Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಎಲ್ಲರೂ ನಡೆದ ಹೆದ್ದಾರಿಗಿಂತ ನೀವಾಗಿ ಮಾಡಿಕೊಂಡ ಕಾಲುದಾರಿ ಅದ್ಭುತ!

ರಾತ್ರಿ ತುಂಬ ಹೊತ್ತಿನ ತನಕ ತೆಲುಗು ಕವಿ ಶ್ರೀಶ್ರೀ ಕವಿತೆಗಳೊಂದಿಗೆ ಆಟವಾಡುತ್ತಾ ಕುಳಿತಿದ್ದೆ. ಹೊರಗೆ ಜಡಿಮಳೆ. ಮನಸ್ಸಿನಲ್ಲಿ ಪ್ರಶ್ನೆಗಳ ನಾಗರಗಳಿದ್ದವು. ತಮಾಷೆಯೆಂದರೆ, ನನ್ನನ್ನು ಯಾವ ಸಮಸ್ಯೆಯೂ, ಯಾವ ಪ್ರಶ್ನೆಯೂ ದಿನಗಟ್ಟಲೆ ಬೆಂಬಿಡದ ಭೂತವಾಗಿ ಕಾಡಿಲ್ಲ. ಕೆಲವು ನಿರಾಸೆಗಳು ಕೆಲವು ಅವಮಾನಗಳು ಮಾತ್ರ ಹಾಗೆ ಬೆನ್ನತ್ತಿ ಬಂದು ಕಾಡಿವೆಯೆಂಬುದನ್ನು ಬಿಟ್ಟರೆ, ಸಮಸ್ಯೆಗಳನ್ನು ನಾನು ಸಲೀಸಾಗೇ handle ಮಾಡಿದ್ದೇನೆ. ಈ ಜನ್ಮದ ಅತಿದೊಡ್ಡ ಸೌಭಾಗ್ಯ ಎಂದು ಭಾವಿಸಿದ ನೌಕರಿ ಫಕ್ಕಂತ ಜೇಬಿನೊಳಗಿದ್ದ ಚಿಲ್ಲರೆ ಕಳೆದುಹೋದಂತೆ ಕಳೆದು ಹೋದಾಗ ಕೂಡ ಬಹಳ ಹೊತ್ತು ಕಳವಳ ಪಟ್ಟಿರಲಿಲ್ಲ. ಒಬ್ಬನೇ ಕುಳಿತು ಒಂದು ಟೀ ಕುಡಿದು, ಇಡಿಯಾಗಿ ಒಂದು ಸಿಗರೇಟು ಮುಗಿಸುವ ಹೊತ್ತಿಗೆ, ಒಂದು ನಿರ್ಧಾರಕ್ಕೆ ಬಂದುಬಿಡುತ್ತೇನೆ. ಸರಿ, ಇದು ಮುಗಿಯಿತು. ಒಳಿತೋ-ಕೆಡುಕೋ, ಲಾಭವೋ-ನಷ್ಟವೋ ಮುಗೀತಲ್ಲ? ಇಲ್ಲಿಗೆ ಇದನ್ನು ಕೈಬಿಡಬೇಕು. What next?

