Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕಾಂಗ್ರೆಸ್ ಸರ್ಕಾರ ಮತ್ತು ನಮ್ಮ ಸಂಸಾರ

ಆಮೇಲೆ ಅವರಿಬ್ಬರೂ ಸುಖವಾಗಿದ್ದರು.
ಹಳೆಯ ಇಂಗ್ಲಿಷ್ ಸಿನೆಮಾಗಳು, ಅದರಲ್ಲೂ ಪ್ರೇಮಕತೆಗಳನ್ನು ಹೊಂದಿರುವ ಸಿನೆಮಾಗಳು ಮುಕ್ತಾಯಗೊಳ್ಳುವಾಗ ಇಂಥಾದ್ದೊಂದು ವಾಕ್ಯ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿತ್ತು. ಅದು ಸುಖಾಂತ್ಯವೋ, ವಿಡಂಬನೆಯೋ ಅನ್ನುವುದು ಪ್ರೇಕ್ಷಕರ ಭಾವಕ್ಕೆ ಬಿಟ್ಟಿದ್ದು. ಆದರೆ ಅದಕ್ಕೆ ಪೂರಕವಾಗಿ ನಾನೀಗ ನಿಮಗೊಂದು ಕತೆ ಹೇಳುತ್ತೇನೆ. ಇದು ನಮ್ಮ ಮಧ್ಯಮವರ್ಗದಲ್ಲಿ ನಡೆಯುವ ಮದುವೆ ಕತೆ.
ಮಗ ಮದುವೆ ವಯಸ್ಸಿಗೆ ಬಂದಿದ್ದಾನೆ. ಅಮ್ಮನಿಗೆ ಕೊಂಚ ಚಡಪಡಿಕೆ ಶುರುವಾಗಿದೆ. ಆ ಚಡಪಡಿಕೆಯಲ್ಲಿ ಸಂಭ್ರಮ, ಆತಂಕ ಇವೆರಡೂ ಹದವಾಗಿ ಮಿಳಿತಗೊಂಡಿವೆ. ಯಾಕೆಂದರೆ ಮಗ ಮದುವೆಯಾದ ತಕ್ಷಣ ತಾನು ಅತ್ತೆಯಾಗುತ್ತೇನೆ ಅನ್ನುವುದು ಆಕೆಗೆ ಗೊತ್ತಿದೆ. ಹಾಗಾಗಿ ಮಗನಿಗೆ ತಕ್ಕ ಹುಡುಗಿ ಹುಡುಕುವ ಹೊತ್ತಲ್ಲೇ ತನಗೆ ಹೊಂದಿಕೊಳ್ಳುವ ಸೊಸೆಯನ್ನೂ ಆಕೆ ಹುಡುಕಬೇಕಾಗಿದೆ. ಮಗನಿಗೆ ಒಳ್ಳೆಯ ಹೆಂಡತಿ ಸಿಗದೇ ಇದ್ದರೂ ಪರವಾಗಿಲ್ಲ, ತನಗೆ ತನ್ನ ಮಾತು ಕೇಳುವ ಸೊಸೆ ಸಿಕ್ಕರೆ ಸಾಕು ಅನ್ನುವಂಥಾ ಸೀರಿಯಲ್ ಅಮ್ಮನಲ್ಲ ಅವಳು. ಆದರೂ ಮಗನಿಗೆ ಗೊತ್ತಾಗದ ಹಾಗೆ ಈ ಕನ್ಯೆಯನ್ನು ಹುಡುಕುವ ಕಾರ್ಯಕ್ರಮ ನಡೆಯಬೇಕು. ಬ್ರೋಕರುಗಳಿಗೆ, ನೆಂಟರಿಷ್ಟರಿಗೆ ಗುಟ್ಟಾಗಿ ತಿಳಿಸಿದ್ದಾಗಿದೆ, ‘ನಿಮಗೆ ಯಾರಾದರೂ ಒಳ್ಳೆಯ ಹುಡುಗಿ ಗೊತ್ತಿದ್ದರೆ ಹೇಳಿ’. ಫೊಟೋಗಳು, ಜಾತಕಗಳು ಬಂದು ರಾಶಿಯಾಗಿ ಬಿದ್ದಿವೆ. ಅದರಲ್ಲಿ ಲಕ್ಷಣವಾಗಿರುವ ಹತ್ತಾರು ಫೊಟೋಗಳನ್ನು ತಾನೇ ಆಯ್ಕೆ ಮಾಡಿ ಒಂದು ಕಡೆ ಬಚ್ಚಿಟ್ಟಿದ್ದಾಗಿದೆ. ಈಗ ಮಗನಿಗೆ ಅವುಗಳನ್ನು ಒಂದೊಂದಾಗಿ ತೋರಿಸಬೇಕು, ಮದುವೆಯ ಪ್ರಸ್ತಾಪ ಮಂಡಿಸಬೇಕು, ಆತನನ್ನು ಓಲೈಸಬೇಕು, ಮನವರಿಕೆ ಮಾಡಿಕೊಡಬೇಕು. ಜಗತ್ತಿನ ಎಲ್ಲಾ ಅಮ್ಮಂದಿರನ್ನೂ ಕಾಡುವ ಸವಾಲು ಇದು.

ಎಲ್ಲಾ ಅಮ್ಮಂದಿರಂತೆ ಆಕೆಗೂ ತನ್ನ ಮಗನಂಥಾ ಮುಗ್ಧ ಮತ್ತು ಒಳ್ಳೆಯ ಹುಡುಗ ಜಗತ್ತಲ್ಲೆಲ್ಲೂ ಸಿಗಲಾರ ಎಂಬ ನಂಬಿಕೆ. ಯಾವುದೇ ದುಶ್ಚಟಗಳಿಲ್ಲ, ವಿಪ್ರೋದಂಥ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮದುವೆ ಪ್ರಸ್ತಾಪ ಮುಂದಿಟ್ಟ ಕೂಡಲೇ ಆತ ಏನು ಹೇಳಬಹುದು? ಸದ್ಯಕ್ಕೆ ಒಂಟಿಯಾಗಿ ಬದುಕುವುದರಲ್ಲೇ ತಾನು ಸಂತೋಷವಾಗಿದ್ದೇನೆ ಮತ್ತು ಮದುವೆಗೆ ಮುಂಚೆ ಲೈಫಲ್ಲಿ ಸೆಟ್ಲ್ ಆಗಬೇಕು -ಈ ಮಾತು ಆತನ ಬಾಯಿಂದ ಬರುತ್ತದೆ ಅನ್ನುವುದೂ ಆಕೆಗೆ ಗೊತ್ತಿದೆ. ಅದಕ್ಕೇ ಆಕೆ ಒಂದು ಉಪಾಯ ಹುಡುಕಿಕೊಂಡಿದ್ದಾಳೆ. ಯಾವುದೇ ಪೀಠಿಕೆಯಿಲ್ಲದೇ ಒಂದು ಫೊಟೋವನ್ನು ಆತನಿಗೆ ತೋರಿಸುವುದು. ಎರಡೇ ನಿಮಿಷದಲ್ಲಿ ಹುಡುಗಿಯ ಪರಿಚಯ ಮಾಡಿಕೊಡುವುದು. ಹುಡುಗಿ ಲಕ್ಷಣವಾಗಿದ್ದಾಳೆ, ಮರ್ಯಾದಸ್ಥರ ಮನೆತನ, ಬೆಳ್ಳಗಿದ್ದಾಳೆ, ಗುಣವಂತೆ, ಸಿಟಿ ಬ್ಯಾಂಕಲ್ಲಿ ಕೆಲಸ ಮಾಡುತ್ತಿದ್ದಾಳೆ...

ಹೀಗೆ ಮಗನ ಮದುವೆಯ ರಿಹರ್ಸಲ್‌ನಲ್ಲಿ ಅಮ್ಮ ಮಗ್ನಳಾಗಿರುವ ಹೊತ್ತಿಗೆ ವಾಸ್ತವದಲ್ಲಿ ಬೇರೇನೋ ನಡೆಯುತ್ತಿದೆ. ಮುದ್ದಿನ ಮಗ ಆ ಹೊತ್ತಿಗಾಗಲೇ ಹದಿನೈದು ಪ್ರಪೋಸಲ್ಲುಗಳನ್ನು ತಿರಸ್ಕರಿಸಿದ್ದಾನೆ, ಮೂವತ್ತು ಹುಡುಗಿಯರ ಜೊತೆ ಡೇಟಿಂಗ್ ಮುಗಿಸಿದ್ದಾನೆ, ಐದು ಹುಡುಗಿಯರು ಕೈಕೊಟ್ಟು ಭಗ್ನಪ್ರೇಮದ ಸವಿಯುಂಡಿದ್ದಾನೆ. ಇಂತಿಪ್ಪ ತನ್ನ ಇತರೇ ಚಟುವಟಿಕೆಗಳಿಂದ ಯಾವುದೇ ಫಾಯಿದೆ ಇಲ್ಲವೆಂದು ಖಚಿತವಾದ ಮೇಲೆ ಅಮ್ಮನೇ ತನ್ನ ಮದುವೆ ಬಗ್ಗೆ ಒಂದು ಮಾತು ಹೇಳಲಿ ಎಂದಾತ ಕಾಯುತ್ತಿದ್ದಾನೆ.
