Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಸರ್ಕಾರ ಹೇಗೆ ನಡೆಯುತ್ತಿದೆ ಎಂಬ ಅರಿವಿದೆಯಾ ಸಿದ್ದು!

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮಸ್ಕಾರಗಳು. ಈ ರಾಜ್ಯದ ಅಧಿಕಾರ ಸೂತ್ರ ಹಿಡಿದು ಹದಿನಾಲ್ಕು ತಿಂಗಳು ಕಳೆದಿದ್ದೀರಿ. ಇತ್ತೀಚೆಗೆ ಸಡನ್ನಾಗಿ ಕೋಪ ಮಾಡಿಕೊಳ್ಳುತ್ತೀರಿ. ಕೋಪ ಮಾಡಿಕೊಳ್ಳಬಾರದು ಎಂದಲ್ಲ. ಆದರೆ ನಿರ್ದಿಷ್ಟ ಕಾರಣಕ್ಕಾಗಿ, ಅನ್ಯಾಯ ಕಂಡರೆ ಕೋಪ ಮಾಡಿಕೊಳ್ಳಬೇಕು. ಆದರೆ ಯಾರಾದರೂ ನಡೆದಿರುವ ವಿಷಯವನ್ನು ನೇರವಾಗಿ ಹೇಳಿದರೆ ಹೇಳಿದವರ ಮೇಲೇ ಸಿಟ್ಟು ಮಾಡಿಕೊಳ್ಳುತ್ತೀರಿ. ನಾನು ಪೂರ್ಣಾವಧಿ ಸಿಎಂ ಆಗಿರುತ್ತೇನೋ ಇಲ್ಲವೋ ಎಂದು ಗುಡುಗುತ್ತೀರಿ. ಯಾರೂ ಪರ್ಮನೆಂಟಾಗಿ ಸಿಎಂ ಆಗಿರಲೇಬೇಕು ಎಂದು ಕರ್ನಾಟಕದ ಜನ ಕಣ್ಣೀರು ಹಾಕುತ್ತಿಲ್ಲ. ನೀವು ಎಷ್ಟು ದಿನ ಸಿಎಂ ಆಗಿರಬೇಕು ಎಂಬುದನ್ನು ಜನ ಆರಿಸಿರುವ ಶಾಸಕರು ಮತ್ತು ಈಗ ದಮ್ಮು ಕಳೆದುಕೊಂಡಿರುವ ನಿಮ್ಮ ಹೈಕಮಾಂಡ್ ನಿರ್ಧರಿಸುತ್ತದೆ. ಅದು ಎಲ್ಲರಿಗೂ ಗೊತ್ತಿರುವ ವಿಷಯ. ಇವತ್ತು ನೀವು ಇರುತ್ತೀರಿ. ನಾಳೆ ಆ ಜಾಗಕ್ಕೆ ಕಾಳು ಹಾಕುತ್ತಿರುವ ಮತ್ತೊಬ್ಬರು ಬಂದು ಕೂರುತ್ತಾರೆ. ಆದರೆ ಒಂದು ವಿಷಯ ನೆನಪಿನಲ್ಲಿಡಿ. ಮುಖ್ಯಮಂತ್ರಿಯಾದಾಗ ಇರುವಷ್ಟು ದಿನ ಅನ್ಯಾಯ ಕಂಡರೆ ಸಿಟ್ಟಿಗೇಳಿ. ನೀವು ಎಷ್ಟೇ ದಿನ ಸಿಎಂ ಆಗಿರಿ, ಜನರ ಮನಸ್ಸಿನಲ್ಲಿ ಇರುತ್ತೀರಿ.

ಮೋದಿ ದಿಲ್ಲಿ ಗದ್ದುಗೆಯ ಮೇಲೆ ಬಂದು ಕುಳಿತರೂ ಜನ ಕಷ್ಟಪಡುವುದು ತಪ್ಪುವುದಿಲ್ಲ ಎಂದು ಈ ಹಿಂದೆ ನಾನೇ ಹೇಳಿದ್ದೆ. ಅದನ್ನು ಪ್ರಸಕ್ತ ವಿದ್ಯಮಾನಗಳನ್ನು ಗಮನಿಸುತ್ತಿರುವ ಯಾರಾದರೂ ಹೇಳಬಹುದು. ಇರಾಕ್‌ನಲ್ಲಿ ಆಂತರಿಕ ಸಂಘರ್ಷ ಭುಗಿಲೆದ್ದಿದೆ. ಹೇಳಿ ಕೇಳಿ ಪೆಟ್ರೋಲು ತೆಗೆಯುವ ಜಾಗ. ಸಹಜವಾಗಿಯೇ ಕಚ್ಚಾ ತೈಲದ ಬೆಲೆ ಜಾಸ್ತಿಯಾಗುತ್ತದೆ. ಆಗ ನರೇಂದ್ರ ಮೋದಿಯಲ್ಲ, ಹರಿಹರ ಬ್ರಹ್ಮಾದಿಗಳು ಬಂದರೂ ಭಾರತ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಕಡಿಮೆ ದರಕ್ಕೆ ಕೊಡಲು ಸಾಧ್ಯವಿಲ್ಲ. ಆದರೆ ಜನರಿಗೆ ಒಂದು ನಿರೀಕ್ಷೆ ಇರುತ್ತದಲ್ಲ? ಅದನ್ನು ಸಾಧಿಸಲು ಮೋದಿ ಕೂಡ ಹರಸಾಹಸ ಮಾಡಬೇಕಾಗಿದೆ. ಮೊನ್ನೆ ಕುಮಾರಸ್ವಾಮಿ ಒಂದು ಮಾತು ಹೇಳಿದರು. ಇವತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಬಡವರಿಗೆ ಸಾಧ್ಯವಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದೊಂದು ಕೋಟಿ ರುಪಾಯಿ ಕೊಡಬೇಕಾದ ಸ್ಥಿತಿ ಇದೆ ಎಂದರು. ಅದನ್ನು ತುಂಬ ದೊಡ್ಡದು ಮಾಡಬೇಕಾದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳು ಹಣ ಹಾಕದೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿದೆಯೇ? ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ, ಯಾರೇ ಆಗಲಿ, ಶಾಂತವೇರಿ ಗೋಪಾಲಗೌಡರಂತೆ ಚುನಾವಣೆ ಮಾಡುವ ಕಾಲವೇ ಇದು? ಆಗ ಜನರೇ ವೋಟು ಕೊಡುತ್ತಿದ್ದರು. ನೋಟೂ ಕೊಡುತ್ತಿದ್ದರು.

ಆದರೆ ಕಾಲ ಬದಲಾಗಿದೆ. ಈಗ ನೋಟು ಕೊಡದೇ ಚುನಾವಣೆ ಮಾಡಲು ಸಾಧ್ಯವಿಲ್ಲ. ಜನರಿಗೆ ಎಷ್ಟು ಹೋಗುತ್ತದೋ, ಅದಕ್ಕಿಂತ ಹೆಚ್ಚಿನ ಪ್ರಮಾಣದ ದುಡ್ಡನ್ನು ಪಕ್ಷದ ಮಿಡ್ಲ್ ಆರ್ಡರ್‌ನ ಜನರಿಗೆ ಕೊಡಬೇಕು. ಇಲ್ಲದಿದ್ದರೆ ಯಾರೂ ಗೆಲ್ಲಲು ಸಾಧ್ಯವಿಲ್ಲ. ನಾನು ಚುನಾವಣೆಗೆ ನಿಗದಿ ಮಾಡಿದ ಹಣಕ್ಕಿಂತ ಕಡಿಮೆ ಹಣದಲ್ಲಿ ಗೆದ್ದು ಬಂದಿದ್ದೇನೆ ಅಂತ ಯಾರಾದರೂ ಹೇಳಿದರೆ ಜನ ನಗಬಾರದ ಜಾಗದಿಂದ ನಗುತ್ತಾರೆ. ಇಂತಹ ಸಂದರ್ಭದಲ್ಲಿ ಎಲ್ಲರಿಂದಲೂ ವ್ಯವಸ್ಥೆಯನ್ನು ಬದಲು ಮಾಡಲು ಸಾಧ್ಯವಿಲ್ಲ. ಆದರೆ ಕೆಲವರಿಗೆ ಸಾಧ್ಯವಿರುತ್ತದೆ. ಈ ಪೈಕಿ ನೀವೂ ಒಬ್ಬರು ಎಂದುಕೊಂಡಿದ್ದೆ. ಮತ್ತೊಬ್ಬ ದೇವರಾಜ ಅರಸು ಬಂದು ಕೂತಂತಾಗಿದೆ ಎಂದುಕೊಂಡಿದ್ದೆ. ದೇವರಾಜ ಅರಸು ಕೂಡ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದವರೇ. ಆದರೆ ಅದನ್ನವರು ಸ್ವಂತಕ್ಕೆ ಆಸ್ತಿ ಮಾಡಿಕೊಳ್ಳಲು ಬಳಸಲಿಲ್ಲ. ನೀವೂ ಕೂಡ ವಿಪರೀತ ಭ್ರಷ್ಟಾಚಾರಿಯಲ್ಲ. ನೋ ಡೌಟ್, ಆದರೆ ನಿಮ್ಮ ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದರ ಪರಿವೆಯಾದರೂ ನಿಮಗಿದೆಯೇ? ನಿಮ್ಮ ಸರ್ಕಾರದ ಎಷ್ಟು ಜನ ಮಂತ್ರಿಗಳು ತಮ್ಮ ತಮ್ಮ ಖಾತೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಜನರಿಗೆ ನ್ಯಾಯ ಕೊಡುತ್ತಿದ್ದಾರೆ ಅಂತ ನೋಡಿದ್ದೀರಾ?

