Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಸಿದ್ದರಾಮಯ್ಯ ರದ್ದು ಮಾಡಬೇಕಿದ್ದು ಕೆಪಿಎಸ್ಸಿಯನ್ನಲ್ಲ; ವಿಧಾನಸಭೆಯನ್ನ!


ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಹಾಗೆ ನೋಡಿದರೆ ಅವರಿಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಲು ಹೇಳಿಕೊಳ್ಳುವಂತಹ ಆಸಕ್ತಿ ಇರಲಿಲ್ಲ. ಅದರ ಬದಲು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಅವರ ಕಣ್ಣಿತ್ತು. ಕಾರಣ ಸ್ಪಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕಳೆದಂತೆ ವಿರೋಧ ಪಕ್ಷಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದರೆ ಮುಂಬರುವ ಬಿಬಿಎಂಪಿ ಚುನಾವಣೆ ಇರಬಹುದು, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆ ಇರಬಹುದು ಇಂಥಲ್ಲೆಲ್ಲ ಆಡಳಿತಾರೂಢ ಕಾಂಗ್ರೆಸ್‌ನ್ನು ಬಗ್ಗು ಬಡಿಯಬಹುದು ಎಂಬ ಲೆಕ್ಕಾಚಾರ ಅವರಿಗಿತ್ತು. ಆದರೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಕಾಂಗ್ರೆಸ್‌ನವರು ಒಗ್ಗೂಡಲು ದಾರಿ ಮಾಡಿಕೊಟ್ಟಂತಾಗಬಹುದು. ಯಡಿಯೂರಪ್ಪನವರ ವಿರುದ್ಧ ಕೇಸುಗಳು ಇರುವಾಗ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಮರಳಿ ಕಾಂಗ್ರೆಸ್ ತಲೆ ಎತ್ತಬಹುದು ಎಂಬುದು ಬಿಜೆಪಿ ವರಿಷ್ಠರ ಯೋಚನೆಯಾಗಿತ್ತು.

ಅಂದಹಾಗೆ ಇಂತಹ ಯೋಚನೆಯಲ್ಲಿ ತಪ್ಪೇನೂ ಇಲ್ಲ. ಯಡಿಯೂರಪ್ಪನವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದುದರಿಂದ ತಮ್ಮ ಶಕ್ತಿಯನ್ನು ಬೆಳೆಸಿಕೊಳ್ಳಲು ಅವರಿಗೂ ಇದು ಸಕಾಲ. ಅದೇ ರೀತಿ ಸಿದ್ದರಾಮಯ್ಯನವರನ್ನು ಬಡಿದು ಹಾಕಲು ಸಂಘಟನೆಯನ್ನು ಬಲಪಡಿಸಲು ಸಿಕ್ಕ ಅವಕಾಶ. ಉದಾಹರಣೆಗೆ ಅರ್ಕಾವತಿ ಡಿನೋಟಿಫಿಕೇಷನ್ ಹಗರಣವನ್ನೇ ನೋಡಿ. ೨೦೦೩ರಲ್ಲಿ ಈ ಲೇಔಟ್ ಹೆಸರಿನಲ್ಲಿ ಸುಮಾರು ಮೂರೂವರೆ ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಆದರೆ ಇದ್ದಕ್ಕಿದ್ದಂತೆ ಆ ಸರ್ಕಾರ ಯೋಜನೆಯ ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ ಒಂದು ಸಾವಿರ ಎಕರೆಗೂ ಹೆಚ್ಚಿನ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ನಿರ್ಧರಿಸಿತು. ಇದಾದ ನಂತರ ಕಾಲ ಕಾಲಕ್ಕೆ ಬಂದ ಎಲ್ಲ ಸರ್ಕಾರಗಳೂ ಅರ್ಕಾವತಿ ಬಡಾವಣೆಯನ್ನು ನಿರ್ಮಿಸಲು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಉದ್ದೇಶಿಸಿದ್ದ ಭೂಮಿಯಲ್ಲಿ ಹಲವು ಭಾಗವನ್ನು ಡಿನೋಟಿಫಿಕೇಷನ್ ಮಾಡುತ್ತಲೇ ಬಂದಿವೆ. ಹೀಗಾಗಿ ಎಸ್ಸೆಂ ಕೃಷ್ಣ ಅವರ ಕಾಲದಿಂದ ಹಿಡಿದು ಇಲ್ಲಿಯ ತನಕ ಆಗಿರುವ ಡಿನೋಟಿಫಿಕೇಷನ್ ಹಗರಣವೇನಿದೆ? ಇದಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿದರೆ ಸಾಲದು. ಬದಲಿಗೆ ಸಿಬಿಐ ತನಿಖೆಯೇ ಆಗಬೇಕು.

