Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಬದಲಾದ ರಾಜಕೀಯ ಗಾಂಭೀರ್ಯವನ್ನು ಅವಲೋಕಿಸಿದಾಗ...!

ದೇಶದ ರಾಜಕಾರಣಕ್ಕೆ ನಿಜಕ್ಕೂ ಒಂದು ರೀತಿಯ ಗಾಂಭೀರ್ಯ ಬಂದಿದೆ. ಮೊನ್ನೆ ದೇಶದ ಮೂರು ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಮೂವತ್ತಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಬಹುಪಾಲು ಕ್ಷೇತ್ರಗಳಲ್ಲಿ ಗೆದ್ದು ಸಿಂಹಪಾಲು ಪಡೆದಿವೆ. ಒಂದು ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ. ಯಾವುದೋ ನಿರ್ದಿಷ್ಟ ಜಾತಿಯನ್ನು ಓಲೈಸಿದರೆ ನಮಗೆ ಇಷ್ಟು ಸೀಟು ಬರುತ್ತದೆ. ಅದರ ಆಧಾರದ ಮೇಲೆ ಕುದುರೆ ವ್ಯಾಪಾರ ಶುರು ಮಾಡಬಹುದು ಎಂಬುದು ಇತ್ತೀಚಿನ ತನಕ ಹಲ ರಾಜಕಾರಣಿಗಳ ಭಾವನೆಯಾಗಿತ್ತು. ಹೀಗಾಗಿಯೇ ಎಲ್ಲ ರಾಜ್ಯಗಳಲ್ಲೂ ಸೀಮಿತ ಕುಟುಂಬಗಳ ರಾಜಕೀಯ ಶುರುವಾಗಿತ್ತು. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್, ಕರ್ನಾಟಕದಲ್ಲಿ ದೇವೆಗೌಡ ಹೀಗೆ ಯಾವುದೇ ರಾಜ್ಯವನ್ನು ತೆಗೆದುಕೊಂಡು ನೋಡಿ. ಎಲ್ಲ ಕಡೆ ವಂಶಪಾರಂಪರ್ಯ ರಾಜಕಾರಣ ಢಾಳಾಗಿ ಎದ್ದು ಕಾಣುತ್ತಿತ್ತು.

ಒಂದು ಕಾಲದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೇಲೆದ್ದು ನಿಂತು ಹೋರಾಡಿದ ದೇಶ ಇದು. ನೆಹರೂ, ಅವರಾದ ಮೇಲೆ ಲಾಲ್‌ಬಹಾದ್ದೂರ್ ಶಾಸ್ತ್ರಿ, ಆನಂತರ ಇಂದಿರಾ ಗಾಂಧಿ ಹೀಗೆ ನೋಡುತ್ತಾ ಹೋದರೆ ಪ್ರತಿ ಸಲವೂ ಕಾಂಗ್ರೆಸ್ ಪಕ್ಷವೇ ಗೆದ್ದು ಅಧಿಕಾರ ಹಿಡಿಯುವ ಸ್ಥಿತಿ ಇತ್ತು. ಯಾವಾಗ ಇಂದಿರಾ ಗಾಂಧಿ ಇದರ ಲಾಭ ಪಡೆದು ದೇಶದ ಮೇಲೆ ತುರ್ತು ಸ್ಥಿತಿ ಹೇರಿದರೋ, ಇದರ ಬೆನ್ನಲ್ಲೇ ಶುರುವಾಯಿತು ಜಯಪ್ರಕಾಶ್ ನಾರಾಯಣ್ ಅವರ ಸರ್ವೋದಯ ಚಳವಳಿ. ಇದರ ಸಂಪೂರ್ಣ ಲಾಭ ಪಡೆದಿದ್ದು ಜನತಾ ಪರಿವಾರ. ಆಗ ಕಾಂಗ್ರೆಸ್ ವಿರುದ್ಧ ದೇಶದ ಎಲ್ಲ ರಾಜ್ಯಗಳಲ್ಲಿ ಜನ ರೊಚ್ಚಿಗೆದ್ದಿದ್ದರು. ರಾಮಮನೋಹರ ಲೋಹಿಯಾ ಹೇಳಿದಂತೆ ಯಾವುದೇ ಸರ್ಕಾರ ಇರಲಿ, ಸುದೀರ್ಘ ಕಾಲ ಇರಬಾರದು. ಆಗ ಅದು ಬಂಡೆಯ ರೂಪ ಪಡೆದು ಜಡವಾಗುತ್ತದೆ. ಹೀಗಾಗಿ ವ್ಯವಸ್ಥೆಯಲ್ಲಿ ಚಲನಶೀಲತೆ ಇರಲು ಬಂಡೆಯನ್ನು ಒಡೆಯಬೇಕು ಎಂಬುದು ಲೋಹಿಯಾ ವಾದವಾಗಿತ್ತು. ಇಂತಹ ವಾದವನ್ನು ಜಯಪ್ರಕಾಶ್ ನಾರಾಯಣ್‌ರ ಸರ್ವೋದಯ ಚಳವಳಿ ಹಾಗೂ ಜನತಾ ಪರಿವಾರದ ಹೋರಾಟ ಎತ್ತಿ ಹಿಡಿಯಿತು. ಆ ಮೂಲಕ ಮೊಟ್ಟ ಮೊದಲ ಬಾರಿ ೧೯೭೭ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂತು. ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಬಂದ ಈ ಸರ್ಕಾರವನ್ನು ಮುಂದೆ ಇಂದಿರಾ ಗಾಂಧಿ ತಮ್ಮ ರಾಜಕೀಯ ಚಾಣಾಕ್ಷತೆಯಿಂದ ಉರುಳಿಸಿದರು. ಆ ಮಾತು ಬೇರೆ. ರೈತ ನಾಯಕ ಚೌಧರಿ ಚರಣ್‌ಸಿಂಗ್ ಅವರನ್ನು ಪ್ರಧಾನಿ ಮಾಡಿ, ಬೆಂಬಲ ನೀಡುವ ನಾಟಕ ಮಾಡಿ ಆ ಸರ್ಕಾರವನ್ನೇ ಧಿಬಿಲ್ಲಂತ ಬೀಳಿಸಿದರು.

ವಿಪರ್ಯಾಸವೆಂದರೆ ಇಂದಿರಾ ಗಾಂಧಿ ವಿರುದ್ಧ ಮಾತನಾಡುತ್ತಾ, ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಮಾತನಾಡುತ್ತಿದ್ದ ರಾಜಕಾರಣಿಗಳೇ ಮುಂದೆ, ವಂಶಪಾರಂಪರ್ಯ ರಾಜಕಾರಣದ ಪ್ರಬಲ ಪ್ರತಿಪಾದಕರಾಗಿದ್ದು. ನೋಡನೋಡುತ್ತಿದ್ದಂತೆಯೇ ಚೌಧರಿ ಚರಣ್‌ಸಿಂಗ್ ಅವರ ಮಗ ಅಜಿತ್ ಸಿಂಗ್ ಬೆಳೆದು ನಿಂತರು. ಕರ್ನಾಟಕದಲ್ಲಿ ದೇವೆಗೌಡರು ತಮ್ಮ ಅಕ್ಕ ಪಕ್ಕ ಇದ್ದವರನ್ನು ಸೈಡಿಗೆ ಸರಿಸಿ ಮಕ್ಕಳ ಕೈಗೆ ಪಕ್ಷ ಕೊಟ್ಟರು. ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಅವರಿಗೆ ತಮ್ಮ ಮಗ ಅಖಿಲೇಶ್ ಯಾದವ್‌ಗಿಂತ ಉತ್ತಮ ರಾಜಕಾರಣಿ ಯಾರೂ ತಮ್ಮ ಸಮಾಜವಾದಿ ಪಕ್ಷದಲ್ಲಿ ಕಾಣಿಸಲಿಲ್ಲ. ಕೇವಲ ಮುಸ್ಲಿಮರನ್ನು ಓಲೈಸುವ ಅಜಂ ಖಾನ್ ಅವರಂತಹ ಬಫೂನುಗಳು ಕಾಣಿಸತೊಡಗಿದರು. ಎಷ್ಟೇ ಆದರೂ ಇವರದು ಬಫೂನು ಕೆಲಸ. ಮಾತೆತ್ತಿದರೆ ಮುಸ್ಲಿಮರ ಪರ ಮಾತನಾಡಿದಂತೆ ನಾಟಕ ಆಡುವುದು, ಅವರಿಗೆ ನಾವಲ್ಲದೇ ಇನ್ಯಾರೂ ಗತಿಯಿಲ್ಲ ಎಂಬಂತೆ ಮಾತನಾಡುವುದು ಅಜಂ ಖಾನ್ ಅವರಂತಹವರ ಶೈಲಿ. ಇಂಥವರನ್ನು ಸಾಮಾನ್ಯ ಜನ ಯಾವತ್ತೂ ದೊಡ್ಡ ನಾಯಕ ಅಂತ ಸ್ವೀಕರಿಸುವುದಿಲ್ಲ. ಬಾಯಿ ಚಪಲಕ್ಕೆ ಅಂಥವರು ಆಡಿದ ಮಾತು ಕೆಲ ಕಾಲ ಚರ್ಚೆಗೆ ಗ್ರಾಸವಾಗುತ್ತದೆ. ಅಷ್ಟೇ ಬೇಗ ಕಸದ ಬುಟ್ಟಿಗೆ ಸೇರುತ್ತದೆ. ಇದು ಮುಲಾಯಂ ಸಿಂಗ್ ಯಾದವ್ ಅವರಿಗೂ ಗೊತ್ತು.

ಬಿಹಾರದಲ್ಲಿ ಲಾಲೂ ಪ್ರಸಾದ್‌ರ ಆರ್ಭಟ ಯಾವ ಮಟ್ಟಕ್ಕಿತ್ತು ಎಂದರೆ ಯಾವುದೇ ಸರ್ಕಸ್‌ನಲ್ಲಿ ಅತ್ಯುತ್ತಮ ಜೋಕರ್ ಆಗುವ ಎಲ್ಲ ಗುಣಗಳಿದ್ದ ಈ ಮನುಷ್ಯ ಬಿಹಾರದ ಸಿಎಂ ಗದ್ದುಗೆಗೇರಿದರು. ಅಡ್ವಾಣಿಯ ರಥಯಾತ್ರೆಯನ್ನು ತಡೆಹಿಡಿದರು ಎಂಬ ಕಾರಣಕ್ಕಾಗಿ ಜಾತ್ಯತೀತ ನಾಯಕ ಅಂತ ಕರೆಸಿಕೊಂಡರು. ಕೊನೆಗೊಮ್ಮೆ ಮೇವು ಹಗರಣದಲ್ಲಿ ಜೈಲುಪಾಲಾಗುವ ಪರಿಸ್ಥಿತಿ ಬಂದಾಗ ತಮ್ಮ ಪತ್ನಿ ರಾಬ್ಡಿ ದೇವಿಯನ್ನು ಬಿಹಾರದ ಮುಖ್ಯಮಂತ್ರಿ ಮಾಡಿಬಿಟ್ಟರು. ರಾಜಕಾರಣ ಅಂದರೆ ಏನು? ಅದರ ಪಾವಿತ್ರ್ಯ ಏನು? ಜನ ಸೇವೆ ಮಾಡುವುದು ಹೇಗೆ? ಅದಕ್ಕೇನು ಅರ್ಹತೆ ಇರಬೇಕು? ಎಂಬುದ್ಯಾವುದೂ ರಾಬ್ಡಿ ದೇವಿ ವಿಷಯದಲ್ಲಿ ಮುಖ್ಯವಾಗಲೇ ಇಲ್ಲ. ಆಕೆಗಿದ್ದ ಅರ್ಹತೆ ಒಂದೇ. ಆಕೆ ಲಾಲೂ ಪ್ರಸಾದ್‌ರ ಹೆಂಡತಿ ಎಂಬುದು. ಹೀಗೆ ನೋಡನೋಡುತ್ತಿದ್ದಂತೆಯೇ ಒಂದೊಂದೇ ರಾಜ್ಯಗಳಲ್ಲಿ ಕುಟುಂಬ ರಾಜಕಾರಣದ ಕತ್ತಿ ನಳನಳಿಸತೊಡಗಿತು. ಒರಿಸ್ಸಾದಲ್ಲಿ ಬಿಜು ಪಾಟ್ನಾಯಕ್‌ರ ಮಗ ನವೀನ್ ಪಾಟ್ನಾಯಕ್ ಬಂದು ಕುಳಿತರು. ಇನ್ನು ತಮಿಳ್ನಾಡನ್ನು ಬಿಟ್ಟು ಬಿಡಿ. ಅದು ವಿಪರೀತದ ರಾಜಕೀಯ. ಒಂದೋ ಡಿಎಂಕೆ ಬರಬೇಕು, ಇಲ್ಲವೇ ಎಐಎಡಿಎಂಕೆ ಬರಬೇಕು. ಆದರೆ ಆಂಧ್ರಪ್ರದೇಶದಲ್ಲಿ ವಂಶಪಾರಂಪರ್ಯ ರಾಜಕಾರಣದ ಹೊಳಹು ಕಾಣಿಸಿಕೊಂಡಿತು. ಎನ್.ಟಿ.ರಾಮರಾಯರ ಅಳಿಯ ಚಂದ್ರಬಾಬು ನಾಯ್ಡು ಸಿಎಂ ಆದರು. ಆನಂತರ ವೈ.ಎಸ್.ರಾಜಶೇಖರ ರೆಡ್ಡಿ ಸಿಎಂ ಆದ ಕಾಲದಲ್ಲಿ ಡಿಫ್ಯಾಕ್ಟೋ ಮುಖ್ಯಮಂತ್ರಿಯಾಗಿ ಆಳಿದವರು ಜಗನ್‌ಮೋಹನ್ ರೆಡ್ಡಿ.

ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಅವರ ನಂತರ ಅವರ ಮಗ ಓಮರ್ ಅಬ್ದುಲ್ಲಾ, ಇಲ್ಲವೇ ಮುಫ್ತಿ ಮಹಮ್ಮದ್ ಸಯೀದ್ ಅಥವಾ ಅವರ ಪುತ್ರಿ. ಹೀಗೆ ನೋಡನೋಡುತ್ತಿದ್ದಂತೆಯೇ ಭಾರತ ಕ್ರಮೇಣ ಪುನಃ ಬ್ರಿಟಿಷ್ ಪೂರ್ವ ಇಂಡಿಯಾದ ಸ್ಥಿತಿಗೆ ಮರಳತೊಡಗಿತು. ಆಗ ಕೂಡ ಹಾಗೇ ತಾನೇ? ಎಲ್ಲಿ ನೋಡಿದರೂ ಸಂಸ್ಥಾನಗಳು? ಮಗ ಆದ ಮೇಲೆ ಮೊಮ್ಮಗ, ಮೊಮ್ಮಗ ಆದ ಮೇಲೆ ಮರಿ ಮಗ. ಹೀಗೆ ವಂಶಪಾರಂಪರ್ಯ ರಾಜಕಾರಣ ಎಂಬುದು ಬ್ರಿಟಿಷ್ ಪೂರ್ವ ಇಂಡಿಯಾದ ಸಾಮಾನ್ಯ ಚಹರೆಯೇ ಆಗಿಹೋಗಿತ್ತು. ಇಂತಹ ಚಹರೆ ಕಾಣಿಸಿಕೊಂಡಿದ್ದು ಎಂಬತ್ತರ ದಶಕದ ನಂತರ. ಆದರೆ ಯಾವಾಗ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆಯ ಮೇಲೆ ಬಂದು ಕೂತಿತೋ, ಆಗ ಹೊಸ ರಾಗ ಶುರುವಾಯಿತು. ಕೋಮುವಾದಿ ಬಿಜೆಪಿಯನ್ನು ಮಣಿಸಲು ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬುದು ಆ ರಾಗ. ಅರೇಸ್ಕಿ, ತಮ್ಮ ದರ್ಬಾರು ನಡೆಯುವಾಗ ತಮ್ಮ ಕುಟುಂಬದ ಕೈಲೇ ಅಧಿಕಾರ ಇರಬೇಕು ಎಂದವರು ಕೂಡ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂದು ಹೇಳತೊಡಗಿದರು.

