Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕಾಲನ ಹೊಡೆತಕ್ಕೆ ಪಂಕ್ಚರ್ ಆದ ಆಂಬಾಸೆಡರ್

End of the road.
ನಿನ್ನ ಬದುಕಿನ ಎಲ್ಲಾ ದಾರಿಗಳು ಮುಚ್ಚಿಹೋದವು, ಇನ್ನು ನಿನ್ನ ಕತೆ ಮುಗಿದಂತೆ ಅನ್ನುವುದಕ್ಕೆ ಆಂಗ್ಲಭಾಷೆಯಲ್ಲಿ ಹಾಗನ್ನುತ್ತಾರೆ. ಅಂಬಾಸೆಡರ್ ಕಾರಿನ ಪಾಲಿಗೆ ಇದು ಅಕ್ಷರಶಃ ನಿಜವಾಗಿದೆ. ಇನ್ನು ನಮ್ಮ ಹೆದ್ದಾರಿಗಳಲ್ಲಿ ಅಂಬಾಸೆಡರ್ ಓಡುವುದಿಲ್ಲ, ನಮ್ಮೂರಿನ ಕೊಳಕು ರಸ್ತೆಗಳಲ್ಲಿ ಅದರ ಚಕ್ರಗಳ ಗುರುತು ಕಾಣುವುದಿಲ್ಲ. ಮೊನ್ನೆ ಮೇ ಇಪ್ಪತ್ತೈದರಿಂದ ಈ ಕಾರಿನ ನಿರ್ಮಾಣವನ್ನು ಸ್ತಗಿತಗೊಳಿಸಿರುವುದಾಗಿ ಹಿಂದುಸ್ತಾನ್ ಮೋಟರ್ಸ್ ಕಂಪನಿ ಹೇಳಿದೆ. ಎಂಬಲ್ಲಿಗೆ ಐದೂವರೆ ದಶಕಗಳ ಕಾಲ ಭಾರತದ ರಸ್ತೆಗಳನ್ನು ರಾಜನಂತೆ ಆಳಿದ ಒಂದು ಕಾರು ಇತಿಹಾಸದ ಗರಾಜು ಸೇರಿದೆ.

ಅಂಬಾಸೆಡರ್ ಕಾರಿಲ್ಲ ಎಂದ ಮಾತ್ರಕ್ಕೆ ನಮ್ಮ ಪಯಣ ನಿಲ್ಲುವುದಿಲ್ಲ, ನಮ್ಮ ದೈನಿಕಗಳು ಬದಲಾಗುವುದೂ ಇಲ್ಲ. ಅದಕ್ಕಿಂತ ವೇಗವಾಗಿ ಓಡುವ, ಜಾಸ್ತಿ ಮೈಲೇಜು ಕೊಡುವ, ರೂಪದಲ್ಲಿ ಸಿನೆಮಾ ಹೀರೋಯಿನ್ನುಗಳನ್ನೇ ನಾಚಿಸುವ ಅದೆಷ್ಟೋ ಕಾರುಗಳು ನಮಗಾಗಿ ಕಾಯುತ್ತಿವೆ. ಹಾಗಂತ ನಮ್ಮ ಭಾವಕೋಶದಲ್ಲೊಂದು ನಿರ್ವಾತ ಸೃಷ್ಟಿಯಾಗಿದ್ದನ್ನು ಅಲ್ಲಗೆಳೆಯುವುದಕ್ಕಾಗುತ್ತಾ? ಉಹೂಂ. ಒಂದು ಕಾಲದಲ್ಲಿ ನಮ್ಮ ಮಾತು-ಕತೆಯನ್ನು ಆವರಿಸಿದ್ದ ಗ್ರಾಮಫೋನ್, ಕೆಸೆಟ್ಟು, ರುಬ್ಬೋಕಲ್ಲು, ಟೈಪ್ ರೈಟರ್, ಕೊಡಾಕ್ ಫಿಲಂ ರೀಲು ಹೀಗೆ ಅದೆಷ್ಟೋ ಉಪಕರಣಗಳು ತೀರಿಹೋಗಿವೆ. ಈಗ ಅಂಬಾಸೆಡರ್ ಸರದಿ.

