

ಆದರೆ ಅವರ ಮಗ ರಾಹುಲ್ ಗಾಂಧಿಯ ಕಣ್ಣಲ್ಲಿ ಕನಸುಗಳೇ ಇಲ್ಲ. ಯಾರೋ ಬಲವಂತ ಮಾಡಿದರು ಅಂತ ಇಲ್ಲಿಗೆ ಬಂದು ಗಿರಿಜನ ವಾಸಿಸುತ್ತಿರುವ ಹಾಡಿಗಳನ್ನು ನೋಡುವುದು, ಬಿಜೆಪಿಯ ಬಗ್ಗೆ ಸ್ಪಷ್ಟವಾಗಿ ಟೀಕಿಸದೆ, ಉಸ್ ಕೇ ಊಪ್ಪರ್ ಹಮ್ಕೋ ಪಿಟಿ ಲಗ್ತಾ ಹೈ ಅಂತ ಹೇಳುವುದು. ಹೀಗೆ ಮಾಡಿ ಮಾಡಿಯೇ ಆತ ನೆಲಕಚ್ಚಿ ಹೋದ. ಪಕ್ಷವನ್ನೂ ನೆಲಕಚ್ಚಿಸಿದ. ಹಾಗಂತ ಆ ಪಕ್ಷಕ್ಕೆ ಭವಿಷ್ಯವಿಲ್ಲ ಅಂತೇನೂ ಅಲ್ಲ. ಆದರೆ ಹೊಸ ಕನಸುಗಳು ಆ ಪಕ್ಷದ ಅಂತರಂಗದಲ್ಲಿ ಮೊಳಕೆಯೊಡೆಯಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅವರ ಪಕ್ಷಕ್ಕೀಗ ತಿಂಡಿ, ಊಟಕ್ಕೂ ಸಿದ್ದರಾಮಯ್ಯನವರ ಸರ್ಕಾರವೇ ಗತಿ. ಮುಂದೆ ಬರಲಿರುವ ಹಲ ರಾಜ್ಯಗಳ ಚುನಾವಣೆಗಳಿಂದ ಹಿಡಿದು ಎಲ್ಲ ಕೆಲಸಕ್ಕೂ ಸಿದ್ದರಾಮಯ್ಯನವರ ಹತ್ತಿರ ನೋಡುವ ಸ್ಥಿತಿ.

೧೯೯೦ರ ನಂತರ ಈ ಕೆಲಸವನ್ನು ಎಸ್ಸೆಂ ಕೃಷ್ಣ ಶ್ರದ್ಧೆಯಿಂದ ಮಾಡಿದರು. ಹಲ ರಾಜ್ಯಗಳ ಚುನಾವಣೆ ನಡೆಯಲು ನೆರವು ನೀಡಿದರು. ರಾಷ್ಟ್ರಮಟ್ಟದಲ್ಲಿ ಪಕ್ಷ ಕಟ್ಟಿದರು. ಅದಕ್ಕಾಗಿ ಕರ್ನಾಟಕದಲ್ಲಿ ನೋಡಿ, ಐಟಿ ಬಿಟಿಯನ್ನು ಯಾವ ಪರಿ ಬೆಳೆಸುತ್ತಿದ್ದೇನೆ ಎಂದು ಹೇಳುತ್ತಲೇ ಐದೆಕರೆ ಭೂಮಿ ಬೇಕಾದವರಿಗೆ ನೂರೆಕರೆ ಭೂಮಿ ಕೊಟ್ಟರು. ನೋಡುವವರ ಕಣ್ಣಿಗೇನೋ ಎಸ್ಸೆಂ ಕೃಷ್ಣ ಅವರ ಸರ್ಕಾರ ಐಟಿ ಬಿಟಿ ಬೆಳೆಸುತ್ತಿದೆ. ಆ ಮೂಲಕ ಕರ್ನಾಟಕದ ಬದುಕು ಚಿನ್ನವಾಗುತ್ತದೆ ಅನ್ನಿಸುತ್ತಿತ್ತು. ಆದರೆ ನೆನಪಿಡಿ. ಇವತ್ತು ಐಟಿ ಸೆಕ್ಟರ್‌ನಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೋ ಅದಕ್ಕಿಂತ ಹೆಚ್ಚಿನ ಜನ ನಮ್ಮ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ದುಡಿಯುತ್ತಾರೆ. ಹಳ್ಳಿಗಾಡಿನ ಕತೆ ಬಿಡಿ. ಕೇಂದ್ರದ ಯುಪಿಎ ಸರ್ಕಾರ ಜಾರಿಗೆ ತಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನಮ್ಮ ಕೃಷಿ ವ್ಯವಸ್ಥೆಯನ್ನೇ ಹಳ್ಳ ಹಿಡಿಸಿದೆ. ನಿಮಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದರೆ ಇನ್ನೂರು ಚಿಲ್ಲರೆ ರುಪಾಯಿ ಕೊಡುತ್ತಾರೆ.

