Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಇದು ಹೀಗಿರಬೇಕು ಅಂದ್ರೆ ಹೀಗೇ ಇರಬೇಕು

“ಬಡ್ಡೀಮಗ, ಏನು ಮಾಡಿದರೂ ಚೆಂದ ಮಾಡ್ತಾನೆ!'' ಅಂತ ನನ್ನ ಬಗ್ಗೆ ಯಾರೋ ಮಾತಾಡಿಕೊಂಡಿದ್ದನ್ನು ಕೇಳಿಸಿಕೊಂಡು ಬಂದೆ. ಪತ್ರಿಕೆ ಮಾಡಿದೆ. ಶಾಲೆ ಕಟ್ಟಿದೆ. ಟೀವಿ ಪ್ರೋಗ್ರಾಂ ಮಾಡಿದೆ. ಇನ್ನೊಂದು ಪತ್ರಿಕೆಯೂ ಆಯಿತು. ಡಜನುಗಟ್ಟಲೆ ಪುಸ್ತಕ ಬರೆದೆ. ಎಲ್ಲವೂ ಯಶಸ್ಸುಗಳೇ. ಎಲ್ಲವೂ ಚೆಂದ ಚೆಂದ ಚೆಂದ. ಹಾಗಂತ ಅವರಿವರು ಅಂದರು ಅಂತ ನಾನೂ ಹೆಗಲು ಕುಣಿಸಿ ಬೆನ್ನು ತಟ್ಟಿಕೊಂಡು ಬಿಟ್ಟರೆ ಬಕ್ಕಬಾರಲ ಬಿದ್ದೇನು ಅಂತ ನನಗೆ ಗೊತ್ತು. ಅದಕ್ಕೇ ನನ್ನ ತಲೆಯಿನ್ನೂ ಹೆಗಲ ಮೇಲೇ ನಿಂತಿದೆ. ಅದಕ್ಕಿಂತ ಮುಖ್ಯವಾಗಿ, ಎಲ್ಲರೂ ಹೊಗಳುತ್ತಿರುವ, ಮೇಲು ನೋಟಕ್ಕೆ ತುಂಬ ಯಶಸ್ವಿ ಅನ್ನಿಸಿಕೊಂಡಿರುವ ನನ್ನವೇ ಕೆಲಸಗಳಲ್ಲಿ ಇರುವುದು ನನ್ನೊಬ್ಬನದೇ ಶ್ರಮವಲ್ಲ. ನನ್ನೊಂದಿಗೆ ನೂರಾರು ಹುಡುಗರು-ಹುಡುಗಿಯರು ಹಗಲೂ ರಾತ್ರಿ ದುಡಿಯುತ್ತಿದ್ದಾರೆ. ಅಷ್ಟಾದರೂ ನನ್ನ ಯಶಸ್ವೀ ಸಾಧನೆಗಳಲ್ಲಿ ಇನ್ನೂ ಸಾಕಷ್ಟು ನ್ಯೂನತೆಗಳಿವೆ, ದೊಗರುಗಳಿವೆ, ಬಲಹೀನತೆಗಳಿವೆ. ಈಗ ಕಟ್ಟಿಕೊಂಡಿರುವ ಈ ಪತ್ರಿಕೆಗಳು, ಶಾಲೆ ಮುಂತಾದವೆಲ್ಲ ಸ್ಥಿರಗೊಳ್ಳಬೇಕು ಎಂದಾದರೆ ನಾನಿನ್ನೂ ತುಂಬ ದುಡಿಯಬೇಕು ಎಂಬುದು ಕೂಡ ನನಗೆ ಚೆನ್ನಾಗಿ ಗೊತ್ತಿದೆ.

ಆದರೂ ಬಡ್ಡೀ ಮಗ, ನಾನು ಏನೇ ಮಾಡಹೊರಟರೂ ಚೆಂದಗೇ ಮಾಡ ಹೊರಡುತ್ತೇನೆ ಎಂಬ ಮಾತು ಸುಳ್ಳಲ್ಲ. ಏಕೆಂದರೆ, ನಾನು ಹೊರಡುವುದೇ ಹಾಗೆ. ಒಂದು ಪ್ರಯಾಣಕ್ಕೆ ಹೊರಡು ಅಂದಕೂಡಲೆ, ನೀವು ಏನೇನು ಮಾಡುತ್ತೀರಿ ಹೇಳಿ? ದುಡ್ಡು ಜೋಡಿಸಿಕೊಳ್ತೀರಿ. ಬಟ್ಟೆ ಜೋಡಿಸಿಕೊಳ್ತೀರಿ. ಎರಡು ಜೊತೆ ಬಟ್ಟೆ extra ಇಟ್ಟುಕೊಳ್ತೀರಿ. ರೋಡ್ ಮ್ಯಾಪು, ಅಲ್ಲಿಯ ಪರಿಚಿತರ ವಿಳಾಸ-ಫೋನು ನಂಬರು, ದುಡ್ಡು ಕಳೆದೀತು ಅಂತ ಟ್ರ್ಯಾವೆಲರ್ಸ್ ಚೆಕ್ಕು, ಪ್ಯಾಂಟಿನ ಒಳಗೊಂದು ವಾಚ್ ಪಾಕೀಟು, ಖಾಯಿಲೆ ಆದರೆ ಇರಲಿ ಅಂತ ಜ್ವರ-ಭೇದಿ-ಕೆಮ್ಮು-ನೆಗಡಿಗೆ ಔಷಧಿ, ಬಿದ್ದರೆ ಬೇಕಾದೀತು ಅಂತ ಅಯೋಡೆಕ್ಸು, ಟಿಂಚರು, ಬ್ಯಾಂಡೇಜು ಬಟ್ಟೆ ಇತ್ಯಾದಿ ಜೋಡಿಸಿಟ್ಟುಕೊಳ್ಳುತ್ತೀರಿ. ಓದಲು ಒಂದಿಷ್ಟು ಪುಸ್ತಕ, ಬರೆಯಲೊಂದು ಡೈರಿ, ಬೈನಾಕ್ಯುಲರ್ರು, ಕೆಮೆರಾ, ಜರ್ಕಿನ್ನು, ಟೋಪಿ, ಕೂಲಿಂಗ್ ಗ್ಲಾಸು ಇಷ್ಟೇ ತಾನೆ?

ನಾನು ಹೊರಡುವ ಮುನ್ನ ಆ ದೇಶದ ಇತಿಹಾಸ ಓದಿಕೊಳ್ಳುತ್ತೇನೆ. ಅಲ್ಲಿನ ಸಾಹಿತ್ಯ ಓದಿಕೊಳ್ಳುತ್ತೇನೆ. ಖಾಯಿಲೆ ಬೀಳುವ ಛಾನ್ಸೇ ಇಲ್ಲದ ಹಾಗೆ physical fit ಆಗಿ ಹೊರಡುತ್ತೇನೆ. ಹೊರಡುವುದಕ್ಕೆ ಮೊದಲೇ, ಪತ್ರಿಕೋದ್ಯಮಿಯಾದ ನನಗೆ ಏನೇನೆಲ್ಲ material ಬೇಕು ಎಂಬುದನ್ನು ಅತ್ಯಂತ ವ್ಯವಸ್ಥಿತವಾಗಿ ಪಟ್ಟಿ ಮಾಡಿಕೊಂಡು, ಅಲ್ಲಿ ಅದಕ್ಕೆ ಮ್ಯಾಚ್ ಆಗುವಂಥದ್ದು ಸಿಗುತ್ತಾ ಅಂತ ಹುಡುಕತೊಡಗುತ್ತೇನೆ. ಅಲ್ಲಿಗೆ ಹೋದಮೇಲೆ "ಇಲ್ಲೇನು ಸಿಗುತ್ತೆ'' ಅಂತ ವಿಚಾರಿಸಿ ಸಿಕ್ಕ ಮಟೀರಿಯಲ್ಲು ಹೊತ್ತು ತರುವುದು ಬೇರೆ ಮಾತು. ಹೋದ ತಕ್ಷಣ ನಮಗೆ ಬೇಕಾದ್ದನ್ನು ಸಂಗ್ರಹಿಸಿ, ಅದರ ಮೇಲೆ ಏನಾದರೂ ಸಿಕ್ಕರೆ ಅದಷ್ಟೂ ಬೋನಸ್ಸು ಅಂದುಕೊಂಡು ಹೊತ್ತು ತರುವುದು ಜಾಣತನದ ಮಾತು. ನನ್ನ ದೃಷ್ಟಿಯಲ್ಲಿ ಪ್ರಯಾಣದ ಸಿದ್ಧತೆ ಅಂದರೆ, ಅದು ಷರಟಿನ ಗುಂಡಿ ಹರಿದು ಹೋದಾಗ ಪಕ್ಕದವರ‍್ಯಾರೋ, "ನೋಡಿದಿರಾ, ಹೀಗಾಗುತ್ತೆ ಅಂತ ನಂಗೊತ್ತು ಕಣ್ರೀ. ಅದಕ್ಕೇ ಸೂಜಿದಾರ ತಂದಿದೀನಿ...'' ಅನ್ನುತ್ತ ಬೀಗುತ್ತಿರುತ್ತಾರೆ. ನಾನು ಐವತ್ತು ರುಪಾಯಿ ಕೊಟ್ಟು ಫುಟ್‌ಪಾತಿನ ಮೇಲಿನ ಅಂಗಡಿಯಲ್ಲೊಂದು ಅಂಗಿ ಖರೀದಿಸಿ, ಹಳೆಯದು ಬಿಚ್ಚೆಸೆದು ಮುಂದಕ್ಕೆ ನಡೆಯುತ್ತಿರುತ್ತೇನೆ. ಕಾರಣವಿಷ್ಟೆ: ಅನೇಕ ದೇಶಗಳಿಗೆ ನಾನು ಉಟ್ಟಬಟ್ಟೆಯಲ್ಲೇ ಹೋಗಿರುತ್ತೇನೆ. ಸೂಜಿದಾರ ಜೋಡಿಸಿಕೊಂಡು ಕೂಡಲು ಟೈಮೆಲ್ಲಿದೆ? ಒಂದು ಜೊತೆ ಬಟ್ಟೆ ಐದುನೂರು ರುಪಾಯಿಗಳಿಗೆ ಸಿಗುತ್ತೆ ಅನ್ನುವಾಗ ಐವತ್ತು ಕೇಜಿ ಲಗೇಜು ಹೊರುವುದು ಮೂರ್ಖತನ ಅಲ್ಲವೆ? ಇದು ನನ್ನ ಲೆಕ್ಕಾಚಾರ.

ಯಶಸ್ಸಿನ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳಬೇಕಿಲ್ಲ. ಯಶಸ್ಸು ಅನ್ನೋದು ಶುದ್ಧ ಸೈನ್ಸು. ಅದು ನಿಗೂಢವಲ್ಲ. ಅದೃಷ್ಟ ಮೊದಲೇ ಅಲ್ಲ. ಅದನ್ನು ನಾನು ನಂಬೋದು ಇಲ್ಲ. ತಲೆ ಕೆಡಿಸಿಕೊಳ್ಳಬೇಕಾದುದು ನಮ್ಮ ತಾಕತ್ತು ಮತ್ತು ಕೆಲಸ ಸಾಧಿಸುವ ಪಾಸಿಬಿಲಿಟಿಗಳ ಬಗ್ಗೆ ಅಷ್ಟೆ. ಬೆಂಗಳೂರೆಂಬ ಮಹಾನಗರಿಗೆ ಬರೀ ಒಂದು ಮೊಬೈಕು ಹತ್ತಿಕೊಂಡು ಬಂದುಬಿಟ್ಟ ನನಗೆ ಅವತ್ತು ಇದ್ದದ್ದು ಯಶಸ್ಸಿನ ಚಿಂತೆಯಲ್ಲ. ನನ್ನ ತಾಕತ್ತು, ನನ್ನ ಯೋಚನೆಗಳು, ನನ್ನ ಹಟ ಇವು ಇಲ್ಲಿ ನನ್ನನ್ನು ನೆಲೆಯೂರಲಿಕ್ಕೆ ನೆರವು ನೀಡುವ ಸ್ಥಿತಿಯಲ್ಲಿವೆಯಾ, ಇಲ್ಲವಾ ಅಂತ ಮಾತ್ರ. ನಾನು ಬರೆಯುವ, ಬರೆದು ಬದುಕುವ formನಲ್ಲಿ ಇದ್ದೇನಾ ಇಲ್ಲವಾ? ನನ್ನಲ್ಲಿ ಬರೆದು ಬದುಕಲಿಕ್ಕಾಗುವಷ್ಟು ಸರಕು ಇದೆಯಾ ಇಲ್ಲವಾ? ನನ್ನ ಯೋಗ್ಯತೆಗೆ, ಮಟ್ಟಕ್ಕೆ, ಚಿಂತನೆಗೆ ಇದು ಸಾಧಿಸಲಿಕ್ಕಾಗುವಂತಹುದಾ ಇಲ್ಲವಾ? ಅಷ್ಟು ಪ್ರಶ್ನೆ ಕೇಳಿಕೊಂಡೇ ನಾನು ಪ್ರತಿ ಕೆಲಸಕ್ಕೂ ಕೈ ಹಾಕಿದ್ದೆ. ಶಾಲೆ ಕಟ್ಟಿದಾಗಲೂ ಅಷ್ಟೆ, ಕಾರು ಕೊಂಡಾಗಲೂ ಅಷ್ಟೆ, ಟೀವಿಗೆ ಪ್ರೋಗ್ರಾಂ ಕೊಡಲು ಒಪ್ಪಿಕೊಂಡಾಗಲೂ ಅಷ್ಟೆ. ಇವತ್ತಿನ ತನಕ ನನ್ನ ಕಾರಿಗೆ ಖಾಯಂ ಡ್ರೈವರು ಅಂತ ನಾನು ಯಾರನ್ನೂ ಇಟ್ಟುಕೊಂಡಿಲ್ಲ. ದೂರಾತಿದೂರದ ಪ್ರಯಾಣಗಳಿಗೂ ಸ್ವತಃ ನಾನೇ drive ಮಾಡಿದ್ದೇನೆ. ತೀರ ದಿನಗಟ್ಟಲೆ ಬರೆದು ಕಣ್ಣು ಬ್ಲರ್ ಆದಾಗ, ನಿದ್ದೆಗೆಟ್ಟಾಗ ಮಾತ್ರ ಇನ್ನೊಬ್ಬರ ಕೈಗೆ ವೀಲ್ ಕೊಟ್ಟಿದ್ದೇನೆ. ನನ್ನದು ಅದರಲ್ಲೂ ಒಂದು ಸಿದ್ಧಾಂತವಿದೆ: ಕಡೇ ಪಕ್ಷ ನಮ್ಮ ಆಕ್ಸಿಡೆಂಟು ನಾವೇ ಮಾಡಿಕೊಂಡು ಸತ್ತೆವೆಂಬ ಸಮಾಧಾನವಾದರೂ ನಮಗಿರಬೇಕು!

ನನ್ನ ಗೆಳೆಯರು ಕೆಲವು ಬರಹಗಾರರಿದ್ದಾರೆ. ಪುಸ್ತಕ ಪ್ರಿಂಟು ಹಾಕಿಸಲು ತಾವೇ ನಿಲ್ಲುತ್ತಾರೆ. ಅದರ ಮುಖಪುಟ ಹೀಗೇ ಇರಬೇಕು, ಪುಸ್ತಕ ಇಷ್ಟೇ ದಪ್ಪ ಇರಬೇಕು, ಇಂಥದ್ದೇ ಹಾಳೆ, ಬೆನ್ನು ಪುಟಕ್ಕೆ ತಮ್ಮ ಇಂಥದ್ದೇ ಫೊಟೋ-ಅಬ್ಬಾ! ಅದೆಷ್ಟು possessive ಆಗಿರುತ್ತಾರೆ ಅಂದರೆ, ಪ್ರಿಂಟು ಮಾಡಿಕೊಡುವವನಿಗೆ ಅವರನ್ನು ಕಟ್ಟಿಕೊಂಡು ಹೆಣಗುವುದರಲ್ಲಿ ಸಾಕುಬೇಕಾಗಿ ಹೋಗಿರುತ್ತದೆ. ನನ್ನದು ಇನ್ನೊಂಥರದ ಪೊಸೆಸಿವ್‌ನೆಸ್ಸು. ಬರೆಯಲು ಕೂಡುವಾಗ ಇಂಥದ್ದೇ ಪೆನ್ನು, ಇಂಥದ್ದೇ ಹಾಳೆ ಇರಬೇಕು. ಎಂಥದ್ದಾದರೂ ಸರಿಯೇ: ಒಂದಷ್ಟು ಟೀ, ಒಂದಷ್ಟು ಸಿಗರೇಟು, ಎತ್ತಿಟ್ಟ ಫೋನು, ಸ್ವಿಚಾಫ್ ಮಾಡಿದ ಮೊಬೈಲು