Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಸಾವು ಫೋನ್ ಮಾಡಿ ಬರುವುದಿಲ್ಲ; ವಯಸ್ಸು ಯಾರ ಮಾತನ್ನೂ ಕೇಳುವುದಿಲ್ಲ


"When youm friend begin to flatter you on how young you look. it's a sure sign you're getting old''
ಇದ್ದಕ್ಕಿದ್ದ ಹಾಗೆ ನಮ್ಮ ಜೀವದ ಗೆಳೆಯನೋ ದೂರದ ಸಂಬಂಧಿಯೋ ತೀರಿಕೊಳ್ಳುತ್ತಾನೆ. ಸಾವು ಅನ್ನೋದು ಫೋನ್ ಮಾಡಿ ಬರುವ ಅತಿಥಿಯೇನಲ್ವಲ್ಲ. ಸುದ್ದಿ ಕೇಳಿದಾಕ್ಷಣ ನಮಗೆ ಸಹಜವಾಗಿಯೇ ಆಘಾತವಾಗುತ್ತದೆ. ಅವನ ಜೊತೆ ನಾವು ಕಳೆದ ದಿನಗಳು ಒಂದು ಸಾರಿ ಕಣ್ಣ ಮುಂದೆ ಮೆರವಣಿಗೆ ಹೊರಡುತ್ತವೆ. ಕಳೆದ ವಾರವಷ್ಟೇ ಮನೆಗೆ ಬಂದಿದ್ದನಲ್ವಾ, ಕಲ್ಲು ಗುಂಡಿನಂತಿದ್ದ, ಇಬ್ಬರೂ ಕ್ಲಬ್ಬಿಗೆ ಹೋಗಿ ಗುಂಡು ಹಾಕಿದ್ದೆವು, ತಾಸುಗಟ್ಟಲೆ ಮಾತಾಡಿದ್ದೆವು. ಹೊಸ ಕಾರು ಖರೀದಿ ಮಾಡಬೇಕೂಂತ ಇದ್ದ, ಸೈಟಿಗೆ ಅಡ್ವಾನ್ಸು ಕೊಟ್ಟಿದ್ದ, ಮಗನನ್ನು ಯಾವುದಾದರೂ ಒಳ್ಳೇ ಕಾಲೇಜಿಗೆ ಸೇರಿಸಬೇಕು ಅಂತಿದ್ದ... ಇವೆಲ್ಲವೂ ನೆನಪಾಗುತ್ತವೆ.


ಅವೆಲ್ಲಕ್ಕಿಂತ ಹೆಚ್ಚಾಗಿ ಒಂದು ವಿಚಿತ್ರ ಭಯ ಕಾಡುವುದಕ್ಕೆ ಶುರುವಾಗುತ್ತದೆ. ಬೇಕಿದ್ದರೆ ಯೋಚಿಸಿ ನೋಡಿ, ಯಾವುದೇ ಸಾವಿನ ಸುದ್ದಿ ಬಂದಾಗ ನಾವು ಕೇಳುವ ಮೊದಲ ಪ್ರಶ್ನೆ. ‘ಅವನಿಗೆ ಎಷ್ಟು ವಯಸ್ಸಾಗಿತ್ತು?’ ಐವತ್ತೈದು ಅನ್ನುತ್ತಾರೆ ಆತನ ಸಂಬಂಧಿಕರು. ‘ಛೆಛೆ ಐವತ್ತೈದು ಸಾಯುವ ವಯಸ್ಸಲ್ಲ ಬಿಡಿ’ ಎಂದು ಉದ್ಗಾರ ತೆಗೆಯುತ್ತೇವೆ ನಾವು. ಒಳಗೊಳಗೆ ನನಗೂ ಈಗ ಅದೇ ವಯಸ್ಸು ಅಲ್ವೇ ಎಂದು ಕೊರಗುತ್ತೇವೆ.

‘ಏನಾಗಿತ್ತು ಅವನಿಗೆ?’
‘ಹಾರ್ಟ್ ಅಟ್ಯಾಕ್. Massive heart attack..’
ನಾಳೆ ನನಗೂ ಅದೇ ಆಗಬಹುದಾ? ನಮ್ಮ ಮನಸ್ಸು ಕೇಳುತ್ತದೆ.
‘ಯಾಕೆ ಇದ್ದಕ್ಕಿದ್ದ ಹಾಗೆ ಹಾರ್ಟ್ ಅಟ್ಯಾಕ್ ಆಯಿತು. ಚೆನ್ನಾಗಿಯೇ ಇದ್ದನಲ್ವಾ?’
‘ಸಿಕ್ಕಾಪಟ್ಟೆ ಸಿಗರೇಟು ಸೇದುತ್ತಿದ್ದ, ದಿನಾ ಕುಡೀತಾ ಇದ್ದ’
ಅಯ್ಯೋ ಭಗವಂತಾ! ನಾನೂ ಸಿಗರೇಟು ಸೇದುತ್ತೇನೆ, ದಿನಾ ಕುಡಿಯುತ್ತೇನೆ. ನಮ್ಮೊಳಗೊಂದು ಸಣ್ಣನೆಯ ಕಂಪನ ಶುರುವಾಗುತ್ತದೆ.

‘ಬೀಪಿ, ಶುಗರ್ ಏನಾದ್ರೂ..?’
‘ಎರಡೂ ಇತ್ತು, ಸರಿಯಾಗಿ ಔಷಧಿ ತಗೋತಾ ಇರಲಿಲ್ಲ’
ನನಗೂ ಹೈಬೀಪಿ ಇರಬಹುದಾ? ಸಕ್ಕರೆ ಖಾಯಿಲೆ ಇರಬಹುದಾ? ನಾವು ಇನ್ನಷ್ಟು ಚಿಂತಾಕ್ರಾಂತರಾಗುತ್ತೇವೆ. ನಾಳೆಯೇ ಡಾಕ್ಟರ್ ಹತ್ತಿರ ಹೋಗಿ ಚೆಕಪ್ ಮಾಡಿಸಿಕೊಳ್ಳಬೇಕು ಎಂದು ಅಂದುಕೊಳ್ಳುತ್ತೇವೆ.
ಒಂದೊಂದು ಸಾವಿನ ಸುದ್ದಿ ಬಂದಾಗಲೂ ನಿಮ್ಮ ಮನಸ್ಸು ಮತ್ತು ನಿಮ್ಮ ನಡುವೆ ಈ ಪ್ರಶ್ನೋತ್ತರ ರಿಪೀಟ್ ಆಗುತ್ತಲೇ ಇರುತ್ತದೆ. ಮುಂದಿನ ಸರದಿ ನನ್ನದಿರಬಹುದಾ?
ವಿಪರ್ಯಾಸವೆಂದರೆ ಯಾರದೋ ಸಾವು ನಿಮ್ಮೊಳಗೆ ಹುಟ್ಟಿಸುವ ತಲ್ಲಣಗಳು ಕೇವಲ ನಿಮ್ಮ ಜೀವಕ್ಕಷ್ಟೇ ಸಂಬಂಧಪಟ್ಟಿದ್ದಾಗಿರುತ್ತವೆ. ಸತ್ತವನು ನಿಮ್ಮ ಗೆಳೆಯ, ನಿಮ್ಮ ಬದುಕಿನ ಹಲವು ವರ್ಷಗಳನ್ನು ಅವನ ಜೊತೆಯೇ ಕಳೆದಿದ್ದೀರಿ, ಒಟ್ಟಿಗೇ ಕುಳಿತು ಉಂಡಿದ್ದೀರಿ, ಸುಖ ದುಃಖ ಹಂಚಿಕೊಂಡಿದ್ದೀರಿ, ನಿಮ್ಮ ಬದುಕನ್ನು ಹಸನಾಗಿಸುವುದರಲ್ಲಿ ಅವನ ಕಾಣಿಕೆಯೂ ಇದ್ದಿರಬಹುದು... ಇಂಥಾ ಭಾವನಾತ್ಮಕ ಸಂಗತಿಗಳು ನಿಮ್ಮನ್ನು