Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಗದ್ದುಗೆ ಮೇಲೆ ಮೋದಿ ಕೂರುವ ಹೊತ್ತಿಗೆ ಡಾರ್ವಿನ್ನನ ನೆನಪಾಗಿತ್ತು..

ಯಾವ ದೇಶದ ಜನರಿಗೆ ಭೂತಕಾಲದ ಅರಿವಿಲ್ಲವೋ, ಅವರು ವರ್ತಮಾನದ ಬಗ್ಗೆ ದೊಡ್ಡಮಟ್ಟದ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿ ಭವಿಷ್ಯವನ್ನು ರೂಪಿಸಲು ಅವರ ಮನಸ್ಸು ತುಡಿಯುವುದಿಲ್ಲ. ಭಾರತದ ಸ್ಥಿತಿ ನೋಡಿದರೆ, ಕರ್ನಾಟಕದ ಸ್ಥಿತಿ ನೋಡಿದರೆ ಹಾಗೇ ಅನ್ನಿಸುತ್ತದೆ. ಇಡೀ ದೇಶ ಮೋದಿ ಚೆನ್ನಾಗಿ ಮಾತನಾಡುತ್ತಾರೆ ಅಂತ ಭಾವಿಸಿ ಗಣನೀಯ ಪ್ರಮಾಣದಲ್ಲಿ ಅವರಿಗೆ ಮತ ಹಾಕಿತು. ಅದು ತಪ್ಪು ಅಂತೇನೂ ಅಲ್ಲ. ಅವರು ಚೆನ್ನಾಗಿ ಕೆಲಸ ಮಾಡಿದರೆ ಉಳಿಯುತ್ತಾರೆ, ಇಲ್ಲವೇ ಮನೆ ಕಡೆ ಹೋಗುತ್ತಾರೆ. ಆದರೆ ಅವರು ಇದುವರೆಗೆ ಮಾಡಿರುವುದೇನಿದೆ ಅದೆಲ್ಲವೂ ಆರಂಭ ಶೂರತ್ವದ ಕೆಲಸಗಳು. ಒಂದು ವೇಳೆ ಪಾಕಿಸ್ತಾನ ಏನಾದರೂ ಗಡಿಯಲ್ಲಿ ದಾಳಿ ನಿಲ್ಲಿಸದಿದ್ದರೆ ಅವರೊಂದಿಗೆ ಮಾತುಕತೆ ಇಲ್ಲ ಎಂದರು ಅರುಣ್ ಜೇಟ್ಲಿ. ಇದನ್ನೇ ಹಿಂದಿದ್ದ ಯುಪಿಎ ಸರ್ಕಾರದ ಸಚಿವರೂ ಹೇಳುತ್ತಿದ್ದರು. ನಾವು ಅಧಿಕಾರಕ್ಕೆ ಬಂದ ಕೂಡಲೇ ಜನಸಾಮಾನ್ಯರು ಬಳಸುವ ಜೀವನಾವಶ್ಯಕ ಬೆಲೆಗಳನ್ನು ಇಳಿಸುತ್ತೇವೆ ಎಂದು ಬಿಜೆಪಿ ನಾಯಕರು ಕೊಚ್ಚುತ್ತಿದ್ದರು. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಡೀಸೆಲ್ ದರ ಏರಿಸಿದರು. ಇದೊಂದು ಬಾಬ್ತಿನಲ್ಲಿ ಕರ್ನಾಟಕದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹದಿನೆಂಟು ಕೋಟಿ ರುಪಾಯಿಗಳ ಹಣ ತೆರಬೇಕು.

