Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಎಪ್ಪತ್ತರ ದಶಕದಲ್ಲಿ ಜಾರಿದ ನಕ್ಷತ್ರ ಅಚಾನಕ್ಕಾಗಿ ಕೈಗೆ ಸಿಕ್ಕಾಗ...

‘ಯುಗಾಂತಂ’ ಎಪ್ಪತ್ತರ ದಶಕದಲ್ಲೇ ಅತ್ಯಂತ ಜನಪ್ರಿಯತೆಯನ್ನು ಕಂಡ ತೆಲುಗಿನ ಯಂಡಮೂರಿ ವೀರೇಂದ್ರನಾಥರ ವೈಜ್ಞಾನಿಕ ಕಾದಂಬರಿ. ಅದನ್ನು ಕನ್ನಡಕ್ಕೆ ಅನುವಾದಿಸಿ ‘ನಕ್ಷತ್ರ ಜಾರಿದಾಗ’ ಅನ್ನುವ ಹೆಸರಿನಲ್ಲಿ ಧಾರಾವಾಹಿಯಾಗಿ ‘ಕನ್ನಡಪ್ರಭ’ ಹಾಗೂ ‘ಕ್ರೈಮ್ ಸಮಾಚಾರ’ ಪತ್ರಿಕೆಗಳಲ್ಲಿ ಪ್ರಕಟಿಸಿದಾಗಲೂ ಅಷ್ಟೇ ಜನಪ್ರಿಯಗೊಂಡಿತ್ತು. ಅದನ್ನು ಕಂಡು ೧೯೮೭ರಲ್ಲಿ ನವಕರ್ನಾಟಕ ಪಬ್ಲಿಕೇಷನ್ನಿನವರು ಅದಕ್ಕೆ ಪುಸ್ತಕ ರೂಪ ಕೊಟ್ಟಿದ್ದರು. ಇತ್ತೀಚೆಗೆ ಅದೆಲ್ಲ ನೆನಪಾಗಿ ನೋಡೋಣವೆಂದು ಹುಡುಕಿದರೆ ನನ್ನ ಪುಸ್ತಕ ಸಂಗ್ರಹದಲ್ಲೂ ಅದು ಕಾಣಲಿಲ್ಲ. ಇನ್ನು ಪುಸ್ತಕದಂಗಡಿ, ಲೈಬ್ರರಿಗಳಲ್ಲೆಲ್ಲ ಕಡೆ ಹುಡುಕಿದರೂ ಅದರ ಒಂದು ಪ್ರತಿ ಎಲ್ಲಿಯೂ ದೊರೆಯದಿದ್ದಾಗ facebookನಲ್ಲಿಯೂ ತಿಳಿಸಿದ್ದೆ. ಒಮ್ಮೆ ಅಚಾನಕ್ಕಾಗಿ ಭೇಟಿಯಾದ ನನ್ನ ಹಿರಿಯ ವರದಿಗಾರ ಶೃಂಗೇಶ್ ಅದರ ಒಂದು ಪ್ರತಿ ತನ್ನ ಬಳಿಯಿದೆಯೆಂದು ಈ ಅಪರೂಪದ ಕೃತಿಯನ್ನು ತಂದು ನನ್ನ ಕೈಗಿತ್ತ. ಅದು ಈಗ ‘ಬಿ.ಬಿ.ಸಿ. ಪಬ್ಲಿಕೇಷನ್ಸ್’ನಲ್ಲಿ ಮರುಮುದ್ರಣದ ಸಿದ್ಧತೆಯಲ್ಲಿದೆ. ಕೆಲವು ವಾರಗಳ ಕಾಲ ಅದನ್ನು ಧಾರಾವಾಹಿಯಾಗಿ ಪ್ರಕಟಿಸುತ್ತಿದ್ದೇನೆ. ಎಂದಿನ ಪ್ರೀತಿಯಿಂದ ಒಪ್ಪಿಸಿಕೊಳ್ಳಿ:

ಇಂಡಿಯನ್ ಟೈಮ್ಸ್ ಪತ್ರಿಕಾ ಕಾರ್ಯಾಲಯದ ಎರಡನೆ ಅಂತಸ್ತಿನ ಬಲಗಡೆಯ ಹಾಲ್‌ನಲ್ಲಿ ಟೇಬಲ್ ಮೇಲಿರುವ ಒಂದು ಸಣ್ಣ ಕಾಗದದ ಚೂರನ್ನು ಭೂತಕನ್ನಡಿಯಿಂದ ಪರಿಶೀಲಿಸುತ್ತಿದ್ದಾಳೆ ಶೈಲಜ.
