Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅನುಕಂಪದ ಅಲೆ ಎಂಬುದು ಬಹಳ ದಿನ ಇರುವುದಿಲ್ಲವಲ್ಲವೇ?

ಮನುಷ್ಯನಿಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎನ್ನುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿಂತ ಉತ್ತಮ ಉದಾಹರಣೆ ಬೇರೊಬ್ಬರಿಲ್ಲ. ಅವರನ್ನು ಕೇಳಿ ನೋಡಿ. ಇಡೀ ದೇಶದಲ್ಲೇ ಕಾಂಗ್ರೆಸ್ ಬಕ್ಕ ಬೋರಲು ಮಲಗಿರುವಾಗ ನಾವು ಒಂಬತ್ತು ಸೀಟು ಗೆದ್ದಿದ್ದೇವೆ. ಉಳಿದ ಮೂವತ್ತೈದು ಸೀಟುಗಳನ್ನು ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದು ಹೇಳುತ್ತಾರೆ. ಆದರೆ ಸಿದ್ದರಾಮಯ್ಯನವರು ನೆನಪಿನಲ್ಲಿಡಬೇಕಾದ ಒಂದು ಅಂಶವಿದೆ. ಅದೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಿಬಿಐ ಅನ್ನು ಬಳಸಿಕೊಳ್ಳದೇ ಹೋಗಿದ್ದರೆ ಇವರು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವೇ ಇರಲಿಲ್ಲ. ರಾಜ್ಯದಲ್ಲಿ ಏನೇ ಮಾಡಿದರೂ ಕಾಂಗ್ರೆಸ್ ಬರಖತ್ತಾಗದಿರುವುದನ್ನು ಕಂಡ ದಿಲ್ಲಿಯ ಹೈಕಮಾಂಡ್ ಪ್ರಮುಖರು ತಮ್ಮ ಬತ್ತಳಿಕೆಯಲ್ಲಿದ್ದ ಸಿಬಿಐ ಅನ್ನು ಮುಂದೆ ಬಿಟ್ಟರು. ಇದರ ಪರಿಣಾಮವಾಗಿ ಯಡಿಯೂರಪ್ಪನವರು ಬಿಜೆಪಿ ತೊರೆಯಬೇಕಾಯಿತು. ಶ್ರೀರಾಮುಲು ಅವರು ಅದೇ ದಾರಿ ಹಿಡಿಯಬೇಕಾಯಿತು.

ಯಡಿಯೂರಪ್ಪನವರು ಪಕ್ಷ ತೊರೆಯಲು ಕಾರಣಗಳೇನೂ ಇರಲಿಲ್ಲ. ಬಿಜೆಪಿ ಅವರಿಗೆ ಏನೇ ಸಮಾಧಾನ ಹೇಳಿದರೂ ಅವರು ತಮ್ಮ ಉಳಿವಿನ ಧಾವಂತದಲ್ಲಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷ ಹೇಳಿದ ಹಾಗೆ ಕೇಳಿ ಕೆಜೆಪಿ ಕಟ್ಟಿದರು. ಬಿಜೆಪಿಯ ಮತಬ್ಯಾಂಕ್‌ನ್ನು ದೊಡ್ಡ ಮಟ್ಟದಲ್ಲಿ ಒಡೆದರು. ಇನ್ನು ಬಿ.