Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ನಮ್ಮ ಸುತ್ತಲೂ ಹತ್ತು ಮಂದಿಯನ್ನ ಬೆಳೆಸಬೇಕು ಎಂಬುದನ್ನ ಮರೆತರೆ...

ಮೊನ್ನೆ ಹಿಂದಿ ಚಲನಚಿತ್ರರಂಗದ ಖ್ಯಾತ ನಟ ನಾಸಿರುದ್ದೀನ್ ಷಾ ಅವರು ಅಮಿತಾಬ್ ಬಚ್ಚನ್ ಕುರಿತಂತೆ ಒಂದು ಮಾತು ಹೇಳಿದರು. ಅಮಿತಾಬ್ ಒಬ್ಬ ಅತ್ಯುತ್ತಮ ನಟನಲ್ಲ. ಬದಲಿಗೆ ಒಂದು ಕಮೋಡಿಟಿ (ಉತ್ಪನ್ನ) ಎಂದರು. ಅರೇ, ‘ದೀವಾರ್’, ‘ಜಂಜೀರ್’ನಿಂದ ಹಿಡಿದು ಇತ್ತೀಚಿನ ಬ್ಲಾಕ್ ತನಕ ನಟಿಸಿದ ಚಿತ್ರಗಳಲ್ಲಿ ಅಮಿತಾಬ್ ಅತ್ಯುತ್ತಮವಾಗಿ ನಟಿಸಿದ್ದಾನಲ್ಲ? ಆತ ನಟನಲ್ಲ ಎಂದರೆ ಹೇಗೆ? ಸರಿ ಸುಮಾರು ಇಪ್ಪತ್ತೈದು-ಮೂವತ್ತು ವರ್ಷಗಳ ಕಾಲ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದಾನೆ. ಅಂತಹವನನ್ನೇ ನಟ ಅಲ್ಲ, ಕಮೋಡಿಟಿ ಎಂದರೆ ಏನರ್ಥ? ಅಂತ ನೀವು ಕೇಳಬಹುದು. ಆದರೆ ನಾಸಿರುದ್ದೀನ್ ಷಾ ತಪ್ಪೇನೂ ಹೇಳಿಲ್ಲ. ನೀವು ಅಮಿತಾಬ್‌ನ ಹೆಸರು ಕೇಳಿ ಆತನ ಚಿತ್ರ ನೋಡಿದ್ದೀರಿ. ಆಯಾ ಕಾಲಕ್ಕೆ ತಕ್ಕ ಮೌಲ್ಯಗಳನ್ನು ಹೆಣೆದ ನಿರ್ದೇಶಕರು, ಸಪೋರ್ಟು ನೀಡಿದ ನಿರ್ಮಾಪಕರು ಅಮಿತಾಬ್‌ನನ್ನು ಎನ್‌ಕ್ಯಾಷ್ ಮಾಡಿಕೊಂಡು ಹಣ ಗಳಿಸಿದ್ದಾರೆ. ಯಾರನ್ನು, ಯಾವುದನ್ನು ನೀವು ಮುಂದಿಟ್ಟುಕೊಂಡು ಹಣ ಮಾಡುತ್ತೀರಿ? ಫೈನಲಿ, ಅದು ಕಮೋಡಿಟಿಯೇ ಅಲ್ಲವೇ?

