Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಈ ಪತ್ರಿಕೋದ್ಯಮವೆಂಬುದು ಕೂಡ ಒಂದು ರೀತಿಯ ಧ್ಯಾನದಂತಹುದೇ!

ಹಿಮಾ, I feel... ರಾಜಕಾರಣದಲ್ಲಿ ಏನೋ ತುಂಬ ಗಂಭೀರವಾದದ್ದು ಘಟಿಸಲಿದೆ. ಎಲ್ಲೋ ಏನೋ ನಡೀತಿದೆ. ಕಾರ್ತಿಕುಮಾರ್ ಕಾಣಿಸ್ತಾ ಇಲ್ಲ. ಅವನ ಪಕ್ಷದವರ‍್ಯಾರೂ ಕಾಣಿಸ್ತಿಲ್ಲ. ಫೋನಿಗೂ ಸಿಕ್ತಿಲ್ಲ. ಚೌಡೂರಪ್ಪ ತಮ್ಮ ಬಂಗಲೆಯಲ್ಲಿಲ್ಲ. ತುಂಬ ದೊಡ್ಡ ಮಟ್ಟದಲ್ಲಿ ಸರ್ಕಾರವನ್ನ ಕೆಡವೋ ಮಸಲತ್ತು ನಡೀತಿದೆಯಾ ಅಂತ ನನಗೆ ಅನುಮಾನ. ನಿನ್ನೆ ರಾತ್ರಿ ತಂಕಾ ಉಜ್ವಲ್ ಲಾರ್ಡ್ ಫೋನಿಗೆ ಸಿಗ್ತಾ ಇದ್ದ. ಇದ್ದಿದ್ದರಲ್ಲೇ ಸ್ವಲ್ಪ ನಂಬಬಹುದಾದ ಮನುಷ್ಯ. ಉಳಿದ ಪಾಲಿಟೀಷಿಯನ್ಸ್‌ಗಿಂತ ಡಿಫರೆಂಟ್ ಫೆಲೋ. ಆದ್ರೆ ಇವತ್ತು ಅವನೂ ಸಿಕ್ತಾ ಇಲ್ಲ. ರಾತ್ರಿ ತಂಕಾ ನೋಡಿ ನಾಳಿನ ಪತ್ರಿಕೇಲಿ ಒಂದು ಸುದ್ದಿ ಬ್ರೇಕ್ ಮಾಡಿಬಿಡಲಾ? ಹಾಗಂತ ಯೋಚಿಸ್ತಿದೀನಿ ಅಂದವನು ಕೈಲಿದ್ದ ಸಿಗರೇಟು ಆರಿಸಿ ಅವಳೆಡೆಗೆ ನೋಡಿದ. ಗಜಲ್ ಹಿಮಾನಿಯ ಮುಖದಲ್ಲಿ ಚಿಕ್ಕದೊಂದು ಅಚ್ಚರಿಯಿತ್ತು. ಸರ್ಕಾರ ಉರುಳುವ ಬಗ್ಗೆ ಮಾತನಾಡುತ್ತಿದ್ದಾನೆ ಸೀಮಂತ್. ಅವನು ಹಾಗೆಲ್ಲ ಉಡಾಫೆಯ ಮಾತು ಆಡೋದಿಲ್ಲ. ಕುಳಿತಲ್ಲೇ ಗೆಸ್ ವರ್ಕ್ ಮಾಡೋದಿಲ್ಲ. ಅನೇಕ ಸಲ ಬೇರೆ ಯಾವ ಪತ್ರಿಕೆಗಳವರಿಗೂ ಸಿಕ್ಕದ ಸುದ್ದಿಗಳು ಅವನಿಗೆ ಸಿಕ್ಕಿಬಿಡುತ್ತವೆ. ಪ್ರತಿಯೊಂದು ಪಕ್ಷದಲ್ಲೂ ಅವನಿಗೆ ಪರಿಚಿತರಿದ್ದಾರೆ. ಅವನ ಬಗ್ಗೆ ಹೊಟ್ಟೆಕಿಚ್ಚಾಗುವುದು ಇಂಥ ಕಾರಣಗಳಿಗೇ. ಒಂದು ಸಲ ನನಗೆ ಪರಿಚಯವಿರುವ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಲಾ? ಬೇಹು ಪಡೆಯವರೊಂದಿಗೆ? ಹಾಗಂತ ಕೇಳೋಣವೆಂದುಕೊಂಡವಳು ಸುಮ್ಮನಾದಳು. ಪ್ರೆಸ್ ಕ್ಲಬ್‌ಗೆ ಬಂದು ಕುಳಿತ ಒಂದು ತಾಸಿನೊಳಗಾಗಿ ಅವರು ಎರಡು ಕಾಫಿ ಕುಡಿದಿದ್ದರು. ಸೀಮಂತ್ ಮೂರು ಸಿಗರೇಟು ಸುಟ್ಟಿದ್ದ. ವೈಟ್ ನೈಟ್ಸ್ ಕಥೆಯನ್ನು ಅರ್ಧದಷ್ಟು ಓದಿದ್ದ. ಆಗಲೇ ಸಣ್ಣಗೆ ಕತ್ತಲು ಬೀಳತೊಡಗಿತ್ತು. ಇಬ್ಬರಿಗೂ ಅದು ಆಫೀಸುಗಳಿಗೆ ಹಿಂತಿರುಗುವ ಹೊತ್ತು. ಹೋಗಿ ಅವತ್ತಿನ ಸುದ್ದಿ ಬರೆದು ಮುಗಿಸಬೇಕು. ಆಮೇಲೆ ಮತ್ತೆ ಬಿಡುವು. ಸಾಧ್ಯವಾದರೆ ಒಟ್ಟಿಗೆ ಒಂದು ಊಟ ಮಾಡೋಣ ಅಂದುಕೊಂಡವರೇ ಇಬ್ಬರೂ ಪ್ರೆಸ್ ಕ್ಲಬ್‌ನಿಂದ ಹೊರಬಿದ್ದಿದ್ದರು.

