Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನರಹರ ಅಂದ ಸಿದ್ದುವನ್ನು; ಹರೋಹರ ಅನ್ನಿಸದೆ ಬಿಡುತ್ತಾರಾ ಮೋದಿ?

ದಿಲ್ಲಿ ಗದ್ದುಗೆಯ ಮೇಲೆ ಕುಳಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಪರಸ್ಪರ ಕಚ್ಚಾಡುವ ಲಕ್ಷಣಗಳು ಈಗಾಗಲೇ ಸ್ಪಷ್ಟವಾಗತೊಡಗಿವೆ. ಕಾವೇರಿ ನಿರ್ವಹಣಾ ಮಂಡಳಿ ವಿಚಾರದಲ್ಲಿ ಮೋದಿ ಅವರು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಆಟ ಆಡಿಸುವುದು ನಿಜ. ಈ ಸಮಸ್ಯೆಗೆ ಕರ್ನಾಟಕದ ಪರವಾಗಿ ಅವರು ನಿಂತುಬಿಡುತ್ತಾರೆ ಎಂದು ಭಾವಿಸುವುದು ಕಷ್ಟ. ಲೋಕಸಭೆಯಲ್ಲಿ ಅಂಗೀಕಾರವಾಗುವ ಯಾವುದೇ ಕಾನೂನಿಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಗಬೇಕು. ಇವತ್ತಿನ ಸ್ಥಿತಿಯಲ್ಲಿ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ. ಹೀಗಾಗಿ ಸರ್ಕಾರದ ಉಳಿವಿನ ದೃಷ್ಟಿಯಿಂದ ಅವರಿಗೆ ಯಾವ ಮುಲಾಜೂ ಇಲ್ಲವಾದರೂ ಜಾಗತೀಕರಣಕ್ಕೆ ಸಂಬಂಧಿಸಿದಂತೆ ಅವರು ರೂಪಿಸುವ ಹಲವು ಕಾನೂನುಗಳಿಗೆ ರಾಜ್ಯಸಭೆಯಲ್ಲಿ ಬೆಂಬಲ ಬೇಕು. ಫೈನಲಿ, ನೋಡಿದರೆ ರಾಜ್ಯಸಭೆಯಲ್ಲೂ ಪದೇಪದೇ ಲೋಕಸಭೆಯ ನಿರ್ಣಯಗಳನ್ನು ಸೋಲಿಸಿದರೂ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸುತ್ತಾರೆ. ಆ ಮಾತು ಬೇರೆ. ಆದರೆ ಮೋದಿ ತಂಡಕ್ಕೆ ಕರ್ನಾಟಕದಲ್ಲಿ ಬೇಕಿರುವುದು ರಾಜಕೀಯ.
ಹಾಗಂತ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿಲ್ಲ ಎಂದಲ್ಲ. ವೈಯಕ್ತಿಕವಾಗಿ ಅಲ್ಲವಾದರೂ ಸೈದ್ಧಾಂತಿಕವಾಗಿ ಅವರು ನರೇಂದ್ರ ಮೋದಿ ಅವರ ವಿರೋಧಿ. ಹೀಗಾಗಿ ಅವರು ಮೋದಿ ಆಹ್ವಾನ ನೀಡಿದರೂ ದಿಲ್ಲಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗಲಿಲ್ಲ. ಅದರ ಬದಲು ಇಲ್ಲಿ ಕೂತು ಆಡಳಿತಕ್ಕೆ ಮೇಜರ್ ಸರ್ಜರಿ ಮಾಡುತ್ತೇವೆ ಎಂಬ ಫೋಜು ನೀಡಿದರು. ಅವರ ಮನಸ್ಸಿನಲ್ಲಿ ಈಗಲೇ ಯಾರ‍್ಯಾರನ್ನು ಸಂಪುಟದಿಂದ ತೆಗೆದು ಹಾಕಬೇಕು ಎಂಬ ತೀರ್ಮಾನವಾಗಿದೆ. ಹೀಗಾಗಿ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡುವ ನೆಪದಲ್ಲಿ ಯಾರನ್ನು ಕುಟುಕಬೇಕೋ ಅವರನ್ನು ನಿರ್ದಾಕ್ಷಿಣ್ಯವಾಗಿ ಕುಟುಕುವ ಕೆಲಸ ಮಾಡುತ್ತಿದ್ದಾರೆ.

ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪನವರು ನೋಡಿಕೊಳ್ಳುತ್ತಿರುವ ಲೋಕೋಪಯೋಗಿ ಖಾತೆ ರಾಜ್ಯದ ಪ್ರತಿಯೊಬ್ಬ ಮನುಷ್ಯನನ್ನು ತಲುಪುವ ಇಲಾಖೆ. ರಸ್ತೆಯಿಂದ ಹಿಡಿದು ಮರಳಿನ ತನಕ ಅವರ ಖಾತೆಯ ವ್ಯಾಪ್ತಿ ಹಿಗ್ಗಿದೆ. ಆದರೆ ತಮಾಷೆ ನೋಡಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹದೇವಪ್ಪನವರ ಖಾತೆಯ ಪರಿಶೀಲನಾ ಕಾರ್ಯವನ್ನು ಅರ್ಧ ಗಂಟೆಗೂ ಕಡಿಮೆ ಕಾಲಾವಧಿಯಲ್ಲಿ ಮುಗಿಸಿ ಭಪ್ಪರೇ, ಭೇಷ್ ಎಂಬ ಶಹಬಾಷ್‌ಗಿರಿಯನ್ನು ಕೊಟ್ಟು ಕಳಿಸಿದರು. ಹೀಗೆ ಮೇಜರ್ ಸರ್ಜರಿ ಮಾಡಲು ಹೊರಟವರು ಪೂರ್ತಿ ಸರ್ಕಾರದ ಕೆಲಸ ಕಾರ್ಯಗಳನ್ನು ಗಮನಿಸಿದರಾ ಎಂದರೆ ಅದೂ ಇಲ್ಲ. ಆದರೆ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗದಿರಲು ಮತ್ತು ತಮ್ಮ ವೈಯಕ್ತಿಕ ಅಭೀಪ್ಸೆಗಳನ್ನು ಈಡೇರಿಸಿಕೊಳ್ಳಲು ಅವರು ಹೆಸರಿಗೆ ಆಡಳಿತಕ್ಕೆ ಒಂದು ಸರ್ಜರಿ ಮಾಡಿದರು. ಅದರ ಪರಿಣಾಮ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಅದೇನೇ ಇರಲಿ, ಸಿದ್ದರಾಮಯ್ಯನವರು ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲಿಲ್ಲ ಎಂಬ ಕಾರಣಕ್ಕಾಗಿ ಅವರೇನೂ ಪ್ರಮಾಣ ವಚನ ಸ್ವೀಕರಿಸದೇ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರೇ, ಕಾಂಗ್ರೆಸ್‌ನ ಮುಖ್ಯಮಂತ್ರಿಗಳ್ಯಾರೂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದರು. ಸಿದ್ದರಾಮಯ್ಯ ಅದನ್ನು ಪಾಲಿಸಿದರು. ಕಾಂಗ್ರೆಸ್‌ನ ಒಬ್ಬ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋದರು ಅಂತಿಟ್ಟುಕೊಳ್ಳಿ. ಆದರೆ ನಾವು ಇಲ್ಲಿ ಗಮನಿಸಬೇಕಿರುವುದು ರಾಜಕೀಯದ ಪಾಡಿಗೆ ರಾಜಕೀಯವನ್ನು ಬಿಟ್ಟು ಬಿಡಬೇಕು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ದ್ವೇಷ ಸಾಧಿಸುವ ಕೆಲಸ ಮಾಡಕೂಡದು.

ಆದರೆ ಸಿದ್ದರಾಮಯ್ಯನವರಿಗೇ ಈ ವಿಷಯದಲ್ಲಿ ಕಸಿವಿಸಿ ಇದೆ. ಯಾಕೆಂದರೆ ಚುನಾವಣಾ ಪ್ರಚಾರ ಮಾಡುವಾಗ ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ಹಲವು ಬಾರಿ ಅವರು ಟೀಕಿಸಿದ್ದಾರೆ. ನರಹಂತಕ ಎಂದಿದ್ದಾರೆ. ನರಹರ ಎಂದಿದ್ದಾರೆ. ಹೀಗೆ ಅನೇಕ ಸಲ ಮೋದಿ ಅವರನ್ನು ಟೀಕಿಸುವ ಕೆಲಸ ಮಾಡಿದ್ದಾರೆ. ಇದೀಗ ಮೋದಿ ಮನಸ್ಸಿನಲ್ಲೂ ಅದು ಉಳಿದಿರುತ್ತದೆ. ಸಿದ್ದರಾಮಯ್ಯನವರ ಮನಸ್ಸಿನಲ್ಲೂ ಉಳಿದಿರುತ್ತದೆ. ಅಂದ ಹಾಗೆ ಕಾವೇರಿ ನ್ಯಾಯಮಂಡಳಿಯ ತೀರ್ಪು ಯಥಾವತ್ತಾಗಿ ಜಾರಿಗೆ ಬರಬೇಕು ಎಂಬ ಆದೇಶ ಇನ್ನೂ ಸುಪ್ರೀಂಕೋರ್ಟ್ ಮುಂದೆ ವಿಚಾರಣಾ ಹಂತದಲ್ಲಿದೆ. ಈ ಹಂತದಲ್ಲಿ ಮೋದಿ ಕೂಡ ನಿರ್ವಹಣಾ ಸಮಿತಿಯನ್ನು ರಚಿಸಲು ಸಾಧ್ಯವಿಲ್ಲ. ಆದರೆ ಸುಪ್ರೀಂಕೋರ್ಟ್ ಏನಾದರೂ ಕಾವೇರಿ ನ್ಯಾಯಮಂಡಳಿಯ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು ಎಂದರೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸದೇ ಬೇರೆ ದಾರಿ ಇಲ್ಲ. ಕೇಂದ್ರದಲ್ಲಿ ಸಂಸದರಾಗಿರುವವರು ಎಷ್ಟು ಕೂಗಬಹುದು? ಹೆಚ್ಚು ಮಾತನಾಡಿದರೆ ಬಿಜೆಪಿ ಸಂಸದರಿಗೆ ಪಕ್ಷ ಗದರುತ್ತದೆ. ಆಗ ಇದ್ದಕ್ಕಿದ್ದಂತೆ ಕೇಂದ್ರ ಸಚಿವರೂ ಸೇರಿದಂತೆ ಹಲವರು ಇಲ್ಲ, ಇಲ್ಲ, ನಾವು ಒಕ್ಕೂಟ ವ್ಯವಸ್ಥೆಯಲ್ಲಿರುವಾಗ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಹೋರಾಡಲು ಸಾಧ್ಯವಿಲ್ಲ ಎಂದು ಜಾಗ ಖಾಲಿ ಮಾಡುತ್ತಾರೆ.

