Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅಷ್ಟು ವರ್ಷ ಹೆಣಗಿ ದುಡಿದ ಮೇಲೆ ಕಳ್ಳ ಅನ್ನಿಸಿಕೊಂಡದ್ದು ನೆನಪಾಗಿ...

‘ಏನಿದೆ ಅಂತ ನಾನು ಇನ್ನು ಇಲ್ಲಿರಬೇಕು?’

ಅಮ್ಮ ಸತ್ತು ಹೋದ ಕೂಡಲೇ ನನ್ನಲ್ಲಿ ಉದ್ಭವಿಸಿದ ಪ್ರಶ್ನೆಯೇ ಅದು. ಅಮ್ಮ ಬೆಳಿಗ್ಗೆ ಏಳು ಏಳೂವರೆ ಸುಮಾರಿಗೆ, ನಾನು ಎದುರಿಗಿಲ್ಲದಿದ್ದಾಗ ತೀರಿಕೊಂಡಳು. ರಾತ್ರಿಯಿಡೀ ನಾನು ಎದುರಿಗೆ ಕುಳಿತಿದ್ದೆ. ನನಗೊಂದು ಮಾತೂ ಹೇಳದೆ ನಮ್ಮ ಮನೆಗೆಲಸದ ಹೆಣ್ಣುಮಗಳು ಹೊದಿಕೆ ಸರಿ ಮಾಡಲು ಹೋದಾಗ ಕೊನೆಯುಸಿರೆಳೆದು ಹೊರಟುಹೋದಳು. ಅಮ್ಮನ ಮೇಲೆ ಆ ಸಿಟ್ಟು ನನಗೆ ಇವತ್ತಿಗೂ ಇದೆ. ಆಕೆಗೆ ನನ್ನ ಮೇಲೆ ಅದಿನ್ನೆಷ್ಟು ಸಿಟ್ಟಿದೆಯೋ?


ಬೆಳಿಗ್ಗೆ ಒಂಬತ್ತೂವರೆ ಹೊತ್ತಿಗೆ ಅಮ್ಮನನ್ನು ಬಳ್ಳಾರಿಯ ಸಂಗನಕಲ್ಲು ರಸ್ತೆಯ ಸ್ಮಶಾನದಲ್ಲಿ ಮಲಗಿಸಿ ಚಿತೆಗೆ ಬೆಂಕಿಕೊಟ್ಟೆ. ನೆತ್ತಿ ಸ್ಫೋಟಿಸಿದ್ದು ಕೇಳಿಸಿಕೊಂಡೆ. “ಅಷ್ಟೆ, ಇನ್ನೇನಿಲ್ಲ..." ಅಂದ ಕಾವಲುಗಾರ. ಅದರರ್ಥ, ‘ನೀನಿದ್ದು ಮಾಡಬೇಕಾದುದು ಏನೂ ಇಲ್ಲ’ ಎಂಬಂತಿತ್ತು. ಅಮ್ಮ ಮೃದುದೇಹಿ. ಹಿತಭಾಷಿಣಿ. ಬಹಳ ಶುಭ್ರ. ಮಾನಸಿಕವಾಗಿಯೂ ತುಂಬ ಮೃದು. ಗಟ್ಟಿಯಾಗಿ ಮಾತನಾಡಿದವಳಲ್ಲ. ಹೇಗೆ ಸುಟ್ಟು ಭಸ್ಮವಾಗಿ ಹೋದಳೋ ಆ ಪರಿಯ ಬೆಂಕಿಯಲ್ಲಿ? ಸತ್ತವರನ್ನು ಹೂಣುವುದು ನೋಡಿದ್ದೇನೆ. ಸುಡುವುದು ನಿಜಕ್ಕೂ ಘೋರ. “ನನಗೆ ಪ್ರಜ್ಞೆ ತಿಳಿಯದಂತಾಗಿ, ಇರುವ ಒಂದು ಕೈ ಕಾಲೂ ಬಿದ್ದು ಹೋಗಿ ಪರಾಧೀನಳಾದರೆ ಯಾರಾದರೂ ಡಾಕ್ಟರ‍್ನ ಕರೆಸಿ ನಂಗೆ ಇಂಜೆಕ್ಷನ್ ಕೊಡಿಸಿ ಸಾಯಿಸಿಬಿಡು" ಅನ್ನುತ್ತಿದ್ದಳು ಅಮ್ಮ. ಪ್ರತಿಕ್ಷಣವೂ ನನಗೋಸ್ಕರ ಬದುಕಿದ, ಜೀವ ತೇಯ್ದ, ನನಗೋಸ್ಕರ ದುಡಿದ, ಆರೋಗ್ಯ ಕಳೆದುಕೊಂಡ, ನನಗಾಗಿ ಕಣ್ಣೀರುಗರೆದ ಆ ಮಾತೃಮೂರ್ತಿಯನ್ನು ಹೇಗೆ ತಾನೆ ಇಂಜೆಕ್ಷನ್ ಕೊಡಿಸಿ ಕೊಲ್ಲಿಸಿಬಿಡಲಿ? ಆಕೆ ಹೇಳಿದಂತೆಯೇ ಆಯಿತು. ಇನ್ನೊಂದು stroke ಹೊಡೆಯಿತು. ಎರಡೂ ಕೈ ಕಾಲು ಬಿದ್ದು ಹೋದವು. ಅಮ್ಮ went to coma. ನಾನೇ ಕೈಯಾರೆ ಎಲ್ಲ ಸೇವೆ ಮಾಡಿದೆ. ‘ಅಮ್ಮ ಹೀಗನ್ನುತ್ತಿದ್ದಳು ಕಣೋ ಮುರಳೀ’ ಅಂತ ಡಾ.ಮುರಳಿಗೆ ಹೇಳಿದ್ದೆ. ಆ ಬಗ್ಗೆ ಯೋಚಿಸಲೇ ಬೇಡ ಅಂದು ಅವನು ಸುಮ್ಮನಾದ. ನಾನು ಅಮ್ಮನ ಮಂಚದ ಪಕ್ಕ ಛೇರು ಹಾಕಿಕೊಂಡು ಕುಳಿತುಬಿಟ್ಟೆ. ಹದಿಮೂರನೆಯ ದಿನ ಅಮ್ಮ ಉಸಿರು ಚೆಲ್ಲಿದಳು.