ತನ್ನ ಆಫೀಸಿಗೆ ಹೋದವಳು ಸ್ವಲ್ಪ ಹೊತ್ತು ಕಂಪ್ಯೂಟರಿನ ಮುಂದೆ ಸುಮ್ಮನೆ ಕುಳಿತುಕೊಂಡಳು. ಕ್ರೈಮ್‌ಗೆ ಸಂಬಂಧಿಸಿದಂತೆ ಅವತ್ತು ಅಂಥ ಸುದ್ದಿಗಳೇನೂ ಇರಲಿಲ್ಲ. ಎರಡು ಅಪಘಾತ, ಎಲ್ಲೋ ಕಳವು, ಗೃಹಿಣಿಯ ಸರ ಅಪಹರಣ-ಇಂಥವೇ. ಅರ್ಧ ಗಂಟೆ ಕೀ ಬೋರ್ಡ್ ಮೇಲೆ ಬೆರಳಾಡಿಸುವುದರೊಳಗಾಗಿ ಎಲ್ಲ ಮುಗಿದು ಹೋಗಿದ್ದವು. ಒಂದೇ ಒಂದು ಫೋನ್ ಮಾಡಿ ನೋಡಲಾ? ಯೋಚಿಸಿದಳು. ಬೇಹುಪಡೆಯಲ್ಲಿ ಅವಳಿಗೆ ತುಂಬ ಪರಿಚಯವಿದ್ದ ಅಧಿಕಾರಿಯೊಬ್ಬನಿದ್ದ. ನಿಜಕ್ಕೂ ಗಂಭೀರವಾದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವುದೇ ಹೌದಾದರೆ, ಆತನಿಗೆ ಮಾಹಿತಿಯಿರುತ್ತದೆ. ಪ್ರಯತ್ನಿಸಿ ನೋಡಲಾ ಅಂದುಕೊಂಡು ಕೈಗೆ ಮೊಬೈಲ್ ಎತ್ತಿಕೊಂಡಳು: ಅಷ್ಟರಲ್ಲಿ ಸೀಮಂತ್‌ನ ಮೆಸೇಜು ಬಂದಿತ್ತು. ನಾನು ಸುದ್ದಿ ಬರೆದಾಗಿದೆ: ನೀನು ಪ್ರಯತ್ನಿಸಬೇಡ. ಎಂಥ ಪಾದರಸದಂಥ ಮನುಷ್ಯ ಅಂದುಕೊಂಡಳು. ಅವತ್ತು ರಾತ್ರಿ ಅವರಿಬ್ಬರೂ ಚರ್ಚ್ ಸ್ಟ್ರೀಟ್‌ನ ಹೊಟೇಲೊಂದರಲ್ಲಿ ಊಟಕ್ಕೆ ಸೇರಿದ್ದರು. ಹೊಟೇಲು ತುಂಬ ದೊಡ್ಡದೇನಲ್ಲ. ಆದರೆ ಬೆಚ್ಚಗಿನ ಜಾಗ. ವಿಪರೀತ ಜಂಗುಳಿಯಿರುವುದಿಲ್ಲ. ಅಬ್ಬರದ ಸಂಗೀತವಿರುವುದಿಲ್ಲ. ಪುಟ್ಟ ಟೇಬಲ್ಲಿನ ಮೇಲೆ ಇಬ್ಬರ ನಡುವೆ ಪ್ರಣತಿಯಾಕಾರದ ಒಂದು ಕ್ಯಾಂಡ್ಲ್ ಹಚ್ಚಿಟ್ಟಿದ್ದರು. ಸೀಮಂತ್ ವಿಸ್ಕಿ ಆರ್ಡರು ಮಾಡಿದ್ದ. ಅವರ ಮಧ್ಯೆ ಹಿತವಾದ ಮನವಿತ್ತು. ಅವನು ಮತ್ತೆ ಆ ರಾಜಕೀಯದ ಸುದ್ದಿಯ ಬಗ್ಗೆ ಮಾತನಾಡಲಿಲ್ಲ. ಅವಳಾಗಿ ಕೇಳಲೂ ಇಲ್ಲ. ಆದರೆ ಮನಸ್ಸಿನಾಳದಲ್ಲಿ ಎಲ್ಲೋ ಒಂದು ಕಡೆ ಸೀಮಂತ್ ತನ್ನನ್ನು ಮೀರಿಸಿ ಬೆಳೆದು ಬಿಟ್ಟಿದ್ದಾನಾ ಎಂಬ ಚಡಪಡಿಕೆಯಿತ್ತು. ಅದನ್ನವಳು ತೋರಿಸಿಕೊಳ್ಳಲು ಹೋಗಲಿಲ್ಲ. ಈ ಪತ್ರಿಕೋದ್ಯಮವೆಂಬುದು ಕೂಡ ಒಂದರ್ಥದಲ್ಲಿ ಧ್ಯಾನದಂತಹುದೇ. ಗುಂಪಿನಲ್ಲಿ ಇದು ಸಾಧ್ಯವಾಗುವುದಿಲ್ಲ. ಹತ್ತು ಜನ ಜರ್ನಲಿಸ್ಟುಗಳು ಒಂದು ಕಡೆ ಸೇರಿದರೆ ಹರಟೆ ಹುಟ್ಟುತ್ತದೆ: ಸುದ್ದಿ ಹುಟ್ಟುವುದಿಲ್ಲ. ಬ್ರೇಕಿಂಗ್ ನ್ಯೂಸ್ ಸಿಗುವುದು ಸೀಮಂತ್ ಒಬ್ಬನಿಗೇ ಅಲ್ಲ: ತನಗೂ ಸಿಗುತ್ತದೆ. ಕಾಯಬೇಕಷ್ಟೆ ಅಂದುಕೊಂಡಳು.

ಆದರೆ ಸೀಮಂತ್ ಬೇರೆಯೇ ಯೋಚಿಸುತ್ತಿದ್ದ. ತಾನು ದಾಂಡೇಲಿಯ ಕಾಡುಗಳಿಗೆ ಹೋಗಿ ತುಂಬ ದಿನಗಳಾದವು. ಹೇಗಾದರೂ ಬಿಡುವು ದಕ್ಕಿಸಿಕೊಂಡು ಒಂದು ಬೆಳಗಿನ ಜಾವ ಬೆಂಗಳೂರಿನಿಂದ ಹೊರಟು ಬಿಟ್ಟರೆ, ತನ್ನ ಪಟಪಟಿಸುವ ರಾಯಲ್ ಎನ್‌ಫೀಲ್ಡ್ ಬೈಕು ಇಳಿ ಮಧ್ಯಾಹ್ನದ ಹೊತ್ತಿಗೆ ದಾಂಡೇಲಿಯ ಫಾರೆಸ್ಟ್ ಬಂಗಲೆಯ ಅಂಗಳದಲ್ಲಿರುತ್ತದೆ. ಆದ ಸುಸ್ತು ಕಳೆಯಲು ಒಂದು ಛಿಲ್ಡ್ ಬಿಯರ್ ಮತ್ತು