Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನಡುರಾತ್ರಿ ಬಂದು ಕದ ತಟ್ಟಿದವರು ಹಗಲಲ್ಲಿ ಬೆನ್ನಿರಿದರು!

ನೀವು ಉಪಕಾರ ಮಾಡಿ, ತಲ್ಲಣದಲ್ಲಿದ್ದವನಿಗೆ ಮೈದಡವಿ ಬೆನ್ತಟ್ಟಿ ಹೋಗಿ. ಆತ ಮೆಲ್ಲಗೆ ಬಂದು ಹಿಂದಿನಿಂದ ಒಂದು ಚೂರಿ ಹೆಟ್ಟಿ ಹೋಗುತ್ತಾನೆ!
ಮನುಷ್ಯತ್ವದ ಮೇಲೆ ನಿಮಗೆ ಆಗ ಹೋಗುತ್ತದೆ ವಿಶ್ವಾಸ. ತುಂಬ ದಿನ ಅಲ್ಲದಿದ್ದರೂ atleast ಕೆಲವು ದಿನಗಳ ತನಕ ಯಾರಿಗೂ ಉಪಕಾರ ಮಾಡಲೇ ಬಾರದೆಂದು ನಿಮ್ಮ ಮನಸ್ಸು ನಿರ್ಧರಿಸುತ್ತದೆ. ಆದರೆ ಮಾರನೆ ದಿನವೇ ಯಾರೋ ಬಂದು ಕದ ತಟ್ಟುತ್ತಾರೆ, ನಿಮಗಿಂತ ನಿರ್ಭಾಗ್ಯರು. ನಿಮಗಿಂತ ತೊಂದರೆಯಲ್ಲಿರುವವರು ನಿಮಗಿಂತ ಅಸಹಾಯಕರು. ನೀವು ಬಾಗಿಲು ತೆರೆಯದೆ ಇರಲಾರಿರಿ. ಹೊಸ್ತಿಲಾಚೆಗೆ ನಿಂತ ವ್ಯಕ್ತಿ ಬೆನ್ನ ಹಿಂದೆ ಚೂರಿ ಅವಿತಿಟ್ಟುಕೊಂಡಿದ್ದಾನೆಂಬುದು ಗೊತ್ತಿದ್ದೂ ನೀವು ಅವನ ನೆರವಿಗೆ ಹೊರಡುತ್ತೀರಿ.


Am i right? ಅವತ್ತು ರಾತ್ರಿ ಎರಡು ಗಂಟೆ ಹೊತ್ತಿನಲ್ಲಿ ನನ್ನ ಮನೆಯ ಕದ ತಟ್ಟಿದ ಇಬ್ಬರು ಹುಡುಗರ ವಿಷಯದಲ್ಲಿ ನಾನು ಮಾಡಿದ್ದು ಅದನ್ನೇ. ಸರಿಯಾಗಿ ಅವರ ಹೆಸರುಗಳನ್ನೂ ಕೇಳಲಿಲ್ಲ. ಹೆಚ್ಚೆಂದರೆ, ಅವರಿಬ್ಬರ ಪೈಕಿ ಒಬ್ಬನ ಹೆಸರು ಪರಶುರಾಮ ಅಂತ ಇರಬಹುದು. ಅಷ್ಟು ಮಾತ್ರ ನೆನಪಿದೆ. ಆದರೆ ಅವರ ಮುಖಗಳನ್ನು ಮಾತ್ರ ನಾನೆಂದಿಗೂ ಮರೆಯಲಾರೆ. ಏಕೆಂದರೆ, ಅವರು ಬಂದ ಸಂದರ್ಭ ಅಂಥದಿತ್ತು. “ನಮ್ ಫ್ರೆಂಡ್‌ನ ಪೊಲೀಸ್ರು ಕೊಂದಾಕಿ ಬಿಟ್ಟಾರೆ... ನೀವು ಇವಾಗ್ಲೇ ಬರಬೇಕು ಸಾರ್" ಅಂದ ಪರಶುರಾಮ. ನಿಜಕ್ಕೂ ದಷ್ಟಪುಷ್ಟವಾಗಿದ್ದ. ಕಪ್ಪಗಿದ್ದರೂ handsome ಆಗಿದ್ದ. ಆದರೆ ಆ ರಾತ್ರಿಯ ಕತ್ತಲಲ್ಲಿ ಅವನು ಕಂಪಿಸುತ್ತಿದ್ದ. confused ಆಗಿದ್ದ. “ಯಾವ ಪೊಲೀಸರು?" ಕೇಳಿದೆ.

“ರೈಲ್ವೆ ಪೊಲೀಸರು ಸಾರ್. ದಯವಿಟ್ಟು ಬನ್ನಿ ಸಾರ್. ತುಂಬ ಕ್ಲೋಸ್‌ಫ್ರೆಂಡು ಸಾರ್...." ಅಂದ. ನಾನು ಮತ್ಯಾವುದೇ ಕ್ಲಾರಿಫಿಕೇಶನ್ನೂ ಕೇಳಲಿಲ್ಲ. ಅಂಗಿ ಹಾಕಿಕೊಂಡು ಹೊರಬಿದ್ದೆ. ಲಲಿತೆ ಆತಂಕದಿಂದಲೇ ಬಾಗಿಲೆಳೆದುಕೊಂಡಳು. ಆಗ ಈ ಸುಝಕಿ ಇರಲಿಲ್ಲ. ಕೆಟ್ಟದೊಂದು ಮೊಪೆಡ್ ಇತ್ತು. ಆ ಸರಿರಾತ್ರಿಯಲ್ಲಿ ಮೊಪೆಡ್ ನೂಕಿಕೊಂಡು ಪರಶುರಾಮ ಮತ್ತು ಅವನ ಮಿತ್ರನೊಂದಿಗೆ ಹೊರಟೆ. ಅವರ ಮಿತ್ರ ನಿಜಕ್ಕೂ ಸತ್ತು ಹೋಗಿದ್ದ. ಸುಮ್ಮನೆ ಅಲ್ಲ; ಬಳ್ಳಾರಿಯ ಬಸ್‌ನಿಲ್ದಾಣದ ಹಿಂದಿರುವ ವಿಶಾಲವಾದ, ಪರಮಕೊಳಕಾದ, ಪಾಚಿಗಟ್ಟಿದ ನೀರಿನ ಹಸಿರು ಬಣ್ಣದ ಕುಂಟೆಯೊಂದರಲ್ಲಿ ಬಿದ್ದು ಸತ್ತು ಹೋಗಿದ್ದ ಅಥವಾ ಸತ್ತ ಮೇಲೆ ಆ ಕುಂಟೆಯೊಳಕ್ಕೆ ಎಸೆಯಲ್ಪಟ್ಟಿದ್ದ.

