Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಬಲಪಂಥೀಯ ಆರ್ಥಿಕತೆಯ ಆರಂಭವೇ ಹೀಗಾದರೆ...!

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಇನ್ನಿಲ್ಲದಂತೆ ಬೆಂಬಲಿಸಿದ, ಅದು ಅಧಿಕಾರಕ್ಕೆ ಬಂದರೆ ದೇಶದ ಜನರ ಬದುಕೇ ಸ್ವರ್ಗವಾಗಿ ಬಿಡುತ್ತದೆ ಎಂದು ಭೋಂಗು ಬಿಡುತ್ತಿದ್ದವರೆಲ್ಲ ಒಬ್ಬೊಬ್ಬರಾಗಿ ಬಾಯಿ ಮುಚ್ಚಿಕೊಳ್ಳುತ್ತಿದ್ದಾರೆ. ಮೋದಿ ಈ ಹಿಂದೆ ಯಾರೂ ಮಾಡದಷ್ಟು ಪ್ರವಾಸ ಮಾಡಿದರು. ಲಕ್ಷಾಂತರ ಕಿಲೋಮೀಟರು ಸುತ್ತಿದರು. ಭಾರತದ ಅಭಿವೃದ್ಧಿಯ ಕನಸನ್ನು ಬೆಳೆಸಿದರು ಎಂದೆಲ್ಲ ಪ್ರಚಾರ ಮಾಡಿದವರು, ಆನಂತರ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸುಖ ಸಂಸಾರಕ್ಕೆ ಮೋದಿ ಸೂತ್ರಗಳು ಎಂಬುದರಿಂದ ಹಿಡಿದು ಎಲ್ಲ ವಿಷಯಗಳಲ್ಲೂ ಇಂತಹ ಜನ ಹೊಗಳಿದ್ದೇ ಹೊಗಳಿದ್ದು. ಅದರರ್ಥ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಬೇಕು ಅಂತಲ್ಲ. ಆದರೆ ಅದರ ಹೆಸರಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಮಿತಿ ಮೀರಿ ಹೊಗಳಿದ್ದು ತಪ್ಪು. ಇವತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ರೈಲ್ವೇ ದರ ಶೇಕಡಾ ಹದಿನಾಲ್ಕಕ್ಕಿಂತ ಹೆಚ್ಚಾಗಿದೆ. ಸರಕು ಸಾಗಣೆ ವೆಚ್ಚ ಶೇಕಡಾ ಆರೂವರೆಯಷ್ಟಾಗಿದೆ. ಈರುಳ್ಳಿ ಬೆಲೆ ಗಗನಕ್ಕೇರಲು ಶುರುವಾಗಿದೆ. ಮುಂದಿನ ದಿನಗಳಲ್ಲಿ ಡೀಸೆಲ್ ಬೆಲೆಯನ್ನು ಐದು ರುಪಾಯಿಗಳಷ್ಟು ಏರಿಸುವುದು ಅನಿವಾರ್ಯ ಎಂಬ ಮಾತು ಶುರುವಾಗಿದೆ. ಇದೇ ರೀತಿ ಅಡುಗೆ ಅನಿಲದ ಬೆಲೆಯನ್ನು ಪ್ರತಿ ತಿಂಗಳು ಹತ್ತು ರುಪಾಯಿಯಂತೆ ಏರಿಸುವುದು ಬೆಟರ್ರು ಎಂಬ ತೀರ್ಮಾನಕ್ಕೆ ಬರಲಾಗಿದೆ.

