Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನಂಬಿಕೆ ಮತ್ತು ಆಚರಣೆಗಳ ನಡುವಿನ ಗೆರೆ...

ಮಾತು ಮಿತಿ ಮೀರಬಾರದು, ಬರವಣಿಗೆ ಹದ ಮೀರಬಾರದು.


ಹಾಗಾಗದೇ ಹೋದಾಗ ಸಾರ್ವಜನಿಕ ವೇದಿಕೆಯಲ್ಲೇ ‘ಮೂತ್ರ ವಿಸರ್ಜನೆ’ಯಾಗುತ್ತದೆ, ಅದು ಪತ್ರಿಕೆಯ ಮುಖಪುಟದಲ್ಲೇ ಸೋರಿ ಹೋಗುತ್ತದೆ. ಸಜ್ಜನರು ಮೂಗು ಮುಚ್ಚಿಕೊಳ್ಳುತ್ತಾರೆ. ಮಿಕ್ಕವರು ಅದನ್ನೇ ಜರಡಿ ಹಿಡಿದು ಆಸ್ವಾದಿಸುತ್ತಾರೆ. ಮೋರಿ ನೀರು ಬೀದಿಗೆ ಬರುತ್ತದೆ, ಮನಸ್ಸುಗಳು ಮಲಿನವಾಗುತ್ತವೆ. ಕೆಲವರಿಗೆ ಐಡೆಂಟಿಟಿ ಕ್ರೈಸಿಸ್, ಇನ್ನು ಕೆಲವರ ಐಡೆಂಟಿಟಿಯೇ ಅವರಿಗೆ ಕ್ರೈಸಿಸ್ ತಂದೊಡ್ಡುತ್ತದೆ. ಮೊದಲನೆಯ ವರ್ಗಕ್ಕೆ ಸೇರಿದವರಿಗೆ ವೇದಿಕೆ ಒದಗಿಸುವುದಕ್ಕೆ ಫೇಸ್‌ಬುಕ್ಕಿನಂಥಾ ಸಾಮಾಜಿಕ ತಾಣಗಳಿವೆ, ಎರಡನೆಯ ವರ್ಗದವರಿಗೆ ಪತ್ರಿಕೆಗಳಿವೆ, ಚಾನೆಲ್ಲುಗಳಿವೆ. ಯಾರು ಎಲ್ಲಿ ಬೇಕಾದರೂ ವಿಸರ್ಜಿಸುವ ಮಟ್ಟಕ್ಕೆ ಇಳಿಯುತ್ತಾರೆ. ಎಷ್ಟಾದರೂ ವಿಸರ್ಜನೆಯಾಗುವುದು ತ್ಯಾಜ್ಯವೇ ತಾನೆ. ವೇದಿಕೆಗಳು ಮತ್ತು ಮಾಧ್ಯಮಗಳು ಶೌಚಾಲಯ ಆಗುತ್ತಿರುವುದು ಈ ಕಾಲಘಟ್ಟದ ದುರಂತ.