ಒಂದು ಸಲ ಬಡಾವಣೆಯ ನಿರ್ಮಾಣಕ್ಕೆ ಇಷ್ಟು ಪ್ರಮಾಣದ ಭೂಮಿ ಬೇಕು ಎಂದು ಸ್ವಾಧೀನಪಡಿಸಿಕೊಂಡ ಮೇಲೆ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸ ನಡೆಯಲೇಬೇಕು. ಆದರೆ ಯಾವ ಕಾರಣಕ್ಕಾಗಿ ಎಲ್ಲ ಸರ್ಕಾರಗಳು ಭೂಮಿಯನ್ನು ಡಿನೋಟಿಫೈ ಮಾಡುತ್ತಾ, ಅರ್ಧದಷ್ಟು ಭೂಮಿಯನ್ನು ಡಿನೋಟಿಫೈ ಮಾಡಿ ಕೈ ತೊಳೆದುಕೊಂಡಿವೆ? ಇದುವರೆಗೆ ಡಿನೋಟಿಫೈ ಆದ ಜಾಗದಲ್ಲಿ ಯಾವುದಾದರೂ ಸರ್ಕಾರಿ ಕಟ್ಟಡಗಳು ರಾಜ್ಯದ ಅಭಿವೃದ್ಧಿಯ ಉದ್ದೇಶಕ್ಕೆಂದು ನಿರ್ಮಾಣವಾಗಿವೆಯೇ? ಅದು ರಾಜ್ಯ ಸರ್ಕಾರದ್ದೇ ಇರಲಿ, ಕೇಂದ್ರ ಸರ್ಕಾರದ್ದೇ ಇರಲಿ ಅಥವಾ ಯಾವುದೇ ರೈತ ಅಲ್ಲಿ ತನ್ನ ಭೂಮಿಯನ್ನು ವಾಪಸು ಪಡೆದು ಉಳುಮೆಯ ಕೆಲಸ ಮಾಡುತ್ತಿದ್ದಾನೆಯೇ? ಅಥವಾ ಈ ಭೂಮಿ ಯಾವ್ಯಾವ ಬಿಲ್ಡರುಗಳ ಕೈ ಸೇರಿದೆ? ಇದಕ್ಕೆ ಪ್ರತಿಫಲವಾಗಿ ಯಾವ ಬಿಲ್ಡರುಗಳು ಎಷ್ಟು ಕಾಣಿಕೆ ಕೊಟ್ಟಿದ್ದಾರೆ? ಮತ್ತು ಈ ಜಾಗದಲ್ಲಿ ಯಾವ್ಯಾವ ಕಟ್ಟಡಗಳು ಎದ್ದು ನಿಂತಿವೆ? ಎಂಬ ಕುರಿತು ಒಂದು ಸಿಬಿಐ ತನಿಖೆ ನಡೆಸಿದರೆ ಸಾಕು. ಇಡೀ ಭೂಸ್ವಾಧೀನ ಪ್ರಕರಣದ ಬಣ್ಣ ಬಯಲಾಗುತ್ತದೆ.