ಒಂದು ಸಲ ರೈಲ್ವೇಯಲ್ಲಿ ಸರಕು ಸಾಗಣೆ ದರ ಹೆಚ್ಚಾದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ ಐದು ರುಪಾಯಿ ಹೆಚ್ಚಾದರೆ ಜೀವನಾವಶ್ಯಕ ವಸ್ತುಗಳ ಬೆಲೆ ಹೇಗೆ ಕೆಳಗಿಳಿಯುತ್ತದೆ? ಜನ ಸಾಮಾನ್ಯರು ಬಳಸುವ ದಿನನಿತ್ಯದ ಜೀವನಾವಶ್ಯಕ ವಸ್ತುಗಳ ಬೆಲೆ ಇನ್ನಿಲ್ಲದಂತೆ ಗಗನಕ್ಕೇರುತ್ತವೆ. ಹೀಗೆ ಜನರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸಿ ದೇಶವನ್ನು ಸುಂದರಗೊಳಿಸುತ್ತೇವೆ ಎಂದು ಮೋದಿ ಅಧಿಕಾರಕ್ಕೆ ಬಂದರಾ? ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳ ಏರಿಳಿತವನ್ನು ಅವಲಂಬಿಸಿರುತ್ತದೆ ಎಂಬುದು ಮುಂಚಿತವಾಗಿ ಇವರಿಗೆ ಗೊತ್ತಿತ್ತಲ್ಲ? ಆದರೆ ಇದ್ಯಾವುದನ್ನೂ ಮಾತನಾಡದ ಬಿಜೆಪಿ ನಾಯಕರು, ಸಿಕ್ಕ ಸಿಕ್ಕಂತೆ ಜನರಿಗೆ ಭರವಸೆ ನೀಡಿದರು. ಹೇಳಿ ಕೇಳಿ ಅದು ಬಲಪಂಥೀಯ ಪಕ್ಷ. ಕಾಂಗ್ರೆಸ್ ರಾಜಕೀಯವಾಗಿ ಎಡಪಂಥೀಯ ಧೋರಣೆಯನ್ನು ಹೊಂದಲು ಯತ್ನಿಸುತ್ತದೆಯಾದರೂ ಬಿಜೆಪಿ ಹೇಳಿ ಕೇಳಿ ಆರ್ಥಿಕವಾಗಿ ಬಲಪಂಥೀಯ ಪಕ್ಷವೇ. ಎಡಪಂಥೀಯ ಎಂದರೆ ಬಡ ಜನರ ಹಿತ ಕಾಪಾಡುವ ದೃಷ್ಟಿಯಿಂದ, ಅವರು ಬದುಕುವ ದೃಷ್ಟಿಯಿಂದ ಬೇಕಾದ ನಿಲುವುಗಳನ್ನು ರೂಪಿಸುವುದು. ಕಮ್ಯುನಿಸ್ಟರು ಸಂಪೂರ್ಣವಾಗಿ ಜನಸಾಮಾನ್ಯರ ಬದುಕಿನಲ್ಲಿ ಸರ್ಕಾರದ ಮಧ್ಯೆ ಪ್ರವೇಶ ಅನಿವಾರ್ಯ ಎನ್ನುತ್ತಾರೆ.

ಆದರೆ ಕಾಂಗ್ರೆಸ್ ಒಂದು ಕಾಲದಲ್ಲಿ ಎಡಪಂಥೀಯ ಧೋರಣೆಗಳನ್ನು ಹೆಚ್ಚಾಗಿ ಹೊಂದಿದ್ದರೂ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಆರ್ಥಿಕವಾಗಿಯೂ ಬಲಪಂಥೀಯ ಧೋರಣೆಯನ್ನು ಅನುಸರಿಸತೊಡಗಿತು. ಅಂದರೆ ಕೈಗಾರಿಕೋದ್ಯಮಿಗಳು ಉದ್ದಿಮೆದಾರರ ಪರವಾಗಿ, ಅವರ ಹಿತ ಕಾಪಾಡಲು ಯತ್ನಿಸತೊಡಗಿತು. ಕೈಗಾರಿಕೋದ್ಯಮಿಗಳಿಗೆ, ಉದ್ದಿಮೆದಾರರಿಗೆ ದಂಡಿಯಾಗಿ ಲಾಭ ಬಂದರೆ ತಾನೇ ಅವರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು? ಭಾರತ ಏನೇ ಆದರೂ ಬೆಳೆಯುತ್ತಿರುವ ದೇಶ. ಇವತ್ತು ಹತ್ತತ್ತಿರ ನೂರಿಪ್ಪತ್ತೈದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶ. ಹೀಗಾಗಿ ಗ್ಯಾಟ್ ಒಪ್ಪಂದಕ್ಕೆ ನಾವು ಸಹಿ ಹಾಕುವುದು ಅನಿವಾರ್ಯ ಎಂಬ ಕಾರಣಕ್ಕಾಗಿ ನರಸಿಂಹರಾಯರ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕಿತು. ಆ ಮೂಲಕ ತಾನೇ ತಾನಾಗಿ ಆರ್ಥಿಕ ಬಲಪಂಥೀಯತೆಗೆ ವಾಲಿತು. ರಾಜಕೀಯವಾಗಿಯೂ ಅದು ತಾವು ಎಡಪಂಥೀಯ ಎನ್ನುತ್ತದೆ. ಆದರೆ ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ಜಾತಿಗಳನ್ನು ಓಲೈಸುವ ಕೆಲಸವನ್ನು ಮಾಡುವ ಮೂಲಕ ಅದು ಕೂಡ ಒಂದರ್ಥದಲ್ಲಿ ಬಲಪಂಥೀಯತೆಯನ್ನು ಓಲೈಸುತ್ತದಾದರೂ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತದಾರರನ್ನು ಓಲೈಸುವ ಮೂಲಕ ಬಿಜೆಪಿಗಿಂತ ಕಡಿಮೆ ಮಟ್ಟದಲ್ಲಿ ಬಲಪಂಥೀಯತೆಯನ್ನು ಅನುಸರಿಸುತ್ತದೆ.