ಬೇಕಿದ್ದರೆ ನೋಡಿ. ಲೆಕ್ಕಕ್ಕೆ ಹಳ್ಳಿಗಳಲ್ಲಿ ಜನ ಕೆಲಸ ಮಾಡುತ್ತಿರುವುದೇ ಈ ಉದ್ಯೋಗ ಖಾತ್ರಿ ಯೋಜನೆಯಲ್ಲಿ. ಬರೀ ಇನ್ನೂರೇಕೆ? ನಾಲ್ಕು ನೂರು ರುಪಾಯಿ ಕೊಡುತ್ತೇವೆ ಬನ್ನಿ ಎಂದು ಕೆಲ ಜಿಲ್ಲೆಗಳಲ್ಲಿ ಜಮೀನಿನ ಮಾಲೀಕರು ಕರೆದರೂ ಕೆಲಸಕ್ಕೆ ಜನ ಸಿಗುವುದಿಲ್ಲ. ಯಾಕೆಂದರೆ ಉದ್ಯೋಗ ಖಾತ್ರಿ ಯೋಜನೆಯಡಿ ಪಂಚಾಯ್ತಿ ವ್ಯವಸ್ಥೆಯಲ್ಲಿ ಕಂಟ್ರಾಕ್ಟರುಗಳ ಜೊತೆ ಬಹುತೇಕ ಜನ ಷಾಮೀಲಾಗಿದ್ದಾರೆ. ಅವರು ನೆಪಕ್ಕೆ ಇವರಿಗೆ ಐವತ್ತೋ, ನೂರೋ ರುಪಾಯಿ ಕೊಡುತ್ತಾರೆ. ಲೆಕ್ಕಕ್ಕೆ ಇವರು ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಾರರು. ಆದರೆ ಶೇಕಡಾ ಎಪ್ಪತ್ತು ಪರ್ಸೆಂಟಿಗೂ ಹೆಚ್ಚಿನ ಹಣ ಪಂಚಾಯ್ತಿ ಮುಖ್ಯಸ್ಥರಿಗೆ, ಸದಸ್ಯರಿಗೆ, ಕಂಟ್ರಾಕ್ಟರುಗಳಿಗೆ ಹೋಗುತ್ತದೆ. ಕೇಂದ್ರದ ಯುಪಿಎ ಸರ್ಕಾರದ ಹತ್ತು ವರ್ಷದ ಮಹತ್ಸಾಧನೆ ಎಂದರೆ ಜನ ಕೆಲಸ ಮಾಡಬಾರದು ಎಂಬಂತೆ ನೋಡಿಕೊಂಡಿರುವುದು, ಒಂದು ರುಪಾಯಿಗೆ ಮೂವತ್ತು ಕೆಜಿ ಅಕ್ಕಿ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡದಿದ್ದರೂ ಐವತ್ತೋ, ನೂರೋ ರುಪಾಯಿ ಸಿಕ್ಕರೆ ಯಾರು ಕೆಲಸ ಮಾಡುತ್ತಾರೆ?