ಅರ್ಕಾವತಿ ಬಡಾವಣೆ ಶುರುವಾದಾಗಿನಿಂದ ಡಿನೋಟಿಫೈ ದಂಧೆಯಲ್ಲಿ ದೊಡ್ಡ ಪ್ರಮಾಣದ ಹಣ ಆಯಾ ಪಕ್ಷಗಳ ದಿಲ್ಲಿ ವರಿಷ್ಠರಿಗೆ ಹೋಗಿದೆ. ಈಗಲೂ ಅಷ್ಟೇ. ಈ ಬಾರಿ ಸಿದ್ದರಾಮಯ್ಯ ಸರ್ಕಾರ ಡಿನೋಟಿಫಿಕೇಷನ್ ದಂಧೆಯ ಮೂಲಕ ಲೋಕಸಭಾ ಚುನಾವಣೆಯನ್ನು ನಿಭಾಯಿಸಿದೆ ಎಂಬುದು ಬಿಜೆಪಿಯ ದೂರು. ಇದು ಬಹಿರಂಗ ದೂರಾದರೆ ಅಂತರಂಗದಲ್ಲಿರುವ ಮಾತು ಇದಕ್ಕಿಂತ ಗಾಬರಿ ಹುಟ್ಟಿಸುತ್ತದೆ. ಈ ಬಾರಿ ಡಿನೋಟಿಫಿಕೇಷನ್ ದಂಧೆಯಿಂದ ಆರು ನೂರು ಕೋಟಿ ರುಪಾಯಿ ಚಂದಾ ಎತ್ತಲಾಯಿತು. ಈ ಪೈಕಿ ಇನ್ನೂರು ಕೋಟಿ ರುಪಾಯಿಗಳನ್ನು ಲೋಕಸಭಾ ಚುನಾವಣೆಗೆ ಅಂತ ಖರ್ಚು ಮಾಡಲಾಯಿತು. ಇನ್ನು ಇನ್ನೂರು ಕೋಟಿ ರುಪಾಯಿಗಳನ್ನು ಹೈಕಮಾಂಡ್‌ಗೆ ಕಳಿಸಲಾಯಿತು. ಉಳಿದ ಇನ್ನೂರು ಕೋಟಿ ರುಪಾಯಿ ಯಾರ‍್ಯಾರಿಗೆ ತಲುಪಬೇಕೋ ತಲುಪಿತು. ಇದು ಅಂತರಂಗದಲ್ಲಿ ಕೇಳಿ ಬರುತ್ತಿರುವ ಮಾತು. ಹೀಗಾಗಿ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸಿದರೆ ಹೇಳಿಕೊಳ್ಳುವಂತಹ ಪರಿಣಾಮ ಆಗುವುದಿಲ್ಲ. ಇಡೀ ಪ್ರಕರಣದಲ್ಲಿ ಬೇರೊಬ್ಬರನ್ನು ಹೊಡೆಯುವ ಕೆಲಸ ನಡೆಯುತ್ತದೆಯೇ ಹೊರತು ಬೇರಿನ್ನೇನೂ ಸಾಧನೆಯಾಗುವುದಿಲ್ಲ.

ಇದೇ ರೀತಿ ಕೆಪಿಎಸ್‌ಸಿ ನೇಮಕಾತಿ ವಿವಾದವೇ ಇರಬಹುದು. ಇನ್ಯಾವುದೇ ಹಗರಣ ಇರಬಹುದು. ಹಗರಣ ಎಂಬುದು ನಿರಂತರವಾಗಿ ನಡೆಯುವ ಕ್ರಿಯೆಯಂತಾಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ನ್ನು ತನ್ನ ನಿಷ್ಠರ ಬೆಳವಣಿಗೆಗೆ ಬೇಕಾದ ಏಣಿಯಂತೆ ಬಳಸುತ್ತಿದ್ದಾರೆ. ಸಹಜವಾಗಿಯೇ ಈ ಅಂಶ ರಾಜ್ಯ ಕಾಂಗ್ರೆಸ್‌ನಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. ಉದಾಹರಣೆಗೆ ಮಹಿಳೆಯರು, ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಮಾಡಿದ ಸಮಿತಿಯಿಂದ ಹಿಡಿದು ಮೂಲ ಕಾಂಗ್ರೆಸ್ಸಿನಲ್ಲಿ ತನಗೆ ಬೇಕಾದವರನ್ನು