ಅಂದರೆ ಜನಸಾಮಾನ್ಯರು ಯಾವ ಮಟ್ಟದಲ್ಲಿ ದಂಡ ತೆರಬೇಕು ಯೋಚಿಸಿ. ಅಂದಹಾಗೆ ತೈಲದ ಬೆಲೆಗಳು ಭಾರತ ಸರ್ಕಾರದ ನಿಯಂತ್ರಣದಲ್ಲಿಲ್ಲ. ಇಡೀ ಜಗತ್ತಿಗೆ ಬೇಕಾದ ಕಚ್ಚಾ ಪೆಟ್ರೋಲಿಯಂ ತೈಲದ ಮೇಲೆ ಮುಂಚೆ ಒಪೆಕ್ ರಾಷ್ಟ್ರಗಳ ನಿಯಂತ್ರಣ ಹೆಚ್ಚಿತ್ತು. ಇರಾನ್, ಇರಾಕ್, ಸೌದಿ ಅರೇಬಿಯಾ ಸೇರಿದಂತೆ ಒಪೆಕ್ ರಾಷ್ಟ್ರಗಳ ಕೂಟ ಅಂದರೆ ಆಯಿಲ್ ಪ್ರೊಡ್ಯೂಸಿಂಗ್ ಅಂಡ್ ಎಕ್ಸ್‌ಪೋರ್ಟ್ ಕಂಟ್ರೀಸ್ ಎಂದು ಇವನ್ನು ಗುರುತಿಸುತ್ತಾರೆ. ಯಾವಾಗ ಇದರ ಕೈ ಮೇಲಾಯಿತೋ, ಆಗ ಅಮೆರಿಕ ಇವುಗಳ ಹತ್ತಿರ ಇರುವ ಇಸ್ರೇಲ್‌ನ್ನು ಮುಂದಕ್ಕೆ ಬಿಟ್ಟು ಈ ರಾಷ್ಟ್ರಗಳ ಪೈಕಿ ಹಲವು ರಾಷ್ಟ್ರಗಳನ್ನು ಹೆದರಿಸಿತು. ನಿಮಗೆ ನೆನಪಿರಲಿ, ತೈಲ ಉತ್ಪಾದಿಸುವ ದೇಶಗಳ ಮೇಲೆ ನಿಯಂತ್ರಣ ಹೇರುತ್ತಾ ಹೋದ ಅಮೆರಿಕ ಇವತ್ತು ಜಗತ್ತಿನ ದೊಡ್ಡಣ್ಣನಾಗಿ ಕುಳಿತಿದೆ. ತೈಲದ ವಿಷಯದಲ್ಲಿ ಅದರದು ಫುಲ್ಲು ಡ್ರಾಮಾ. ಅದು ಹೇಳಿದಂತೆ ಕೇಳದಿದ್ದರೆ ಯಾವ ದೇಶದ ಮೇಲಾದರೂ ಯುದ್ಧ ಮಾಡುತ್ತದೆ. ರಾಸಾಯನಿಕ ಅಸ್ತ್ರಗಳಿವೆ ಎಂಬ ಕಾರಣಕ್ಕಾಗಿ ಅದು ಇರಾಕ್ ಮೇಲೆ ಯುದ್ಧ ಮಾಡಿತು. ಅಲ್ಲಿರುವ ಸರ್ಕಾರವನ್ನು ಕಿತ್ತೊಗೆಯಿತು. ಆದರೆ ಇಡೀ ದೇಶ ಹುಡುಕಿದರೂ ರಾಸಾಯನಿಕ ಅಸ್ತ್ರಗಳು ಸಿಗಲಿಲ್ಲ.

ನೋಡುತ್ತಾ ಹೋದರೆ ತಾಲಿಬಾನಿಗಳು, ಅಲ್‌ಖೈದಾದಂತಹ ಉಗ್ರಗಾಮಿ ಸಂಘಟನೆಗಳು ಹುಟ್ಟಲು ಅಮೆರಿಕವೇ ಕಾರಣ. ಯಾರ ಮೇಲಾದರೂ ಯುದ್ಧ ಮಾಡಿಸಲು ತಾನೇ ಹುಟ್ಟು ಹಾಕುವ ಸಂಘಟನೆಗಳನ್ನು ತನ್ನ ಕುತ್ತಿಗೆಗೆ ಬರುತ್ತದೆ ಎಂದು ಗೊತ್ತಾದ ಮೇಲೆ ಮೈಮೇಲೆರಗುವುದು ಅಮೆರಿಕದ ಗುಣ. ದಕ್ಷಿಣ ಅಮೆರಿಕದ ವೆನಿಜುವೆಲಾದಲ್ಲಿ ಇವತ್ತು ಜಗತ್ತಿಗೆ ಬೇಕಾದ ಕಚ್ಚಾ ತೈಲದ ಪೈಕಿ ಶೇಕಡಾ ಇಪ್ಪತ್ತರಷ್ಟು, ಸೌದಿ ಅರೇಬಿಯಾದಲ್ಲಿ ಶೇಕಡಾ ಹದಿನೆಂಟರಷ್ಟು, ಕೆನಡಾದಲ್ಲಿ ಶೇಕಡಾ ಹದಿಮೂರರಷ್ಟು ಹಾಗೂ ಇರಾನ್‌ನಂತಹ ದೇಶಗಳಲ್ಲಿ ಶೇಕಡಾ ಒಂಬತ್ತರಷ್ಟು ತೈಲವನ್ನು ಉತ್ಪಾದನೆ ಮಾಡಲಾಗುತ್ತದೆ. ಅಲ್ಲೇಕೆ ಬರೀ ನೈಜೀರಿಯಾ ಒಂದರಲ್ಲೇ ಅಮೆರಿಕದ ಕಂಪನಿಗಳು ಲಕ್ಷಾಂತರ ಬ್ಯಾರಲ್ ತೈಲವನ್ನು ತೆಗೆಯುತ್ತದೆ. ಹೀಗೆ ಜಗತ್ತಿನಲ್ಲಿ ಉತ್ಪಾದನೆಯಾಗುವ ತೈಲದ ಅರ್ಧದಷ್ಟು ಪ್ರಮಾಣವನ್ನು ಅದು ನುಂಗಿ ಹಾಕುತ್ತದೆ. ಕಾಲಕ್ರಮೇಣ ಅದು ತನ್ನ ತೈಲದ ಬಳಕೆಯನ್ನು ಕಡಿಮೆ ಮಾಡುತ್ತಿದ್ದರೆ, ಇಂಡಿಯಾ, ಚೀನಾದಂತಹ ದೇಶಗಳು ತೈಲದ ಮೇಲಿನ ಅವಲಂಬನೆಯನ್ನು ಹೆಚ್ಚು ಮಾಡುತ್ತಾ ಹೋಗುತ್ತಿವೆ. ಇನ್ನೈದಾರು ವರ್ಷ ಕಳೆಯುವ ವೇಳೆಗೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ತೈಲ ಬಳಸುವ ರಾಷ್ಟ್ರಗಳಲ್ಲಿ ಚೀನಾ, ಭಾರತವೇ ಅಗ್ರಗಣ್ಯ ರಾಷ್ಟ್ರಗಳಾಗಿ ಪರಿವರ್ತನೆಯಾಗುತ್ತವೆ.

