Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಸೋಲುಗಳನ್ನೆಲ್ಲ ಮರೆಸಿ ಗೆಲುವಿಗೆ ಆಸೆಯಾಗಿ ನಿಂತವಳು...

ನನ್ನ ಆವತ್ತಿನ ಸ್ಥಿತಿಯದು.
ಎಲ್ಲಿ ಕೈಯಿಟ್ಟರೂ ಸೋಲು. ಯಾವುದಕ್ಕೆ ಪ್ರಯತ್ನಿಸಿದರೂ ವಿಘ್ನ. ನನ್ನ ಮುಖ ನನಗೇ ಅಪಶಕುನ. ಅಂಗೈಯ ರೇಖೆಗಳೆಲ್ಲ ಸರ್ವನಾಶದಲ್ಲಿ ಲೀನ. ಒಂದೇ ಮಾತಿನಲ್ಲಿ ಹೇಳುವುದಾದರೆ-ಬಂಗಾರ ಮುಟ್ಟಿದರೂ ಅದು ಮಣ್ಣು!
ಆಗ ನೀನೆಲ್ಲಿದ್ದೆ ಡಿಯರ್?
ಪ್ರತಿ ಯಶಸ್ವೀ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ, ನಂಗೊತ್ತು. ಆದರೆ ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಪ್ರತಿ ಸೋಲಿನ ಹಿಂದೆಯೂ ಒಬ್ಬ ಸ್ತ್ರೀ ಬಿಟ್ಟು ಹೋದ ದುರಂತದ ನರಳಿಕೆಗಳಿರುತ್ತವೆ. ನೀನೆಲ್ಲಿದ್ದೆಯೋ ಗೊತ್ತಿಲ್ಲ: ಸುಮಾರು ವರ್ಷಗಳ ಕಾಲ ನಾನು ಒಂದು ಪರ್ಸನಲ್ ಆದ ಅವಮಾನವನ್ನು ಉಸಿರೆತ್ತದೆ ಭರಿಸಿಬಿಟ್ಟೆ. ಪ್ರತಿ ಬಾರಿ ಎದ್ದು ನಿಲ್ಲುವ ಯತ್ನ ಮಾಡಿದಾಗಲೂ ಒಂದು ಹೊಡೆತ ಬೀಳುತ್ತಿತ್ತು. "ಅವನಾ? ಅವನ ಕೈಲಿ ಇನ್ನೇನೂ ಮಾಡಕ್ಕಾಗಲ್ಲ ಬಿಡಿ" ಅಂತ ತೀರಾ ಹತ್ತಿರದವರೇ ಅನ್ನತೊಡಗಿದರು. ತಮಾಷೆ ಗೊತ್ತ? ನನ್ನ ಕೈಲಿ ಏನೇನೂ ಮಾಡಲಿಕ್ಕಾಗುವುದಿಲ್ಲ ಅನ್ನುವುದು ಅವರೆಲ್ಲರಿಗಿಂತ ಮುಂಚೆಯೇ ನನಗೆ ಖಾತರಿಯಾಗಿ ಹೋಗಿತ್ತು. ಅವತ್ತೊಂದು ದಿನ ಶಿವರಾಮು ಮೇಷ್ಟ್ರು ಸಿಕ್ಕಿದ್ದರು. ನಿಂಗೂ ಅವರು ಗೊತ್ತು. ಹುಣಸೇ ತೋಟದ ರಸ್ತೆಯಲ್ಲಿ ನಾವಿಬ್ಬರೂ ಧೈರ್ಯ ಮಾಡಿ ಕೈ ಕೈ ಹಿಡಿದುಕೊಂಡು ಓಡಾಡಿದುದನ್ನು ಮೊಟ್ಟ ಮೊದಲ ಬಾರಿಗೆ ನೋಡಿದವರೇ ಅವರು. ನೋಡಿಯೂ ನೋಡದಂತೆ, ಒಳಗೇ ಏನನ್ನೋ ಹಾರೈಸಿಕೊಂಡು ಹೊರಟು ಹೋಗಿದ್ದರು. ಸಣ್ಣ ಸೈಜಿನ ಸಂಬಳವಿದ್ದ ದೊಡ್ಡ ಮನಸ್ಸಿನ ಮೇಷ್ಟ್ರು. ಈ ಸಲ ಫೇಲಾಗುತ್ತೇನೆ ಅಂತ ನನಗೇ ಗೊತ್ತಿರುತ್ತಿತ್ತು. "ಇನ್ನೊಂದಿಷ್ಟು ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆದು ಬಿಡೋ ರವೀ, ಫಸ್ಟ್ ಕ್ಲಾಸಲ್ಲಿ ಪಾಸಾಗಿಬಿಡ್ತೀಯ" ಅಂದು ಬೆನ್ತಟ್ಟುತ್ತಿದ್ದರು. ಸೋಲುವ ಹುಡುಗರನ್ನು ಕಂಡರೆ ಏನೋ ಅಕ್ಕರೆ. ಡಿಬೇಟಿಗೆ ಹೊರಡುವಾಗ ಧೈರ್ಯ ಹೇಳಿ ಕಳುಹಿಸುತ್ತಿದ್ದರು. ಷೀಲ್ಡು ಗೆದ್ದು ಹಿಂತಿರುಗಿದರೆ ಕಂಗ್ರಾಟ್ಸ್ ಹೇಳಲು ಕೂಡ ಅವರು ಇದಿರಾಗುತ್ತಿರಲಿಲ್ಲ. ಪ್ರೈಜಿಲ್ಲದೆ ಬರಿಗೈಲಿ ವಾಪಸು ಬರುವಾಗ ಮಾತ್ರ ಬಾಗಿಲಲ್ಲೇ ಇದಿರಾಗಿ ೞಎಷ್ಟೊಳ್ಳೆ ಪಾಯಿಂಟ್ಸು ಹೇಳಿದೆ ರವೀ. ಇನ್ನೊಂದಿಷ್ಟು ಚೆನ್ನಾಗಿ ಪ್ರಿಪೇರ್ ಆಗಿದ್ದಿದ್ದರೆ ಷೀಲ್ಡು ನಿಂಗೇ ಸಿಕ್ತಿತ್ತು. Try next time ಅಂದು ಕೆನ್ನೆ ತಟ್ಟಿ ಕಣ್ಮರೆಯಾಗುತ್ತಿದ್ದರು. ಮಾರ್ಚಿನಲ್ಲಿ ಸೋತವರಿಗೆ ಸೆಪ್ಟಂಬರನ್ನೂ, ಸೆಪ್ಟಂಬರ್‌ನಲ್ಲಿ ಸೋತವರಿಗೆ ಮತ್ತೊಂದು ಮಾರ್ಚನ್ನು ತೋರಿಸಿ ಹುರಿದುಂಬಿಸಿದಂಥ ಮೇಷ್ಟ್ರು, ಅದೊಂದು ದಿನ ಸಿಕ್ಕು:

