Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಹೈಯರ್ ಲೆವೆಲ್ ಲಾಬಿ ಎಂದರೆ ಗೊತ್ತಿದೆಯೇ ರೆಡ್ಡಿ ಸಾಹೇಬರೇ?

ಇದುವರೆಗೆ ಬೆಂಗಳೂರಿನ ಪೊಲೀಸ್ ಕಮೀಶನರ್ ಆಗಿದ್ದ ರಾಘವೇಂದ್ರ ಔರಾದ್ಕರ್ ವರ್ಗಾವಣೆಯಾಗಿ ಆ ಜಾಗಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್.ರೆಡ್ಡಿ ಬಂದಿದ್ದಾರೆ. ಮೊದಲು ಅವರಿಗೊಂದು ಬೆಸ್ಟ್ ಆಫ್ ಲಕ್ ಹೇಳೋಣ. ಇವತ್ತು ಬೆಂಗಳೂರು ದೇಶದ ಸಿಲಿಕಾನ್ ಸಿಟಿಯಾಗಿ ಬೆಳೆದಿದೆ. ಸಹಜವಾಗಿಯೇ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳೂ ಹೆಚ್ಚಾಗುತ್ತವೆ. ಇದನ್ನು ಕಾಪಾಡಲು ಹೆಚ್ಚಿನ ಎಚ್ಚರ, ತಾಳ್ಮೆ, ಬುದ್ಧಿವಂತಿಕೆ ಎಲ್ಲವೂ ಇರಬೇಕು. ಅದಿರಲಿ, ಅಂದ ಹಾಗೆ ಈ ಬೆಳವಣಿಗೆ ನಡೆದಾಗ ನನಗೆ ನೆನಪಿಗೆ ಬಂದ ಕೆಲವು ಘಟನೆಗಳನ್ನು ನಿಮಗೆ ಹೇಳಬೇಕು ಅನ್ನಿಸಿತು. ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಮನುಷ್ಯರು ಅನ್ನಿಸಿಕೊಂಡವರ‍್ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಆದರೆ ಹಿಂದೆ ಇಂತಹ ಘಟನೆಗಳು ನಡೆದೇ ಇಲ್ಲವೇ? ನಡೆದಿದ್ದವು. ಆದರೆ ಒಂದು ಘಟನೆ ಈ ಮಟ್ಟದ ಹೈಪ್ ಪಡೆಯಲು ಕಾರಣವೇನು? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ನಿಮಗೆ ಕೆಲ ಘಟನೆಗಳನ್ನು ಹೇಳಬೇಕು ಅನ್ನಿಸಿತು. ಅದಕ್ಕೇ ಹೇಳುತ್ತಿದ್ದೇನೆ.

ಘಟನೆ: ಒಂದು
ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿರುವ ಓರ್ವ ಅಧಿಕಾರಿಯ ಮೇಲೆ ಹಲವರಿಗೆ ಕಣ್ಣಿತ್ತು. ತಮ್ಮ ಮಾತು ನಡೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಅವರೆಲ್ಲ ಆಕ್ರೋಶಗೊಂಡಿದ್ದರು. ಆದರೆ ಅವರನ್ನು ಎತ್ತಂಗಡಿ ಮಾಡಿಸುವುದು ಹೇಗೆ? ಸುಖಾಸುಮ್ಮನೆ ಎತ್ತಂಗಡಿ ಮಾಡಿಸುವುದು ಕಷ್ಟ. ಹಾಗೆ ಎತ್ತಂಗಡಿ ಮಾಡಲು ಸರ್ಕಾರ ಕೂಡ ಮುಂದಾಗುವಂತಿಲ್ಲ. ಹೀಗಾಗಿ ಹೈಯರ್ ಲೆವೆಲ್ ಅಂತ ನಾವೇನು ಹೇಳುತ್ತೇವೆ? ಅಲ್ಲಿ ಒಂದು ಚರ್ಚೆ ನಡೆಯಿತು. ಆ ಚರ್ಚೆಯ ಗುರಿ ಒಂದೇ, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಸದರಿ ಅಧಿಕಾರಿಯನ್ನು ಹೇಗೆ ಎತ್ತಂಗಡಿ ಮಾಡಬೇಕು ಎಂಬುದು. ಆತ ದಕ್ಷ. ಏನೇ ಆರೋಪಗಳಿದ್ದರೂ ಕೆಲಸದ ವಿಷಯದಲ್ಲಿ ದೈತ್ಯ. ಒಳ್ಳೆಯ ಕೆಲಸಗಾರ. ಇನ್‌ಫ್ಲೂಯೆನ್ಸ್ ಕೂಡ ದೊಡ್ಡ ಮಟ್ಟದಲ್ಲೇ ಇತ್ತು. ಅಂತಹ ಮನುಷ್ಯ ಅದಕ್ಷ ಅನ್ನಿಸಬೇಕು. ಹೇಗೆ ಅದಕ್ಷ ಅನ್ನಿಸುವುದು? ಹಾಗಂತ ಚರ್ಚೆ ನಡೆಯಿತು.