ಕೆಲವು ದಿನಗಳ ಹಿಂದೆ ಇದೇ ‘ಬಾಟಮ್ ಐಟಮ್’ನಲ್ಲಿ ಹಿರಣ್ಣಯ್ಯನವರು ಬಾಯ್ತಪ್ಪಿ ಆಡಿದ ಮಾತು ಸೃಷ್ಟಿಸಿದ ಅವಾಂತರಗಳ ಬಗ್ಗೆ ಬರೆದಿದ್ದೆ. ಈಗ ನೋಡಿದರೆ ಬಾಯ್ತಪ್ಪಿ ಮಾತಾಡುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ನಾನು ಬಹಳ ಗೌರವಿಸುವ ಹಿರಿಯರೇ ಇದರಲ್ಲಿ ಭಾಗಿಯಾಗುತ್ತಿರುವುದು ಮತ್ತು ಮಾಧ್ಯಮಗಳ ಮೂಲಕ ‘ಹಲ್ಲೆ’ಗೊಳಗಾಗುತ್ತಿರುವುದನ್ನು ನೋಡುವಾಗ ನೋವಾಗುತ್ತದೆ. ಹಿರಣ್ಣಯ್ಯನವರು ಸಿದ್ದರಾಮಯ್ಯನವರ ಬಗ್ಗೆ, ಅನಂತಮೂರ್ತಿಯವರು ಮೋದಿ ಬಗ್ಗೆ, ನಾ.ಡಿಸೋಜಾ ಅವರು ಭೈರಪ್ಪನವರ ಬಗ್ಗೆ... ಈಗ ಕಲ್ಬುರ್ಗಿಯವರು ದೇವರನ್ನೇ ತಡವಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಅನಂತಮೂರ್ತಿಯವರನ್ನೂ ಎಳೆದುತಂದು ವಿನಾಕಾರಣ ಅವರನ್ನು ಪೇಚಿಗೆ ಸಿಲುಕಿಸಿದ್ದಾರೆ. ಎಲ್ಲರದ್ದೂ ಒಂದು ರೀತಿಯ sweeping statement. ಯೋಚಿಸಿ ಮಾತಾಡುವುದಿಲ್ಲ, ಮಾತಾಡಿದ ನಂತರ ಯೋಚಿಸುತ್ತಾರೆ. ಅದರಲ್ಲೂ ಈ ದೇಶದಲ್ಲಿ ಧರ್ಮ, ದೇವರು, ನಂಬಿಕೆ, ಜಾತಿ, ನೀತಿಗಳ ಬಗ್ಗೆ ಮಾತಾಡುವಾಗ ಕಟ್ಟೆಚ್ಚರದಿಂದಿರಬೇಕು. ಮುಂದಾಗುವ ಅನಾಹುತಗಳ ಅರಿವಿರಬೇಕು. ಅದನ್ನು ಎದುರಿಸಲು ಸಿದ್ಧರಾಗಿದ್ದರೆ ಮಾತಾಡಬೇಕು, ಅದರ ಬದಲಾಗಿ ಇವತ್ತು ನೀಡಿದ ಹೇಳಿಕೆಗೆ ನಾಳೆ ಸ್ಪಷ್ಟೀಕರಣ ಕೊಟ್ಟು ಬಚಾವಾಗುವ ಸನ್ನಿವೇಶ ನಿರ್ಮಿಸಬಾರದು.

ಕಲ್ಬುರ್ಗಿಯವರು ಅನುಭವಿಸುತ್ತಿರುವ ಮುಜುಗರದ ಅರಿವು ನನಗಿದೆ. ಅವರು ಉಡಾಫೆಯ ಮನುಷ್ಯನಲ್ಲ, ಹಿರಿಯ ಸಂಶೋಧಕರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದವರು. ಹಾಗಾಗಿ ಅವರ ಮಾತಿಗೆ ಒಂದು ತೂಕ ಇದ್ದೇ ಇರುತ್ತದೆ. ಮೊನ್ನೆ ನಡೆದ ಸಮಾರಂಭದಲ್ಲಿ ಅವರು ವೇದಿಕೆಯಲ್ಲಿ ನಿಂತು ಅನಂತಮೂರ್ತಿಯವರ ಬೆತ್ತಲೆಸೇವೆ ಪುಸ್ತಕದಿಂದ ಆಯ್ದಭಾಗವನ್ನು ಕೋಟ್ ಮಾಡಿ ಮಾತಾಡುವ ದೃಶ್ಯವನ್ನು ನಾನು ಚಾನೆಲ್ಲುಗಳಲ್ಲಿ ನೋಡಿದ್ದೇನೆ, ಆನಂತರ ಆ ಹೇಳಿಕೆ ವಿವಾದಕ್ಕೀಡಾದಾಗ ಅದು ತನ್ನ ಅಭಿಪ್ರಾಯವಲ್ಲ, ಅನಂತಮೂರ್ತಿಯವರ ಅನುಭವವನ್ನಷ್ಟೇ ನಾನು ಹೇಳಿದೆ ಎಂದಿದ್ದನ್ನೂ ನೋಡಿದ್ದೇನೆ. ವೇದಿಕೆಯ ಮೇಲೆ ಅವರು ಕೊಂಚ ಲಘುವಾಗಿಯೇ ಈ ಮೂತ್ರದ ವಿಚಾರವನ್ನು ಪ್ರಸ್ತಾಪಿಸಿದಂತಿತ್ತು. ಆದರೆ ಅದು ವರದಿ ರೂಪದಲ್ಲಿ ಪ್ರಕಟವಾದಾಗ ಬೇರೆಯೇ ಸ್ವರೂಪವನ್ನು ಪಡೆದುಕೊಂಡಿತು. ಸಮಸ್ಯೆಯಿರುವುದು ಕಲ್ಬುರ್ಗಿಯವರ ಹೇಳಿಕೆಯಲ್ಲಲ್ಲ, ಅದನ್ನು ತಮ್ಮಿಷ್ಟಕ್ಕೆ ತಕ್ಕಂತೆ ತಿರುಚಿ ವರದಿ ಮಾಡಿದ ವಿಘ್ನಸಂತೋಷಿಗಳಲ್ಲಿ. ಚಾನೆಲ್ಲುಗಳಂತೂ ಒಂದು ದಿನವನ್ನು ಮೂತ್ರವಿಸರ್ಜನೆಗೇ ಮೀಸಲಾಗಿಟ್ಟವು. ಜನರನ್ನು ಕೆರಳಿಸುವುದಕ್ಕೆ ಇಷ್ಟು ಸಾಕಾಯಿತು.

ಆವತ್ತು ಕಲ್ಬುರ್ಗಿಯವರು ಕೇವಲ ಹಿಂದೂ ಧರ್ಮದ ಬಗ್ಗೆಯಷ್ಟೇ ಮಾತಾಡಲಿಲ್ಲ, ಕ್ರೈಸ್ತ, ಇಸ್ಲಾಂ, ಪಾರ್ಸಿ, ಸಿಖ್ ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ಪುರೋಹಿತಶಾಹಿತ್ವ ಚಾಲ್ತಿಯಲ್ಲಿದ್ದು ಜನರನ್ನು ಶೋಷಿಸುತ್ತಿದೆ ಎಂದಿದ್ದರು. ದೇವರು ನಿರಾಕಾರ ಮತ್ತು ಸರ್ವಶಕ್ತ. ಅವನಿಗೆ ಆಕಾರ ಕೊಡುವವರನ್ನು ನಿರಾಕರಿಸಿ ಅನ್ನುವುದು ಅವರ ಹೇಳಿಕೆಯ ಸಾರಾಂಶವಾಗಿತ್ತು. ಆದರೆ ದಿನಪತ್ರಿಕೆಯೊಂದರಲ್ಲಿ ಕಲ್ಬುರ್ಗಿ ಅವರು ಹಿಂದೂದೇವತೆಗಳು ಮತ್ತು ಧರ್ಮದ ವಿರೋಧಿ ಎಂದೇ ಬಿಂಬಿತವಾದರು. ಅವರ ಮಿಕ್ಕೆಲ್ಲಾ ವಿಚಾರಧಾರೆಗಳು ಮೂಲೆಗೆ ಸರಿದು, ದೇವರ ಮೇಲೆ ಮೂತ್ರ ಮಾಡಿದರೂ ಏನೂ ಆಗೋಲ್ಲ ಎಂದಿದ್ದಷ್ಟೇ ಹೈಲೈಟ್ ಆಯಿತು. ಅದು ಕೂಡಾ ಅವರ ಹೇಳಿಕೆಯಾಗಿರಲಿಲ್ಲ, ಅನಂತಮೂರ್ತಿಯವರು ಎಂದೋ ಬರೆದ ಪುಸ್ತಕದ ಸಾಲುಗಳು. ಮೊದಲೇ ಧರ್ಮದ ವಿಚಾರದಲ್ಲಿ ಅತಿ ಸೂಕ್ಷ್ಮವಾಗಿರುವ ಜನರನ್ನು ಇಂಥಾ ವರದಿಗಳು ಎತ್ತಿಕಟ್ಟುತ್ತವೆ ಮತ್ತು ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತವೆ. ಗಣೇಶನ ಮೂರ್ತಿಯಿಂದ ತೀರ್ಥ ಸುರಿಯುತ್ತದೆ ಅನ್ನುವ ಸುದ್ದಿಯನ್ನು ನಿಜವೆಂದು ನಂಬಿಸುವುದಕ್ಕೆ ಹೊರಟವರು, ಬಾಬಾಗಳ ಕೈಯಿಂದ ಬೂದಿ ಬೀಳುತ್ತದೆ ಎಂದು ಚಕಿತರಾದವರು, ಏಸುಕ್ರಿಸ್ತನ ಫೊಟೋ ಒಂದೇ ಕಣ್ಣಲ್ಲಿ ಅಳುತ್ತದೆ ಎಂದು ‘ಕಣ್ಣಾರೆ’ ನೋಡಿದವರು, ಇಂಥವರೇ ಕಲ್ಬುರ್ಗಿಯವರನ್ನು ದೂಷಿಸುವವರ ಪೈಕಿ ಮುಂಚೂಣಿಯಲ್ಲಿದ್ದಾರೆ.