“ಏನದು ಅಷ್ಟೊಂದು ಪರೀಕ್ಷಿಸಿ ನೋಡ್ತಿದಿಯಾ?" ಟೈಪಿಸ್ಟ್ ರಾಣಿ ಹತ್ತಿರ ಬರುತ್ತ ಕೇಳಿದಳು.
“ಯಾವುದೋ ಹಳೇ ಕಾಗದ. ಏನು ಬರೆದಿದೆ ಅಂತ ನೋಡ್ತಿದೀನಿ."
“ಸಬ್ ಎಡಿಟರ್ ಲಕ್ಷಣ ಬಿಟ್ಟು ಕೊಡಲಿಲ್ಲ ನೀನು. ಪ್ರತಿಯೊಂದನ್ನೂ ಶೋಧನೆ ಮಾಡದಿದ್ದರೆ ಮನಸ್ಸು ಕೇಳೋದಿಲ್ವೊ ಏನೋ?"
ಶೈಲಜ ನಕ್ಕಳು. “ನಾವೆಷ್ಟೋ ವಾಸಿ. ಅಮೆರಿಕಾದ ಜರ್ನಲಿಸ್ಟ್‌ಗಳಾದ್ರೆ..."
“ಸಾಕು ಸಾಕು-" ಎನ್ನುತ್ತಾ ರಾಣಿ ಟೇಬಲ್ ಮೇಲಿದ್ದ ಕಾಗದವನ್ನು ತೆಗೆದುಕೊಂಡಳು.
ಯಾವುದೋ ಪುರಾತನ ಕಾಲದ ಪುಸ್ತಕದ ಹರಿದುಹೋದ ಚೂರು ಅದು. ಬಿಸಿಲಿಗೆ ಬಾಡಿ, ಮಳೆಯಲ್ಲಿ ನೆನೆದು ಶಿಥಿಲಾವಸ್ಥೆಯಲ್ಲಿತ್ತು.
“ಎಲ್ಲಿ ಸಿಕ್ಕಿದ್ದಿದು?"
“ನಮ್ಮ ಮನೆ ಹಿತ್ತಲಲ್ಲಿ."
ರಾಣಿ ನಕ್ಕಳು. “ಹಿತ್ತಲಲ್ಲಿ ಸಿಕ್ಕ ಕಾಗದಗಳನ್ನೆಲ್ಲಾ ಇಲ್ಲಿಗೆ ತಂದು ಶೋಧನೆ ಮಾಡಿ ನೋಡೋದಿಕ್ಕೇನು ನಿನಗೆ ಸಂಬಳ ಕೊಡ್ತಿರೋದು?"
“ಯಾವ ಹುತ್ತದಲ್ಲಿ ಯಾವ ಕಾಗದ ಇದೆಯೋ ಯಾರಿಗೆ ಗೊತ್ತು?"
“ಸರಿ ನಡಿ. ಟೀಗೆ ಟೈಮಾಗ್ತಿದೆ."
ಇಬ್ಬರೂ ಕ್ಯಾಂಟೀನ್ ಕಡೆಗೆ ನಡೆಯುತ್ತಿದ್ದರೆ ಶೈಲಜ ಹೇಳಿದಳು. “ನಮ್ಮನೆ ಹಿತ್ತಲಿಂದಾಚೆ ಗೋರಿಗಳಿವೆ. ಅಲ್ಲಿಂದ ಗಾಳಿಗೆ ಹಾರಿ ಬಂದಿರಬಹುದು."
“ಯಾವ ಪುಸ್ತಕದೊಳಗಿನದೋ ಹರಿದುಹೋಗಿರಬೇಕು. ಅದಕ್ಕಷ್ಟು ಪ್ರಾಮುಖ್ಯತೆ ಕೊಡೊ ಅಗತ್ಯವಿಲ್ಲ."
ಶೈಲಜ ಮಾತನಾಡಲಿಲ್ಲ.
