Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆ ನೀಡುತ್ತಿದ್ದಾರಾ ಸಿದ್ದು?

ಮುಂದಿನ ನಾಲ್ಕು ವರ್ಷಗಳ ಕಾಲ ನಾನು ಸಿಎಂ ಆಗಿ ಮುಂದುವರಿಯುತ್ತೇನೋ, ಇಲ್ಲವೋ. ಏನೇ ಆದರೂ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ಅವಧಿಯನ್ನು ಪೂರೈಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮೊನ್ನೆ ಮೊನ್ನೆಯ ತನಕ ಅವರು ಸಂದರ್ಭ ಸಿಕ್ಕಾಗಲೆಲ್ಲ, ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ. ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದರು. ಅವರ ಮಾತಿನಲ್ಲಿ ಒಂದು ರೀತಿಯ ಧಾಡಸಿತನವೂ ಇರುತ್ತಿತ್ತು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರೂ ಅಷ್ಟೇ. ಪ್ರತಿಪಕ್ಷಗಳ ವಿರುದ್ಧ ಹರಿಹಾಯುವಾಗಲೆಲ್ಲ, ಮುಂದಿನ ಹತ್ತು ವರ್ಷಗಳ ಕಾಲ ನಾನೇ ಸಿ.ಎಂ. ನನ್ನನ್ನು ಅಲುಗಾಡಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು. ಆ ರೀತಿ ಅವರು ಹೇಳಿದರೆ ಯಾರಿಗೂ ಅದು ಅಸಾಧ್ಯ ಎನ್ನಿಸುತ್ತಿರಲಿಲ್ಲ. ಯಾಕೆಂದರೆ ಯಡಿಯೂರಪ್ಪ ಅಷ್ಟು ಗಟ್ಟಿಯಾಗಿದ್ದರು. ಯಡಿಯೂರಪ್ಪನವರ ದರ್ಬಾರನ್ನು ಕಂಡವರೂ, ಈ ಯಪ್ಪನ್ನ ಛೇಂಜ್ ಮಾಡಲು ಸಾಧ್ಯವಿಲ್ಲ ಕಣ್ರೀ ಎಂದು ಹೇಳುತ್ತಿದ್ದರು.


ಯಡಿಯೂರಪ್ಪನವರ ಈ ಆತ್ಮವಿಶ್ವಾಸ ಯಾವ ಮಟ್ಟಕ್ಕೇರಿತ್ತೆಂದರೆ ಅನಂತಕುಮಾರ್ ಅವರ ರೈಟ್ ಹ್ಯಾಂಡು ಅನ್ನಿಸಿಕೊಂಡಿದ್ದ ಸುಬ್ಬಣ್ಣ ಅವರನ್ನು ಸಮಾರಂಭವೊಂದರಲ್ಲಿ ಸೀಟು ವ್ಯವಸ್ಥೆ ಸರಿ ಮಾಡಲಿಲ್ಲ ಎಂಬ ಕಾರಣಕ್ಕಾಗಿ ತಾರಾಮಾರಾ ಬೈಯ್ದಾಡಿದ್ದರು. ನಿಮ್ಮಂತಹವರಿಗೆ ಕೆಲಸ ಕಲಿಸಿದ ಆ ಅನಂತಕುಮಾರ್‌ಗೆ ಮೊದಲು ಬುದ್ಧಿ ಹೇಳಬೇಕು. ಹೋಗ್ರೀ, ಹೋಗ್ರೀ ಎಂದು ಗದರಿದ್ದರು. ಆದರೆ ಹೀಗೆ ಹೇಳಿದ ಕೆಲವೇ ಕಾಲದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ ವರದಿ ಯಡಿಯೂರಪ್ಪನವರನ್ನು ಬಲಿ ತೆಗೆದುಕೊಂಡಿತು. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿ ಕೇಳಿ ಲಾಲ್‌ಕೃಷ್ಣ ಅಡ್ವಾಣಿಯವರ ಪರಮಾಪ್ತ. ನನ್ನನ್ನು ಇಳಿಸಲು ಇವರೆಲ್ಲ ಸೇರಿ ಸಂಚು ಹೂಡಿದ್ದಾರೆ ಎಂದು ಯಡಿಯೂರಪ್ಪ ಎಷ್ಟೇ ಅರಚಾಡಿದರೂ ಪ್ರಯೋಜನವಾಗಲಿಲ್ಲ. ನಿತಿನ್ ಗಡ್ಕರಿ ಅವರಿಂದ ಹಿಡಿದು ಇದೇ ನರೇಂದ್ರ ಮೋದಿಯವರ ತನಕ ಎಲ್ಲರ ಬೆಂಬಲವಿದ್ದರೂ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಯಿತು. ರಾಜೀನಾಮೆ ಕೊಡುವ ಸಂದರ್ಭದಲ್ಲೂ ಎಪ್ಪತ್ತು ಮಂದಿ ಶಾಸಕರೊಂದಿಗೆ ರಾಜಭವನಕ್ಕೆ ಬಂದ ಯಡಿಯೂರಪ್ಪ ತಮ್ಮ ಖದರನ್ನು ಉಳಿಸಿಕೊಂಡರೇನೋ ನಿಜ. ಆದರೆ ಮರಳಿ ಮುಖ್ಯಮಂತ್ರಿಯಾಗುವ ಅವರ ಆಸೆ ಈಡೇರಲಿಲ್ಲ. ನಿಮ್ಮನ್ನು ಮರಳಿ ಮುಖ್ಯಮಂತ್ರಿ ಮಾಡುತ್ತೇವೆ ಎಂಬ ಹೈಕಮಾಂಡ್ ವರಿಷ್ಠರ ಭರವಸೆಯೂ ಈಡೇರಲಿಲ್ಲ.

ಹಾಗೆ ನೋಡಿದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರೇ ಮುಖ್ಯ ಕಾರಣ ಎಂಬುದು ರಹಸ್ಯವಾಗಿರಲಿಲ್ಲ. ೨೦೦೪ರಲ್ಲಿ ತಮಗೆ ಪ್ರತಿಪಕ್ಷ ನಾಯಕನ ಸ್ಥಾನಮಾನ ಕೊಡಲೂ ಅನಂತಕುಮಾರ್ ಆಟ ಆಡಿಸಿದಾಗ ಯಡಿಯೂರಪ್ಪ ತಮ್ಮ ಗೆಟಪ್ಪನ್ನೇ ಛೇಂಜ್ ಮಾಡಿಕೊಂಡರು. ಅಲ್ಲಿಯ ತನಕ ಕರ್ನಾಟಕದ ರೈತ ನಾಯಕರಾಗಿದ್ದ ಅವರು ಲಿಂಗಾಯತ ಸಮುದಾಯದ ನಾಯಕರಾಗಿ ಹೊರಹೊಮ್ಮಿದರು. ಅದೇ ಬಲವನ್ನು ತೋರಿಸಿ ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಹುಟ್ಟುಹಬ್ಬದ ನೆಪದಲ್ಲಿ ಲಿಂಗಾಯತ ಸಮುದಾಯದ ಅನೇಕ ಸ್ವಾಮೀಜಿಗಳನ್ನು ಬೆಂಗಳೂರಿನಲ್ಲಿ ನಡೆಸಿದ ಸಮಾರಂಭದಲ್ಲಿ ಕರೆದು ಕೂರಿಸಿ, ಹೈಕಮಾಂಡ್‌ನ್ನು ಬೆದರಿಸಿದರು. ಆನಂತರ ಕುಮಾರಸ್ವಾಮಿ ಜತೆ ಮಾತನಾಡಿ ಬಿಜೆಪಿಗೆ ಮೊಟ್ಟ ಮೊದಲ ಬಾರಿ ಅಧಿಕಾರದ ರುಚಿ ಉಣಿಸಿದರು. ಆಗವರು ಉಪಮುಖ್ಯಮಂತ್ರಿ. ಕುಮಾರಸ್ವಾಮಿ ನಖರಾ ಮಾಡದೇ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರೆ ಕರ್ನಾಟಕದ ರಾಜಕೀಯ ಚಿತ್ರ ಈಗಿನಂತಿರುತ್ತಿರಲಿಲ್ಲ ಎಂಬುದು ಬೇರೆ ಮಾತು.
