Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನಂಬಿಕೆಯೆಂಬ ದೇವರ ತಲೆ ಮೇಲೆ ಅನುಮಾನದ ಶನಿ

ನಂಗ್ಯಾಕೋ ಅನುಮಾನ.
ಕೆಲವರು ಮಾತು ಶುರು ಮಾಡುವುದೇ ಹಾಗೆ, ಅನುಮಾನದಿಂದ ಆರಂಭವಾಗುವ ಅವರ ಮಾತು ಅನುಮಾನದಲ್ಲೇ ಅಂತ್ಯ ಕಾಣುತ್ತದೆ. ಅವರು ಯಾರನ್ನೂ, ಯಾವುದನ್ನೂ ನಂಬುವುದಿಲ್ಲ. ಏನ್ಸಾರ್ ಇವತ್ತು ಬಹಳ ಸ್ಮಾರ್ಟ್ ಆಗಿ ಕಾಣುತ್ತಿದ್ದೀರಿ ಎಂದರೆ ಸಾಕು, ಈ ಮನುಷ್ಯ ಸಾಲ ಕೇಳುವುದಕ್ಕೆ ಪೀಠಿಕೆ ಹಾಕುತ್ತಿರಬಹುದು ಅನ್ನುವ ಅನುಮಾನ. ಮಗನ ಗೆಳೆಯ ಎಸೆಸೆಲ್ಸಿಯಲ್ಲಿ ತೊಂಬತ್ತು ಪರ್ಸೆಂಟು ತೆಗೆದುಕೊಂಡ ಎಂದಾಕ್ಷಣ ಅವನು ಪರೀಕ್ಷೆಯಲ್ಲಿ ಕಾಪಿ ಹೊಡೆದಿರಬಹುದಾ ಅನ್ನುವ ಅನುಮಾನ. ತನ್ನ ಮನೆಯ ಪಕ್ಕದ ಸೈಟಲ್ಲೊಂದು ಮೂರಂತಸ್ತಿನ ಮನೆ ತಲೆ ಎತ್ತುತ್ತಿದ್ದಂತೆಯೇ ಮನೆಯಾಕೆ ಗೊಣಗುತ್ತಾಳೆ, “ನಂಗ್ಯಾಕೋ ಅನುಮಾನ, ಇಷ್ಟೊಂದು ದೊಡ್ಡ ಮನೆ ಕಟ್ಟಿಸುವುದಕ್ಕೆ ಈಯಪ್ಪನ ಕೈಲಿ ದುಡ್ಡೆಲ್ಲಿಂದ ಬಂತು. ಯಾರದೋ ತಲೆ ಒಡೆದಿರಬೇಕು ಅಥವಾ ಚೆನ್ನಾಗಿ ಲಂಚ ತಿಂದಿರಬೇಕು".


ಇದು ಅಸೂಯೆಯಿಂದ ಹುಟ್ಟುವ ಅನುಮಾನ. ವಾಸ್ತವದಲ್ಲಿ ಆ ಮೂರಂತಸ್ತಿನ ಮನೆ ಕಟ್ಟುವವನು ತನ್ನ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದಿರಬಹುದು, ಒಂದು ಕಾಲದಲ್ಲಿ ಒಂದು ತುತ್ತು ಅನ್ನಕ್ಕೂ ಪರದಾಡಬೇಕಾದ ಸ್ಥಿತಿಯಲ್ಲಿ ಅವನಿದ್ದಿರಬಹುದು, ತನ್ನ ಅಪ್ಪ ಅಮ್ಮ, ಅಣ್ಣ-ತಮ್ಮ, ಅಕ್ಕತಂಗಿಯರಿಗೆಲ್ಲಾ ಪ್ರೈವಸಿ ಸಿಗಲಿ ಅನ್ನುವ ಕಾರಣಕ್ಕೋಸ್ಕರ ಆತ ಅಷ್ಟೊಂದು ದೊಡ್ಡ ಮನೆ ಕಟ್ಟುತ್ತಿರಬಹುದು. ಇಂಥಾ ಪಾಸಿಟಿವ್ ಯೋಚನೆಗಳು ‘ಅನುಮಾನಮ್ಮ’ನ ಮನಸ್ಸಲ್ಲಿ ಬರುವುದಿಲ್ಲ, ಯಾರಲ್ಲಾದರೂ ವಿಚಾರಿಸಿ ತನ್ನ ಅನುಮಾನವನ್ನು ಪರಿಹರಿಸಿಕೊಳ್ಳೋಣ ಎಂದು ಕೂಡಾ ಆಕೆಗೆ ಅನಿಸುವುದಿಲ್ಲ. ಯಾಕೆಂದರೆ ತನ್ನ ಅನುಮಾನ ಪರಿಹಾರ ಆಗುವುದು ಆಕೆಗೆ ಬೇಕಾಗಿಯೇ ಇರುವುದಿಲ್ಲ. ಜಗತ್ತಲ್ಲಿ ಯಶಸ್ಸು ಕಂಡವರೆಲ್ಲರೂ ಅಡ್ಡದಾರಿಯಿಂದಲೇ ಮೇಲೆ ಬಂದಿರಬೇಕು ಅನ್ನುವ ತೀರ್ಮಾನಕ್ಕೆ ಆಕೆ ಬಂದು ಬಹಳ ವರ್ಷಗಳೇ ಕಳೆದಿವೆ. ಇದು gone case.

ಇಂಥಾ ಅನುಮಾನವಂತರು ಈ ಹೊತ್ತಲ್ಲಿ ಯಾಕೆ ನೆನಪಾದರು ಅನ್ನುವುದಕ್ಕೆ ಕಾರಣ ಹೇಳುತ್ತೇನೆ ಕೇಳಿ; ಕೇಂದ್ರದಲ್ಲಿ ಬಿಜೆಪಿ ಪಕ್ಷ ಯಾರ ಹಂಗೂ ಇಲ್ಲದೇ ಸರ್ಕಾರ ರಚಿಸಿದ್ದಕ್ಕೆ ಒಬ್ಬ ಬೃಹಸ್ಪತಿ ಫೇಸ್‌ಬುಕ್ಕಲ್ಲಿ ಬರೀತಾನೆ, ಬಿಜೆಪಿಯವರು ಮತಯಂತ್ರಗಳನ್ನೇ ಏನೋ ಗೋಲ್‌ಮಾಲ್ ಮಾಡಿ ಎಲ್ಲಾ ವೋಟು ತಮಗೇ ಬೀಳುವಂತೆ ಮಾಡಿರಬಹುದಾ? ಹೇಗಿದೆ ನೋಡಿ ತಮಾಷೆ? ಆತ ಹೇಳಿದ ಹಾಗಾಗಬೇಕಿದ್ದರೆ ಮೋದಿ ಪಿ.ಸಿ.ಸರ್ಕಾರ್ ಥರ ಜಾದೂಗಾರನಾಗಿರಬೇಕು ಅಥವಾ ಇಡೀ ಚುನಾವಣಾ ವ್ಯವಸ್ಥೆಯೇ ಭ್ರಷ್ಟವಾಗಿರಬೇಕು ಅಥವಾ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೇ ಬಿಜೆಪಿ ಪರವಾಗಿ ದುಡಿದಿರಬೇಕು! ತಂತ್ರಜ್ಞಾನದ ಬಗ್ಗೆ ಏನೇನೂ ಗೊತ್ತಿಲ್ಲದ ಮುಠ್ಠಾಳನೂ ಹೀಗೆ ಮಾತಾಡುವುದಕ್ಕೆ ಸಾಧ್ಯವಿಲ್ಲ. ಈ ಬಾರಿ ಮತದಾನ ಸಾಧ್ಯವಾದಷ್ಟು ಪಾರದರ್ಶಕವಾಗಿರಬೇಕೆಂದು ಹೆಣಗಾಡಿದ ಚುನಾವಣಾ ಕಮಿಷನರ್ ಸಂಪತ್ ಅವರ ಪ್ರಾಮಾಣಿಕತೆ ಮತ್ತು ಪರಿಶ್ರಮ ಇಂಥ ಜಾಣಕುರುಡರಿಗೆ ಕಾಣಿಸುವುದಿಲ್ಲ. ಇದು ಬರೀ ಅನುಮಾನ ಅಷ್ಟೇ ಅಲ್ಲ, ಸತ್ಯವನ್ನು ಒಪ್ಪಿಕೊಳ್ಳಲಾಗದ ಮನಃಸ್ಥಿತಿ. ತಮ್ಮ ಅನುಮಾನ ಸುಳ್ಳು ಎಂದು ಗೊತ್ತಿದ್ದೂ ಮಿಕ್ಕವರ ಹಾದಿ ತಪ್ಪಿಸುವುದಕ್ಕೆ ಇಂಥಾದ್ದೊಂದು ಬಾಣ ಎಸೆಯುತ್ತಾರೆ. ಇಂಥವರು ಕೂಡಾ ರಿಪೇರಿ ಆಗುವುದಿಲ್ಲ.

ಕೆಲವೊಮ್ಮೆ ಅನುಮಾನ ಉಪಯೋಗಕ್ಕೆ ಬರುತ್ತದೆ. ಪತ್ರಕರ್ತನಿಗಿರಬೇಕಾದ ಮೊದಲ ಅರ್ಹತೆ ಏನು ಎಂದಾಗ ಒಬ್ಬ ಹಿರಿಯ ವರದಿಗಾರರು ಹಿಂದೊಮ್ಮೆ ಹೇಳಿದ್ದರು, ‘ಪತ್ರಕರ್ತ ಪ್ರತಿಯೊಂದನ್ನೂ ಅನುಮಾನದಿಂದ ಕಾಣಬೇಕು, ಆಗಷ್ಟೇ ಸತ್ಯದರ್ಶನವಾಗುವುದಕ್ಕೆ ಸಾಧ್ಯ’. ಯಾರೋ ಒಬ್ಬ ಏನೋ ಅದ್ಭುತವಾದದ್ದನ್ನು ಕಂಡೆ ಅಂದಾಕ್ಷಣ ಪುಳಕಗೊಂಡು ಅದನ್ನೇ ಬರೆದುಬಿಡುವುದಲ್ಲ, ಆ ಸುದ್ದಿಯ ಬೆನ್ನತ್ತಿ ಹೋಗಬೇಕು. ಸತ್ಯಾಸತ್ಯತೆಯನ್ನು ಪರೀಕ್ಷಿಸಬೇಕು. ಆ ಮಟ್ಟಿಗೆ ಪೊಲೀಸರಿಗೂ ಪತ್ರಕರ್ತನಿಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಇಬ್ಬರೂ ಸಾಕ್ಷ್ಯಾಧಾರಗಳನ್ನು ಹುಡುಕುತ್ತಾರೆ, ಮಾಹಿತಿಗಳನ್ನು ಕಲೆ ಹಾಕುತ್ತಾರೆ, ಘಟನೆಗೆ ಸಂಬಂಧಪಟ್ಟವರನ್ನು ಮಾತಾಡಿಸುತ್ತಾರೆ. ಅದೇನನ್ನೂ ಮಾಡದೇ ಯಾರದೋ ಬಾಯಿಮಾತನ್ನು ನಂಬಿ ಸುಮ್ಮನೇ ರಿಪೋರ್ಟ್ ಬರೆಯುವ ಪತ್ರಕರ್ತ ಅಥವಾ ಪೊಲೀಸ್ ಒಂದೋ ಭ್ರಷ್ಟರಾಗಿರುತ್ತಾರೆ ಅಥವಾ ಸೋಮಾರಿಗಳಾಗಿರುತ್ತಾರೆ. ಕೇಸು ಮುಚ್ಚಿಹಾಕುವುದು ಮತ್ತು ಸುದ್ದಿಯನ್ನು ಬಚ್ಚಿಡುವುದು ಇವೆರಡೂ ಒಂದೇ ರೀತಿಯ ಅಪರಾಧಗಳೇ.

