Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ನೂರು ದಿನದಲ್ಲಿ ಏನು ಮಾಡಿದಿರಿ ಎಂದು ಕೇಳಲಾದೀತೇ?

ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ನೂರು ದಿನ ತುಂಬಿದೆ.
ಒಂದು ಸರ್ಕಾರಕ್ಕೆ ನೂರು ದಿನ ತುಂಬಿದೆ ಎಂಬುದು, ಇನ್ನೂರು ದಿನ ತುಂಬಿದೆ ಎಂಬುದು ಕೇವಲ ಲೆಕ್ಕ ಮಾತ್ರವಾಗಬಾರದು. ಆ ದೃಷ್ಟಿಯಿಂದ ಮೋದಿ ಸರ್ಕಾರ ನೂರು ದಿನದಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನೇನೂ ಮಾಡಿಲ್ಲ. ಈ ನೂರು ದಿನಗಳಲ್ಲಿ ಅದರಿಂದ ತುಂಬ ನಿರೀಕ್ಷಿಸುವುದೂ ಸಾಧ್ಯವಿಲ್ಲ. ಯಾಕೆಂದರೆ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ವಕ್ತಾರರಾದ ಮೀನಾಕ್ಷಿ ಲೇಖಿ ಅವರಂತಹವರೇ, ಆಧಾರ್ ಕಾರ್ಡ್ ಯೋಜನೆಯನ್ನು ಒಂದು ವಂಚನೆ ಎಂದಿದ್ದರು. ಆದರೆ ಮೋದಿ ಸರ್ಕಾರ ಅದೇ ಆಧಾರ್ ಯೋಜನೆಯನ್ನು ಮುಂದುವರಿಸಿದೆ. ಬಹುಬ್ರ್ಯಾಂಡ್‌ನ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಮೋದಿಯವರೇ ವಿರೋಧಿಸಿದ್ದರು. ಆದರೆ ಸರ್ಕಾರ ಬಂದ ನೂರು ದಿನಗಳಲ್ಲಿ ಅದನ್ನು ವಿರೋಧಿಸುವುದಾಗಲೀ, ಆ ನಿರ್ಧಾರದಿಂದಾಗಲೀ ಹಿಂದೆ ಸರಿದಿಲ್ಲ. ಅದರರ್ಥ, ಈ ಸರ್ಕಾರ ಏನೂ ಮಾಡಿಲ್ಲ ಎಂದಲ್ಲ. ಆದರೆ ನೂರು ದಿನದಲ್ಲಿ ಸಾಧನೆಯ ಕುರುಹು ತೋರಿದಂತೆಯೇ ವಿವಾದಗಳನ್ನೂ ಸೃಷ್ಟಿಸಿಕೊಂಡಿದೆ.

ಉದಾಹರಣೆಗೇ ನೋಡಿ. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎನ್‌ಡಿಎ ಸರ್ಕಾರದ ರಾಜ್ಯ ಸಚಿವ ಜಿತೇಂದರ್ ಸಿಂಗ್ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಸಂವಿಧಾನದ ಮುನ್ನೂರಾ ಎಪ್ಪತ್ತನೇ ವಿಧಿಯ ಕುರಿತು ಚರ್ಚೆಯಾಗಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದರು. ಆದರೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ವ್ಯವಸ್ಥಿತವಾಗಿ ನುಂಗಲು ಪಾಕಿಸ್ತಾನ ನಿರಂತರ ಯತ್ನ ನಡೆಸುತ್ತಿದೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಪರೇಷನ್ ೪೪ ಎಂಬ ಕಾರ್ಯತಂತ್ರ ರೂಪಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಕಾರ ಎತ್ತುತ್ತಿಲ್ಲ. ಇದು ನಿಜವಾದ ರಾಜಕೀಯ ನಡೆ. ಶ್ಯಾಮ್‌ಪ್ರಸಾದ್ ಮುಖರ್ಜಿಯವರಂತಹ ನಾಯಕನ ಬಲಿದಾನಕ್ಕೆ ಪ್ರತಿಯಾಗಿ ಬಿಜೆಪಿ ನಿರ್ದಿಷ್ಟವಾಗಿ ನಡೆಸುತ್ತಿರುವ ಯೋಜನೆ. ಅಲ್ಲಿನ ಅಸೆಂಬ್ಲಿಯಲ್ಲಿರುವ ಎಂಬತ್ತೇಳು ಸ್ಥಾನಗಳ ಪೈಕಿ ನಲವತ್ನಾಲ್ಕು ಸ್ಥಾನಗಳನ್ನು ಗಳಿಸಿದರೆ ಬಿಜೆಪಿ ನಿರ್ದಿಷ್ಟ ಹೆಜ್ಜೆ ಇಡಲು ಸಾಧ್ಯವಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಭಾರತದ ಸಂವಿಧಾನ ಅವಕಾಶ ನೀಡಿರಬಹುದು. ಆದರೆ ಆ ಸ್ಥಾನಮಾನ ತನಗೆ ಬೇಕೋ, ಬೇಡವೋ ಎಂಬುದನ್ನು ಅಲ್ಲಿನ ವಿಧಾನಸಭೆ ನಿರ್ಧರಿಸಲು ಅವಕಾಶವಿದೆ. ಒಂದು ಸಲ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ಕೊಟ್ಟಿರುವ ವಿಶೇಷ ಸ್ಥಾನಮಾನದ ಸವಲತ್ತನ್ನು ಹಿಂಪಡೆಯಬಹುದು. ಒಂದು ರಾಜ್ಯವನ್ನು ಕಬಳಿಸಲು ನೆರೆಯ ದೇಶ ಯತ್ನಿಸುತ್ತಿದೆ ಎಂದರೆ ಕೈ ಕಟ್ಟಿಕೊಂಡು ಕೂರಲು ಸಾಧ್ಯವಿಲ್ಲ. ಅದ್ಯಾವ ರಾಜ್ಯವೇ ಆಗಿರಲಿ, ಭಾರತದ ಗಣತಂತ್ರದ ಭಾಗವಾದ ಮೇಲೆ ಅದಕ್ಕೆ ಕೊಟ್ಟಿರುವ ವಿಶೇಷ ಸ್ಥಾನಮಾನ ಪ್ರತ್ಯೇಕತೆಯ ಕೂಗನ್ನು ಹೆಚ್ಚು ಮಾಡಲು ಅನುಕೂಲವಾಗುತ್ತದೆ ಎಂದರೆ ಅದಕ್ಕೆ ನೀಡಿರುವ ಅವಕಾಶವನ್ನು ರದ್ದು ಮಾಡಬೇಕು. ದೇಶದ ಎಲ್ಲ ರಾಜ್ಯಗಳ ಜನ ಅಲ್ಲಿ ಹೋಗಿ ನೆಲೆಸಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಆ ಕೆಲಸ ಮಾಡಿಲ್ಲವೆಂದರೆ ಪಾಕಿಸ್ತಾನದ ಕುಮ್ಮಕ್ಕು ಪಡೆದಿರುವ ಪ್ರತ್ಯೇಕತಾವಾದಿಗಳು ಕ್ರಮೇಣ ಮುಸ್ಲಿಮೇತರರನ್ನು ಅಲ್ಲಿಂದ ಓಡಿಸಿ ಇಡೀ ರಾಜ್ಯವನ್ನೇ ಪಾಕಿಸ್ತಾನಕ್ಕೆ ಸೇರುವಂತೆ ಮಾಡುತ್ತಾರೆ. ಈ ಶೇಖ್ ಅಬ್ದುಲ್ಲಾ, ಅವರ ಮಗ ಫಾರೂಕ್ ಅಬ್ದುಲ್ಲಾ ಹಾಗೂ ಫಾರೂಕ್ ಅಬ್ದುಲ್ಲಾ ಅವರ ಮಗ ಓಮರ್ ಅಬ್ದುಲ್ಲಾ ಅವರೆಲ್ಲ ಹೇಳಿದ್ದನ್ನು ಕೇಳುತ್ತಾ ಬಂದಿದ್ದಾಯಿತು. ಆದರೆ ಯಾವತ್ತೂ ಆ ರಾಜ್ಯದಲ್ಲಿ ಪಾಕಿಸ್ತಾನಿಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಹೀಗೆ ತಡೆಯಲು ಕಾಂಗ್ರೆಸ್ ಕೂಡ ಮುಂದಾಗಲಿಲ್ಲ. ಒಂದು ವೇಳೆ ಆ ಕೆಲಸ ಮಾಡಿದರೆ ಮುಸ್ಲಿಮರು ನಮಗೆ ವಿರುದ್ಧವಾಗಿ ವೋಟು ಹಾಕುತ್ತಾರೆ ಎಂಬ ಭೀತಿ.