ಬೀರು ಅಂದರೆ ಗೋದ್ರೆಜ್ ಅಂದಹಾಗೆ ಕಾರು ಅಂದರೆ ಅಂಬಾಸೆಡರ್ ಅನ್ನುವ ಕಾಲವಿತ್ತು. ಅದಕ್ಕೆ ಕಾರಣವಿಲ್ಲದೇ ಇಲ್ಲ, ಭಾರತದಲ್ಲಿ ತಯಾರಾದ ಮೊದಲ ಕಾರು ಇದು, ಮೇಡ್ ಇನ್ ಇಂಡಿಯಾ ಎಂಬ ಲೇಬಲ್ ಹಚ್ಚಿಕೊಂಡ ಮೊದಲ ಕಾರು. ಈ ಕಾರಿನ ಮೂಲ ಜನಕ ಬ್ರಿಟನ್ನಿನ ಮೋರಿಸ್ ಕಂಪನಿಯಾಗಿದ್ದರೂ, ಬ್ರಿಟಿಷರ ಕ್ರೀಡೆಯಾದ ಕ್ರಿಕೆಟ್ ಥರಾನೇ ಇದು ಕೂಡಾ ಭಾರತೀಯರ ಪಾಲಿಗೆ ಮನೆಯ ಸದಸ್ಯನೇ ಆಗಿಹೋಯಿತು. ನೀವೀಗ ಮಧ್ಯವಯಸ್ಕರಾಗಿದ್ದರೆ ಒಮ್ಮೆ ನಿಮ್ಮ ಬಾಲ್ಯದತ್ತ ಹೊರಳಿ ನೋಡಿ, ಆಗ ನಿಮ್ಮಾಸೆಗಳು ಏನಾಗಿದ್ದವು ಅನ್ನುವುದನ್ನು ನೆನಪಿಸಿಕೊಳ್ಳಿ. ಬಸ್ ಕಂಡಕ್ಟರ್ ಆಗಬೇಕು, ಪೊಲೀಸ್ ಆಗಬೇಕು ಅನ್ನುವ ಥರ ಒಂದ್ಸಾರಿ ಅಂಬಾಸೆಡರ್ ಕಾರು ಓಡಿಸಬೇಕು ಅನ್ನುವುದು ಕೂಡಾ ನಿಮ್ಮ ಇಷ್ಟದ ಲಿಸ್ಟಲ್ಲಿ ಇದ್ದೇ ಇರುತ್ತದೆ. ಆಗ ಫಿಯಟ್ ಕಾರು ಶ್ರೀಮಂತಿಕೆಗೆ ಸಂಕೇತವಾಗಿದ್ದರೆ, ಅಂಬಾಸೆಡರ್ ಭಾರತೀಯ ಶ್ರೀಸಾಮಾನ್ಯನ ಪ್ರತಿನಿಧಿಯಾಗಿತ್ತು. ಮನೆಯವರೆಲ್ಲಾ ಒಟ್ಟಾಗಿ ಸಿನೆಮಾಗೆ ಅಥವಾ ಮದುವೆ ಮುಂಜಿಗಳಿಗೆ ಹೋಗಬೇಕು ಅಂದರೆ ಮನೆ ಮುಂದೆ ಅಲಂಕೃತ ಅಂಬಾಸೆಡರ್ ಹಾಜರ್. ಇನ್ನೊಂದೆಡೆ ಅದಕ್ಕೆ ಸರ್ಕಾರಿ ಕಾರು ಎಂಬ ರಾಜಮರ್ಯಾದೆಯೂ ಸಂದಾಯವಾಗಿತ್ತು. ಮಂತ್ರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಈ ಕಾರಲ್ಲೇ ಓಡಾಡುತ್ತಿದ್ದರು. ಸಾಮಾನ್ಯವಾಗಿ ಆಗ ಎರಡೇ ಬಣ್ಣಗಳಲ್ಲಿ ಅಂಬಾಸೆಡರ್ ಲಭ್ಯವಾಗುತ್ತಿತ್ತು; ಕಪ್ಪು ಅಥವಾ ಬಿಳಿ. ಟಾಕ್ಸಿ ಓಡಿಸುವವರು ಸಾಮಾನ್ಯವಾಗಿ ಬಿಳಿ ಕಾರುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು, ಧೂಳು ತುಂಬಿದ ಕಚ್ಚಾರಸ್ತೆಗಳಲ್ಲಿ ಬೆಳಗಿಂದ ಸಂಜೆಯ ತನಕ ಓಡಾಡಿದ ನಂತರ ಅದು ಕೆಂಪು ಕಾರಾಗುತ್ತಿತ್ತು.