ಇದೆಷ್ಟು ವಿಚಿತ್ರವಾಗಿದೆ ನೋಡಿ. ನಾವು ಆಗಾಗ ಮಾತಿನ ಮಧ್ಯೆ ನಂಬಿಕೆ ಮುಖ್ಯ ಕಣ್ರೀ ಅನ್ನುತ್ತೇವೆ. ಪರಸ್ಪರ ನಂಬಿಕೆಯಷ್ಟೇ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ ಮತ್ತು ಗಟ್ಟಿಗೊಳಿಸುತ್ತದೆ ಎಂದು ನಂಬುವವರು ನಾವು. ದಿನಾ ಮನೆಗೆ ಹಾಲು ಹಾಕುವವನು ಒಂದ್ಸಾರಿ ಹಾಲಿಗೆ ನೀರು ಬೆರೆಸಿ ಕೊಟ್ಟರೂ ನಮಗೆ ಗೊತ್ತಾಗುವುದಿಲ್ಲ. ಗೊತ್ತಾದರೂ ನಾವು ಅವನ ಬಗ್ಗೆ ಅನುಮಾನಿಸುವುದಿಲ್ಲ, ಹಸುವೇ ಜಾಸ್ತಿ ನೀರು ಕುಡಿದಿರಬೇಕು ಎಂದು ಅಂದುಕೊಳ್ಳುತ್ತೇವೆ. ಯಾಕೆಂದರೆ ಹಾಲಿನವನು ನಮ್ಮ ಪಾಲಿಗೆ ನಂಬಿಕಸ್ಥ. ಆದರೆ ದಾರಿಯಲ್ಲಿ ನಾವೊಬ್ಬರೇ ನಿಂತಿದ್ದಾಗ ಕಾರಲ್ಲಿ ಬರುವ ಯಾವನೋ ಮಹಾಶಯ ಲಿಫ್ಟ್ ಕೊಡುತ್ತೇನೆ ಎಂದರೆ ನಾವು ಹಿಂಜರಿಯುತ್ತೇವೆ. ಅವನು ಕಳ್ಳನಿರಬಹುದು, ಲಿಫ್ಟ್ ಕೊಡುವ ನೆಪದಲ್ಲಿ ಯಾವುದೋ ನಿರ್ಜನ ಪ್ರದೇಶಕ್ಕೆ ಕರಕೊಂಡು ಹೋಗಿ ನಿಮ್ಮಲ್ಲಿರುವುದನ್ನೆಲ್ಲ ದೋಚಬಹುದು, ಹೀಗೆಲ್ಲಾ ಮನಸ್ಸು ಲೆಕ್ಕ ಹಾಕುವುದಕ್ಕೆ ಶುರು ಮಾಡುತ್ತದೆ. ಇಂಥಾ ಅನುಮಾನ ತಪ್ಪಲ್ಲ. ಅಪರಿಚಿತರ ಜೊತೆ ಓಡಾಡುವುದು, ಅವರನ್ನು ಮನೆಯೊಳಗೆ ಬಿಟ್ಟುಕೊಡುವುದು ಬೆಂಗಳೂರಂಥ ಮಹಾನಗರಿಯಲ್ಲಿ ಬಹಳ ಅಪಾಯಕಾರಿ.