ಈ ಚರ್ಚೆಯ ಸಂದರ್ಭದಲ್ಲಿ ಎಲ್ಲರೂ ಒಮ್ಮತಾಭಿಪ್ರಾಯಕ್ಕೆ ಬಂದರು. ಎಲ್ಲೆಲ್ಲಿ ಹುಚ್ಚು ನಾಯಿಗಳು ಸಿಗುತ್ತವೆಯೋ ಅವನ್ನು ಪತ್ತೆ ಹಚ್ಚಬೇಕು. ಅವನ್ನು ತಂದು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬಿಡಬೇಕು. ಆ ನಾಯಿಗಳು ಏನು ಮಾಡುತ್ತವೆ? ಸಿಕ್ಕ ಸಿಕ್ಕವರನ್ನು ಕಚ್ಚುತ್ತವೆ. ಆಗ ಜನ ಆಕ್ರೋಶಗೊಳ್ಳುತ್ತಾರೆ. ಸರ್ಕಾರ ಬೀದಿ ನಾಯಿಗಳನ್ನು ನಿಯಂತ್ರಣ ಮಾಡಲೂ ವಿಫಲವಾಗಿದೆ ಎಂದು ಕೂಗುತ್ತಾರೆ. ಆಗ ಸರ್ಕಾರದ ಕಣ್ಣು ಸಂಬಂಧಪಟ್ಟ ಬೆಂಗಳೂರು ಮಹಾನಗರ ಪಾಲಿಕೆಯ ಮೇಲೆ ಬೀಳುತ್ತದೆ. ಈ ಪಾಲಿಕೆಗೆ ತಂದು ಹಾಕಿದ ಅಧಿಕಾರಿ ದಕ್ಷನಿದ್ದರೆ ಬೀದಿ ನಾಯಿಗಳು ಹತ್ತಾರು ಜನರಿಗೆ ಕಚ್ಚುವುದು ಎಂದರೇನು ಅಂತ ಸರ್ಕಾರ ಅಂದುಕೊಳ್ಳುತ್ತದೆ. ಆತ ಅದಕ್ಷ ಎಂಬ ತೀರ್ಮಾನಕ್ಕೆ ಬರುತ್ತದೆ. ಹಾಗೆ ಆಗಲಿ ಎಂದು ಹೈಯರ್ ಲೆವೆಲ್ ಸಭೆ ತೀರ್ಮಾನಿಸಿತು.

ಅದರನುಸಾರ ಬೆಂಗಳೂರಿನ ವಿವಿಧ ಬಡಾವಣೆಗಳಿಗೆ ಮೂವತ್ತು ಹುಚ್ಚು ನಾಯಿಗಳನ್ನು ತಂದು ಬಿಡಲಾಯಿತು. ನಿರೀಕ್ಷಿಸಿದಂತೆ ಅವು ದೊಡ್ಡವರು, ಮಕ್ಕಳು ಎನ್ನದೇ ಬೀದಿ ಬೀದಿಯಲ್ಲಿ ಕಚ್ಚತೊಡಗಿದವು. ಇದರಿಂದ ಜನಾಕ್ರೋಶ ಭುಗಿಲೆದ್ದಿತು. ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳು ಮೊಳಗಿದವು. ಸರಿ, ಬಿಬಿಎಂಪಿಯಲ್ಲಿ ತಳ ಊರಿರುವ ಸದರಿ ಅಧಿಕಾರಿ ಅದಕ್ಷ ಎಂಬ ತೀರ್ಮಾನಕ್ಕೆ ಸರ್ಕಾರ ಬಂತು. ಅವರನ್ನು ಎತ್ತಂಗಡಿ ಮಾಡಿತು. ಈ ಸಂದರ್ಭದಲ್ಲಿ ಹುಚ್ಚು ನಾಯಿಗಳು ಜನರನ್ನು ಕಚ್ಚಲಿಲ್ಲವೇ? ಮಕ್ಕಳು, ಮರಿ ಎನ್ನದೇ ದಾಳಿ ಮಾಡಿಲ್ಲವೇ? ಎಲ್ಲವೂ ನಿಜ. ಅಂದ ಮೇಲೆ ಸದರಿ ಅಧಿಕಾರಿ ಆ ಜಾಗದಲ್ಲಿ ಯಾಕಿರಬೇಕು?
