Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಆನ್ ಲೈನ್ ಶಾಪಿಂಗು ಎಂಬ ಮೋಹ ಮತ್ತು ಆಗೋಚರ ವ್ಯಾಪಾರಿಯ ದಾಹ

“ನಮ್ಮದು ಗುಜರಾತ್ ಮೂಲದ ಅತಿದೊಡ್ಡ ಟೆಕ್ಸ್ ಟೈಲ್ಸ್ ಫ್ಯಾಕ್ಟರಿ. ನಮ್ಮಲ್ಲಿ ತಯಾರಾಗುವ ಉಡುಪುಗಳೆಲ್ಲವೂ ಪರದೇಶಗಳಿಗೆ ರಫ್ತಾಗುತ್ತವೆ. ಆದರೆ ಈ ಬಾರಿ ಗುಜರಾತಲ್ಲಿ ವಿಪರೀತ ಮಳೆ ಬಂದಿದ್ದರಿಂದ ನಮ್ಮ ಫ್ಯಾಕ್ಟರಿಯಲ್ಲಿ ತಯಾರಾಗಿರುವ ಉಡುಪುಗಳನ್ನು ರಫ್ತು ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಈಗ ಆ ಉಡುಪುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಕೇವಲ ಇವತ್ತು ಮತ್ತು ನಾಳೆ ಮಾತ್ರ ಈ ಮಾರಾಟ ಇರುತ್ತದೆ, ಇದು ಸ್ಟಾಕ್ ಕ್ಲಿಯರೆನ್ಸ್ ಸೇಲ್. ತ್ವರೆ ಮಾಡಿರಿ”.


ಇಂಥಾದ್ದೊಂದು ಕರಪತ್ರ ದಿನಪತ್ರಿಕೆಗಳ ಜೊತೆಗೆ ನಿಮ್ಮ ಮನೆಬಾಗಿಲಿಗೆ ಬಂದು ಬೀಳುತ್ತದೆ. ನೀವು ವಾಸ ಮಾಡುವ ಪ್ರದೇಶದಲ್ಲೇ ಈ ಡಿಸ್ಕೌಂಟ್ ಸೇಲ್ ನಡೆಯುತ್ತಿರುತ್ತದೆ. ಬಟ್ಟೆ ಮಾರಾಟಕ್ಕೆ ಕುಳಿತ ಮಂದಿ ಟೀವಿಯಲ್ಲೋ ಪತ್ರಿಕೆಯಲ್ಲೋ ಜಾಹಿರಾತು ನೀಡುವ ಗೋಜಿಗೆ ಹೋಗುವುದಿಲ್ಲ. ಯಾಕೆಂದರೆ ಅದು ಬಹಳ ದುಬಾರಿ ಅನ್ನುವುದು ಅವರಿಗೆ ಗೊತ್ತಿದೆ. ಒಂದು ಪುಟ್ಟ ಕರಪತ್ರದಲ್ಲೇ ಹಸಿಸುಳ್ಳುಗಳನ್ನು ನೀಟಾಗಿ ಪೋಣಿಸಿ ನಿಮ್ಮನ್ನು ಆಕರ್ಷಿಸುವ ತಂತ್ರ ಅವರದು. ಅಸಲಿಗೆ ಇದು ಗುಜರಾತ್ ಮೂಲದ ಕಂಪನಿಯಾಗಿರುವುದಿಲ್ಲ, ಆ ರಾಜ್ಯದಲ್ಲಿ ಈ ವರ್ಷ ಅಂಥಾ ಮಳೆ ಬಂದಿರುವುದೂ ಇಲ್ಲ. ಮಳೆ ಬರುವುದಕ್ಕೂ, ಬಟ್ಟೆಗಳು