ಉದಾಹರಣೆಗೆ ಹೇಳುತ್ತೇನೆ. ಈ ರಾಜ್ಯದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನೀರಿಂಗ್ ಕೋರ್ಸುಗಳಲ್ಲಿ ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ದುಡ್ಡಿಲ್ಲ ಅನ್ನುವ ಕಾರಣಕ್ಕಾಗಿ ಓದುವ ಅವಕಾಶ ಕಳೆದುಕೊಳ್ಳಬಾರದು ಎಂದು ವೀರಪ್ಪ ಮೊಯ್ಲಿ ಸಿಇಟಿ ಎಂಬ ವ್ಯವಸ್ಥೆಯನ್ನು ಜಾರಿಗೆ ತಂದರು. ಆದರೆ ಒಬ್ಬ ತಲಾಟಿಗಿರುವಷ್ಟು ಜ್ಞಾನವೂ ಇಲ್ಲದಂತೆ ಆ ಘಟಕ ನಡೆಯುತ್ತಿದೆ. ಅದರರ್ಥ, ಉನ್ನತ ಶಿಕ್ಷಣ ಇಲಾಖೆಯನ್ನು ನೋಡಿಕೊಳ್ಳುತ್ತಿರುವ ದೇಶಪಾಂಡೆಯಾಗಲೀ, ಅವರು ತಮ್ಮ ಪಕ್ಕ ಇಟ್ಟುಕೊಂಡಿರುವ ರಜನೀಶ್ ಗೋಯೆಲ್ ಅವರಾಗಲೀ ದಡ್ಡರಲ್ಲ, ವಿಪರ್ಯಾಸವೆಂದರೆ ಅವರು ಜನರನ್ನು ದಡ್ಡರನ್ನಾಗಿ ಮಾಡುವ ಜಾಣರು. ನಮಗೆ ಬೇಕಿರುವುದು ಜನರನ್ನು ಜಾಣರನ್ನಾಗಿ ಮಾಡುವ, ಅವರಿಗೆ ಶಕ್ತಿ ತುಂಬುವ ಜನ. ಆದರೆ ಇವರೆಲ್ಲ ಸೇರಿ ವೃತ್ತಿಪರ ಕೋರ್ಸುಗಳಿಗೆ ಆನ್‌ಲೈನ್ ಪದ್ಧತಿ ಜಾರಿಗೆ ತಂದಿದ್ದಾರಲ್ಲ? ಅದೂ ಸಿಇಟಿ ಘಟಕದವರು. ಈ ಹಿಂದಿನಂತೆಯೇ ಸ್ಥಳದಲ್ಲೇ ವಿದ್ಯಾರ್ಥಿ ಬಯಸಿದ ಕೋರ್ಸು, ಕಾಲೇಜು ಸಿಗುವಂತಹ ಪದ್ಧತಿ ಇರಲಿ ಎಂದು ಗೋಗರೆದು ಹೇಳಿದರೂ ಆನ್‌ಲೈನ್ ಪದ್ಧತಿ ತಂದಿದ್ದಾರಲ್ಲ? ಇವರು ಮಾಡಿದ ಕೆಲಸಕ್ಕೆ ಕರ್ನಾಟಕದ ನಲವತ್ತರಿಂದ ಐವತ್ತು ಸಾವಿರ ಮಕ್ಕಳು ಅಕ್ಷರಶಃ ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಯಾವ ಕಾಲೇಜಿನಲ್ಲಿ ಸೀಟು ಸಿಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ಯಾವ ಕೋರ್ಸು ಸಿಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಮುಂದೇನು ಎಂಬುದೇ ಅಯೋಮಯ ಎನ್ನುವಂತಹ ಸ್ಥಿತಿಯನ್ನು ನಿಮ್ಮ ಆನ್‌ಲೈನ್ ಪದ್ಧತಿ ಸೃಷ್ಟಿಸಿದೆ. ಅಥವಾ ನಿಮ್ಮ ಸರ್ಕಾರ ಬೇಕೆಂದೇ ಸೃಷ್ಟಿಸಿದೆ.