ಯೋಚಿಸಿ ನೋಡಿ. ನಡೆದದ್ದನ್ನು ನೆನಪಿಸಿಕೊಂಡರೆ ನಿಮಗೂ ಹಾಗನ್ನಿಸುತ್ತದೆ. ಆದರೆ ತಮಾಷೆ ನೋಡಿ. ಆ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದೇ ತಡ, ಸ್ವಲ್ಪ ದಿನಗಳಲ್ಲೇ ನಾಯಿ ಕಾಟ ಕಂಟ್ರೋಲಿಗೆ ಬಂದು ಬಿಟ್ಟಿತು. ಯಾಕೆಂದರೆ ಹೊರಗಿನಿಂದ ಕರೆತಂದಿದ್ದ ನಾಯಿಗಳನ್ನು ಒಂದೋ ಹೊಡೆದು ಕೊಲ್ಲಲಾಯಿತು. ಇಲ್ಲವೇ ಗಡಿಪಾರು ಮಾಡಲಾಯಿತು. ಒಟ್ಟಿನಲ್ಲಿ ಜನ ಸಮಾಧಾನದ ನಿಟ್ಟುಸಿರು ಬಿಟ್ಟರು. ಅರ್ಥಾತ್, ಯಾರೋ ಮಾಡಿದ ಪ್ಲಾನಿಗೆ ಯಾರೋ ಬಲಿಯಾಗಬೇಕಾಯಿತು.

ಘಟನೆ: ಎರಡು
ವೀರೇಂದ್ರಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ೧೯೮೯ರ ಚುನಾವಣೆಯನ್ನು ಭರ್ಜರಿ ಜಯದಿಂದ ಗೆದ್ದಿತು. ನೂರಾ ಎಪ್ಪತ್ತೊಂಬತ್ತು ಸೀಟುಗಳು ಅಂದರೆ ಸಾಮಾನ್ಯವೇ? ಸರಿ, ಇನ್ನು ವೀರೇಂದ್ರಪಾಟೀಲರನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದೇ ಅವರ ವಿರೋಧಿಗಳು ಅಂದುಕೊಂಡರು. ಆದರೆ ದಕ್ಷರಾಗಿದ್ದ, ಪ್ರಾಮಾಣಿಕರಾಗಿದ್ದ ವೀರೇಂದ್ರಪಾಟೀಲರು ಮದ್ಯದ ಲಾಬಿಯನ್ನು ಬಗ್ಗು ಬಡಿಯಲು ಮುಂದಾಗಿ ಬಿಟ್ಟರು. ಇದರಿಂದ ಕಂಗಾಲಾದ ಹಲವು ಮದ್ಯದ ದೊರೆಗಳು, ಕಾಂಗ್ರೆಸ್ ನಾಯಕರ ಮೊರೆ ಹೋದರು. ಚುನಾವಣೆಯಲ್ಲಿ ನಿಮ್ಮ ಪಕ್ಷದ ಬಹುತೇಕ ಕ್ಯಾಂಡಿಡೇಟುಗಳಿಗೆ ತಲಾ ಎರಡು ಲಕ್ಷ ರುಪಾಯಿಗಳಷ್ಟು ಖರ್ಚು ಮಾಡಿದೆವು. ಆದರೆ ನೀವು ನಮಗೇ ಹೊಡೆಯುತ್ತಿದ್ದೀರಿ. ಇದು ಸರಿಯೇ ಎಂದು ಪ್ರಶ್ನಿಸಿದರು. ಸರಿ, ಈ ನಾಯಕರಿಗೂ ಇದೇ ಬೇಕಾಗಿತ್ತು. ಹಾಗಂತಲೇ ದಿಲ್ಲಿಗೆ ಹೋಗಿ ದೂರು ಹೇಳಿದರು. ನೋಡಿ, ಕಳೆದ ಚುನಾವಣೆಯಲ್ಲಿ ನಾವು ಬಂಪರ್ ಗೆಲುವು ಸಾಧಿಸಲು ಕಾರಣರಾದ ಮದ್ಯದ ದೊರೆಗಳನ್ನು ವೀರೇಂದ್ರಪಾಟೀಲ್ ಹೊಡೆಯುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಎಲೆಕ್ಷನ್ ಫಂಡು ಕೊಡುವ ಯಾರು ತಾನೇ ನಮ್ಮನ್ನು ನಂಬುತ್ತಾರೆ ಎಂದು ಪ್ರಶ್ನಿಸಿದರು.

ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಆಂಧ್ರದ ಸಿಎಂ ಆಗಿದ್ದವರ ಜತೆ ವೀರೇಂದ್ರಪಾಟೀಲರು ನಿರಂತರ ಸಂಪರ್ಕದಲ್ಲಿದ್ದಾರೆ. ಎಷ್ಟೇ ಆದರೂ ಈಗಾಗಲೇ ಒಂದು ಸಲ ಸಿಎಂ ಆಗಿದ್ದ ನಾಯಕ. ಕೇಂದ್ರ ಸಚಿವನಾಗಿದ್ದ ನಾಯಕ. ಇವತ್ತಲ್ಲ, ನಾಳೆ ದಿಲ್ಲಿಯ ರಾಜಕೀಯದ ಮೇಲೆ ಕಣ್ಣು ಬೀಳಬಹುದು. ಹುಷಾರಾಗಿರುವುದು ಒಳ್ಳೆಯದು. ಮತ್ತೊಂದು ನಿಜಲಿಂಗಪ್ಪ ಪ್ರಕರಣ ನಡೆಯುವುದು ಬೇಡ ಎಂದು ಹೇಳಿದರು. ಅವರು ಹೇಳಿದ ಮಾತನ್ನು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧಿ ಅಕ್ಷರಶಃ ನಂಬಿದರು. ಎಲ್ಲವೂ ನಿಜ. ಆಂಧ್ರದ ರಾಜಕಾರಣಿಯ ಜತೆ ಅವರು ಮಾತನಾಡುತ್ತಾರೆ ಎಂಬ ಕಾರಣಕ್ಕಾಗಿ ಅವರನ್ನು ಬಡಿದು ಹಾಕಲು ಸಾಧ್ಯವಿಲ್ಲ. ಅಥವಾ ಮದ್ಯದ ಲಾಬಿಯನ್ನು ಸದೆ ಬಡಿದು ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರುಪಾಯಿಗಳನ್ನು ತಂದು ತುಂಬಿಸುತ್ತಿರುವುದನ್ನು ತಪ್ಪು ಎನ್ನಲಾಗುವುದಿಲ್ಲ. ಆದರೆ ಎಲ್ಲ ಸರಿಗಳ ಮಧ್ಯೆಯೂ ಅವರು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಬೇಕು ಎಂದರೆ ಏನು ಮಾಡಬೇಕು? ಸುಖಾ ಸುಮ್ಮನೆ ಇಳಿಸಿದರೆ ದಂಗೆ ಏಳುತ್ತದೆ. ಅದಕ್ಕೊಂದು ಕಾರಣ ಬೇಕು ಅಂತ ರಾಜೀವ್ ಗಾಂಧಿ ಹೇಳಿದರು.

ಇದಾದ ನಂತರ ಹೈಯರ್ ಲೆವೆಲ್ ಸಭೆ ನಡೆಯಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂಬ ಮೆಸೇಜು ಕೇಂದ್ರಕ್ಕೆ ಹೋಗುವಂತೆ ಮಾಡಬೇಕು. ಅದರಲ್ಲೂ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸುವಂತೆ ಮಾಡಬೇಕು ಎಂಬ ತೀರ್ಮಾನವಾಯಿತು. ಇದಾದ ಮರುದಿನವೇ ಚನ್ನಪಟ್ಟಣ, ರಾಮನಗರ, ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಕೋಮು ಗಲಭೆಗಳಾದವು. ದೇವಸ್ಥಾನದ ಮೇಲೆ ದನದ ಮಾಂಸ ಬಿಸಾಡಿದರು ಅಂತ ಕೆಲವರು, ಮಸೀದಿಯ ಮೇಲೆ ಹಂದಿ ಮಾಂಸ ಎಸೆದರು ಅಂತ ಕೆಲವರು ಅಲ್ಲಲ್ಲಿ ಮಾತನಾಡಿದರು. ಹತ್ತಾರು ಜನ ತೀರಿಕೊಂಡರು. ಗಲಭೆ ಮಾಡಿದವರು, ಗಲಭೆಯಲ್ಲಿ ತೀರಿಕೊಂಡವರಿಗೂ ಹೈಯರ್ ಲೆವೆಲ್ಲಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದವರಿಗೂ ಅರ್ಥಾತ್ ಲಿಂಕೂ ಇರಲಿಲ್ಲ. ಆದರೆ ಗಲಭೆ ನಡೆಯುವಂತೆ ನೋಡಿಕೊಳ್ಳಲಾಯಿತು.