ಇನ್ನು ಜಾತ್ಯತೀತ ದಳದವರು. ಕೇಂದ್ರದಲ್ಲಿ ವಿ.ಪಿ.ಸಿಂಗ್ ಸರ್ಕಾರವಿದ್ದಾಗ ತಾನೇ ಕಾವೇರಿ ನ್ಯಾಯಮಂಡಳಿಯ ರಚನೆ ಆಗಿದ್ದು. ತಮಿಳ್ನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರು ತಮಗಿದ್ದ ರಾಜಕೀಯ ಪ್ರಭಾವವನ್ನು ಬಳಸಿ ಕಾವೇರಿ ನೀರು ಹಂಚಿಕೆಗೆ ನ್ಯಾಯಮಂಡಳಿ ರಚನೆಯಾಗುವಂತೆ ಮಾಡಿದರು. ಹೀಗಾಗಿ ದಿಲ್ಲಿಯಲ್ಲಿ ತಮ್ಮದೇ ಸರ್ಕಾರವಿದ್ದಾಗ ನ್ಯಾಯ ಕೊಡಿಸಲಾಗದವರು ಈಗ ಇರುವ ಎರಡು ಸ್ಥಾನಗಳನ್ನು ಮುಂದಿಟ್ಟುಕೊಂಡು ಏನು ನ್ಯಾಯ ಅಂತ ಕೊಡಿಸಲು ಸಾಧ್ಯ? ಉಳಿದಂತೆ ಕಾಂಗ್ರೆಸ್ಸು, ಇಲ್ಲಿ ವೀರೇಂದ್ರ ಪಾಟೀಲರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದವರನ್ನು ಭೇಟಿ ಮಾಡಲು ತಮಿಳ್ನಾಡಿನ ಜಲಸಂಪನ್ಮೂಲ ಸಚಿವರು ಬಂದಿದ್ದರು. ಅವರು ಬಂದಿದ್ದು ಕಾವೇರಿಯಿಂದ ತಮಿಳ್ನಾಡಿಗೆ ನೀರು ಬಿಡಿ ಎಂದು ಕೇಳಲು. ಅವರನ್ನು ಸೌಜನ್ಯಕ್ಕಾದರೂ ಭೇಟಿ ಮಾಡುವ ಕೆಲಸ ರಾಜ್ಯದ ನೀರಾವರಿ ಸಚಿವರಿಂದ ಆಗಬೇಕಿತ್ತು. ಅವರು ಕೇಳಿದಷ್ಟು ನೀರು ಕೊಡಲು ಸಾಧ್ಯವಾಗದೇ ಹೋದರೂ ತಕ್ಷಣಕ್ಕೆ ಇಂತಿಷ್ಟು ನೀರು ಎಂದು ಕೊಡುವ ಕೆಲಸ ಮಾಡಬೇಕಿತ್ತು.