ಮೊದಲನೆಯದಾಗಿ ಅಂತಹ ಭೀತಿ ಆಡಳಿತ ನಡೆಸುವವರಿಗೆ ಇರಬಾರದು. ದೇಶದ ಮನಸ್ಥಿತಿ ಹೇಗಿದೆಯೋ, ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಹಿತಾಸಕ್ತಿ ಮತ್ತೊಂದು ದೇಶದ ಮಧ್ಯ ಪ್ರವೇಶದಿಂದ ಹಾಳಾಗುತ್ತಿದೆ ಎಂದಾದರೆ ಯಾವುದೇ ಬೆಲೆಯನ್ನು ತೆತ್ತಾದರೂ ಆ ದೇಶದ ಕುತಂತ್ರವನ್ನು ತಡೆಗಟ್ಟಬೇಕು. ಅಂದ ಹಾಗೆ ಅಮಿತ್ ಷಾಗೆ ಜಾಣ ನಡೆಯಿದೆ. ಉತ್ತರ ಪ್ರದೇಶದಲ್ಲಿ ಎಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ತಮ್ಮ ಪಕ್ಷ ಗೆಲ್ಲುವಂತೆ ಅವರು ನೋಡಿಕೊಂಡರು. ಈಗ ಆಪರೇಷನ್ ೪೪ ಯೋಜನೆಯ ರೂವಾರಿ ಕೂಡ ಅವರೇ. ಒಂದು ವೇಳೆ ಅವರ ಈ ಯೋಜನೆ ಯಶಸ್ವಿಯಾದರೆ ನೆರೆ ರಾಷ್ಟ್ರ ನಮ್ಮ ರಾಷ್ಟ್ರದ ಆಂತರಿಕ ವ್ಯವಹಾರಗಳಲ್ಲಿ ಕೈ ಹಾಕುವುದು ಕಷ್ಟವಾಗುತ್ತದೆ. ಆದರೆ ಇದರ ಬಗ್ಗೆ ಬಹಿರಂಗ ಚರ್ಚೆ ಯಾಕೆ ಬೇಕು? ಸಚಿವ ಜಿತೇಂದರ್ ಸಿಂಗ್ ಹೇಳಿಕೆ ಅರ್ಥವಿಲ್ಲದ್ದು. ಮೊದಲನೆಯದಾಗಿ ಕಾಶ್ಮೀರ ನಮ್ಮದು. ಅದನ್ನೇನಾದರೂ ಪಾಕಿಸ್ತಾನಕ್ಕೆ ಬರೆದು ಕೊಡಿ ಎಂದು ಮುಸ್ಲಿಮರು ಹೇಳಿದ್ದಾರೆಯೇ? ಇಲ್ಲವಲ್ಲ?

ಅಲ್ರೀ, ಎಲ್ಲಕ್ಕಿಂತ ಮುಖ್ಯವಾಗಿ ಒಂದು ರಾಜ್ಯ ನಮ್ಮದು ಎಂದ ಮೇಲೆ ಅದನ್ನು ಕಬ್ಜಾದೊಳಗೆ ಇಟ್ಟುಕೊಳ್ಳಲು ಕಸಿವಿಸಿ ಯಾಕೆ? ಶೇಖ್ ಅಬ್ದುಲ್ಲಾ ಅವರಿಂದ ಹಿಡಿದು ಓಮರ್ ಅಬ್ದುಲ್ಲಾ ತನಕ ಎಲ್ಲರನ್ನೂ ಓಲೈಸುವ ಯತ್ನ ಯಾಕೆ? ಆ ರಾಜ್ಯದಲ್ಲಿದ್ದ ನಾಲ್ಕು ಲಕ್ಷ ಮಂದಿ ಕಾಶ್ಮೀರಿ ಪಂಡಿತರ ಪೈಕಿ ಎರಡು ಮುಕ್ಕಾಲು ಲಕ್ಷ ಮಂದಿ ಮನೆ-ಮಠ ತೊರೆದು ಓಡಿ ಬರುವಂತೆ ಮಾಡಲಾಗಿದೆ. ಕ್ರಮೇಣ ಪಾಕಿಸ್ತಾನಿ ಪ್ರತ್ಯೇಕತಾವಾದಿಗಳ ಕೈ ಹಿಂದೂಗಳೇ ಹೆಚ್ಚಾಗಿರುವ ಜಮ್ಮುವಿನಲ್ಲಿ ಜಾಸ್ತಿಯಾಗುತ್ತಾ ನಡೆದಿದೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಕೊಟ್ಟ ವಿಶೇಷ ಸ್ಥಾನಮಾನ ದುರುಪಯೋಗವಾಗುತ್ತಿದೆ ಎಂಬುದು ನಿಸ್ಸಂಶಯ. ಹೀಗಿರುವಾಗ ಆ ರಾಜ್ಯದ ವಿಷಯದಲ್ಲಿ ದೇಶ ಇನ್ನಷ್ಟು ಟಫ್ ಆಗಬೇಕು. ಅದರ ಕುರಿತು ಚರ್ಚೆ ಮಾಡುವುದಲ್ಲ, ಚರ್ಚೆ ಮಾಡಲು ಅದೇನೂ ಬೇರೆ ದೇಶದ ನೆಲವಲ್ಲ. ನಮ್ಮದೇ ದೇಶದ ನೆಲ. ಅಮಿತ್ ಷಾ ಹೇಳದೆ ಕೇಳದೆ ಆ ಕೆಲಸ ಮಾಡುತ್ತಿದ್ದಾರೆ. ಆದರೆ ಮೋದಿ ಸಂಪುಟದ ಜಿತೇಂದರ್ ಸಿಂಗ್ ಅವರಿಗೆ ಚರ್ಚೆ ಬೇಕಂತೆ. ಜಿತೇಂದರ್ ಸಿಂಗ್ ಅವರ ಹೇಳಿಕೆ ಏನೇ ಇರಲಿ, ಅಮಿತ್ ಷಾ ಅವರ ಕಾರ್ಯತಂತ್ರ ಸರಿಯಾಗಿದೆ. ಕಾಶ್ಮೀರಕ್ಕೆ
ಕೊಟ್ಟ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ವಿಷಯದಲ್ಲಿ ಯಾರು ವಿರೋಧ ವ್ಯಕ್ತಪಡಿಸುತ್ತಾರೋ, ಅವರು ದೇಶದ ಪರವಾಗಿರಲು ಸಾಧ್ಯವಿಲ್ಲ.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಡುಭಾಗದಲ್ಲಿದ್ದ ಹೈದ್ರಾಬಾದ್ ಸಂಸ್ಥಾನವನ್ನು ಪಾಕಿಸ್ತಾನದೊಳಗೆ ವಿಲೀನಗೊಳಿಸಿಕೊಳ್ಳಲು ಮಹಮದಾಲಿ ಜಿನ್ನಾ ಲೆಕ್ಕ ಹಾಕಿದ್ದರು. ದೇಶ ಆಳುವವನು ಮುಸ್ಲಿಂ ಆದುದರಿಂದ ಅದು ಭಾರತದ ನಡುವೆ ಇದ್ದರೇನು? ಅದನ್ನು ಒಳಗೆ ಹಾಕಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬುದು ಆತನ ನಿಲುವಾಗಿತ್ತು. ಆದರೆ ಹೈದ್ರಾಬಾದ್ ಸಂಸ್ಥಾನದಲ್ಲಿ ಶೇಕಡಾ ಎಂಬತ್ತರಷ್ಟು ಹಿಂದೂ ಪ್ರಜೆಗಳಿದ್ದಾರೆ ಎಂಬುದು ಆತನಿಗೆ ಮುಖ್ಯವಾಗಲಿಲ್ಲ. ಹೀಗಾಗಿಯೇ ಒಳಗಿಂದೊಳಗೇ ಮಸಲತ್ತು ನಡೆಸಿ ಹೈದ್ರಾಬಾದ್ ಸಂಸ್ಥಾನವನ್ನು ನುಂಗಿ ಹಾಕಲು ಯತ್ನಿಸಿದ. ಅವತ್ತು ಜಿನ್ನಾ ಪ್ರಾಮಾಣಿಕವಾಗಿ ನಡೆದುಕೊಂಡಿದ್ದರೆ ಕಾಶ್ಮೀರದ ವಿಷಯದಲ್ಲಿ ಭಾರತ ಮೆದು ಧೋರಣೆ ತಳೆಯುತ್ತಿತ್ತೇನೋ? ಆದರೆ ಯಾವಾಗ ಜಿನ್ನಾ ಇಂತಹ ನಾಟಕ ಶುರುವಿಟ್ಟುಕೊಂಡರೋ, ಆಗ ಸೇನೆಯನ್ನು ಕಳಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್, ಬಲವಂತವಾಗಿ ನೆಹರೂ ಅವರನ್ನು ಒಪ್ಪಿಸಿ ಕಾಶ್ಮೀರದ ರಾಜ ಹರಿಸಿಂಗ್ ಜೊತೆ ಒಪ್ಪಂದವಾಗುವಂತೆ ನೋಡಿಕೊಂಡರು. ಆ ರಾಜ್ಯ ಭಾರತದ ಗಣತಂತ್ರದೊಳಗೆ ವಿಲೀನವಾಗುವಂತೆ ಮಾಡಿದರು.
ಹೇಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಸ್ವಾತಂತ್ರ್ಯ ಬಂದ ನಂತರ ಇಲ್ಲಿಯ ತನಕ ಕಾಶ್ಮೀರಕ್ಕಾಗಿ ದೇಶ ಲಕ್ಷಾಂತರ ಕೋಟಿ ರುಪಾಯಿ ಹಣವನ್ನು ವ್ಯಯಿಸಿದೆ. ನೆರೆ ರಾಷ್ಟ್ರದ ಕುತಂತ್ರವನ್ನು ತಡೆಯುವ ಸಲುವಾಗಿ ಸೇನೆಯನ್ನೇ ನಿಯೋಜಿಸಿದೆ. ಆದರೆ ಸೆಕ್ಯೂಲರಿಸಂ ಹೆಸರಿನ ಢೋಂಗಿ ಜಾತ್ಯತೀತವಾದಿಗಳು ಜಮ್ಮು ಕಾಶ್ಮೀರದ ವಿಷಯದಲ್ಲಿ ಇಲ್ಲದ ಮಾತನಾಡುತ್ತಾರೆ. ಅದೇನೇ ಇರಲಿ, ಆಪರೇಷನ್ ೪೪ ಮಾತ್ರ ನಿಜಕ್ಕೂ ಇದುವರೆಗಿನ ದಿ ಬೆಸ್ಟ್ ಯೋಜನೆ. ಆದರೆ ಅದು ಮೋದಿ ಸರ್ಕಾರದ ಕೀರ್ತಿ ಎಂದು ಭಾವಿಸಬೇಕಿಲ್ಲ. ಅದು ಬಿಜೆಪಿಯ ಯೋಜನೆ. ಮೋದಿ ಸರ್ಕಾರದ ಮಂತ್ರಿ ಸಂವಿಧಾನದ ೩೭೦ನೇ ವಿಧಿಯ ಕುರಿತು ಚರ್ಚೆ ನಡೆಯಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದರು ಎಂಬುದನ್ನು ಬಿಟ್ಟರೆ ಬಿಜೆಪಿ ಒಂದು ಪಕ್ಷವಾಗಿ ಅಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಸರಿಯಾಗಿಯೇ ಇದೆ. ಇನ್ನು ರಾಜ್ಯಪಾಲರ ವಿಷಯದಲ್ಲಿ ಅದು ನಡೆದುಕೊಂಡ ರೀತಿ ನೋಡುವವರ ಕಣ್ಣಿಗೆ ವಿವಾದವಾಗಿ ಕಂಡರೂ ಯುಪಿಎ ಅಧಿಕಾರದಲ್ಲಿದ್ದಾಗ ಇದೇ ಕೆಲಸ ಮಾಡಿತ್ತು. ಹೀಗಾಗಿ ಸಂವಿಧಾನ ಬದ್ಧವಾಗಿ ಪವಿತ್ರವಾಗಿದ್ದ ರಾಜ್ಯಪಾಲರ ಹುದ್ದೆ ಇವತ್ತು ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೋ, ಅವರು ಹೇಳಿದಂತೆ ಬದಲಾಗುತ್ತದೆ. ಎನ್‌ಡಿಎ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಅವಧಿಯಲ್ಲಿ ನೇಮಕಗೊಂಡಿದ್ದ ರಾಜ್ಯಪಾಲರನ್ನು ಒಬ್ಬೊಬ್ಬರನ್ನಾಗಿ ಬದಲಿಸಲಾಗುತ್ತಿದೆ.

ನಿಜ ಹೇಳಬೇಕೆಂದರೆ ಇದು ಚರ್ಚಾಸ್ಪದ ವಿಷಯ. ಯುಪಿಎ ಅವಧಿಯಲ್ಲಿ ಹೀಗೆ ಮಾಡಿದ್ದೇನೋ ನಿಜ. ಹಾಗಂತ ಎನ್‌ಡಿಎ ಕೂಡ ಮಾಡಬೇಕೆಂದಿರಲಿಲ್ಲ. ಆದರೆ ಯುಪಿಎ ಮಾಡಿದ ಕೆಲಸವನ್ನೇ ನಾನೂ ಮಾಡುತ್ತೇನೆ ಎಂಬಂತೆ ಅದು ನಡೆದುಕೊಳ್ಳುತ್ತಿದೆ. ಹಲವು ರಾಜ್ಯಪಾಲರ ರಾಜೀನಾಮೆಯನ್ನೂ ಪಡೆದು ಆ ಜಾಗಕ್ಕೆ ತನಗೆ ಬೇಕಾದವರನ್ನು ನೇಮಕ ಮಾಡಿದೆ. ಆ ಸರ್ಕಾರದಲ್ಲಿ ಸಚಿವರಾಗಿರುವ ನಿಹಾಲ್ ಚಂದ್ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತರೆ, ಕೆಲಸ ಕೊಡಿಸುತ್ತೇನೆ ಎಂದು ಹಣ ಪಡೆದು ಕೈ ಎತ್ತಿದ ಆರೋಪದ ಮೇಲೆ ಹಿರಿಯ ನಾಯಕ ರಾಜ್‌ನಾಥ್‌ಸಿಂಗ್ ಪುತ್ರನ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಕರ್ನಾಟಕದವರಾದ ಸದಾನಂದಗೌಡರ ಪುತ್ರನ ವಿಷಯದಲ್ಲೂ ಹೀಗೇ ಆಗಿದೆ. ಮೈತ್ರೇಯಿ ಗೌಡ ಎಂಬಾಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಬಂಧ ಬೆಳೆಸಿದ ಆರೋಪ ಅವರ ಪುತ್ರ ಕಾರ್ತಿಕ್ ಗೌಡರ ಹೆಗಲೇರಿದೆ. ಇನ್ನು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯ ಓದಿನ ವಿವಾದ ದೊಡ್ಡ ಮಟ್ಟದಲ್ಲೇ ಕಾಣಿಸಿಕೊಂಡಿತು. ವಾಸ್ತವವಾಗಿ ಇದನ್ನು ಇಷ್ಟು ದೊಡ್ಡದಾಗಿ ಬೆಳೆಸಬೇಕಿರಲಿಲ್ಲ. ನಮ್ಮ ಸಚಿವರಾಗುವವರಿಗೆ ಇಷ್ಟು ಓದಿದರೆ ಮಾತ್ರ ಇಷ್ಟು ಸಾಧನೆ ಮಾಡಬಹುದು ಎಂಬ ಕಲ್ಪನೆ ಬೆಳೆಯಬೇಕಿಲ್ಲ. ಏಳನೇ ಕ್ಲಾಸು ಓದಿದ್ದ ಕಾಮರಾಜ ನಾಡಾರ್ ಪ್ರಧಾನಿಯಾಗುವ ಲೆವೆಲ್ಲಿಗೆ ಹೋಗಿದ್ದರು. ಅದ್ಭುತ ಕಾಮನ್‌ಸೆನ್ಸ್ ಇದ್ದ ಮನುಷ್ಯ. ಆದರೆ ಸ್ಮೃತಿ ಇರಾನಿಯದು ಅನಗತ್ಯ ವಿವಾದ. ಆಕೆ ತಾನಾಗಿಯೇ ಮೈ ಮೇಲೆ ಎಳೆದುಕೊಂಡ ವಿವಾದ.

ಈ ಮಧ್ಯೆ ಪಕ್ಷದ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಮೇಲೆ ಸರ್ಕಾರ ಕಳ್ಳಗಿವಿ ಇಟ್ಟಿದೆ ಎಂಬ ಆರೋಪ ಕೇಳಿ ಬಂತು. ಇದಕ್ಕಾಗಿ ಅವರ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿಯಲು ಸಾಧನವನ್ನು ಇಡಲಾಗಿತ್ತು ಎಂಬ ಮಾತೂ ಕೇಳಿ ಬಂತು. ಗಡ್ಕರಿ ಅವರೇ ಅದನ್ನು ನಿರಾಕರಿಸಿದರು. ಆದರೆ ಒಂದಂತೂ ನಿಜ. ಕಳ್ಳಗಿವಿ ಇತ್ತೋ, ಇಲ್ಲವೋ ಆದರೆ ಬುದ್ಧಿವಂತ ಪ್ರಧಾನಿ ಇದ್ದರೆ ಎಲ್ಲ ಮಂತ್ರಿಗಳು, ಅಧಿಕಾರಿಗಳ ಮೇಲೆ ನಿಗಾ ವಹಿಸುವುದು ನಿಜ. ಮತ್ತು ಪ್ರಧಾನಿ ನರೇಂದ್ರ ಮೋದಿ ಎಲ್ಲರ ಮೇಲೆ ಕಣ್ಣಿಟ್ಟಿರುವುದೂ ನಿಜ. ಅದಕ್ಕಾಗಿ ದೆಹಲಿಯ ರಾಜಕೀಯ ವಲಯದಲ್ಲಿ ಒಂದು ಜೋಕ್ ಇದೆ. ಅದೆಂದರೆ ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್‌ಸಿಂಗ್ ತಮ್ಮ ಸಚಿವ ಸಂಪುಟದಲ್ಲಿದ್ದವರಿಗೆಲ್ಲ ಮುಕ್ತ ಅಧಿಕಾರ ನೀಡಿದರು. ಆದರೆ ಹೊಣೆಗಾರಿಕೆ ನೀಡಲಿಲ್ಲ. ಆದರೆ ನರೇಂದ್ರ ಮೋದಿ ಹಾಗಲ್ಲ. ಅವರು ಎಲ್ಲ ಮಂತ್ರಿಗಳಿಗೆ ಮುಕ್ತ ಹೊಣೆಗಾರಿಕೆ ನೀಡಿದ್ದಾರೆ. ಆದರೆ ಅಧಿಕಾರವನ್ನಲ್ಲ. ಅದು ಅವರ ಬಳಿಯೇ ಕೇಂದ್ರೀಕೃತವಾಗಿದೆ. ಇದು ಒಂದು ದೃಷ್ಟಿಯಿಂದ ಸರಿ.