ಅರ್ಧ ಗಂಟೆಯ ವಿಶ್ರಾಂತಿ ಸಾಕು. ಸುತ್ತಲಿನ ಅರಣ್ಯ ಸಂಜೆ ಹೊತ್ತಿಗೆ ತಂಪಾಗಿರುತ್ತದೆ. ಅಲ್ಲೀಗ ಗರಿಕೆ ಹುಲ್ಲಿನ ಗರ್ಭದಿಂದ ಅಬ್ಬರದ ಚಳಿ ಹುಟ್ಟುವ ಸಮಯ. ಐದು ಸೆಲ್ಲಿನ ಒಂದು ಬ್ಯಾಟರಿ ಹಿಡಿದು, ಕಾಲಿಗೆ ಷೂ ಮೆಟ್ಟಿಕೊಂಡು ಕಾಡು ತಿರುಗಲು ಹೊರಟು ಬಿಟ್ಟರೆ ಅಸಲು ಪ್ರಪಂಚವೇ ಮರೆತು ಹೋಗುವಂತಹ ಸಂತಸ. ಅಷ್ಟು ಹಿತವಾದ ಕತ್ತಲು ಮತ್ತೆಲ್ಲೂ ಕವಿಯುವುದಿಲ್ಲ. ಕಾಡಿನ ಅಂಥ ನಿರಂತರ ಗಾನ ಮತ್ತೆಲ್ಲೂ ಕೇಳಿಸುವುದಿಲ್ಲ. ಎಲ್ಲೋ ಮರಗಳ ಟೊಂಗೆ ಟಿಸಿಲುಗಳ ಮಧ್ಯೆ ಮನದೊಳಗೇ ಹುಟ್ಟುವ ಮರ್ಮರ. ಯಾವುದೋ ಪಕ್ಷಿಯ ಕುಕಿಲು. ಕಾಲ ಕೆಳಗೆ ಒಣಗಿದ ಎಲೆ ಮುರಿದ ಸದ್ದು. ಅವುಗಳನ್ನೆಲ್ಲ ಹಿಮಾನಿಗೆ ಕೇಳಿಸಬೇಕು. ದೈತ್ಯ ವೃಕ್ಷದ ಬೊಡ್ಡೆಯೊಂದಕ್ಕೆ ಅವಳನ್ನು ಆನಿಸಿ ನಿಲ್ಲಿಸಿ ಎದೆ ಹೊರಡಿಸಿದ ಮಾತುಗಳನ್ನೆಲ್ಲ ಪಿಸುಗುಡಬೇಕು. ಸಣ್ಣಗೆ ಹಾಕಿದ ಚಳಿ ಬೆಂಕಿಯ ಮುಂದೆ ಅವಳನ್ನು ಕೂಡಿಸಿ ಸುಮ್ಮನೆ ಅವಳ ಕಣ್ಣು ನೋಡಬೇಕು. ಅವಳ ಕೆನ್ನೆಗಳ ಮೇಲೆ ಹತ್ತಿಳಿಯುವ ಜ್ವಾಲೆಗಳ ನೆರಳನ್ನು ಕಣ್ಣಲ್ಲೇ ಸೆರೆ ಹಿಡಿಯಬೇಕು. ಅಲ್ಲೇ ಕಾಡಿನಲ್ಲೊಂದು ಗೂಡು ಕಟ್ಟಿಕೊಂಡು ನಿಧಾನ ನಿಧಾನ ನಿಧಾನವಾಗಿ ಬೆಳೆಯುತ್ತ, ಮುದುಕರಾಗುತ್ತ ಅಲ್ಲೇ ಸತ್ತು ಹೋಗಿ ಮತ್ತೆ ಮರಗಳಾಗಿ ಹುಟ್ಟಬೇಕು. ಹಿಮಾ, ನನ್ನೊಂದಿಗೆ ಬಂದು ಬಿಡುತ್ತೀಯಾ ಕಾಡಿಗೆ? ಕೇಳಬೇಕೆಂದುಕೊಂಡವನು ಸುಮ್ಮನಾದ.
ಹಾಗೆ ಇಬ್ಬರೂ ಬೇರೆ ಬೇರೆ ಸಂಗತಿಗಳನ್ನೇ ಯೋಚಿಸುತ್ತ ಅವತ್ತಿನ ಊಟ ಮುಗಿಸಿದರು. ಸೀಮಂತ್ ಕುಡಿದದ್ದು ಎರಡೇ ಎರಡು ಪಿಂಟ್ ವಿಸ್ಕಿ. ಅವನು ಹೆಚ್ಚು ಕುಡಿಯುವುದಿಲ್ಲ. ಹೊಟೇಲಿನಿಂದ ಹೊರಬಿದ್ದವರು ಅವನ ಎನ್‌ಫೀಲ್ಡ್ ಹತ್ತಿದರು. ಅವತ್ತು ಅವಳ ಸ್ಕೂಟರಿಗೆ ರಜೆ. ಅದು ಆಫೀಸಿನ ಅಂಗಳದಲ್ಲೇ ನಿಂತಿತ್ತು. ಜಯನಗರದ ಅವಳ ಮನೆಯ ಮುಂದೆ ಬೈಕು ನಿಲ್ಲಿಸಿದವನನ್ನು ಹಿಮಾನಿ ಮನೆಯೊಳಕ್ಕೆ ಕರೆದಳು. ಹಾಡು ಕೇಳಿಸಿದರೆ ಬರ‍್ತೀನಿ ಅಂದಿದ್ದ ಸೀಮಂತ್. ಅವಳಿಗೆ ಗೊತ್ತು: ಅವನು ಆ ಗುಂಗಿನಲ್ಲಿ ತುಂಬ ತಲ್ಲೀನನಾಗಿ ಕೇಳುವುದು ಒಂದೇ ಹಾಡು: ಪರಖ್ ಸಿನೆಮಾದು. ಓ.... ಸಜನಾ, ಬರಖಾ ಬಹಾರ್ ಆಯೀ... ನಗುತ್ತ ಒಳಕ್ಕೆ ಕರೆದಳು ಹಿಮಾನಿ. ಅದು ಪುಟ್ಟದಾದರೂ ಮಟ್ಟಸವಾಗಿದ್ದ ಮನೆ. ಕೆಳಗೆ ಮಾಲೀಕರ ಮನೆಯಿತ್ತು. ಮೇಲಕ್ಕೆ ಹತ್ತಿ ಹೋಗಲು ಪ್ರತ್ಯೇಕ ಮೆಟ್ಟಿಲು. ಬಾಗಿಲು ಕಿಟಕಿಗಳಿಗೆ ಕನಕಾಂಬರ ಬಣ್ಣದ ಹೂಗಳಿದ್ದ ತಿಳಿನೀಲಿ ಪರದೆ ಬಿಟ್ಟಿದ್ದಳು ಹಿಮಾನಿ. ಕಿಟಕಿಯ ಬಳಿ ಇಟ್ಟಿದ್ದ ಮನಿ ಪ್ಲಾಂಟ್ ಹೊಸ ಚಿಗುರು ತೊಟ್ಟಿತ್ತು. ನೆಲದ ಹಾಸು ಕೊಳೆಯಾಗದಂತೆ ಷೂ ಹೊರಗೇ ಬಿಟ್ಟು ಒಳಕ್ಕೆ ಬಂದ ಸೀಮಂತ್ ಅಲ್ಲಿದ್ದ ದಿವಾನ್‌ನ ಮೇಲೆ ಕುಳಿತ. ಅರ್ಧ ಓದಿ ಮಗುಚಿಟ್ಟಿದ್ದ ಪುಸ್ತಕದೆಡೆಗೆ ಅವನ ಕಣ್ಣು ಸರಿದವು. ಮಕ್ಕಳ ಹಕ್ಕುಗಳ ಬಗ್ಗೆ ಓದುತ್ತಿದ್ದಳು ಹಿಮಾನಿ. ಇಡೀ ಮನೆ ಅವಳ ಅಭಿರುಚಿಯ ಬಗ್ಗೆ ಮಾತನಾಡುತ್ತಿತ್ತು. ಒಳಗೆ ಅಡುಗೆ ಮನೆಯಿತ್ತಾದರೂ ಅವಳು ಅಡುಗೆ ಮಾಡಿಕೊಳ್ಳುತ್ತಿರಲಿಲ್ಲ. ಅಲ್ಲೂ ಒಂದಷ್ಟು ಪತ್ರಿಕೆ, ಪುಸ್ತಕ ಜೋಡಿಸಿಟ್ಟಿದ್ದಳು. ಓರೆಯಾಗಿ ಬಚ್ಚಲಿತ್ತು. ಒಳಮನೆಯಲ್ಲಿ ಮರೂನ್ ಬಣ್ಣದ ಬೆಡ್‌ಸ್ಪ್ರೆಡ್ ಹಾಸಿದ್ದ ಹಾಸಿಗೆ. ಒಬ್ಬರಿಗೆ ಮಲಗಲು ಸಾಕಾಗುವಂಥ ಮಂಚ. ಪಕ್ಕದಲ್ಲೇ ಒಂದು ಬೆಡ್ ಲ್ಯಾಂಪ್. ಕಣ್ಣಿಗೆ ಚುಚ್ಚದ ತಿಳಿ ಬೆಳಕು. ಮಧ್ಯರಾತ್ರಿ ಎಚ್ಚರವಾದಾಗ ಕುಡಿಯಲು ನೀರು. ಗೋಡೆಗಿದ್ದ ಕನ್ನಡಿಯ ಮುಂದೆ ನಾಲ್ಕಾರು ಸೌಂದರ್ಯ ಸಾಧನಗಳು. ಅವುಗಳನ್ನು ಬಳಸದೆ ಇದ್ದರೂ ತನ್ನ ಹುಡುಗಿ ರೂಪವಂತೆ ಅಂದುಕೊಂಡ ಸೀಮಂತ್. ತನ್ನ ಹುಡುಗಿ ಅಂದುಕೊಂಡದ್ದು ಅವನಿಗೇ ಆಶ್ಚರ್ಯ ತಂದಿತ್ತು. ಈಗ ಬಂದೆ ಅಂದವಳು ಒಳಕ್ಕೆ ಹೋಗಿ ಉಡುಪು ಬದಲಿಸಿದಳು. ಬಿಗಿಯಾದ ಜೀನ್ಸ್ ಪ್ಯಾಂಟು, ಎದೆ ಮಾಟವನ್ನು ಹಿಡಿದಿಟ್ಟ ನೀಲಿ ಟೀಷರ್ಟು, ಎರಡನ್ನೂ ತೆಗೆದು ಶುಭ್ರವಾದುದೊಂದು ನೈಟಿ ಹಾಕಿಕೊಂಡಳು. ಕುಳಿತು ಹಾಡಲಿಕ್ಕೆ ಅಂಥ ಉಡುಪೇ ಹಿತ. ಜೊತೆಯಲ್ಲಿ ತಂಬೂರಿಯಿದ್ದರೆ ಚೆನ್ನಾಗಿರುತ್ತದೆ. ಆದರೆ ಗಟ್ಟಿಯಾಗಿ ಹಾಡುವ ವೇಳೆಯಲ್ಲ ಇದು. ಬಿಚ್ಚಿ ಹಾಕಿದ ಪ್ಯಾಂಟ್ ಮತ್ತು ಟೀಷರ್ಟ್ ಹ್ಯಾಂಗರ್‌ಗೆ ಹಾಕಿ ಹೊರಬಂದವಳು ಸೀಮಂತ್‌ನ ಎದುರಿಗೇ ನೆಲದ ಮೇಲೆ ಕುಳಿತುಕೊಂಡು ಸುಶ್ರಾವ್ಯವಾಗಿ ಹಾಡಿದಳು. ಕೇಳುತ್ತ ಕೇಳುತ್ತ ತುಂಬ ತಲ್ಲೀನನಾಗಿದ್ದವನು, ಅವಳು ಉಸಿರು ತಿರುಗಿಸಿಕೊಳ್ಳುವುದರೊಳಗಾಗಿ ಮೊದಲ ಚರಣವನ್ನು ಮತ್ತೆ ಹಾಡುತ್ತೀಯಾ ಅಂತ ಕೇಳಿದ್ದ. ಅವನ ಕಣ್ಣುಗಳಲ್ಲಿ ದಿವ್ಯ ಸಂತೋಷವಿತ್ತು.

ಸ್ವಲ್ಪ ಹೊತ್ತಿನ ನಂತರ ಅವನು ಎದ್ದು ನಿಂತ. ಇನ್ನು ತಾನು ಹೊರಡಬೇಕು. ಬೆಳಗ್ಗೆ ಬೇಗ ಬರುತ್ತೇನೆ. ಒಟ್ಟಿಗೆ ತಿಂಡಿ ತಿನ್ನೋಣ ಅಂದ. ಇನ್ನೇನು ಅವನು ಕದ ನೂಕಬೇಕು, ಅಷ್ಟರಲ್ಲಿ ಎದ್ದು ಹತ್ತಿರಕ್ಕೆ ಬಂದವಳು ಭುಜ ಹಿಡಿದು ಸೀಮಂತ್ ಅಂದಳು. ಅವನು ತೋಳು ಚಾಚಿದ. ಅವಳು ದೀಪವಾರಿಸಿದಳು. ಒಂದು ದೀರ್ಘ ಚುಂಬನ. ತುಟಿಗಳು ತೊಯ್ದವು. ನಾಲಗೆ ಕೆರಳಿದವು. ಉಸಿರು ಗಾಢ ಗಾಢ. ಕಿವಿ ಬಿಸಿಯಾದವು. ಅಪ್ಪುಗೆ ಬಿಗಿಯಾಯಿತು. ಸೀಮಂತ್ ಮತ್ತೆ ಒಳಬಂದು ತನ್ನನ್ನು ಹಾಸಿಗೆಗೆ ನಡೆಸಿಕೊಂಡು ಹೋಗಿ ನಗ್ನಳನ್ನಾಗಿಸಿ ಇವತ್ತು ಕನ್ನೆ ನೆಲವನ್ನು ಉತ್ತುಬಿಡಲಿ ಅಂದುಕೊಂಡಳು ಗಜಲ್ ಹಿಮಾನಿ.

