Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಹಣ ಸುರಿಯದೇ ಅಧಿಕಾರಕ್ಕೆ ಬಂದಿರಾ ಸಿದ್ದರಾಮಯ್ಯನವರೇ.....

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಕೊಡುವುದು ಸರಿಯೇ? ಎಂಬ ಮಾತು ಎಲ್ಲ ಕಾಲಗಳಲ್ಲೂ ಕೇಳುತ್ತದೆ. ಆದರೆ ಎಲ್ಲ ಕಾಲಗಳಲ್ಲೂ ಅದೇ ನಡೆಯುತ್ತದೆ. ಹೀಗಾಗಿ ನಿಜವಾದ ರೋಗ ಗುಣಮುಖವಾಗುವುದಿಲ್ಲ. ಇದು ಕೇವಲ ಕರ್ನಾಟಕಕ್ಕಷ್ಟೇ ಅಲ್ಲ, ಈ ದೇಶದ ದೊಡ್ಡ ಸಮಸ್ಯೆಗಳಲ್ಲಿ ಇದೂ ಒಂದು. ಉದಾಹರಣೆಗೆ ಲೋಕಸೇವಾ ಆಯೋಗ ೨೦೧೧ರಲ್ಲಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆಸಿದ ನೇಮಕಾತಿ ವಿವಾದವನ್ನೇ ತೆಗೆದುಕೊಳ್ಳಿ. ಇಡೀ ವ್ಯವಹಾರದಲ್ಲಿ ಭ್ರಷ್ಟಾಚಾರ ಆಗಿಲ್ಲವೇ? ಆಗಿದೆ. ಆಯ್ಕೆಯಾದ ಮುನ್ನೂರಾ ಅರವತ್ತೆರಡು ಮಂದಿಯ ಪೈಕಿ ಹತ್ತತ್ತಿರ ಮುನ್ನೂರು ಮಂದಿ ತಮಗೆ ಕೆಲಸ ದೊರೆಯಲಿ ಎಂಬ ಕಾರಣಕ್ಕಾಗಿ ಲಂಚ ನೀಡಿರುವುದು ರಹಸ್ಯವೇನಲ್ಲ. ಅದು ದಾಖಲೆಗಳಲ್ಲಿ ಸಿಗದೇ ಇರಬಹುದು. ಆದರೆ ವಾತಾವರಣ ಹಾಗಿದೆ. ಹಣ ಕೊಡದೇ ಇದ್ದರೆ ಕೆಲಸ ಸಿಗುವುದಿಲ್ಲ ಎಂಬುದು ಸದ್ಯದ ಪರಿಸ್ಥಿತಿ. ನ್ಯಾಯಾಂಗದಲ್ಲೇ ಬಡ್ತಿ ಪಡೆಯಲು ಭ್ರಷ್ಟಾಚಾರದ ಮಾರ್ಗ ಹಿಡಿಯಲಾಯಿತು ಎಂದು ಮಾರ್ಕಂಡೇಯ ಕಾಟ್ಜು ಅವರಂತಹವರೇ ಹೇಳಿದ್ದಾರೆ. ಅರ್ಥಾತ್, ನ್ಯಾಯಾಂಗಕ್ಕೇ ಭ್ರಷ್ಟಾಚಾರದ ಕಳಂಕ ತಗಲಿದೆ ಎಂದರೆ ಬದುಕಿನ ಇನ್ಯಾವ್ಯಾವ ಕ್ಷೇತ್ರಗಳಿಗೆ ಅದರ ಮಸಿ ತಗಲಿಕೊಂಡಿರಬಹುದು.