ಅದು ಮಾತ್ರ ನನಗೆ ನಿಚ್ಚಳವಾಗಿ, ಒಂದೊಂದು ಡೀಟೈಲೂ ಮಿಸ್ಸಾಗದಂತೆ ನೆನಪಿನಲ್ಲಿದೆ. ನನಗಿರುವ ಕೆಲವೇ ಹೆಮ್ಮೆಗಳಲ್ಲಿ ಈ ‘ನೆನಪಿ’ನ factor ಕೂಡ ಒಂದು. ಕೆಲವು ಸಂಗತಿಗಳು ನನಗೆ ಎಷ್ಟು ಅಕ್ಯುರೇಟ್ ಆಗಿ ನೆನಪಿರುತ್ತವೆಂದರೆ, ಸಾವಿರಾರು ವರ್ಷಗಳ ನಂತರವೂ ನಾನು ಆ ವಿವರಗಳನ್ನು ಕೇಳಿದವರೆದುರು ಕುಳಿತು reproduce ಮಾಡಬಲ್ಲೆ. ಬಹುಶಃ ಬರಹಗಾರನಿಗೆ, ಇತಿಹಾಸಕಾರನಿಗೆ, ಮುಖ್ಯವಾಗಿ ಒಬ್ಬ ಪತ್ರಕರ್ತನಿಗೆ ಇರಬೇಕಾದ qualityಗಳಲ್ಲಿ memoryಯೂ ಒಂದು.
ಅವತ್ತು ಸತ್ತು ಹೋದವನ ಹೆಸರು ಯಲವತ್ತಿ ಮಠ ಅಂತ. ಬಳ್ಳಾರಿಯಲ್ಲಿ ಅವನ ತಂದೆ ಜೈಲಿನಲ್ಲಿ ವಾರ್ಡನ್ ಆಗಿದ್ದರು. ಲಿಂಗಾಯಿತರ ಮನೆತನ. ಐಟಿಐ ಓದುತ್ತಿದ್ದವನು ಅದ್ಯಾವ ಕಾರಣಕ್ಕೋ ಅರ್ಧಕ್ಕೆ ಬಿಟ್ಟಿದ್ದ. ಅಂಥ ಹುಡುಗನ ಶವ ಬಸ್‌ಸ್ಟ್ಯಾಂಡ್ ಹಿಂದಿನ ಕುಂಟೆಯಲ್ಲಿ ಬಿದ್ದಿತ್ತು. ಅಲ್ಲ, ಪೊಲೀಸರಿಂದ ಹಾಕಲ್ಪಟ್ಟಿತ್ತು. ಬಳ್ಳಾರಿಯಲ್ಲಿ ಆ ಅವಧಿಯಲ್ಲಿ (೧೯೮೩-೮೬) ನನಗೆ ಪರಿಚಯವಿಲ್ಲದ ಪೊಲೀಸರಂತೂ ಯಾರೂ ಇರಲಿಲ್ಲ. ೧೯೮೩ರಲ್ಲಿ ಅದೇ ಪೊಲೀಸರ ವಿರುದ್ದ ಬೀದಿಬೀದಿಗಳಲ್ಲಿ ನಿಂತು ಭೀಕರವಾದ ಹೋರಾಟಗಳನ್ನು ಮಾಡಿದ್ದೆ. ಬಳ್ಳಾರಿಯಲ್ಲಿ ನಾನು ನಡೆಸುತ್ತಿದ್ದ ‘ಬಳ್ಳಾರಿ ಪತ್ರಿಕೆ’ ಎಡೆಬಿಡದೆ ಪೊಲೀಸರ ವಿರುದ್ಧ ದನಿಯೆತ್ತುತ್ತಿತ್ತು. ಹೀಗಾಗಿಯೇ ಪೊಲೀಸರಿಂದ ಅನ್ಯಾಯಗಳಾದಾಗ ಜನ ನನ್ನಲ್ಲಿಗೆ ಬರುತ್ತಿದ್ದರು. ಪರಶುರಾಮನೂ ಅದೇ ಕಾರಣಕ್ಕಾಗಿ ಬಂದಿದ್ದ.