What next ಅಂತ ಪ್ರಶ್ನೆಯೊಂದನ್ನು ಹಾಕಿಕೊಂಡು ಹೊಸ ದಾರಿ ಹುಡುಕಬೇಕು. ಹೊಸ ದಾರಿ ಸಿಗದಿದ್ದರೆ ದಾರಿ ಮಾಡಿಕೊಳ್ಳಬೇಕು. ಎಲ್ಲರೂ ನಡೆದ ಹೆದ್ದಾರಿಗಿಂತ ನೀವಾಗಿ ಮಾಡಿಕೊಂಡ ಕಾಲುದಾರಿ ಅದ್ಭುತ. ರೋಮಾಂಚಕಾರಿ. ಅಲ್ಲೂ ಆಕ್ಸಿಡೆಂಟಿನ ಭಯವಿದೆ. ಆದರೆ ಅಲ್ಲಿ ಆಕ್ಸಿಡೆಂಟು ನೀವೇ ಮಾಡಿಕೊಳ್ಳುವಂತಹುದಾಗಿರುತ್ತದೆಯೇ ಹೊರತು ಮತ್ಯಾವುದೋ ಲಾರಿ ಗುದ್ದಿ ಕೆಡವುವ ಭಯವಿರುವುದಿಲ್ಲ. ಅನೇಕರಿಗೆ ಈ ಉಮ್ಮೇದಿಯಿರುವುದಿಲ್ಲ, ಉತ್ಸಾಹವಿರುವುದಿಲ್ಲ. ಅವರದು ಬಡಿಸಿಟ್ಟ ಎಲೆಯಂತಹ ಬದುಕು. ಅಲ್ಲಿ ಪ್ರತಿಯೊಂದೂ ಸರಳ ರೇಖೆಯೇ. ಅಮ್ಮನ ಹಾಲು, ಆಮೇಲೆ ಫೆರೆಕ್ಸು ಕರೆಕ್ಟಾದ ವಯಸ್ಸಿಗೆ ಅನ್ನಪ್ರಾಶನ, ಮರ್ಯಾದಸ್ಥ ತಂದೆ-ತಾಯಿ, ಸೊಗಸಾದ ಸ್ಕೂಲು, ಒಳ್ಳೆ ಮಾರ್ಕು, ದಿವಿನಾದ ಕಾಲೇಜು, ಎಂತೆಂಥಾ ಮೇಷ್ಟ್ರುಗಳು, ಕೈ ತುಂಬಾ ಪ್ರೈಜು, ಒಳ್ಳೆಯದೊಂದು ನೌಕರಿ, ಅದರಷ್ಟೇ ಒಳ್ಳೆಯ ಹೆಂಡತಿ, ಅವಳು ಹೆತ್ತು ಕೊಟ್ಟ ಮಕ್ಕಳು, ಅವರಿಗೊಂದಿಷ್ಟು ಅಮ್ಮನ ಹಾಲು, ಅದು ಮುಗಿದ ಮೇಲೆ ಫೆರೆಕ್ಸು... ಹೀಗೆ ಅವರ ಪಾಲಿಗೆ ಬದುಕೊಂದು straight line ಕಣ್ರೀ... ಎಂಥ ಅದೃಷ್ಟವಂತರು ಅಂತೀರಾ?
ಬೆಂಕಿ ಬಿತ್ತು ಅವರ ಅದೃಷ್ಟಕ್ಕೆ!

ಇಂಥವರನ್ನು ನಮ್ಮ ಸಮಾಜ “ಒಳ್ಳೆಯವರು" ಅಂತ ಕೂಡ ಕರೀತದೆ. ಯಾಕೆಂದರೆ, ಅವರು ಕೆಟ್ಟದನ್ನು ಮಾಡಲು ಕೂಡ ಆಗದಷ್ಟು ಒಳ್ಳೆಯವರು! ನಮ್ಮ ಸಮಾಜ ಎಷ್ಟು ಹಿಪಾಕ್ರೇಟ್ ಆಗಿದೆಯೆಂದರೆ... ಯಾರಿಗೂ ಕೆಟ್ಟದ್ದನ್ನು ಮಾಡದವನನ್ನು ತಕ್ಷಣ ಒಳ್ಳೆಯವನೆಂದು ಒಪ್ಪಿಕೊಂಡುಬಿಡುತ್ತದೆ. ಒಳ್ಳೇದು ಮಾಡದಿದ್ರೂ ಚಿಂತೆಯಿಲ್ಲ, ಕೆಟ್ಟದ್ದಂತೂ ಮಾಡಲಿಲ್ವಲ್ಲ ಎಂದು ನಿಟ್ಟುಸಿರುಗರೆಯುತ್ತದೆ. ಮಟ್ಟಸವಾಗಿ ಕೈ ತುಂಬ ಲಂಚ ತೆಗೆದುಕೊಂಡು ಕೆಲಸ ಮಾಡಿಕೊಟ್ಟವನನ್ನು ನಿಲ್ಲಿಸಿ ಮೆಟ್ಟಿನಲ್ಲಿ ಹೊಡೆಯುವ ಬದಲು, ‘ಛೆ, ತಿಂದರೂ ಕೆಲಸ ಮಾಡಿಕೊಡ್ತಾನಲ್ರೀ..’ ಎಂದು ಹೊಗಳಿ ಆನಂದಿಸುತ್ತದೆ. ಇದನ್ನೇ ಶ್ರೀಶ್ರೀ ‘ವಡ್ಡಿಂಚಿನ ವಿಸ್ತರ‍್ಲು ಮೀಜೀವಿತಾಲು’ ಅಂತಾನೆ. ನಿಮ್ಮ ಬದುಕುಗಳು ಬಿಡಿಸಿಟ್ಟ ಊಟದೆಲೆಗಳು, ಎಲ್ಲವೂ ಸರಳರೇಖೆಗಳೇ, ಆದರೆ, ಅಕಸ್ಮಾತ್ ಸರಳರೇಖೆ ಚೆದುರಿಹೋಯಿತೋ... ಮುಗಿಯಿತು. ಯಾರೋ ಕಟ್ಟಿಕೊಟ್ಟ ಗೋಡೆಯ ನಡುವೆ ಬದುಕುವವರು ಒಂದೇ ಒಂದು ಇಟ್ಟಿಗೆ ಕಳಚಿ ಬಿದ್ದರೂ ಕಂಗಾಲಾಗಿ ಹೋಗುತ್ತಾರೆ. ನಲವತ್ತನೇ ವಯಸ್ಸಿನಲ್ಲಿ ಡಯಾಬಿಟೀಸು ಬಂದರೆ ಸಾಕ್ಷಾತ್ತು AIDS ಬಂದವರಂತೆ ನಡುಗಿ ಹೋಗುತ್ತಾರೆ. ಅವರ ಸೈಟಿನಲ್ಲಿ ಅಲೆಮಾರಿಯೊಬ್ಬ ಗುಡಿಸಲು ಹಾಕಿಕೊಂಡರೆ ಅಂಗೈ ಮೇಲೇ ಯಾರೋ ಕಾಲಿಟ್ಟರೆಂಬಂತೆ ಕಿರಿಚುತ್ತಾರೆ. ಮಗಳು ಫೇಲಾದರೆ ಧರ್ಮಸ್ಥಳಕ್ಕೆ ಹರಕೆ ಕಟ್ಟುತ್ತಾರೆ. ಮಗ ಓಡಿ ಹೋದರೆ, ಸರ್ವನಾಶವಾದವರಂತೆ ನೆಲ ಹಿಡಿದು ಮಲಗುತ್ತಾರೆ. ರಿಟೈರ್‌ಮೆಂಟಿನ ಹೊತ್ತಿಗೆ ಒಂಬತ್ತು ಚದರದ್ದೊಂದು ಮನೆ ಕಟ್ಟಿ, ಸಂಜೆಯಾದ ಕೂಡಲೇ ಎಲ್ಲ ಲೈಟೂ ಆರಿಸಿ ಕರೆಂಟ್ ಬಿಲ್ಲು ಉಳಿಸಿದೆವೆಂಬ ಆನಂದಭರಿತ ದುಃಖ ದಲ್ಲಿ, ಅಂಗಳದ ಕತ್ತಲೆಯಲ್ಲಿ ಕುಳಿತೇ ಕರಗಿ ಹೋಗುತ್ತಾರೆ. ಅಂಥ ಅನೇಕರು ಸತ್ತಾಗ ಅದು ಸುದ್ದಿಯೂ ಆಗುವುದಿಲ್ಲ, ಜಾಹೀರಾತೂ ಆಗುವುದಿಲ್ಲ. ಅವರು ಸತ್ತು ಎಷ್ಟೋ ವರ್ಷದ ನಂತರವೂ ಅವರ ಹೆಸರಿನಲ್ಲೊಂದು ಕಳ್ಳ ಓಟು ನಿಕೃಷ್ಟ ರಾಜಕಾರಣಿಯೊಬ್ಬನಿಗೆ ಸಂದಾಯವಾಗುತ್ತಲೇ ಇರುತ್ತದೆ.