ಯಾಕೆಂದರೆ ಈ ಹಿಂದೆ ಮನಮೋಹನ್‌ಸಿಂಗ್ ಎಲ್ಲದಕ್ಕೂ ಸೋನಿಯಾ ಗಾಂಧಿ ಮತ್ತವರ ಮಗ ರಾಹುಲ್ ಗಾಂಧಿಯ ಮಾತು ಕೇಳುವ ಸ್ಥಿತಿ ಇತ್ತು. ಆದರೆ ಈಗ ಹಾಗಲ್ಲ. ಎಲ್ಲವನ್ನೂ ನರೇಂದ್ರ ಮೋದಿ ಕೇಂದ್ರೀಕರಿಸಿಕೊಂಡಿದ್ದಾರೆ. ಎಷ್ಟರ ಮಟ್ಟಿಗೆಂದರೆ ಈ ಹಿಂದೆಲ್ಲ ಮನಮೋಹನ್‌ಸಿಂಗ್ ದಿಲ್ಲಿಯ ಸೌತ್ ಬ್ಲಾಕ್‌ನಲ್ಲಿರುವ ಕಚೇರಿಗೆ ಬಂದರೆ ಅವರ ಆಪ್ತ ಸಿಬ್ಬಂದಿಗಳು ಮಾತ್ರ ಕೆಲಸಕ್ಕೆ ಹಾಜರಿರುತ್ತಿದ್ದರು. ಈಗ ಮೋದಿ ಬರುವ ಮುನ್ನವೇ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಸೀಟಿನಲ್ಲಿ ಕುಳಿತಿರುತ್ತಾರೆ. ಇದನ್ನು ಟೀಕಿಸುವವರಿರಬಹುದು. ಆದರೆ ಇಂತಹ ಸೆಡವು ಒಬ್ಬ ಪ್ರಧಾನಿಗೆ, ಮುಖ್ಯಮಂತ್ರಿಗೆ ಇಲ್ಲದೆ ಹೋದರೆ ಕೆಲಸಗಳು ನಡೆಯುವುದಿಲ್ಲ. ಬದಲಿಗೆ ಲಾಬಿಗಳ ಕೆಲಸ ನಡೆಯುತ್ತದೆ.

ಈಗ ಯೋಜನಾ ಆಯೋಗವನ್ನೇ ತೆಗೆದುಕೊಳ್ಳಿ. ಅದೀಗ ನೆಪ ಮಾತ್ರದ ಸಂಸ್ಥೆಯಾಗಿ ಉಳಿದಿದೆ. ಚೀನಾದಲ್ಲಿ ಇದ್ದ ಯೋಜನಾ ಆಯೋಗದ ಹೆಸರನ್ನು ಬದಲಿಸಿ, ಅದನ್ನು ಮಾರ್ಗದರ್ಶನ ಆಯೋಗ ಎಂದು ಕರೆಯತೊಡಗಿದ್ದಾರೆ. ಇಲ್ಲಿರುವ ಯೋಜನಾ ಆಯೋಗವನ್ನು ರದ್ದು ಮಾಡಿ, ಅದನ್ನು ಬೇರೆ ರೂಪದಲ್ಲಿ ಮತ್ತಷ್ಟು ಪರಿಣಾಮಕಾರಿ ಸ್ವರೂಪದಲ್ಲಿ ನಿಲ್ಲಿಸಬೇಕು ಎಂಬ ಮೋದಿ ಬಯಕೆ ಸರಿಯಾಗಿಯೇ ಇದೆ. ಆದರೆ ಅವರ ಚಿಂತನೆಗಳು, ಅಂಬಾನಿ, ಅದಾನಿ ಅವರಂತಹ ಉದ್ಯಮಿಗಳನ್ನೇ ಬೆಳೆಸುವ ರೀತಿಯಲ್ಲಿ ರೂಪುಗೊಳ್ಳಬಾರದು ಅಷ್ಟೇ. ನಿಜ ಹೇಳಬೇಕೆಂದರೆ ಇವತ್ತು ಯೋಜನಾ ಆಯೋಗದ ಕೆಲಸ ನೆಪ ಮಾತ್ರಕ್ಕೆ ಎಂಬಂತಾಗಿದೆ. ಅವು ಯೋಜನೆಗಿಂತ ಯೋಜನೇತರ ವೆಚ್ಚಕ್ಕೆ ಹೆಚ್ಚು ಒತ್ತು ನೀಡುವ ಅನಿವಾರ್ಯತೆಗೆ ಸಿಲುಕಿವೆ. ಅದರ ಆಧಾರದ ಮೇಲೆ ರಾಜ್ಯಗಳು ತಮ್ಮ ತಮ್ಮ ಬಜೆಟ್ ಸ್ವರೂಪವನ್ನು ನಿರ್ಧರಿಸುತ್ತವೆ. ಅಥವಾ ಯೋಜನಾ ಗಾತ್ರ ಹೇಗಿರಬೇಕು ಎಂದು ನಿರ್ಧರಿಸುತ್ತವೆ.