ದಿನಾ ಕೆಟ್ಟಸುದ್ದಿಗಳನ್ನು ನೋಡುತ್ತಾ, ಓದುತ್ತಾ ನಾವೆಷ್ಟು ಅನುಮಾನವಂತರಾಗಿದ್ದೇವೆ ಅಂದರೆ ಒಬ್ಬ ವ್ಯಕ್ತಿ ಬಗ್ಗೆ ಒಂದೊಳ್ಳೇ ಮಾತು ನಮ್ಮ ಬಾಯಿಂದ ಹೊರಬರುವುದು ಅಪರೂಪ ಆಗಿಬಿಟ್ಟಿದೆ. ಸಿಗರೇಟು ಸೇದದೇ ಇರುವ, ಗುಂಡು ಹಾಕದೇ ಇರುವ ವ್ಯಕ್ತಿಯನ್ನು ಸಜ್ಜನ ಎಂದು ನಮ್ಮ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಚಟಗಳಿಲ್ಲದ ಮನುಷ್ಯ ಇರೋದಕ್ಕೆ ಸಾಧ್ಯವಾ, ಅಟ್ಲೀಸ್ಟ್ ಎಲೆಯಡಿಕೆ ಹಾಕುವ ಅಭ್ಯಾಸವಾದರೂ ಇರಬೇಕು ಅನ್ನುತ್ತೇವೆ. ಅದೂ ಇಲ್ಲ ಅಂದಾಕ್ಷಣ, ಹಾಗಿದ್ದರೆ ಆತ ಹೆಂಡತಿಗೆ ಹೊಡೆದು ಬಡಿದು ಮಾಡುತ್ತಿರುತ್ತಾನೆ, ಬೇಕಿದ್ದರೆ ಚೆಕ್ ಮಾಡಿ ನೋಡಿ ಅನ್ನುತ್ತೇವೆ. ಕೆಲವೊಮ್ಮೆ ಅದು ನಿಜವೂ ಆಗಿರುತ್ತದೆ. ನಮ್ಮ ಅನುಮಾನ ಗೆಲ್ಲಬೇಕು, ಆಗಲೇ ನಮ್ಮ ಅಹಂಗೆ ತೃಪ್ತಿ. ಉದಾಹರಣೆಗೆ ಚಟಗಳೇ ಇರದ ಮೋದಿಯವರನ್ನು ಹೇಗಾದರೂ ಟ್ರಾಪ್ ಮಾಡಬೇಕು ಅನ್ನುವ ಹಟಕ್ಕೆ ಮಾಧ್ಯಮದವರು ಬಿದ್ದಾಗ, ಅವರಿಗೆ ಚಿಕ್ಕ ವಯಸ್ಸಲ್ಲೇ ಮದುವೆಯಾಗಿರುವುದು ಮತ್ತು ಅವರ ಪತ್ನಿ ಈಗಲೂ ಪುಟ್ಟ ಮನೆಯೊಂದರಲ್ಲಿ ವಾಸ ಮಾಡುತ್ತಿರುವ ಸುದ್ದಿ ಪತ್ತೆಯಾಯಿತು. ಮಾಧ್ಯಮಗಳು ಖುಷಿಯಿಂದ ಕುಣಿದಾಡಿದವು. ರಮ್ಯಾ ಸೋತಾಗ ಈ ಸೋಲಿನ ಹಿಂದೆ ಅಂಬರೀಶ್ ಇದ್ದಾರೆ ಅನ್ನುವ ಅಭಿಮಾನಿಗಳು, ಮೈಸೂರಲ್ಲಿ ದೇವೆಗೌಡರೇ ಅದೇನೋ ಮಸಲತ್ತು ಮಾಡಿ ತನ್ನನ್ನು ಸೋಲಿಸಿದ್ದಾರೆ ಅನ್ನುವ ವಿಶ್ವನಾಥ್, ಮಗಳು ಮನೆಗೆ ತಡವಾಗಿ ಬಂದರೆ ಆಕೆಗೊಬ್ಬ ಬಾಯ್‌ಫ್ರೆಂಡ್ ಇರಬಹುದಾ ಎಂದು ಅನುಮಾನ ಪಡುವ ತಂದೆ, ತಡರಾತ್ರಿಯಲ್ಲಿ ಹೆಂಡತಿಯ ಮೊಬೈಲ್ ಟಿಂಗ್ ಅಂದರೆ ಅವಳಿಗೆ ಇನ್ಯಾರ ಜೊತೆಗೋ ಸಂಬಂಧವಿದೆ ಎಂದು ಅನುಮಾನಪಡುವ ಗಂಡ, ವರದಕ್ಷಿಣೆ ಬೇಡ ಅಂದಾಕ್ಷಣ ಹುಡುಗನಲ್ಲೇನೋ ಐಬು ಇರಬೇಕು ಅಂದುಕೊಳ್ಳುವ ಹುಡುಗಿಯ ಅಪ್ಪ ಅಮ್ಮ... ಇವರೆಲ್ಲರೂ ಸಂಶಯಪಿಶಾಚಿಗಳೇ. ಈ ಕಾಲ ಹೇಗಿದೆ ಅಂದರೆ, ಒಂದೊಳ್ಳೇ ಹಾಸ್ಯಚಿತ್ರವನ್ನು ಹಂಚಿಕೆದಾರನಿಗೆ ತೋರಿಸಿದಾಗ ಆತ ನಗುವುದಿಲ್ಲ, ನಕ್ಕರೆ ಜಾಸ್ತಿ ರೇಟು ಕೊಟ್ಟು ಸಿನೆಮಾ ಖರೀದಿಸಬೇಕಾಗಬಹುದು ಅನ್ನುವ ಅನುಮಾನ ಮತ್ತು ಭಯ. ಕೊಹ್ಲಿ ಮೂರು ಪಂದ್ಯಗಳಲ್ಲಿ ಸತತವಾಗಿ ವಿಫಲನಾದಾಗ ದಿನಪತ್ರಿಕೆಗಳಲ್ಲಿ ಹೆಡ್ಡಿಂಗ್ ಕಾಣಿಸಿಕೊಳ್ಳುತ್ತದೆ, ‘ಕೊಹ್ಲಿಯ ವಿಫಲಕ್ಕೆ ಅನುಷ್ಕಾ ಶರ್ಮ ಜೊತೆಗಿನ ಅಫೇರ್ ಕಾರಣ’.

ಚುನಾವಣೆಗೆ ಮುಂಚೆ ಪತ್ರಿಕೆಗಳು ಎಷ್ಟೆಲ್ಲಾ ಅನುಮಾನದ ಬೀಜಗಳನ್ನು ಬಿತ್ತಿದ್ದವು ಅನ್ನುವುದು ನಿಮಗೆ ಗೊತ್ತಿದೆ. ಮೋದಿ ಅಭಿವೃದ್ದಿಯ ಹರಿಕಾರ ಎಂದು ಒಂದು ಪತ್ರಿಕೆ ಬರೆಯುತ್ತದೆ. ಅದೆಲ್ಲಾ ಬೊಗಳೆ, ಗುಜರಾತಲ್ಲಿ ಅಭಿವೃದ್ದಿ ಕಂಡವರು ಶ್ರೀಮಂತರು ಮಾತ್ರ ಎಂದು ಇನ್ನೊಂದು ಚಾನೆಲ್ಲು ಕಿರುಚುತ್ತದೆ. ಜನ ಗೊಂದಲಕ್ಕೊಳಗಾಗುತ್ತಾರೆ. ಮೊಬೈಲುಗಳು, ಚಾನೆಲ್ಲುಗಳು ನಮ್ಮಲ್ಲಿ ಅನುಮಾನ ಎಂಬ ರೋಗವನ್ನು ಹುಟ್ಟುಹಾಕುವ ವೈರಸ್‌ಗಳಂತೆ ಕೆಲಸ ಮಾಡುತ್ತಿವೆ. ಜ್ಯೋತಿಷ್ಯವನ್ನು ನಂಬಿ ಅನ್ನುವವರೂ ಅವರೇ, ಜ್ಯೋತಿಷಿ ಹೆಣ್ಣುಬಾಕ ಎಂದು ಸ್ಟಿಂಗ್ ಆಪರೇಷನ್ ಮಾಡಿ ತೋರಿಸುವವರೂ ಅವರೇ. ಚಾನೆಲ್ಲು ವಿಚಾರ ಬಿಟ್ಹಾಕಿ, ಒಬ್ಬ ವ್ಯಕ್ತಿಯ ಬಗ್ಗೆ ಸಾರ್ವಜನಿಕವಾಗಿ ನೀವು ನಾಲ್ಕು ಒಳ್ಳೆಯ ಮಾತಾಡುವ ಹಾಗೂ ಇಲ್ಲ. ಅವನಿಂದ ನಿಮಗೇನೋ ಉಪಕಾರ ಆಗಿದೆ, ಅದಕ್ಕೇ ಹೊಗಳುತ್ತಿದ್ದೀರಿ ಎಂದು ಜನರು ಅನುಮಾನಪಡುವಂತಾಗಿದೆ.