ಹಲವು ಸಂಸ್ಕೃತಿಗಳು, ಧರ್ಮಗಳು ಮತ್ತು ಅವುಗಳ ಮಧ್ಯೆ ನಡೆಯುವ ಸಂಘರ್ಷಗಳ ತವರೂರಾಗಿರುವ ಈ ದೇಶದಲ್ಲಿ ಮೂಢನಂಬಿಕೆಗಳ ವಿರುದ್ಧ ಹೋರಾಡುವವರ ಬದುಕು ಯಾವತ್ತಿದ್ದರೂ ಕತ್ತಿ ಮೇಲಿನ ನಡಿಗೆಯೇ. ಸಾಯಿಬಾಬಾನಂಥಾ ಬಾಬಾನನ್ನೇ ಕೋರ್ಟಿಗೆಳೆದಿದ್ದ ಕೇರಳದ ಬಸವ ಪ್ರೇಮಾನಂದರ ಮೇಲೆಯೂ ಮಾರಣಾಂತಿಕ ಹಲ್ಲೆಗಳು ನಡೆದಿದ್ದವು. ಹಾಗಿದ್ದೂ ಅವರು ಎಂಬತ್ತು ವರ್ಷ ಬದುಕಿದ್ದರು. ಹುಟ್ಟಾ ನಾಸ್ತಿಕನಾಗಿದ್ದ ಅವರು ಸಾಯುವ ಹೊತ್ತಿಗೆ ದೈವಭಕ್ತರಾಗಿದ್ದರು ಎಂದು ಕೆಲವು ಕರ್ಮಠರು ಸುಳ್ಳುಸುಳ್ಳೇ ಪ್ರಚಾರ ಮಾಡಿದ್ದರು. ಆಗ ತನ್ನ ಎಲ್ಲಾ ಅಂಗಾಂಗಳೂ ನಿಷ್ಕ್ರಿಯವಾಗುವ ಸ್ಥಿತಿ ತಲುಪಿದ್ದರೂ ಪ್ರೇಮಾನಂದರು ಈ ವದಂತಿಗಳನ್ನು ನಿರಾಕರಿಸಿ ಹೇಳಿಕೆ ನೀಡಿದ್ದರು. ತಾನಿನ್ನೂ ಪ್ರಗತಿಪರನಾಗಿಯೇ ಉಳಿದಿದ್ದೇನೆ, ತಾನು ಸತ್ತನಂತರ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಬೇಕು ಮತ್ತು ಆ ಮೂಲಕ ತನ್ನ ಆತ್ಮವಾಗಲಿ ಭೂತವಾಗಲಿ ಯಾರನ್ನೂ ಕಾಡದಂತೆ ಮಾಡಬೇಕು ಎಂದಿದ್ದರು.