"ನಿಂಗೆ ನಂಬ್ಕೆ ಇದೆಯೋ ಇಲ್ವೋ ಅದು ಬೇರೆ ವಿಷ್ಯ. ಯಾಕಾದರೂ ಆಗಿರ‍್ಲಿ, ಒಂದ್ಸಲ ನರಸಿಂಹ ಶಾಸ್ತ್ರಿಗಳಿಗೆ ನಿನ್ನ ಜಾತಕ ತೋರಿಸಿಬಿಡು ರವೀ" ಅಂದಾಗ ಮಾತ್ರ ಕುಸಿದುಹೋಗಿದ್ದೆ.
ಅಲ್ಲಿಗೆ ಬಂದುಮುಟ್ಟಿತೇ ನನ್ನ ಬದುಕು? ನನ್ನಿಂದ ಇನ್ನೇನೂ ಮಾಡಲಿಕ್ಕಾಗದೆ ಕಡೆಗೆ ಜಾತಕ ಒಯ್ದು ನರಸಿಂಹ ಶಾಸ್ತ್ರಿಗಳ ಮುಂದಿಟ್ಟು "ಇನ್ನೂ ಏನೇನು ಬರೆದಿದೆಯೋ ನೋಡಿ ಹೇಳಿಬಿಡಿ; ಎಲ್ಲ ಸೋಲುಗಳಿಗೂ ಇವತ್ತೇ ಸಿದ್ಧನಾಗಿಬಿಡ್ತೀನಿ'' ಅನ್ನುವ ಹಂತಕ್ಕೆ ತಲುಪಿ ಬಿಟ್ಟಿತೇ? ಶಿವರಾಮು ಮೇಷ್ಟ್ರಿಗೂ ನನ್ನ ಮೇಲಿದ್ದ ಸಾಸಿವೆ ಕಾಳಿನಷ್ಟು ವಿಶ್ವಾಸ ಹೊರಟು ಹೋಯಿತೇ? ಹಾಗನ್ನಿಸಿದ ದಿನ ನೀನು ನನ್ನೊಂದಿಗಿರಬೇಕಾಗಿತ್ತು.

Actually, ನಾನು ಸೋಲುಗಳಿಗೆ ಅಳುಕುತ್ತಿರಲಿಲ್ಲ. ನನ್ನನ್ನು ಪ್ರತೀ ಸೋಲೂ ಹಿಂಡಿ ಹಿಪ್ಪೆ ಮಾಡಿ ಹಾಕುತ್ತಿತ್ತು. ಇನ್ನೇನು ಕೆಲಸ ಸಿಕ್ಕೇ ಬಿಡ್ತು ಅಂದುಕೊಂಡು ಇದ್ದೊಂದು ಜೊತೆ ಬಟ್ಟೆಯನ್ನು ನಾನೇ ಚೊಂಬಿಗೆ ಕೆಂಡ ಹಾಕಿ ಇಸ್ತ್ರಿ ಮಾಡಿಕೊಂಡು ಹಾಕ್ಕೊಂಡು ಹೋದರೆ
"ನಿಂಗೆಂತ ಕೆಲಸ ಕೊಡೋಕಾಗ್ತದೆ?" ಎಂದು ನೇರವಾಗಿ ಮುಖಕ್ಕೆ ಹೇಳಿ ಕಳಿಸಿಬಿಡುತ್ತಿದ್ದರು. ಸಾಲ ಕೇಳಲು ಬ್ಯಾಂಕಿಗೆ ಹೋದರೆ ಬಾಗಿಲೊಳಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ. ತೀರ ನಂಬಿದವರು ಸಾಯಂಕಾಲ ಸಿಗುತ್ತಾರೆ ಅಂದುಕೊಂಡರೆ, ಅವರು ಮಧ್ಯಾಹ್ನಕ್ಕೇ ಮನೆ ಬಿಟ್ಟಿರುತ್ತಿದ್ದರು. ತಿಂಗಳಿಗೊಂದರವತ್ತು ರುಪಾಯಿ ಸಂಬಳದ ನೌಕರಿ ಸಿಕ್ಕೀತು ಎಂಬ ಭರವಸೆಯಲ್ಲಿ ಬಳ್ಳಾರಿಯಿಂದ ಮುನಿರಾಬಾದದ ತನಕ ಸೈಕಲ್ ತುಳಿದುಕೊಂಡು ಹೋದರೆ, ಅಲ್ಲೂ ಖಾಲಿ!