ಶ್ರೀರಾಮುಲು ಸಂಪುಟಕ್ಕೆ ಸೇರಿಸಿಕೊಳ್ಳದೇ ಇರುವುದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯಿತು ಎಂದು ನೆಪ ಹೇಳಿ ಹೊಸ ಪಕ್ಷ ಕಟ್ಟಿದರು. ಅದರ ಹಿಂದೆಯೂ ದಿಲ್ಲಿಯ ಕಾಂಗ್ರೆಸ್ ನಾಯಕರ ಕೈವಾಡವಿತ್ತು. ಒಂದು ಕಡೆಯಿಂದ ಲಿಂಗಾಯತ, ಮತ್ತೊಂದು ಕಡೆಯಿಂದ ವಾಲ್ಮೀಕಿ ನಾಯಕರನ್ನು ಬಿಜೆಪಿಯಿಂದ ಹೊರಗೋಡಿಸಿದ ಮೇಲೆ ಒಂದು ಅತಂತ್ರ ವಾತಾವರಣ ರಾಜ್ಯದಲ್ಲಿ ಕಾಣಿಸಿಕೊಂಡಿತು. ಈ ಅತಂತ್ರ ವಾತಾವರಣದ ಸಂದರ್ಭದಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಕಾಂಗ್ರೆಸ್ ಉತ್ತಮ ಎಂಬ ಭಾವನೆ ಕಂಡಿತು. ಹೀಗಾಗಿ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತೇ ವಿನಾ ದಿಲ್ಲಿಯ ಕಾಂಗ್ರೆಸ್ ಹೈಕಮಾಂಡ್ ಕೃಪೆಯಿಲ್ಲದಿದ್ದರೆ ಅಪ್ಪಿತಪ್ಪಿಯೂ ಇವತ್ತು ಅವರು ಅಧಿಕಾರದಲ್ಲಿರುತ್ತಿರಲಿಲ್ಲ. ಅದರ ಬದಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಧಿಕಾರದಲ್ಲಿ ಇರುತ್ತಿತ್ತು. ಆದರೆ ಇದ್ಯಾವುದನ್ನೂ ಗಮನದಲ್ಲಿಟ್ಟುಕೊಳ್ಳದ ಸಿದ್ದರಾಮಯ್ಯ, ಇನ್ನೇನೂ ಯೋಚನೆ ಮಾಡಬೇಡಿ. ಒಂದು ವರ್ಷ ನನಗೆ ಫ್ರೀ ಹ್ಯಾಂಡು ಕೊಡಿ. ಇಪ್ಪತ್ತೆರಡು ಸೀಟು ಗೆಲ್ಲಿಸುತ್ತೇನೆ. ಹಾಸನದಲ್ಲಿ ದೇವೆಗೌಡರನ್ನೂ ಮಣಿಸುತ್ತೇನೆ ಎಂದು ದಿಲ್ಲಿಯಲ್ಲಿ ಹೇಳಿಕೊಂಡರು.

ಹೀಗೆ ಹೇಳುವ ಮುನ್ನ ಸಿದ್ದರಾಮಯ್ಯನವರು ಕನಿಷ್ಠ ಪಕ್ಷ ತಮ್ಮ ಸಚಿವ ಸಂಪುಟವನ್ನು ಒಂದು ಸಲ ತಿರುಗಿ ನೋಡಿಕೊಳ್ಳಬೇಕಿತ್ತು. ಅಲ್ಲಿ ಮೂರು ವರ್ಗದ ಜನರಿದ್ದರು. ಒಂದು ವರ್ಗದ ಜನ ಮುಖ್ಯಮಂತ್ರಿಗಳಾಗಲು ನಮಗಿಂತ ಅರ್ಹರು ಬೇರೆ ಯಾರೂ ಇಲ್ಲ ಎಂದು ಭಾವಿಸಿದವರು. ಎರಡನೇ ವರ್ಗದವರು ಹಣ ಬಲ, ಜನರ ಪ್ರೀತಿಯ ವಿಷಯದಲ್ಲಿ ನಾವೇ ಸಿದ್ದರಾಮಯ್ಯನವರಿಗಿಂತ ಹೆಚ್ಚು ಸಾಲಿಡ್ಡು. ಹೀಗಾಗಿ ಅವರನ್ನೇನು ಕೇರ್ ಮಾಡುವುದು ಎಂಬ ಮೂಡಿನಲ್ಲಿದ್ದರು. ಉಳಿದಂತೆ ಮೂರನೇ ವರ್ಗದ ಜನ ಭಟ್ಟಂಗಿಗಳಂತೆ ವರ್ತಿಸುವವರು. ಅವರಿಗೆ ಸಿದ್ದರಾಮಯ್ಯ ಏನೇ ಮಾಡಲಿ, ಅದಕ್ಕಿಂತ ಬೆಟರ್ರು ಮಾರ್ಗ ಬೇರೆ ಕಾಣುತ್ತಲೇ ಇರಲಿಲ್ಲ. ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತಲ್ಲ? ತಮ್ಮ ಸಂಪುಟದ ಯಾರಾದರೂ ಒಬ್ಬ ಸಚಿವರು ಇಡೀ ರಾಜ್ಯವನ್ನು ಗಣ ಗಣ ಸುತ್ತಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರಾ ಎಂದು ಸಿದ್ದರಾಮಯ್ಯ ಯಾವತ್ತಾದರೂ ನೋಡಿದ್ದಾರಾ? ಇಲ್ಲ, ಇವತ್ತು ಕುಳಿತು ಆಡಳಿತಕ್ಕೆ ಸರ್ಜರಿ ಮಾಡಲು ಹೊರಟಿದ್ದಾರೆ. ಹೀಗೆ ಸರ್ಜರಿ ಮಾಡುವುದು ಒಳ್ಳೆಯದು. ಯಾರಿಗೆ ಇಡೀ ರಾಜ್ಯ ಸುತ್ತುವ ತಾಕತ್ತಿಲ್ಲವೋ, ಯಾರಿಗೆ ಸಮಸ್ಯೆಗಳನ್ನು ಬಗೆ ಹರಿಸುವ ಮಾರ್ಗಗಳು ಗೊತ್ತಿಲ್ಲವೋ, ಯಾರಿಗೆ ಜನರ ಕಷ್ಟಗಳನ್ನು ಆಲಿಸುವಷ್ಟು ಪುರುಸೊತ್ತಿಲ್ಲವೋ, ಯಾರಿಗೆ ಆಧುನಿಕ ಜಗತ್ತಿನ ಪರಿಚಯ ಇಲ್ಲವೋ ಅಂತಹವರನ್ನು ಮುಲಾಜಿಲ್ಲದೇ ಕಿತ್ತು ಹಾಕುವ ತಾಕತ್ತು ಸಿದ್ದರಾಮಯ್ಯನವರಿಗೆ ಇರಬೇಕು.

ಪಕ್ಕದ ರಾಜ್ಯದಲ್ಲಿರುವ ಜಯಲಲಿತಾ ಅವರನ್ನು ನೋಡಿ. ಇದ್ದ ಮೂವತ್ತೊಂಬತ್ತು ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಕಳೆದುಕೊಂಡಿದ್ದಕ್ಕಾಗಿ ಎರಡು ಮಂದಿ ಸಚಿವರನ್ನು ಹೊಣೆಗಾರರನ್ನಾಗಿ ಮಾಡಿ ಕಿತ್ತು ಹಾಕಿಬಿಟ್ಟರು. ಹೀಗೆ ಕಿತ್ತು ಹಾಕಿದ್ದಕ್ಕೆ ಅವರು ಮುಲಾಜಿಲ್ಲದೇ ಕಾರಣವನ್ನೂ ಕೊಟ್ಟರು. ಸಚಿವರೆಂದರೆ ಮಜಾ ಉಡಾಯಿಸಲು ಇರುವವರಲ್ಲ, ದುರಹಂಕಾರದಿಂದ ವರ್ತಿಸಲು ಇರುವವರಲ್ಲ, ಜನರನ್ನು ತಲುಪುವ ಕೆಲಸ ಮಾಡದೇ ಸುಮ್ಮನಿರಬೇಕು ಎಂದಲ್ಲ. ಮಂತ್ರಿಗಳೆಂದರೆ ದೇವರ ಸಮಾನ ಎಂಬ ಭಾವನೆ ಜನರ ಮನಸ್ಸಿನಿಂದ ಮಾಯವಾಗಿ ಬಹಳ ದಿನಗಳೇ ಕಳೆದಿವೆ. ಯಾರೇ ಬಂದರೂ ಕಷ್ಟ ಪಡಲೇಬೇಕು ಎಂಬ ಭಾವನೆ ಇರುವಾಗ ಜನ ಯಾವ ನಾಯಕನೇ ಆಗಲಿ, ಯೂಸ್‌ಫುಲ್ ಅಥವಾ ವೇಸ್ಟ್ ಎಂದು ವರ್ಗೀಕರಿಸುತ್ತಾನೆ. ಹೀಗಾಗಿ ಮೊದಲು ಸಿದ್ದರಾಮಯ್ಯ ತಮ್ಮ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಬೇಕು. ಆಡಳಿತದ ಎಲ್ಲ ಹಂತಗಳಲ್ಲಿ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಬಂದು ಕೂತವರಿದ್ದಾರೆಯೇ ವಿನಾ ಜನರ ಕೆಲಸ ಮಾಡುವವರು ಬಹಳ ಕಡಿಮೆ. ಇದನ್ನು ಸಿದ್ದರಾಮಯ್ಯ ತಿಳಿದುಕೊಳ್ಳಬೇಕು.