ಇವತ್ತು ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ಸರಿ ಸುಮಾರು ಆರು ಸಾವಿರದ ಆರು ನೂರು ರುಪಾಯಿ. ಇದನ್ನು ತಂದು ದೇಶದುದ್ದಗಲ ಸರಬರಾಜು ಮಾಡಲು ಅದಕ್ಕಿಂತ ಹೆಚ್ಚಿನ ಹಣ ಬೇಕಾಗುತ್ತದೆ. ಹೀಗಾಗಿ ನಮಗೆ ಪೆಟ್ರೋಲು ಹಾಗೂ ಡೀಸೆಲು ದುಬಾರಿ. ಆದರೆ ಇದನ್ನು ಕಡಿಮೆ ಮಾಡಿಕೊಳ್ಳುವ ಗುಣ ನಮ್ಮ ಜನರಲಿ ಬೆಳೆದಿಲ್ಲ. ಐಟಿ ಬಿಟಿಗಳ ಹೆಸರಿನಲ್ಲಿ ಬೆಳೆದಿರುವ ಕಂಪನಿಗಳ ಪೈಕಿ ಬಹುತೇಕವು ವಿದೇಶದ ಮೇಲೆ ಅವಲಂಬನೆ ಆಗಿರುವಂತಹವು. ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅವು ಗಣನೀಯ ಪ್ರಮಾಣದಲ್ಲಿ ವೇತನ ಕೊಟ್ಟು ಕೊಟ್ಟು ಏನಾಗಿದೆ ಎಂದರೆ ಮೇಲ್ವರ್ಗದ ಮಧ್ಯಮ ವರ್ಗವನ್ನು ಸೃಷ್ಟಿಸಿವೆ. ನಾಳೆ ವಿದೇಶದಲ್ಲಿ ಜಾಗತಿಕ ಆರ್ಥಿಕ ಕೊರತೆಯಾದರೆ ಅವು ನಿರಾತಂಕವಾಗಿ ತಮ್ಮಲ್ಲಿರುವ ಉದ್ಯೋಗಿಗಳನ್ನು ತೆಗೆದು ಹಾಕುತ್ತವೆ. ಆಗ ಅತಿ ಹೆಚ್ಚಿನ ಸಂಬಳ ಪಡೆಯುವ ಉದ್ಯೋಗಿಗಳು ಒಂದೋ ಬೇರೆ ಕಡೆ ಕೆಲಸ ಹುಡುಕಬೇಕು. ಇಲ್ಲವೇ ನಿರಾಸೆಯ ಮೂಟೆ ಹೊರಬೇಕು. ಹೀಗೆ ನಿರಾಸೆಯ ಮೂಟೆ ಹೊರುವವರಿಗೆ ಜೀವನಕ್ಕೆ ಒಂದು ಅರ್ಥವಿದೆ. ಅದು ನಾಲ್ಕು ಜನರ ಉಪಯೋಗಕ್ಕೂ ಬರಬೇಕು ಎಂದು ತಿಳಿ ಹೇಳುವ ಕೆಲಸ ಒಂದು ಸಮಾಜದಿಂದ ಆಗದಿದ್ದರೆ ಮುಂದಿನ ಕೆಲ ವರ್ಷಗಳಲ್ಲಿ ಕೇವಲ ತೈಲದ ಮೇಲಿನ ಅವಲಂಬನೆಯ ಹೊಡೆತದಲ್ಲೇ ನಾವು ಅಡ್ಡ ಮಲಗಿ ಬಿಡುತ್ತೇವೆ.