ಆದರೆ ಕುಮಾರಕೃಪಾ ಅತಿಥಿಗೃಹದಲ್ಲಿದ್ದ ತಮಿಳ್ನಾಡಿನ ನೀರಾವರಿ ಸಚಿವರನ್ನು ಕನಿಷ್ಠ ಪಕ್ಷ ನೋಡಲೂ ರಾಜ್ಯದ ನೀರಾವರಿ ಸಚಿವರು ಬರಲಿಲ್ಲ. ಇದರಿಂದ ರೊಚ್ಚಿಗೆದ್ದ ಕರುಣಾನಿಧಿ ಸೀದಾ ದೆಹಲಿಗೆ ಹೋದರು. ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಅವರನ್ನು ಭೇಟಿ ಮಾಡಿದರು. ಕಾವೇರಿ ನ್ಯಾಯಮಂಡಳಿಯ ರಚನೆಯಾಗುವಂತೆ ಮಾಡಿದರು. ಈ ನ್ಯಾಯಮಂಡಳಿ ಮಧ್ಯಂತರ ಆದೇಶ ನೀಡಿ, ಕರ್ನಾಟಕ ಇನ್ನು ಮುಂದೆ ಪ್ರತಿವರ್ಷ ತಮಿಳ್ನಾಡಿಗೆ ಇನ್ನೂರಾ ಐದು ಟಿಎಂಸಿ ನೀರು ನೀಡಬೇಕು ಎಂದು ಹೇಳಿದಾಗ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ, ಯಾವ ಕಾರಣಕ್ಕೂ ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಪ್ರತಿಭಟನೆ ಮಾಡಿದರು. ಆದರೆ ಅವರು ಈ ಸಂಬಂಧ ಹೊರಡಿಸಿದ ಗೆಜೆಟ್ ಅಧಿಸೂಚನೆ ರದ್ದಾಗುವಂತೆ ಮಾಡಲಾಯಿತು. ಹೀಗಾಗಿ ಮುಂದಿನ ದಿನಗಳಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ನಮ್ಮ ಪರವಾದ ತೀರ್ಪು ಬರುತ್ತದೆ ಎಂದು ಹೇಳುವುದು ಕಷ್ಟ.

ಯಾಕೆಂದರೆ ಕನಿಷ್ಠ ಪಕ್ಷ ಜಯಲಲಿತಾರಿಂದ ಮೋದಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಲಾಭವಾಗಲಿದೆ. ಆದರೆ ಕರ್ನಾಟಕದಿಂದ ಏನಾಗಲಿದೆ? ಹೇಳಿ ಕೇಳಿ ಇಲ್ಲಿರುವುದು ಕಾಂಗ್ರೆಸ್ ಸರ್ಕಾರ. ತಮ್ಮನ್ನು ನರಹಂತಕ ಎಂದು ಟೀಕಿಸಿದ ಮುಖ್ಯಮಂತ್ರಿ ಕೂತಿರುವಾಗ ನರೇಂದ್ರಮೋದಿ ಈ ವಿಷಯದಲ್ಲಿ ನಮಗೆ ತುಂಬ ಉಪಕಾರ ಮಾಡುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ. ರಾಜ್ಯದ ಪರ ವಕೀಲರಾದ ನಾರೀಮನ್ ಥರದವರು ಸಮರ್ಪಕವಾಗಿ ವಾದ ಮಾಡಿದ್ದಾರೇನೋ ನಿಜ. ಆದರೆ ದಿಲ್ಲಿಯಲ್ಲಿ ನಮಗೆ ರಾಜಕೀಯ ಶಕ್ತಿ ಬೇಕಲ್ಲ. ಹೀಗಾಗಿ ಇವತ್ತು ಏನೇ ಕಸರತ್ತು ಮಾಡಿದರೂ ನ್ಯಾಯಾಲಯದ ಮುಂದೆ ಕಸರತ್ತು ಮಾಡಬೇಕು. ಇವತ್ತಲ್ಲ, ನಾಳೆ ಕರ್ನಾಟಕದ ಕಾವೇರಿ ನದಿ ಪಾತ್ರದಲ್ಲಿರುವ ಎಲ್ಲ ಅಣೆಕಟ್ಟುಗಳನ್ನು ಕೇಂದ್ರ ನೀರಾವರಿ ಇಲಾಖೆ ತನ್ನ ವಶಕ್ಕೆ ತೆಗೆದುಕೊಳ್ಳುವ ಕೆಲಸ ನಡೆದರೆ ಸಂಕಷ್ಟ ಸೂತ್ರದ ಅನುಸಾರ ನೀರು ಹಂಚಿಕೊಳ್ಳಬೇಕಾಗುತ್ತದೆ ಎಂಬುದು ನಿಜ. ಈ ದಿಸೆಯಲ್ಲಿ ನಾವು ಮಾಡಬಹುದಾದ್ದೇನು, ಮುಂದಿನ ದಿನಗಳಲ್ಲಿ ನಮ್ಮ ರೈತರ ಹಿತ ಕಾಪಾಡುವುದು ಹೇಗೆ ಎಂಬ ಕುರಿತು ಈಗಿನಿಂದಲೇ ಚರ್ಚೆ ಶುರು ಮಾಡಬೇಕು. ಇದು ಎತ್ತಿನ ಹೊಳೆ ಯೋಜನೆಯನ್ನು ಪರ ರಾಜ್ಯದವರಿಗೆ ಗುತ್ತಿಗೆ ಕೊಟ್ಟು ಎಂಪಿ ಎಲೆಕ್ಷನ್ನು ಮಾಡಲು ಹೊರಟಂತೆ ಅಲ್ಲ.