ಮತ್ತು ಯಾರೂ ನನ್ನ ತಂಟೆಗೆ ಬಾರದಿದ್ದರಾಯಿತು. ಬರೆಯುವುದನ್ನು ಅದೆಷ್ಟು enjoy ಮಾಡಿಕೊಂಡು, ಅವಡುಗಚ್ಚಿ, ಪದ್ಮಾಸನ ಹಾಕಿ ವಾರಗಟ್ಟಲೆ, ತಿಂಗಳುಗಟ್ಟಲೆ ಅದರಲ್ಲಿ ಮುಳುಗಿ ಹೋಗಿರುತ್ತೇನೆ ಅಂದರೆ-ನಾನು ಬರೆದಿಟ್ಟ ಹಾಳೆಗಳನ್ನೊಮ್ಮೆ ನೀವು ನೋಡಬೇಕು. ಕೊಳಕು ರೂಮು, ಕೆದರಿದ ಟೇಬಲ್ಲು, ತುಂಬಿಹೋದ ash tryಗಳು, ಬಣ್ಣಗೆಟ್ಟ ಅಂಗಿ, ಜಟೆಯಂತೆ ಬೆಳೆದ ಕ್ರಾಪು, ಇಳಿಬಿದ್ದ ಗಡ್ಡ, ಉಸಿರೇ ಆಡದಂತೆ ಹೊಗೆ ತುಂಬಿದ ಕೋಣೆ, ದಿಕ್ಕಾಪಾಲಾಗಿ ಬಿದ್ದ ಪುಸ್ತಕಗಳು-ಇವೆಲ್ಲವುಗಳ ಮಧ್ಯ ನಾನು ಕಪ್ಪು ಇಂಕಿನಲ್ಲಿ ಅತ್ಯಂತ ದುಂಡಾದ ಅಕ್ಷರಗಳಲ್ಲಿ ಅದು ಪ್ರಿಂಟೇನೋ ಎಂಬಂತೆ ಹನ್ನೆರಡು ನಿಮಿಷಕ್ಕೊಮ್ಮೆ ಬರೆದೆತ್ತಿಟ್ಟ ಬೆಳ್ಳ ಬಿಳೀ ಹಾಳೆಗಳ ಕಂತೆ! ಒಂದು ದಿನಕ್ಕೆ ಸಲೀಸಾಗಿ ಐವತ್ತರಿಂದ ಅರವತ್ತು ಪುಟ ಬರೆಯುವ ನಾನು, ನೀವು ಹುಡುಕಿದರೂ ಒಂದು ಹಾಳೆಯಲ್ಲಿ ಒಂದೇ ಒಂದು ಚಿತ್ತು ಕಾಟು ಸಿಗದಂತೆ ಬರೆದಿಡಬಲ್ಲೆ.

"ಚೆಂದ ಮಾಡ್ತಾನೆ'' ಅಂದರೇನೇ ಅದು. "ಚೆಂದ ಪ್ರಿಂಟು ಮಾಡಿಸ್ತಾನೆ'' ಅನ್ನಿಸಿಕೊಳ್ಳೋದು ಬೇರೆ. ಅದು ಪ್ರಿಂಟಿಂಗ್ ಪ್ರೆಸ್ಸಿನವರ ಕೆಲಸ. ನನ್ನದು ಚೆಂದಗೆ ಬರೆಯುವುದಷ್ಟೆ ಕೆಲಸ. ಬರೆಯಲು ಕೂಡುವ ಮುನ್ನ ಬೇಕಾಗುವ ಪುಸ್ತಕಗಳು, ಡಿಕ್ಷನರಿಗಳು, ಇತರೆ ಮಾಹಿತಿ, ನೋಟ್ಸುಗಳು, ಸಂಪರ್ಕಿಸಬೇಕಾದವರ ವಿಳಾಸ-ಫೋನ್ ನಂಬರುಗಳು ಹೀಗೆ ಏನೆಲ್ಲ ಬೇಕೋ ಅದನ್ನು ಕೋಣೆಯೊಂದರೊಳಕ್ಕೆ stuff ಮಾಡಿಕೊಂಡು ಬಾಗಿಲು ಗಿಡಿದು ಕುಳಿತು ಬಿಡಬೇಕು. ಆ ಕ್ರಿಯೆಯಲ್ಲಿ ಸಂಪೂರ್ಣ ತಲ್ಲೀನನಾಗಿ ಬಿಡಬೇಕು. ಆಗ ಮಾತ್ರ ನೀವು ಏನನ್ನು ಮಾಡಿದರೂ ಚೆಂದಗೆ ಮಾಡಲು ಸಾಧ್ಯ.

