Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಾದರೂ ಎಲ್ಲಿದೆ?

ವಿಧಾನಪರಿಷತ್ ಚುನಾವಣೆಯ ಟಿಕೆಟ್ ಬೇಕು ಎಂದರೆ ಒಬ್ಬೊಬ್ಬ ಶಾಸಕರಿಗೂ ಒಂದೊಂದು ಕೋಟಿ ರುಪಾಯಿಗಳನ್ನು ಕೊಡುವ ಸ್ಥಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದು ನಿಜಕ್ಕೂ ಸ್ಫೋಟಕ ಸುದ್ದಿಯೇ. ಒಂದೆರಡು ದಿನಗಳ ಕಾಲ ಎಲ್ಲ ಕಡೆಯೂ ಈ ಕುರಿತು ಚರ್ಚೆ ನಡೆಯಿತು. ಆಮೇಲೆ ಯಾವ ಪಕ್ಷದವರೂ ಈ ಕುರಿತು ಚಕಾರ ಎತ್ತಲು ಹೋಗಲಿಲ್ಲ. ಯಾಕೆಂದರೆ ರಾಜಕೀಯ ವ್ಯವಸ್ಥೆ ಯಾವ ರೀತಿ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಕಾಂಗ್ರೆಸ್‌ನಂತಹ ಭ್ರಷ್ಟ ಪಕ್ಷ ಮತ್ತೊಂದಿಲ್ಲ. ನೋಡಿ, ಅವರು ಡೀಸೆಲ್ ರೇಟ್ ಏರಿಸಿದರು, ಪೆಟ್ರೋಲ್ ರೇಟ್ ಏರಿಸಿದರು, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸುತ್ತಿದ್ದಾರೆ. ಇಂತಹ ಸರ್ಕಾರ ಬೇಕಾ ಎಂದು ಕೂಗಿ ಕೂಗಿ ಹೇಳುತ್ತಿದ್ದ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಕಾರ್ಪೊರೇಟ್ ವಲಯದ ಹಲವು ಡಾನ್‌ಗಳು ಸೇರಿ ಬರೋಬ್ಬರಿ ಹತ್ತು ಸಾವಿರ ಕೋಟಿ ರುಪಾಯಿ ಖರ್ಚು ಮಾಡಿದರು. ಒಂದು ವೇಳೆ ಈ ಪ್ರಮಾಣದ ಹಣ ವೆಚ್ಚವಾಗದಿದ್ದರೆ, ಬಿಜೆಪಿಯ ಎಲ್ಲ ರಣತಂತ್ರಗಳು ವಿಫಲವಾಗುತ್ತಿದ್ದವು. ಬಿಜೆಪಿಯ ರಣತಂತ್ರ ಸಫಲವಾಗಿದ್ದಕ್ಕೆ ಅದು ವೆಚ್ಚ ಮಾಡಿದ ಹಣವೂ ಕಾರಣ. ಉದಾಹರಣೆಗೆ ಶಿವಮೊಗ್ಗದಲ್ಲಿ ಯಡಿಯೂರಪ್ಪನವರನ್ನೇ ನೋಡಿ. ಅವರಿಗೆ ಹಿಂದೂಗಳು ಮಾತ್ರವಲ್ಲ, ಕ್ರಿಶ್ಚಿಯನ್ನರು, ಮುಸ್ಲಿಮರೂ ಮತ ಕೊಟ್ಟರು.