ಇಬ್ಬರೂ ಕ್ಯಾಂಟೀನಿನ ಒಂದು ಮೂಲೆಯಲ್ಲಿ ಕುಳಿತುಕೊಂಡರು. ಹುಡುಗ ಟೀ ತೆಗೆದುಕೊಂಡು ಬಂದು ಮುಂದಿಟ್ಟ.
ರಾಣಿ ಮುಂದೆ ಬಾಗುತ್ತ “ಎಷ್ಟು ಚೆನ್ನಾಗಿದೆಯೋ!" ಎಂದಳು.
“ಏನು?"
“ನೀನು ಹಾಗೆ ಮುಂದೆ ಬಾಗಿ ಕುಳಿತಾಗ ಕಾಣುವ ನಿನ್ನ ಹೊಟ್ಟೆಯ ಮೇಲಿನ ನೆರಿಗೆ."
ಶೈಲಜ ಚಕ್ಕನೆ ಸರಿಯಾಗಿ ಕೂಡುತ್ತಾ, “ಈಡಿಯಟ್" ಎಂದಳು.
ರಾಣಿ ನಕ್ಕಳು. “ನಾನು ಹೇಳಿದ್ರಲ್ಲಿ ತಪ್ಪೇನಿದೆ?"
ತಪ್ಪಿಲ್ಲ, ಶೈಲಜಳ ಪಕ್ಕದಿಂದ ಹೋಗುವ ಹತ್ತು ಜನರಲ್ಲಿ ಒಂಬತ್ತು ಜನ ಅವಳನ್ನು ಮತ್ತೊಮ್ಮೆ ತಿರುಗಿ ನೋಡುತ್ತಾರೆ.
“ನಿನ್ನ ವಯಸ್ಸೆಷ್ಟು?" ರಾಣಿ ಕೇಳಿದಳು.
“ಇಪ್ಪತ್ತಾರು"
“ಮೈಗಾಡ್!" ಎಂದಳು ರಾಣಿ. ಇಪ್ಪತ್ತಾರು ವರ್ಷದ ಜೀವನವನ್ನು ಡ್ರೈಯಾಗೆ ಕಳೆದುಬಿಟ್ಟೆಯಾ?"
“ಡ್ರೈ... ಅಂದರೆ?"
“ವೆಟ್ ಆಗದಿರೋದು."
ಸ್ವಲ್ಪ ನಿಶ್ಶಬ್ದ. ಟೀ ಕಪ್ಪನ್ನು ತೆಗೆದುಕೊಂಡು ಕುಡಿಯುತ್ತ ಮತ್ತೆ ರಾಣಿಯೇ ಹೇಳಿದಳು. “ಬಿಸಿಬಿಸಿ ಕಪ್ಪಲ್ಲಿನ ಟೀಯಂತೆ ಯೌವನ."
“ಹೌದು, ಮೂರು ಗುಟುಕು ಕುಡಿದರೆ ಮುಗಿದುಹೋಗುತ್ತೆ."
“ಇಲ್ಲದಿದ್ದರೆ ತಣ್ಣಗಾಗಿ ಹೋಗುತ್ತೆ."
ಈ ಮಾತಿಗೆ ಶೈಲಜ ನಕ್ಕಳು. ಎರಡೂ ಕೈಯಲ್ಲಿ ಕಪ್ಪನ್ನು ತೆಗೆದುಕೊಂಡಳು. “ನನ್ನ ಜೀವನವನ್ನು ಹೀಗೆ ಅಂಗೈಯಲ್ಲಿಟ್ಟು ಅರ್ಪಿಸಬೇಕೆಂದು ಎದುರು ನೋಡುತ್ತಿದ್ದೇನೆ. ಈ ಮನಸ್ಸು, ಈ ಶರೀರ ಒಬ್ಬನಿಗೆ. ಆ ಒಬ್ಬ ಯಾರೋ ನನಗೆ ಗೊತ್ತಿಲ್ಲ. ಇದೊಂದು ‘ವೇ ಆಫ್ ಲೈಫ್.’ ನೀನಂದಂತೆ ಜೀವನವನ್ನು ಇನ್ನೊಂದು ರೀತಿಯಲ್ಲೂ ಅನುಭವಿಸಬಹುದು. ಅದು ದೊಡ್ಡ ಕಷ್ಟವೇನಲ್ಲ. ಆದರೆ ಯಾವ ರೀತಿ ಜೀವಿಸಬೇಕು ಅನ್ನೋದು ಪ್ರಶ್ನೆ. ನಾನು ಮೊದಲನೆಯದನ್ನೇ ಇಷ್ಟಪಡ್ತೀನಿ."
