Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಬಳ್ಳಾರಿಯ ಗಿಡ್ಡ ಫಣಿ ಎಂಬ ಬಾಲ್ಯದ ಗೆಳೆಯನ ನೆನಪಿನಲ್ಲಿ

ಯಾಕೆ ನೆನಪಾಗುತ್ತದೆ ಊರು?
ಅಲ್ಲಿ ಅಮ್ಮ ಕಟ್ಟಿದ ಮನೆಯಿದೆ. ಅಮ್ಮ ಇಲ್ಲ. ಮತ್ಯಾವ ಕರುಳುಬಳ್ಳಿಯ ಸಂಬಂಧಿಕರೂ ಇಲ್ಲ. ಎಲ್ಲರೂ ಬೆಂಗಳೂರಿಗೆ ಗುಳೇ ಬಂದು ಬಹಳ ವರ್ಷಗಳಾದವು. ಆದರೂ ಬಳ್ಳಾರಿಯ ಕಡೆಗೆ ಒಮ್ಮೊಮ್ಮೆ ಜೀವ ಜಗ್ಗಿದಂತಾಗುತ್ತದೆ. ಪ್ರಭಾತ್ ಟಾಕೀಸಿನ ಎದುರಿಗಿನ ಸಂದಿಯಲ್ಲಿದ್ದ ಥಿಯಸಾಫಿಕಲ್ ಲಾಡ್ಜ್ ಆವರಣದ ಬಾಡಿಗೆ ಮನೆ, ಪಿಂಜಾರ ಓಣಿಯ ಅಮ್ಮನ ಸಿಲ್ವರ್ ಜುಬಿಲಿ ಸ್ಕೂಲು, ವಡ್ಡರ ಬಂಡೆಯ ಎದುರಿಗಿದ್ದ ಅವಳ ಮನೆ, ಮೈತುಂಬ ಸಾಲ ಮಾಡಿಕೊಂಡು ಅಮ್ಮ ಕಟ್ಟಿಸಿದ ಅವಿಷ್ಟೂ ಮನೆ, ರೈಲು ಹಳಿಯ ಪಕ್ಕಕ್ಕಿದ್ದ ಲಲಿತೆಯ ಮನೆ-ಹುಂ, ಅದು ಬರೀ ಮನೆಗಳ ನೆನಪಲ್ಲ. ಅಲ್ಲಿ ನಾನು ಕರೆಕ್ಟಾಗಿ ಮೂವತ್ತು ವರ್ಷಗಳ ಬದುಕು ಕಳೆದಿದ್ದೇನೆ. ಊರ ತುಂಬ ಗೆಳೆಯರಿದ್ದಾರೆ. ಬೀದಿ ಬೀದಿಗೂ ಪರಿಚಿತರು. ಹೆಜ್ಜೆ ಕಿತ್ತಿಟ್ಟ ಕಡೆಗೊಂದು ನೆನಪು. ಆನಿಕೊಂಡ ಗೋಡೆಗೊಂದು ಪುಟ್ಟ ಕತೆ. ನನ್ನೂರು ನನ್ನ ಪಾಲಿಗೆ ಯಾವತ್ತಿಗೂ ಮುಗಿಯದ ನೆನಪುಗಳ ಕಣಜ.
ಇವತ್ತೇಕೋ ಫಣಿ ನೆನಪಾದ.

ಅವತ್ತಿಗೆ ಫಣಿ ಎಂಬ ಹೆಸರಿನವರೇ ಮೂವರು ಮಿತ್ರರಿದ್ದರು. ಅಲ್ಲಿ ಪ್ರತಿಯೊಬ್ಬರ ಹೆಸರಿಗೂ ಒಂದು ಪ್ರಿಫಿಕ್ಸ್ ಇರುತ್ತದೆ. ಇವನು ಗಿಡ್ಡ ಫಣಿ. ಇನ್ನೊಬ್ಬನು ಸಿ.ಫಣಿ. ಮೂರನೆಯವನು ಎಂ.ಡಿ. ಫಣಿ! ಕೆಲವೊಮ್ಮೆ ಹೆಸರುಗಳಿಗಿಂತ ಅವುಗಳ ಪ್ರಿಫಿಕ್ಸುಗಳೇ ಜಾಸ್ತಿ ಜನಪ್ರಿಯವಾಗಿರುತ್ತಿದ್ದವು. ನನಗಿಂತ ಕೊಂಚ ಹಿರಿಯನೊಬ್ಬಾತನನ್ನು ನಾವು "ಮುಂಡೇ ಮಗ ಇರುಪಾಕ್ಷಿ” ಅಂತ ಕರೆಯುತ್ತಿದ್ದೆವು. ವಿರುಪಾಕ್ಷೀ ಅಂತ ಕೂಗಿದರೆ ಆತನೇ ತಿರುಗಿ ನೋಡುತ್ತಿರಲಿಲ್ಲವೇನೋ? ಮುಂಡೇಮಗ ಎಂಬ ಪ್ರಿಫಿಕ್ಸು ಅಂಥ ಪರಿ ಪಾಪ್ಯುಲರ್ರು. ಕಾರಣವಿಷ್ಟೆ; ಆತ "ಮುಂಡೇಮಗ" ಎಂಬ ನಾಟಕವೊಂದರಲ್ಲಿ ಪ್ರಮುಖ ಪಾತ್ರವಹಿಸಿದ್ದ. ಅದೇ ರೀತಿ ಹಲಿಬಿಲಿ ಪದ್ದಿ ಇದ್ದಳು. ಸಿಂಬಳ ಕಲ್ಲಿ ಇದ್ದ. ಮಾಲ್‌ಪಾಟ್ ಸೀನ ಇದ್ದ. ರೌಡಿ ರಾಘಿ ಇದ್ದ. ಕಂಕಡಿ ರಾಘಿ ಇದ್ದ. ಛಿನಾಲ್ಕೆ ರಸೂಲು, ಭಾಡಕೋ ರಷೀದು, ಸೈತಾನ್ ವಲಿ, ಪೀಡೆ ಸತ್ನಾರಾಯಣ, ಗಲೀಜ್ ಬಾದರ್, ಕರೆಂಟ್ ರಾಮುಡು, ಎರಿಪೂಕ ಪಾಂಡು, ಪೀಣಗಿ ಸತ್ತಿ, ಕಲಮಂಗಿ ಕಿಟ್ಟ, ಪಾತ್ರ ಕಿಟ್ಟಹೀಗೆ ಪ್ರತಿ ಹೆಸರಿಗೂ ಒಂದು ಬಾಲ. ಹೆಸರಿಗಿಂತ ಬಾಲದ್ದೇ ಖ್ಯಾತಿ.