ಬಸ್‌ಸ್ಟ್ಯಾಂಡ್ ಕುಂಟೆಯ ದಡದ ಮೇಲೆ ನಿಂತು ನಾನು ಸೀಗರೇಟು ಹಚ್ಚಿದಾಗ ಈ ಹುಡುಗ ಪರಶುರಾಮ ದೂರ ನಿಂತುಕೊಂಡ. ಹೊಗೆ ಇರಿಟೇಟ್ ಮಾಡುತ್ತಿದೆಯೆಂದುಕೊಂಡೆ. ಆಮೇಲೆ ಗೊತ್ತಾಯಿತು. ಆತ ಕತ್ತಲಲ್ಲಿ ನಿಂತು ಬಿಕ್ಕುತ್ತಿದ್ದ. ಪೊಲೀಸರ ಕ್ರೌರ್ಯಕ್ಕೆ ಗೆಳೆಯನೊಬ್ಬ ಬಲಿಯಾಗುತ್ತಾನೆಂದರೆ ಯಾರಿಗೆ ದುಃಖವಾಗುವುದಿಲ್ಲ? ಪಕ್ಕದಲ್ಲಿ ನಿಂತು ಬೆನ್ತಡವಿ ಸಮಾಧಾನ ಹೇಳಿದೆ. ಪೆಟ್ರೋಮ್ಯಾಕ್ಸಿನ ಬೆಳಕಿನಲ್ಲಿ ಯಲವತ್ತಿಮಠನ ಶವವನ್ನು ಬಳ್ಳಾರಿಯ ರೈಲ್ವೆ ಪೊಲೀಸರು ನೀರಿನಿಂದ ಹೊರಕ್ಕೆಳೆದು ಹಾಕುತ್ತಿದ್ದರೆ, ಈ ಹುಡುಗ ಪರಶುರಾಮ ನನ್ನ ಹೆಗಲು ತಬ್ಬಿ ಮಗುವಿನಂತೆ ಅಳುತ್ತಿದ್ದ. ಅದೆಲ್ಲ ಇವತ್ತಿಗೂ ನನಗೆ ಗೆರೆ ಕೊರೆದಂತೆ ಅಂಗೈ ಮೇಲೆ ಸೂಜಿಯಲ್ಲಿ ಬರೆದಂತೆ ನೆನಪಿದೆ.

“ನೀವು ಮನುಷ್ಯರೇನ್ರೀ? ಅಂಥ ಹುಡುಗನನ್ನು ಕೊಂದ್ಹಾಕಿ ಬಿಟ್ಟಿದೀರಿ?" ಆಗಷ್ಟೆ ಅಲ್ಲಿಗೆ ಬಂದ ರೈಲ್ವೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಷರೀಫರ ಮೇಲೆ ನಾನು ರೇಗತೊಡಗಿದೆ. ಆತ ಹೆಚ್ಚು ಮಾತಾಡಲಿಲ್ಲ. ಒಂದು ಹಂತದ ಮಟ್ಟಿಗೆ ಕರಪ್ಟ್ ಆಗಿದ್ದ ಷರೀಫ್, ಕೆಲಸದ ವಿಷಯದಲ್ಲಿ ನಿಪುಣ. ಯಾರನ್ನೂ ಎರ್ರಾಬಿರ್ರಿ ಬಡಿದು ಫಜೀತಿ ಮಾಡಿಕೊಳ್ಳುವವನಲ್ಲ. ಇದೊಂದು ಪ್ರಕರಣದಲ್ಲಿ ಅದ್ಹೇಗೆ ಯಾಮಾರಿದನೋ ಅನ್ನಿಸಿತು. ಆತನನ್ನು ನಾನು ಬಯ್ಯುತ್ತಲೇ ಇದ್ದೆ. ಸುಮಾರಾಗೆ ಬೆಳಕು ಹರಿಯುವ ಹೊತ್ತಿಗೆ ಯಲವತ್ತಿ ಮಠನ ಶವ ನೀರಿನಿಂದೀಚೆಗೆ ಬಂದಿತ್ತು. ನಿಜಕ್ಕೂ ಕಣ್ತುಂಬ ನೋಡುವ ಹಾಗಿದ್ದ ಹುಡುಗ. ಕಟ್ಟು ಮಸ್ತಾಗಿದ್ದ. ಸರಳ ಪೆಟ್ಟಿಗೆ ಸಾಯುವ ಜೀವವಲ್ಲ. ಈ ಪಾಪಿ ಪೊಲೀಸರು ಏನೇನು ಹಿಂಸೆ ಮಾಡಿದರೋ ಅಂದುಕೊಂಡೆ. ಆದರೆ ಹುಡುಗನ ಹೆಣದ ಮೇಲೆ ಹಿಂಸಾಚಾರದ ಗುರುತುಗಳೇನೂ ಇರಲಿಲ್ಲ. ಯಾವ ಆಯಕ್ಕೆ ಏಟು ಬಿದ್ದಿತ್ತೋ? ಅದೇನಿದ್ದರೂ ಹೆಣದ ಮನೆಯಲ್ಲಿ ಪತ್ತ್ತೆಯಾಗುತ್ತದೆ.