ಖುದ್ದು ಸೋನಿಯಾ ಗಾಂಧಿ ಅವರೇ ಮಗ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಈ ದೇಶದ ಪ್ರಧಾನಿ ಪಟ್ಟದ ಮೇಲೆ ಕೂರಿಸಬೇಕು ಎಂದು ಹರಸಾಹಸ ಮಾಡಿದವರು ಕೂಡ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂದು ಮಾತನಾಡತೊಡಗಿದರು. ಬಿಹಾರದಲ್ಲಿ ಸಂಯುಕ್ತ ಜನತಾದಳದ ನಿತೀಶ್ ಕುಮಾರ್, ರಾಷ್ಟ್ರೀಯ ಜನತಾದಳದ ಲಾಲೂ ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ಪರಸ್ಪರ ಕೈ ಜೋಡಿಸಿದ್ದು ಕುಟುಂಬ ರಾಜಕಾರಣ ಇನ್ನು ನಡೆಯುವುದಿಲ್ಲ ಎಂಬ ಕನಿಷ್ಠ ಪ್ರಜ್ಞೆಯನ್ನು ಸೃಷ್ಟಿಸಿದ್ದು ನಿಜ. ಉತ್ತರ ಪ್ರದೇಶದಲ್ಲೂ ಸಮಾಜವಾದಿ ಪಕ್ಷದ ದಿಗ್ವಿಜಯಕ್ಕೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿಯ ಕಾಣಿಕೆ ದೊಡ್ಡದಿತ್ತು. ಆಕೆ ಹಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನೇ ನಿಲ್ಲಿಸಲಿಲ್ಲ. ಹೀಗಾಗಿ ಮುಸ್ಲಿಂ, ದಲಿತ ಹಾಗೂ ಯಾದವ ಮತಗಳು ಒಂದುಗೂಡಿದವು. ಆ ಮೂಲಕ ಸಮಾಜವಾದಿ ಪಕ್ಷ ಕಳೆದುಕೊಂಡ ಮಾನವನ್ನು ಕೊಂಚ ಮಟ್ಟಿಗೆ ಗಳಿಸುವಂತಾಯಿತು.

ಈಗ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಸರದಿ. ೨೦೧೧ರ ವಿಧಾನಸಭಾ ಚುನಾವಣೆಯಲ್ಲಿ ಮಾ(ತಾಯಿ) ಮಾಟಿ(ಮಣ್ಣು) ಮಾನುಷ್(ಮನುಷ್ಯ) ಎಂಬ ಘೋಷ ವಾಕ್ಯದೊಂದಿಗೆ ಕಮ್ಯುನಿಸ್ಟರ ಬೇರು ಅಲ್ಲಾಡಿಸಿ, ಬೀಳಿಸಿ ಅಧಿಕಾರಕ್ಕೆ ಬಂದವರು ಮಮತಾ. ಇದೀಗ ಅವರಿಗೂ ಕಮ್ಯುನಿಸ್ಟರ ಮೇಲೆ ಪ್ರೀತಿ ಹುಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತರು ಶೇಕಡಾ ಇಪ್ಪತ್ತೆಂಟರಷ್ಟಿದ್ದರೂ ಬಿಜೆಪಿ ಟೋಟಲಿ ಹಿಂದೂ ಮತಗಳ ಮೇಲೆ ಕಣ್ಣಿಟ್ಟು ಆಟವಾಡುತ್ತಿದೆಯಲ್ಲ? ಅದರ ಫೋರ್ಸು ತಡೆಯಬೇಕೆಂದರೆ ದಶಕಗಳ ಕಾಲದಿಂದ ತಾನೇ ವಿರೋಧಿಸುತ್ತಿದ್ದ ಕಮ್ಯುನಿಸ್ಟರ ಜೊತೆ ಕೈ ಜೋಡಿಸಬೇಕು, ಮರಳಿ ಸೋನಿಯಾ ಗಾಂಧಿಯ ಫ್ರೆಂಡ್‌ಷಿಪ್ಪು ಮಾಡಬೇಕು. ನಿಜಕ್ಕೂ ಇದು ಒಂದು ರೀತಿಯ ಪವಾಡವೇ. ಈ ಪೈಕಿ ಕೆಲವು ವಂಶಪಾರಂಪರ್ಯ ರಾಜಕಾರಣವಲ್ಲವಾದರೂ ಬಹುತೇಕವು ವಂಶಪಾರಂಪರ್ಯ ರಾಜಕಾರಣಕ್ಕೆ ಬುನಾದಿ ಹಾಕಿದ ಶಕ್ತಿಗಳು. ರಾಜಕಾರಣ ಎಂದರೆ ಕೆಲವೇ ಕುಟುಂಬಗಳ ಹಿಡಿತದಲ್ಲಿರಬೇಕು ಎಂದು ಬಯಸಿದಂತಹವು. ಅಂತಹ ವಾತಾವರಣವನ್ನು ಒಂದು ಸಲ ಬಿಜೆಪಿ ಬದಲಿಸಿತಲ್ಲ? ಇದಕ್ಕಾಗಿ ಅದು ಲವ್ ಜಿಹಾದ್‌ನಂತಹ ವಿಷಯವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಪ್ರತಿಬಿಂಬಿಸಿತು. ಹಿಂದೂಗಳ ಮತಗಳನ್ನು ಒಗ್ಗೂಡಿಸಲು ಹೆಣಗಾಡಿತು ಎಂಬುದನ್ನು ಗಮನದಲ್ಲಿಟ್ಟುಕೊಂಡರೂ ಈ ವಂಶಪಾರಂಪರ್ಯ ರಾಜಕಾರಣದ ಬುಡಕ್ಕೆ ಚೆನ್ನಾಗಿ ಬಡಿಯಿತು ಎಂಬುದು ನಿಜ.