"ಇಷ್ಟೇ ತಾನೆ? ಸಿಕ್ಕಿದ್ದರೂ ಆ ದರಿದ್ರ ನೌಕರಿ ಯಾವನಿಗೆ ಬೇಕಾಗಿತ್ತು? ಇಲ್ಲಲ್ಲದಿದ್ದರೆ ಇನ್ನೊಂದು ಕಡೆ ಸಿಕ್ಕೀತು" ಅಂದುಕೊಂಡು ಅದ್ಯಾವುದೋ ಸುಳ್ಳೇ ಸಮಾಧಾನ ಹೇಳಿಕೊಂಡು ವಾಪಸು ಹೊರಡುತ್ತಿದ್ದೆ. ಮನೆ ತಲುಪುವ ಹೊತ್ತಿಗೆ ಸುಳ್ಳೇ ಉತ್ಸಾಹ ಸತ್ತು ಹೋಗಿ, ಕಟ್ಟೆಯ ಮೇಲೆ ನನಗೋಸ್ಕರ ಕಾಯುತ್ತ ಕುಳಿತಿರುತ್ತಿದ್ದ ಅಮ್ಮ, ಆಕೆಯ ನಿರಾಸೆ ಮತ್ತು ನನಗಿಂತ ಮುಂಚೆ ಹುಟ್ಟಿ ನನಗೋಸ್ಕರ ಕಾಯುತ್ತ ನಿಂತಿದೆಯೇನೋ ಎಂಬಂತಹ ದೌರ್ಭಾಗ್ಯವೆಲ್ಲ ಮುಗಿಬಿದ್ದಂತಾಗಿ ಎಷ್ಟೊಂದು ಅತ್ತುಬಿಡುತ್ತಿದ್ದೆ ಗೊತ್ತ?

ಆಗ ನೀನಿರಬೇಕಿತ್ತು.
ಬೇರೇನಕ್ಕೂ ಅಲ್ಲ; ಮರುದಿನ ನಾನು ಎದುರಿಸಬೇಕಿದ್ದ ಮತ್ತೊಂದು ಸೋಲಿಗೆ, ಮಗದೊಂದು ಡಿಫೀಟಿಗೆ ನನ್ನನ್ನು ಅಣಿ ಮಾಡಲಿಕ್ಕಾದರೂ ನೀನಿರಬೇಕಿತ್ತು. ಅಂಗಳದಲ್ಲಿ ನೀನೊಬ್ಬಳು ನಿಂತು ರಿಸೀವ್ ಮಾಡಿಕೊಂಡಿರುತ್ತಿದ್ದಿದ್ದರೆ ಡಿಯರ್, ನಾನು ಕಟ್ಟ ಕಡೆಯ ದಿನದ ತನಕ ಸೋಲುಗಳನ್ನು ದಾನ ಪಡೆದು ಮನೆಗೆ ಹಿಂತಿರುಗಲು ತಯಾರಿದ್ದೆ.
ಆದರೇನು ಮಾಡಲಿ? ನೀನೇ ನನ್ನ ಬದುಕಿನ ಮೊದಲ ಸೋಲು. ನಿನ್ನ ನಂತರ ಬಂದದ್ದು ಸರಣಿ ಸೋಲುಗಳ ಅಕ್ಷೋಹಿಣೀ ಸೈನ್ಯ. ಏನೇನೆಲ್ಲ ಮಾಡಿ ಸೋತೆನಲ್ಲ ಅಂತ ನೆನಪಿಸಿಕೊಂಡರೆ ಇವತ್ತು ದೊರಕಿರುವ ಗೆಲುವು ಕೂಡ ಶುದ್ಧ ಭ್ರಮೆಯೇನೋ ಅನಿಸಿಬಿಡುತ್ತದೆ. ಮೊದಲು ಪ್ರೀತಿಸಿ ಸೋತೆ. ನಿನ್ನನ್ನು ನಂಬಿ ಸೋತೆ. ಅಭಿಮಾನಿಸಿ ಸೋತೆ. ಆಸೆಪಟ್ಟು ಸೋತೆ. ಕಡೇ ಪಕ್ಷ ದೂರ ನಿಂತಾದರೂ ನಿನ್ನನ್ನು ನನ್ನಷ್ಟಕ್ಕೆ ನಾನು ಪ್ರೀತಿಸೋಣವೆಂದುಕೊಂಡರೆ ಅಲ್ಲೂ ಗೆಲ್ಲಲಾಗಲಿಲ್ಲ. ನಿನ್ನ ಅಸಡ್ಡೆ, ವಂಚನೆ, ಕ್ರೌರ್ಯ, ಅಮಾಯಕತೆಯ ಹೊಕ್ಕುಳಲ್ಲೇ ಹುಟ್ಟಿ ನಿಂತ ಅಮಾನುಷ ವರ್ತನೆಗಳು ಕರುಣಿಸಿದ ಎಲ್ಲ ಸೋಲುಗಳನ್ನೂ ಒಂದಾದ ಮೇಲೊಂದರಂತೆ ಅನುಭವಿಸಿದೆ. ಅಲ್ಲಿಗೆ ಎಲ್ಲವೂ ಮುಗಿದು ಹೋಗಿದ್ದರೆ ಒಳ್ಳೆಯದಿತ್ತು.