ಇವತ್ತು ನೋಡನೋಡುತ್ತಿದ್ದಂತೆಯೇ ದಿಲ್ಲಿ ಮಟ್ಟದಲ್ಲಿ ಚಿಗುರಿರುವ ಬಿಜೆಪಿ, ಮರಳಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಹೇಗೆ ಎಂಬ ಕಡೆ ಗಮನಹರಿಸುತ್ತಿದೆ. ಖುದ್ದು ನರೇಂದ್ರ ಮೋದಿಯವರೇ ಕುಳಿತು ಪ್ರಧಾನಿಯಾಗುವ ಮುನ್ನ ಬಿಜೆಪಿ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ. ಇನ್ನು ಮೋದಿ ಅಲೆ ಎಂಬುದು ಮೂರು ತಿಂಗಳೋ, ಆರು ತಿಂಗಳೋ ಇರಬಹುದು. ಆಮೇಲೆ ಜನರ ಎಲ್ಲ ನಿರೀಕ್ಷೆಗಳನ್ನು ಈಡೇರಿಸಲು ಆಗದೇ ಹೋದಾಗ ಜನ ತಿರುಗಿ ಬೀಳುತ್ತಾರೆ. ಅಂತಹ ಸಂದರ್ಭದಲ್ಲಿ ನಿಮ್ಮ ನೆರವಿಗೆ ಮೋದಿ ಅಲೆ ಬರುವುದಿಲ್ಲ. ಇದು ತಾತ್ಕಾಲಿಕ. ಹತ್ತು ವರ್ಷಗಳಿಂದ ಯುಪಿಎ ಅಧಿಕಾರ ನಡೆಸಿತ್ತು. ಅದರಿಂದ ಜನ ಭ್ರಮನಿರಸನಕ್ಕೆ ಒಳಗಾಗಿದ್ದರು. ಹೀಗಾಗಿ ಪರ್ಯಾಯವನ್ನು ಬಯಸುತ್ತಿದ್ದರು. ಅದಕ್ಕಾಗಿ ನಮಗೆ ವೋಟು ಹಾಕಿದ್ದಾರೆ. ಒಂದು ಸಲ ಅವರ ಮನಸ್ಸಿನಲ್ಲಿರುವ ಪ್ರೀತಿ ಕರಗಿದರೆ, ಮೋದಿ ಅಲೆ ಮಾಯವಾದರೆ ಏನು ಮಾಡುತ್ತೀರಿ ಎಂದು ನೇರಾನೇರವಾಗಿ ಕೇಳಿದ್ದಾರೆ. ಅಷ್ಟೇ ಅಲ್ಲ, ಈ ಸಮಸ್ಯೆಗೆ ಪರಿಹಾರವನ್ನೂ ಹೇಳಿದ್ದಾರೆ. ಅವರ ಪ್ರಕಾರ, ರಾಜ್ಯ ಬಿಜೆಪಿಯಲ್ಲಿ ಪರಸ್ಪರರಲ್ಲಿ ವಿಶ್ವಾಸ ಬೆಳೆಯಬೇಕು. ನಿಮ್ಮ ಶಕ್ತಿ ಹೆಚ್ಚಾದಾಗ ಸಹಜವಾಗಿಯೇ ಎದುರಾಳಿಯ ಶಕ್ತಿ ಕಡಿಮೆಯಾಗುತ್ತದೆ ಎಂದಿದ್ದಾರೆ. ಅದು ಎಷ್ಟರಮಟ್ಟಿಗೆ ಈಡೇರುತ್ತದೆ ಎಂಬುದು ಬೇರೆ ವಿಷಯ. ಆದರೆ ಮೋದಿಗೆ ಅದರ ಪರಿಜ್ಞಾನವಿದೆ. ಅಲೆ ಎಂಬುದು ಬಹಳ ದಿನ ಕೆಲಸ ಮಾಡುವುದಿಲ್ಲ ಎಂಬುದು ಗೊತ್ತಿದೆ. ಇಂತಹ ಅರಿವು ಸಿದ್ದರಾಮಯ್ಯನವರಲ್ಲೂ ಇರಬೇಕು.

