Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಮಾತು ಮುತ್ತಾಗಬಹುದು, ಶತ್ರುವೂ ಆಗಬಹುದು

ಒಂದು ಇಳಿಸಂಜೆಯ ಹೊತ್ತಲ್ಲಿ ಅವರು ಮನೆಗೆ ಬಂದರು. ಎತ್ತರದ ಆಸಾಮಿ, ಹಣೆಯಲ್ಲಿ ರಾರಾಜಿಸುತ್ತಿರುವ ಕುಂಕುಮದ ಬೊಟ್ಟು, ಶುಭ್ರ ಶ್ವೇತ ವಸ್ತ್ರಧಾರಿ, ಮುಖದ ತುಂಬ ಸೌಜನ್ಯದ ಮೇಕಪ್ಪು, ಎಣ್ಣೆ ಹಾಕಿ ಒತ್ತೊತ್ತಾಗಿ ಹಿಂದಕ್ಕೆ ಬಾಚಿದ ಕೇಶರಾಶಿ, ಸಂಭಾವಿತ ಅನ್ನುವ ನಾಮವಿಶೇಷಣವನ್ನು ನಾಮಪದವನ್ನಾಗಿಸಿದವರಂತೆ ಅವರು ಕಂಗೊಳಿಸುತ್ತಿದ್ದರು. ತೆರೆದ ಬಾಗಿಲಿಂದ ಕರೆಕ್ಟಾಗಿ ನಾಲ್ಕು ಅಡಿ ಆಚೆ ನಿಂತು ‘ಒಳಗೆ ಬರಬಹುದಾ’ ಅಂದರು. ಬನ್ನಿ ಅಂದೆ. ಅವರ ಕೈಯಲ್ಲೊಂದು ರಸೀತಿ ಪುಸ್ತಕ ಇತ್ತು, ನನ್ನ ಕೈಗೊಂದು ಮನವಿಪತ್ರ ಇಟ್ಟರು. ನಮ್ಮ ಲೇಔಟ್‌ನಲ್ಲಿರುವ ಗಣೇಶನ ದೇವಸ್ಥಾನ ಜೀರ್ಣಾವಸ್ಥೆಯಲ್ಲಿರುವುದರಿಂದ ಅದಕ್ಕೊಂದು ಕಾಯಕಲ್ಪ ಮಾಡಬೇಕಾಗಿದೆ ಮತ್ತು ಈ ಜೀರ್ಣೋದ್ಧಾರಕ್ಕೆ ತಮ್ಮಂಥಾ ಆಸ್ತಿಕರ ಸಹಕಾರ ಬೇಕು ಅನ್ನುವುದು ಆ ಪತ್ರದ ಸಾರಾಂಶವಾಗಿತ್ತು. ನನ್ನನ್ನು ವಿನಾಕಾರಣ ಆಸ್ತಿಕರ ಗುಂಪಿಗೆ ಸೇರಿಸಿದ ಅವರ ಹಾಸ್ಯಪ್ರಜ್ಞೆಯನ್ನು ಮೆಚ್ಚಿಕೊಳ್ಳುತ್ತಾ ‘ನನಗೆ ದೇವರು ದಿಂಡರಲ್ಲಿ ನಂಬಿಕೆ ಇಲ್ಲ’ ಅಂದೆ. ನಾನೇನೋ ಕೊಲೆ ಮಾಡಿದ್ದೇನೆ ಅನ್ನುವ ಥರ ಅವರ ಮುಖದಲ್ಲೊಂದು ಗಾಬರಿ ಮತ್ತು ಅಚ್ಚರಿಯ ಮಿಶ್ರಭಾವ ಪ್ರಕಟವಾಯಿತು. ತಕ್ಷಣ ನನ್ನ ಹೆಂಡತಿ ಅವರ ನೆರವಿಗೆ ಬಂದು ‘ನಮ್ಮೆಜಮಾನ್ರು ತಮಾಷೆ ಮಾಡ್ತಿದಾರೆ’ ಅಂದುಬಿಟ್ಟಳು. ಆತ ಮತ್ತೆ ಪ್ರಫುಲ್ಲಿತನಾಗಿ ನಗೆ ಚೆಲ್ಲಿದರು. ನಾನು ಇನ್ನೆಲ್ಲಿ ದೈವವಿರೋಧಿ ಅಣಿಮುತ್ತುಗಳನ್ನು ಉದುರಿಸುತ್ತೇನೋ ಅನ್ನುವ ಭಯದಲ್ಲಿ ನನ್ನ ಹೆಂಡತಿ ವಿಷಯಾಂತರ ಮಾಡಿದಳು.