“ಟ್ರಾಷ್" ಎಂದಳು ರಾಣಿ. ಇವೆಲ್ಲ ಸೆಂಟಿಮೆಂಟ್ಸ್. ನಿನ್ನೊಬ್ಬಳ ಜೀವನದ ಮೇಲೆ ನಿಮ್ಮ ಕುಟುಂಬ ಆಧಾರಪಟ್ಟಿದೆ. ಆದ್ದರಿಂದ ನಿಮ್ಮ ತಂದೆ ನಿನಗೆ ಸಂಬಂಧಗಳನ್ನು ನೋಡೋದಿಲ್ಲ. ನಿನ್ನ ತಮ್ಮಂದಿರು ರೆಕ್ಕೆ ಬಲಿಯುವವರೆಗೂ ನಿನ್ನನ್ನು ಪ್ರೇಮದಿಂದ ನೋಡಿ ಆಮೇಲೆ ಹಾರಿ ಹೋಗ್ತಾರೆ. ಆಗ ನಿನಗೆ ನಲ್ವತ್ತು ವರ್ಷಗಳಾಗಿರುತ್ತೆ."

ಒಂದು ಕ್ಷಣ ನಿಶ್ಶಬ್ದ.
ಶೈಲಜ ಖಾಲಿ ಕಪ್ಪನ್ನು ಕೆಳಗಿಟ್ಟು, ಮೆಲುದನಿಯಿಂದ “ಇವನ್ನೆಲ್ಲ ನಾನು ಯೋಚಿಸಲಿಲ್ಲಾಂತೀಯಾ?"
“ಯೋಚಿಸಿದ್ದರೆ ಹೀಗೆ ನಿಸ್ಸಾರವಾಗಿ ಕಳಿತಿರಲಿಲ್ಲ" ಎಂದಳು ರಾಣಿ. “ದೂರದಲ್ಲಿ ಸಣ್ಣ ಬೆಳಕರೇಖೆ ಕೂಡ ಕಾಣದಂತಹ ಕತ್ತಲೆಯೇ ಭವಿಷ್ಯತ್ತಾದರೆ, ದೊರಕಿದ ಮಿಂಚುಹುಳಗಳೊಂದಿಗೆ ಆಡಿಕೊಳ್ಳುವುದೇ ಒಳ್ಳೆಯದು. “ನಿಮ್ಮ ಮನೆಯನ್ನು ಬೆಳಗಿಸಿಕೊಳ್ಳಿ" ಎಂದು ಒಂದು ಅಪರಂಜಿ ಬೊಂಬೆಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಕಳುಹಿಸಿದರೆ ಅವರು ತೃಪ್ತಿ ಹೊಂದೋಲ್ಲ. ಪಕ್ಕದಲ್ಲಿ ನೋಟಿನ ಕಂತೆ ಇದೆಯೋ, ಇಲ್ಲವೋ ಅಂತ ನೋಡ್ತಾರೆ. ನಿನ್ನ ಶರೀರವನ್ನು ನೀನೆಷ್ಟೆ ಪವಿತ್ರವಾಗಿಟ್ಟುಕೊ-ನಿನ್ನ ಮನಸ್ಸನ್ನೂ ಪವಿತ್ರವಾಗಿಟ್ಟುಕೊಂಡರೂ-ಮದುವೆ ಹತ್ತಿರ ಬಂದ ಕೂಡಲೇ ಮತ್ತೆ ಹಣವೇ ಪ್ರಧಾನ ಪಾತ್ರ ವಹಿಸುತ್ತೆ. ಹಾಗಿರುವಾಗ ಅಂತಹ ಗಂಡಿಗಾಗಿ ಯಾಕೆ ಶರೀರವನ್ನು ಪವಿತ್ರವಾಗಿಟ್ಟುಕೊಳ್ಳಬೇಕು? ಎಂಜಾಯ್!"

ಕಣ್ರೆಪ್ಪೆಯನ್ನು ಅಲುಗಿಸದೆ ಅವಳನ್ನೇ ನೋಡಿದಳು ಶೈಲಜ.