Ofcourse, ನನಗೆ ಅನೇಕ ಕೆಲಸಗಳು ಬರುವುದಿಲ್ಲ. ಕೆಲವು ಕೆಲಸಗಳಲ್ಲಿ ಚೂರೂ ಮಟ್ಟಸವಿರುವುದಿಲ್ಲ. "ಸ್ನಾನ ಮಾಡಿ ಈಚೆಗೆ ಬಂದರೆ, ಆ ಬಾತ್‌ರೂಮಿನೊಳಕ್ಕೊಂದು ಮೃಗ ಹೊಕ್ಕು ಹೋಗಿದೆಯೇನೋ ಎಂಬಂತಹ ಪರಿಸ್ಥಿತಿ ಮಾಡಿಟ್ಟು ಬಂದಿರ‍್ತೀಯ" ಅಂತ ಲಲಿತೆ ಬಯ್ಯುತ್ತಿರುತ್ತಾಳೆ. ನನಗೆ ಒಂದೇ ಅಳತೆಯ ಸಣ್ಣವೇಗದಲ್ಲಿ drive ಮಾಡಲು ಬರುವುದಿಲ್ಲ. ಯಾರಿಗಾದರೂ ಒಂದು ಕೆಲಸ ಹೇಳಿ ಅವರಿಂದ ಆ ಕೆಲಸ ಮಾಡಿಸಿಕೊಳ್ಳಲು ಬರುವುದಿಲ್ಲ. ದುಡ್ಡು handle ಮಾಡುವುದರಲ್ಲಿ ನಾನು ಅವಿವೇಕಿ. ತೀರ ನಯವಾಗಿ ಮಾತನಾಡಲುಬಾರದು. ಎಷ್ಟೇ ಸಿಂಗಾರ ಬಂಗಾರ ಮಾಡಿ ಆಚೆಗೆ ಕಳಿಸಿದರೂ ನಾನು ಹದಿನೈದೇ ನಿಮಿಷದಲ್ಲಿ ಕ್ರಾಪು ಬಟ್ಟೆ ಕೆದರಿಕೊಂಡು ಕಬ್ಬಲ್ಲಿಯಂತಾಗಿರುತ್ತೇನೆ. ಏಕೆಂದರೆ, ಇವ್ಯಾವೂ ನನ್ನ ಪ್ರೊಫೆಷನ್ನುಗಳಲ್ಲ. ಇವುಗಳನ್ನೇ ಪ್ರೊಫೆಷನ್ನುಗಳು ಅಂದುಕೊಂಡವರ ಬಗ್ಗೆ ನನ್ನ ತಕರಾರಿಲ್ಲ. ಅರ್ಧ ತಂಬಿಗೆಯಲ್ಲೇ ಸ್ನಾನ ಮುಗಿಸಿ fresh ಆಗಿ ಈಚೆಗೆ ಬರೋರು, ಕಾರನ್ನು ಕೂಡ ಟ್ರಾಕ್ಟರಿನಂತೆ ನಿಧಾನವಾಗಿ ಓಡಿಸುವವರು, ತಾವು ಕೆಲಸವನ್ನೇ ಮಾಡದೆ ಇನ್ನೊಬ್ಬರಿಂದ ಸದಾ ಕೆಲಸ ಮಾಡಿಸುವವರು, ದುಡ್ಡನ್ನು ಕೂಡ ಹೆಂಡತಿಯೇನೋ ಎಂಬಂತೆ handle ಮಾಡುವವರು, "ಕಪಾಳಕ್ಕೆ ಹೊಡೀತೀನ್ನೋಡು'' ಅನ್ನುವುದನ್ನು ಕೂಡ ತುಂಬ ನಯವಾಗಿ ಅನ್ನುವವರು, ದಿನವಿಡೀ ಕ್ರಾಪು ಕೆದರಿಕೊಳ್ಳದೇ ಇರುವವರು-ಇವರೆಲ್ಲ ತಮ್ಮ ಇತರೆ ಕ್ರಿಯಾಶೀಲ ಪ್ರಪಂಚದಲ್ಲೂ ಇಷ್ಟೇ neat ಆಗಿ ಇರಬಲ್ಲರಾದರೆ, ಅವರಿಗೆ ನನ್ನ ಸಲಾಮ್!

