Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಇವತ್ತು ಇದನ್ನೆಲ್ಲಾ ನೋಡಲು ಅಮ್ಮ ಬದುಕಿರಬೇಕಿತ್ತು ಅನ್ನಿಸುತ್ತದೆ...!

ನನಗಿನ್ನೂ ಚೆನ್ನಾಗಿ ನೆನಪಿದೆ. ಅವು ಭಯಂಕರ ಎಕ್ಸೈಟ್‌ಮೆಂಟಿನ ದಿನಗಳು. ಪತ್ರಿಕೆಯ ಪ್ರಸಾರ ಸಂಖ್ಯೆ ಥರ್ಮಾಮೀಟರಿನೊಳಗಿನ ಜ್ವರದಂತೆ ಏರುತ್ತಿತ್ತು. ಕರ್ನಾಟಕದ ಮೂಲೆ ಮೂಲೆಗಳಿಂದ ಪತ್ರಿಕೆಗೆ ಡಿಮ್ಯಾಂಡು. ಆದರೆ ಪ್ರಿಂಟು ಮಾಡಿಸಲು ಕೈಯಲ್ಲಿ ಹಣವಿಲ್ಲ. ಹದಿನಾರು ಪುಟಗಳ ಒಂದು ಪ್ರತಿ ಪ್ರಿಂಟು ಮಾಡಿಸಬೇಕೆಂದರೆ ಬರೀ ಹಾಳೆಗೇ ೯೦ ಪೈಸೆ ಕೊಡಬೇಕಿತ್ತು. ಇಷ್ಟಾಗಿ ಅವು ಸೋವಿಯ ದಿನಗಳೇ ಅನ್ನಬೇಕು. ಒಂದು ಲಾರಿ ಲೋಡು ಹಾಳೆ ತರಿಸಿದರೆ ಬರೀ ೧.೫೮ ಲಕ್ಷ ರುಪಾಯಿ! ಆದರೆ ಎಲ್ಲಿತ್ತು ಅಷ್ಟು ದುಡ್ಡು? ಒಂದು ಲಕ್ಷಕ್ಕೆ ಎಷ್ಟು ಸೊನ್ನೆ ಅಂತ ಕೂಡ ನಿಖರವಾಗಿ ಗೊತ್ತಿಲ್ಲದ ದಿನಗಳವು. ಅಷ್ಟು ದೊಡ್ಡ ಮೊತ್ತವನ್ನು ಯಾರ ಬಳಿ ಕೇಳುವುದು? ನಾಡಿದ್ದು ಬೆಳಗ್ಗೆ ಸಾವಿರಗಟ್ಟಲೆ ಪ್ರತಿ ಪ್ರಿಂಟಾಗಬೇಕೆಂದರೆ ಕೈಯಲ್ಲಿ ಕಾಸಿರುತ್ತಿರಲಿಲ್ಲ!