ಮೇಲೆಬ್ಬಿಸಲು ಸಿದ್ದರಾಮಯ್ಯ ನಡೆಸುತ್ತಿರುವ ಯತ್ನ ಆಳದಲ್ಲಿ ತಮ್ಮನ್ನು ಭದ್ರಪಡಿಸಿಕೊಳ್ಳುವ ಯತ್ನವೇ ಹೊರತು ಬೇರೇನಲ್ಲ. ಅಂದ ಹಾಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ನೇಮಕಗೊಂಡ ಸಮಿತಿಗೆ ಎಂ.ಸಿ.ನಾಣಯ್ಯ ಅಧ್ಯಕ್ಷರು. ನಾಣಯ್ಯ ಅವರ ಕಾರ್ಯ ದಕ್ಷತೆಯ ವಿಷಯದಲ್ಲಿ ಎರಡನೇ ಮಾತನಾಡಲು ಸಾಧ್ಯವಿಲ್ಲ. ಆದರೆ ಇಂತಹ ನೇಮಕಾತಿಯ ಮೂಲಕ ಹೋಗುವ ಸಂದೇಶವೇನು? ಕಾಂಗ್ರೆಸ್ ಪಕ್ಷದಲ್ಲಿ ಇದಕ್ಕೆ ಸೂಟಬಲ್ ಆದ ವ್ಯಕ್ತಿ ಇರಲಿಲ್ಲವೇ ಎಂಬುದು. ಪಕ್ಷದವರೇ ಇದ್ದಾಗ ಬೇರೆ ಪಕ್ಷದವರನ್ನು ತಂದು ಪ್ರತಿಷ್ಠಾಪಿಸುವುದು ತಮ್ಮ ಹಿಂಬಾಲಕರ ಪಡೆಯನ್ನು ಬೆಳೆಸುವ ಉದ್ದೇಶವೇ ಹೊರತು ಇನ್ನೇನಲ್ಲ ಎಂಬುದು ಕಾಂಗ್ರೆಸ್ಸಿಗರ ವಾದ.
ಇನ್ನು ಸಚಿವ ಸಂಪುಟ ವಿಸ್ತರಣೆಯ ವಿಷಯದಲ್ಲಿ, ಪುನರ್ರಚನೆಯ ವಿಷಯದಲ್ಲಿ ಸಿದ್ದರಾಮಯ್ಯನವರದು ಒಂದೇ ಹಟ. ಒಂದೋ ವಿಸ್ತರಣೆಯಾಗಬೇಕು. ಅದರಲ್ಲಿ ತಮಗೆ ಬೇಕಾದವರು ಮಂತ್ರಿಗಳಾಗಿ ಸೇರಬೇಕು. ಒಂದು ವೇಳೆ ಪರಮೇಶ್ವರ್ ಅವರಿಗೆ ಮಂತ್ರಿಯಾಗುವ ಆಸೆ ಇದ್ದರೆ ಮಂತ್ರಿಯಾಗಲಿ, ಆದರೆ ಯಾವುದೇ ಕಾರಣಕ್ಕೂ ಅವರು ಉಪಮುಖ್ಯಮಂತ್ರಿ ಆಗಬಾರದು ಎಂಬುದು ಸಿದ್ದರಾಮಯ್ಯನವರ ವಾದ. ಕಾರಣ, ಪರಮೇಶ್ವರ್ ಒಂದು ವೇಳೆ ಉಪಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯನವರಿಗೆ ಪರ್ಯಾಯ ಶಕ್ತಿ ಕೇಂದ್ರವಾಗುತ್ತಾರಂತೆ. ನಿಜ ಹೇಳಬೇಕೆಂದರೆ ಪರಮೇಶ್ವರ್‌ಗೆ ಸಿಎಂ ಆಗುವ ಆಸೆ ಇದ್ದುದೂ ನಿಜ. ಈಗ ಅದಾಗದೇ ಇರುವುದಕ್ಕೆ ಉಪಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇರುವುದೂ ನಿಜ. ಅದನ್ನವರು ತಮ್ಮ ಹುಟ್ಟುಹಬ್ಬದ ದಿನದಂದು ನೇರವಾಗಿ ಹೇಳಿದ್ದಾರೆ. ಆದರೆ ಯಾರೆಷ್ಟೇ ಮಂದಿ ಬಂದು ಪರಮೇಶ್ವರ್ ಡಿಸಿಎಂ ಆಗಬೇಕು ಎಂದರೂ ಸಿದ್ದರಾಮಯ್ಯ ಅವರದು ಪ್ರಕಾಂಡ ಮೌನ.

