Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಕೆಲವೊಮ್ಮೆ ಮಿತಿ ಮೀರುವುದು ಕೂಡ ಜೀವಕ್ಕೆ ಒಳ್ಳೇದು

ನಾನು ಕ್ರಿಕೆಟ್ ಪ್ರಿಯನಲ್ಲ. ಚಿಕ್ಕವನಾಗಿದ್ದಾಗ ಚಿಣ್ಣಿದಾಂಡು ಆಡಿದ್ದಿರಬಹುದು, ಆದರೆ ಬ್ಯಾಟ್ ಮತ್ತು ಬಾಲ್ ಅನ್ನು ನನ್ನ ಎಡಗೈಯಲ್ಲೂ ಮುಟ್ಟಿಲ್ಲ. ಕೈಯಲ್ಲಿ ರಿಮೋಟ್ ಹಿಡಿದುಕೊಂಡು ಚಾನೆಲ್ಲುಗಳನ್ನು ಆಚೀಚೆ ಮಾಡುವ ಹೊತ್ತಲ್ಲಿ ಅಪ್ಪಿತಪ್ಪಿ ಯಾವುದಾದರೂ ಚಾನೆಲ್ಲಲ್ಲಿ ಕ್ರಿಕೆಟ್ ಕಾಣಿಸಿದರೆ ಹಾವು ತುಳಿದಂತೆ ತಕ್ಷಣ ಬದಲಾಯಿಸುತ್ತೇನೆ. ಅದರಲ್ಲೂ ಐಪಿಎಲ್ ಪಂದ್ಯಾವಳಿಯ ಕಡುದ್ವೇಷಿ ನಾನು. ಕುದುರೆ ಬಾಲಕ್ಕೆ ದುಡ್ಡು ಕಟ್ಟಿ ಮನೆಮಠ ಕಳಕೊಳ್ಳುತ್ತಿದ್ದ ಸೋಮಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇ ಈ ಐಪಿಎಲ್ ಎಂದು ಬಲವಾಗಿ ನಂಬಿದವನು. ಐಪಿಎಲ್ ಮ್ಯಾಚ್ ಮೇಲೆ ಬಾಜಿಕಟ್ಟಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಹುಡುಗರ ಕತೆಯನ್ನು ದಿನಪತ್ರಿಕೆಗಳಲ್ಲಿ ಓದಿದ ನಂತರ ನನ್ನ ನಂಬಿಕೆ ಇನ್ನಷ್ಟು ಗಟ್ಟಿಯಾಯಿತು. ಆದರೂ ಇಂಥಾ ಆಟದ ಬಗ್ಗೆ ಇಂಗ್ಲಿಷ್ ಪತ್ರಿಕೆಗಳು ಭರ್ತಿ ಒಂದು ಪುಟದ ಸುದ್ದಿ ಹಾಕುತ್ತಾರೆ. ಕಾರಣ ಸರಳ, ಕ್ರಿಕೆಟ್ ಹುಚ್ಚರು ಅದನ್ನು ಭಗವದ್ಗೀತೆಯೇ ಇರಬೇಕೇನೋ ಅನ್ನುವಷ್ಟು ಶ್ರದ್ಧೆಯಿಂದ ಓದುತ್ತಾರೆ. ತಮಾಷೆಯಂದರೆ ಅಪ್ಪಿತಪ್ಪಿ ನಾನೂ ಐಪಿಎಲ್ ಬಗ್ಗೆ ಒಂದು ಸುದ್ದಿ ಓದಬೇಕಾಗಿ ಬಂತು. ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಮ್ ಹೇಳಿಕೆಗೆ ಸಂಬಂಧಪಟ್ಟ ಸುದ್ದಿಯದು. ಅದು ಯಾಕೋ ನನಗೆ ಇಂಟರೆಸ್ಟಿಂಗ್ ಅನಿಸಿತು.