ಬಿಜೆಪಿಯವರ ಬಗ್ಗೆ ಏನಾದರೂ ಹೇಳಬಹುದು. ಆದರೆ ಅರವಿಂದ ಲಿಂಬಾವಳಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಮಕ್ಕಳು ತಮಗೆ ಸಿಗುವ ಕೋರ್ಸು, ಕಾಲೇಜು ಯಾವುದು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿತ್ತು. ಆದರೆ ನಿಮ್ಮ ಸರ್ಕಾರ ಬಂದ ಮೇಲೆ ಯಾವ ವಿದ್ಯಾರ್ಥಿಗೂ ಮುಂದಿನ ಗತಿ ಏನು? ಅನ್ನುವುದು ಗೊತ್ತಿಲ್ಲ. ಅಂದ ಮೇಲೆ ನೀವು ಐದು ವರ್ಷ ಸಿಎಂ ಆಗಿರಲೇಬೇಕು ಎಂದು ಕಣ್ಣೀರು ಹಾಕುವವರು ಯಾರು? ಹೆಚ್ಚೆಂದರೆ ಭೈರತಿ ಬಸವರಾಜು ಹಾಕಬೇಕು, ನಮ್ಮ ರೇವಣ್ಣ ಕುಂತು ಅಳಬೇಕು. ಮಹದೇವಪ್ಪ ಗೊಳೋ ಎನ್ನಬೇಕು. ಇನ್ನು ನಿಮ್ಮ ಕಟಾಕ್ಷದಲ್ಲಿರುವ ಯಾರೋ ಹತ್ತು ಮಂದಿ ಅಳಬೇಕು. ಅಂದ ಹಾಗೆ ಮಕ್ಕಳನ್ನೇ ನಿಮ್ಮ ಸರ್ಕಾರ ಅಳಿಸುತ್ತದೆ. ಅವರ ಕಣ್ಣ ಮುಂದೆ ಗೋಜಲು ಸೃಷ್ಟಿಸುತ್ತದೆ ಎಂದರೆ ಮತ್ತು ಇದಕ್ಕೆ ಕಾರಣರಾದ ಅಧಿಕಾರಿಗಳು ನಿರಾತಂಕವಾಗಿ ನಿಮ್ಮ ಅಕ್ಕಪಕ್ಕದಲ್ಲೇ ಸೆಂಟು ಹೊಡೆದುಕೊಂಡು ಕೂರುತ್ತಾರೆ ಎಂದರೆ, ನೀವು ಯಾಕಾದರೂ ಆ ಪಟ್ಟದಲ್ಲಿ ಉಳಿಯಬೇಕು? ನಿಮ್ಮ ಸಾಮ್ರಾಜ್ಯದಲ್ಲಿ ಉಂಡೆದ್ದು ಮೆರೆಯುತ್ತಿರುವವರಿಗಾಗಿ ಉಳಿಯಬೇಕಾ?

ನೋಡ ನೋಡುತ್ತಿದ್ದಂತೆಯೇ ಹೊರರಾಜ್ಯದವರು ನಿರಾಯಾಸವಾಗಿ ಬಂದು ದುಡ್ಡು ಸುರಿದು ಸೀಟು ಪಡೆಯುತ್ತಾರೆ. ಅಂತಹವರ ಮುಂದೆ ನಾಲಿಗೆ ಚಾಚಿ ನಿಲ್ಲಲು ಹಲವು ವಿದ್ಯಾ ಸಂಸ್ಥೆಗಳವರೂ ಇದ್ದಾರೆ. ಹಾಗೆಯೇ ಇಂತಹವರ ಬಳಿ ಭಿಕ್ಷೆ ಬೇಡುವ ವ್ಯವಸ್ಥೆ ನಿಮ್ಮ ಪಕ್ಕದಲ್ಲೇ ಇದೆ. ಆದರೂ ನೀವು ಮಾತನಾಡುತ್ತಿಲ್ಲ. ಯಾಕೆಂದರೆ ನೀವು ಇಡೀ ಕರ್ನಾಟಕವನ್ನು ಉದ್ಧಾರ ಮಾಡಲು ಬಂದ ದೇವರಾಜ ಅರಸು ನೋಡಿ. ನಿಜವಾಗಲೂ ನಿಮ್ಮಲ್ಲಿ ಬಡವರ ಕಷ್ಟ ನೋಡಲು ಸಾಧ್ಯವಿಲ್ಲ ಎಂದಾದರೆ ಮೊದಲು ಆ ಸಿಇಟಿ ಘಟಕಕ್ಕೆ ಹೋಗಿ. ಹಲವು ಖಾಸಗಿ ಆಡಳಿತ ಮಂಡಳಿಗಳ ಜತೆ ಷಾಮೀಲಾಗಿ ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದ್ದಾರಲ್ಲ? ಅಂತಹ ಅಧಿಕಾರಿಗಳನ್ನು ಕರೆಸಿ ಕಪಾಳಕ್ಕೆ ನಾಲ್ಕು ಬಿಗಿಯಿರಿ. ಹಳೇ ಪದ್ಧತಿ ಇರಲಿ, ಎಲ್ಲಾದರೂ ತಪ್ಪು ನಡೆದರೆ ಹುಷಾರ್ ಎಂದು ಗದರಿಸಿ. ನಿಮ್ಮ ಸಿಟ್ಟು ಇಂತಹ ಕಾರಣಗಳಿಗಾಗಿ ವ್ಯಕ್ತವಾಗಬೇಕು ಸಿದ್ದರಾಮಯ್ಯನವರೇ. ಪಕ್ಷ ಕಟ್ಟುವವರು ನಾವು, ಯಾರೋ ಬಂದು ಅಧಿಕಾರ ಹಿಡಿಯುತ್ತಾರೆ ಎಂದು ಪಕ್ಷದ ವೇದಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕಮಲಮ್ಮ ಅವರ ಮೇಲಲ್ಲ. ಅವರು ನ್ಯಾಯವಾಗೇ ಹೇಳಿದ್ದಾರೆ.