ಅಂಬಾಸೆಡರ್ ಅಂದರೆ ರಾಯಭಾರಿ. ಆ ಕಾರು ಕೂಡಾ ನಿಜವಾದ ಅರ್ಥದಲ್ಲಿ ಭಾರತದ ರಾಯಭಾರಿಯಾಗಿತ್ತು. ನಮ್ಮ ದೇಶಕ್ಕೆ ಭೇಟಿ ನೀಡುವ ಎಲ್ಲಾ ವಿದೇಶಿಯರೂ ಒಂದು ಸಾರಿ ಅಂಬಾಸೆಡರ್ ಸವಾರಿ ಮಾಡಿಯೇ ವಾಪಸ್ ಹೋಗುತ್ತಿದ್ದರು. ನಾಲ್ಕು ಮೂಲೆಗಳನ್ನು ಉರುಟುರುಟಾಗಿ ಕತ್ತರಿಸಿದ ಪುಟ್ಟ ಬಂಡೆಯಂತಿರುವ ಕಾರಿನ ವಿನ್ಯಾಸವೇ ವಿಶಿಷ್ಟ. ಕಾರಿನ ಅಧಿಕೃತ ಕೆಪಾಸಿಟಿ ಐದೇ ಪ್ರಯಾಣಿಕರಾದರೂ ಒಂದು ತುಂಬು ಸಂಸಾರ ಆರಾಮಾಗಿ ಅದರೊಳಗೆ ಸ್ಥಾಪನೆಯಾಗಬಹುದು. ಅದಕ್ಕೆ ಕಾರಣ ಒಳಗಿನ ಸ್ಪೇಸ್. ಆಗಿನ ಕಾಲದಲ್ಲಿ ಮದುವೆಗೂ ಮಸಣಕೂ ಏಕೈಕ ವಾಹನವೆಂದರೆ ಅಂಬಾಸೆಡರ್. ಒಂದು ದೇಹ ಆರಾಮಾಗಿ ಕಾಲುಚಾಚಿ ಮಲಗುವಷ್ಟು ದೊಡ್ಡ ಡಿಕ್ಕಿ ಇದ್ದಿದ್ದರಿಂದ ಶವಗಳೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ!

ವಿದೇಶಿಯರು ಅಂಬಾಸೆಡರ್ ಕಾರನ್ನು grand old lady of indian roads ಎಂದು ಕರೆಯುತ್ತಾರೆ. ಕಾರುಗಳನ್ನು ಮಹಿಳೆಯರಿಗೆ ಹೋಲಿಸುವ ಚಟ ಅವರಿಗೆ. ಆದರೆ ನನ್ನಂಥವರ ಪಾಲಿಗೆ ಅಂಬಾಸೆಡರ್ ದೈಹಿಕವಾಗಿ ಗಟ್ಟಿಮುಟ್ಟಾಗಿರುವ ಗಂಡು. ಸದ್ಯಕ್ಕೆ ಸರಿದು ಹೋದ ಕಾಲದ ಕತೆ ಹೇಳುವ ಅಜ್ಜ. ನನಗೆ ಹಲವು ಕಾರು ಚಾಲಕರನ್ನು ಪರಿಚಯಿಸಿದ ಗೆಳೆಯ.