ತನಗೆ ಮದುವೆ ಇಷ್ಟ ಎಂದು ಯಾವ ಮಗನೂ ಬಾಯಿಬಿಟ್ಟು ಹೇಳುವುದಿಲ್ಲ. ಬದಲಾಗಿ ಒಂದು ಸೀನ್ ಕ್ರಿಯೇಟ್ ಮಾಡುತ್ತಾನೆ, ಹೆತ್ತವರು ವಿಪರೀತ ಒತ್ತಾಯ ಮಾಡಿದ್ದರಿಂದ ತಾನು ಮದುವೆಯಾಗುವ ಮನಸ್ಸು ಮಾಡುತ್ತಿದ್ದೇನೆ ಅನ್ನುವ ಸಂದೇಶ ರವಾನೆಯಾಗುವಂಥ ಸೀನ್. ಉದಾಹರಣೆಗೆ ಈಗ ಬೆಳಿಗ್ಗೆ ಎಂಟೂ ಕಾಲು ಅಂದುಕೊಳ್ಳಿ. ಮಗ ಆಫೀಸಿಗೆ ಹೊರಡುವುದಕ್ಕೆ ಸಜ್ಜಾಗಿದ್ದಾನೆ. ಅಮ್ಮ ಫೊಟೋ ತೋರಿಸುತ್ತಾಳೆ. ಹುಡುಗಿ ಅಂಥಾ ಚೆಲುವೆಯೇನಲ್ಲ. ಮಗ ಅಮ್ಮನ ಕಡೆ ನೋಡುತ್ತಾ ಕಿರುಚುತ್ತಾನೆ. “ನಿಂಗೆಷ್ಟು ಸಾರಿ ಹೇಳಿಲ್ಲ, ನಂಗೀಗ್ಲೇ ಮದುವೆ ಬೇಡಾಂತ. ನಾನಿನ್ನೂ ನನ್ನ ಲೈಫಲ್ಲಿ ಸೆಟ್ಲಾಗಬೇಕು, ಅದಕ್ಕೆ ಇನ್ನೆರಡು ವರ್ಷವಾದರೂ ಬೇಕು..."

ನಿರೀಕ್ಷಿತ ಪ್ರತಿಕ್ರಿಯೆ, ಅಮ್ಮ ಗಾಬರಿಯಾಗುವುದಿಲ್ಲ.
ಎಂಟೂವರೆಗೆ ಮಗ ತಿಂಡಿ ಮುಗಿಸಿ, ಕೊಂಚ ರಿಲಾಕ್ಸ್ ಆಗುತ್ತಿದ್ದಂತೆಯೇ ಅಮ್ಮ ಇನ್ನೊಂದು ಫೊಟೋ ತೋರಿಸುತ್ತಾಳೆ. ಈಕೆ ಪರವಾಗಿಲ್ಲ ಅನ್ನುವಂತಿದ್ದಾಳೆ. ಮಗನ ಮುಖದಲ್ಲೊಂದು ಚಿಕ್ಕ ನಗು ಹಾದುಹೋಗುತ್ತದೆ. ಆದರೂ ತಾನು ಮೆತ್ತಗಾಗಿದ್ದೇನೆ ಅನ್ನುವುದನ್ನು ತೋರಿಸುವ ಹಾಗಿಲ್ಲ. “ಅಮ್ಮ, ನನಗಿನ್ನೂ ಸ್ವಲ್ಪ ಕಾಲಾವಕಾಶ ಬೇಕು. ನೀನೇ ನೋಡ್ತಿದೀಯಲ್ಲ, ನಾನೆಷ್ಟು ಬಿಜಿಯಾಗಿದ್ದೀನಿ ಅಂತ, ಅಟ್ಲೀಸ್ಟ್ ಇನ್ನು ಮೂರು ತಿಂಗಳು..."