ಆಗಲೂ ನೆನಪಾದದ್ದು ಇದೇ nasty ದ್ರವ, ರಮ್. ಲಲಿತೆಯನ್ನು ಸ್ಮಶಾನದಿಂದ ಮನೆಗೆ ಕಳುಹಿಸಿ, ನಾನು ಹೋಗಿ ಕುಳಿತದ್ದು ಗೆಳೆಯ ಶಂಕರಯ್ಯನ ಸಂಗೀತಾ ಬಾರ್‌ನಲ್ಲಿ. ಕುಡಿದರಾದರೂ ಅಳು ಬರುತ್ತದೇನೋ ಎಂಬ ಆಸೆ. ಹೇಳದೆ ಹೊರಟು ಹೋದಳಲ್ಲಾ ಅಂತ ಸ್ವಲ್ಪ ಹೊತ್ತು ಸಿಟ್ಟು ಬರುತ್ತಿತ್ತು. ಮೂರನೆಯ ಪೆಗ್ ಮುಗಿಯುವ ಹೊತ್ತಿಗೆ ಆ ಸಿಟ್ಟೂ ಇಳಿದುಹೋಗಿ ‘ಮುಂದೆ?’ ಎಂಬ ಪ್ರಶ್ನೆ ಚಿಗಿತುಕೊಂಡಿತು. ಸರಿಯಾಗಿ ನನಗೆ ಆಗ ಮೂವತ್ತು ವರ್ಷ. ‘ಮುಂದೆ?’ ಎಂಬ ಪ್ರಶ್ನೆ ಅಮ್ಮ ಸತ್ತ ದಿನ ಕಾಡಿದಷ್ಟು ಹಿಂದೆಂದೂ ಕಾಡಿರಲಿಲ್ಲ. ಆಕೆ ಸತ್ತು ಹೋದ ಮೇಲಿನ ಈ ಇಪ್ಪತ್ತು ವರ್ಷಗಳಲ್ಲಿ ‘ಮುಂದೆ?’ ಎಂಬ ಪ್ರಶ್ನೆಗೆ ಸಾವಿರ ತರಹದ ಉತ್ತರಗಳನ್ನು ಕಂಡುಕೊಂಡಿದ್ದೇನೆ. ಪ್ರಶ್ನೆ ಮಾತ್ರ ಪ್ರತಿನಿತ್ಯ ಇದಿರಾಗುತ್ತಲೇ ಇದೆ. ಇನ್ನೂ ಐವತ್ತು ವರ್ಷಗಳಾದರೂ ಇದು ಇದಿರಾಗುತ್ತದೇನೋ?


ಗೊತ್ತಿಲ್ಲ. ಅಮ್ಮ ಸಾಯುವುದರೊಂದಿಗೆ ನನ್ನ ಬದುಕಿನ ಬಹಳ ದೊಡ್ಡ ನೆರಳು ಸತ್ತುಹೋಯಿತು. ಗೆಳತಿ ತೀರಿಹೋದಳು. ಒಂದು ಅತ್ಯುತ್ತಮ ಮತ್ತು ಸರ್ವಶ್ರೇಷ್ಠ ಬಂಧ ಮುಗಿದುಹೋಯಿತು. ಮೂವತ್ತು ವರ್ಷ ನನ್ನನ್ನು ಕದಲದೆ ಕಟ್ಟಿ ಹಾಕಿದ ಒಂದು ಸರಪಳಿಯೂ ಅಲ್ಲಿಗೆ ತುಂಡಾಗಿಬಿಟ್ಟಿತ್ತು. ಸಹಜವಾಗಿಯೇ ಅಮ್ಮ ನನ್ನ ಬಗ್ಗೆ ಪೊಸೆಸಿವ್ ಆಗಿದ್ದಳು. ಪ್ರೀತಿಯೊಂದೇ ಅಲ್ಲ, ಚಟಗಳಿಗೆ, ಉನ್ಮಾದಕ್ಕೆ, ಉದ್ವೇಗಕ್ಕೆ ಬೀಳುವ ನಾನು ಏನು ತೊಂದರೆ ಮಾಡಿಕೊಂಡು ಬಿಡುತ್ತೇನೋ ಎಂಬ ಹೆದರಿಕೆಯೂ ಆಕೆಗಿತ್ತು. ಅದೇನು ತಿಂತೀಯೋ, ಕುಡೀತೀಯೋ ನನ್ನೆದುರಿಗೇ ಮಾಡು ಎಂಬಂತೆ ನನ್ನನ್ನು ಕದಲದೆ ಕಟ್ಟಿ ಹಾಕಿಕೊಂಡು ಬಿಟ್ಟಿದ್ದಳು.