ಹೀಗೆ ನೋಡುತ್ತಾ ಹೋದರೆ ಇಂತಹ ಹಲ ತಪ್ಪುಗಳನ್ನು ಯುಪಿಎ ಸರ್ಕಾರ ಮಾಡುತ್ತಾ ಹೋಯಿತು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬೆಲೆ ತೆರಬೇಕಾಯಿತು. ನಾವು ಬರುಬರುತ್ತಾ ಜನರ ಶಕ್ತಿಯನ್ನು ಹೆಚ್ಚಿಸಬೇಕೇ ವಿನಃ ಅವರ ಶಕ್ತಿಯನ್ನು ಕುಗ್ಗಿಸಬಾರದು. ಯಾಕೆಂದರೆ ಮನುಷ್ಯ ಕೂಡ ಒಂದು ಭಾವನೆ ಇರುವ ಯಂತ್ರವೇ. ಆ ಯಂತ್ರಕ್ಕೆ ಕೆಲಸ ಕೊಡದಿದ್ದರೆ ತುಕ್ಕು ಹಿಡಿಯುತ್ತದೆ. ಕೆಲಸ ಮಾಡದವರು ಇನ್ನೊಬ್ಬರ ಪಾಲಿಗೆ ತಲೆ ನೋವಾಗಿ ಕಾಡುತ್ತಾರೆ. ಇವತ್ತು ಯಾವುದೇ ಕುಟುಂಬವನ್ನು ತೆಗೆದುಕೊಳ್ಳಿ. ಇಂತಹ ಒಂದಷ್ಟು ತಲೆ ನೋವುಗಳು ಸೃಷ್ಟಿಯಾಗಿ ಕುಳಿತುಬಿಟ್ಟಿವೆ. ಕಾಯಕವೇ ಕೈಲಾಸ ಎಂಬುದನ್ನೇ ಮರೆತು ಬಿಟ್ಟಿವೆ. ಅವಕ್ಕೀಗ ಬೇಜಾರು. ಸುಮ್ಮನೆ ಕೂತೂ ಬೇಜಾರು. ಕಂಡವರ ಮನೆ ಮುರಿದರೂ ಬೇಜಾರು. ಒಟ್ಟಿನಲ್ಲಿ ಬೇಜಾರು. ಅದಕ್ಕಾಗಿ ಸಿಕ್ಕ ಸಿಕ್ಕಲಿ ಮಜಾ ಮಾಡಿಕೊಂಡು ತಿರುಗಬೇಕು. ಒಂದು ವ್ಯವಸ್ಥೆಗೆ ಯುವ ಜನಾಂಗ ಭರವಸೆ ಎಂಬುದು ನಿಜ. ಆದರೆ ಆ ಯುವ ಜನಾಂಗವನ್ನೇ ಕೆಲಸವಿಲ್ಲದ ಪೀಳಿಗೆಯಾಗಿ ಬೆಳೆಸಿಬಿಟ್ಟರೆ?

ತುಂಬ ದೂರ ಹೋಗಬೇಡಿ. ಈಗ ದೀಪಾವಳಿ ಬರುತ್ತದೆ. ಸುಮ್ಮನೆ ನೋಡಿ. ಮನೆ ನಿರ್ಮಾಣದ ಕೆಲಸಕ್ಕೆ ಅಂತ ಬರುವವರು ದೀಪಾವಳಿ ಮಾಡಲು ತಮ್ಮ ರಾಜ್ಯಗಳಿಗೆ ಅಂದರೆ, ಬಿಹಾರ, ರಾಜಸ್ತಾನ, ಅಸ್ಸಾಂಗಳಿಗೆ ಹೋಗಿ ಬಿಡುತ್ತಾರೆ. ಅಲ್ಲಿಗೆ ಎಲ್ಲ ಕೆಲಸವೂ ಸ್ಟಾಪ್. ಅರ್ಥಾತ್, ನಾವು ಒಂದು ಮನೆ ಕಟ್ಟಿಕೊಳ್ಳಲೂ ಬೇರೆ ರಾಜ್ಯದವರನ್ನು ನೆಚ್ಚಿಕೊಂಡಿದ್ದೇವೆ. ಈ ಸರ್ಕಾರಗಳು ಚೀನಾದಿಂದ ಹಿಡಿದು ಕಂಡ ಕಂಡ ದೇಶಗಳಿಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಕಳಿಸುತ್ತಾರಲ್ಲ? ಅವರಿಗೆ ಪ್ರಾಮಾಣಿಕವಾಗಿ ಅಧ್ಯಯನ ಮಾಡಿಕೊಂಡು ಬಂದು ಒಂದು ವರದಿ ಕೊಡಿ ಅಂತ ಹೇಳಲಿ. ಅದರ ಪ್ರಕಾರ ವರದಿ ಕೊಡಲಿ, ಸತ್ಯ ಏನೆಂಬುದು ತಿಳಿಯುತ್ತದೆ. ಇವತ್ತು ಭಾರತದಲ್ಲಿ ಒಂದು ವಸ್ತು ತಯಾರಿಸಲು ನೂರು ರುಪಾಯಿ ವೆಚ್ಚವಾಗುತ್ತದೆ ಎಂದರೆ ಚೀನಾದಲ್ಲಿ ಐವತ್ತು ರುಪಾಯಿ ಸಾಕಾಗುತ್ತದೆ. ಯಾಕೆ ಎಂದರೆ ಇಲ್ಲಿ ಕೌಶಲ್ಯ (ಸ್ಕಿಲ್) ಎಂದರೆ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಲಿಮಿಟ್ ಆಗುತ್ತದೆ. ಹೀಗಾಗಿ ಗಾರೆಯವನು ಬಂದು, ಎಲೆಕ್ಟ್ರಿಷಿಯನ್ನು ಬರದಿದ್ದರೆ ಕೆಲಸ ಬಂದ್.