ಆದರೆ ನನ್ನೊಳಗೊಬ್ಬನಿದ್ದಾನಲ್ಲ; ಕೆಡವಿ ಕೊಲ್ಲಲಾಗದಂಥ ಆಪ್ಟಿಮಿಸ್ಟು? ಅವನು ಚಿತಾವಣೆ ಮಾಡತೊಡಗಿದ. ಒಂದು ಚಿಕ್ಕ ಗೆಲುವು ಸಾಕು; ಇಡೀ ಜಗತ್ತನ್ನೇ ಗೆದ್ದು ಬಿಡುತ್ತೀ. ಏಳು ಮೇಲೆ; ಎದ್ದು ಹೊರಡು ಅಂದ. ಮೊಟ್ಟ ಮೊದಲನೆಯದಾಗಿ ನನ್ನೊಳಗಿನ ನಾಚಿಕೆ ಕಳೆದುಬಿಟ್ಟ. ಅವಳಿಂದಲೇ ತಿರಸ್ಕೃತನಾದ ಮೇಲೆ ಇನ್ನೆಂಥ ಹಮ್ಮು ರವೀ? ಇದ್ದ ಆತ್ಮಾಭಿಮಾನವನ್ನೆಲ್ಲ ಪ್ರೀತಿ ಕೊಂದು ಹಾಕಿದೆ. ಇನ್ನು ಕೇಳಲಿಕ್ಕೇನಂತೆ? ಎಲ್ಲಿ ಬೇಕಾದರೂ ಕೇಳು. ಎಂಥ ಕೆಲಸ ಬೇಕಾದರೂ ಕೇಳು. ಯಾರ ಮನೆಯ ಮುಂದೆ ಬೇಕಾದರೂ ನಿಂತು "ದೇಹೀ" ಅನ್ನು. ಮುಚ್ಚಿದ ಬಾಗಿಲ ಮುಂದೆ ನಿಂತು ಭಿಕ್ಷೆ ಬೇಡುವುದಿಲ್ಲ ಎಂಬ ನಿನ್ನ ಒಣ ಪ್ರತಿಷ್ಠೆ ಇದೆಯಲ್ಲ? ಬೆಂಕಿ ಹಾಕು ಅದಕ್ಕೆ. ನಿನ್ನ ಬದುಕಿನ ಎಲ್ಲ ಬಾಗಿಲುಗಳೂ ಮುಚ್ಚಿ ಹೋಗಿವೆ. ಇಷ್ಟಕ್ಕೂ ನೀನು ಕೇಳುತ್ತಿರುವುದು ನೌಕರಿಯೇ ಹೊರತು ಭಿಕ್ಷೆ ಅಲ್ಲವಲ್ಲ?


ನನ್ನೊಳಗಿನ ಆಶಾವಾದಿ ಮಹಾ ನಿರ್ಲಜ್ಜ. ಥೇಟರೊಂದರಲ್ಲಿ ಟಿಕೇಟು ಹರಿಯುವ, ಗೇಟಿಗೆ ನಿಲ್ಲುವ, ಥೇಟರು ಸಾವ್ಕಾರನಿಗೆ ಕಾಫಿತಿಂಡಿ ತಂದುಕೊಡುವ ಕೆಲಸಕ್ಕೆ ಸೇರಿಸಿದ.Oh,yes, ಅದನ್ನೇ ಅದ್ಭುತವಾಗಿ ಮಾಡಿದೆ. ಆ ಕಾಲದಲ್ಲಿ ಒಂದು ವಿಚಿತ್ರ ನಂಬಿಕೆ ಜನಜನಿತವಾಗಿತ್ತು. ಇವತ್ತಿಗೂ ಅದನ್ನು ಕೆಲವರು ನಂಬುತ್ತಾರೇನೋ? A ಎಂಬ ಅಕ್ಷರದಿಂದ ಹಿಡಿದು Z ತನಕ ಅರ್ಧ ವೃತ್ತಾಕಾರದಲ್ಲಿ ಬರೆದಿಡಬೇಕು. ಅದರ ನಟ್ಟ ನಡುವೆ ಎಂಟಾಣೆಯದೊಂದು ನಾಣ್ಯವನ್ನಿರಿಸಿ ಕ್ರಿಶ್ಚಿಯನ್ನರು ನಂಬುವ holy spirit(ಪವಿತ್ರ ಆತ್ಮ) ಅನ್ನು ಆಹ್ವಾನಿಸಬೇಕು. ಎಂಟಾಣೆಯ ಮೇಲೆ ಬೆರಳಿಟ್ಟುಕೊಂಡು ಪ್ರೇತಾತ್ಮವನ್ನು ಸ್ಮರಿಸಿಕೊಂಡರೆ ನಿಮ್ಮ ನಿಯಂತ್ರಣವೇ ಇಲ್ಲದೆ ನಿಮ್ಮ ಬೆರಳಡಿ ಇರುವ ನಾಣ್ಯ ಚಲಿಸತೊಡಗುತ್ತದೆ. ನೀವು ಕೇಳಿದ ಪ್ರಶ್ನೆಗೆ ಆ ನಾಣ್ಯ ಒಂದೊಂದು ಅಕ್ಷರದ ಬಳಿಗೂ ಹೋಗಿ ತನ್ನ ಉತ್ತರ ಸೂಚಿಸುತ್ತದೆ. "ನನ್ನ ಹುಡುಗಿಯ ಹೆಸರೇನು" ಅಂತ ಕೇಳಿದ ಕೂಡಲೇ ನಾಣ್ಯವು ಇಂಗ್ಲಿಷ್ ಅಕ್ಷರಗಳ ಸುತ್ತ ತಿರುಗಿ ಅವಳ ಹೆಸರಿನ ಸ್ಪೆಲ್ಲಿಂಗ್ ಏನೆಂಬುದನ್ನು ಸೂಚಿಸಿಬಿಡುತ್ತಿತ್ತು. ಕ್ರಮೇಣ ಈ ಹುಚ್ಚು ನನ್ನನ್ನು ಎಷ್ಟು ತೀವ್ರವಾಗಿ ವ್ಯಾಪಿಸಿಕೊಂಡಿತೆಂದರೆ, holy spirit ಕರೆಸಿಕೊಂಡು ದಿನಕ್ಕೊಂದು ಸಲ "ಮುಂದೆ ನಾನೇನಾಗುತ್ತೇನೆ?" ಎಂದು ಕೇಳುತ್ತಿದ್ದೆ. ಅದು ಪ್ರತಿ ಸಲವೂ ಸೂಚಿಸುತ್ತಿದ್ದ ಇಂಗ್ಲಿಷ್ ಅಕ್ಷರಗಳ ಒಟ್ಟು ಮೊತ್ತವಿಷ್ಟೆ:
"SANGAM TALKIES MANAGER "