ಆದರೆ ಯಾವುದೇ ಯೋಜನಾ ಆಯೋಗವಿರಲಿ, ರಾಜ್ಯ ಮಟ್ಟದಲ್ಲಿರುವ ಯೋಜನಾ ಮಂಡಳಿಗಳಿರಲಿ, ಅವು ಯೋಜನಾ ವೆಚ್ಚವನ್ನು ಹೆಚ್ಚು ಮಾಡಿ, ಯೋಜನೇತರ ವೆಚ್ಚವನ್ನು ಕಡಿಮೆ ಮಾಡಲು ಯತ್ನಿಸಿದ ಉದಾಹರಣೆಗಳಿವೆಯೇ? ಈ ಪೈಕಿ ಯೋಜನಾ ವೆಚ್ಚವೂ ಮುಂದೊಂದು ದಿನ ಕಡಿಮೆಯಾಗಿ ಯೋಜನೇತರ ವೆಚ್ಚಕ್ಕೆ ಅಂತ ಬಳಕೆಯಾಗುತ್ತದೆ. ಅಷ್ಟು ವ್ಯವಸ್ಥಿತವಾಗಿ ನಮ್ಮ ಅಧಿಕಾರಿಗಳು ಈ ಅಸಮಾನತೆ ಬೆಳೆಯುವಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಮೋದಿ ಅದರ ರೂಪವನ್ನು ಬದಲಿಸಲು ನಿರ್ಧರಿಸಿದರೆ, ಇಲ್ಲ. ೧೯೫೦ರಲ್ಲಿ ಪಂಚವಾರ್ಷಿಕ ಯೋಜನೆಗಳಂತಹವನ್ನು ಜಾರಿಗೆ ತರಲು ನೆಹರೂ ಇದನ್ನು ರಚಿಸಿದರು. ಈಗ ರದ್ದು ಮಾಡುವುದು ಸರಿಯಲ್ಲ ಎಂಬ ಮಾತು ಕೇಳಬಹುದು. ಆದರೆ ಕಾಲಕ್ಕೆ ತಕ್ಕಂತೆ ಅದರ ಸ್ವರೂಪ ಬದಲಾಗಬೇಕು ಮತ್ತು ದೇಶದ ಅಭಿವೃದ್ಧಿಯ ಮೇಲೆ ಅದು ಹೆಚ್ಚು ಒತ್ತು ನೀಡುವಂತಿರಬೇಕು.

ಹೀಗೆ ಹೇಳುತ್ತಾ ಹೋದರೆ ಮೋದಿ ಹುಟ್ಟಿಸಿದ ಆಶಾಭಾವನೆ ಸಾಕಷ್ಟಿದೆ. ಅದೇ ರೀತಿ ಅವರ ಸಂಪುಟದ ಹಲ ಸಚಿವರ ನಡವಳಿಕೆಯೂ ನಿರಾಸೆ ಮೂಡಿಸಿದೆ. ಅದೇನೇ ಇದ್ದರೂ ಈ ನೂರು ದಿನಗಳ ಎನ್‌ಡಿಎ ಅವಧಿ ಥೋಡಾ ಖುಷಿ, ಥೋಡಾ ಗಮ್ ಇದ್ದಂತೆ. ಅಚ್ಛೇ ದಿನ್ ಆಯೇಗಾ ಎಂಬ ಅವರ ಮಾತು ಇನ್ನೂರನೇ ದಿನಕ್ಕೆ ಬಂದು ಬಿಡುತ್ತದೆ ಎಂದಲ್ಲ. ಆದರೆ ಕನಿಷ್ಠ ಪಕ್ಷ ಮುನ್ನೂರಾ ಅರವತ್ತೈದನೇ ದಿನವಾದರೂ ಅದರ ಝಳಕು ಹೆಚ್ಚೆಚ್ಚಾಗಿ ಕಾಣಿಸಿಕೊಳ್ಳಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 September, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books