ಈಗ ಮಗ ಮನೆ ಬಾಗಿಲಿಗೆ ಬಂದು ನಿಂತಿದ್ದಾನೆ. ಗಂಟೆ ಎಂಟೂ ಮುಕ್ಕಾಲು. ಈ ಬಾರಿ ಅಮ್ಮ ತೋರಿಸುವ ಫೊಟೋದಲ್ಲಿರುವ ಹುಡುಗಿ ಲಕ್ಷಣವಾಗಿದ್ದಾಳೆ. ಮಗನಿಗೆ ಕತ್ರೀನಾ ಕೈಫ್ ನೆನಪಾಗುತ್ತಾಳೆ. ಮುಖ ಅರಳುತ್ತದೆ. ಆದರೂ ತಾನು ಫೊಟೋ ನೋಡೇ ಇಲ್ಲ ಅನ್ನುವ ಥರ ನಟಿಸುತ್ತಾ “ನೀನು ಇಷ್ಟೊಂದು ಹೇಳಿದ ಮೇಲೆ ನಾನೇನು ಮಾಡೋಕ್ಕಾಗುತ್ತೆ. ಅದೇನು ಮಾಡ್ತೀಯೋ ಮಾಡು". ಅಮ್ಮ ಇದೆಲ್ಲಾ ನಂಗೆ ಮೊದಲೇ ಗೊತ್ತಿತ್ತು ಮಗನೇ ಅನ್ನುವ ಥರ ನಗುತ್ತಾ ಹುಡುಗಿ ಮನೆಯವರಿಗೆ ಫೋನ್ ಮಾಡುತ್ತಾಳೆ.

ಹುಡುಗಿ ನೋಡುವ ಶಾಸ್ತ್ರಕ್ಕೆ ಹೋಗುವ ಹೊತ್ತಲ್ಲಿ ಕಾರಲ್ಲಿ ಕುಳಿತುಕೊಂಡೇ ಹುಡುಗ ಕನಸು ಕಾಣುತ್ತಾನೆ. ತಾನು ಮೆಚ್ಚಿದ ಕತ್ರೀನಾಳನ್ನು ನಾನಾ ಥರದ ಉಡುಪುಗಳಲ್ಲಿ, ಹೇರ್‌ಸ್ಟೈಲ್‌ನಲ್ಲಿ ಕಲ್ಪಿಸಿಕೊಳ್ಳುತ್ತಾನೆ. ಹುಡುಗಿಯ ಮನೆ ಸೇರಿದ್ದಾಯಿತು. ಅವಳಪ್ಪ ಆಕೆಯನ್ನು ಹುಡುಗಿ ನೋಡುವ ಶಾಸ್ತ್ರಕ್ಕೆ ಕರೆಸಿದ್ದೂ ಆಯಿತು. ಆಗ ಹುಡುಗನಿಗೆ ಅರಿವಾಗುತ್ತದೆ, ತಾನು ನೋಡಿದ ಫೊಟೋ ಮೂರು ವರ್ಷದ ಹಿಂದೆ ತೆಗೆದದ್ದು ಎಂದು. ಇವಳು ದೇವರಾಣೆಗೂ ಕತ್ರೀನಾ ಕೈಫ್ ಅಲ್ಲ. ಹುಡುಗ ಕಂಗಾಲಾಗಿ ಮುಂದೇನು ಅಂತ ಯೋಚಿಸುತ್ತಿದ್ದಂತೆ ಹುಡುಗಿಯ ಅಪ್ಪ ಮತ್ತು ಹುಡುಗನ ಅಪ್ಪ ದೂರದ ಸಂಬಂಧಿಕರು ಎಂಬ ಸಂಗತಿ ಪತ್ತೆಯಾಗುತ್ತದೆ. ಎಂಬಲ್ಲಿಗೆ ಹುಡುಗ ಊಹೂಂ ಅಂದರೂ ಮದುವೆ ನಡೆಯುವುದು ಗ್ಯಾರಂಟಿಯಾಗುತ್ತದೆ.

