Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ದಾಂಪತ್ಯವನ್ನು ಉಳಿಸುವುದು ಸಹನೆ ಮತ್ತು ಪ್ರೀತಿ ಮಾತ್ರ!

ಉಜ್ಜದೆ ಇದ್ದರೆ ನಮ್ಮದೇ ಬಾಯೊಳಗಿನ ಹಲ್ಲುಗಳು ಕೊಳೆತು ಹೋಗುತ್ತವೆ. ಅಂಥದರಲ್ಲಿ ಸಂಬಂಧಗಳು ಸತ್ತು ಕೊಳೆತು ಹೋದರೆ ಏನಾಶ್ಚರ್ಯ?
ಹಾಗಂತ ನನಗೆ ನಾನೇ ಕೇಳಿಕೊಂಡದ್ದು, ಅವರಿಬ್ಬರೂ ಬಂದು ನನ್ನ ಮನೆಯ ವರಾಂಡದಲ್ಲಿ ಕುಳಿತಿದ್ದಾಗ, ಅಲ್ಲಿ ಮೂರು ಛೇರುಗಳಿದ್ದವು. ಅವರಿಬ್ಬರು ಎರಡು ಛೇರುಗಳಲ್ಲಿ ಕುಳಿತಿದ್ದರು. ಎದುರಿನ ಕುರ್ಚಿಯಲ್ಲಿ ನಾನು. ಅವರೆದುರಿಗಿದ್ದ ಟೀಪಾಯಿಯ ಮೇಲೆ ನನ್ನ ಹೆಂಡತಿ ತಂದಿಟ್ಟುಹೋದ ಚಹ ಅಲ್ಲೇ ಆರಿ ತಣ್ಣಗಾಗುತ್ತಿತ್ತು. ಚಹ ಮುಗಿಸಿ ಸಿಗರೇಟು ಹಚ್ಚಿದೆ. ಅವರಿಬ್ಬರು ಮಾತನಾಡುವ ಮೂಡ್‌ನಲ್ಲಿ ಇರಲಿಲ್ಲ.
“ಕಡೆಗೆ ಏನು ಡಿಸೈಡ್ ಮಾಡಿದಿರಿ?" ಅಂದೆ.
“We will split . ಡೈವೋರ್ಸ್ ತಗೊಂಡುಬಿಡ್ತೀವಿ" ಅಂದಳು ಹುಡುಗಿ. ಅವನ ಕಣ್ಣುಗಳಲ್ಲಿ ಚಿಕ್ಕದೊಂದು ತೆರೆ ನೀರಿತ್ತು.
ಅವರಿಬ್ಬರೂ ನನಗಿಂತ ಚಿಕ್ಕವರು. ಇಬ್ಬರಿಗೂ ಆರೋಗ್ಯವಿದೆ. ಸಂಪಾದನೆ ಇದೆ. ಮದುವೆಯಾಗಿ ಈಗಷ್ಟೇ ಮೂರನೆಯ ಆನಿವರ್ಸರಿ. ಇನ್ನೂ ಮಕ್ಕಳಾಗಿಲ್ಲ. ಬಹುಶಃ ಪ್ಲಾನ್ ಮಾಡುತ್ತಿರಬೇಕು. ಅಷ್ಟರಲ್ಲಿ ಮಾತು ಡೈವೋರ್ಸಿನ ತನಕ ಬಂದಿದೆ.
“ಇನ್ನೊಂದೇ ಒಂದು ದಿನವೂ ಜೊತೆಗಿರೋಕಾಗಲ್ಲ ಅಂತ ಅನ್ನಿಸ್ತಿದೆಯಾ?" ಕೇಳಿದೆ.
“ಹಾಗೇನಿಲ್ಲ... ಸುಮ್ನೆ ಒಬ್ಬರನ್ನೊಬ್ಬರು hurt ಮಾಡಿಕೊಳ್ತಿವೇನೋ ಅಂತ..." ಅಂದಳು ಹುಡುಗಿ.
“ಹಾಗಾದರೆ ಒಂದು ಕೆಲಸ ಮಾಡಿ, ಇವತ್ತೇ ಇಬ್ಬರೂ ಒಂದು ಒಪ್ಪಂದಕ್ಕೆ ಬಂದು split ಆಗಿಬಿಡಿ. ನಿನ್ನ ಪಾಡಿಗೆ ನೀನು. ಅವನ ಪಾಡಿಗೆ ಅವನು. ಇಬ್ಬರೂ ಬೇರೆಬೇರೆಯಾಗಿ ಬದುಕೋಕೆ ಶುರುಮಾಡಿ. ಆರು ತಿಂಗಳ ಮಟ್ಟಿಗೆ ಕೋರ್ಟು, ಡಿವೋರ್ಸು ಅಂತ ಮಾತಾಡಬೇಡಿ. ಸುಮ್ನೆ ಇದ್ದುಬಿಡಿ. ಮಾತಾಡಲೇಬೇಕು ಅನ್ನಿಸಿದಾಗ ಮಾತಾಡಿ. ಭೇಟಿಯಾಗಬೇಕು ಅನ್ನಿಸಿದರೆ ಭೇಟಿಯಾಗಿ. ಆರು ತಿಂಗಳ ಟೈಮ್ ಇಟ್ಟುಕೊಳ್ಳಿ. ಈ ಆರು ತಿಂಗಳಲ್ಲಿ ಪ್ರತೀ ತಿಂಗಳ ಮೊದಲ ಭಾನುವಾರ ನಮ್ಮ ಮನೆಗೆ ಬಂದು ನಮ್ಮ ಜೊತೆ ಊಟ ಮಾಡಿಕೊಂಡು ಹೋಗಿ" ಅಂದೆ.