ಹೀಗಾಗಿ ನಾಸಿರುದ್ದೀನ್ ಷಾ ಹೇಳಿದ್ದರಲ್ಲೂ ಅರ್ಥವಿದೆ. ಒಬ್ಬ ವ್ಯಕ್ತಿ ಆರಂಭದ ದಿನಗಳಲ್ಲಿ ಉತ್ಪನ್ನವಾಗಿ ಪರಿವರ್ತನೆಯಾಗಲು ಬಡಿದಾಡಬಹುದು. ಆದರೆ ಲೈಫ್ ಲಾಂಗ್ ಉತ್ಪನ್ನವಾಗಿಯೇ ಇರಬಾರದು. ಬದಲಿಗೆ ಉತ್ಪನ್ನಗಳನ್ನು ಸೃಷ್ಟಿಸುತ್ತಿರಬೇಕು. ಹೀಗೆ ಉತ್ಪನ್ನಗಳನ್ನು ಸೃಷ್ಟಿಸುವವನು ಕ್ರಿಯಾಶೀಲ. ಇಂತಹ ಕ್ರಿಯಾಶೀಲತೆ ಎಲ್ಲ ರಂಗದ ಜನರಲ್ಲೂ ಹುಟ್ಟಬೇಕು. ಮೇಕ್ ಇನ್ ಇಂಡಿಯಾ ಅಂದರೆ ಸಾಲದು. ಮೊನ್ನೆ ಜಯಲಲಿತಾ ಅಕ್ರಮ ಆಸ್ತಿ ಗಳಿಕೆಯ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋದರು. ನಾಳೆ ಅವರು ಜೈಲಿನಿಂದ ಬಿಡುಗಡೆಯಾಗಲೂಬಹುದು. ಆದರೆ ನೆನಪಿಡಿ, ಆಕೆ ಕೂಡ ಒಂದು ಕಮೋಡಿಟಿಯಾಗಿ ಬೆಳೆದವರು. ಅಮ್ಮಾ ಕ್ಯಾಂಟೀನ್, ಅಮ್ಮಾ ವಾಟರ್, ಅಮ್ಮಾ ಸಿಮೆಂಟ್ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ರೂಪಿಸುತ್ತಾ ತಮ್ಮನ್ನೇ ತಾವು ಒಂದು ಉತ್ಪನ್ನವಾಗುವಂತೆ ನೋಡಿಕೊಂಡರು. ಇವೆಲ್ಲ ತಾತ್ಕಾಲಿಕವಾಗಿ ನಿಮಗೆ ಸಮಾಧಾನ ನೀಡಬಹುದು. ಅರೇ, ಏಳು ರುಪಾಯಿಯಲ್ಲಿ ಎರಡು ಬಿಸಿ ಬಿಸಿ ಇಡ್ಲಿ, ಹೊಟ್ಟೆ ತುಂಬುವಷ್ಟು ಪೊಂಗಲ್ ನೀಡಿದರೆ ಬಡ, ಮಧ್ಯಮ ವರ್ಗದವರಿಗೆ ಖುಷಿಯಾಗುತ್ತದೆ. ಆದರೆ ಇದಕ್ಕೆ ಬೇಕಾಗುವ ಫಂಡನ್ನು ಆಕೆ ಎಲ್ಲಿಂದ ತಂದರು?

ಅದೇ ರೀತಿ ಸಿಮೆಂಟ್ ಕೊಡುವಾಗ ಉತ್ಪಾದಿಸುವ ಫ್ಯಾಕ್ಟರಿಗಳಿಗೆ ನೀವು ಉತ್ಪಾದಿಸುವ ಸಿಮೆಂಟ್‌ನಲ್ಲಿ ಇಷ್ಟು ಚೀಲ ಸಿಮೆಂಟನ್ನು ನಮಗೆ ಲಾಭವಿಲ್ಲದೇ ಕೊಡಿ ಎಂದು ಹೇಳಬಹುದು. ಆದರೆ ಇವೆಲ್ಲ ಎಷ್ಟು ದಿನ? ಒಬ್ಬ ವ್ಯಕ್ತಿ ಸಂಪನ್ಮೂಲ ಸೃಷ್ಟಿಸುವ ವ್ಯಕ್ತಿಯಾಗಿ ಬೆಳೆಯಬೇಕೇ ಹೊರತು ಅವನೇ ಸಂಪನ್ಮೂಲವಾಗಿ ಬಿಡಬಾರದು. ಯಾವಾಗ ಒಬ್ಬ ವ್ಯಕ್ತಿ ಉತ್ಪನ್ನವಾಗಿ ಗೋಚರಿಸತೊಡಗುತ್ತಾನೋ ಆಗ ಆ ಉತ್ಪನ್ನ ನಾಶವಾದರೆ ಸಹಜವಾಗಿಯೇ ಲಕ್ಷಾಂತರ ಜನ, ಸನ್ನಿವೇಶಕ್ಕೆ ತಕ್ಕಂತೆ ಅದು ಹತ್ತು ಮಂದಿಯಾಗಿರಬಹುದು, ಲಕ್ಷ ಮಂದಿಯಾಗಿರಬಹುದು, ಕೋಟಿ ಮಂದಿಯಾಗಿರಬಹುದು ಅವರು ಅರಾಜಕ ಸ್ಥಿತಿಗೆ ತಲುಪುತ್ತಾರೆ. ಮುಂದೇನು ಅನ್ನುವ ಚಿಂತೆಗೆ ಬೀಳುತ್ತಾರೆ. ಮೇವು ಹಗರಣದಲ್ಲಿ ಬಿಹಾರದ ಲಾಲೂ ಪ್ರಸಾದ್ ಯಾದವ್ ಜೈಲು ಸೇರಿದರು. ಹೋಗುವ ಮುನ್ನ ಪತ್ನಿ ರಾಬ್ಡಿದೇವಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಅದರ ಬದಲು ತಮ್ಮ ಸಂಪುಟದ ಅತ್ಯುತ್ತಮ ಸಚಿವನಿಗೆ ಇಂತಹ ಅವಕಾಶ ನೀಡಿದ್ದರೆ ಬಿಹಾರದಲ್ಲಿ ಲಾಲೂ ಪವರ್ ಜಾಸ್ತಿಯಾಗುತ್ತಿತ್ತು.

