Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಅವರಿಗೆ ಜನಸಾಮಾನ್ಯರೆಡೆಗೆ ಕಾಳಜಿಯೇ ಇಲ್ಲ!

ಅಕ್ರಮ ಡಿನೋಟಿಫಿಕೇಷನ್ ಹಗರಣದ ವಿಷಯದಲ್ಲಿ ಎದ್ದ ಗದ್ದಲದ ಪರಿಣಾಮವಾಗಿ ಪ್ರಸಕ್ತ ಸಾಲಿನ ಬಜೆಟ್ ಚರ್ಚೆಯೇ ಇಲ್ಲದೆ ಅಂಗೀಕಾರವಾಗಿದೆ. ಹೆಚ್ಚು ಕಡಿಮೆ ಒಂದೂ ಕಾಲು ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಚರ್ಚೆ ಇಲ್ಲದೇ ಅಂಗೀಕಾರವಾಗುತ್ತದೆ ಎಂದರೆ ನಿಜಕ್ಕೂ ಖೇದವೆನಿಸುತ್ತದೆ. ಜನ ಸಾಮಾನ್ಯರ ಬೆವರಿನ ದುಡ್ಡಿನ ಲೆಕ್ಕ ಕೇಳುವ ವಿಷಯದಲ್ಲೇ ನಮ್ಮ ಜನಪ್ರತಿನಿಧಿಗಳಿಗೆ ಆಸಕ್ತಿ ಇಲ್ಲವೆಂದರೆ ಜನ ಸಾಮಾನ್ಯರ ವಿಷಯದಲ್ಲಿ ಆಸಕ್ತಿ ಇಲ್ಲವೆಂದೇ ಅರ್ಥ. ಕಳೆದ ಒಂದು ದಶಕಕ್ಕಿಂತ ಹೆಚ್ಚು ಕಾಲದಿಂದ ಸರ್ಕಾರದ ವಿವಿಧ ಇಲಾಖೆಗಳ ಮೇಲಿನ ಬೇಡಿಕೆ ಮೇಲೆ ಸದನದಲ್ಲಿ ಚರ್ಚೆ ನಡೆಯುತ್ತಿರಲಿಲ್ಲ. ಸಮಯ ಸಾಲುವುದಿಲ್ಲ ಎಂಬ ಕಾರಣ ನೀಡಿ ಅದನ್ನು ವಿಷಯ ಸಮಿತಿಗಳಿಗೆ ಒಪ್ಪಿಸಲಾಗಿತ್ತು. ಆದರೆ ಈ ಬಾರಿ ಅದನ್ನು ದಾಟಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮುಂದೆ ಹೋದರು. ಎಲ್ಲ ವಿಷಯಗಳ ಕುರಿತು ಸದನದಲ್ಲೇ ಚರ್ಚೆ ನಡೆಯಲಿದೆ ಎಂದರು. ಇದರ ಪರಿಣಾಮವಾಗಿ ಹಲವು ಗಂಭೀರ ವಿಷಯಗಳು ವಿಧಾನಸಭೆಯಲ್ಲಿ ಚರ್ಚೆಗೆ ಒಳಗಾದವು.

ಉದಾಹರಣೆಗೆ ಇಂಧನ ಇಲಾಖೆಯ ಮೇಲಿನ ಬೇಡಿಕೆಗೆ ಸಂಬಂಧಿಸಿದ ಚರ್ಚೆಯನ್ನೇ ತೆಗೆದುಕೊಳ್ಳಿ. ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ಹೆಚ್ಚು ಕಡಿಮೆ ಹದಿನೇಳು ಸಾವಿರ ಕೋಟಿ ರುಪಾಯಿಗಳ ವಿದ್ಯುತ್‌ನ್ನು ಖರೀದಿ ಮಾಡಲಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ಇದ್ದ ಕಾಲದಲ್ಲಿ ಇಪ್ಪತ್ತೆಂಟು ಕೋಟಿ ರುಪಾಯಿಗಳಷ್ಟಿದ್ದ ವಿದ್ಯುತ್ ಖರೀದಿ ಆನಂತರ ವರ್ಷಗಳಲ್ಲಿ ಏಕಾಏಕಿ ಏರುತ್ತಾ ಹೋಯಿತು. ಸಾಕಷ್ಟು ಮಳೆಯಾಗಲಿಲ್ಲ. ವಿದ್ಯುತ್ ಬೇಡಿಕೆ ಹೆಚ್ಚಾಯಿತು ಎಂಬುದೂ ಸೇರಿದಂತೆ ಅನೇಕ ಕಾರಣಗಳನ್ನು ನೀಡಿ ವಿದ್ಯುತ್ ಖರೀದಿ ಮಾಡಲಾಗಿದೆ ಎಂದು ಬಿಜೆಪಿಯ ಕೆಲವರು ವಾದಿಸಿದರು. ಆದರೆ ಕುಮಾರಸ್ವಾಮಿ ಈ ಕುರಿತಂತೆ ನೀಡಿದ ಅಂಶಗಳನ್ನು ಪರಿಗಣಿಸಿ ಕನಿಷ್ಠ ಪಕ್ಷ ಸಿಬಿಐ ತನಿಖೆಯನ್ನು ನಡೆಸಲು ಸರ್ಕಾರ ಮುಂದಾಗಬೇಕಿತ್ತು. ಒಂದು ವೇಳೆ ಸಿಬಿಐ ತನಿಖೆ ಬೇಡ ಎಂದಿದ್ದರೆ ನ್ಯಾಯಾಂಗ ತನಿಖೆಯನ್ನಾದರೂ ನಡೆಸಬಹುದಿತ್ತು. ಆದರೆ ಅದನ್ನು ಬಿಟ್ಟು ಕೇವಲ ಸದನ ಸಮಿತಿ ರಚಿಸುವುದಾಗಿ ಹೇಳಿ ಬಿಜೆಪಿಯ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆಯನ್ನು ಮಾತ್ರ ಹಿಂಡುವ ಕೆಲಸಕ್ಕೆ ಅದು ಮುಂದಾಯಿತು. ವಿದ್ಯುತ್ ಖರೀದಿಯ ವಿಷಯದಲ್ಲಿ ಸಮಗ್ರ ತನಿಖೆ ನಡೆಸಲು ಸದನ ಸಮಿತಿಯಿಂದ ಸಾಧ್ಯವಿಲ್ಲ. ಸಿಬಿಐ ಆಗಿದ್ದರೆ ಈ ವಿಷಯದಲ್ಲಿ ಒಂದು ತಾರ್ಕಿಕ ಅಂತ್ಯವನ್ನಾದರೂ ನೋಡಲು ಸಾಧ್ಯವಿತ್ತು. ಹಾಗೇನಾದರೂ ಮಾಡಿದ್ದರೆ ಸರ್ಕಾರದ ಗಂಟೇನೂ ಹೋಗುತ್ತಿರಲಿಲ್ಲ. ಬದಲಿಗೆ ಹೋಗಿರುವ ಗಂಟಿನ ಹಿಂದೆ ಏನೇನು ನಡೆದಿದೆ? ಎಂಬ ಸತ್ಯ ಗೊತ್ತಾಗುತ್ತಿತ್ತು. ಅದೇ ರೀತಿ ಮುಂದಿನ ದಿನಗಳಲ್ಲಿ ಈ ರೀತಿ ಜನಸಾಮಾನ್ಯರ ತೆರಿಗೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವ ಸ್ಥಿತಿ ಬರುತ್ತಿರಲಿಲ್ಲ.

ಅಂದಹಾಗೆ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಆರು ಕೋಟಿ ರುಪಾಯಿಗಳಷ್ಟು ಹಣ ಬೇಕು. ಸೌರ ವಿದ್ಯುತ್‌ಗಾದರೆ ಹೆಚ್ಚು ಬೇಕು. ಆ ಮಾತು ಬೇರೆ. ಆದರೆ ನೀವು ಇಪ್ಪತ್ತು ಸಾವಿರ ಕೋಟಿ ರುಪಾಯಿಗಳಷ್ಟು ವಿದ್ಯುತ್‌ನ್ನು ಖರೀದಿಸಿದ್ದೀರಿ ಎಂದರೆ ಮೂರೂವರೆ ಸಾವಿರ ಮೆಗಾವ್ಯಾಟ್‌ಗಳಷ್ಟು ವಿದ್ಯುತ್‌ನ್ನು ನೀವೇ ಉತ್ಪಾದಿಸಬಹುದಿತ್ತು ಎಂದರ್ಥವಲ್ಲವೇ? ಈ ರೀತಿ ನಮ್ಮ ಸರ್ಕಾರವೇ ವಿದ್ಯುತ್ ಉತ್ಪಾದನೆ ಮಾಡುವ ಕೆಲಸಕ್ಕೆ ಮುಂದಾಗಿದ್ದರೆ ಇವತ್ತು ನಾವು ಹಂತಹಂತವಾಗಿ ಖಾಸಗಿಯವರ ಕೈಗೆ ಸಿಗುತ್ತಿರಲಿಲ್ಲ. ಆ ದಿಸೆಯಲ್ಲಿ ಬಿಜೆಪಿ ಸರ್ಕಾರ ಮಾತ್ರವಲ್ಲ, ಸಿದ್ದರಾಮಯ್ಯ ನೇತೃತ್ವದ ಸರ್ಕಾರವೂ ಗುಜರಾತ್‌ನ ನರೇಂದ್ರ ಮೋದಿ ಸರ್ಕಾರದ ಮಾದರಿಯನ್ನು ಅನುಸರಿಸಿತು. ಗುಜರಾತ್‌ನಲ್ಲಿ ಏನಾಗಿದೆ ಎಂದರೆ ಅಲ್ಲೀಗ ದಿನದ ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಸಿಗುತ್ತದೆ. ಆದರೆ ಖಾಸಗಿಯವರೇನಾದರೂ ಕೈ ಎತ್ತಿದರೆ ಮುಕ್ಕಾಲು ಪಾಲು ಗುಜರಾತ್ ಕತ್ತಲಲ್ಲಿ ಮುಳುಗಿ ಬಿಡುತ್ತದೆ.