ಅಂತರ್ಲೀನವಾಗಿ ಹಣ, ಮನುಷ್ಯನ ನೈತಿಕ ತಳಹದಿಯ ಮೇಲೆ ಎಷ್ಟು ಪ್ರಭಾವ ತೋರಿಸುತ್ತಿದೆ!
ಈ ಹೊಸ ಥಿಯರಿ ಕಹಿಯಾದರೂ ಸತ್ಯ. ಆದರೆ ಜೀರ್ಣಿಸಿಕೊಳ್ಳಬೇಕು.
ಪೊರೆಪೊರೆಯಾಗಿ ಬಿಡಿಸಿ ನೋಡಿದರೆ ಮುಗ್ಧಳಾಗಿರಬೇಕಿದ್ದ ಸ್ತ್ರೀಯನ್ನು ಬಲಿತು ಹೋಗುವ ಹಾಗೆ ಮಾಡಿದ್ದು ಈ ವ್ಯವಸ್ಥೆಯೇ ಏನೋ ಎನಿಸುತ್ತೆ.
“ಏನು ಯೋಚಿಸ್ತಿದೀಯಾ?"
“ವ್ಯವಸ್ಥೆ ಬದಲಾಗಬೇಕಾದರೆ ಏನು ಮಾಡಬೇಕು?"
ರಾಣಿ ನಕ್ಕಳು. “ಪ್ರಳಯ ಬರಬೇಕು."
ಶೈಲಜ ನಗಲಿಲ್ಲ. “ಈ ವ್ಯವಸ್ಥೆ ಬದಲಾಗುವುದಕ್ಕಾಗಿ ಪ್ರಳಯವೇ ಬರಬೇಕಾದರೆ, ಆ ಪ್ರಳಯವನ್ನು ಈ ಕ್ಷಣವೇ ಆಹ್ವಾನಿಸ್ತಿದ್ದೀನಿ ನಾನು. ಪ್ರಳಯ ಬರಬೇಕು. ಆ ಪ್ರಳಯ ಕಾಲ ಝಂಝಾಮಾರುತದಲ್ಲಿ...... ಪರಿಶುದ್ಧವಾದ ಮನಸ್ಸಿನಿಂದ, ಪರಿಶುದ್ಧವಾದ ವ್ಯವಸ್ಥೆಯಲ್ಲಿ, ಮನುಷ್ಯ ಹೊಸ ಜೀವನವನ್ನು ಪ್ರಾರಂಭಿಸಬೇಕು."
ರಾಣಿ ಅವಳ ಕೈ ಹಿಡಿದುಕೊಂಡು, “ಏಯ್ ಏನಿದು? ಎಲ್ಲರೂ ನೋಡ್ತಿದ್ದಾರೆ" ಎಂದಳು.
ಶೈಲಜ ತನ್ನ ಆವೇಶಕ್ಕೆ ತಾನೇ ನಾಚಿಕೆಪಟ್ಟು “ಸಾರಿ, ನಡಿ ಹೋಗೋಣ" ಎಂದಳು.
ಇಬ್ಬರೂ ಮೇಲಕ್ಕೆ ಶೈಲಜಳ ಸೀಟಿನ ಹತ್ತಿರ ಬಂದರು. ರಾಣಿ ಕುರ್ಚಿಯಲ್ಲಿ ಹಿಂದಕ್ಕೊರಗಿ ಕುಳಿತು, “ಯಾವುದೀ ಫೈಲು?" ಎಂದು ಕೇಳಿದಳು ಫೈಲನ್ನು ಬಿಚ್ಚುತ್ತ.
“ಇಂಟರ್‌ವ್ಯೂ ಅಪ್ಲಿಕೇಷನ್ಸ್. ನಾಳೆ ಇಂಟರ್‌ವ್ಯೂ ಇದಿಯಲ್ಲ."
“ಹೊಸ ಹುಡುಗರು ಬರ್ತಿದ್ದಾರನ್ನು." ಒಂದೊಂದೇ ಅಪ್ಲಿಕೇಷನ್ನನ್ನು ಅದರ ಬಲಭಾಗದ ಮೂಲೆಯಲ್ಲಿದ್ದ ಫೊಟೋ ನೋಡುತ್ತ ಪೇಜುಗಳನ್ನು ತಿರುಗಿಸಲಾರಂಭಿಸಿದಳು ರಾಣಿ.