ಕಾಡುವುದೇ ಇಲ್ಲ. ಅವನಿಗೆ ಹೆಂಡತಿಯಿದ್ದಾಳೆ, ಆಕೆಗೆ ಕೆಲಸವಿಲ್ಲ, ಇಬ್ಬರು ಪುಟ್ಟ ಮಕ್ಕಳಿದ್ದಾರೆ, ಅವರ ಭವಿಷ್ಯಕ್ಕೊಂದು ದಾರಿಯಾಗಬೇಕು, ಅವನ ಹಣಕಾಸಿನ ಸ್ಥಿತಿ ಹೇಗಿತ್ತೋ ಏನೋ, ಇಂಥಾ ಪ್ರಾಕ್ಟಿಕಲ್ ವಿಚಾರಗಳೂ ನಿಮ್ಮನ್ನು ಕಾಡುವುದಿಲ್ಲ. ಸಾವಿನ ಸುದ್ದಿ ಬಂದ ಕೂಡಲೇ ಅವನ ಮನೆಗೆ ಧಾವಿಸುತ್ತೀರಿ, ನಾಲ್ಕು ಹನಿ ಕಣ್ಣೀರು ಸುರಿಸುತ್ತೀರಿ, ವಾಪಸ್ ಬರುತ್ತೀರಿ, ಪುರುಸೊತ್ತಿದ್ದರೆ ವೈಕುಂಠ ಸಮಾರಾಧನೆಗೆ ಹೋಗಿ ಊಟ ಮಾಡಿ ಬರುತ್ತೀರಿ. ಮಾರನೇ ದಿನದಿಂದ ಯಥಾಪ್ರಕಾರ ನಿಮ್ಮ ಕೆಲಸದಲ್ಲಿ ತಲ್ಲೀನರಾಗುತ್ತೀರಿ. ಅಲ್ಲಿಗೆ ಒಬ್ಬ ವ್ಯಕ್ತಿಯ ಜೊತೆಗೆ ನಿಮಗಿದ್ದ ಸಂಬಂಧ ಶಾಶ್ವತವಾಗಿ ಕಡಿದುಹೋಗುತ್ತದೆ. ಅವನು ಮತ್ತೆ ನಿಮಗೆ ನೆನಪಾಗುವುದು ಇನ್ಯಾರೋ ಸತ್ತು ಹೋದಾಗ.

ಸತ್ತವನನ್ನು ದಿನಾ ನೆನಪಿಸಿಕೊಂಡು ಅಳುವುದರಿಂದ ಏನಾದರೂ ಉಪಯೋಗವಿದೆಯಾ ಎಂದು ನೀವು ಕೇಳಬಹುದು. ನಿಜ, ಆದರೆ ಅವನನ್ನು ನಂಬಿಕೊಂಡವರಿಗೆ ನಿಮ್ಮಿಂದೇನಾದರೂ ಸಹಾಯ ಆಗಬಹುದಲ್ವಾ, ಹಣಕಾಸಿನ ಸಹಾಯ ಮಾಡುವುದಕ್ಕಾಗದೇ ಇದ್ದರೆ, ಕನಿಷ್ಠ ಅವನ ಮನೆಗೆ ವಾರಕ್ಕೊಮ್ಮೆಯಾದರೂ ಹೋಗಿ ಸಮಾಧಾನ ಹೇಳಬಹುದಲ್ವಾ. ಹಾಗೆ ಮಾಡಬಹುದಾಗಿತ್ತು ಅಂತ ಇನ್ಯಾವತ್ತೋ ಪಾಪಪ್ರಜ್ಞೆಯಿಂದ ನರಳುವ ಬದಲಾಗಿ ಇಂದೇ ಆ ಕೆಲಸ ಮಾಡಿದ್ದರೆ ನಿಮಗೂ ಒಂದು ಸಮಾಧಾನವಿರುತ್ತದೆ.