ಒಂದರ್ಥದಲ್ಲಿ, ಅಮ್ಮ ತೀರಿದ ಮೇಲೆ ನನ್ನ ನಿಜವಾದ ಇಂಡಿಪೆಂಡೆಂಟ್ ಬದುಕು ಆರಂಭವಾಯಿತು. ೧೯೮೭ ಸೆಪ್ಟಂಬರ್ ೪ರಂದು ಅಮ್ಮ ಹೊರಟು ಹೋದಳು. ಅದಾದ ಏಳು ತಿಂಗಳಿಗೆ ಏಪ್ರಿಲ್ ೯, ೧೯೮೮ರಂದು ನಾನು ಬಳ್ಳಾರಿಯನ್ನು ಶಾಶ್ವತವಾಗಿ ಬಿಟ್ಟೆ. ಮುಂದೆ ‘ಹಾಯ್ ಬೆಂಗಳೂರ್!’ ಅಂತ ಸ್ಥಾಪಿಸಿ ಬದುಕಿಗೊಂದು ನೆಲೆ ಅಂತ ಕಂಡುಕೊಳ್ಳಲು ನಾನು ತೆಗೆದುಕೊಂಡದ್ದು ಏಳು ವರ್ಷ. ೧೯೯೫ ಸೆಪ್ಟಂಬರ್ ೨೫ರಂದು ‘ಪತ್ರಿಕೆ’ ಆರಂಭಿಸಿದೆ. ನೀವು ಸಿಕ್ಕಿರಿ. ಅಮ್ಮನ ಕೈ ಬಿಟ್ಟು, ಓದುಗರಾದ ನಿಮ್ಮ ಕೈ ಹಿಡಿಯುವ ತನಕ ಅದೆಂಥ rough weather. ಅಪರಿಚಿತ ಊರುಗಳು, ಅಪರಿಚಿತ ಮುಖಗಳು, ಒರಟರು, ಕ್ರೂರಿಗಳು, ಸಹಿಸದವರು, ದೂರವಿಟ್ಟವರು, ರೌಡಿಗಳು, ಸನ್ಯಾಸಿಗಳು, ಕುಡುಕರು, ಪಂಡಿತರು, ಗೆಳತಿಯರು, ಅಮ್ಮನಷ್ಟೇ ಸಭ್ಯರು, ತಮ್ಮರಂಥ ಗೆಳೆಯರು, ವ್ಯಾಪಾರಿಗಳು, ಸದಾ ನನ್ನನ್ನು ಹಣಿಯ ಬಯಸಿದವರು, ‘ನಿನ್ನ ಕೈಲೇನಾಗುತ್ತೆ ಹೋಗು’ ಅಂದವರು ಇವರೆಲ್ಲರ ಮಧ್ಯೆ ಹೆಚ್ಚೂ ಕಡಿಮೆ ಏಕಾಂಗಿಯಾಗಿ ಬದುಕಿದೆ. ನನಗೋಸ್ಕರ ಏನಾದರೂ ಮಾಡಿಕೊಳ್ಳಬೇಕು ಅಂತ ನನಗೆ ಯಾವತ್ತಿಗೂ ಅನ್ನಿಸುತ್ತಿರಲಿಲ್ಲ. ಈಗಲೂ ಅನ್ನಿಸುವುದಿಲ್ಲ. ಬದಲಿಗೆ ನಾನೇನಾದರೂ ಮಾಡಬೇಕು ಎಂಬ ತಪನೆ ಸದಾ ನನ್ನನ್ನು ಸುಡುತ್ತಿರುತ್ತದೆ. Thats keep me going. ಇಪ್ಪತ್ತು ವರ್ಷಗಳ ನಂತರವೂ ಹೊಸದೇನನ್ನಾದರೂ ಮಾಡಬೇಕು ಅಂತ ನನ್ನನ್ನು ಅಗೋಚರ ಈಟಿಯೊಂದು ತಿವಿಯುತ್ತಿರುವುದರಿಂದಲೇ ನಾನು ರವಿ ಬೆಳಗೆರೆ.