ಆದರೆ ಬಿಜೆಪಿಯದು ಹೇಳಿ ಕೇಳಿ ಉಗ್ರ ಬಲಪಂಥೀಯ ವಾದ. ಅದರ ಆಡಳಿತಾವಧಿಯಲ್ಲಿ ಬಂಡವಾಳಷಾಹಿಗಳಿಗೆ ಮೊದಲ ಆದ್ಯತೆ. ನಿರ್ದಿಷ್ಟ ಜಾತಿಗಳನ್ನು ಗರ್ಭಗುಡಿಯಲ್ಲಿ ಇಟ್ಟುಕೊಂಡು ಉಳಿದ ಸಮುದಾಯಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸುವ ಗುಣ ಅದಕ್ಕೆ ಕರಗತವಾಗಿದೆ. ಹೀಗಾಗಿ ಅದು ಯಾವತ್ತೂ ಕೈಗಾರಿಕೋದ್ಯಮಿಗಳನ್ನು ಓಲೈಸುವ ಕೆಲಸ ಮಾಡುತ್ತಲೇ ಇರುತ್ತದೆ. ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂದು ಅದು ಹರಿಸಿದ ಹಣ ಏನು ಕಡಿಮೆಯೇ? ಹೀಗೆ ಹಣ ಸುರಿದವರು ಅದಕ್ಕೆ ಹತ್ತು ಪಟ್ಟು ಹಣ ಮಾಡಬೇಡವೇ? ಇವತ್ತು ಮೋದಿ ನೇತೃತ್ವದ ಸರ್ಕಾರದಲ್ಲಿ ಆಗುತ್ತಿರುವುದು ಇದೇ. ಬಡಬಗ್ಗರ ಜೀವನಮಟ್ಟ ಸುಧಾರಿಸುವುದಕ್ಕಿಂತ ಅದಕ್ಕೆ ಬಂಡವಾಳಷಾಹಿಗಳು ಬೆಳೆಯುವ ಕುರಿತೇ ಹೆಚ್ಚಿನ ಆಸಕ್ತಿ. ಜವಾಹರಲಾಲ್ ನೆಹರೂ ಅವರಿಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಕುರಿತು ಒಲವು ಇತ್ತು. ದೇಶದಲ್ಲಿ ಕೈಗಾರಿಕೆಗಳು ಬರದೆ ನಾವು ಉದ್ಧಾರವಾಗಲು ಸಾಧ್ಯವಿಲ್ಲ ಎಂಬ ಲೆಕ್ಕಾಚಾರವಿತ್ತು. ಅದು ಗಾಂಧೀ ವಾದಕ್ಕಿಂತ ಬೇರೆಯೇ ವಾದವಾಗಿತ್ತು. ಆದರೆ ನೆಹರೂ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಬೆಳೆಸಲು ನೋಡಿದರು, ಬೆಳೆಸಿದರು. ಆ ಮೂಲಕ ದೇಶವನ್ನು ಬಲಪಂಥೀಯವೂ ಅಲ್ಲದ, ಎಡಪಂಥೀಯವೂ ಅಲ್ಲದ ಒಂದು ಮಿಶ್ರ ವ್ಯವಸ್ಥೆಯಲ್ಲಿ ಬೆಳೆಸಲು ನೋಡಿದರು. ಆದರೆ ಎನ್‌ಡಿಎ ಸರ್ಕಾರದ ಕತೆ ಅದಲ್ಲವಲ್ಲ? ನಿಮ್ಮ ಮಕ್ಕಳಿಗೆ ಕೆಲಸ ಬೇಕೇ? ಹಾಗಿದ್ದರೆ ಹೆಚ್ಚು ಹೆಚ್ಚು ಕಾರ್ಖಾನೆಗಳು ಸ್ಥಾಪನೆಯಾಗಬೇಕು. ಆ ಮೂಲಕ ಹೆಚ್ಚು ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಬೇಕು. ಹೀಗೆ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾದರೆ ನಿಮ್ಮ ಮಕ್ಕಳಿಗೆ ಕೆಲಸ ಸಿಗುತ್ತದೆ ಎಂದು ಹೇಳುತ್ತಾ ಹೋಯಿತು.