‘ಏನು ತಗೋತೀರಿ. ಕಾಫಿ, ಟೀ...’
‘ಇಲ್ಲ. ನನಗೆ ಅಂಥಾ ಯಾವುದೇ ಚಟ ಇಲ್ಲ. ನೀರು ಬಿಟ್ಟು ಇನ್ನಾವುದೇ ದ್ರವ ಪದಾರ್ಥವನ್ನೂ ನಾನು ಸೇವಿಸುವುದಿಲ್ಲ’ ಎಂದಾತ ಹೆಮ್ಮೆಯಿಂದ ಘೋಷಿಸಿದರು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ನಮ್ಮ ದೇಶ ಈ ಸ್ಥಿತಿ ತಲುಪಿರುವುದಕ್ಕೆ ಚಟಾಗ್ರೇಸರೇ ಕಾರಣ ಎಂದು ಪುಟ್ಟ ಭಾಷಣ ಮಾಡಿದರು. ಯುವ ಜನಾಂಗ ಹಾದಿತಪ್ಪುತ್ತಿರುವ ಬಗ್ಗೆ, ಗಲ್ಲಿಗಲ್ಲಿಗಳಲ್ಲಿ ವೈನ್ ಸ್ಟೋರುಗಳು ತಲೆಯೆತ್ತುತ್ತಿರುವ ಬಗ್ಗೆ, ಹೆಣ್ಮಕ್ಕಳು ದೇವಸ್ಥಾನಕ್ಕೆ ಹೋಗುವುದನ್ನು ಬಿಟ್ಟು ಟೀವಿ ಸೀರಿಯಲ್ಲುಗಳನ್ನು ನೋಡುತ್ತಾ ಕಾಲಹರಣ ಮಾಡುತ್ತಿರುವ ಬಗ್ಗೆ, ಮೊಬೈಲ್ ಬಂದು ನಮ್ಮ ಸಂಸ್ಕೃತಿ ಹೇಗೆ ನಾಶವಾಗುತ್ತಿದೆ ಎಂಬ ಬಗ್ಗೆ ಮಾತಾಡುತ್ತಲೇ ಹೋದರು. ನನ್ನ ತಲೆ ಗಿರ್ ಅನ್ನುವುದಕ್ಕೆ ಶುರುವಾಯಿತು. ಈ ಮನುಷ್ಯನನ್ನು ಹೀಗೇ ಬಿಟ್ಟರೆ ನನ್ನ ಮಿದುಳು ನಿಷ್ಕ್ರಿಯವಾಗುತ್ತದೆ ಅನಿಸಿ ‘ನೀವ್ಯಾಕೆ ಇವೆಲ್ಲದರ ಬಗ್ಗೆ ಒಂದು ಪುಸ್ತಕ ಬರೆದು ನಮ್ಮ ಏರಿಯಾದಲ್ಲಿ ಫ್ರೀಯಾಗಿ ಹಂಚಬಾರದು’ ಅನ್ನುವ ಸಲಹೆ ಕೊಟ್ಟೆ. ಆತನಿಗೆ ನನ್ನ ಮಾತಲ್ಲಿದ್ದ ವ್ಯಂಗ್ಯ ಅರ್ಥವಾಗಿರಬೇಕು, ಮಾತು ನಿಲ್ಲಿಸಿ ಸ್ವಲ್ಪ ಹೊತ್ತು ಸುಮ್ಮನೇ ಕುಳಿತರು. ನನ್ನ ಹೆಂಡತಿ ಅವರ ಕೈಗೊಂದು ಚೆಕ್ ಕೊಟ್ಟಳು, ಅದನ್ನು ಕಣ್ಣಿಗೊತ್ತಿಕೊಂಡು ದೇವರಪ್ರಸಾದ ಅಂತ ಒಂದು ಪೊಟ್ಟಣವನ್ನು ಅವಳ ಕೈಯಲ್ಲಿಟ್ಟು ಹೊರಟುಹೋದರು.