ನೋಡುತ್ತಿರಿ, ಮೋದಿ ಬಂದಿದ್ದಾರೆ. ಈಗ ದೇಶದ ತುಂಬ ತೈಲವನ್ನು ಪತ್ತೆ ಹಚ್ಚಿ ನಮಗೆ ಅಗತ್ಯವಾದ ತೈಲವನ್ನು ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗ ಸಿಗುತ್ತಿರುವ ತೈಲವೇ ಬಂಡವಾಳಷಾಹಿಗಳ ಕೈಗೆ ಸಿಕ್ಕು ಅವರು ವಿದೇಶಗಳಿಗಿಂತ ದುಬಾರಿ ದರ ಬೇಕು ಎನ್ನುವ ಮಟ್ಟಕ್ಕೆ ಹೋಗಿದ್ದಾರೆ. ಹಾಕಿರುವ ಬಂಡವಾಳಕ್ಕಿಂತ ಜಾಸ್ತಿ ದುಡ್ಡು ಬೇಕು ಎನ್ನುವ ಬಂಡವಾಳಷಾಹಿಗಳು ನಮಗೆ ಕಡಿಮೆ ದರದಲ್ಲಿ ತೈಲ ಕೊಡುತ್ತಾರೆ ಎಂಬುದು ಸುಳ್ಳು. ಅದಕ್ಕಿಂತ ಮುಖ್ಯವಾಗಿ ತೈಲ ತೆಗೆಯಲು ಅಪಾರ ಪ್ರಮಾಣದ ಬಂಡವಾಳ ಬೇಕು. ಆಗ ನಮ್ಮಲ್ಲಿರುವವರೂ ವಿದೇಶಿ ಕಂಪನಿಗಳ ಜತೆ ಹೊಂದಾಣಿಕೆ ಮಾಡಿಕೊಂಡು ತೈಲ ತೆಗೆಯುತ್ತಾರೆ ಎನ್ನಿ. ಜನರ ಕಷ್ಟವೇನು ದೂರವಾಗುತ್ತದೆಯೇ? ನೋ ಛಾನ್ಸ್. ಇದನ್ನು ಹೊಸತಾಗಿ ಅಧಿಕಾರಕ್ಕೆ ಬಂದಿರುವ ಮೋದಿ ಗಮನದಲ್ಲಿಟ್ಟುಕೊಳ್ಳಬೇಕು. ಸರ್ಕಾರದ ಕಾರ್ಯದರ್ಶಿಗಳು ಏನೇ ಟಿಪ್ಪಣಿ ತಯಾರಿಸಿದರೂ ಮೊದಲು ನನಗೆ ತಂದು ತೋರಿಸಬೇಕು ಎಂದು ಫರ್ಮಾನು ಹೊರಡಿಸುವವರೂ ಅವರೇ. ಎಲ್ಲ ಕೆಲಸಗಳಿಗೂ ಮಂತ್ರಿಗಳೇ ಜವಾಬ್ದಾರರು ಎನ್ನುವವರೂ ಇವರೇ. ಹೀಗಾಗಿ ಹೊಸ ಸರ್ಕಾರದ ಬಗ್ಗೆ ಅತಿರಂಜಿತವಾದ ಕಲ್ಪನೆಗಳನ್ನು ಮಾಡಿಕೊಳ್ಳುತ್ತಾ ಕೂರುವುದು ಸರಿಯಲ್ಲ.

ಅದೇನೇ ಇರಲಿ, ಅಂದಹಾಗೆ ನಮ್ಮ ನೆರೆಹೊರೆಯ ದೇಶಗಳನ್ನೇ ನೋಡಿ. ಚೀನಾ, ಪಾಕಿಸ್ತಾನ, ಶ್ರೀಲಂಕಾ ಇವೆಲ್ಲ ನಮಗೆ ವಿರುದ್ಧವಾಗಿ ನಿಂತಿವೆ. ಚೀನಾ ದೇಶವಂತೂ ಅಮೆರಿಕದಷ್ಟಲ್ಲದಿದ್ದರೂ ತನ್ನ ಶಕ್ತಿಯನ್ನು ರಷ್ಯಾಕ್ಕಿಂತ ಹೆಚ್ಚಾಗಿ ಬೆಳೆಸಿಕೊಂಡಿದೆ. ಹೀಗಾಗಿ ಏಷ್ಯಾದ ನೆಲೆಯಲ್ಲಿ ಚೀನಾಕ್ಕೆ ಒಂದು ಚೆಕ್‌ಮೇಟ್ ಇರಲಿ ಎಂಬ ಕಾರಣಕ್ಕಾಗಿ ಭಾರತಕ್ಕೆ ಅಮೆರಿಕ ಬೆಂಬಲ ನೀಡುತ್ತಿದೆ. ಅದರ ಯೋಜನೆಗಳಿಗೆ ಸಹಕಾರ ನೀಡುತ್ತಿದೆ. ಒಂದು ವೇಳೆ ಚೀನಾ-ಭಾರತದ ಮಧ್ಯೆ ಯುದ್ಧವಾದರೆ ಅದಕ್ಕೆ ಎರಡು ಲಾಭ. ಒಂದು ತನಗೆ ಎದುರಾಳಿಯಾಗಿ ಬೆಳೆಯುತ್ತಿರುವ ಚೀನಾದ ಶಕ್ತಿ ಗಣನೀಯ ಪ್ರಮಾಣದಲ್ಲಿ ಕುಗ್ಗುತ್ತದೆ. ಅದೇ ರೀತಿ ಭಾರತ ತಾನು ಹೇಳಿದಂತೆ ಕೇಳುವ ರಾಷ್ಟ್ರವಾಗಿ ಉಳಿದುಕೊಳ್ಳುತ್ತದೆ ಎಂಬುದು ಅದರ ಲೆಕ್ಕಾಚಾರ. ಒಂದು ವೇಳೆ ಅದಕ್ಕೆ ಚೀನಾದ ಹೆದರಿಕೆ ಇಲ್ಲದಿದ್ದರೆ ದಿನನಿತ್ಯ ಪಾಕಿಸ್ತಾನದ ಮೂಲಕ ಅದು ನಮಗೆ ಕಿರಿಕ್ ಮಾಡಿಸುತ್ತಲೇ ಇತ್ತು. ಭಾರತ ಎಷ್ಟೇ ಶಕ್ತಿಯುತವಾಗಿರಬಹುದು. ಆದರೆ ಅಣುಬಾಂಬ್ ಎಂಬುದು ಭಾರತದಲ್ಲೂ ಇದೆ, ಪಾಕಿಸ್ತಾನದಲ್ಲೂ ಇದೆ. ಪಾಕಿಸ್ತಾನದಲ್ಲಿ ಅದನ್ನು ಐಎಸ್‌ಐ ಉಗ್ರರ ಕೈಗೆ ಕೊಟ್ಟು ಎದುರಾಳಿಯನ್ನು ಮಣಿಸಲು ಯತ್ನಿಸಬಹುದು.