ನೋಡೋದಕ್ಕೆ ಕೊಂಚ ದಪ್ಪಗಿದ್ದರೇನಂತೆ, ಹುಡುಗಿ ಗುಣ ಚೆನ್ನಾಗಿದೆ. ಸಿಟಿ ಬ್ಯಾಂಕಲ್ಲಿ ಕೆಲಸದಲ್ಲಿದ್ದಾಳೆ. ಹೀಗೇ ರಿಯಾಯಿತಿ ಸ್ಕೀಮುಗಳನ್ನು ಲೆಕ್ಕ ಹಾಕುತ್ತಾ ಹುಡುಗ ಹೂಂ ಅಂತಾನೆ. ಇಬ್ಬರ ಮಧ್ಯೆ ಈಮೇಲುಗಳು ಹರಿದಾಡುವುದಕ್ಕೆ ಶುರುವಾಗಿ, ಡೇಟಿಂಗ್ ಹಂತಕ್ಕೆ ತಲುಪುತ್ತದೆ. ಆ ಹೊತ್ತಿಗೆ ಆತನಿಗೆ ಜ್ಞಾನೋದಯವಾಗಿರುತ್ತದೆ- ಕತ್ರೀನಾ ಕೈಫ್ ಹೊರತಾಗಿಯೂ ಬೇರೆ ನಟಿಯರೂ ಭಾರತದಲ್ಲಿದ್ದಾರೆ. ಮೊದಲ ಭೇಟಿಯಲ್ಲೇ ಆಕೆಯ ಇಂಗ್ಲಿಷ್ ಉಚ್ಚಾರಣೆ ವಿಚಿತ್ರವಾಗಿರುವುದನ್ನೂ, ಬಾಡಿ ಲಾಂಗ್ವೇಜ್ ಕೆಟ್ಟದಾಗಿರುವುದನ್ನೂ ಆತ ಗಮನಿಸುತ್ತಾನೆ. ಇನ್ನೊಂದೆಡೆ ಹುಡುಗನ ಬಾಡಿಯಿಂದ ಹೊರಹೊಮ್ಮುತ್ತಿರುವ ಬೆವರ ವಾಸನೆ ಕೆಟ್ಟದಾಗಿರುವುದನ್ನು ಆಕೆಯೂ ಗಮನಿಸುತ್ತಾಳೆ. ಎರಡನೇ ಭೇಟಿಯಲ್ಲಿ ಆಕೆ ಸೀರೆ ಅಥವಾ ಸಲ್ವಾರ್ ಕಮೀಜ್ ಹೊರತಾಗಿ ಬೇರಾವ ಬಟ್ಟೆಯನ್ನೂ ತೊಡುವುದಿಲ್ಲ ಅನ್ನುವ ಕಹಿಸತ್ಯ ಪತ್ತೆಯಾಗುತ್ತದೆ. ಹುಡುಗನಿಗೆ ಬೈಕ್ ಓಡಿಸುವುದಕ್ಕೆ ಬರೋಲ್ಲ ಅನ್ನುವುದು ಆಕೆಗೆ ಗೊತ್ತಾಗುತ್ತದೆ. ಮೂರನೇ ಭೇಟಿಯಲ್ಲಿ ಆಕೆ ಅಪ್ಪಟ ಸಸ್ಯಾಹಾರಿ ಮತ್ತು ಇಲ್ಲಿತನಕ ಪಬ್ ಒಳಗೆ ಕಾಲಿಟ್ಟಿಲ್ಲ ಅನ್ನುವುದು ತಿಳಿಯುತ್ತದೆ.