ಆ ಸಾಲಿನ ನನ್ನ ಆತ್ಮೀಯ ಮಿತ್ರ ಗಿಡ್ ಫಣಿ. ನಾವಿಬ್ಬರೂ ನಾಲ್ಕನೆಯ ತರಗತಿಯಿಂದ ಕ್ಲಾಸ್ ಮೇಟುಗಳು. ಬಳ್ಳಾರಿಯ ವಾರ್‌ಡ್ಲಾ ಹೈಸ್ಕೂಲು ಮೈದಾನದಲ್ಲಿ ಒಂದೆಡೆಗೆ ವರಚ್ಚಾಗಿರುವ ಲಂಡನ್ ಮಿಷನ್ ಸ್ಕೂಲಿನ ಮಣೆಯ ಮೇಲೆ ಅಕ್ಕಪಕ್ಕದಲ್ಲಿ ಕೂಡುತ್ತಿದ್ದ ಹುಡುಗರು ನಾವು. ಶಾಲೆಯ ಹೆಸರನ್ನು ಸರಿಯಾಗಿ ಹೇಳಲು ಬಾರದ ವಯಸ್ಸು. ಎಲ್ಲಿ ಓದ್ತೀರೋ? ಎಂದು ಯಾರೇ ಕೇಳಿದರೂ ದೊಡ್ಡ ಹೆಮ್ಮೆಯ ದನಿಯಲ್ಲಿ "ಲಂಡನ್ ಮಿಂಡನ್ ಸ್ಕೂಲ್!" ಅನ್ನುತ್ತಿದ್ದೆವು. ಶಾಲೆಯ ಕ್ರೈಸ್ತ ಟೀಚರುಗಳು ನೆತ್ತಿಗೆ ಮೊಟಕುತ್ತಿದ್ದರು. ಆ ದಿನಗಳಲ್ಲಿ ನನ್ನ ಮನೆ ಪ್ರಭಾತ್ ಟಾಕೀಸಿನ ಎದುರಿಗಿನ ಸಂದಿಯಲ್ಲಿತ್ತು. ಗಿಡ್ ಫಣಿಯ ಮನೆ ಬಹುಶಃ ಬ್ರಾಹ್ಮಣರ ಬೀದಿಯಲ್ಲಿತ್ತು. ಫಣಿ ಭೂಷಣ ಕುಮಾರ್ ಎಂಬುದು ಅವನ ಪೂರ್ತಿ ಹೆಸರಾ? ನೆನಪಿಗಿಲ್ಲ. ಕಪ್ಪನೆಯ, ಗಿಡ್ಡನೆಯ ಸ್ಮಾರ್ತ ಬ್ರಾಹ್ಮಣರ ಮನೆಯ ಹುಡುಗ. ಕೈಕಾಲು ಇಷ್ಟಿಷ್ಟೇ ಇದ್ದವು. ಕಣ್ಣು ದೊಡ್ಡಗೆ ಪಿಳಪಿಳ. ಸಣ್ಣದಕ್ಕೂ ಬಲು ಹೆದರುತ್ತಿದ್ದ. ನಾಲ್ಕನೆಯ ಕ್ಲಾಸಿನ ಹೊತ್ತಿಗಾಗಲೇ ದಪ್ಪಗೆ ಬೆಳೆದಿದ್ದ.

ಆಮೇಲೆ, ಅಮ್ಮ ಸತ್ಯನಾರಾಯಣ ಪೇಟೆಯಲ್ಲಿ ಮನೆ ಕಟ್ಟಿಸಿದಳು. ನನ್ನನ್ನು ಸತ್ಯನಾರಾಯಣ ಪೇಟೆಯ ನಾಗಮ್ಮ ಬಡಿ(ಶಾಲೆ)ಗೆ ಸೇರಿಸಲಾಯಿತು. ಲಂಡನ್ ಮಿಷನ್ ಶಾಲೆಯಲ್ಲಿ ಮುಂದುವರೆದ ಗಿಡ್ ಫಣಿಗೂ ನನಗೂ ಟಚ್ಚು ತಪ್ಪಿಹೋಯಿತು. ಮುಂದೆ ಅವನು ವಾರ್‌ಡ್ಲಾ ಹೈಸ್ಕೂಲು ಸೇರಿದ. ನಾನು ಮುನಿಸಿಪಲ್ ಹೈಸ್ಕೂಲಿಗೆ ಭರ್ತಿಯಾದೆ. ಅದೇ ಶಾಲೆಗಳು ಕಾಂಪೋಸಿಟ್ ಜೂನಿಯರ್ ಕಾಲೇಜುಗಳಾದವು. ನಾವು ಪಿಯುಸಿಗೆ ಬಂದೆವು. ಅಲ್ಲಿಯ ತನಕ ನಮ್ಮ ನಿತ್ಯದ activetyಗಳೇ ಬೇರೆ. ಕದ್ದು ಬೀಡಿ ಸೇದುವುದು, ಅವರಿವರಿಗೆ ಹಿಡಿದು ಬಡಿಯೋದು, ಕಾಮನ ಹುಣ್ಣಿಮೆಯಂದು ಬೇಲಿ, ಕದ, ಗೇಟು ಕದ್ದೊಯ್ದು ಬೆಂಕಿಗೆ ಹಾಕಿ ಬಾಯಿ ಬಡಿದುಕೊಳ್ಳುವುದು, ಕಂಡವರಿಗೆ ಓಕುಳಿ ಎರಚಿ ಬೈಗುಳ ತಿನ್ನುವುದು-ಬರೀ ಇಂಥವೇ ಚೇಷ್ಟೆ. ಇವುಗಳ ಮಧ್ಯೆ ಗಿಡ್ ಫಣಿ ಏನಾಗಿ ಹೋದ ಎಂಬುದು ಗೊತ್ತೇ ಇರಲಿಲ್ಲ.

ಬಳ್ಳಾರಿಯ ಬ್ರಾಹ್ಮಣರ ಮನೆಗಳದೇ ಒಂದು ವೈಚಿತ್ರ್ಯ. ಅವರು ಅಲ್ಲಲ್ಲಿ ಚೆದುರಿ ಹೋಗಿದ್ದಾರೆ. ಬ್ರಾಹ್ಮಣ ಬೀದಿಯಲ್ಲಿ ಮಾಧ್ವರ ಮನೆಗಳಿವೆ. ಕಾಳಮ್ಮನ ಬೀದಿಯಲ್ಲೂ ಅಷ್ಟಿಷ್ಟು ಬ್ರಾಹ್ಮಣ ಮನೆಗಳು. ಅದು ಬಿಟ್ಟರೆ ಮೆಜಾರಿಟಿ ಬ್ರಾಹ್ಮಣರಿರುವುದು ಸತ್ಯನಾರಾಯಣ ಪೇಟೆಯಲ್ಲಿ. ಅಲ್ಲೂ ಮತ್ತೆ ಎರಡು ವರ್ಗಗಳಿವೆ. ಕೊಂಚ ಶ್ರೀಮಂತ-ಮಧ್ಯಮವರ್ಗದ ಬ್ರಾಹ್ಮಣರು ಪ್ರತ್ಯೇಕವಾದ ಕ್ರಾಸ್‌ಗಳಲ್ಲಿ ಬದುಕುತ್ತಾರೆ. ತೀರ ಬಡಬ್ರಾಹ್ಮಣರು ಎರಡು ಕ್ರಾಸ್‌ಗಳ ನಡುವಿನ ಓಣಿಗಳಲ್ಲಿ ಬದುಕುತ್ತಾರೆ. ಈ ಸತ್ಯನಾರಾಯಣ ಪೇಟೆಯ ಬ್ರಾಹ್ಮಣ ಪ್ರಪಂಚಕ್ಕೂ, ನಗರದ ಮಧ್ಯಭಾಗದಲ್ಲಿರುವ ಬ್ರಾಹ್ಮಿನ್‌ಸ್ಟ್ರೀಟ್‌ನ ಬ್ರಾಹ್ಮಣ ಪ್ರಪಂಚಕ್ಕೂ ಅಜ- ಗಜ ವ್ಯತ್ಯಾಸ. ನಾನು ಸತ್ಯನಾರಾಯಣ ಪೇಟೆಯ ಬ್ರಾಹ್ಮಣ ಜಗತ್ತಿನವ. ಫಣಿ, ಬ್ರಾಹ್ಮಣರ ಬೀದಿಯ ಹುಡುಗ. ಒಬ್ಬರಿಗೊಬ್ಬರು ಟಚ್ಚೇ ಇಲ್ಲದೆ ಬೆಳೆದುಬಿಟ್ಟೆವು.

ಇಂಥ ಬ್ರಾಹ್ಮಣರಿಬ್ಬರನ್ನು ಮತ್ತೆ ಕಾಲೇಜಿನ ದಿನಗಳಲ್ಲಿ ಒಂದು ಮಾಡಿದ್ದು-ಶುದ್ಧ ಜಂಗಮ ಕೆ.ಯಂ.ಮಹೇಶ್ವರ ಸ್ವಾಮಿ! ಆ ದಿನಗಳಲ್ಲಾಗಲೇ ಮಹೇಶ್ವರ ಸ್ವಾಮಿ ಕನ್ನಡದ ಕಟ್ಟಾಳು. ವಾಟಾಳ್ ನಾಗರಾಜ್‌ರ ಅನುಯಾಯಿ. ರಾಯಚೂರಿನಿಂದ ವಲಸೆ ಬಂದು ಬಳ್ಳಾರಿಯ ತನ್ನ ಬಂಧುಗಳ ಮನೆಯಲ್ಲಿ ಓದಲು ನೆಲೆಗೊಂಡು, ಮೊಟ್ಟಮೊದಲ ಬಾರಿಗೆ ಬಳ್ಳಾರಿಯಲ್ಲಿ ವಿದ್ಯಾರ್ಥಿ ಮಟ್ಟದಲ್ಲಿ ಕನ್ನಡ ಪರವಾದ ಜಾಗೃತಿ ಮೂಡಿಸಿದ ಮಿತ್ರ. ಮಹೇಶ್ವರ ಸ್ವಾಮಿ ಭಾಷಣ ಮಾಡುತ್ತಾನೆ ಅನ್ನುವುದೇ ನಮಗೊಂದು ಸೋಜಿಗ. ಸ್ವಾಮಿಯ ಜೊತೆಯಲ್ಲಿ ಒಂದು ಪುಟ್ಟ ಖಾಕಿ ಪ್ಯಾಂಟು, ಅರ್ಧ ತೋಳಿನ ಬಿಳೀ ಶರಟು ಹಾಕಿಕೊಂಡು ಬಂದಿದ್ದ ಆಕೃತಿಯನ್ನು ತಡೆದು ನಿಲ್ಲಿಸಿ.
"ನೀನು ಗಿಡ್ ಫಣಿ ಅಲ್ಲೇನಲೆ?'' ಅಂತ ಕೇಳಿದ್ದು ನನಗೆ ನೆನಪಿದೆ.

"ಹ್ಞಾಂ... ಲಂಡನ್ ಮಿಂಡನ್!" ಅಂದವನೇ ಫಣಿ ಇಷ್ಟಗಲ ಕಣ್ಣುಗಳಲ್ಲಿ ನಕ್ಕಿದ್ದ. ಆ ವಯಸ್ಸಿಗೆ ಫಣಿ ಮತ್ತೂ ದಪ್ಪಗೆ ಮತ್ತೂ ಕುಳ್ಳಗೆ ಕಾಣುತ್ತಿದ್ದ. ಆದರೆ ಚಿಕ್ಕಂದಿನಲ್ಲಿ ಗೋಚರವಾಗದಿದ್ದ ಒಂದು ಅಸಾಧ್ಯವಾದ ಹಾಸ್ಯ ಅವನಲ್ಲಿ ಮೊಳೆತುಬಿಟ್ಟಿತ್ತು. ಒಂದು ಕಡೆಯಿಂದ ಅವನು ನಮ್ಮ ಮೇಷ್ಟ್ರುಗಳನ್ನೆಲ್ಲ ಅಣಕಿಸುತ್ತಿದ್ದ. ಬಳ್ಳಾರಿಯ ಮಾರವಾಡಿಗಳ ಮಾತು, ನಡಿಗೆಗಳನ್ನೆಲ್ಲ ಗೇಲಿ ಮಾಡುತ್ತಿದ್ದ. ಓರಗೆಯ ಹುಡುಗಿಯರನ್ನು ಉಳಿದಾರಿಂದಲೂ ಸಾಧ್ಯವಾಗದ ರೀತಿಯಲ್ಲಿ ತಮಾಷೆ ಮಾಡುತ್ತಿದ್ದ.

