Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ದೇವೆಗೌಡರ ಕುಟುಂಬದವರಿಗೆ ನನ್ನದೊಂದು ಕಿವಿಮಾತು

ಜನತಾ ಪರಿವಾರದ ಟೊಂಗೆ ಎನ್ನಿಸಿಕೊಂಡ ಜೆಡಿಎಸ್‌ನ್ನು ಕೈಲಿ ಹಿಡಿದುಕೊಳ್ಳಲು ಶ್ರಮಿಸುತ್ತಿರುವ ಮಾಜಿ ಪ್ರಧಾನಿ ದೇವೆಗೌಡರ ಕುಟುಂಬದವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಒಂದು ಕಾಲದಲ್ಲಿ ಜನತಾ ಪರಿವಾರ ಎಂದರೆ ಕಾಂಗ್ರೆಸ್‌ಗೆ ಪರ್ಯಾಯ ಪಕ್ಷ ಎಂಬಂತಿತ್ತು. ಅದರ ಮುಂದಿದ್ದ ನಾಯಕರು ಹಾಗಿದ್ದರು. ನನಗನ್ನಿಸುವ ಪ್ರಕಾರ, ಇತ್ತೀಚೆಗೆ ಬಂದ ಸರ್ಕಾರಗಳಲ್ಲಿ ಒಳ್ಳೆಯ ಸರ್ಕಾರ ಎಂದರೆ ೧೯೯೪ರಲ್ಲಿ ದೇವೆಗೌಡರ ನಾಯಕತ್ವದಡಿ ಅಧಿಕಾರಕ್ಕೆ ಬಂದ ಜನತಾದಳ ಸರ್ಕಾರ. ಆಗ ಎಂಥೆಂಥವರು ಸಚಿವ ಸಂಪುಟದಲ್ಲಿದ್ದರು ಅಂತ ಒಮ್ಮೆ ನೋಡಿ. ಜೆ.ಎಚ್.ಪಟೇಲ್, ಸಿದ್ದರಾಮಯ್ಯ, ಆರ್.ಎಲ್.ಜಾಲಪ್ಪ, ಪಿ.ಜಿ.ಆರ್.ಸಿಂಧ್ಯಾ, ಎಂ.ಸಿ.ನಾಣಯ್ಯ, ರಮೇಶ್ ಜಿಗಜಿಣಗಿ ಹೀಗೆ ನೋಡುತ್ತಾ ಹೋದರೆ ಒಬ್ಬರಿಗಿಂತ ಒಬ್ಬರು ದಕ್ಷರು ಆ ಸಂಪುಟದಲ್ಲಿದ್ದರು. ಮುಸ್ಲಿಮರ ಪೈಕಿ ಸಿ.ಎಂ.ಇಬ್ರಾಹಿಂ ಅವರಂತಹವರು ಜನತಾದಳದ ಅಧ್ಯಕ್ಷರಾಗಿದ್ದರು. ಮುಂದೆ ದೇವೆಗೌಡರು ಪ್ರಧಾನಿಯಾದಾಗ ಅವರು ಕೇಂದ್ರ ಸಚಿವರಾದರು. ಅರ್ಥಾತ್, ಪಕ್ಷವೂ ಸಾಲಿಡ್ಡಾಗಿ ರೂಪುಗೊಂಡಿತ್ತು. ಆನಂತರ ಅಂತಹ ಸರ್ಕಾರ ಕರ್ನಾಟಕದಲ್ಲಿ ಬರಲಿಲ್ಲ ಬಿಡಿ. ಸರ್ಕಾರಗಳು ಅಂತ ಬಂದರೂ ಆ ಮಟ್ಟದ ನಾಯಕರನ್ನು ಹೊಂದಿದ್ದ ಸರ್ಕಾರಗಳು ಬರಲಿಲ್ಲ.