ಆದರೆ ಚೀನಾದಲ್ಲಿ ಹಾಗಲ್ಲ. ಯುವ ಜನರಿಗೆ ಅಲ್ಲಿ ಮಲ್ಟಿ ಸ್ಕಿಲ್ ದೊರೆಯುವಂತೆ ನೋಡಿಕೊಳ್ಳಲಾಗುತ್ತದೆ. ಗಾರೆ ಕೆಲಸ ಮಾಡುತ್ತಾನೆ, ಎಲೆಕ್ಟ್ರಿಷಿಯನ್ ಕೆಲಸವನ್ನೂ ಅವನೇ ಮಾಡುತ್ತಾನೆ. ಪ್ಲಂಬರ್ ಕೆಲಸದಲ್ಲೂ ಅವನೇ ಸ್ಪೆಷಲಿಸ್ಟು. ಇಂತಹವರ ತಂಡ ತಂಡಗಳೇ ಮನೆ ಕಟ್ಟುವವರಿಗೆ, ಕಾರ್ಖಾನೆಗಳವರಿಗೆ ಸಿಗುತ್ತದೆ. ಒಂದು ಕೆಲಸಕ್ಕೆ ಹತ್ತು ಜನ ಬೇಕಾಗುವ ಜಾಗದಲ್ಲಿ ಇಬ್ಬರೇ ಸಾಕು ಎಂಬ ಪರಿಸ್ಥಿತಿ ಬಂದರೆ ತಯಾರಿಕಾ ವೆಚ್ಚ ಕಡಿಮೆಯಾಗುತ್ತದೆ. ಅದೇ ರೀತಿ ಕೆಲಸ ಮಾಡಿ ಬದುಕುವುದೇ ಶ್ರೇಯಸ್ಸು ಎಂಬ ಮನೋಭಾವನೆ ಬೆಳೆಸಿದರೆ ಯುವ ಜನಾಂಗವೂ ಉದ್ಧಾರದ ಮಾರ್ಗದಲ್ಲಿ ನಡೆಯುತ್ತದೆ. ದೇಶದಲ್ಲಿ ನೂರಾ ಮೂವತ್ತು ಕೋಟಿ ಜನ ಇದ್ದಾರೆ. ಕರ್ನಾಟಕವನ್ನೇ ತೆಗೆದುಕೊಳ್ಳಿ. ಆರೂವರೆ ಕೋಟಿ ಜನರಿದ್ದಾರೆ. ಆದರೆ ಹಳ್ಳಿಗಳಲ್ಲಿ ಕೆಲಸ ಮಾಡಲು ಜನ ಸಿಗುತ್ತಿಲ್ಲ. ಅಂದರೆ ಎಲ್ಲರೂ ಸಿರಿವಂತರಾಗಿಬಿಟ್ಟಿದ್ದಾರಾ? ಇಲ್ಲ. ಅವರು ಕೆಲಸ ಮಾಡದೇ ನಿರುಮ್ಮಳವಾಗಿ ಇರಲು ಬಯಸುತ್ತಿದ್ದಾರೆ. ನಮ್ಮ ಸರ್ಕಾರಗಳು ಅವರನ್ನು ಹಾಗೆ ಮಾಡುತ್ತಿವೆ.