ಅವತ್ತು ರಾತ್ರಿ ಗೆಳೆಯ ಉಮೇಶ ಹೆಗಡೆ ಸಿಕ್ಕ. ಅವನು ಬ್ಯಾಂಕೊಂದರಲ್ಲಿ ಅಧಿಕಾರಿಯಾಗಿದ್ದ. ಯಾವ ಜನ್ಮದ ತಮ್ಮನೋ ಅವನು? ಇವತ್ತಿಗೂ ಅಂದು ಅವನಾಡಿದ ಮಾತು ನನ್ನ ಕಣ್ಣಲ್ಲಿ ಆಪ್ಯಾಯತೆಯ ನೀರೂರಿಸುತ್ತವೆ. “ನೀ ಹೆದರಬ್ಯಾಡ ರವೀ. ಶಿವಾಜಿನಗರದಲ್ಲಿ ನಮ್ಮ ಬ್ಯಾಂಕಿನದೊಂದು ಬ್ರ್ಯಾಂಚ್ ಇದೆ. ಅಲ್ಲಿ ಗೊತ್ತಿರೋ ಒಬ್ಬ ಆಫೀಸರ್ ಇದಾರೆ. ಹೀಗ್ಹೀಗೆ, ಪತ್ರಿಕೆಯ ವ್ಯಾಪಾರ ತುಂಬ ಚೆನ್ನಾಗಿ ಬೆಳೀತಿದೆ. ನಮಗೆ ಎರಡು ಲಕ್ಷ ರುಪಾಯಿಗಳ ಓವರ್ ಡ್ರಾಫ್ಟ್ (O.D) ಫೆಸಿಲಿಟಿ ಕೊಡಿ ಅಂತ ಕೇಳೋಣ. ಕೈಯಲ್ಲಿ ಎರಡು ಲಕ್ಷ ಇದ್ರೆ ನಿಂಗೂ ಧೈರ್ಯ ಬರುತ್ತೆ" ಅಂದಿದ್ದ. ಮರುದಿನವೇ ಅವನೊಂದಿಗೆ ಓಡಿದ್ದೆ. ಶಿವಾಜಿನಗರದ ಬ್ರ್ಯಾಂಚಿನಲ್ಲಿ ಮಡಿವಾಳರ್ ಎಂಬ ಅಧಿಕಾರಿ ಇದ್ದರು. ಬಹುಶಃ ಮೇನೇಜರ್ ಇರಬೇಕು. ಪ್ರೀತಿಯಿಂದಲೇ ಮಾತಾಡಿಸಿದರು. “ನಿಮ್ಮ ಬರವಣಿಗೆ ಓದಿದೀನಿ. ಕಸ್ತೂರಿಯಲ್ಲಿದ್ರಿ. ಕರ್ಮವೀರದಲ್ಲಿದ್ರಿ. I know that. ನಿಮ್ಮದೊಂದು Bio-data ರೆಡಿ ಮಾಡಿಕೊಳ್ಳಿ. ಹಾಗೇನೇ ಪತ್ರಿಕೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದು ಬ್ಯಾಲೆನ್ಸ್ ಷೀಟು ಮಾಡಿಸಿಕೊಂಡು, ನಾಳೆ ಬೆಳಗ್ಗೆ ಇದೇ ಹೊತ್ತಿಗೆ ಬಂದು ಬಿಡಿ. ನಿಮ್ಮ ಕೆಲ್ಸ ಆಗುತ್ತೆ" ಅಂದರು.

ಏನಿತ್ತು ಬಯೋಡಾಟಾ? ಇದ್ದುದೆಲ್ಲ ಬಾಯಲ್ಲೇ ಇತ್ತು. ಒಂದು ಎಂ.ಎ., ಹತ್ತು ನೌಕರಿ, ಚಿಕ್ಕವೆರಡು ಅವಾರ್ಡು, ವ್ಯಾಪಾರಗಳಲ್ಲಿ ನಷ್ಟ, ಅಫ್‌ಕೋರ್ಸ್ ಎಂ.ಎ.ನಲ್ಲಿ ಒಳ್ಳೆ ಮಾರ್ಕು ಬಂದಿದ್ವು ಕಣ್ರೀ! ಕಥೆ ಸಖತ್ತಾಗಿ ಬರೀತೀಯ ಅಂತ ಹುಡುಗಿಯರು ಬರೆದ ಸರ್ಟಿಫಿಕೀಟಿನಂಥ ಪತ್ರಗಳು, ಒಬ್ಬ ಹೆಂಡತಿ, ಮೂರು ಮಕ್ಕಳು-ಇಷ್ಟೇ ತಾನೆ? ಅದನ್ನೇ ಬಲು ನೀಟಾಗಿ, ರಸವತ್ತಾಗಿ ಬರೆದು ಕಂಪ್ಯೂಟರಿನಲ್ಲಿ ಡಿಟಿಪಿ ಮಾಡಿಸಿ ಎತ್ತಿಟ್ಟುಕೊಂಡೆ. ಆದರೆ ಬ್ಯಾಲೆನ್ಸ್ ಷೀಟು ಎಲ್ಲಿಂದ ತರಲಿ? ನನ್ನ ಬದುಕಿನ ಗ್ರಾಫ್ ಷೀಟೇ ಬ್ಯಾಲೆನ್ಸು ತಪ್ಪಿದ ಹಾಳೆ. ಪತ್ರಿಕೆ ಆರಂಭಿಸಿ ಕೆಲವೇ ವಾರಗಳಾಗಿದ್ದವು. ಏನೋ ನಸೀಬು ಈ ಬಾರಿ ಸಾಥ್ ಕೊಡುತ್ತಿರುವ ಹಾಗಿದೆ ಅನ್ನಿಸಿತು. ಆದರೆ ಅದೇನದು ಬ್ಯಾಲೆನ್ಸ್ ಷೀಟು? ಅದನ್ನೆಲ್ಲಿಂದ ತರಲಿ? ಅಂದುಕೊಳ್ಳುತ್ತಿರುವಾಗ ಅದನ್ನೂ ಗೆಳೆಯ ಉಮೇಶ ಹೆಗಡೆಯೇ ತಂದಿದ್ದ. ಇವತ್ತು ನನ್ನ ಪಾಲಿಗೆ ಆತ್ಮೀಯ ಮಿತ್ರರಾಗಿ ಹೋಗಿರುವ ಛಾರ್ಟರ್ಡ್ ಅಕೌಂಟೆಂಟುಗಳಾದ ನಾರಾಯಣ ಭಟ್ ಮತ್ತು ನಾರಾಯಣ ಹೆಗಡೆ ಅವರನ್ನು ಕರೆತಂದಿದ್ದ. ಅವರು ಪಾಪ, ರಾತ್ರಿಯಿಡೀ ಕುಳಿತು ಏನೇನೋ ತಿಪ್ಪರಲಾಗ ಹಾಕಿ ಬೆಳಗ್ಗೆ ಹೊತ್ತಿಗೊಂದು ಬ್ಯಾಲೆನ್ಸ್ ಷೀಟು ತಯಾರಿಸಿಕೊಟ್ಟಿದ್ದರು. ಇದ್ದುದರಲ್ಲೇ ಚೆಂದಾಗಿ ಡ್ರೆಸ್ ಮಾಡಿಕೊಂಡು, ಕೈಯಲ್ಲಿ ಬಯೋಡಾಟಾ ಮತ್ತು ಬ್ಯಾಲೆನ್ಸ್ ಷೀಟು ತುಂಬಿದ ಕವರು ಹಿಡಕೊಂಡು ಶಿವಾಜಿನಗರದ ಬ್ಯಾಂಕಿಗೆ ಹೋಗಿದ್ದೆ. ಮಡಿವಾಳರ್ ಅದೇ ಪ್ರೀತಿಯಿಂದ ಮಾತಾಡಿಸಿದ್ದರು. “ಇಲ್ಲೇ ಕೂತಿರಿ. ನಮ್ಮ ಸೀನಿಯರ್ ಮ್ಯಾನೇಜರ್ ಹತ್ರ ಮಾತಾಡಿ ಬರ‍್ತೀನಿ" ಅಂದು ಎದುರಿಗೇ ಇದ್ದ ಗ್ಲಾಸ್ ಛೇಂಬರಿನೊಳಕ್ಕೆ ಹೋದವರು, ಒಳಗೆ ಅದೇನಾಯಿತೋ ಗೊತ್ತಿಲ್ಲ. ಗೋಡೆಗೆ ಬಡಿದ ಚೆಂಡಿನಂತೆ ಎರಡೇ ನಿಮಿಷದಲ್ಲಿ ವಾಪಸು ಬಂದು, “ಆಗಲ್ವಂತೆ ರವಿಯವರೇ. ಪತ್ರಿಕೆ ನಡೆಸೋರಿಗೆ ಸಾಲ ಕೊಡೋಕಾಗಲ್ಲ ಅಂದರು. ನೀವು ನಮ್ಮ ಜೋನಲ್ ಆಫೀಸಿನಲ್ಲಿ ಯಾರನ್ನಾದರೂ ಕಂಡು influence ಮಾಡಿಸಿದರೆ ಕೆಲಸ ಆದೀತು" ಅಂದ ಕೂಡಲೆ ಸಿಟ್ಟು ಅದೆಲ್ಲಿಂದ ಉರಕೊಂಡು ಬಂದಿತ್ತೋ ಗೊತ್ತಿಲ್ಲ.

