Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಪ್ರತಿಯೊಬ್ಬ ಬರಹಗಾರನೂ ಅಂಥ ಜೇಡ ಗೂಡಿನೊಳಗೆ ಪದೇಪದೆ ಸಿಕ್ಕಿಬೀಳುತ್ತಾನೆ!

ಕೇಳಲಿಕ್ಕೆ ಸಮಯ ಅಂತ ಇಲ್ಲವಾದರೂ ಬರೆಯುವಾಗ ಸುಸ್ತೆನ್ನಿಸಿದರೆ ಜೊತೆಗಿರಲಿ ಅಂತ ಒಂದಷ್ಟು ಹಾಡುಗಳನ್ನು ಜೊತೆಗಿಟ್ಟುಕೊಂಡಿದ್ದೇನೆ. ಇಷ್ಟು ವರ್ಷ ಎಲ್ಲಿಗೆ ಹೋದರೂ ಟೇಪ್‌ರೆಕಾರ್ಡರು, ಸಿ.ಡಿ.ಪ್ಲೇಯರು ಒಯ್ಯಬೇಕಾಗಿ ಬರುತ್ತಿತ್ತು. ಈಗ ತುಂಬ ಹಗುರವಾದ ಪುಟ್ಟ laptopನಲ್ಲಿ ಸಾವಿರಾರು ಹಾಡು ಹಿಡಿಸುತ್ತವೆ. ಅಮೆರಿಕದ BOSE ಕಂಪೆನಿ ಯದೊಂದು ಪುಟ್ಟ system ಖರೀದಿಸಿ ತಂದಿದ್ದೇನೆ. ಅದರ ಸ್ಪೀಕರುಗಳು ಎಷ್ಟು ಸೊಗಸಾಗಿವೆಯೆಂದರೆ, ಕೇಳಿ ಬರುವ ಹಾಡಿನೊಳಗಿನ ದುಃಖ ನಿಜಕ್ಕೂ ನನ್ನದೇ ದುಃಖ ಅನ್ನಿಸುತ್ತದೆ. ಯಾರೋ ಹಾಡುತ್ತ ಹಾಡುತ್ತ ಹತ್ತಿರಕ್ಕೆ ಬಂದು ಕಲ್ಲಾಗಿ ಕುಳಿತವನ ಭುಜವನ್ನು ಸುಮ್ಮನೆ ಬೆರಳಿನಿಂದ ತಾಕಿದಂತೆ! "ತೊರೆದು ಹೋಗದಿರೂ ಜೋಗೀ...'' ಅಂತ ಒಂದು ಭಾವಗೀತೆ ಕೇಳಿದೆ. ಘನೀಭೂತಗೊಂಡ ಕಣ್ಣಹನಿಯೊಂದು ತುಂಬ ಹೊತ್ತು ನನ್ನ ಕೆನ್ನೆಯ ಮೇಲೆ ಸ್ಥಾಪಿತವಾಗಿತ್ತು. ದುಃಖವನ್ನು ಕೂಡ ಹೀಗೆ off and on ಮಾಡಿಕೊಳ್ಳದೆ, ಆವಾಹಿಸದೆ, ಉಚ್ಚಾಟಿಸದೆ ಸ್ಥಾಯಿಯಾಗಿ ಸುಮ್ಮನೆ ಅನುಭವಿಸಿ ಅವೆಷ್ಟು ವರ್ಷಗಳಾಗಿದ್ದವೋ? ಈ ಜಗತ್ತಿಗೆ ನಾನು ಏನನ್ನು ಬೇಕಾದರೂ ಚೀರಿ, ದೊಡ್ಡ ದನಿಯಲ್ಲಿ ಹೇಳಬಲ್ಲೆ. ನನ್ನ ದನಿ ಎಲ್ಲರನ್ನೂ ತಾಕುತ್ತದೆ, ಎಚ್ಚರಿಸುತ್ತದೆ, ನನಗೆ ಎಕ್ಸ್‌ಪ್ರೆಶನ್ ಒಂದು ಸಮಸ್ಯೆಯೇ ಅಲ್ಲ: ನಾನು ಭಯಂಕರ ಆರ್ಟಿಕ್ಯುಲೇಟ್ ಅನ್ನೋ ಅಹಂಕಾರ ನನಗಿತ್ತು. ಈಗ ಅರ್ಥವಾಗುತ್ತಿದೆ: ನಾವು ಅಂದುಕೊಂಡಿದ್ದರಲ್ಲಿ, ಅನುಭವಿಸಿದ್ದರಲ್ಲಿ ಸುಮ್ಮನೆ ಹತ್ತು ಪರ್ಸೆಂಟಿನಷ್ಟನ್ನೂ ಹೇಳಿಕೊಳ್ಳಲು ನಮ್ಮಿಂದ ಆಗುವುದಿಲ್ಲ. ನಮ್ಮ ಶಬ್ದಗಳೇ ಬಲಹೀನ. ಯಾರಿಗೆ ನಾವು ಏನನ್ನು ಹೇಳಬಯಸುತ್ತೀವೋ, ಅವರಿಗೆ ನಮ್ಮ ಮನವೇ ಅರ್ಥವಾಗುವುದಿಲ್ಲ, ಇನ್ನು ಮಾತೆಲ್ಲಿ ಅರ್ಥವಾದಾವು?

ಜೊತೆಯಲ್ಲಿದ್ದ ಎರಡು ಮೊಬೈಲುಗಳನ್ನು discard ಮಾಡಿರುವುದರಿಂದ ಯಾವುದೇ ಜಂಜಡವಿಲ್ಲ. ಬಾಗಿಲು ಬಿದ್ದ ಕೋಣೆಯೊಳಗೆ ಸತತ ದೀಪ ಉರಿಯುತ್ತಿದೆ. ಯಾರೋ tea ಮಾಡಿಟ್ಟು ಹೋಗುತ್ತಾರೆ. ಒಂದು ಭಯಾನಕ ವೃಣವನ್ನ ಒಬ್ಬನೇ ಕುಳಿತು ದಿನಗಟ್ಟಲೆ ಅನುಭವಿಸಿ, ಆ ಯಾತನೆ ಕಳೆದುಕೊಂಡು ಮತ್ತೆ ಕೋಣೆಯಿಂದ ಹೊರಬೀಳಬೇಕು. ಹೊರಗಿನ ಜಗತ್ತಿಗೆ ಯಾವುದನ್ನೂ ಹೇಳಿಕೊಳ್ಳಬಾರದು. ಉರ್ದು ಕವಿ ತುಂಬ ಚೆನ್ನಾಗಿ ಬರೆದಿದ್ದಾನೆ; "ಇದು ಕೈಯಲ್ಲಿ ನುರಿದ ಉಪ್ಪು ಹಿಡಿದುಕೊಂಡು ತಿರುಗುತ್ತಿರುವವರ ಪ್ರಪಂಚ. ಯಾಕೆ ಸುಳ್ಳೇ ನಿನ್ನ ಧಗಧಗ ಗಾಯ ತೋರಿಸಿಕೊಂಡು ಓಡಾಡುತ್ತೀ?'' ನಾನು ಗಾಯಗಳೊಂದಿಗೆ ಬದುಕುವುದನ್ನು ಅಭ್ಯಾಸ ಮಾಡಿಕೊಂಡಿರುವ ಮನುಷ್ಯ. ಯಾವ ನೋವೂ ನನ್ನನ್ನು ಅದೇ ಅಸಹನೀಯ ಸ್ಥಿತಿಯಲ್ಲಿ ತುಂಬ ದಿನ ಇಟ್ಟಿಲ್ಲ. ನೆನಪು ಹೇಗೆ ನನ್ನ ಆಸ್ತಿಯೋ, ಮರೆವೂ ನನ್ನ ತಿಜೋರಿಯಲ್ಲಿರುವ ವರವೇ. ಬೇಸರ, ಯಾತನೆ ವಿಪರೀತ ಜಾಸ್ತಿಯಾದಾಗ ಫಕ್ಕನೆ ಕೆಲಸಕ್ಕೆ ಅಮರಿಕೊಂಡು ಕುಳಿತುಬಿಡುತ್ತೇನೆ. ಕೆಲಸ ಮಾಡಿ ಮಾಡಿ ಬೇಸರವಾ ದಾಗ ಪೂರ್ತಿ ಹದಿನೆಂಟು ತಾಸಿನ ನಂತರ ಹತ್ತಿಪ್ಪತ್ತು ನಿಮಿಷದ ಮಟ್ಟಿಗೆ ಮತ್ತೆ ದುಃಖ, ದುಃಖ. ಅದು ಚೆನ್ನಾಗೂ ಇರುತ್ತದೆ. ಒಬ್ಬಂಟಿಯಾಗಿರುವುದನ್ನು ಫಾಯ್ದೆಗೆ ಬಳಸಿಕೊಳ್ಳುವ ಮನುಷ್ಯನಿಗೆ ನೀವು ಅದಿನ್ಯಾವ ಶಿಕ್ಷೆ ಕೊಡಲು ಸಾಧ್ಯ? ದುಃಖಪಡುತ್ತ ಕುಳಿತರೆ ಯಾವತ್ತಿಗೂ ಅದು ಮುಗಿಯುವುದಿಲ್ಲ. ಯಾರೂ ಮರೆವಾಗುವುದಿಲ್ಲ. ಕೆಲಸ ಕೂಡ ಮಾಡದೆ ಕುಳಿತರೆ, ನಡೆವ ದಾರಿಯಲ್ಲಿ ನಾವು ಹೆಜ್ಜೆ ಮೂಡಿಸದೆ ಹೋದರೆ, ಈ ಜಗತ್ತು ನಮ್ಮನ್ನು ಮರೆತು ಮುಂದಕ್ಕೆ ಹೋಗುತ್ತದೆ. ಹಾಗಾಗದಿರಲಿ ಎಂಬ ಕಾರಣಕ್ಕೇ ಬರೆಯಲು ಕೂಡುತ್ತೇನೆ. ನಾನು ಸುಖಿ.

ನಂಗೊತ್ತು, ಈಗೊಂದಷ್ಟು ದಿನಗಳಿಂದ ಬದುಕು ಖಿನ್ನಗೊಂಡಿದೆ. ಕಣ್ಣು ಮಂಕಾಗಿವೆ. ನನ್ನಂಥ ಒರಟ ಕೂಡ ಸಣ್ಣದಕ್ಕೂ ಕಣ್ತುಂಬಿಕೊಳ್ಳುವಷ್ಟು ಭಾವುಕತೆಗೆ ಈಡಾಗಿಬಿಟ್ಟಿದ್ದೇನೆ. ಆದರೆ ಇದೆಲ್ಲ ಎಷ್ಟು ದಿನ? ಒಂದು ಬೇಸರದ ಸಂಜೆ ಕಳೆಯಲು ಜೊತೆಗೊಂದು ಹಾಡು ಸಾಕು. ಒಂದು ದುಃಖ ಮರೆಯಲು ಸ್ವಲ್ಪ ದಿನದ ಒಂಟಿತನ ಸಾಕು. "ಕೆಲವು ದಿನ ಬೇಕಾದರೆ ನಮ್ಮ ಮನೆಯಲ್ಲಿ ಇದ್ದು ನಿಮ್ಮ ಪಾಡಿಗೆ ನೀವು ಬರೆಯುತ್ತಿರಿ. ನಾನು disturb ಮಾಡೋದಿಲ್ಲ. ಊಟ ತಿಂಡಿ ಸಿಗರೇಟು ಎಲ್ಲ ವ್ಯವಸ್ಥೆ ಮಾಡಿ ನಿಮಗೆ ತಕ್ಷಣ ಸಿಗೋ ಹಾಗೆ ಜೋಡಿಸಿಟ್ಟು ಕೆಲಸಕ್ಕೆ ಹೋಗ್ತೀನಿ. ಸ್ವಲ್ಪ ದಿನದ ಮಟ್ಟಿಗೆ ಮನೆಯ ಫೋನೂ ತೆಗೆದಿಟ್ಟುಬಿಡ್ತೀನಿ. ನೀವಾಗಿ ಮಾತಾಡಿಸದ ಹೊರತು ಮಾತಾಡಿಸಲ್ಲ. ನಿಮ್ಮನ್ನ disturb ಮಾಡಲ್ಲ. ಬಂದು ಬಿಡಿ ನನ್ನ ಮನೇಗೆ ಅಂದಳು ಆಕೆ. ಆಕೆ ನನ್ನ ಒಳ್ಳೆಯ ಗೆಳತಿ. ಸಾಫ್ಟ್‌ವೇರ್ ಇಂಡಸ್ಟ್ರಿಯೊಂದರಲ್ಲಿ ಕೆಲಸ ಮಾಡುತ್ತಿ ದ್ದಾಳೆ. ಆಕೆಯ ಮದುವೆ, ಅದು ಮುರಿದು ಬಿದ್ದ ರೀತಿ ಎರಡನ್ನೂ ಹತ್ತಿರದಿಂದ ನೋಡಿದವನು ನಾನು. ತನ್ನ ಮನೆಗೆ ಬಂದು ಕುಳಿತು ನನ್ನ ಪಾಡಿಗೆ ನಾನು ಬರೆಯುತ್ತಿರಲಿ ಅಂತ ಬಯಸಿದುದರಲ್ಲಿ ಆಕೆಯ ಯಾವ ಸ್ವಾರ್ಥವೂ ಇಲ್ಲ. ಆದರೆ ಒಪ್ಪಿ ಕೊಂಡ ಜವಾಬ್ದಾರಿಗಳು ಮುಗಿಯುವ ತನಕ ನಾನು ಈ ಕ್ಯೂಬಿಕಲ್ ಬಿಟ್ಟು ಕದಲಲಾರೆ. ಖಾಸಗಿಯಾದ ದುಃಖ, ನೋವು, ರುಜಿನಗಳನ್ನು ಖಾಸಗಿಯಾಗೇ ಇಟ್ಟುಕೊಳ್ಳಬೇಕು. ರಸ್ತೆಗೆ ಇಳಿದು ದಾರಿಯುದ್ದಕ್ಕೂ ಬಿಕ್ಕುವ ವಯಸ್ಸಲ್ಲ ನನ್ನದು. ನಾನು ಅಷ್ಟೆಲ್ಲ ಬಲಹೀನನೂ ಅಲ್ಲ. "ಹ್ಯಾಗೆ ನಿನ್ನನ್ನು ದುಃಖಕ್ಕೆ ಈಡು ಮಾಡಿದೆ ನೋಡು'' ಅಂದು ಕೊಳ್ಳುವವರಿಗೆ ಆ ಸಂತೋಷವನ್ನು ತುಂಬ ದಿನ ಅನುಭವಿಸಲು ಬಿಡುವವನೂ ಅಲ್ಲ.

ಬಳ್ಳಾರಿಯಲ್ಲಿದ್ದಾಗ ಇದೇ ತೆರನಾದ ಖಿನ್ನತೆಗೆ ಒಳಗಾಗುತ್ತಿದ್ದುದು ನನಗೆ ನೆನಪಿದೆ. ಜೊತೆಯಲ್ಲಿ ತುಂಬ ಪ್ರೀತಿಸುವ, ನನ್ನನ್ನು ಯಾವತ್ತಿಗೂ ಸಂತೋಷದಿಂದ ಕಾಣಲು ಹಂಬಲಿಸುತ್ತಿದ್ದ ಅಮ್ಮ ಇರುತ್ತಿದ್ದಳು. ಆದರೂ ನಂಗೆ ಮತ್ತೇನೋ ಬೇಕು. ಅಮ್ಮನೊಂದಿಗೆ ಮಾತಿಗೆ ಕುಳಿತರೆ ಆಕೆ ಸಂತೈಸಿಬಿಡುತ್ತಾಳೆ ಅಂತ ಭಯ. ಸಾಂತ್ವನ ಹೇಳಿಬಿಡುತ್ತಾಳೆ ಎಂಬ ಆತಂಕ. ಆಕೆ ಮಲಗಿರುತ್ತಿದ್ದ ಮಂಚದ ಪಕ್ಕದಲ್ಲೇ ಗೋಡೆಯಿರುತ್ತಿತ್ತು. ಆದರಾಚೆಗೆ ನನ್ನ ರೂಮು. ಒಳಹೊಕ್ಕು ಒಂದು ಸಲ ಕದವಿಕ್ಕಿಕೊಂಡುಬಿಟ್ಟೆನೆಂದರೆ, ಅಮ್ಮನಿಗೆ ಯಾವುದೋ ನಡುರಾತ್ರಿಯಲ್ಲೊಮ್ಮೆ ನನ್ನ ಬಿಕ್ಕಳಿಕೆ ಮಾತ್ರ ಕೇಳಿಸುತ್ತಿತ್ತು. ಹಗಲಿಡೀ ನಾನು ನಶೆಯಲ್ಲಿ ಮುಳುಗಿರುತ್ತಿದ್ದೆ. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಯಾವಾಗಲೂ ಅನ್ನಿಸುತ್ತಿತ್ತು.