ಮೊನ್ನೆ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡು ಒಂದು ಮಾತು ಹೇಳಿದರು. ಜನ ಮೂರು ಹೊತ್ತು ಊಟ ಮಾಡುವುದು ತಪ್ಪೇ ಎಂದರು. ತಪ್ಪಲ್ಲ, ಆದರೆ ಮೂವತ್ತು ಕೆಜಿ ಕೊಟ್ಟು ಅವರು ಆ ಮೂವತ್ತು ಕೆಜಿಯಲ್ಲಿ ತಮಗೆ ಬೇಕಾದಷ್ಟು ಇಟ್ಟುಕೊಂಡು ಉಳಿದಿದ್ದನ್ನು ಇನ್ನೊಬ್ಬರಿಗೆ ಮಾರಾಟ ಮಾಡಲು ಅವಕಾಶ ಕೊಡುತ್ತೀರಲ್ಲ ಅದು ತಪ್ಪು. ಈಗ ಕೊಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಎರಡೋ, ಮೂರು ರುಪಾಯಿಯನ್ನೋ ಪಡೆದುಕೊಳ್ಳಿ. ತಿಂಗಳಿಗೆ ಹದಿನೈದು ಕೆಜಿ ಅಂತ ಕಡ್ಡಾಯವಾಗಿ ಕೊಡಿ. ಬರೋಬ್ಬರಿ ಎರಡೂ ಕಾಲು ಸಾವಿರ ಕೋಟಿ ರುಪಾಯಿ ಉಳಿತಾಯವಾಗುತ್ತದೆ. ಈ ಹಣದಲ್ಲಿ ಸಮಾಜಕ್ಕೆ ಉಪಕಾರವಾಗುವ ಬೇರೆ ಕೆಲಸ ಮಾಡಿ. ಈಗ ಕಾಂಗ್ರೆಸ್ಸಿಗೆ ಉಳಿದಿರುವ ದೊಡ್ಡ ರಾಜ್ಯ ಎಂದರೆ ಕರ್ನಾಟಕ ಮಾತ್ರ. ಒಂದು ಕಡೆಯಿಂದ ಇದನ್ನು ಸದ್ಬಳಕೆ ಮಾಡಿಕೊಂಡು ಮತ್ತೊಂದು ಕಡೆಯಿಂದ ಬಿಜೆಪಿಯೇತರ ಶಕ್ತಿಗಳನ್ನು ಒಗ್ಗೂಡಿಸುವ ಕೆಲಸ ಮಾಡಿಕೊಂಡು ಹೋದರೆ ಕಾಂಗ್ರೆಸ್ ಮತ್ತೆ ತಲೆ ಎತ್ತುತ್ತದೆ.

ಈಗೇನೋ ಮೋದಿ ಹವಾ ನಡೆಯುತ್ತಿದೆ. ಆದರೆ ನಾಳೆ ಪ್ರಿಯಾಂಕಾ ಗಾಂಧಿ ಥರದವರನ್ನು ಮೇಲೆಬ್ಬಿಸಿ ನಿಲ್ಲಿಸಿದರೆ, ಅದು ಹೊಸ ಯೋಚನೆಯೊಂದಿಗೆ ಎದ್ದು ನಿಲ್ಲಿಸಿದರೆ ಕಾಂಗ್ರೆಸ್‌ಗೆ ಹೊಸ ಭವಿಷ್ಯ ಬರುತ್ತದೆ. ಯಾರೇನೇ ಹೇಳಲಿ, ಮೋದಿ ಸರ್ಕಾರ ಈಗ ಸರ್ವೋತ್ತಮ ಸರ್ಕಾರ ಅಂತನ್ನಿಸಲಿ. ಮುಂದಿನ ಕೆಲ ದಿನಗಳಲ್ಲಿ ಇದು ಶ್ರೀಮಂತರ ಪರ ಸರ್ಕಾರ ಎಂಬುದು ನಿಕ್ಕಿಯಾಗಿ ಬಿಡುತ್ತದೆ. ಅದು ಕೆಲಸ ಮಾಡುವುದೇ ಶ್ರೀಮಂತರ ಕೈಲಿ ವ್ಯವಸ್ಥೆ ಸಿಗೇ ಹಾಕಿಕೊಳ್ಳಬೇಕು ಅಂತ. ಹೀಗಾಗಿ ಇಲ್ಲಿ ಅಂಬಾನಿ, ಅದಾನಿ ಥರದವರು ಬೆಳೆಯುತ್ತಾರೆಯೇ ವಿನಃ ಸಾಮಾನ್ಯರು ಬೆಳೆಯುವುದಿಲ್ಲ. ಪ್ರಗತಿಯ ವೇಗಕ್ಕೆ ಯುಪಿಎ ಸರ್ಕಾರ ಕೊಡಲಿಯೇಟು ಹಾಕಿದ ಪರಿಣಾಮವಾಗಿ ಮೋದಿ ಸರ್ಕಾರ ಬಂತೇ ಹೊರತು ಬೇರೆ ಕಾರಣಕ್ಕಲ್ಲ. ಯುವ ಜನಾಂಗ ಉತ್ಸಾಹದಿಂದ ಕೆಲಸ ಮಾಡುವುದೇ ಒಂದು ವ್ಯವಸ್ಥೆಯ ಶ್ರೇಯೋಭಿವೃದ್ಧಿಯ ಸಂಕೇತ ಎಂಬುದನ್ನು ರಾಜಕೀಯ ಪಕ್ಷಗಳು ಬಿಂಬಿಸಬೇಕು.