ಇವತ್ತು ರೈತ ಬೆಳೆದ ಬೆಳೆಯನ್ನು ದಲ್ಲಾಳಿ ಅಗ್ಗದ ದರಕ್ಕೆ ಖರೀದಿಸಿ, ರೈತ ಕಷ್ಟಪಟ್ಟು ಸಂಪಾದಿಸುವುದಕ್ಕಿಂತ ಹೆಚ್ಚಿನ ಬೆಲೆಯನ್ನು ಪಡೆಯುತ್ತಾನೆ. ಇದು ಭ್ರಷ್ಟಾಚಾರ ಅಲ್ಲವೇ? ಬಹಿರಂಗವಾಗಿ ಅದು ಭ್ರಷ್ಟಾಚಾರವಲ್ಲ, ಬುದ್ಧಿವಂತಿಕೆ. ವ್ಯವಹಾರ ಚಾತುರ್ಯ. ಆದರೆ ನಿಜಕ್ಕೂ ಸಮಸ್ಯೆಯ ಆಳವನ್ನು ಗಮನಿಸಿ. ಅತ್ತ ಬೆಳೆದ ರೈತನಿಗೂ ಲಾಭವಿಲ್ಲ, ಇತ್ತ ತಿನ್ನುವ ಗ್ರಾಹಕನಿಗೂ ಹೊರೆ. ಮಧ್ಯೆ ಇದ್ದವರಿಗೆ ದಂಡಿಯಾಗಿ ದುಡ್ಡು. ಅಂದರೆ ಕಷ್ಟ ಪಡದೆ ಬರುವ ದುಡ್ಡು. ಇದನ್ನು ಭ್ರಷ್ಟಾಚಾರದ ವ್ಯಾಪ್ತಿಗೆ ಸೇರಿಸಬಾರದೇ? ಇದು ಒಂದು ಉದಾಹರಣೆ ಆಯಿತು. ಇನ್ನು ಸರ್ಕಾರದ ಯಾವುದೇ ಕೆಲಸವನ್ನು ತೆಗೆದುಕೊಳ್ಳಿ. ದುಡ್ಡಿಲ್ಲದೇ ಯಾವುದಾದರೂ ಕೆಲಸ ಆಗುತ್ತದೆಯೇ? ಕನಿಷ್ಠ ಪಕ್ಷ ಪ್ರಭಾವ ಕೆಲಸ ಮಾಡಬಹುದು. ಆದರೆ ಬಹುತೇಕ ಕೇಸುಗಳಲ್ಲಿ ದುಡ್ಡಿಲ್ಲದೆ ಕೆಲಸವೇ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರವನ್ನು ಬಗ್ಗು ಬಡಿಯಲು ಸಿದ್ದರಾಮಯ್ಯ ಹೊರಟಿದ್ದಾರೆ. ಲೋಕಸೇವಾ ಆಯೋಗ ೨೦೧೧ರಲ್ಲಿ ನಡೆಸಿದ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿದ್ದಾರೆ. ಇನ್ನು ಮುಂದೆ ಕೆಲಸ ಬಯಸುವವರು ಲೋಕಸೇವಾ ಆಯೋಗದ ಯಾರಿಗೂ ದುಡ್ಡು ಕೊಡಬಾರದು, ಮಧ್ಯವರ್ತಿಗಳ ಕಡೆ ತಿರುಗಬಾರದು ಎಂಬುದು ಸಿದ್ದರಾಮಯ್ಯನವರ ವಾದ.