ಇವತ್ತು ದಿಲ್ಲಿಯಲ್ಲಿ ವಕ್ಕಲಿಗ ಸಮುದಾಯದ ಸದಾನಂದಗೌಡ, ಲಿಂಗಾಯತ ಸಮುದಾಯದ ಜಿ.ಎಂ.ಸಿದ್ದೇಶ್ವರ್ ಹಾಗೂ ಬ್ರಾಹ್ಮಣ ಸಮುದಾಯದ ಅನಂತಕುಮಾರ್ ಮಂತ್ರಿಯಾಗಿದ್ದಾರೆ. ಈ ಪೈಕಿ ಸಿದ್ದೇಶ್ವರ್ ರಾಜ್ಯ ಸಚಿವರಾಗಿರುವುದರಿಂದ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಸೇರುತ್ತಾರೆ. ದಲಿತ ನಾಯಕ ರಮೇಶ್ ಜಿಗಜಿಣಗಿ ಕೂಡ ಸೇರುತ್ತಾರೆ. ಉಳಿದಂತೆ ಸದಾನಂದಗೌಡರು ತೆರವು ಮಾಡಿರುವ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ಬಂದು ಕೂರುತ್ತಾರೆ. ವಿಧಾನಸಭೆಯಲ್ಲಿ ಜಗದೀಶ್ ಶೆಟ್ಟರ್ ಇದ್ದಾರೆ. ಈ ಮಧ್ಯೆ ಅರವಿಂದ ಲಿಂಬಾವಳಿ ಥರದ ನಾಯಕರಿಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೋ, ಕೋರ್ ಕಮಿಟಿಯಲ್ಲೋ ಜಾಗ ಕೊಟ್ಟರು ಎಂದುಕೊಳ್ಳಿ. ಆಗ ಸಹಜವಾಗಿ ಬಿಜೆಪಿಯ ಬಲ ಹೆಚ್ಚಾಗುತ್ತಾ ಹೋಗುತ್ತದೆ. ಎದುರಾಳಿಗಳು ತಾವು ಕಲಿತ ಪಾಠದಿಂದ ಎಚ್ಚೆತ್ತುಕೊಳ್ಳುತ್ತಿದ್ದಾರೆ ಎಂದಾದಾಗ ಅವರಿಗಿಂತ ಮುಂಚಿತವಾಗಿ ಎದ್ದೇಳುವ ಗುಣ ನಾಯಕರಲ್ಲಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈಗ ಸಿದ್ದರಾಮಯ್ಯನವರ ಕೈ ಹಿಡಿದು ನಡೆಸಲು ದಿಲ್ಲಿಯಲ್ಲಿ ಯುಪಿಎ ಸರ್ಕಾರ ಇಲ್ಲ. ಮತಗಳನ್ನು ಒಡೆಯಲು ಅನುಸರಿಸಬೇಕಾದ ತಂತ್ರಗಳನ್ನು ದಿಲ್ಲಿಯ ನಾಯಕರು ಈ ಹಿಂದೆ ಮಾಡಿಕೊಟ್ಟರು. ಆದರೆ ಮುಂದಿನ ದಿನಗಳಲ್ಲಿ ಅವರು ಮತಬ್ಯಾಂಕ್‌ನ್ನು ಒಡೆದು ಕೊಡಲು ಸಾಧ್ಯವಿಲ್ಲ.