ಶಾಮರಾಯರು ಕೂಡ ನನ್ನ ಹಾಗೇ ಇದ್ದರಾ ಅಂತ ಯೋಚಿಸುತ್ತೇನೆ. ‘ನೀವು ತುಂಬ ಅವರನ್ನು ಹೋಲುತ್ತೀರಿ’ ಅಂತ ನಿವೇದಿತಾ ಅನ್ನುತ್ತಿರುತ್ತಾಳೆ. ಇರಬಹುದೇನೋ? ಆರು ವರ್ಷ ಜೊತೆಯಲ್ಲಿ ಇದ್ದೂ ಇದ್ದು ಸ್ವಭಾವಗಳು ಬಂದುಬಿಟ್ಟಿರುತ್ತವೆ. ಶಾಮರಾಯರು ಕೆಲವು ವಿಷಯಗಳಲ್ಲಿ ನನಗಿಂತ ದುರದೃಷ್ಟವಂತರು. ಹುಟ್ಟಿದ ಕೆಲವೇ ದಿನಗಳಿಗೆ ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡವರು ಅವರು. ಅದಿನ್ನೆಂಥ rough weather ಅನುಭವಿಸಿದ್ದರೋ? ದಾವಣಗೆರೆಯಿಂದ ಹಾವೇರಿಯಾಚೆಗಿನ ‘ಅಗಡಿ’ಗೆ ಬರಿಗಾಲಲ್ಲಿ ನಡೆದು ಹೋಗಿದ್ದರಂತೆ. ಅಲ್ಲಿಯ ಪತ್ರಿಕೆಯೊಂದರಲ್ಲಿ ಅವರು ಮೊಳೆ ಜೋಡಿಸುವ ಕಂಪೋಸಿಟರ್ ಆಗಿ ಕೆಲಸ ಮಾಡಿದ್ದರು. ಮುಂದೆ ಬೆಳಗಾವಿಯ ತನಕ ನಡೆದು ಹೋದರು. ‘ಸುರಿಯುತ್ತಿದ್ದ ದೊಡ್ಡ ಮಳೆಯಲ್ಲಿ ನಾನೊಂದು ಆಲದ ಮರದ ಕೆಳಗೆ ನಿಂತಿದ್ದೆ. ಸಿಡಿಲು ಬಡಿದು ನನ್ನೆದುರಿಗಿನ ಇನ್ನೊಂದು ಮರ ಭಸ್ಮವಾಗಿ ಹೋದದ್ದನ್ನು ಕಣ್ಣಾರೆ ನೋಡಿದೆ’ ಅಂತ ಅವರ ಅಪ್ರಕಟಿತ ಆತ್ಮಚರಿತ್ರೆಯಲ್ಲಿ ಬರೆಯುತ್ತಾರೆ ಶಾಮರಾವ್. ಆಗ ‘ಸಂಯುಕ್ತ ಕರ್ನಾಟಕ’ ಬೆಳಗಾವಿಯಿಂದ ಬರುತ್ತಿತ್ತು. ಶಾಮರಾಯರಿಗೆ ಗುರುಗಳಾಗಿ ಸಿಕ್ಕವರು ಮೊಹರೆ ಹಣಮಂತರಾಯರು, ಹ.ರಾ.ಪುರೋಹಿತರು ಮತ್ತು ರಂಗನಾಥ ದಿವಾಕರರು. “ನನ್ನನ್ನು ವರದಿಗಾರನನ್ನಾಗಿ ನೇಮಿಸಿ ಬೆಂಗಳೂರಿಗೆ ಕರೆಸಿ" ಅಂತ ರಂಗನಾಥ ದಿವಾಕರರನ್ನು ಕಾಲು ಹಿಡಿದು ಬೇಡಿಕೊಂಡರಂತೆ, ೧೯೫೬ರಲ್ಲಿ. ‘ಆಯ್ತು ಹೋಗು’ ಎಂಬ ಮಾತೇ ಅಪಾಯಿಂಟ್‌ಮೆಂಟ್ ಆರ್ಡರು. “ಎಂಥ ಕೆಲಸ ಮಾಡಿದಿರಿ. ಶಾಮರಾಯನನ್ನ ಬೆಂಗಳೂರಿಗೆ ಕಳಿಸಬಾರದಿತ್ತು. ಅವನು ಪ್ರಳಯಾಂತಕ. ಯಾವತ್ತೋ ಒಂದು ದಿನ ನಿಮಗೇ ಮುಳುಗುನೀರು ತರುತ್ತಾನೆ" ಅಂತ ಮೊಹರೆ ಹಣಮಂತರಾಯರು ಅಂದಿದ್ದರಂತೆ. Of course, ಮುಂದೆ ಶಾಮರಾಯರು ರಂಗನಾಥ ದಿವಾಕರರಿಗೆ ಮುಳುಗು ನೀರೂ ತಂದರು, ಖಾಯಿಲೆ ಬಿದ್ದ ದಿವಾಕರರಿಗೆ ಕೊನೆಗಾಲದಲ್ಲಿ ಆಶ್ರಯವನ್ನೂ ನೀಡಿದರು, ಆ ಮಾತು ಬೇರೆ.