ಆ ದಿನಗಳಲ್ಲಿ ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಫೊರೆನ್ಸಿಕ ವಿಭಾಗದಲ್ಲಿದ್ದವರು ಡಾ.ರವಿಚಂದರ್. ನಾನು ಈ ತನಕ ನೋಡಿರುವ ಫೊರೆನ್ಸಿಕ್ ವೈದ್ಯರ ಪೈಕಿಯೇ ನಿಷ್ಣಾತರು, ಬುದ್ದಿವಂತರು. ಅವರ ಚುರುಕು ಕಣ್ಣು ಮತ್ತು ಅನುಭವಗಳನ್ನು ತಪ್ಪಿಸಿಕೊಂಡು ಒಂದು ಕೊಲೆ ಬಚಾವಾದೀತು ಅಂತ ನನಗನ್ನಿಸಲಿಲ್ಲ. ಮೇಲಾಗಿ ಶವ ಪರೀಕ್ಷೆಯ ಒಟ್ಟು ಪ್ರಕ್ರಿಯೆಯಲ್ಲಿ ನಾನೇ ಖುದ್ದಾಗಿ ಭಾಗಿಯಾಗಲಿದ್ದೆ! “ಏನೇ ಆಗಿರಲಿ. ಸತ್ಯ ಈಚೆಗೆ ಬರುವುದಂತೂ ಗ್ಯಾರಂಟಿ. ನಿನ್ನ ಸತ್ತ ಗೆಳೆಯನನ್ನು ಬದುಕಿಸಿಕೊಡುವ ಚೈತನ್ಯ ನನಗಿಲ್ಲ. ಆದರೆ ಸಾವಿನ ಕಾರಣವನ್ನಂತೂ ಖಂಡಿತ ಬಯಲಿಗೆಳೆಯುತ್ತೇನೆ" ಅಂತ ಪರಶುರಾಮನಿಗೆ ಭರವಸೆ ಕೊಟ್ಟೆ. ಅದೇ ಮೊಪೆಡ್ ನೂಕಿಕೊಂಡು ಬಸ್‌ಸ್ಟ್ಯಾಂಡ್ ಹಿಂದಿನ ಕುಂಟೆಯಿಂದ ಹೆಣದ ಹಿಂದೆಯೇ ಮೆಡಿಕಲ್ ಕಾಲೇಜಿನ ತನಕ ಹೋದೆ. ಬದುಕಿದ್ದಾಗ ಯಲವತ್ತಿ ಮಠನನ್ನು ನಾನು ನೋಡಿರಲಿಲ್ಲ. ಅಂಥ ಹೆಸರಿನದೊಂದು ಜೀವವಿರುವುದು ನನಗೆ ಗೊತ್ತಿರಲಿಲ್ಲ. ಆದರೆ ಕುಂಟೆಯಿಂದ ಈಚೆಗೆ ತಂದು, ಗಾಡಿಯಲ್ಲಿ ಹೇರಿಕೊಂಡು, ಅದರ ಹಿಂದೆ ನಾನು ಹೊರಟು ಮೆಡಿಕಲ್ ಕಾಲೇಜು ತಲುಪುವ ಪ್ರಕ್ರಿಯೆ ಇತ್ತಲ್ಲ? ಅದು ಮುಗಿಯುವ ಹೊತ್ತಿಗೆ ಅದೇಕೋ ಆ ಹುಡುಗನ ಮೇಲೆ ಒಂದು ತೆರನಾದ attachment ಬಂದುಬಿಟ್ಟಿತ್ತು.

ನಾನೇ ಹೋಗಿ ಡಾ.ರವಿಚಂದರ್‌ರನ್ನು ಎಬ್ಬಿಸಿಕೊಂಡು ಬಂದೆ. ಪೊಲೀಸರು ಇನ್‌ಕ್ವೆಸ್ಟು ಹಾಳು ಮೂಳು ಅಂತ ಮುಗಿಸಿ ಹೆಣವನ್ನು ಸಿಮೆಂಟಿನ ಕಟ್ಟೆಯ ಮೇಲೆ ಮಲಗಿಸಿ ಅದರ ಎದೆಗೆ ಡಾ.ರವಿಚಂದರ್ ಮೊದಲ ಬಾರಿಗೆ ಚೂರಿಯ ಮೊನೆ ತಾಕಿಸುವ ಹೊತ್ತಿಗೆ-ಗಂಟೆ ಹನ್ನೊಂದಾಗಿತ್ತು. ಯಾರು ಕದಲಿದರೂ ನಾನು ಕದಲುವಂತಿರಲಿಲ್ಲ. ಬಳ್ಳಾರಿಯಲ್ಲಿ ಇಂತಹ disputed (ವಿವಾದಾತ್ಮಕ) ಸಾವುಗಳಾದಾಗ ನಾನು ಪಂಚಾಯತಿದಾರನಂತೆ, ಜನರ ಪ್ರತಿನಿಧಿಯಂತೆ ಹೋಗಿ ಹೆಣದ ಮನೆಯಲ್ಲಿ ನಿಲ್ಲ ಬೇಕಾಗುತ್ತಿತ್ತು. ಅವತ್ತು ಬಳ್ಳಾರಿಗರ ಕಣ್ಣಲ್ಲಿ ನಾನೊಬ್ಬ ಪತ್ರಕರ್ತ, ಕಾಲೇಜು ಉಪನ್ಯಾಸಕ, ಕ್ರಾಂತಿಕಾರಿ ಸಂಘಟನೆಯೊಂದರ ಕಾರ್ಯಕರ್ತ. ಎಲ್ಲಕ್ಕೂ ಮಿಗಿಲಾಗಿ, ಸತ್ತ ಯಲವತ್ತಿ ಮಠನ ಜೀವದ ಗೆಳೆಯ ಪರಶುರಾಮನ ನಂಬಿಕೆ ಮತ್ತು ವಿಶ್ವಾಸಗಳ ಧರ್ಮದರ್ಶಿ. ಹೆಣದ ಮುಂದೆ ಕಲ್ಲಿನಂತೆ ನಿಂತೇ ಇದ್ದೆ. ಮಿತ್ರರಾದ ಡಾ.ರವಿಚಂದರ್ ಎದೆಗೆ ಚೂರಿಯಿಟ್ಟರು. Thorax ಬಗೆದರು. ಹಣೆಗೆ ಮೊನಚಾದ ಚಾಣವಿಟ್ಟು ಹೆಣದ ತಲೆ ಸಿಗಿದರು. ಒಂದೊಂದಾಗಿ ದೇಹದ vital ಭಾಗಗಳನ್ನು ಪರೀಕ್ಷಿಸತೊಡಗಿದರು. ನನಗೆ ಅದನ್ನೆಲ್ಲ ವಿವರಿಸುತ್ತಲೂ ಹೋದರು. ಅದೆಲ್ಲ ವಿವರಣೆಯನ್ನು ಮೀರಿ ನನ್ನ ಗಮನ ಸೆಳೆದದ್ದು, ಸತ್ತ ಯಲವತ್ತಿ ಮಠನ ಶಿಶ್ನ!