ಗಣೇಶನ ಜೀರ್ಣೋದ್ಧಾರದ ನೆಪದಲ್ಲಿ ಅವರು ಎಷ್ಟು ದುಡ್ಡು ಸಂಗ್ರಹಿಸಬಹುದು ಅಂತ ನಾನು ಲೆಕ್ಕ ಹಾಕುತ್ತಾ ಕುಳಿತೆ. ನಮ್ಮ ಲೇಔಟಲ್ಲಿ ಕಡಿಮೆ ಅಂದರೂ ಸಾವಿರ ಮನೆಗಳಿವೆ, ಸರಾಸರಿ ಒಂದೊಂದು ಮನೆಯಿಂದ ಸಾವಿರ ರುಪಾಯಿ ಅಂತ ಲೆಕ್ಕ ಹಾಕಿದರೂ ಹತ್ತು ಲಕ್ಷ ಆಗುತ್ತದೆ, ನಮ್ಮ ಏರಿಯಾದ ಎಂಎಲ್‌ಎ, ಕಾರ್ಪೋರೇಟರ್ ಅವರಿಂದ ಇನ್ನೂ ಹತ್ತು ಲಕ್ಷ ಸಿಗಬಹುದು.

ಜೀರ್ಣೋದ್ಧಾರಕ್ಕಾಗಿ ಕಾದು ಕುಳಿತಿದ್ದ ಈ ದೇವಸ್ಥಾನವನ್ನು ನಾನು ನೋಡಿದ್ದೆ. ಅದು ನಮ್ಮ ಲೇಔಟ್‌ನಲ್ಲಿರುವ ಪಾರ್ಕಿನ ಮಧ್ಯಭಾಗದಲ್ಲಿತ್ತು. ಎರಡು ವರ್ಷದ ಹಿಂದೆ ರಾತ್ರೋರಾತ್ರಿ ಉದ್ಭವವಾದ ದೇವಸ್ಥಾನವಿದು. ಇದರಿಂದಾಗಿ ಪಾರ್ಕಿನ ಅಂದಚೆಂದ ಹಾಳಾಗಿ ಹೋಗಿದ್ದಂತೂ ನಿಜ. ಆದರೆ ಹಾಗಂತ ಪಬ್ಲಿಕ್ಕಾಗಿ ಹೇಳಿದರೆ ಆಸ್ತಿಕರ ವಿರೋಧ ಕಟ್ಟಿಕೊಳ್ಳುವ ಅಪಾಯವಿರುತ್ತದೆ ಅನ್ನುವುದು ನನಗೆ ಚೆನ್ನಾಗಿ ಗೊತ್ತಿತ್ತು. “ಬರೀ ದೇವಸ್ಥಾನಗಳ ಬಗ್ಗೆ ಮಾತಾಡುತ್ತೀರಲ್ಲ. ಮಸೀದಿ. ಚರ್ಚ್ ಬಗ್ಗೆ ನೀವ್ಯಾಕೆ ಮಾತಾಡುವುದಿಲ್ಲ" ಎಂದು ಕಾಲು ಕೆದರಿ ಜಗಳಕ್ಕೆ ಬರುವವರಿದ್ದಾರೆ.

ಹವ್ಯಾಸ, ಅಭ್ಯಾಸ, ಚಟ, ಇವೆಲ್ಲವನ್ನೂ ಒಂದೇ ಪಾತ್ರೆಗೆ ಹಾಕಿ ವಾದ ಮಾಡುವ ಜನ ನಮ್ಮಲ್ಲಿದ್ದಾರೆ. ಅಫ್‌ಕೋರ್ಸ್ ಗುಂಡು ಹಾಕುವುದು ಒಳ್ಳೇ ಅಭ್ಯಾಸವೇನಲ್ಲ. ದಿನಕ್ಕೆ ಎರಡು ಪೆಗ್ ಹಾಕಿದರೆ ಹೃದಯ ಚುರುಕಾಗಿರುತ್ತೆ ಅನ್ನುವ ಇತ್ತೀಚಿನ ಸಂಶೋಧನೆ ಕೂಡಾ ಯಾವುದೋ ಲಿಕ್ಕರ್ ಕಂಪನಿಗಳು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳುವುದಕ್ಕೆ ಹೂಡಿರುವ ಹುನ್ನಾರವಲ್ಲದೇ ಇನ್ನೇನೂ ಅಲ್ಲ. ಸಿಗರೇಟು ಸೇದಿದರೆ ಬೀಪಿ ಜಾಸ್ತಿಯಾಗುತ್ತದೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಅನ್ನುವುದು ಕೂಡಾ ಸತ್ಯವೇ. ಆದರೆ ಇವೆರಡಕ್ಕಿಂತಲೂ ಭಯಾನಕವಾದ ಚಟಗಳಿಗೆ ಅಂಟಿಕೊಂಡವರಿದ್ದಾರೆ. ಪಾನ್ ಜಗಿದು ಎಲ್ಲೆಂದಡರಲ್ಲಿ ಉಗುಳುವುದು, ಡ್ರಗ್ಸ್ ತೆಗೆದುಕೊಂಡು ಮೈಮೇಲೆ ದೇವರು ಬಂದಂತೆ ಕುಣಿಯುವುದು, ಅಷ್ಟೇಕೆ ಶೂ ಪಾಲಿಶ್‌ನ್ನು ಸೇವಿಸಿ ಪರಲೋಕದಲ್ಲಿ ತೇಲಾಡುವವರೂ ಇದ್ದಾರೆ.