ನಗರೀಕರಣ ವ್ಯಾಪಕವಾಗುತ್ತಿರುವ ಈ ದಿನಗಳಲ್ಲಿ ಬಿಜೆಪಿಯ ಮಾತು ಜನಸಾಮಾನ್ಯರಿಗೂ ಕರ್ಣಾನಂದವನ್ನುಂಟು ಮಾಡಿದ್ದು ಸಹಜವೇ. ಇವತ್ತು ರಾಜ್ಯದ ಬಹುತೇಕ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ಜನ ವಲಸೆ ಹೋಗುತ್ತಿದ್ದಾರೆ. ಅದು ಬೆಂಗಳೂರಿಗೋ, ಮೈಸೂರಿಗೋ, ಮಂಗಳೂರಿಗೋ ಅಥವಾ ಇನ್ಯಾವುದೇ ನಗರಗಳಿಗೋ ವಲಸೆ ಹೋಗುವುದು ಹೆಚ್ಚುತ್ತಿದೆ. ಇದನ್ನು ಊಹಿಸಿಯೇ ಗಾಂಧೀಜಿ, ಭಾರತದ ಶಕ್ತಿ ಇರುವುದು ಹಳ್ಳಿಗಳಲ್ಲಿ. ಅವುಗಳನ್ನು ಮೊದಲು ಬಲಿಷ್ಠಗೊಳಿಸಬೇಕು ಎಂದರು. ಈ ಕೆಲಸ ಮಾಡಿದ್ದರೆ ನಗರೀಕರಣ ವ್ಯಾಪಕ ಮಟ್ಟದಲ್ಲಿ ಆಗುತ್ತಿರಲಿಲ್ಲ. ನಗರೀಕರಣ ಎಷ್ಟು ವ್ಯಾಪಕವಾಗಿ ಆಗುತ್ತದೋ, ಅಷ್ಟರ ಮಟ್ಟಿಗೆ ಉದ್ಯೋಗಗಳನ್ನು ಸೃಷ್ಟಿಸುವ ಅನಿವಾರ್ಯತೆ ಎದುರಾಗುತ್ತದೆ. ಕೃಷಿ ಪ್ರಧಾನವಾದ ಭಾರತದಂತಹ ದೇಶ ಇವತ್ತು ಅಂತಹ ಅಪಾಯಕ್ಕೆ ಸಿಲುಕಿದೆ. ಜಾಗತೀಕರಣದ ಹೊಡೆತ ಇದು. ಕೃಷಿಯಿಂದ ಲಾಭವಿದೆ ಅಥವಾ ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತೇವೆ ಎಂದು ಸರ್ಕಾರಗಳು ಭರವಸೆ ನೀಡಲಿಲ್ಲ. ಕಬ್ಬಿಗೆ ತಾವು ನಿಗದಿ ಮಾಡಿದ ದರವನ್ನೇ ಕೊಡಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ ಎಂದರೆ ರೈತರು ಬದುಕುವುದು ಹೇಗೆ? ಇಂತಹ ಕಾಲಘಟ್ಟದಲ್ಲಿ ರೈತನೂ ನಗರೀಕರಣದತ್ತ ವಾಲಿಕೊಳ್ಳುತ್ತಾನೆ. ಇರುವ ಕೃಷಿ ವ್ಯವಸ್ಥೆಯನ್ನು ಹಾಳು ಮಾಡಿಕೊಂಡು ಕೈಗಾರಿಕೆಗಳ ಕಡೆಗೇ ವಾಲುವುದು ಭಾರತಕ್ಕೆ ಒಳ್ಳೆಯದಲ್ಲ.

ಅಮೆರಿಕಾ ಸೇರಿದಂತೆ ಜಗತ್ತಿನ ಮೂರೇ ದೇಶಗಳು ತಮ್ಮ ರೈತರಿಗೆ ಉತ್ತಮ ಬೆಳೆ ಬೆಳೆಯಲು ಅನುಕೂಲವಾಗಲಿ ಎಂದು ಪ್ರತಿ ವರ್ಷ ಇನ್ನೂರೈವತ್ತು ಕೋಟಿ ಡಾಲರುಗಳನ್ನು ಪ್ರೋತ್ಸಾಹ ಧನದ ರೂಪದಲ್ಲಿ ಕೊಡುತ್ತವೆ. ಜಗತ್ತಿನ ಉಳಿದೆಲ್ಲ ದೇಶಗಳು ಸೇರಿ ಮುನ್ನೂರು ಕೋಟಿ ಡಾಲರುಗಳನ್ನು ಮಾತ್ರ ಖರ್ಚು ಮಾಡುತ್ತವೆ. ಇದರರ್ಥ ಬೇರೇನೂ ಅಲ್ಲ, ಜಗತ್ತಿನ ದೊಡ್ಡಣ್ಣ ಅನ್ನಿಸಿಕೊಂಡಿರುವ, ಮೂವತ್ತು ಕೋಟಿ ಜನಸಂಖ್ಯೆಯನ್ನಷ್ಟೇ ಹೊಂದಿರುವ, ಭಾರತಕ್ಕಿಂತ ಅಪಾರ ಪ್ರಮಾಣದ ಭೂಮಿ ಹೊಂದಿರುವ, ಜಗತ್ತಿನ ಯಾವುದೇ ಎರಡು ದೇಶಗಳ ನಡುವೆ ಯುದ್ಧ ನಡೆದರೆ ಎರಡೂ ದೇಶಗಳಿಗೆ ಶಸ್ತ್ರಗಳನ್ನು ಮಾರಿ ಕೋಟ್ಯಂತರ ಡಾಲರುಗಳಷ್ಟು ಲಾಭ ಗಳಿಸುವ ಅಮೆರಿಕವೇ ತನ್ನ ಕೃಷಿ ವ್ಯವಸ್ಥೆಯನ್ನು ಹಾಳುಗೆಡವಲು ಬಿಡುತ್ತಿಲ್ಲ. ಇದಕ್ಕೆ ಕಾರಣ, ತಿನ್ನುವ ಆಹಾರಕ್ಕಾಗಿ ಬೇರೆ ದೇಶಗಳನ್ನು ಅವಲಂಬಿಸಬಾರದು ಎಂಬ ಮುನ್ನೆಚ್ಚರಿಕೆ. ಜಗತ್ತಿನ ನೂರಕ್ಕೂ ಹೆಚ್ಚು ದೇಶಗಳಿಗೆ ಅದು ಶಸ್ತ್ರಾಸ್ತ್ರ ಮಾರುತ್ತದೆ. ಅದರಿಂದ ಅಪಾರ ಪ್ರಮಾಣದ ಹಣ ಗಳಿಸುತ್ತದೆ. ಆದರೂ ತನ್ನ ಕೃಷಿ ವ್ಯವಸ್ಥೆಯನ್ನು ಅದು ಹಾಳು ಮಾಡಿಕೊಳ್ಳುವುದಿಲ್ಲ.
ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳನ್ನು ಹೊಂದಿದ್ದರೂ ಅದು ತನ್ನ ಅಗತ್ಯಕ್ಕಿಂತ ಮಿತಿ ಮೀರಿದ ಆಹಾರ ಪದಾರ್ಥಗಳನ್ನು ಬೆಳೆಯುತ್ತದೆ. ಬೆಲೆ ತೀರಾ ಕಡಿಮೆಯಾದರೆ ಗೋಧಿ, ಸಕ್ಕರೆ ಸೇರಿದಂತೆ ಬೆಳೆದ ಹಲವು ಆಹಾರ ಪದಾರ್ಥಗಳನ್ನು ಸಮುದ್ರಕ್ಕೆ ಚೆಲ್ಲುತ್ತದೆ. ಇಂತಹ ಸಾಮರ್ಥ್ಯ ಅದಕ್ಕಿತ್ತು ಎಂಬ ಕಾರಣಕ್ಕಾಗಿ ಮತ್ತು ಇಂತಹ ಸಾಮರ್ಥ್ಯ ಭಾರತಕ್ಕಿಲ್ಲ ಎಂಬ ಕಾರಣಕ್ಕಾಗಿಯೇ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಲಿಂಡನ್ ಜಾನ್ಸನ್ ಅವರು ಭಾರತದ ಕುರಿತು ವ್ಯಂಗ್ಯವಾಡಿದರು. ಅದರ ಪರಿಣಾಮವಾಗಿ ಇಂದಿರಾಗಾಂಧಿ ರೂಪಿಸಿದ ಹಸಿರು ಕ್ರಾಂತಿ ಭಾರತದಂತಹ ದೇಶ ಆಹಾರದ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣವಾಯಿತು. ಆದರೆ ಇವತ್ತು ನಾವು ಹೋಗುತ್ತಿರುವ ದಾರಿ ಯಾವ ಮಟ್ಟದಲ್ಲಿ ಅಪಾಯಕಾರಿ ಆಗಿದೆ ಎಂದರೆ ಭಾರತದಲ್ಲಿರುವ ಜನರಿಗೆ ಉದ್ಯೋಗ ದೊರಕಿಸಿಕೊಡಬೇಕೆಂದರೆ ಕೈಗಾರಿಕೆಗಳು ಹೆಚ್ಚೆಚ್ಚು ಸ್ಥಾಪನೆಯಾಗಬೇಕೇ ವಿನಃ ಬೇರೆ ದಾರಿ ಇಲ್ಲ ಎಂಬಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಅದೇ ಕಾಲಕ್ಕೆ ದಿನದಿಂದ ದಿನಕ್ಕೆ ಕೃಷಿ ವ್ಯವಸ್ಥೆ ಬಡವಾಗುತ್ತಾ ಸಾಗಿದೆ. ಬಡವರಿಗಾಗಿ ಅನ್ನಭಾಗ್ಯದಂತಹ ಯೋಜನೆಯನ್ನು ಜಾರಿಗೆ ತರುವುದು ಎಷ್ಟು ಅಪಾಯಕಾರಿಯೋ, ಕೈಗಾರಿಕೆಗಳ ಮೇಲೆ ಅವಲಂಬಿತವಾಗುವುದು ಅದಕ್ಕಿಂತ ಹೆಚ್ಚಿನ ಅಪಾಯಗಳನ್ನು ತಂದೊಡ್ಡಬಲ್ಲದು.