ಅದಾನಿ ಗ್ರೂಪ್ ಒಂದೇ ಆರೂವರೆ ಸಾವಿರ ಮೆಗಾವ್ಯಾಟ್‌ನಷ್ಟು ವಿದ್ಯುತ್‌ನ್ನು ಅಲ್ಲಿ ಉತ್ಪಾದಿಸುತ್ತದೆ ಎಂದರೆ ಊಹಿಸಿ. ಹೀಗೆ ಹೊರಗಿನ ವ್ಯಕ್ತಿಗಳು ಹೆಚ್ಚೆಚ್ಚು ವಿದ್ಯುತ್ ಉತ್ಪಾದಿಸಲು ಅನುಕೂಲ ಮಾಡಿಕೊಟ್ಟು ಒಂದು ಸರ್ಕಾರ ಕೇವಲ ವಿದ್ಯುತ್ ಖರೀದಿ ಒಪ್ಪಂದವನ್ನಷ್ಟೇ ಮಾಡಿ ಕುಳಿತುಕೊಂಡರೆ ಸಾಕೇ? ಖಾಸಗಿಯವರು ನಾಳೆ ವಿದ್ಯುತ್ ನೀಡುವುದಿಲ್ಲ ಎನ್ನುತ್ತಾರೆ. ಆಗೇನು ಮಾಡಬೇಕು? ಇದೇ ಕಾರಣಕ್ಕಾಗಿ ಒಂದು ಸರ್ಕಾರ ಜನರ ಮೂಲಭೂತ ಅಗತ್ಯಗಳೇನಿವೆಯೋ, ಅವನ್ನು ಪೂರೈಸಲು ತಮ್ಮದೇ ಮಾರ್ಗಗಳನ್ನು ಹಿಡಿಯಬೇಕು. ಆ ಕೆಲಸ ಮಾಡದ ಪರಿಣಾಮವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಂಡಿಯಾಗಿ ಹಣ ಕೊಟ್ಟು ವಿದ್ಯುತ್ ಖರೀದಿ ಮಾಡಲಾಯಿತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಮೂರು ಸಾವಿರ ಕೋಟಿ ರುಪಾಯಿಗಳಿಗಿಂತ ಅಧಿಕ ಪ್ರಮಾಣದ ವಿದ್ಯುತ್‌ನ್ನು ಖರೀದಿಸಿತು. ಅರ್ಥಾತ್, ಈ ಸರ್ಕಾರಕ್ಕೂ ವಿದ್ಯುತ್ ಖರೀದಿ ಬೇಕಿದೆ. ಯಾಕೆಂದರೆ ಅವರ ಪಕ್ಷ ದಿಲ್ಲಿಯಲ್ಲಿ ಅಧಿಕಾರದಲ್ಲಿ ಇಲ್ಲ. ಹೀಗಾಗಿ ದೇಶದ ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಕಡೆ ಪಕ್ಷವನ್ನು ಸಲುಹಬೇಕು. ಹಾಗೆ ಸಲುಹಬೇಕೆಂದರೆ ಹಣ ಬೇಕು. ಆ ಹಣ ಎಲ್ಲಿಂದ ತರಬೇಕು?

ಇದಕ್ಕೆ ನಾನಾ ಮೂಲಗಳಿವೆ. ಈ ಪೈಕಿ ಇಂಧನ ಖರೀದಿಯೂ ಒಂದು. ವಿದ್ಯುತ್‌ನ್ನು ಪವರ್ ಎಕ್ಸ್‌ಚೇಂಜ್ ಮೂಲಕ, ಕೆಲ ಬಾರಿ ಖಾಸಗಿಯವರ ಮೂಲಕ ಖರೀದಿ ಮಾಡಬೇಕಾಗುತ್ತದೆ ಎಂದರೂ ವಿದ್ಯುತ್ ಖರೀದಿ ಒಪ್ಪಂದದ ಆಳದಲ್ಲಿ ಭಾರೀ ಪ್ರಮಾಣದ ಗೋಲ್‌ಮಾಲ್ ನಡೆಯುತ್ತದೆ. ಒಂದು ಯೂನಿಟ್ ವಿದ್ಯುತ್ ಬೆಲೆಯಲ್ಲಿ ನಾಲ್ಕಾಣೆ ಹೊಡೆದು ತಿಂದರೂ ಸಾಕು. ನೂರಾರು ಕೋಟಿ ರುಪಾಯಿ ಹಣ ಬಂದು ಬೀಳುತ್ತದೆ. ಹೀಗಾಗಿ ವಿಸ್ತೃತ ನೆಲೆಯಲ್ಲಿ ತನಿಖೆ ನಡೆಸಿದ್ದರೆ ಕತೆ ಬೇರೆ ಆಗುತ್ತಿತ್ತು. ವಿದ್ಯುತ್ ಖರೀದಿ ಒಪ್ಪಂದದ ಕುರಿತು ತನಿಖೆ ಅಂತ ಆದರೆ ಕೇವಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಹಗರಣ ಮಾತ್ರವಲ್ಲ, ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಆಗಿರುವ ವಿದ್ಯುತ್ ಖರೀದಿ ಹಗರಣವೂ ಸೇರುತ್ತದಲ್ಲ? ಆಗ ಬಿಜೆಪಿಯವರು ಮಾತ್ರವಲ್ಲ, ಕಾಂಗ್ರೆಸ್‌ನವರೂ ಸಿಕ್ಕಿ ಬೀಳುತ್ತಾರೆ. ಹೀಗಾಗಿ ಇಡೀ ಪ್ರಕರಣಕ್ಕೆ ತೇಪೆ ಹಚ್ಚಲಾಯಿತು. ಸದನ ಸಮಿತಿ ರಚಿಸುವ ಮೂಲಕ ಬಿಜೆಪಿಯ ಕೆಲ ನಾಯಕರನ್ನು ಗದುಮುವ ಉದ್ದೇಶವನ್ನಷ್ಟೇ ತೋರಿಸಲಾಯಿತು. ಆ ಮೂಲಕ ಜನರ ತೆರಿಗೆ ದುಡ್ಡಿಗೆ ಬೆಲೆಯೇ ಇಲ್ಲದಂತಾಯಿತು. ಯಥಾಪ್ರಕಾರ ಈ ವರ್ಷವೂ ಕಾಂಗ್ರೆಸ್ ಸರ್ಕಾರ ವಿದ್ಯುತ್ ಖರೀದಿ ಮಾಡಲು ಅವಕಾಶ ದೊರೆಯುತ್ತದೆ.

ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಹೀಗಾಗಿ ಜೆಡಿಎಸ್ ಏನೇ ಒತ್ತಾಯ ಮಾಡಿದರೂ ಎರಡೂ ಪಕ್ಷಗಳು ಸೇರಿ ವಿದ್ಯುತ್ ಖರೀದಿ ಹಗರಣ ಹೊರಗೆ ಬಾರದಂತೆ ತಡೆಯುತ್ತವೆ. ಇದರ ಬದಲು ಒಂದು ಸರ್ಕಾರಕ್ಕೆ ಇಚ್ಛಾಶಕ್ತಿ ಅಂತ ಇದ್ದರೆ ನಮ್ಮಲ್ಲೇ ವಿದ್ಯುತ್ ಉತ್ಪಾದಿಸಲು ಅಗತ್ಯವಾದ ವೇದಿಕೆಯನ್ನು ನಿರ್ಮಿಸಬಹುದಿತ್ತು. ನಿಮಗೆ ಗೊತ್ತಿರಲಿ, ಏಷ್ಯಾದಲ್ಲೇ ಮೊದಲು ವಿದ್ಯುತ್ ಉತ್ಪಾದನೆಯಾಗಿದ್ದು ನಮ್ಮ ಶಿವನಸಮುದ್ರದಲ್ಲಿ. ಆದರೆ ಇವತ್ತು ನಮ್ಮ ಬೇಡಿಕೆಯ ಶೇಕಡಾ ನಲವತ್ತರಷ್ಟು ಪ್ರಮಾಣದ ವಿದ್ಯುತ್‌ನ್ನು ಹೊರಗಿನಿಂದ ಪಡೆಯುವ ಸ್ಥಿತಿ ಬಂದಿದೆ. ಇದರರ್ಥ, ಕಾಲ ಕ್ರಮೇಣ ಕರ್ನಾಟಕದಲ್ಲಿ ಗುಜರಾತ್ ಮಾದರಿಯ ಸರ್ಕಾರ ರೂಪುಗೊಳ್ಳುತ್ತದೆ. ಗುಜರಾತ್ ಮಾದರಿ ಅಂದರೆ ವಿದ್ಯುತ್ ವ್ಯವಸ್ಥೆ ಸೇರಿದಂತೆ ಹಲ ವ್ಯವಸ್ಥೆಗಳು ಖಾಸಗಿಯವರ ಕೈಗೆ ಸಿಗುತ್ತವೆ. ಒಂದು ಸಲ ಒಂದು ರಾಜ್ಯದ ಮೇಲೆ ಖಾಸಗಿಯವರ ನಿಯಂತ್ರಣ ಬಂದರೆ ಜನ ಸಾಮಾನ್ಯರು ಮೂಲಭೂತ ಸೌಕರ್ಯಕ್ಕೂ ಪರದಾಟ ನಡೆಸಬೇಕಾಗುತ್ತದೆ.

ಉದಾಹರಣೆಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನೇ ತೆಗೆದುಕೊಳ್ಳಿ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ರಸ್ತೆ ಮಾಡಿಸಲಾಯಿತು. ಆದರೆ ಅದರ ಪಕ್ಕ ಒಂದು ಸರ್ವೀಸ್ ರಸ್ತೆ ಮಾಡಿಸಲಿಲ್ಲ. ಹೀಗಾಗಿ ಅಕ್ಕಪಕ್ಕದ ಗ್ರಾಮಗಳ ಜನ ಸುಮ್ಮನೆ ರಸ್ತೆಯಲ್ಲಿ ಸಂಚರಿಸಿದರೂ ಭರ್ತಿ ಹಣ ಪೀಕಬೇಕಾದ ಪರಿಸ್ಥಿತಿ ಬಂತು. ಇದಕ್ಕಾಗಿ ದೊಡ್ಡ ಗಲಾಟೆ ನಡೆಯಿತು. ಒಂದು ರಸ್ತೆಯಲ್ಲಿ ಸಂಚರಿಸಲೂ ರಾಜ್ಯದ ಜನಸಾಮಾನ್ಯರು ಸಿಕ್ಕಾಪಟ್ಟೆ ದುಡ್ಡು ಕೊಡಬೇಕಾದ ಸ್ಥಿತಿ ಬಂತು ಎಂದರೆ ಅದರರ್ಥವೇನು? ಒಂದು ಸರ್ಕಾರಕ್ಕೆ ಯಾವುದೇ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯ ಮಟ್ಟಕ್ಕೇರಿಸಬೇಕು ಎಂಬ ಉತ್ಸಾಹವಿದ್ದರೆ ಮೊದಲು ಜನರು ದುಡ್ಡಿಲ್ಲದೇ ತಿರುಗಾಡುವ ಸರ್ವೀಸ್ ರಸ್ತೆಯನ್ನು ನಿರ್ಮಿಸಬೇಕು. ಹಣವಿದ್ದವರು ತಮ್ಮ ಕಾರುಗಳಲ್ಲಿ ದುಡ್ಡು ಕೊಟ್ಟು ತಿರುಗುತ್ತಾರೆ. ಆದರೆ ಕೊಡಲಾಗದ ಜನರ ಸ್ಥಿತಿ ಏನು ಅಥವಾ ಕಾರು ತೆಗೆದುಕೊಂಡವರೆಲ್ಲ ಶ್ರೀಮಂತರೇ ಇದನ್ನು ಒಂದು ಸರ್ಕಾರ ಯೋಚಿಸಬೇಕು. ಜಾಗತೀಕರಣದ ಈ ಕಾಲಘಟ್ಟದಲ್ಲಿ ಜನಸಾಮಾನ್ಯರು ಒಂದು ಸಣ್ಣ ಕಾರನ್ನು ಖರೀದಿಸಿದರು ಎಂದರೆ ಅವರನ್ನು ಶ್ರೀಮಂತರ ವರ್ಗಕ್ಕೆ ಸೇರಿಸಲು ಬರುವುದಿಲ್ಲ.

ಅದೇ ರೀತಿ ಕೆರೆಗಳ ಒತ್ತುವರಿ ಪ್ರಕರಣವನ್ನೇ ತೆಗೆದುಕೊಳ್ಳಿ. ಇದರ ಕುರಿತು ಪ್ರಾಮಾಣಿಕವಾದ ಒಂದು ತನಿಖೆ ನಡೆದರೆ ಸಾವಿರಾರು ಮಂದಿ ಪ್ರಭಾವಿಗಳು ಜೈಲು ಪಾಲಾಗುತ್ತಾರೆ. ಸಿಕ್ಕ ಸಿಕ್ಕ ಕೆರೆಗಳನ್ನು ಒತ್ತುವರಿ ಮಾಡಿಕೊಂಡು, ಅದನ್ನು ಲೇಔಟ್ ಮಾಡಿ ಮಾರಾಟ ಮಾಡಿದವರದು ಒಂದು ದಂಡಾದರೆ, ತಮಗಾಗಿಯೇ ಭೂಮಿ ಇಟ್ಟುಕೊಂಡವರದೊಂದು ದಂಡು ಇದೆ. ರಾಜ್ಯಾದ್ಯಂತ ಸುಮಾರು ಆರು ಲಕ್ಷ ಕೋಟಿ ರುಪಾಯಿ ಮೌಲ್ಯದ ಭೂಮಿ ಒತ್ತುವರಿಯಾಗಿದೆ ಎಂಬುದು ಒಂದು ಅಂದಾಜು. ಇದರಲ್ಲಿ ಕೆರೆ ಪಾತ್ರಗಳಲ್ಲದೇ, ಕೆರೆಗಳು, ಇತರ ಭೂಮಿಯೂ ಸೇರುತ್ತದೆ. ಈ ಕುರಿತು ಒಂದು ತನಿಖೆ ನಡೆಸಬೇಕಿತ್ತು. ಆದರೆ ತನಿಖೆ ನಡೆಸಿದರೆ ಸಿಕ್ಕಿ ಹಾಕಿಕೊಳ್ಳುವವರ ಹಿಂದೆ ರಾಜಕೀಯ ಪಕ್ಷಗಳ ನಾಯಕರೇ ಇದ್ದಾರಲ್ಲ? ಹೀಗಾಗಿ ಇದೂ ಕೂಡ ತನಿಖೆಯ ವ್ಯಾಪ್ತಿಗೆ ಒಳಪಡಲಿಲ್ಲ. ಕಾಗೋಡು ತಿಮ್ಮಪ್ಪ ಅವರು ವಿವಿಧ ಇಲಾಖೆಗಳ ಬೇಡಿಕೆಗಳನ್ನು ಚರ್ಚೆ ಮಾಡಬೇಕು ಎಂದ ಪರಿಣಾಮವಾಗಿ ಇದು ಜನಸಾಮಾನ್ಯರಿಗೂ ತಿಳಿಯುವಂತಾಯಿತು.