ಆದರೆ ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬಡಿದ ಹಾಗೆ. ನಿಜ, ಲೋಕಸೇವಾ ಆಯೋಗದ ಹಲ ಮಂದಿ ಕೆಲಸಕ್ಕಾಗಿ ದುಡ್ಡು ಕೊಟ್ಟಿದ್ದಾರೆ ಎಂದುಕೊಳ್ಳೋಣ. ಅವರೇನು ಮನಃಪೂರ್ವಕವಾಗಿ, ಹೃದಯಪೂರ್ವಕವಾಗಿ ಹಣ ಕೊಟ್ಟಿದ್ದಾರೆಯೇ? ಮತ್ತು ಹಣ ಕೊಟ್ಟವರೆಲ್ಲ ಮನೆಯಲ್ಲಿ ಹಣ ಸ್ಟಾಕ್ ಇಟ್ಟುಕೊಂಡು ಕೆಲಸಕ್ಕಾಗಿ ಬಂದು ಚೆಲ್ಲಿದ್ದಾರೆಯೇ? ಇಲ್ಲವಲ್ಲ. ಕೆಲವರು ಮಾಡಿರಬಹುದು ಅಂತಲೇ ಇಟ್ಟುಕೊಳ್ಳೋಣ. ಆದರೆ ಯಾರಿಗಾದರೂ ಒಂದು ಕೆಲಸ ಪಡೆಯಲು ದಂಡಿಯಾಗಿ ಹಣ ಕೊಡಬೇಕು ಎಂಬ ಆಸೆ ಇರುತ್ತದೆಯೇ? ಖಂಡಿತ ಇರುವುದಿಲ್ಲ. ಆದರೆ ಅಂತಹ ವಾತಾವರಣವನ್ನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ದಲ್ಲಾಳಿಗಳು ಸೃಷ್ಟಿಸಿದ್ದಾರೆ. ಸಿಐಡಿ ವರದಿ ಮೊದಲು ಅಂತಹ ಭ್ರಷ್ಟರು ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಹೀಗೆ ಕೆಲಸಕ್ಕಾಗಿ ಪರದಾಡುವವರಿಂದ ಹಣ ಪಡೆದು ಅವರು ಯಾವುದರ ಮೇಲೆ ಬಂಡವಾಳವನ್ನಾಗಿ ಹೂಡಿದ್ದಾರೆ ಎಂಬುದನ್ನು ಗಮನಿಸಬೇಕು.


ಇವತ್ತು ಸರ್ಕಾರದ ಆಯಕಟ್ಟಿನ ಹುದ್ದೆಗಳಿಗೆ ನಾಲ್ಕು, ಐದು ಕೋಟಿ ರುಪಾಯಿ ಹಣ ಸುರಿದು ಬರುವ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಲ್ಲವೇ? ಹೀಗೆ ಹಣ ಕೊಟ್ಟಿದ್ದಕ್ಕೆ ತಾನೇ ಆಡಳಿತ ಎಂಬುದು ದಿನದಿಂದ ದಿನಕ್ಕೆ ಎಕ್ಕುಟ್ಟಿ ಹೋಗುತ್ತಿರುವುದು ಮತ್ತು ಬಹುತೇಕ ಅಧಿಕಾರಿಗಳು ಯಾರ ಮಾತನ್ನೂ ಕೇಳದ ಪರಿಸ್ಥಿತಿ ಇರುವುದು. ಮೊದಲನೆಯದಾಗಿ ಆಯಕಟ್ಟಿನ ಹುದ್ದೆಗಳಿಗೆ ಬರಲು ನಾಲ್ಕು, ಐದು ಕೋಟಿ ರುಪಾಯಿ ಕೊಟ್ಟರೆ ಆ ಹಣವನ್ನು ಮರಳಿ ಗಳಿಸುವುದು ಆ ಅಧಿಕಾರಿಯ ಹೆಬ್ಬಯಕೆ ಆಗಿರುತ್ತದೆ. ಅಷ್ಟೇ ಅಲ್ಲ, ಇನ್ನೂ ಒಳ್ಳೆಯ ಪೋಸ್ಟಿಂಗ್ ಪಡೆಯಲು ಮತ್ತಷ್ಟು ದುಡ್ಡು ಗಳಿಸಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ತಂದವರು ಯಾರು? ಹೋಗಲಿ, ನಮ್ಮ ಚುನಾವಣಾ ವ್ಯವಸ್ಥೆಯನ್ನೇ ನೋಡಿ. ವಿಧಾನಸಭೆಗೆ ಗೆದ್ದು ಬಂದವರ ಪೈಕಿ ಎಲ್ಲರೂ ಚುನಾವಣಾ ಆಯೋಗ ನಿಗದಿ ಮಾಡಿದಷ್ಟು ಹಣವನ್ನು ಮಾತ್ರ ವೆಚ್ಚ ಮಾಡಿದ್ದಾರೆಯೇ? ಚುನಾವಣಾ ಆಯೋಗ ನಿಗದಿ ಮಾಡಿದಷ್ಟು ಹಣವನ್ನು ವೆಚ್ಚ ಮಾಡಿ ಗೆದ್ದು ಬರುವುದು ಹಾಗಿರಲಿ, ಚುನಾವಣೆಯಲ್ಲಿ ನಿಂತು ಗಣನೀಯ ಪ್ರಮಾಣದ ವೋಟು ಗಳಿಸುವುದೂ ಕಷ್ಟ. ಬೇರೆ ಯಾರದೋ ಉದಾಹರಣೆ ಬೇಕಿಲ್ಲ.