“Nonsense. ಒಬ್ಬ upcoming business person ನಾನು. ಯಾವನದಾದ್ರೂ ಇನ್‌ಫ್ಲುಯೆನ್ಸು ನಂಗ್ಯಾಕೆ ಬೇಕು. ನಿಮ್ಮ ಬ್ಯಾಂಕಿನ ಹಣೇಬರವೇ ಇಷ್ಟು. ಹರ್ಷದ್ ಮೆಹತಾನಂಥ ವಂಚಕನಿಗೆ ೬೦೦ ಕೋಟಿ ಕೊಡ್ತೀರಿ. ನನ್ನಂಥೋನಿಗೆ ಕೊಡಕ್ಕಾಗಲ್ಲ ಅಂತೀರಿ... ಹ್ಯಾಟ್ ಫೂಟ್!" ಅಂತ ಕೂಗಾಡಿ ಬಂದುಬಿಟ್ಟಿದ್ದೆ. "ಹೀಗೆ ಕೂಗಾಡಿದರೆ ಯಾರಣ್ಣಾ ನಿಂಗೆ ಸಾಲ ಕೊಡ್ತಾರೆ ಅಂತ ಉಮೇಶ ಖಿನ್ನ ದನಿಯಲ್ಲಿ ಹೇಳಿದ್ದ. ಹಾಳು ಬಿದ್ದು ಹೋಗಲಿ ಸಾಲ ಅಂತ ಪದ್ಮನಾಭನಗರಕ್ಕೆ ವಾಪಸು ಬರುತ್ತಿದ್ದರೆ, ದಾರಿಯಲ್ಲಿ ಸಿಕ್ಕವರು ಮಾಸ್ಟರ್ ಹಿರಣ್ಣಯ್ಯ. “ಏನೋ ಮರೀ..." ಅಂತ ಇಷ್ಟಗಲ ನಕ್ಕು ಸಿಗರೇಟು ಪ್ಯಾಕು ಮುಂದಿಟ್ಟಿದ್ದರು. ಅವರ ಮನೆಯ ಆವರಣದಲ್ಲೇ ಇದೆ ಕರ್ನಾಟಕ ಬ್ಯಾಂಕು. ಅವರ ಅಳಿಯ ಛಾಯಾಪತಿ ಅದಕ್ಕೆ ಮೇನೇಜರಾಗಿದ್ದರು. ಬೀದೀಲಿ ನಿಂತು ಮಾತಾಡೋ ಬದಲು ಬ್ಯಾಂಕಿನಲ್ಲಿ ಕೂತು ಹರಟೆ ಹೊಡೆಯೋಣ ಬಾ ಅಂತ ಕರೆದೊಯ್ದಿದ್ದರು ಮಾಸ್ಟರ್ ಹಿರಣ್ಣಯ್ಯ. ಥೇಟು ಕಬೀರ್ ಬೇಡಿಯಷ್ಟು ಹ್ಯಾಂಡ್‌ಸಮ್ ಆಗಿರುವ ಅವರ ಅಳಿಯ ಛಾಯಾಪತಿ ಕಾಫಿ ತರಿಸಿದ್ದರು. ನಾನಿನ್ನೂ ಶಿವಾಜಿನಗರದ ಬ್ರ್ಯಾಂಚಿನಲ್ಲಿ ಆದ ಅವಮಾನದಿಂದ ಬುಸುಗುಡುತ್ತಿದ್ದೆ. ಯಥಾಪ್ರಕಾರ ಹಿರಣ್ಣಯ್ಯನವರು “ಯಾಕೋ ಮರೀ ಕುದೀತಾ ಇದೀಯಾ?" ಅಂದಾಗ ಆದುದನ್ನೆಲ್ಲ ವಿವರಿಸಿದ್ದೆ.