ಅಂದ ಹಾಗೆ ಇದು ಒಂದು ಸಿಇಟಿಯ ಕತೆಯಾಯಿತು. ಇನ್ನು ಆಹಾರ ಇಲಾಖೆಯ ಅನ್ನಭಾಗ್ಯ ಯೋಜನೆಗೇ ಬರೋಣ. ನೀವು ಸಿಎಂ ಆಗುವ ಮುಂಚೆ ಕರ್ನಾಟಕದ ಜನ ಹಸಿವಿನಿಂದ ನರಳುತ್ತಿದ್ದರೇ? ದಿನನಿತ್ಯ ಹಸಿವು ತಡೆಯಲಾಗದೇ ಸತ್ತು ಹೋಗುವವರ ಪ್ರಮಾಣ ಜಾಸ್ತಿಯಾಗಿತ್ತೇ? ನೀವು ಬಂದ ಮೇಲೇ ಕರ್ನಾಟಕದ ಜನ ಅನ್ನ ತಿನ್ನುವಂತಾಯಿತೇ? ಮೊದಲು ಜನರ ಕೈಗೆ ಶಕ್ತಿ ಕೊಡಬೇಕು ಸಿದ್ದರಾಮಯ್ಯನವರೇ. ಈ ರಾಜ್ಯದ ಬಹುತೇಕ ಯಾವುದೇ ಊರಿಗೆ ಹೋಗಿ. ಕನಿಷ್ಠ ಪಕ್ಷ ನಿಮಗೆ ಬೇಕಾದವರನ್ನಾದರೂ ಕಳಿಸಿ ಚೆಕ್ ಮಾಡಿ ನೋಡಿ. ಎರಡರಿಂದ ಮೂರು ಸಾವಿರ ರುಪಾಯಿ ಕೊಟ್ಟರೆ ನಿರಾಯಾಸವಾಗಿ ಬಿಪಿಎಲ್ ಕಾರ್ಡು ಸಿಗುತ್ತದೆ. ರುಪಾಯಿಗೆ ಒಂದು ಕೆಜಿಯಂತೆ ಮೂವತ್ತು ಕೆಜಿ ಅಕ್ಕಿ ಸಿಗುತ್ತದೆ. ನಾಲ್ಕಂತಸ್ತಿನ ಬಿಲ್ಡಿಂಗು ಕಟ್ಟಿಸಿದವನೂ ಬಿಪಿಎಲ್ ಕಾರ್ಡು ಮಾಡಿಸಿಕೊಳ್ಳುತ್ತಾನೆ. ಅಕ್ಕಿ ಕೊಡಬೇಕು ನಿಜ. ಮೂವತ್ತು ಕೆಜಿ ಅಕ್ಕಿ ಕೊಡುತ್ತೇವೆ ಅನ್ನುತ್ತೀರಲ್ಲ? ನೀವು ಎಷ್ಟು ಜನರಿಗೆ ಅಕ್ಕಿ ಕೊಡುತ್ತಿದ್ದೀರೋ, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಅನರ್ಹರಿದ್ದಾರೆ. ಅರ್ಹರೂ ಅಷ್ಟು ತಿನ್ನಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಮಧ್ಯಮ ವರ್ಗದವರಿಗೇ ಮಾರುತ್ತಾರೆ.

ನಿಮಗೆ ನಿಜವಾಗಲೂ ಹಸಿವಿರುವವರ ಕುರಿತು ಕಾಳಜಿಯಿದ್ದರೆ ಮೊದಲು ಬಿಪಿಎಲ್ ಕಾರ್ಡ್ ವ್ಯವಸ್ಥೆಯನ್ನು ಸರಿಪಡಿಸಿ. ಇವತ್ತು ಆಹಾರ ಇಲಾಖೆಯ ಕ್ಲರ್ಕ್ ಬಳಿ ಹೋದರೆ ಆತ ರೇಷನ್ ಕಾರ್ಡ್‌ಗೆ ಅರ್ಜಿ ಹಾಕುವ ಕಂಪ್ಯೂಟರ್ ಸೆಂಟರ್ ಜೊತೆ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡಿರುತ್ತಾನೆ. ಆತ ಮತ್ತು ನೀವೇ ಪರವಾನಗಿ ಕೊಟ್ಟ ಅಂಗಡಿಯವರು ಸೇರಿ ಫುಡ್ ಇನ್ಸ್‌ಪೆಕ್ಟರ್ ಬಳಿ ಹೋಗುತ್ತಾರೆ. ಎರಡರಿಂದ ಮೂರು ಸಾವಿರ ರುಪಾಯಿ ಕೊಟ್ಟರೆ ಬಯಸಿದವರಿಗೆ ಬಿಪಿಎಲ್ ಕಾರ್ಡು ಲಭ್ಯ. ಹೀಗೆ ಬಿಪಿಎಲ್ ಕಾರ್ಡು ಮಾಡಿಸಿಕೊಂಡವರು ಅಕ್ಕಿ ತಿನ್ನುತ್ತಾರೆ ಎಂದರೆ ನೀವು ವರ್ಷಕ್ಕೆ ನಾಲ್ಕೂವರೆ ಸಾವಿರ ಕೋಟಿ ರುಪಾಯಿ ಸುರಿದು ಏನು ಸಾಧಿಸಿದಂತಾಯಿತು? ನೀವು ಸುರಿಯುತ್ತಿರುವ ಅರ್ಧಕ್ಕರ್ಧ ಹಣ ದಂಡವಾಗುತ್ತಿದೆ. ಒಂದು ತಿಳಿದುಕೊಳ್ಳಿ. ನೀವು ಅಕ್ಕಿ ಕೊಟ್ಟು, ಮೈ ತೊಳೆಯಲು ಬಚ್ಚಲು ಮನೆ ಕೊಟ್ಟು, ತಲೆ ಒಣಗಿಸಿಕೊಳ್ಳಲು ಹೇರ್ ಡ್ರೈಯರ್ ಕೊಟ್ಟರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಯಾಕೆಂದರೆ ನಿಮ್ಮ ಕಾರ್ಯಕ್ರಮಗಳಿಂದ ಈ ರಾಜ್ಯ ಬರಕತ್ತಾಗುತ್ತಿಲ್ಲ. ಕಳ್ಳರಿಗೆ ನಿರಾಯಾಸವಾಗಿ ಲೂಟಿ ಹೊಡೆಯಲು ದಾರಿ ಮಾಡಿಕೊಡುತ್ತಿವೆ.