ಜೆಡಿಎಸ್ ತ್ಯಜಿಸಿದ ನಂತರ ಸಿದ್ದರಾಮಯ್ಯನವರೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಗೆ ಸ್ಪರ್ಧಿಸಿದರಲ್ಲ? ಆಗ ಯಾವ ಮಟ್ಟದಲ್ಲಿ ಹಣ ಖರ್ಚಾಯಿತು? ಅವರಿವರೇಕೆ, ಸಿದ್ದರಾಮಯ್ಯನವರೇ ಚುನಾವಣೆಗಿಂತ ಮುಂಚಿತವಾಗಿ, ಆ ಚುನಾವಣೆಯಲ್ಲಿ ನಾನು ಗೆಲ್ಲಲು ಪಟ್ಟ ಪಾಡು ಯಾರಿಗೂ ಬೇಡ. ಯಾರ‍್ಯಾರೋ ಹಣ ತಂದುಕೊಟ್ಟರು ಎಂದು ಒಪ್ಪಿಕೊಂಡರು. ಅಷ್ಟೇ ಅಲ್ಲ, ಕುರಿ ಕಾದು ದುಡಿದ ದುಡ್ಡಿನಲ್ಲಿ ಹಣ ತಂದುಕೊಟ್ಟವರಿಂದ ಹಿಡಿದು ಯಾರ‍್ಯಾರೋ ತಂದು ದುಡ್ಡು ಕೊಟ್ಟರು. ಆ ದುಡ್ಡು ವೆಚ್ಚ ಮಾಡದೇ ಹೋಗಿದ್ದರೆ ನಾನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ. ಯಾಕೆಂದರೆ ನನ್ನನ್ನು ಶತಾಯಗತಾಯ ಸೋಲಿಸಲು ವಿರೋಧ ಪಕ್ಷಗಳು ಅಣಿಯಾಗಿದ್ದವು ಎಂದು ಸಿದ್ದರಾಮಯ್ಯನವರೇ ಹೇಳಿದ್ದರು. ಅಂದ ಹಾಗೆ ಆ ಸಲ ನಡೆದ ಚುನಾವಣೆ ಕರ್ನಾಟಕದ ರಾಜಕೀಯ ವ್ಯವಸ್ಥೆ ಕಂಡ ಅತ್ಯಂತ ದೊಡ್ಡ ಚುನಾವಣೆ ಮತ್ತು ಅತ್ಯಂತ ಹೆಚ್ಚಿನ ಹಣ ಹರಿದಾಡಿದ ಚುನಾವಣೆ. ಈಗ ಬಿಡಿ. ಯಾವುದೇ ವಿಧಾನಸಭಾ ಕ್ಷೇತ್ರವನ್ನು ತೆಗೆದುಕೊಂಡರೂ ಅಷ್ಟೇ. ದೊಡ್ಡ ಮಟ್ಟದ ಬಂಡವಾಳ ಹೂಡಿದರೂ ಗೆಲ್ಲುವ ಅವಕಾಶ ಕಡಿಮೆ.


