Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಎಬೋಲಾ ಎಂಬ ವೈರಸ್ಸಿಗಿಂತ ದುರಾಸೆ ಎಂಬ ದುಷ್ಟ ವೈರಸ್ಸಿಗೆ ಮದ್ದೇನು?

ಎಬೋಲಾ!
ಈ ಹೆಸರು ಕೇಳಿದರೆ ಜಗತ್ತಿನ ಬಹುತೇಕ ರಾಷ್ಟ್ರಗಳು ಅಕ್ಷರಶಃ ತತ್ತರಿಸಿ ಹೋಗುತ್ತಿವೆ. ಜಗತ್ತು ಅದಕ್ಕೆ ಕೊಟ್ಟ ಹೆಸರು ಇವಿಡಿ (ಎಬೋಲಾ ವೈರಸ್ ಡಿಸೀಸ್) ಒಂದು ಸಲ ಎಬೋಲಾ ಬಂದರೆ ಉಳಿಯುವುದು ಕಷ್ಟ. ಇದ್ದಕ್ಕಿದ್ದಂತೆ ವಿಪರೀತ ಜ್ವರ, ನಿಶ್ಶಕ್ತಿ, ವಾಂತಿ, ಡಯೇರಿಯಾ, ಕೆಲವೊಮ್ಮೆ ಆಂತರಿಕ, ಬಾಹ್ಯ ರಕ್ತಸ್ರಾವ. ಹೀಗೆ ಜ್ವರದ ತಾಪ ಇದ್ದಕ್ಕಿದ್ದಂತೆ ಏರುತ್ತಾ ಹೋಗುತ್ತಿರುವ ಅದರ ವೇಗಕ್ಕೆ ಎಂತಹ ಶಕ್ತಿವಂತನೂ ನೆಲ ಕಚ್ಚಲೇಬೇಕು. ತಕ್ಷಣವೇ ಈ ವೈರಸ್‌ನ ಗುರುತು ಹಚ್ಚಿ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡಿದರೆ ರೋಗಿ ಬದುಕುಳಿಯಬಹುದೇನೋ? ದುರಂತವೆಂದರೆ ಈ ರೋಗಕ್ಕೆ ಇನ್ನೂ ಚಿಕಿತ್ಸೆ ಕಂಡು ಹಿಡಿಯಲಾಗಿಲ್ಲ. ಪಶ್ಚಿಮ ಆಫ್ರಿಕಾದ ನಾಲ್ಕು ರಾಷ್ಟ್ರಗಳಲ್ಲಿ ಈ ರೋಗದಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಬಳಲಿದ್ದಾರೆ. ಒಂದೂವರೆ ಸಾವಿರದಷ್ಟು ಜನ ತೀರಿಕೊಂಡಿದ್ದಾರೆ.

ಅಂದ ಹಾಗೆ ಪಶ್ಚಿಮ ಆಫ್ರಿಕಾದ ಜೈರೇ ಸಮೀಪ ಯಾಂಬೂಕು ಎಂಬ ಗ್ರಾಮವಿದೆ. ಇದರ ಸಮೀಪ ಎಬೋಲಾ ಎಂಬ ನದಿ ಹರಿಯುತ್ತದೆ. ಮೊಟ್ಟ ಮೊದಲು ಅಂದರೆ ೧೯೭೬ರಲ್ಲಿ ಈ ಎಬೋಲಾ ನದಿಯ ಸಮೀಪ ಇದ್ದ ಯಾಂಬೂಕು ಗ್ರಾಮದಲ್ಲಿ ಈ ರೋಗ ಪತ್ತೆಯಾಯಿತು. ಹಾಗಂತಲೇ ಇಲ್ಲಿ ಕಾಣಿಸಿಕೊಂಡ ವೈರಸ್ಸಿಗೆ ಎಬೋಲಾ ಅಂತ ಹೆಸರು ಬಂತು. ಆನಂತರ ಈ ವೈರಸ್ಸಿನ ಸುಳಿವು ಇರಲಿಲ್ಲ. ಆದರೆ ಕಳೆದ ವರ್ಷ ಮತ್ತೆ ಇದರ ಸುಳಿವು ಕಾಣಿಸಿಕೊಂಡಿತು. ೨೦೧೩ರ ಡಿಸೆಂಬರ್‌ನಲ್ಲಿ ಒಂದು ಮಗುವಿಗೆ ಈ ರೋಗ ಕಾಣಿಸಿಕೊಂಡಿತು. ಆನಂತರ ಇದರ ಛಾಯೆ ಕರಾಳವಾಗಿ ಆವರಿಸತೊಡಗಿತು. ಆಗ ಜಿನೇವಾದ ಆರೋಗ್ಯ ಸಚಿವಾಲಯ ಹಾಗೂ ಸ್ಯಾನ್ ಫ್ರಾಂಟಿಯರ್ ಮೆಡಿಸಿನ್ ಎಂಬ ಸರ್ಕಾರೇತರ ಸಂಸ್ಥೆಗಳು ಇದರ ಮೇಲೆ ಕಣ್ಣಿಟ್ಟವು. ಆದರೆ ಕೆಲವೇ ದಿನಗಳಲ್ಲಿ ಸ್ಯಾನ್ ಫ್ರಾಂಟಿಯರ್ ಮೆಡಿಸಿನ್ ಸಂಸ್ಥೆ, ಈ ರೋಗ ನಿಯಂತ್ರಣ ಮೀರಿದೆ ಎಂದು ಘೋಷಿಸಿತು. ಯಾವಾಗ ಅದು ಈ ರೀತಿ ಘೋಷಿಸಿತೋ, ಆಗ ವಿಶ್ವಬ್ಯಾಂಕ್ ಒಂದು ಸಾವಿರದ ನಾಲ್ಕು ನೂರಾ ನಲವತ್ತು ಕೋಟಿ ರುಪಾಯಿಗಳಷ್ಟು ಹಣವನ್ನು ಈ ಖಾಯಿಲೆ ನಿವಾರಿಸಲು ನೀಡಿತು. ಇದರ ಬೆನ್ನಲ್ಲೇ ಜನ ನಾಲ್ಕು ಸಾವಿರದ ಇನ್ನೂರಾ ಅರವತ್ತು ಕೋಟಿ ರುಪಾಯಿಗಳಷ್ಟು ಹಣ ಕೊಟ್ಟರು. ವಿಶ್ವ ಆರೋಗ್ಯ ಸಂಸ್ಥೆ ಒಂದು ಸಾವಿರದ ಇನ್ನೂರು ಕೋಟಿ ರುಪಾಯಿ ನೀಡಿತು.

ಆದರೆ ಜ್ವರದ ವೈರಸ್ ಒಂದೆರಡು ರೀತಿಯಲ್ಲಲ್ಲ, ಐದು ರೀತಿಯಲ್ಲಿ ಆವರಿಸತೊಡಗಿತು. ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ಪಕ್ಕದ ಚೀನಾ ಹಾಗೂ ಫಿಲಿಫೈನ್ಸ್‌ನಲ್ಲೂ ಈ ರೋಗದ ವೈರಸ್‌ಗಳು ಕಾಣಿಸಿಕೊಂಡವು. ಮನುಷ್ಯರು ಹಾಗೂ ಪ್ರಾಣಿಗಳ ಮಧ್ಯೆ ದ್ರವರೂಪದ ಚಟುವಟಿಕೆ ನಡೆದಾಗ ಈ ರೋಗ ತಗಲುತ್ತದೆ ಎಂಬುದು ಈಗಿನ ಮಾಹಿತಿ. ಹೀಗಾಗಿ ಜಗತ್ತಿನ ಎಲ್ಲ ದೇಶಗಳೂ ಅದರಲ್ಲೂ ಏಷ್ಯಾ, ಆಫ್ರಿಕಾ ಸೇರಿದಂತೆ ಅನೇಕ ಖಂಡಗಳಲ್ಲಿ ಈ ರೋಗದ ಮೇಲೆ ವಿಶೇಷ ನಿಗಾ ಇಡಲಾಗಿದೆ. ಭಾರತಕ್ಕೂ ವಿದೇಶಗಳಿಂದ ಬರುವ ಪ್ರವಾಸಿಗರ ಮೇಲೆ, ಅದರಲ್ಲೂ ವಿಶೇಷವಾಗಿ ಆಫ್ರಿಕಾದಿಂದ ಬರುವ ಪ್ರವಾಸಿಗರನ್ನು ಇಲ್ಲಿಳಿದ ಕೂಡಲೇ ತಪಾಸಣೆ ಮಾಡಿಯೇ ಒಳಕ್ಕೆ ಬಿಟ್ಟುಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲೂ ಇದರ ಬಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್ ವಿಶೇಷ ಆಸ್ಥೆ ವಹಿಸಿ ಕೆಲಸ ಮಾಡುತ್ತಿದ್ದಾರೆ. ಎಬೋಲಾ ಎಂಬ ಮಾರಕ ರೋಗದ ಕುರಿತು ಕಾನೂನು ಮತ್ತು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಎಷ್ಟು ಮಾಹಿತಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಅವರು ಹಸುಗಳಿಗೆ ಬರುವ ಕಾಲು-ಬಾಯಿ ರೋಗಕ್ಕೆ ವ್ಯಾಪಕ ಚಿಕಿತ್ಸೆ ನೀಡುವ ಉದ್ದೇಶದಿಂದ ಪಲ್ಸ್ ಪೋಲಿಯೋ ಮಾದರಿಯಲ್ಲಿ ಎಲ್ಲ ಪ್ರಾಣಿಗಳಿಗೂ ವ್ಯಾಕ್ಸಿನ್ ಹಾಕಿಸಲು ಮುಂದಾದರು.

