Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಹೊಗಳುಭಟ್ಟರನ್ನು ದೂರವಿಟ್ಟು ನಿಜವಾದ ಕೆಲಸಗಾರರನ್ನು ಗುರುತಿಸಿ ಸಿದ್ದಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿರುವ ಮಂತ್ರಿಗಳ ಪೈಕಿ ಬಹಳಷ್ಟು ಮಂದಿ ಕ್ರಿಯಾಶೀಲರಲ್ಲ ಎಂಬುದು ರಹಸ್ಯದ ಸಂಗತಿಯೇನಲ್ಲ. ಬಹುಶಃ ತುಂಬ ಜನರಿಗೆ ಅವರು ಬಯಸಿದ ಖಾತೆ ಸಿಗದೆ, ಕೊಟ್ಟಿರುವ ಖಾತೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರಬಹುದು ಎಂದು ಕೆಲವರು ಹೇಳಬಹುದು. ಉದಾಹರಣೆಗೆ ಟಿ.ಬಿ.ಜಯಚಂದ್ರ ಅವರಿಗೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗುವ ಬದಲು ನೀರಾವರಿ ಸಚಿವರಾಗಬೇಕು ಎಂಬ ಆಕಾಂಕ್ಷೆಯಿತ್ತು. ಆದರೆ ಅದವರಿಗೆ ಸಿಗಲಿಲ್ಲ. ಹೀಗಾಗಿ ಅವರು ಪ್ರತಿ ಸಲ ಮಾತನಾಡುವಾಗಲೂ ನೀರಾವರಿ, ಲೋಕೋಪಯೋಗಿ, ಕಂದಾಯ ಅಂತೆಲ್ಲ ಸಿಕ್ಕ ಸಿಕ್ಕ ವಿಷಯಗಳ ಮೇಲೆಲ್ಲ ಮಾತನಾಡುತ್ತಾರೆ. ಕಾನೂನಿನ ವ್ಯಾಪ್ತಿಯಡಿ ಎಲ್ಲ ಇಲಾಖೆಗಳೂ ಬರಬಹುದು. ಅದೇ ರೀತಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ನೀಡಿದರೂ ಎಲ್ಲ ಇಲಾಖೆಗಳೂ ಅದರ ವ್ಯಾಪ್ತಿಗೆ ಬರುತ್ತವೆ. ಬೇಕಿದ್ದರೆ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಎಂ.ಇಬ್ರಾಹಿಂ ಅವರನ್ನೇ ತೆಗೆದುಕೊಳ್ಳಿ. ಅವರ ಇಲಾಖೆಯ ವ್ಯಾಪ್ತಿಗೆ ಎಲ್ಲ ಖಾತೆಗಳನ್ನೂ ಸೇರಿಸಬಹುದು. ಎಷ್ಟೇ ಆದರೂ ಸಿ.ಎಂ.ಇಬ್ರಾಹಿಂ ರಾಜ್ಯದ ಹಿರಿಯ ರಾಜಕಾರಣಿ.

ನನಗೆ ಗೊತ್ತಿರುವ ಪ್ರಕಾರ, ಇವತ್ತು ಅಲ್ಪಸಂಖ್ಯಾತ ನಾಯಕರಲ್ಲಿ ನೀವು ಅಗ್ರಗಣ್ಯ ಅಂತ ಕರೆದರೆ ಸಿ.ಎಂ.ಇಬ್ರಾಹಿಂ ಅವರನ್ನೇ ಕರೆಯಬೇಕು. ಉಳಿದಂತೆ ರೋಷನ್‌ ಬೇಗ್ ಒಳ್ಳೆಯ ಕೆಲಸ ಮಾಡುತ್ತಾರೆ. ನೆರೆಯ ತಮಿಳ್ನಾಡಿನಲ್ಲಿ ನೂರು ರುಪಾಯಿ ಒಳಗೆ ಕೊಡುವ ಕೇಬಲ್ ಟೀವಿ ಇಲ್ಲಿ ಏಕೆ ಇನ್ನೂರೈವತ್ತು, ಮುನ್ನೂರು ರುಪಾಯಿ ಅನ್ನುತ್ತಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ೨೦೧೧ರಲ್ಲಿ ಜಾರಿಗೆ ತಂದ ಕಾಯ್ದೆಯನ್ನು ಓದಿಕೊಳ್ಳುತ್ತಾರೆ. ಅದರಲ್ಲಿ ಒಂದು ಅಂಶವಿದೆ. ಅದೆಂದರೆ ನೂರು ಛಾನಲ್‌ಗಳನ್ನು ಒದಗಿಸಿ ನೂರು ರುಪಾಯಿಗಳನ್ನು ಕೇಬಲ್ ಟೀವಿ ನಡೆಸುವವರು ಪಡೆಯಬೇಕು ಎಂಬುದು. ಕೇಳಿದರೆ ಇವರು, ನಾವು ನಿಮಗೆ ಐನೂರು ಛಾನಲ್ ಕೊಡುತ್ತೇವೆ ಅನ್ನುತ್ತಾರೆ. ಐನೂರು ಛಾನಲ್‌ಗಳನ್ನು ಯಾರು ನೋಡುತ್ತಾರೆ? ಅಯ್ಯಬ್ಬೋ ಅಂದರೂ ಐವತ್ತು ಛಾನಲ್‌ಗಳನ್ನು ನೋಡಲು ಒಂದು ಕುಟುಂಬಕ್ಕೆ ಪುರುಸೊತ್ತಿರುವುದಿಲ್ಲ. ಕನ್ನಡ, ಹಿಂದಿ, ಇಂಗ್ಲಿಷ್ ಜೊತೆಗೆ ಗುಜರಾತಿ, ಒರಿಯಾ, ಮಣಿಪುರಿ ಅಂತೆಲ್ಲ ಸಿಕ್ಕ ಸಿಕ್ಕ ಭಾಷೆಯ ಛಾನಲ್ಲುಗಳನ್ನು ಒದಗಿಸಿ ಇಲ್ಲಿ ದುಡ್ಡು ಕೀಳುತ್ತಾರೆ. ಇದು ಸರಿಯಲ್ಲ ಎಂಬುದು ರೋಷನ್ ಬೇಗ್ ವಾದ. ಅದೇ ರೀತಿ ಸರ್ಕಾರಿ ಕಾಲೇಜುಗಳಲ್ಲಿ ಕಡಿಮೆ ದರಕ್ಕೆ ಮಧ್ಯಾಹ್ನ ಒಳ್ಳೆಯ ಊಟ ಸಿಗುವಂತೆ ಮಾಡಬೇಕು ಎನ್ನುತ್ತಾರೆ. ಯಾರೇನೇ ಹೇಳಲಿ, ಮಂತ್ರಿಯಾಗಿ ರೋಷನ್ ಬೇಗ್ ಒಳ್ಳೆಯ ಕೆಲಸ ಮಾಡುತ್ತಾರೆ.

ಅದೇ ರೀತಿ ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನೇ ತೆಗೆದುಕೊಳ್ಳಿ. ಪಶ್ಚಿಮ ಆಫ್ರಿಕಾದ ಜೈರೇ ಸಮೀಪ ಇರುವ ಯಾಂಬೂಕಿಯಲ್ಲಿ ಪತ್ತೆಯಾದ ಎಬೋಲಾ ವೈರಸ್ ಇವತ್ತು ಜಗತ್ತಿನ ವಿವಿಧ ದೇಶಗಳಲ್ಲಿ ತಾಂಡವ ನೃತ್ಯವಾಡುತ್ತಿದೆ. ಆದರೆ ಖಾದರ್ ಎಬೋಲಾ ರೋಗದ ಕುರಿತು ಸರಿಯಾದ ಮಾಹಿತಿ ಪಡೆದಿದ್ದಾರೆ. ಅದನ್ನು ಹೇಗೆ ತಡೆಗಟ್ಟಬಹುದು ಎಂಬ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಎಬೋಲಾ ರೋಗಕ್ಕೆ ನಮ್ಮ ಆಯುರ್ವೇದಿಕ್ ಪದ್ಧತಿಯಲ್ಲಿ ಏನಾದರೂ ಔಷಧ ಕಂಡು ಹಿಡಿಯಿರಿ ಎಂದು ಸಂಬಂಧಪಟ್ಟವರ ಬಳಿ ಹೇಳುತ್ತಾರೆ. ಒಟ್ಟಿನಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಏನು ಮಾಡಬೇಕೋ ಅದನ್ನು ಖಾದರ್ ಮಾಡುತ್ತಾರೆ. ಅವರ ತಂದೆ ಕೂಡ ಶಾಸಕರಾಗಿದ್ದವರು. ಇವತ್ತು ಸಿದ್ದರಾಮಯ್ಯನವರ ಸರ್ಕಾರಕ್ಕೆ ಗೌರವ ಬರುವಂತೆ ಕೆಲಸ ನಡೆಸುತ್ತಿರುವವರು ಖಾದರ್. ಒಮ್ಮೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಮಿತ್ರರು ರಾಜ್ಯಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ಕುರಿತು ಪ್ರಸ್ತಾಪಿಸಿದರು. ಅದರ ಮಾರನೇ ದಿನವೇ ಖಾದರ್ ಸಂಬಂಧಪಟ್ಟವರನ್ನು ಕರೆಸಿ, ಚರ್ಚಿಸಿ, ಎಲ್ಲ ಕಡೆ ಯಾವ್ಯಾವ ಇಲಾಖೆಗಳನ್ನು ಒಗ್ಗೂಡಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಬೇಕು ಎಂಬುದರಿಂದ ಹಿಡಿದು ಕೂಲಂಕುಷವಾಗಿ ನಿರ್ದೇಶನ ನೀಡಿದರು.