ಗಲಭೆ ಮಾಡಿಸಿದವರು ಯಾರಿಗೋ ಟಿಪ್ ಮಾಡಿದರು. ಇನ್ಯಾರೋ ಗಲಾಟೆ ಮಾಡಿಕೊಂಡು ಸತ್ತರು. ಇದನ್ನೆಲ್ಲ ನೋಡಿದ ರಾಜೀವ್‌ಗಾಂಧಿ ವಿಮಾನದಲ್ಲಿ ಹಾರಿ ಬಂದವರೇ, ಪಕ್ಷ ತನ್ನ ನೂತನ ಶಾಸಕಾಂಗ ನಾಯಕನನ್ನು ನಾಳೆ ಆಯ್ಕೆ ಮಾಡಿಕೊಳ್ಳುತ್ತದೆ ಎಂದು ಘೋಷಿಸಿದರು. ಒಂದೇ ದಿನದಲ್ಲಿ ಪರಿಸ್ಥಿತಿಯೇ ಬದಲಾಗಿ ಹೋಯಿತು. ವೀರೇಂದ್ರಪಾಟೀಲ್ ನೋಡ ನೋಡುತ್ತಿದ್ದಂತೆಯೇ ಮಾಜಿಯಾದರು. ಅಂದರೆ ಅವರು ಕೆಳಗಿಳಿಯುವಂತೆ ಮಾಡಲಾಯಿತು. ಆದರೆ ಇಡೀ ಘಟನೆಗೂ ಅವರಿಗೂ ಪರಸ್ಪರ ಸಂಬಂಧವೇ ಇರಲಿಲ್ಲ. ಅಮಾಯಕರು ಗಲಾಟೆ ಮಾಡಿಕೊಂಡರು, ಅಮಾಯಕರು ತೀರಿಕೊಂಡರು. ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡುವ ಉಮೇದಿನಲ್ಲಿದ್ದ ವೀರೇಂದ್ರಪಾಟೀಲ್ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡು ಮಾಜಿಯಾದರು. ಅವರ ಜತೆ ನೂರಾ ಎಪ್ಪತ್ತೊಂಬತ್ತು ಜನರಲ್ಲಿ ಯಾರೂ ನಿಲ್ಲಲಿಲ್ಲ.

ಘಟನೆ: ಮೂರು
ಕರ್ನಾಟಕ ಕಂಡ ಮಹಾನ್ ನಾಯಕರಲ್ಲಿ ಬಂಗಾರಪ್ಪ ಒಬ್ಬರು. ದಿಟ್ಟತನದ ವಿಷಯ ಬಂದಾಗ ಅವರಂತಹ ನಾಯಕರನ್ನು ನೋಡಲು ಸಾಧ್ಯವೇ ಇರಲಿಲ್ಲ. ಗುಂಡೂರಾಯರೂ ದಿಟ್ಟತನದಿಂದ ವರ್ತಿಸುತ್ತಿದ್ದರು. ಆದರೆ ಅಂತಹ ದಿಟ್ಟತನವನ್ನು ಪ್ರದರ್ಶಿಸಲು ಇಂದಿರಾಗಾಂಧಿ ಹಾಗೂ ಸಂಜಯಗಾಂಧಿ ಅವರ ಬೆಂಬಲ ಕೂಡ ಇತ್ತು. ಯಾರಾದರೂ ಶಾಸಕರು ಬಂದು ಯಾವುದಾದರೂ ವಿಷಯದ ಬಗ್ಗೆ ಒತ್ತಡ ಹೇರಿದರೆ ಗುಂಡೂರಾಯರು ನೇರವಾಗಿ ಹೇಳುತ್ತಿದ್ದರು. ನಾನು ಮುಖ್ಯಮಂತ್ರಿ ಆಗಿರುವುದು ಇಂದಿರಾಗಾಂಧಿಯವರ ಕೃಪೆಯಿಂದ. ಹೀಗಾಗಿ ನೀವೆಲ್ಲ ಸೇರಿ ನಾನು ಪರ್ಮನೆಂಟಾಗಿ ಇಲ್ಲಿ ಉಳಿಯುವಂತೆ ಮಾಡುತ್ತೇನೆ ಎಂದರೂ ಹಾಗೆ ಮಾಡಲು ಸಾಧ್ಯವಿಲ್ಲ. ಅದೇ ರೀತಿ ನನ್ನನ್ನು ಕೆಳಗಿಳಿಸುತ್ತೇನೆ ಎಂದರೂ ಸಾಧ್ಯವಿಲ್ಲ ಎಂದು ಗುಂಡೂರಾಯರು, ಎದುರಿಗಿದ್ದವರ ಮುಖಕ್ಕೆ ರಪ್ಪನೆ ರಾಚುವಂತೆ ಹೇಳಿ ಕಳಿಸುತ್ತಿದ್ದರು.