ಕಳೆದ ವರ್ಷ ಮತ್ತು ಈ ವರ್ಷ ಈ ರೀತಿ ಶೇಕಡಾ ತೊಂಬತ್ತೈದರಷ್ಟು ವ್ಯಾಕ್ಸಿನ್ ಹಾಕಿಸಿದ ಪರಿಣಾಮವಾಗಿ ಉತ್ತಮ ಫಲಿತಾಂಶ ಬಂದಿದೆ. ಒಂದೆಡೆ ಕಾಲು-ಬಾಯಿ ರೋಗ ಹರಡಿಕೊಂಡಿದ್ದರೆ, ಆರೋಗ್ಯ ಸಚಿವರು ನಿಗಾ ವಹಿಸದಿದ್ದರೆ ಇಲ್ಲಿ ಏನೇನು ಕತೆಯಾಗುತ್ತಿತ್ತೋ? ಎಬೋಲಾ ಬಾರದಿದ್ದರೂ ಇನ್ನೇನೋ ರೋಗ ಆವರಿಸುತ್ತಿತ್ತೋ? ಈಗಲೇ ರಾಜ್ಯಾದ್ಯಂತ ಡೆಂಗ್ಯೂ, ಚಿಕೂನ್ ಗುನ್ಯಾದಂತಹ ಖಾಯಿಲೆಗಳು ವ್ಯಾಪಕವಾಗಿ ಹರಡುತ್ತಿವೆ. ಆರೋಗ್ಯ ಇಲಾಖೆ ಒಂದೇ ಇದನ್ನು ನಿಯಂತ್ರಿಸಲಾಗದ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಒಗ್ಗೂಡಿ ರೋಗಗಳ ವಿರುದ್ಧ ಸಮರ ಸಾರಬೇಕು. ಆದರೆ ಯಾರಿಗೋ ಅಧಿಕಾರದ ಸಮಾಧಾನ ಸಿಗಲಿ ಎಂದು ನಮ್ಮಲ್ಲಿ ಖಾತೆಗಳನ್ನು ಹಂಚಲಾಗಿದೆ. ವಾಸ್ತವವಾಗಿ ಆರೋಗ್ಯ ಇಲಾಖೆಯ ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಸೇರಿಸಿ ಅದು ಪರಿಣಾಮಕಾರಿಯಾಗುವಂತೆ ಮಾಡಬೇಕಿತ್ತು. ಆದರೆ ವೈದ್ಯಕೀಯ ಶಿಕ್ಷಣ ಎಂಬ ಪದವೇ ಎರಡು ಪ್ರತ್ಯೇಕ ಪದಗಳ ಪುಂಜ. ಒಂದು ಪದ ಆರೋಗ್ಯ ಇಲಾಖೆಯ ಜೊತೆ ಸಂಬಂಧ ಹೊಂದಿದ್ದರೆ ಮತ್ತೊಂದು ಪದಪುಂಜ ಉನ್ನತ ಶಿಕ್ಷಣ ಇಲಾಖೆಯ ಜೊತೆ ಸಂಬಂಧ ಹೊಂದಿದೆ. ಹೀಗಾಗಿ ಮೂರೂ ಇಲಾಖೆಗಳು ಪ್ರತ್ಯೇಕವಾಗಿ ಸಂದರ್ಭಕ್ಕೆ ಅನುಸಾರವಾಗಿ ಸಮರದ ರೂಪದಲ್ಲಿ ಯಾರೂ ಮುನ್ನುಗ್ಗಲು ಸಾಧ್ಯವಾಗುತ್ತಿಲ್ಲ.

ಶಿಕ್ಷಣವನ್ನೇ ತೆಗೆದುಕೊಳ್ಳಿ. ವೈದ್ಯಕೀಯ ಶಿಕ್ಷಣ ಇಲಾಖೆ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ಸಿಇಟಿ ಎಂಬ ವ್ಯವಸ್ಥೆಯನ್ನು ಹೇಗೆ ಅವಲಂಬಿಸಿದೆಯೋ, ಅದೇ ರೀತಿ ಇಂಜಿನೀರಿಂಗ್ ಕೋರ್ಸುಗಳ ಪ್ರವೇಶಕ್ಕೆ ಉನ್ನತ ಶಿಕ್ಷಣ ಇಲಾಖೆ ನಂಬಿಕೊಂಡಿದೆ. ಈ ಉನ್ನತ ಶಿಕ್ಷಣ ಇಲಾಖೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಪದ್ಧತಿಯನ್ನು ಜಾರಿಗೆ ತಂದು ರಾಜ್ಯದ ಮಕ್ಕಳಿಗೆ ಯಾವ ಮಟ್ಟದ ಗಂಡಾಂತರ ತಂದಿದೆ ಎಂದರೆ ಸಾವಿರಾರು ಮಕ್ಕಳು ಈ ವರ್ಷ ದಾರಿ ಕಾಣದೆ ಕಾಮೆಡ್-ಕೆ ಪರೀಕ್ಷೆಗೋ, ಖಾಸಗಿ ಕಾಲೇಜುಗಳ ಪ್ರವೇಶಕ್ಕೋ ಮೊರೆ ಹೋಗಿದ್ದಾರೆ. ಸರ್ಕಾರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಯಾವ ನೀತಿಯನ್ನು ಅನುಸರಿಸುತ್ತಿತ್ತೋ, ಆ ಆಫ್‌ಲೈನ್ ಪದ್ಧತಿಯನ್ನು ಕೈ ಬಿಟ್ಟು ಆನ್‌ಲೈನ್ ಪದ್ಧತಿಗೆ ಬಂದಿದೆ. ಖಾಸಗಿ ಕಾಲೇಜುಗಳು ಆಫ್‌ಲೈನ್ ಪದ್ಧತಿಯನ್ನು ಅನುಸರಿಸಿ ನಿರಾಯಾಸವಾಗಿ ಹಣ ಮಾಡುತ್ತಿವೆ. ಕೇಳಿದರೆ, ನಾವು ದಿನದಿಂದ ದಿನಕ್ಕೆ ಅಪ್‌ಡೇಟ್ ಆಗಬೇಕು ಎಂಬ ಮಾತು ಸರ್ಕಾರದಿಂದ ಕೇಳಿ ಬರುತ್ತದೆ. ಡೆಂಗ್ಯೂಗಿಂತ ಮಾರಕವಾದ ಎಬೋಲಾ ರೋಗಕ್ಕೆ ಇನ್ನೂ ಮದ್ದು ಕಂಡು ಹಿಡಿಯಲಾಗಿಲ್ಲ. ಅದಕ್ಕಾಗಿ ನಾವು ಕಳವಳ ಪಡಬೇಕು. ಆದರೆ ಆಫ್‌ಲೈನ್‌ನಿಂದ ಆನ್‌ಲೈನ್‌ಗೆ ಹೋಗಿಲ್ಲ ಎಂಬ ಕಾರಣಕ್ಕಾಗಿ ನಾಚಿಕೆ ಪಡಬೇಕಾದ ಅಗತ್ಯವಿಲ್ಲ.

ಮೊದಲು ನಮ್ಮ ಮಕ್ಕಳಿಗೆ ಅನುಕೂಲವಾಗಬೇಕು. ಕನಿಷ್ಠ ಈ ಪ್ರಜ್ಞೆಯೂ ಉನ್ನತ ಶಿಕ್ಷಣ ಇಲಾಖೆಗಿಲ್ಲ. ಈ ಖಾತೆಯ ಜವಾಬ್ದಾರಿ ವಹಿಸಿಕೊಂಡಿರುವ ಆರ್.ವಿ.ದೇಶಪಾಂಡೆ ಅವರಿಗೆ ಒಂದು ಸಲ ಮುಖ್ಯಮಂತ್ರಿಯಾದರೆ ಸಾಕು, ಅವರ ರಾಜಕೀಯ ಜೀವನದ ಬಹುಮುಖ್ಯ ಅಧ್ಯಾಯವೊಂದು ಪೂರ್ಣವಾಗುತ್ತದೆ. ಅದರ ಮೇಲೆ ಅವರಿಗೆ ಗಮನವಿದೆಯೇ ಹೊರತು, ನಮ್ಮ ಸಾವಿರಾರು ಮಕ್ಕಳು ವೃತ್ತಿಪರ ಕೋರ್ಸುಗಳ ಸೀಟು ಪಡೆಯಲಾಗದ ಅಸಹಾಯಕತೆಯ ಮೇಲಲ್ಲ. ಇದರ ಲಾಭ ಪಡೆದ ಕೆಲ ಅಧಿಕಾರಿಗಳು ಹಣದ ಆಸೆಗಾಗಿ ಕೆಲ ಖಾಸಗಿ ಕಾಲೇಜುಗಳ ಜೊತೆ ಕೈ ಜೋಡಿಸಿ, ಸಾಮಾನ್ಯ ಜನರಿಗೆ ಅರ್ಥವಾಗದ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಇವತ್ತು ಈ ಹಣದ ಆಸೆ ಎಂಬುದು ಎಬೋಲಾ ವೈರಸ್ಸಿಗಿಂತ ವ್ಯಾಪಕವಾಗಿ ಹರಡುತ್ತಿದೆ. ಎಬೋಲಾ ವೈರಸ್ಸನ್ನು ಇವತ್ತಲ್ಲ, ನಾಳೆ ತಡೆಯಬಹುದು. ಆದರೆ ದುರಾಸೆ ಎಂಬ ವೈರಸ್ಸನ್ನು ತಡೆಯುವುದು ಹೇಗೆ?