ಹಾಗೆ ನೋಡುತ್ತಿದ್ದವರು ಒಂದೆಡೆ ನಿಲ್ಲಿಸಿ “ಹಾಯ್!" ಎಂದಳು. “ಈ ಹುಡುಗ ನೋಡು ಎಷ್ಟು ಚೆನ್ನಾಗಿದ್ದಾನೊ."
ಶೈಲಜ ಅತ್ತ ನೋಡಲಿಲ್ಲ. “ಇದ್ದರೆ ಏನೀಗ?" ಎಂದಳು.
“ಸರಿಬಿಡು ತಿಳೀದೆ ಹೇಳಿದೆ ಆ ಮಾತನ್ನ" ನಕ್ಕಳು. ಮತ್ತೆ ಫೊಟೋವನ್ನು ನೋಡುತ್ತ “ಆದ್ರೂ ಇಷ್ಟು ಅಂದವಾಗಿದ್ದಾನೆ ಅಂದ್ರೆ ಈಗಾಗಲೇ ಯಾರ ಜೊತೆಯಲ್ಲೋ ಪ್ರೇಮದ ಬಲೆಯಲ್ಲಿ ಬಿದ್ದಿರ್ತಾನೆ" ಎಂದಳು.
“ಲಂಚ್ ಟೈಂ ಆಗಿಹೋದ ಹಾಗಿದೆ" ಶೈಲಜ ಜ್ಞಾಪಿಸಿದಳು.
ರಾಣಿ ನಗುತ್ತ ಎದ್ದು, “ಸರಿ ಬಿಡು... ಸಂಜೆ ಸಿಗ್ತೀನಿ" ಎಂದು ಹೊರಟುಹೋದಳು.
ಅವಳು ಹದ ಮೇಲೆ ಶೈಲಜ ಅಪ್ಲಿಕೇಷನ್ ಫೈಲ್‌ನಲ್ಲಿದ್ದ ಫೊಟೋವನ್ನು ನೋಡಿದಳು. ರಾಣಿ ಹೇಳಿದಂತೆ ಅವನು ಬಹಳ ಸುಂದರವಾಗಿದ್ದಾನೆ. ಮುಗ್ಧನಾಗಿ, ತನಗಿಂತ ಚಿಕ್ಕವನು.
ರಮಣ.
ಹೆಸರನ್ನು ನೋಡಿದಳು.
ಬಿ.ಎ. ಯೂನಿವರ್ಸಿಟಿ ಫಸ್ಟ್.
ಫೈಲಿನಲ್ಲಿ ಅಪ್ಲಿಕೇಷನ್ನನ್ನು ಇಟ್ಟು, ಅದನ್ನು ಡ್ರಾಯರ್‌ನಲ್ಲಿ ದೂಡಿ ತನ್ನ ಕೆಲಸದಲ್ಲಿ ಮುಳುಗಿಹೋದಳು.

***
ಸಂಜೆ ಐದು ಗಂಟೆವರೆಗೂ ಅವಳಿಗೆ ಉಸಿರಾಡಲಾಗದಷ್ಟು ಕೆಲಸ ತಗುಲಿತು. ಮ್ಯಾಟರನ್ನು ಕಂಪೋಜಿಂಗ್‌ಗೆ ಕೊಡುವುದು, ಕಂಪೋಜ್ ಆಗಿ ಬಂದ ಪ್ರೂಫುಗಳನ್ನು ತಿದ್ದುವುದು, ಅಡ್ವರ್‌ಟೈಜಮೆಂಟ್ ಬ್ಲಾಕುಗಳಿಗಾಗಿ ಫೋನು ಮಾಡುವಂತಹುದು. “ಶತ್ರುಗಳಿಗೂ ಕೂಡ ಈ ಸಬ್ ಎಡಿಟರ್ ಕೆಲಸ ಬೇಡಪ್ಪ!" ಎಂದು ಅವಳು ಮೈಮುರಿಯುವಾಗ ರಾಣಿ ಬಂದಳು.
“ಹೋಗೋಣವೇ?"
“ಇದೋ ಆಗಿಹೋಯ್ತು."
ಮತ್ತೆ ಐದು ನಿಮಿಷಗಳಲ್ಲಿ ಅವಳು ಕೆಲಸ ಮುಗಿಸಿದಳು.