ಅಂದಹಾಗೆ ರಾಜಕಾರಣವೆಂಬುದು ಯಾರೋ ಕೆಲವರ ಸ್ವತ್ತಾಗಬಾರದು. ಆಗ ರಾಜಕೀಯಕ್ಕೂ ಬಿಜಿನೆಸ್ಸಿಗೂ ವ್ಯತ್ಯಾಸವೇನು ಬಂತು? ಬಿಜಿನೆಸ್ಸಿಗೆ ಸ್ಪಷ್ಟವಾದ ಉದ್ದೇಶವಿರುತ್ತದೆ. ವ್ಯಾಪಾರಂ ದ್ರೋಹ ಚಿಂತನಂ ಎಂಬಂತೆ. ಲಾಭ ಮಾಡಲು ಏನು ಮಾಡಿದರೂ ನ್ಯಾಯ ಎಂಬುದು ಅದರ ನೀತಿ. ರಾಜಕಾರಣ ಹಾಗಲ್ಲ. ಅದಕ್ಕೂ ಒಂದು ಉದ್ದೇಶವಿರುತ್ತದೆ. ಆದರೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ನಷ್ಟವಾದರೂ ಸರಿ ಎಂಬ ಮನೋಭಾವ ಅದರದು. ಏನೇ ಆಗಲಿ, ಒಟ್ಟಿನಲ್ಲಿ ವ್ಯವಸ್ಥೆಗೆ ಒಳ್ಳೆಯದಾಗಬೇಕು ಎಂಬುದು ಅದರ ಗುರಿ. ಅಂತಹ ಗುರಿಯನ್ನು ಕಾಲು ಚೆಂಡಿನಂತೆ ಮಾಡಿಕೊಂಡು ಈ ದೇಶವನ್ನು ಕೆಲವೇ ಕುಟುಂಬಗಳು ಜಹಗೀರು ಮಾಡಿಕೊಳ್ಳಲು ಹೊರಟು ಬಿಟ್ಟಿದ್ದವಲ್ಲ? ಇಂತಹ ಅವಘಡವನ್ನು ತಡೆಗಟ್ಟಿದ್ದಕ್ಕಾಗಿ ಎನ್‌ಡಿಎ ಮೈತ್ರಿಕೂಟದ ಸರ್ಕಾರಕ್ಕೆ ಮತ್ತು ಅದರ ನಾಯಕ ನರೇಂದ್ರ ಮೋದಿಗೆ ಥ್ಯಾಂಕ್ಸ್ ಹೇಳಲೇಬೇಕು. ಹಾಗಂತ ಅವರು ಕೂಡ ಪರೋಕ್ಷವಾಗಿ ವಂಶಪಾರಂಪರ್ಯ ಬಿಜಿನೆಸ್ಸಿಗೆ ಕುಮ್ಮಕ್ಕು ನೀಡುತ್ತಾ ಹೋದರೆ ರಾಜಕೀಯ ಎಂಬುದು ಎಕ್ಕುಟ್ಟಿ ಹೋಗುತ್ತದೆ. ಅದು ಕೂಡ ಅಪಾಯವೇ.