ಆದರೆ ಅಲ್ಲಿಂದಲೂ ಸೋತು ಹೊರಬಿದ್ದೆ. ಯಾರದೋ ಮನೆಗೆಲಸಕ್ಕೆ ಸೇರಿಕೊಂಡೆ. ಅಂಗಡಿಗಳಲ್ಲಿ ಕೆಲಸ ಮಾಡಿದೆ. ಮೆಡಿಕಲ್ ರೆಪ್ರೆಸೆಂಟೇಟಿವ್ ಆದೆ. ಹೈಸ್ಕೂಲಿನಲ್ಲಿ ಶಿಕ್ಷಕನಾದೆ. ಕಾಲೇಜಿಗೆ ಉಪನ್ಯಾಸಕನಾದೆ. ದಿವಿನಾಗಿ ನಾಲ್ಕು ಎಮ್ಮೆ ತಂದು ಕಟ್ಟಿ ಗೌಳಿಗನಾದೆ. ಹಾಲು ಕರೆದೆ, ಹಾಲು ಮಾರಿದೆ. ಸಗಣಿ ಕಸ ಬಳಿದೆ. ಹೊಟೇಲುಗಳಲ್ಲಿ ಕೆಲಸ ಮಾಡಿದೆ. ಹೊಟೇಲಿನ ರಿಸೆಪ್ಶನಿಸ್ಟ್ ಆದೆ. ಅಸಲಿಗೆ ನನಗೆ ಏನು ಬೇಕಿತ್ತು ಎಂಬುದನ್ನೇ ಅರ್ಥ ಮಾಡಿಕೊಳ್ಳದೆ ಏನೆಲ್ಲ ಮಾಡಿದೆ.

ಯಾವುದರಲ್ಲಿ ಗೆದ್ದೆ?
ಪ್ರತಿಯೊಂದರಲ್ಲೂ ಸೋಲೇ. ಆ ಕಾಲಕ್ಕೆ ಒಂದು ಲಕ್ಷ ರುಪಾಯಿ ಸಾಲ ಮಾಡಿ ಅಮ್ಮ ಕಟ್ಟಿದ ಮನೆ ಒತ್ತೆ ಹಾಕಿ ಪ್ರಿಂಟಿಂಗ್ ಪ್ರೆಸ್ಸು ಅಂತ ಪ್ರಾರಂಭಿಸಿದೆ. ನನ್ನ ಕಮ್ಯುನಿಸ್ಟ್ ನಂಬಿಕೆಗಳಿಗೆ ಧಕ್ಕೆ ಬರಬಾರದು ಎಂಬ ಕಾರಣಕ್ಕಾಗಿ, ಪ್ರಿಂಟಿಂಗ್ ಪ್ರೆಸ್ಸನ್ನು ಪರಿಶುದ್ಧ ಅಮಾವಾಸ್ಯೆಯಂದು, ನೋಡೀ ನೋಡಿ ರಾಹುಕಾಲದಲ್ಲೇ ಉದ್ಘಾಟಿಸಿದೆ. ಬಂದ ಮುಖ್ಯ ಅತಿಥಿ ಉದ್ಘಾಟನೆಗೆಂದು ಪ್ರಿಂಟಿಂಗ್ ಮಷೀನಿನ ಸ್ವಿಚ್ಚು ಹಾಕಿದರೆ, ಆ ಕ್ಷಣಕ್ಕೆ ಸರಿಯಾಗಿ ಕರೆಂಟು ಹೋಯಿತು. ಮುಂದೆ ಪ್ರಿಂಟಿಂಗ್ ಪ್ರೆಸ್ಸೇ ಮುಚ್ಚಿ ಹೋಯಿತು. ಅದರ ಮಷೀನು, ಅಚ್ಚಿನ ಮೊಳೆ, ಫರ್ನೀಚರ್ರು ಎಲ್ಲವನ್ನೂ ನನ್ನ ಸಮೇತ ತೂಕಕ್ಕೆ ಹಾಕಿದರೂ ಒಂದು ಲಕ್ಷ ರುಪಾಯಿ ಹುಟ್ಟಲಿಲ್ಲ. ಮೊದ್ದು ಮುಂಡೇ ಮಗನೇ, ಹಿರಿಯರ ಮಾತು ಕೇಳಿದೆಯಾ? ರಾಹುಕಾಲ, ಅಮಾವಾಸ್ಯೆ ವೇಳೆಯಲ್ಲಿ ಇಂಥದ್ದನ್ನೆಲ್ಲ ಪ್ರಾರಂಭಿಸಬೇಡವೋ ಅಂತ ಹೇಳಿದರೂ ಕೇಳಿದೆಯಾ ಅಂತ ಅಮ್ಮನ ಸಹಿತವಾಗಿ ಎಲ್ಲರೂ ಬೈದರು. ಏನು ಫಾಯಿದೆ?