ಹೇಳಿ, ಅದೃಷ್ಟವೆಂದರೆ, ಒಳ್ಳೆಯತನವೆಂದರೆ-ಇದೇನಾ?

ನನಗೆ ಸರಿಯಾಗಿ ಗೊತ್ತಿಲ್ಲ. ನನಗೆ ಈ ಅದೃಷ್ಟ ಒದಗಿ ಬರಲಿಲ್ಲ. ಬಂದದ್ದನ್ನು ನಾನು ಉಳಿಸಿಕೊಳ್ಳಲಿಲ್ಲ. ಸವತೇಕಾಯಿ ತಿಂದು ಸಭ್ಯನೆನಿಸಿಕೊಳ್ಳುವುದಕ್ಕಿಂತ ಮೆಣಸಿನ ಖಾರ ಕಚ್ಚಿ ಕುಣಿದಾಡುವುದನ್ನೇ ಆಯ್ದುಕೊಂಡೆ. ತಪ್ಪುಗಳನ್ನು ಮಾಡಿದೆ. ಕೆಟ್ಟದ್ದನ್ನು ಮಾಡಿದೆ. ಕೆಲವೊಮ್ಮೆ ಯಾರದೋ ತಪ್ಪು ಮೈಮೇಲೆ ಹಾಕಿಕೊಂಡು ಶಿಕ್ಷೆ ಅನುಭವಿಸಿದೆ. ಕಡೆಗೊಂದು ದಿನ ಇದೆಲ್ಲದರಿಂದ ರೋಸಿ, ಬೇಸತ್ತು, ಹಿಮಾಲಯಕ್ಕೆ ಓಡಿ ಹೋದೆ. ನನಗೆ ಆ ದಿವಸವಿನ್ನೂ ಚಿತ್ರದಂತೆ ಕಣ್ಣೆದುರಿಗಿದೆ. ನನ್ನ ತಾಯಿ ಅಳುತ್ತಿದ್ದಳು. ನಾನೇ ಕಷ್ಟಪಟ್ಟು ದುಡಿದಿದ್ದ ನೂರು ರುಪಾಯಿಗಳನ್ನು ಜೇಬಿಗಿರಿಸಿಕೊಂಡು ಸಂಜೆ ನಾಲ್ಕೂವರೆಯ ರೈಲಿಗೆ ಹೊರಟುಬಿಟ್ಟೆ. ಸನ್ಯಾಸಿಯಾಗಲು ಹೊರಟ ಮಗನನ್ನು ಯಾವ ತಾಯಿ ತಾನೇ ಹರಸಿ ಕಳಿಸುತ್ತಾಳೆ? ‘ದೇವರು ಭೆಟ್ಟಿಯಾಗದಿದ್ರೆ ಬೇಗ ಬಂದುಬಿಡು’ ಅಂದಿದ್ದಳು. ಎರಡು ದಿನದ ಪ್ರಯಾಣದ ನಂತರ ದಿಲ್ಲಿ ತಲುಪಿದೆ. (ಆಗಿನ್ನೂ ಇಂದಿರಾಗಾಂಧಿ ಬದುಕಿದ್ದಳು. ನನಗಂಥಾ ಪರಿಚಯವೇನೂ ಇರದಿದ್ದರಿಂದ ಆಕೇನ ಭೇಟಿಯಾಗಲಿಲ್ಲ ಅಂತಿಟ್ಕೊಳ್ಳಿ!) ದಿಲ್ಲಿಯಿಂದ ಹರ್‌ದ್ವಾರಕ್ಕೆ ರೈಲು. ಹರ್‌ದ್ವಾರದ ರೈಲ್ವೇ ಸ್ಟೇಷನ್ನಿನಲ್ಲಿ ಇಳಿದಾಗ ನನ್ನ ಜೇಬಿನಲ್ಲಿದ್ದದ್ದು ಕೇವಲ ಮೂರು ರುಪಾಯಿ. ಎರಡು ದೊನ್ನೆ ಖಿಚಡಿ, ಒಂದು ಕಟ್ಟು ಬೀಡಿ-ಬೆಂಕಿಪೆಟ್ಟಿಗೆಗೆ ಅದಿಷ್ಟೂ ಆಹುತಿಯಾಯಿತು. ರಾತ್ರಿ ಅದೊಂದು ಧರ್ಮಶಾಲೆಯಲ್ಲಿ ಮಲಗಿದ್ದೆ. ಬೆಳಿಗ್ಗೆ ಎದ್ದರೆ ಬಟಾಬಯಲು. ಹಸಿವು, ಶೂನ್ಯ ಮತ್ತು ಪರದೇಸಿತನ.