ತನ್ನ ಗಂಡನಾಗುವ ಮಹಾನುಭಾವ ವಾರಾಂತ್ಯಕ್ಕೆ ಕ್ಲಬ್ಬಲ್ಲೇ ಕಾಲ ಕಳೆಯುತ್ತಾನೆ ಮತ್ತು ಆತ ಡೇಟಿಂಗ್ ಮಾಡಿರುವ ಹುಡುಗಿಯರಲ್ಲಿ ತಾನು ಮೊದಲನೆಯವಳಲ್ಲ ಅನ್ನುವುದು ಆಕೆಗೂ ತಿಳಿಯುತ್ತದೆ. ಆಕೆಗೆ ಶುಕ್ರವಾರ ದೇವಸ್ಥಾನ ವಿಸಿಟ್ ಕಂಪಲ್ಸರಿ, ಆತನಿಗೆ ಶನಿವಾರ ಗುಂಡು ಕಂಪಲ್ಸರಿ. ಅವನು ಗುಂಡು ಮತ್ತು ಸಿಗರೇಟು ಬಿಡಬೇಕು ಎಂದು ಅವಳೂ, ಆಕೆ ಅವೆರಡನ್ನು ಶುರು ಮಾಡಲಿ ಎಂದು ಆತನೂ ಬಯಸುತ್ತಾರೆ. ಹೀಗೆ ಅವರಿಬ್ಬರೂ ಪರಸ್ಪರ ಅರಿತುಕೊಳ್ಳುವ ಕ್ರಿಯೆಯಲ್ಲಿ ಮಗ್ನರಾಗಿ, ಅದು ಯಾವುದೂ ಬರ್ಕತ್ತಾಗದೇ ಕಾಲ ಕಳೆಯುತ್ತಿದ್ದಂತೆಯೇ ಮನೆಯವರು ಸೇರಿ ಮದುವೆ ದಿನಾಂಕವನ್ನು ನಿಗದಿ ಮಾಡಿರುತ್ತಾರೆ. ಮದುವೆ ನಡೆದೇಹೋಗುತ್ತದೆ.
ಮದುವೆಯಾಗಿ ಒಂದೇ ವಾರಕ್ಕೆ ಆತನಿಗೆ ಅರಿವಾಗುತ್ತದೆ -ಕತ್ರೀನಾ ಮನೆ ಹಾಳಾಗಿ ಹೋಗಲಿ, ಇವಳು ಪೂನಮ್ ಪಾಂಡೆಯೂ ಅಲ್ಲ. ಅವಳಿಗೂ ಅರಿವಾಗುತ್ತದೆ -ನನ್ನ ಗಂಡ ಕಾಣೋದಕ್ಕಷ್ಟೇ ಹೀರೋ, ದೈಹಿಕವಾಗಿ ಆತ ಝೀರೋ . ಹಾಗಿದ್ದೂ ಒಂದು ತಿಂಗಳಲ್ಲಿ ಆಕೆ ಗರ್ಭ ಧರಿಸುತ್ತಾಳೆ. ಒಂಭತ್ತು ತಿಂಗಳಲ್ಲಿ ಹೆರಿಗೆಯೂ ಆಗುತ್ತದೆ. ಈ ಯಶಸ್ವೀ ವಿವಾಹದ ಸಿಲ್ವರ್, ಗೋಲ್ಡನ್ ಜುಬಿಲಿಗಳೂ ನಡೆದುಹೋಗುತ್ತವೆ. ಬಂಧು-ಬಳಗದವರು ಈ ಸುಖದಾಂಪತ್ಯದ ಬಗ್ಗೆ ಮೆಚ್ಚುಗೆಯ ಮಾತಾಡುತ್ತಾರೆ.

ಮದುವೆ ಅನ್ನುವುದು ಹಲವು ಹೊಂದಾಣಿಕೆಗಳ ಮೊತ್ತ ಅನ್ನುತ್ತಾರೆ ಅನುಭವಿಗಳು. ಆದರೆ ಮೇಲೆ ಹೇಳಲಾದ ಕತೆಯಲ್ಲಿ ಹುಡುಗ ಮತ್ತು ಹುಡುಗಿ, ಇವರಿಬ್ಬರ ನಿರೀಕ್ಷೆಗಳು ಹೆಜ್ಜೆಹೆಜ್ಜೆಗೂ ಸುಳ್ಳಾಗುತ್ತಲೇ ಹೋಗುತ್ತವೆ. ಇದು ಹೊಂದಾಣಿಕೆಯಲ್ಲ, ಶುದ್ಧ ನಾಟಕ ಅನ್ನುವುದು ನಿಮಗೆಲ್ಲರಿಗೂ ಅರ್ಥವಾಗಿರಬೇಕು. ಅರೆ, ನಮ್ಮ ಸಂಸಾರವೂ ಹೀಗೇ ಇದೆಯಲ್ಲ ಎಂದು ಕೆಲವರಿಗಾದರೂ ಅನಿಸಿರಬೇಕು. ಆದರೂ ನಾವು ನಮ್ಮ ಹೆಂಡತಿ ಮಕ್ಕಳೊಂದಿಗೆ ಮತ್ತು ಅವಳು ತನ್ನ ಗಂಡ ಮಕ್ಕಳೊಂದಿಗೆ ಸುಖವಾಗಿದ್ದೇವೆ.