ಅಮಾವಾಸ್ಯೆ ನನ್ನನ್ನು ನೀನು ಕೈಬಿಟ್ಟು ಹೋದ ದಿನವೇ ಆಕ್ರಮಿಸಿಕೊಂಡಿತ್ತು. ನನ್ನ ಬದುಕಿನ ಪ್ರತಿಕಾಲವೂ ರಾಹುಕಾಲವೇ ಎಂಬುದು ಯಾವತ್ತೋ ತೀರ್ಮಾನಿಸಿಯಾಗಿತ್ತು. ಪ್ರಿಂಟಿಂಗ್ ಪ್ರೆಸ್ಸಿನ ಮೊಳೆಗಳನ್ನೆಲ್ಲ ಮೂಟೆಗಳಿಗೆ ಸುರುವಿ, ಮಷೀನು ಬಿಚ್ಚಿ ಮಡಚಿಟ್ಟು, ಎಲ್ಲವನ್ನೂ ಒಂದು ಲಾರಿಗೆ ಹೇರಿ ಕಳಿಸಿಕೊಟ್ಟ ನಂತರ ಪ್ರೆಸ್ಸಿನೆದುರಿಗಿನ ಅಂಗಳದಲ್ಲಿ ಬೇವಿನ ಮರದ ಕೆಳಗೆ ಒಬ್ಬನೇ ಕುಳಿತು ಭೋರಿಟ್ಟು ಅತ್ತುಬಿಟ್ಟಿದ್ದೆನಲ್ಲ?
ಎಲ್ಲಿದ್ದೆ ಚಿನ್ನಾ ಆವತ್ತು?

ಕಾಲೇಜಿನ ನೌಕರಿ ಕಳೆದುಕೊಂಡು ಹಿಂತಿರುಗಿದ ದಿನ? ದೇವರು ಸಿಗಲಿಲ್ಲವೆಂದು ಹಿಮಾಲಯದಿಂದ ಇಳಿದು ಬಂದ ದಿನ? ಎಮ್ಮೆಕರು ಸತ್ತು ಹೋಗಿ ತುಂಬು ಕೆಚ್ಚಲಿನ ಎಮ್ಮೆ ಬಸವಳಿದು ನೆಲಕ್ಕೆ ಬಿದ್ದ ದಿನ? ಕಡೆಗೆ ಬಸ್‌ಸ್ಟ್ಯಾಂಡಿನಲ್ಲಿ ನಿಂತು "ಪ್ರಜಾವಾಣೀ ಪ್ರಜಾವಾಣೀ" ಅಂತ ಕೂಗಿ, ಬಸ್ಸು ಬಸ್ಸು ಹತ್ತಿಳಿದು ಒಂದೇ ಒಂದು ಕಾಪಿ ಮಾರಲಾಗದೆ ವಾಪಸು ಬಂದ ದಿನ? ಅವತ್ತೆಲ್ಲಿದ್ದೆ? ನನ್ನ ಸಮಸ್ತ ಸೋಲುಗಳ ಸಾಮ್ರಾಜ್ಞಿಯೇ; ಇವತ್ತಿನ ತನಕ ನಿಂಗೊತ್ತಿಲ್ಲದ ವಿಷಯವೊಂದಿದೆ ಹೇಳುತ್ತೇನೆ ಕೇಳು. ವರ್ಷಕ್ಕೆ ಎರಡು ಸಲವಾದರೂ ನೀನು ಮಂತ್ರಾಲಯಕ್ಕೆ ಹೋಗುತ್ತೀ ಅಂತ ಗೊತ್ತಿತ್ತಲ್ಲ? ಹೋದರೆ, ಬಳ್ಳಾರಿಯಿಂದ ರೈಲು ಹತ್ತಿ ಗುಂತಕಲ್ಲು ಮಾರ್ಗವಾಗಿಯೇ ಹೋಗಬೇಕು ಅಂತ ಕೂಡ ಗೊತ್ತಿತ್ತು. ಅಲ್ಲೆಲ್ಲಾದರೂ ಅಕಸ್ಮಾತ್ತಾಗಿ ಸಿಕ್ಕುಬಿಡುತ್ತೀಯೇನೋ ಎಂಬ ಆಸೆಯಿಂದ ಗುಂತಕಲ್ಲು ರೈಲ್ವೆ ಸ್ಟೇಷನ್ನಿನಲ್ಲಿ ಯಾವುದಾದರೊಂದು ಚಿಕ್ಕ ಕೆಲಸಕ್ಕೆ ಸೇರಿಕೊಂಡು ಬಿಡೋಣವೇ ಎಂದು ಯೋಚಿಸಿದ್ದ ಈಡಿಯಟ್ ನಾನು! ದುರಂತವೆಂದರೆ, ಅಲ್ಲೂ ಕೆಲಸ ಕೇಳಲು ಹೋಗಿ ಅಪಶಕುನ ಅನ್ನಿಸಿಕೊಂಡು ಹಿಂತಿರುಗಿಬಿಟ್ಟೆ.