ತೀರಾ ಇತ್ತೀಚೆಗಂತೂ ರಾಜ್ಯದ ಗಮನ ಸೆಳೆಯುವ ಕ್ಯಾಬಿನೆಟ್ಟು ಬಂದೇ ಇಲ್ಲ. ಹಲ ಮಂದಿಗೆ ಅದೇನೋ ಗೂದೆ ರೋಗ ಅಂತಾರಲ್ಲ? ಹಾಗೆ. ಇವರು ರಾಜ್ಯ ಪ್ರವಾಸ ಮಾಡುವುದು ಹಾಗಿರಲಿ, ತಮಗೆ ಉಸ್ತುವಾರಿಯ ರೂಪದಲ್ಲಿ ನೀಡಿದ ಜಿಲ್ಲೆಯಲ್ಲಿ ಗಂಡಾಂತರವೇ ಆದರೂ ಆ ಕಡೆ ಅಪ್ಪಿತಪ್ಪಿಯೂ ತಲೆ ಹಾಕುವುದಿಲ್ಲ. ಕನಿಷ್ಠ ಪಕ್ಷ ತಮ್ಮ ಕ್ಷೇತ್ರವನ್ನೂ ನೋಡದ ಎಷ್ಟೋ ಮಂದಿ ಸಚಿವರಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರ ಸರ್ಕಾರಕ್ಕೂ ೧೯೯೪ರ ಸರ್ಕಾರಕ್ಕೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ನನ್ನ ಸರ್ಕಾರಕ್ಕೆ ಭ್ರಷ್ಟರು ಬೇಡ ಅಂತ ಸಿದ್ದರಾಮಯ್ಯ ಕಸರತ್ತು ನಡೆಸಿದರೆ, ಸೀದಾ ದೆಹಲಿಗೇ ಹೋಗಿ, ಕೊಡಬೇಕಾದ ಕಪ್ಪ ಕೊಟ್ಟು ಮಂತ್ರಿಗಳಾದವರ ಪಟ್ಟಿ ಕಡಿಮೆಯೇನಲ್ಲ. ಅದೇನೇ ಇರಲಿ, ಆದರೆ ೧೯೯೪ರಲ್ಲಿ ದೇವೆಗೌಡರು ರೂಪಿಸಿದಂತಹ ಸಂಪುಟ ಆನಂತರ ರೂಪುಗೊಳ್ಳಲೇ ಇಲ್ಲ. ಎಸ್ಸೆಂ ಕೃಷ್ಣ ಅವರ ಸರ್ಕಾರದಲ್ಲಿ ಒಂದಷ್ಟು ಮಂದಿ ಘನತೆಯಿದ್ದ ಮಂತ್ರಿಗಳಿದ್ದರು. ಆದರೆ ಬರಬರುತ್ತಾ ಸಚಿವ ಸಂಪುಟ ಎಂದರೆ ಎಲ್ಲರಿಗೂ ಒಂದು ರೀತಿಯ ಅನಾದರ.

ಆದರೆ ತೊಂಬತ್ನಾಲ್ಕರಲ್ಲಿ ಅಂತಹ ಸರ್ಕಾರ ಕೊಟ್ಟ ದೇವೆಗೌಡರು ಮುಂದೆ ಹೆಗಡೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದರು. ಆದರೂ ಅವರ ಶಕ್ತಿ ಒಂದು ಮಟ್ಟದಲ್ಲಿ ಅಂತ ಇತ್ತು. ಆದರೆ ಬರ ಬರುತ್ತಾ ಇಡೀ ಪಕ್ಷವನ್ನು ತಮ್ಮ ಕುಟುಂಬದ ಹಿಡಿತಕ್ಕೆ ತೆಗೆದುಕೊಂಡರು ನೋಡಿ. ಅಲ್ಲಿಗೆ ಜನತಾ ಪರಿವಾರ ಸುಸ್ತಾಗಿ ಹೋಯಿತು.ಇವತ್ತು ಕಣ್ಣೆತ್ತಿ ನೋಡಿದರೆ ದೊಡ್ಡ ನಾಯಕರ ಪಟ್ಟಿಯೇ ಇಲ್ಲ. ಪಿ.ಜಿ.ಆರ್.ಸಿಂಧ್ಯಾ ಮನೆಗೆ ಸೇರಿ ತುಂಬ ಕಾಲವೇ ಆಯಿತು. ಎಂ.ಸಿ.ನಾಣಯ್ಯ ಅವರಂತಹ ಹಿರಿಯ ನಾಯಕನ ಜಾಗಕ್ಕೆ ಶರವಣ ಬಂದು ಕೂರುವ ಸ್ಥಿತಿ ಬಂತು. ಈಗ ತೆಗೆದು ನೋಡಿದರೆ ಆ ಪಕ್ಷದಲ್ಲಿ ದೇವೆಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣ ಅವರೇ ಸೀನಿಯರ್ ಲೀಡರುಗಳು. ಚಲುವರಾಯಸ್ವಾಮಿ, ಬಸವರಾಜ ಹೊರಟ್ಟಿ ಅವರಂತಹವರು ಡೆಮ್ಮಿ ಲೀಡರುಗಳು. ಇವೆಲ್ಲ ಸಾಲದೆಂಬಂತೆ ದೇವೆಗೌಡರು ಪಕ್ಷದ ಅಧ್ಯಕ್ಷ ಸ್ಥಾನವನ್ನು ತಮ್ಮ ಪುತ್ರ ರೇವಣ್ಣ ಅವರಿಗೆ ಕೊಡಲು ಮುಂದಾದರೆ, ನಾನು ಮಾಜಿ ಸಿಎಂ ಇಲ್ಲಿರುವಾಗ ರೇವಣ್ಣ ಹೇಗೆ ಅಧ್ಯಕ್ಷನಾಗಲು ಸಾಧ್ಯ? ಅಂತ ಕುಮಾರಸ್ವಾಮಿ ಅವರದೊಂದು ವರಸೆ.