ಇವತ್ತು ದೇಶದ ಪ್ರಧಾನಿಯಾಗಿರುವ ಮೋದಿ ವೈಯಕ್ತಿಕವಾಗಿ ಭ್ರಷ್ಟ ಅಲ್ಲ. ಆದರೆ ಅವರ ಸುತ್ತ ನೆರೆದಿರುವ, ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಕೂರಿಸಲು ಏನೆಲ್ಲ ಸರ್ಕಸ್ಸು ಮಾಡಿರುವ ಕಾರ್ಪೊರೇಟು ಸಂಸ್ಥೆಗಳ ದುರಾಸೆಯ ವೈರಸ್ಸನ್ನು ಅವರು ಕಾಪಾಡಬೇಕಿದೆ. ಮಗುವಿಗಿಂತ ಹೆಚ್ಚಾಗಿ ಜತನದಿಂದ ಕಾಪಾಡಬೇಕಿದೆ. ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದ ಯೋಜನಾ ಆಯೋಗವನ್ನು ರದ್ದು ಮಾಡಲು ಅವರು ಹೊರಟಿದ್ದೇ ಈ ಗೆಳೆಯರಿಗೆ ಕೊಡುತ್ತಿರುವ ಮೊಟ್ಟ ಮೊದಲ ಬಹುಮಾನ. ಈ ಗೆಳೆಯರಲ್ಲಿ ಹಲವರು ಅದಾಗಲೇ ನಾಲಿಗೆ ಚಾಚಿ ತಮಗಿರುವ ಹಣದ ಹಸಿವನ್ನು ತೋರುತ್ತಿದ್ದಾರೆ. ಆದಷ್ಟು ಬೇಗ ದೇಶದ ಭೂಮಿ, ನೀರು, ವಿದ್ಯುತ್‌ನ್ನು ಕೊಳ್ಳೆ ಹೊಡೆಯಲು ಕಾಯುತ್ತಿದ್ದಾರೆ. ಮೋದಿ ಅದಕ್ಕೆ ಅವಕಾಶ ಮಾಡಿಕೊಡಲು ಸಜ್ಜಾಗಿದ್ದಾರೆ. ಕೇಳಿದರೆ ಮೋದಿ ಪರಮಶುದ್ಧ ಎಂಬ ಭಟ್ಟಂಗಿಗಳ ಮಾತು ಅಲೆ ಅಲೆಯಾಗಿ ತೇಲಿ ಬರುತ್ತದೆ. ಆದರೆ ನೆನಪಿಡಿ, ಮೋದಿ ಇವತ್ತು ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಹೊರಟಿದ್ದಾರೆ. ಇದರ ಮೊದಲ ಭಾಗವಾಗಿ ಬಿಜೆಪಿಯ ಹಿರಿಯ ತಲೆಗಳಾದ ಅಡ್ವಾಣಿ, ಮುರಳಿ ಮನೋಹರ ಜೋಷಿ, ಅರುಣ್ ಶೌರಿ ಥರದವರನ್ನು ದೂರ ಇಟ್ಟಿದ್ದಾರೆ. ಎರಡನೇ ಹಂತದಲ್ಲಿ ಬೆಳೆಯುತ್ತಿರುವ ನಾಯಕರ ಮೇಲೂ ಅವರ ಕಣ್ಣಿದೆ. ನಮ್ಮ ಅನಂತಕುಮಾರ್ ಮೊದಲಿನಿಂದಲೂ ಅಡ್ವಾಣಿ ಅವರ ಆಪ್ತ ಬಳಗದಲ್ಲಿದ್ದವರು. ಮೋದಿಗೆ ಅವರ ಮೇಲೆ ಕಣ್ಣಿದೆ. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅದನ್ನವರು ತೋರಿಸಿದ್ದಾರೆ.

ಇದರ ಬೆನ್ನಲ್ಲೇ ತನ್ನದಲ್ಲದ, ಮಗ ಮಾಡಿದ ತಪ್ಪಿಗೆ ಸದಾನಂದಗೌಡರ ರೈಲ್ವೇ ಖಾತೆಯನ್ನು ಇನ್ನಾರು ತಿಂಗಳಲ್ಲಿ ಕಿತ್ತುಕೊಳ್ಳಲು ನಿರ್ಧರಿಸಿದ್ದಾರೆ. ರಾಜ್‌ನಾಥ್‌ಸಿಂಗ್ ಅವರಂತಹ ಹಿರಿಯ ನಾಯಕನ ಮಗ ಯಾರಿಗೋ ಕೆಲಸ ಕೊಡಿಸುತ್ತೇನೆ ಅಂತ ಮಾಡಿದ ಭಾನಗಡಿಯನ್ನು ಪರಿಸಮಾಪ್ತಿಗೊಳಿಸುವ ನಾಟಕವಾಡಿದ್ದೂ ಇದೇ ಮೋದಿ. ನೋ, ನೋ, ಮಗ ಮಾಡಿದ ತಪ್ಪಿಗಾಗಿ ಅಪ್ಪ ಶಿಕ್ಷೆ ಅನುಭವಿಸುವುದು ಸರಿಯಲ್ಲ. ಕೊಟ್ಟಿರುವ ಹಣವನ್ನು ಹೋಗಿ ವಾಪಸು ಕೊಟ್ಟು ಬರಲಿ ಸಾಕು ಎಂದು ಆ ಕೆಲಸ ಮಾಡಿಸಿದ್ದಾರೆ. ಇದೆಲ್ಲ ಮುಂದಿನ ದಿನಗಳಲ್ಲಿ ಬಿಜೆಪಿಯ ಸೆಕೆಂಡ್ ಲೈನ್ ಲೀಡರುಗಳನ್ನು ಮೋದಿ ದೂರ ತಳ್ಳುತ್ತಾರೆ. ಅಪ್ರಸ್ತುತಗೊಳಿಸುತ್ತಾರೆ ಎಂಬುದರ ಸಂಕೇತ. ಇದು ಕೂಡ ಸರ್ವಾಧಿಕಾರ ಎಂಬ ವೈರಸ್ಸು, ದುರಾಸೆಯ ವೈರಸ್ಸು ಸರ್ವಾಧಿಕಾರವನ್ನು ಬಯಸುವ ವೈರಸ್ಸಿನ ಜೊತೆ ಸೇರಿದರೆ ಅದಕ್ಕೆ ಚಿಕಿತ್ಸೆ ನೀಡುವುದು ಬಹಳ ಕಷ್ಟ. ಉದಾಹರಣೆಗೀಗ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯನ್ನೇ ತೆಗೆದುಕೊಳ್ಳಿ. ಕಮ್ಯುನಿಸ್ಟರು ಅಭೇದ್ಯ ಕೋಟೆಯನ್ನು ೨೦೧೧ರಲ್ಲಿ ಛಿದ್ರ ಮಾಡಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದವರು ಆಕೆ.

ಆದರೆ ಇವತ್ತು ಅವರೇ ಶಾರದಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಒರಿಸ್ಸಾ ಸೇರಿದಂತೆ ವಿವಿಧ ರಾಜ್ಯಗಳ ಮೂವತ್ತೈದು ಲಕ್ಷ ಜನರ ಬಳಿ ಹಣ ಸಂಗ್ರಹಿಸಿದ ಶಾರದಾ ಸಂಸ್ಥೆಯ ಮುಖ್ಯಸ್ಥನ ಹೆಸರು ಸುದೀಪ್ತೋ ಸೇನ್. ಈತ ಕಳೆದ ಕೆಲ ವರ್ಷಗಳಿಂದ ಜನರಿಗೆ ಶ್ರೀಮಂತರಾಗುವ ಕನಸು ಮೂಡಿಸಿ ಮೂವತ್ತು ಸಾವಿರ ಕೋಟಿ ರುಪಾಯಿಗಳಷ್ಟು ಹಣವನ್ನು ಸಂಗ್ರಹಿಸಿ ಕೈ ಎತ್ತಿದ್ದಾನೆ. ಇದೀಗ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಈ ಹಗರಣದ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ. ಆರ್ಥಿಕ ಜಾರಿ ನಿರ್ದೇಶನಾಲಯವೂ ಈ ಭಾರೀ ಹಗರಣದ ಕುರಿತು ತನಿಖೆ ನಡೆಸುತ್ತಿದೆ. ಮಮತಾ ಬ್ಯಾನರ್ಜಿ ಕೇಂದ್ರದಲ್ಲಿ ರೈಲ್ವೇ ಸಚಿವರಾಗಿದ್ದರಲ್ಲ? ಆ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸಂಪ್ರೀತಗೊಳಿಸಲು ನೂರು ಕೋಟಿ ರುಪಾಯಿಗಳಷ್ಟು ಹಣವನ್ನು ಸುದೀಪ್ರೋ ಸೇನ್ ಬಳಸಿದ್ದಾನೆ. ಇದಾದ ನಂತರ ೨೦೧೧ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲ್ಲಲಿ ಎಂದು ದಂಡಿಯಾಗಿ ಹಣ ಸುರಿದಿದ್ದಾನೆ. ಇವತ್ತು ಮಮತಾ ಬ್ಯಾನರ್ಜಿ ಸಚಿವ ಸಂಪುಟದ ಸಚಿವರು, ಸಂಸದರನೇಕರು ಈ ಸುದೀಪ್ತೋ ಸೇನ್‌ನಿಂದ ಹಣ ಪಡೆದಿದ್ದಾರೆ ಎಂಬ ದೂರಿದೆ. ಅವರು ಮಾತ್ರ ಅಂತಲ್ಲ. ಖ್ಯಾತ ನಿರ್ದೇಶಕಿ ಅಪರ್ಣಾ ಸೇನ್ ಹಾಗೂ ನಟ ಮಿಥುನ್ ಚಕ್ರವರ್ತಿ ಅವರ ಹೆಸರುಗಳೂ ಈ ಹಗರಣದಲ್ಲಿ ಕೇಳಿ ಬರುತ್ತಿವೆ. ಕೇಳಿದರೆ ನಾವು ಶಾರದಾ ಮೀಡಿಯಾಗಾಗಿ ಕೆಲಸ ಮಾಡಿದ್ದೇವೆ. ಹೀಗಾಗಿ ಕೆಲಸಕ್ಕಾಗಿ ಪ್ರತಿಫಲ ಪಡೆಯುವುದು ಬೇರೆ. ಆದರೆ ಹಗರಣ ಮಾಡುವುದು ಬೇರೆ. ಹೀಗಾಗಿ ನಮಗೂ ಅದಕ್ಕೂ ಸಂಬಂಧವಿಲ್ಲ ಅಂತ ಈ ಇಬ್ಬರೂ ಹೇಳಿಕೊಳ್ಳುತ್ತಿದ್ದಾರೆ.