ಇಂತಹ ಸಂದರ್ಭದಲ್ಲಿ ಒಂದು ಒಳ್ಳೆಯ ಕ್ಯಾಬಿನೆಟ್ ಮಾಡುವ ಗುಣ ಸಿದ್ದರಾಮಯ್ಯನವರಲ್ಲಿರಬೇಕು. ಕ್ಯಾಬಿನೆಟ್ ಅಂದರೆ ಹೇಗಿರಬೇಕು ಎಂದರೆ ರಾಜ್ಯದ ಜನರಿಗೆ ಒಂದು ನಂಬಿಕೆ ಬರುವಂತಿರಬೇಕು. ಏನೇ ಕಷ್ಟ ಬಂದರೂ ಅದನ್ನು ನಿವಾರಿಸುವ ತಾಕತ್ತು ಇರುವ ಜನ ಇದ್ದಾರೆ ಎಂಬ ಭಾವನೆ ಬರಬೇಕು. ಈ ಸಚಿವ ಸಂಪುಟದಲ್ಲಿರುವವರ ಪೈಕಿ ಎಷ್ಟು ಜನರನ್ನು ನೋಡಿದರೆ ಜನರಿಗೆ ಅಂತಹ ಭಾವನೆ ಬರುತ್ತದೆ? ನಿಜ ಹೇಳಬೇಕೆಂದರೆ ಇವರ ಸರ್ಕಾರಕ್ಕಿಂತ ಬಿಜೆಪಿ ಸರ್ಕಾರದಲ್ಲೇ ಒಳ್ಳೆಯ ಮಂತ್ರಿಗಳಿದ್ದರು ಎಂಬ ಅಭಿಪ್ರಾಯ ಮೂಡುತ್ತದೆ. ನಿಜ, ಕಚ್ಚಾಟ ಮಾಡಿಕೊಂಡರು, ಹಗರಣ ಮಾಡಿಕೊಂಡರು. ಅಗತ್ಯವನ್ನು ಮೀರಿ ತಿಂದರು. ಇಷ್ಟಾದ ನಂತರ ಅಧಿಕಾರ ಕಳೆದುಕೊಂಡ ಮೇಲೆ ಮಾಡಿದ ತಪ್ಪಿನ ಅರಿವಾಗಿ ಪರಿತಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಲು ಏನು ಮಾಡಬೇಕೋ ಅದನ್ನು ದಿಲ್ಲಿ ಲೆವೆಲ್ಲಿನಿಂದಲೇ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕೇವಲ ಅಹಿಂದ ವರ್ಗಗಳ ನಾಯಕರಾಗಲು ಯತ್ನಿಸಬಾರದು. ಎಲ್ಲ ವರ್ಗಗಳಲ್ಲೂ ಇರುವ ಬಡವರಿಗೆ ವಿಶ್ವಾಸ ತುಂಬಬೇಕು. ಯಾವಾಗ ಸೀಮಿತ ವರ್ಗಗಳ ನಾಯಕರಾಗಲು ಅವರು ಯತ್ನಿಸುತ್ತಾರೋ ಆಗ ಆ ವರ್ಗಗಳ ಮತಗಳನ್ನು ಒಡೆಯುವ ಶಕ್ತಿಗಳು ಹುಟ್ಟಿಕೊಳ್ಳುತ್ತವೆ.