ಹಿಂದುಸ್ತಾನ್ ಮೋಟರ್ಸ್ ಅಂಬಾಸೆಡರ್ ಕಾರನ್ನು ರಸ್ತೆಗೆ ಬಿಟ್ಟಿದ್ದು ೧೯೫೭ರಲ್ಲಿ. ಈಗಿನ ಕಾರುಗಳಿಗೆ ಹೋಲಿಸಿದರೆ ಅದರ ವಿನ್ಯಾಸ ಅಂಥಾ ಸ್ಟೈಲಿಷ್ ಏನೂ ಆಗಿರಲಿಲ್ಲ. ಆದರೆ ಕಾರಿನ ಜನಪ್ರಿಯತೆಗೆ ಅದು ಅಡ್ಡಿಯಾಗಲಿಲ್ಲ. ಮನೆಗೆ ಸೊಸೆಯನ್ನು ಹುಡುಕುವ ಥರಾನೇ ಕಾರನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದ ಕಾಲವದು. ಕಾಣುವುದಕ್ಕೆ ಚೆಂದವಾಗಿರುವುದಕ್ಕಿಂದ ಹೆಚ್ಚಾಗಿ ಗಟ್ಟಿಮುಟ್ಟಾಗಿರಬೇಕು ಅನ್ನುವುದೇ ಆಗಿನ ಕಾಲದ ನಿಯಮವಾಗಿತ್ತು. ಈ ಕಾರು ಎಷ್ಟೊಂದು ಗಟ್ಟಿಯಾಗಿತ್ತು ಅನ್ನುವುದಕ್ಕೆ ಉದಾಹರಣೆಯೆಂದರೆ ೨೦೦೧ರಲ್ಲಿ ಪಾರ್ಲಿಮೆಂಟ್ ಮೇಲೆ ಉಗ್ರಗಾಮಿಗಳು ಆಕ್ರಮಣ ನಡೆಸಿದ ಸಂದರ್ಭದಲ್ಲಿ ಅಲ್ಲಿನ ಭದ್ರತೆಯನ್ನು ಭೇದಿಸಲು ಇದೇ ಕಾರನ್ನು ಬಳಸಿದ್ದರು. ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಬಾಂಬು ದಾಳಿಯಿಂದ ಬಚಾವು ಮಾಡಿದ್ದೂ ಇದೇ ಗಾಡಿ. ಭಾರತೀಯ ಮಿಲಿಟರಿಗೆ ಅಂಬಾಸೆಡರ್ ಮೇಲೆ ಇನ್ನಿಲ್ಲದ ನಂಬಿಕೆ. ಅದಕ್ಕೆ ಕಾರಣ ಎಂಥಾ ಕೆಟ್ಟಕೊಳಕ ರಸ್ತೆಯಲ್ಲೂ ಹಾವಿನಂತೆ ಹರಿದಾಡುವ ಅದರ ಸಾಮರ್ಥ್ಯ.