ಹೋಗಲಿ, ಅಧಿಕಾರ ಹಂಚುವಾಗ ಎಲ್ಲ ಸಮಾಜಗಳಿಗೂ ನ್ಯಾಯಯುತವಾಗಿ ಅಧಿಕಾರ ಹಂಚುತ್ತಿದ್ದೀರಾ? ಎಂದರೆ ಅದೂ ಇಲ್ಲ. ನಿಮಗೆ ವೋಸಿ ಹೊಡೆಯುವವರು, ಕಾಕಾ ಹೊಡೆಯುವವರು, ಬಕೆಟ್ಟು ಹಿಡಿಯುವವರಿಗೆ ಜಾಗ ಮಾಡಿಕೊಡುತ್ತೀರಿ. ಯಾರಾದರೂ ಪಕ್ಷಕ್ಕಾಗಿ ದುಡಿದಿದ್ದೇನೆ. ನನಗೆ ಜಾಗ ಕೊಡಿ ಎಂದರೆ ಅವರ ವಿರುದ್ಧ ಸಿಡಿದು ಬೀಳುತ್ತೀರಿ. ಅದ್ಯಾಕೋ ಏನೋ ನೀವು ಅಧಿಕಾರಕ್ಕೆ ಬಂದ ಮೇಲೆ ಹಲವು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕೆಲ ಸಾಹಿತಿಗಳು ಬಹಳ ಕ್ರಿಯೇಟಿವ್ ಆಗಿದ್ದಾರೆ. ಸಾಮಾಜಿಕ ನ್ಯಾಯ ಎಂಬ ಕಾರಣಕ್ಕಾಗಿ ನಿಮಗೆ ಬೇಡಾದವರ ವಿರುದ್ಧ ನಿಮ್ಮ ಹೈಕಮಾಂಡ್‌ಗೇ ಅರ್ಜಿ ಬರೆಯುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ. ಆದರೆ ನೆನಪಿಡಿ, ನೀವೇನೇ ಮಾಡಿದರೂ ಡಿ. ಕೆ. ಶಿವಕುಮಾರ್ ಅವರನ್ನಾಗಲೀ, ರೋಷನ್‌ಬೇಗ್ ಅವರನ್ನಾಗಲೀ ತಡೆಯಲು ಸಾಧ್ಯವಾಗಲಿಲ್ಲ. ಯಾಕೆಂದರೆ ಅವರಿಗೆ ದಿಗ್ವಿಜಯ್‌ಸಿಂಗ್ ಗೊತ್ತಿದ್ದರು. ಅವರ ಮೂಲಕ ಸೋನಿಯಾಗಾಂಧಿಗೆ ಹೇಗೆ ಹೇಳಿಸಬೇಕು ಎಂಬುದು ಗೊತ್ತಿತ್ತು. ಹೀಗಾಗಿ ನಿಮ್ಮ ಕೃಪಾಪೋಷಿತ ಸಾಹಿತಿಗಳ ಸಂಘ, ಕರ್ನಾಟಕದ ರಕ್ಷಣೆಯೇ ನಮ್ಮ ಗುರಿ ಎಂಬಂತೆ ಬಬ್ರುವಾಹನನ ಫೋಜು ಕೊಟ್ಟರೂ ಅವರು ಮಂತ್ರಿಗಳಾಗುವುದನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ.