ಅವರಿಬ್ಬರು ಒಪ್ಪಿಕೊಂಡು ಎದ್ದು ಹೋದರು. ಸಮಸ್ಯೆ ಬಗೆಹರಿಯಬಹುದು ಅಂತ ಚಿಕ್ಕದೊಂದು ಆಸೆ ನನ್ನಲ್ಲಿ ಮೊಳೆತಿತ್ತು. ಅಂಥದೊಂದು ವಿಶ್ವಾಸ ನನಗೆ ಅವರಿಬ್ಬರ ಬಗ್ಗೆಯೂ ಇತ್ತು. ಅವಳು ಕೆಟ್ಟವಳಲ್ಲ. ಕೊಂಚ ಸಿಟ್ಟು ಜಾಸ್ತಿ, ಸಂಗೀತ, ಸಾಹಿತ್ಯ, ಹಾಸ್ಯ, ಅಭಿರುಚಿಗಳು-ಎಲ್ಲವೂ ಮೆಚ್ಚುಗೆಯಾಗುವಷ್ಟಿದ್ದವು. ಆದರೆ ಸ್ವಭಾವತಃ ಕೊಂಚ ಅತೀ ಭಾವುಕ ಹುಡುಗಿ. ಅವನು ಹಾಗಲ್ಲ. ಸರ್ಕಾರಿ ಕಛೇರಿಯೊಂದರಲ್ಲಿ ಲೆಕ್ಕಪತ್ರ ವಿಭಾಗದ ಅಧಿಕಾರಿ. ತುಂಬ ಆರೋಗ್ಯವಂತ. ಅಷ್ಟೇ ಪ್ರಾಮಾಣಿಕ. ಮಾತು ಮತ್ತು ಹಣ ಎರಡನ್ನೂ ಅಳೆದೂ ತೂಗಿ ಖರ್ಚು ಮಾಡುವ ಮನುಷ್ಯ. ಅವರು ಪ್ರೀತಿಸಿ ಮದುವೆಯಾಗಿರಲಿಲ್ಲ. ಆದರೆ ಮದುವೆಯಾದ ಮೇಲೆ ತುಂಬ ಪ್ರೀತಿಸಿದ್ದರು. ಬೆಳಿಗ್ಗೆ ಒಟ್ಟಿಗೆ ವಾಕ್ ಹೋಗೋದು, ರಜೆಗಳಲ್ಲಿ ಪ್ರವಾಸ-ಟ್ರೆಕ್ಕಿಂಗು, ಒಟ್ಟಿಗೆ ಒಂದಿಷ್ಟು ದೇವಸ್ಥಾನಗಳಿಗೆ ಹೋಗೋದು-ಅಂಥದ್ದನ್ನೆಲ್ಲ ರೂಢಿ ಮಾಡಿಕೊಂಡಿದ್ದರು. ಇಬ್ಬರಿಗೂ ನೌಕರಿಗಳಿದ್ದವು. ಪ್ರೀತಿಯ ಜೊತೆಗೆ ಸ್ವಾತಂತ್ರ್ಯವೂ ಇತ್ತು. ಮನೆಯಲ್ಲಿ ಕಂಪ್ಯೂಟರ್ ಇಟ್ಟುಕೊಂಡಿದ್ದರು. ಮನೆಯನ್ನು ಹೇಗಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಅವರಿಬ್ಬರಿಗೂ ಒಳ್ಳೆಯ ಟೇಸ್ಟಿತ್ತು.