ಇಪ್ಪತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲೊಂದು ವಿಚಿತ್ರ ಕೇಸು ನ್ಯಾಯಾಲಯದ ಮೆಟ್ಟಿಲೇರಿತ್ತು. ಅಂಬಾಸೆಡರ್ ಅನ್ನು ತನ್ನ ಜೀವನ ನಿರ್ವಹಣೆಗಾಗಿ ಓಡಿಸುತ್ತಿದ್ದ ಚಾಲಕನೊಬ್ಬನ ಮೇಲೆ ಪೊಲೀಸರು ಕೇಸು ಹಾಕಿದ್ದರು. ಪುತ್ತೂರಿನಿಂದ ಮಂಗಳೂರಿಗೆ ಪ್ರಯಾಣಿಕರನ್ನು ಕೊಂಡೊಯ್ಯುವ ವೇಳೆ ಆತ ಹದಿನಾಲ್ಕು ಜನರನ್ನು ಕಾರೊಳಗೆ ತುಂಬಿದ್ದ ಅನ್ನುವುದು ಕೇಸಿನ ಸಾರಾಂಶ. ನ್ಯಾಯಾಧೀಶರು ‘ಹೌದೇನಯ್ಯಾ’ ಎಂದು ಚಾಲಕನನ್ನು ಕೇಳಿದರು. ಚಾಲಕ ವಿನಮ್ರನಾಗಿ ಹೇಳಿದ. ‘ಎಲ್ಲಾದರೂ ಉಂಟಾ ಮಹಾಸ್ವಾಮಿ, ನನ್ನ ಕಾರು ಇಲ್ಲೇ ಹೊರಗಿದೆ. ಪೊಲೀಸರು ಸಾಧ್ಯವಾದರೆ ಅದರೊಳಗೆ ಹತ್ತು ಜನರನ್ನು ತುಂಬಿ ತೋರಿಸಲಿ ಸಾಕು’. ಅಲ್ಲಿಗೇ ಕೇಸು ಬಿದ್ದೋಯ್ತು. ಅದೇ ಚಾಲಕ ಮಾರನೇ ದಿನ ಯಥಾಪ್ರಕಾರ ಹದಿನಾಲ್ಕು ಜನರನ್ನು ತುಂಬಿಕೊಂಡು ಸಾಗುತ್ತಿದ್ದ ದೃಶ್ಯವನ್ನು ಪೊಲೀಸರು ಅಸಹಾಯಕರಾಗಿ ನೋಡುತ್ತಿದ್ದರು. ಅದು ಆಂಬಾಸೆಡರ್ ತಾಕತ್ತು.

ಒಂದು ಕಾಲದಲ್ಲಿ ಸ್ಕೂಲಲ್ಲಿ ಮೇಷ್ಟ್ರು ಕಾರಿನ ಚಿತ್ರ ಬಿಡಿಸು ಅಂದರೆ ನಾವು ಅಂಬಾಸೆಡರ್ ಕಾರಿನ ಚಿತ್ರವನ್ನೇ ಬಿಡಿಸುತ್ತಿದ್ದೆವು. ಫೊಟೋ ತೆಗೀಬೇಕು ಅಂದರೆ ಕೊಡಾಕ್ ಕೆಮೆರಾ ಮತ್ತು ರೀಲಿಗಾಗಿ ಅಲೆಯುತ್ತಿದ್ದೆವು. ಈಗ ಡಿಜಿಟಲ್ ಕೆಮೆರಾಗಳ ಅಬ್ಬರದಲ್ಲಿ ಕೊಡಾಕ್ ತೀರಿಕೊಂಡಿದೆ. ನೂರು ವರ್ಷಗಳ ಇತಿಹಾಸವಿದ್ದರೂ ಕಾಲದೊಂದಿಗೆ ಹೆಜ್ಜೆ ಹಾಕುವುದಕ್ಕೆ ಅದರಿಂದ ಸಾಧ್ಯವಾಗಲಿಲ್ಲ. ಅಂಬಾಸೆಡರ್ ಕಾರಿನದ್ದೂ ಅದೇ ಕತೆ. ಕಳೆದ ವರ್ಷ ಭಾರತದಲ್ಲಿ ಮಾರಾಟವಾದ ೧.