ಒಬ್ಬ ಸಚಿವ ಕಾರ್ಯ ನಿರ್ವಹಿಸಬೇಕಾಗಿರುವುದೇ ಹೀಗೆ. ಒಳ್ಳೆಯದು ಅಂತ ಯಾವ ಕಡೆಯಿಂದ ಕೇಳಿ ಬಂದರೂ ತಕ್ಷಣವೇ ಅದನ್ನು ಸ್ವೀಕರಿಸುವುದು ಒಳ್ಳೆಯ ಸ್ವಭಾವ. ಅದು ಖಾದರ್ ಅವರಲ್ಲಿದೆ. ದಟ್ಸ್ ಗುಡ್. ಅದೇ ರೀತಿ ಸಿದ್ದರಾಮಯ್ಯನವರ ಸಂಪುಟದ ಬಹುತೇಕ ಸಚಿವರಿಗೆ ಇಲ್ಲದ ತಾಳ್ಮೆ ಅವರಲ್ಲಿದೆ. ಬಂದವರ ಕಷ್ಟ ಕೇಳುತ್ತಾರೆ. ಪರಿಹರಿಸಲು ಸಾಧ್ಯವಾ ಅಂತ ನೋಡುತ್ತಾರೆ. ಪರಿಹರಿಸಲು ಸಾಧ್ಯವಾಗುವುದಾದರೆ ಮಾಡುತ್ತಾರೆ. ಆಗುವುದಿಲ್ಲ ಎಂದರೆ ಯಾಕೆ ಆಗುವುದಿಲ್ಲ ಎಂದು ಹೇಳುತ್ತಾರೆ. ತಿಂಗಳಲ್ಲಿ ಇಷ್ಟು ದಿನ ಅಂತ ರಾಜ್ಯ ಸುತ್ತುತ್ತಾರೆ. ಬೇರೆ-ಬೇರೆ ಜಿಲ್ಲೆಗಳಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ. ಮಂಡ್ಯ ಜಿಲ್ಲೆಯ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಆದ ಅನುಭವವನ್ನು ಹೇಳಿಕೊಂಡು ಸಂಕಟಪಡುವ ಖಾದರ್ ನಿಜವಾದ ಒಬ್ಬ ಕಾಳಜಿಯುಕ್ತ ಸಚಿವ. ಉಳಿದಂತೆ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಚಿವರೆಂದರೆ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಕೃಷ್ಣ ಭೈರೇಗೌಡ. ಹಾಗೆ ನೋಡಿದರೆ ಇಬ್ಬರೂ ತಾವು ಮಾಡುವ ಕೆಲಸದ ಕುರಿತು ಹೇಳಿಕೊಳ್ಳುವುದಿಲ್ಲ.