“ಇಷ್ಟೇ ತಾನೆ?" ಅಂದು ಕೈ ಚಾಚಿದ್ದರು ಛಾಯಾಪತಿ.
ಅವತ್ತು ಹತ್ತಿದ ಕರ್ನಾಟಕ ಬ್ಯಾಂಕಿನ ಮೆಟ್ಟಿಲಿನಿಂದ, ನಾನು ಇವತ್ತಿಗೂ ಇಳಿದಿಲ್ಲ. ದುಡ್ಡಿನ ಆಗು ಹೋಗು, ವ್ಯವಹಾರಗಳನ್ನೆಲ್ಲ ಈಗ ಉಮೇಶನೇ ನಿಭಾಯಿಸುತ್ತಾನೆ. ಬ್ಯಾಂಕಿನ ಅಧಿಕಾರಿಗಳೊಂದಿಗೆ ಒಂದು ನಿರಂತರ ಮೈತ್ರಿ ನನ್ನ ಪಾಲಿಗೆ ಉಳಿದಿದೆ. ಅವರು ಕೇಳುವ ದಾಖಲೆ, ಮತ್ಯಾವುದೋ ಲೆಕ್ಕ ಪತ್ರ, ಇನ್ನೆಂಥದೋ ಬ್ಯಾಲೆನ್ಸ್ ಷೀಟು-ಎಲ್ಲವನ್ನೂ ಉಮೇಶ ಒದಗಿಸುತ್ತಿರುತ್ತಾನೆ. ಎಷ್ಟು ದುಡ್ಡಿದೆ ಎಂಬ ವಿವರವೂ ನನಗೆ ಸರಿಯಾಗಿ ಗೊತ್ತಿರುವುದಿಲ್ಲ. ಅಂದು ಶಾಲೆಯ ಕಟ್ಟಡವೆಲ್ಲ ಮುಕ್ಕಾಲುಮೂರು ಪಾಲು ಮುಗಿದು, ಇನ್ನೇನು ಮಕ್ಕಳು ಬರುತ್ತಾರೆ, ಕದ ತೆರೆಯಬೇಕು ಎಂಬಷ್ಟರಲ್ಲಿ, ಇಷ್ಟು ವರ್ಷ ನಾವು ದುಡಿದದ್ದೆಲ್ಲ ಶಾಲೆಗೆ ಹಾಕಿಯಾಗಿದೆ. ಇನ್ನೂ ಬೆಂಚು, ಕುರ್ಚಿ ಬಂದಿಲ್ಲ. ಕಂಪ್ಯೂಟರು ಬರಬೇಕಿದೆ. ಶಾಲೆ ಶುರುವಾದರೆ ಹತ್ತತ್ತಿರ ಎರಡು ಲಕ್ಷ ರುಪಾಯಿಗಳ ಪ್ರತೀ ತಿಂಗಳ ಸಂಬಳ..! ಎಲ್ಲಿಂದ ತರುವುದು ಎಂದು ಎದುರಾದ ಪ್ರಶ್ನೆಗೆ ಸಿಕ್ಕ ಉತ್ತರ ಕರ್ನಾಟಕ ಬ್ಯಾಂಕ್!