ನನ್ನ ಕಿರಿಯ ಗೆಳೆಯ ನರಸಿಂಹ ಆಚಾರ್ಯ ಕಳಿಸಿಕೊಟ್ಟ ಈಮೇಲ್ ಒಂದರ ಭಾವಾನುವಾದವಿದು. ಮೇಲ್ನೋಟಕ್ಕೆ ತಮಾಷೆ ಅನಿಸಿದರೂ ಈ ಥರ ಬದುಕುತ್ತಿರುವ ಅಸಂಖ್ಯಾತ ದಂಪತಿಗಳು ನಮ್ಮ ನಡುವಿದ್ದಾರೆ. ಸತ್ಯವೆನ್ನುವುದು ಮನೆಯ ನಾಲ್ಕು ಗೋಡೆಗಳ ನಡುವಿನ ಆಕ್ರಂದನವಾಗಿಯೇ ಉಳಿಯುತ್ತದೆ. ಅದು ಹೊರಗೆ ಬರುವ ಹಾಗಿಲ್ಲ. ಅದಕ್ಕೆ ಕಾರಣ ಭಾರತೀಯ ಮಧ್ಯಮವರ್ಗದ ಮೆಂಟಾಲಿಟಿ. ಡೈವೋರ್ಸು, ಅದಕ್ಕೆ ತಗಲುವ ಖರ್ಚು, ಗೆಳೆಯರು ಮತ್ತು ನೆಂಟರ ಕಾಮೆಂಟುಗಳು, ಇವೆಲ್ಲ ರಗಳೆಗಳಲ್ಲಿ ಸಿಕ್ಕಿ ನರಳುವುದಕ್ಕಿಂತ ಇರುವ ಸ್ಥಿತಿಯನ್ನೇ ಒಪ್ಪಿಕೊಳ್ಳುವುದು ವಾಸಿ ಎಂದು ಅಂದುಕೊಳ್ಳುವವರೇ ಹೆಚ್ಚು. ಮಧ್ಯಮವರ್ಗ ಅನ್ನುವುದೇ ಇದಕ್ಕೆ. ಕೆಳಗಿಳಿಯುವುದಕ್ಕೆ ನಾಚಿಕೆ, ಮೇಲೇರುವುದಕ್ಕೆ ಭಯ.

ಪುರುಸೊತ್ತಿದ್ದರೆ ನೀವು ಇನ್ನೂ ಒಂದು ಕೆಲಸ ಮಾಡಬಹುದು. ಅಮ್ಮನ ಜಾಗದಲ್ಲಿ ಸಿದ್ದರಾಮಯ್ಯನವರ ಸರ್ಕಾರವನ್ನು ಕಲ್ಪಿಸಿಕೊಳ್ಳಿ. ಹುಡುಗ ಅಥವಾ ಹುಡುಗಿ ಜಾಗದಲ್ಲಿ ಮತದಾರನಿರಲಿ. ಮೊದಲು ಶಾದಿ ಭಾಗ್ಯ, ಆಮೇಲೆ ಅಕ್ಕಿಭಾಗ್ಯ, ಆಮೇಲೆ ಇನ್ಯಾವುದೋ ಭಾಗ್ಯ. ಇಂಥಾ ಭರವಸೆಯ ಫೊಟೋಗಳನ್ನು ನೋಡಿದ ಮೇಲೆ ಸರ್ಕಾರದ ಜೊತೆ ನಮ್ಮ ಸಂಸಾರ ಶುರುವಾಗುತ್ತದೆ. ನಿರೀಕ್ಷೆಗಳು ಸುಳ್ಳಾಗುತ್ತಲೇ ಹೋಗುತ್ತವೆ. ಆದರೂ ಸರ್ಕಾರ ಐದು ವರ್ಷದ ನಂತರ ಸಾಧನೆಯ ಸಮಾವೇಶ ನಡೆಸುತ್ತದೆ.
ಮೇಡ್ ಫಾರ್ ಈಚ್ ಅದರ್ ಅನ್ನುವುದು ಸುಮ್ಮನೆ ಅಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books