ಇದನ್ನು ಕಂಡ ಹಿರಿಯ ನಾಯಕ ಜಿ.ಟಿ.ದೇವೆಗೌಡ ಮೊನ್ನೆ ನಡೆದ ಸಭೆಯಲ್ಲಿ ಸೂಕ್ಷ್ಮವಾಗಿ ಒಂದು ಎಚ್ಚರಿಕೆ ನೀಡಿದರು. ಕುಮಾರಸ್ವಾಮಿ ಹಾಗೂ ರೇವಣ್ಣ ಇವತ್ತು ಕಚ್ಚಾಡಬಹುದು, ನಾಳೆ ಒಂದಾಗಬಹುದು. ಆದರೆ ನೆನಪಿಡಿ, ಇದನ್ನೆಲ್ಲ ನೋಡುತ್ತಿರುವ ನಿಮ್ಮಿಬ್ಬರ ಮಕ್ಕಳು ಕೌರವರು- ಪಾಂಡವರ ಥರ ಕಚ್ಚಾಡುತ್ತಾರೆ. ನಿಮ್ಮ ಕಣ್ಣ ಮುಂದೆ ಹಾಗೆ ನಡೆಯುವುದನ್ನು ನೋಡುವ ದೌರ್ಭಾಗ್ಯ ನಿಮಗೆ ಬಾರದಿರಲಿ ಎಂದು ಸ್ಪಷ್ಟವಾಗಿ ಹೇಳಿದರು. ಅವರು ಹೇಳಿದ್ದು ನೂರಕ್ಕೆ ನೂರು ನಿಜ. ಈಗಾಗಲೇ ಕುಮಾರಸ್ವಾಮಿಯ ಮಗ ನಿಖಿಲ್ ಕ್ರಮೇಣ ಟೀವಿ ವ್ಯವಹಾರ, ರಾಜಕೀಯ ಅಂತ ಎಂಟ್ರಿ ಕೊಟ್ಟಾಗಿದೆ. ರೇವಣ್ಣ ಅವರ ಮಗ ಪ್ರಜ್ವಲ್ ಈಗಾಗಲೇ ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಗೂಳಿಯಂತೆ ತಿರುಗಾಡುತ್ತಿದ್ದಾನೆ. ಇವರು ಪಕ್ಷದಲ್ಲಿ ನಡೆಯುತ್ತಿರುವುದನ್ನು ಯಾವ ಮಟ್ಟದಲ್ಲಿ ಗ್ರಹಿಸಬಹುದು? ಇವತ್ತು ಇಬ್ಬರೂ ತಮ್ಮ ತಮ್ಮ ತಂದೆಯರು ಪಕ್ಷದ ಮೇಲಿನ ಅಧಿಪತ್ಯಕ್ಕಾಗಿ ಹೋರಾಡುತ್ತಿರುವುದನ್ನು ನೋಡುತ್ತಾರೆ. ಕ್ರಮೇಣ ಅದು ಕುಟುಂಬವನ್ನು ಆವರಿಸುತ್ತದೆ. ಕೌರವರು-ಪಾಂಡವರು ಹುಟ್ಟುವುದು ಅಲ್ಲಿಯೇ. ಅಂದ ಹಾಗೆ ಜನತಾಪರಿವಾರದ ಇತಿಹಾಸ ಗೊತ್ತಿದ್ದವರ‍್ಯಾರೂ ಇಂತಹ ಬೆಳವಣಿಗೆಗೆ ಅವಕಾಶ ನೀಡಬಾರದು. ಆದರೆ ಇಡೀ ಪಕ್ಷವೇ ದೇವೆಗೌಡರ ಕುಟುಂಬದ ಹಿಡಿತದಲ್ಲಿದ್ದರೆ ಬೇರೆಯವರು ಮಾಡುವುದೇನು? ಇದೇ ಕಾರಣಕ್ಕಾಗಿ ಚಲುವರಾಯಸ್ವಾಮಿ, ಪಕ್ಷದ ಅಧ್ಯಕ್ಷ ಸ್ಥಾನ ಬೇರೆ ಜಾತಿಯವರಿಗೆ ಸಿಗಬೇಕು ಎಂದರು. ಸಾಮೂಹಿಕ ನಾಯಕತ್ವದ ಪರಿಕಲ್ಪನೆಯೇ ಇಲ್ಲದಿದ್ದರೆ ಜೆಡಿಎಸ್ ಬೆಳೆಯುವುದು ಹೇಗೆ? ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ ಬೆಳೆದು ನಿಂತಿದೆ. ಒಂದು ಬಾರಿ ಅಧಿಕಾರ ನಡೆಸಿರುವ ಆ ಪಕ್ಷದಲ್ಲಿ ಯಡಿಯೂರಪ್ಪ, ಶೆಟ್ಟರ್ ಅವರಂತಹ ಲಿಂಗಾಯತ ನಾಯಕರಿದ್ದಾರೆ. ಅಶೋಕ್ ಅವರಂತಹ ವಕ್ಕಲಿಗ ನಾಯಕರಿದ್ದಾರೆ. ಅನಂತಕುಮಾರ್ ಅವರಂತಹ ಬ್ರಾಹ್ಮಣ ನಾಯಕರಿದ್ದಾರೆ.

ಈಶ್ವರಪ್ಪನವರಂತಹ ಹಿಂದುಳಿದ ವರ್ಗದ. ಗೋವಿಂದ ಕಾರ್ಜೋಳ್, ಕೆ.ಬಿ.ಶಾಣಪ್ಪ ಹಾಗೂ ಶ್ರೀರಾಮುಲು ಅವರಂತಹ ದಲಿತ ನಾಯಕರಿದ್ದಾರೆ. ಹಾಗೆ ನೋಡಿದರೆ ಇಡೀ ರಾಜ್ಯದ ಗಮನ ಸೆಳೆಯುವಂತಹ ಲೀಡರ್‌ಷಿಪ್ಪು ಇರುವುದು ಬಿಜೆಪಿಯಲ್ಲೇ. ಅಧಿಕಾರದಲ್ಲಿದ್ದಾಗ ಖಂಡಾಪಟ್ಟೆ ತಿಂದರು, ಮೈ ಮೇಲೆಲ್ಲ ಬೀಳಿಸಿಕೊಳ್ಳುವಷ್ಟು ತಿಂದರು, ಇಲ್ಲದ ಹಗರಣಗಳನ್ನು ಸೃಷ್ಟಿಸಿಕೊಂಡರು ಎಂಬ ಕಾರಣಕ್ಕಾಗಿ ಅವರು ಅಧಿಕಾರ ಕಳೆದುಕೊಂಡಿರಬಹುದು. ಆದರೆ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಹದಿನೇಳು ಸ್ಥಾನಗಳನ್ನು ಗಳಿಸಿದೆ. ನರೇಂದ್ರ ಮೋದಿ ಅಲೆ ಏನೇ ಅಂದರೂ ಶೇಕಡಾ ಐದು ಪರ್ಸೆಂಟಿನಷ್ಟು ಕೆಲಸ ಮಾಡಿರಬಹುದು. ಆದರೆ ಉಳಿದಂತೆ ಪಕ್ಷದ ಮುಂದಿರುವ ನಾಯಕರ ಪಡೆಯೇ ಈ ಮಟ್ಟಿನ ಸಾಧನೆಗೆ ಮುಖ್ಯ ಕಾರಣ ಎಂಬುದನ್ನು ಜೆಡಿಎಸ್ ನಾಯಕರು ಗಮನಿಸಬೇಕು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇನೋ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರನ್ನು ಪಕ್ಷದಿಂದ ಹೊರಗೋಡಿಸಿ, ಬೇರೆ ಪಕ್ಷ ಕಟ್ಟುವಂತೆ ಮಾಡಲು ಕಾಂಗ್ರೆಸ್ ಯಶಸ್ವಿಯಾಯಿತು.