ಯಾವ ಕಾರಣಕ್ಕಾಗಿ ಅವರಿಗೆ ಎಲ್ಲ ಧರ್ಮಗಳ ಜನ ಮತ ಕೊಟ್ಟರು? ಕ್ರಿಶ್ಚಿಯನ್ನರ ಮತಗಳ ಪೈಕಿ ಗಣನೀಯ ಪ್ರಮಾಣದ ಮತಗಳು ಅವರಿಗೆ ಬಿದ್ದವು. ಮುಸ್ಲಿಮರಲ್ಲೂ ಹಲವರು ಅವರಿಗೆ ಮತ ಕೊಟ್ಟರು. ಕ್ರಿಶ್ಚಿಯನ್ನರು, ಮುಸ್ಲಿಮರು ಕಾಂಗ್ರೆಸ್ ಪಕ್ಷವೇ ಗೆಲ್ಲಬೇಕು ಎಂದು ಹಟ ಹಿಡಿದಿದ್ದರೆ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಚುನಾವಣೆಯಲ್ಲಿ ಆ ಮಟ್ಟದ ಸೋಲು ಕಾಣಬೇಕಿರಲಿಲ್ಲ. ನಟ ಶಿವರಾಜ್‌ಕುಮಾರ್ ಪತ್ನಿ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಮೂರನೇ ಸ್ಥಾನ ತಲುಪಬೇಕಿರಲಿಲ್ಲ. ಇದಕ್ಕಿರುವ ಕಾರಣ ಏನು ಅನ್ನುವುದು ಎಲ್ಲರಿಗೂ ಗೊತ್ತು. ಆದರೆ ಯಾರೂ ಬಹಿರಂಗವಾಗಿ ಹೇಳಲಿಲ್ಲ ಅಷ್ಟೇ. ಅಂದ ಹಾಗೆ ರಾಜಕಾರಣದಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಹಣ ಹರಿದಾಡುತ್ತಿದೆ. ಜಾಗತೀಕರಣಕ್ಕಿಂತ ಮುಂಚೆ ಕಡಿಮೆ ಪ್ರಮಾಣದಲ್ಲಿ ಹಣ ಹರಿಯುತ್ತಿತ್ತು. ಆದರೆ ಜಾಗತೀಕರಣ ಪ್ರವೇಶವಾದ ನಂತರ ಭ್ರಷ್ಟಾಚಾರದ ಪ್ರಮಾಣ ಜಾಸ್ತಿಯಾಗಿದೆ. ಬಂಗಾರಪ್ಪನವರನ್ನು ಇಳಿಸಬೇಕು ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಕೇರಳದ ಕರುಣಾಕರನ್ ಜತೆಗೂಡಿ ರಣತಂತ್ರ ಹೂಡಿದರಲ್ಲ? ಆಗೇನು ಬಂಗಾರಪ್ಪ ದೊಡ್ಡ ಮಟ್ಟದ ಭ್ರಷ್ಟಾಚಾರ ಮಾಡಿದ್ದರಾ?

ಸುಮಾರು ಎರಡು ಕೋಟಿ ರುಪಾಯಿಗಳ ಕ್ಲಾಸಿಕ್ ಕಂಪ್ಯೂಟರ್ ಹಗರಣದ ಹೆಸರಿನಲ್ಲಿ ಅವರನ್ನು ಪದಚ್ಯುತಗೊಳಿಸಲಾಯಿತು. ಈ ಹಗರಣದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡುವ ವೇಳೆಗೆ ಬಂಗಾರಪ್ಪ ಕೆಳಗಿಳಿದು ಹಲವು ವರ್ಷಗಳೇ ಆಗಿದ್ದವು. ಇಡೀ ಕ್ಲಾಸಿಕ್ ಕಂಪ್ಯೂಟರ್ ಪ್ರಕರಣದಲ್ಲಿ ಬಂಗಾರಪ್ಪ ಗಳಿಸಿದ್ದೇನೂ ಇರಲಿಲ್ಲ. ಆದರೆ ಅವರನ್ನು ಕೆಳಗಿಳಿಸಲು ಅದು ನೆಪವಾಯಿತು. ಆದರೆ ಯಾವಾಗ ಜಾಗತೀಕರಣದ ಪ್ರವೇಶವಾಯಿತೋ, ಆಗ ಹಣದ ಹರಿವು ಹೆಚ್ಚಾಯಿತು. ೧೯೯೪ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ದೇವೆಗೌಡರು