ಸಿಗರೇಟು, ಆಲ್ಕೋಹಾಲ್, ಡ್ರಗ್ಸ್, ಇವನ್ನೆಲ್ಲಾ substance related addictions ಎಂದು ಕರೆಯುತ್ತಾರೆ. ಅಂದರೆ ಒಂದು ನಿರ್ದಿಷ್ಟ ವಸ್ತುವಿನ ಸೇವನೆಗೆ ಸಂಬಂಧಿಸಿದ ಚಟ. ಜೂಜು, ಅತಿಯಾಗಿ ತಿನ್ನುವುದು, ಕಾಮದಾಹ, ಇಂಟರ್ನೆಟ್ ಹುಚ್ಚು, ವಿಡಿಯೋ ಗೇಮ್ಸ್, ಹಗಲುರಾತ್ರಿ ಕೆಲಸದಲ್ಲೇ ತಲ್ಲೀನನಾಗಿರುವುದು -ಇವುಗಳನ್ನು ಮನುಷ್ಯನ ನಡವಳಿಕೆಗೆ ಸಂಬಂಧಿಸಿದ ಚಟ (behavioural or process addictions) ಎಂದು ಕರೆಯುತ್ತಾರೆ. ವೈದ್ಯರು ಹೇಳಿದರು ಅನ್ನುವ ಕಾರಣಕ್ಕೆ ಇಡೀ ದಿನ ಬೇರೆಲ್ಲಾ ಕೆಲಸ ಬಿಟ್ಟು ಧ್ಯಾನಮಗ್ನರಾಗಿರುವ ವ್ಯಕ್ತಿಗಳನ್ನೂ ಚಟಾಗ್ರೇಸರರ ಪಟ್ಟಿಗೆ ಸೇರಿಸಬಹುದು. ಟೀವಿ ನೋಡುವುದು ಚಟವಾದರೆ, ಓದುವುದು ಚಟವಲ್ಲ. ಅದೊಂದು ಒಳ್ಳೆಯ ಅಭ್ಯಾಸ. ಕೈತೋಟದಲ್ಲಿ ಕೆಲಸ ಮಾಡುವುದು ಒಳ್ಳೆಯ ಹವ್ಯಾಸ. ಮನೋಲ್ಲಾಸ ನೀಡುವಂಥ ಕೆಲಸಗಳೆಲ್ಲಾ ಹವ್ಯಾಸಗಳೇ, ಮನಸ್ಸು ಉನ್ಮಾದ ಸ್ಥಿತಿಯತ್ತ ತಳ್ಳುವ ಕೆಲಸಗಳೆಲ್ಲವೂ ಚಟಗಳೇ. ಅದರಿಂದ ಬೇರೆಯವರಿಗೂ ತೊಂದರೆ ಆಗುತ್ತದೆ.
ಚಟಗಳೇ ಇಲ್ಲದ ಮನುಷ್ಯನಿಲ್ಲ ಅನ್ನುವುದು ನನ್ನ ನಂಬಿಕೆ. ಗುಂಡು ಹಾಕದೇ, ಸಿಗರೇಟು ಸೇದದೇ ಸಮಾಜದಲ್ಲಿ ಸಂಭಾವಿತನ ಥರ ಪೋಸು ಕೊಡುವ ಮನುಷ್ಯ ಮನೆಯಲ್ಲಿ ಹೆಂಡತಿಗೆ ದನಕ್ಕೆ ಬಡಿದಂತೆ ಬಡಿಯುತ್ತಾನೆ. ಅದಕ್ಕಿಂತ ಚಟ ಬೇಕಾ? ಹಾಗೆ ಯೋಚಿಸುವ ಹೊತ್ತಲ್ಲಿ, ವಂತಿಗೆ ಕೇಳುವುದಕ್ಕೆ ಬಂದ ನಾಮಧಾರಿ ತನ್ನ ಮನೆಯಲ್ಲಿ ಹೆಂಡತಿ ಮೇಲೆ ದೌರ್ಜನ್ಯ ಎಸಗುತ್ತಿರಬಹುದಾ ಎಂಬ ಕೆಟ್ಟ ಕುತೂಹಲ ಮೂಡಿತು. ನನ್ನ ಹೆಂಡತಿಯ ಬಳಿ ಆ ಬಗ್ಗೆ ಮಾಹಿತಿಯಿರಲಿಲ್ಲ. ಆದರೆ ಮಾತಾಡುವ ಚಟವಂತೂ ಆತನಿಗಿದೆ ಅನ್ನುವುದು ನನ್ನ ಅನುಭವಕ್ಕೆ ಬಂದಿತ್ತು.

ಜಾಸ್ತಿ ಮಾತಾಡೋದು ಕೂಡಾ ಒಂದು ಕಾಯಿಲೆ. ಅದಕ್ಕೆ ಮನಃಶಾಸ್ತ್ರದಲ್ಲಿ ಎಡಿಎಚ್‌ಡಿ ಅನ್ನುತ್ತಾರೆ. ಅಂದರೆ
Attention deficit hyper activity disorder. ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತದೆ. ಕೆಲವೊಂದು ಸಾರಿ ಮಕ್ಕಳ ಥರ ಆಡುವ ದೊಡ್ಡವರಿಗೂ ಅಂಟಿಕೊಳ್ಳುವುದುಂಟು. ಈ ಚಟದಿಂದ ಬಳಲುತ್ತಿರುವವರು ವಿಪರೀತ ಮಾತಾಡುತ್ತಾರೆ. ಅದಕ್ಕೊಂದು ಗೊತ್ತು ಗುರಿ ಇರುವುದಿಲ್ಲ. ತನ್ನ ಮಾತಿಗೆ ಮುಂದಿರುವವನ ಪ್ರತಿಕ್ರಿಯೆಗೂ ಅವರು ಕಾಯುವುದಿಲ್ಲ. ತಾನು ಮಾತಾಡಿದ್ದನ್ನು ಮುಂದಿರುವವರು ಕೇಳಿಸಿಕೊಳ್ಳಲೇಬೇಕು ಅನ್ನುವ ಹಠ ಅವರಿಗೆ. ಹಠ ಅನ್ನೋದು ಒಂದು ಚಟ. ನಾನು ಹೇಳಿದ್ದೇ ಸರಿ, ಇದಮಿತ್ಥಂ ಅನ್ನೋ ಪೈಕಿಯವರು ಇವರು. ಗುಂಡು ಹಾಕಿ ಹುಚ್ಚುಚ್ಚಾಗಿ ಆಡುವವರನ್ನು ಮನರಂಜನೆ ಅನ್ನೋ ಕಾರಣಕ್ಕಾದರೂ ಸಹಿಸಿಕೊಳ್ಳಬಹದು, ಆದರೆ ಮಾತಿಗೆ ನಿಂತವರನ್ನು ಸಹಿಸಿಕೊಳ್ಳುವುದು ಕಷ್ಟ.