ಕಾಲನ ವೇಗಕ್ಕೆ ತತ್ತರಿಸಿ ಹೋಗಿರುವ ನಮಗೆ ಯಾವುದನ್ನೂ ನೆನಪಿಟ್ಟುಕೊಳ್ಳುವುದಕ್ಕಾಗುತ್ತಿಲ್ಲ ಅನ್ನುವುದು ವಾಸ್ತವ. ತೀರಿಕೊಂಡವರು ನಮ್ಮ ಅಪ್ಪ ಅಮ್ಮನೇ ಆಗಿದ್ದರೂ ಶೋಕಾಚರಣೆ ಒಂದೇ ವಾರಕ್ಕೆ ಸೀಮಿತವಾಗಿರುತ್ತದೆ. ಆದರೆ ಸತ್ತವರ ನೆರಳಲ್ಲಿ ಹೊರಡುವ ಆತಂಕಗಳ ಮೆರವಣಿಗೆಗೆ ಅಂತ್ಯವಿಲ್ಲ. ವಯಸ್ಸು ಕರುಣಿಸುವ ಉಡುಗೊರೆಯೆಂದರೆ ಆತಂಕ, ಭೀತಿ ಮತ್ತು ವಿನಾಕಾರಣ ತಲ್ಲಣ. ನಮ್ಮ ವಯಸ್ಸು ಮೂವತ್ತರ ಆಸುಪಾಸಲ್ಲಿದ್ದಾಗ ನಾನು ಸಾವೇ ಇಲ್ಲದ ಚಿರಂಜೀವಿ ಎಂದು ಬೀಗಿದ್ದು ನೆನಪಾಗುತ್ತದೆ. ಗೆಳೆಯರ ಜೊತೆ ಕರುಳು ಸುಡುವಷ್ಟು ಕುಡಿದು, ಹೊಟ್ಟೆಗೇನೂ ತಿನ್ನದೆ ಎಲ್ಲೆಂದರಲ್ಲಿ ಮಲಗಿದ್ದು ನೆನಪಾಗುತ್ತದೆ. ಆಗ ನಿಮ್ಮ ದೇಹದ ಮೇಲೆ ನೀವೇ ನಡೆಸಿದ ಅನಾಚಾರಗಳಿಗೆ ದೇಹ ಸೇಡು ತೀರಿಸಿಕೊಳ್ಳುವ ಕಾಲ ಈಗ ಬಂದಿದೆ. ಎಂದೋ ಮಾಡಿದ ತಪ್ಪಿಗೆ ಇಂದು ದಂಡ ಕಟ್ಟಬೇಕಾದ ಕರ್ಮ.

ವಯಸ್ಸು ಯಾರ ಮಾತನ್ನೂ ಕೇಳುವುದಿಲ್ಲ, ಹಾಗೆ ಕೇಳುವುದಕ್ಕೆ ಅದೇನು ನಿಮ್ಮ ಮಗನೂ ಅಲ್ಲ, ಕೆಲಸದ ಆಳೂ ಆಲ್ಲ. “ಏನ್ಸಾರ್, ಎಷ್ಟು ಯಂಗ್ ಆಗಿ ಕಾಣಿಸ್ತೀರಿ, ನಿಮಗೆ ಐವತ್ತು ವರ್ಷ ಆಯ್ತು ಅಂದ್ರೆ ನಂಬೋದಕ್ಕೇ ಆಗ್ತಿಲ್ಲ"; ಹಾಗೆಂದು ನಿಮ್ಮ ಮುಂದೆ ಯಾರಾದರೂ ಹೇಳಿದರು ಅಂದರೆ ನಿಮ್ಮಲ್ಲಿ ವಯಸ್ಸಾಗಿರುವ ಚಿಹ್ನೆಗಳು ಕಾಣಿಸಿಕೊಳ್ಳುತ್ತಿವೆ ಎಂದೇ ಅರ್ಥ. ಅದರಲ್ಲೂ ನಲುವತ್ತು ದಾಟಿದ ನಂತರ ದಿನಗಳು ಹಿಂದೆಂದಿಗಿಂತಲೂ ವೇಗವಾಗಿ ಓಡುತ್ತಿವೆ ಅನ್ನುವ ವಿಚಿತ್ರ ಭ್ರಾಂತು ನಮ್ಮನ್ನು ಆವರಿಸಿಕೊಳ್ಳುತ್ತದೆ. ಬದುಕು ನಲವತ್ತರಲ್ಲಿ ಶುರುವಾಗುತ್ತದೆ ಅನ್ನುವುದು ಹಳೆಯ ನಾಣ್ಣುಡಿ, ನಲವತ್ತಕ್ಕೆ ಮುಕ್ಕಾಲು ಆಯಸ್ಸು ಮುಗಿದು ಹೋಗುತ್ತದೆ ಅನ್ನುವುದು ನಾವೇ ಬರೆದಿರುವ ಹೊಸನುಡಿ. ಅದಕ್ಕೆ ಕಾರಣ ನಮ್ಮದೇ ವಯಸ್ಸಿನವರು ಚಿತ್ರವಿಚಿತ್ರ ರೋಗಗಳಿಗೆ ಬಲಿಯಾಗುತ್ತಿರುವುದು ಮತ್ತು ದಿನಬೆಳಗಾದರೆ ಕಿವಿಗಪ್ಪಳಿಸುವ ಸಾವಿನ ಸುದ್ದಿ. ಅದರ ಪರಿಣಾಮ ಹೇಗಿರುತ್ತದೆ ಅಂದರೆ ದಿನಕ್ಕೆ ಐದು ಕಿಲೋಮೀಟರ್ ಸಲೀಸಾಗಿ ನಡೆಯುತ್ತಿದ್ದವನಿಗೆ ಮೂರಕ್ಕೇ ಯಾಕೋ ಸುಸ್ತು ಅನಿಸುವುದಕ್ಕೆ ಶುರುವಾಗುತ್ತದೆ. ವಿಪರೀತ ಸೆಖೆಗೆ ಮೈ ಬೆವರಿದರೂ ಮೈಲ್ಡ್ ಆಗಿ ಅಟ್ಯಾಕ್ ಆಗಿರಬಹುದಾ ಅನ್ನುವ ಆತಂಕದಿಂದ ವೈದ್ಯರ ಹತ್ತಿರ ಓಡುತ್ತೇವೆ. ಎದೆಯ ಬಲಭಾಗದಲ್ಲಿ ಚಳಕ್ ಅಂದರೂ ಅದು ಎಡಭಾಗವೇ ಇರಬಹುದೇನೋ ಅನ್ನುವ ಅನುಮಾನದಲ್ಲಿ ಮುಟ್ಟಿ ನೋಡಿಕೊಳ್ಳುತ್ತೇವೆ.

ಇಂಥಾ ಸಂದರ್ಭದಲ್ಲೇ ಠರಾವುಗಳು ಹುಟ್ಟಿಕೊಳ್ಳುವುದು. ಪ್ಯಾಕುಗಟ್ಟಲೆ ಸಿಗರೇಟು ಸೇದುತ್ತಿದ್ದ ಚೈನ್ ಸ್ಮೋಕರ್ ನಾಳೆಯಿಂದ ದಿನಕ್ಕೆ ಐದೇ ಸಿಗರೇಟು ಅನ್ನುವ ತೀರ್ಮಾನಕ್ಕೆ ಬರುತ್ತಾನೆ, ಗ್ಯಾಲನ್‌ಗಟ್ಟಲೆ ಕುಡಿಯುತ್ತಿದ್ದ ಮನುಷ್ಯ ನಾಳೆಯಿಂದ ವಾರಕ್ಕೊಮ್ಮೆ ಕುಡಿಯೋದು, ಅದೂ ಬಿಯರ್ ಮಾತ್ರ ಎಂಬ ಸಂಕಲ್ಪ ಮಾಡುತ್ತಾನೆ. ಬೆಳಿಗ್ಗೆ ಎದ್ದು ಶಟ್ಲ್ ಆಡುವುದಕ್ಕೆ ಶುರು ಮಾಡುತ್ತಾನೆ, ಯಾರೋ ಹೇಳಿದರು ಅಂತ ಲೀಟರ್‌ಗಟ್ಟಲೆ ನೀರು ಕುಡಿಯೋದಕ್ಕೆ ಶುರು ಮಾಡುತ್ತಾನೆ. ಸಕ್ಕರೆ ಕಾಯಿಲೆಗೆ ಒಳ್ಳೇದು ಅಂತ ಹಾಗಲಕಾಯಿ ತಿನ್ನುತ್ತಾನೆ, ಬೀಪಿಗೆ ಒಳ್ಳೆಯದು ಅಂತ ಗರಿಕೆಹುಲ್ಲಿನ ಜ್ಯೂಸ್ ಕುಡಿಯುತ್ತಾನೆ. ಆಯುರ್ವೇದ ತಜ್ಞರ ಸಲಹೆ ಪ್ರಕಾರ ಗಡ್ಡೆಕೋಸು ಜಗಿಯುತ್ತಾನೆ, ಹೋಮಿಯೋಪಥಿ ವೈದ್ಯರ ಅಪ್ಪಣೆಯಂತೆ ಗೋಮೂತ್ರ ಕುಡಿಯುತ್ತಾನೆ. ಒಟ್ಟಲ್ಲಿ ಕಾಣುವುದಕ್ಕೆ ಮನುಷ್ಯರೂಪಿಯಾಗಿದ್ದರೂ ಹಸು ಥರಾನೇ ವರ್ತಿಸುವುದಕ್ಕೆ ಆರಂಭಿಸುತ್ತಾನೆ. ಹಗಲಿಡೀ ತನ್ನ ಬಗ್ಗೆಯೇ ಯೋಚಿಸುತ್ತಾನೆ. ಇದೂ ಒಂದು ವ್ಯಸನವೇ.