ಇಲ್ಲದೇ ಹೋಗಿದ್ದರೆ ಸರ್ಕಾರ ನಡೆಸುವವರು ಯಾವ್ಯಾವ ಬಾಬತ್ತುಗಳಲ್ಲಿ ಹಣ ತಿನ್ನುತ್ತಾರೆ ಎಂಬುದು ಅರ್ಥವಾಗುವುದು ಕಷ್ಟವಿತ್ತು. ಇವತ್ತು ೩೦ಗಿ೪೦ ಸೈಟೂ ಇಲ್ಲದೇ ಒದ್ದಾಡುವ ಲಕ್ಷಗಟ್ಟಲೆ ಜನರಿದ್ದಾರೆ. ಆದರೆ ಸರ್ಕಾರಿ ಭೂಮಿಯನ್ನೇ ನುಂಗಿ ನಿರಾಯಾಸವಾಗಿ ಕುಂತ ಸಾವಿರಾರು ಜನರಿದ್ದಾರೆ. ಇಂತಹವರನ್ನು ಬಲಿ ಹಾಕುವುದು ಹೇಗೆ? ಒಂದು ರಾಜ್ಯವನ್ನು ಉಳಿಸುವುದು ಹೇಗೆ? ಇವತ್ತು ಯೂರೋಪ್‌ನ ಬಹುತೇಕ ದೇಶಗಳಲ್ಲಿ ಕಸದಿಂದಲೇ ವಿದ್ಯುತ್ ಉತ್ಪಾದಿಸುತ್ತಾರೆ. ಅದವರಿಗೆ ಅನಿವಾರ್ಯ. ಯಾಕೆಂದರೆ ವರ್ಷದ ಹತ್ತು ತಿಂಗಳು ಚಳಿ ಇರುತ್ತದೆ. ಈ ಮೈ ಥರಗುಟ್ಟಿಸುವ ಚಳಿಯಿಂದ ಅವರು ಪಾರಾಗಬೇಕು. ಹೀಗಾಗಿ ಅವರು ಕಸದಿಂದಲೂ ದಂಡಿಯಾಗಿ ವಿದ್ಯುತ್ ಉತ್ಪಾದಿಸುತ್ತಾರೆ. ನಮ್ಮ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ, ನಗರಸಭೆಗಳ ವ್ಯಾಪ್ತಿಯಲ್ಲಿ ಸಿಗುವ ಕಸದಿಂದ ನಾವೂ ದಂಡಿಯಾಗಿ ವಿದ್ಯುತ್ ಉತ್ಪಾದಿಸಬಹುದು. ಆದರೆ ಈ ಕುರಿತು ನಮ್ಮ ನಿಗಾ ಹರಿಯುವುದೇ ಇಲ್ಲ.

ಯಾಕೆಂದರೆ ಕಸ ತಿನ್ನುವ ವಿಷಯದಲ್ಲಿ ಒಂದು ಮಾಫಿಯಾ ನಿರಂತರವಾಗಿ ಕೆಲಸ ಮಾಡುತ್ತಿದೆ. ಅದು ಯಾವ ಕಾರಣಕ್ಕೂ ಕಸದಿಂದ ಸಿಗುತ್ತಿರುವ ಲಾಭವನ್ನು ಬಿಟ್ಟು ಕೊಡಲು ಬಯಸುವುದಿಲ್ಲ. ಇದರಲ್ಲಿ ರಾಜಕಾರಣಿಗಳಿಗೂ ಪಾಲು ಸಿಗುವುದರಿಂದ ಅವರೂ ಕಸದಿಂದ ಕರೆಂಟು ಮಾಡುವ ಯೋಜನೆಗಳನ್ನು ಇಂತಿಷ್ಟು ದಿನಗಳಲ್ಲಿ ಮಾಡುತ್ತೇವೆ ಅಂತ ನಾಟಕ ಮಾಡಿ ಓಡಿ ಹೋಗುತ್ತಾರೆಯೇ ವಿನಃ ನಿಜವಾದ ಕ್ರಮ ಕೈಗೊಳ್ಳುವುದಿಲ್ಲ. ನಾವು ವಿವಿಧ ಯೋಜನೆಗಳಿಗೆ ಅಂತ ಭೂಮಿ ಕೊಟ್ಟಿದ್ದೇವಲ್ಲ? ಅದರ ಬಗ್ಗೆ ಬರೆಯಹೋದರೆ ಅದೇ ಒಂದು ದೊಡ್ಡ ಕತೆ. ಒಂದಲ್ಲ, ಎರಡಲ್ಲ, ಸಾವಿರಾರು ಎಕರೆ ಭೂಮಿಯನ್ನು ಕಳೆದ ಎರಡು ದಶಕಗಳಲ್ಲಿ ನೀಡಲಾಗಿದೆ. ಈ ರೀತಿ ಭೂಮಿ ಕೊಟ್ಟವರೂ ದಂಡಿಯಾಗಿ ಕಾಣಿಕೆ ಸ್ವೀಕರಿಸಿದ್ದಾರೆ. ತೆಗೆದುಕೊಂಡವರೂ ಕಾಣಿಕೆ ಸ್ವೀಕರಿಸಿದ್ದಾರೆ. ಪರದಾಡುತ್ತಿರುವುದು ಮಾತ್ರ ರೈತರು, ಜನಸಾಮಾನ್ಯರು. ಇಂತಹ ವಿಷಯಗಳಲ್ಲಿ ಕ್ರಮ ಕೈಗೊಳ್ಳುವ ಮಾತನಾಡಿದರೂ ಏನೂ ಕ್ರಮವಾಗುವುದಿಲ್ಲ. ಯಾಕೆಂದರೆ ಕ್ರಮಕ್ಕೆ ಒಳಗಾಗಬೇಕಾದವರು, ಕ್ರಮ ಕೈಗೊಳ್ಳಬೇಕಾದವರು ಒಂದೇ ಗೂಡಿನ ಮಕ್ಕಳು.