ವಾಸಿಂ ಕೊಲ್ಕೋತ್ತಾ ನೈಟ್ ರೈಡರ್ಸ್ ತಂಡದ ಕೋಚ್. ಕೆಕೆಆರ್ ತಂಡ ಸೆಮಿಫೈನಲ್‌ನಲ್ಲಿ ಇನ್ಯಾವುದೋ ತಂಡದ ವಿರುದ್ಧ ಜಯ ಗಳಿಸಿತ್ತು. ಆ ಪಂದ್ಯದಲ್ಲಿ ನಮ್ಮ ಕರ್ನಾಟಕದ ಹುಡುಗ ರಾಬಿನ್ ಉತ್ತಪ್ಪ ಚೆನ್ನಾಗಿ ಆಡಿದ್ದ. ಎಂದಿನಂತೆ ಆ ಮ್ಯಾಚನ್ನು ನಾನು ನೋಡಿರಲಿಲ್ಲ. ಆ ಬಗ್ಗೆ ಯಾವ ಪಶ್ಚಾತ್ತಾಪವೂ ಇಲ್ಲ. ಆದರೆ ನನಗಿಷ್ಟವಾಗಿದ್ದು ರಾಬಿನ್ ಆಟವನ್ನು ವಾಸಿಂ ಅಕ್ರಂ ವಿಶ್ಲೇಷಣೆ ಮಾಡಿದ ರೀತಿ:

“ರಾಬಿನ್ ಈಗ ಬಹಳ ಒಳ್ಳೇ ಫಾರ್ಮ್‌ನಲ್ಲಿದ್ದಾನೆ, ಅವನು ಆಡುವ ರೀತಿ ನೋಡುತ್ತಿದ್ದರೆ ಔಟ್ ಆಗೋದೇ ಇಲ್ವೇನೋ ಅಂತ ಅನಿಸುತ್ತದೆ. ಹಾಗಂತ ಅವನು ಕ್ರಿಕೆಟ್ ಆಟದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಹೊಡೆತಗಳನ್ನೇನೂ ಬಳಸುತ್ತಿಲ್ಲ. ಅವನ ಬತ್ತಳಿಕೆಯಲ್ಲಿರುವುದು ಕೆಲವೇ ಬಾಣಗಳು. ಆದರೆ ಅವುಗಳನ್ನೇ ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತಿದ್ದಾನೆ. ಈ ಮಿತಿಯೇ ಅವನಿಗೆ ಅನುಕೂಲವಾಗಿ ಪರಿಣಮಿಸಿದೆ. ಕ್ರಿಕೆಟ್ ಆಟದಲ್ಲಿರುವ ಎಲ್ಲಾ ಶಾಟ್ಸ್ ಅನ್ನು ತಿಳಿದಿರುವ ಪರಿಪೂರ್ಣ ಆಟಗಾರ ಬೇಗನೇ ಔಟ್ ಆಗುವ ಸಾಧ್ಯತೆಗಳೇ ಜಾಸ್ತಿ. ಯಾಕೆಂದರೆ ತನಗೆ ಗೊತ್ತಿರುವುದನ್ನೆಲ್ಲಾ ಪ್ರಯೋಗಿಸಬೇಕು ಅನ್ನುವ ಹಪಾಹಪಿಯೇ ಅವನ ವೈಫಲ್ಯಕ್ಕೆ ಕಾರಣವಾಗಬಹುದು. ರಾಬಿನ್‌ಗೆ ಆ ಸಮಸ್ಯೆಯೇ ಇಲ್ಲ. ಆ ಕಾರಣಕ್ಕೇ ಈ ಪಂದ್ಯಾವಳಿಯಲ್ಲಿ ಆತ ಅತಿಹೆಚ್ಚು ರನ್ನು ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾನೆ."

ಹೀಗೆ ಹೇಳುತ್ತಾ ಹೋಗುತ್ತಾನೆ ವಾಸಿಂ ಅಕ್ರಮ್. ಆತ ಮೂಲತಃ ಬೌಲರ್. ಆದರೂ ಒಬ್ಬ ಬ್ಯಾಟ್ಸ್‌ಮನ್‌ಗೆ ಇರಬೇಕಾದ ಕೌಶಲ್ಯದ ಬಗ್ಗೆ, ಜಾಣ್ಮೆಯ ಬಗ್ಗೆ ಮಾತಾಡುತ್ತಾನೆ. ಹಾಗೆ ಮಾತಾಡುತ್ತಲೇ ಒಬ್ಬ ವ್ಯಕ್ತಿಯ ಮಿತಿಯೇ ಹೇಗೆ ಆತನ ಶಕ್ತಿಯೂ ಆಗಬಲ್ಲದು ಅನ್ನುವುದನ್ನು ಬಹಳ ಸರಳವಾಗಿ ಮತ್ತು ಸೊಗಸಾಗಿ ಹೇಳುತ್ತಾನೆ. It is inspiring. ತಾನೂ ಸಚಿನ್ ತೆಂಡೂಲ್ಕರ್ ಆಗಬೇಕು ಎಂದು ಅತ್ಯುತ್ಸಾಹದಲ್ಲಿ ಆತನ ಆಟವನ್ನು ಅನುಕರಿಸುವುದಕ್ಕೆ ಕಷ್ಟಪಡುತ್ತಿರುವ ಹುಡುಗರಿಗೆ ಅಕ್ರಂ ಹೇಳಿಕೆಯೇ ಒಂದು ಪಾಠವಾದೀತು.