ಅದು ದೊಡ್ಡದೊಂದು ವೀರ್ಯದ ಬಿಂದುವನ್ನು ತುದಿಯಲ್ಲಿ ಧರಿಸಿಕೊಂಡಿತ್ತು. ಮನುಷ್ಯನ ಪ್ರಾಣ ದೇಹದಿಂದ seperate ಆಗುವಾಗ ಹೀಗಾಗುತ್ತದಂತೆ! ದೇಹದಿಂದ ವೀರ್ಯವೂ ಸೇರಿದಂತೆ ಎಲ್ಲ ತರಹದ ಶೇಖರಣೆಗಳೂ release ಆಗುತ್ತವಂತೆ. ಡಾ.ರವಿಚಂದರ್ ವಿವರಿಸುತ್ತಿದ್ದರು. ನನ್ನನ್ನು ಕಾಡುತ್ತಿದ್ದುದು ಅದಲ್ಲ....
ಮತ್ತೊಂದು ಜೀವವನ್ನು ಸೃಷ್ಟಿಸಬಲ್ಲ ತಾಕತ್ತಿರುವ ಆ ಏಕೈಕ ವಸ್ತು, ಈ ಮೂಲ ಜೀವ ಕಣ್ಮುಚ್ಚಿದ ನಂತರ release ಆಗುವ ಮೋದಕ್ಕೆ ಏನರ್ಥವಿರಬಹುದು? ಅಂತೆಲ್ಲ ಯೋಚಿಸುತ್ತ ನಿಂತಿದ್ದೆ. ತುಂಬ ಹೊತ್ತಿನ ನಂತರ ಡಾ.ರವಿಚಂದರ್ ಅಡ್ಡಡ್ಡ ತಲೆಯಾಡಿಸಿ ಹೇಳಿದರು “ಹುಡುಗ ಉಸಿರುಗಟ್ಟಿ ಸತ್ತಿದ್ದಾನೆ. ಡೆತ್ ಡ್ಯೂ ಟು ಆಸ್ಫಿಕ್ಸಿಯಾ..."
ಕೊಂದದ್ದು ಪೊಲೀಸರಲ್ಲ ಅನ್ನುತ್ತಿತ್ತು ಪೋಸ್ಟ್ ಮಾರ್ಟಂ. ಡಾಕ್ಟರಿಗೆ ಸುಳ್ಳು ಹೇಳುವ ಅವಶ್ಯಕತೆಯಿರಲಿಲ್ಲ. ಅವರಿಗೂ ರೈಲ್ವೆ ಪೊಲೀಸರಿಗೂ ಅನೈತಿಕ ಹೊಂದಾಣಿಕೆಯಾಗುವ ಸಾಧ್ಯತೆಗಳೇ ಇರಲಿಲ್ಲ. ಹುಡುಗನ ಮೈಮೇಲಿ ಮರಣಾಂತಿಕ ಗಾಯಗಳೂ ಇರಲಿಲ್ಲ. ಹಾಗಾದರೆ ಯಾಕೆ ಮತ್ತು ಹೇಗೆ ಸತ್ತ?

Once again, ರೈಲ್ವೆ ಪೊಲೀಸರೇ ಉತ್ತರ ಕೊಟ್ಟಿದ್ದರು. ನಡುರಾತ್ರಿ ಬಂದ ಹುಬ್ಬಳ್ಳಿ ರೈಲಿನಿಂದ ಈ ಹುಡುಗ ಇಳಿದಿದ್ದಾನೆ. ಕೈಯಲ್ಲಿ ಸೂಟ್‌ಕೇಸಿದೆ. ಆದರೆ ಜೇಬಿನಲ್ಲಿ ಟಿಕೆಟ್ ಇಲ್ಲ. ದುಡ್ಡು ಕಳೆದು ಕೊಂಡಿದ್ದನೋ, ಖರ್ಚೇ ಮಾಡಿದ್ದನೋ ಅಂತೂ ಟಿಕೆಟ್ಟಿಲ್ಲದೆ ಹುಬ್ಬಳಿಯಿಂದ ಬಂದುಬಿಟ್ಟಿದ್ದಾನೆ. ಅವತ್ತು ರಾತ್ರಿ ಗಸ್ತಿನಲ್ಲಿದ್ದ ರೈಲ್ವೆ ಪೊಲೀಸರಿಗೆ ಸೂಟ್‌ಕೇಸ್ ಕಳ್ಳನೊಬ್ಬನನ್ನು ಹಿಡಿಯುವ ಉಮ್ಮೇದಿ. ಯಲವತ್ತಿ ಮಠನ ಕೈಯಲ್ಲಿ ಸೂಟ್ ಕೇಸಿದೆ. ಜೇಬಲ್ಲಿ ಟಿಕೆಟ್ ಇಲ್ಲ ! ಅನುಮಾನ ಬರಲು ಪೊಲೀಸರಿಗೆ ಅಷ್ಟು ಸಾಕಿತ್ತು. ನೆಟ್ಟಗೆ ಕರೆತಂದು ಠಾಣೆಯಲ್ಲಿ ಕೂಡಿಸಿದ್ದಾರೆ. ಲಾಕಪ್ಪಿಗೆ ಹಾಕಿದ್ದಿದ್ದರೆ ಬದುಕುತ್ತಿದ್ದನೇನೋ? ಹೊರಗೆ ಬೆಂಚಿನ ಮೇಲೆ ಕೂಡಿಸಿ ವಿಚಾರಿಸಿದ್ದಾರೆ. ಸಲೀಸಾಗಿ ತಾನು ಇಂಥವರ ಮಗ, ತನ್ನ ತಂದೆ ಜೈಲಿನ ವಾರ್ಡನ್ ಅಂತ ವಿವರಿಸಿಬಿಟ್ಟಿದ್ದರೆ ಆಗುತ್ತಿತ್ತು. ಅದೇಕೆ ಹಿಂಜರಿದನೋ, ಏನು ಯೋಚಿಸಿದನೋ ಗೊತ್ತಿಲ್ಲ, ಧಡಕ್ಕನೆ ಎದ್ದು ಠಾಣೆಯ ಮೇನ್ ಸ್ವಿಚ್ ಆಫ್‌ಮಾಡಿ ಚಿಗರೆಯಂತೆ ಹೊರಕ್ಕೋಡಿದ್ದಾನೆ! ಪೊಲೀಸರಿಗೆ ಇವನು ಸೂಟ್‌ಕೇಸ್ ಕಳ್ಳನೇ ಅಂತ ಖಚಿತವಾಗಲಿಕ್ಕೆ ಮತ್ತೇನು ಬೇಕಿತ್ತು?
ಅವರು ಯಲವತ್ತಿ ಮಠನ ಬೆನ್ನುಬಿದ್ದು chase ಮಾಡಿದ್ದಾರೆ. ರೈಲು ಹಳಿಯ ಮೇಲೆ ಸೆಂಟ್ರಲ ಜೈಲಿನ ದಿಕ್ಕಿಗೆ ಶರವೇಗದಲ್ಲಿ ಓಡಿದ ಹುಡುಗ ಆ ಕತ್ತಲಲ್ಲಿ ಎಲ್ಲೋ ಕಾಲು ಜಾರಿದ್ದಾನೆ.
ಫಿನಿಶ್.