ಆದರೆ ಬಂಗಾರಪ್ಪನವರ ಶೈಲಿಯೇ ಬೇರೆ. ಅವರು ಯಾವತ್ತೂ ಡೋಂಟ್ ಕೇರ್ ಮಾಸ್ಟರ್. ಕಾವೇರಿ ನ್ಯಾಯಮಂಡಳಿ ಮಧ್ಯಂತರ ತೀರ್ಪು ನೀಡಿ ತಮಿಳ್ನಾಡಿಗೆ ಇನ್ನು ಮುಂದೆ ಇನ್ನೂರೈದು ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದರೆ ರಪಕ್ಕಂತ ತಿರುಗಿ ಬಿದ್ದರು. ಕಾವೇರಿ ನ್ಯಾಯಮಂಡಳಿ ಹೇಳಿತು ಎಂದು ನೀರು ಬಿಡಲು ಸಾಧ್ಯವಿಲ್ಲ ಎಂದು ಸುಗ್ರೀವಾಜ್ಞೆಯನ್ನೇ ಹೊರಡಿಸಿದರು. ಅವತ್ತು ಸರ್ಕಾರದ ವತಿಯಿಂದಲೇ ಬಂದ್ ನಡೆಯಿತು. ಎಲ್ಲರೂ ಬಂಗಾರಪ್ಪನವರ ನಡೆ ಕಂಡು ದಂಗಾಗಿ ಹೋದರು. ಇಂತಹ ಬಂಗಾರಪ್ಪ ಖುದ್ದು ಪ್ರಧಾನಿ ನರಸಿಂಹರಾಯರಿಗೂ ಸೊಪ್ಪು ಹಾಕುತ್ತಿರಲಿಲ್ಲ. ಅರ್ಜೆಂಟು ಕೆಲಸವಿದೆ ಬನ್ನಿ ಎಂದರೆ, ಷಟ್ಲ್ ಕಾಕ್ ಆಡುತ್ತಿದ್ದೇನೆ. ಈಗ ದಿಲ್ಲಿಗೆ ಬರಲು ಪುರುಸೊತ್ತಿಲ್ಲ ಎಂದು ಝಾಡಿಸುತ್ತಿದ್ದರು. ಅರೇಸ್ಕೀ, ದೇಶದಲ್ಲಿ ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಜೀ ಹುಜೂರ್ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಬಂಗಾರಪ್ಪ ಮಾತ್ರ ಅಪ್ಪಿತಪ್ಪಿಯೂ ಜೀ ಹುಜೂರ್ ಸಂಸ್ಕೃತಿಗೆ ಸೆಟ್ ಆಗುತ್ತಿಲ್ಲ. ಹೀಗಾದರೆ ಹೇಗೆ? ಹಾಗಂತಲೇ ದಿಲ್ಲಿ ಲೆವೆಲ್ಲಿನಲ್ಲಿ ಹೈಯರ್ ಲೆವೆಲ್ ಸಭೆ ನಡೆಯಿತು. ಬಂಗಾರಪ್ಪನವರನ್ನು ಯಾವುದಾದರೂ ನೆಪದಲ್ಲಿ ಎತ್ತಂಗಡಿ ಮಾಡಬೇಕು ಎಂಬ ತೀರ್ಮಾನವಾಯಿತು.