ಆದರೆ ಈಗ ಹಾಗಲ್ಲ. ಈಗಾಗಲೇ ಆ ಪಕ್ಷದಲ್ಲಿ ಜಾತಿಯತೆ ಎಂಬುದು ಮಿತಿ ಮೀರಿ ತಾಂಡವವಾಡುತ್ತಿದೆ. ಮಾತೆತ್ತಿದರೆ ಅಹಿಂದ ವರ್ಗಗಳ ಮಾತಾಡುತ್ತಾ ಸಿದ್ದರಾಮಯ್ಯ ತಮ್ಮ ಜಾತಿಗೆ ಸೀಮಿತರಾಗಿರುವ ನಾಯಕರಾಗಿದ್ದಾರೆ. ದಲಿತರಲ್ಲಿ ಪರಮೇಶ್ವರ್ ಹಿರಿಯ ನಾಯಕ. ಅವರ ಅಕ್ಕ ಪಕ್ಕ ದಲಿತ ನಾಯಕರು ಇರಬಹುದು. ಆದರೆ ಅವರ ಪೈಕಿ ಕಾಂಗ್ರೆಸ್ ಪಕ್ಷದಿಂದ ಬಂದವರು ಕಡಿಮೆ. ಅದಕ್ಕಿಂತ ಮುಖ್ಯವಾಗಿ ಪಕ್ಷವನ್ನೇ ಪುನರ್ರಚನೆ ಮಾಡಲು ಸಾಧ್ಯವಾಗದ ಕಾಲದಲ್ಲಿ ಪರಮೇಶ್ವರ್ ಪಕ್ಷ ಕಟ್ಟಿದರು. ಅದಕ್ಕೊಂದು ಶಿಸ್ತು ತಂದರು. ಅಂತಹವರನ್ನು ಉಪಮುಖ್ಯಮಂತ್ರಿ ಮಾಡಿದ್ದರೆ ಆ ಮಾತೇ ಬೇರೆ ಇರುತ್ತಿತ್ತು. ಈ ಸರ್ಕಾರದ ಶಕ್ತಿ ಕೂಡ ಜಾಸ್ತಿಯಾಗುತ್ತಿತ್ತು. ಆದರೆ ಸಿದ್ದರಾಮಯ್ಯನವರು ತಮ್ಮದೇ ನಾಟಕ ಮಂಡಳಿಗೆ ಅಂಟಿಕೊಂಡಿದ್ದಾರೆ. ಒಂದು ವೇಳೆ ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಸೃಷ್ಟಿಸಿದರೆ ತಮಗೆ ಪರ್ಯಾಯವಾದ ಶಕ್ತಿ ಕೇಂದ್ರ ಸೃಷ್ಟಿಯಾಗುತ್ತದೆ ಎಂದು ನಂಬಿದ್ದಾರೆ. ಆದರೆ ಯಾವುದೇ ನಾಯಕನಿಗೆ ತನ್ನ ನಾಯಕತ್ವದಲ್ಲಿ ನಂಬಿಕೆ ಇರಬೇಕು.

ದೇವೆಗೌಡರ ಸಂಪುಟದಲ್ಲಿ ಜೆ.ಎಚ್.ಪಟೇಲ್ ಉಪಮುಖ್ಯಮಂತ್ರಿ ಆದ ಮಾತ್ರಕ್ಕೆ ಪರ್ಯಾಯ ಶಕ್ತಿ ಕೇಂದ್ರವಾಗಲಿಲ್ಲ. ಆದರೆ ಸಿದ್ದರಾಮಯ್ಯನವರ ಮನಸ್ಸು ತಾವು ಉಪಮುಖ್ಯಮಂತ್ರಿಯಾಗಿದ್ದ ಕಾಲವನ್ನು ನೆನಪಿಸಿಕೊಳ್ಳುತ್ತದೆ. ಜೆ.ಎಚ್.ಪಟೇಲರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರನ್ನು ಉಪಮುಖ್ಯಮಂತ್ರಿ ಮಾಡಲಾಯಿತು. ಪಟೇಲರಿಗೆ ಕೊಡಬಾರದ ಉಪಟಳವನ್ನು ಕೊಡಲಾಯಿತು. ಆದರೆ ಇಂತಹ ಶಕ್ತಿ ಅವರಿಗೆ ದಕ್ಕಿದ್ದು ದೇವೆಗೌಡರಿಂದ. ಯಾಕೆಂದರೆ ದೇವೆಗೌಡರು ಆ ಹೊತ್ತಿಗಾಗಲೇ ಪ್ರಧಾನಿಯಾಗಿದ್ದರು. ಮಾಜಿ ಪ್ರಧಾನಿಯಾಗಿದ್ದಾಗಲೂ ಪಕ್ಷದ ಮೇಲೆ ಅವರ ಹಿಡಿತವಿತ್ತು. ಹೀಗಾಗಿ ಅವರು ಸಿದ್ದರಾಮಯ್ಯನವರ ಜೊತೆಗೂಡಿ ಪಟೇಲರ ವಿರುದ್ಧ ಹೋರಾಡಿದರು. ಆದರೆ ಸಿದ್ದರಾಮಯ್ಯ ಬೆನ್ನ ಹಿಂದೆ ದೇವೆಗೌಡರ ಶಕ್ತಿ ಇಟ್ಟುಕೊಂಡು ಏನೇ ಜಪ್ಪಯ್ಯ ಅಂದರೂ ಪಟೇಲರು ಕ್ಯಾರೇ ಎನ್ನಲಿಲ್ಲ. ಸನ್ನಿವೇಶ ಬಂದಾಗ ಸಂಪುಟದಿಂದಲೇ ಕಿತ್ತು ಹಾಕಿದರು. ಅದು ಪಟೇಲರ ತಾಕತ್ತು. ಒಬ್ಬ ನಾಯಕನಿಗೆ ಅಂತಹ ಶಕ್ತಿ ಇರಬೇಕು. ಅರ್ಥಾತ್, ತನ್ನ ನಾಯಕತ್ವದ ಮೇಲೆ ಅಂತಹ ನಂಬಿಕೆ ಇರಬೇಕು. ಆದರೆ ದುರಂತ ನೋಡಿ. ಈಗ ಸಿದ್ದರಾಮಯ್ಯನವರಿಗೆ ತಮ್ಮ ಶಕ್ತಿಯ ಮೇಲೆ ತಮಗೇ ನಂಬಿಕೆಯಿಲ್ಲ. ಒಂದು ವೇಳೆ ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಆದರೆ ಸರ್ಕಾರದ ಮಟ್ಟದಲ್ಲಿ ತಮಗೆ ಪರ್ಯಾಯ ಶಕ್ತಿ ಕೇಂದ್ರವೊಂದು ಸೃಷ್ಟಿಯಾಗುತ್ತದೆ ಎಂದು ಅವರು ಆತಂಕಪಡುತ್ತಾರೆ. ಹೀಗಾಗಿ ಎಸ್ಸೆಂ ಕೃಷ್ಣ ಅವರ ಗೆಟಪ್ಪು ಧರಿಸಲು ಯತ್ನಿಸುತ್ತಾರೆ. ಆದರೆ ಏನೇ ಮಾಡಿದರೂ ಕೃಷ್ಣ ಅವರಿಗೂ ಸಿದ್ದರಾಮಯ್ಯನವರಿಗೂ ಹೋಲಿಸಲು ಸಾಧ್ಯವಿಲ್ಲ. ನಿಮಗೆ ಸಿಂಪಲ್ ಆಗಿ ಒಂದು ಉದಾಹರಣೆ ಹೇಳುತ್ತೇನೆ. ಅಧಿಕಾರಕ್ಕೆ ಬಂದ ಕೂಡಲೇ ಕೃಷ್ಣ ಅವರು ಆಡಳಿತದ ಮೇಲೆ ಕಂಟ್ರೋಲ್ ಸಾಧಿಸಿಬಿಟ್ಟರು. ಆ ಸಂದರ್ಭದಲ್ಲಿ ಕಾಂಗ್ರೆಸ್ ದಿಲ್ಲಿ ಗದ್ದುಗೆಯ ಮೇಲೆ ಕೂತಿರಲಿಲ್ಲ. ಹೀಗಾಗಿ ಮೊದಲು ಮಂತ್ರಿಗಳ ಪೈಕಿ ತಮಗೆ ಕೌಂಟರ್ ಯಾರಾಗಬಹುದು ಎಂಬುದನ್ನು ಅವರು ಮೊದಲೇ ಅರ್ಥ ಮಾಡಿಕೊಂಡರು. ಅವರಿಗೆ ಕೌಂಟರ್ ಆಗಲು ಹೊರಟ ಒಬ್ಬ ಮಂತ್ರಿಗೆ ಒಬ್ಬ ಕಂಟ್ರಾಕ್ಟರ್ ಮೂಲಕ ಎರಡು ಲಡ್ಡು ಕೊಡಿಸಿದರು. ಅವತ್ತಿನ ಕಾಲಕ್ಕೆ ಎರಡು ಲಡ್ಡು ಎಂದರೆ ಬಂಪರ್ರೋ, ಬಂಪರ್ರು.