ಆದರೆ ತಾನೇ ಒಂದು ಉತ್ಪನ್ನವಾದ ವ್ಯಕ್ತಿ ಸದಾಕಾಲ ಉನ್ನತವಾದ ಉತ್ಪನ್ನಗಳನ್ನೇ ಸೃಷ್ಟಿಸಲು ಸಾಧ್ಯವಿಲ್ಲ. ಲಾಲೂಗೆ ಬಂದಿದ್ದು ಅದೇ ಸಮಸ್ಯೆ. ಬಿಹಾರದ ಜನ ರಾಷ್ಟ್ರೀಯ ಜನತಾ ದಳವನ್ನು ಅಧಿಕಾರಕ್ಕೆ ತರುವುದು ನನ್ನ ಮುಖ ನೋಡಿ. ಅದರ ಲಾಭ ಇನ್ನೊಬ್ಬರಿಗೇಕೆ ಕೊಡಲಿ ಎಂದವರು ಬಯಸಿದರು. ಹೀಗಾಗಿ ರಾಬ್ಡಿದೇವಿಯಂತಹವರು ಸಿಎಂ ಆಗಬೇಕಾಯಿತು. ತಮಿಳ್ನಾಡಿನಲ್ಲಿ ಈಗ ಸಿಎಂ ಆಗಿರುವ ಪನ್ನೀರ್ ಸೆಲ್ವಂ ತೀರಾ ರಾಬ್ಡಿದೇವಿಯಷ್ಟು ಅಮಾಯಕ ಸಿಎಂ ಆಗದಿರಬಹುದು. ಆದರೂ ಆತ ಜಯಲಲಿತಾರ ಬಂಟ. ಆಕೆ ಏನು ಹೇಳುತ್ತಾರೋ ಅದನ್ನು ಕೇಳುತ್ತಾರೆ. ಹೀಗಾಗಿ ತಮಿಳ್ನಾಡಿನಲ್ಲಿ ಹೆಸರಿಗೆ ಪನ್ನೀರ್ ಸೆಲ್ವಂ ಅಧಿಕಾರದ ಗದ್ದುಗೆಯ ಮೇಲೆ ಕುಳಿತಿದ್ದರೂ ತೆರೆಯ ಹಿಂದೆ ಅಮ್ಮನ ಆಡಳಿತವೇ ನಡೆಯುತ್ತದೆ. ಅರ್ಥಾತ್, ಜಯಲಲಿತಾ ಅವರಿಗೂ ಅತ್ಯುತ್ತಮ ಉತ್ಪನ್ನವನ್ನು ಕೊಟ್ಟು ತಮಿಳ್ನಾಡಿನ ಜನರನ್ನು ಮೇಲೆತ್ತಬೇಕು ಎಂಬ ಹಂಬಲವಿಲ್ಲ. ಬದಲಿಗೆ ಅವರಿಗೆ ಗ್ರೈಂಡರ್, ಮಿಕ್ಸರ್, ಊಟ, ಸಿಮೆಂಟು, ನೀರು ಇಂತಹವೆಲ್ಲ ಅಗ್ಗದ ದರದಲ್ಲಿ ಸಿಗುವಂತೆ ನೋಡಿಕೊಳ್ಳುತ್ತಾ ತಾವೇ ಒಂದು ಉತ್ಪನ್ನವಾಗಿ, ಆ ಉತ್ಪನ್ನಕ್ಕೆ ಪರ್ಯಾಯ ಉತ್ಪನ್ನವೇ ಇಲ್ಲವೇನೋ ಎಂಬಂತೆ ನೋಡಿಕೊಳ್ಳುವುದು ಬೇಕು.