ಅಂದಹಾಗೆ ಅವರು ಅಹಿಂದ ಎನ್ನುತ್ತಾರಲ್ಲ? ಈ ಅಹಿಂದ ವರ್ಗಗಳು ಇವತ್ತು ಕಾಂಗ್ರೆಸ್ ಜತೆಗಿವೆಯೇ? ನಿಶ್ಚಿತವಾಗಿಯೂ ಇಲ್ಲ. ಅಲ್ಪಸಂಖ್ಯಾತರನ್ನೇ ತೆಗೆದುಕೊಳ್ಳಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡು ಹೋಳಾಯಿತು. ಹಿಂದುಳಿದ ವರ್ಗಗಳ ಪೈಕಿ ಹಲವು ಹಿಂದುಳಿದ ವರ್ಗಗಳು ಕಾಂಗ್ರೆಸ್ ಪರವಾಗಿಲ್ಲ. ದಲಿತರ ಪೈಕಿ ಬಲಗೈನವರು ಕಾಂಗ್ರೆಸ್ ಜೊತೆಗಿದ್ದರು. ಎಡಗೈನವರು ಬಿಜೆಪಿ ಜೊತೆಗಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮೂರು ಹೋಳಾಗಿದ್ದುದರಿಂದ, ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿ ಪರಮೇಶ್ವರ್ ಇದ್ದುದರಿಂದ ಎಡಗೈ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತು. ಆದರೆ ಎಡಗೈ ಸಮುದಾಯ ಈಗ ಯಥಾಪ್ರಕಾರ ಬಿಜೆಪಿಯ ತೆಕ್ಕೆಗೆ ಮರಳಿದೆ. ಬಲಗೈನವರು ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಕುದಿಯುತ್ತಿದ್ದಾರೆ. ಅಂದ ಮೇಲೆ ಕಾಂಗ್ರೆಸ್ ಜೊತೆ ಇರುವ ವರ್ಗ ಯಾವುದು? ಕುರುಬ ಸಮುದಾಯದ ಗಣನೀಯ ಮತಗಳನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ನಿರ್ದಿಷ್ಟ ವೋಟ್ ಬ್ಯಾಂಕ್ ಅಂತ ಇಲ್ಲ. ಮೊನ್ನೆ ಕೆಪಿಎಸ್‌ಸಿ ವತಿಯಿಂದ ನೇಮಕವಾದ ಮುನ್ನೂರಾ ಅರವತ್ತೆರಡು ಮಂದಿಯನ್ನು ಕಿತ್ತು ಹಾಕಲಾಯಿತಲ್ಲ. ಯಾಕೆ? ಒಂದು ವ್ಯವಸ್ಥೆಯಲ್ಲಿ ಹಣ ಕೊಡದಿದ್ದರೆ, ಪ್ರಭಾವ ಇಲ್ಲದಿದ್ದರೆ ಕೆಲಸ ಸಿಗುವಂತಹ ವಾತಾವರಣ ಯಾವುದೇ ಇಲಾಖೆಯಲ್ಲಿ ಇದೆಯೇ?