ಈ ಸರ್ಕಾರ ಏನೇ ಮಾಡಿದರೂ ಕೆಲವೇ ಮಂದಿ ಬಿಜಿನೆಸ್‌ಮನ್‌ಗಳಿಗೆ ಲಾಭವಾದರೆ ಸಾಲದು. ಬದಲಿಗೆ ಜನಸಾಮಾನ್ಯರಿಗೆ ಲಾಭವಾಗಬೇಕು. ಬಡವರು, ಶ್ರೀಮಂತರ ನಡುವಣ ಅಂತರ ಕಡಿಮೆಯಾಗಬೇಕು. ಇಲ್ಲವಾದರೆ ಮೋದಿಯ ರಾಜಕೀಯವೂ ವಿಫಲವೇ ಆಗುತ್ತದೆ. ಇವತ್ತು ರಿಲಯನ್ಸ್‌ನ ಅಂಬಾನಿಯೋ, ಒಂದಾದ ಮೇಲೊಂದರಂತೆ ಕಲ್ಲಿದ್ದಲು ಗಣಿಗಳನ್ನು ಖರೀದಿಸುತ್ತಾ, ಭಾರತದ ವಿದ್ಯುತ್ ವ್ಯವಸ್ಥೆಯ ಮೇಲೇ ನಿಯಂತ್ರಣ ಸಾಧಿಸಲು ಹೊರಟ ಅದಾನಿಯಂತಹವರೋ ಮೆರೆಯಲು ಶುರು ಮಾಡಿದರೆ ಸಾಮಾನ್ಯ ಜನರ ಮೇಲೆ ಸಂಕಟ ಎಂಬುದು ಮತ್ತೊಂದು ರೂಪದಲ್ಲಿ ಹೆಗಲೇರಿದಂತಾಗುತ್ತದೆ. ಯಾಕೆಂದರೆ ದೇಶ ವಂಶಪಾರಂಪರ್ಯ ರಾಜಕಾರಣದ ಹಿಡಿತಕ್ಕೆ ಸಿಲುಕಿಕೊಳ್ಳುವುದು ಹೇಗೆ ಸಮಾಜವನ್ನು ಒಡೆಯುತ್ತದೋ, ಅದೇ ರೀತಿ ಕೆಲವೇ ಮಂದಿ ಉದ್ಯಮಿಗಳ ಹಿಡಿತಕ್ಕೆ ದೇಶ ಸಿಲುಕಿಕೊಂಡರೆ ದೇಶ ಶ್ರೀಮಂತರು-ಬಡವರು ಎಂದು ಒಡೆದು ಹೋಗುತ್ತದೆ.

ಈಗಾಗಲೇ ತಮ್ಮ ವಂಶಪಾರಂಪರ್ಯ ರಾಜಕಾರಣದ ಮೂಲಕ ಇಂತಹ ಎರಡು ವರ್ಗಗಳನ್ನು ನಮ್ಮ ರಾಜಕಾರಣಿಗಳು ಸೃಷ್ಟಿಸಿದ್ದಾರೆ. ಆದರೆ ಬಿಜಿನೆಸ್‌ಮನ್‌ಗಳು ಇಂತಹ ವರ್ಗಗಳ ನಡುವಣ ಅಂತರ ಪರಸ್ಪರ ಕೈಗೆಟುಕದ ರೀತಿಯಲ್ಲಿ ದೂರವಾಗುವಂತೆ ಮಾಡಿಬಿಡುತ್ತಾರೆ. ಅರ್ಥಾತ್ ಈಗ ಆಗಿರುವ ಬದಲಾವಣೆಗೆ ಖುಷಿಪಡಬಹುದಾದರೂ, ಮುಂದೆ ಅನರ್ಥವಾಗಬಾರದು ಎಂಬ ಚಿಂತೆ ಇದ್ದೇ ಇದೆ. ನರೇಂದ್ರ ಮೋದಿ ಆ ಚಿಂತೆಯನ್ನು ಅಳಿಸುತ್ತಾರೋ, ಉಳಿಸಿ ಬೆಳೆಸುತ್ತಾರೋ ಕಾದು ನೋಡಬೇಕು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 September, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books