ಹಾಗಂತ ಇದನ್ನೆಲ್ಲಾ ಮಾಡುವುದು ಕೆಟ್ಟದು ಎಂದು ನಾನು ಹೇಳುತ್ತಿಲ್ಲ, ಆದರೆ ಅತಿಯಾಗಿ ಮಾಡುತ್ತಾ ಹೋದರೆ ಅದಕ್ಕೊಂದು ಅಂತ್ಯವಿರುವುದಿಲ್ಲ. ಅದಕ್ಕೆ ಬದಲಾಗಿ ಲೈಫ್ ಸ್ಟೈಲ್ ಕೊಂಚ ಬದಲಾಯಿಸಿಕೊಳ್ಳಿ. ವಯಸ್ಸಾದವರು ವ್ಯಾಯಾಮದ ಹೆಸರಲ್ಲಿ ಶರವೇಗದಲ್ಲಿ ಓಡುವ ಬದಲಾಗಿ ಪುಟ್ಟ ವಾಕ್ ಮಾಡಿ, ಬೆಳಿಗ್ಗೆ ಎರಡು ಕಪ್ ಕಾಫಿ ಕುಡಿದರೆ ದೇಹಕ್ಕೇನೂ ಹಾನಿ ಆಗೋದಿಲ್ಲ, ಜ್ಯೂಸ್ ಕುಡಿಯುವ ಬದಲಾಗಿ ಹಣ್ಣುಗಳನ್ನು ಹಾಗೇ ಜಗಿದು ತಿನ್ನಿ. ಊಟ ತಿಂಡಿ ಒಂದು ಮಿತಿಯಲ್ಲಿರಲಿ. ಅವೆಲ್ಲಕ್ಕಿಂತ ಹೆಚ್ಚಾಗಿ ಇಡೀ ದಿನ ನಿಮ್ಮ ಆರೋಗ್ಯದ ಬಗ್ಗೆಯೇ ಯೋಚಿಸುತ್ತಾ ಕಾಲಹರಣ ಮಾಡಬೇಡಿ. ಒಂದೊಳ್ಳೆ ಪುಸ್ತಕ ಓದುವುದು ಅಥವಾ ಒಂದೊಳ್ಳೇ ಸಿನೆಮಾ ನೋಡುವುದು, ಕೆಲವೇ ಕೆಲವು ಆಯ್ದ ಗೆಳೆಯರ ಜೊತೆ ಹರಟುವುದು ಮನಸ್ಸಿಗೂ ಒಳ್ಳೆಯದು, ಜೀವಕ್ಕೂ ಒಳ್ಳೆಯದು.
ಅಷ್ಟಕ್ಕೂ ನೂರು ವರ್ಷ ಬದುಕುವುದು ಅದ್ಭುತ ಸಾಧನೆಯಲ್ಲ, ಎಪ್ಪತ್ತೈದು ವರ್ಷ ಆರೋಗ್ಯವಾಗಿ ಬದುಕುವುದು ನಿಜವಾದ ಸಾಧನೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 August, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books