ರಫ್ತಾಗದೇ ಇರುವುದಕ್ಕೂ ಯಾವ ಸಂಬಂಧವೂ ಇಲ್ಲ. ಎರಡೇ ದಿನದ ಮಟ್ಟಿಗೆ ಈ ಮಾರಾಟ ಇರುತ್ತದೆ ಅನ್ನುವುದೂ ಸುಳ್ಳು. ಕನಿಷ್ಟ ಒಂದು ವಾರವಾದರೂ ಅವರು ನಿಮ್ಮ ಏರಿಯಾದಲ್ಲೇ ಠಿಕಾಣಿ ಹೂಡಿರುತ್ತಾರೆ. ಅವರು ಮಾರಾಟ ಮಾಡುವ ವಸ್ತುಗಳೆಲ್ಲವೂ ಅತ್ಯಂತ ಕಳಪೆ ಗುಣಮಟ್ಟದವು. ಅಲ್ಲಿಂದ ನೀವು ಖರೀದಿಸಿದ ಚೂಡಿದಾರ್ ಒಂದು ಸಾರಿ ತೊಳೆಯುವ ಹೊತ್ತಿಗೆ ಕರ್ಚೀಫಿನ ಶೇಪಿಗೆ ಬಂದಿರುತ್ತದೆ. ನೀವು ಮೋಸಹೋಗಿರುವುದು ಗೊತ್ತಾಗುವ ಹೊತ್ತಿಗೆ ಈ ಸೋ ಕಾಲ್ಡ್ ಗುಜರಾತ್ ಫ್ಯಾಕ್ಟರಿ ಜಾಗ ಖಾಲಿ ಮಾಡಿರುತ್ತದೆ. ಬೆಂಗಳೂರಿನ ಮತ್ತೊಂದು ಭಾಗದಲ್ಲಿ ರಾಜಸ್ತಾನದ ಕಂಪನಿ ಎಂದು ಹೆಸರು ಬದಲಾಯಿಸಿಕೊಂಡು ಟೆಂಟು ಹಾಕಿರುತ್ತದೆ.

ಸಾಮಾನ್ಯವಾಗಿ ಕೆಳಮಧ್ಯಮವರ್ಗದವರು, ಅನಕ್ಷರಸ್ಥ ಕೂಲಿಗಳು, ಕೊಳಚೆಗೇರಿಯಲ್ಲಿ ವಾಸ ಮಾಡುವ ಬಡ ಹೆಣ್ಮಕ್ಕಳು, ಕಟ್ಟಡದ ಕೆಲಸಕ್ಕೆ ಎಂದು ಉತ್ತರ ಕರ್ನಾಟಕದಿಂದ ವಲಸೆ ಬಂದವರು ಈ ಮೋಸಕ್ಕೆ ಬಲಿಯಾಗುತ್ತಾರೆ. ಎಕ್ಸ್ ಪೋರ್ಟ್ ಆಗುವ ಮಾಲು ಕೇವಲ ನೂರು ರುಪಾಯಿಗೆ ಸಿಗುತ್ತದೆ ಅನ್ನುವುದೇ ಅವರಿಗೆ ದೊಡ್ಡ ವಿಚಾರ. ಆದರೆ ವಿದ್ಯಾವಂತರು ಮತ್ತು ಜಾಣರು ಅನಿಸಿಕೊಂಡಿರುವ ನಾವು ಇಂಥಾ ಕರಪತ್ರಗಳನ್ನು ಎಡಗೈನಲ್ಲೂ ಮುಟ್ಟುವುದಿಲ್ಲ. ಅದು ನೇರವಾಗಿ ಕಸದಬುಟ್ಟಿ ಸೇರುತ್ತದೆ. ಅಷ್ಟೇಕೆ ಬೆಂಗಳೂರಿನ ಉದ್ದಗಲಕ್ಕೂ ತಲೆಎತ್ತಿರುವ ಬಿಗ್ ಬಜಾರ್, ಟೋಟಲ್ ನಂಥಾ ಹತ್ತಾರು ಮಾಲ್ ಗಳೂ ಇದೀಗ ನಮ್ಮನ್ನು ಆಕರ್ಷಿಸುವುದಿಲ್ಲ. ಅಲ್ಲಿ ಬ್ರಾಂಡೆಡ್ ಉಪ್ಪಿನಕಾಯಿ ಸಿಗುವುದಿಲ್ಲ ಅನ್ನುವುದು ನಮ್ಮ ಅಸಮಾಧಾನಕ್ಕೆ ಒಂದು ಕಾರಣ. ಜೊತೆಗೆ ಮೊದಲೇ ಬೆಲೆ ಏರಿಸಿ ಆಮೇಲೆ ಮೂವತ್ತು ಪರ್ಸೆಂಟು ಡಿಸ್ಕೌಂಟ್ ನೀಡಿ ಯಾಮಾರಿಸುತ್ತಾರೆ ಅನ್ನುವ ಅನುಮಾನ. ಅದು ನಿಜವಿದ್ದರೂ ಇರಬಹುದು. ಅದಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಅನುಮಾನಿಸುವ ಗುಣವನ್ನು ಈ ಮಹಾನಗರಿ ನಮಗೆ ದಯಪಾಲಿಸಿದೆ. ಕಡಿಮೆ ಬೆಲೆಗೆ ಸಿಗುವುದೆಲ್ಲವೂ ಕಳಪೆ ಮಾಲು ಅನ್ನುವ ತೀರ್ಮಾನಕ್ಕೆ ನಾವೆಲ್ಲರೂ ಬಂದಿದ್ದಾಗಿದೆ. ಹಾಗಾಗಿ ಮಾಲುಗಳೂ, ಬಜಾರುಗಳೂ ಈಗ ನಮ್ಮ ಕಣ್ಣಲ್ಲಿ ವಿಶ್ವಾಸಾರ್ಹತೆಯನ್ನು ಕಳಕೊಂಡಿದೆ. ರಸ್ತೆಬದಿಯಲ್ಲಿ ತಯಾರಾಗುವ ಚಪ್ಪಲಿಗೆ ಬಾಟಾ ಎಂಬ ಸೀಲು ಹಾಕಿ ಮಾರಾಟ ಮಾಡುತ್ತಾರೆ ಎಂದು ಜಾಣ ಗಂಡ ತನ್ನ ಹೆಂಡತಿಗೆ ಹೇಳುತ್ತಾನೆ. ಆಕೆ ಅದನ್ನು ನಂಬುತ್ತಾಳೆ.

ಇದೆಲ್ಲಾ ಸರಿ, ಆದರೆ ಶಾಪಿಂಗ್ ಎಂಬ ಅನಿವಾರ್ಯ ಕರ್ಮವನ್ನು ಪಾಲಿಸಲೇಬೇಕಲ್ವ, ಅದಕ್ಕೇನು ಮಾಡುತ್ತೀರಿ? ನಾವೆಲ್ಲಾ ಕೊಳ್ಳುಬಾಕ ಸಂಸ್ಕೃತಿಗೆ ಅಡಿಯಾಳುಗಳಾಗಿ ವರ್ಷಗಳೇ ಕಳೆದಿವೆ. ಅಗತ್ಯ ಇಲ್ಲದೇ ಇದ್ದರೂ ಮನೆತುಂಬಾ ಕಂಪ್ಯೂಟರುಗಳು, ಮೊಬೈಲುಗಳು, ನಾನಾ ನಮೂನೆಯ ಟೀವಿಗಳು, ಬಟ್ಟೆಗಳನ್ನು ತುಂಬಲೇ ಬೇಕು. ಇವನ್ನೆಲ್ಲಾ ಎಲ್ಲಿಂದ ತರುತ್ತೀರಿ? ನಮ್ಮದೇನಿದ್ದರೂ ಆನ್ ಲೈನ್ ಶಾಪಿಂಗ್ ಅನ್ನುತ್ತಾನೆ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ತಿಂಗಳಿಗೆ ಲಕ್ಷ ಎಣಿಸುವ ಟೆಕ್ಕಿ. ಮೈ ತುಂಬಾ ಕ್ಯಾಲೊರಿಗಳು ತುಂಬಿಕೊಂಡಿದ್ದರೂ ಮನೆಯ ಎದುರಿಗಿರುವ ಅಂಗಡಿಗೆ ಹೋಗಿ ತನಗೆ ಬೇಕಾದ ವಸ್ತುವನ್ನು ಖರೀದಿಸಿ ತರುವ ಸಹನೆ ಅವನಿಗಿಲ್ಲ. ಅದಕ್ಕಿಂತ ಹೆಚ್ಚಾಗಿ ಪ್ರೆಸ್ಟೀಜು ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆ. ಆನ್ ಲೈನ್ ಶಾಪಿಂಗಿನಲ್ಲಿ ಖರೀದಿ ಮಾಡುವ ವಸ್ತುಗಳೆಲ್ಲವೂ ಉತ್ಕೃಷ್ಟ ಗುಣಮಟ್ಟದವೇ ಆಗಿರುತ್ತದೆ ಅನ್ನುವ ಗಾಢನಂಬಿಕೆ. ಹಾಗಾಗಿ ಲ್ಯಾಪ್ ಟಾಪ್ ತೆಗೆದು ಯಾವುದೋ ಆನ್ ಲೈನ್ ಕಂಪನಿಯ ವೆಬ್ ಸೈಟಿಗೆ ಹೋಗಿ ತನಗೆ ಬೇಕಾದ ವಸ್ತುಗಳನ್ನು ಬುಕ್ ಮಾಡುತ್ತಾನೆ. ಸಂಜೆ ಹೊತ್ತಿಗೆ ಮನೆಬಾಗಿಲಲ್ಲಿರುವ ಕಾಲಿಂಗ್ ಬೆಲ್ ಟ್ರಿಣ್ ಅನ್ನುತ್ತದೆ. ಅವನು ದಿಲ್ ಖುಶ್.

ಇಂಥಾ ಲಕ್ಷಾಂತರ ಆನ್ ಲೈನ್ ಗಿರಾಕಿಗಳು ಅಕ್ಟೋಬರ್ 6ರ ಶುಭ ಸೋಮವಾರದಂದು ಬೇಸ್ತುಬಿದ್ದರು. ಸದ್ಯಕ್ಕೆ ಎಲ್ಲಾ ಸಾಮಾಜಿಕ ತಾಣಗಳಲ್ಲೂ ಇವರ ಆಕ್ರೋಶದ್ದೇ ಕಾರುಬಾರು. You have cheated me, You have betrayed us, You are a fraud, ಹೀಗೆ ನಾನಾರೀತಿಯ ಬೈಗಳ ಸುರಿಮಳೆ. ಅಷ್ಟಕ್ಕೂ ಆವತ್ತು ಆಗಿದ್ದೇನು? ಫ್ಲಿಪ್ ಕಾರ್ಟ್ ಎಂಬ ಬೆಂಗಳೂರು ಮೂಲದ ಆನ್ ಲೈನ್ ಶಾಪಿಂಗ್ ಕಂಪನಿ ‘ಬಿಲಿಯನ್ ಡೇ’ ಎಂಬ ಹೆಸರಲ್ಲಿ ನೂರಾರು ವಸ್ತುಗಳನ್ನು ಡಿಸ್ಕೌಂಟ್ ಸೇಲ್ ಗೆ ಇಟ್ಟಿತ್ತು. ಇಪ್ಪತ್ತು ವರ್ಸೆಂಟಿನಿಂದ ಎಪ್ಪತ್ತು ವರ್ಸೆಂಟು ತನಕ ರಿಯಾಯಿತಿ. ಯಾರಿಗುಂಟು ಯಾರಿಗಿಲ್ಲ, ಎಲ್ಲರೂ ಮುಗಿಬಿದ್ದರು. ಈ ಬೇಡಿಕೆಯನ್ನು ತಡೆದುಕೊಳ್ಳುವುದಕ್ಕಾಗದೇ ಆನ್ ಲೈನ್ ನಲ್ಲಿ ಟ್ರಾಫಿಕ್ ಜಾಮ್ ಆಯಿತು, ನೋ ಸ್ಟಾಕ್ ಬೋರ್ಡ್ ಬಿತ್ತು, ಕೆಲವರಿಗೆ ಅವರು ಬುಕ್ ಮಾಡಿದ ಸರಕುಗಳು ಸರಬರಾಜಾಗಲೇ ಇಲ್ಲ. ಅದೂ ಸಾಲದು ಎಂಬಂತೆ ಡಿಸ್ಕೌಂಟ್ ಹೆಸರಲ್ಲಿ ಮೋಸ ಮಾಡಲಾಗಿದೆ ಎಂದು ಸಾವಿರಾರು ಮಂದಿ ದೂರಿದರು. ಉದಾಹರಣೆಗೆ ಹೆಸರಾಂತ ಕಂಪನಿಯೊಂದರ ಲ್ಯಾಪ್ ಟಾಪನ್ನು ಹದಿನಾಲ್ಕು ಸಾವಿರದ ಎಂಟುನೂರು ರುಪಾಯಿಗೆ ನೀಡುತ್ತೇವೆ ಎಂದು ಫ್ಲಿಪ್ ಕಾರ್ಟ್ ಹೇಳಿತ್ತು. ಆದರೆ ಅದೇ ಲ್ಯಾಪ್ ಟಾಪ್ ಬೆಲೆ ಅಮೆಜಾನ್ ಡಾಟ್ ಕಾಂ ಎಂಬ ಇನ್ನೊಂದು ಆನ್ ಲೈನ್ ಕಂಪನಿಯಲ್ಲಿ ಐವತ್ತು ರುಪಾಯಿ ಕಡಿಮೆ ಇತ್ತು. ಮೂಲಕಂಪನಿಯಿಂದಲೇ ಖರೀದಿ ಮಾಡಿದರೆ ಇನ್ನೂ ಐವತ್ತು ರುಪಾಯಿ ಉಳಿತಾಯ ಮಾಡಬಹುದಾಗಿತ್ತು. ಹಾಗಾಗಿ ಈ ‘ಬಿಲಿಯನ್ ಡೇ’ ಅನ್ನುವುದೇ ಬೋಗಸ್ ಎಂದು ಜನರು ಬೊಬ್ಬೆ ಹಾಕಿದರು. ಆದರೆ ಇಷ್ಟೆಲ್ಲಾ ಗಲಾಟೆಗಳ ಮಧ್ಯೆ ಫ್ಲಿಪ್ ಕಾರ್ಟ್ ಕಂಪನಿಯ ಆವತ್ತಿನ ವಹಿವಾಟು ಆರುನೂರು ಕೋಟಿ ರುಪಾಯಿ ದಾಟಿತ್ತು. ಆದರೆ ಅದನ್ನು ಆನಂದಿಸುವ ಸ್ಥಿತಿಯಲ್ಲಿ ಕಂಪನಿ ಇರಲಿಲ್ಲ. ಲಾಭ ಬಂತು, ಮರ್ಯಾದೆ ಹೋಯಿತು ಅನ್ನುವಂತಾಯಿತು.

ಮಾರನೇ ದಿನವೇ ಫ್ಲಿಪ್ ಕಾರ್ಟ್ ತನ್ನೆಲ್ಲಾ ಗ್ರಾಹಕರ ಕ್ಷಮೆ ಕೇಳಿ ಪತ್ರಿಕಾ ಪ್ರಕಟಣೆಯನ್ನು ನೀಡಿತು. ಇಂಥ ಅಭೂತಪೂರ್ವ ಪ್ರತಿಕ್ರಿಯೆಯನ್ನು ತಾನು ನಿರೀಕ್ಷಿಸದೇ ಇದ್ದಿದ್ದುದರಿಂದ ಎಡವಟ್ಟಾಯಿತು ಹಾಗೂ ಇನ್ನು ಮುಂದೆ ಹೀಗಾಗುವುದಿಲ್ಲ ಎಂಬ ಭರವಸೆ ನೀಡಿ ಕೈತೊಳೆದುಕೊಂಡಿತು. ಫ್ಲಿಪ್ ಕಾರ್ಟ್ ಜೊತೆ ಕಳೆದ ಕೆಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಗ್ರಾಹಕರಿಗೆ ಇದು ಸುಳ್ಳು ಅನ್ನುವುದು ಗೊತ್ತಿತ್ತು. ಯಾಕೆಂದರೆ ಈ ಹಿಂದೆಯೂ ಇಂಥಾದ್ದೇ ಡಿಸ್ಕೌಂಟ್ ಸೇಲುಗಳನ್ನು ಫ್ಲಿಪ್ ಕಾರ್ಟ್ ನಡೆಸಿದೆ, ಬಿಲಿಯನ್ ಡೇ ಆಚರಣೆಗೆ ಮುನ್ನ ಪ್ರಾಯೋಗಿಕವಾಗಿ ನಾಲ್ಕೈದು ಡಿಸ್ಕೌಂಟ್ ಮಾರಾಟಗಳೂ ನಡೆದಿವೆ. ಅರುವತ್ತು ಸಾವಿರ ಬೆಲೆಬಾಳುವ ಟೀವಿಯನ್ನು ಮೂವತ್ತು ಸಾವಿರಕ್ಕೆ ನೀಡುತ್ತೇವೆ ಎಂದಾಗ ಎಂಥವರಾದರೂ ಮರುಳಾಗಿಯೇ ಆಗುತ್ತಾರೆ ಅನ್ನುವುದು ಕಾಮನ್ ಸೆನ್ಸ್. ಇದೆಲ್ಲಾ ಗೊತ್ತಿದ್ದೇ ಈ ರಿಸ್ಕಿಗೆ ಫ್ಲಿಪ್ ಕಾರ್ಟ್ ಕೈಹಾಕಿತ್ತು, ಯಾಕೆಂದರೆ ತನ್ನ ಪಕ್ಕದಲ್ಲೇ ನಿಂತು ಸೆಡ್ಡುಹೊಡೆಯುತ್ತಿದ್ದ ಅಮೆಜಾನ್ ಕಂಪನಿಯನ್ನು ಅಲ್ಲಾಡಿಸುವುದಕ್ಕೆ ಇದಕ್ಕಿಂತ ಒಳ್ಳೆಯ ಗಿಮಿಕ್ ಬೇರೆ ಇರಲಿಲ್ಲ. Snap deal ಎಂಬ ಇನ್ನೊಂದು ಆನ್ ಲೈನ್ ಶಾಪಿಂಗ್ ಕಂಪನಿಯೂ ಇತ್ತೀಚೆಗೆ ಫ್ಲಿಪ್ ಕಾರ್ಟಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿತ್ತು. ಅದನ್ನೂ ಮೂಲೆಗುಂಪು ಮಾಡಬೇಕಾಗಿತ್ತು.

ಆದರೆ ಈ ಗಿಮಿಕ್ಕಿಗೆ ಬಲಿಯಾಗಿದ್ದು ಲಕ್ಷಾಂತರ ಗ್ರಾಹಕರು. ಅವರಲ್ಲಿ ಕೆಲವರು ಈಗಾಗಲೇ ಪಕ್ಷಾಂತರ ಮಾಡಿರುವ ಸಾಧ್ಯತೆಯೂ ಇದೆ. ಆನ್ ಲೈನ್ ವ್ಯಾಪಾರ ಅನ್ನುವುದು ಕತ್ತಿ ಮೇಲಿನ ನಡಿಗೆಯಂತೆ. ಒಂದು ಸಣ್ಣ ತಪ್ಪಾದರೂ ಕಂಪನಿ ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತದೆ. ಕೆಲವೊಮ್ಮೆ ಒಂದು ಗಾಳಿಸುದ್ದಿಯೂ ಕಂಪನಿಯ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಬಹುದು.
ಫ್ಲಿಪ್ ಕಾರ್ಟ್ ಕತೆ ಹಾಗಿರಲಿ, ಮೋಸ ಹೋದ ಸೋ ಕಾಲ್ಡ್ ಜಾಣರು ತಮ್ಮ ಬುದ್ದಿಯನ್ನು ಎಲ್ಲಿ ಅಡವಿಟ್ಟಿದ್ದರು? ಎಲ್ಲವನ್ನೂ, ಎಲ್ಲರನ್ನೂ ಅನುಮಾನಿಸುವ ಈ ಜನ ಒಂದು ಆನ್ ಲೈನ್ ಕಂಪನಿಯ ಮಾತಿಗೆ ಮರುಳಾಗಿದ್ದಾದರೂ ಹೇಗೆ? ಎಪ್ಪತ್ತು ಪರ್ಸೆಂಟು ರಿಯಾಯಿತಿ ನೀಡಿ ಒಂದು ಕಂಪನಿ ಬಚಾವಾಗುವುದಕ್ಕೆ ಸಾಧ್ಯವೇ ಎಂಬ ಸರಳ ಪ್ರಶ್ನೆಯೂ ಯಾಕೆ ಅವರಿಗೆ ಹೊಳೆಯಲಿಲ್ಲ? ರಸ್ತೆ ಬದಿಯಲ್ಲಿ ಟೆಂಟು ಹಾಕಿ ಡಿಸ್ಕೌಂಟ್ ಸೇಲ್ ಮಾಡುವ ಹೆಸರೇ ಕೇಳದ ಕಂಪನಿಯನ್ನು ನಂಬುವ ಅನಕ್ಷರಸ್ಥ ಪ್ರಜೆಗೂ , ಆನ್ ಲೈನ್ ನಲ್ಲೇ ನನ್ನ ಶಾಪಿಂಗ್ ಎಂದು ಬೀಗುವ ಬುದ್ದಿವಂತ ಪ್ರಜೆಗೂ ವ್ಯತ್ಯಾಸವೇ ಇಲ್ಲದ ಹಾಗಾಯಿತಲ್ಲಾ, ಇದಕ್ಕೇನಂತೀರಿ? ನಮ್ಮ ನಂಬಿಕೆಯೇ ನಮ್ಮ ಶತ್ರುವಾಗಿ ಪರಿಣಮಿಸುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾದೀತು. ಚಿಟ್ ಫಂಡ್ ಕಂಪನಿಗಳ ತಂತ್ರವೂ ಇದೇ. ಮೊದಲು ನಿಮ್ಮ ವಿಶ್ವಾಸ ಸಂಪಾದಿಸುವುದು, ಆಮೇಲೆ ಆ ವಿಶ್ವಾಸವನ್ನೇ ಆಸ್ತ್ರವಾಗಿಸಿಕೊಂಡು ನಿಮಗೆ ವಂಚನೆ ಮಾಡುವುದು. ನೆನಪಿರಲಿ, ಇಂಥಾ ವಿಷಯಗಳಲ್ಲಿ ಕಾನೂನು ಕೂಡಾ ನಿಮ್ಮ ನೆರವಿಗೆ ಬರುವುದಿಲ್ಲ.

ಆನ್ ಲೈನ್ ಶಾಪಿಂಗ್ ಅನ್ನುವುದು ಈ ಕಾಲ ನಮಗೆ ನೀಡಿದ ಹಲವಾರು ಸವಲತ್ತುಗಳಲ್ಲಿ ಒಂದು ಎಂಬ ಬಗ್ಗೆ ಎರಡು ಮಾತಿಲ್ಲ. ಹಾಗಂತ ಅದಕ್ಕೇ ಜೋತು ಬೀಳುವುದೂ ಒಳ್ಳೆಯದಲ್ಲ. ಯಾಕೆಂದರೆ ಅಲ್ಲಿ ಒಬ್ಬ ಅಗೋಚರ ವ್ಯಾಪಾರಿಯ ಜೊತೆ ನೀವು ವ್ಯವಹಾರ ಮಾಡುತ್ತೀರಿ. ಆತನಿಗೆ ಹೋಲಿಸಿದರೆ ನೀವು ದಿನಾ ಮುಖ ನೋಡುವ, ನಿಮ್ಮ ಮನೆಮುಂದೆಯೇ ಇರುವ ಪುಟ್ಟ ಅಂಗಡಿಯಾತನೇ ಹೆಚ್ಚು ನಂಬಿಕಸ್ತನಾಗಿರುತ್ತಾನೆ. ಅವನನ್ನು ನಂಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 13 October, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books