ಇಬ್ಬರೂ ಹೊರಬರುತ್ತಿರುವಾಗಿ ರಾಣಿ ಕೇಳಿದಳು.
“ಆ ಕಾಗದದಲ್ಲಿ ಏನಿದೆ ಅಂತ ತಿಳಿದುಕೊಂಡೆಯಾ?"
“ಯಾವ ಕಾಗದ?"
“ಅದೇ! ಗೋರಿಗಳ ನಡುವೆ ಸಿಕ್ತು ಅಂದೆಯಲ್ಲ-ಅದು"
“ಉಹ್ಞುಂ... ಎಲ್ಲಿ ಬಿಡುವು ಸಿಕ್ಕಿದರಲ್ಲವೇ!"
ಅವರಿಬ್ಬರೂ ಕಾರಿಡಾರ್‌ನಲ್ಲಿ ನಡೆಯುತ್ತಿದ್ದರೆ ಅಟೆಂಡರ್ ಬರುತ್ತಿರುವುದು ಕಾಣಿಸಿತು. ಅವನ ಹೆಸರು ಇಸ್ಮಾಯಿಲ್.
ರಾಣಿ ಅವನನ್ನು ನಿಲ್ಲಿಸಿ, “ಈ ಕಾಗದದಲ್ಲಿ ಏನು ಬರೆದಿದೆಯೋ ಹೇಳ್ತೀಯಾ?" ಎಂದಳು.
ಅವನು ಕಾಗದವನ್ನು ತೆಗೆದುಕೊಂಡ. ಓದುತ್ತಿದ್ದಂತೆಯೇ ಅವನ ಮುಖದಲ್ಲಿ ಭಯದ ಛಾಯೆ ಎದ್ದು ಕಾಣಿಸಿತು.
“ಏನಿದೆ ಅದರಲ್ಲಿ?" ನಿಶ್ಶಬ್ದವನ್ನು ಭರಿಸಲಾಗದೆ ಕೇಳಿದಳು.
ಅವನು ಮಾತನಾಡಲಿಲ್ಲ.
“ಏನದು... ಉರ್ದುನಾ?"
ಅವನು ಕಾಗದವನ್ನು ಮತ್ತೊಮ್ಮೆ ನೋಡಿದ.
“ಅಲ್ಲ... ಅರಬ್ಬಿ!"
“ನಿನಗೆ ಬರುತ್ತಾ?"
“ಬರುತ್ತೆ."
ಅವನು ಓದಿದ. ಯೋಮಾಯುನ್ “ಫಿಕ್ಕ್ ಫಿಸೂರಿ ಪತುತೂನಾ ಆಫ್ ವಾಜಾ!"
“ಅಂದರೆ...?" ಇಬ್ಬರೂ ಒಂದೇ ಸಾರಿ ಕೇಳಿದರು.
ಅವನು ತಲೆಯನ್ನು ಮೇಲಕ್ಕೆತ್ತಿದ. ಅವನ ಕಣ್ಣುಗಳು ಕಾಂತಿಹೀನವಾಗಿವೆ. ಮುಖದಲ್ಲಿ ಯಾವುದೇ ಭಾವವೂ ಇಲ್ಲ. ಅನಾಸಕ್ತ ಕಂಠದಿಂದ ಅವನು ಹೇಳಿದ.
“ಒಂದು ದಿನ ಶಂಖವು ಊದಲಾಗುತ್ತದೆ. ಆಕಾಶ ತೆರೆಯಲ್ಪಡುತ್ತದೆ. ಆಗ ಶವಗಳೆಲ್ಲ ಗುಂಪು ಗುಂಪಾಗಿ ಎದ್ದು ಬರುತ್ತವೆ."
ಅವನು ಆ ಮಾತನ್ನು ಹೇಳುತ್ತಿರುವಂತೆಯೇ ದೂರದಲ್ಲೆಲ್ಲೋ ಗುಡುಗಿತು. ಆ ರಾತ್ರಿ ಸುರಿಯುವ ಕುಂಭವೃಷ್ಟಿಯ ಸೂಚನೆಯಾಗಿ ಮೇಘಗಳು ಸೇರಲಾರಂಭಿಸಿದುವು.

 

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 June, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books