ಅವನು ಸುಮ್ಮನೆ ಕನ್ನೆ ತಟ್ಟಿ ಕದ ತೆಗೆದುಕೊಂಡು ಹೊರಟು ಹೋದ. ಅವನಿಗೆ ಗೊತ್ತು: ಸ್ಪರ್ಶವೆಂಬುದು ಅಲ್ಲಿಗೇ ನಿಲ್ಲುವುದಿಲ್ಲ. ಕೆರಳಿದ ಮನಸು ಮನುಷ್ಯನನ್ನು ಅರಿಯದ ಆಳಕ್ಕೆ ಇಳಿಸಿಬಿಡುತ್ತದೆ. ಹಿಮಾನಿ ಎಂದಿದ್ದರೂ ತನ್ನವಳೇ. ಇಂದೇ ಎಲ್ಲವೂ ಮುಗಿದು ಬಿಡಬೇಕೆಂಬ ಅವಸರವೇಕೆ? ತಾನು ಮದುವೆಯ ಬಗ್ಗೆ ತುಂಬ ಸೆಂಟಿಮೆಂಟಲ್ ಆಗಿ ಯೋಚಿಸುವವನಲ್ಲ. ಆದರೆ ಮದುವೆಯ ಪಾವಿತ್ರ್ಯದ ಬಗ್ಗೆ ನಂಬಿಕೆಯಿದೆ. ಮದುವೆಯೆಂಬುದೊಂದು ಅಗೋಚರ ಚೌಕಟ್ಟು. ಅಂಥದೊಂದು ನೈತಿಕ ಚೌಕಟ್ಟೇ ಇಲ್ಲದೆ ಹೋದರೆ ಮನುಷ್ಯರು ನಾಯಿನರಿಗಳಂತಾಗಿ ಬಿಡುತ್ತಾರೆ. ಸೆಕ್ಸ್ ಎಂಬುದು ಕೇವಲ ಎರಡು ದೇಹಗಳ ಮಿಲನವಲ್ಲ. ಎರಡು ಉದ್ರೇಕಗಳ ಶಮನವಲ್ಲ. ಅದು ಎರಡು ವ್ಯಕ್ತಿತ್ವಗಳ ಮಿಲನದ ಸಂಭ್ರಮಾಚರಣೆ. ಸೆಲಬ್ರೇಷನ್ ಆಫ್ ಟು ಪರ್ಸನಾಲಿಟೀಸ್. ಹುಡುಗಿಗೆ ಕನ್ಯತ್ವವಿರುವಂತೆಯೇ ಗಂಡಸಿಗೆ ನೈತಿಕತೆಯ ಪಹರೆಯಿದೆ. ತನ್ನದೇ ಮನಸು ಏರ್ಪಡಿಸಿಕೊಂಡ ಅಗೋಚರ ಕಾವಲಿದೆ. ಹಾಗಂತ ಸೆಕ್ಸ್ ಎಂಬುದು ನಿಷಿದ್ಧ ಕ್ರಿಯೆಯೇನಲ್ಲ. ಅದು ತಾನಾಗಿ ಆಗುವುದಾದರೆ ಆಗಲಿ. ಅವಸರಕ್ಕೆ ಅರ್ಘ್ಯ ಚೆಲ್ಲಿಬಿಡಬಾರದು. ಇಂಥ ಆಪ್ತ ಘಳಿಗೆಗಳು ಈ ಎರಡು ವರ್ಷಗಳಲ್ಲಿ ತನ್ನ ಮತ್ತು ಹಿಮಾನಿಯ ಮಧ್ಯೆ ಅನೇಕ ಸಲ ಬಂದಿವೆ. ಹಿಮಾನಿ ತನ್ನ ಮನೆಗೂ ಬಂದು ಹೋಗಿದ್ದಾಳೆ. ಬೈಕಿನಲ್ಲಿ ಹಿಂದೆ ತನ್ನ ಬೆನ್ನು ಅವಚಿ ಕುಳಿತಿದ್ದಾಳೆ. ಮನೆಯ ಏಕಾಂತದಲ್ಲಿ ಇಬ್ಬರೂ ಹೀಗೇ ಉನ್ಮತ್ತರಾಗಿದ್ದಾರೆ. ಆದರೆ ಪ್ರತೀ ಸಲ ತನ್ನನ್ನು ತಾನು ಹೀಗೇ ನಿಗ್ರಹಿಸಿಕೊಂಡಿದ್ದಾನೆ. ಈ ನಿಗ್ರಹ ಎಲ್ಲಿಯವರೆಗೆ ಸೀಮಂತ್? ಹಾಗಂತ ಅವಳ ಅಬೋಧ ಕಣ್ಣುಗಳು ತನ್ನನ್ನು ಕೇಳಿವೆ. ಆ ಪ್ರಶ್ನೆಗೆ ತನಗೂ ಉತ್ತರ ಗೊತ್ತಿಲ್ಲ.

ನನಗೆ ಗೊತ್ತಿಲ್ಲ ಹಿಮಾನೀ, ನಿಜವಾಗಿಯೂ ಗೊತ್ತಿಲ್ಲ. ಜಗತ್ತಿನಲ್ಲಿ ನನ್ನವರು ಅಂತ ನನಗೆ ಯಾರೂ ಇಲ್ಲ. ಹುಟ್ಟಿಸಿದ ಅಪ್ಪ ನನ್ನನ್ನು ಒಪ್ಪಿಕೊಳ್ಳಲಿಲ್ಲ. ಅಮ್ಮ ಇನ್ನೊಬ್ಬರನ್ನು ಅರಸಿಕೊಂಡು ಹೊರಟು ಹೋದಳು. ನಾನೊಬ್ಬನು ಹೀಗೇ ಉಳಿದು ಹೋದೆ: ಲೋನ್ಲಿ ಬಾಸ್ಟರ್ಡ್! ಇಂಥ ನಾನು ನಿನ್ನನ್ನೇ ಏಕೆ ಸಮೀಪಿಸಿದೆ? ಗೊತ್ತಿಲ್ಲ. ಆದರೆ ನನಗೆ ಒಂದು ವಿಷಯ ಗೊತ್ತು. ಈ ಜಗತ್ತು ಒಪ್ಪಲಿ, ಬಿಡಲಿ. ಅದೊಂದು ದಿನ ನಿನ್ನನ್ನು ನನ್ನವಳನ್ನಾಗಿ ಮಾಡಿಕೊಳ್ಳುತ್ತೇನೆ. ನನ್ನ ಪಾಲಿಗೆ ಶಾಶ್ವತ ಮನೆಯೆಂದರೆ ಕಾಡು. ಪ್ರತೀಸಲ ಹೋದಾಗಲೂ ಹುಚ್ಚು ಹಂಬಲದೊಂದಿಗೆ ಹೋಗುತ್ತೇನೆ. ಒಮ್ಮೆ ನಿನ್ನನ್ನು ಅದೇ ಕಾಡಿಗೆ ಕರೆದೊಯ್ಯಬೇಕು: ನನ್ನ ಪ್ರೀತಿಯ ವೃಕ್ಷ ಸಮಕ್ಷಮಕ್ಕೆ. ಅಲ್ಲಿ ಬೆಳ್ಳಬೆಳಗಿನ ಜಾವ, ಇನ್ನೇನು ಸೂರ್ಯ ಉದಯಿಸುವ ಘಳಿಗೆ. ವಿಶಾಲ ವೃಕ್ಷದ ಕೆಳಗೆ ರೇಶಿಮೆಯುಟ್ಟು ನಿಂತ ನಿನ್ನ ಕೊರಳಿಗೆ ಇಷ್ಟೇ ಇಷ್ಟು ಪುಟ್ಟ ತಾಳಿ ಕಟ್ಟಬೇಕು. ದಂತದ ಬಣ್ಣದ ಕೊರಳಿಗೆ ಮುದ್ದಾದ ಕರಿಮಣಿ. ಅವತ್ತಿಗೆ ನಾನು ನಿನ್ನ ಗಂಡ, ನಿನ್ನ ಗೆಳೆಯ, ನಿನ್ನ ಸಂಗಾತಿ. ನನಗೆ ಮಂತ್ರ ಬೇಕಿಲ್ಲ. ಓಲಗದ ಸದ್ದು ಸಂಭ್ರಮ ಬೇಕಿಲ್ಲ. ಸಮಾಜದ ಸಮ್ಮತಿಯ ಮಂತ್ರಾಕ್ಷತೆ ಬೇಕಿಲ್ಲ. ಆದರೆ ನಮ್ಮನ್ನು ನಾವೇ ಒಪ್ಪಿಕೊಳ್ಳಬಲ್ಲ, ಸಮರ್ಥಿಸಿಕೊಳ್ಳಬಲ್ಲ, ಸಮರ್ಪಿಸಿಕೊಳ್ಳಬಲ್ಲ ಪರಸ್ಪರ ಅನುಮತಿಯ ಶಾಸ್ತ್ರಬೇಕು. ನಾವು ಮದುವೆಯಾಗಬೇಕು ಹಿಮಾ.