ಅದೊಂದು ದಿನ ಹೋಳಿ ಹಬ್ಬದ ಭರಾಟೆ. ನಾನು, ಫಣಿ, ಚಿನ್ನಿ, ಗೋಯಿಂದ ಮುಂತಾದ ಮಿತ್ರರೆಲ್ಲ ರಸ್ತೆಯಲ್ಲಿ ನಿಂತು ಹೋದವರಿಗೆ ಬಂದವರಿಗೆ ಬಣ್ಣ ಎರಚುತ್ತಿದ್ದೆವು. ಅಷ್ಟರಲ್ಲಿ ಬಂದವರು ಬಳ್ಳಾರಿಯ ಅಂದಿನ ಖ್ಯಾತ ಮಕ್ಕಳ ಡಾಕ್ಟರ್ ಪಾಂಡುರಂಗರಾವ್. ಆತ ಕೊಂಚ ಗಂಭೀರ ಮನುಷ್ಯ. ಅಚ್ಚ ಬಿಳೀ ಪ್ಯಾಂಟು ಷರಟು ಹಾಕಿಕೊಂಡು ಸ್ಕೂಟರಿನಲ್ಲಿ ಹೊರಟಿದ್ದರು. ನಮ್ಮನ್ನು ನೋಡಿದ ಕೂಡಲೆ ಗಕ್ಕನೆ ಬ್ರೇಕು ಹಾಕಿ "ನನ್ನ ಮ್ಯಾಲ ಏನರ ಬಣ್ಣ ಹಾಕಿದ್ರೋ... ನಿಮ್ಮ ಹೆಣಾ ಎತ್ತತೀನಿ... ರ‍್ಯಾಸ್ಕೆಲ್ಸ್!" ಅಂತ ಗದರಿದರು. "ಏ.. ಹೆಣಾ ಎತ್ತತಾರಂತೆ ಬಿಡ್ರೋ... ಡಾಕ್ಟ್ರ ಸಾವಾಸ ಬ್ಯಾಡಾ..." ಅಂದವನೇ ಗಿಡ್ ಫಣಿ ನಮ್ಮನ್ನೆಲ್ಲ ಚೆದುರಿಸಿದ. ಮುಖದಲ್ಲಿ ಅಸಾಧ್ಯ ಭಯದ ಪ್ರದರ್ಶನ. "ಇರ್ಲಿ ಹೋರೀ... ಡಾಕ್ಟ್ರೇ, ನೋಡಿ ನೋಡಿ ನಿಮಗ್ಯಾರು ಹಾಕ್ತಾರ ಬಣ್ಣ? ಪಾಪ ಡಾಕ್ಟ್ರು ನೀವು" ಅಂದು ದಾರಿ ಮಾಡಿಕೊಟ್ಟ. ಡಾ.ಪಾಂಡುರಂಗರಾವ್‌ಗೆ ಖಾತರಿಯಾಗಿರಬೇಕು. ಈ ಹುಡುಗರು ಹೆದರಿದ್ದಾರೆ ಅಂದುಕೊಂಡು ಸ್ಕೂಟರು ಗೇರಿಗೆ ಹಾಕಿ ಎರಡು ಹೆಜ್ಜೆ ಮುಂದಕ್ಕೆ ಹೋಗಿರಬೇಕು "ಹಾಕ್ರೋ..." ಎಂದು ಕೂಗಿಬಿಟ್ಟ ಫಣಿ. ಕೈಲಿದ್ದ ಅಷ್ಟೂ ಬಣ್ಣ ಡಾಕ್ಟರ್ ಮೈಮೇಲೆ ಸುರಿದುಬಿಟ್ಟೆವು. ಕಂಗಾಲಾದ ಡಾಕ್ಟರು ಸ್ಕೂಟರಿನಿಂದ ಇಳಿದು ಕಕಮಕ ಅಂತ ನೋಡುತ್ತ ನಿಂತರೆ ಫಣಿ ಎಲ್ಲಿದ್ದಾನೆ? ಅವನು ಎಲ್ಲರಿಗಿಂತ ಮೊದಲೇ ಪರಾರಿ. ಅಲ್ಲೆಲ್ಲೋ ದೂರ ನಿಂತು, "ಡಾಕ್ಟ್ರು ಹೆಣಾ ಎತ್ತತಾನ್ನೋ... ಭಡಾನ (ಬೇಗನೆ) ಬರ್ರೀ!" ಎಂದು ಕೂಗಿ ನಗುತ್ತಿದ್ದ.

ಪರಾರಿ ಎಂಬುದು ಅವನ ಅಸಲಿ ತಾಕತ್ತು ಅಂತ ಆಮೇಲೆ ಗೊತ್ತಾಯಿತು. ಸಣ್ಣ ಗಲಾಟೆಯಾದರೂ ಎಲ್ಲರಿಗಿಂತ ಮೊದಲೇ ಫಣಿ ಓಡಿ ಬಿಡುತ್ತಿದ್ದ. "ಏನ್ ಮಾಡ್ಲೆಪಾ? ಗಿಡ್ಡಕ್ಕಿದ್ದೀನಿ. ದಪ್ಪಗಿದ್ದೀನಿ. ಓಡಾದು ಆಗಬೇಕಲ್ಲ? ಮೊದಲೇ ಭಯ. ಏಟುಗಳು ಬಿದ್ರೆ ಆಮ್ಯಾಲೆ ಅಳೋನ್ಯಾರು?" ಅನ್ನುತ್ತಿದ್ದ. ಆದರೆ ನಮ್ಮ ಗ್ಯಾಂಗಿನ ನಿರುಪದ್ರವಿ ತರಲೆಗಳಲ್ಲೆಲ್ಲ ಭಾಗಿಯಾಗುತ್ತಿದ್ದ. ಸ್ಟ್ರೈಕು-ಮೆರವಣಿಗೆ ಆದರೆ ಎಲ್ಲರಿಗಿಂತ ಮುಂದೆ, ಮಹೇಶ್ವರ ಸ್ವಾಮಿಯ ಎಡಬಲದಲ್ಲೇ ಇರುತ್ತಿದ್ದ. ಪೊಲೀಸರು ಲಾಠಿ ಎತ್ತಿದರೆ ಮಾತ್ರ ಫಣಿ ಪರಾರಿ!