ಹೋಗಲಿ, ದಲಿತರನ್ನು ಹಿಡಿದಿಡಲು ಇವರು ಏನಾದರೂ ಪ್ರಯತ್ನ ಮಾಡಿದರಾ ಎಂದರೆ ಅಪ್ಪಿತಪ್ಪಿಯೂ ಮಾಡಲಿಲ್ಲ. ಪರಮೇಶ್ವರ್, ರಮೇಶ್‌ಕುಮಾರ್ ಸೇರಿದಂತೆ ಹಲ ಮಂದಿ ನಾಯಕರು ಕಣ್ಣ ಮುಂದಿದ್ದಾರೆ. ಅಂತಹವರನ್ನು ಇಟ್ಟುಕೊಂಡು ಒಳ್ಳೆಯ ಸರ್ಕಾರವನ್ನು ಕೊಡಲು ಸಿದ್ದರಾಮಯ್ಯ ಮನಸ್ಸು ಮಾಡಬೇಕಿತ್ತು. ಆದರೆ ದುರಂತ ನೋಡಿ. ಪರಮೇಶ್ವರ್ ಬಂದರೆ, ಉಪಮುಖ್ಯಮಂತ್ರಿಯಾದರೆ ಇವರಿಗೆ ಪರ್ಯಾಯ ಶಕ್ತಿ ಕೇಂದ್ರ ಸೃಷ್ಟಿಯಾದಂತಾಗುತ್ತದೆ. ರಮೇಶ್‌ಕುಮಾರ್ ಬಂದರೆ ಬುದ್ಧಿವಂತ ರಾಜಕಾರಣಿ ಬಂದಂತಾಗುತ್ತದೆ. ಇಬ್ರಾಹಿಂ ಸೋತಿರಬಹುದು. ಆದರೆ ಒಳ್ಳೆಯ ಕೆಲಸ ಮಾಡಿ ನಿಮ್ಮ ಹಿಂದೆ ನಾವಿದ್ದೇವೆ ಎಂದರೆ ಹಟ ತೊಟ್ಟು ಕೆಲಸ ಮಾಡುವ ಶಕ್ತಿ ಅವರಲ್ಲಿದೆ. ನೆನಪಿಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗೆದ್ದು ಬಂದವರ ಬಗ್ಗೆ ಗೌರವ ಇರಬೇಕು. ಹಾಗಂತ ಗೆದ್ದು ಬಂದವರು ಅಪಾರ ತಿಳುವಳಿಕೆಯುಳ್ಳವರಾಗಿರುತ್ತಾರೆ. ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ ಎಂದರ್ಥವಲ್ಲ. ಕಳೆದ ಹಲವಾರು ದಶಕಗಳಿಂದ ಶಾಸಕರು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರಲ್ಲ? ಇವರು ಕಲಿತು ಬಂದಿದ್ದಾದರೂ ಏನು? ಅದನ್ನು ಒಂದು ವರದಿಯ ರೂಪದಲ್ಲಾದರೂ ವಿಧಾನಸಭೆಯ, ವಿಧಾನಪರಿಷತ್ತಿನ ಅಧ್ಯಕ್ಷರಿಗೆ ನೀಡಬೇಕಲ್ಲ? ಹೇಳಿ ಕೇಳಿ ಇದು ಮಾಹಿತಿ ಯುಗ. ಇಂತಹ ಕಾಲಘಟ್ಟದಲ್ಲೂ ಅಭಿವೃದ್ಧಿಯ ಮಾತನಾಡದೇ ಮೋಜು ಮಾಡಿಕೊಂಡು ಬರಲು ವಿದೇಶಕ್ಕೆ ಹೋಗಿ ಬರುವವರಿದ್ದರೆ ಜನರಿಗಾದರೂ ಎಷ್ಟು ತಾಳ್ಮೆಯಿರಲು ಸಾಧ್ಯ ಹೇಳಿ.

ಇವತ್ತು ರಾಜ್ಯದ ನೂರೈವತ್ತು ತಾಲೂಕುಗಳಲ್ಲಿ ಅಂತರ್ಜಲ ಗಂಡಾಂತರದ ಸ್ಥಿತಿಗೆ ತಲುಪಿದೆ. ಇಸ್ರೇಲ್‌ಗೆ ಎಷ್ಟು ಜನ ಹೋಗಿದ್ದಾರೆ. ಅವರು ಯಾವ ರೀತಿ ನೀರನ್ನು ಕಾಪಾಡುತ್ತಾರೆ ಎಂದು ಯಾರಾದರೂ ವರದಿ ನೀಡಿದ್ದಾರಾ? ಅವರಿಂದಲೇ ನಮ್ಮಲ್ಲಿ ಸ್ಪ್ರಿಂಕ್ಲರ್ ವ್ಯವಸ್ಥೆ ಜಾರಿಗೆ ಬಂತು. ಅಡಿಗಟ್ಟಲೆ ನೀರು ನಿಲ್ಲಿಸಿ ಬೆಳೆ ಬೆಳೆಯುವ ಬದಲು ಹನಿ ನೀರಾವರಿಯ ಮೂಲಕ ಒಂದೊಂದು ಹನಿ ನೀರನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಕಲಿಸಿದವರು ಅವರು. ಕಲಿತು ಬಂದವರು ನಮ್ಮ ಅಧಿಕಾರಿಗಳು. ಅವರು ಕೊಟ್ಟ ರಿಪೋರ್ಟಿನ ಆಧಾರದ ಮೇಲೆ ಈ ವ್ಯವಸ್ಥೆ ಜಾರಿಗೆ ಬಂತು. ಆದರೆ ಇದೆಲ್ಲ ಎಷ್ಟು ದಿನ? ಕೇವಲ ತಮ್ಮ ಬಿಜಿನೆಸ್ ನೋಡಿಕೊಳ್ಳಲು, ಪ್ರಭಾವ ಬೀರಲು, ದುಡ್ಡು ಮಾಡಲು ಜನಪ್ರತಿನಿಧಿಗಳಾಗುವವರು ಹೆಚ್ಚಾಗುತ್ತಿದ್ದಂತೆಯೇ ಒಂದು ದಿನ ಜನ ತಿರುಗಿ ಬೀಳುತ್ತಾರೆ. ಇದನ್ನು ನರೇಂದ್ರಮೋದಿ ಅರಿತುಕೊಂಡಿದ್ದಾರೆ.