ವಿ.ಶ್ರೀನಿವಾಸ ಪ್ರಸಾದ್ ಸಚಿವರಾದ ನಂತರ ಕೊರತೆ ಇರುವ ಎರಡು ಸಾವಿರದ ನಾಲ್ಕು ನೂರು ಸರ್ವೇಯರ್‌ಗಳ ಪೈಕಿ ಒಂದು ಸಾವಿರದ ಎಂಟು ನೂರಕ್ಕೂ ಹೆಚ್ಚು ಸರ್ವೇಯರ್‌ಗಳನ್ನು ನೇಮಕ ಮಾಡಲಾಯಿತು. ಯಾರಾದರೂ ದುಡ್ಡು ತಿನ್ನಲು ಆಸೆ ಪಡುವವರು ಇಲ್ಲಿ ಬಂದು ಕೂತಿದ್ದರೆ ಕನಿಷ್ಠ ಪಕ್ಷ ನಲವತ್ತರಿಂದ ಐವತ್ತು ಕೋಟಿ ರುಪಾಯಿ ಹೊಡೆದು ತಿನ್ನುತ್ತಿದ್ದರೇನೋ? ಆದರೆ ಪ್ರಸಾದ್ ಒಂದು ಪೈಸೆ ಇಲ್ಲದೆ ಎಲ್ಲರಿಗೂ ಕೆಲಸ ಕೊಟ್ಟರು. ಬಹುತೇಕ ಮಂದಿಯನ್ನು ಅವರಿರುವ ವಿಭಾಗಗಳಿಗೇ ನೇಮಕ ಮಾಡಿದರು. ಇಲ್ಲವಾದರೆ ಅವರು ಮತ್ತೆ ಯಾರನ್ನಾದರೂ ಹಿಡಿದುಕೊಂಡು ವರ್ಗಾವಣೆ ಕೇಳಲು ಬರುವುದು ಹೊಸ ಸಮಸ್ಯೆ. ಮೈಸೂರು ವಿಭಾಗದವನಿಗೆ ಬೆಳಗಾಂ ವಿಭಾಗ ಕೊಟ್ಟರೆ ಅನುಮಾನವೇ ಬೇಡ. ನಿಶ್ಚಿತವಾಗಿಯೂ ಆತ ವರ್ಗಾವಣೆ ಮಾಡಿಸಿಕೊಳ್ಳಲು ಶಾಸಕನೋ, ಸಂಸದನೋ, ಮಂತ್ರಿಗಳನ್ನೋ ಹಿಡಿದುಕೊಂಡು ಬರುತ್ತಾನೆ. ಅದ್ಯಾವ ರಗಳೆಯೂ ಬೇಡ ಎಂದು ಶ್ರೀನಿವಾಸ ಪ್ರಸಾದ್ ಬಹುತೇಕ ಪ್ರಕರಣಗಳಲ್ಲಿ ಸರ್ವೇಯರ್‌ಗಳನ್ನು ಅವರು ಬಂದಿರುವ ವಿಭಾಗದಲ್ಲೇ ನೇಮಿಸಿದರು. ಬಾಕಿ ಉಳಿದಿರುವ ಸರ್ವೇಯರ್‌ಗಳನ್ನು ಭರ್ತಿ ಮಾಡಲು ಈಗ ತಯಾರಿ ನಡೆಸುತ್ತಿದ್ದಾರೆ.

ಅಂದ ಹಾಗೆ ಬೆಂಗಳೂರು ಮಾತ್ರವಲ್ಲ, ರಾಜ್ಯಾದ್ಯಂತ ಅಕ್ರಮವಾಗಿ ಭೂ ಒತ್ತುವರಿ ಮಾಡಿದವರ ಪಡೆಯೇ ಇದೆ. ಲಕ್ಷಾಂತರ ಕೋಟಿ ರುಪಾಯಿ ಮೌಲ್ಯದ ಭೂಮಿಯನ್ನು ಎಲ್ಲ ಪಕ್ಷದ ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು, ಭೂ ಮಾಫಿಯಾ ಡಾನ್‌ಗಳು ಸೇರಿ ಹೊಡೆದು ತಿಂದಿದ್ದಾರೆ. ಇಂತಹವರನ್ನು ಒಕ್ಕಲೆಬ್ಬಿಸಿ ಎಂದರೆ ಹೇಗೆ? ಅದಕ್ಕಾಗಿ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳಿಗೆ ಜಿಲ್ಲಾ ಮಟ್ಟದಲ್ಲಿ ಹಾಗೂ ಬೆಂಗಳೂರು ಮಟ್ಟದಲ್ಲಿ ಸ್ಪೆಷಲ್ ಕಮೀಶನರ್ ಅವರನ್ನು ನೇಮಕ ಮಾಡಿ ಅಕ್ರಮ ಭೂ ಒತ್ತುವರಿದಾರರನ್ನು ಎತ್ತಂಗಡಿ ಮಾಡೋಣ ಎಂದು ಅವರು ಹೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಒಪ್ಪಿಕೊಂಡಿದ್ದಾರೆ. ಅದೇ ರೀತಿ ಅವರು ಹೊರತರಲು ಹೊರಟಿರುವ ಭೂ ನೀತಿ ಕೂಡ ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಯದು. ನಮ್ಮಲ್ಲಿ ಸರ್ಕಾರಿ ಭೂಮಿಯನ್ನು ಪಡೆಯುವಾಗ ಯಾವ ಉದ್ದೇಶಕ್ಕೆ ಎಷ್ಟು ಭೂಮಿ ಬೇಕು ಎಂದು ಕೇಳಿ ವೈಜ್ಞಾನಿಕವಾಗಿ ಕೊಡುವ ಕೆಲಸವಾಗಿಲ್ಲ. ಮದ್ದೂರು ವಡೆ ಮಾಡಿ ಮಾರುತ್ತೇನೆ ಅಂತ ಬಂದವನಿಗೂ ಹದಿನೈದು ಎಕರೆ ಭೂಮಿ ಕೊಟ್ಟ ಮುಖ್ಯಮಂತ್ರಿಗಳಿದ್ದಾರೆ.