ಆದರೆ ಹಗರಣದ ಬಿಸಿ ಮಮತಾ ಬ್ಯಾನರ್ಜಿ ಅವರನ್ನು ಯಾವ ಪರಿ ಕಂಗಾಲು ಮಾಡಿದೆ ಎಂದರೆ ಆಕೆ ಈಗ, ಕೋಮುವಾದ ಶಕ್ತಿಗಳನ್ನು ಬಗ್ಗು ಬಡಿಯಲು ಕಮ್ಯುನಿಸ್ಟರ ಜೊತೆ ಕೈ ಜೋಡಿಸಲೂ ತಯಾರು ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಅವರಿಗೀಗ ಶಾರದಾ ಹಗರಣದಿಂದ ಬಚಾವಾಗಲು ಕಮ್ಯುನಿಸ್ಟರ ನೆರವು ಬೇಕು. ಇದಕ್ಕೇನೆನ್ನಬೇಕು? ಪಶ್ಚಿಮ ಬಂಗಾಳದಲ್ಲಿ ಈ ಕತೆಯಾದರೆ ಒರಿಸ್ಸಾದಲ್ಲಿ ಎಬೋಲಾಗಿಂತ ಪರಿಣಾಮಕಾರಿಯಾದ ಅಸೂಯೆ, ದುರಾಸೆ ಅಲ್ಲಿನ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರನ್ನು ಕಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆ ರಾಜ್ಯದ ಇಪ್ಪತ್ತೊಂದು ಲೋಕಸಭಾ ಸೀಟುಗಳ ಪೈಕಿ ಇಪ್ಪತ್ತು ಸೀಟುಗಳನ್ನು ಅವರ ನೇತೃತ್ವದ ಬಿಜು ಜನತಾದಳ ಗೆದ್ದಿದೆ. ಆದರೆ ರಾಜ್ಯದ ಅಹವಾಲು ಹೇಳಿಕೊಳ್ಳಲು ದಿಲ್ಲಿಗೆ ಹೋದರೆ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷದ ಜಯಪಾಂಡ ಅವರನ್ನು ಆತ್ಮೀಯವಾಗಿ ಮಾತನಾಡಿಸುತ್ತಾರೆ, ಕ್ಷೇಮ ವಿಚಾರಿಸುತ್ತಾರೆ, ರಾಜ್ಯಕ್ಕೆ ಏನೇ ಬೇಕೆಂದರೂ ನೀವೇ ನನ್ನ ಬಳಿ ಹೇಳಿ ಎಂದು ಹೇಳುತ್ತಾರೆ.

ಮೋದಿ ಮತ್ತು ಜಯಪಾಂಡ ನಡುವಣ ಈ ಆತ್ಮೀಯತೆ ನವೀನ್ ಪಾಟ್ನಾಯಕ್‌ರ ನಿದ್ದೆಗೆಡಿಸಿದೆ. ಅವರಿಗೀಗ ರಾಜ್ಯದಲ್ಲೇ ಜಯಪಾಂಡ ಪ್ರತಿಸ್ಪರ್ಧಿಯಾಗಬಹುದು ಎಂಬ ಆತಂಕ. ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪದಿಂದ ಹಿಡಿದು ಹಲ ನಿಕ್ಷೇಪಗಳನ್ನು ಸತ್ಯನಾರಾಯಣ ಪ್ರಸಾದದಂತೆ ತಿಂದರೂ ನವೀನ್ ಪಾಟ್ನಾಯಕ್ ಅವರಿಗೆ ಸಾಕಾಗುತ್ತಿಲ್ಲ. ಏನೇ ಆಗಲಿ, ತಮ್ಮ ಸಾಮ್ರಾಜ್ಯ ಮುಂದುವರಿದರೆ ತಾನೇ ಇಂತಹದನ್ನೆಲ್ಲ ಮಾಡಲು ಸಾಧ್ಯ? ಇದಕ್ಕೆ ನಾಳೆ ಮೋದಿ ಮೂಲಕ ಜಯಪಾಂಡ ಅಡ್ಡಿಯಾದರೆ? ಇದು ನವೀನ್ ಪಾಟ್ನಾಯಕ್‌ರ ಆತಂಕ. ಹೀಗೆ ಒಂದು ಕಡೆಯಿಂದ ನೋಡುತ್ತಾ ಹೋದರೆ ನಮ್ಮ ರಾಜಕೀಯ ನಾಯಕರ ದುರಾಸೆಯ ಪ್ರಮಾಣ ಲೆವೆಲ್ಲು ಮೀರಿ ಬೆಳೆಯುತ್ತಿದೆ. ಅವರನ್ನು ನೋಡಿ ಜನರ ದುರಾಸೆಯೂ ಮಿತಿ ಮೀರುತ್ತಿದೆ. ಅವರಿಗೀಗ ಕಾಯಕವೇ ಕೈಲಾಸ. ಅದರಲ್ಲಿರುವ ನೆಮ್ಮದಿ ಯಾವುದರಲ್ಲೂ ಇಲ್ಲ ಎಂಬುದನ್ನು ಹೇಳುವ ಮಾಡೆಲ್ಲುಗಳೇ ಇಲ್ಲ. ಇದ್ದರೂ ಅವರನ್ನು ನೋಡುವ ವ್ಯವಧಾನವಿಲ್ಲ.

ಉದಾಹರಣೆಗೆ ಕರ್ನಾಟಕವನ್ನೇ ತೆಗೆದುಕೊಳ್ಳಿ. ಸಿದ್ದರಾಮಯ್ಯ ಸಿಎಂ ಆದಾಗ ಅನ್ನಭಾಗ್ಯದಂತಹ ಮಹತ್ವದ ಯೋಜನೆಯನ್ನು ಜಾರಿಗೆ ತಂದರು. ಅದು ಸಂಪೂರ್ಣವಾಗಿ ಸಮಾಜವಾದಿ ಚಿಂತನೆಯ ಫಲ ಎಂಬುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಅವರು ಅಧಿಕಾರಕ್ಕೆ ಬಂದಾಗ ಅವರ ಕಣ್ಣ ಮುಂದೆ ಒಂದು ವರದಿ ಇತ್ತು. ಅದೆಂದರೆ ದಕ್ಷಿಣ ಭಾರತದ ಪ್ರಮುಖ ನಾಲ್ಕು ರಾಜ್ಯಗಳ ಪೈಕಿ ಬಡತನ ರೇಖೆಗಿಂತ ಕೆಳಗಿರುವ ಹೆಚ್ಚು ಜನ ಕರ್ನಾಟಕದಲ್ಲಿದ್ದಾರೆ ಎಂಬುದು. ನೆರೆಯ ಕೇರಳದಲ್ಲಿ ಈ ಪ್ರಮಾಣ ಶೇಕಡಾ ಹನ್ನೆರಡರಷ್ಟಿದ್ದರೆ, ತಮಿಳ್ನಾಡಿನಲ್ಲಿ ಶೇಕಡಾ ಹದಿನೇಳರಷ್ಟಿತ್ತು. ಆಂಧ್ರಪ್ರದೇಶದಲ್ಲಿ ಶೇಕಡಾ ಇಪ್ಪತ್ತೊಂದರಷ್ಟಿತ್ತು. ಆದರೆ ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇಕಡಾ ಇಪ್ಪತ್ಮೂರರಷ್ಟಿತ್ತು. ಇದನ್ನು ಗಮನದಲ್ಲಿಟ್ಟುಕೊಂಡ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ಒಂದು ರುಪಾಯಿಗೆ ಒಂದು ಕೆಜಿಯಂತೆ ಅಕ್ಕಿ ಕೊಟ್ಟರು. ಇದಕ್ಕಾಗಿ ರಾಜ್ಯ ವ್ಯಯಿಸುತ್ತಿರುವುದು ನಾಲ್ಕೂವರೆ ಸಾವಿರ ಕೋಟಿ ರುಪಾಯಿ.

ಆದರೆ ಯೋಜನೆಯ ಅರ್ಧಕ್ಕಿಂತ ಹೆಚ್ಚು ಪಾಲು ಅಕ್ಕಿ ಕಳ್ಳಸಾಗಣೆಯಾಗುತ್ತಿದೆ. ನೆರೆಯ ತಮಿಳ್ನಾಡಿನ ಅಮ್ಮಾ ಕ್ಯಾಂಟೀನಿಗೂ ಈ ಅಕ್ಕಿ ಹೋಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದರೆ ದುರಾಸೆ ಎಂಬ ವೈರಸ್ಸು ಎಬೋಲಾಗಿಂತ ಯಾವ ಮಟ್ಟದಲ್ಲಿ ಹೆಚ್ಚಾಗಿರಬೇಕು? ಇವತ್ತಲ್ಲ, ನಾಳೆ ಎಬೋಲಾ ವೈರಸ್ಸಿಗೆ ಮದ್ದು ಕಂಡು ಹಿಡಿಯಬಹುದು. ಆದರೆ ನಾಯಕರ, ಜನರ ದುರಾಸೆ ಎಂಬ ವೈರಸ್ಸಿಗೆ ಮದ್ದು ಕಂಡು ಹಿಡಿಯುವುದು ಹೇಗೆ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 September, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books