ಸಾಲ ಮಾಡುವ ಸ್ಥಿತಿ ಬಂದಿತ್ತು. ಆದರೆ ತೊಂಬತ್ತಾರರ ಲೋಕಸಭಾ ಚುನಾವಣೆ ಎದುರಿಸುವ ಕಾಲಕ್ಕೆ ಅವರು ಪಕ್ಷದ ಬಹುತೇಕ ಅಭ್ಯರ್ಥಿಗಳಿಗೆ ಕನಿಷ್ಠ ಐವತ್ತು ಲಕ್ಷ ರುಪಾಯಿಗಳಷ್ಟು ಹಣ ನೀಡುವ ಶಕ್ತಿ ಹೊಂದಿದ್ದರು. ಜಾಗತೀಕರಣ ಆಗಿನ್ನೂ ಕಾಲಿಡುತ್ತಿದ್ದ ಕಾಲ ಅದು. ದೇಶಪಾಂಡೆ ಭಾರೀ ಕೈಗಾರಿಕಾ ಸಚಿವರಾಗಿದ್ದರು. ದಿಲ್ಲಿಯಲ್ಲಿ ಪ್ರಧಾನಿಯಾದ ನರಸಿಂಹರಾವ್ ಹಾಗೂ ಅರ್ಥ ಸಚಿವರಾಗಿದ್ದ ಮನಮೋಹನ್‌ಸಿಂಗ್ ಅವರು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ದೇಶಪಾಂಡೆ ಬಹುಬೇಗ ಅರ್ಥ ಮಾಡಿಕೊಂಡರು. ಕರ್ನಾಟಕದಲ್ಲಿ ಕೈಗಾರಿಕೆಗಳ ಒಳ ಹರಿವು ಜಾಸ್ತಿಯಾಯಿತು. ಜಾಗತೀಕರಣಕ್ಕಾಗಿ ಕೇಂದ್ರ ಸರ್ಕಾರ ರುಪಾಯಿಯ ಅಪಮೌಲ್ಯ ಮಾಡಿತು. ತೆರಿಗೆ ರಿಯಾಯ್ತಿಗಳನ್ನು ನೀಡಿತು. ಹಲವು ಅನುಕೂಲಗಳನ್ನು ಮಾಡಿಕೊಟ್ಟಿತು. ಇದನ್ನು ದೇಶಪಾಂಡೆ ಬೇಗನೇ ಅರ್ಥ ಮಾಡಿಕೊಂಡರು.

ತೊಂಬತ್ತಾರರ ಲೋಕಸಭಾ ಚುನಾವಣೆಯಲ್ಲಿ ದೇವೆಗೌಡರ ನೇತೃತ್ವದಲ್ಲಿ ಪಕ್ಷ ಹದಿನಾರರಷ್ಟು ಸೀಟುಗಳನ್ನು ಗಳಿಸಲು ದೇಶಪಾಂಡೆಯವರ ಸಹಕಾರವೂ ಇತ್ತು. ದಾಖಲೆಗಳನ್ನು ಕೊಡಿ ಎಂದರೆ ಈ ವಿಷಯದಲ್ಲಿ ಯಾವ ದಾಖಲೆಗಳನ್ನೂ ಕೊಡಲು ಆಗುವುದಿಲ್ಲ. ಆದರೆ ಜನತಾಪರಿವಾರದ ಅಭ್ಯರ್ಥಿಗಳು ೧೯೯೬ರ ಚುನಾವಣೆಯಲ್ಲಿ ಹಿಂದೆಂದೂ ಮಾಡದಷ್ಟು ಹಣ ಖರ್ಚು ಮಾಡಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಒಂದಷ್ಟು ಹಣ ಖರ್ಚು ಮಾಡಿತು. ಆದರೆ ಅವರಿಗಿಂತ ಸಾಲಿಡ್ಡಾಗಿ ಖರ್ಚು ಮಾಡಿದ ಕಾರಣಕ್ಕಾಗಿ, ಅಧಿಕಾರಕ್ಕೆ ಬಂದ ಶುರು ಎಂಬ ಕಾರಣಕ್ಕಾಗಿ ಜನತಾಪರಿವಾರ ಹದಿನಾರರಷ್ಟು ಸೀಟುಗಳನ್ನು ಗೆದ್ದುಕೊಂಡಿತು. ಚುನಾವಣೆಯಲ್ಲಿ ಗೆಲ್ಲಲು ಇಷ್ಟು ಹಣ ಖರ್ಚು ಮಾಡಬೇಕಾಯಿತು ಎಂದು ಹಲ ಅಭ್ಯರ್ಥಿಗಳು ಖಾಸಗಿ ಮಾತುಕತೆಯಲ್ಲಿ ಹೇಳತೊಡಗಿದ್ದರು. ೧೯೯೯ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಣತಂತ್ರ ರೂಪಿಸಿದ್ದು ನಿಜವಾದರೂ ದಂಡಿಯಾಗಿ ಹಣ ಖರ್ಚು ಮಾಡಿದ್ದೂ ಗೆಲುವಿಗೆ ಕಾರಣ.

ಎಂಬತ್ತೊಂಬತ್ತರ ಚುನಾವಣೆಯ ಸಂದರ್ಭದಲ್ಲಿ ವೀರೇಂದ್ರಪಾಟೀಲ್ ಯಾವ ಕಾರಣಕ್ಕಾಗಿ ಕೆಳಗಿಳಿದರು ಗೊತ್ತೇ? ಕಾಂಗ್ರೆಸ್‌ನ ಬಹುತೇಕ ಅಭ್ಯರ್ಥಿಗಳಿಗೆ ಲಿಕ್ಕರ್ ಡಾನ್ ಅನ್ನಿಸಿಕೊಂಡಿದ್ದ ಹರಿಖೋಡೆ ತಲಾ ಎರಡು ಲಕ್ಷ ರುಪಾಯಿಗಳ ನೆರವು ನೀಡಿದ್ದರು. ಅದು ಕ್ಯಾಷ್ ರೂಪದಲ್ಲಲ್ಲ. ಪ್ರಚಾರ ಸಾಮಾಗ್ರಿಗಳ ರೂಪದಲ್ಲಿ. ಆದರೆ ವೀರೇಂದ್ರ ಪಾಟೀಲರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಕ್ಕರ್ ಡಾನುಗಳನ್ನೇ ಹೊಡೆಯಲು ಹೊರಟರು. ಅವರಿಗೆ ರಾಜಶೇಖರಮೂರ್ತಿ ಜತೆ ನೀಡಿದರು. ಪಕ್ಷದ ಅಭ್ಯರ್ಥಿಗಳಿಗೆ ನೆರವು ನೀಡಿದ ಹರಿಖೋಡೆಗೇ ಈ ಸ್ಥಿತಿ ಬಂದರೆ ಹೇಗೆ ಅಂತ ಕಾಂಗ್ರೆಸ್‌ನ ಥಿಂಕ್ ಟ್ಯಾಂಕ್ ಯೋಚಿಸಿತು. ಮುಂದೆ ಚನ್ನಪಟ್ಟಣ, ರಾಮನಗರ, ದಾವಣಗೆರೆ ಸೇರಿದಂತೆ ಹಲವು ಕಡೆ ಕೋಮುಗಲಭೆಗಳಾಗಲು ದಾರಿಯಾಯಿತು. ಅದರ ನೆಪದಲ್ಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ಕಾರಣ ಹುಡುಕಲಾಯಿತು. ಹೀಗಾಗಿ ಏರ್‌ಪೋರ್ಟಿಗೆ ಬಂದಿಳಿದ ರಾಜೀವ್‌ಗಾಂಧಿ, ಕಾಂಗ್ರೆಸ್ ಪಕ್ಷ ತನ್ನ ನೂತನ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂದು ಹೇಳಿ ಹೋದರು. ಅರ್ಥಾತ್, ಹಣದ ಪಾತ್ರ ರಾಜಕಾರಣದಲ್ಲಿ ಯಾವತ್ತೂ ನಡೆಯುತ್ತಿತ್ತು. ಈಗ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಅಂದ ಹಾಗೆ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಹಣ ಖರ್ಚಾಗುತ್ತದೇನೋ ನಿಜ. ಆದರೆ ಗೆಲ್ಲುವ ಗ್ಯಾರಂಟಿ ಇಲ್ಲ.

ಮೊನ್ನೆ ನಡೆದ ಲೋಕಸಭೆ ಚುನಾವಣೆ ಮತ್ತು ಅದಕ್ಕಿಂತ ಮುನ್ನ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಣ ವೆಚ್ಚ ಮಾಡದೇ ಗೆದ್ದವರು ಯಾರು? ಹಣ ಜಾಸ್ತಿ ಖರ್ಚು ಮಾಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಪರದಾಡಿದವರು ಎಷ್ಟು? ಅನ್ನುವುದು