ಅದರರ್ಥ, ಅವರೇನೂ ಮನೆಯಿಂದ ದುಡ್ಡು ತಂದು ರಾಜಕೀಯ ಮಾಡುವುದಿಲ್ಲ. ಬದಲಿಗೆ ಕೈಗಾರಿಕೋದ್ಯಮಿಗಳು ಕೊಟ್ಟ ಸಹಕಾರದಿಂದ ಪ್ರಧಾನಿಯಾಗಿದ್ದಾರೆ. ಜನರ ಮನಸ್ಸು ಬದಲಿಸುವಂತೆ ಭಾಷಣ ಮಾಡಿದ್ದಾರೆ. ಆದರೆ ಅವರಲ್ಲೇ ಒಂದು ಆತಂಕವಿದೆ. ಈ ಅಲೆ ಬಹಳ ಕಾಲ ಇರುವುದಿಲ್ಲ ಎಂಬುದು ಗೊತ್ತಿದೆ. ಹೀಗಾಗಿ ಅವರು ಒಗ್ಗಟ್ಟಿನ ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡುವ ಕಾಲಕ್ಕೆ ಅವರು ಅನಂತಕುಮಾರ್ ಅವರ ಏಕಸ್ವಾಮ್ಯವನ್ನು ಮುರಿಯುವ ಯತ್ನ ಮಾಡಬಹುದು. ಆದರೆ ಅಂತಹ ನಾಯಕನಿಗೂ ವಸ್ತುಸ್ಥಿತಿ ಅರಿವಾಗಿದೆ. ಆದರೆ ನಮ್ಮ ಸಿದ್ದರಾಮಯ್ಯನವರಿಗೆ ಅರಿವಾಗುತ್ತಿಲ್ಲವಲ್ಲ? ಜಡ್ಡು ಗಟ್ಟಿರುವ ಆಡಳಿತ, ಯಾರು ಸಂಪುಟಕ್ಕೆ ಬಂದರೆ ನನಗೇನು ತೊಂದರೆಯೋ ಎಂಬ ಆತಂಕ. ತಮ್ಮ ತಮ್ಮ ದಾರಿಯಲ್ಲಿ ನಡೆಯುವ ಮಂತ್ರಿಗಳು. ಪ್ರಾಮಾಣಿಕವಾಗಿ ತಮ್ಮ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳಲು ಬರುವ ಶಾಸಕರನ್ನು ಯಾರೂ ಕೇಳದ ಪರಿಸ್ಥಿತಿ. ಇವೆಲ್ಲ ಬದಲಾಗಬೇಕು. ಇಲ್ಲದಿದ್ದರೆ ಮುಂದಿನ ಕೆಲ ದಿನಗಳಲ್ಲಿ ಸಿದ್ದರಾಮಯ್ಯನವರನ್ನು ಕೇಳುವವರೂ ಇಲ್ಲದಂತಾಗುತ್ತಾರೆ. ಹಾಗಾಗದಿರಲಿ, ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿ ಅದು ಜನಪರವಾಗಿರುವಂತೆ ಮಾಡುವ ಗುಣ ಅವರಲ್ಲಿ ಬರಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books