ಅಂಥದ್ದರಲ್ಲಿ ಅವರಿಬ್ಬರ ದಾಂಪತ್ಯ ಡೈವೋರ್ಸಿನ ತನಕ ಬಂದಿದ್ದಾದರೂ ಹೇಗೆ? ತುಂಬ ಹೊತ್ತು ಯೋಚಿಸಿದೆ. ಹಾಗೆ ನೋಡಿದರೆ, ನಾನು ಮತ್ತು ಲಲಿತೆ ಒಟ್ಟಿಗೆ ಜೀವಿಸತೊಡಗಿ ಕಳೆದ ಮೇ ೨೩, ೨೦೧೪ಕ್ಕೆ ೩೫ ವರ್ಷಗಳಾಗಿವೆ. ಮದುವೆಗೆ ಮುಂಚೆ ನಾವು ನಾಲ್ಕು ವರ್ಷದ ಸ್ನೇಹಿತರು. ಈ ಮೂವತ್ತೊಂಬತ್ತು ವರ್ಷಗಳಲ್ಲಿ ನಮ್ಮಿಬ್ಬರ ಮಧ್ಯೆ ಏನೆಲ್ಲ ಆಗಿದೆ. ಬಡತನ, ಅಪಘಾತ, ನಿರುದ್ಯೋಗ, ಸಾವುಗಳು, ಸಮಸ್ಯೆಗಳು, ವೈರುಧ್ಯಗಳು -ಎಲ್ಲ ಬಂದಿವೆ. ಹೋಗಿವೆ. ಎಷ್ಟೋ ವಿಷಯಗಳಲ್ಲಿ ನಾವು ತುಂಬ ಬೇರೆ ಬೇರೆ. ಅವಳಿಗೆ ಸಿಗರೇಟು ಅಸಹ್ಯ. ಕುಡಿತ ಅಸಹನೀಯ, ನನ್ನ ಪ್ರೊಫೆಶನಲ್ ಹುಚ್ಚಾಟಗಳು, ವಿಲಕ್ಷಣ ಸಾಹಸಗಳು, ದಿನಗಟ್ಟಲೇ ಕೈಗೆ ಸಿಗದಂತಾಗಿಬಿಡುವಿಕೆ, ವಿಪರೀತ ಭಾವುಕತೆ, ಕೆಲವು ಅಕ್ಷಮ್ಯ ಬೇಜವಾಬ್ದಾರಿತನಗಳು, ಗಾಬರಿಯಾಗುವಂಥ ‘ಮೂಡಿ’ ನಡವಳಿಕೆ- ಇವನ್ನೆಲ್ಲ ಲಲಿತೆ ಕಾಲು ಶತಮಾನಕ್ಕೂ ಮೀರಿ ಸಹಿಸಿಕೊಂಡಿದ್ದಾಳೆ. ಅಂತೆಯೇ ಅವಳ ಬಗ್ಗೆ ನನಗೂ ಚಿಕ್ಕಪುಟ್ಟ ದೂರುಗಳಿವೆ. ಅವಳೀಗ ಮೊದಲಿನಂತೆ ಹಳೇ ಹಿಂದಿ ಹಾಡುಗಳನ್ನು ಕೇಳಿ ಕಣ್ಣರಳಿಸುವುದಿಲ್ಲ. ಅವಳಿಗೆ ಅವಳದೇ ಲೋಕ. ಮಕ್ಕಳು, ಮೊಮ್ಮಕ್ಕಳಾದ ಮೇಲೆ ನನ್ನನ್ನು ಮೊದಲಿನಂತೆ ಪ್ರೀತಿಸುತ್ತಿಲ್ಲ. ನಮ್ಮಿಬ್ಬರ ಮಧ್ಯೆ ಇದೆಲ್ಲಿಂದ ಬಂದ ದೇವರು ಎಂಬ ಶನಿ? ಬೆಳಗ್ಗೆ ವಾಕ್ ಮಾಡುವುದಿಲ್ಲ. ಏನಾದರೂ ಓದು ಅಂದರೆ ನೆಪಗಳ ಸಾಲು, ಕಂಪ್ಯೂಟರನ್ನು ಅವಳೇಕೆ ಅಷ್ಟು ದ್ವೇಷಿಸಬೇಕು ಮತ್ತು ನನಗಿಷ್ಟವಿಲ್ಲದ ಉಪ್ಪಿಟ್ಟನ್ನು ಅವಳೇಕೆ ಅಷ್ಟು ಪ್ರೀತಿಸಬೇಕು?

ಇಂಥವೆಲ್ಲ ತಕರಾರುಗಳಿದ್ದಾಗ್ಯೂ ಈ ಮೂವತ್ತೈದು ವರ್ಷಗಳಲ್ಲಿ ನಾವಿಬ್ಬರೂ ಒಬ್ಬರ ಮೇಲೊಬ್ಬರು ದೊಡ್ಡ ದನಿಯಲ್ಲಿ ಕೂಗಾಡಿಲ್ಲ. ಒಬ್ಬರನ್ನೊಬ್ಬರು ‘ಯಾಕಾದರೂ ಕಟ್ಟಿಕೊಂಡೆನೋ’ ಅಂತ ದೂಷಿಸಿಲ್ಲ. ಪರಸ್ಪರರನ್ನು ಅನುಮಾನಿಸಿಲ್ಲ. ಮದುವೆಯ ಬಂಧ ಬಿಡಿಸಿಕೊಳ್ಳುವ ಯೋಚನೆ ಮಾಡಿ ‘get out' ಅಂತ ಅರಚಿಕೊಂಡಿಲ್ಲ. ಹಾಗಂತ ನಾವು ಆದರ್ಶ ದಂಪತಿಗಳಾ? ಖಂಡಿತಾ ಅಲ್ಲ. ನಮ್ಮ ಮನೆಯ ದೋಸೆಗೂ ತೂತು ಬಿದ್ದಿದೆ. ಅದು ಎಷ್ಟೋ ಸಲ ಸೀದು ಕರಕಲಾಗಿದೆ. ಕಾವಲಿಗೇ ಅಂಟಿಕೊಂಡುಬಿಟ್ಟಿದೆ. ಮೇಲೇಳದೆ ಮಗಚುವ ಕೈಗೆ ಮೆತ್ತಿಕೊಂಡಿದೆ. ಆದರೆ ನಮ್ಮ ಮನೆಯ ಒಲೆ ಯಾವತ್ತೂ ಆರಿಲ್ಲ.

ಮದುವೆಯಾದಾಗ ನಾನು ಶುದ್ಧ ನಿರುದ್ಯೋಗಿ. ಮನೆಯಲ್ಲಿ ಅಮ್ಮ ಖಾಯಿಲೆ ಮಲಗಿದ್ದಳು. ನೆಂಟರಿಷ್ಟರ‍್ಯಾರೂ ಬೆಂಬಲಕ್ಕಿರಲಿಲ್ಲ. ನನ್ನ ಮತ್ತು ಲಲಿತೆಯ ವಯಸ್ಸುಗಳಲ್ಲೂ ಅಂತರವಿತ್ತು. “ಎಲ್ಲ ಬಿಟ್ಟು ಇವನ್ಯಾಕಮ್ಮಾ ಮಾಡಿಕೊಳ್ತಿದೀಯಾ?" ಎಂಬಂತೆ ಮಾತನಾಡಿದವರೇ ಜಾಸ್ತಿ. ಇದೆಲ್ಲಕ್ಕಿಂತ ಹೆಚ್ಚಾಗಿ, ಒಳ್ಳೆಯ ಭವಿತವ್ಯವಿದ್ದ ಸರ್ಕಾರಿ ಆಧಿಕಾರಿಯೊಬ್ಬರು ಲಲಿತಳನ್ನು ಮದುವೆಯಾಗುವ ಸಾಧ್ಯತೆಯಿತ್ತು. ಆದರೆ ಅವಳು ಯಾರ ಮಾತನ್ನೂ ಕೇಳಲಿಲ್ಲ. ಯಾವ ಬೇರೆ ಯೋಚನೆಯನ್ನೂ ಮಾಡಲಿಲ್ಲ. ಮದುವೆ ಅಂತ ಆಗುವುದಾದರೆ ರವಿಯೊಂದಿಗೇ ಅಂತ ನಿರ್ಧರಿಸಿದಳು. ‘ಏಕಮೇವಂ ಆದಿತ್ಯಮ್’ ಎಂಬ ತೀರ್ಮಾನ.
ಆ ತೀರ್ಮಾನದಲ್ಲಿ ಅಂಥ ಬಲವಿತ್ತಾ? ಮದುವೆಯ ನಂತರ ಮಾಡಿಕೊಂಡ ಒಪ್ಪಂದಗಳಲ್ಲಿ ಅಂಥಾ ಕಸುವಿತ್ತಾ? ಇಬ್ಬರ ಒಲವುಗಳಿಗೂ ನಮ್ಮ ದಾಂಪತ್ಯವನ್ನು ಕಾಪಾಡಿಕೊಳ್ಳುವ ಶಕ್ತಿಯಿತ್ತಾ? ಅಥವಾ ಮದುವೆ ಅಂತ ಆದಮೇಲೆ ಅದನ್ನು ಶತಾಯಗತಾಯ ಉಳಿಸಿಕೊಳ್ಳಬೇಕು ಎಂಬ ನಮ್ಮ ತೀರ್ಮಾನಕ್ಕೆ ನಾವು ಎಂಥ ಸಂದರ್ಭದಲ್ಲೂ ವಂಚನೆ ಮಾಡದೆ ನಿಂತುಕೊಂಡೆವಾ?
ಗೊತ್ತಿಲ್ಲ. ಇವತ್ತು ನಮ್ಮ ಮದುವೆಯ ಚಪ್ಪರಕ್ಕೆ ಮೂವತ್ತೈದು ವರ್ಷ. ಅದೇನೂ ದೊಡ್ಡ ಹೆಗ್ಗಳಿಕೆಯಲ್ಲ. ಮದುವೆಯ ಐವತ್ತನೆಯ ಆನಿವರ್ಸರಿ ಮಾಡಿಕೊಂಡವರು ಒಟ್ಟಿಗೇ ಅರವತ್ತು ವರ್ಷ ಬದುಕಿ ಅರ್ಧ ಗಂಟೆಯ ಹಿಂಚುಮುಂಚಿನಲ್ಲಿ ತೀರಿಕೊಂಡವರು, ದಾಂಪತ್ಯ ಅಂದರೆ ಹೀಗಿರಬೇಕು ನೋಡು ಅಂತ ಎಲ್ಲರಿಂದಲೂ ಅನ್ನಿಸಿಕೊಂಡವರು ಲಕ್ಷಾಂತರ ಜನರಿದ್ದಾರೆ. ಅವರೆಲ್ಲರನ್ನೂ ಮಾತನಾಡಿಸಿ ಕೇಳಿ ನೋಡಿ?

‘ನಿಮ್ಮ ಸಂಸಾರಲ್ಲಿ ಅಪಸ್ವರಗಳಿರಲಿಲ್ಲವೆ? ಅಸಮಾಧಾನಗಳಿರಲಿಲ್ಲವೆ? ಒಬ್ಬರ ಮೇಲೊಬ್ಬರು ರೋಸಿಕೊಂಡಿರಲಿಲ್ಲವೇ?’ ಅಂತ.