ಹೀಗಾಗಿ ಚುನಾವಣೆ ಎಂಬುದು ಹಣ ಚೆಲ್ಲುವ ಒಂದು ಗುರುತರ ವ್ಯವಸ್ಥೆಯಾಗಿ ಹೋಗಿದೆ. ಇಲ್ಲಿ ಹಣ ಚೆಲ್ಲುವವರು, ಚೆಲ್ಲಿ ಗೆದ್ದವರು ಮತ್ತೆ ಹಣ ಮಾಡಲು ನೋಡುತ್ತಾರೆಯೇ ವಿನಃ ಜನರ ಕೆಲಸ ಮಾಡಲು ಹೋಗುವುದಿಲ್ಲ. ಮಾಡಿದರೂ ಅದು ಚುನಾವಣೆಯಲ್ಲಿ ಎಷ್ಟರ ಮಟ್ಟಿನ ಲಾಭ ತಂದುಕೊಡಬಹುದು ಎಂಬುದಕ್ಕೆ ಸೀಮಿತವಾಗಿರುತ್ತದೆಯೇ ಹೊರತು ಉಳಿದಂತೆಲ್ಲ ತಮ್ಮ ಸ್ವಂತ ಕೆಲಸಗಳನ್ನು ಮಾಡಿಕೊಳ್ಳಲು ಶಾಸಕರು ತಿರುಗಾಡುತ್ತಾರೆ. ಲೋಕಸಭಾ ಚುನಾವಣೆಯ ವಿಷಯ ಬಂದಾಗಲೂ ಅಷ್ಟೇ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ದಂಡಿಯಾಗಿಯೇ ಹಣ ಖರ್ಚು ಮಾಡಿದವು. ಒಂದು ಕ್ಷೇತ್ರದಲ್ಲಿ ಗೆಲ್ಲಲು ಕನಿಷ್ಠ ಹತ್ತು ಕೋಟಿ ರುಪಾಯಿ ಬೇಕಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಂತ ಇದಕ್ಕಾಗಿ ಚುನಾವಣಾ ಆಯೋಗ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಪ್ರಜಾಪ್ರತಿನಿಧಿ ಕಾಯ್ದೆಯಡಿ ಸದಸ್ಯತ್ವವನ್ನು ವಜಾ ಮಾಡಲು ಹೋದರೆ ಶೇಕಡಾ ತೊಂಬತ್ತಕ್ಕಿಂತ ಹೆಚ್ಚು ಮಂದಿ ಅನರ್ಹರಾಗುತ್ತಾರೆ. ಹಾಗೆ ಮಾಡಲು ಸಾಧ್ಯವೇ?

ಅರ್ಥಾತ್, ವ್ಯವಸ್ಥೆಯ ಸ್ವರೂಪ ಬದಲಾವಣೆಯಾಗುತ್ತಾ ಬಂದಿದೆ. ವ್ಯವಸ್ಥೆ ಎಂಬುದರ ಮೈ ಮೇಲೆಲ್ಲ ಹುಣ್ಣುಗಳು ಎದ್ದಿವೆ. ಈ ಹುಣ್ಣುಗಳಿಗೆ ಚಿಕಿತ್ಸೆ ನೀಡಬಹುದು. ಆದರೆ ರಕ್ತ ಬದಲಾಗದೇ ಹೋದರೆ ಹುಣ್ಣುಗಳು ಮತ್ತೆ ಏಳುತ್ತವೆ. ಆಗಲೂ ಚಿಕಿತ್ಸೆ ನೀಡುತ್ತಾ ಕೂತರೆ ಅದು ಒಂದು ರೀತಿಯ ಸರಪಳಿಯಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ನಾವು ಹುಣ್ಣಿಗೆ ಚಿಕಿತ್ಸೆ ನೀಡುವುದು ತತ್ಕಾಲದ ಪರಿಹಾರವಾದರೂ ಆಳದಲ್ಲಿ ರಕ್ತವನ್ನು