ಅವತ್ತೂ ಅಷ್ಟೆ, ನನಗೆ ಹರ್‌ದ್ವಾರ್‌ದಲ್ಲಿ ಕೆಲಸ ಸಿಗುತ್ತೆ, ಮುಂದೆ ಹಿಮಾಲಯದ ತುದಿಗೆ ಹೋಗುತ್ತೇನೆ, ಅಲ್ಲಿ ದೇವರು ಸಿಕ್ಕೇ ಸಿಗುತ್ತಾನೆ ಎಂಬ ಭರವಸೆ ಮನಸ್ಸಿನಲ್ಲಿತ್ತು. ನೆಟ್ಟಗೆ ಹೋಗಿ ಹತ್ತಾರು ಕಡೆ ನೌಕರಿ ಕೇಳಿದೆ. ಕಡೆಗೊಂದು ದಿನ ಸಿಕ್ಕೂ ಬಿಡ್ತು. ಅಲ್ಲಿಂದ ಮುಂದೆ ಬದರೀನಾಥ್ ತಲುಪುವುದಕ್ಕೆ ಬೇಕಾಗುವಷ್ಟು ದುಡ್ಡು ದುಡಿದುಕೊಂಡು, ಸ್ವೀಡನ್‌ನ ಮಿತ್ರ ಕ್ರುತ್‌ನೊಂದಿಗೆ ಹಿಮಗಿರಿಯನ್ನೇರಿಯೇ ಬಿಟ್ಟೆ. ಅಲ್ಲಿ ಕಳೆದ ಹಗಲು-ರಾತ್ರಿಗಳನ್ನು ನಾನು ಈ ಜನ್ಮದಲ್ಲೆಂದೂ ಮರೆಯಲಾರೆ. ಒಂದೇ ಸಮನೆ ಬೀಳುವ ಮಂಜಿನ ಮಳೆ, ಮುಚ್ಚಿಹೋಗುವ ಹಸಿವು, ಸುಮ್ಮನೆ ಕೂತರೂ ಆಯಾಸ, ದೇವರು ಸಿಗುತ್ತಿಲ್ಲವೆಂಬ ತಪನೆ, ಬಾಲ್ಯದ ನೆನಪುಗಳ ಕನವರಿಕೆ, ಮಾಡಿದ ತಪ್ಪುಗಳ ಬಗ್ಗೆ ಭಯಂಕರ ಪಶ್ಚಾತ್ತಾಪ, ಮುಂದೆ ಏನಾದೀತೋ ಎಂಬ ಆತಂಕ... ಛೆ, ಅವತ್ತು ನನ್ನ ಪಾಡು ಪಾಡಲ್ಲ. ತಂದೆಯಂತೆ, ತಾಯಿಯಂತೆ ನಿಂತು ನನ್ನನ್ನೊಬ್ಬ ಹಿರಿಯ ಸನ್ಯಾಸಿ ಕಾಪಾಡದೇ ಹೋಗಿದ್ದರೆ ಭಗವಂತ ಸಿಕ್ಕಲಿಲ್ಲವೆಂಬ ಧಾವಂತದಿಂದಲೇ ನಾನು ಸತ್ತು ಹೋಗಿರುತ್ತಿದ್ದೆ. ಅಲ್ಲಿ ದಿನವಿಡೀ ನಾನೊಂದು ಕೋಣೆಯಲ್ಲಿ ಒಬ್ಬಂಟಿಯಾಗಿ ಕೂತಿರುತ್ತಿದ್ದೆ. ಮಂಜಿನ ಮಳೆ ಅಕಸ್ಮಾತ್ ನಿಂತರೆ ಹೊರಗೆ ಬಂಡೆಗಲ್ಲೊಂದರ ಮೇಲೆ ಹೋಗಿ ಕುಕ್ಕರಗಾಲಲ್ಲಿ ಕುಳಿತುಕೊಳ್ಳುತ್ತಿದ್ದೆ. ಪಂಚೆ, ಜುಬ್ಬಾ, ಶಾಲು ಮತ್ತು ಯಾರೋ ಕೊಟ್ಟ ಚಪ್ಪಲಿ ಮಾತ್ರ ನನ್ನಲ್ಲಿದ್ದವು. ಬಳ್ಳಾರಿಯ ಬಿಸಿಲಿನಲ್ಲಿ ಪುಳಕಗೊಂಡು ಓಡಾಡುತ್ತಿದ್ದ ನನಗೆ ಆ ಹಿಮಗಿರಿಯ ತುದಿಯಲ್ಲಿ ಬದುಕಲು ಸಾಧ್ಯವಾದದ್ದಾದರೂ ಹೇಗೆ ಎಂದು ಇವತ್ತಿಗೂ ಅರ್ಥವಾಗುತ್ತಿಲ್ಲ.

ಹಾಗೆ ಹಿಮಪಾತಕ್ಕೆ ಮೈಯೊಡ್ಡಿ ಕುಳಿತಾಗಲೇ ನನ್ನಲ್ಲಿ ಬದಲಾವಣೆಗಳಾದವು. ಅದೇನೂ ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಂಥದ್ದಲ್ಲ. ಅಂಥ nonsenseನ ನಾನು ಒಪ್ಪಿಕೊಳ್ಳುವುದೂ ಇಲ್ಲ. ಮನುಷ್ಯ ಕಷ್ಟವನ್ನ, hardshipನ ಒಬ್ಬಂಟಿತವನ್ನ, ಅಸಹಾಯಕತೆಯನ್ನ ಮತ್ತು ಅನಾಥಪ್ರಜ್ಞೆಯನ್ನ ತೀವ್ರವಾಗಿ ಅನುಭವಿಸಿದಂತೆಲ್ಲ ಒಳಗಿಂದೊಳಗೇ ಪಕ್ವವಾಗುತ್ತಾ ಹೋಗುತ್ತಾನೆ, ಬಿರುಸಾಗುತ್ತಾನೆ, ಬಂಡೆಯಾಗುತ್ತಾನೆ. ಅವನೊಳಗೊಂದು ಮನುಷ್ಯತ್ವದ ಹೂವರಳುತ್ತದೆ. ಬುದ್ಧನಿಗಾದದ್ದೂ ಅದೇ..! ಎಂಥ ಪೆದ್ದನಿಗಾಗಬಹುದಾದದ್ದೂ ಅದೇ. ಹದಿನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದ ಕೊಲೆಗಡುಕನನ್ನು ಮಾತನಾಡಿಸಿ ನೋಡಿ; ಅವನೊಳಗೊಬ್ಬ ಜ್ಞಾನಿ ಹುಟ್ಟಿಕೊಂಡಿರುತ್ತಾನೆ.