ಖಂಡಿತವಾಗ್ಯೂ ಅವೆಲ್ಲ ನಮ್ಮಿಬ್ಬರ ನಡುವೆಯೂ ಆಗಿದ್ದವು ಎಂಬ ಉತ್ತರ ಬರುತ್ತದೆ. ಒಂದು ದಾಂಪತ್ಯದ ಅನೇಕ ಅಪಸ್ವರ, ಅಪನಂಬಿಕೆ, ಅನುಮಾನ, ಅಸಹನೆ, ಕಿರಿಕಿರಿ, ದೌರ್ಜನ್ಯ, ನಿರಾಸೆ, ತಿರಸ್ಕಾರ, ಸಣ್ಣಮಟ್ಟದ ವಂಚನೆ, ವಿಶ್ವಾಸಘಾತ-ಎಲ್ಲವನ್ನೂ ಸಹಿಸಿಕೊಂಡು ಕೂಡ ಅದು ಹೇಗೋ survive ಆಗಿರುತ್ತದೆ. ಅವೆಲ್ಲ ಅವಗಢಗಳೂ ಏಕಾದವು ಎಂದು ಹುಡುಕಲು ಹೋದರೆ ಎಲ್ಲದಕ್ಕೂ ಒಂದಲ್ಲ ಒಂದು ಕಾರಣ ಸಿಗುತ್ತದೆ. ‘ನೀನು-ನೀನು’ ಎಂದು ಆರೋಪಗಳನ್ನು ಒಬ್ಬರ ಮೇಲೊಬ್ಬರು ಎರಚಾಡಿಕೊಳ್ಳುತ್ತೇವೆ. ಇಷ್ಟೆಲ್ಲ ಆರೋಪ-ಪ್ರತ್ಯಾರೋಪಗಳಿದ್ದರೂ ನೀವೇಕೆ ಒಬ್ಬರಿಗೊಬ್ಬರು ಡೈವೋರ್ಸು ಕೊಡದೆ ಇಷ್ಟು ವರ್ಷ ಒಟ್ಟಿಗಿದ್ದೀರಿ ಅಂತ ಕೇಳಿದರೆ, ಅದಕ್ಕೆ ಇಂಥದ್ದೇ ಅಂತ ನಿರ್ದಿಷ್ಟವಾದ ಕಾರಣ ಸಿಗುವುದಿಲ್ಲ.

ಅಂತ ದಾಂಪತ್ಯಗಳನ್ನು ಉಳಿಸುವುದು ಸಹನೆ ಮತ್ತು ಪ್ರೀತಿ ಮಾತ್ರ. ಅವತ್ತು ನಮ್ಮ ಮನೆಗೆ ಬಂದು ಚಹ ಕುಡಿದು, ಡೈವೋರ್ಸಿನ ಮಾತನಾಡಿದ ಅವರಿಬ್ಬರಲ್ಲಿ ನನಗೆ ಕಾಣಿಸಿದ್ದು ಅದೇ; ಪ್ರೀತಿ ಮತ್ತು ಸಹನೆಯ ಕೊರತೆ.
ಅಲ್ಲಿ ಕೆಲವು ಅಸಹನೆಗಳಿದ್ದವು. ಅವನಿಗೆ ಸಂಗೀತ ಸಾಹಿತ್ಯಗಳಲ್ಲಿ ಅಂಥ ಆಸಕ್ತಿಯಿರಲಿಲ್ಲ. ಇವಳಿಗೆ ವಿಪರೀತ ಆಸಕ್ತಿ. ಹಾಗಂತ ಇವಳು ದೊಡ್ಡ ಸಂಗೀತಗಾರಳೇನಲ್ಲ. ‘ಅಬ್ಬ’ ಅನ್ನಿಸುವಂತಹ ಸಾಹಿತ್ಯದ ವಿದ್ಯಾರ್ಥಿನಿಯೂ ಅಲ್ಲ. ಹತ್ತಿಪ್ಪತ್ತು ಕಾದಂಬರಿ ಓದಿಕೊಂಡಿದ್ದಳು. ಒಂದಷ್ಟು ಪತ್ರಿಕೆಗಳನ್ನು ಓದುತ್ತಿದ್ದಳು. ಭಾವಗೀತೆ, ಸಿನೆಮಾ ಹಾಡು, ಗಝಲು ಇತ್ಯಾದಿಗಳನ್ನು ಉಳಿದೆಲ್ಲರೂ ಕೇಳಿಸಿಕೊಂಡಂತೆಯೇ ಇವಳೂ ಕೇಳಿಸಿಕೊಂಡಿದ್ದಳು. ಇವಳ ತಕರಾರೆಂದರೆ, ತನ್ನ ಗಂಡನಿಗೆ ಸಾಹಿತ್ಯದ ಬಗ್ಗೆ ಚರ್ಚೆ ಮಾಡುವ ಆಸಕ್ತಿಯಿಲ್ಲ. ತಾನು ಕೇಳಿದಷ್ಟು ತಲ್ಲೀನನಾಗಿ ಅವನು ಸಂಗೀತ ಕೇಳುವುದಿಲ್ಲ! ಅವರಿಬ್ಬರ ನಡುವಿನ ತಕರಾರಿನ ಮೂಲವೇ ಅದು.