ನಿಮಗೆ ಸಾಧ್ಯವಾಗಿದ್ದೆಂದರೆ ಕರ್ನಾಟಕದಲ್ಲಿ ಪಕ್ಷವನ್ನು ಗೆಲ್ಲಿಸಲು ಕಾರಣರಾದ ಪರಮೇಶ್ವರ್ ಅವರನ್ನು ತಡೆಯುವುದು. ಪಾಪ, ಕಾಂಗ್ರೆಸ್ ಪಕ್ಷದಲ್ಲಿ ನೀವು ಅವರಿಗಿಂತ ಇಪ್ಪತ್ತೈದು ವರ್ಷ ಸೀನಿಯರ್ರು. ಅವರು ಜೂನಿಯರ್ರು. ನಿಮ್ಮಿಂದಾಗಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂತು. ಅವರಿಂದಾಗಿ ನಾಲ್ಕಾಣೆ ಕೆಲಸವೂ ಆಗಲಿಲ್ಲ. ನಿಮಗೆ ಬೇಕಾದವರೇ ವೋಟು ಕೊಟ್ಟು ಗೆಲ್ಲಿಸಿದರು. ಅದೇ ಕಾರಣಕ್ಕಾಗಿ ಪರಮೇಶ್ವರ್ ವಿರುದ್ಧ ಹಟ ಸಾಧಿಸುತ್ತಿದ್ದೀರಿ, ಸಾಧಿಸಿ. ಆದರೆ ನೆನಪಿಡಿ. ನಾಯಕರ ಮಧ್ಯೆ ಒಂದು ಸಲ ಕಹಿಯುಳಿದರೆ ಮುಂದಿನ ಚುನಾವಣೆಯಲ್ಲಿ ಆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಮೂವತ್ತು ವರ್ಷಗಳಿಂದ ವಿಧಾನಸಭೆಯನ್ನು ನೋಡಿದವರಲ್ಲವೇ ನೀವು. ಹೇಗಿದ್ದರೂ ನಿಮಗೆ ಗೊತ್ತು. ನಾಯಕರ ಮಧ್ಯೆ ಕಹಿಯುಳಿದರೆ ಅದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆಡಳಿತ ನಡೆಸುತ್ತಿರುವವರನ್ನು ಮನೆಗೆ ಕಳಿಸುತ್ತದೆ. ೧೯೮೯ರಲ್ಲಿ ಜನತಾ ಪರಿವಾರ, ೧೯೯೪ರಲ್ಲಿ ಕಾಂಗ್ರೆಸ್, ೧೯೯೯ರಲ್ಲಿ ಜನತಾ ಪರಿವಾರ, ೨೦೦೪ರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಕಳೆದ ವರ್ಷ ಬಿಜೆಪಿ ಸರ್ಕಾರ ಉರುಳಿ ಬಿದ್ದಿದ್ದು ಇಂತಹ ಕಹಿ ಭಾವನೆಯಿಂದಲೇ ಅನ್ನುವುದನ್ನು ನೆನಪಿನಲ್ಲಿಡಿ.

ಮೊದಲು ನಿಮ್ಮ ಪಕ್ಷದ ಅಂತರಂಗದಲ್ಲಿರುವ ಕಹಿಯನ್ನು ದೂರ ಮಾಡಿ. ಅದನ್ನೇ ಮಾಡಲು ನಿಮ್ಮ ಕೈಲಿ ಸಾಧ್ಯವಾಗುತ್ತಿಲ್ಲ. ಹೀಗಾದರೆ ಜನರ ಮನಸ್ಸಿನಲ್ಲಿ ಸೃಷ್ಟಿಯಾಗುವ ಕಹಿಯನ್ನು ಹೇಗೆ ಹೋಗಲಾಡಿಸುತ್ತೀರಿ? ಅಂದ ಹಾಗೆ ಆ ಕಹಿ ಹೋಗಲಾಡಿಸಬೇಕೆಂದೇನೂ ಇಲ್ಲ ಬಿಡಿ. ಯಾಕೆಂದರೆ ನೀವು ಇನ್ನು ಚುನಾವಣಾ ಕಣಕ್ಕಿಳಿಯುವುದಿಲ್ಲವಲ್ಲ? ಆದರೆ ಕಾಂಗ್ರೆಸ್ ಪಕ್ಷ ಮತ್ತೆ ಚುನಾವಣಾ ಅಖಾಡಕ್ಕಿಳಿಯುತ್ತದೆ. ನಿಮಗೆ ಅಧಿಕಾರ ಕೊಟ್ಟ ಪಕ್ಷ ಮರಳಿ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕಾದರೂ ಕೆಲಸ ಮಾಡಿ. ಹೇಳಿದರೆ ನಿಮ್ಮ ಸರ್ಕಾರದ ಬಹುತೇಕ ಇಲಾಖೆಗಳು ಇವತ್ತು ಆಸ್ಪತ್ರೆಯ ಮಾರ್ಚುರಿಗಳಲ್ಲಿ ಖಾಯಂ ಆಗಿ ಮಲಗಿದಂತಿವೆ. ಗ್ರಾಮೀಣಾಭಿವೃದ್ಧಿ ಮಂತ್ರಿ ಎಚ್.ಕೆ. ಪಾಟೀಲರೇನೋ ಇನ್ನು ನಾಲ್ಕು ವರ್ಷಗಳಲ್ಲಿ ಕರ್ನಾಟಕವನ್ನೇ ಸಂಡಾಸು ಮುಕ್ತ ರಾಜ್ಯ ಮಾಡುತ್ತಾರಂತೆ. ನಿಮ್ಮ ಸಂಪುಟದ ಬಹುತೇಕ ಮಂತ್ರಿಗಳನ್ನು ನೋಡಿದರೆ ಅವರು ಜನರ ಸಂಡಾಸನ್ನೇ ಬಂದು ಮಾಡುವಂತೆ ಕಾಣುತ್ತಿದೆ. ರಸ್ತೆಗಳಲ್ಲಿ ಸಂಚರಿಸಬೇಕೆಂದರೆ ದುಡ್ಡು, ಕುಡಿಯುವ ನೀರಿಗೂ ದುಡ್ಡು, ಎಲ್ಲದಕ್ಕೂ ದುಡ್ಡು. ಒಟ್ಟಿನಲ್ಲಿ ನೀವು ಬಂದ ಮೇಲೆ ಕರ್ನಾಟಕ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಲೂಟಿ ಹೊಡೆಯುವವರ ಸ್ವರ್ಗವಾಗಿದೆಯೇ ಹೊರತು ಇನ್ನೇನೂ ಆಗಿಲ್ಲ.