ಅದೇನೇ ಇರಲಿ, ಒಟ್ಟಿನಲ್ಲಿ ಕುಮಾರಸ್ವಾಮಿಯ ಚಂಚಲ ಮನಸ್ಸು ಕರ್ನಾಟಕದಲ್ಲಿ ಯಡಿಯೂರಪ್ಪನವರ ಯುಗ ಪ್ರಾರಂಭವಾಗಲು ಕಾರಣವಾಯಿತು. ಅವತ್ತು ಅವರನ್ನು ನೋಡಿದವರು, ಈ ಯಪ್ಪನ್ನ ಹತ್ತು ವರ್ಷ ಕಾಲ ಸಿ.ಎಂ. ಪೋಸ್ಟ್‌ನಿಂದ ಅಲುಗಾಡಿಸಲು ಸಾಧ್ಯವಿಲ್ಲ ಕಣ್ರೀ ಎಂದಿದ್ದರು. ಒಬ್ಬ ಮುಖ್ಯಮಂತ್ರಿಯ ಪೊಸೀಷನ್ನು ನೋಡಿದಾಗ ಹಾಗೆ ಅನ್ನಿಸುವುದು ಸಹಜ. ಹಿಂದೆ ದೇವರಾಜ ಅರಸರು ಕರ್ನಾಟಕದ ಮುಖ್ಯಮಂತ್ರಿಯಾಗಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಾಗ ಇಂತಹುದೇ ಮಾತುಗಳು ಕೇಳಿ ಬಂದಿದ್ದವು. ವಕ್ಕಲಿಗರು, ಲಿಂಗಾಯತ ಸಮುದಾಯದ ಸ್ವಲ್ಪ ಪ್ರಮಾಣದ ಬೆಂಬಲ ಮತ್ತು ಅಹಿಂದ ವರ್ಗಗಳ ಸಾಲಿಡ್ಡು ಬೆಂಬಲ ಸೇರಿಸಿದ ದೇವರಾಜ ಅರಸು, ಕರ್ನಾಟಕದ ರೂಪು ರೇಷೆಯನ್ನೇ ಬದಲಿಸಲು ಯತ್ನಿಸಿದರು. ಬಡವರ, ಶ್ರೀಮಂತರ ನಡುವಣ ಕಂದರ ಕಡಿಮೆ ಮಾಡಲು ಅವರು ಯತ್ನಿಸಿದ ರೀತಿ, ಸಮಾಜದಲ್ಲಿದ್ದ ಮೇಲು, ಕೀಳನ್ನು ತೊಡೆದು ಹಾಕಲು ಅವರು ಶ್ರಮಿಸಿದ ರೀತಿ ಎಲ್ಲವೂ ಕರ್ನಾಟಕದ ಜನಮಾನಸದಲ್ಲಿ ಮೆಚ್ಚುಗೆ ಮೂಡಿಸಿತ್ತು. ಹೀಗಾಗಿಯೇ ಯಾವ ಕಾರಣಕ್ಕೂ ಅರಸರನ್ನು ಬದಲಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.


ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗುವಂತೆ ಮಾಡಿದರೆ ಕರ್ನಾಟಕದಲ್ಲಿ ದೇವರಾಜ ಅರಸು, ತಮ್ಮ ಸೂತ್ರದಿಂದಾಗಿ ನೂರಾ ನಲವತ್ತೆಂಟರಷ್ಟು ಸೀಟುಗಳು ಕಾಂಗ್ರೆಸ್‌ಗೆ ದಕ್ಕುವಂತೆ ಮಾಡಿದ್ದರು. ಇಂದಿರಾ ಅಪಖ್ಯಾತಿಯ ನಡುವೆಯೂ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಮುಂದೆ ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಅವರನ್ನು ತಂದು ನಿಲ್ಲಿಸಿ ಗೆಲ್ಲಿಸಿದ್ದರು. ಇಂದಿರಾ ಕುರಿತಂತೆ ದೇಶದ ಜನರಿಗೆ ಅಭಿಮಾನವಿತ್ತೇನೋ ನಿಜ. ಆದರೆ ಕರ್ನಾಟಕದಲ್ಲಿ ಇಂದಿರಾ ಕುರಿತು ಅಂತಹ ಅಭಿಮಾನ ಮೂಡಲು ಅರಸರೂ ಕಾರಣರಾಗಿದ್ದರು. ಆದರೆ ಗೆದ್ದು ಹೋದ ಇಂದಿರಾ ಗಾಂಧಿ ಚಾಡಿ ಮಾತು ಕೇಳಿದರು. ಹೆಚ್ಚು ಕಡಿಮೆ ಎಂಟು ವರ್ಷಗಳ ಕಾಲ ಕರ್ನಾಟಕವನ್ನು ಆಳಿದ್ದ ದೇವರಾಜ ಅರಸರ ವಿರುದ್ಧ ಹಿಂದುಳಿದ ವರ್ಗದವರೇ ಆದ ಸಾರೆಕೊಪ್ಪದ ಬಂಗಾರಪ್ಪನವರನ್ನು ಎತ್ತಿ ಕಟ್ಟಿದರು. ನೋಡ ನೋಡುತ್ತಿದ್ದಂತೆಯೇ ದೇವರಾಜ ಅರಸರ ಸ್ವರ್ಣಯುಗ ಧಿಬಿಲ್ಲಂತ ಉರುಳಿ ಬಿತ್ತು. ಯಾರ‍್ಯಾರು ದೇವರಾಜ ಅರಸರಿಂದ ಮುಂದೆ ಬಂದರೋ, ಅವರ‍್ಯಾರೂ ಸಹಾಯಕ್ಕೆ ನಿಲ್ಲಲಿಲ್ಲ. ನಾಣಯ್ಯನವರ ಥರದ ಕೆಲ ಮಂದಿ ಮಾತ್ರ ಒಟ್ಟಿಗಿದ್ದರು. ಆದರೆ ಬಹುತೇಕ ಮಂದಿ ಕ್ಯಾಂಪು ಬದಲಿಸಿ, ಜೋರ್ ಸೇ ಬೋಲೋ, ಪ್ಯಾರ್ ಸೇ ಬೋಲೋ ಇಂದಿರಾ ಗಾಂಧಿ ಜಿಂದಾಬಾದ್ ಎಂದು ಕೂಗಿದ್ದೇ ಕ್ಯಾಂಪು ಬದಲಿಸಿಬಿಟ್ಟರು.


ಇವತ್ತಿಗೂ ಕರ್ನಾಟಕದ ರಾಜಕೀಯ ಇತಿಹಾಸವನ್ನು ನೋಡಿದರೆ ದೇವರಾಜ ಅರಸರಂತೆ ಕ್ರಾಂತಿಕಾರಿ ಧೋರಣೆಗಳನ್ನು ತೆಗೆದುಕೊಂಡ, ಅವರಷ್ಟು ಸುದೀರ್ಘ ವರ್ಷ ಆಡಳಿತ ನಡೆಸಿದವರು ಇಲ್ಲವೇ ಇಲ್ಲ. ಕೆ.ಸಿ. ರೆಡ್ಡಿಯವರಿಂದ ಹಿಡಿದು ಸಿದ್ದರಾಮಯ್ಯನವರ ತನಕ ಇಪ್ಪತ್ತೆರಡು ಮಂದಿ ವ್ಯಕ್ತಿಗಳು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ದೇವರಾಜ ಅರಸರಂತೆ ಸುಭದ್ರವಾಗಿ ಆಡಳಿತ ನಡೆಸಿದವರು ಕಡಿಮೆ. ಹೀಗಾಗಿ ಅರಸರ ಆಡಳಿತ ಕಂಡವರಿಗೆ ಇದು ಮುಗಿಯುವ ದರ್ಬಾರು ಅಲ್ಲ ಎಂಬ ಭಾವನೆ ಮೂಡಿದ್ದು ಸಹಜ. ರಾಮಕೃಷ್ಣ ಹೆಗಡೆ ಆ ದಾರಿಯಲ್ಲಿ ನಡೆದರಾದರೂ ವಿನಾಕಾರಣ ದೇವೆಗೌಡರನ್ನು ಮೈಮೇಲೆ ಎಳೆದುಕೊಂಡರು. ಸಣ್ಣ ಪುಟ್ಟದ್ದಕ್ಕೆಲ್ಲ ಕಿರಿಕಿರಿ ಮಾಡಿದರು. ಇದರಿಂದಾಗಿಯೇ ಅಧಿಕಾರದಿಂದ ಕೆಳಗಿಳಿಯುವ ವಾತಾವರಣವನ್ನು ಸೃಷ್ಟಿಸಿಕೊಂಡರು. ಅಂದ ಹಾಗೆ ರಾಮಕೃಷ್ಣ ಹೆಗಡೆಯವರನ್ನು ನೋಡಿದರೂ, ಇವರು ಸದ್ಯಕ್ಕೆ ಕೆಳಗಿಳಿಯುವ ಮುಖ್ಯಮಂತ್ರಿ ಅಲ್ಲ ಎಂಬ ಭಾವನೆ ಬರುತ್ತಿತ್ತು. ಕರ್ನಾಟಕದಲ್ಲಿ ಅವರಂತೆ ಎಲ್ಲ ಜಾತಿಗಳ ನಾಯಕರನ್ನು ಬೆಳೆಸಿದ ಮುಖ್ಯಮಂತ್ರಿಗಳು ವಿರಳ. ವೀರೇಂದ್ರ ಪಾಟೀಲರು ಇದ್ದರೂ ಲಿಂಗಾಯತ ಸಮುದಾಯ ತನ್ನ ನಾಯಕ ಎಂದು ರಾಮಕೃಷ್ಣ ಹೆಗಡೆ ಅವರನ್ನು ಗುರುತಿಸುತ್ತಿತ್ತು.