ಅರೆ, ಸಾಹಿತ್ಯ-ಸಂಗೀತದ ಕುರಿತು ಚರ್ಚೆ ಮಾಡಲಾಗದ ಒಬ್ಬ ಮನುಷ್ಯ ಸಂಸಾರಕ್ಕೆ, ದಾಂಪತ್ಯಕ್ಕೇ ಅನರ್ಹನಾಗಿಬಿಡುತ್ತಾನಾ? ಹಾಗಾದರೆ, ತುಂಬ ರುಚಿಯಾಗಿ ಅಡುಗೆ ಮಾಡದವಳನ್ನು, ಹಾಡು ಬಾರದವಳನ್ನ, ಫ್ಯಾಶನಬಲ್ ಆಗಿ ಇರಲಾಗದವಳನ್ನ ಡೈವೊರ್ಸ್ ಮಾಡಿಬಿಡಲಾದೀತೇ?

“ಉಹುಂ, ಅದಲ್ಲ. ನಂಗೆ ವಿಷ್ಣು ಜೊತೆ ಹಾಡಿನ ಬಗ್ಗೆ, ಕಾವ್ಯದ ಬಗ್ಗೆ, ಕಾದಂಬರಿಗಳ ಬಗ್ಗೆ ಚರ್ಚೆ ಮಾಡಬೇಕು ಅನ್ಸುತ್ತೆ. ನನ್ನ ಹೊಸ ಫ್ರೆಂಡ್ ಅವನು. ಎಷ್ಟು ಇಂಟರೆಸ್ಟಿಂಗ್ ಆಗಿ ಮಾತಾಡ್ತಾನೆ ಗೊತ್ತಾ? ಅವನಿಗೆ ಎಷ್ಟೊಂದು ಸಾಹಿತ್ಯ ಗೊತ್ತು. ಸಂಗೀತವನ್ನ ಅನಲೈಸ್ ಮಾಡ್ತ enjoy ಮಾಡೋದು ಗೊತ್ತು. ಅವನ ಜೊತೆ ಮಾತಾಡಿ ಬಂದ ಮೇಲೆ ನನ್ನ ಗಂಡ ತುಂಬ uninteresting ಅನ್ನಿಸಿಬಿಡ್ತಾನೆ’ ಅಂದಳು ಆಕೆ.

ವಿಷ್ಣುವಿನೊಂದಿಗಿನ ಸ್ನೇಹಕ್ಕೆ ಸಂಗೀತ, ಸಾಹಿತ್ಯ ನೆಪವಾಗಿದೆ. ಅದು ಈಗಷ್ಟೇ ಆರಂಭವಾಗಿರುವ ಹೊಸ ಸೆಳೆತ. ಮದುವೆಯಾದ ಮೇಲೆ ಹೀಗೆ ಆರಂಭವಾಗುವ ಸೆಳೆತಗಳಿಗೆ ಹುಚ್ಚು ಶಕ್ತಿಯಿರುತ್ತದೆ. ಅನೇಕ ಸಲ ಅವು ವಿವಾಹಿತರನ್ನು ತುಂಬ foolish ಆಗಿ ವರ್ತಿಸುವಂತೆ ಮಾಡಿಬಿಡುತ್ತವೆ. ತೀರ ಗಂಡ, ಮಕ್ಕಳು, ಮನೆ ಎಲ್ಲ ಬಿಟ್ಟು ಹೊರಟುಬಿಡುವಂತೆ ಮಾಡುತ್ತವೆ. (ನೆನಪಿರಲಿ, ಗಂಡಸರಿಗೂ ಇವೆಲ್ಲ ಆಗುತ್ತವೆ) ಸರಿಯಾಗಿ ಹುಡುಕಿ ನೋಡಿದರೆ, ಇಂಥದೊಂದು ಸೆಳೆತಕ್ಕೆ ಸಂಗೀತ ಅಥವಾ ಸಾಹಿತ್ಯಗಳು ಮೂಲ ಕಾರಣವಾಗಿರುವುದಿಲ್ಲ. ಅವು ಕೇವಲ ನೆಪಗಳಾಗಿರುತ್ತವೆ. ಹಾಗಂತ, ಆ ಹುಡುಗಿ ವಿಷ್ಣು ವಿನೊಂದಿಗೆ ಅನೈತಿಕ ಸಂಬಂಧವಿರಿಸಿಕೊಳ್ಳಲು ಹಾತೊರೆಯುತ್ತಿದ್ದಳಾ ಅಂತ ನೋಡಿದರೆ, ಅದೂ ಅಲ್ಲಿ ದೊಡ್ಡ ಪಾತ್ರ ವಹಿಸಿರುವುದಿಲ್ಲ. ಅವರಿಬ್ಬರ ಮಧ್ಯೆ ದೈಹಿಕ ಸಂಬಂಧ ಉಂಟಾಗಿದ್ದರೂ, ಅವಳ-ವಿಷ್ಣುವಿನ ನಡುವೆ ಅದೇ ಮುಖ್ಯವಾದ topic ಅಲ್ಲ.
ಹಾಗಾದರೆ ಅವರಿಬ್ಬರ ನಡುವೆ ಇರುವುದೇನು?