ನನ್ನ ದೂರದ ಸಂಬಂಧಿ ಕಝಿನ್ ಒಬ್ಬನಿದ್ದ: ವೆಂಕೋಬ ಅಂತ. ಅವನನ್ನ ನೀವು ನೋಡಬೇಕಿತ್ತು. ಬಲು ನೀಟು ಬಡ್ಡೀ ಮಗ. ಗಡ್ಡ ಕೆರೆಯದ ಹೊರತು ಕನ್ನಡಿಗೂ ಮುಖ ತೋರಿಸುವವನಲ್ಲ. ಅವನ ಬಟ್ಟೆ ಸದಾ ಉಜಾಲಾಕ್ಕೆ ಮೊರೆ ಹೋಗಿರುತ್ತಿದ್ದವು. ಬೆಳಗ್ಗೆ ಎದ್ದು ಅರ್ಧ ತಾಸು ಸ್ನಾನ ಮಾಡಿ, ಇನ್ನರ್ಧ ತಾಸು ಮೈ ಒರೆಸಿಕೊಂಡು, ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆ ಹಾಕಿಕೊಂಡು, ಅದಕ್ಕಿಂತ ನೀಟಾಗಿ ಹೊಟ್ಟೆ ತುಂಬ ತಿಂದು, ಷೂ ಹಾಕಿಕೊಂಡು, ಒಂದು fresh ಸಿಗರೇಟು ಹಚ್ಚಿಕೊಂಡು, ಇನ್ನೇನು ಮನೆಬಿಟ್ಟು ದಿಗ್ವಿಜಯಕ್ಕೆ ಹೊರಡುತ್ತಾನೇನೋ ಎಂಬಂತೆ ರೆಡಿಯಾಗುತ್ತಿದ್ದವನು-ಹಾಗೆ ಇಡೀ ದಿನ ಮನೆಯ ವರಾಂಡದಲ್ಲಿನ ಸೋಫಾದ ಮೇಲೆ ಕೂತೇ ಇರುತ್ತಿದ್ದ! ಅವನ ಹೆಂಡತಿ ರುಕ್ಮಿಣಿ ಹರಕು ಬಟ್ಟೆ ಹಾಕಿಕೊಂಡು ದಿನವಿಡೀ ಅಲ್ಲಲ್ಲಿ ದುಡಿದು ತಂದು ಇವನಿಗೆ ಮಾಡಿ ಹಾಕಬೇಕು. ಬಟ್ಟೆ ಒಗೆದಿಡಬೇಕು. "ನೀನೇನೇ ಹೇಳು ರುಕ್ಕೀ, ನಿನ್ನ ಗಂಡ ಬಲು ನೀಟು ಕಣೇ'' ಅನ್ನುತ್ತಿದ್ದೆ.

"ಏನು ಮಾಡೋದು ಹೇಳು ರವೀ? ಅವರ ಬಿಜಿನೆಸ್ಸೇ ಅಂಥಾದ್ದು. ವರಾಂಡದಲ್ಲೇ ಕೂತಿರ್ತಾರಲ್ಲ? ಜನ ನೋಡಿದರೆ ಏನಂದ್ಕೋತಾರೆ? ಅದಕ್ಕೇ ನೀಟಾಗಿರ‍್ತಾರೆ. ಇರ‍್ಲಿ ಬಿಡು. ನನ್ನ ಕರ್ಮ ಇದ್ದಿದ್ದೇ...'' ಅಂತ ಪೇಲವ ನಗೆ ನಗುತ್ತಿದ್ದಳು.