ಒಂದು ಕೋಟಿ ರುಪಾಯಿ ಸಾಲ ಕೊಡುತ್ತಾರಾ ಎಂದು ವಿಚಾರಿಸಿದೆ. ಯಥಾಪ್ರಕಾರ ಬಯೋಡಾಟಾ, ಬ್ಯಾಲೆನ್ಸ್ ಷೀಟು, ಇಷ್ಟು ವರ್ಷದ ಲೇವಾದೇವಿಯಲ್ಲಿ ನಾನು ಉಳಿಸಿಕೊಂಡು ಬಂದ ನೀತಿ-ನಿಯತ್ತು, ನನಗಿರುವ ಆಸ್ತಿಪಾಸ್ತಿ ವಿವರ-ಎಲ್ಲ ಒಯ್ದು ಎದುರಿಗಿಟ್ಟೆ. ‘ಇಷ್ಟೇ ತಾನೆ?’ ಅಂದು ಕುಳಿತಲ್ಲೇ ಮಂಜೂರು ಮಾಡಲಿಕ್ಕೆ, ಅದು ಎರಡು ಲಕ್ಷಗಳ ಪುಟ್ಟ ಸಾಲವಲ್ಲ. ಕೇಳುತ್ತಿರೋದು ಒಂದು ಕೋಟಿ ರುಪಾಯಿ. ಕೇಳುತ್ತಿರುವವನು ಅಬ್ಬೇಪಾರಿ ಪೇಪರಿನವನು! ಕರ್ನಾಟಕ ಬ್ಯಾಂಕಿನವರು ಅಷ್ಟು ಹಣ ಕೊಡುತ್ತಾರಾ? ಅವರಿಗೆ ಬೆಂಗಳೂರು ನಗರವೊಂದರಲ್ಲೇ ೧೮೦೦ ಕೋಟಿ ರುಪಾಯಿಗಳ turn over ಇದೆ. ಆ ಸಮುದ್ರದಲ್ಲಿ ಜುಜುಬಿ ರವಿ ಬೆಳಗೆರೆ-ಯಾವ ಲೆಕ್ಕ? ಯಾವ ತೊಪ್ಪಲು? ಅವರು ಪ್ರತೀವಾರ ತಮ್ಮ ಆಫೀಸಿನಲ್ಲಿ ಸಭೆ ಸೇರುತ್ತಾರೆ. ಬ್ಯಾಂಕಿನ ಮುಖ್ಯಸ್ಥರ ಹೆಸರು ಅನಂತಕೃಷ್ಣ. ತುಂಬ ದೊಡ್ಡ ಮನುಷ್ಯರು. ಸಾವಿರದ ಎಂಟು ನೂರು ಕೋಟಿ ರುಪಾಯಿಗಳ ಸಂತೆಯಲ್ಲಿ ಅವರಿಗೆ ನಾನು ಕಾಣಿಸುತ್ತೇನಾ? ಸಭೆ ಸೇರಿ ಚರ್ಚೆಗೆ ಕುಳಿತಾಗ ಅಸಲು ಪ್ರಾರ್ಥನಾ ಸ್ಕೂಲಿನ ಫೈಲಾದರೂ ಕಣ್ಣಿಗೆ ಬೀಳುತ್ತದಾ? ಕೊಂಚ ಆತಂಕಗೊಂಡಿದ್ದೆ.
ಸಭೆ ಸೇರಿದ ಮರುದಿನವೇ ಬಂತು ವರದಿ.

ಪ್ರಾರ್ಥನಾ ಸ್ಕೂಲಾ? ಅದೇ ರವಿ ಬೆಳಗೆರೆಯದು ತಾನೆ? ಈ ಮನುಷ್ಯನ financial descipline ಎಷ್ಟು ಅದ್ಭುತವಾಗಿದೆ ಅಂದ್ರೆ... ಒಂದು ಕೋಟಿ ರುಪಾಯಿ ಸಾಲ ಕಣ್ಣು ಮುಚ್ಚಿಕೊಂಡು ಕೊಡಬಹುದು ಅಂದುಬಿಟ್ಟಿದ್ದರು ಅನಂತಕೃಷ್ಣ!
ನಾನು ಮಾತ್ರ ಇಷ್ಟಗಲ ಕಣ್ಣು ಬಿಟ್ಟುಕೊಂಡೇ ಸಾಲ ಇಸಿದುಕೊಂಡಿದ್ದೆ.ಎಷ್ಟು ವರ್ಷಗಳಲ್ಲಿ ತೀರಿಸುತ್ತೇನೆಂಬುದು ಗೊತ್ತಿರಲಿಲ್ಲ. ಪತ್ರಿಕೆಯಷ್ಟೇ ವೇಗವಾಗಿ ಶಾಲೆ ಮರಿ ಹಾಕಿದೆ. ಇರುವ ಏಳೂ ಕಟ್ಟಡಗಳು ತುಂಬಿ ತುಳುಕುತ್ತಿವೆ. ಅದಲ್ಲ ಸಂಗತಿ. ಸಂಜೆವಾಣಿ ಕಚೇರಿಯ ಪ್ರಿಂಟಿಂಗ್ ಮಷೀನಿನ ಕೆಳಗೆ ಜ್ವರದ ತಾಪದಲ್ಲಿ ಮುದುರಿಕೊಂಡು, ಹಾಳೆ ಹಾಸಿಕೊಂಡು ಮಲಗಿದ ಒಬ್ಬ ಅಬ್ಬೇಪಾರಿ -ಕುಂತು ಬರೆದನೋ, ನಿಂತು ಬರೆದನೋ ಮನೆಯಲ್ಲಿ ಯಾರಾದರೂ ಸತ್ತಾಗ ಬರೆದನೋ, ಮತ್ಯಾರೋ ಬಂದು ಕೊಲ್ಲುತ್ತೇನೆಂದು ಹೆದರಿಸಿದಾಗ ಬರೆದನೋ, ಎಷ್ಟು ಬರೆದನೋ, ಏನು ಬರೆದನೋ? ಇವತ್ತು ಅದೆಲ್ಲ ಬರೆದವನಿಗೆ ನೆನಪಿಲ್ಲ. ನಿನ್ನೆ ರಾತ್ರಿ ಅನುಭವಿಸಿದ ಕಷ್ಟ ಇವತ್ತಿಗಾಗಲೇ ಕಣ್ಣೆದುರಿಗಿಲ್ಲ. ಕಣ್ಣೆದುರಿಗಿರುವುದು- ಬಂದ ಲಾಭವೆಲ್ಲ ಹೆಪ್ಪಾಗಿ, ಸಾಂದ್ರಗೊಂಡು, ಏಳು ಸಾವಿರದ ಐನೂರು ಮಕ್ಕಳಿಗೆ ಪಾಠ ಹೇಳುವ ಪ್ರಾರ್ಥನಾ ಸ್ಕೂಲ್. ಇರುವ ಸಾಲ ಕೂಡ ಇವತ್ತಿರುತ್ತೆ, ನಾಳೆ ಸವೆಯುತ್ತೆ. ಆದರೆ ‘ಪ್ರಾರ್ಥನಾ’ ನಾನು ಸವೆದು, ಇಲ್ಲವಾಗಿ ಹೋದ ನಂತರವೂ ಇರುತ್ತೆ. ಮರಿ ಹಾಕುತ್ತೆ, ಲಾಭ ತರುತ್ತೆ. ಬಂದ ಲಾಭವೆಲ್ಲ ಹೆಪ್ಪಾಗಿ ಸಾಂದ್ರಗೊಂಡು ಮತ್ತೆಲ್ಲೋ ಒಂದು ಆಸ್ಪತ್ರೆಯಾಗಿ ಎದ್ದು ನಿಲ್ಲುತ್ತೆ. ಇಂದು ಈ ಪತ್ರಿಕೆಯ ಸುತ್ತ, ಶಾಲೆಯ ಸುತ್ತ ಎಷ್ಟೆಲ್ಲ ಜೀವಗಳು ಅರಳಿ ನಿಂತಿವೆಯೋ ಎಣಿಸಿ ಹೇಳುವವರು ಯಾರು? ಪತ್ರಿಕೆಯಲ್ಲಿ ನನ್ನೊಂದಿಗೆ ತುಂಬ ದಿನಗಳಿಂದ ದುಡಿಯುತ್ತಿರುವವರ ಜಾತಿಗಳು ಆಕಸ್ಮಿಕವಾಗಿ ನನಗೆ ಗೊತ್ತಾಗಿವೆ ಎಂಬುದು ಬಿಟ್ಟರೆ- ಪ್ರಾರ್ಥನಾ ಸ್ಕೂಲ್‌ನೊಳಕ್ಕೆ ನಾವು ಜಾತಿಯನ್ನು ಬಿಟ್ಟುಕೊಂಡೇ ಇಲ್ಲ. ಪತ್ರಿಕೆಗಾಗಿ ನನ್ನೊಂದಿಗೆ ದುಡಿಯುತ್ತಿರುವ ಹುಡುಗ ಹುಡುಗಿಯರಲ್ಲಿ ಬ್ರಾಹ್ಮಣ, ಕುರುಬ, ಲಿಂಗಾಯತ, ಜೈನ, ನೇಕಾರ, ಅಕ್ಕಸಾಲಿಗ, ವಕ್ಕಲಿಗ, ಮಡಿವಾಳ, ನಾಯುಡು, ಕಮ್ಮ, ಮರಾಠಾ, ದಲಿತ- ಎಲ್ಲರೂ ಇದ್ದಾರೆ. ಅವರ‍್ಯಾರಿಗೂ ಅವರ ಜಾತಿ ನೆನಪಿಲ್ಲ. ಪತ್ರಿಕೆಯ ಸುಮಾರು ಐದುನೂರು ಜನ ಏಜೆಂಟರು, ಅವರೆಲ್ಲ ಯಾವ ಜಾತಿಯವರು?

ಶಿವಮೊಗ್ಗದ ಯುವರಾಜ್, ದಾವಣಗೆರೆಯ ಕುರಿಯನ್, ಹುಬ್ಬಳ್ಳಿಯ ಸಂದೇಶ್, ಮೈಸೂರಿನ ಪೂರ್ಣಿಮಾ ನಾಯಕ್, ಮಂಗಳೂರಿನ ರೇಣುಕಾ ಪ್ರಸನ್ನ-ಮುಂತಾದವರದೆಲ್ಲ ಯಾವ ಜಾತಿ? ಯಾವ ವರ್ಗ? ಯಾವ ಮನೆ ದೇವರ ಒಕ್ಕಲು? ಇಷ್ಟೊಂದು ಮಂದಿಗೆ ಊಟ, ಅಷ್ಟೆಲ್ಲ ಮಕ್ಕಳಿಗೆ ಪಾಠ-ಒದಗಿಸುತ್ತಿರುವ ನನ್ನ ಓದುಗ ಬಂಧು, ಓದುಗ ದೊರೆ- ಆತನದ್ಯಾವ ಜಾತಿ?
ಇದೆಲ್ಲ ತುಂಬ ದೊಡ್ಡ ಸಾಧನೆ ಅಂತ ನನಗೆ ಅನಿಸಿಲ್ಲ. ನಡೆದಿರುವ ದಾರಿಗಿಂತ, ನಡೆಯಬೇಕಿರುವ ದಾರಿ ದೊಡ್ಡದಿದೆ. ಪತ್ರಿಕೆ ನನ್ನನ್ನೆಂದೂ ಉಪವಾಸವಿಟ್ಟಿಲ್ಲ.
ಬೆಳಗ್ಗೆ ಶೀಲಕ್ಕSSLC ರಿಜಲ್ಟು ಹಿಡಿದು, once again we proved, ‘Prarthana is the Best’ ಎಂದು ಸಂತೋಷ ವ್ಯಕ್ತಪಡಿಸಿದಾಗ ಜೊತೆಯಲೇ ಇದ್ದ ಕರ್ಣನಿಗೆ ಇದನ್ನೆಲ್ಲ ತಿಳಿಸಿ ಹೇಳಿದೆ.
ಪ್ರಾರ್ಥನಾ ಶಾಲೆಯ ಬಗ್ಗೆ ಅವನಲ್ಲಿ ಮೂಡಿದ ಪ್ರೀತಿ, ಅಭಿಮಾನ ಕಂಡಾಗ; ಛೇ, ಅಮ್ಮನಿರಬೇಕಿತ್ತು ಇದನ್ನೆಲ್ಲ ನೋಡಲು ಎಂಬ ಕೊರಗು ಮಾತ್ರ ನನ್ನಲ್ಲೇ ಉಳಿಯಿತು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books