ಹೀಗೆ ಪ್ರಸಾದ ಕೊಡಿಸಿದವರು ನಾಲ್ಕೈದು ದಿನ ಕಳೆದ ಮೇಲೆ ಸದರಿ ಮಂತ್ರಿಯನ್ನು ತಮ್ಮ ಬಳಿ ಕರೆಸಿಕೊಂಡರು. ನಿಮ್ಮ ಜಿಲ್ಲೆಯಲ್ಲಿ ಒಂದು ಕಾರ್ಯಕ್ರಮ ಮಾಡಬೇಕಿದೆ. ಅದಕ್ಕೆ ಸ್ವಲ್ಪ ನೆರವು ಬೇಕಾಗುತ್ತದೆ ಎಂದರು. ಅದಕ್ಕೆ ಆ ಮಂತ್ರಿ ಅಯ್ಯೋ, ನನ್ನಂತಹ ಪ್ರಾಮಾಣಿಕ ಮಂತ್ರಿ ಎಲ್ಲಿಂದ ದುಡ್ಡು ತರಬೇಕು? ನೋ ಛಾನ್ಸ್. ನೀವು ಹೇಳಿದಷ್ಟು ಹಣವನ್ನು ನಾನು ಸಾಲ ಮಾಡಿಕೊಡಬೇಕೇ ಹೊರತು ಬೇರೆ ದಾರಿಯೇ ಇಲ್ಲ ಎಂದು ಹೇಳಿದರು. ಆಗ ಕೃಷ್ಣ ನೇರವಾಗಿ ವಿಷಯಕ್ಕೆ ಬಂದರು. ಹೌದಾ? ಅಂದ ಹಾಗೆ ನಿಮಗೆ ಎರಡು ಲಡ್ಡು ಕೊಡಲು ಇಂತಹ ಕಾಂಟ್ರಾಕ್ಟರ್‌ಗೆ ಹೇಳಿದ್ದೆ. ಬಹುಶಃ ಅವರು ನಿಮಗೆ ಕೊಟ್ಟಿಲ್ಲ ಎಂದು ಕಾಣುತ್ತದೆ ಎಂದುಬಿಟ್ಟರು. ಆ ಮಂತ್ರಿ ಸುಸ್ತು. ಹೀಗೆ ತಮಗೆ ವಿರುದ್ಧ ಇರುವವರನ್ನು ಈ ರೀತಿ ಬಡಿದು ಹಾಕುತ್ತಿದ್ದ ಕೃಷ್ಣ, ದಿಲ್ಲಿಯಲ್ಲಿ ಅಧಿಕಾರದಲ್ಲಿಲ್ಲದ ಕಾಂಗ್ರೆಸ್‌ಗೆ ಚ್ಯವನ್‌ಪ್ರಾಶ್ ಕೊಟ್ಟರು. ಹೀಗಾಗಿ ಕರ್ನಾಟಕದಲ್ಲಿ ಪಕ್ಷದ ಶಕ್ತಿ ಕುಗ್ಗಿದರೂ ಕೇಂದ್ರದಲ್ಲಿ ಆ ಹೊತ್ತಿಗಾಗಲೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದುದರಿಂದ ಮಹಾರಾಷ್ಟ್ರದ ರಾಜ್ಯಪಾಲರಾದರು. ಕೇಂದ್ರ ವಿದೇಶಾಂಗ ಸಚಿವರಾದರು.

ಆದರೆ ಸಿದ್ದರಾಮಯ್ಯ ಏನೇ ಮಾಡಿದರೂ ಕೃಷ್ಣ ಅವರ ಗೆಟಪ್ಪು ಧರಿಸಲು ಸಾಧ್ಯವಿಲ್ಲ. ಯಾರ‍್ಯಾರ ಮೇಲೆ ಭ್ರಷ್ಟಾಚಾರದ ಕಳಂಕವಿದೆ ಎಂದು ತಮ್ಮ ಕೃಪಾಪೋಷಿತ ನಾಟಕ ಮಂಡಳಿಗೆ ಹೇಳಿಕೊಟ್ಟರೂ ಬಹುಬೇಗ, ಇವರೇ ಅದನ್ನು ಮಾಡಿಸುತ್ತಿದ್ದಾರೆ ಎಂದು ಗೊತ್ತಾಗಿ ಬಿಡುತ್ತದೆ. ಹೀಗಾಗಿ ಈ ಸರ್ಕಾರದ ಶಕ್ತಿ ತುಂಬ ದಿನಗಳ ಕಾಲ ಉಳಿಯಲು ಸಾಧ್ಯವಿಲ್ಲ. ಆ ಪ್ರಮಾಣದ ಶತ್ರುಗಳನ್ನು ಸಿದ್ದರಾಮಯ್ಯ ಮೈ ಮೇಲೆ ಎಳೆದುಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅವರ ಸರ್ಕಾರದ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಗುತ್ತದೆಯೇ ಹೊರತು ಹೆಚ್ಚಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯನ್ನು ಅರಿತಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರ ಹಿಡಿಯಲು ಸಜ್ಜಾಗಿ ಕುಳಿತಿದೆ. ಅದರ ಮುಂದಿರುವ ನಾಯಕರ ಪಡೆಯೂ ಸಣ್ಣದೇನಲ್ಲ. ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಅಶೋಕ್, ಗೋವಿಂದ ಕಾರ್ಜೋಳ್, ರಮೇಶ್ ಜಿಗಜಿಣಗಿ ಅವರಂತಹ ನಾಯಕರ ಪಡೆಯೇ ಕಮಲ ಪಾಳಯದ ಮುಂಚೂಣಿಯಲ್ಲಿ ನಿಂತಿದೆ.

ಒಂದು ವೇಳೆ ಮುಂದಿನ ದಿನಗಳಲ್ಲಿ ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಇಚ್ಛೆ ಜೆಡಿಎಸ್‌ಗಿದ್ದರೆ ಮೊದಲು ಈಗಿನ ರಾಜಕೀಯ ಸನ್ನಿವೇಶವನ್ನು ಅದು ಅರ್ಥ ಮಾಡಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದು ಕೆಲವೇ ಕಾಲವಾಗಿದ್ದರೂ ಮುಲಾಯಂಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ನೆಲ ಕಚ್ಚಿತು. ಮಾಯಾವತಿ ಅವರಂತಹ ನಾಯಕಿಯನ್ನು ಹೊಂದಿರುವ ಬಹುಜನ ಸಮಾಜ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಸ್ಥಿತಿ ಸೃಷ್ಟಿಯಾಯಿತು. ಇಂತಹ ಬೆಳವಣಿಗೆಗಳನ್ನು ನೋಡಿದ ಮೇಲಾದರೂ ದೇಶದ ರಾಜಕಾರಣದಲ್ಲಿ ಆಗಿರುವ ಬದಲಾವಣೆಗಳನ್ನು ದೇವೆಗೌಡರ ಕುಟುಂಬ ಅರ್ಥ ಮಾಡಿಕೊಳ್ಳಬೇಕು. ಪಕ್ಷದ ಮುಂಚೂಣಿಗೆ ಎಲ್ಲ ಜಾತಿಗಳ ನಾಯಕರು ಬಂದು ನಿಲ್ಲುವಂತೆ ನೋಡಿಕೊಳ್ಳಬೇಕು. ಸನ್ನಿವೇಶಕ್ಕೆ ಅಗತ್ಯವಾದ ನಿರ್ಣಯ ತೆಗೆದುಕೊಳ್ಳುವುದು ಎಂದರೆ ಟೈಮು ಸಿಕ್ಕರೆ ಬಿಜೆಪಿ ಜೊತೆ ಹೊಂದಿಕೊಳ್ಳುವುದು ಅಥವಾ ಕಾಂಗ್ರೆಸ್ ಜತೆ ಸಂಬಂಧ ಬೆಳೆಸುವುದಲ್ಲ.

ಇವತ್ತು ಜೆಡಿಎಸ್‌ನ್ನು ಮುಗಿಸಲು ಎರಡೂ ಪಕ್ಷಗಳು ಕಾಯುತ್ತಿವೆ. ಇದನ್ನು ಅರ್ಥ ಮಾಡಿಕೊಂಡು ಜೆಡಿಎಸ್ ಬೆಳೆಯಬೇಕು. ಜನತಾ ಪರಿವಾರ ಹೇಗೆ ವಿಚಾರಧಾರೆಯ ಮೂಲಕ ತಲೆ ಎತ್ತಿತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಪಕ್ಷಕ್ಕೆ ಒಂದು ಕುಟುಂಬದ ವಿಚಾರಧಾರೆಯೇ ಮುಖ್ಯವಾಗಿ ಬಿಟ್ಟರೆ ಅಂತಹ ಪಕ್ಷ ಬಹುಕಾಲ ಉಳಿಯುವುದು ಕಷ್ಟ. ಇದನ್ನು ದೇವೆಗೌಡರ ಕುಟುಂಬದವರು ಈಗಲಾದರೂ ಅರ್ಥ ಮಾಡಿಕೊಳ್ಳಲಿ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಬೆಳೆದು ನಿಲ್ಲಲು ಏನು ಮಾಡಬೇಕೋ ಅಂತಹ ವಿಚಾರಧಾರೆಯೊಂದಿಗೆ ತಲೆ ಎತ್ತಲಿ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 15 September, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books