ಆರೋಗ್ಯ ಇಲಾಖೆಯಲ್ಲಿ ಒಂದು ನರ್ಸ್ ಕೆಲಸ ಸಿಗಬೇಕೆಂದರೂ ಎರಡು ಲಕ್ಷ ರುಪಾಯಿ ಸುರಿಯುವ ಸ್ಥಿತಿಯನ್ನು ಸೃಷ್ಟಿಸಲಾಗಿದೆ. ಇಂತಹ ಸಂದರ್ಭದಲ್ಲಿ ಕೆಪಿಎಸ್‌ಸಿ ನೇಮಕಾತಿಯನ್ನು ರದ್ದು ಮಾಡುವವರು ಯಾರು? ಸಚಿವ ಸಂಪುಟ ರದ್ದು ಮಾಡಿದೆ ತಾನೇ? ಈ ಸಚಿವ ಸಂಪುಟದಲ್ಲಿರುವವರ ಪೈಕಿ ಬಹುತೇಕ ಮಂದಿ ಚುನಾವಣೆಯಲ್ಲಿ ಗೆದ್ದು ಬರಲು ಚುನಾವಣಾ ಆಯೋಗ ನಿಗದಿ ಮಾಡಿದಷ್ಟು ಹಣ ವೆಚ್ಚ ಮಾಡಿ ಗೆದ್ದಿದ್ದಾರೆಯೇ? ಹೋಗಲಿ, ಮಂತ್ರಿಗಳಾದವರ ಪೈಕಿ ಎಷ್ಟು ಮಂದಿ ಹೋಗಿ ಹೈಕಮಾಂಡ್‌ಗೆ ಕಾಣಿಕೆ ಅರ್ಪಿಸಿ ಬಂದಿದ್ದಾರೆ? ಇದೆಲ್ಲ ಸಿದ್ದರಾಮಯ್ಯನವರಿಗೆ ಗೊತ್ತಲ್ಲವೇ? ನಿಜವಾಗಿಯೂ ತನಿಖೆ ಅಂತ ಮಾಡಿದರೆ ಮೊದಲು ರದ್ದಾಗುವುದು ರಾಜ್ಯ ವಿಧಾನಸಭೆ. ಇಲ್ಲಿಗೆ ಆಯ್ಕೆಯಾದವರ ಪೈಕಿ ಅಧಿಕಾರ ಹಿಡಿದವರು, ಮಂತ್ರಿಗಳ ಪೈಕಿ ಬಹಳಷ್ಟು ಮಂದಿ ಕೆಪಿಎಎಸ್‌ಸಿ ನೇಮಕಾತಿಗೆ ಅಂತ ಬಹಳಷ್ಟು ಅಭ್ಯರ್ಥಿಗಳು ಕೊಟ್ಟ ಹಣಕ್ಕಿಂತ ಇಪ್ಪತ್ತು, ಮೂವತ್ತರಷ್ಟು ಹಣವನ್ನು ವೆಚ್ಚ ಮಾಡಿದ್ದಾರೆ. ಅಂದ ಮೇಲೆ ಇಂತಹವರನ್ನು ಮೊದಲು ವಜಾ ಮಾಡಬೇಕಲ್ಲವೇ? ಭ್ರಷ್ಟಾಚಾರ ಯಾವತ್ತೂ ತಳಮಟ್ಟದಿಂದ ನಾಶವಾಗುವುದಿಲ್ಲ ಸಿದ್ದರಾಮಯ್ಯ. ಮೇಲು ಮಟ್ಟದಿಂದಲೇ ನಾಶವಾಗಬೇಕು.

ಆದರೆ ಇವತ್ತು ಭ್ರಷ್ಟಾಚಾರವೆಂಬ ಮರದಿಂದ ಕೆಲವು ಎಲೆಗಳನ್ನು ಕಿತ್ತು ಹಾಕಿದರೆ ಭ್ರಷ್ಟಾಚಾರ ನಿಲ್ಲುವುದಿಲ್ಲ. ಬದಲಿಗೆ ಬೇರು ಹಾಗೆಯೇ ಉಳಿಯುತ್ತದೆ. ಇನ್ನು ಸ್ವಲ್ಪ ದಿನದಲ್ಲಿ ಮತ್ತೆ ಎಲೆಗಳು ನಳನಳಿಸತೊಡಗುತ್ತವೆ. ಅರ್ಥಾತ್, ಭ್ರಷ್ಟಾಚಾರ ಎಂಬುದು ಮಾತ್ರ ನಿರಂತರವಾಗಿ ಮುಂದುವರಿಯುತ್ತದೆ. ಯಾಕೆಂದರೆ ಭ್ರಷ್ಟಾಚಾರದ ಮೂಲವನ್ನು ಹೊಡೆಯದೇ ಎಲೆಗಳನ್ನು ಮಾತ್ರ ಕಿತ್ತು ಹಾಕಿದರೆ ಸಾಲದು. ಇದು ಗೊತ್ತಿದ್ದೂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಒಂದು ನಿರ್ಧಾರ ಕೈಗೊಂಡರು. ದಲಿತ ಸಚಿವ ವಿ.ಶ್ರೀನಿವಾಸ ಪ್ರಸಾದ್, ಎಚ್.