ದುರಂತವೆಂದರೆ, ಮನುಷ್ಯ ಜೈಲಿನಿಂದ, ಹಿಮಾಲಯದಿಂದ, ಕಾರ್ಪಣ್ಯಗಳಿಂದ ಈಚೆಗೆ ಬಂದ ಮೇಲೂ ಜ್ಞಾನಿಯಾಗಿ, ಮನುಷ್ಯನಾಗಿ ಉಳಿಯಲು ಪ್ರಯತ್ನಿಸುವುದಿಲ್ಲ. ಮತ್ತೆ ಹಳೇ ದುಷ್ಟ ಸ್ನೇಹಗಳ ರಾಡಿಗೆ ಬೀಳುತ್ತಾನೆ. ನನ್ನ ನಸೀಬು ನೆಟ್ಟಗಿತ್ತು. ಹಿಮಾಲಯದಿಂದ ಹಿಂತಿರುಗುವ ಹೊತ್ತಿಗೆ ಬಿ.ಎ ರಿಜಲ್ಟು ಬಂದಿತ್ತು. ನನಗಾಗಿ ತಾನೇ ಒಂದು ಅರ್ಜಿ ರೆಡಿ ಮಾಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. ಇತಿಹಾಸದ ವಿಭಾಗದಲ್ಲೊಂದು ಸೀಟು ಸಿದ್ಧಪಡಿಸಿಟ್ಟಿದ್ದಳು ಲಲಿತೆ. ನನ್ನ ಒಬ್ಬಂಟಿ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡು ನನ್ನನ್ನು ಓದಲು ಕಳಿಸಿದಳು. ಧಾರವಾಡಕ್ಕೆ ಹೊರಟವನಿಗೆ ರೈಲಿನಲ್ಲೊಬ್ಬ ಅಕ್ಕ ಸಿಕ್ಕಿದಳು. ಧಾರವಾಡದಲ್ಲಿ ಜೀವದ ಗೆಳೆಯ ಅಶೋಕ ಶೆಟ್ಟರ್ ಸಿಕ್ಕಿದ.
ಬದುಕಿನ ದಿಕ್ಕೇ ಬದಲಾಯಿತು.

ಮುಂದೆ ತಪ್ಪು ಮಾಡಲಿಲ್ಲವೆಂದಲ್ಲ. ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ಎಚ್ಚರವೊಂದನ್ನು ಹಿಮಾಲಯದಿಂದ ಸಂಪಾದಿಸಿಕೊಂಡು ಬಂದಿದ್ದೆ. ಅಷ್ಟು ಸಾಕಿತ್ತು. ಅದಿವತ್ತಿಗೂ renew ಆಗುತ್ತಲೇ ಇದೆ.
ಬದುಕನ್ನು ಮಾತ್ರ ಅದಕ್ಕಿಷ್ಟ ಬಂದಂತೆ ಬೆಳೆಯಲು, ತೊನೆಯಲು, ಒಣಗಲು, ಸಮೃದ್ಧವಾಗಲು, ಚಂಚಲಗೊಳ್ಳಲು, ಸ್ಥಿರವಾಗಲು- ಬಿಟ್ಟುಬಿಟ್ಟೆ. ಯಾವುದಕ್ಕೂ ಹೆದರದೆ, ತಲೆಕೆಡಿಸಿಕೊಳ್ಳದೆ, ಎದೆಗುಂದದೆ ಒಂದೊಂದು ದಿನವನ್ನೂ intense ಆಗಿ ಬದುಕಿದೆ. ಪ್ರತಿ ಮುಂಜಾವನ್ನೂ ನನ್ನದೆಂದುಕೊಂಡು ಸ್ವಾಗತಿಸಿದೆ. ಪ್ರತಿರಾತ್ರಿಯನ್ನೂ ಅಂಗೈಯಲ್ಲಿಟ್ಟುಕೊಂಡು ಆನಂದಿಸಿದೆ. ನಿನ್ನೆಗಳನ್ನು ಮರೆತಷ್ಟೇ ಸಲೀಸಾಗಿ ನಾಳೆಗಳ ಸವಾಲುಗಳಿಗೆ ತೆರೆದುಕೊಂಡೆ. ಅದಕ್ಕೇ ಹೀಗಿದ್ದೇನೆ.
ಇರುತ್ತೇನೆ!

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 August, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books