ಅದಕ್ಕೆ ಮುಂಚೆ ಈ ವೃತ್ತಿಯಲ್ಲಿ ಏನನ್ನಾದರೂ ಸಾಧಿಸಬೇಕು.
ಅದು ಸೀಮಂತ್‌ನ ನಿರ್ಧಾರ.
ಅವನು ಮೆಟ್ಟಿಲಿಳಿದು ಹೋದ ಸದ್ದು, ಆಮೇಲೆ ಎನ್‌ಫೀಲ್ಡ್ ಗುರುಗುಟ್ಟಿದ ಸದ್ದು. ನಂತರ ಹರಡಿಕೊಂಡ ವಿಚಿತ್ರ ಮನ. ಸುಮ್ಮನೆ ಕಿವಿಯಾದಳು ಹಿಮಾನಿ. ಪ್ರಪಂಚದಲ್ಲಿ ಎಲ್ಲದಕ್ಕಿಂತ ದೊಡ್ಡ ಭಾರವೆಂದರೆ ಯೌವನದ ಭಾರ ಅನ್ನಿಸಿತು. ಈ ಎರಡು ವರ್ಷಗಳಲ್ಲಿ ಸೀಮಂತ್ ಅವಳಿಗೆ ತುಂಬ ಹತ್ತಿರವಾಗಿದ್ದ, ಅರ್ಥವಾಗಿದ್ದ ಮತ್ತು ಇಷ್ಟವಾಗಿದ್ದ. ಅವನ ಹುಟ್ಟಿನ ಬಗ್ಗೆ ಅವನಿಗೆ ವಿಷಾದವಿತ್ತು. ಕೀಳರಿಮೆ ಇರಲಿಲ್ಲ. ನತದೃಷ್ಟ ಬಾಲ್ಯದ ನೆನಪುಗಳು ಮಾತ್ರ ಇವತ್ತಿಗೂ ಬೆನ್ನು ಬಿಡದೆ ಬೇಟೆಯಾಡುತ್ತಿದ್ದವು. ಬೀದಿಯ ಬದಿಯಲ್ಲಿ ಆಡುವ ಪರದೇಸಿ ಮಕ್ಕಳನ್ನು ಸುಮ್ಮನೆ ನೋಡುತ್ತ ನಿಂತುಬಿಡುತ್ತಿದ್ದ. ಚಿಕ್ಕಮಕ್ಕಳನ್ನು ಯಾರಾದರೂ ಹೊಡೆಯುತ್ತಿದ್ದರೆ ಜಗಳಕ್ಕೇ ಹೋಗಿ ಬಿಡುತ್ತಿದ್ದ. ಅಳುವ ಮಗುವಿಗೆ ಗಾಳಿಪಟ ಕೊಡಿಸುತ್ತಿದ್ದ. ಅನಾಥ ಮಕ್ಕಳಿಗೆ ತಿಂಗಳಿಗೊಂದು ಊಟ. ಸೀಮಂತ್‌ನ ಪ್ರತಿ ಚಿಂತನೆಯೂ ಅವಳಿಗೆ ಇಷ್ಟವಾಗುತ್ತಿತ್ತು. ಅವನಲ್ಲೊಂದು ಗಾಯಗೊಂಡ ಮಗುವಿದೆ. ಅದಕ್ಕೆ ತಾನು ತಾಯಿಯಾಗಬೇಕು ಅಂದುಕೊಳ್ಳುತ್ತಿದ್ದಳು. ಮದುವೆಯ ವಿಷಯದಲ್ಲಿ ಅವನಿಗೆ ಅಷ್ಟೇಕೆ ಹಟವೋ? ಅವಳಿಗೆ ಅರ್ಥವಾಗುತ್ತಿರಲಿಲ್ಲ. ಯಾವತ್ತಾದರೂ ತಮ್ಮಿಬ್ಬರ ಮಧ್ಯೆ ಅದು ಘಟಿಸುವಂತಹುದೇ. ಹಾಗಿರುವಾಗ ಇವತ್ತೇಕೆ ಮಿಲನವಾಗಬಾರದು? ಉನ್ಮತ್ತ ಕ್ಷಣಗಳಲ್ಲಿ ಈ ಪ್ರಶ್ನೆ ತುಂಬ ಕಾಡುತ್ತಿತ್ತು. ಅವಳು ಬಾಯಿಬಿಟ್ಟು ಕೇಳಬೇಕಿರಲಿಲ್ಲ. ದೇಹದ ಯಾಚನೆ ಅವನಿಗೂ ಅರ್ಥವಾಗುತ್ತಿತ್ತು. ಆದರೂ ಹುಡುಗನಿಗೆ ಕೆಟ್ಟ ಸಂಯಮ. ದೀಪವಾರಿಸಿ ಮಂಚದ ಮೇಲೆ ಮಲಗಿದವಳಿಗೆ ಇವತ್ತು ತುಂಬ ಒದ್ದೆಯಾಗಿ ಹೋಗಿದ್ದೇನೆ ಅನ್ನಿಸಿತು. ನೈಟಿ ತೆಗೆದು ಹಾಕಿ ಸುಮ್ಮನೆ ಬೋರಲಾಗಿ ಮಲಗಿದಳು.