ಅಂಥ ದಿನಗಳಲ್ಲೇ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂಬ ಕೂಗೆದ್ದಿತು. ನಮ್ಮ ಮಹೇಶ್ವರ ಸ್ವಾಮಿ ನಾಯಕ. ವಿದ್ಯಾರ್ಥಿಗಳನ್ನೆಲ್ಲ ಕಾಲೇಜುಗಳಿಂದ ಎಬ್ಬಿಸಿಕೊಂಡು ಮೆರವಣಿಗೆ ಹೊರಟೆವು. ಯಥಾಪ್ರಕಾರ ಸ್ವಾಮಿ ಪಕ್ಕದಲ್ಲಿ ಫಣಿ! ದಾರಿಯುದ್ದಕ್ಕೂ ನಮ್ಮದೇ ದಾಂಧಲೆ. ಅಲ್ಲಲ್ಲಿ ಕಲ್ಲು ಬೀಸಿದೆವು. ಗಾಜು ಒಡೆದವು. ಮೆರವಣಿಗೆಯ ಬಂದೋಬಸ್ತಿಗೆ ಬಂದಿದ್ದ ಸಬ್ ಇನ್ಸ್‌ಪೆಕ್ಟರ್ ಎಸ್.ಎಂ.ಮಂಟೂರ್ ಅದನ್ನೆಲ್ಲ ಸುಮ್ಮನೆ ನೋಡುತ್ತಲೇ ಬಂದರು. ಮೆರವಣಿಗೆ ಸಾಲು ಕಾಳಮ್ಮ ಸರ್ಕಲ್ ಎಂದು ಕರೆಯಲ್ಪಡುವ ನಾಲ್ಕು ರಸ್ತೆಗಳ ಕೂಟಕ್ಕೆ ಬರುವ ತನಕ ಸುಮ್ಮನಿದ್ದವರು, ಅಲ್ಲಿಗೆ ಮೆರವಣಿಗೆ ಬಂದು ತಲುಪುತ್ತಿದ್ದಂತೆಯೇ ನಾಲ್ಕು ರಸ್ತೆಗಳಿಗೆ ಲಾಠಿಧಾರಿ ಪೊಲೀಸರನ್ನು ನಿಲ್ಲಿಸಿ cover ಮಾಡಿಕೊಂಡು ಬಿಟ್ಟರು. ಏನಾಗುತ್ತಿದೆಯೆಂಬುದು ಗೊತ್ತಾಗುವ ಮೊದಲೇ "ಛಾರ್ಜ್!" ಎಂಬ ಕೂಗು ಕೇಳಿಸಿತು. ಬೀಳತೊಡಗಿದವಲ್ಲ ಲಾಠಿ ಏಟು? ಅದರಲ್ಲೂ ನಾಯಕರ ಸಾಲಿನಲ್ಲಿದ್ದ ನಾನು ಮತ್ತು ಮಹೇಶ್ವರ ಸ್ವಾಮಿ ಪೊಲೀಸರ ಮುಖ್ಯ ಗುರಿಗಳಾಗಿದ್ದೆವು. ಅದೇನು ತೋಚಿತೋ? ಇಬ್ಬರೂ ಓಡಿದವರೇ ಕಾಳಮ್ಮ ಸರ್ಕಲಿನಲ್ಲೇ ಇದ್ದ ದೊಡ್ಡ ಮನೆಯೊಂದರೊಳಕ್ಕೆ ಹೊಕ್ಕು, ಅದರ ಹಾಲ್‌ನಲ್ಲಿದ್ದ ಚಾಪೆಗಳನ್ನು ಅಡ್ಡವಿಕ್ಕಿ ಅಡಗಿಕೊಂಡು ಕುಳಿತುಬಿಟ್ಟೆವು. ಅಷ್ಟರಲ್ಲಿ ಒಳಗಿನಿಂದ "ಯಾರು ಯಾರದು?" ಅನ್ನುತ್ತಾ ಒಂದು ಆಕೃತಿ ಹಾಲ್‌ನೊಳಕ್ಕೆ ಬಂತು. ಚಾಪೆ ಸರಿಸಿ ನೋಡಿದರೆ ಡಾ.ಪಾಂಡುರಂಗರಾವ್!
"ಇಲ್ಲಿ ಕೂತೀರೇನು? ನಿಮ್ ಹೆಣಾ ಎತ್ಲಿ" ಅಂದವರೇ ತಾವೇ ಬೀದಿಗೆ ಹೋಗಿ ಪೊಲೀಸರನ್ನು ಕರೆತಂದೇಬಿಟ್ಟರು. ನಂತರದ ಕತೆ ಹೇಳಬೇಕಾಗಿಲ್ಲ. ಬಿದ್ದ ಏಟುಗಳಿಗೆ ನಾನು-ಮಹೇಶ್ವರ ಸ್ವಾಮಿ ಕುಟ್ಟಿಸಿಕೊಂಡ ತವಡಿನಂತಾಗಿ ಹೋಗಿದ್ದೆವು. ಎಲ್ಲ ಮುಗಿದು ಬಾಸುಂಡೆ ಸವರಿಕೊಳ್ಳುತ್ತಾ ವಾರ್‌ಡ್ಲಾ ಹೈಸ್ಕೂಲಿನ ಕಟ್ಟೆಯ ಮೇಲೆ ಕುಳಿತಿದ್ದಾಗ ನೆಗೆಯುತ್ತ ಬಂದನಲ್ಲ ಫಣಿ?