ಹೀಗಾಗಿ ಅಲ್ಲೂ ಭಾರತಕ್ಕೆ ನಷ್ಟವೇ. ಹಾಗಂತ ಆ ದೇಶದ ಕಿರಿಕ್‌ನ್ನು ತುಂಬ ಕಾಲ ಸಹಿಸಿಕೊಳ್ಳಲು ಸಾಧ್ಯವಿಲ್ಲವಲ್ಲ? ಉಳಿದಂತೆ ಬಾಂಗ್ಲಾ ದೇಶದಿಂದ ವಲಸೆ ಬರುತ್ತಿರುವವರು ಇವತ್ತು ಭಾರತದ ಒಂದು ರಾಜ್ಯವನ್ನೇ ಕಬಳಿಸುವ ಸ್ಥಿತಿಗೆ ತಲುಪಿದ್ದಾರೆ. ಶ್ರೀಲಂಕಾ ಶುರುವಿನಲ್ಲಿ ಭಾರತದ ಪರವಾಗಿತ್ತು. ಅಲ್ಲಿರುವ ಎಲ್‌ಟಿಟಿಇ ಉಗ್ರರನ್ನು ಬಡಿದು ಹಾಕಲು ರಾಜೀವ್‌ಗಾಂಧಿ ಶಾಂತಿ ಸೇನೆಯನ್ನು ಕಳಿಸಿದರು. ಅದು ಹೋಗಿ ಎಲ್‌ಟಿಟಿಇ ವಿರುದ್ಧ ಹೋರಾಡಿತು. ಆದರೆ ಅಲ್ಲಿಂದ ವಾಪಸು ಬಂದ ಮೇಲೆ ಶ್ರೀಲಂಕಾ ಸೀದಾ ಹೋಗಿ ಚೀನಾದ ಬೆಂಬಲ ಪಡೆಯಿತು. ಎಲ್‌ಟಿಟಿಇ ಎಂಬ ಉಗ್ರಗಾಮಿ ಸಂಘಟನೆಯನ್ನು ಸದೆ ಬಡಿಯಿತು. ಅದರ ನಾಯಕ ಪ್ರಭಾಕರನ್ ತೀರಿಕೊಂಡ. ಈಗ ಭಾರತ ಅಲ್ಲಿ ತಮಿಳರಿಗೆ ಆಶ್ರಯ ಕೊಡಲು ಮನೆಗಳನ್ನು ನಿರ್ಮಿಸಿಕೊಡಬೇಕು ಅಷ್ಟೇ. ಹೀಗೆ ನೋಡುತ್ತಾ ಹೋದರೆ ನಮಗೆ ನೆರೆಹೊರೆಯ ದೇಶಗಳು ಶತ್ರುಗಳಾಗಿ ಪರಿಣಮಿಸಿವೆ. ಯಾವತ್ತು ಶತ್ರು ನೆರೆಯಲ್ಲಿರುತ್ತಾನೋ, ಆಗ ದೇಶದ ನೆಮ್ಮದಿ ಹಾಳಾಗಿ ಹೋಗುತ್ತದೆ. ನಾವು ಚಂದ್ರಗ್ರಹಕ್ಕೆ ಉಪಗ್ರಹ ಕಳಿಸಬಹುದು. ಮಂಗಳನಲ್ಲಿಗೆ ಉಪಗ್ರಹ ಕಳಿಸಬಹುದು. ಅದು ಬೇರೆ ಮಾತು. ಅದರಿಂದ ನಾವು ಪ್ರಬಲರು ಎಂಬ ಸಂದೇಶ ರವಾನೆಯಾಗುತ್ತದೆ ಎಂಬುದೂ ನಿಜ.