ಇದರ ಬದಲು ಅದೇ ಜನ ಕ್ರಿಯಾಶೀಲರಾಗುವಂತೆ ಮಾಡಲು ಅಗತ್ಯವಾದ ಯೋಜನೆಗಳನ್ನು ರೂಪಿಸಿದ್ದರೆ ಆಕೆಯ ಹೆಸರು ಇನ್ನೂ ನೂರು ವರ್ಷ ಕಳೆದರೂ ಉಳಿಯುತ್ತಿತ್ತು. ಆದರೆ ಆಕೆ ತನ್ನನ್ನೇ ಉತ್ಪನ್ನವನ್ನಾಗಿ ಪ್ರತಿಬಿಂಬಿಸಿಕೊಳ್ಳಲು ಹೊರಟರು. ಇದೇ ಥರ ಮಾಡಲು ಹೋಗಿ ಮಧ್ಯಪ್ರದೇಶದ ಉಮಾಭಾರತಿ ಎಡವಿದ್ದರು. ಆಕೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಂದ ತೀರ್ಪು, ಸಿಎಂ ಹುದ್ದೆಯಿಂದ ಆಕೆ ಕೆಳಗಿಳಿಯುವಂತೆ ಮಾಡಿತ್ತು. ಇದನ್ನು ನಿರೀಕ್ಷೆ ಮಾಡಿಕೊಂಡು ಯಾರು ಸಿಎಂ ಆದರೆ ರಾಜ್ಯಕ್ಕೆ ಉಪಯೋಗ ಎಂಬುದನ್ನು ಪ್ರತಿಬಿಂಬಿಸುವ ಕೆಲಸ ಆಕೆಯಿಂದ ಮುಂಚಿತವಾಗಿಯೇ ನಡೆಯಬೇಕಿತ್ತು. ಆದರೆ ಮಧ್ಯಪ್ರದೇಶವನ್ನು ನನ್ನಂತೆ ಆಳಲು ಯಾರಿಂದ ಸಾಧ್ಯ? ಎಂಬ ಕಮೋಡಿಟಿ ಮನಸ್ಥಿತಿ ಉಮಾಭಾರತಿಯ ಶಕ್ತಿಯನ್ನು ಕುಗ್ಗಿಸಿತು. ಸಿಎಂ ಹುದ್ದೆಯಿಂದ ಕೆಳಗಿಳಿದ ಮೇಲೆ ಸಿಟ್ಟಿನಿಂದ ಆಕೆ ಹೊರಗೆ ಹೋದರು. ಆದರೆ ಫೈನಲಿ, ಮತ್ತೆ ವಾಪಸು ಬಂದು ಈಗ ಮೋದಿ ಕೈಲಿ ಕಮೋಡಿಟಿಯಾಗಲು ಹೊರಟಿದ್ದಾರೆ. ಇನ್ನೊಬ್ಬರ ಕೈಗೆ ಕಮೋಡಿಟಿಯಾಗಿ ಸಿಗುವುದಕ್ಕಿಂತ ನಾವೇ ಕಮೋಡಿಟಿ ಅರ್ಥಾತ್ ಉತ್ಪನ್ನಗಳನ್ನು ಸೃಷ್ಟಿಸುವುದು ಒಳ್ಳೆಯದಲ್ಲವೇ?
ಆದರೆ ದುರಂತವೆಂದರೆ ಭಾರತದಲ್ಲಿ ಎಲ್ಲರೂ ತಾವೇ ಖುದ್ದಾಗಿ ಕಮೋಡಿಟಿಯಾಗಲು ಬಯಸುತ್ತಾರೆಯೇ ಹೊರತು, ಅತ್ಯುತ್ತಮ ಉತ್ಪನ್ನಗಳನ್ನು ನೀಡಿ ಅದರ ಬಲೆಯಿಂದ ಹೊರಬರಬೇಕು, ಹೊಸ ಉತ್ಪನ್ನವನ್ನು ಸೃಷ್ಟಿಸಬೇಕು ಎಂದು ಬಯಸುವುದಿಲ್ಲ.

ಕಾಶ್ಮೀರದಲ್ಲೂ ನೋಡಿ. ಶೇಖ್ ಅಬ್ದುಲ್ಲಾ ಮುಖ್ಯಮಂತ್ರಿಯಾದರು. ಆನಂತರ ಅವರ ಮಗ ಫಾರೂಕ್ ಅಬ್ದುಲ್ಲಾ ಮುಖ್ಯಮಂತ್ರಿಯಾದರು. ಈಗ ಅವರ ಮಗ ಓಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿದ್ದಾರೆ. ಈ ಮಧ್ಯೆ ಬೇರೆ ಬೇರೆಯವರು ಸಿಎಂ ಆದರೂ ಇಷ್ಟು ವರ್ಷದ ಅವಧಿಯಲ್ಲಿ ಕಾಶ್ಮೀರ ದೇಶಕ್ಕೆ ಕೊಟ್ಟ ಕೊಡುಗೆ ಏನು ಅಂತ ನೋಡಿದರೆ ಅದು ಕೊಟ್ಟ ಏಕೈಕ ಉತ್ಪನ್ನ ಭಯೋತ್ಪಾದನೆ ಒಂದೇ. ವರ್ಷಕ್ಕೆ ಏನಿಲ್ಲವೆಂದರೂ ಮೂರರಿಂದ ನಾಲ್ಕು ಸಾವಿರ ಕೋಟಿ ರುಪಾಯಿಗಳನ್ನು ಕೇಂದ್ರ ಸರ್ಕಾರ ಕಾಶ್ಮೀರದ ಮೇಲೆ ಸುರಿಯುತ್ತದೆ. ಆದರೆ ಅದನ್ನು ಬಳಸಿಕೊಂಡು ಕಾಶ್ಮೀರವನ್ನು ಬದಲಿಸುವ, ಶಕ್ತಿಶಾಲಿಯಾಗಿಸುವ ಕೆಲಸವನ್ನು ಇಷ್ಟು ವರ್ಷಗಳ ಸುದೀರ್ಘ ಅವಧಿಯಲ್ಲಿ ಮಾಡಬಹುದಿತ್ತು. ಆದರೆ ನೋ ಛಾನ್ಸ್, ಕಾಶ್ಮೀರದಲ್ಲಿ ಅದು ಸಾಧ್ಯವಾಗಲಿಲ್ಲ.

ನಮ್ಮ ಯಡಿಯೂರಪ್ಪನವರನ್ನೇ ತೆಗೆದುಕೊಳ್ಳಿ. ಇವತ್ತು ಬಿಜೆಪಿಯ ಬಹುತೇಕ ನಾಯಕರನ್ನು ಬಸ್‌ಸ್ಟ್ಯಾಂಡಿಗೆ ಕರೆದೊಯ್ದು ನಿಲ್ಲಿಸಿದರೆ ಅವರ ಮಾತು ಕೇಳಲು ಐವತ್ತು ಜನ ಸೇರುವುದಿಲ್ಲ. ಆದರೆ ಯಡಿಯೂರಪ್ಪನವರು ಬಂದರು ಎಂದರೆ ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಜನ ಸೇರುತ್ತಾರೆ. ಇವತ್ತಿನ ಮಟ್ಟಿಗೆ ಕರ್ನಾಟಕದಲ್ಲಿ ಮಾಸ್ ಲೀಡರ್ ಅಂತಿದ್ದರೆ ಯಡಿಯೂರಪ್ಪನವರೇ. ಆದರೆ ಅವರು ಕೂಡ ಒಂದು ಉತ್ಪನ್ನವಾಗಿ ತಮ್ಮನ್ನು ರೂಪಿಸಿಕೊಂಡರೇ ವಿನಃ ಒಳ್ಳೆಯ ಉತ್ಪನ್ನಗಳನ್ನು ತಯಾರಿಸಲಿಲ್ಲ. ಅದ್ಯಾರಿಗೋ ಮಿತಿ ಮೀರಿ ಪ್ರಾತಿನಿಧ್ಯ ನೀಡಲು ಹೋಗಿ ತನ್ನ ಶಕ್ತಿಯನ್ನು ತಾವೇ ಕಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದರ ಬದಲು ತಮ್ಮ ಅಕ್ಕ-ಪಕ್ಕ ರಾಜ್ಯದ ಗಮನ ಸೆಳೆಯುವಂತಹ ಹತ್ತು ಲೀಡರುಗಳನ್ನು, ಜನಪರವಾಗಿರುವ ನಾಯಕರನ್ನು ಸೃಷ್ಟಿಸಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಆದರೆ ಇವತ್ತು ಅವರ ಪಕ್ಕ ಹೇಳಿಕೊಳ್ಳುವಂತಹ ಒಬ್ಬ ನಾಯಕರೂ ಇಲ್ಲ. ಯಾವಾಗ ಒಬ್ಬ ನಾಯಕ ಹೀಗೆ ಲಿಮಿಟ್ ಆಗುತ್ತಾನೋ, ಆಗ ಸಹಜವಾಗಿ ಆತನೇ ಒಂದು ಉತ್ಪನ್ನವಾಗುತ್ತಾನೆ. ಆತ ಇರುವ ತನಕ ಆತನೇ ಉತ್ಪನ್ನ. ಹೀಗೆ ಉತ್ಪನ್ನವಾಗುವುದಕ್ಕಿಂತ ತಾವೇ ಇನ್ನಷ್ಟು ಉತ್ಪನ್ನಗಳನ್ನು ರೆಡಿ ಮಾಡುವುದು ಉತ್ತಮ.

ನೆನಪಿಡಿ, ಕರ್ನಾಟಕದಲ್ಲಿ ಹಲವಾರು ಚಳವಳಿಗಳು ನಡೆದವು. ಕನ್ನಡ ಪರ ಚಳವಳಿ, ದಲಿತ ಪರ ಚಳವಳಿ, ರೈತ ಚಳವಳಿ. ಆದರೆ ಇವೆಲ್ಲ ಇವತ್ತು ಯಾವ ಸ್ಥಿತಿಯಲ್ಲಿವೆ? ಹತ್ತಾರು ಗುಂಪುಗಳಾಗಿ ಒಡೆದು ಹೋಗಿವೆ. ಯಥಾಪ್ರಕಾರ ಇದಕ್ಕೂ ಕಾರಣ, ಇಂತಹ ಚಳವಳಿಯನ್ನು ಕಟ್ಟಿ ಬೆಳೆಸಿದವರು ತಾವೇ ಮಾರ್ಕೆಟಿಂಗ್ ಉತ್ಪನ್ನಗಳಾದರೇ ವಿನಃ ಹೊಸ ಉತ್ಪನ್ನಗಳನ್ನು, ರಾಜ್ಯದ ಜನರ ಪಾಲಿಗೆ ನಂಬಿಗಸ್ಥರು ಎನ್ನುವಂತಹ ಉತ್ಪನ್ನಗಳನ್ನು ಕೊಡಲಿಲ್ಲ. ಹೀಗಾಗಿ ಯಾವುದೇ ಚಳವಳಿಯನ್ನು ತೆಗೆದುಕೊಂಡರೆ ಇಂತಹವರ ನೇತೃತ್ವದ ಚಳವಳಿ ಅಂತ ಕೇಳಿ ಬರುತ್ತದೆಯೇ ಹೊರತು, ಸಾಮೂಹಿಕವಾಗಿ ಅದು ಕಾಣಿಸಿಕೊಳ್ಳುವುದಿಲ್ಲ. ಹೀಗೆ ವ್ಯಕ್ತಿಯೇ ಉತ್ಪನ್ನವಾಗುವುದು ಎಲ್ಲ ಕ್ಷೇತ್ರಗಳ ದೌರ್ಬಲ್ಯ.

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂತಹ ದೌರ್ಬಲ್ಯದಿಂದ ಹೊರಗೆ ಬರಬೇಕು. ತಾವೇ ಉತ್ಪನ್ನವಾಗಬಾರದು. ಇನ್ನಷ್ಟು ಮಂದಿಯನ್ನು ಬೆಳೆಸಿ, ರಾಜ್ಯಕ್ಕೆ ಭವಿಷ್ಯವಿದೆ ಎನ್ನಿಸಬೇಕು. ಆದರೆ ತಮಗೆ ಬೇಕಾದ ಒಂದಷ್ಟು ಮಂದಿ ಯೂಸ್‌ಲೆಸ್ ನಾಯಕರನ್ನು, ಹೊಗಳು ಭಟ್ಟರನ್ನು ಪಕ್ಕದಲ್ಲಿಟ್ಟುಕೊಂಡು ಅವರು ಹೊರಡುತ್ತಾರೆ. ಇದರಿಂದಾಗಿ ಅವರೇ ಒಂದು ಉತ್ಪನ್ನವಾಗುತ್ತಾರೆಯೇ ಹೊರತು ಒಂದು ಕಾರ್ಖಾನೆಯಾಗಿ ಹಲವು ಉತ್ಪನ್ನಗಳನ್ನು ಸೃಷ್ಟಿಸಲು ಅವರ ಕೈಲಿ ಸಾಧ್ಯವಾಗುವುದಿಲ್ಲ. ಇವತ್ತು ಸುಮ್ಮನೆ ಊಹಿಸಿ, ಸಿದ್ದರಾಮಯ್ಯನವರ ಅಕ್ಕಪಕ್ಕ ಇರುವವರಲ್ಲಿ ಯಾರು ನಾಳೆ ಸಿಎಂ ಮೆಟೀರಿಯಲ್ ಆಗುವಂತಹವರು? ನಿಮಗೆ ಒಂದು ಹೆಸರು ನೆನಪಿಗೆ ಬಂದರೆ ಹೇಳಿ. ವಿಪರ್ಯಾಸವೆಂದರೆ ನಾವು ನಮ್ಮ ಸುತ್ತಲೂ ಹತ್ತು ಮಂದಿಯನ್ನು ಬೆಳೆಸಬೇಕು ಎಂಬುದನ್ನು ಬಹುತೇಕರು ಮರೆತು ಬಿಟ್ಟಿರುತ್ತಾರೆ. ಇದು ಸ್ವಲ್ಪ ಮಟ್ಟಿಗಾದರೂ ಗೊತ್ತಿದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳಂತಹವು ಉಳಿದುಕೊಂಡಿವೆ. ಯಾಕೆಂದರೆ ಇಲ್ಲಿ ಸಿದ್ದರಾಮಯ್ಯನವರ ನಂತರ ಯಾರು? ಅಂತ ಸಿದ್ದರಾಮಯ್ಯನವರ ಕಡೆಯವರಿಗೆ ಊಹೆ ಮಾಡಲು ಸಾಧ್ಯವಿಲ್ಲವಾದರೂ ಕಾಂಗ್ರೆಸ್ ಹೈಕಮಾಂಡ್, ಪರ್ಯಾಯ ಉತ್ಪನ್ನವನ್ನು ರೆಡಿ ಮಾಡುತ್ತಿರುತ್ತದೆ. ಹೀಗಾಗಿಯೇ ಅದು ಉಳಿದುಕೊಳ್ಳುತ್ತದೆ.

ಹತ್ತು ವರ್ಷಗಳ ಕಾಲ ಅಧಿಕಾರವಿಲ್ಲದಿದ್ದರೂ ಬಿಜೆಪಿ ಮತ್ತೆ ಲೈಮ್‌ಲೈಟಿಗೆ ಬಂತು. ಯಾಕೆಂದರೆ ಅದು ತನ್ನಲ್ಲಿರುವ ಉತ್ಪನ್ನಗಳ ಪೈಕಿ ಮಾರುಕಟ್ಟೆಯಲ್ಲಿ ಚೆನ್ನಾಗಿ ಓಡುವುದು ಮೋದಿಯಂತಹ ಉತ್ಪನ್ನ ಎಂಬುದನ್ನು ಗುರುತಿಸಿತು. ಆಳದಲ್ಲಿ ನೋಡಿದರೆ ಸಂಘ ಪರಿವಾರಕ್ಕೂ, ಮೋದಿಗೂ ಹೇಳಿಕೊಳ್ಳುವಂತಹ ಬಂಧವಿಲ್ಲ. ಸಂಘ ಪರಿವಾರದ ಹಸ್ತಕ್ಷೇಪವನ್ನು ಯಾವತ್ತೂ ಮೋದಿ ವಿರೋಧಿಸುತ್ತಾ ಬಂದವರು. ಆದರೆ ಸಂಘ ಪರಿವಾರ ಊಹಿಸಿದ್ದಕ್ಕಿಂತ ವೇಗವಾಗಿ ದೇಶದ ಕೈಗಾರಿಕೋದ್ಯಮಿಗಳನ್ನು ತನ್ನ ಪರವಾಗಿ ಮಾಡಿಕೊಂಡರು. ಇಂತಹ ಸಂದರ್ಭದಲ್ಲಿ ಮೋದಿಯ ಜಾಗದಲ್ಲಿ ಅಡ್ವಾಣಿಯವರನ್ನು ಉತ್ಪನ್ನವಾಗಿ ತೋರಿಸಲು ಸಾಧ್ಯವಿಲ್ಲ ಎಂದು ಸಂಘ ಪರಿವಾರ ಊಹಿಸಿತು. ಅದರಂತೆಯೇ ನರೇಂದ್ರ ಮೋದಿ ಅವರನ್ನು ತನ್ನ ಹೊಸ ಉತ್ಪನ್ನ ಎಂದು ಪ್ರತಿಬಿಂಬಿಸಿತು, ಲಾಭ ಗಳಿಸಿತು. ಅದಕ್ಕೀಗ ತನ್ನ ಅಜೆಂಡಾ ಪಾಲನೆಯಾಗುವುದು ಮುಖ್ಯ. ಅದನ್ನು ಮೋದಿ ದೊಡ್ಡ ಮಟ್ಟದಲ್ಲಿ ಈಡೇರಿಸುತ್ತಾರೆ ಎಂಬುದು ಅದಕ್ಕೆ ಗೊತ್ತು.

ಆದರೆ ವಿಪರ್ಯಾಸವೆಂದರೆ ಮೋದಿ ಕೂಡ ತನ್ನನ್ನು ತಾನು ದಿ ಬೆಸ್ಟ್ ಉತ್ಪನ್ನವಾಗಿ ಪ್ರತಿಬಿಂಬಿಸಿಕೊಳ್ಳಲು ನೋಡುತ್ತಿದ್ದಾರೆಯೇ ವಿನಃ ತಮ್ಮ ಅಕ್ಕಪಕ್ಕದಲ್ಲೇ ಇರುವ ನಾಯಕರನ್ನು ಎತ್ತಿ ಹಿಡಿಯಲು ಬಯಸುತ್ತಿಲ್ಲ. ಇದಕ್ಕಾಗಿ ಒಂದು ದಿನ ಅವರು ಬೆಲೆ ತೆರುತ್ತಾರೆ. ಅದು ಬೇರೆ ವಿಷಯ. ಆದರೆ ಯಾವುದೇ ವ್ಯಕ್ತಿಯನ್ನು ಆತ ಕಣ್ಮರೆಯಾದ ನಂತರವೂ ಜನ ನೆನಪಿಸಿಕೊಳ್ಳುವಂತಿರಬೇಕು. ಅರ್ಥಾತ್, ಆತ ಕೊಟ್ಟ ಕೊಡುಗೆಯನ್ನು ನೆನಪಿಸಿಕೊಳ್ಳುವಂತಿರಬೇಕು. ವಾಜಪೇಯಿ, ಅಡ್ವಾಣಿ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತಹವರನ್ನು ಜನ ಈಗಲೂ ನೆನೆಯುತ್ತಾರೆ. ಯಾಕೆಂದರೆ ಅವರು ಕೇವಲ ತಾವು ಮಾತ್ರ ಉತ್ಪನ್ನಗಳಾಗಲಿಲ್ಲ, ಉತ್ಪನ್ನಗಳನ್ನು ಸೃಷ್ಟಿಸಿದರು. ಈ ಪೈಕಿ ಹಲವು ಉತ್ಪನ್ನಗಳು ಅತ್ಯುತ್ತಮ ಉತ್ಪನ್ನಗಳು. ವ್ಯವಸ್ಥೆ ಮುನ್ನಡೆಯಲು ತಮ್ಮದೇ ಕೊಡುಗೆ ನೀಡಿದಂತಹವು.


ಅರ್ಥಾತ್, ಯಾರು ಮುಂದಿನ ಜನಾಂಗ ಬೆಳೆಯಲು, ನಡೆಯಲು ಅವಕಾಶ ಮಾಡಿಕೊಡುವಂತಹ ಕೆಲಸಗಳನ್ನು ಮಾಡುತ್ತಾರೋ, ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಯಾರು ತಕ್ಷಣಕ್ಕೆ ಎಲ್ಲರನ್ನು ಸಮಾಧಾನಿಸಲು ಯತ್ನಿಸುತ್ತಾರೋ ಅಂತಹವರು ಜನಮಾನಸದಿಂದ ಮರೆಯಾಗಿ ಹೋಗುತ್ತಾರೆ, ಹಾಗಾಗದಿರಲಿ. ಈ ಮಾತು ಮೋದಿಯಂತಹವರಿಗೆ ಮಾತ್ರ ಅನ್ವಯಿಸುವುದಿಲ್ಲ. ಅಮಿತಾಬ್ ಬಚ್ಚನ್ ಥರದವರಿಗೆ ಮಾತ್ರ ಅನ್ವಯಿಸುವುದಿಲ್ಲ. ನಮ್ಮ ನಿಮ್ಮೆಲ್ಲರಿಗೂ ಅನ್ವಯಿಸುತ್ತದೆ. ಕೇವಲ ತಮ್ಮನ್ನು ತಾವು ಉತ್ಪನ್ನಗಳನ್ನಾಗಿ ಪ್ರತಿಬಿಂಬಿಸಿಕೊಳ್ಳುವವರು ಎಷ್ಟೇ ದೊಡ್ಡವರಾದರೂ ಫೈನಲಿ, ಅವರೇನಾಗುತ್ತಾರೆ? ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ಈ ವ್ಯವಸ್ಥೆಗೆ ಉಪಕಾರಿಯಾಗಬಹುದಾದ ಉತ್ಪನ್ನಗಳನ್ನು ನಮ್ಮ ಕೈಲಾದಷ್ಟು ಸೃಷ್ಟಿಸೋಣ. ಅದು ನಿಜವಾದ ಬದುಕು ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 October, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books