ಬೆಳಗ್ಗೆ ಅವಳನ್ನು ಎಬ್ಬಿಸಿದ್ದು ಟೆಲಿಫೋನ್. ಅತ್ತಲಿಂದ ಡಿ.ಸಿ.ಪಿ ಚಂದ್ರಕಿಶೋರ್ ಮಾತನಾಡುತ್ತಿದ್ದ. ದನಿಯಲ್ಲಿ ಎಂಥದೋ ಉಲ್ಲಾಸ. ಗುಡ್ ಮಾರ‍್ನಿಂಗ್ ಗಜಲ್! ಮೊದಲನೇ ಫೋನ್ ನಮ್ಮ ಕಮೀಶನರ್‌ಗೆ ಮಾಡಿದೆ. ತಕ್ಷಣ ನೆನಪಾದವರು ನೀವೇ. ಈಗ ಐದು ನಿಮಿಷಗಳಿಗೆ ಮುಂಚೆ ಸರಬಂಡೆ ಪಾಳ್ಯದಲ್ಲಿ ಒಂದು ಎನ್‌ಕೌಂಟರ್ ಆಗಿದೆ. ವಿ ಹ್ಯಾವ್ ಎಲಿಮಿನೇಟೆಡ್ ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್... ಆತ ಮಾತನಾಡುತ್ತಲೇ ಇದ್ದ. ಮಂಚದ ಮೇಲೆ ಎದ್ದು ಕುಳಿತವಳಿಗೆ ತಾನು ನಗ್ನಳಾಗಿದ್ದಾಳೆ ಎಂಬುದು ಅರಿವಿಗೆ ಬಂದು ಇದ್ದಕ್ಕಿದ್ದಂತೆ ನಾಚಿಕೆ ಆವರಿಸಿಕೊಂಡಿತು. ವಾಪಸು ನಾನು ಫೋನ್ ಮಾಡ್ತೇನೆ ಎಂದು ಫೋನು ಕಟ್ ಮಾಡಿದವಳೇ ರಾತ್ರಿ ಬಿಚ್ಚಿ ಹಾಕಿದ್ದ ನೈಟಿ ಮೈಮೇಲೆಳೆದುಕೊಂಡಳು. ತಕ್ಷಣ ಅವಳಿಗೆ ನಗುಬಂತು. ಚಂದ್ರಕಿಶೋರ್ ಫೋನ್‌ನಲ್ಲಿ ಮಾತನಾಡುತ್ತಿದ್ದ ಅಷ್ಟೆ: ಎದುರಿಗೇನೂ ಇರಲಿಲ್ಲವಲ್ಲ? ಆದರೂ ಮನುಷ್ಯನ ರಿಫ್ಲೆಕ್ಸಸ್ ಕೆಲಸ ಮಾಡುವ ರೀತಿಯೇ ವಿಚಿತ್ರ ಅಂದುಕೊಂಡಳು. ಬಾತ್‌ರೂಮಿಗೆ ಹೋಗಿ ಬ್ರಷ್ ಮಾಡುತ್ತಿದ್ದಾಗ ಅವಳಿಗೆ ಮತ್ತೆ ಚಂದ್ರಕಿಶೋರ್ ನೆನಪಾದ. ಆರೂ ಕಾಲು ಅಡಿಯ ಸೈಂಧವ. ಅವನೂ ಚಿಕ್ಕಮಗಳೂರು ಕಡೆಯವನೇ. ಆದರೆ ಉತ್ತರಭಾರತದವನೇನೋ ಎಂಬಷ್ಟು ಬೆಳ್ಳಗಿದ್ದಾನೆ. ಅಗಲಗಲ ಮೀಸೆ. ದಟ್ಟ ಹುಬ್ಬು. ಗುಂಗುರು ಕೂದಲು. ಬೆಂಗಳೂರಿನಲ್ಲಿ ಹುಡುಗರಿಗೆ ಅವನನ್ನು ನೋಡುವುದೇ ಒಂದು ಮೋಜು. ರಸ್ತೆಗಿಳಿದನೆಂದರೆ ಎಂಥ ಜಂಗುಳಿಯಿರಲಿ: ಐದು ನಿಮಿಷಗಳಲ್ಲಿ ತಹಬಂದಿಗೆ ತಂದುಬಿಡುತ್ತಾನೆ. ಸೊಗಸಾದ ಮಾತುಗಾರ. ಅಧಿಕಾರಿಗಳ ವಲಯದಲ್ಲಿ ಅವನ ಬಗ್ಗೆ ಒಳ್ಳೆಯ ಹೆಸರೂ ಇದೆ, ಹೊಟ್ಟೆಕಿಚ್ಚೂ ಇದೆ. ಅಲ್ಲಿ ಇಲ್ಲಿ ದುಡ್ಡು ಮುಟ್ಟುವವನಲ್ಲವಾದ್ದರಿಂದ ಪಡ್ಡೆ ಪತ್ರಕರ್ತರ ಪಾಲಿಗೆ ಅವನು ಹೀರೋ. ಉಳಿದವರೆಲ್ಲ ತನ್ನನ್ನು ಹಿಮಾನಿ ಅನ್ನುತ್ತಾರೆ. ಚಂದ್ರಕಿಶೋರ್ ಒಬ್ಬನೇ, ಗಜಲ್ ಅನ್ನುವುದು. ಎಲ್ಲೋ ಒಂದು ಕಡೆ ಸಣ್ಣಗೆ ತನ್ನೊಂದಿಗೆ ಫ್ಲರ್ಟ್ ಮಾಡಲು ಬಯಸುತ್ತಾನಾ ಎಂಬ ಗುಮಾನಿ ಅವಳಿಗಿತ್ತಾದರೂ, ತಾನೇನು ಎಂಬುದು ಗೊತ್ತಿರುವ ಯಾವ ಅಧಿಕಾರಿಯೂ ಅಂಥ ಧೈರ್ಯ ಮಾಡಲಾರ ಅಂದುಕೊಂಡಿದ್ದಳು.

ಮುಖ ತೊಳೆದವಳೇ ಜೀನ್ಸ್‌ಗೆ ಕಾಲು ನುಗ್ಗಿಸಿ ಟೀಷರ್ಟ್‌ನೊಳಕ್ಕೆ ತೂರಿಕೊಳ್ಳುವಾಗ ಅವಳಿಗೆ ರಾತ್ರಿ ತಾನು ಸ್ಕೂಟರು ತಂದಿಲ್ಲ ಎಂಬುದು ನೆನಪಾಯಿತು. ಸೀಮಂತ್‌ಗೆ ಫೋನು ಮಾಡೋಣವಾ ಅಂದುಕೊಂಡವಳು ಯಾಕೋ ಅದರ ವಿರುದ್ಧ ತೀರ್ಮಾನಿಸಿದಳು. ಅವನ ಮೇಲೇಕೆ ಅವಲಂಬನೆ? ಇದು ತನ್ನ ಸುದ್ದಿ. ಎನ್‌ಕೌಂಟರ್ ನಡೆದ ಜಾಗಕ್ಕೆ ಮೊದಲು ಹೋಗಲಿರುವ ಪತ್ರಕರ್ತೆ ತಾನು. ಬ್ರೇಕಿಂಗ್ ನ್ಯೂಸ್ ಎಂಬುದು ಗಂಡಸಿನ ಸೊತ್ತೇನಲ್ಲವಲ್ಲ? ಮನೆಯಿಂದ ಹೊರಬಂದು ಆಟೋ ಹಿಡಿದವಳು ಹತ್ತನೇ ನಿಮಿಷ ಸರಬಂಡೆಪಾಳ್ಯದಲ್ಲಿದ್ದಳು. ಬೇರೆ ಪತ್ರಕರ್ತರ‍್ಯಾರೂ ಬಂದಿರಲಿಲ್ಲ. ಬ್ಯಾಗಿನಲ್ಲಿದ್ದ ಪುಟ್ಟ ಕೆಮೆರಾದಿಂದ ನಾಲ್ಕು ಫೊಟೋ ತೆಗೆದುಕೊಂಡಳು. ಗುಂಡು ಸರಿಯಾಗಿ ಕೆನ್ನೆಯ ಪಕ್ಕದಿಂದ ತಲೆಯೊಳಕ್ಕೆ ನುಗ್ಗಿತ್ತು. ಕಾರಿನ ಸ್ಟೀರಿಂಗ್ ಹಿಡಿದು ಕುಳಿತವನು ಹಾಗೇ ಸತ್ತು ಹೋಗಿದ್ದ. ಸುಮಾರು ಒಂದು ತಿಂಗಳಿಂದ ಇವನನ್ನು ಛೇಸ್ ಮಾಡ್ತಾ ಇದ್ವಿ. ಕೈಗೆ ಸಿಕ್ಕ ಹಾಗೇ ಸಿಕ್ಕು ಎಸ್ಕೇಪ್ ಆಗಿ ಬಿಡ್ತಿದ್ದ. ಇವತ್ತು ನಾನೇ ನೈಟ್‌ರೌಂಡ್ಸ್‌ನಲ್ಲಿದ್ದೆ. ರಿಂಗ್‌ರೋಡ್ ಜಂಕ್ಷನ್‌ನಿಂದ ಬರ‍್ತಿದಾನೆ ಅಂತ ಇನ್ಫರ‍್ಮೇಷನ್ ಇತ್ತು. ನನ್ನ ಜೊತೇಲಿ ಇಬ್ಬರೇ ಕಾನ್‌ಸ್ಟೇಬಲ್ಸ್ ಇದ್ರು. ಆದರೂ ರಿಸ್ಕ್ ತಗೊಂಡೆ. ಸ್ಟಾಪ್ ಮಾಡೋಕೆ ನೋಡಿದೆ. ಅಷ್ಟರಲ್ಲಿ ಅವನೇ ಫೈರ್ ಮಾಡೋಕೆ ಶುರು ಮಾಡಿದ. ಜಸ್ಟ್ ಬೈ ಒನ್ ಬುಲೆಟ್, ಐ ಟುಕ್ ಹಿಮ್! ಚಂದ್ರಕಿಶೋರ್‌ನ ಮಾತಿನಲ್ಲಿ ಅತಿಶಯೋಕ್ತಿ ಇರಲಿಲ್ಲ. ಆದರೆ ಸುಳ್ಳು ಹೇಳುತ್ತಿದ್ದಾನಾ? ನೋಡಿದಳು. ಅಲ್ಲಿದ್ದ ಪರಿಸ್ಥಿತಿ ನೋಡಿದರೆ, ಅದು ಪೊಲೀಸರು ಸೃಷ್ಟಿ ಮಾಡಿದ ಫೇಕ್ ಎನ್‌ಕೌಂಟರ್ ಅನ್ನಿಸಲಿಲ್ಲ. ರಾತ್ರಿಯಿಡೀ ಚಂದ್ರಕಿಶೋರ್ ಹೊಂಚಿ ಕುಳಿತಿದ್ದ ಎಂಬುದಕ್ಕೆ ಅವನ ಕಣ್ಣುಗಳಲ್ಲಿ ತೇಲುತ್ತಿದ್ದ ಕೆಂಪೇ ಸಾಕ್ಷಿಯಾಗಿತ್ತು. ಅವನೆಡೆಗೆ ತಾನು ಹೆಮ್ಮೆಯಿಂದ ನೋಡುತ್ತಿದ್ದಾಳಾ? ಕೇಳಿಕೊಂಡಳು. ಯಾಕೋ ಸೀಮಂತ್ ನೆನಪಾಗಿದ್ದ. ಉಳಿದ ಪತ್ರಕರ್ತರು ಬರುವಷ್ಟರಲ್ಲಿ ಕಾರಿನಲ್ಲಿದ್ದ ದೇಹವನ್ನು ಹೊರಕ್ಕೆಳೆದು ಶವಗಾರಕ್ಕೆ ಸಾಗಿಸಿಬಿಟ್ಟಿದ್ದರು. ಅವನು ಕುಳಿತಲ್ಲೇ ಸತ್ತಿದ್ದ ಫೊಟೋ ಮತ್ಯಾವ ಪತ್ರಿಕೆಯಲ್ಲೂ ಪ್ರಕಟವಾಗಿರಲಿಲ್ಲ. ಮಾರನೆಯ ದಿನ ಸೀಮಂತ್ ಅವಳೆಡೆಗೆ ಹೆಮ್ಮೆಯಿಂದ ನೋಡಿದ್ದ. ಒಂದೇ ಒಂದು ಫೊಟೋ ಸಾಕು, ಇಡೀ ಪುಟದ ಸುದ್ದಿಯನ್ನು ಹೇಳುತ್ತದೆ. ಪತ್ರಿಕೋದ್ಯಮದ ಸ್ಪರ್ಧೆಯಲ್ಲಿರುವುದೇ ಇಂಥ ಚಿಕ್ಕ ಚಿಕ್ಕ ಮಜಾ.ಅವತ್ತಿಗಾಗಲೇ ಸೀಮಂತ್ ಮಾಡಿದ ಮೊದಲ ಚಿಕ್ಕ ಸುದ್ದಿ ಪತ್ರಿಕಾ ವಲಯದಲ್ಲಿ ದೊಡ್ಡ ಮಟ್ಟದ ಅಚ್ಚರಿಗೆ ಕಾರಣವಾಗಿತ್ತು.

ಇದು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಸಂಖ್ಯಾತ ಓದುಗರ ನಡುವೆ ಬಹಳ ವಿಜೃಂಭಣೆಯಿಂದ ಬಿಡುಗಡೆಗೊಂಡ ‘ಕಾಮರಾಜ ಮಾರ್ಗ’ ಕಾದಂಬರಿಯ ಅಧ್ಯಾಯದ ಒಂದು ಭಾಗ.
ಆರಂಭದಲ್ಲಿ ಕಾದಂಬರಿಯಲ್ಲಿ ಕಾಮ ಬಹಳ ವಿಜೃಂಭಿಸಿಬಿಟ್ಟಿದೆ ಎಂಬ ಅಭಿಪ್ರಾಯ ಕೇಳಿ ಬಂದಿತ್ತಾದರೂ ಅದರಲ್ಲಿರುವ ಮನುಷ್ಯ ಸಂಬಂಧಗಳ ಸೂಕ್ಷ್ಮಗಳನ್ನು ಕೆಲವು ರಾಜಕೀಯ ಘಟನೆಗಳ ಹಿನ್ನೆಲೆಯಲ್ಲಿ ಪಾತ್ರಗಳನ್ನು ಸೃಷ್ಟಿಸಿ ಕಾಮದಂತಹ ವಸ್ತುವನ್ನು ಸುಂದರವಾಗಿ-ರಸವತ್ತಾಗಿ ಚಿತ್ರಿಸಿ ಕತೆ ಹೆಣೆದಿರುವುದನ್ನು ಗ್ರಹಿಸಲಾರದಷ್ಟು ದಡ್ಡರೇನಲ್ಲ ಓದುಗ ದೊರೆಗಳು ಎಂಬುದನ್ನು ಸಂಪೂರ್ಣವಾಗಿ ಮನದಟ್ಟು ಮಾಡಿಕೊಟ್ಟಿರುವುದಕ್ಕೆ ಕಾದಂಬರಿ ಮೂರನೇ ಬಾರಿ ಮರುಮುದ್ರಣಗೊಂಡಿರುವುದೇ ಸಾಕ್ಷಿ.
ಮೊದಲಿನಷ್ಟೇ ಸುಂದರವಾಗಿ ಪ್ರತಿಗಳು ಅಚ್ಚಾಗಿ ಬಂದಿವೆ. ಎಂದಿನಂತೆ ಎಲ್ಲ ಪುಸ್ತಕದಂಗಡಿಗಳಲ್ಲೂ ಲಭ್ಯವಿದೆ. ನನ್ನ ಗಾಂಧಿಬಜಾರಿನ ‘ಬೆಳಗೆರೆ ಬುಕ್ಸ್ ಅಂಡ್ ಕಾಫಿ’ ಪುಸ್ತಕ ಮಳಿಗೆಯಲ್ಲಿ ಮಾತ್ರ ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ.
ಎಂದಿನಂತೆ ಓದುವ ಆನಂದ ನಿಮ್ಮದಾಗಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books