"ಅಸ್ಸಲು ನಾನು ಕಾಳಮ್ಮ ಸರ್ಕಲ್ಲಿಗೇ ಬರಲಿಲ್ಲ. ಯಾಕೋ ಡವಟು ಬಂದು ಮೊದಲೇ ಓಡ್ಹೋಗಿ ಬಿಟ್ಟಿದ್ದೆ. ಬಲು ವದ್ದರಂತಲ್ಲ?" ಎಂದು ಕೇಳಿ ಫಕಾಲನೆ ನಕ್ಕ! ಅದು ಫಣಿಯ ಸ್ಟೈಲು.
ಮುಂದೆ ಫಣಿ ನಮ್ಮ ನಾಟಕಗಳ ಪ್ರಮುಖ ಪಾತ್ರಧಾರಿಯಾದ. ಚಂದ್ರಶೇಖರ್ ಪಾಟೀಲರ "ಟಿಂಗರ ಬುಡ್ಡಣ್ಣ" ನಾಟಕದಲ್ಲಿ ಮಹೇಶ್ ಮುದುಕ, ನಾನು ಮುದುಕಿ, ಫಣಿಯದು ಬುಡ್ಡಣ್ಣನ ಪಾತ್ರ! ನಂತರ ನಾವು ಕಟ್ಟಿದ "ಪ್ರಜಾ ಜಾಗೃತಿ ಸಂಘ"ದ ನಾಟಕಗಳಲ್ಲೂ ಅವನು ಅದ್ಭುತವಾಗಿ ನಟಿಸುತ್ತಿದ್ದ. ಬದುಕಿನ ಕಾರ್ಪಣ್ಯಗಳು ಅವನ ಆ ಹಾಸ್ಯವನ್ನು ಕಿತ್ತುಕೊಳ್ಳಲಿಲ್ಲ. ನಾವೆಲ್ಲ ನೌಕರಿಗಳಿಗೆ ಸೇರಿದರೆ, ಫಣಿ ಬ್ರಾಹ್ಮಣರ ಬೀದಿಯಲ್ಲಿ ಪರಿಮಳ ಜಾಬ್ ಟೈಪಿಂಗ್ ಸೆಂಟರ್ ತೆರೆದಿದ್ದ. ಗೋಕಾಕ್ ವರದಿ ಚಳವಳಿಯ ಮನವಿ ಪತ್ರಗಳನ್ನೆಲ್ಲ ತಾನೇ ಟೈಪು ಮಾಡಿಕೊಟ್ಟ.

ಆವತ್ತಿಗಾಗಲೇ ಫಣಿ ಚಪ್ಪಲಿ ಹಾಕಿಕೊಳ್ಳುವುದನ್ನು ಬಿಟ್ಟುಬಿಟ್ಟಿದ್ದ. ಕೇಳಿದವರಿಗೆ "ಗೋಕಾಕ್ ವರದಿ ಜಾರಿಗೆ ಬರೋವರಿಗೆ ಚಪ್ಲಿ ಹಾಕ್ಯಂಬಾದಿಲ್ಲ" ಅನ್ನುತ್ತಿದ್ದ. ಚಳವಳಿ ಮುಗಿಯಿತು. ಇವನು ಚಪ್ಪಲಿ ಹಾಕಲಿಲ್ಲ. ಆಗಾಗ ನನ್ನ ಮನೆಗೆ ಬರುತ್ತಿದ್ದ. ನಮ್ಮ ಮನೆ ಎದುರಿಗಿನ ನನ್ನ ಮಿತ್ರ ಗುಂಗಿ ಕೃಷ್ಣಾಚಾರ್ಯರ ಮಗ "ಪುಲಿ"ಗೆ ಫಣಿಯ ತಂಗಿಯನ್ನು ಕೊಡಲಾಗಿತ್ತು. ಮನೆಗೆ ಬಂದರೆ ಯಥಾಪ್ರಕಾರದ ನಗು. ಚಪ್ಪಲಿ ಹಾಕದೆ ಇದ್ದುದಕ್ಕೆ ಇನ್ನೊಂದು ನೆಪ. ೧೯೮೮ರಲ್ಲಿ ಶಾಶ್ವತವಾಗಿ ನಾನು ಬಳ್ಳಾರಿ ಬಿಟ್ಟೆ. ಮತ್ತೆ ಫಣಿಯ ಟಚ್ಚು ತಪ್ಪಿ ಹೋಯಿತು. ಈಗ್ಗೆ ಕೆಲ ವರ್ಷಗಳ ಹಿಂದೆ ಫಣಿ ಒಂದು typed ಪತ್ರ ಬರೆದಿದ್ದ. "ಇಂಥ ದಿನಾಂಕದಂದು ನಾವೆಲ್ಲ ಬಾಲ್ಯ ಸ್ನೇಹಿತರು ಬಳ್ಳಾರಿಯಲ್ಲಿ ಸೇರೋಣ. ಹತ್ತಿರದ ಹೊನ್ನಾಳಿ ಹನುಮಂತರಾಯನ ಗುಡಿಗೆ ಪಿಕ್‌ನಿಕ್ ಹೋಗಿ ಅನ್ನ-ಹುಳಿ ತಿಂದು ಬರೋಣ" ಅಂತ ಬರೆದು ಪ್ರತಿಯೊಬ್ಬ ಬಾಲ್ಯ ಸ್ನೇಹಿತನದೂ ಹೆಸರು ವಿಳಾಸ ಬರೆದಿದ್ದ. ಅದೇ ಕೊನೆ; ಮತ್ತೆ ನಾನು ಬಳ್ಳಾರಿಯ ಮಿತ್ರನೊಬ್ಬ ಫೋನು ಮಾಡಿದಾಗ ಕೇಳಿದ್ದು-ಫಣಿ ಹೋಗಿಬಿಟ್ಟ ಎಂಬ ಸುದ್ದಿ.