ಮಹಾರಾಷ್ಟ್ರದಲ್ಲಿ ಮೂಢನಂಬಿಕೆಗಳ ವಿರುದ್ಧ ದೊಡ್ಡ ರೀತಿಯಲ್ಲಿ ಸಮರ ಸಾರಿದ್ದ ನರೇಂದ್ರ ದಾಭೋಲ್ಕರ್ ಕೆಲವು ತಿಂಗಳ ಹಿಂದೆ ಕೊಲೆಯಾದರು. ಅವರ ಪ್ರಗತಿಪರ ಹೋರಾಟ ಮಾತಿಗಷ್ಟೇ ಸೀಮಿತವಾಗಿರಲಿಲ್ಲ. ಜನರ ಮಧ್ಯೆ ನಿಂತು ಅವರನ್ನು ಬದಲಾವಣೆಯ ಹಾದಿಯತ್ತ ಕರೆದೊಯ್ಯುವ ಮಾರ್ಗದರ್ಶಕನಂತೆಯೂ ಅವರು ಕೆಲಸ ಮಾಡಿದ್ದರು. ದೇವರ ಗೊಂಬೆಗಳಿಂದ ಪರಿಸರ ಮಾಲಿನ್ಯವಾಗುತ್ತದೆ ಎಂಬ ಕಾರಣಕ್ಕೆ ಅದರ ವಿರುದ್ಧ ಒಂದು ಆಂದೋಲನವನ್ನು ನಡೆಸಿದರು. ಅದರ ಫಲವಾಗಿ ರಾಸಾಯನಿಕಗಳನ್ನು ಬಳಸಿ ತಯಾರಿಸುವ ದೇವರ ಮೂರ್ತಿಗಳನ್ನು ಅಲ್ಲಿನ ನ್ಯಾಯಾಲಯ ನಿಷೇಧಿಸಿತು. ತಪ್ಪಾಗಿದ್ದು ಇಲ್ಲೇ, ಜಗತ್ತಿನಾದ್ಯಂತ ಔದ್ಯಮೀಕರಣದಿಂದಾಗಿ ಸಾವಿರಾರು ಕೆರೆನದಿಗಳು ಮಲಿನವಾಗುತ್ತಿದ್ದರೂ ಅದರ ಕಾರಣಕರ್ತರಾಗಿರುವ ಫ್ಯಾಕ್ಟರಿ ಮಾಲಿಕರು ಯಾವುದೇ ಶಿಕ್ಷೆಗೆ ಗುರಿಯಾಗಿಲ್ಲ. ಹಾಗಿರುವಾಗ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಾಗುವ ದೇವರ ತಂಟೆಗೆ ಇವರ‍್ಯಾಕೆ ಬರಬೇಕಾಗಿತ್ತು ಎಂದು ಅದೇ ವೃತ್ತಿಯನ್ನು ನಂಬಿದ ಜನ ರೊಚ್ಚಿಗೆದ್ದರು. ದಾಭೋಲ್ಕರ್ ಕೊಲೆಯಾದರು.