ನಾವು ತಿನ್ನುವ ಅನ್ನವನ್ನೇ ಬೇರೆ ದೇಶಗಳಿಂದ ತರಿಸಿಕೊಳ್ಳುವ ಪರಿಸ್ಥಿತಿ ಬಂದ ದಿನ ಎದುರಾಗುವ ಗಂಡಾಂತರ ಸಣ್ಣದಲ್ಲ. ಈಗಲೇ ಈರುಳ್ಳಿ ಬೆಲೆ ನೂರು ರುಪಾಯಿಯ ಲೆವೆಲ್ಲಿಗೆ ಹೋಗಲಾರಂಭಿಸಿದೆ ಎಂದರೆ ತಿನ್ನುವ ಆಹಾರ ಪದಾರ್ಥಗಳಿಗಾಗಿ ಐದು ಜನರಿರುವ ಒಂದು ಕುಟುಂಬ ಕನಿಷ್ಠ ಪಕ್ಷ ತಿಂಗಳಿಗೆ ಹತ್ತು ಸಾವಿರ ರುಪಾಯಿ ಖರ್ಚು ಮಾಡುವ ಸ್ಥಿತಿಗೆ ತಲುಪುತ್ತದೆ. ಅಂತಹ ಕುಟುಂಬ ಮನೆ ಬಾಡಿಗೆ ಕಟ್ಟುವುದು ಹೇಗೆ, ಮಕ್ಕಳನ್ನು ಓದಿಸುವುದು ಹೇಗೆ, ಭವಿಷ್ಯಕ್ಕಾಗಿ ಉಳಿಸುವುದು ಹೇಗೆ, ವರ್ಷದಲ್ಲಿ ಇಂತಿಷ್ಟು ದಿನ ಅಂತಾದರೂ ಕಾಡುವ ಆರೋಗ್ಯದ ಸಮಸ್ಯೆಯನ್ನು ಪರಿಹರಿಸಲು ಏನು ಮಾಡಬೇಕು. ಈ ಎಲ್ಲ ಅಂಶಗಳನ್ನು ಕೇಂದ್ರ ಸರ್ಕಾರ ಗಮನಿಸಬೇಕು. ಕರ್ನಾಟಕದಲ್ಲೇ ಇರುವ ಕೈಗಾರಿಕೆಗಳು ಕನ್ನಡಿಗರಿಗೆ ಶೇಕಡಾ ಹತ್ತು ಹದಿನೈದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನೀಡುತ್ತಿಲ್ಲ. ಆದರೆ ಲಕ್ಷಗಟ್ಟಲೆ ಎಕರೆ ಭೂಮಿ ಖಾಸಗಿಯವರ ಕೈಲಿದೆ. ಸಮೃದ್ಧ ಬೆಳೆ ಬೆಳೆಯುತ್ತಿದ್ದ ಕೃಷ್ಣಾ ನದಿ ಪಾತ್ರದ ಭೂಮಿ ಮುಂಚೆ ಆಂಧ್ರದವರ ಪಾಲಾಗುತ್ತಿತ್ತು. ಈಗ ಎಲ್ಲ ನದಿ ಪಾತ್ರಗಳ ಭೂಮಿ ಬಹುರಾಷ್ಟ್ರೀಯ ಕಂಪನಿಗಳು, ಸ್ವದೇಶಿ ಕಂಪನಿಗಳ ಪಾಲಾಗುತ್ತಿದೆ.