ಇದೇ ರೀತಿ ಶಾಲೆಗಳನ್ನು ಪ್ರಾರಂಭಿಸುತ್ತೇವೆ ಅಂತ ಬಂದವರು ಐದು ಎಕರೆ ಸಾಕಾದರೂ ಐವತ್ತು ಎಕರೆ ತೆಗೆದುಕೊಂಡಿದ್ದಾರೆ. ಐಟಿ-ಬಿಟಿ ಕಂಪನಿ ಸ್ಥಾಪಿಸುತ್ತೇವೆ ಅಂತ ಬಂದವರ ಪೈಕಿ ಹಲವರು ನೂರಾರು ಎಕರೆ ತೆಗೆದುಕೊಂಡಿದ್ದಾರೆ. ಇದೇ ರೀತಿ ವಿವಿಧ ಉದ್ಯಮಗಳನ್ನು ಸ್ಥಾಪಿಸುತ್ತೇವೆ ಎಂದು ನೂರಾರು ಎಕರೆ ಭೂಮಿಯನ್ನು ಪಡೆದುಕೊಂಡವರು ನಿಜಾರ್ಥದಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರು ಎಂಬುದರಲ್ಲಿ ಅನುಮಾನವೇ ಇಲ್ಲ. ಜಾಗತೀಕರಣಕ್ಕೆ ನಮ್ಮನ್ನು ನಾವು ತೆರೆದುಕೊಂಡ ಮೇಲೆ ಕೊಟ್ಟಿರುವ ಭೂಮಿಯನ್ನು ಒಮ್ಮೆ ಪರಿಶೀಲಿಸಿ ನೋಡಿ. ಅಗತ್ಯಕ್ಕಿಂತ ಐದು, ಹತ್ತು ಪಟ್ಟು ಹೆಚ್ಚಿನ ಭೂಮಿ ಕೊಟ್ಟಿದ್ದೇವೆ. ರಿಯಾಯ್ತಿ ದರದಲ್ಲಿ ಭೂಮಿ ಕೊಟ್ಟಿದ್ದೇವೆ. ಹೀಗೆ ಅಗ್ಗದ ದರದಲ್ಲಿ ಭೂಮಿ ಪಡೆದವರ ಪೈಕಿ ಹಲವರು ಅಯ್ಯೋ, ನಮ್ಮ ಬಿಜಿನೆಸ್ಸು ಲಾಸಾಯಿತು. ಹೀಗಾಗಿ ಭೂಮಿಯನ್ನು ಮಾರುಕಟ್ಟೆ ದರದ ಅರ್ಧಕ್ಕೆ ನಮಗೇ ನೀಡಿ ಎನ್ನುತ್ತಾರೆ. ಸರ್ಕಾರಗಳೂ ಕೊಡುತ್ತಾ ಬಂದಿವೆ.

ಆದರೆ ಇಂತಹ ಎಲ್ಲ ಚಟುವಟಿಕೆಗಳಿಗೆ ಶ್ರೀನಿವಾಸ ಪ್ರಸಾದ್ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಇದಕ್ಕಾಗಿ ದೇಶದಲ್ಲೇ ಮೊಟ್ಟ ಮೊದಲ ಬಾರಿ ಭೂ ನೀತಿ ಜಾರಿಗೆ ತರಲು ಹೊರಟಿದ್ದಾರೆ. ಮೊದಲನೆಯದಾಗಿ ಭೂಮಿ ಪಡೆದವರು ಯಾವ ಉದ್ದೇಶಕ್ಕಾಗಿ ಭೂಮಿ ಪಡೆದರೋ ಆ ಜಾಗದಲ್ಲಿ ಉದ್ದೇಶಕ್ಕೆ ತಕ್ಕ ಕೆಲಸ ಮಾಡಿದ್ದಾರಾ ಎಂದು ಇದು ನೋಡುತ್ತದೆ. ಎರಡು ಎಕರೆ ಸಾಕಾಗುವ ಜಾಗದಲ್ಲಿ ನೂರು ಎಕರೆ ಪಡೆದಿದ್ದರೆ ತೊಂಬತ್ತೆಂಟು ಎಕರೆ ಜಾಗ ವಾಪಸು ಪಡೆಯುತ್ತದೆ. ಒಂದು ವೇಳೆ ನಮ್ಮ ಬಿಜಿನೆಸ್ ಲಾಸಾಗಿದೆ, ಹೀಗಾಗಿ ಅರ್ಧ ರೇಟಿಗೆ ನಮಗೇ ಕೊಡಿ ಎಂದು ಯಾರಾದರೂ ಉದ್ಯಮಿ ಹೇಳಿದರೆ ನೋ ಛಾನ್ಸ್. ಈ ಹಿಂದೆ ಸರ್ಕಾರ ಯಾವ ದರಕ್ಕೆ ಭೂಮಿ ಒದಗಿಸಿತ್ತೋ, ಅದೇ ಬೆಲೆಗೆ ಭೂಮಿ ಕೊಟ್ಟು ವಾಪಸು ಹೋಗಿ ಅನ್ನುತ್ತದೆ. ಹೀಗೆ ಮಾಡಿದರೆ ಸಾಕು, ಕಳ್ಳ ಮಾರ್ಗದಲ್ಲಿ ಭೂಮಿ ಪಡೆದ ರಾಜಕಾರಣಿಗಳು, ಅಧಿಕಾರಿಗಳು, ರಿಯಲ್ ಎಸ್ಟೇಟ್ ಡಾನುಗಳ ಹಣೆಬರಹವೇ ಬದಲಾಗುತ್ತದೆ. ಮತ್ತೆ ಹಂಚಲು ಸರ್ಕಾರದ ಕೈಗೆ ಭೂಮಿ ಸಿಗುತ್ತದೆ. ಅದೇ ರೀತಿ ಇರುವ ಭೂಮಿಯ ಜೊತೆ ಆ ಭೂಮಿಯನ್ನು ಉದ್ದೇಶಕ್ಕೆ ತಕ್ಕಂತೆ ಒದಗಿಸಿದರೆ ಮುಂದಿನ ನಲವತ್ತು, ಐವತ್ತು ವರ್ಷಗಳ ಕಾಲ ಸಮಸ್ಯೆ ಇರುವುದಿಲ್ಲ.

ಉದಾಹರಣೆಗೆ ಸಿದ್ದರಾಮಯ್ಯ, ಯಡಿಯೂರಪ್ಪನವರ ಕಾಲ ಸೇರಿದಂತೆ ಬಿಡಿಎ ವತಿಯಿಂದ ಡಿನೋಟಿಫೈ ಮಾಡಿದರಲ್ಲ ಐನೂರಾ ನಲವತ್ತೊಂದು ಚಿಲ್ಲರೆ ಎಕರೆ ಭೂಮಿ? ಈ ಭೂಮಿಯನ್ನು ಸರ್ಕಾರ ಯಾರಿಗಾಗಿ ಡಿನೋಟಿಫೈ ಮಾಡಿತು? ಮೂಲ ಮಾಲೀಕನಿಗೇ ಆಗಿದ್ದರೆ, ಸದರಿ ಜಾಗದಲ್ಲಿ ವ್ಯವಸಾಯ ಬಿಟ್ಟು ಬೇರೆ ದಂಧೆಗೆ ಇದನ್ನು ಬಳಸುವಂತಿಲ್ಲ ಎಂದು ಕರಾರು ಹಾಕಬಹುದಿತ್ತು. ಒಂದು ವೇಳೆ ಮಾರಾಟ ಮಾಡುವುದೇ ಆದರೆ ಸರ್ಕಾರ ನಿಗದಿ ಮಾಡಿದ ಬೆಲೆಗೆ ಸರ್ಕಾರಕ್ಕೇ ಮಾರಾಟ ಮಾಡಿ ಅನ್ನಬಹುದಿತ್ತು. ಆದರೆ ನಿಮಗೆ ನೆನಪಿರಲಿ, ಈ ರೀತಿ ಡಿನೋಟಿಫೈ ಮಾಡಿದ ಜಮೀನಿನ ಬಹುತೇಕ ಭೂಮಿಯಲ್ಲಿ ಇವತ್ತು ಐಷಾರಾಮಿ ಫ್ಲ್ಯಾಟ್‌ಗಳು ಎದ್ದು ನಿಂತಿವೆ. ಅದರರ್ಥ ಬೇರೇನೂ ಅಲ್ಲ. ಡಿನೋಟಿಫೈ ಮಾಡುವ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ರಿಯಲ್ ಎಸ್ಟೇಟ್ ಡಾನ್‌ಗಳು ಈ ಭೂಮಿಯನ್ನು ನುಂಗಿದ್ದಾರೆ. ವಿ.ಶ್ರೀನಿವಾಸ್ ಪ್ರಸಾದ್ ರೂಪಿಸಲು ಹೊರಟಿರುವ ಲ್ಯಾಂಡ್ ಪಾಲಿಸಿ, ಇಂತಹ ಕಳ್ಳರನ್ನು ಬಡಿದು ಹಾಕುತ್ತದೆ.