ನೀವು ಒಂದು ಸಂಗತಿಯನ್ನು ಗಮನಿಸಬೇಕು. ಎಲ್ಲಾ ಪ್ರಗತಿಪರರೂ ಅಥವಾ ಮಾಟಮಂತ್ರ ವಿರೋಧಿಗಳು ನಾಸ್ತಿಕರೇ ಆಗಿರುತ್ತಾರೆ. ಆದರೆ ವೇದಿಕೆಯಲ್ಲಿ ತಾವು ಧರ್ಮ ವಿರೋಧಿಗಳಲ್ಲ, ಬದಲಾಗಿ ಮೂಢನಂಬಿಕೆಗಳ ವಿರೋಧಿಗಳು ಅನ್ನುತ್ತಾರೆ. ನಂಬಿಕೆ ಇಲ್ಲದ ಧರ್ಮವಿದೆಯಾ? ಹಲವು ಧರ್ಮ, ಜಾತಿ, ಉಪಜಾತಿ, ಸಂಸ್ಕೃತಿ, ಆಚರಣೆಗಳ ಸಂಗಮವಾಗಿರುವ ಈ ದೇಶದಲ್ಲಿ ಪ್ರಗತಿಪರರು ಬಾಯ್ತಪ್ಪಿ ಮಾತಾಡುವುದು ನಿಷಿದ್ಧ. ಸಮಾಜದ ಒಳಗಿದ್ದುಕೊಂಡೇ ತಮ್ಮ ಹೋರಾಟ ಮಾಡಬೇಕಾಗಿರುವುದರಿಂದ ಜನರ ಭಾವನೆಗಳನ್ನು ನೋಯಿಸುವಂತಿಲ್ಲ. ನಾನೊಬ್ಬ ಪ್ರಗತಿಪರ, ಹಾಗಾಗಿ ಮದುವೆ ಮತ್ತು ಅಂತ್ಯಸಂಸ್ಕಾರಗಳಿಗೆ ಹಾಜರಾಗುವುದಿಲ್ಲ ಅನ್ನುವುದಕ್ಕಾಗುತ್ತದೆಯಾ? ನಂಬಿಕೆಗಳ ಹಂಗಿಲ್ಲದೇ ಬದುಕಬಹುದು, ಆದರೆ ತರ್ಕ ಮತ್ತು ವಿಜ್ಞಾನಗಳಿಂದಷ್ಟೇ ನಮ್ಮ ಬದುಕು ಬೆಳಗುವುದಿಲ್ಲ. ಒಂದು ಉತ್ಸವ, ಹಬ್ಬ, ಜಾತ್ರೆಗಳು ನೀಡುವ ಸಂತೋಷವನ್ನು ಗೊಡ್ಡು ನಂಬಿಕೆ ಎಂದು ತಿರಸ್ಕರಿಸುವುದಕ್ಕಾಗುತ್ತಾ, ನಂಬಿಕೆ ಮತ್ತು ಆಚರಣೆಗಳ ನಡುವೆ ಎಲ್ಲಿ ಗೆರೆ ಎಳೆಯಬೇಕು ಅನ್ನುವುದು ನಮ್ಮ ಚಿಂತಕರಿಗೆ ಗೊತ್ತಾಗಬೇಕು.
ಆದರೆ ಕಲ್ಬುರ್ಗಿ ಅವರ ತೇಜೋವಧೆಗೆ ಇದ್ಯಾವುದೂ ಸಮರ್ಥನೆಯಾಗುವುದಿಲ್ಲ. ಅವರು ತಮಗನಿಸಿದ್ದನ್ನು ಹೇಳಿದ್ದಾರೆ, ಅದರಲ್ಲಿ ಸತ್ಯಾಂಶಗಳೂ ಇವೆ, ಮಾತಿನ ಮಧ್ಯೆ ಮೂತ್ರದ ವಿಚಾರ ಪ್ರಾಸಂಗಿಕವಾಗಿ ಬಂದುಹೋಗಿದೆ, ಅದು ತಾನ್ಯಾವತ್ತೋ ಬರೆದಿದ್ದು, ಹಾಗಾಗಿ ಈಗ ಅದು ಅಪ್ರಸ್ತುತ ಎಂದು ಅನಂತಮೂರ್ತಿಯವರೇ ಆ ಹೇಳಿಕೆಯಿಂದ ದೂರ ಸರಿದಿದ್ದಾರೆ. ಹಾಗಿದ್ದೂ ಮೂತ್ರದ ಮತ್ತೇರಿಸಿಕೊಂಡವರು ಇನ್ನೂ ತಣ್ಣಗಾಗಿಲ್ಲ. ‘ಕಣ್ಮುಚ್ಚಿ ವಿವೇಕರಹಿತವಾಗಿ ಮಾಡುವುದೆಲ್ಲವೂ ಕರ್ಮ, ವಿವೇಕದಿಂದ ಮಾಡುವುದು ಧರ್ಮ’ ಎಂಬ ಕಲ್ಬರ್ಗಿಯವರ ಮಾತುಗಳನ್ನು ಈ ಮಂದಿ ಇನ್ನೊಮ್ಮೆ ಓದಿಕೊಂಡರೆ ಒಳಿತು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books