ಹೀಗೆ ಪ್ರತಿಯೊಂದು ಸೋಲಿನ ಮೆರವಣಿಗೆಯನ್ನು ತಂದು ಅಂಗಳದಲ್ಲಿಳಿಸಿದಾಗಲೂ ನನ್ನ ಕಣ್ಣು ಹುಡುಕುತ್ತಿದ್ದುದು ನಿನ್ನನ್ನೇ!
ನೀನು ಮಾತ್ರ ಯಾವತ್ತೂ ಅಲ್ಲಿರಲಿಲ್ಲ.
ಇದ್ದವಳನ್ನು ನಾನು ಗಮನಿಸಲಿಲ್ಲ. ಅಮ್ಮನಿಂದ ಒದೆ ತಿಂದ ಮಗುವು ಮತ್ತೆ ಅದೇ ಅಮ್ಮನಿಂದ ಸಮಾಧಾನ ಹೇಳಿಸಿಕೊಳ್ಳಲು ಓಡಿ ಬರುತ್ತದಲ್ಲ? ಹಾಗೆ ಪದೇ ಪದೇ ನಿನ್ನ ನೆನಪುಗಳಿಗೆ ಮರಳಿದೆ. ಇವೆಲ್ಲ ಸೋಲುಗಳಿಗೆ ನೀನೇ ಕಾರಣ ಅಂತ ಶಪಿಸಿದೆ. ಗೆದ್ದರೆ ನಿನ್ನ ಹಾರೈಕೆಯಿಂದಲೇ ಗೆಲ್ಲಬೇಕೆಂದು ಭ್ರಮಿಸಿದೆ. ನೀನಿಲ್ಲದ ಜಾಗದಲ್ಲಿ ಇರಲೇಕೂಡದೆಂದು ನಿರ್ಧರಿಸಿದೆ. ಹೆಸರೇ ಇಲ್ಲದ ರೈಲು ಹತ್ತಿ ಗೊತ್ತೇ ಇಲ್ಲದ ಗುರಿಗಳನ್ನು ಹುಡುಕಿಕೊಂಡು ಪಯಣಿಸಿದೆ. ಯಾವ ನಿಲ್ದಾಣದಲ್ಲಿ ಇಳಿದರೂ ಇದಿರಾಗುತ್ತಿದ್ದುದು ಸೋಲೇ. ಅಂತಿಮವಾಗಿ ರೈಲು ನನ್ನ ಅಂಗಳಕ್ಕೇ ತಂದಿಳಿಸಿತು. ಆವತ್ತು ನೀನು ಅಲ್ಲಿರಲಿಲ್ಲ. ಅವಳಿದ್ದಳು!

ಮತ್ತು ಮೊಟ್ಟ ಮೊದಲ ಬಾರಿಗೆ ಅವಳನ್ನು ಗುರುತಿಸಿದೆ. "ಮತ್ತೆ ಸೋತು ಬಂದೆಯಾ?" ಅಂತ ಕೇಳಲಿಲ್ಲ ಆಕೆ. ಸೋಲು ಗೆಲುವಿನ ಮಾತು ಹಾಗಿರಲಿ; ನಿನಗೋಸ್ಕರ ನಿನ್ನೆಯಿಡೀ ಉಪವಾಸವಿದ್ದು ಇವತ್ತಷ್ಟೆ ನಾನು ಮಾಡಿಟ್ಟ ಒಂದು ಬೊಗಸೆ ಅನ್ನವಿದೆ. ಮೊದಲು ಉಂಡು ಬಿಡು. ಹಸಿದ ಹೊಟ್ಟೆ ದುಃಖ ಹೆಚ್ಚಿಸುತ್ತದೆ ಅಂದಳು. ಆಮೇಲೆ ಕೂಡ ಅವಳು ಡಿಫೀಟುಗಳ ಬಗ್ಗೆ ಮಾತನಾಡಲಿಲ್ಲ. ಎಷ್ಟೊಳ್ಳೆ ಮೇಷ್ಟ್ರು ಗೊತ್ತಾ ನೀನು? ಪಾಠ ಮಾಡಲು ನಿಂತರೆ ಜಗತ್ತು ಮರೀತೀಯ. ಅದಕ್ಕಿಂತ ಚೆಂದ ಅಂದರೆ ನೀನು ಬರೆಯೋದು! ಮೊನ್ನೆ ನಿನ್ನ ಹಳೇದೊಂದು ಕಥೆ ಎಲ್ಲೋ ಸಿಕ್ತು. ಪದೇ ಪದೇ ಓದಿದೆ. ಬೇರೇದೆಲ್ಲ ಮರೆತು ಶ್ರದ್ಧೆಯಿಂದ ಬರೆಯಲು ಕೂತರೆ ನೀನು ಬೆಸ್ಟು ಕತೆಗಾರ. ಬದುಕಿಗೆ, ಸಾಲ ಮಾಡದೆ ಜೀವಿಸೋದಕ್ಕೆ ಎಷ್ಟು ಬೇಕೋ ಅಷ್ಟು ವ್ಯವಹಾರದ ಬುದ್ಧಿ ಸಾಕು. ಈಗಾಗಲೇ ದುಡ್ಡು-ದುಡಿಮೆ ಅಂದ್ರೆ ಏನು ಅಂತ ನಿಂಗೆ ಗೊತ್ತಾಗಿದೆ. ಔಷಧಿ ಮಾರಿದೀಯ. ಹಾಲು ಮಾರಿದೀಯ. ಕಾಲಿಗೆ ಚಕ್ರ ಕಟ್ಟಿಕೊಂಡು ಗಿರಗಿರಾಂತ ಊರು ಸುತ್ತಿದೀಯ. ಬರೀ ಸೋತದ್ದಷ್ಟೇ ಲೆಕ್ಕ ಹಾಕಬೇಡ. ಆಗಿರೋ ಅನುಭವಗಳನ್ನೆಲ್ಲ ನೆನಪು ಮಾಡಿಕೋ. ಬರವಣಿಗೆಗೆ ಅನುಭವಗಳದೇ ಅಕ್ಷಯ ಪಾತ್ರೆ. ಇಷ್ಟು ದಿನ, ಇಷ್ಟು ವರ್ಷ ಯಾರ‍್ಯಾರಿಗೋಸ್ಕರವೋ ಬರೆದೆ. ಇನ್ನು ಮೇಲೆ ನಿನಗೋಸ್ಕರ ಬರಿ ರವೀ.