ಅವತ್ತು ಬಳ್ಳಾರಿಯ ಸೋದರಿ ವಿಜಯಾರೆಡ್ಡಿ ಪತ್ರ ಬರೆದಿದ್ದಳು.

"ಫಣಿ ಅಣ್ಣನಿಗೆ ಷುಗರ್ ಇತ್ತು. ನಾಲ್ಕು ವರ್ಷದ ಹಿಂದೆ ಹಾರ್ಟ್ ಅಟ್ಯಾಕ್ ಕೂಡ ಆಗಿತ್ತು. ಆಯಪ್ಪ ನಾಲ್ಕು ವರ್ಷದ ಕೆಳಗೆ ನಮ್ಮ ಮನೆಗೆ ಬಂದಿದ್ದರು. ನಮ್ಮ ಯಜಮಾನರಿಗೆ, 'ರಾಜಾ ರೆಡ್ಡೀ, ನೀವು ಲಿಂಗಾಯತರು, ಬೊಳ್ಳೊಳ್ಳಿ ಹಾಕಿ ಮುಂಡಾಳು (ಚುರಮುರಿ) ಚೆನ್ನಾಗಿ ಮಾಡ್ತೀರಿ. ತಂಗೀಗೆ ಹೇಳಿ ಮಾಡಿಸಿ ಕೊಡ್ರಿ’ ಅಂತ ಕೇಳಿದ್ದರು. ನಾನು ಮಾಡಿಕೊಟ್ಟೆ. ಹೊಗಳುತ್ತ ತಿಂದರು. ಫಣಿಯಣ್ಣನ ಪರಿಚಯ ನನಗಿದ್ದುದು ಅಷ್ಟೇ. ಕಾಲಲ್ಲಿ ಚಪ್ಪಲಿ ಹಾಕಿಕೊಳ್ಳದೆ ಓಡಾಡುತ್ತಿದ್ದರು. ಇತ್ತೀಚೆಗೆ ಗಾಜು ತುಳಿದಿದ್ದಾರೆ. ಅದು ಕೀವಾಗಿ, ತುಂಬ ನೋವು ಕೊಟ್ಟು ಕಾಲು ಎತ್ತಿಡಲಿಕ್ಕೆ ಆಗದಂತಾದಾಗ ಓ.ಪಿ.ಡಿ. ಆಸ್ಪತ್ರೆಗೆ ಸೇರಿಸಿದ್ದಾರೆ. ಬರೀ ಕಾಲು ನೋವಿಗೆ ಅಂತ ಆಸ್ಪತ್ರೆ ಸೇರಿದವರು ನಾಲ್ಕೇ ದಿನಗಳಿಗೆ ಶವವಾಗಿ ಮನೆಗೆ ತರಲ್ಪಟ್ಟರು. ನಾನು-ನನ್ನ ಗಂಡ ಅವರ ಮನೆಗೆ ಹೋದೆವು. ಫಣಿಯಣ್ಣ ಶವವಾಗಿ ಮಲಗಿದ್ದರು. ಆತನ ಹೆಂಡತಿ ಮಕ್ಕಳ ಪಾಡು ನೋಡಲು ನನ್ನಿಂದ ಆಗಲಿಲ್ಲ. ಯಾಕೆ ಗಂಡಸರು ತಮ್ಮ ಆರೋಗ್ಯದ ಬಗ್ಗೆ ಹೀಗೆ ಕೇರ್‌ಲೆಸ್ ಮಾಡುತ್ತಾರೆ?"
ನಿಮ್ಮ ತಂಗಿ ವಿಜಯಾರೆಡ್ಡಿ.

ಇವತ್ತು ಸುಮ್ಮನೆ ಕುಳಿತಿದ್ದವನಿಗೆ ಅದೇಕೋ ವಿಜಯಾರೆಡ್ಡಿಯ ನೆನಪಾಗಿತ್ತು. ಮನಸ್ಸಿನಲ್ಲಿ ನನಗೆ ಮತ್ತೆ ಅದೇ ದಿನಗಳ ನೆನಪು. ಪಕ್ಕದಲ್ಲೇ ಕೂಡುತ್ತಿದ್ದ ಗಿಡ್ಡನೆಯ ಹುಡುಗ, ಲಂಡನ್ ಮಿಂಡನ್ ಸ್ಕೂಲು, ಕನ್ನಡ ಚಳವಳಿ, ಟಿಂಗರ ಬುಡ್ಡಣ್ಣ ನಾಟಕ, ಗೋಕಾಕ್ ವರದಿ, ಚಪ್ಪಲಿಯಿಲ್ಲದ ಅವನ ತಿರುಗಾಟ-
ಒಂದು ಬದುಕು ಎಷ್ಟು ಬೇಗ ಮುಗಿದು ಹೋಯಿತಲ್ಲ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 31 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books