ಆದರೆ ನನ್ನನ್ನೇ ನನಗೆ ಚೆನ್ನಾಗಿ ನೋಡಿಕೊಳ್ಳಲು ಬರುತ್ತಿರಲಿಲ್ಲ. ಆಡುವ ಹುಡುಗ ತನಗೆ ಗೊತ್ತೇ ಆಗದಂತೆ ಆಟಿಕೆ ಕಳೆದುಕೊಂಡು ಬಿಟ್ಟ ಹಾಗೆ, ಅವಳನ್ನು ಕಳೆದುಕೊಂಡುಬಿಟ್ಟಿದ್ದೆ. ಸುಮಾರು ಒಂದೂವರೆ ದಶಕದಷ್ಟು ಬದುಕನ್ನ ಆ ದುಃಖ ಬೆನ್ನತ್ತಿ, ಬೆನ್ನತ್ತಿ ಸರ್ವನಾಶ ಮಾಡಿಬಿಟ್ಟಿತ್ತು. ಈಗ ಆಗಿರುವುದು ತೀರ ಆ ಪರಿಯ ಆತ್ಮನಾಶದ ದುಃಖವೇನಲ್ಲ. ಅಸಲಿಗಿದು ದುಃಖವೇ ಅಲ್ಲ. simple depression. ಸುಮ್ಮನೆ ಕುಳಿತು ನೆನಪು ಮಾಡಿಕೊಂಡರೆ, ಕರೆಕ್ಟಾಗಿ ಎಷ್ಟು ಹೊತ್ತಿಗೆ ನೆಗಡಿ ಶುರುವಾಯಿತು ಅನ್ನೋದು ನೆನಪಿಗೇ ಬರುವುದಿಲ್ಲ ನೋಡಿ? ಹಾಗೆ ಈ ಖಿನ್ನತೆ ಕೂಡ ನನ್ನಂತಹ busy machineನನ್ನು ಯಾವಾಗಿನಿಂದ, ಯಾವ ಕ್ಷಣದಿಂದ, ಯಾವ ತಿರುವಿ ನಲ್ಲಿ ಅಮರಿಕೊಂಡು ಕಾಡತೊಡಗಿತು ಅಂತ ಗೊತ್ತೇ ಆಗುತ್ತಿಲ್ಲ. ಎಲ್ಲೋ ಒಂದು ಕಡೆ ಬದುಕನ್ನ, ಅದರ ಕೆಲವು ಸೂಕ್ಷ್ಮ ತಿರುಳುತಿರುವುಗಳನ್ನು ನನಗೇ ಗೊತ್ತಿಲ್ಲದೆ ಯಾರದೋ wrong handsಗೆ ಕೊಟ್ಟುಬಿಟ್ಟೆನಾ ಅಂತ ಬೇಸರವಾಗುತ್ತಿದೆ. ಅದನ್ನು ಉದ್ದೇಶಪೂರ್ವಕವಾಗಿ ದಾಟಿಕೊಂಡು ಬರಲು, overcome ಆಗಲು ಈ ಒಬ್ಬಂಟಿತನದ ಸದ್ಯದ ಶಿಕ್ಷೆಯನ್ನು ಹೇರಿಕೊಂಡು ಕುಳಿತಿದ್ದೇನೆ. ಇಂಥ ಮನೋಸ್ಥಿತಿ ಕೇವಲ ಜಾಗ ಬದಲಿಸುವ ಮೂಲಕ, ಗೆಳತಿಯ ಮನೆಗೆ ಹೋಗಿ ಇರುವುದರ ಮೂಲಕ ಬದಲಾಗುವುದಿಲ್ಲ ಅಂತ ನನಗೆ ಗೊತ್ತು.

Actually ಆದದ್ದೇನೆಂದರೆ, ಅನೇಕ ವರ್ಷ ಗಳಿಂದ ಬಳಸುತ್ತ ಬಂದಿದ್ದ ಮೊಬೈಲು ನನಗೆ ಅಂಥ ತೊಂದರೆಯನ್ನೇನೂ ಕೊಟ್ಟಿರಲಿಲ್ಲ. ಕೆಲವು ಬಾರಿ ಏನನ್ನೋ ಗಂಭೀರವಾಗಿ ಬರೆಯುತ್ತಾ, ಧೇನಿಸುತ್ತಾ ಕುಳಿತಾಗ "ಊಟ ಆಯ್ತಾ ಸರ್? ಯಾರೋ ನಿಮ್ಮ ನಂಬರು ಕೊಟ್ರು. ನಿಮ್ಮದೇ ಹೌದಾ ಅಂತ confirm ಮಾಡಿಕೊಳ್ಳೋದಕ್ಕೋಸ್ಕರ phone ಮಾಡಿದ್ದೆ. ಚೆನ್ನಾಗಿದ್ದೀರಾ ಸರ್?" ಅಂತ ಕೇಳುವವರ ಫೋನುಗಳು ಉಪದ್ರವೆನ್ನಿಸುತ್ತಿದ್ದವು. ಅಷ್ಟು ಬಿಟ್ಟರೆ ಮೊಬೈಲು ಅಂಥ ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಈ ಎಸ್ಸೆಮ್ಮೆಸ್‌ನ ಚಟಕ್ಕೆ ಬಿದ್ದೆ ನೋಡಿ? ಕಿರಿಕಿರಿಯಾಗಿ ಹೋಯಿತು. ನಾನೇನೋ ಕಳಿಸುವುದು, ಅಲ್ಲಿಂದ ಮತ್ತೇನೋ ಉತ್ತರ ಬರುವುದು, ಅದಕ್ಕೆ ನನ್ನದೊಂದು ವಿವರಣೆ, ಮತ್ತೆ ಒಂದು ಕೊಂಕು, ಅದರಿಂದ ಬೇಸರ, ಇನ್ನೊಂದು sms ಬರುತ್ತಾ ಅಂತ ಕಾಯುತ್ತಾ ಕೂಡುವ ಅಸಹ್ಯಕರ ದೀನಸ್ಥಿತಿ. ಹೀಗಾಗಿ ಈ ದರಿದ್ರ ಮೊಬೈಲಿನ ಸಹವಾಸವೇ ಬೇಡ ಅನ್ನಿಸಿ ಎರಡನ್ನೂ ಎಸೆದುಬಿಟ್ಟೆ.

ಆನಂತರ ಇನ್ನೊಂದು ತೆರನಾದ gloom ಆವರಿಸಿಕೊಂಡುಬಿಟ್ಟಿತು. ಯಾವ ಮಟ್ಟದ ಸಿಡಿಮಿಡಿಗೆ ಈಡಾದೆ ಅಂದರೆ, ಒಮ್ಮೆ ಗೆಳೆಯ ನಾಗ್ತಿ ನನ್ನ ಕೋಣೆಯೊಳಕ್ಕೆ ಬಂದು ಒಂದು ಮಾತೂ ಆಡದೆ ಎದುರಿಗಿರುವ ಮಂಚದ ಮೇಲೆ ಮೈಚೆಲ್ಲಿ ಮಲಗಿದ ಕೂಡಲೆ, ಇವನಿಗೆ ನನಗಾದಂಥದ್ದೇ ಏನೋ ಆಗಿದೆ ಅನ್ನಿಸಿಬಿಟ್ಟಿತ್ತು. ಅವನು ಯಾವತ್ತೂ ಅಷ್ಟು ಡಿಪ್ರೆಸ್ಡ್ ಸ್ಥಿತಿಯಲ್ಲಿ ಬಂದಿದ್ದವನಲ್ಲ. ಎದ್ದುಹೋಗಿ ಅವನ ಪಕ್ಕ ದಲ್ಲಿ ಕುಳಿತು "ಯಾಕೋ, ತುಂಬ ಸುಸ್ತಾಗಿದೆಯೇನೋ? ಸ್ವಲ್ಪ ಹೊತ್ತು ಕಾಲು ಒತ್ತಲಾ? ನಿದ್ದೆ ಮಾಡ್ತೀಯಾ?" ಅಂದೆ. ನಾಗ್ತಿ ಸಂಕೋಚಪಟ್ಟ. ದಣಿವು ಅವನ ಕಣ್ಣ ತುಂಬ ಇತ್ತು. ಒಂದೂವರೆ ಕೋಟಿಯಷ್ಟು ರುಪಾಯಿ ಸುರಿದು ಸಿನೆಮಾ ಮಾಡುತ್ತಿದ್ದ. ಹತ್ತು ಸರ್ಕಸ್ ಕಂಪೆನಿ ನಡೆಸಿದಷ್ಟು ಸುಸ್ತು ಮಾಡುತ್ತದೆ ಸಿನೆಮಾ. ಲದ್ದಾಖ್‌ಗೆ ಹೋಗಿ ಅಲ್ಲಿ shoot ಮಾಡಿಕೊಂಡು ಬಂದಿದ್ದ. ನಂತರ DTS ಮಾಡಿಸಲು ಮದರಾಸಿಗೆ ಹೋಗಿ ಬಂದಿದ್ದ. ಅವನು team leader. ಅವನ ವೇಗಕ್ಕೆ ಇಡೀ ಟೀಮು ಕೆಲಸ ಮಾಡಬೇಕು. ಆದರೆ ಮಾಡು ವುದಿಲ್ಲ. ಅಂದುಕೊಂಡ ಹೊತ್ತಿಗೆ ಅಂದುಕೊಂಡ ಕೆಲಸ ಆಗುವುದಿಲ್ಲ.

ಹುಡುಗರು ಒಳ್ಳೆಯವರೇ. ಆದರೆ ವೇಗ ಸಾಲದು. ಲೀಡರ್‌ನ ಮನಸ್ಸು ಹತ್ತು ಕುದುರೆ ಕಟ್ಟಿಕೊಂಡು ಹತ್ತು ದಿಕ್ಕಿಗೆ ಓಡುತ್ತಿರುತ್ತದೆ. ಹಾಗೆ ಓಡುತ್ತ ಒಬ್ಬಂಟಿಯಾಗಿ ಬಿಟ್ಟೆವು ಅನ್ನಿಸಿಬಿಟ್ಟಾಗಲೇಈ ಸುಸ್ತು, ಖಿನ್ನತೆ, ಬೇಸರ. ಇಂಥ ಖಿನ್ನ ಸಮಯದಲ್ಲಿ ಬೇಸರವಳಿಸಲು ಯಾರ ಮೇಲೋ depend ಆಗಿರುತ್ತೇವೆ. ಪತ್ರಿಕೋದ್ಯಮ, ಸಿನೆಮಾ, ಬರವಣಿಗೆ, ಪೆಯಿಂಟಿಂಗು, ಫೊಟೋಗ್ರಫ್ಫಿಇಂಥ ರಂಗಗಳಲ್ಲಿ ಕೆಲಸ ಮಾಡುವವರ ರಗಳೆಯೇ ಅದು. ಕ್ರೌಡ್‌ನಿಂದ ತಪ್ಪಿಸಿಕೊಂಡು ಬಂದು ಬಾಗಿಲು ಹಾಕಿಕೊಳ್ಳುತ್ತಾರೆ. ಹಾಗಂತ ಒಬ್ಬರೇ ಕೂಡ ಇರಲಾರರು. ಹಾಕಿಕೊಂಡ ಬಾಗಿಲ ಹಿಂದೆ ಯಾರೋ ಇರಬೇಕು. ಈ ಸುಸ್ತು, ಬೇಸರ, ಖಿನ್ನತೆಗಳ ನ್ನೆಲ್ಲ ಅರ್ಥ ಮಾಡಿಕೊಂಡು ಸುಮ್ಮಸುಮ್ಮನೆ "ಪಾಪ ಛೆ" ಅನ್ನುತ್ತಾ ಹೆಗಲು ತಬ್ಬಿ ಖುಷಿ ಪಡಿಸಬಲ್ಲವರು. ಆದರೆ ಒಂದೊಂದು ಸಲ ಅವರೇ ಭಯಂಕರ ಇನ್‌ಸೆನ್ಸಿಟಿವ್ ಆಗಿ ವರ್ತಿಸಿಬಿಡುತ್ತಾರೆ. ಏನೋ ಕೊಂಕು, ಯಾವುದೋ ಅರ್ಥಹೀನ ಜಗಳ, ಸುಳ್ಳೆ ಅನುಮಾನ, ಎಂಥದೋ ವಾದ, ಬೇಡ ವೆಂದದ್ದನ್ನೇ ಮಾಡಲು ಹೊರಡುವ ದುಷ್ಟ ತನ. ಅವರಿಗೆ ಪಕ್ಕದ ವ್ಯಕ್ತಿಯ ಕಿಮ್ಮತ್ತೂ ಅರ್ಥವಾಗಿರುವುದಿಲ್ಲ. ಆತನ ಜರೂರತ್ತು ಗಳೂ ಗೊತ್ತಿರುವುದಿಲ್ಲ.