ಅಷ್ಟೇ ಏಕೆ? ಚುನಾವಣೆಗಳಲ್ಲಿ ಕೊನೆಯ ತನಕ ಹೆಗಡೆ ಅವರನ್ನು ಬೆಂಬಲಿಸಿತು. ಅವರ ಹಿಂದಿದ್ದ ಲಿಂಗಾಯತ ಸಮುದಾಯ ಬಿಜೆಪಿಯ ಜತೆ ಹೋಗಿದ್ದೇ ಹೆಗಡೆ ಅವರಿಂದಾಗಿ. ಅವರು ಲೋಕಶಕ್ತಿ ಕಟ್ಟಿ ಬಿಜೆಪಿಯ ಜತೆ ಕೈ ಜೋಡಿಸದೇ ಹೋಗಿದ್ದರೆ, ಸಂಯುಕ್ತ ಜನತಾದಳದ ಹೆಸರಿನಲ್ಲಿ ಬಿಜೆಪಿಯ ಗೆಳೆತನಕ್ಕೆ ಮುಂದಾಗದೇ ಇದ್ದಿದ್ದರೆ ಆ ಸಮುದಾಯ ನಿರಾಯಾಸವಾಗಿ ಬಿಜೆಪಿಯ ತೆಕ್ಕೆಗೆ ಹೋಗುತ್ತಿರಲಿಲ್ಲ. ಅಂತಹ ಹೆಗಡೆ ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ತಲೆ ದಂಡ ತೆರಬೇಕಾಯಿತು. ನೋಡ ನೋಡುತ್ತಿದ್ದಂತೆಯೇ ಅನೂಹ್ಯವಾಗಿ ಸಿ.ಎಂ. ಪದವಿಯಿಂದ ಅವರು ಕೆಳಗಿಳಿದರು. ಎಲ್ಲರಿಗೂ ಆ ಸಂದರ್ಭದಲ್ಲಿ ಕಾಡಿದ್ದು ಒಂದೇ ಪ್ರಶ್ನೆ. ಹೆಗಡೆ ಅಧಿಕಾರದಿಂದ ಕೆಳಗಿಳಿಯಲು ಹೇಗೆ ಸಾಧ್ಯ? ಆದರೆ ಅನೂಹ್ಯವಾಗಿದ್ದು ಊಹೆಗೆ ದಕ್ಕಿತು. ರಾಮಕೃಷ್ಣ ಹೆಗಡೆ ಅಧಿಕಾರದಿಂದ ಕೆಳಗಿಳಿದರು. ಮುಂದೆ ಅವರು ಯಾವತ್ತೂ ಕರ್ನಾಟಕದ ಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ.