ಆದರೆ ಶಾಮರಾಯರಲ್ಲೊಂದು ವಿಲಕ್ಷಣ ಗುಣವಿತ್ತು. ‘ಅವರ ಕೆಲಸ ಆಯಿತು’ ಅಂದ ಮರುಕ್ಷಣ ಅವರೆಂಥವರೇ ಆಗಿರಲಿ, ಕೆಲಸ ಮಾಡಿಕೊಟ್ಟವರನ್ನು ಮರೆತುಬಿಡುತ್ತಿದ್ದರು. ಸಾಧ್ಯವಾದರೆ ಅವರಿಗೊಂದು ಕಿರುಕುಳವನ್ನು ದಯಪಾಲಿಸುತ್ತಿದ್ದರು. ಶಾಮರಾಯರನ್ನು ಎದುರು ಹಾಕಿಕೊಂಡರಂತೂ ಮುಗಿದೇ ಹೋಯಿತು. ರುಂಡ ಕಡಿಯುವ ತನಕ ಅವರಿಗೆ ಸಮಾಧಾನವಿಲ್ಲ. ಅವರಲ್ಲಿದ್ದ ತಪನೆ, ಏನಾದರೂ ಮಾಡಬೇಕು ಎಂಬ ಚಡಪಡಿಕೆ, ಹೊಸದರತ್ತ ಕಣ್ತೆರೆಯುವ ಆಸೆ, ಸಂಸ್ಥೆ ಕಟ್ಟುವ ಅಭಿಲಾಷೆ, ಯಾರನ್ನೂ ಸಲೀಸಾಗಿ ನಂಬದ ಜಾಡ್ಯ, ಪ್ರತಿಯೊಂದರಲ್ಲೂ ಚಿಕ್ಕದೊಂದು ಲೆಕ್ಕಾಚಾರ, ಗುಣಗ್ರಾಹಿತ್ವ, ಪತ್ರಕರ್ತರಲ್ಲಿ ಸಹಜವಾಗಿ ಉಂಟಾಗುವ ಬಲಹೀನತೆಗಳನ್ನು ಮೀರುವುದು, ರಾಜಕಾರಣಿಗಳನ್ನು ದೂರವಿಡುವುದು, ನಮ್ಮ ಪ್ರತಿಭೆಗೆ ಗೌರವ ಸಿಗದ ಕಡೆಯಿಂದ ಸಿಡಿದೆದ್ದು ಹೋಗುವುದು ಇವೆಲ್ಲವೂ ಶಾಮರಾಯರಿಂದ ನಾನು ಬಸಿದುಕೊಂಡಂಥವೇ. ಆದರೆ ಅವರಲ್ಲಿದ್ದ sadist ನನ್ನೊಳಗೆ ಅಂತರ್ಗತವಾಗಲಿಲ್ಲ.


ನಮ್ಮ ಗುರುಗಳಾದ ಬಹದ್ದೂರ್ ಶೇಷಗಿರಿರಾಯರ ಕ್ಲಾಸ್‌ಮೇಟ್ ಮತ್ತೀಹಳ್ಳಿ ನಾಗರಾಜರಾಯರು. ಅದಕ್ಕಿಂತ ಮುಖ್ಯವಾಗಿ ಮತ್ತೀಹಳ್ಳಿ ನಾಗರಾಜರಾಯರು ಅನೇಕ ವರ್ಷ ‘ಸಂಯುಕ್ತ ಕರ್ನಾಟಕ’ದ ಹುಬ್ಬಳ್ಳಿ ಆವೃತ್ತಿಯನ್ನು ಮುನ್ನಡೆಸಿದವರು. ಆ ದಿನಗಳಲ್ಲಿ ಪತ್ರಕರ್ತರನ್ನು ಜಗತ್ತಿನ ನಾನಾ ದೇಶಗಳಿಗೆ ಪ್ರವಾಸ ಕಳಿಸುವ ಪರಿಪಾಠವಿತ್ತು. ಈಗಲೂ ಕಂಡವರನ್ನು ಎದುರು ಹಾಕಿಕೊಳ್ಳದೆ, ಸರ್ಕಾರಿ ನೀತಿ ನಿಯಮ ಪಾಲಿಸಿ ಪತ್ರಿಕೋದ್ಯಮ ಮಾಡುವವರನ್ನು ಸರ್ಕಾರ ದೇಶವಿದೇಶಗಳಿಗೆ ಕರೆದೊಯ್ಯುತ್ತದೆ, ಕಳಿಸಿಕೊಡುತ್ತದೆ. ಹಿಂದೆ ಮತ್ತೀಹಳ್ಳಿ ನಾಗರಾಜರಾಯರನ್ನು ಸುಮಾರು ನಲವತ್ತು ದೇಶಗಳಿಗೆ, ಒಂದು ನೂರ ಐದು ದಿನಗಳ ಪ್ರವಾಸಕ್ಕೆಂದು ಆಯ್ಕೆ ಮಾಡಿ ಸರ್ಕಾರವು ಕಳಿಸಿತ್ತು. ಆಗ ಆ ದೇಶಗಳವರೂ ನಾಗರಾಜರಾಯರನ್ನು ತಮ್ಮ ಅತಿಥಿಯೆಂದು ಭಾವಿಸಿ ಬರಮಾಡಿಕೊಂಡಿದ್ದವು. ನಾಗರಾಜರಾಯರೇನೋ ಒಂದು ನೂರ ಐದು ದಿನಗಳ ಪ್ರವಾಸ ಹೋದರು, ಬಂದರು.