ಎತ್ತಿನ ಹೊಳೆ ಭಾಗದಲ್ಲಿ ಬೀಳುವ ನೀರನ್ನು ಸಂಗ್ರಹಿಸಿ ಅದನ್ನು ಬರಪೀಡಿತ ಜಿಲ್ಲೆಗಳಿಗೆ ಪೈಪ್‌ಲೈನ್ ಮೂಲಕ ರವಾನಿಸುವ ಕೆಲಸ ಎಷ್ಟರ ಮಟ್ಟಿಗೆ ಈಡೇರುತ್ತದೆ ಎಂಬುದು ಗೊತ್ತಿಲ್ಲ. ಆದರೆ ಈ ಯೋಜನೆಯ ಗುತ್ತಿಗೆಯನ್ನು ಈಗಾಗಲೇ ಪರ ರಾಜ್ಯದವರಿಗೆ ವಹಿಸಿ ಆಗಿದೆ. ಅಷ್ಟೇ ಅಲ್ಲ, ಗುತ್ತಿಗೆ ವಹಿಸಿದ ಕೆಲವೇ ಕ್ಷಣಗಳಲ್ಲಿ ನಗುನಗುತ್ತಾ ಎಂಪಿ ಎಲೆಕ್ಷನ್ನೂ ಮಾಡಿದ್ದಾಗಿದೆ. ಆದರೆ ಕಾವೇರಿ ವಿಷಯ ಸೆಟ್ಲ್ ಮಾಡಲು ರಾಜಕೀಯ ಶಕ್ತಿ ಬೇಕು, ಇಚ್ಛಾಶಕ್ತಿ ಬೇಕು, ಒಳ್ಳೆಯ ಸಂಬಂಧಗಳಿರಬೇಕು. ಇವ್ಯಾವುದೂ ಇಲ್ಲದೇ ಕಾವೇರಿ ವಿವಾದವನ್ನು ಬಗೆಹರಿಸಿಕೊಳ್ಳುವುದಾಗಲೀ, ಕೇಂದ್ರ ಸರ್ಕಾರದ ಅಧಿಕಾರಿಗಳು ಬಂದು ನಮ್ಮ ಅಣೆಕಟ್ಟುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಯಾರೇನೇ ಹೇಳಲಿ, ಚುನಾವಣೆ ಸಂದರ್ಭದಲ್ಲಿ ತಮ್ಮನ್ನು ನರಹಂತಕ ಎಂದು ದೂಷಿಸಿದ ಸಿದ್ದರಾಮಯ್ಯನವರನ್ನು ಮೋದಿ ಸುಮ್ಮನೆ ಬಿಡುತ್ತಾರೆ ಎಂದು ನಿರೀಕ್ಷಿಸುವುದು ತಪ್ಪು. ಕರ್ನಾಟಕಕ್ಕೆ ಆಗುವ ಲಾಭ ಯಾವುದೇ ಇರಲಿ, ಅದು ತಮ್ಮವರಿಂದ ಆಯಿತೇ ಹೊರತು ಸಿದ್ದರಾಮಯ್ಯ ಸರ್ಕಾರದಿಂದ ಅಲ್ಲ ಎಂದು ಅವರು ಹೇಳುವುದು ನಿಶ್ಚಿತ.

ಹೀಗಾಗಿ ಚುನಾವಣೆ ಇರಬಹುದು. ಯಾವುದೇ ಸಂದರ್ಭ ಇರಬಹುದು. ಪರಸ್ಪರರನ್ನು ಟೀಕಿಸುವ ಸಂದರ್ಭ ಬಂದಾಗ ಟೀಕೆಗೂ ಒಂದು ಮಿತಿ ಇರಬೇಕು. ಮೊದಲೇ ಸಿದ್ದರಾಮಯ್ಯನವರನ್ನು ಕಂಡರೆ ರಾಜ್ಯದ ಮೂಲ ಕಾಂಗ್ರೆಸ್ ನಾಯಕರಿಗೇ ಆಗುವುದಿಲ್ಲ. ಕಾರಣವೇನೆಂದರೆ, ಅವರು ಬಂದ ನಂತರ ಮೂಲ ಕಾಂಗ್ರೆಸ್ಸಿಗರ ಪಾಲಿಗೆ ಶತ್ರುವಾಗಿ ಪರಿಣಮಿಸಿಬಿಟ್ಟಿದ್ದಾರೆ. ಅವರಿಗೆ ಆಪ್ತರಾಗಿರುವ ಬಹುತೇಕ ಜನ ವಲಸಿಗ ಕಾಂಗ್ರೆಸ್ಸಿಗರು. ಈ ವಲಸಿಗ ಕಾಂಗ್ರೆಸ್ಸಿಗರ ಹಿತ ಕಾಯಲು ಸಿದ್ದರಾಮಯ್ಯ ಯಾವ ರೀತಿಯ ಯತ್ನ ಮಾಡುತ್ತಿದ್ದಾರೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಈ ಮೂಲ ಕಾಂಗ್ರೆಸ್ಸಿಗರಲ್ಲೂ ಎರಡು ಗುಂಪು ಮಾಡುವ ಯತ್ನ ಮಾಡುತ್ತಿದ್ದಾರೆ. ಯಾರು ಮೂಲ ಕಾಂಗ್ರೆಸ್ ನಾಯಕರೋ ಮತ್ತು ಯಾರು ತಮ್ಮನ್ನು ವಿರೋಧಿಸುತ್ತಾರೋ ಅವರನ್ನು ದೂರವಿಟ್ಟು ಅವರ ಶತ್ರುಗಳನ್ನು ಆಹ್ವಾನಿಸುವ ಕೆಲಸ ಮಾಡುತ್ತಾರೆ.