ಹೀಗಾದಾಗ ತಿನ್ನುವ ಅನ್ನಕ್ಕೂ ತತ್ವಾರ ಬರದೇ ಇನ್ನೇನು ಆಗುತ್ತದೆ? ಇದೇ ಕಾರಣಕ್ಕಾಗಿ ನೆಹರೂ ಕೈಗಾರಿಕೆಗಳನ್ನು ಪ್ರೀತಿಸಿದರೂ ಆರ್ಥಿಕವಾಗಿ ಎಡಪಂಥೀಯ ಧೋರಣೆ ಹೊಂದಿದ್ದರು. ಆಯಾಯ ರಾಜ್ಯಗಳಲ್ಲಿ ಬಡ ವರ್ಗಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದು ಬಲಪಂಥೀಯ ಧೋರಣೆ ಎಂಬುದು ನಿಜವಾದರೂ ಒಂದು ಮಟ್ಟದಲ್ಲಿ ಅದನ್ನು ಸಹಿಸಿಕೊಳ್ಳಬಹುದಿತ್ತು. ಆದರೆ ಈಗೇನಾಗಿದೆ. ಕಾಂಗ್ರೆಸ್ ನಾಯಕರು ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ಬಲಪಂಥೀಯತೆಯನ್ನು ಒಪ್ಪಿದರು. ಬಲಪಂಥೀಯತೆ ಎಂದರೆ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬೇರೆ ಬೇರೆ ವ್ಯಾಖ್ಯಾನಗಳಿಗೆ ಒಳಪಡುತ್ತದೆ. ರಾಜಕೀಯವಾಗಿ ಬಲಪಂಥೀಯತೆ ಎಂದರೆ ನಿರ್ದಿಷ್ಟ ಜಾತಿ ಅಥವಾ ಸಮುದಾಯಗಳನ್ನು ಓಲೈಸುವುದು. ಬಿಜೆಪಿ ನೇತೃತ್ವದ ಎನ್‌ಡಿಎ ಮುಂದುವರಿದ ವರ್ಗಗಳನ್ನು ಓಲೈಸಿದರೆ, ಕಾಂಗ್ರೆಸ್ ಹಿಂದುಳಿದವರನ್ನು ಓಲೈಸಿತು. ಈ ಪೈಕಿ ದುರ್ಬಲರನ್ನು ಓಲೈಸುವುದು ಸ್ವಲ್ಪ ಮಟ್ಟಿಗಾದರೂ ಎಡಪಂಥೀಯ ಧೋರಣೆ ಎನ್ನಬಹುದೇನೋ?


ಆರ್ಥಿಕವಾಗಿ ಬಲಪಂಥೀಯತೆ ಎಂದರೆ ಬಂಡವಾಳಷಾಹಿಗಳನ್ನು ಮಿತಿ ಮೀರಿ ಓಲೈಸುವುದು, ಅವರು ಹೆಚ್ಚೆಚ್ಚು ಅಭಿವೃದ್ಧಿ ಸಾಧಿಸುವಂತೆ ಮಾಡುವುದು, ಸರ್ಕಾರದ ಸ್ವಾಮ್ಯದಲ್ಲಿ ಸೀಮಿತ ವಿಷಯಗಳು ಮಾತ್ರ ಇರುವಂತೆ ನೋಡಿಕೊಳ್ಳುವುದು. ಬಂಡವಾಳಷಾಹಿಗಳಿಗೆ ಹೆಚ್ಚಿನ ದುಡ್ಡು ಬಂದರೆ ತಾನೇ ಅವರು ಕೈಗಾರಿಕೆಗಳನ್ನು ಸೃಷ್ಟಿಸುವುದು. ಹೀಗಾಗಿ ಅವರಿಗೆ ಹೆಚ್ಚೆಚ್ಚು ಅನುಕೂಲ ಮಾಡಿಕೊಡಬೇಕು ಎಂಬುದು ಬಿಜೆಪಿ ಲೆಕ್ಕಾಚಾರ. ಈ ವಿಷಯದಲ್ಲಿ ಅದು ಮುಂಚಿಗಿಂತ ಪ್ರಬಲವಾಗಿ ಓಡುತ್ತಿದೆ. ನೋಡುತ್ತಿರಿ. ಇವತ್ತಲ್ಲ, ನಾಳೆ ಅದು ಭಾರತೀಯ ರೈಲ್ವೇಯನ್ನು ಖಾಸಗೀಕರಣಗೊಳಿಸಿದರೂ ಅಚ್ಚರಿಪಡಬೇಡಿ. ಯಾಕೆಂದರೆ ಇವತ್ತು ಶೇಕಡಾ ಹದಿನಾಲ್ಕರಷ್ಟು ಪ್ರಮಾಣದಲ್ಲಿ ದರ ಏರಿಕೆ ಮಾಡಿದವರು ನಾಳೆ ಇನ್ನಷ್ಟು ದರ ಏರಿಕೆ ಮಾಡಿ ಅದು ಲಾಭದಾಯಕವಾಗುವಂತೆ, ಖಾಸಗಿಯವರಿಗೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತಾರೆ. ಆಮೇಲೆ ರೈಲ್ವೇಯಲ್ಲಿ ಖಾಸಗಿಯವರು ಶೇಕಡಾ ನಲವತ್ತೊಂಬತ್ತರಷ್ಟು ಷೇರುಗಳನ್ನು, ಸರ್ಕಾರ ಶೇಕಡಾ ಐವತ್ತೊಂದರಷ್ಟು ಷೇರುಗಳನ್ನು ಹೊಂದಿರುವಂತೆ ನೋಡಿಕೊಳ್ಳಲಾಗುತ್ತದೆ. ಆಮೇಲೆ ಲಾಭ ಹೆಚ್ಚೆಚ್ಚು ಬರುತ್ತದೆ ಎನ್ನುವ ಕುರುಹುಗಳು ಕಾಣುತ್ತಿದ್ದಂತೆ ದೇಶಿ, ವಿದೇಶಿ ಕಂಪನಿಗಳು ಭಾರೀ ಬಂಡವಾಳವನ್ನು ತೊಡಗಿಸಿ ರೈಲ್ವೇಯನ್ನು ತಮ್ಮದನ್ನಾಗಿಸಿಕೊಳ್ಳುತ್ತವೆ. ಆಮೇಲೆ ಅವು ನಿಗದಿ ಮಾಡಿದ್ದೇ ದರ.
ಹೀಗೆ ಇಡೀ ಭಾರತವನ್ನು ಎಡಪಂಥೀಯ ಧೋರಣೆಯಿಂದ ಕಾಲಕ್ರಮೇಣ ಬಲಪಂಥೀಯತೆಯತ್ತ ತಿರುಗಿಸುವ ಕೆಲಸ ನಡೆಯುತ್ತಿದೆ. ಗ್ಯಾಟ್ ಒಪ್ಪಂದದ ಪರಿಣಾಮ ಇದು. ಆದರೆ ಸಣ್ಣಪುಟ್ಟ ದೇಶಗಳೇ ಇದರ ಹೊರೆಯನ್ನು ತಡೆಯುವುದು ಕಷ್ಟ. ಹೀಗಿರುವಾಗ ನೂರಿಪ್ಪತ್ತೈದು ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿದ ಒಂದು ದೇಶ ಖಾಸಗೀಕರಣದ ಹೊಡೆತವನ್ನು ತಡೆಯಲು ಸಾಧ್ಯವೇ? ಕರ್ನಾಟಕದಲ್ಲೇ ಇರುವ ಆರು ಕೋಟಿ ಜನರ ಪೈಕಿ ನಾಲ್ಕು ಕೋಟಿ ಜನ ಬಡತನ ರೇಖೆಗಿಂತ ಕೆಳಗಿರುವ ಲೆಕ್ಕ ಕೊಟ್ಟಿದ್ದಾರೆ. ಇದೇ ಸರಾಸರಿಯನ್ನು ಗಮನದಲ್ಲಿಟ್ಟುಕೊಂಡರೆ ನೂರಿಪ್ಪತ್ತೈದು ಕೋಟಿ ಭಾರತೀಯರ ಪೈಕಿ ಎಂಬತ್ತೈದರಿಂದ ತೊಂಬತ್ತು ಕೋಟಿ ಭಾರತೀಯರು ಬಡತನ ರೇಖೆಗಿಂತ ಕೆಳಗಿದ್ದಾರೆ. ಖಾಸಗೀಕರಣ ಎಂಬುದು ಮನೆಯ ಮುಂಬಾಗಿಲಲ್ಲಿ ನಿಂತರೆ ಕನಿಷ್ಠ ಪಕ್ಷ ಹಿತ್ತಲಿಗಾದರೂ ಓಡಿ ಪರಿಹಾರ ಕಂಡುಕೊಳ್ಳಬಹುದು. ಆದರೆ ಮುಂಬಾಗಿಲು ಮತ್ತು ಹಿತ್ತಲುಗಳೆರಡನ್ನೂ ಆವರಿಸಿದರೆ ಗಂಡಾಂತರ ಎದುರಾಗುವುದು ಗ್ಯಾರಂಟಿ. ಈ ವಿಷಯದಲ್ಲಿ ಎನ್‌ಡಿಎ ಸರ್ಕಾರ ಯುಪಿಎ ಸರ್ಕಾರಕ್ಕಿಂತ ವೇಗವಾಗಿ ಓಡುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books