ಹೀಗಾಗಿಯೇ ಹಲವರು ಬೇಕೆಂದೇ, ಶ್ರೀನಿವಾಸ ಪ್ರಸಾದ್‌ಗೆ ಆರೋಗ್ಯ ಸರಿ ಇಲ್ಲ. ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಅವರು ಇರಬಾರದು ಎಂಬಂತೆ ವದಂತಿ ಹರಡಿಸುತ್ತಾರೆ. ಆದರೆ ನಿಶ್ಚಿತವಾಗಿಯೂ ನಾನು ಹೇಳುವುದು ಮಾತ್ರವಲ್ಲ, ಕೆಲಸ ಮಾಡುವ ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯನವರ ಸಚಿವ ಸಂಪುಟಕ್ಕೆ ಶ್ರೀನಿವಾಸ ಪ್ರಸಾದ್ ಅವರಂತಹವರು ಭೂಷಣಪ್ರಾಯರಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಕೃಷಿ ಖಾತೆಯನ್ನು ಪಡೆದ ಕೃಷ್ಣ ಭೈರೇಗೌಡ ರೈತರಿಗೆ ಒದಗಿಸಬೇಕಾದ ಬಿತ್ತನೆ ಬೀಜದಿಂದ ಹಿಡಿದು ರಸಗೊಬ್ಬರದ ತನಕ ಎಲ್ಲ ವಿಷಯಗಳ ಕಡೆ ಗಮನ ಹರಿಸುತ್ತಾರೆ, ಸಮಸ್ಯೆ ಪರಿಹರಿಸುತ್ತಾರೆ. ಊರೂರು ತಿರುಗುತ್ತಾರೆ, ಕೆಲಸ ಮಾಡುತ್ತಾರೆ. ಆದರೆ ತುಂಬ ಜನರಿಗೆ ಗೊತ್ತಿಲ್ಲದ ಸಂಗತಿ ಎಂದರೆ, ವಿ.ಶ್ರೀನಿವಾಸ ಪ್ರಸಾದ್ ಅವರಾಗಲೀ, ಕೃಷ್ಣ ಭೈರೇಗೌಡರಾಗಲೀ ತಾವು ಏನು ಕೆಲಸ ಮಾಡಿದ್ದೇವೆ ಎಂದು ಹೇಳಿಕೊಳ್ಳುವುದಿಲ್ಲ. ಈ ಜಗತ್ತಿನಲ್ಲಿ ಕೆಲಸ ಮಾಡದೇ ಇದ್ದರೂ ಡಂಗುರ ಬಾರಿಸುವವರು ಎದ್ದು ಕಾಣುತ್ತಾರೆ. ಕೆಲಸ ಮಾಡಿಯೂ ತೆರೆಮರೆಯಲ್ಲಿ ಉಳಿದುಕೊಳ್ಳುವವರು ಯಾರ ಕಣ್ಣಿಗೂ ಕಾಣುವುದಿಲ್ಲ. ಹೀಗಾಗಿ ಅಂತಹವರ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡುವ ಒಂದು ಗುಂಪೇ ಹುಟ್ಟಿಕೊಳ್ಳುತ್ತದೆ.

ಆದರೆ ಎಚ್.ಕೆ.ಪಾಟೀಲ್‌ರಂತಹ ಸಚಿವರ ಮಾತು ಬೇರೆ. ಅವರು ಕೆಲಸವನ್ನೂ ಮಾಡುತ್ತಾರೆ, ಏನು ಕೆಲಸ ಮಾಡಿದ್ದೇವೆ ಎಂದು ಕಾಲ ಕಾಲಕ್ಕೆ ಹೇಳುತ್ತಾರೆ. ನಾವು ಗಮನಿಸುವಾಗ ಒಳ್ಳೆಯ ಕೆಲಸ ಮಾಡುವ ಎಲ್ಲರನ್ನೂ ಗಮನಿಸಬೇಕು. ಇವತ್ತು ಸಿದ್ದರಾಮಯ್ಯ ಅದೇನೇ ತಿಪ್ಪರಲಾಗ ಹೊಡೆದರೂ ತೊಂಬತ್ನಾಲ್ಕರಲ್ಲಿ ದೇವೆಗೌಡರ ನೇತೃತ್ವದಲ್ಲಿ ರಚಿತವಾದಂತಹ ಮಂತ್ರಿ ಮಂಡಲವನ್ನು ರಚಿಸಲು ಸಾಧ್ಯವಿಲ್ಲ. ಜೆ.ಎಚ್.ಪಟೇಲ್, ಸಿದ್ದರಾಮಯ್ಯ, ಆರ್.ಎಲ್.ಜಾಲಪ್ಪ, ಎಂ.ಪಿ.