ಪ್ರತಿ ಬರಹಗಾರ, ಪ್ರತಿ creative fellow ಅಂಥದೊಂದು ಜೇಡಗೂಡಿನೊಳಕ್ಕೆ ತನ್ನ ಜೀವನದಲ್ಲಿ ಆಗಿಂದಾಗ್ಗೆ ಸಿಕ್ಕು ಬೀಳುತ್ತಿರುತ್ತಾನೆ. ಕೆಲಬಾರಿ ಹೊರಬರಲು ದಾರಿ ಕಾಣುವುದಿಲ್ಲ. ಮತ್ತೆ ಕೆಲಬಾರಿ ಹೊರಬರಲು ಇಷ್ಟವಾಗುವುದಿಲ್ಲ! ಯಾತನೆ ಕೂಡ ಒಂಥರದ ಅಡಿಕ್ಷನ್ನೇ. ಈ ಜಗಳ, ಈ ವ್ಯಾಜ್ಯ ಮುಗಿಯ ಬಹುದೇನೋ? ಮತ್ತೆ ಬದುಕು trackಗೆ ಬರಬಹುದೇನೋ ಎಂಬ ಆಸೆಚಡಪಡಿಕೆಗಳಲ್ಲೇ ನರಳುತ್ತಿರುತ್ತಾನೆ. ಹಾಗೆ ನರಳಿ ನರಳಿ ಕಡೆಗೆ ಅದೆಲ್ಲಕ್ಕು ಇರುವುದು ಒಂದೇ ಪರಿಹಾರ ಅನ್ನಿಸಿ ನಾನು ಮಾಡಿದ easiest ಕೆಲಸವೆಂದರೆ, ಶಾಶ್ವತವಾಗಿ ಎರಡೂ ಮೊಬೈಲುಗಳನ್ನು ಆಚೆಗೆಸೆದಿದ್ದು. ಅಲ್ಲಿಗೆ ಪೀಡೆ ಬಗೆಹರಿದು ಹೋದಂತಾಯಿತು. ಒಂದಷ್ಟು ದಿನ ಬೇಸರ ಮುಂದುವರೆಯುತ್ತದೇನೋ, ಆದರೆ I am sure, ಈ ಕಿರಿಕಿರಿ ಮುಕ್ತಾಯಗೊಳ್ಳುತ್ತದೆ.

ಇಷ್ಟೆಲ್ಲ ದುಡಿಮೆ, ಪತ್ರಿಕೆ, ಪುಸ್ತಕ, ಟೀವಿ ಎಲ್ಲವೂ ಹೊಟ್ಟೆಪಾಡಿಗೆ ಅಂತ ಅನ್ನಿಸಿದರೂ ಆಗಾಗ ಒದಗಿ ಕಾಡುವ ಬೇಸರ, ಖಿನ್ನತೆಗಳನ್ನು ಕಡೆಗಣಿಸಿ ಬದುಕಲು ಕಲಿತರೆ ಬದುಕು ಚೆನ್ನಾಗಿಯೇ ಇದೆ. ನಾನಾಗೇ ಕಚ್ಚಿಸಿಕೊಳ್ಳುವ ಹುಳುಗಳಿಗೆ ನಾನೇ ನರಳಬೇಕು. ಔಷಧಿಯನ್ನೂ ನಾನೇ ಕಂಡುಕೊಳ್ಳಬೇಕು. ಸದ್ಯಕ್ಕೆ ಹಾಡು ಔಷಧಿಯಾಗಿದೆ. ಅಷ್ಟು ಸಾಕು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 September, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books