ಆದರೆ ನೆರೆಹೊರೆಯ ರಾಷ್ಟ್ರಗಳ ಜತೆ ಉತ್ತಮ ಬಾಂಧವ್ಯ ಹೊಂದಲು ಅಗತ್ಯವಾದ ತಂತ್ರಗಾರಿಕೆಯನ್ನು ದೇಶದ ಆಡಳಿತ ಚುಕ್ಕಾಣಿ ಹಿಡಿದವರು ರೂಪಿಸಬೇಕು. ಇಲ್ಲದೇ ಹೋದರೆ ಬಾಹ್ಯಶಕ್ತಿಗಳ ಸಮಸ್ಯೆ ಯಾವತ್ತೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಬೆಳೆಯುತ್ತಿರುವ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಆಂತರಿಕ ಸಮಸ್ಯೆಯೂ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಆಡಳಿತ ಹೇಗಿರಬೇಕು ಎಂಬುದು ಮುಖ್ಯ ಪ್ರಶ್ನೆಯಾಗಿ ಪರಿಣಮಿಸುತ್ತದೆ. ನಮ್ಮ ಜನರಿಗೆ ನಾವು ಶ್ರಮದ ಮಹತ್ವವನ್ನು ಹೇಳಿಕೊಡುವುದೂ ಇಲ್ಲ. ದೊಡ್ಡ ದೊಡ್ಡ ಕೈಗಾರಿಕೆಗಳು ಸಾವಿರಾರು ಕೋಟಿ ರುಪಾಯಿ ಟೋಪಿ ಹಾಕಿ ಓಡಿ ಹೋದರೂ ಮುಟ್ಟುವುದಿಲ್ಲ. ಹೀಗಾದಾಗ ಒಂದು ದೇಶದ ಉಳಿವು ಹೇಗೆ ಸಾಧ್ಯ? ಈಗ ಉದಾಹರಣೆಗೆ ಕರ್ನಾಟಕವನ್ನೇ ತೆಗೆದುಕೊಳ್ಳಿ. ಮೊನ್ನೆ ನಡೆದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಹನ್ನೊಂದು ಜನ ಆಯ್ಕೆಯಾದರು. ಈ ಪೈಕಿ ಹಲವರಿಗೆ ಸಂಸದೀಯ ರಾಜಕೀಯ ಅರ್ಥವಾದರೂ ಕೆಲ ಮಂದಿ ಗ್ರಾಮಪಂಚಾಯತ್‌ಗಳಿಗೂ ಆಯ್ಕೆಯಾಗಲು ಅರ್ಹರಲ್ಲ. ಬರೀ ಹದಿನಾಲ್ಕು ವರ್ಷಗಳ ಹಿಂದೆ ತನ್ನ ಖರ್ಚಿಗೆ ಮಾವ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಮನುಷ್ಯ ಇವತ್ತು ರಾಜ್ಯಸಭೆ ಸದಸ್ಯ. ಯಾಕಯ್ಯಾ ಆತ್ಮಹತ್ಯೆಗೆ ಯತ್ನಿಸಿದೆ ಎಂದರೆ, ಮಾವ ನನ್ನ ಖರ್ಚಿಗೆ ಹಣ ಕೊಡುತ್ತಿಲ್ಲ. ಇನ್ನು ಬದುಕಿದ್ದು ಏನು ಪ್ರಯೋಜನ ಎಂದು ಆತನೇ ಹೇಳಿಕೊಂಡಿದ್ದ.

ಮಾವನ ಬಳಿ ಕೇಳಿದರೆ, ಹೆಣ್ಣು ಮಗಳನ್ನು ಕೊಟ್ಟಿದ್ದೇ ಜಾಸ್ತಿ. ಇನ್ನು ಖರ್ಚಿಗೂ ಹಣ ಕೊಡುತ್ತಾ ಕೂತರೆ ಹೇಗೆ ಎಂದು ಕೇಳಿದ. ಹೀಗೆ ಆತ್ಮಹತ್ಯೆಗೆ ಮುಂದಾಗಿದ್ದವನೀಗ ರಾಜ್ಯಸಭಾ ಸದಸ್ಯ. ಹೋಗಲಿ, ಎಂತಹ ಮನುಷ್ಯನಾದರೂ ಪರಿವರ್ತನೆಯಾಗಿ ಒಳ್ಳೆಯವನಾಗಬಾರದು ಎಂದಲ್ಲ. ಆದರೆ ಕಳೆದ ಹದಿನಾಲ್ಕು ವರ್ಷಗಳಿಂದ ಈತ ಬಡ ರೈತರಿಗೆ ಉಂಡೆ ನಾಮ ತಿಕ್ಕಿಯೇ ಭೂ ಮಾಲೀಕನಾದ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಮಿತ್ರರನ್ನು ಸೃಷ್ಟಿಸಿಕೊಂಡ. ಇವತ್ತಿಗೂ ಆತನ ಕೆಲಸ ಉಂಡೆ ನಾಮ ತಿಕ್ಕುವುದೇ. ಆದರೆ ಏನು ತಿಕ್ಕಿದರೇನು? ನಮಗೆ ಬರಬೇಕಾಗಿದ್ದು ಬಂದರಾಯಿತು ಎನ್ನುವವರು ಆತ ರಾಜ್ಯಸಭೆಗೆ ಆಯ್ಕೆಯಾಗುವಂತೆ ನೋಡಿಕೊಂಡರು. ರಾಜ್ಯಸಭೆ ಎಂದರೆ ದೇಶವನ್ನು ಮುನ್ನಡೆಸಲು ಅಗತ್ಯವಾದ ದಾರಿ ತೋರುವ ವೇದಿಕೆ. ಅಂತಲ್ಲಿ ಹೋಗಿ ಕುಳಿತು ಈತ ಏನು ಮಾತನಾಡುತ್ತಾನೆ? ರೈತರಿಗೆ ಉಂಡೆ ನಾಮ ತಿಕ್ಕುವುದು ಹೇಗೆ ಅನ್ನುವುದನ್ನು ತಿಳಿಸಿಕೊಡುತ್ತಾನಾ? ಇಂತಹವರು ರಾಜ್ಯಸಭೆಗೆ ಆಯ್ಕೆಯಾದರೆ ಏನು ಉಪಯೋಗ?