ಪ್ರಕಾಶ್, ಸಿಂಧ್ಯಾ, ರಮೇಶ್ ಜಿಗಜಿಣಗಿ ಹೀಗೆ ನೋಡುತ್ತಾ ಹೋದರೆ ಎಂತೆಂತಹ ಸ್ಪಾಲ್‌ವರ್ಟ್‌ಗಳು ಆಗ ಮಂತ್ರಿಗಳಾಗಿದ್ದರು. ಕೆಲಸ ಕೂಡ ನಿರಾಯಾಸವಾಗಿ ನಡೆಯುತ್ತಿತ್ತು. ಇದೇ ಸಿ.ಎಂ.ಇಬ್ರಾಹಿಂ ಅವತ್ತು ಜನತಾದಳದ ಅಧ್ಯಕ್ಷರಾಗಿದ್ದರು. ಮುಂದೆ ತೊಂಬತ್ತಾರರಲ್ಲಿ ದೇವೆಗೌಡರು ದೇಶದ ಪ್ರಧಾನಿಯಾದಾಗ ಮಂತ್ರಿಯಾಗಿ ನಂಬರ್ ಟೂ ಅನ್ನಿಸಿಕೊಂಡರು. ಅಂತಹವರನ್ನು ಯೋಜನಾ ಆಯೋಗಕ್ಕೆ ಹಾಕಿ ನಿರ್ಲಕ್ಷಿಸುವ ಕೆಲಸ ಸಿದ್ದರಾಮಯ್ಯನವರಿಂದ ನಡೆಯುತ್ತಿದೆ.

ನಿಜ ಹೇಳಬೇಕೆಂದರೆ ಅವರ ಸಚಿವ ಸಂಪುಟದಲ್ಲಿ ಕೆಲಸ ಅಂತ ಮಾಡುವವರು, ಜನಪರವಾಗಿ ಅಂತ ಕೆಲಸ ಮಾಡುವ ಒಂದತ್ತು ಮಂದಿ ಇದ್ದರೆ ಜಾಸ್ತಿ. ಉಳಿದಂತೆ ಇಪ್ಪತ್ತರಷ್ಟು ಸಚಿವರು ಶುದ್ಧ ನಿರುಪಯೋಗಿಗಳು. ಹಾಗಂತ ತಮ್ಮ ಪಾಲಿಗೆ ತಾವು ನಿರುಪಯೋಗಿಗಳಲ್ಲ. ತಮಗೆ ಬೇಕಾದದ್ದನ್ನು ಮಾಡಿಕೊಂಡು ಅವರು ನೆಮ್ಮದಿಯಾಗಿದ್ದಾರೆ. ಆದರೆ ಜನರ ಕೆಲಸ ಮಾಡುವುದಿಲ್ಲ ಅಷ್ಟೇ. ಇದನ್ನು ಸಿದ್ದರಾಮಯ್ಯ ಗಮನಿಸಬೇಕು. ಕೆಲಸ ಮಾಡುವವರ ಪೈಕಿ ಹಲವರು ತಮ್ಮ ಸಾಧನೆಯ ಕುರಿತು ಡಂಗುರ ಬಾರಿಸುವುದಿಲ್ಲ. ಅದನ್ನು ಮುಖ್ಯಮಂತ್ರಿಗಳು ಗುರುತಿಸಬೇಕು. ಡಂಗುರ ಬಾರಿಸುವ ಅನೇಕರು ದಂಡ ಪಿಂಡಗಳು. ಅಂಥವರನ್ನೂ ಗುರುತಿಸಬೇಕು. ಸರ್ಕಾರಕ್ಕೆ ಕನಿಷ್ಠ ಎರಡು ವರ್ಷ ತುಂಬಿದ ಮೇಲೆ ಇಂತಹ ಇಪ್ಪತ್ತು ಮಂದಿಯನ್ನು ಕಿತ್ತು ಹಾಕಿ, ನಿಜವಾಗಿಯೂ ಕೆಲಸ ಮಾಡುವವರನ್ನು ಮಂತ್ರಿಗಳನ್ನಾಗಿ ಮಾಡುವ, ಅದೇ ರೀತಿ ಕೆಲಸ ಮಾಡುವ ಮಂತ್ರಿಗಳಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು. ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು ಎಂಬ ಮಾತೇ ಇದೆ. ಸಿದ್ದರಾಮಯ್ಯನವರಿಗೆ ಒಳ್ಳೆಯ ಹೆಸರು ಮಾಡಬೇಕು ಎಂಬ ಆಸೆಯಿದ್ದರೆ ಈ ಕೆಲಸ ಮಾಡಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 October, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books