ಹೀಗೆ ನೋಡುತ್ತಾ ಹೋದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸಕ್ಕಿಂತ ಜಾಸ್ತಿ ಹೊಡೆದು ತಿನ್ನುವ ಕೆಲಸ ಆಗುತ್ತದೆ. ಆದರೆ ಅದನ್ನು ತಡೆ ಹಿಡಿಯುವ ಇಚ್ಛಾ ಶಕ್ತಿ ಮಾತ್ರ ಯಾರಿಗೂ ಇಲ್ಲ. ಆಗಾಗ ಇಚ್ಛಾಶಕ್ತಿ ಪ್ರಕಟಗೊಂಡಂತೆ ಭಾಸವಾದರೂ ಅದು ಇನ್ಯಾರನ್ನೋ ಗುರಿಯಾಗಿಸಿಕೊಂಡ ಇಚ್ಛಾಶಕ್ತಿಯೇ ವಿನಃ ನಿಜವಾದ ಇಚ್ಛಾಶಕ್ತಿಯಲ್ಲ. ಉದಾಹರಣೆಗೆ ಈಗ ಒಂದೂ ಕಾಲು ಲಕ್ಷ ಕೋಟಿ ರುಪಾಯಿಗಳ ಬಜೆಟ್‌ನ್ನು ಚರ್ಚೆಯೇ ಇಲ್ಲದೇ ಅಂಗೀಕರಿಸಿದರಲ್ಲ? ಇದರ ಎಳೆ ಎಳೆಯನ್ನು ಬಿಡಿಸಿಟ್ಟಿದ್ದಿದ್ದರೆ ಜನಸಾಮಾನ್ಯರಿಗೆ ತಾವು ಕೊಡುವ ತೆರಿಗೆ ಹಣ ಹೇಗೆ ಖರ್ಚಾಗುತ್ತದೆ ಎಂಬುದರ ವಿವರ ಸಿಗುತ್ತಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ, ನಾವು ಇನ್ನು ನಾಲ್ಕು ವರ್ಷ ಕಳೆದ ಮೇಲೆ ಮಂಡಿಸುವ ಬಜೆಟ್ಟಿನ ಸಿಂಹಪಾಲು ಮಾಡಿರುವ ಸಾಲವನ್ನು ತೀರಿಸಲು ಮುಡುಪಾಗಿಡಬೇಕಾಗುತ್ತದೆ. ಯಾಕೆಂದರೆ ನಾವು ಪಡೆದಿರುವುದೆಲ್ಲ ದೂರಗಾಮಿ ಸಾಲಗಳು. ಅದರ ಮೇಲೆ ಬಡ್ಡಿ ತೆರಬೇಕಲ್ಲ? ಈ ಬಡ್ಡಿ ಕೊಡುವ ಟೈಮು ೨೦೧೮ಕ್ಕೆ ಶುರುವಾಗುತ್ತದೆ. ಆಗ ಬಜೆಟ್ ಗಾತ್ರ ಮೂರು ಲಕ್ಷ ಕೋಟಿ ದಾಟಿದರೆ, ನೀವು ತಿನ್ನುವ ಆಹಾರ ಪದಾರ್ಥಗಳಿಗೆ ಸಿಕ್ಕಾಪಟ್ಟೆ ದುಡ್ಡು ತೆರುವುದು ಅನಿವಾರ್ಯವಾಗುತ್ತದೆ.