ಆದರೆ ಬರುವ ಹೊತ್ತಿಗೆ ‘ಸಂಯುಕ್ತ ಕರ್ನಾಟಕ’ದಲ್ಲಿ ಅವರ ವಿರುದ್ಧ ದೊಡ್ಡಮಟ್ಟದ ಮಸಲತ್ತು ನಡೆದುಹೋಗಿತ್ತು.
ಸಹೋದ್ಯೋಗಿಗಳಲ್ಲಿ ಈರ್ಷ್ಯೆಯ ಬಡಬಾಗ್ನಿ. ಒಬ್ಬ ಪತ್ರಿಕೋದ್ಯಮಿಗೆ ಸಹೋದ್ಯೋಗಿಗಳಿಗಿಂತ ಬೇರೆ ಶತ್ರುವೇ ಬೇಡ. ವಿದೇಶದಿಂದ ಹಿಂತಿರುಗಿದ ನಾಗರಾಜರಾಯರನ್ನು ಯಾವ ಪರಿ ಕಾಡಿದರೆಂದರೆ, ಅವರನ್ನು ಇತರರು ಮಾತಾಡಿಸಕೂಡದು, ಬೆಲ್ ಮಾಡಿ ಕರೆದರೆ ಆಫೀಸ್ ಬಾಯ್ ಕೂಡ ಅವರ ಟೇಬಲ್ಲಿನ ಬಳಿಗೆ ಹೋಗಬಾರದು ಎಂದು ‘ಮೇಲಿನಿಂದ’ ಅಪ್ಪಣೆಯಾಗಿತ್ತು. ಕಡೆಗೊಂದು ದಿನ ಅವರನ್ನು ಪರಿಪರಿಯಾಗಿ ಕಾಡಿದ ಮೇಲೆ ನಿವೃತ್ತಿ ಮಾಡಿಸಲಾಯಿತು. ಮುಂದೆ ಮತ್ತೀಹಳ್ಳಿ ನಾಗರಾಜರಾಯರ ಸೋದರ ಮದನಗೋಪಾಲ್ ‘ದಿ ಹಿಂದೂ’ ಪತ್ರಿಕೆಯ ಹಿರಿಯ ಉದ್ಯೋಗಿಯಾಗಿ ದೊಡ್ಡ ಸಾಧನೆ ಮಾಡಿದರು. ಅದೆಲ್ಲ ಬೇರೆಯ ಮಾತು.


ಅದೆಲ್ಲದರ ಮಧ್ಯೆ ‘ಕರ್ಮವೀರ’ ಪತ್ರಿಕೆಯನ್ನು ಮತ್ತೆ ಆರಂಭಿಸಬೇಕು ಎಂಬ ಉತ್ಸಾಹ ಶಾಮರಾಯರಲ್ಲಿ ಶುರುವಾಯಿತಲ್ಲ? ಅವರ ಕಣ್ಣಿಗೆ ನಾನು ಅವತ್ತಿಗೆ ಅರ್ಹನೆಂಬಂತೆ ಕಂಡಿದ್ದೆ. ಅವತ್ತಿಗಾಗಲೇ ‘ಕಸ್ತೂರಿ’ಗೆ ಹೊಸ ರೂಪು ಕೊಟ್ಟು ಅದರ ಸರ್ಕ್ಯುಲೇಶನ್ ಜಾಸ್ತಿ ಮಾಡಿದ್ದೆ. ‘ಕರ್ಮವೀರ’ ನಿಂತುಹೋಗಿಯೇ ಹದಿನಾಲ್ಕು ವರ್ಷಗಳಾಗಿದ್ದವು. ‘ಮತ್ತೆ ಶುರುಮಾಡ್ತೀನಿ. ನೋಡ್ಕತೀಯಾ?’ ಅಂತಷ್ಟೆ ಕೇಳಿದ್ದರು ರಾಯರು. ನಾನು ಮತ್ತು ಗಣೇಶ ಕಾಸರಗೋಡು ಅದಕ್ಕಾಗಿ ಜೀವ ತೇಯ್ದುಬಿಟ್ಟೆವು. ಅದೇನನ್ನಿಸಿತೋ? ಇದ್ದಕ್ಕಿದ್ದಂತೆ ಶಾಮರಾಯರು ನನ್ನನ್ನು ಒಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವರ್ಗಾ ಮಾಡಿಬಿಟ್ಟರು. (ಎಂಥ ಕೆಲಸ ಮಾಡಿದಿರಿ! ಅವನನ್ನು ಬೆಂಗಳೂರಿಗೆ ಕಳಿಸಬಾರದಿತ್ತು ಅಂತ ಯಾರಾದರೂ ಅಂದಿದ್ದರೇನೋ? ನನಗೆ ಗೊತ್ತಿಲ್ಲ). ನಾನು ಬೆಂಗಳೂರಿಗೆ ಬಂದೆ. ಆಗಷ್ಟೆ ಡಯಾಬಿಟಿಸ್ ಬಂದಿತ್ತು. ಹೆಂಡತಿ ಮಕ್ಕಳಿಂದ ಮತ್ತೆ ದೂರವಾಗಿದ್ದೆ. ಊಟದ್ದು ದೊಡ್ಡ ಸಮಸ್ಯೆಯಾಗಿತ್ತು. ಉಳಿಯಲು ಬೇರೆ ಜಾಗವಿಲ್ಲದೆ ‘ಕರ್ಮವೀರ’ ಆಫೀಸಿನಲ್ಲೇ ಮಲಗಿಕೊಳ್ಳುತ್ತಿದ್ದೆ. ಆದರೆ ಬೆಂಗಳೂರಿನ ಸಮಸ್ಯೆಗಳು ಅಷ್ಟೇ ಅಲ್ಲ ಎಂಬುದು ಬಂದ ಹೊಸತರಲ್ಲೇ ನನಗೆ ಮನವರಿಕೆಯಾಗಿತ್ತು. ಏಕೆಂದರೆ, ಎಲ್ಲೋ ದೂರದಲ್ಲಿದ್ದುಕೊಂಡು ಶಾಮರಾಯರ ಕೈಕೆಳಗೆ ಕೆಲಸ ಮಾಡುವುದೇ ಬೇರೆ. ಅವರನ್ನು ಪ್ರತಿನಿತ್ಯ ನೋಡುತ್ತ ಅವರೊಂದಿಗೆ ಹೆಣಗುವುದೇ ಬೇರೆ. ನಾನು ನಿರೀಕ್ಷಿಸಿದ್ದಕ್ಕಿಂತ ಶಾಮರಾಯರು ನನ್ನನ್ನು ಚೆನ್ನಾಗಿ ನೋಡಿಕೊಂಡರು. ಆದರೆ ನಾನು ನಿರೀಕ್ಷಿಸಿಯೇ ಇರಲಿಲ್ಲ; ಅವರಿಗೂ ನನಗೂ ಬದ್ಧ ಶತ್ರುತ್ವ ಶುರುವಾಗಿ ಹೋಯಿತು. ಅದಕ್ಕೆ ಅಂಥಾ ದೊಡ್ಡ ಕಾರಣವೇನೂ ಇರಲಿಲ್ಲ. ಈ ಬಾರಿ ಶಾಮರಾಯರು ವಿದೇಶಕ್ಕೆ ಹೋಗಿ ಬಂದಿದ್ದರು. ಬರುವ ಹೊತ್ತಿಗೆ ನನ್ನದೇ ಸಹೋದ್ಯೋಗಿಗಳು ನನ್ನ ವಿರುದ್ಧ ಅವರ ಮನಸ್ಸನ್ನು ಕಹಿ ಮಾಡಿದ್ದರು. ‘ಕರ್ಮವೀರ’ದ ಸರ್ಕ್ಯುಲೇಷನ್ ಒಂದು ಲಕ್ಷ ದಾಟಿತ್ತು. “ನೀನು ನನ್ನ ಪತ್ರಿಕೆ ಹಾಳು ಮಾಡಿಬಿಟ್ಟೆ" ಎಂದು ಬಂದಬಂದವರೇ ರೊಳ್ಳೆ ತೆಗೆದರು. ದೇಹದಿಂದ ಕೂದಲು ಕಳಚಿದ ಹಾಗೆ, ಅವರು ಕೊಟ್ಟ ಆರು ವರ್ಷಗಳ ನೌಕರಿಯನ್ನು ಕಳಚಿ ಅವರ ಟೇಬಲ್ಲಿನ ಮೇಲಿಟ್ಟು, ತಲೆ ಮಾಸಿದವನೊಬ್ಬನಿಗೆ ಸಂಪಾದಕತ್ವದ charge(?) ಕೊಟ್ಟು ಹೊರಬಂದು ಬಿಟ್ಟೆ. ಹೊರಬರುವಾಗ ‘ಕರ್ಮವೀರ’ ಕಚೇರಿಯಿಂದ ಏನನ್ನಾದರೂ ಹೊರತರುವುದಿರಲಿ, ನನ್ನದೇ ಮೋಟರ್ ಸೈಕಲ್ಲನ್ನು ಶಾಮರಾಯರು ಕಿತ್ತುಕೊಂಡು ಕಳಿಸಿದ್ದರು. ಅಕ್ಷರಶಃ ನಾನು ಬೀದಿಗೆ ತಳ್ಳಲ್ಪಟ್ಟಿದ್ದೆ.