ಇನ್ನು ವಿಧಾನಪರಿಷತ್ತಿಗೆ ಆಯ್ಕೆಯಾದವರ ಪೈಕಿ ಬಹುತೇಕ ಜನ ಮುಂಚೆ ವಿಧಾನಸಭೆಯಲ್ಲಿ ಕೆಲಸ ಮಾಡಿದವರು. ಈಶ್ವರಪ್ಪ, ಪರಮೇಶ್ವರ್, ರೇವಣ್ಣ, ಭೋಸರಾಜು ಅವರಂತಹವರು ಆಯ್ಕೆಯಾಗಿರುವುದು ಬೇರೆ ವಿಚಾರ. ಆದರೆ ಆಯ್ಕೆಯಾದವರ ಪಟ್ಟಿ ತೆಗೆದು ನೋಡಿ. ಒಬ್ಬ ಯಾವತ್ತೂ ಗೋವಾದಿಂದ ಹಿಡಿದು ದಿಲ್ಲಿಯ ತನಕ ಕ್ಯಾಸಿನೋಗಳಲ್ಲಿ ಅಡ್ಡಾಡುತ್ತಾನೆ. ಕ್ಯಾಸಿನೋ ಎಂದರೆ ಗ್ಯಾಂಬ್ಲಿಂಗ್ ಅಡ್ಡೆ. ಹೇಳಿ ಕೇಳಿ ಇವನೂ ಬಡರೈತರಿಗೆ ಉಂಡೆ ನಾಮ ತಿಕ್ಕಿ ನೂರಾರು ಕೋಟಿ ರುಪಾಯಿ ಆಸ್ತಿ ಮಾಡಿಕೊಂಡವನು. ಇವನು ಈಗ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾನೆ. ಅಲ್ಲಿಗೆ ಹೋಗಿ ರಾಜ್ಯಕ್ಕೆ ಏನು ಸಂದೇಶ ಕೊಡುತ್ತಾನೆ? ಜನ ಎಲ್ಲ ಶ್ರಮದ ಮಹತ್ವ ಅರಿಯಬೇಕು ಎಂದು ಕರೆ ಕೊಡುತ್ತಾನಾ? ಇವನ ಬಾಯಿಂದ ಅಂತಹ ಮಾತುಗಳು ಹೊರಟರೆ ಜನ ನಗುತ್ತಾರೆ. ನೀನು ಮಾತ್ರ ಕಂಡವರಿಗೆ ಉಂಡೆ ನಾಮ ತಿಕ್ಕಿ ಗ್ಯಾಂಬ್ಲಿಂಗ್ ಆಡಬಹುದು. ಐಷಾರಾಮಿ ಕಾರುಗಳಲ್ಲಿ ತಿರುಗಬಹುದು. ವಿಮಾನದಲ್ಲಿ ಅಡ್ಡಾಡಬಹುದು. ನಾವು ಕಷ್ಟಪಡಬೇಕಾ ಎಂದು ಕೇಳುತ್ತಾರೆ.