ಹಳಿಯ ಬಲಗಡೆಗಿದ್ದ ಬಸ್ಸ್‌ಸ್ಟ್ಯಾಂಡ್ ಹಿಂದಿನ ಕುಂಟೆಯೊಳಕ್ಕೆ ನೇರವಾಗಿ ಜಾರಿದ್ದಾನೆ. ಬದುಕಿಗಾಗಿ ಅವನು ಮಾಡಿರಬಹುದಾದ strugle ಅಂದರೆ- ಎರಡು ಬೊಗಸೆ ನೀರು ಕುಡಿದದ್ದು, ಕೈಗಳಲ್ಲಿ ಪಾಚಿಯ ಬಳ್ಳಿಗಳನ್ನು ಪರಚಿದ್ದು. ಅಷ್ಟರಲ್ಲಿ ಚೋಕ್ ಆಗಿ ಪ್ರಾಣ ಹೋಗಿದೆ. ಅನ್ಯಾಯವಾಗಿ ಒಬ್ಬ ಬುದ್ಧಿಹೀನ ಹುಡುಗ ತನ್ನ ತಾರುಣ್ಯ ಸರಿಯಾಗಿ ಆರಂಭವಾಗುವ ಮೊದಲೇ ಸತ್ತು ಹೋಗಿದ್ದ! ಪೊಲೀಸರ ವಿವರಣೆ ಹಾಗೂ ಡಾಕ್ಟರರ findingಗಳೆರಡೂ ಹೊಂದಾಣಿಕೆಯಾಗಿದ್ದವು. ಹಾಗಂತ ಶವದ ಮನೆಯಿಂದೀಚೆಗೆ ಬಂದು ಯಲವತ್ತಿ ಮಠನ ತಂದೆಗೆ, ಗೆಳೆಯರಿಗೆ, ಬಂಧುಗಳಿಗೆ, ಮುಖ್ಯವಾಗಿ ಪರಶುರಾಮನಿಗೆ ತಿಳಿಸಿದೆ. ಅಷ್ಟಾದ ಮೇಲೂ, ತಮ್ಮ ಸುಪರ್ದಿಯಲ್ಲಿದ್ದ ಬಂಧಿತನೊಬ್ಬನನ್ನು ಸಾಯಲು ಬಿಟ್ಟ ಪೊಲೀಸರ ನಿರ್ಲಕ್ಷ್ಯದ ವಿರುದ್ದ ಬರೆದೆ. ಹೋರಾಡಿದೆ. ನೇರವಾಗಿ ಅದನ್ನೊಂದು ‘ಲಾಕಪ್ ಕಿಲ್ಲಿಂಗ್’ ಅನ್ನುವುದಕ್ಕೆ ಅವಕಾಶವೂ ಇರಲಿಲ್ಲ. ಹಾಗನ್ನುವುದು ಸರಿಯೂ ಆಗಿರಲಿಲ್ಲ.