ರಹಸ್ಯವೇನಲ್ಲ. ಒಂದು ಕಾಲವಿತ್ತು. ಆಗ ಜನರೇ ನೋಟು ಕೊಟ್ಟು, ವೋಟು ಕೊಡುವ ಪರಿಸ್ಥಿತಿಯಿತ್ತು. ಶಾಂತವೇರಿ ಗೋಪಾಲಗೌಡರಂತಹ ರಾಜಕಾರಣಿ ತೀರ್ಥಹಳ್ಳಿಯಲ್ಲಿ ವಿಧಾನಸಭಾ ಚುನಾವಣೆಗೆ ನಿಂತಾಗ ಜನರೇ ಹಣ ಕೊಟ್ಟು ಅವರ ಪರವಾಗಿ ಕೆಲಸ ಮಾಡಿದರು, ಗೆಲ್ಲಿಸಿದರು. ಆದರೆ ಕಾಲಕ್ರಮೇಣ ಈ ಪರಿಸ್ಥಿತಿ ಬದಲಾಯಿತು. ಜನರ ನಡುವಿನಿಂದ ನಾಯಕರಾಗಿ ಸೃಷ್ಟಿಯಾದವರ ಜಾಗಕ್ಕೆ ಉದ್ಯಮಿಗಳೇ ಬಂದು ಕೂರತೊಡಗಿದರು. ಇವತ್ತು ಸ್ವಂತ ಉದ್ಯಮ ನಡೆಸದೇ ಯಶಸ್ವಿ ರಾಜಕಾರಣಿಯಾಗಲು ಸಾಧ್ಯವಿಲ್ಲ. ರಾಜಕಾರಣಿಯಾಗಬೇಕು ಎಂದರೆ ಹಣ ಖರ್ಚು ಮಾಡಬೇಕು. ಹಣ ಖರ್ಚು ಮಾಡಬೇಕು ಎಂದರೆ ಉದ್ಯಮಿಯಾಗಲೇಬೇಕು ಅಥವಾ ದುಡ್ಡು ಹರಿದು ಬರಲು ಬೇರೆ ಯಾವುದಾದರೂ ಮೂಲ ಹುಡುಕಲೇಬೇಕು. ಇಂತಹ ಪರಿಸ್ಥಿತಿ ಬಂದಾಗ ದುಡ್ಡು ಖರ್ಚು ಮಾಡಿದರೂ ಗೆಲ್ಲುವುದು ಕಷ್ಟ ಅನ್ನುವ ಗೊಂದಲದಲ್ಲಿರುವವರು ದೊಡ್ಡ ಪ್ರಮಾಣದ ಬಂಡವಾಳ ಹೂಡಿ ರಾಜ್ಯಸಭೆಗೆ, ವಿಧಾನಪರಿಷತ್ತಿಗೆ ಆಯ್ಕೆಯಾಗುವ ಪರಿಸ್ಥಿತಿ ಸೃಷ್ಟಿಯಾಯಿತು.

ಯುಬಿ ಗ್ರೂಪ್‌ನ ವಿಜಯ ಮಲ್ಯ ರಾಜ್ಯಸಭಾ ಚುನಾವಣೆಗೆ ನಿಂತರಲ್ಲ? ಆಗ ಹಣ ಪಡೆದ ಶಾಸಕರೆಷ್ಟು ಮಂದಿ ಅಂತ ಎಲ್ಲರಿಗೂ ಗೊತ್ತಿತ್ತು. ಈ ಚುನಾವಣೆಗೆ ಮಲ್ಯ ಎಷ್ಟು ಖರ್ಚು ಮಾಡಿದ್ದಾರೆ ಎಂಬುದೂ ಗೊತ್ತಿತ್ತು. ಆದರೆ ಯಾರೂ ಚಕಾರವೆತ್ತಲಿಲ್ಲ. ಮಲ್ಯ ನಿರಾಯಾಸವಾಗಿ ರಾಜ್ಯಸಭೆಗೆ ಆಯ್ಕೆಯಾಗಿ ಹೋದರು. ಆ ಸಂದರ್ಭದಲ್ಲಿ ಮಲ್ಯ ಅವರಿಗೆ ವೋಟು ಕೊಟ್ಟ ಬಹುತೇಕ ಜನರಿಗೆ ಇಪ್ಪತ್ತೈದು ಲಕ್ಷ ರುಪಾಯಿಗಳ ಗಿಫ್ಟು ಸಿಕ್ಕಿತ್ತು ಎಂಬುದು ಸಾಕ್ಷಿಯ ರೂಪದಲ್ಲಿಲ್ಲದೇ ಇರಬಹುದು. ಆದರೆ ಅಂತಃಸಾಕ್ಷಿಯ ರೂಪದಲ್ಲಿ ಉಳಿದುಕೊಂಡೇ ಇದೆ. ಅದೇ ರೀತಿ ಜೆಡಿಎಸ್ ವತಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದ ತಮಿಳ್ನಾಡಿನ ಉದ್ಯಮಿ ಎಂ.ಎ.ಎಂ. ರಾಮಸ್ವಾಮಿ ಹೇಗೆ ಇಲ್ಲಿಂದ ಗೆದ್ದು ಹೋದರು? ರಾಜ್ಯಸಭೆಗೆ ಇವರನ್ನು ಯಾಕೆ ಆಯ್ಕೆ ಮಾಡಲಾಯಿತು? ಸಂಕಷ್ಟ ಕಾಲದಲ್ಲಿದ್ದಾಗ ಜೆಡಿಎಸ್‌ಗೆ ತ್ರಾಣ ನೀಡಿದರು ಎಂಬ ಕಾರಣಕ್ಕಲ್ಲವೇ? ಹೀಗೆ ನೋಡುತ್ತಾ ಹೋದರೆ ಎಲ್ಲ ರಾಜಕೀಯ ಪಕ್ಷಗಳೂ ಕಾಲ ಕಾಲಕ್ಕೆ ಹಣದ ಹರಿವನ್ನು ಆಧರಿಸಿ ಟಿಕೆಟ್ ಹಂಚಿವೆ. ಇದಕ್ಕೆ ಕೆಲ ಅಪವಾದಗಳೂ ಇರಬಹುದು. ಈಶ್ವರಪ್ಪನವರಂತಹವರು ವಿಧಾನಪರಿಷತ್ತಿಗೆ ಗೆದ್ದು ಬರಬೇಕು ಎಂದರೆ ಹಣ ನೀಡದೇ ಇರಬಹುದು. ಆದರೆ ಬಹುತೇಕ ಪ್ರಕರಣಗಳಲ್ಲಿ ಹಣ ತೆಗೆದುಕೊಳ್ಳದೇ ವೋಟು ಹಾಕುವುದು ಕಷ್ಟ.


ಈ ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಹೋದರಲ್ಲ? ಇವರೇನು ಬಿಸಿಬೇಳೆ, ಚಿತ್ರಾನ್ನ ಕೊಟ್ಟು ಶಾಸಕರ ಮನ ಒಲಿಸಿದರೆ? ಅಥವಾ ಇವರಲ್ಲಿರುವ ಯಾವ ವಿಶೇಷ ಅರ್ಹತೆಗಾಗಿ ಶಾಸಕರು ಇವರನ್ನು ಗೆಲ್ಲಿಸಲು ಮನಸ್ಸು ಮಾಡಿದರು? ಇವೆಲ್ಲ ಗೊತ್ತಿರುವ ವಿಷಯವೇ. ಮೊನ್ನೆ ನಡೆದ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ಟಿಕೆಟ್ ಪಡೆದ ಹಲವರು ಹಣ ಖರ್ಚು ಮಾಡದೇ ಹೋಗಿದ್ದರೆ ಆ ಜಾಗಕ್ಕೆ ಬರುತ್ತಲೇ ಇರಲಿಲ್ಲ. ಯಾಕೆಂದರೆ ಗೆದ್ದವರ ಪೈಕಿ ಕೆಲವರಿಗೆ ವೋ ಎಂದರೆ ಟೋ ಎನ್ನಲು ಬರುವುದಿಲ್ಲ. ಜನರ ಕಷ್ಟ ಗೊತ್ತಿರುವುದಿರಲಿ, ಗ್ಯಾಂಬ್ಲಿಂಗ್ ಅಡ್ಡೆಗಳಲ್ಲಿ ಹಾಯಾಗಿ ಅಡ್ಡಾಡುವುದೇ ಇವರ ಕಸುಬು. ಇಂತಹವರು ಗೆದ್ದು ಯಾವ ಜನರನ್ನು ಉದ್ಧಾರ ಮಾಡುತ್ತಾರೆ. ಆದರೂ ರಾಜಕೀಯ ಪಕ್ಷಗಳು ಇಂತಹವರನ್ನೇಕೆ ಓಲೈಸುತ್ತವೆ ಎಂದರೆ ಅವರು ಪಾರ್ಟಿ ಫಂಡಿನ ಹೆಸರಿನಲ್ಲಿ ಹಣ ಕೊಟ್ಟಿರುತ್ತಾರೆ. ಸಮಾಜದ ಕೆಲಸವೆಂದರೆ ಬದುಕಲು ಕಳ್ಳ ಮಾರ್ಗದಲ್ಲಿ ಹಣ ದುಡಿಯಬಾರದು ಎಂಬುದನ್ನು ಹೇಳಿಕೊಡುವುದು. ಆದರೆ ಇವತ್ತು ಇಂಜಿನೀರಿಂಗ್ ಓದಬೇಕು ಎಂದು ನ್ಯಾಯಮಾರ್ಗದಲ್ಲಿ ಹೋಗಬಯಸುವ ವಿದ್ಯಾರ್ಥಿಯನ್ನು ಸರ್ಕಾರ ಮತ್ತು ಹಲವು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸೇರಿ ಸುಲಿದು ಹಾಕುತ್ತವೆ.

ಹೀಗಾಗಿ ರಾಜಕೀಯ ಅಂತಲ್ಲ, ಬದುಕಿನ ಎಲ್ಲ ರಂಗಗಳಲ್ಲೂ ಹಣದ ಕೈವಾಡ ನಡೆಯುತ್ತಲೇ ಇದೆ. ಕುಮಾರಸ್ವಾಮಿ ಅದನ್ನೇ ಹೇಳಿದ್ದಾರೆ. ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿದ್ದರೆ ಯಾರಾದರೂ ಅದರ ಕುರಿತು ಚಕಾರ ಎತ್ತುತ್ತಿದ್ದರು. ಆದರೆ ಎಲ್ಲರಿಗೂ ಗೊತ್ತಿದೆ. ಹಣವಿಲ್ಲದೆ ರಾಜಕೀಯ ಮಾಡುವುದು ಕಷ್ಟ. ಮಾಡುತ್ತೇನೆ ಅಂತ ಹೊರಟರೆ ಅವರು ಮೂಲೆಗುಂಪಾಗುವುದು ನಿಜ. ಹೀಗಾಗಿ ಕುಮಾರಸ್ವಾಮಿ ವಿಧಾನಪರಿಷತ್ ಚುನಾವಣೆಯ ಟಿಕೆಟ್ ನೀಡಬೇಕು ಎಂದರೆ ಒಬ್ಬೊಬ್ಬ ಶಾಸಕರಿಗೆ ಒಂದೊಂದು ಕೋಟಿ ರುಪಾಯಿ ನೀಡಬೇಕಾಗುತ್ತದೆ ಎಂದರು. ಅವರು ಮಾತನಾಡಿ ಇಷ್ಟು ದಿನವಾಯಿತು? ಯಾರಾದರೂ ಚಕಾರ ಎತ್ತಿದರೇ? ಇಲ್ಲವಲ್ಲ. ಯಾಕೆಂದರೆ ರಾಜಕೀಯದ ಓನಾಮ ಬಲ್ಲ ಎಲ್ಲರಿಗೂ ಗೊತ್ತು. ಒಂದು ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಕನಿಷ್ಠ ಐದು ಕೋಟಿ ರುಪಾಯಿ ಖರ್ಚು ಮಾಡಬೇಕಾದ ಕ್ಷೇತ್ರಗಳಿವೆ.

ಅದೇ ರೀತಿ ಹತ್ತರಿಂದ ಇಪ್ಪತ್ತು, ಐವತ್ತು ಕೋಟಿಯ ತನಕ ಖರ್ಚು ಮಾಡಿ ಗೆಲ್ಲಬೇಕಾದ ಲೋಕಸಭಾ ಕ್ಷೇತ್ರಗಳಿವೆ. ನಾವು ಮೊದಲು ಅಂತಹ ಪರಿಸ್ಥಿತಿಯನ್ನು ಬದಲಿಸಲು ಏನು ಮಾಡಬೇಕು? ಎಂಬುದರ ಕುರಿತು ಚರ್ಚಿಸಬೇಕು. ಶ್ರಮವಿಲ್ಲದೇ ಬರುವ ಹಣ ದೇಹಕ್ಕೆ, ಮನಸ್ಸಿಗೆ ಒಳ್ಳೆಯದಲ್ಲ ಎಂದು ಹೇಳುವ ಕೆಲಸವಾಗಬೇಕು. ಆದರೆ ಅದನ್ನು ಮಾಡುವವರು ಯಾರು? ಇದು ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ. ಹಾಗಾಗಿಯೇ ಕುಮಾರಸ್ವಾಮಿ ಮಾಡಿದ ಮಹತ್ವದ ಪ್ರಸ್ತಾಪ ಕೂಡ ಚರ್ಚೆಗೆ ಗುರಿಯಾಗದೇ ಹಾಗೇ ತೇಲಿ ಹೋಗುತ್ತಿದೆ. ಒಂದು ಸಮಾಜ ಅರಾಜಕತೆಯತ್ತ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಏನು ಬೇಕು?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 July, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books