ಅದರ ಪರಿಣಾಮವಾಗಿ ರೂಪುಗೊಂಡಿದ್ದೇ ಕ್ಲಾಸಿಕ್ ಕಂಪ್ಯೂಟರ್ ಹಗರಣ. ಒಂದು ಕೋಟಿ ತೊಂಬತ್ತೇಳು ಲಕ್ಷ ಕೊಟ್ಟು ಕಂಪ್ಯೂಟರ್ ಖರೀದಿಸಿದ ವ್ಯವಹಾರದಲ್ಲಿ ಬಂಗಾರಪ್ಪ ದುಡ್ಡು ಮಾಡಿದ್ದಾರೆ ಎಂದು ವಿನಾಕಾರಣ ಅವರ ಮೇಲೆ ಆರೋಪ ಹೊರಿಸಲಾಯಿತು. ಒಬ್ಬ ಮುಖ್ಯಮಂತ್ರಿಯ ಮೇಲೆ ಆರೋಪ ಬಂದರೆ ಪ್ರಧಾನಮಂತ್ರಿ ಸುಮ್ಮನಿರಲು ಸಾಧ್ಯವೇ? ಪಿ.ವಿ.ನರಸಿಂಹರಾಯರು ಗರಂ ಆದರು. ಸೀದಾ ದೆಹಲಿಗೆ ಬಂದು ತಮ್ಮನ್ನು ಕಾಣುವಂತೆ ಹೇಳಿದರು. ನೀವು ಬರದೇ ಹೋದರೆ ಕಿತ್ತು ಹಾಕಿಸಲು ಮುಂದಾಗುತ್ತೇನೆ ಎಂದರು. ಅವತ್ತು ದಿಲ್ಲಿಗೆ ಹೋಗಲು ಬಂಗಾರಪ್ಪನವರಿಗೆ ಇಷ್ಟವಿರಲಿಲ್ಲ. ಆದರೆ ತುಂಬ ಜನ ಸೇರಿ ಕೊನೆಗೂ ಬಂಗಾರಪ್ಪನವರನ್ನು ದಿಲ್ಲಿಗೆ ಕಳಿಸಿದರು. ಅಲ್ಲಿ ಸಿಕ್ಕ ಸೂಚನೆ ಒಂದೇ, ನೀವಾಗಿಯೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ. ಇಲ್ಲದಿದ್ದರೆ ನಾವೇ ಕಿತ್ತು ಬಿಸಾಡುತ್ತೇವೆ. ಬೇರೆ ದಾರಿ ಇಲ್ಲದೇ ಬಂಗಾರಪ್ಪ ದೆಹಲಿಯಿಂದ ಬೆಂಗಳೂರಿಗೆ ಬಂದರು. ರಾಜ್ಯಪಾಲರನ್ನು ಭೇಟಿ ಮಾಡಿದರು. ಮುಖ್ಯಮಂತ್ರಿ ಪದವಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಹೀಗೆ ರಾಜೀನಾಮೆ ಸಲ್ಲಿಸಿದ ಬಂಗಾರಪ್ಪ ಬೇರೆ ಪಕ್ಷ ಕಟ್ಟಿ ಕಾಂಗ್ರೆಸ್ ಯಾವತ್ತೂ ಮರೆಯದಂತಹ ಪಾಠ ಕಲಿಸಿದರು.

ಆದರೆ ಅಷ್ಟರಲ್ಲಾಗಲೇ ಕೆಲ ನಾಯಕರ ಬೇಳೆ ಬೆಂದಿತ್ತು. ಬೆಂದ ಬೇಳೆಯನ್ನು ನೆಮ್ಮದಿಯಿಂದ ತಿಂದು ಅವರು ಪಕ್ಷ ನಿಷ್ಠರಂತೆ ಬದುಕಿದರು. ಮುಂದೆಯೂ ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ದಕ್ಕಿದವು. ಕ್ಲಾಸಿಕ್ ಕಂಪ್ಯೂಟರ್ ಹಗರಣದ ತನಿಖೆ ನಡೆಸಿದ ಸಿಬಿಐನ ವಿಶೇಷ ನ್ಯಾಯಾಲಯ ಬಂಗಾರಪ್ಪ ಯಾವ ಹಗರಣವನ್ನೂ ಮಾಡಿಲ್ಲ ಎಂದು ಹೇಳಿತು. ಯಾರದೋ ಲಾಭಕ್ಕೆ ಬಂಗಾರಪ್ಪ ಬಲಿಯಾದರು. ಇಲ್ಲದ ಆರೋಪವನ್ನು ಮೈ ಮೇಲೆಳೆದುಕೊಂಡರು. ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡರು. ನ್ಯಾಯಾಲಯದ ತೀರ್ಪು ಬರುವ ವೇಳೆಗಾಗಲೇ ಅವರ ರಾಜಕೀಯ ಜೀವನದ ಬಹುತೇಕ ಕಾಲ ಮುಗಿದು ಹೋಗಿತ್ತು. ಅರ್ಥಾತ್, ತಮ್ಮದಲ್ಲದ ತಪ್ಪಿಗೆ ಬಂಗಾರಪ್ಪ ದೊಡ್ಡ ಬೆಲೆ ತೆತ್ತರು. ಹೈಯರ್ ಲೆವೆಲ್ ಲಾಬಿ ಎಂದರೆ ಇದು. ಈ ಲಾಬಿ ಕೆಲಸ ಮಾಡಿದರೆ ಯಾರು ಈ ಕೆಲಸ ಮಾಡಿದರು ಎಂದು ಜನಸಾಮಾನ್ಯರಿಗೆ ತಿಳಿಯುವುದಿಲ್ಲ. ಕಣ್ಣ ಮುಂದೆ ಕಾಣುವುದೆಲ್ಲ ಸತ್ಯ ಎಂದು ಅವರು ಭಾವಿಸಿರುತ್ತಾರೆ. ಆದರೆ ಸತ್ಯ ಬೇರೆಯೇ ಇರುತ್ತದೆ.