ಮತ್ತೀಹಳ್ಳಿ ನಾಗರಾಜರಾಯರು ಬಹುಶಃ ಆ ದಿನಗಳಲ್ಲೇ ಶಾಮರಾಯರಿಗೆ ಪತ್ರ ಬರೆದಿದ್ದಿರಬೇಕು. ಅನೇಕ ವರ್ಷಗಳ ನಂತರ ಅವರು ತಮ್ಮ ಜಗತ್ಪ್ರವಾಸದ ಕುರಿತಾಗಿ ಕೆಲವು ಲೇಖನಗಳನ್ನು ಬರೆದು ‘ಕರ್ಮವೀರ’ಕ್ಕೆ ಕಳಿಸಿದ್ದರು. ಅದು ಕಚೇರಿಯಲ್ಲೇ ಕಡತಗಳಲ್ಲಿತ್ತು. ‘ಅದನ್ನು ಪ್ರಕಟಿಸುತ್ತೀರಾ?’ ಅಂತ ನಾಗರಾಜರಾಯರು ಕೇಳಿದುದಕ್ಕೆ ಶಾಮರಾಯರು ನೀಡಿದ ಉತ್ತರವೇನು ಗೊತ್ತೆ? “ಕರ್ಮವೀರದ ಉಸ್ತುವಾರಿಯಲ್ಲಿದ್ದ ರವಿ ಬೆಳಗೆರೆ ಅನೇಕ ಲೇಖನಗಳನ್ನೂ, ಫೀಚರ್ ಸ್ಟೋರಿಗಳನ್ನು ಕದ್ದುಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲ, ‘ಕರ್ಮವೀರ’ದ ಅವನತಿಗೆ ಕಾರಣನಾಗಿದ್ದಾನೆ. ಹೀಗಾಗಿ ಅವನನ್ನು ಕೆಲಸದಿಂದ ತೆಗೆದು ಹಾಕಬೇಕಾಯಿತು. ತಮ್ಮ ಲೇಖನಗಳು ಕಳುವಾಗಿವೆಯೆಂದು ನನಗೆ ಪ್ರತಿನಿತ್ಯ ಹತ್ತು ಹದಿನೈದು ಜನ ಪತ್ರ ಬರೆಯುತ್ತಿದ್ದಾರೆ. ಹೀಗಾಗಿ, ನಾನು ಅವುಗಳನ್ನು ಹುಡುಕಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಿಕ್ಕ ತಕ್ಷಣ ಪ್ರಕಟಿಸುವ ವ್ಯವಸ್ಥೆ ಮಾಡುತ್ತೇನೆ"
ಶಾಮರಾಯರ ಕ್ರೌರ್ಯವೆಂದರೆ ಅದು.


“ಲಲಿತಮ್ಮಾ, ನಿನ್ನ ಗಂಡನಿಗೆ ಮಾಡಬಾರದ ಅನ್ಯಾಯ ಮಾಡಿಬಿಟ್ಟೆ. ಕೊಡಬಾರದ ತೊಂದರೆ ಕೊಟ್ಟುಬಿಟ್ಟೆ. ಅದ್ಯಾವುದನ್ನು ಮನಸಿನ್ಯಾಗೆ ಇಟ್ಟಕಳ್ಳದೆ ಇವತ್ತು ನೀವು ಆದರಿಸ್ತಾ ಇದ್ದೀರಿ. ನಿಮ್ಮ ಋಣ ಹ್ಯಾಗೆ ತೀರಿಸಬೇಕೋ ಗೊತ್ತಿಲ್ಲ" ಅಂತ ಅದೇ ಶಾಮರಾಯರು ಕೆಲವು ವರ್ಷಗಳ ನಂತರ ಬನಶಂಕರಿಯ ನನ್ನ ಮನೆಗೆ ಬಂದು ಊಟ ಮುಗಿಸಿ ಕೈತೊಳೆಯುತ್ತ ಹೇಳಿದ್ದರು.


ಅವರ ಆ ಪಶ್ಚಾತ್ತಾಪವೂ ಪ್ರಾಮಾಣಿಕವಾದುದಲ್ಲ ಎಂಬುದು ನನಗೆ ಗೊತ್ತಿತ್ತು. ಇವತ್ತು ಶಾಮರಾಯರು ಬದುಕಿಲ್ಲ. ಕೆಟ್ಟದ್ದನ್ನೇ ನೆನಪಿಟ್ಟುಕೊಳ್ಳಬೇಕು ಅಂದರೆ, ಶಾಮರಾಯರಿಗೆ ಸಂಬಂಧಿಸಿದಂತೆ ಸಾವಿರ ನೆನಪುಗಳಿವೆ. ಆದರೆ ನಾನು ಬಸಿದುಕೊಂಡಿರುವುದು ಅವರಲ್ಲಿದ್ದ ಪಾಸಿಟಿವ್ ಅಂಶಗಳನ್ನೇ. ಅವರದೇ ಸಿಟ್ಟು ನನ್ನಲ್ಲೂ ಹುಟ್ಟಿಕೊಂಡಿತ್ತು. ಪ್ರಯತ್ನಪೂರ್ವಕವಾಗಿ ಆ ಸಿಟ್ಟು ನೀಗಿಕೊಂಡು ಎರಡೂವರೆ ಮೂರು ವರ್ಷಗಳಾಗಿವೆ.
ಇವತ್ತು ಯಾಕಿದೆಲ್ಲ ನೆನಪಾಯಿತೋ?

 

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 October, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books