ಇವತ್ತು ಜಪಾನ್‌ನಲ್ಲಿ ಯಾವ ಮಟ್ಟಿನ ಬೆಳವಣಿಗೆ ಆಗಿದೆ ಎಂದರೆ ಅಲ್ಲಾಗಿದ್ದ ಪ್ರಕೃತಿ ವಿಕೋಪ ಇಲ್ಲಾಗಿದ್ದರೆ ಸುಧಾರಿಸಿಕೊಳ್ಳಲು ಹಲ ವರ್ಷಗಳು ಬೇಕಾಗಿತ್ತೇನೋ? ಆದರೆ ನೋಡ ನೋಡುತ್ತಿದ್ದಂತೆಯೇ ಅವರು ಮತ್ತೆ ಚಿಗಿತುಕೊಂಡಿದ್ದಾರೆ. ನ್ಯೂಕ್ಲಿಯರ್ ರಿಯಾಕ್ಟರುಗಳಿದ್ದರೆ ಅಪಾಯ ತಾನೇ ಅನ್ನುತ್ತಲೇ ಎಂಟು ಸಾವಿರ ಮೆಗಾವ್ಯಾಟ್‌ಗಳಷ್ಟು ಸೋಲಾರ್ ವಿದ್ಯುತ್‌ನ್ನು ಉತ್ಪಾದಿಸುತ್ತಿದ್ದಾರೆ. ಇವತ್ತು ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಸೋಲಾರ್ ವಿದ್ಯುತ್ ಉತ್ಪಾದಿಸುತ್ತಿರುವ ದೇಶ ಅದು. ಹೀಗೆ ಜಗತ್ತಿನ ಎಲ್ಲೆಡೆ ನಡೆಯುತ್ತಿರುವ ಪ್ರಗತಿಯಿಂದ ಕಾಂಗ್ರೆಸ್ ಪ್ರೇರಣೆ ಪಡೆಯಬೇಕು. ಆ ಮೂಲಕ ಬಡವರ ಬದುಕನ್ನು ಹಸನು ಮಾಡುವ ಕಾರ್ಯಕ್ರಮಗಳೊಂದಿಗೆ ಮತ್ತೆ ತಲೆ ಎತ್ತಿ ನಿಲ್ಲಬೇಕು. ಯಾಕೆಂದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರೂ ಅಲುಗಾಡಿಸಲಾಗದಷ್ಟು ಬಲಿಷ್ಠವಾಗಿ ಬೆಳೆಯಬಾರದು. ಹಾಗೇನಾದರೂ ಆದರೆ ಅಂತಹ ವ್ಯವಸ್ಥೆಯೇ ಜಡವಾಗಿ ಬಿಡುತ್ತದೆ. ಇವತ್ತು ಎಲ್ಲಿಗೆ ಹೋದರೂ ಶ್ರೀಮಂತರಿಗೆ ಅನುಕೂಲವಾಗುವ ಯೋಜನೆಗಳಿಗೆ ಒಪ್ಪಂದ ಮಾಡಿಕೊಂಡು ಬರುತ್ತಿರುವ ಮೋದಿ ಕೂಡ ಇನ್ನು ಕೆಲವೇ ವರ್ಷಗಳಲ್ಲಿ ಡಲ್ಲಾಗಿ ಬಿಡುತ್ತಾರೆ. ಆಗ ಜನರಿಗೆ ಪರ್ಯಾಯ ವ್ಯವಸ್ಥೆ ಕಾಣಬೇಕು. ಅದಕ್ಕೆ ತಯಾರಿ ಮಾಡಿಕೊಳ್ಳುವ ಕೆಲಸ ಕಾಂಗ್ರೆಸ್‌ನಿಂದ ಈಗಲೇ ಆರಂಭವಾಗಬೇಕು. ಹಾಗಾಗಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 October, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books