ಹೀಗೆ ವಿಚಾರ ಶೂನ್ಯರನ್ನು, ತಮಗಾಗಿ ಬದುಕಿರುವವರನ್ನು ದೊಡ್ಡ ದೊಡ್ಡ ಜಾಗಗಳಿಗೆ ಕಳಿಸಿಕೊಟ್ಟರೆ ಆ ಜಾಗದ ಪಾವಿತ್ರ್ಯ ಹಾಳಾಗುತ್ತದೆಯೇ ಹೊರತು ಜನರ ಬದುಕಿನಲ್ಲಿ ಯಾವ ಬದಲಾವಣೆಯೂ ಬರುವುದಿಲ್ಲ. ಈ ದೇಶದ ಜನರಿಗಿರುವ ಬಡತನ ನೋಡಿದ ಗಾಂಧೀಜಿ, ಅವರಿಗೆ ಪೂರ್ತಿ ಹೊಟ್ಟೆ ತುಂಬುವವರೆಗೆ, ಪೂರ್ತಿ ಮೈ ಭರ್ತಿಯಾಗುವಷ್ಟು ಬಟ್ಟೆ ದೊರೆಯುವವರೆಗೆ ಫಕೀರನಾಗಿಯೇ ಬದುಕುತ್ತೇನೆ ಎಂದರು. ಅದರಂತೆ ಬದುಕಿದರು. ಕೋಟ್ಯಂತರ ಜನ ಅವರಿಂದ ಪ್ರಭಾವಿತರಾದರು. ದೇಶ ಅನ್ನಕ್ಕಾಗಿ ಕ್ಷಾಮ ಎದುರಿಸುವ ಕಾಲದಲ್ಲಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರಂತಹ ನಾಯಕ, ಒಂದು ಹೊತ್ತು ಉಪವಾಸವಿರಿ ಎಂದು ಕರೆ ನೀಡಿದರು. ತಾವೂ ಉಪವಾಸವಿದ್ದರು. ಜನ ಆಗಲೂ ಅದನ್ನು ಪಾಲಿಸಿದರು. ವಿನೋಭಾ ಭಾವೆ ಭೂ ದಾನ ಚಳವಳಿಗಾಗಿ ಇಡೀ ರಾಷ್ಟ್ರವನ್ನೇ ಸುತ್ತಿದರು. ನಮಗೆ ಬೇಕಾದವರು ಇಂತಹ ಮಾರ್ಗದರ್ಶಕರೇ ಹೊರತು, ಕಂಡವರ ತಲೆ ಮೇಲೆ ಕೈ ಎಳೆಯುವುದನ್ನೇ ಉದ್ಯೋಗ ಮಾಡಿಕೊಂಡವರಲ್ಲ. ಹಾಗೆ ನೋಡಿದರೆ ಮೋದಿ ಭ್ರಷ್ಟರಲ್ಲ, ಆದರೆ ಅವರನ್ನು ಬಳಸಿಕೊಂಡು ನೂರಾರು, ಸಾವಿರಾರು ಕೋಟಿ ರುಪಾಯಿ ದುಡಿಯಲು ಕುಳಿತವರ ಸಂಖ್ಯೆ ದೊಡ್ಡದು.

ಹೀಗಾಗಿ ಜನ ತಾವಿರುವ ಜಾಗದಿಂದ ಹಿಡಿದು, ದೇಶ, ಜಗತ್ತಿನ ಎಲ್ಲ ವಿಷಯಗಳನ್ನು ಅರಿಯಬೇಕು. ಮುನ್ನುಗ್ಗುವ ಛಾತಿ ಬೆಳೆಸಿಕೊಳ್ಳಬೇಕು. ಹಾಗೆ ಮುಂದೆ ನುಗ್ಗದಿದ್ದರೆ ನಾವು ಬದುಕುವುದು ಕಷ್ಟ ಎಂಬುದನ್ನು ಅರಿಯಬೇಕು. ಚಾರ್ಲ್ಸ್ ಡಾರ್ವಿನ್ ಅದನ್ನೇ ತಾನೇ ಹೇಳಿದ್ದು. ಶಕ್ತಿಯುತವಾಗಿದ್ದು ಬದುಕುತ್ತದೆ, ದುರ್ಬಲವಾಗಿದ್ದು ನಾಶವಾಗುತ್ತದೆ ಅಂತ. ನಾವು ಮನುಷ್ಯರು. ಕೇವಲ ಸಿದ್ದರಾಮಯ್ಯ, ಮೋದಿ ಥರದವರು ಬಂದು ನಮ್ಮ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುತ್ತಾರೆ ಎಂಬ ತೀರ್ಮಾನಕ್ಕೆ ಬರುವ ಮೊದಲು ನಮ್ಮ ಜೀವನದಲ್ಲೇ ಪರಿವರ್ತನೆ ತಂದುಕೊಳ್ಳೋಣ. ಶ್ರಮದ ಮಹತ್ವವನ್ನು ನಮ್ಮ ಮಕ್ಕಳಿಗೆ ಹೇಳಿ ಕೊಡೋಣ. ಇಲ್ಲದಿದ್ದರೆ ಈ ದೇಶದಲ್ಲಿ ಬಂಡವಾಳಷಾಹಿಗಳು, ಮೋಸ ಮಾಡುವವರು, ಅನರ್ಹರು ದಿನಕಳೆದಂತೆ ಹೆಚ್ಚಾಗುತ್ತಾ ಹೋಗುತ್ತಾರೆ. ಆದ್ದರಿಂದ ಭಜನಾ ಮಂಡಳಿಗಳನ್ನು ಮೊದಲು ನಿಲ್ಲಿಸಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ, ತಾವೇನು ಮಾಡಬೇಕು ಎಂಬುದರ ಕುರಿತು ಪಕ್ಕಾ ನಿರ್ಧಾರ ತಳೆಯುವ ಶಕ್ತಿ ನಮ್ಮಲ್ಲಿ ಬರಲಿ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books