ಹೀಗೆ ಹೇಳುತ್ತಾ ಹೋದರೆ ನಿಮಗೆ ಇಂತಹ ಹತ್ತಾರು ಕತೆಗಳನ್ನು ಹೇಳಬಹುದು. ಯಾವ ಅಧಿಕಾರಿ ಎಲ್ಲಿಂದ ಎತ್ತಂಗಡಿಯಾಗಬೇಕು, ಯಾವ ರಾಜಕಾರಣಿ ಹೇಗೆ ಕೆಳಗಿಳಿಯಬೇಕು ಎಂಬುದರಿಂದ ಹಿಡಿದು ಎಲ್ಲ ವಿಷಯಗಳಲ್ಲೂ ಈ ಲಾಬಿ ಸರ್ವ ವ್ಯಾಪಿ. ಈ ಲಾಬಿಯ ಜತೆ ಹೊಂದಿಕೊಂಡು ಹೋದವರು ತುಂಬ ಕಾಲ ಬಾಳುತ್ತಾರೆ. ಹೊಂದಿಕೊಳ್ಳಲಾಗದವರು ಬಹುಬೇಗನೇ ಜಾಗ ಖಾಲಿ ಮಾಡುತ್ತಾರೆ. ಬೆಂಗಳೂರು ನಗರದ ಪೊಲೀಸ್ ಕಮೀಶನರ್ ರಾಘವೇಂದ್ರ ಔರಾದ್ಕರ್ ಬದಲಾಗಿ ಅವರ ಜಾಗಕ್ಕೆ ಎಂ.ಎನ್.ರೆಡ್ಡಿ ಬಂದ ಕೂಡಲೇ ಇವೆಲ್ಲ ನೆನಪಾದವು. ಅಂದ ಹಾಗೆ ಎಂ.ಎನ್.ರೆಡ್ಡಿ ಈ ಜಾಗದಲ್ಲಿ ಎಷ್ಟು ಕಾಲ ಉಳಿಯುತ್ತಾರೋ ಗೊತ್ತಿಲ್ಲ. ರಾಘವೇಂದ್ರ ಔರಾದ್ಕರ್ ಅವರನ್ನು ಎತ್ತಂಗಡಿ ಮಾಡಿಸಿದ ಶಕ್ತಿಗಳು ಎಂ.ಎನ್.ರೆಡ್ಡಿ ಅವರನ್ನು ಎಷ್ಟು ಕಾಲ ಸಹಿಸಿಕೊಳ್ಳುತ್ತವೋ ಗೊತ್ತಿಲ್ಲ. ಆದರೆ ಇಂತಹ ಘಟನೆಗಳನ್ನು ಎಂ.ಎನ್.ರೆಡ್ಡಿ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಬೆಂಗಳೂರು ನಗರದ ನೂತನ ಪೊಲೀಸ್ ಕಮೀಶನರ್ ಆಗಿರುವ ಅವರಿಗೆ ಒಳ್ಳೆಯದಾಗಲಿ. ಸಿಲಿಕಾನ್ ಸಿಟಿ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಮತ್ತಷ್ಟು ನೀಟ್ ಆಗಲಿ ಎಂಬುದೇ ನಮ್ಮ ನಿಮ್ಮೆಲ್ಲರ ಬಯಕೆ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 July, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books