ಕೃಷ್ಣ ಅವರಿಗೆ ಟಿಕೆಟ್ ತಪ್ಪಿಸಲು ಕೃಷಿ ಸಚಿವ ಕೃಷ್ಣ ಭೈರೇಗೌಡರನ್ನು ಬಳಸಿಕೊಳ್ಳಲು ಅವರು ಯತ್ನಿಸಿದ್ದು, ಇದರ ವಿರುದ್ಧ ಡೀಕೇಶಿ ಗುಡುಗಿದ್ದು ರಹಸ್ಯವಾಗಿಯೇನೂ ಉಳಿದಿಲ್ಲ. ಹೀಗೆ ಕೃಷ್ಣ ಭೈರೇಗೌಡರನ್ನು ಬಳಸಿಕೊಳ್ಳುವ ಅವರ ಯತ್ನಕ್ಕೆ ಒಂದು ಕಾರಣವಿದೆ. ಅದೆಂದರೆ, ಕೃಷ್ಣ ಭೈರೇಗೌಡರು ಮರಸು ವಕ್ಕಲಿಗರು. ಬೆಂಗಳೂರು, ಕೋಲಾರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ ಹೀಗೆ ಆ ಭಾಗದಲ್ಲಿ ಹರಡಿರುವ ವಕ್ಕಲಿಗರನ್ನು ಕಾಂಗ್ರೆಸ್ ಪರ ಮಾಡಿಕೊಂಡರೆ ಗಂಗಟಕಾರ ವಕ್ಕಲಿಗರನ್ನು ದೂರ ಇಡಬಹುದು ಎಂಬುದು ಅವರ ಲೆಕ್ಕಾಚಾರ. ಗಂಗಟಕಾರ ವಕ್ಕಲಿಗರು ದೇವೆಗೌಡರ ನೇತೃತ್ವದ ಜಾತ್ಯತೀತ ಜನತಾದಳದ ಬೆನ್ನ ಹಿಂದೆ ನಿಲ್ಲುವುದಾದರೆ ಅವರ ವಿರುದ್ಧ ಮರಸು ವಕ್ಕಲಿಗರನ್ನು ತಂದು ನಿಲ್ಲಿಸುವುದು, ಆ ಮೂಲಕ ಅಹಿಂದ ವರ್ಗಗಳ ಜೊತೆಗೆ ವಕ್ಕಲಿಗರ ಒಂದು ತುಕಡಿಯನ್ನು ಕಟ್ಟುವುದು ಸಿದ್ದರಾಮಯ್ಯನವರ ಯೋಚನೆ. ಇದಕ್ಕಾಗಿಯೇ ರಾಹುಲ್‌ಗಾಂಧಿ ಅವರಿಗೆ ಹೇಳಿ, ಮುಂದಿನ ದಿನಗಳಲ್ಲಿ ಕೃಷ್ಣ ಭೈರೇಗೌಡರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದಿದ್ದಾರೆ. ಆ ಮೂಲಕ ವಕ್ಕಲಿಗರ ವಿಶ್ವಾಸವೂ ನಮಗೆ ದಕ್ಕುತ್ತದೆ ಎಂದು ಹೇಳಿ ಬಂದಿದ್ದಾರೆ.