ಯಾವುದೇ ಸರ್ಕಾರ ಇರಲಿ, ಇಂತಹ ವಿಷಯಗಳಲ್ಲಿ ಕಾಳಜಿ ವಹಿಸಬೇಕು. ೨೦೧೮ರೊಳಗೆ ನಾವು ಪಡೆದ ಸಾಲದ ಮೇಲಿನ ಬಡ್ಡಿಯನ್ನು ತೀರಿಸಲು ಜನರ ಮೇಲೆ ತೆರಿಗೆ ಹಾಕಬೇಕು ಎಂದು ಯೋಚಿಸುವುದು ತಪ್ಪು. ಬದಲಿಗೆ ಅಷ್ಟರೊಳಗೆ ಇರುವ ಸಾಲವನ್ನು ತೀರಿಸುವುದು ಹೇಗೆ ಅನ್ನುವ ಕುರಿತು ಯೋಚಿಸಬೇಕು. ಕೇವಲ ಬಳ್ಳಾರಿಯ ಗಣಿಗಾರಿಕೆ ಒಂದರಲ್ಲೇ ಸುಮಾರು ಎರಡು ಲಕ್ಷ ಕೋಟಿ ರುಪಾಯಿಗಳಿಗೂ ಹೆಚ್ಚು ಹಣ ಹರಿದು ಹೋಯಿತು. ರಾಜ್ಯ ಸರ್ಕಾರ ಇದುವರೆಗೆ ಮಾಡಿರುವ ಸಾಲದ ಪ್ರಮಾಣ ಒಂದು ಲಕ್ಷ ನಲವತ್ತು ಸಾವಿರ ಕೋಟಿ ರುಪಾಯಿ. ಇನ್ನು ನಾಲ್ಕು ವರ್ಷ ಸಾಲ ಬೇಕು ಸಾಲ ಬೇಕು ಎನ್ನುತ್ತಾ ಹೋದರೆ ಇದರ ಪ್ರಮಾಣವೇ ಎರಡೂವರೆ ಲಕ್ಷ ಕೋಟಿ ರುಪಾಯಿಗಳಷ್ಟಾಗುತ್ತದೆ. ಒಂದು ಮನೆಯ ಬಜೆಟ್ ಯಾವತ್ತೂ ನಾಳೆಗೆ ಏನು ಉಳಿಸಬೇಕು ಎಂಬ ಮಾಡೆಲ್ಲನ್ನು ಹೊಂದಿರುತ್ತದೆಯೇ ವಿನಃ ನಾಳೆಗೆ ವಿನಾಶ ಬಂದರೂ ಓಕೆ ಅನ್ನುವಂತಿರುವುದಿಲ್ಲ. ಸರ್ಕಾರ ಕೂಡ ಹೀಗೇ ಇರಬೇಕು. ಈಗಿರುವ ಸಾಲದ ಪ್ರಮಾಣವನ್ನು ಹೆಚ್ಚಿಸದೆಯೇ ಯಾವ್ಯಾವ ಮೂಲಗಳಿಂದ ಹಣ ಪಡೆಯಲು ಸಾಧ್ಯ ಎಂಬುದನ್ನು ಗಮನಿಸಬೇಕು. ಇನ್ಯಾರೋ ತಿಂದು ಹಾಕುವ ಹಣವನ್ನು ಬೊಕ್ಕಸಕ್ಕೆ ಹರಿಯುವಂತೆ ಮಾಡಬೇಕು.

ಅಯ್ಯೋ, ಹೋದರೆ ಸಾವಿರ ಕೋಟಿ ರುಪಾಯಿ ಹೋಗಲಿ. ನಮಗೊಂದು ನೂರು ಸಿಕ್ಕಿದರೆ ಸಾಕು ಎಂಬಂತಹ ಮನೋಭಾವ ಇದ್ದರೆ ಈಗಿರುವ ಸಾಲ ತೀರುವುದಿರಲಿ, ಅದು ಇನ್ನಷ್ಟು ಬೆಳೆದು ಅದರ ಮೇಲಿನ ಬಡ್ಡಿ ಕೊಡಲು ಬಜೆಟ್‌ನ ಬಹುಭಾಗ ಹಣವನ್ನು ಮೀಸಲಿಡಬೇಕಾಗುತ್ತದೆ. ಇವತ್ತು ಸಿದ್ದರಾಮಯ್ಯ ಇರಬಹುದು. ನಾಳೆ ಮತ್ಯಾರೋ ಬರಬಹುದು. ಆದರೆ ಈ ಭಾರವನ್ನು ಹೊರಬೇಕಾದ್ದು ಜನರೇ ಹೊರತು ಅಧಿಕಾರ ನಡೆಸುವವರಲ್ಲ. ಇದು ರಾಜಕಾರಣಿಗಳಿಗೂ ಗೊತ್ತು. ಹೀಗಾಗಿಯೇ ಅವರು ಒಂದೂ ಕಾಲು ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್‌ನ್ನು ಚರ್ಚೆಯೇ ಇಲ್ಲದೆ, ಗೊಂದಲದ ನಡುವೆ ಅಂಗೀಕಾರವಾಗುವಂತೆ ಮಾಡಿದ್ದು. ಇನ್ನಾದರೂ ಇಂತಹ ವಿಷಯಗಳ ಬಗ್ಗೆ ಜನ ಎಚ್ಚರದಿಂದಿರಬೇಕು. ನಮ್ಮ ಜನಪ್ರತಿನಿಧಿಗಳು ನಮ್ಮ ಕೆಲಸ ಮಾಡಲು ಹೋಗಿದ್ದಾರೆಯೇ ವಿನಃ ತಮ್ಮ ಕೆಲಸ ಮಾಡಿಕೊಳ್ಳಲು ಅಲ್ಲ. ಯಾಕೆಂದರೆ ಸರ್ಕಾರ ಎಂಬುದು ಯಾರದೋ ವೈಯಕ್ತಿಕ ಕಿರಾಣಿ ಅಂಗಡಿಯಲ್ಲ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 05 August, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books