ಈಗ ಕ್ರಿಕೆಟ್ಟನ್ನು ಮರೆತು ವಾಸಿಂ ಹೇಳಿಕೆಯನ್ನು ಇನ್ನೊಮ್ಮೆ ಓದಿ ನೋಡಿ. ಇದು ಕ್ರಿಕೆಟ್ಟಿಗಷ್ಟೇ ಅಲ್ಲ, ನಮ್ಮ ಜೀವನಕ್ಕೂ ಅನ್ವಯವಾಗುವ ಸಂಗತಿ ಎಂದು ಅನಿಸೋದಿಲ್ವಾ? ಎಲ್ಲವನ್ನೂ ಬಲ್ಲ ಮಹಾನ್ ಜ್ಞಾನಿಗಳು ನಮ್ಮ ನಡುವಿದ್ದಾರೆ, ಅವರ ಸಮಸ್ಯೆಯೇನೆಂದರೆ ತಮ್ಮ ಜ್ಞಾನವನ್ನು ಯಾವ ಸಂದರ್ಭದಲ್ಲಿ ಬಳಸಬೇಕು ಅನ್ನುವ ಕಾಮನ್‌ಸೆನ್ಸ್ ಇರುವುದಿಲ್ಲ. ಈ ಮಾತಿಗೆ ಪೂರಕವಾಗಿ ಒಂದು ಝೆನ್ ಕತೆಯನ್ನೇ ಹೋಲುವ ಒಂದು ಸಣ್ಣಕತೆ ಹೇಳುತ್ತೇನೆ. ಇದು ಯಾರೋ ಸ್ನೇಹಿತರು ಮೇಲ್ ಮೂಲಕ ಕಳಿಸಿಕೊಟ್ಟಿದ್ದು.

ಹತ್ತು ವರ್ಷದ ಹುಡುಗನೊಬ್ಬನಿಗೆ ಜ್ಯೂಡೋ ಕಲಿಯುವ ಆಸೆಯಾಗುತ್ತದೆ. ಜ್ಯೂಡೋ ಬರೀ ಆಟವಲ್ಲ, ಅದೊಂದು ಯುದ್ಧ ಕಲೆಯೂ ಹೌದು. ಆದರೆ ದುರದೃಷ್ಟವಶಾತ್ ಆ ಹುಡುಗ ಅಪಘಾತವೊಂದರಲ್ಲಿ ಎಡಗೈಯನ್ನೇ ಕಳಕೊಂಡಿರುತ್ತಾನೆ. ಆದರೂ ಮಗುವಲ್ಲವೇ, ಬೇರೆ ಹುಡುಗರ ಥರ ತಾನೂ ಆಟ ಆಡಬೇಕು ಅನ್ನುವ ಆಸೆ ಅವನಿಗೆ. ಜಪಾನಿನ ಒಬ್ಬ ಮುದುಕ ಜ್ಯೂಡೋ ಮಾಸ್ಟರ್ ಆ ಹುಡುಗನ ಸಹಾಯಕ್ಕೆ ಬರುತ್ತಾನೆ. ಅಂಗವಿಕಲ ಹುಡುಗನನ್ನು ಜ್ಯೂಡೋಪಟು ಆಗಿಸುವ ಅಸಾಧ್ಯ ಕೆಲಸಕ್ಕೆ ಕೈಹಾಕುತ್ತಾನೆ. ಹುಡುಗ ಶ್ರದ್ಧೆಯಿಂದ ಜ್ಯೂಡೋ ಕಲೆಯನ್ನು ಅಭ್ಯಾಸ ಮಾಡುತ್ತಾನೆ. ಮೂರು ತಿಂಗಳ ತರಬೇತಿ ಮುಗಿಯುತ್ತದೆ. ಆ ಹೊತ್ತಲ್ಲಿ ಹುಡುಗನಿಗೆ ಒಂದು ಅನುಮಾನ ಕಾಡುವುದಕ್ಕೆ ಶುರುವಾಗುತ್ತದೆ. ಗುರುಗಳು ಯಾಕೆ ನನಗೆ ಒಂದೇ ಒಂದು ಪಟ್ಟು ಹೇಳಿಕೊಟ್ಟಿದ್ದಾರೆ? ಜ್ಯೂಡೋದಲ್ಲಿರುವ ಮಿಕ್ಕೆಲ್ಲಾ ಪಟ್ಟುಗಳನ್ನು ಯಾಕೆ ಕಲಿಸಲಿಲ್ಲ? ಯೋಚನೆ ಮಾಡೀ ಮಾಡೀ ತಲೆಕೆಟ್ಟು ಒಂದು ದಿನ ಕೇಳಿಯೇ ಬಿಡುತ್ತಾನೆ.
‘ಗುರುಗಳೇ, ನಾನು ಇನ್ನೊಂದಿಷ್ಟು ಪಟ್ಟುಗಳನ್ನು ಕಲಿಯಬಹುದಲ್ವಾ?’

‘ಇಲ್ಲ. ನಿನಗೆ ಗೊತ್ತಿರುವುದು ಇದೊಂದೇ ಪಟ್ಟು ಹಾಗೂ ಇದೊಂದನ್ನೇ ನೀನು ಕಲಿಯಬೇಕಾಗಿರುವುದು ಕೂಡಾ’ ಗುರು ಮುಗುಮ್ಮಾಗಿ ಹೇಳುತ್ತಾನೆ. ಗುರುಗಳ ಮಾತು ಶಿಷ್ಯನಿಗೆ ಅರ್ಥವಾಗುವುದಿಲ್ಲ. ಆದರೆ ಪ್ರತಿಹೇಳದೇ ಕಲಿಕೆಯನ್ನು ಮುಂದುವರಿಸುತ್ತಾನೆ. ಇನ್ನೂ ಕೆಲವು ತಿಂಗಳ ತರಬೇತಿಯ ನಂತರ ಗುರು ಮೊದಲಬಾರಿಗೆ ಶಿಷ್ಯನನ್ನು ಒಂದು ಜ್ಯೂಡೋ ಪಂದ್ಯಾವಳಿಗೆ ಕರೆದುಕೊಂಡು ಹೋಗುತ್ತಾನೆ. ಆಶ್ಚರ್ಯಕರ ರೀತಿಯಲ್ಲಿ ಮೊದಲ ಎರಡೂ ಪಂದ್ಯಗಳಲ್ಲಿ ಅಂಗವಿಕಲ ಹುಡುಗ ಸುಲಭವಾಗಿ ಗೆಲ್ಲುತ್ತಾನೆ. ಮೂರನೇ ಪಂದ್ಯ ಕೊಂಚ ಕಷ್ಟದ್ದು, ಆದರೂ ಎದುರಾಳಿ ಸಹನೆ ಕಳೆದುಕೊಳ್ಳುವಂತೆ ಮಾಡಿ, ತನಗೆ ಗೊತ್ತಿರುವ ಒಂದೇ ಪಟ್ಟನ್ನು ಹಾಕಿ ಆತನನ್ನು ಉರುಳಿಸುತ್ತಾನೆ. ಈ ಯಶಸ್ಸನ್ನು ಇನ್ನೂ ಜೀರ್ಣಿಸಿಕೊಳ್ಳದೇ ಇರುವ ಸ್ಥಿತಿಯಲ್ಲೇ ಹುಡುಗ ಫೈನಲ್ ತಲುಪುತ್ತಾನೆ. ಈ ಬಾರಿ ಆತನ ಎದುರಾಳಿ ಒಬ್ಬ ಧಾಂಡಿಗ, ಈತನಿಗಿಂತ ಎತ್ತರಕ್ಕಿರುವವನು, ಹೆಚ್ಚು ಶಕ್ತಿವಂತ, ಹೆಚ್ಚು ಅನುಭವಿ. ಪಂದ್ಯ ಶುರುವಾಗುತ್ತಿದ್ದಂತೆಯೇ ಎದುರಾಳಿ ಆಕ್ರಮಣ ಮಾಡುತ್ತಾನೆ, ಹುಡುಗ ಕೆಳಗೆ ಬೀಳುತ್ತಾನೆ. ಆತನ ಪ್ರಾಣಕ್ಕೆ ಅಪಾಯ ಆಗಬಹುದು ಎಂಬ ಭಯದಿಂದ ರೆಫ್ರಿ ಪಂದ್ಯವನ್ನು ನಿಲ್ಲಿಸುತ್ತಾನೆ. ಟೈಮ್ ಔಟ್ ಎಂದು ರೆಫ್ರಿ ಕಿರುಚುತ್ತಿದ್ದಂತೆಯೇ ಗುರು ಹೇಳುತ್ತಾನೆ, ‘ಬೇಡ, ಪಂದ್ಯ ಮುಂದುವರಿಯಲಿ’. ಮತ್ತೆ ಆಟ ಶುರು. ಈ ಬಾರಿ ಎದುರಾಳಿ ಒಂದು ದೊಡ್ಡ ತಪ್ಪು ಮಾಡುತ್ತಾನೆ. ಕೊಂಚ ಮೈಮರೆಯುತ್ತಾನೆ. ಆ ಸಂದರ್ಭಕ್ಕೇ ಕಾಯುತ್ತಿದ್ದ ಹುಡುಗ ತನಗೆ ಗೊತ್ತಿರುವ ಏಕೈಕ ಪಟ್ಟನ್ನು ಪ್ರಯೋಗಿಸುತ್ತಾನೆ. ಎದುರಾಳಿ ನೆಲ ಕಚ್ಚುತ್ತಾನೆ. ಹುಡುಗ ಚಾಂಪಿಯನ್ ಆಗುತ್ತಾನೆ. ವಾಪಸ್ ಮನೆಗೆ ಬರುವ ಹೊತ್ತಲ್ಲಿ ಗುರು ಮತ್ತು ಶಿಷ್ಯ ಅಷ್ಟೂ ಪಂದ್ಯಗಳ ವಿಶ್ಲೇಷಣೆ ಮಾಡುತ್ತಾರೆ. ಆಗ ಹುಡುಗ ಧೈರ್ಯ ಮಾಡಿ ಕೇಳುತ್ತಾನೆ.

‘ಗುರುಗಳೇ, ಒಂದೇ ಒಂದು ಪಟ್ಟನ್ನು ನಂಬಿಕೊಂಡು ಇಡೀ ಪಂದ್ಯಾವಳಿಯನ್ನು ಗೆಲ್ಲುವುದಕ್ಕೆ ನನಗೆ ಹೇಗೆ ಸಾಧ್ಯವಾಯಿತು?’
ಗುರುಗಳು ನಸುನಗುತ್ತಾ ಹೇಳುತ್ತಾರೆ; ‘ನೀನು ಗೆಲ್ಲುವುದಕ್ಕೆ ಎರಡು ಕಾರಣಗಳಿವೆ ಮಗು. ಮೊದಲನೆಯದಾಗಿ ಜ್ಯೂಡೋ ಆಟದ ಒಂದು ಅತ್ಯಂತ ಕ್ಲಿಷ್ಟ ಪಟ್ಟನ್ನು ನೀನು ಕಲಿತಿದ್ದೆ. ಎರಡನೆಯದಾಗಿ ಆ ಪಟ್ಟನ್ನು ಎದುರಿಸಬೇಕಾದರೆ ಇರುವ ಏಕೈಕ ಡಿಫೆನ್ಸ್ ಅಂದರೆ ಎದುರಾಳಿ ನಿನ್ನ ಎಡಗೈಯನ್ನು ಹಿಡಿದುಕೊಳ್ಳಬೇಕಾಗಿತ್ತು’ ಹುಡುಗ ಒಂದು ಸಾರಿ ತನ್ನ ಮೊಂಡು ಎಡಗೈ ಕಡೆ ನೋಡಿ ನಸುನಕ್ಕ. ಆತ ತನ್ನ ಮಿತಿಯನ್ನೇ ಶಕ್ತಿಯಾಗಿ ಬಳಸಿಕೊಂಡಿದ್ದ. ತಮ್ಮೆಲ್ಲಾ ವೈಫಲ್ಯಗಳಿಗೆ ತಾವಿರುವ ಸ್ಥಿತಿಯಲ್ಲೇ ಕಾರಣಗಳನ್ನು ಹುಡುಕಿಕೊಂಡು ತಮ್ಮ ಮನವನ್ನು ಸಂತೈಸಿಕೊಳ್ಳುವ ವ್ಯಕ್ತಿಗಳನ್ನು ಗೇಲಿ ಮಾಡುವಂತಿದೆ ಈ ಕತೆ. ಈ ಜಗತ್ತಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನಷ್ಟಕ್ಕೇ ಭಿನ್ನ ಮತ್ತು ಆತನಲ್ಲೇನೋ ವಿಶೇಷ ಶಕ್ತಿ ಇರುತ್ತದೆ. ಎಲ್ಲರಿಗೂ ಅದನ್ನು ಗುರುತಿಸುವ ಗುರು ಸಿಗಲಿಕ್ಕಿಲ್ಲ, ಆಗ ನಾವೇ ನಮ್ಮ ಶಕ್ತಿಯನ್ನು ಹುಡುಕಿಕೊಳ್ಳಬೇಕು ಹಾಗೂ ಮಿತಿಯನ್ನು ಮೀರಿ ನಿಲ್ಲಬೇಕು. ನೋವು ಮತ್ತು ಹೆಮ್ಮೆ ಇವೆರಡೂ ಅತಿಯಾದರೆ ಒಳ್ಳೆಯದಲ್ಲ. ತನಗೆಲ್ಲವೂ ಗೊತ್ತಿದೆ ಎಂದು ಬೀಗುವವರು ಜೀವನದಲ್ಲಿ ಪದೇಪದೆ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ, ತನಗೆ ಗೊತ್ತಿರುವುದಿಷ್ಟೇ ಅನ್ನುವುದರ ಅರಿವು ಇರುವವನು ಎಡವುವ ಸಾಧ್ಯತೆ ಕಡಿಮೆ. ಯಾಕೆಂದರೆ ಆತನ ಮುಂದೆ ಜಾಸ್ತಿ ಆಯ್ಕೆಗಳಿರುವುದಿಲ್ಲ, ಹಾಗಾಗಿ ಜಾಸ್ತಿ ಗೊಂದಲಗಳೂ ಕಾಡುವುದಿಲ್ಲ.

ನನ್ನ ಮಗ ಎಷ್ಟೊಂದು ಸ್ಪೀಡಾಗಿ ಬೈಕ್ ಓಡಿಸುತ್ತಾನೆ ಎಂದು ಹೆಮ್ಮೆಯಿಂದ ಗೆಳೆಯರ ಮುಂದೆ ಹೇಳಿಕೊಳ್ಳುವ ಅಪ್ಪನಿಗೆ ಅದೇ ಸ್ಪೀಡೇ ಮುಂದೊಂದು ದಿನ ಮಗನ ಜೀವಕ್ಕೆ ಮುಳುವಾಗಬಹುದು ಅನ್ನುವುದು ಗೊತ್ತಿರುವುದಿಲ್ಲ. ವಾಸ್ತವದಲ್ಲಿ ಯಾರು ನಿಧಾನಕ್ಕೆ ಗಾಡಿ ಓಡಿಸುತ್ತಾನೋ ಅವನೇ ಬುದ್ಧಿವಂತ. ಓವರ್ ಆಕ್ಟಿಂಗ್ ಮಾಡುವ ನಟನಿಗೆ ಅಂಡರ್ ಪ್ಲೇ ಮಾಡುವುದು ಕೂಡಾ ಗೊತ್ತಿರಬೇಕು. ಪ್ರಾಸ, ಛಂದಸ್ಸು, ರಗಳೆಗಳ ಹಂಗಿಲ್ಲದ ಕವಿ ಸೊಗಸಾದ ಪದ್ಯಗಳನ್ನು ಬರೆಯಬಲ್ಲ. ಹೀಗೆ ಒಂದು ವೈಕಲ್ಯ ಅಥವಾ ಒಂದು ದೌರ್ಬಲ್ಯ ನಿಮ್ಮನ್ನು ಹೊಸ ಸವಾಲುಗಳಿಗೆ ತಯಾರು ಮಾಡಬಹುದು. ಹೊಸ ಸಾಧ್ಯತೆಗಳ ಅನ್ವೇಷಣೆಗೆ ಕಾರಣ ಆಗಬಹುದು. ನಮ್ಮ ಶಕ್ತಿಯೇನು ಅನ್ನುವುದು ಅರಿವಾಗುವುದಕ್ಕೆ ಮುಂಚೆ ನಮ್ಮ ಮಿತಿಯೇನು ಅನ್ನುವುದರ ಅರಿವಿದ್ದರೆ ನಾವು ಎಡವುವುದಿಲ್ಲ. ಆ ಮಿತಿಯನ್ನು ಮೀರುವವನೇ ನಿಜವಾದ ವಿನ್ನರ್. ಎದುರಾಳಿಯ ಆತ್ಮವಿಶ್ವಾಸವನ್ನು ಕೊಲ್ಲುವ ಹಠವಾದಿಯನ್ನು ಜಗತ್ತು ಯಾವತ್ತೂ ಬೆರಗಿನಿಂದ ನೋಡುತ್ತದೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 September, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books