೮ ಮಿಲಿಯನ್ ಕಾರುಗಳಲ್ಲಿ ಅಂಬಾಸೆಡರ್ ಕಾರುಗಳ ಸಂಖ್ಯೆ ಕೇವಲ ೨೨೦೦. ೮೦ರ ದಶಕದಲ್ಲಿ ‘ಮಾರುತಿ ೮೦೦’ ಬಂದಿದ್ದೇ ತಡ ಅಂಬಾಸೆಡರ್ ಹಿಂದೆ ಸರಿಯಿತು. ೯೦ರ ದಶಕದಲ್ಲಿ ಭಾರತ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿದ್ದೇ ತಡ ನೂರಾರು ಹೊಸ ಮಾಡೆಲ್ಲು ಕಾರುಗಳು ರಸ್ತೆಗಿಳಿದು, ಅಂಬಾಸೆಡರ್ ವಯಸ್ಸಾದ ಮನೆ ಯಜಮಾನನಂತೆ ಮೂಲೆಗುಂಪಾಯಿತು. ನೂರು ವರ್ಷದ ಇತಿಹಾಸವುಳ್ಳ ರಾಯಲ್ ಎನ್‌ಫೀಲ್ಡ್ ಬೈಕು ಬದಲಾಗುತ್ತಿರುವ ಟ್ರೆಂಡಿಗೆ ಅನುಗುಣವಾಗಿ ತಾನೂ ಬದಲಾಗುತ್ತಾ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಅಂಬಾಸೆಡರ್ ಆ ಕೆಲಸ ಮಾಡಲಿಲ್ಲ. ದುಬಾರಿ ಮೇಂಟೆನೆನ್ಸ್, ಕಡಿಮೆ ಮೈಲೇಜು, ಬದಲಾಗದ ವಿನ್ಯಾಸದಿಂದಾಗಿ ಯುವಪೀಳಿಗೆಗೆ ಇದು ಬೇಡದ ವಸ್ತುವಾಯಿತು. ಪ್ರತಿಷ್ಠಿತರ ಕಾರು ಅನ್ನುವ ಸ್ಟೇಟಸ್ ಸಿಂಬಲನ್ನು ತನ್ನ ಬ್ರಾಂಡ್ ಆಗಿಸುವುದಕ್ಕೆ ಅಂಬಾಸೆಡರ್ ಎಂದೂ ಪ್ರಯತ್ನಿಸಲಿಲ್ಲ. ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರೇ ತಮ್ಮ ಅಂಬಾಸೆಡರ್ ಕಾರನ್ನು ಬದಿಗಿಟ್ಟು BMW SUV ಕಾರನ್ನು ಬಳಸತೊಡಗಿದರು. ಅದು ಅಂಬಾಸೆಡರ್‌ಗೆ ಹೊಡೆದ ಕೊನೇ ಮೊಳೆ. ಯಾಕೆಂದರೆ ಮಿಕ್ಕ ಸಚಿವರೂ ಅವರನ್ನೇ ಅನುಸರಿಸಿದರು. ಟಾಕ್ಸಿ ಚಾಲಕರು ಮೈಲೇಜು ಕಾರಣಕ್ಕೆ ಇಂಡಿಕಾಗೆ ವರ್ಗವಾದರು.