ಯಲವತ್ತಿ ಮಠನ ಅಧ್ಯಾಯ ಅಲ್ಲಿಗೆ ಮುಗಿಯಿತು. ಮುಂದೆ ಅಂಥ ಹತ್ತಾರು ಹೆಣಗಳ ಸಿಗಿತಕ್ಕೆ ನಾನು ಸಾಕ್ಷಿಯಾಗಬೇಕಾಗಿ ಬಂತಾದ್ದರಿಂದ ನಿಧಾನವಾಗಿ ನಾನು ಪರಶುರಾಮನನ್ನು ಮರೆತೇ ಬಿಟ್ಟೆ. ಅಷ್ಟರ‍್ಲಲಿ ೧೯೮೫ನೇ ಇಸವಿ ಮುಗಿಯುತ್ತಾ ಬಂತು. ಅದು ಮುಗಿದ ಮರುದಿನದಿಂದಲೇ ನನಗೆ ಬರೋಬ್ಬರಿ ಹತ್ತು ವರ್ಷಗಳ ವನವಾಸ, ಸರ್ವನಾಶ ಎಲ್ಲವೂ ಕಾದಿವೆಯೆಂಬ ಸಂಗತಿ ನನಗೆ ಗೊತ್ತಿರಲಿಲ್ಲ. ಯಾವುದೇ ಪೂರ್ವ ಸೂಚನೆಯಿಲ್ಲದೆ ನಾನು ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜಿನ ಬಹದೊಡ್ಡ ಹಗರಣವೊಂದಕ್ಕೆ ತುತ್ತಾಗಿಬಿಟ್ಟೆ. ನನ್ನ ವಿರುದ್ದ ಬಳ್ಳಾರಿಯ ರಾಜಕಾರಣಿಗಳು, ಮತೀಯ ವಾದಿಗಳು, ಮತೀಯ ಸಂಘಟನೆಗಳು, ನನ್ನ ಪತ್ರಿಕೆಯ ಪ್ರಹಾರಕ್ಕೆ ಒಳಗಾದವರು ಎಲ್ಲರೂ ಎಷ್ಟು ಗರಿಗೆದರಿ ನಿಂತುಬಿಟ್ಟರೆಂದರೆ, ಅಂಥ ನೂರಾರು scandalಗಳನ್ನು ಬಯಲಿಗೆಳೆದು ಪ್ರತಿಭಟನೆ ಮಾಡುತ್ತಿದ್ದ ನಾನೇ ಬಹುದೊಡ್ಡ ಹಗರಣಕ್ಕೆ ಕೇಂದ್ರ ಬಿಂದುವಾಗಿಬಿಟ್ಟೆ. ಮತೀಯ ವ್ಯಕ್ತಿಗಳ ಮತ್ತು ಸಂಘಟನೆಗಳ ಬಿರುಸು ಎಷ್ಟು ಪ್ರಬಲವಾಗಿತ್ತೆಂದರೆ, ಆರೋಪಿಸಲಾದ ಹಗರಣದ ಸತ್ಯಾ ಸತ್ಯತೆಗಳನ್ನು ಪರೀಕ್ಷಿಸಲು ಕೂಡ ಹೋಗದೆ ಕಾಲೇಜಿನ ಆಡಳಿತ ಮಂಡಳಿ ನನ್ನನ್ನು ಕೆಲಸದಿಂದ ವಜಾ ಮಾಡಿತು.

ಸರಿಯಾಗಿ ನಾಳೆ ಬೆಳಿಗ್ಗೆ ನನ್ನ ವಜಾ ಅರ್ಜಿ ಆಡಳಿತ ಮಂಡಳಿಯ ಅಧ್ಯಕ್ಷ ಅಲ್ಲಂ ಕರಿಬಸಪ್ಪನವರ ಸಹಿಗೆ ತುತ್ತಾಗಲಿದೆ ಅಂದರೆ ಅವತ್ತು, ರಾತ್ರಿ ಗಾಂಧಿನಗರದಲ್ಲಿದ್ದ ನನ್ನ ಮಿತ್ರನೊಬ್ಬನ ಮನೆಯಲ್ಲಿ ನಾವು ಕೆಲವರು ಸಭೆ ಸೇರಿದ್ದೆವು. ಮತೀಯ ಶಕ್ತಿಗಳನ್ನು ಪ್ರತಿಭಟಿಸುವ ಸಾಧ್ಯತೆಗಳೇನಾದರೂ ಇವೆಯೋ ಎಂಬ ಬಗ್ಗೆ ಚರ್ಚಿಸುತ್ತಿದ್ದೆವು. ಆ ಹೊತ್ತಿಗೆ ಶತ್ರು ಪಾಳಯದಲ್ಲಿ ಎಲ್ಲ ನಿರ್ಣಯಗಳೂ ಆಗಿಬಿಟ್ಟಿದ್ದವು. ಸಾವಿರಾರು ವಿದ್ಯಾರ್ಥಿನಿಯರು ನನ್ನ ಪರವಾಗಿ ಪ್ರತಿಭಟಿಸಲಿದ್ದಾರೆ ಎಂದು ಮುನ್ಸೂಚನೆ ಸಿಕ್ಕಿದ್ದರಿಂದ ಕಾಲೇಜಿಗೆ ಹದಿನೈದು ದಿನ ರಜೆ ಘೋಷಿಸಲಾಗಿತ್ತು. ಅವಶ್ಯಕತೆ ಬಿದ್ದರೆ ಅದಕ್ಕೂ ರೆಡಿ ಎಂಬಂತೆ ಆಸುಪಾಸಿನ ಹಳ್ಳಿಗಳಿಂದ ಗೂಂಡಾಗಳನ್ನು ಕರೆಸಿದ್ದರು. ನನ್ನ ಚಾರಿತ್ರ್ಯವಧೆ ಮಾಡಲೇಬೇಕೆಂದು ನಿರ್ಧರಿಸಿದ್ದ ಮತೀಯ ಸಂಘಟನೆಯೊಂದು ನನ್ನ ವಿರುದ್ಧ ಗೋಡೆ ಬರಹ ಮಾಡಲು ಒಂದಿಷ್ಟು ಜನ ಹುಡುಗರನ್ನು ಕಳಿಸಿತ್ತು.