ಮನೆಯ ಫಜೀತಿಗಳನ್ನೆಲ್ಲ ನನಗೆ ಬಿಡು. ಎರಡು ಉಪವಾಸಗಳ ಮಧ್ಯೆ ಒಂದು ಊಟವನ್ನಂತೂ ಆರೇಂಜು ಮಾಡುತ್ತೇನೆ. ಮಕ್ಕಳಿನ್ನೂ ಚಿಕ್ಕವು. ಹಸಿವಷ್ಟೆ ಅರ್ಥವಾಗುತ್ತದೆ. ಅವಮಾನಗಳು ಅವಕ್ಕೆ ಅರ್ಥವಾಗುವುದಿಲ್ಲ. ನನಗೆ ಎರಡೂ ಅಭ್ಯಾಸವಾಗಿ ಹೋಗಿದೆ. ಸಾಲಗಾರರ ಕೈಗೆ ನೀನು ಸಿಗದ ಹಾಗೆ ಕೆಲವು ದಿನಗಳ ಮಟ್ಟಿಗಾದರೂ ನೋಡಿಕೊಳ್ಳುತ್ತೇನೆ. ಶ್ರದ್ಧೆಯಿಟ್ಟು ಬರೆಯಲು ಕೂಡು. ಅನೇಕ ಸಲ ಸೋತಿದ್ದೀಯ. ಆದರೆ ಇದೊಂದು ಸಲ ನನಗೋಸ್ಕರ ಸೋತು ಬಿಡು. ಸೋತರೆ ಚಿಂತೆಯಿಲ್ಲ; ಶ್ರದ್ಧೆಯಿಂದ ಬಡಿದಾಡಿ ಸೋಲು. ಬರೆಯಲು ಕೂಡುವ ಮುನ್ನ ಒಂದೇ ಒಂದು ಸಲ ಯೋಚನೆ ಮಾಡು; ನೀನು ಪ್ರತೀ ಸಲ ಸೋಲುವುದಕ್ಕೆ ಮಾಡಿದ ತಪ್ಪನ್ನೇ ಪದೇ ಪದೇ ಮಾಡಿದುದು ಕಾರಣವಲ್ಲವೆ? ನಿನ್ನ ಮುಖೇಶ್, ನಿನ್ನ ಚಲಂ, ನಿನ್ನ ಹಿಮಾಲಯ, ನಿನ್ನ ಕುಡಿತ-ಇವೆಲ್ಲ ನಿನ್ನ ದುಃಖಕ್ಕೆ ಅಲಂಕಾರಗಳು ಮಾತ್ರವೇನಾ ಮಿತ್ರಾ? ಅವು ನಿನ್ನ ಬರವಣಿಗೆಗೆ, ನಿನ್ನ ಗೆಲುವಿಗೆ, ನಿನ್ನ ಮಹಾಯಾತ್ರೆಯ ಆರಂಭಕ್ಕೆ ನೀನೇ ಕಟ್ಟಿಕೊಂಡ ಬುತ್ತಿಗಳಲ್ಲವೆ? ಅಂಗಳಕ್ಕೆ ಇಣುಕಬೇಡ. ಅಲ್ಲಿ ಸಾಲದವರಿದ್ದಾರೆ. ಸಮಸ್ಯೆಗಳಿವೆ. ಮಕ್ಕಳು ಹಸಿದು ಕುಳಿತಿದ್ದಾರೆ.
ಅದಕ್ಕೂ ನಿನಗೂ ಸಂಬಂಧವೇ ಇಲ್ಲ ಅಂದುಕೊಂಡು ತೆಪ್ಪಗೆ ಬರೆಯಲು ಕೂಡು. ಉಳಿದದ್ದನ್ನೆಲ್ಲ ನಾನು ಸಂಭಾಳಿಸುತ್ತೇನೆ. ಈ ಸಲವೂ ಸೋತು ಹೋದರೆ ರವೀ, leave it to me. ಮುಂದೆ ಸಾಯೋತನಕ ಯುದ್ಧವೆಲ್ಲ ನನ್ನದೇ. ಇದೊಂದು ಸಲ ನೀನು ಬಡಿದಾಡು ಅಂತ ಯಾಕೆ ಪ್ರೇರೇಪಿಸಿದಳೋ?

ಆವತ್ತು ಸದ್ಯ, ನೀನಿರಲಿಲ್ಲ.
ಎಲ್ಲ ಬರೆದಿಟ್ಟಾದ ಮೇಲೆ ಒಳಮನೆಯ ಮೂಲೆ ಕೋಣೆಯ ದೀಪವಾರಿಸುವ ಮುನ್ನ ಅವಳ ಬಳಿಗೆ ಹೋಗಿ ಹದಿನಾಲ್ಕನೇ ಸಲ ಎಸೆಸೆಲ್ಸಿಗೆ ಕಟ್ಟಿದ ಹುಡುಗ ಕೇಳಿದಂತೆ ಕೇಳಿದ್ದೆ:
"ಲಲಿತಾ, ಈ ಪೇಪರು ಸಕ್ಸಸ್ಸಾಗುತ್ತಾ?"
ಆವತ್ತು ನೀನಿರಲಿಲ್ಲ. ನಿನಗೆ ಋಣಿ.

ನನ್ನ ಗೆಲುವಿಗೆ ಈ ಸಲದ ಸೆಪ್ಟಂಬರ್ ೨೫ ಬಂದರೆ ಹತ್ತೊಂಬತ್ತು ವರ್ಷ ತುಂಬಿ ಇಪ್ಪತ್ತರ ಹರೆಯ ಆರಂಭವಾಗಿಬಿಡುತ್ತದೆ.
ಲಲಿತೆಯೊಂದಿಗಿನ ನನ್ನ ದಾಂಪತ್ಯ ಜೀವನಕ್ಕೆ ಮೇ ೨೩ಕ್ಕೆ ಬರೋಬ್ಬರಿ ಮೂವತ್ತೇಳು ವರ್ಷ. ನನ್ನೆಲ್ಲ ಯಶಸ್ಸಿನ ಹಿಂದಿರುವ ಮಾತೃ ಹೃದಯಿ ಅವಳು.
ನಿಮ್ಮದೊಂದು ಹಾರೈಕೆ ಸದಾ ಅವಳ ಪಾಲಿಗಿರಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 05 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books