ನಿಮಗೆ ಆಶ್ಚರ್ಯವಾಗಬಹುದು. ಅವರಿಬ್ಬರ ನಡುವೆ ಅಂಥದೊಂದು ಸಂಬಂಧ ಬೆಳೆಯಲಿಕ್ಕೆ ಕಾರಣ, ಅವಳ ಐಡೆಂಟಿಟಿ ಕ್ರೈಸಿಸ್! ಯಾರಾದರೂ ನನ್ನನ್ನು ಗುರುತಿಸಲಿ, ಹೊಗಳಲಿ, ಅಭಿನಂದಿಸಲಿ ಎಂಬ ಹಂಬಲಿಕೆ. ಅವಳ ಗಂಡ ಅವಳ ದೇಹ, ಸೌಂದರ್ಯ, ಅವಳು ಕೊಡುವ ಸುಖ, ಮಾಡುವ ಅಡುಗೆ ಮುಂತಾದವುಗಳನ್ನು ಹೊಗಳುತ್ತಾನೆ. ಆದರೆ ಅವಳು ಸಂಭ್ರಮಿಸುವ ಗಝಲನ್ನು ಕೇಳಿ, ತಾನೂ ಸಂಭ್ರಮಿಸಿ, ಅದನ್ನು ಇಷ್ಟಪಡುವ ಅವಳ ಮಹಾನ್ ಅಭಿರುಚಿಯನ್ನು ಅಭಿನಂದಿಸಲು ಅವನಿಗೆ ಬರುವುದಿಲ್ಲ. ಪದ್ಯವು ನರಸಿಂಹಸ್ವಾಮಿಯದೇ ಇರಬಹುದು. ಆದರೆ ಅದನ್ನು ಅವಳು ಓದಿ, ಅನಂದಿಸಿದ ರೀತಿಯನ್ನು ‘ವಾಹ್!’ ಅಂತ ಅಭಿನಂದಿಸಲು ಅವನಿಗೆ ಬಾರದು. ಅವಳು ಆಡುವ ಮಾತು, ಮಾಡುವ ಉದ್ಗಾರ, ಹಾಡಿಗೆ ತಲೆದೂಗುವ ಪರಿ ಇವು ಇವನ ಪ್ರಪಂಚಕ್ಕೆ ಅಪರಿಚಿತ. ಇವರ ದಾಂಪತ್ಯ ಶಿಥಿಲಗೊಳ್ಳಲು ಇದಕ್ಕಿಂತ ದೊಡ್ಡದಾದ ಯಾವುದೇ ಕಾರಣವಿರಲಿಲ್ಲ.

ಹೋಗಲಿ, ವಿಷ್ಣು ಹೇಗಿದ್ದಾನೋ ನೋಡೋಣ ಅಂತ ಅವನನ್ನು ಕರೆಸಿ ನೋಡಿದೆ. ಗೋಡೆಗೆ ಕಚ್ಚಿಕೊಂಡು ಲೊಚಗುಟ್ಟುವ ಹಲ್ಲಿಯ ಹಾಗಿದ್ದ. ಅವನೊಂದಿಗೆ ಕುಳಿತು ಸಂಗೀತದ ಬಗ್ಗೆ ಮಾತನಾಡಿದೆ. ಅವನಿಗೆ ಜಗತ್ತಿನ ಪ್ರಮುಖ ಗಝಲ್ ಗಾಯಕರ ಹೆಸರೇ ಗೊತ್ತಿರಲಿಲ್ಲ. ಸಾಹಿತ್ಯದ ಮಾತು ಆರಂಭಿಸಿದರೆ, ಹತ್ತನೇ ನಿಮಿಷದ ನಂತರ ಆಡುವುದಕ್ಕೆ ಅವನಲ್ಲಿ ಮಾತೇ ಇರಲಿಲ್ಲ. ಅವನೊಬ್ಬ ತುಂಬ ಆರ್ಡಿನರಿ ಹುಡುಗ, ಅವನು ಮಾಡಿದ್ದ ಏಕೈಕ ಬುದ್ದಿ ವಂತಿಕೆ(?)ಯ ಕೆಲಸವೆಂದರೆ, ಈ ವಿವಾಹಿತಳನ್ನು ಹೊಗಳಿ, ಅಭಿನಂದಿಸಿ, ego ತಣಿಸಿ, ಆ ಮೂಲಕ ಅವರಿಬ್ಬರ ದಾಂಪತ್ಯದಲ್ಲೊಂದು ಅಸಮಾಧಾನದ ವಿಷಬೀಜ ಬಿತ್ತಿದ್ದ. ವಿಷ್ಣುವಿಗೆ ಅದಕ್ಕಿಂತ ದೊಡ್ಡ ತಾಕತ್ತಾಗಲೀ, ಬೌದ್ಧಿಕ ಎತ್ತರವಾಗಲೀ, ದೇಹ ಸಂಬಂಧಿ ಆಕರ್ಷಣೆಗಳಾಗಲಿ ಇರಲಿಲ್ಲ. ಆದರೆ ಅಷ್ಟು ಮಾತ್ರದ ಅವನ street smartness ಒಂದು ದಾಂಪತ್ಯವನ್ನು ಹೀಗೆ ಶಿಥಿಲಗೊಳಿಸಿಬಿಡುವಷ್ಟು ಶಕ್ತವಾಗಿ ಹೋಯಿತೆ? ಇಂಥ ಆಕರ್ಷಣೆಗಳು ಪ್ರತಿಯೊಬ್ಬರಿಗೂ ಉಂಟಾಗುತ್ತವೆ. ತುಂಬ ಚೆಂದಗೆ ಹಾಡುವವಳನ್ನು ನೋಡಿದಾಗ, ನನ್ನ ಹೆಂಡತಿಗೆ ಹೀಗೆ ಹಾಡಲು ಬರಬಾರದಿತ್ತೇ ಅನ್ನಿಸಬಹುದು. ಪ್ರಚಂಡ ಬುದ್ಧಿವಂತ ಸಹೋದ್ಯೋಗಿಯೊಂದಿಗೆ ಮಾತನಾಡಿ ಮನೆಗೆ ಹಿಂತಿರುಗಿದಾಗ ನನ್ನ ಗಂಡ ಎಷ್ಟು ಸಪ್ಪನೆಯ ದಡ್ಡ ಅನ್ನಿಸಬಹುದು. ಹಾಗಂತ, ನಾವು ಕಷ್ಟಪಟ್ಟು ಕಟ್ಟಿಕೊಂಡ ಗೂಡನ್ನೇ ಒಡೆದು ಬಿಡಬಹುದೇ? ಇದು ಯಾವ ನ್ಯಾಯ? ಮದುವೆಯಾಚೆಗಿನ ಆಕರ್ಷಣೆಗಳು ಎಂಥವರನ್ನೂ ಕಾಡುತ್ತವೆ. ಅವು ಯಾರನ್ನೂ ಬಿಟ್ಟವಲ್ಲ. ಒಂದು ಗೆಳೆತನ ಅನಿರೀಕ್ಷಿತವಾಗಿ ಬಂದು ಕೈಚಾಚುತ್ತದೆ. ಒಂದು ಸ್ನೇಹ ಹೇಗೋ ಬಂದು ಕಾಲಿಗೆ ತೊಡರಿಕೊಳ್ಳುತ್ತದೆ. ಆದರೆ ಸ್ನೇಹಗಳನ್ನು ಕೇವಲ ಸ್ನೇಹಗಳನ್ನಾಗಿ treat ಮಾಡುವುದು ನಮಗೆ ಗೊತ್ತಾಗದಿದ್ದರೆ ಹೇಗೆ? ಗೆಳೆತನವನ್ನು ಪ್ರೇಮವೆಂತಲೋ, ಸಂಬಂಧ ಅಂತಲೋ ಅರ್ಥ ಮಾಡಿಕೊಂಡು ಅದರ ಬೆನ್ನತ್ತಿ ಹೊರಟುಬಿಟ್ಟರೆ ಅದು ಯಾರ ತಪ್ಪು? ವಿಷ್ಣುವಿನೆಡೆಗಿದ್ದ ಸೆಳೆತವನ್ನು ಒಂದಷ್ಟು ದಿನ ಹಾಗೇ ಇರಲು ಬಿಟ್ಟು, ಗಂಡನೊಂದಿಗಿನ ಸಂಬಂಧ ಕಡಿದುಕೊಳ್ಳದೆ, ಅವನೆಡಗೆ ಮೂರು ವರ್ಷದುದ್ದಕ್ಕೂ ಇದ್ದ ಪ್ರೀತಿಯನ್ನು ಸಲಹಿಕೊಂಡು ಬಂದಿದ್ದರೆ ಈ ದಾಂಪತ್ಯ ಮತ್ತು ಆ ಸ್ನೇಹ ಹಾಗೇ ಉಳಿಯುತ್ತಿದ್ದವಲ್ಲವೆ? ಕೆಲವರೇಕೆ ಗೆಳೆತನವನ್ನು ಪ್ರೇಮಗಳೆಂದುಕೊಂಡುಬಿಡುತ್ತಾರೆ? ವರಾಂಡದಲ್ಲಿ ಕುಳಿತಿದ್ದು ಅಲ್ಲಿಂದಲೇ ಎದ್ದು ಹೋಗಬೇಕಾದವರನ್ನು ನಡುಮನೆಗೆ, ಒಳಕೋಣೆಗೆ ತಂದುಬಿಡುತ್ತಾರೆ?

ಗೊತ್ತಿಲ್ಲ. ಈ ಮಧ್ಯೆ ಅವರಿಬ್ಬರೂ ಒಟ್ಟಾಗಿಯೇ ಮನೆಗೆ ಬಂದು ಇಡೀ ಮಧ್ಯಾಹ್ನ ನಮ್ಮ ಜೊತೆಗಿದ್ದು, ಹರಟಿ ಹೋಗುತ್ತಾರೆ. ಅವರ ಮನಸ್ಸುಗಳು ಹಗುರವಾಗಿವೆಯೆಂಬುದನ್ನು ಮುಖಗಳೇ ಹೇಳುತ್ತವೆ. ಮೊನ್ನೆ ಬಂದಾಗ ‘ಗುಲ್ಜಾರ್ ಬರೆದಿರೋ ಕವಿತೆಗಳ ಸಂಕಲನ ನಿಮ್ಮ ಹತ್ತಿರ ಇದೆಯಾ ರವೀ?" ಅಂತ ಅವಳ ಗಂಡ ಕೇಳುತ್ತಿದ್ದ.
ಹುಡುಗಿಯ ಕಣ್ಣಲ್ಲಿ ನಗೆಯಿತ್ತು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 July, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books