ಆಂಜನೇಯ ಅವರಂತಹವರು ವಿರೋಧಿಸಿದರೂ ಲೆಕ್ಕಿಸಿದೆ ತಮ್ಮ ಮಾರ್ಗ ಹಿಡಿದರು. ಹೀಗೆ ಯಾವ ಕಡೆಯಿಂದ ನೋಡಿದರೂ ಆಡಳಿತದಲ್ಲಿ ಸಿದ್ದರಾಮಯ್ಯ ತಮ್ಮದೇ ಛಾಪನ್ನು ಮೂಡಿಸಲು ಯತ್ನಿಸುತ್ತಿದ್ದಾರೆ. ಇದರ ಪರಿಣಾಮ ಏನಾಗುತ್ತದೆ ಎಂದರೆ ದಿನಕಳೆದಂತೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಬೆಳೆಯುತ್ತಾ ಜ್ವಾಲಾಮುಖಿಯಾಗುತ್ತದೆ. ಇಂತಹ ಜ್ವಾಲಾಮುಖಿ ಸಹಜವಾಗಿಯೇ ವಿರೋಧ ಪಕ್ಷಗಳು ಬೆಳೆಯಲು ದಾರಿ ಮಾಡಿಕೊಡುತ್ತವೆ. ಬಿಜೆಪಿ ಲೆಕ್ಕ ಹಾಕುತ್ತಿರುವುದು ಮತ್ತು ಯಡಿಯೂರಪ್ಪನವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಇದೇ ಕಾರಣಕ್ಕಾಗಿ.


ಇವತ್ತೇನೋ ಸಿದ್ದರಾಮಯ್ಯನವರ ಆಟ ನಡೆಯುತ್ತಿರಬಹುದು. ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಕೂಡ ಸ್ವಲ್ಪ ದಿನಗಳ ಕಾಲ ತಣ್ಣಗೆ ಸಿದ್ದರಾಮಯ್ಯನವರ ಆಟವನ್ನು ನೋಡಬಹುದು. ಯಾಕೆಂದರೆ ಅಧಿಕಾರ ಕಳೆದುಕೊಂಡ ಈ ಸಂದರ್ಭದಲ್ಲಿ ಪೋಷಕರು ಬೇಕಲ್ಲ? ಆ ಗೆಟಪ್ಪಿನಲ್ಲಿರುವ ಸಿದ್ದರಾಮಯ್ಯ ಸ್ವಲ್ಪ ದಿನಗಳ ಕಾಲ ಸುಮ್ಮನಿರಬಹುದು. ಆದರೆ ಬಿಜೆಪಿಯಾಗಲೀ, ಜೆಡಿಎಸ್ ಆಗಲೀ ತುಂಬ ಕಾಲ ಸುಮ್ಮನಿರುವುದಿಲ್ಲ ಎಂಬುದು ಸ್ಪಷ್ಟ. ಅದರರ್ಥ, ಮುಂದಿನ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಕುಸಿಯುತ್ತಾ ಹೋಗುತ್ತದೆ. ಯಡಿಯೂರಪ್ಪ, ಕುಮಾರಸ್ವಾಮಿ ಅವರಂತಹವರು ಮತ್ತೆ ಬೆಳೆಯುತ್ತಾ ಹೋಗುತ್ತಾರೆ. ಒಬ್ಬ ನಾಯಕ ದೀರ್ಘ ಕಾಲ ಮುಖ್ಯಮಂತ್ರಿ ಆಗಿರಬೇಕೆಂದರೆ ನಡೆದುಕೊಳ್ಳುವ ರೀತಿ ಇದಲ್ಲ ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಾಗುವ ಹಾಗೆ ಮಾಡುತ್ತಾರೆ. ಅವರು ಹಾಗೆ ಮಾಡಲಿ ಎಂಬುದೇ ಸಿದ್ದರಾಮಯ್ಯನವರ ಬಯಕೆಯಾಗಿರುವಾಗ ಅದನ್ನು ತಪ್ಪಿಸುವುದು ಹೇಗೆ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 August, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books