ಸಾಮಾನ್ಯವಾಗಿ ರಾಜಕಾರಣಿಗಳನ್ನು, ಒಂಟಿಜೀವಿಗಳನ್ನು, ಟೀವಿ ನಿರೂಪಕರನ್ನು, ರೇಡಿಯೋ ಜಾಕಿಗಳನ್ನು ಮತ್ತು ವಯಸ್ಸಾದವರನ್ನು ಈ ಎಡಿಎಚ್‌ಡಿ ಅಮರಿಕೊಳ್ಳುತ್ತದೆ. ರಾಜಕಾರಣಿಗಳಿಗೆ ಅದು ಕುಲಕಸುಬು, ಟೀವಿ ಆಂಕರ್‌ಗಳಿಗೆ ಅದು ಅನಿವಾರ್ಯ ಕರ್ಮ. ಯಾಕೆಂದರೆ ಕೆಲವೊಂದು ಡಿಸ್ಕಷನ್‌ಗಳನ್ನು ಗಂಟೆಗಟ್ಟಲೆ ಎಳೆಯಲೇಬೇಕಾಗುತ್ತದೆ. ರೇಡಿಯೋ ಜಾಕಿಗೆ ಮಾತು ಸಂಬಳ ತಂದುಕೊಡುವ ವೃತ್ತಿ. ಏಕಾಂಗಿಗಳಿಗೆ ಮಾತು ಅನ್ನುವುದು ಲೋಕಾಂತಕ್ಕೊಂದು ರಹದಾರಿ. ವಯಸ್ಸಾದವರಿಗೆ ದೈಹಿಕ ಚಟುವಟಿಕೆಗೆ ಶಕ್ತಿಯಿಲ್ಲದೇ ಇರುವುದರಿಂದ ಮಾತೇ ಜ್ಯೋತಿರ್ಲಿಂಗ. ಮಾತಿನ ಚಟದಿಂದ ಹೊರಗೆ ಬರುವುದಕ್ಕೆ ಕೆಲವು ಸರಳ ಉಪಾಯಗಳಿವೆ. ನೀವು ಮಾತಾಡುವ ಹೊತ್ತಿಗೆ ಎದುರಿಗಿರುವ ವ್ಯಕ್ತಿಯ ಮುಖಭಾವ ಮತ್ತು ಬಾಡಿ ಲಾಂಗ್ವೇಜನ್ನು ಗಮನಿಸುತ್ತಿರಿ. ಆತನ ಗಮನ ಬೇರೆಲ್ಲೋ ಹರಿಯುತ್ತಿದ್ದರೆ, ಒಂದೆರಡು ಬಾರಿ ಆಕಳಿಸಿದರೆ, ವಿನಾಕಾರಣ ತಲೆ ಕೆರೆಯುತ್ತಿದ್ದರೆ, ಶರ್ಟಿನ ಗುಂಡಿ ಜೊತೆ ಆಟವಾಡುತ್ತಿದ್ದರೆ, ಅವನಿಗೆ ನಿಮ್ಮ ಮಾತಲ್ಲಿ ಆಸಕ್ತಿ ಇಲ್ಲ ಎಂದೇ ಅರ್ಥ. ತಕ್ಷಣ ಮಾತು ನಿಲ್ಲಿಸಿ. ಒಂದೇ ವಾಕ್ಯವನ್ನು ಪದೇಪದೇ ಹೇಳುವುದು ಅಥವಾ ಕನ್ನಡದಲ್ಲಿ ಹೇಳಿದ್ದನ್ನೇ ಮತ್ತೆ ಇಂಗ್ಲಿಷಲ್ಲಿ ಹೇಳುವುದು ಮುಂದಿರುವವರಿಗೆ ಕಿರಿಕಿರಿ ಉಂಟು ಮಾಡುತ್ತದೆ ಅನ್ನುವುದು ನೆನಪಿರಲಿ. ನೀವಾಡುವ ಮಾತು ನಿಮ್ಮ ಸುತ್ತವೇ ಗಿರಕಿ ಹೊಡೆಯುತ್ತಿದ್ದರೆ ಕೇಳುಗನಿಗೆ ಬೋರ್ ಆಗುವುದು ಸಹಜ. ಅದರ ಬದಲಾಗಿ ಆತನ ಸ್ಥಿತಿಗತಿಗಳನ್ನೂ ವಿಚಾರಿಸಿಕೊಳ್ಳಿ. ಮಾತು ಒನ್ ವೇ ಆಗದಿರಲಿ, ಆತ್ಮಪ್ರಶಂಸೆ ಕಡಿಮೆಯಿರಲಿ.

ಇದೆಲ್ಲಕ್ಕಿಂತ ಹೆಚ್ಚಾಗಿ ಕಡಿಮೆ ಮಾತಾಡುವವರನ್ನು ಜಗತ್ತು ಬುದ್ಧಿವಂತ ಎಂದು ಪರಿಗಣಿಸುತ್ತದೆ ಅನ್ನುವುದು ನೆನಪಲ್ಲಿರಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 September, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books