ಗಾಂಧಿನಗರದಿಂದ ಹೊರಟು ಅದೇ ಕಾಲೇಜಿನ ಮುಂದಿನಿಂದ ನನ್ನ ಮನೆಗೆ ಬರಬೇಕು. ನನ್ನ ಮೊಪೆಡ್ ಕಾಲೇಜು ಮುಂದಿನ ರಸ್ತೆಯಲ್ಲಿ ತಿರುಗಿ ಅದರ ಹೆಡ್‌ಲೈಟಿನ ಬೆಳಕು ಸರಿಯಾಗಿ ಕಾಲೇಜಿನೆದುರಿಗಿನ ಗೋಡೆಯ ಮೇಲೆ ಬೀಳುವುದಕ್ಕೂ, ಕೈಯಲ್ಲಿ ಕೆಮ್ಮಣ್ಣಿನ ಡಬ್ಬಿ ಮತ್ತು ಬ್ರಷ್ ಹಿಡಿದು ಪರಶುರಾಮ ತಿರುಗಿ ನನ್ನ ನೋಡುವುದಕ್ಕೂ ಸರಿಹೋಯಿತು.
ಅದೆ ಪರಶುರಾಮ!
ಯಾವ ಪರಶುರಾಮ, ಯಲವತ್ತಿ ಮಠನ ಸಾವಿನ ರಾತ್ರಿ ನನ್ನ ಹೆಗಲು ತಬ್ಬಿ ಬಿಕ್ಕಿದ್ದನೋ, ಅದೇ ಪರಶುರಾಮ ಕಾಲೇಜಿನೆದುರಿಗಿನ ಅಷ್ಟು ದೊಡ್ಡ ಗೋಡೆಯ ತುಂಬ, ಒಂದಿಂಚೂ ಜಾಗ ಬಿಡದೆ ನನ್ನ ವಿರುದ್ಧ ಘೋಷಣೆಗಳನ್ನು ಬರೆದಿದ್ದ!
“ಯಾಕಪ್ಪಾ?" ಮೊಪೆಡ್ ನಿಲ್ಲಿಸಿ ಕೇಳಿದೆ.
“ನಮ್ಮ ಸಂಘಟನೆ ಹೀಗೆ ಮಾಡಬೇಕೂಂತ ನಿರ್ಧಾರ ತಗೊಂಡಿದೆ!" ಅಂದ.
“ಇದು ಸರಿ ಅಂತ ನಿನಗೆ ನಂಬಿಕೆ ಇದೆಯಾ?" ಕೇಳಿದೆ.
“ಗೊತ್ತಿಲ್ಲ..." ತಡವರಿಸಿದ.
“ಹೋಗಲಿ, ಹೀಗೆ ಮಾಡ್ತಿದೀನಿ ಅಂತ ನಿನಗೆ ಸಮಾಧಾನವಾದರೂ ಇದೆಯಾ?" ಅಂದೆ.

ಅವನು ಉತ್ತರಿಸಲಿಲ್ಲ. ಮುಂದಕ್ಕೆ ಕೇಳಲು ನನ್ನಲ್ಲೂ ಪ್ರಶ್ನೆಗಳಿರಲಿಲ್ಲ. ಮನುಷ್ಯನ ಪ್ರೀತಿ, ವಿಶ್ವಾಸ, ಒಳ್ಳೆಯತನ, ಉಪಕಾರ, ಸ್ಮರಣೆ-ಇತ್ಯಾದಿಗಳನ್ನು ದೇವರಿಗಿಂತ ಹೆಚ್ಚಾಗಿ ನಂಬಿಕೊಂಡವನಿಗೆ ಇಂತಹ ವಿನಾಕಾರಣದ ಬೆನ್ನಿರಿತಗಳಾದಾಗ ಅವನಲ್ಲಿ ಪ್ರಶ್ನೆಗಳಿರುವುದಿಲ್ಲ. ಕಣ್ಣಲ್ಲಿ ನೀರಿತ್ತು. ರಾತ್ರಿಯಿಡೀ ನಾನು ಆಕಾಶ ನೋಡುತ್ತಾ ಮಲಗಿಬಿಟ್ಟಿದ್ದೆ.
ಆದಾದ ಕೆಲವು ದಿನಗಳ ತನಕ ಯಾರಿಗೂ ಉಪಕಾರ ಮಾಡಬಾರದು; ನಡುರಾತ್ರಿ ಕರೆದರೆ ಹೋಗಬಾರದು; ಯಾರನ್ನೂ ನಂಬಬಾರದು; ಈ ಜಗತ್ತಿನಲ್ಲಿ ಪ್ರೀತಿ-ವಿಶ್ವಾಸಕ್ಕೆ ಬೆಲೆಯೇ ಇಲ್ಲ... ಮುಂತಾದ ನಿರ್ಣಯಗಳನ್ನು ಕೈಗೊಳ್ಳುತ್ತ ಇದ್ದುಬಿಟ್ಟೆ. ಅದೊಂದು ದಿನ ನನ್ನ ಮನೆಯ ಬಾಗಿಲು ತಟ್ಟಿದಾತ,
“ಸಾರ್, ಬಳ್ಳಾರಿ ಗುಡ್ಡದ ಮೇಲೆ ನಮ್ ಫ್ರೆಂಡ್‌ದು ಮರ್ಡರಾಗೈತಿ. ಒಳ್ಳೆ sportsman ಸಾರ್. ಅನ್ಯಾಯವಾಗಿ ಕೊಂದು ಬಿಟ್ಟಿದ್ದಾರೆ. ನೀವು ಎದುರಿಗೆ ನಿಂತಗಂಡು ಪೋಸ್ಟ್‌ಮಾರ್ಟಂ ಮಾಡಿಸಬೇಕು!" ಅನ್ನುತ್ತಿದ್ದ.
ನಾನು ಅಂಗಿಯೆಳೆದುಕೊಂಡು ಆಚೆಗೆ ಹೊರಡುತ್ತಿದ್ದಂತೆಯೇ ಲಲಿತೆ ಒಳಗಿಂದ ಬಾಗಿಲು ಎಳೆದುಕೊಂಡಳು. ಮುಖದ ಆತಂಕದ ನಡುವೆ ಸಮಾಧಾನದ ನಗು ಕೂಡ ಇತ್ತು.
ಮನುಷ್ಯ ಬದಲಾಗಲೇಬಾರದು, ಅಲ್ವೆ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books