ಅಂಬಾಸೆಡರ್ ಕಾರನ್ನೇ ಬಹಳವಾಗಿ ನೆಚ್ಚಿಕೊಂಡಿದ್ದ ಮಧ್ಯಮವರ್ಗದವರೂ ಈಗ ಆ ಕಾರಿಗೆ ವಿಚ್ಛೇದನ ನೀಡಿದ್ದಾರೆ. ಟಾಟಾ ಸೇರಿದಂತೆ ಇನ್ನಿತರೇ ವಿದೇಶಿ ಕಂಪನಿಗಳ ವೈವಿಧ್ಯಮಯ ಕಾರುಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಅವರ ನಿಷ್ಠೆ ಬದಲಾಯಿತು. ಜಾಸ್ತಿ ಮೈಲೇಜು ಕೊಡುವ ಪುಟ್ಟ ಕಾರೇ ಅವರ ಆಯ್ಕೆಯಾಯಿತು. ಕಚ್ಚಾ ರಸ್ತೆಗಳು ಸೂಪರ್ ಹೈವೇ ಆದವು. ಎಲ್ಲೆಂದರಲ್ಲಿ ಫ್ಲೈ ಓವರುಗಳು ಪ್ರತ್ಯಕ್ಷವಾದವು. ಹಾಗಾಗಿ ಕೈಬೆರಳ ಸ್ಪರ್ಶಕ್ಕೇ ನುಗ್ಗಾಗುವ ನಾಜೂಕು ಕಾರುಗಳಿಗೆ ಬೇಡಿಕೆ ಕುದುರಿತು. ಆ ಕಡೆ ಚಿಕ್ಕ ಕಾರೂ ಅಲ್ಲದ, ಈ ಕಡೆ ದೊಡ್ಡ ಕಾರೂ ಅಲ್ಲದ ಅಂಬಾಸೆಡರ್ ತ್ರಿಶಂಕು ಸ್ಥಿತಿ ತಲುಪಿತು. ಕಾರಿನ ಮಾರಾಟ ವಿಪರೀತ ಕುಸಿದಿದ್ದರಿಂದ ಬಿರ್ಲಾ ಕಂಪನಿ ಅಂಬಾಸೆಡರ್‌ಗೆ ಟಾಟಾ ಹೇಳುವುದು ಅನಿವಾರ್ಯವಾಯಿತು.

ಹಾಗಿದ್ದೂ ಕೊಲ್ಕೊತ್ತ, ಡೆಲ್ಲಿ, ಮುಂಬೈ ಮತ್ತು ಬೆಂಗಳೂರಿನ ಪಂಚತಾರಾ ಹೊಟೇಲುಗಳ ಕಂಪೌಂಡ್ ಮೂಲೆಯಲ್ಲಿ ಅಂಬಾಸೆಡರ್ ತನ್ನ ಅತಿಥಿಗಳಿಗಾಗಿ ಬಾಗಿಲು ತೆರೆದು ಕಾಯುತ್ತಿವೆ. ಆ ಡ್ರೈವರ್ ಬಳಿ ಹೇಳುವುದಕ್ಕೆ ಕತೆಗಳಿವೆ. ನಲವತ್ತು ವರ್ಷ ಭಾರತೀಯ ತೆರೆಯನ್ನಾಳಿದ ಅಮಿತಾಬ್ ಬಚ್ಚನ್ ಬಗ್ಗೆ ಮಾತಾಡುವಷ್ಟೇ ಉತ್ಸಾಹದಿಂದ ಅಂಬಾಸೆಡರ್ ಬಗ್ಗೆ ಆತ ಮಾತಾಡುತ್ತಾನೆ. ಅಪರೂಪಕ್ಕೆ ಯಾರೋ ಒಬ್ಬ ವಿದೇಶಿ ಅತಿಥಿ ಬಂದು ಆ ಕಾರು ಏರುತ್ತಾನೆ. ತನ್ನ ಮೊಮ್ಮಕ್ಕಳ ಪ್ರಾಯದ ಕಾರುಗಳ ನಡುವೆ ಜಾಗ ಮಾಡಿಕೊಂಡು ನಡೆಯುವ ಅಜ್ಜನಂತೆ ಅಂಬಾಸೆಡರ್ ರಸ್ತೆಯಲ್ಲಿ ನಿಧಾನಕ್ಕೆ ಹರಿದಾಡುತ್ತದೆ. ಅದನ್ನು ನೋಡುತ್ತಿದ್ದಂತೆಯೇ ನನಗೆ ಮುಖೇಶನ ಹಳೆಯ ಹಿಂದಿ ಹಾಡುಗಳೂ ಮತ್ತು ಜಿ.ಆರ್.ವಿಶ್ವನಾಥನ ಆಟವೂ ಏಕಕಾಲಕ್ಕೆ ನೆನಪಾಗುತ್ತದೆ. ಒಂದು ವಿಷಾದ, ಇನ್ನೊಂದು ಆಕರ್ಷಣೆ.
ಗುಡ್ ಬೈ ಆಂಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books