ಪುರಾಣದ ಕತೆಗಳ ಬಗ್ಗೆಯೂ ನಮಗೆ ಅನುಮಾನ ಶುರುವಾಗಿದೆ. ಸೀತೆಗೆ ರಾವಣನ ಮೇಲೆ ಕ್ರಶ್ ಇರಲಿಲ್ಲ ಅನ್ನುವುದಕ್ಕೆ ಪುರಾವೆ ಏನಿದೆ? ದ್ರೌಪದಿ ಒಳಗೊಳಗೇ ಕರ್ಣನನ್ನು ಪ್ರೀತಿಸುತ್ತಿದ್ದಿರಬಹುದಲ್ವಾ? ಇತಿಹಾಸವಂತೂ ಅನುಮಾನದ ಕಸದ ಬುಟ್ಟಿಯೇ ಆಗಿಹೋಗಿದೆ. ಅಯೋಧ್ಯೆಯಲ್ಲಿ ಇದ್ದಿದ್ದು ರಾಮಮಂದಿರವೋ ಅಥವಾ ಮಸೀದಿಯೋ ಅನ್ನುವುದರಿಂದ ಹಿಡಿದು ತಾಜಮಹಲನ್ನು ನಿಜಕ್ಕೂ ಷಹಜಹಾನ್ ಕಟ್ಟಿದ್ದಾನೋ ಅನ್ನುವ ತನಕ ನಮ್ಮ ಅನುಮಾನದ ರಾಗಗಳು ಹರಿದಾಡುತ್ತವೆ.

ನಂಬಿಕೆಯೆಂಬ ದೇವರ ತಲೆ ಮೇಲೆ ಅನುಮಾನದ ಶನಿ ಕುಳಿತಾಗ ನಾವು ನಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ರೀತಿಯಲ್ಲಿ ವರ್ತಿಸುತ್ತೇವೆ. ಇಡೀ ಜಗತ್ತೇ ನಮ್ಮ ವಿರುದ್ಧ ಮಸಲತ್ತು ಮಾಡುತ್ತಿದೆ ಎಂದು ಅನಿಸುವುದಕ್ಕೆ ಶುರುವಾಗುತ್ತದೆ. ಇದನ್ನು ಮೀರುವುದಕ್ಕಿರುವುದು ಒಂದೇ ದಾರಿ. ಬಿ ಪಾಸಿಟಿವ್, ಜೀವನ್ಮುಖಿಯಾದ ಧೋರಣೆಯೊಂದೇ ನಿಮ್ಮನ್ನು ಈ ಸ್ಥಿತಿಯಿಂದ ಕಾಪಾಡಬಲ್ಲದು. ಮೊದಲು ಅನುಮಾನದ ಕನ್ನಡಕ ತೆಗೆದು ಪಕ್ಕಕ್ಕಿಟ್ಟು, ಇನ್ನೊಬ್ಬರ ಯಶಸ್ಸನ್ನು ಸಂಭ್ರಮಿಸೋಣ. ಆಮೇಲೆ ಆ ಯಶಸ್ಸು ಯಾಕೆ ಬಂತು ಅನ್ನುವುದರ ಪೋಸ್ಟ್ ಮಾರ್ಟಂ ನಡೆಯಲಿ. ನಿಮ್ಮ ಅನಿಸಿಕೆ ಸುಳ್ಳಾಗಿದ್ದರೆ ಮೋಸ ಹೋದೆ ಎಂದು ಕೊರಗಬೇಕಾಗಿಲ್ಲ. ಪ್ರಜಾಪ್ರಭುತ್ವ ಕರುಣಿಸಿದ ಕೆಲವು ಶಾಪಗಳಲ್ಲಿ ನಂಬಿ ಮೋಸ ಹೋಗುವುದೂ ಕೂಡಾ ಒಂದು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 04 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books