ನೀವು ವೈಯಕ್ತಿಕವಾಗಿ ಶ್ರೀರಾಮಚಂದ್ರ ಅಂತಲೇ ಇಟ್ಟುಕೊಳ್ಳೋಣ. ನಿಮ್ಮಂತಹವರಿಗೆ ಸಿಇಟಿಯಿಂದ ಹಿಡಿದು ಅನ್ನಭಾಗ್ಯದ ತನಕ, ರಸ್ತೆಯಿಂದ ಹಿಡಿದು ಮರಳು ದಂಧೆಯ ತನಕ ಯಾವ್ಯಾವ ದಂಧೆಗಳು ನಿರಾತಂಕವಾಗಿ ನಡೆಯುತ್ತಿವೆ ಎಂಬುದು ಗೊತ್ತಿರಬೇಕಿತ್ತಲ್ಲವೇ? ಅದನ್ನು ನೋಡಿ ಸಿಟ್ಟು ಬರಬೇಕಿತ್ತಲ್ಲವೇ? ಅಂತಹದನ್ನು ನೋಡಿ ಸಿಟ್ಟು ಮಾಡಿಕೊಳ್ಳಿ. ಅದಕ್ಕೆ ಕಾರಣರಾದವರ ಮೇಲೆ ಸಿಟ್ಟು ಮಾಡಿಕೊಳ್ಳಿ. ನಿಮಗೆ ಯಾರೋ ವಿರುದ್ಧವಾಗಿ ಮಾತನಾಡಿದರು ಎಂದೋ, ನಿಮಗೆ ಯಾರೋ ಬೇಡ ಎಂಬ ಕಾರಣಕ್ಕೋ ಸಿಟ್ಟು ಮಾಡಿಕೊಳ್ಳಬೇಡಿ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಮುಖ್ಯಮಂತ್ರಿಯಾದರೆ ಮಾತ್ರ ನಾವು ಉಣ್ಣಲು ಸಾಧ್ಯ ಎಂದು ಯಾರೂ ಗೋಗರೆಯುತ್ತಿಲ್ಲ. ಆದರೆ ಒಳ್ಳೆಯ ಆಡಳಿತ ಕೊಡಿ ಎಂದು ಬಯಸುತ್ತಾರೆ. ಅದೇ ಆಗದಿದ್ದ ಮೇಲೆ ಈ ಅಧಿಕಾರಿಗಳ ಪಡೆಯೇಕೆ ಬೇಕು. ಉಮೇಶ್ ಕತ್ತಿ ಹೇಳುವಂತೆ ತಲಾಟಿಗಳು ಮಾಡುವ ಕೆಲಸವನ್ನೂ ನಿಮ್ಮ ಬಹುತೇಕ ಅಧಿಕಾರಿಗಳು ಮಾಡುವುದಿಲ್ಲ. ನಿಮ್ಮ ಮಂತ್ರಿಗಳ ಪೈಕಿ ಬಹುತೇಕರಿಗೆ ಕೊಟ್ಟ ಖಾತೆಯ ಮೇಲೇ ಪ್ರೀತಿಯಿಲ್ಲ. ಯಾರನ್ನೋ ಮಂತ್ರಿಗಿರಿಯಿಂದ ಇಳಿಸಲು ರಿವೀವ್ ಮೀಟಿಂಗು ಮಾಡಬೇಡಿ. ಯಾರು ಯಾವುದಕ್ಕೆ ಯೋಗ್ಯರು ಎಂಬುದನ್ನು ಗುರುತಿಸಿ, ಕೆಲಸ ಕೊಡಿ. ಇಲ್ಲದಿದ್ದರೆ ನಿಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ನಿಮಗೂ ಒಳ್ಳೆಯ ಹೆಸರು ಬರುವುದಿಲ್ಲ. ಇನ್ನು ಮುಂದಾದರೂ ಕೆಟ್ಟದ್ದರ ಮೇಲೆ ಸಿಟ್ಟು ಮಾಡಿಕೊಳ್ಳಿ. ಕೆಟ್ಟವರ ಮೇಲೆ ಸಿಟ್ಟು ಮಾಡಿಕೊಳ್ಳಿ. ಅಧಿಕಾರ ಹೋದರೆ ಹೋಗಲಿ, ಆದರೆ ಒಳ್ಳೆಯ ಹೆಸರಾದರೂ ಬರಲಿ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 July, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books