ಜೀವನ ಪರ್ಯಂತ ಹಾಗೇ ಬದುಕಿದ ವೆಂಕೋಬಿ ಮೊನ್ನೆ ಸತ್ತುಹೋದ. ಅವನ ಬಗ್ಗೆ ಮಾತಾಡಿದರೆ ನಮಗೆ ನೆನಪಾಗೋದು ಅವನ ನೀಟ್‌ನೆಸ್ ಅಲ್ಲ. ಅವನ ಹೆಂಡತಿ ಜೀವನಪರ್ಯಂತ ಅನುಭವಿಸಿದ ಅವಮಾನ, ಯಾತನೆ ಮತ್ತು ಬಡತನ. ನಮ್ಮ ಕ್ರಿಯಾಶೀಲತೆ ಅನ್ನೋದು ಆ ನೀಟ್‌ನೆಸ್ಸಿನಲ್ಲೇ ಮುಗಿದು ಹೋದರೆ ಹೇಗೆ? ತೀರಾ ಸ್ನಾನ ಮಾಡೋಕೂ ಟೈಮಿರದಷ್ಟು ಕೆಲಸ ಹೇರಿಕೊಳ್ತೀಯ ಅಂತ ಲಲಿತೆ ಬಯ್ಯುತ್ತಿರುತ್ತಾಳೆ. ನಾನು ಯಾವ ಸರಹೊತ್ತಿನಲ್ಲೋ ತಣ್ಣೀರ ನಲ್ಲಿಯ ಕೆಳಗೆ ಕುಳಿತು ಹಗುರಾಗುತ್ತಿರುತ್ತೇನೆ. ನನ್ನ ಬದುಕು, ದಿನಚರಿ, ಕೆಲಸದ ಷೆಡ್ಯೂಲು ಎಲ್ಲವೂ ವಿಚಿತ್ರವೇ. ಹಾಗೆ ಕೆಲಸ ಮಾಡಿದರೇನೇ ನನಗೆ ತೃಪ್ತಿ. "ಏನು ಮಾಡಿದರೂ ಬಡ್ಡೀ ಮಗ ಚೆಂದಗೆ ಮಾಡ್ತಾನೆ'' ಅನ್ನಿಸಿಕೊಳ್ಳುವುದಕ್ಕೆ ಸಾಧ್ಯ. ನಾನು ಹೀಗಿರುವುದೇ ಸರಿ ಅನ್ನಿಸಿಬಿಟ್ಟಿದೆ. ಅಷ್ಟೇ ಅಲ್ಲ, ನನ್ನೊಂದಿಗಿರುವ ಅನೇಕರನ್ನು ನನ್ನಂತೆಯೇ ಮಾಡಿಬಿಟ್ಟಿದ್ದೇನೆ. ಹುಡುಗ ಹುಡುಗಿಯರಿಗೆ, ಸ್ವತಃ ನನ್ನ ಮಗಳಿಗೆ ದಿನಗಟ್ಟಲೆ ನಿದ್ದೆಗೆಡುವುದನ್ನೂ, ವಾರಗಟ್ಟಲೆ ರಜೆಯಿಲ್ಲದೆ ಕೆಲಸ ಮಾಡುವುದನ್ನೂ, ಮಾಡಿದ ಕೆಲಸವನ್ನು ತುಂಬ ಅಚ್ಚುಕಟ್ಟಾಗಿ, "ನನ್ನದು'' ಅಂದುಕೊಂಡು ಮಾಡುವುದನ್ನೂ ಕಲಿಸಿದ್ದೇನೆ. ಹೀಗಾಗಿ, ನಾನು ಬರೆದದನ್ನು ಅವರು ಚೆಂದಗೆ ಪ್ರಿಂಟು ಮಾಡಿಸುತ್ತಾರೆ. ನಾನು ಕಟ್ಟಿದ ಶಾಲೆಯನ್ನು ಅವರು ಚೆಂದಗೆ ನಡೆಸಿಕೊಂಡು ಹೋಗುತ್ತಾರೆ. ನಾನು ದನಿಕೊಟ್ಟ ಟೀವಿ ಕಾರ್ಯಕ್ರಮವನ್ನು ಅವರು ಚೆಂದಗೆ ಮಾಡಿ ಮುಂದಿಡುತ್ತಾರೆ. ಎಲ್ಲವೂ ಸರಿಯಾಗೇ ನಡೆದುಕೊಂಡು ಹೋಗುತ್ತಿವೆ. ಇಂಥ ಹುಡುಗ ಹುಡುಗಿಯರ ಸಂಖ್ಯೆ ಮತ್ತು ಎಫಿಷಿಯನ್ಸಿ ಬೆಳೆದಂತೆಲ್ಲ ನನ್ನ ಹೊರೆ ಕಡಿಮೆಯಾಗಬಹುದು ಅಂದುಕೊಳ್ಳುತ್ತೀರೇನೋ?

ನಾನು ಹೊಸದೇನಕ್ಕೋ ಕೈ ಚಾಚಿ ಹೊಸದಾದ ಭಯಂಕರ ಫಜೀತಿಗೆ ಒಳಗಾಗಿ ಆನಂದ ಪಡುತ್ತಿರುತ್ತೇನೆ!
ಬದುಕೆಂದರೆ, ಇದೇ ಅಲ್ಲವೆ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 September, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books