ಆದರೆ ಕೃಷ್ಣ ಭೈರೇಗೌಡರನ್ನು ಕರೆದುಕೊಂಡು ಬಂದು ವಕ್ಕಲಿಗರ ಬೆಂಬಲ ಪಡೆಯುತ್ತೇವೆ ಎಂಬುದು ಕನಸಿನ ಮಾತು. ಯಾಕೆಂದರೆ ಈ ಮತಗಳ ಪೈಕಿ ಬಹುತೇಕ ಮತಗಳು ಬಿಜೆಪಿ ಕಡೆ ವಾಲಿವೆ. ಅಲ್ಪಸಂಖ್ಯಾತರು ಯಾವ ಪ್ರಮಾಣದ ಗೊಂದಲದಲ್ಲಿದ್ದಾರೆ ಎಂದರೆ ಈ ಬಾರಿ ಮೋದಿ ವಿರುದ್ಧ ಗೆಲ್ಲುವ ಕ್ಯಾಂಡಿಡೇಟುಗಳಿಗೆ ಮತ ಎಂಬ ತೀರ್ಮಾನಕ್ಕೆ ಬಂದು ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ದಲಿತ ಮತದಾರರು ಎಲ್ಲೆಲ್ಲಿ ದಲಿತ ಅಭ್ಯರ್ಥಿಗಳು ನಿಂತಿದ್ದಾರೋ, ಅಲ್ಲೆಲ್ಲ ಬೆಂಬಲ ಕೊಟ್ಟು ಉಳಿದ ಬಹುತೇಕ ಕಡೆ ಉಲ್ಟಾ ಹೊಡೆದಿದ್ದಾರೆ. ಇವತ್ತು ಮಲ್ಲಿಕಾರ್ಜುನ ಖರ್ಗೆ ಇರಬಹುದು, ಕೆ.ಎಚ್.ಮುನಿಯಪ್ಪ ಇರಬಹುದು, ಧ್ರುವ ನಾರಾಯಣ ಇರಬಹುದು, ಇವರ‍್ಯಾರೂ ಸಿಎಂ ಬೆಂಬಲದಿಂದ ಗೆದ್ದವರಲ್ಲ. ಇನ್ನು ಗಂಗಟಕಾರರು ಜಾಸ್ತಿ ಇರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಗೆಲುವು ಸಾಫ್ ಸೀದಾ ಅಣ್ಣ-ತಮ್ಮನ ಗೆಲುವೇ ಹೊರತು ಸಿದ್ದರಾಮಯ್ಯನವರು ಕೊಡಿಸಿದ ಗೆಲುವಲ್ಲ. ಅಂದ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಎತ್ತ ನಡೆಸುತ್ತಿದ್ದಾರೆ ಎಂಬ ಪ್ರಶ್ನೆ ಕಾಂಗ್ರೆಸ್ ಒಳವಲಯಗಳಿಂದಲೇ ಕೇಳಿ ಬರುತ್ತಿದೆ. ಒಂದು ಕಡೆಯಿಂದ ಮೂಲ ಕಾಂಗ್ರೆಸ್ಸಿಗರನ್ನು ಒಡೆಯುತ್ತಿದ್ದಾರೆ. ಮತ್ತೊಂದು ಕಡೆಯಿಂದ ವಕ್ಕಲಿಗರನ್ನು ಒಡೆದು ಕಡಿಮೆಯಾಗಿರುವ ದಲಿತರ ಮತಗಳನ್ನು ಭರ್ತಿ ಮಾಡುವ ಲೆಕ್ಕಾಚಾರ ಹಾಕಿದ್ದಾರೆ.
ಇವೆಲ್ಲದರ ನಡುವೆ ತಮ್ಮಿಚ್ಛೆಯಂತೆ ಪ್ರದೇಶ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ಕುಣಿಸಲು ಹೊರಟಿದ್ದಾರೆ. ಇದು ಒಳ್ಳೆಯ ಸಂಕೇತವಲ್ಲ ಎಂಬುದು ನಿಸ್ಸಂದೇಹ. ಇರುವುದರಲ್ಲಿ ಜಯಚಂದ್ರ ಅವರಂತಹ ಕೆಲ ಸಚಿವರು ಈ ಸರ್ಕಾರಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಅದ್ದೂರಿ ಮದುವೆಗಳಿಗೆ ಕಡಿವಾಣ ತರಲು ಹೊರಟಿರುವ ಕಾನೂನು ನಿಜಕ್ಕೂ ಸುಧಾರಣಾವಾದಿ ಕಾನೂನು. ಕೋಟಿಗಟ್ಟಲೆ ಹಣ ಸುರಿದು ಮದುವೆ ಮಾಡುವವರಿಗೆ ತಮ್ಮ ಸುತ್ತ ಇರುವ ಬಡವರನ್ನು ನೋಡಿ ನಾಚಿಕೆಯಾಗಬೇಕು. ನಮಗೆ ನರೇಂದ್ರ ಮೋದಿ ಅವರ ತಾಯಿ ಮತ್ತು ಕುಟುಂಬ ಎಷ್ಟು ಸಿಂಪಲ್ಲು ಎಂಬ ಕುರಿತು ಮೆಚ್ಚುಗೆಯ ಮಾತು ಹೊರಡುತ್ತದೆ. ಮಹಾತ್ಮಾ ಗಾಂಧೀಜಿ, ಈ ದೇಶದ ಜನರಿಗೆ ಹೊಟ್ಟೆ ತುಂಬ ಊಟ, ಮೈ ತುಂಬ ಬಟ್ಟೆ ಸಿಗುವ ತನಕ ನಾನು ಕೂಡ ಅವರಂತೆಯೇ ಇರುತ್ತೇನೆ ಎನ್ನುವುದು ಆದರ್ಶವಾಗಿ ಕಾಣುತ್ತದೆ. ಅಂತಹ ಮನಸ್ಥಿತಿ ನಮ್ಮಲ್ಲಿರುವುದೇ ಆದರೆ ಕೋಟಿಗಟ್ಟಲೆ ಹಣ ಸುರಿದು ಮದುವೆ ಆಗುವವರು ಶೇಕಡಾ ಐದೋ, ಹತ್ತೋ ಪರ್ಸೆಂಟು ಟ್ಯಾಕ್ಸು ಕಟ್ಟುವುದನ್ನು ಬೆಂಬಲಿಸಬೇಕು. ಸಾವಿರಾರು ಜನರಿಗೆ ಕರೆದು ಊಟ ಹಾಕುವವರು, ಅದರ ನೆಪದಲ್ಲಿ ನಮ್ಮ ಹುಡುಗಿ, ಹುಡುಗನ ಮೈಮೇಲೆ ಎಷ್ಟು ಬಂಗಾರವಿದೆ ನೋಡಿ ಎಂದು ಅಹಂಭಾವದ ಪ್ರದರ್ಶನ ಮಾಡುವವರು ಈ ಸಮಾಜಕ್ಕೆ ತಮಗರಿವಿಲ್ಲದೇ ಅನ್ಯಾಯ ಮಾಡುತ್ತಿದ್ದಾರೆ. ಇಂತಹವರು ಸರ್ಕಾರಕ್ಕೆ ತೆರಿಗೆ ಕಟ್ಟಲಿ ಬಿಡಿ.

ಹಿಂದೆಲ್ಲ ಮದುವೆ ಎಂದರೆ ಹೊಟ್ಟೆ ಹಸಿವಿರುವವರು ಹೋಗುತ್ತಿದ್ದರು. ಈಗ ಷೋಕಿಗಾಗಿ ಮದುವೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಒಂದು ಆಹ್ವಾನ ಪತ್ರಿಕೆಗೆ ಏಳೂವರೆ ಸಾವಿರ ರುಪಾಯಿ ಖರ್ಚು ಮಾಡುವವನು ಕನಿಷ್ಠ ಪಕ್ಷ ಎರಡು ಸಾವಿರ ಜನರಿಗೆ ಅದನ್ನು ಮುಟ್ಟಿಸಿದರೂ ಒಂದೂವರೆ ಕೋಟಿ ರುಪಾಯಿ ಆಗುತ್ತದೆ. ನೀವು ಐಟಿಗೆ ತೆರಿಗೆ ಕಟ್ಟಿದ ಮೇಲೂ ಉಳಿಯುವ ಹಣವನ್ನು ಫಿಕ್ಸೆಡ್ ಡೆಪಾಜಿಟ್‌ಗೆ ಹಾಕಿದರೆ ಅದರಲ್ಲೂ ತೆರಿಗೆ ಇಲಾಖೆ ಪಾಲು ಪಡೆಯುತ್ತದಲ್ಲವೇ? ಇಂತಹ ಮದುವೆಗಳನ್ನೂ ಹಾಗೇ ಪರಿಭಾವಿಸಿ ಅವರ ಮೇಲೆ ತೆರಿಗೆ ಹಾಕುವ ಪ್ರಸ್ತಾಪ ನಿಜಕ್ಕೂ ಸ್ವಾಗತಾರ್ಹ. ಆದರ್ಶಯುತ ಸಮಾಜದ ನಿರ್ಮಾಣವನ್ನು ಬಯಸುವ ಯಾರೂ ಇದನ್ನು ವಿರೋಧಿಸಲಾರರು, ವಿರೋಧಿಸಬಾರದು. ಇಂತಹ ಕಾನೂನುಗಳನ್ನು ಜಾರಿಗೆ ತರುವಾಗ ವಿರೋಧ ವ್ಯಕ್ತವಾಗಬಹುದು. ಆದರೆ ಒಂದು ಸರ್ಕಾರ ಇದರ ಕಡೆ ಗಮನ ಹರಿಸಲಿ, ಅದನ್ನು ಬಿಟ್ಟು ಪಕ್ಷ ಒಡೆಯುವ ಕೆಲಸ ಮಾಡುತ್ತಾ, ಶತ್ರುಗಳನ್ನು ಮಟ್ಟ ಹಾಕುತ್ತಾ ಕುಳಿತರೆ ರಾಜ್ಯ ಹೇಗೆ ಮುಂದುವರಿಯಬೇಕು. ನೀವೇ ಹೇಳಿ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books