ಶುದ್ಧೀಕರಿಸುವ ಕೆಲಸ ನಡೆಯಬೇಕು. ಅದು ಶುದ್ಧೀಕರಣವಾದರೆ ಹುಣ್ಣುಗಳು ಕಾಣುವುದಿಲ್ಲ. ಆದರೆ ಸಿದ್ದರಾಮಯ್ಯ ಈಗ ಲೋಕಸೇವಾ ಆಯೋಗದ ನೇಮಕಾತಿಯನ್ನು ರದ್ದು ಮಾಡಿದ್ದಾರೆ. ನಾಳೆ ಈ ವಿಷಯವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗುತ್ತಾರೆ. ಯಾವ ವಿದ್ಯಾರ್ಥಿ ಯಾರಿಗೆ ಫೋನು ಮಾಡಿದ್ದ ಎಂಬುದನ್ನು ಆಧಾರವಾಗಿಟ್ಟುಕೊಂಡು ಇವರೆಲ್ಲ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಿಐಡಿ ಹೇಳಿದರೆ ನ್ಯಾಯಾಲಯ ಕೇಳುವುದಿಲ್ಲ. ಅದು ಸಾಕ್ಷಿಯನ್ನು ಬಯಸುತ್ತದೆ, ಅಂತಃಸಾಕ್ಷಿಯನ್ನಲ್ಲ. ಇಂತಿಂಥವರು ಇಂತಿಂಥವರಿಗೆ ಹದಿನೆಂಟು ಸಲ, ಇಪ್ಪತ್ತು ಸಲ ಫೋನು ಹೊಡೆದಿದ್ದಾರೆ. ನಮ್ಮ ಕೆಲಸ ಮಾಡಿ ಕೊಡಿ ಎಂದಿದ್ದಾರೆ ಎಂದರೆ ಕೆಲಸ ಸಿಗಲು ಎಷ್ಟು ಪರದಾಡಬೇಕು ಎಂಬುದು ಖಚಿತವಾಗುತ್ತದೆ.
ಹಾಗಂತ ಸಿದ್ದರಾಮಯ್ಯ ಮಾಡಿರುವುದು ಸಾರಾಸಗಟಾಗಿ ತಪ್ಪು ಎಂದಲ್ಲ. ಆದರೆ ಲೋಕಸೇವಾ ಆಯೋಗದ ನೇಮಕಾತಿಗಳು ಹಿಂದಿನಿಂದಲೂ ಯಾವ ರೀತಿ ನಡೆದುಕೊಂಡು ಬಂದಿವೆ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಹಿಂದೆ ನಡೆದ ನೇಮಕಾತಿಗಳ ಕುರಿತು ತನಿಖೆ ನಡೆಸಲು ಸಾಧ್ಯವೇ? ಹಾಗೇನಾದರೂ ಮಾಡಲು ಹೋದರೆ ಸರ್ಕಾರದ ಅರ್ಧಕ್ಕರ್ಧ ಆಡಳಿತ ಯಂತ್ರವೇ ಕುಸಿದು ಹೋಗುತ್ತದೆ. ಹೀಗಾಗಿ ಅದನ್ನು ಮಾಡುವುದು ಕಷ್ಟ. ಹೀಗಾಗಿ ಈಗಿರುವ ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತರಬೇಕು. ಯಾರು ಸಂದರ್ಶನ ಮಾಡುತ್ತಾರೆ, ಯಾರು ಪರೀಕ್ಷೆ ಮಾಡುತ್ತಾರೆ, ಯಾರು ಮೌಖಿಕ ಸಂದರ್ಶನ ಮಾಡುತ್ತಾರೆ ಎಂಬುದು ವಿದ್ಯಾರ್ಥಿಗಳಿಗೆ ತಿಳಿಯಲೇಬಾರದು. ಲಿಖಿತ ಮತ್ತು ಮೌಖಿಕ ಪರೀಕ್ಷೆಯ ಎಲ್ಲ ವಿವರಗಳನ್ನು ದಾಖಲು ಮಾಡಿ ಮುಂದೆ ಅದನ್ನು ಸಾರ್ವಜನಿಕ ಸ್ವತ್ತನ್ನಾಗಿ ಮಾಡಬೇಕು. ಒಂದು ವೇಳೆ ಚೆನ್ನಾಗಿ ಬರೆದವನಿಗಿಂತ, ಚೆನ್ನಾಗಿ ಮೌಖಿಕ ಸಂದರ್ಶನ ಮಾಡಿದವನಿಗಿಂತ ಕೆಳಗಿರುವವನಿಗೆ ಕೆಲಸ ನೀಡಿದ್ದಾರೆಯೇ ಎಂಬ ಕುರಿತು ಪರಿಶೀಲನೆ ನಡೆಸಬೇಕು. ಇಂತಹ ಪರಿಶೀಲನೆಯ ಕಾರ್ಯ ಕೂಡ ಸಾರ್ವಜನಿಕರು ಬಯಸಿದಾಗ ನೋಡುವಂತಿರಬೇಕು.

ಕೆಪಿಎಸ್‌ಸಿ ಪರೀಕ್ಷೆಯನ್ನು ಯುಪಿಎಸ್‌ಸಿ ಮಾದರಿಯಲ್ಲಿ ನಡೆಸುತ್ತೇವೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಆದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಡೆಯುತ್ತಿರುವ ದೋಖಾಗಳ ವಿವರಗಳು ಸಾರಾಸಗಟಾಗಿ ಹೊರಬರತೊಡಗಿವೆ. ಹೀಗಾಗಿ ಒಂದು ವ್ಯವಸ್ಥೆಯನ್ನು ಬದಲಿಸಲು ಪ್ರಯತ್ನಿಸಬೇಕೇ ಹೊರತು ವ್ಯವಸ್ಥೆಗೆ ಬಲಿಪಶುಗಳಾಗುವವರನ್ನು ಬಲಿ ಪಡೆಯುವುದಲ್ಲ. ಕೆಲಸಕ್ಕಾಗಿ ಹಣ ನೀಡಿದ್ದು ಅಪರಾಧವೇ ಹೌದು. ಆದರೆ ಕೆಲಸಕ್ಕಾಗಿ ಹಣ ಪಡೆಯುವಂತಹ ಸ್ಥಿತಿ ನಿರ್ಮಾಣವಾಗುವಂತೆ ಮಾಡಿರುವುದು ಅದಕ್ಕಿಂತ ದೊಡ್ಡ ಅಪರಾಧ. ಹೀಗಾಗಿ ಮೊದಲು ಸಿಐಡಿ, ಲೋಕಸೇವಾ ಆಯೋಗದ ವತಿಯಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗಿಂತ ಮುಖ್ಯವಾಗಿ ಅವರು ಯಾರ‍್ಯಾರ ಕೈಗೆ ಹಣ ನೀಡಿದರು ಎಂಬುದನ್ನು ಸಿಐಡಿ ಬಹಿರಂಗಪಡಿಸಬೇಕು. ಆಗ ಒಂದು ವ್ಯವಸ್ಥೆಯಲ್ಲಿ ಹಣ ಯಾವ ಕಾರಣಕ್ಕಾಗಿ, ಯಾರ‍್ಯಾರ ಕೈಯಲ್ಲಿ ಹರಿದಾಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ ಮತ್ತು ಇಂತಹ ರೋಗಕ್ಕೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕೆಲಸ ಕೊಡಿಸುತ್ತೇನೆ ಎಂದು ಆಟ ಆಡುವ ರಾಜಕಾರಣಿಗಳು, ದಲ್ಲಾಳಿಗಳು ಮತ್ತು ಅಧಿಕಾರಿಗಳು ಶಿಕ್ಷೆಗೆ ಗುರಿಯಾದರೆ ಮುಂದಿನ ದಿನಗಳಲ್ಲಿ ಕೆಲಸ ಕೊಡಿಸುವ ನಾಟಕ ನಿಲ್ಲುತ್ತದೆ. ಆಗ ಎಲ್ಲರೂ ಶ್ರದ್ಧೆಯಿಂದ ಕೆಲಸಕ್ಕಾಗಿ ಪ್ರಯತ್ನಿಸುತ್ತಾರೆ, ಓದುತ್ತಾರೆ. ಮೌಖಿಕ ಸಂದರ್ಶನಗಳಿಗೆ ತಯಾರಾಗುತ್ತಾರೆ. ಹೆಚ್ಚೆಚ್ಚು ಹಣ ನೀಡಿದರೆ ಕೆಲಸ ಗ್ಯಾರಂಟಿ ಎಂಬ ಭಾವನೆ ಮೂಡಿದರೆ ಸಾಲ, ಸೋಲ ಮಾಡಿಯಾದರೂ ಹಣ ಹೊಂದಿಸಿತರಲು ಪರದಾಡುತ್ತಾರೆ.

ಈಗ ಎಲ್ಲರೂ ಹಣ ಕೊಟ್ಟೇ ಆಯ್ಕೆಯಾಗಿದ್ದಾರೆ ಎಂದಲ್ಲ. ಆದರೆ ಬಹುತೇಕ ಮಂದಿ ಹಣ ಕೊಟ್ಟು ಆಯ್ಕೆಯಾಗಿದ್ದಾರೆ. ಏನೇ ಆದರೂ ಆ ಕಡೆ ಕೆಲಸವೂ ಇಲ್ಲ. ಈ ಕಡೆ ಹಣವೂ ಇಲ್ಲ. ಆ ವಿದ್ಯಾರ್ಥಿಗಳು ಏನು ಮಾಡಬೇಕು? ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ವಿದ್ಯಾರ್ಥಿಗಳನ್ನು ವಂಚಿಸಿದ ಯಾರೂ ಬೆಳಕಿಗೆ ಬಂದಿಲ್ಲ. ಅದರರ್ಥವೇನು? ನಾವು ಮೈಮೇಲೆ ಎದ್ದಿರುವ ಹುಣ್ಣಿಗೆ ಮದ್ದು ಕೊಡುತ್ತಿದ್ದೇವೆಯೇ ಹೊರತು ರಕ್ತ ಬದಲಿಸುವ ಕೆಲಸ ಮಾಡುತ್ತಿಲ್ಲ. ಹೀಗಾದಾಗ ಏನಾಗುತ್ತದೆ. ರಕ್ತ ಹಾಗೆಯೇ ಉಳಿಯುತ್ತದೆ. ಬೇರೆ-ಬೇರೆ ಹುಣ್ಣುಗಳು ಪದೆಪದೇ ಕಾಣಿಸತೊಡಗುತ್ತವೆ. ಅವು ಯಾವತ್ತಿಗೂ ಗುಣವಾಗುವುದಿಲ್ಲ. ಇದನ್ನು ಸಿದ್ದರಾಮಯ್ಯ ಅರಿಯಲಿ. ವಿದ್ಯಾರ್ಥಿಗಳು ಯಾವ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂಬುದನ್ನು ಅರಿಯಲಿ. ನಿಜವಾದ ಭ್ರಷ್ಟರನ್ನು ಕಂಡುಹಿಡಿಯಲಿ. ಆಗ ಸುಧಾರಣೆ ಸಾಧ್ಯ. ಇಲ್ಲದಿದ್ದರೆ ನೋ ಛಾನ್ಸ್. ಅದೇ ರಾಗ ಅದೇ ಹಾಡು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 August, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books