ಈಗ ಸಿದ್ದರಾಮಯ್ಯನವರ ಸರದಿ. ಅವರೂ ಅಷ್ಟೇ. ಅಧಿಕಾರಕ್ಕೆ ಬಂದ ದಿನವೇ ಒಂದು ರುಪಾಯಿಗೆ ಒಂದು ಕೆಜಿಯಂತೆ ಅಕ್ಕಿ ಕೊಟ್ಟರು. ಅಹಿಂದ ವರ್ಗಗಳ ಸಾಲ ಮನ್ನಾ ಮಾಡಿದರು. ಇನ್ನೇನು ಅವರು ಕೊಡುತ್ತಿರುವ ಯೋಜನೆಗಳನ್ನು ನೋಡಿದರೆ ಇನ್ನು ಹತ್ತು ವರ್ಷಗಳ ಕಾಲ ಅವರನ್ನು ಕೆಳಗಿಳಿಸುವುದು ಕಷ್ಟ ಎಂಬ ಭಾವನೆ ಮೂಡಿತು. ಹೋದಲ್ಲಿ, ಬಂದಲ್ಲಿ ಜನ ಅವರನ್ನು ಅಭಿನವ ದೇವರಾಜ ಅರಸು ಎಂದು ಬಣ್ಣಿಸತೊಡಗಿದರು. ಆದರೆ ಸನ್ನಿವೇಶವನ್ನು ತಮಗೆ ಅನುಕೂಲವಾಗುವಂತೆ ಪರಿವರ್ತಿಸಿಕೊಳ್ಳಬೇಕಿದ್ದ ಸಿದ್ದರಾಮಯ್ಯ, ತಮಗೆ ಸಿಕ್ಕ ಶಕ್ತಿಯನ್ನು ಕೇಂದ್ರೀಕರಿಸಿಕೊಳ್ಳಲು ಬಯಸಿದರು. ಮುಖ್ಯಮಂತ್ರಿಯಾದವರು ಯಾವತ್ತೂ ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳಲು ಬಯಸಬಾರದು. ಬದಲಿಗೆ ತಮಗೆ ನಿಷ್ಠರಾದವರ ಪಡೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗಬೇಕು. ಆಗ ಅವರ ಶಕ್ತಿ ಹೆಚ್ಚುತ್ತಾ ಹೋಗುತ್ತದೆ. ಆದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯ ತನಕ ತಮ್ಮ ಗುಂಪನ್ನು ಬೆಳೆಸಿಕೊಳ್ಳುವ ಬದಲು ಜಾತಿಯ ನಾಯಕರಾಗಿ ಪರಿವರ್ತನೆಯಾಗಿ ಬಿಟ್ಟರು. ಕುರುಬರು ಬಿಟ್ಟರೆ ಬೇರೆ ಹಿಂದುಳಿದ ವರ್ಗಗಳೇ ಇಲ್ಲವೇನೋ ಎಂಬಂತೆ ವರ್ತಿಸತೊಡಗಿದರು. ಇದರ ಬದಲು ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರೆ, ಮಂತ್ರಿಗಳಾಗಿ ಒಳ್ಳೆಯ ಕೆಲಸ ಮಾಡಲು ಶಕ್ತರಾಗಿದ್ದವರನ್ನು ಜತೆಗಿಟ್ಟುಕೊಂಡಿದ್ದರೆ ಅವರ ಶಕ್ತಿ ಇನ್ನಷ್ಟು ಹೆಚ್ಚುತ್ತಿತ್ತು.
ಆದರೆ ಪರ್ಯಾಯ ಶಕ್ತಿ ಕೇಂದ್ರ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕಾಗಿ ಅವರು ಪರಮೇಶ್ವರ್‌ಗೆ ಅಡ್ಡಗಾಲು ಹಾಕಿದರು. ಇವತ್ತಲ್ಲ ನಾಳೆ ತಮಗೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕಾಗಿ ಡೀಕೇಶಿ ಮಂತ್ರಿಮಂಡಲಕ್ಕೆ ಸೇರ್ಪಡೆಯಾಗದಂತೆ ಮಾಡಲು ಹರಸಾಹಸ ಮಾಡಿದರು. ಇದೆಲ್ಲದರ ಪರಿಣಾಮ ಎಂದರೆ ದಿನ ಕಳೆದಂತೆ ಸಿದ್ದರಾಮಯ್ಯನವರ ಶಕ್ತಿ ಕಡಿಮೆಯಾಗುತ್ತಾ ಹೋಯಿತು. ಲೋಕಸಭಾ ಚುನಾವಣೆಯ ಹೊತ್ತಿಗಾಗಲೇ ಏನೆಲ್ಲ ಕಾರ್ಯಕ್ರಮಗಳನ್ನು ಕೊಟ್ಟರೂ ಕರ್ನಾಟಕದ ಪ್ರಮುಖ ಜಾತಿಗಳು ಕಾಂಗ್ರೆಸ್‌ನ ಕೈ ಬಿಟ್ಟವು. ಒಂದು ವೇಳೆ ಕಾಂಗ್ರೆಸ್‌ಗೆ ಹೆಚ್ಚು ಸೀಟು ಕೊಟ್ಟರೆ ಸಿದ್ದರಾಮಯ್ಯ ಗಟ್ಟಿಯಾಗಿ ಉಳಿಯುತ್ತಾರೆ. ಹೀಗಾಗಿ ಆ ಪಕ್ಷಕ್ಕೆ ಹೆಚ್ಚು ಸೀಟು ಕೊಡಬಾರದು ಎಂದು ತೀರ್ಮಾನಿಸಿದರು. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಒಂಬತ್ತು ಸೀಟುಗಳು ಮಾತ್ರ ಬಂದವು. ಪರಿಸ್ಥಿತಿಯನ್ನು ನೋಡಿ ಹೈಕಮಾಂಡ್ ಸಿದ್ದರಾಮಯ್ಯನವರ ಬದಲಾವಣೆಗೆ ಯೋಚಿಸಿದೆಯೇ? ಇದೇ ಮೊದಲ ಬಾರಿ ದಲಿತರೊಬ್ಬರನ್ನು ಮುಖ್ಯಮಂತ್ರಿ ಹುದ್ದೆಗೆ ತರಲು ಯೋಚಿಸಿದೆಯೇ? ಈಗಾಗಲೇ ಲೋಕಸಭೆಯಲ್ಲಿ ತಮ್ಮ ವಾಗ್ವೈಖರಿಯಿಂದ ಮೆಚ್ಚುಗೆ ಗಳಿಸಿರುವ, ಒಂಬತ್ತು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿರುವ, ಎರಡು ಬಾರಿ ಸಂಸತ್ತಿಗೆ ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲು ಹೈಕಮಾಂಡ್ ಯೋಚಿಸಿದೆಯೇ? ಹಾಗೆಂಬ ಭಾವನೆ ವ್ಯಾಪಕವಾಗುತ್ತಿದೆ.

ಹೇಗಿದ್ದರೂ ಕರ್ನಾಟಕ ದಲಿತ ಮುಖ್ಯಮಂತ್ರಿಯನ್ನು ಕಂಡಿಲ್ಲ. ಉಪಮುಖ್ಯಮಂತ್ರಿಯನ್ನು ಕಾಣಲು ಇದುವರೆಗೂ ಸಿದ್ದರಾಮಯ್ಯನವರೇ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ದಲಿತರಿಗೆ ತಮ್ಮ ಸೀಟನ್ನೇ ಬಿಟ್ಟುಕೊಡಬೇಕಾದ ಅನಿವಾರ್ಯತೆಗೆ ಅವರು ಸಿಲುಕಬಹುದು. ಸದ್ಯದ ಪರಿಸ್ಥಿತಿ ನೋಡಿದರೆ ಹಾಗನ್ನಿಸುತ್ತದೆ. ಮೊನ್ನೆ ಮೊನ್ನೆಯ ತನಕ, ಐದು ವರ್ಷಗಳ ಕಾಲ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ವರಸೆ ಬದಲಿಸಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಕಾಲ ನಾನು ಸಿಎಂ ಹುದ್ದೆಯಲ್ಲಿ ಇರುತ್ತೇನೋ, ಇಲ್ಲವೋ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಅವಧಿ ಪೂರೈಸಲಿದೆ ಎಂದಿದ್ದಾರೆ. ಅವರ ಮಾತನ್ನೇ ನಂಬುವುದಾದರೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಓರ್ವ ದಲಿತ ನಾಯಕ ರಾಜ್ಯದ ಸಾರಥ್ಯ ವಹಿಸುವ ಲಕ್ಷಣಗಳು ದಟ್ಟವಾಗುತ್ತಿವೆ. ರಾಜಕಾರಣದಲ್ಲಿ ಇವೆಲ್ಲ ಸಹಜ. ಯಾರೂ ಕೂಡಾ ಖಾಯಂ ಆಗಿ ಒಂದು ಜಾಗದಲ್ಲಿ ಕೂರಲು ಸಾಧ್ಯವಿಲ್ಲ. ಇದು ಗೊತ್ತಿದ್ದರೂ ತಮ್ಮ ಮಾತಿನಂತೆಯೇ ನಡೆಯಬೇಕು ಎಂದು ಸಿದ್ದರಾಮಯ್ಯ ಬಯಸಿದರು. ಅದಕ್ಕಾಗಿ ಅವರು ಬೆಲೆ ತೆರುವ ಕಾಲ ಹತ್ತಿರವಾದಂತಿದೆ. ನೋಡೋಣ, ಏನಾಗುತ್ತದೋ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 July, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books